ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ದೃಷ್ಟಿಕೋನ

ದೇವದೂತರು

ದೇವದೂತರು

ಸಾಮಾನ್ಯವಾಗಿ ದೇವದೂತರನ್ನು ಚಿತ್ರಗಳಲ್ಲಿ, ಪುಸ್ತಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ವಿಭಿನ್ನವಾಗಿ ವರ್ಣಿಸಲಾಗಿದೆ. ಆದರೆ ದೇವದೂತರು ನಿಜವಾಗಿಯೂ ಯಾರು? ಅವರ ಕೆಲಸವೇನು?

ದೇವದೂತರು ಯಾರು?

ಬೈಬಲ್‌ ಏನು ಹೇಳುತ್ತದೆ?

 

ವಿಶ್ವವನ್ನು ಮತ್ತು ಮೊದಲ ಮಾನವರನ್ನು ಸೃಷ್ಟಿಸುವ ಮೊದಲೇ ದೇವರು ಬುದ್ಧಿಶಾಲಿ ಆತ್ಮಜೀವಿಗಳನ್ನು ಸೃಷ್ಟಿಸಿದ್ದನು. ಅವರು ಮಾನವರಿಗಿಂತ ಉನ್ನತರೂ ಎಷ್ಟೋ ಶಕ್ತಿಶಾಲಿಗಳೂ ಆಗಿದ್ದಾರೆ. ದೇವದೂತರು ಕೂಡ ದೇವರು ಇರುವ ಸ್ಥಳದಲ್ಲಿಯೇ ಇದ್ದಾರೆ. ಮನುಷ್ಯರು ಆ ಸ್ಥಳಕ್ಕೆ ಹೋಗಲು ಅಥವಾ ಅದನ್ನು ನೋಡಲು ಸಾಧ್ಯವಿಲ್ಲ. (ಯೋಬ 38:4, 7) ಈ ಉನ್ನತ ಜೀವಿಗಳನ್ನು ಬೈಬಲ್‌ ಆತ್ಮಜೀವಿಗಳು ಮತ್ತು ‘ದೇವದೂತರು’ ಎಂದು ಕರೆಯಲಾಗಿದೆ.—ಕೀರ್ತನೆ 104:4; 103:20. *

ಇಷ್ಟಕ್ಕೂ ಎಷ್ಟು ಮಂದಿ ದೇವದೂತರಿದ್ದಾರೆ? ಅಪಾರ ಸಂಖ್ಯೆಯ ದೂತರಿದ್ದಾರೆ. ದೇವರ ಸಿಂಹಾಸನದ ಸುತ್ತಲೂ ‘ಕೋಟ್ಯಾನುಕೋಟಿ ಲಕ್ಷೋಪಲಕ್ಷ’ ದೇವದೂತರಿದ್ದಾರೆ. (ಪ್ರಕಟನೆ 5:11) ಈ ಸಂಖ್ಯೆಯನ್ನು ಅಕ್ಷರಾರ್ಥವಾಗಿ ಪರಿಗಣಿಸುವುದಾದರೆ ದೇವದೂತರ ಸಂಖ್ಯೆ ಕೋಟಿಗಟ್ಟಲೆ ಇದೆ!

‘ಇದಲ್ಲದೆ ನಾನು ನೋಡಿದಾಗ ಸಿಂಹಾಸನದ ಸುತ್ತಲೂ ಅನೇಕ ದೇವದೂತರಿದ್ದರು. ಅವರ ಸಂಖ್ಯೆಯು ಕೋಟ್ಯಾನುಕೋಟಿಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.’ಪ್ರಕಟನೆ 5:11.

ಹಿಂದಿನ ಕಾಲದಲ್ಲಿ ದೇವದೂತರು ಏನು ಮಾಡಿದರು?

ಬೈಬಲ್‌ ಏನು ಹೇಳುತ್ತದೆ?

 

ದೇವದೂತರು ದೇವರ ಸಂದೇಶವಾಹಕರಾಗಿ ಕೆಲಸ ಮಾಡಿದರು. * ದೇವರ ಸಹಾಯದಿಂದ ಅದ್ಭುತಕಾರ್ಯಗಳನ್ನು ಮಾಡುವವರು ಎಂದು ಬೈಬಲ್‍ನಲ್ಲಿ ಅವರನ್ನು ವರ್ಣಿಸಲಾಗಿದೆ. ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವಾಗ ಅವನನ್ನು ತಡೆದು ಆಶೀರ್ವದಿಸಲು ದೇವರು ತನ್ನ ದೂತನನ್ನು ಕಳುಹಿಸಿದನು. (ಆದಿಕಾಂಡ 22:11-18) ಜೀವನವೇ ಬದಲಾಯಿಸುವ ಸಂದೇಶವನ್ನು ಮೋಶೆಗೆ ಹೇಳಲು ಒಬ್ಬ ದೇವದೂತನು ಉರಿಯುವ ಪೊದೆಯೊಳಗೆ ಕಾಣಿಸಿಕೊಂಡನು. (ವಿಮೋಚನಕಾಂಡ 3:1, 2) ಪ್ರವಾದಿ ದಾನಿಯೇಲನನ್ನು ಸಿಂಹದ ಗವಿಯಲ್ಲಿ ಹಾಕಿದಾಗ, ‘ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು.’—ದಾನಿಯೇಲ 6:22.

‘ಅಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಯೆಹೋವನ ದೂತನು ಮೋಶೆಗೆ ಕಾಣಿಸಿಕೊಂಡನು.’ವಿಮೋಚನಕಾಂಡ 3:2.

ಈಗ ದೇವದೂತರು ಏನು ಮಾಡುತ್ತಿದ್ದಾರೆ?

ಬೈಬಲ್‌ ಏನು ಹೇಳುತ್ತದೆ?

 

ದೇವದೂತರು ಈಗ ಮಾಡುತ್ತಿರುವ ಪ್ರತಿಯೊಂದು ಕೆಲಸವನ್ನು ನಾವು ತಿಳಿದುಕೊಳ್ಳಲು ಸಾಧ್ಯ ಇಲ್ಲ. ಆದರೆ, ಅವರು ಯಥಾರ್ಥ ಜನರಿಗೆ ದೇವರ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವ ಕೆಲಸದಲ್ಲಿ ಒಳಗೂಡಿದ್ದಾರೆ ಎಂದು ಬೈಬಲ್‌ ಹೇಳುತ್ತದೆ.—ಅಪೊಸ್ತಲರ ಕಾರ್ಯಗಳು 8:26-35; 10:1-22; ಪ್ರಕಟನೆ 14:6, 7.

ಪೂರ್ವಜನಾದ ಯಾಕೋಬನಿಗೆ ಕನಸು ಬೀಳುವಂತೆ ಯೆಹೋವನು ಮಾಡಿದನು. ಆ ಕನಸಿನಲ್ಲಿ ದೇವದೂತರು ‘ನಿಚ್ಚಣಿಗೆಯ’ (ಏಣಿ) ಮೂಲಕ ಭೂಮಿಯಿಂದ ಸ್ವರ್ಗಕ್ಕೆ, ಸ್ವರ್ಗದಿಂದ ಭೂಮಿಗೆ ಹತ್ತುತ್ತಾ ಇಳಿಯುತ್ತಾ ಇದ್ದದ್ದನ್ನು ಕಂಡನು. (ಆದಿಕಾಂಡ 28:10-12) ಯಾಕೋಬನು ಕಂಡ ಆ ಕನಸಿನಿಂದ, ಅವನು ಯಾವ ನಿರ್ಣಯಕ್ಕೆ ಬಂದನೋ ನಾವು ಕೂಡ ಆ ನಿರ್ಣಯಕ್ಕೆ ಬರಬಹುದು. ಯಾರಿಗೆ ನೆರವಿನ ಅಗತ್ಯವಿದೆಯೋ ಅಂಥ ನಿಷ್ಠಾವಂತ ಜನರಿಗೆ ಸಹಾಯ ಮಾಡುವಂತೆ ಯೆಹೋವನು ದೇವದೂತರನ್ನು ಭೂಮಿಗೆ ಕಳುಹಿಸುತ್ತಾನೆ.—ಆದಿಕಾಂಡ 24:40; ವಿಮೋಚನಕಾಂಡ 14:19; ಕೀರ್ತನೆ 34:7. ▪

“ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು; ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು.”ಆದಿಕಾಂಡ 28:12.

^ ಪ್ಯಾರ. 6 ಕೆಲವು ಆತ್ಮಜೀವಿಗಳು ದೇವರ ಅಧಿಕಾರದ ವಿರುದ್ಧ ತಿರುಗಿಬಿದ್ದರು ಎಂದು ಬೈಬಲ್‌ ಹೇಳುತ್ತದೆ. ಈ ದುಷ್ಟ ದೇವದೂತರನ್ನು ಬೈಬಲ್‌ “ದೆವ್ವಗಳು” ಎಂದು ಕರೆಯುತ್ತದೆ.—ಲೂಕ 10:17-20.

^ ಪ್ಯಾರ. 11 ಬೈಬಲ್‍ನಲ್ಲಿ “ದೇವದೂತ” ಎಂಬ ಪದಕ್ಕಿರುವ ಮೂಲ ಹೀಬ್ರು ಮತ್ತು ಗ್ರೀಕ್‌ ಪದದ ಅಕ್ಷರಾರ್ಥವು ‘ಸಂದೇಶವಾಹಕ’ ಎಂದಾಗಿದೆ.