ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇವತ್ತು ಜನ ಯಾಕೆ ಜೀವಕ್ಕೆ ಗೌರವ ಕೊಡ್ತಿಲ್ಲ?

ಇವತ್ತು ಜನ ಯಾಕೆ ಜೀವಕ್ಕೆ ಗೌರವ ಕೊಡ್ತಿಲ್ಲ?

ನಾವ್ಯಾಕೆ ಜೀವಕ್ಕೆ ಗೌರವ ಕೊಡಬೇಕು?

ಒಬ್ಬ ವ್ಯಕ್ತಿ ತನ್ನ ಆರೋಗ್ಯನ ಹಾಳುಮಾಡ್ಕೊಳ್ಳೋ ಅಥವಾ ಬೇರೆಯವ್ರಿಗೆ ಹಾನಿ ತರೋ ಕೆಲಸಗಳನ್ನ ಮಾಡಿದ್ರೆ ಅವನು ತನ್ನ ಜೀವಕ್ಕಾಗಲಿ ಬೇರೆಯವ್ರ ಜೀವಕ್ಕಾಗಲಿ ಬೆಲೆ ಕೊಡ್ತಿಲ್ಲ ಅಂತ ಅರ್ಥ.

  • ಸಿಗರೇಟ್‌ ಸೇದೋದ್ರಿಂದ ಬರೀ ಕ್ಯಾನ್ಸರ್‌ ಬರೋದಷ್ಟೇ ಅಲ್ಲ, ಅದು ದೇಹದಲ್ಲಿರೋ ರೋಗ ನಿರೋಧಕ ಶಕ್ತಿನೂ ಕಮ್ಮಿ ಮಾಡಿಬಿಡುತ್ತೆ. ಒಂದು ವಿಷ್ಯ ಗೊತ್ತಾ? ಇಲ್ಲಿವರೆಗೂ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸತ್ತಿರೋ ಜನ್ರಲ್ಲಿ 90 ಪ್ರತಿಶತ ಜನ್ರು ಸಿಗರೇಟ್‌ ಸೇದಿ ಅಥವಾ ಅವ್ರ ಸುತ್ತಮುತ್ತ ಇರೋ ಜನ ಸೇದುವಾಗ ಬರೋ ಹೊಗೆ ಕುಡಿದು ಸತ್ತಿದ್ದಾರೆ.

  • ಪ್ರತಿ ವರ್ಷ ಆಗ್ತಿರೋ ಗುಂಡಿನ ದಾಳಿಗಳಿಂದ ಎಷ್ಟೋ ಜನ್ರ ಮನಸ್ಸಲ್ಲಿ ಆತಂಕ ಮನೆ ಮಾಡಿದೆ. “ಒಂದು ಸಂಶೋಧನೆ ಏನು ಹೇಳುತ್ತಂದ್ರೆ, [ಸ್ಕೂಲ್‌ಗಳಲ್ಲಿ] ನಡೆದ ಗುಂಡಿನ ದಾಳಿಗಳಿಂದ ತಪ್ಪಿಸ್ಕೊಂಡಿರೋ ಕೆಲವರಿಗೆ ದೇಹದ ಮೇಲೆ ಗಾಯ ಆಗದೇ ಇದ್ದಿರಬಹುದು, ಆದ್ರೆ ಅವ್ರ ಮನಸ್ಸಿಗೆ ಆದ ಗಾಯ ಎಷ್ಟು ವರ್ಷಗಳಾದ್ರೂ ಹೋಗಿರಲ್ಲ. ಆ ಭಯ ಅವ್ರನ್ನ ಜೀವನಪೂರ್ತಿ ಕಾಡುತ್ತೆ” ಅಂತ ಸ್ಟ್ಯಾನ್‌ಫರ್ಡ್‌ ಯೂನಿವರ್ಸಿಟಿಯ ವರದಿ ಹೇಳುತ್ತೆ.

  • ಕುಡಿದು ಅಥವಾ ಡ್ರಗ್ಸ್‌ ತಗೊಂಡು ಗಾಡಿ ಓಡಿಸೋದ್ರಿಂದ ರೋಡಲ್ಲಿ ಆ್ಯಕ್ಸಿಡೆಂಟ್‌ಗಳು ಆಗಬಹುದು. ಫುಟ್‌ಪಾತಲ್ಲಿ ನಡ್ಕೊಂಡು ಹೋಗೋರ ಜೀವನೂ ಹೋಗಬಹುದು. ಈ ತರ ಜನ್ರು ತಮ್ಮ ಜೀವಕ್ಕೆ ಗೌರವ ಕೊಡದೇ ಇರೋದ್ರಿಂದ ಅಮಾಯಕ ಜನ್ರ ಜೀವನೂ ಬಲಿಯಾಗ್ತಿದೆ.

ನೀವು ಹೇಗೆ ಜೀವಕ್ಕೆ ಗೌರವ ತೋರಿಸಬಹುದು?

ನಿಮ್ಮ ಆರೋಗ್ಯ ಕಾಪಾಡ್ಕೊಳ್ಳಿ. ಸಿಗರೇಟ್‌ ಸೇದೋದನ್ನ, ವೇಪಿಂಗ್‌ ಮಾಡೋದನ್ನ (ಎಲೆಕ್ಟ್ರಾನಿಕ್‌ ಸಿಗರೇಟ್‌ ಸೇದೋದನ್ನ), ಕಂಠಪೂರ್ತಿ ಕುಡಿಯೋದನ್ನ, ಡ್ರಗ್ಸ್‌ ತಗೊಳ್ಳೋದನ್ನ ಈಗ್ಲೇ ಬಿಟ್ಟುಬಿಡಿ. ಯಾಕಂದ್ರೆ ಈ ಕೆಟ್ಟ ಚಟಗಳಿಂದ ನಿಮ್ಮ ಜೀವನೂ ಹೋಗುತ್ತೆ, ನಿಮ್ಮ ಸುತ್ತಮುತ್ತ ಇರೋರ ಜೀವಕ್ಕೂ ಅಪಾಯ ಆಗುತ್ತೆ. ಈ ಚಟಗಳನ್ನ ಬಿಡದೇ ಇದ್ರೆ ನೀವು ಜೀವಕ್ಕೆ ಬೆಲೆ ಕೊಡ್ತಿಲ್ಲ ಅಂತ ಅರ್ಥ.

‘ನಮ್ಮ ದೇಹದಿಂದ ಎಲ್ಲ ಕೊಳೆ ತೆಗೆದು ನಮ್ಮನ್ನ ಶುದ್ಧ ಮಾಡ್ಕೊಳ್ಳೋಣ.’—2 ಕೊರಿಂಥ 7:1.

ನಿಮ್ಮ ಮತ್ತು ಬೇರೆಯವ್ರ ಸುರಕ್ಷತೆ ಬಗ್ಗೆ ಯೋಚಿಸಿ. ನಿಮ್ಮ ಮನೆ ಅಥವಾ ಅದ್ರಲ್ಲಿರೋ ವಸ್ತುಗಳೇನಾದ್ರೂ ಹಾಳಾಗಿದ್ರೆ ಅದನ್ನ ರಿಪೇರಿ ಮಾಡಿಸಿ. ನಿಮ್ಮ ಗಾಡಿನ ಚೆನ್ನಾಗಿ ಮೇಂಟೆನ್‌ ಮಾಡಿ, ಹುಷಾರಾಗಿ ಓಡಿಸಿ. ಯಾರಾದ್ರೂ ನಿಮ್ಮ ಜೀವ ಹೋಗೋ ಅಥವಾ ಜೀವಕ್ಕೆ ಅಪಾಯ ತರೋ ಕೆಲಸಗಳನ್ನ ಮಾಡೋಕೆ ಒತ್ತಾಯ ಮಾಡಿದ್ರೂ ಅದನ್ನ ಮಾಡಬೇಡಿ.

“ನೀವು ಒಂದು ಹೊಸ ಮನೆ ಕಟ್ಟಿದ್ರೆ ಮನೆ ಮಾಳಿಗೆ ಸುತ್ತ ಒಂದು ಸಣ್ಣ ಗೋಡೆ ಕಟ್ಟಬೇಕು. ಇಲ್ಲಾಂದ್ರೆ ಯಾರಾದ್ರೂ ನಿಮ್ಮ ಮನೆ ಮಾಳಿಗೆಯಿಂದ ಕೆಳಗೆ ಬೀಳಬಹುದು. ಆಗ ಆ ಕೊಲೆ ಅಪರಾಧ ನಿಮ್ಮ ಕುಟುಂಬದ ಮೇಲೆ ಬರುತ್ತೆ.”—ಧರ್ಮೋಪದೇಶಕಾಂಡ 22:8. a

ಎಲ್ರ ಜೊತೆ ಚೆನ್ನಾಗಿ ನಡ್ಕೊಳ್ಳಿ. ನಮಗೆ ಜೀವದ ಮೇಲೆ ಗೌರವ ಇದ್ರೆ ಬೇರೆಯವ್ರ ಜೊತೆ ನಾವು ಚೆನ್ನಾಗಿ ಇರ್ತೀವಿ. ಅವರು ಯಾವ ದೇಶದವರೇ ಆಗಿರಲಿ, ಯಾವ ಜಾತಿಯವರೇ ಆಗಿರಲಿ, ಓದಿರಲಿ-ಓದದೇ ಇರಲಿ, ಬಡವರಾಗಿರಲಿ-ಶ್ರೀಮಂತರಾಗಿರಲಿ, ಎಲ್ರನ್ನೂ ಸಮವಾಗಿ ನೋಡ್ತೀವಿ. ಈ ತರ ಮಾಡೋದು ಒಳ್ಳೇದೇ. ಯಾಕಂದ್ರೆ ಜನ್ರ ಮನಸ್ಸಲ್ಲಿ ದ್ವೇಷ, ಬೇಧಭಾವ ತುಂಬಿರೋದಕ್ಕೇ ಈಗ ಜಾಸ್ತಿ ಜಗಳಗಳು, ಯುದ್ಧಗಳು ಆಗ್ತಿವೆ.

“ಎಲ್ಲ ತರದ ದ್ವೇಷ, ಕೋಪ, ಕ್ರೋಧ, ಕಿರಿಚಾಟ, ಬೈಗುಳ ಮತ್ತು ಎಲ್ಲ ಕೆಟ್ಟ ಗುಣಗಳನ್ನ ನಿಮ್ಮಿಂದ ತೆಗೆದುಹಾಕಿ. ಒಬ್ರು ಇನ್ನೊಬ್ರಿಗೆ ದಯೆ . . . ತೋರಿಸಿ.”—ಎಫೆಸ 4:31, 32.

ಯೆಹೋವನ ಸಾಕ್ಷಿಗಳು ಹೇಗೆ ಜೀವಕ್ಕೆ ಗೌರವ ತೋರಿಸ್ತಿದ್ದಾರೆ?

ಯೆಹೋವನ ಸಾಕ್ಷಿಗಳು ಬೇರೆಯವ್ರಿಗೆ ಆರೋಗ್ಯ ಕಾಪಾಡ್ಕೊಳ್ಳೋದು ಹೇಗೆ ಅಂತ ಕಲಿಸ್ತಿದ್ದಾರೆ. ನಾವು ಕೊಡೋ ಬೈಬಲ್‌ ಶಿಕ್ಷಣ ತುಂಬ ಜನ್ರಿಗೆ ಕೆಟ್ಟ ಚಟಗಳನ್ನ ಬಿಟ್ಟುಬಿಡೋಕೆ ಸಹಾಯ ಮಾಡಿದೆ. ಉದಾಹರಣೆಗೆ ಎಷ್ಟೋ ಜನ ಸಿಗರೇಟ್‌ ಸೇದೋದನ್ನ, ಕಂಠಪೂರ್ತಿ ಕುಡಿಯೋದನ್ನ, ಡ್ರಗ್ಸ್‌ ತಗೊಳ್ಳೋದನ್ನ ಬಿಟ್ಟುಬಿಟ್ಟಿದ್ದಾರೆ.

ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳಲ್ಲಿ ನಾವು ಸುರಕ್ಷತಾ ಕ್ರಮಗಳನ್ನ ಪಾಲಿಸ್ತೀವಿ. ಯೆಹೋವನ ಸಾಕ್ಷಿಗಳು ಕೂಟಗಳನ್ನ ನಡೆಸೋಕೆ ಮತ್ತು ಇನ್ನೂ ಬೇರೆ ಕೆಲಸಗಳನ್ನ ಮಾಡೋಕೆ ಕಟ್ಟಡಗಳನ್ನ ಕಟ್ತಾರೆ. ಇದನ್ನ ಕಟ್ಟೋ ಸ್ವಯಂ ಸೇವಕರಿಗೆ ಯಾವ ಅಪಘಾತನೂ ಆಗದೆ ಇರೋ ತರ ಕೆಲಸ ಮಾಡೋಕೆ ಟ್ರೇನಿಂಗ್‌ ಕೊಡ್ತಾರೆ. ಆ ಕಟ್ಟಡಗಳನ್ನ ಆಗಾಗ ಪರೀಕ್ಷಿಸಿ ನೋಡ್ತಾರೆ. ಆಗ ಆ ಕಟ್ಟಡಗಳು ಆ ಜಾಗದಲ್ಲಿ ಇರೋ ಸುರಕ್ಷತಾ ನಿಯಮಕ್ಕೆ ತಕ್ಕ ಹಾಗೆ ಇದ್ಯಾ ಇಲ್ವಾ ಅಂತ ನೋಡ್ತಾರೆ.

ವಿಪತ್ತನ್ನ ಎದುರಿಸ್ತಿರೋ ಜನ್ರಿಗೆ ಸಹಾಯ ಮಾಡ್ತೀವಿ. ಬರೀ ಕಳೆದ ಒಂದು ವರ್ಷದಲ್ಲೇ ಇಡೀ ಭೂಮಿಯಲ್ಲಿ ಬೇರೆಬೇರೆ ಕಡೆ ಸುಮಾರು 200ಕ್ಕಿಂತ ಹೆಚ್ಚು ದೊಡ್ಡದೊಡ್ಡ ವಿಪತ್ತುಗಳಾಯ್ತು. ಅಲ್ಲಿದ್ದ ಜನ್ರಿಗೆ ಸಹಾಯ ಮಾಡೋಕೆ ನಾವು ಹತ್ತತ್ರ 90 ಕೋಟಿ ರುಪಾಯಿಗಳನ್ನ ಖರ್ಚು ಮಾಡಿದ್ವಿ.

ಎಬೋಲಾ ರೋಗ ಪಶ್ಚಿಮ ಆಫ್ರಿಕಾ (2014) ಮತ್ತು ಕಾಂಗೋ ಗಣರಾಜ್ಯದಲ್ಲಿ (2018) ಜಾಸ್ತಿ ಆದಾಗ ಅಲ್ಲಿರೋ ಜನ್ರಿಗೆ ಈ ರೋಗ ಹರಡದೇ ಇರೋಕೆ ಏನೆಲ್ಲ ಮಾಡಬೇಕು ಅನ್ನೋದನ್ನ ನಾವು ಹೇಳ್ಕೊಟ್ವಿ. ಅಲ್ಲಿಗೆ ಕೆಲವ್ರನ್ನ ಕಳಿಸಿ “ಮಾತು ಕೇಳಿದ್ರೆ ಜೀವ ಉಳಿಯುತ್ತೆ” ಅನ್ನೋ ವಿಷ್ಯದ ಬಗ್ಗೆ ತಿಳಿಸಿ ಹೇಳಿದ್ವಿ. ಅಷ್ಟೇ ಅಲ್ಲ, ಆಗಾಗ ಯಾಕೆ ಕೈ ತೊಳಿಬೇಕು ಮತ್ತು ರೋಗ ಹರಡದೇ ಇರೋಕೆ ಏನೆಲ್ಲ ಮಾಡಬೇಕು ಅಂತ ಅರ್ಥಮಾಡಿಸಿದ್ವಿ. ಕೂಟಗಳಿಗೆ ಬಂದಾಗ ಒಳಗಡೆ ಹೋಗೋಕೂ ಮುಂಚೆನೇ ಕೈ ತೊಳ್ಕೊಂಡು ಹೋಗೋಕೆ ಬೇಕಾಗಿರೋ ವ್ಯವಸ್ಥೆ ಮಾಡಿದ್ವಿ.

ಸಿಯೆರಾ ಲಿಯೋನ್‌ ದೇಶದಲ್ಲಿ ಎಬೋಲಾ ರೋಗನ ತಡೆಗಟ್ಟೋಕೆ ಯೆಹೋವನ ಸಾಕ್ಷಿಗಳು ತಮ್ಮ ಜನ್ರಿಗೆ ಮಾತ್ರ ಅಲ್ಲ ಬೇರೆಯವ್ರಿಗೂ ಸಹಾಯ ಮಾಡಿದ್ದನ್ನ ನೋಡಿ ಆ ದೇಶದ ಒಂದು ರೇಡಿಯೋ ಪ್ರೋಗ್ರಾಮ್‌ನಲ್ಲಿ ಅವ್ರನ್ನ ಹೊಗಳಿದ್ದಾರೆ.

2014ರಂದು ಲೈಬೀರಿಯಾದಲ್ಲಿ ಎಬೋಲಾ ರೋಗ ಹರಡಿದಾಗ ರಾಜ್ಯ ಸಭಾಗೃಹದ ಹೊರಗೆ ಕೈ ತೊಳಿಯೋಕೆ ಮಾಡಿದ ವ್ಯವಸ್ಥೆ

a ಆಗಿನ ಕಾಲದ ಮಧ್ಯಪೂರ್ವ ದೇಶಗಳಲ್ಲಿ ಮಾಳಿಗೆ ಮೇಲೆ ಸಾಮಾನ್ಯವಾಗಿ ಸಣ್ಣ ಗೋಡೆ ಇರ್ತಿರಲಿಲ್ಲ. ಆದ್ರೆ ಇಸ್ರಾಯೇಲ್ಯರಿಗೆ ಅವ್ರ ಕುಟುಂಬದವ್ರ ಮತ್ತು ಬೇರೆಯವ್ರ ಸುರಕ್ಷತೆಯನ್ನ ಮನಸ್ಸಲ್ಲಿಟ್ಟು ಈ ನಿಯಮ ಕೊಡಲಾಯ್ತು.