ವಿಕಾಸವೇ? ವಿನ್ಯಾಸವೇ?
ಇರುವೆಯ ಕತ್ತು
ಒಂದು ಸಣ್ಣ ಇರುವೆ ತನ್ನ ದೇಹದ ತೂಕಕ್ಕಿಂತ ಎಷ್ಟೋ ಪಟ್ಟು ಹೆಚ್ಚು ತೂಕವನ್ನು ಹೊತ್ತುಕೊಂಡು ಹೋಗುವುದನ್ನು ನೋಡಿ ಯಂತ್ರಗಳನ್ನು ತಯಾರಿಸುವ ಎಂಜಿನಿಯರರು ವಿಸ್ಮಯಗೊಳ್ಳುತ್ತಾರೆ. ಇದರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಅಮೆರಿಕದ ಒಹಾಯೋ ವಿಶ್ವವಿದ್ಯಾಲಯದಲ್ಲಿರುವ ಎಂಜಿನಿಯರರು ಇರುವೆಯ ಕೆಲವು ದೇಹದ ಭಾಗಗಳನ್ನು, ಅದರ ಶಾರೀರಿಕ ವೈಶಿಷ್ಟ್ಯಗಳನ್ನು ಮತ್ತು ಅದು ಕೆಲಸಮಾಡುವ ವಿಧವನ್ನು ತೋರಿಸುವ ನಮೂನೆಗಳನ್ನು ಕಂಪ್ಯೂಟರಿನಲ್ಲಿ ರಚಿಸಿದರು. ಈ ನಮೂನೆಗಳನ್ನು ಅತಿ ಸೂಕ್ಷ್ಮ ಸಿ.ಟಿ. ಸ್ಕ್ಯಾನ್‌ಗಳ ಸಹಾಯದಿಂದ ರಚಿಸಲಾಯಿತು. ಒಂದು ಇರುವೆ ಭಾರಗಳನ್ನು ಎತ್ತಿಕೊಂಡು ಹೋಗುವಾಗ ಅದಕ್ಕೆ ಶಕ್ತಿ ಎಲ್ಲಿಂದ ಬರುತ್ತದೆ ಎಂಬುದನ್ನು ಗಮನಿಸಿ ಅದನ್ನೂ ನಮೂನೆಗಳಿಗೆ ಸೇರಿಸಲಾಯಿತು.
ಒಂದು ಇರುವೆಯ ದೇಹದಲ್ಲಿ ಅದರ ಕತ್ತು ತುಂಬ ಮುಖ್ಯವಾದ ಭಾಗ. ಇರುವೆ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ಒಟ್ಟು ಭಾರವನ್ನು ಇದು ತೆಗೆದುಕೊಳ್ಳಬೇಕಾಗುತ್ತದೆ. ಇರುವೆಯ ಕತ್ತಿನಲ್ಲಿರುವ ಮೃದುವಾದ ಅಂಗಾಂಶವು ಇರುವೆಯ ದೇಹ ಮತ್ತು ತಲೆಯ ಗಡುಸಾದ ಹೊರಕವಚವನ್ನು ಜೋಡಿಸುತ್ತದೆ. ನಮ್ಮ ಕೈಬೆರಳುಗಳನ್ನು ಒಟ್ಟಿಗೆ ಗಟ್ಟಿಯಾಗಿ ಹೆಣೆದಾಗ ಹೇಗಿರುತ್ತದೋ ಹಾಗಿದೆ ಇದರ ರಚನೆ. “ಕತ್ತು ಸರಿಯಾಗಿ ಕೆಲಸಮಾಡಲು ಈ ಹೆಣೆಯುವಿಕೆ ಮತ್ತು ವಿನ್ಯಾಸ ತುಂಬ ಪ್ರಾಮುಖ್ಯ. ಗಡುಸಾದ ಮತ್ತು ಮೃದುವಾದ ಅಂಗಾಂಶಗಳ ಈ ಹೆಣೆಯುವಿಕೆ [ತಲೆ ಮತ್ತು ದೇಹದ] ಜೋಡಣೆಯನ್ನು ಬಲಪಡಿಸುತ್ತದೆ ಮತ್ತು ದೊಡ್ಡ ಭಾರಗಳನ್ನು ಹೊತ್ತುಕೊಂಡು ಹೋಗಲು ತುಂಬ ಸಹಾಯಮಾಡುತ್ತದೆ” ಎನ್ನುತ್ತಾರೆ ಒಬ್ಬ ಸಂಶೋಧಕರು. ಇರುವೆಯ ಕತ್ತು ಹೇಗೆ ಕೆಲಸಮಾಡುತ್ತದೆಂದು ಸ್ಪಷ್ಟವಾಗಿ ಅರ್ಥಮಾಡಿಕೊಂಡರೆ ಮಾನವನು ರೂಪಿಸುವ ಸ್ವಯಂಚಾಲಿತ ಯಂತ್ರಗಳಲ್ಲೂ ಕೆಲವು ಸುಧಾರಣೆಗಳನ್ನು ಮಾಡಬಹುದೆಂದು ಸಂಶೋಧಕರು ನೆನಸುತ್ತಾರೆ.
ನೀವೇನು ನೆನಸುತ್ತೀರಿ? ಇರುವೆಯ ಕತ್ತಿನಲ್ಲಿರುವ ಜಟಿಲವಾದ ಅದ್ಭುತ ರಚನೆ ತನ್ನಿಂದ ತಾನೇ ಬಂತೋ ಅಥವಾ ಒಬ್ಬ ಸೃಷ್ಟಿಕರ್ತ ಇದನ್ನು ವಿನ್ಯಾಸಿಸಿದನೋ? ◼ (g16-E No. 3)