ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೀಸ್ಟ್‌ ಜೀವಕೋಶದ ಒಳಗೆ ನಡೆಯೋ ಕ್ರಿಯೆ ನೆನಸಲಾಗದಷ್ಟು ಜಟಿಲವಾಗಿದೆ. ಯೀಸ್ಟ್‌ ಜೀವಕೋಶದಲ್ಲಿ ಡಿಎನ್‌ಎ ಇರುವ ಬೀಜಕಣ (ನ್ಯೂಕ್ಲಿಯಸ್‌) ಸುಸಂಘಟಿತವಾಗಿದೆ. ಈ ಜೀವಕೋಶದಲ್ಲಿ ಅತಿಸೂಕ್ಷ್ಮ ಯಂತ್ರಗಳಿವೆ. ಜೀವಕೋಶಗಳು ಜೀವಂತವಾಗಿರೋಕೆ ಈ ಯಂತ್ರ ಅಣುಗಳನ್ನು ವಿಂಗಡಿಸುತ್ತೆ, ಸಾಗಿಸುತ್ತೆ ಮತ್ತು ಮಾರ್ಪಡಿಸುತ್ತೆ.

ಜೀವ ನಮಗೆ ಏನು ಕಲಿಸುತ್ತೆ

ಜೀವ ನಮಗೆ ಏನು ಕಲಿಸುತ್ತೆ

ನಮ್ಮ ಸುತ್ತಮುತ್ತಲಿರೋ ಜೀವಿಗಳು ಬೆಳೆಯುತ್ತೆ, ಚಲಿಸುತ್ತೆ ಮತ್ತು ಸಂತಾನೋತ್ಪತ್ತಿ ಮಾಡುತ್ತೆ. ಇವುಗಳಿಂದಾನೇ ಈ ಭೂಮಿ ಇಷ್ಟು ಸುಂದರವಾಗಿ ಕಂಗೊಳಿಸುತ್ತಿರೋದು. ಹಿಂದೆಂದಿಗಿಂತಲೂ ಈಗ ಮನುಷ್ಯರಿಗೆ ಜೀವಿಗಳ ಬಗ್ಗೆ ಹೆಚ್ಚು ತಿಳುವಳಿಕೆ ಇದೆ. ಆದರೆ ಈ ಜೀವ ಎಲ್ಲಿಂದ ಬಂತು? ಬನ್ನಿ ನೋಡೋಣ.

ಜೀವವನ್ನು ವಿನ್ಯಾಸಿಸಿದ ಹಾಗಿದೆ! ಒಂದು ಕಟ್ಟಡಕ್ಕೆ ಕಲ್ಲುಗಳು ಹೇಗೆ ಬೇಕೊ ಹಾಗೆ ಜೀವಕ್ಕೆ ಜೀವಕೋಶಗಳು ಬೇಕು. ಜೀವಕೋಶಗಳು ಒಂದು ಚಿಕ್ಕ ಫ್ಯಾಕ್ಟರಿಯಂತೆ ಕೆಲಸ ಮಾಡುತ್ತೆ. ಜೀವ ಉಳಿಯಲು ಮತ್ತು ಸಂತಾನೋತ್ಪತ್ತಿ ಮಾಡಲು ಈ ಜೀವಕೋಶದ ಒಳಗೆ ಸಾವಿರಾರು ಜಟಿಲವಾದ ಕೆಲಸಗಳು ನಡೆಯುತ್ತೆ. ಈ ಕ್ರಿಯೆ ಸೂಕ್ಷ್ಮಾಣುಜೀವಿಗಳಲ್ಲೂ ನಡೆಯುತ್ತೆ. ಉದಾಹರಣೆಗೆ, ಯೀಸ್ಟ್‌ ಬಗ್ಗೆ ಯೋಚಿಸಿ. ಇದರಲ್ಲಿ ಬರೀ ಒಂದೇ ಜೀವಕೋಶ ಇದೆ. ಮನುಷ್ಯರ ಜೀವಕೋಶಗಳಿಗೆ ಹೋಲಿಸಿದರೆ ಯೀಸ್ಟಲ್ಲಿರೋ ಜೀವಕೋಶ ಏನೂ ಅಲ್ಲ ಅನಿಸುತ್ತೆ. ಆದರೂ ಇದರೊಳಗೆ ನಡೆಯೋ ಕ್ರಿಯೆ, ನೆನಸಲು ಆಗದಷ್ಟು ಜಟಿಲವಾಗಿದೆ. ಯೀಸ್ಟ್‌ ಜೀವಕೋಶದಲ್ಲಿ ಡಿಎನ್‌ಎ ಇರುವ ಬೀಜಕಣ (ನ್ಯೂಕ್ಲಿಯಸ್‌) ಸುಸಂಘಟಿತವಾಗಿದೆ. ಈ ಜೀವಕೋಶದಲ್ಲಿ ಅತಿಸೂಕ್ಷ್ಮ ಯಂತ್ರಗಳಿವೆ. ಜೀವಕೋಶಗಳು ಜೀವಂತವಾಗಿರೋಕೆ ಈ ಯಂತ್ರಗಳು ಅಣುಗಳನ್ನು ವಿಂಗಡಿಸುತ್ತೆ, ಸಾಗಿಸುತ್ತೆ ಮತ್ತು ಮಾರ್ಪಡಿಸುತ್ತೆ. ಯೀಸ್ಟ್‌ ಜೀವಕೋಶಕ್ಕೆ ಆಹಾರ ಸಿಗದೆ ಇದ್ದಾಗ ಅದರಲ್ಲಿ ಒಂದು ರಾಸಾಯನಿಕ ಪ್ರಕ್ರಿಯೆ ಆರಂಭವಾಗುತ್ತೆ. ಆಗ ಅದರ ಚಟುವಟಿಕೆ ನಿಧಾನವಾಗುತ್ತೆ. ಅದಕ್ಕಾಗಿಯೇ ಯೀಸ್ಟನ್ನು ಆಹಾರಕ್ಕಾಗಿ ಸಂಗ್ರಹಿಸಿ ಇಡಲು ಆಗ್ತಿದೆ. ಅದನ್ನು ಆಹಾರದಲ್ಲಿ ಬಳಸುವಾಗಲೇ ಪುನಃ ಅದು ತನ್ನ ಕೆಲಸವನ್ನು ಶುರುಮಾಡುತ್ತೆ.

ವಿಜ್ಞಾನಿಗಳು ಮನುಷ್ಯನ ಜೀವಕೋಶಗಳನ್ನು ಅರ್ಥಮಾಡಿಕೊಳ್ಳಲು ಯೀಸ್ಟ್‌ ಜೀವಕೋಶವನ್ನು ದಶಕಗಳಿಂದ ಅಧ್ಯಯನ ಮಾಡ್ತಿದ್ದಾರೆ. ಆದರೂ ಅವರಿಗೆ ಇನ್ನೂ ಎಷ್ಟೋ ವಿಷಯಗಳು ಅರ್ಥನೇ ಆಗಿಲ್ಲ. “ಬರೀ ಒಂದು ಯೀಸ್ಟ್‌ ಜೀವಕೋಶವನ್ನು ಅರ್ಥಮಾಡಿಕೊಳ್ಳಲು ಎಲ್ಲ ಪ್ರಯೋಗಗಳನ್ನ ಮಾಡೋಕೆ ಬೇಕಾದಷ್ಟು ಜೀವಶಾಸ್ತ್ರಜ್ಞರೇ ಇಲ್ಲ” ಅಂತ ಹೇಳಿ ಸ್ವೀಡನ್‌ನ ಚಾಲ್ಮರ್ಸ್‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ ಮಶಿನ್‌ ಇಂಟೆಲಿಜೆನ್ಸಿನ ಪ್ರೋಫೆಸರ್‌ ಆದ ರಾಸ್‌ ಕಿಂಗ್‌ ವಿಷಾದಿಸುತ್ತಾರೆ.

ನಿಮಗೆ ಏನನಿಸುತ್ತೆ? ಯೀಸ್ಟಲ್ಲಿರೋ ಚಿಕ್ಕ ಜೀವಕೋಶ ಇಷ್ಟು ಜಟಿಲವಾಗಿ ಕೆಲಸ ಮಾಡ್ತಿದೆ ಅಂದರೆ ಅದು ತನ್ನಿಂದ ತಾನೇ ಬಂದಿದ್ದು ಅಂತ ಹೇಳಬಹುದಾ ಅಥವಾ ಅದನ್ನು ವಿನ್ಯಾಸಿಸಿದ್ದಾ?

ಒಂದು ಜೀವದಿಂದ ಮಾತ್ರ ಜೀವ ಬರಲು ಸಾಧ್ಯ. ಡಿಎನ್‌ಎ ನ್ಯೂಕ್ಲಿಯೋಟೈಡ್ಸ್‌ ಅನ್ನೋ ಅಣುಗಳಿಂದ ರಚನೆಯಾಗಿದೆ. ಪ್ರತಿ ಮನುಷ್ಯನ ಜೀವಕೋಶದಲ್ಲಿ 320 ಕೋಟಿ ನ್ಯೂಕ್ಲಿಯೋಟೈಡ್ಸ್‌ ಇದೆ. ಈ ರಾಸಾಯನಿಕಗಳ ಮಿಶ್ರಣ ಒಂದು ನೀಲಿನಕ್ಷೆಯನ್ನು ರಚಿಸುತ್ತೆ. ಇದು ಜೀವಕೋಶಕ್ಕೆ ಕಿಣ್ವ (ಎನ್ಜೈಮ್ಸ್‌) ಮತ್ತು ಪ್ರೊಟೀನನ್ನು ತಯಾರಿಸೋಕೆ ಹೇಳುತ್ತೆ.

ನ್ಯೂಕ್ಲಿಯೋಟೈಡ್ಸ್‌ನ ಸರಳ ಎಳೆ ತನ್ನಿಂದ ತಾನೇ ಡಿಎನ್‌ಎಯನ್ನು ರೂಪಿಸೋದು ಅಸಾಧ್ಯ. ಒಂದುವೇಳೆ ಹಾಗೆ ರೂಪಿಸುವ ಸಾಧ್ಯತೆ ಇದ್ರೆ 1 ರ ಮುಂದೆ 150 ಸೊನ್ನೆಗಳನ್ನು ಹಾಕಿದಷ್ಟು ಸಲ ಈ ಸರಳ ಎಳೆ ಒಟ್ಟಿಗೆ ಸೇರಿ ಬರಬೇಕು. ಆಗ ಮಾತ್ರ ಒಂದು ಡಿಎನ್‌ಎ ರಚನೆಯಾಗುತ್ತೆ ಅಂತ ವಿಜ್ಞಾನಿಗಳು ಹೇಳ್ತಾರೆ.

ನಿಜಾಂಶ ಏನಂದ್ರೆ, ಜೀವ ಇಲ್ಲದಿರೋ ವಸ್ತುವಿನಿಂದ ತಾನಾಗಿಯೇ ಜೀವ ಹುಟ್ಟುತ್ತೆ ಅಂತ ಸಾಬೀತುಪಡಿಸೋಕೆ ಯಾವ ವಿಜ್ಞಾನಿಗಳಿಗೂ ಆಗಿಲ್ಲ.

ಮನುಷ್ಯನ ಜೀವನ ವಿಶೇಷ. ಮನುಷ್ಯರಾದ ನಾವು ಆನಂದಿಸೋ ರೀತಿಯಲ್ಲಿ ಬೇರೆ ಯಾವ ಜೀವಿಗಳೂ ತಮ್ಮ ಜೀವನವನ್ನು ಆನಂದಿಸಲ್ಲ. ನಮಗೆ ಒಳ್ಳೊಳ್ಳೆ ಸಾಮರ್ಥ್ಯಗಳಿವೆ. ಜನರ ಜೊತೆ ವ್ಯವಹರಿಸೋಕೆ, ನಮ್ಮ ಭಾವನೆಗಳನ್ನು ಹೇಳಿಕೊಳ್ಳೋಕೆ ನಮಗಾಗುತ್ತೆ, ನಮಗೆ ರುಚಿ ನೋಡೋಕೆ, ವಾಸನೆ ಗ್ರಹಿಸೋಕೆ, ಶಬ್ಧ ಕೇಳೋಕೆ, ಬಣ್ಣಗಳನ್ನು ನೋಡೋಕೆ ಆಗುತ್ತೆ. ಮುಂದಿನ ಜೀವನದ ಬಗ್ಗೆ ಪ್ಲ್ಯಾನ್‌ ಮಾಡೋಕೆ, ನಮ್ಮ ಜೀವನಕ್ಕೆ ಒಂದು ಅರ್ಥ ಕಂಡುಕೊಳ್ಳೋಕೆ ಆಗುತ್ತೆ.

ಆದ್ರೆ ನಿಮಗೆ ಏನನಿಸುತ್ತೆ? ನಮ್ಮಲ್ಲಿ ಈ ಗುಣಲಕ್ಷಣಗಳು ಇರೋದು ನಾವು ಬರೀ ಬದುಕಿ ಉಳಿಬೇಕು, ಸಂತಾನೋತ್ಪತ್ತಿ ಮಾಡಬೇಕು ಅನ್ನೋ ಉದ್ದೇಶದಿಂದಲಾ? ಅಥವಾ ಈ ಗುಣಲಕ್ಷಣಗಳು ನಮ್ಮ ಜೀವ ಒಬ್ಬ ಪ್ರೀತಿಯ ಸೃಷ್ಟಿಕರ್ತ ನಮಗೆ ಕೊಟ್ಟಿರೋ ಉಡುಗೊರೆ ಅಂತ ತೋರಿಸುತ್ತಾ?