ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಃಶಾಂತಿ

ಮನಃಶಾಂತಿ

ನಮ್ಮ ಮನಃಶಾಂತಿಯನ್ನು ಹಾಳುಮಾಡುವ ಯೋಚನೆಗಳ ಬಗ್ಗೆ ಬೈಬಲ್‌ ಎಚ್ಚರಿಸುತ್ತೆ. ಅಷ್ಟೇ ಅಲ್ಲ, ಮನಃಶಾಂತಿಯನ್ನು ಕಾಪಾಡಿಕೊಳ್ಳಲೂ ಸಹಾಯ ಮಾಡುತ್ತೆ.

ಕೋಪ

ಬೈಬಲ್‌ ಸಲಹೆ: “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ.”—ಜ್ಞಾನೋಕ್ತಿ 16:32.

ಇದರ ಅರ್ಥ: ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡಲು ಕಲಿಯೋದು ಒಳ್ಳೇದು. ಕೆಲವೊಮ್ಮೆ ನಾವು ಕೋಪ ಮಾಡಿಕೊಳ್ಳಲು ಸರಿಯಾದ ಕಾರಣ ಇರಬಹುದು. ಆದರೆ, ಕೋಪ ನಿಯಂತ್ರಿಸದಿದ್ದರೆ ಹಾನಿಯಂತು ಕಟ್ಟಿಟ್ಟ ಬುತ್ತಿ. ಸಂಶೋಧಕರು ಹೇಳುವುದು, ತುಂಬ ಕೋಪ ಬಂದಾಗ ಜನ ಹಿಂದೆ ಮುಂದೆ ಯೋಚಿಸದೆ ತಕ್ಷಣ ಪ್ರತಿಕ್ರಿಯಿಸುತ್ತಾರೆ. ಆದರೆ ಆಮೇಲೆ ಹೀಗೆ ಮಾಡಬಾರದಿತ್ತು ಅಂತ ಪಶ್ಚಾತ್ತಾಪ ಪಡುತ್ತಾರೆ.

ನೀವೇನು ಮಾಡಬಹುದು: ಕೋಪ ನಿಮ್ಮನ್ನು ನಿಯಂತ್ರಿಸುವ ಮುಂಚೆ ನೀವು ಕೋಪವನ್ನು ನಿಯಂತ್ರಿಸಿ. ಕೆಲವರು ಕೋಪ ಅನ್ನೋದು ಬಲದ ಸೂಚನೆ ಅಂತ ನೆನೆಸುತ್ತಾರೆ. ಆದ್ರೆ ಅದು ಬಲ ಅಲ್ಲ, ಬದಲಿಗೆ ಬಲಹೀನತೆ ಅಂತ ಗುರುತಿಸಲು ತಪ್ಪಿಹೋಗುತ್ತಾರೆ. “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು (ಕೋಪ ನಿಯಂತ್ರಿಸದವನು) ಗೋಡೆ ಬಿದ್ದ ಹಾಳೂರಿಗೆ ಸಮಾನ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 25:28) ಒಂದು ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಮುಂಚೆ ನಿಜವಾಗಿಯೂ ಏನು ನಡೆಯಿತು ಅಂತ ಮೊದಲು ತಿಳಿದುಕೊಳ್ಳಿ. ಇದು ನಿಮ್ಮ ಕೋಪಕ್ಕೆ ಕಡಿವಾಣ ಹಾಕುವ ಒಂದು ಉತ್ತಮ ವಿಧಾನ. “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ.” (ಜ್ಞಾನೋಕ್ತಿ 19:11) ನಮ್ಮಲ್ಲಿ ವಿವೇಕ ಇದ್ದರೆ, ತಕ್ಷಣ ಪ್ರತಿಕ್ರಿಯಿಸದೆ ಮೊದಲು ವಿಷಯ ಏನೆಂದು ಚೆನ್ನಾಗಿ ತಿಳಿದುಕೊಳ್ಳುತ್ತೇವೆ. ಆಗ ಕೋಪವನ್ನು ನಿಯಂತ್ರಿಸಲು ಸಹಾಯ ಆಗುತ್ತೆ.

ಕೃತಜ್ಞತೆ

ಬೈಬಲ್‌ ಸಲಹೆ: “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ.”—ಕೊಲೊಸ್ಸೆ 3:15.

ಇದರ ಅರ್ಥ: ಕೃತಜ್ಞತೆ ತೋರಿಸುವ ವ್ಯಕ್ತಿ ಯಾವಾಗಲೂ ಸಂತೋಷವಾಗಿ ಇರುತ್ತಾನೆ. ತಮ್ಮ ಆಪ್ತರ ಸಾವಿನ ನೋವಲ್ಲಿ ಇರೋರಿಗೂ ಈ ಮಾತುಗಳಿಂದ ಸಹಾಯ ಆಗುತ್ತೆ. ಇಂಥ ಸಮಯದಲ್ಲಿ ಮನಃಶಾಂತಿ ಕಾಪಾಡಿಕೊಳ್ಳಲು ಏನು ಮಾಡಬಹುದು? ಈಗಾಗಲೇ ಕಳೆದುಕೊಂಡಿರುವ ವಿಷಯಗಳ ಬಗ್ಗೆ ಕೊರಗುವ ಬದಲು, ಇರೋ ವಿಷಯಗಳಿಗಾಗಿ ಕೃತಜ್ಞರಾಗಿರಬೇಕು.

ನೀವೇನು ಮಾಡಬಹುದು: ಪ್ರತಿದಿನ ಕೃತಜ್ಞತೆ ಹೇಳಬಹುದಾದ ವಿಷಯಗಳನ್ನು ಪಟ್ಟಿ ಮಾಡಿ. ಅವು ತುಂಬ ದೊಡ್ಡ ದೊಡ್ಡ ವಿಷಯಗಳೇ ಆಗಿರಬೇಕು ಅಂತೇನಿಲ್ಲ. ಸಣ್ಣ ಸಣ್ಣ ವಿಷಯಗಳೂ ಆಗಿರಬಹುದು. ಉದಾಹರಣೆಗೆ, ಸುಂದರ ಪ್ರಕೃತಿಗಾಗಿ, ನಿಮ್ಮ ಪ್ರಿಯರೊಂದಿಗೆ ಕಳೆದ ಅಮೂಲ್ಯ ಕ್ಷಣಕ್ಕಾಗಿ ಅಥವಾ ಹೊಸ ದಿನಕ್ಕಾಗಿ ಕೃತಜ್ಞತೆ ಹೇಳಬಹುದು. ಇಂಥ ಸಣ್ಣ-ಪುಟ್ಟ ವಿಷಯಗಳನ್ನು ಗುರುತಿಸಿ, ಕೃತಜ್ಞತೆ ಹೇಳಲು ಸಮಯ ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ, ಸಂತೋಷನೂ ಇರುತ್ತೆ.

ಅದರಲ್ಲೂ, ನಿಮಗೆ ಕುಟುಂಬ ಮತ್ತು ಸ್ನೇಹಿತರು ಇರುವುದಕ್ಕಾಗಿ ನೀವೆಷ್ಟು ಕೃತಜ್ಞರು ಅಂತ ಯೋಚಿಸಿ. ಒಬ್ಬ ವ್ಯಕ್ತಿಯಲ್ಲಿ ಯಾವುದಾದರೂ ಗುಣ ನಿಮಗೆ ಇಷ್ಟವಾದರೆ, ಅವರಿಗೆ ಅದರ ಬಗ್ಗೆ ಹೇಳಿ. ಇದನ್ನು ನೀವು ಮಾತಲ್ಲಿ ಹೇಳಬಹುದು ಅಥವಾ ಒಂದು ಪತ್ರ, ಇ-ಮೇಲ್‌, ಮೆಸೇಜ್‌ ಮೂಲಕಾನೂ ತಿಳಿಸಬಹುದು. ಹೀಗೆ ಮಾಡಿದರೆ, ಸಂಬಂಧಗಳು ಬಲಗೊಳ್ಳುತ್ತೆ ಮತ್ತು ನಿಮಗೆ ಸಂತೋಷನೂ ಸಿಗುತ್ತೆ.—ಅಪೊಸ್ತಲರ ಕಾರ್ಯಗಳು 20:35.

ಬೈಬಲಿನ ಇನ್ನಿತರ ಸಲಹೆಗಳು

ಬೈಬಲಿನ ಆಡಿಯೋ ರೆಕಾರ್ಡಿಂಗ್ಸ್‌ ಅನ್ನು ಇಂಗ್ಲಿಷ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು. ಇದು ಸುಮಾರು 40 ಬೇರೆ ಭಾಷೆಗಳಲ್ಲೂ jw.orgನಲ್ಲಿ ಲಭ್ಯ

ವಾದ-ವಿವಾದಗಳಿಂದ ದೂರವಿರಿ.

“ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.”​—ಜ್ಞಾನೋಕ್ತಿ 17:14.

ಭವಿಷ್ಯದ ಬಗ್ಗೆ ಅನಾವಶ್ಯಕವಾಗಿ ಚಿಂತಿಸುವುದನ್ನು ಬಿಟ್ಟುಬಿಡಿ.

“ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.”—​ಮತ್ತಾಯ 6:34.

ತಕ್ಷಣ ಪ್ರತಿಕ್ರಿಯಿಸಬೇಡಿ, ಮೊದಲು ವಿಷಯ ಏನೆಂದು ಚೆನ್ನಾಗಿ ತಿಳಿದುಕೊಳ್ಳಿ.

“ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು.”​—ಜ್ಞಾನೋಕ್ತಿ 2:11.