ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ
ಸಾವು ತರುವ ನೋವು
“ನಮ್ಮ ಮದುವೆಯಾಗಿ 39 ವರ್ಷಗಳ ನಂತರ ಗಂಭೀರ ಕಾಯಿಲೆಯಿಂದಾಗಿ ನನ್ನ ಹೆಂಡತಿ ಸೋಫಿಯನ a ನಾನು ಕಳೆದುಕೊಂಡೆ. ಆ ಸಮಯದಲ್ಲಿ ನನ್ನ ಸ್ನೇಹಿತರು ನನಗೆ ತುಂಬ ಸಹಾಯ ಮಾಡಿದರು. ನಾನು ನನ್ನನ್ನೇ ಬ್ಯುಸಿಯಾಗಿ ಇಟ್ಟುಕೊಂಡೆ. ಆದರೆ ಒಂದು ವರ್ಷದ ವರೆಗೆ, ಕಿತ್ತು ತಿನ್ನುವ ವೇದನೆ ನನ್ನನ್ನ ಕಾಡುತ್ತಿತ್ತು. ನನ್ನ ಭಾವನೆಗಳು ತುಂಬ ಅಲ್ಲೋಲ ಕಲ್ಲೋಲವಾಗುತ್ತಿದ್ದವು. ಈಗ ಅವಳು ತೀರಿಕೊಂಡು ಮೂರು ವರ್ಷ ಆದರೂ ಆಗಾಗ್ಗೆ, ದಿಢೀರಂತ ನನಗೇ ಗೊತ್ತಿಲ್ಲದೆ ಭಾವನಾತ್ಮಕವಾಗಿ ಕುಗ್ಗಿ ಹೋಗುತ್ತೇನೆ.”—ಕೋಸ್ಟಾಸ್.
ನೀವು ತುಂಬ ಪ್ರೀತಿಸುವವರು ಯಾರಾದರೂ ತೀರಿಹೋಗಿದ್ದಾರಾ? ಹಾಗಿದ್ದರೆ, ಕೋಸ್ಟಾಸ್‌ರಿಗೆ ಆದಂತೆ ನಿಮಗೂ ಆಗಿರಬಹುದು. ಬಾಳ ಸಂಗಾತಿಯ, ಸಂಬಂಧಿಕರೊಬ್ಬರ ಅಥವಾ ಆಪ್ತ ಸ್ನೇಹಿತ/ತೆಯ ಸಾವಿನಿಂದಾಗುವಷ್ಟು ಕಷ್ಟ, ನೋವು ಇನ್ನು ಯಾವುದರಿಂದಲೂ ಆಗುವುದಿಲ್ಲ. ಸಾವಿನಿಂದಾಗುವ ನೋವಿನ ಬಗ್ಗೆ ಅಧ್ಯಯನ ಮಾಡಿರುವ ತಜ್ಞರು ಇದನ್ನು ಒಪ್ಪಿಕೊಳ್ಳುತ್ತಾರೆ. “ಸಾವು ಶಾಶ್ವತವಾದ, ಅತಿ ದೊಡ್ಡ ನಷ್ಟದ ಅನಿಸಿಕೆಯನ್ನು ಉಂಟುಮಾಡುತ್ತದೆ” ಎಂದು ದಿ ಅಮೆರಿಕನ್ ಜರ್ನಲ್ ಆಫ್ ಸೈಕ್ಯಾಟ್ರಿ ಎಂಬ ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ರೀತಿ ವಿಪರೀತ ನೋವನ್ನು ಅನುಭವಿಸುವ ಕೆಲವರು ಹೀಗೆ ಯೋಚಿಸಬಹುದು: ‘ಇನ್ನೆಷ್ಟು ದಿವಸ ಈ ನೋವು ಅನುಭವಿಸಬೇಕು? ನಾನು ಮುಂಚಿನಂತೆ ಸಂತೋಷವಾಗಿರುತ್ತೇನಾ? ಈ ನೋವಿನಿಂದ ಹೊರಬರುವುದು ಹೇಗೆ?’
ಈ ಪ್ರಶ್ನೆಗಳಿಗೆ ಉತ್ತರಗಳನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ ನೋಡಲಿದ್ದೇವೆ. ಇತ್ತೀಚೆಗೆ ನಿಮ್ಮ ಆಪ್ತರೊಬ್ಬರು ತೀರಿಹೋಗಿದ್ದರೆ ಏನೆಲ್ಲಾ ಆಗುವ ಸಾಧ್ಯತೆಗಳಿವೆ ಎನ್ನುವುದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ. ತದನಂತರದ ಲೇಖನಗಳಲ್ಲಿ, ನಿಮ್ಮ ದುಃಖವನ್ನು ಕಡಿಮೆ ಮಾಡಲು ಏನೆಲ್ಲಾ ಮಾಡಬಹುದು ಎಂದು ತಿಳಿಯಲಿದ್ದೇವೆ.
ಈ ಮುಂದಿನ ಮಾಹಿತಿಯು ಸಾವಿನ ನೋವಿನಲ್ಲಿರುವವರಿಗೆ ಸಾಂತ್ವನ ಮತ್ತು ಪ್ರಾಯೋಗಿಕ ಸಹಾಯ ನೀಡುವುದೆಂದು ನಾವು ನಂಬುತ್ತೇವೆ.
a ಈ ಸರಣಿ ಲೇಖನಗಳಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.