ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೆಕರ್ಯನು ಕಂಡ ದರ್ಶನಗಳು—ನಿಮ್ಮ ಮೇಲೆ ಯಾವ ಪ್ರಭಾವ ಬೀರಬೇಕು?

ಜೆಕರ್ಯನು ಕಂಡ ದರ್ಶನಗಳು—ನಿಮ್ಮ ಮೇಲೆ ಯಾವ ಪ್ರಭಾವ ಬೀರಬೇಕು?

“ನನ್ನ ಕಡೆಗೆ ಪುನಃ ತಿರುಗಿರಿ . . . ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.”—ಜೆಕ. 1:3.

ಗೀತೆಗಳು: 120, 117

1-3. (ಎ) ಜೆಕರ್ಯನು ಪ್ರವಾದಿಸುವ ಕೆಲಸ ಆರಂಭಿಸಿದಾಗ ಯೆಹೋವನ ಜನರ ಸನ್ನಿವೇಶ ಏನಾಗಿತ್ತು? (ಬಿ) ಯೆಹೋವನು ತನ್ನ ಜನರಿಗೆ ತನ್ನ ಕಡೆಗೆ ಪುನಃ ತಿರುಗುವಂತೆ ಹೇಳಿದ್ದೇಕೆ?

ಹಾರುತ್ತಿರುವ ಒಂದು ಸುರುಳಿ, ಕೊಳಗದೊಳಗಿರುವ ಒಬ್ಬ ಹೆಂಗಸು, ಕೊಕ್ಕರೆಯ ರೆಕ್ಕೆಯಂತಿರುವ ರೆಕ್ಕೆಗಳೊಂದಿಗೆ ಹಾರುತ್ತಿರುವ ಇಬ್ಬರು ಹೆಂಗಸರು—ಇವೆಲ್ಲ ಜೆಕರ್ಯನು ಕಂಡ ರೋಮಾಂಚಕಾರಿ ದರ್ಶನಗಳಲ್ಲಿ ಕೆಲವು. (ಜೆಕ. 5:1, 7-9) ಯೆಹೋವನು ತನ್ನ ಈ ಪ್ರವಾದಿಗೆ ವಿಸ್ಮಯಹುಟ್ಟಿಸುವ ಇಂಥ ದರ್ಶನಗಳನ್ನು ಕೊಟ್ಟದ್ದೇಕೆ? ಆ ಕಾಲದಲ್ಲಿ ಇಸ್ರಾಯೇಲ್ಯರ ಸನ್ನಿವೇಶ ಏನಾಗಿತ್ತು? ಈ ದರ್ಶನಗಳಿಂದ ಇಂದು ನಮಗೆ ಹೇಗೆ ಸಹಾಯ ಆಗುತ್ತದೆ?

2 ಯೆಹೋವನ ಜನರು ಬಾಬೆಲಿನಲ್ಲಿ 70 ವರ್ಷಕಾಲ ಬಂಧಿವಾಸದಲ್ಲಿದ್ದರು. ಕ್ರಿ.ಪೂ. 537​ರಲ್ಲಿ ಅವರಿಗೆ ಬಿಡುಗಡೆಯಾಯಿತು. ಅದು ಅವರಿಗೆ ತುಂಬ ಸಂತೋಷದ ಸಮಯವಾಗಿತ್ತು. ಯೆರೂಸಲೇಮಿಗೆ ಹಿಂದಿರುಗಿ ಆಲಯವನ್ನು ಪುನಃ ಕಟ್ಟಿ, ಅಲ್ಲಿ ಯೆಹೋವನನ್ನು ಆರಾಧಿಸಲು ತುಂಬ ಉತ್ಸಾಹದಿಂದ ಇದ್ದರು. ಕ್ರಿ.ಪೂ. 536​ರಲ್ಲಿ ಆಲಯದ ಅಸ್ತಿವಾರವನ್ನು ಹಾಕಿ ಮುಗಿಸಿದರು. ಜನರಿಗೆ ಎಷ್ಟೊಂದು ಸಂತೋಷವಾಗಿತ್ತೆಂದರೆ “ಮಹಾಧ್ವನಿಯಿಂದ ಆರ್ಭಟಿಸುತ್ತಿ”ದ್ದರು ಮತ್ತು ಆ “ಗದ್ದಲವು ಬಹುದೂರದ ವರೆಗೂ ಕೇಳಿಸಿತು.” (ಎಜ್ರ 3:10-13) ಆದರೆ ಆಲಯ ಕಟ್ಟುವ ಆ ಕೆಲಸಕ್ಕೆ ವಿರೋಧ ಹೆಚ್ಚುತ್ತಾ ಹೋಯಿತು. ಇದರಿಂದಾಗಿ ಇಸ್ರಾಯೇಲ್ಯರಿಗೆ ಎಷ್ಟು ನಿರಾಶೆ ಆಯಿತೆಂದರೆ ಅವರು ಆಲಯ ಕಟ್ಟುವ ಕೆಲಸವನ್ನು ನಿಲ್ಲಿಸಿಬಿಟ್ಟರು. ತಮಗಾಗಿ ಮನೆಗಳನ್ನು ಕಟ್ಟುವುದಕ್ಕೆ, ವ್ಯವಸಾಯ ಮಾಡುವುದಕ್ಕೆ ಗಮನ ಕೊಡಲಾರಂಭಿಸಿದರು. ಹೀಗೆ ಹದಿನಾರು ವರ್ಷಗಳು ಕಳೆದುಹೋದವು. ಆದರೆ ಯೆಹೋವನ ಆಲಯವನ್ನು ಕಟ್ಟುವ ಕೆಲಸ ಅರ್ಧಕ್ಕೆ ನಿಂತುಹೋಗಿತ್ತು. ದೇವಜನರು ಯೆಹೋವನ ಕಡೆಗೆ ಪುನಃ ತಿರುಗಲು ಮತ್ತು ತಮ್ಮ ಬಗ್ಗೆ ಮಾತ್ರ ಯೋಚಿಸುವುದನ್ನು ನಿಲ್ಲಿಸಲು ನೆನಪುಹುಟ್ಟಿಸುವ ಅಗತ್ಯವಿತ್ತು. ಅವರು ತನ್ನನ್ನು ಹುರುಪಿನಿಂದ, ಧೈರ್ಯದಿಂದ ಆರಾಧಿಸಬೇಕೆಂದು ಯೆಹೋವನು ಬಯಸಿದನು.

3 ಆದ್ದರಿಂದಲೇ ಕ್ರಿ.ಪೂ. 520​ರಲ್ಲಿ ಯೆಹೋವನು ಪ್ರವಾದಿಯಾದ ಜೆಕರ್ಯನನ್ನು ತನ್ನ ಜನರ ಬಳಿ ಕಳುಹಿಸಿದನು. ಅವರನ್ನು ಬಾಬೆಲಿನಿಂದ ಬಿಡಿಸಿದ ಕಾರಣವನ್ನು ಅವನ ಮೂಲಕ ನೆನಪಿಸಿದನು. ಆಸಕ್ತಿಕರ ವಿಷಯವೇನೆಂದರೆ ಜೆಕರ್ಯ ಎಂಬ ಹೆಸರಿನ ಅರ್ಥ “ಯೆಹೋವನು ನೆನಪಿಟ್ಟಿದ್ದಾನೆ” ಎಂದಾಗಿದೆ. ಯೆಹೋವನು ತಮಗಾಗಿ ಏನೆಲ್ಲ ಮಾಡಿದ್ದನೋ ಅದನ್ನು ಇಸ್ರಾಯೇಲ್ಯರು ಮರೆತಿದ್ದರೂ ಯೆಹೋವನು ಅವರನ್ನು ಮರೆತಿರಲಿಲ್ಲ, ನೆನಪಿಟ್ಟಿದ್ದನು. (ಜೆಕರ್ಯ 1:3, 4 ಓದಿ.) ಸತ್ಯಾರಾಧನೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುವೆನೆಂದು ಯೆಹೋವನು ಅವರಿಗೆ ಮಾತುಕೊಟ್ಟನು. ಅದೇ ಸಮಯದಲ್ಲಿ ಅವರಿಗೆ ಎಚ್ಚರಿಕೆಯನ್ನೂ ಕೊಟ್ಟನು. ಅವರು ಅರೆಮನಸ್ಸಿನಿಂದ ಆರಾಧನೆ ಮಾಡಿದರೆ ಅದನ್ನು ಸ್ವೀಕರಿಸುವುದಿಲ್ಲವೆಂದು ಹೇಳಿದನು. ನಾವೀಗ ಜೆಕರ್ಯನ ಆರನೇ ಮತ್ತು ಏಳನೇ ದರ್ಶನಗಳ ಬಗ್ಗೆ ಚರ್ಚಿಸೋಣ. ಇಸ್ರಾಯೇಲ್ಯರು ಕ್ರಿಯೆಗೈಯುವಂತೆ ಯೆಹೋವನು ಹೇಗೆ ಪ್ರೇರಿಸಿದನೆಂದು ಮತ್ತು ಆ ಎರಡು ದರ್ಶನಗಳಿಂದ ಇಂದು ನಮಗೆ ಹೇಗೆ ಸಹಾಯ ಆಗುತ್ತದೆಂದು ನೋಡೋಣ.

ಕಳ್ಳತನ ಮಾಡುವವರ ವಿರುದ್ಧ ದೇವರ ತೀರ್ಪು

4. (ಎ) ಜೆಕರ್ಯನು ಆರನೇ ದರ್ಶನದಲ್ಲಿ ಏನು ನೋಡಿದನು? (ಬಿ) ಸುರುಳಿಯ ಎರಡೂ ಕಡೆಗಳಲ್ಲಿ ಸಂದೇಶ ಬರೆಯಲಾಗಿತ್ತು ಯಾಕೆ? (ಲೇಖನದ ಆರಂಭದ ಚಿತ್ರ 1​ನ್ನು ನೋಡಿ.)

4 ಜೆಕರ್ಯ 5​ನೇ ಅಧ್ಯಾಯದ ಆರಂಭದಲ್ಲೇ ಒಂದು ಅಸಾಮಾನ್ಯ ದರ್ಶನದ ಬಗ್ಗೆ ತಿಳಿಸಲಾಗಿದೆ. (ಜೆಕರ್ಯ 5:1, 2 ಓದಿ.) ಗಾಳಿಯಲ್ಲಿ ಹಾರುತ್ತಿರುವ ಒಂದು ಸುರುಳಿಯನ್ನು ಜೆಕರ್ಯನು ನೋಡುತ್ತಾನೆ. ಆ ಸುರುಳಿ ಸುಮಾರು 20 ಮೊಳ (30 ಅಡಿ) ಉದ್ದ ಮತ್ತು 10 ಮೊಳ (15 ಅಡಿ) ಅಗಲ ಆಗಿತ್ತು. ಸುರುಳಿ ಸುತ್ತಿರಲಿಲ್ಲ, ತೆರೆದಿತ್ತು. ಅದರಲ್ಲಿರುವ ಸಂದೇಶವನ್ನು ಕೂಡಲೆ ಓದಬಹುದಿತ್ತು. (ಜೆಕ. 5:3) ಅದು ಗಂಭೀರವಾದ ತೀರ್ಪಿನ ಸಂದೇಶವಾಗಿತ್ತು. ಹಿಂದಿನ ಕಾಲದಲ್ಲಿ ಜನರು ಸಾಮಾನ್ಯವಾಗಿ ಸುರುಳಿಯ ಒಂದು ಕಡೆಯಲ್ಲಿ ಮಾತ್ರ ಬರೆಯುತ್ತಿದ್ದರು. ಆದರೆ ಈ ಸುರುಳಿಯ ಎರಡೂ ಕಡೆಗಳಲ್ಲಿ ಬರೆಯಲಾಗಿತ್ತು. ಏಕೆಂದರೆ ಈ ಸಂದೇಶ ತುಂಬ ಮುಖ್ಯವಾಗಿತ್ತು.

ಕ್ರೈಸ್ತರು ಯಾವುದೇ ರೀತಿಯ ಕಳ್ಳತನ ಮಾಡಬಾರದು (ಪ್ಯಾರ 5-7 ನೋಡಿ)

5, 6. ಯಾವುದೇ ರೀತಿಯ ಕಳ್ಳತನದ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ?

5 ಜೆಕರ್ಯ 5:3, 4 ಓದಿ. ಮಾನವರು ಏನು ಮಾಡುತ್ತಾರೋ ಅದಕ್ಕೆ ದೇವರಿಗೆ ಲೆಕ್ಕ ಕೊಡಬೇಕು. ಅದರಲ್ಲೂ ಯೆಹೋವನ ಜನರ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯ. ಏಕೆಂದರೆ ಅವರು ಆತನ ನಾಮಧಾರಿಗಳು. ಅವರು ಆತನನ್ನು ಪ್ರೀತಿಸುತ್ತಾರೆ. ಕಳ್ಳತನ ಮಾಡಿದರೆ ಅದು ಆತನ ಹೆಸರಿಗೆ ಕಳಂಕ ತರುತ್ತದೆಂದು ಅವರಿಗೆ ತಿಳಿದಿದೆ. (ಜ್ಞಾನೋ. 30:8, 9) ಒಳ್ಳೇ ಕಾರಣಕ್ಕಾಗಿ ಕಳ್ಳತನ ಮಾಡಿದರೆ ತಪ್ಪೇನಿಲ್ಲ ಅಂತ ಕೆಲವು ಜನರು ನೆನಸುತ್ತಾರೆ. ಆದರೆ ಕಳ್ಳತನ ಮಾಡುವ ವ್ಯಕ್ತಿಗಿರುವ ಕಾರಣ ಎಷ್ಟೇ ಒಳ್ಳೇದಾಗಿ ತೋರಲಿ ಅವನಿಗೆ ತನ್ನ ದುರಾಸೆಯೇ ಮುಖ್ಯ ಎಂದು ತೋರಿಸಿಕೊಡುತ್ತಾನೆ. ಅವನಿಗೆ ಯೆಹೋವ, ಯೆಹೋವನ ಹೆಸರು ಮತ್ತು ಆತನ ನಿಯಮ ಮುಖ್ಯವಲ್ಲ.

6 ಶಾಪವು ‘ಕಳ್ಳನ ಮನೆಯೊಳಗೆ’ ನುಗ್ಗಿ ಅಲ್ಲಿ ‘ನೆಲೆಗೊಂಡು ಅದನ್ನು ನಾಶಮಾಡುವದು’ ಎಂದು ಜೆಕರ್ಯ 5:3, 4​ರಲ್ಲಿ ಹೇಳಿರುವುದನ್ನು ಗಮನಿಸಿದಿರಾ? ಇದರರ್ಥ ತನ್ನ ಜನರ ಮಧ್ಯೆ ಯಾವುದೇ ತಪ್ಪು ಕೆಲಸ ನಡೆದರೆ ಯೆಹೋವನು ಅದನ್ನು ಬಯಲಿಗೆಳೆದು ತೀರ್ಪು ಕೊಡಬಲ್ಲನು. ಕಳ್ಳತನ ಮಾಡಿದವನು ತನ್ನ ತಪ್ಪನ್ನು ಪೊಲೀಸರಿಂದ, ಧಣಿಯಿಂದ, ಹಿರಿಯರಿಂದ ಅಥವಾ ಹೆತ್ತವರಿಂದ ಮುಚ್ಚಿಡಬಹುದು. ಆದರೆ ಅದನ್ನು ಯೆಹೋವನಿಂದ ಮುಚ್ಚಿಡಲು ಸಾಧ್ಯವಿಲ್ಲ. ಕಳ್ಳತನ ಯಾವುದೇ ರೀತಿಯದ್ದಾಗಿರಲಿ ಅದನ್ನು ದೇವರು ಖಂಡಿತ ಬಯಲಿಗೆಳೆಯುತ್ತಾನೆ. (ಇಬ್ರಿ. 4:13) “ಎಲ್ಲ ವಿಷಯಗಳಲ್ಲಿ” ಪ್ರಾಮಾಣಿಕರಾಗಿರಲು ಸರ್ವಪ್ರಯತ್ನ ಮಾಡುವ ಜನರೊಂದಿಗಿನ ಸಹವಾಸ ನಮಗೆ ನಿಜವಾಗಿಯೂ ಆನಂದ ತರುತ್ತದೆ!—ಇಬ್ರಿ. 13:18.

7. ಶಾಪ ಅಂದರೆ ಯೆಹೋವನ ತೀರ್ಪಿನಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದು?

7 ಯಾವುದೇ ರೀತಿಯ ಕಳ್ಳತನ ಯೆಹೋವನಿಗೆ ಇಷ್ಟವಾಗುವುದಿಲ್ಲ. ಸರಿತಪ್ಪಿನ ಬಗ್ಗೆ ಯೆಹೋವನ ತತ್ವಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸುವುದು ನಮಗೆ ದೊರೆತ ಗೌರವವಾಗಿದೆ. ಆದ್ದರಿಂದ ನಾವು ಆತನ ಹೆಸರಿಗೆ ಕಳಂಕ ತರದಂಥ ರೀತಿಯಲ್ಲಿ ಜೀವಿಸಬೇಕು. ಹೀಗೆ ಜೀವಿಸಿದರೆ, ಯೆಹೋವನಿಗೆ ವಿಧೇಯರಾಗದ ಜನರ ಮೇಲೆ ಬರುವ ತೀರ್ಪು ನಮ್ಮ ಮೇಲೆ ಬರುವುದಿಲ್ಲ.

ನೀವು ಕೊಟ್ಟ ಮಾತಿನಂತೆ “ಪ್ರತಿದಿನ” ಜೀವಿಸಿ

8-10. (ಎ) ಆಣೆ ಅಂದರೇನು? (ಬಿ) ರಾಜ ಚಿದ್ಕೀಯನು ಯಾವ ಆಣೆಯನ್ನು ಮುರಿದನು?

8 ‘ದೇವರ ಹೆಸರೆತ್ತಿ ಸುಳ್ಳು ಸಾಕ್ಷಿ ಹೇಳುವವರಿಗೆ’ ಅಥವಾ ಸುಳ್ಳು ಆಣೆ ಇಡುವವರಿಗೆ ಸಹ ಹಾರುತ್ತಿರುವ ಸುರುಳಿಯಲ್ಲಿ ಎಚ್ಚರಿಕೆಯ ಸಂದೇಶ ಕೊಡಲಾಗಿದೆ. (ಜೆಕ. 5:4) ಆಣೆ ಎನ್ನುವುದು ಒಂದು ವಿಷಯ ಸತ್ಯ ಎಂದು ದೃಢೀಕರಿಸುವ ಹೇಳಿಕೆ ಆಗಿದೆ. ಅಷ್ಟುಮಾತ್ರವಲ್ಲ, ಒಂದು ನಿರ್ದಿಷ್ಟ ವಿಷಯ ಮಾಡುತ್ತೇನೆ ಅಥವಾ ಮಾಡುವುದಿಲ್ಲ ಎಂದು ಗಂಭೀರವಾಗಿ ಮಾತುಕೊಡುವುದು ಎಂಬ ಅರ್ಥವೂ ಅದಕ್ಕಿದೆ.

9 ಯೆಹೋವನ ಹೆಸರೆತ್ತಿ ಆಣೆಯಿಡುವುದು ತುಂಬ ಗಂಭೀರವಾದ ವಿಷಯ. ಯೆರೂಸಲೇಮಿನಲ್ಲಿ ಆಳಿದಂಥ ಕೊನೆಯ ಅರಸನಾದ ಚಿದ್ಕೀಯನು ಯೆಹೋವನ ಹೆಸರಿನ ಮೇಲೆ ಆಣೆಯಿಟ್ಟನು. ಬಾಬೆಲಿನ ಅರಸನಿಗೆ ಅಧೀನನಾಗಿ ಉಳಿಯುತ್ತೇನೆಂದು ಮಾತುಕೊಟ್ಟನು. ಆದರೆ ಆ ಮಾತನ್ನು ಉಳಿಸಿಕೊಳ್ಳಲಿಲ್ಲ. ಈ ಕಾರಣಕ್ಕೆ ಯೆಹೋವನು ಅವನ ಬಗ್ಗೆ ಹೀಗಂದನು: “ಇವನು ಯಾವನಿಂದ ಅರಸನಾಗಿ ನೇಮಿಸಲ್ಪಟ್ಟನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾವನ ಒಡಂಬಡಿಕೆಯನ್ನು ಮೀರಿದನೋ, ಆ ಅರಸನ ಬಳಿಯಲ್ಲಿ, ಅಂದರೆ ಬಾಬೆಲೆಂಬ ಅವನ ವಾಸಸ್ಥಾನದಲ್ಲಿ ಇವನು ಸಾಯುವದು ಖಂಡಿತ.”—ಯೆಹೆ. 17:16.

10 ರಾಜ ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟಿದ್ದರಿಂದ ಅವನದನ್ನು ಪಾಲಿಸಬೇಕೆಂದು ಯೆಹೋವನು ನಿರೀಕ್ಷಿಸಿದನು. (2 ಪೂರ್ವ. 36:13) ಚಿದ್ಕೀಯನು ಕೊಟ್ಟ ಮಾತನ್ನು ಮುರಿದು, ಬಾಬೆಲಿನ ನೊಗದಿಂದ ತಪ್ಪಿಸಿಕೊಳ್ಳಲು ಐಗುಪ್ತದ ಸಹಾಯ ಕೋರಿದನು. ಆದರೆ ಅವನಿಗೆ ಸಹಾಯ ಮಾಡಲು ಐಗುಪ್ತಕ್ಕೆ ಸಾಧ್ಯವಾಗಲಿಲ್ಲ.—ಯೆಹೆ. 17:11-15, 17, 18.

11, 12. (ಎ) ನಾವು ಕೊಡುವ ಅತಿ ಪ್ರಾಮುಖ್ಯ ಮಾತು ಯಾವುದು? (ಬಿ) ನಾವು ಮಾಡಿದ ಸಮರ್ಪಣೆ ನಮ್ಮ ಪ್ರತಿ ದಿನದ ಜೀವನವನ್ನು ಹೇಗೆ ಪ್ರಭಾವಿಸಬೇಕು?

11 ಚಿದ್ಕೀಯನಿಗೆ ಏನಾಯಿತೊ ಅದರಿಂದ ನಾವು ಕಲಿಯುವ ವಿಷಯವೇನೆಂದರೆ ನಾವು ಯಾವುದೇ ಮಾತು ಕೊಡುವಾಗ ಯೆಹೋವನು ಅದಕ್ಕೆ ಗಮನಕೊಡುತ್ತಾನೆ. ಹಾಗಾಗಿ ಅವನನ್ನು ಮೆಚ್ಚಿಸಬೇಕಾದರೆ ನಾವು ಕೊಟ್ಟ ಮಾತನ್ನು ಪಾಲಿಸಬೇಕು. (ಕೀರ್ತ. 76:11) ಜೀವನದಲ್ಲಿ ನಾವು ಎಷ್ಟೋ ಸಲ ಮಾತು ಕೊಡುತ್ತೇವೆ. ಇವುಗಳಲ್ಲಿ ಅತಿ ಪ್ರಾಮುಖ್ಯವಾದದ್ದು ಯಾವುದು? ನಾವು ಯೆಹೋವನಿಗೆ ಮಾಡುವ ಸಮರ್ಪಣೆಯೇ. ಈ ಸಮರ್ಪಣೆ ಅಂದರೆ, ನಮ್ಮ ಜೀವನದಲ್ಲಿ ಏನೇ ಆಗಲಿ ಆತನ ಸೇವೆಮಾಡುತ್ತೇವೆಂದು ಆತನಿಗೆ ಮಾತು ಕೊಡುವುದೇ ಆಗಿದೆ.

12 ನಾವು ಯೆಹೋವನಿಗೆ ಕೊಟ್ಟ ಆ ಮಾತನ್ನು ಹೇಗೆ ಪಾಲಿಸಬಹುದು? “ಪ್ರತಿದಿನ” ನಮಗೆ ಚಿಕ್ಕದೊಡ್ಡ ಪರೀಕ್ಷೆಗಳು ಎದುರಾಗುತ್ತವೆ. ಇವುಗಳನ್ನು ನಾವು ನಿಭಾಯಿಸುವ ರೀತಿಯಿಂದ ಯೆಹೋವನ ಜೊತೆಗಿನ ನಮ್ಮ ಸಂಬಂಧ ಎಷ್ಟು ಬಲವಾಗಿದೆ ಎಂದು ತೋರಿಸಿಕೊಡುತ್ತೇವೆ. (ಕೀರ್ತ. 61:8) ಉದಾಹರಣೆಗೆ ಈ ಸನ್ನಿವೇಶಗಳಲ್ಲಿ ಏನು ಮಾಡುತ್ತೀರಿ? ಕೆಲಸದ ಸ್ಥಳದಲ್ಲಾಗಲಿ, ಶಾಲೆ-ಕಾಲೇಜಿನಲ್ಲಾಗಲಿ ಯಾರಾದರೂ ನಿಮ್ಮ ಜೊತೆ ಚೆಲ್ಲಾಟವಾಡಲು ಆರಂಭಿಸಿದರೆ ಏನು ಮಾಡುತ್ತೀರಿ? ಅದನ್ನು ತಿರಸ್ಕರಿಸಿ, ಯೆಹೋವನಿಗೆ ವಿಧೇಯರಾಗುತ್ತೀರಾ? (ಜ್ಞಾನೋ. 23:26) ಇನ್ನೊಂದು ಸನ್ನಿವೇಶ ತೆಗೆದುಕೊಳ್ಳಿ. ನಿಮ್ಮ ಕುಟುಂಬದಲ್ಲಿ ಯೆಹೋವನನ್ನು ಆರಾಧಿಸುವವರು ನೀವೊಬ್ಬರೇ ಆಗಿದ್ದರೆ, ಕ್ರೈಸ್ತರಿಗೆ ತಕ್ಕದಾದ ರೀತಿಯಲ್ಲಿ ನಡೆದುಕೊಳ್ಳಲು ಆತನ ಸಹಾಯ ಬೇಡಿಕೊಳ್ಳುತ್ತೀರಾ? ನಿಮ್ಮ ಸನ್ನಿವೇಶ ಯಾವುದೇ ಆಗಿರಲಿ, ಯೆಹೋವನ ಪ್ರೀತಿ ಮತ್ತು ಮಾರ್ಗದರ್ಶನಕ್ಕಾಗಿ ಪ್ರತಿದಿನ ಆತನಿಗೆ ಧನ್ಯವಾದ ಹೇಳುತ್ತೀರಾ? ಪ್ರತಿ ದಿನ ಬೈಬಲ್‌ ಓದಲು ಸಮಯ ಮಾಡಿಕೊಳ್ಳುತ್ತೀರಾ? ನಾವು ಯೆಹೋವನಿಗೆ ನಮ್ಮನ್ನೇ ಸಮರ್ಪಿಸಿಕೊಂಡಾಗ ಒಂದರ್ಥದಲ್ಲಿ ಇದೆಲ್ಲವನ್ನು ಮಾಡುತ್ತೇವೆಂದು ಮಾತುಕೊಟ್ಟೆವು. ಆತನಿಗೆ ವಿಧೇಯರಾಗಿ, ನಮ್ಮ ಕೈಲಾದದ್ದೆಲ್ಲವನ್ನು ಮಾಡುವ ಮೂಲಕ ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಮತ್ತು ನಾವು ಆತನಿಗೆ ಸೇರಿದವರಾಗಿದ್ದೇವೆಂದೂ ತೋರಿಸಿಕೊಡುತ್ತೇವೆ. ನಮ್ಮ ಆರಾಧನೆ ಬರೀ ಕಾಟಾಚಾರವಲ್ಲ, ಬದಲಾಗಿ ನಮ್ಮ ಪ್ರತಿದಿನದ ಜೀವನವನ್ನು ಪ್ರಭಾವಿಸುತ್ತದೆ. ನಾವು ಹೀಗೆ ಯೆಹೋವನಿಗೆ ನಂಬಿಗಸ್ತರಾಗಿರುವಾಗ ಆತನು ನಮಗೊಂದು ಅದ್ಭುತ ಭವಿಷ್ಯವನ್ನು ಕೊಡುವೆನೆಂದು ಮಾತುಕೊಟ್ಟಿದ್ದಾನೆ.—ಧರ್ಮೋ. 10:12, 13.

13. ಜೆಕರ್ಯನ ಆರನೇ ದರ್ಶನದಿಂದ ಏನು ಕಲಿಯುತ್ತೇವೆ?

13 ನಾವು ಯೆಹೋವನನ್ನು ಪ್ರೀತಿಸುವುದಾದರೆ ಕಳ್ಳತನ ಮಾಡುವುದಿಲ್ಲ ಅಥವಾ ಕೊಟ್ಟ ಮಾತನ್ನು ಮುರಿಯುವುದಿಲ್ಲವೆಂದು ಅರ್ಥಮಾಡಿಕೊಳ್ಳಲು ಜೆಕರ್ಯನ ಆರನೇ ದರ್ಶನ ಸಹಾಯಮಾಡುತ್ತದೆ. ಈ ದರ್ಶನದಿಂದ ನಾವು ಇನ್ನೊಂದು ವಿಷಯವನ್ನೂ ಕಲಿಯುತ್ತೇವೆ. ಅದೇನೆಂದರೆ, ಇಸ್ರಾಯೇಲ್ಯರು ಎಷ್ಟೋ ಸಲ ತಪ್ಪು ಮಾಡಿದರೂ ಯೆಹೋವನು ಅವರ ಕೈಬಿಡದೆ ತನ್ನ ಮಾತನ್ನು ಉಳಿಸಿಕೊಂಡನು. ಅವರ ಸುತ್ತಲೂ ವೈರಿಗಳು ಇದ್ದದರಿಂದ ತುಂಬ ಕಷ್ಟದ ಪರಿಸ್ಥಿತಿಯಲ್ಲಿದ್ದರೆಂದು ಆತನು ಅರ್ಥಮಾಡಿಕೊಂಡನು. ಹೀಗೆ, ಕೊಟ್ಟ ಮಾತನ್ನು ಪಾಲಿಸಬೇಕೆಂದು ಯೆಹೋವನು ತನ್ನ ಸ್ವಂತ ಮಾದರಿಯ ಮೂಲಕ ನಮಗೆ ಕಲಿಸಿದ್ದಾನೆ. ಕೊಟ್ಟ ಮಾತನ್ನು ಪಾಲಿಸಲು ಬೇಕಾದ ಸಹಾಯವನ್ನೂ ನಮಗೆ ಕೊಡುತ್ತಾನೆಂದು ಭರವಸೆ ಇಡಬಹುದು. ಆತನು ನಮಗೆ ಸಹಾಯಮಾಡುವ ಒಂದು ವಿಧ, ಭವಿಷ್ಯದ ಕುರಿತು ಕೊಡುವ ನಿರೀಕ್ಷೆಯೇ. ಆತನು ಬೇಗನೆ ಭೂಮಿಯಲ್ಲಿರುವ ಎಲ್ಲ ದುಷ್ಟತನವನ್ನು ಅಂತ್ಯಗೊಳಿಸುವನು. ಈ ನಿರೀಕ್ಷೆಯ ಬಗ್ಗೆ ಜೆಕರ್ಯನ ಮುಂದಿನ ದರ್ಶನದಲ್ಲಿ ನೋಡಲಿದ್ದೇವೆ.

ಯೆಹೋವನು ದುಷ್ಟರನ್ನು ತೆಗೆದುಬಿಡುತ್ತಾನೆ

14, 15. (ಎ) ಜೆಕರ್ಯನು ಏಳನೇ ದರ್ಶನದಲ್ಲಿ ಏನು ನೋಡಿದನು? (ಲೇಖನದ ಆರಂಭದ ಚಿತ್ರ 2​ನ್ನು ನೋಡಿ.) (ಬಿ) ಕೊಳಗದೊಳಗಿದ್ದ ಹೆಂಗಸು ಯಾರು? (ಸಿ) ದೇವದೂತನು ಕೊಳಗಕ್ಕೆ ಮುಚ್ಚಳ ಹಾಕಿದ್ದೇಕೆ?

14 ಹಾರುತ್ತಿರುವ ಸುರುಳಿಯನ್ನು ಜೆಕರ್ಯನು ನೋಡಿದ ನಂತರ ದೇವದೂತನು ಅವನಿಗೆ “ನೋಡು” ಎಂದು ಹೇಳಿದನು. ಆಗ ಜೆಕರ್ಯನಿಗೆ “ಒಂದು ಕೊಳಗಪಾತ್ರೆ” ಕಣ್ಣಿಗೆ ಬಿತ್ತು. (ಜೆಕರ್ಯ 5:5-8 ಓದಿ.) ಅದಕ್ಕೆ, ತಟ್ಟೆಯಾಕಾರದ ಸೀಸದ ಮುಚ್ಚಳವಿತ್ತು. ಆ ಮುಚ್ಚಳವನ್ನು ತೆರೆದಾಗ “ಒಬ್ಬ ಹೆಂಗಸು ಕೊಳಗದೊಳಗೆ” ಕೂತಿರುವುದನ್ನು ಜೆಕರ್ಯನು ನೋಡಿದನು. ಆ ಹೆಂಗಸು “ಪಾಪಮೂರ್ತಿ” ಅಂದರೆ ದುಷ್ಟತನ ಎಂದು ದೇವದೂತ ಜೆಕರ್ಯನಿಗೆ ವಿವರಿಸುತ್ತಾನೆ. ಅವಳು ಆ ಕೊಳಗದೊಳಗಿಂದ ಹೊರಗೆ ಬರಲು ಪ್ರಯತ್ನಿಸುತ್ತಿರುವುದನ್ನು ನೋಡಿದಾಗ ಜೆಕರ್ಯನಿಗೆ ಎಷ್ಟು ಭಯ ಆಗಿರಬೇಕೆಂದು ಸ್ವಲ್ಪ ಊಹಿಸಿ! ಆದರೆ ದೇವದೂತನು ಕೂಡಲೇ ಆ ಹೆಂಗಸನ್ನು ಕೊಳಗದೊಳಗೆ ಅದುಮಿ ಆ ಭಾರಿ ಮುಚ್ಚಳವನ್ನು ಹಾಕಿಬಿಟ್ಟನು. ಇದರ ಅರ್ಥವೇನು?

15 ತನ್ನ ಜನರ ಮಧ್ಯೆ ಯಾವುದೇ ರೀತಿಯ ದುಷ್ಟತನವಿದ್ದರೆ ಯೆಹೋವನು ಅದನ್ನು ಸಹಿಸಿ ಸುಮ್ಮನಿರುವುದಿಲ್ಲವೆಂದು ಈ ದರ್ಶನ ನಮ್ಮಲ್ಲಿ ಭರವಸೆ ಮೂಡಿಸುತ್ತದೆ. ಅವರ ಮಧ್ಯೆ ಯಾವುದಾದರೂ ಕೆಟ್ಟ ಸಂಗತಿಯನ್ನು ಯೆಹೋವನು ನೋಡಿದಾಗ ಅದನ್ನು ತೆಗೆಯಲು ಕೂಡಲೇ ಕ್ರಿಯೆಗೈಯುವನು. (1 ಕೊರಿಂ. 5:13) ಇದನ್ನು ದೇವದೂತನು ಕೊಳಗದ ಭಾರಿ ಮುಚ್ಚಳವನ್ನು ತಕ್ಷಣ ಹಾಕುವ ಮೂಲಕ ತೋರಿಸಿಕೊಟ್ಟನು.

ಯೆಹೋವನು ಸತ್ಯಾರಾಧನೆಯನ್ನು ಶುದ್ಧವಾಗಿಡುವೆನೆಂದು ಮಾತುಕೊಟ್ಟಿದ್ದಾನೆ (ಪ್ಯಾರ 16-18 ನೋಡಿ)

16. (ಎ) ಆ ಕೊಳಗಕ್ಕೆ ಏನಾಯಿತು? (ಲೇಖನದ ಆರಂಭದ ಚಿತ್ರ 3​ನ್ನು ನೋಡಿ.) (ಬಿ) ರೆಕ್ಕೆಗಳಿದ್ದ ಆ ಹೆಂಗಸರು ಕೊಳಗವನ್ನು ಎಲ್ಲಿಗೆ ಹೊತ್ತುಕೊಂಡು ಹೋದರು?

16 ಮುಂದೆ ಜೆಕರ್ಯನು ಕೊಕ್ಕರೆಯ ರೆಕ್ಕೆಯಂತೆ ಬಲಿಷ್ಠ ರೆಕ್ಕೆಗಳಿದ್ದ ಇಬ್ಬರು ಹೆಂಗಸರನ್ನು ನೋಡಿದನು. (ಜೆಕರ್ಯ 5:9-11 ಓದಿ.) ಆ ಹೆಂಗಸರು ಕೊಳಗದಲ್ಲಿದ್ದ ದುಷ್ಟ ಹೆಂಗಸಿಗಿಂತ ಪೂರ್ತಿ ಭಿನ್ನರಾಗಿದ್ದರು. ಅವರು ಆ ಶಕ್ತಿಶಾಲಿ ರೆಕ್ಕೆಗಳ ಸಹಾಯದಿಂದ “ಪಾಪಮೂರ್ತಿ” ಅಂದರೆ ದುಷ್ಟತನ ಇದ್ದ ಆ ಕೊಳಗವನ್ನು ಹೊತ್ತುಕೊಂಡು ಹಾರಿಹೋದರು. ಎಲ್ಲಿಗೆ? ‘ಶಿನಾರ್‌ ದೇಶಕ್ಕೆ’ ಅಂದರೆ ಬಾಬೆಲಿಗೆ. ಅಲ್ಲಿಗೆ ಯಾಕೆ ಹೊತ್ತುಕೊಂಡು ಹೋದರು?

17, 18. (ಎ) “ಪಾಪಮೂರ್ತಿ”ಯನ್ನು ಬಾಬೆಲಿಗೆ ಹೊತ್ತುಕೊಂಡು ಹೋಗುವುದು ಸೂಕ್ತವಾಗಿತ್ತು ಏಕೆ? (ಬಿ) ಏನು ಮಾಡುವ ದೃಢನಿಶ್ಚಯ ನಿಮಗಿದೆ?

17 ಆ “ಪಾಪಮೂರ್ತಿ” ಅಂದರೆ ದುಷ್ಟತನವನ್ನು ಬಾಬೆಲಿಗೆ ಹೊತ್ತುಕೊಂಡು ಹೋಗುವುದು ಸೂಕ್ತವಾಗಿತ್ತು ಎಂದು ಜೆಕರ್ಯನ ದಿನದಲ್ಲಿದ್ದ ಇಸ್ರಾಯೇಲ್ಯರಿಗೆ ಅರ್ಥ ಆಗಿರಬೇಕು. ಬಾಬೆಲ್‌ ಅನೈತಿಕತೆ ಮತ್ತು ಸುಳ್ಳಾರಾಧನೆ ತುಂಬಿಕೊಂಡಿದ್ದ ಒಂದು ದುಷ್ಟ ನಗರ ಎಂದು ಅವರಿಗೆ ಗೊತ್ತಿತ್ತು. ಅಲ್ಲಿ ಜೀವಿಸಿದ್ದ ಜೆಕರ್ಯ ಮತ್ತು ಬೇರೆ ಯೆಹೂದ್ಯರು ಅಲ್ಲಿನ ವಿಧರ್ಮಿ ಪ್ರಭಾವವನ್ನು ಪ್ರತಿರೋಧಿಸಲು ತುಂಬ ಕಷ್ಟಪಟ್ಟಿದ್ದರು. ಈಗ ಈ ದರ್ಶನವು ಯೆಹೋವನು ತನ್ನ ಆರಾಧನೆಯನ್ನು ಶುದ್ಧವಾಗಿಡುತ್ತಾನೆ ಎಂಬ ಖಾತ್ರಿಯನ್ನು ಕೊಟ್ಟಿತು.

18 ಯೆಹೋವನ ಆರಾಧನೆಯನ್ನು ಶುದ್ಧವಾಗಿಡುವ ಜವಾಬ್ದಾರಿ ತಮಗೂ ಇದೆಯೆಂದು ಯೆಹೂದ್ಯರಿಗೆ ಈ ದರ್ಶನ ನೆನಪುಹುಟ್ಟಿಸಿತು. ದೇವಜನರು ತಮ್ಮ ಮಧ್ಯೆ ದುಷ್ಟತನಕ್ಕೆ ಅವಕಾಶ ಕೊಡಬಾರದು, ಕೊಡುವುದೂ ಇಲ್ಲ. ಇಂದು ಯೆಹೋವನು ನಮ್ಮನ್ನು ತನ್ನ ಶುದ್ಧವಾದ ಸಂಘಟನೆಯೊಳಗೆ ತಂದಿದ್ದಾನೆ. ಇಲ್ಲಿ ನಮಗೆ ಆತನ ಪ್ರೀತಿ ಹಾಗೂ ಸಂರಕ್ಷಣೆ ಸಿಗುತ್ತದೆ. ಹಾಗಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅದನ್ನು ಶುದ್ಧವಾಗಿಡುವ ಜವಾಬ್ದಾರಿ ಇದೆ. ದುಷ್ಟತನವು ದೇವಜನರ ಮಧ್ಯೆ ಇರಲೇಬಾರದು.

ಶುದ್ಧ ಜನರು ಯೆಹೋವನಿಗೆ ಮಹಿಮೆ ತರುತ್ತಾರೆ

19. ಜೆಕರ್ಯನು ಕಂಡ ರೋಮಾಂಚಕಾರಿ ದರ್ಶನಗಳಿಂದ ನಾವಿಂದು ಏನು ಕಲಿಯಬಹುದು?

19 ಜೆಕರ್ಯನ ಆರನೇ ಹಾಗೂ ಏಳನೇ ದರ್ಶನಗಳು, ಕೆಟ್ಟ ಕೆಲಸಗಳನ್ನು ಮಾಡುವವರಿಗೆ ಗಂಭೀರವಾದ ಎಚ್ಚರಿಕೆಯನ್ನು ಕೊಡುತ್ತವೆ. ದುಷ್ಟತನ ಮುಂದುವರಿಯುವಂತೆ ಯೆಹೋವನು ಬಿಡುವುದಿಲ್ಲ. ಆತನ ಸೇವಕರಾದ ನಾವೂ ದುಷ್ಟತನವನ್ನು ದ್ವೇಷಿಸಬೇಕು. ಈ ದರ್ಶನಗಳು ನಮಗೆ ನಮ್ಮ ಪ್ರೀತಿಯ ತಂದೆಯನ್ನು ಮೆಚ್ಚಿಸಲಿಕ್ಕಾಗಿ ನಾವು ಪ್ರಯತ್ನ ಹಾಕುವುದಾದರೆ ಆತನು ನಮಗೆ ಶಾಪವನ್ನಲ್ಲ, ಸಂರಕ್ಷಣೆ ಹಾಗೂ ಆಶೀರ್ವಾದ ಕೊಡುತ್ತಾನೆ ಎಂದು ಭರವಸೆಯನ್ನೂ ಕೊಡುತ್ತವೆ. ಈ ದುಷ್ಟ ಲೋಕದಲ್ಲಿ ಶುದ್ಧರಾಗಿ ಉಳಿಯುವುದು ಕಷ್ಟದ ವಿಷಯವಾದರೂ ಯೆಹೋವನ ಸಹಾಯದಿಂದ ಶುದ್ಧವಾಗಿ ಇರಬಲ್ಲೆವು. ಆದರೆ ಇಂಥ ದುಷ್ಟ ಲೋಕದಲ್ಲಿ ಸತ್ಯಾರಾಧನೆ ಉಳಿಯಲಿದೆಯೆಂದು ನಾವು ಹೇಗೆ ನಿಶ್ಚಯದಿಂದಿರಬಲ್ಲೆವು? ಮಹಾ ಸಂಕಟ ಹತ್ತಿರ ಹತ್ತಿರ ಬರುತ್ತಿದ್ದಂತೆ ಯೆಹೋವನು ತನ್ನ ಸಂಘಟನೆಯನ್ನು ಸಂರಕ್ಷಿಸುವನೆಂದು ನಮಗೆ ಹೇಗೆ ತಿಳಿದಿದೆ? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.