ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇವತ್ತು ಜನ ಯಾಕೆ ಬೇರೆಯವ್ರಿಗೆ ಗೌರವ ಕೊಡ್ತಿಲ್ಲ?

ಇವತ್ತು ಜನ ಯಾಕೆ ಬೇರೆಯವ್ರಿಗೆ ಗೌರವ ಕೊಡ್ತಿಲ್ಲ?

ನಾವ್ಯಾಕೆ ಬೇರೆಯವ್ರಿಗೆ ಗೌರವ ಕೊಡಬೇಕು?

ಯಾರಾದ್ರೂ ನಮಗೆ ಇಷ್ಟ ಆಗದೆ ಇರೋದನ್ನ ಹೇಳಿದ್ರೆ ಅಥವಾ ಮಾಡಿದ್ರೆ ಆಗ್ಲೂ ನಾವು ಗೌರವ ಕೊಡಬೇಕು. ಆಗ ಪರಿಸ್ಥಿತಿ ಹದಗೆಡದೆ ಇರೋ ತರ ನೋಡ್ಕೊಳ್ಳೋಕಾಗುತ್ತೆ.

  • ಬೈಬಲ್‌ ಹೇಳೋ ಬುದ್ಧಿವಾದ ಏನಂದ್ರೆ, “ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ, ಒರಟಾದ ಮಾತು ಕೋಪ ಬರಿಸುತ್ತೆ.” (ಜ್ಞಾನೋಕ್ತಿ 15:1) ಬೇರೆಯವ್ರಿಗೆ ಗೌರವ ಕೊಡದೇ ಮಾತಾಡೋದು ಅಥವಾ ನಡ್ಕೊಳ್ಳೋದು ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ. ಇದ್ರಿಂದ ತುಂಬ ಅನಾಹುತಗಳಾಗುತ್ತೆ.

  • “ಹೃದಯದಲ್ಲಿ ಇರೋದೇ ಬಾಯಲ್ಲಿ ಬರೋದು” ಅಂತ ಯೇಸುನೂ ಹೇಳಿದ್ದಾನೆ. (ಮತ್ತಾಯ 12:34) ನಾವು ಜನ್ರ ಜೊತೆ ಹೇಗೆ ಮಾತಾಡ್ತೀವಿ ಅನ್ನೋದು ನಮ್ಮ ಮನಸ್ಸಲ್ಲಿ ಏನಿದೆ ಅನ್ನೋದನ್ನ ತೋರಿಸ್ಕೊಡುತ್ತೆ. ನಾವು ಒಬ್ರಿಗೆ ಗೌರವ ಕೊಡ್ತಿಲ್ಲಾಂದ್ರೆ ಅವ್ರ ಜಾತಿ ನೋಡಿ, ದೇಶ ನೋಡಿ, ಅವ್ರ ಹತ್ರ ಇರೋ ದುಡ್ಡು ನೋಡಿ ಅವ್ರನ್ನ ಅಳೀತಿದ್ದೀವಿ ಅಂತ ಅರ್ಥ.

    ಇತ್ತೀಚೆಗೆ 28 ದೇಶಗಳಲ್ಲಿರೋ 32,000ಕ್ಕಿಂತ ಹೆಚ್ಚಿನ ಜನ್ರ ಹತ್ರ ಒಂದು ಸರ್ವೆ ಮಾಡಲಾಯ್ತು. ಅವ್ರಲ್ಲಿ ಅರ್ಧಕ್ಕಿಂತ ಜಾಸ್ತಿ ಜನ ಏನು ಹೇಳಿದ್ರು ಗೊತ್ತಾ? ಜನ್ರು ಗೌರವ ಕೊಡದೆ ಇಷ್ಟು ಕೆಟ್ಟದಾಗಿ ನಡ್ಕೊಳ್ಳೋದನ್ನ ಈ ಮುಂಚೆ ಯಾವತ್ತೂ ನೋಡಿರಲಿಲ್ಲ ಅಂದ್ರು.

ನೀವು ಹೇಗೆ ಬೇರೆಯವ್ರಿಗೆ ಗೌರವ ಕೊಡಬಹುದು?

ಬೇರೆಯವರು ಹೇಳಿದ್ದು ನಿಮಗೆ ಇಷ್ಟ ಆಗದೇ ಇದ್ರೂ ಅವ್ರಿಗೆ ಗೌರವ ಕೊಡಿ. ನಿಮಗೂ ಅವ್ರಿಗೂ ಯಾವ ವಿಷ್ಯ ಇಷ್ಟ ಆಗಬಹುದು ಅಂತ ಯೋಚ್ನೆ ಮಾಡಿ. ಆಗ ನೀವು ಬೇರೆಯವ್ರನ್ನ “ಇವ್ರು ಹಿಂಗೆ, ಅವ್ರು ಹಂಗೆ” ಅಂತ ತೀರ್ಪು ಮಾಡೋಕೆ ಹೋಗಲ್ಲ.

“ಬೇರೆಯವ್ರ ಬಗ್ಗೆ ತೀರ್ಪು ಮಾಡೋದನ್ನ ನಿಲ್ಲಿಸಿ, ಆಗ ಯಾರೂ ನಿಮ್ಮನ್ನ ತೀರ್ಪು ಮಾಡಲ್ಲ.”—ಮತ್ತಾಯ 7:1.

ಬೇರೆಯವರು ನಿಮ್‌ ಜೊತೆ ಹೇಗೆ ನಡ್ಕೊಬೇಕು ಅಂತ ನೀವು ಇಷ್ಟಪಡ್ತೀರೋ ನೀವೂ ಅವ್ರ ಜೊತೆ ಅದೇ ತರ ನಡ್ಕೊಳ್ಳಿ. ನೀವು ಬೇರೆಯವ್ರ ಜೊತೆ ದಯೆಯಿಂದ, ಪ್ರೀತಿಯಿಂದ ನಡ್ಕೊಂಡ್ರೆ ಆಗ ಅವ್ರೂ ನಿಮ್‌ ಜೊತೆ ಅದೇ ತರ ನಡ್ಕೊಳ್ಳೋಕೆ ಮನಸ್ಸು ಮಾಡಬಹುದು.

“ಜನ ನಿಮಗೇನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಲೂಕ 6:31.

ಕ್ಷಮಿಸೋಕೆ ಯಾವಾಗ್ಲೂ ರೆಡಿ ಇರಿ. ಯಾರಾದ್ರೂ ನಿಮ್ಮ ಮನಸ್ಸಿಗೆ ನೋವಾಗೋ ತರ ಮಾತಾಡಿದ್ರೆ ಅಥವಾ ಏನಾದ್ರೂ ಮಾಡಿದ್ರೆ ಅವರು ಅದನ್ನ ಬೇಕುಬೇಕಂತಾನೇ ಮಾಡಿದ್ದಾರೆ ಅಂದ್ಕೊಬೇಡಿ.

“ವ್ಯಕ್ತಿಯಲ್ಲಿರೋ ತಿಳುವಳಿಕೆ ಅವನ ಕೋಪ ಆರಿಸುತ್ತೆ, ಮತ್ತೊಬ್ರ ತಪ್ಪನ್ನ ಗಮನಿಸದೆ ಇರೋದು ಅವನಿಗೆ ಗೌರವ ತರುತ್ತೆ.”—ಜ್ಞಾನೋಕ್ತಿ 19:11.

ಯೆಹೋವನ ಸಾಕ್ಷಿಗಳು ಹೇಗೆ ಗೌರವ ತೋರಿಸ್ತಿದ್ದಾರೆ?

ಯೆಹೋವನ ಸಾಕ್ಷಿಗಳು ಎಲ್ಲೇ ಇರಲಿ, ಏನೇ ಕೆಲ್ಸ ಮಾಡ್ತಿರಲಿ ಎಲ್ಲಾ ಜನ್ರಿಗೂ ಗೌರವ ಕೊಡ್ತಾರೆ, ಬೇರೆಯವ್ರಿಗೂ ಗೌರವ ಕೊಡೋಕೆ ಹೇಳ್ಕೊಡ್ತಾರೆ.

ನಾವು ಎಲ್ಲಾ ಜನ್ರಿಗೂ ಫ್ರೀಯಾಗಿ ಬೈಬಲ್‌ ಕಲಿಸ್ತೀವಿ. ಹಾಗಂತ ಅದನ್ನೆಲ್ಲ ಅವರು ಒಪ್ಕೊಳ್ಳಲೇಬೇಕು ಅಂತ ನಾವು ಒತ್ತಾಯ ಮಾಡಲ್ಲ. ಬದಲಿಗೆ “ಮೃದುವಾಗಿ, ತುಂಬ ಗೌರವದಿಂದ” ಅವ್ರಿಗೆ ಹೇಳ್ಕೊಡಬೇಕು ಅನ್ನೋ ಬೈಬಲ್‌ ನಿಯಮನ ಪಾಲಿಸ್ತೀವಿ.—1 ಪೇತ್ರ 3:15; 2 ತಿಮೊತಿ 2:24.

ನಾವು ಯಾರನ್ನೂ ಕೀಳಾಗಿ ನೋಡಲ್ಲ. ಯೆಹೋವನ ಬಗ್ಗೆ ಕಲಿಯೋಕೆ ಇಷ್ಟಪಡೋ ಪ್ರತಿಯೊಬ್ರನ್ನೂ ಅವ್ರ ಹಿನ್ನೆಲೆ ಏನೇ ಆಗಿದ್ರೂ ಅವ್ರನ್ನ ನಮ್ಮ ಕೂಟಗಳಿಗೆ ಸ್ವಾಗತಿಸ್ತೀವಿ. ಹೀಗೆ ನಾವು ಯಾರಿಗೂ ಬೇಧಭಾವ ಮಾಡದೇ ‘ಎಲ್ಲ ತರದ ಜನ್ರನ್ನ ಗೌರವಿಸ್ತೀವಿ.’—1 ಪೇತ್ರ 2:17.

ನಾವು ಎಲ್ಲಿ ಇರ್ತೀವೋ ಆ ದೇಶದ ಸರ್ಕಾರಕ್ಕೆ ಗೌರವ ಕೊಡ್ತೀವಿ. ಸರ್ಕಾರದ ನಿಯಮಗಳನ್ನ ಪಾಲಿಸ್ತೀವಿ, ಟ್ಯಾಕ್ಸ್‌ ಕಟ್ತೀವಿ. (ರೋಮನ್ನರಿಗೆ 13:1) ನಾವು ಯಾವ ರಾಜಕೀಯ ಪಕ್ಷನೂ ವಹಿಸಲ್ಲ. ಆದ್ರೆ ಬೇರೆಯವರು ಈ ವಿಷ್ಯದಲ್ಲಿ ಯಾವ ನಿರ್ಧಾರ ತಗೊಂಡ್ರೂ ನಾವು ಅದನ್ನ ಗೌರವಿಸ್ತೀವಿ.