ವಿಶ್ವ-ವೀಕ್ಷಣೆ
ಅಮೆರಿಕದ ಸುದ್ದಿ-ಸಮಾಚಾರ
ಪಶ್ಚಿಮಾರ್ಧ ಗೋಳದಲ್ಲಿನ ಸುದ್ದಿಗಳು ಬೈಬಲಿನಲ್ಲಿರುವ ವಿವೇಕ ಎಷ್ಟು ಅಮೂಲ್ಯವೆಂಬುದಕ್ಕೆ ಸಾಕ್ಷಿಯಾಗಿವೆ.
ಇ-ಮೇಲ್ ನೋಡುವುದನ್ನು ತಗ್ಗಿಸಿ, ಒತ್ತಡವನ್ನು ಪರಿಹರಿಸಿ
ಪದೇ ಪದೇ ಇ-ಮೇಲ್ ನೋಡುವವರಿಗೆ ಹೋಲಿಸಿದರೆ ದಿನಕ್ಕೆ ಮೂರು ಬಾರಿ ಇ-ಮೇಲ್ ನೋಡುವವರಿಗೆ ಕಡಿಮೆ ಒತ್ತಡ ಇರುತ್ತದೆ ಎಂದು ಕೆನಡಾದ ವ್ಯಾಂಕೂವರ್‌ನಲ್ಲಿ ನಡೆದ ಒಂದು ಸಂಶೋಧನೆ ತಿಳಿಸುತ್ತದೆ. ಇದನ್ನು ನಡೆಸಿದ ಕೊಸ್ಟಡಿನ್ ಕೂಶ್ಲೆವ್ ಹೇಳುವುದು: “ಜನರಿಗೆ ಇ-ಮೇಲ್ ನೋಡುತ್ತಾ ಇರುವುದು ಒಂದು ಕೆಟ್ಟ ಚಟವಾಗಿದೆ. ಅದನ್ನು ಕಡಿಮೆ ಮಾಡಿಕೊಂಡರೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
ಸ್ವಲ್ಪ ಯೋಚಿಸಿ: ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲದಲ್ಲಿ’ ನಾವು ಜೀವಿಸುತ್ತಿದ್ದೇವೆ. ಹಾಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದ್ರೂ ದಾರಿ ಹುಡುಕಬೇಕಲ್ವಾ?—2 ತಿಮೊಥೆಯ 3:1.
ಅಳಿವಿನಂಚಿನ ಸಮುದ್ರಜೀವಿಗಳ ಉಳಿವು
ಬೆಲೀಸ್ ಮತ್ತು ಕೆರಿಬಿಯನ್ ಪ್ರದೇಶದ ಕೆಲವು ಸ್ಥಳಗಳಲ್ಲಿರುವ “ಮೀನುಗಾರಿಕೆ ನಿಷೇಧಿತ ಪ್ರದೇಶದಲ್ಲಿ ಚಿಪ್ಪುಮೀನು, ಸಮುದ್ರ ಏಡಿ ಮತ್ತು ಇತರ ಮೀನುಗಳ ಸಂಖ್ಯೆ ಹೆಚ್ಚಾಗಿರುವುದು ದಾಖಲಾಗಿದೆ” ಎಂದು ವನ್ಯಜೀವಿ ಸಂರಕ್ಷಣಾ ಸಂಘ (WCS) ವರದಿಸಿದೆ. ಅಲ್ಲದೆ “ಮೀನುಗಾರಿಕೆ ಪ್ರದೇಶಗಳಿಗೆ ಹೋಲಿಸಿದರೆ ನಿಷೇಧಿತ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳ ಸಂಖ್ಯೆ ಹೆಚ್ಚಾಗಲು ಕೇವಲ 1-6 ವರ್ಷಗಳು ಹಿಡಿಯುವುದಾದರೂ . . . ಸಂಪೂರ್ಣವಾಗಿ ಚೇತರಿಸಿಕೊಳ್ಳಲು ದಶಕಗಳೇ ಹಿಡಿಯುತ್ತವೆ” ಎನ್ನುತ್ತದೆ ಆ ವರದಿ. “ಜಲಚರಗಳು ಮತ್ತು ನೀರಿನಲ್ಲಿರುವ ವೈವಿದ್ಯಮಯ ಜೀವರಾಶಿಗಳು ಸಂಖ್ಯೆಯಲ್ಲಿ ಹೆಚ್ಚಲು ಈ ನಿಷೇಧಿತ ಪ್ರದೇಶಗಳು ತುಂಬ ಸಹಾಯಕಾರಿ ಎನ್ನುವುದು ಸ್ಪಷ್ಟವಾಗುತ್ತದೆ” ಅಂತ ಬೆಲೀಸ್ ಪ್ರದೇಶದ ಬಗ್ಗೆ ವನ್ಯಜೀವಿ ಸಂರಕ್ಷಣಾ ಸಂಘದ ಡೈರೆಕ್ಟರ್ ಜಾನೆಟ್ ಗಿಬ್ಸನ್ ಹೇಳುತ್ತಾರೆ.
ಸ್ವಲ್ಪ ಯೋಚಿಸಿ: ಅಳಿವಿನಂಚಿಗೆ ಹೋದರೂ ಪುನಃ ಚೇತರಿಸಿಕೊಳ್ಳುವ ಈ ಪ್ರಕ್ರಿಯೆಯ ಹಿಂದೆ ಒಬ್ಬ ವಿವೇಕಿ ಸೃಷ್ಟಿಕರ್ತನಿಲ್ಲವೋ?—ಕೀರ್ತನೆ 104:24, 25.
ಬ್ರೆಸಿಲ್‍ನಲ್ಲಿ ತಾರಕಕ್ಕೇರಿದ ಹಿಂಸೆ
ಬ್ರೆಸಿಲ್‍ನಲ್ಲಿ ಹಿಂಸೆಯು ಹೆಚ್ಚಾಗುತ್ತಿದೆ ಎಂದು ನ್ಯೂಸ್ ಸರ್ವೀಸ್ ಆಶೆನ್‌ಸಿಯ ವರದಿಸಿದೆ. ಇಲ್ಲಿ 2012ರಲ್ಲಿ ಸುಮಾರು 56,000 ಕೊಲೆಗಳಾಗಿವೆ. ಬೇರೆಲ್ಲಾ ವರ್ಷಗಳಿಗೆ ಹೋಲಿಸುವುದಾದರೆ ಈ ವರ್ಷ ತುಂಬಾ ಕೊಲೆಗಳಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ನೈತಿಕತೆ ಎಷ್ಟರ ಮಟ್ಟಿಗೆ ಕೀಳ್ಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಇದು ಸಾಕ್ಷ್ಯ ಎನ್ನುವುದು ಸಾರ್ವಜನಿಕ ಭದ್ರತೆಯ ತಜ್ಞ ಲೂಯಿಸ್ ಸಪೋರಿಯ ಅಭಿಪ್ರಾಯ. ನಾಗರಿಕ ಸಮಾಜದಲ್ಲಿ ಜನರು ನಿಯಮಗಳ ಮೇಲೆ ಗೌರವ ಕಳೆದುಕೊಂಡಾಗ, “ಹಿಂಸಾಕೃತ್ಯಗಳ ಮೂಲಕ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಲು ಪ್ರಾರಂಭಿಸುತ್ತಾರೆ” ಅನ್ನುತ್ತಾರೆ ಸಪೋರಿ.
ನಿಮಗಿದು ಗೊತ್ತೇ? ಪ್ರೀತಿ ‘ತಣ್ಣಗಾಗುವ’ ಮತ್ತು ಅನ್ಯಾಯ ಹೆಚ್ಚಾಗುವ ಸಮಯ ಬರುವುದೆಂದು ಬೈಬಲ್ ಮುಂತಿಳಿಸಿತ್ತು.—ಮತ್ತಾಯ 24:3, 12. (g16-E No. 5)