ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯವನ್ನೇ ಹೇಳಿ

ಸತ್ಯವನ್ನೇ ಹೇಳಿ

“ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ನಿಜವನ್ನೇ ಆಡಲಿ.”—ಜೆಕ. 8:16.

ಗೀತೆಗಳು: 64, 63

1, 2. ಮಾನವಕುಲಕ್ಕೆ ಅತಿ ಹೆಚ್ಚು ಹಾನಿ ಮಾಡಲು ಸೈತಾನ ಯಾವುದನ್ನು ಬಳಸಿದನು?

ಟೆಲಿಫೋನ್‌, ವಿದ್ಯುತ್‌ ಬಲ್ಬ್‌, ಕಾರು ಮತ್ತು ಫ್ರಿಡ್ಜ್‌ ಇಂಥ ಆವಿಷ್ಕಾರಗಳಿಂದ ನಮಗೆ ತುಂಬ ಪ್ರಯೋಜನವಾಗಿದೆ. ಆದರೆ ಸಿಗರೇಟು, ಸಿಡಿಮದ್ದು, ನೆಲಬಾಂಬು ಮತ್ತು ಅಣುಬಾಂಬು ಇಂಥ ವಿಷಯಗಳಿಂದ ಜೀವಕ್ಕೆ ತುಂಬ ಅಪಾಯ ಇದೆ. ಇವುಗಳಿಗಿಂತ ಮುಂಚೆ ಹುಟ್ಟಿಕೊಂಡ ಒಂದು ವಿಷಯ ಮಾನವಕುಲಕ್ಕೆ ಅತಿ ಹೆಚ್ಚು ಹಾನಿಯನ್ನು ಮಾಡಿದೆ. ಏನದು? ಸುಳ್ಳು! ಬೇರೆಯವರಿಗೆ ಮೋಸ ಮಾಡುವ ಉದ್ದೇಶದಿಂದ ಒಂದು ವಿಷಯ ಸತ್ಯ ಅಲ್ಲ ಎಂದು ಗೊತ್ತಿದ್ದರೂ ಅದನ್ನು ಹೇಳುವುದೇ ಸುಳ್ಳು. ಮೊಟ್ಟಮೊದಲ ಸುಳ್ಳನ್ನು ಹೇಳಿದ್ದು ಯಾರು? ಪಿಶಾಚ. ಯೇಸು ಅವನನ್ನು “ಸುಳ್ಳಿಗೆ ತಂದೆ” ಎಂದು ಕರೆದನು. (ಯೋಹಾನ 8:44 ಓದಿ.) ಪಿಶಾಚ ಯಾವಾಗ ಸುಳ್ಳು ಹೇಳಿದ?

2 ಸಾವಿರಾರು ವರ್ಷಗಳ ಹಿಂದೆ ಏದೆನ್‌ ತೋಟದಲ್ಲಿ ಅವನು ಸುಳ್ಳು ಹೇಳಿದ. ಯೆಹೋವನು ಆದಾಮಹವ್ವರಿಗೆ ಕೊಟ್ಟಿದ್ದ ಸುಂದರವಾದ ಪರದೈಸಿನಲ್ಲಿ ಅವರು ಸಂತೋಷವಾಗಿದ್ದರು. ಆದರೆ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು” ತಿಂದರೆ ಸಾಯುತ್ತೀರಿ ಎಂದು ದೇವರು ಅವರಿಗೆ ಹೇಳಿದ್ದನು. ಸೈತಾನನಿಗೆ ಈ ವಿಷಯ ಗೊತ್ತಿದ್ದರೂ ಹವ್ವಳಿಗೆ “ನೀವು ಹೇಗೂ ಸಾಯುವದಿಲ್ಲ” ಎಂದು ಹಾವಿನ ಮೂಲಕ ಹೇಳಿದನು. ಇದೇ ಮೊದಲ ಸುಳ್ಳು. “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು” ಎಂದೂ ಹೇಳಿದನು.—ಆದಿ. 2:15-17; 3:1-5.

3. (ಎ) ಸೈತಾನ ಹೇಳಿದ್ದು ತುಂಬ ಕೆಟ್ಟ ಸುಳ್ಳಾಗಿತ್ತು ಯಾಕೆ? (ಬಿ) ಆ ಸುಳ್ಳಿನಿಂದ ಏನಾಯಿತು?

3 ಸೈತಾನ ಹೇಳಿದ್ದು ತುಂಬ ಕೆಟ್ಟ ಸುಳ್ಳಾಗಿತ್ತು. ಯಾಕೆಂದರೆ ತನ್ನ ಮಾತನ್ನು ನಂಬಿ ಹವ್ವ ಹಣ್ಣನ್ನು ತಿಂದರೆ ಖಂಡಿತ ಸಾಯುತ್ತಾಳೆ ಎಂದು ಆ ಕುತಂತ್ರಿಗೆ ಗೊತ್ತಿತ್ತು. ಮೊದಲು ಹವ್ವ ನಂತರ ಆದಾಮ ಇಬ್ಬರೂ ಯೆಹೋವನ ಆಜ್ಞೆಯನ್ನು ಮೀರಿದರು. ಇದರ ಪರಿಣಾಮವಾಗಿ ಮುಂದೆ ಸತ್ತುಹೋದರು. (ಆದಿ. 3:6; 5:5) ಅಷ್ಟೇ ಅಲ್ಲ, ಆದಾಮನ ಪಾಪದಿಂದಾಗಿ “ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” “ಮರಣವು . . . ಅರಸನಂತೆ ಆಳ್ವಿಕೆ ನಡೆಸಿತು; ಆದಾಮನು ಮಾಡಿದ ಅಪರಾಧಕ್ಕೆ ಸಮಾನವಾದ ಪಾಪವನ್ನು ಮಾಡದವರ ಮೇಲೆಯೂ ಅದು ಆಳ್ವಿಕೆ ನಡೆಸಿತು.” (ರೋಮ. 5:12, 14) ಆದ್ದರಿಂದಲೇ ನಾವ್ಯಾರೂ ಪರಿಪೂರ್ಣರಾಗಿಲ್ಲ ಮತ್ತು ದೇವರು ಇಷ್ಟಪಟ್ಟಂತೆ ಸದಾಕಾಲ ಜೀವಿಸುತ್ತಿಲ್ಲ. ಬದಲಿಗೆ “ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು” ವರ್ಷ ಬದುಕುತ್ತೇವೆ. ಬದುಕಿರುವ ದಿನಗಳಲ್ಲಿ “ಕಷ್ಟಸಂಕಟಗಳೇ” ತುಂಬಿರುತ್ತವೆ. (ಕೀರ್ತ. 90:10) ಇದಕ್ಕೆಲ್ಲ ಸೈತಾನ ಹೇಳಿದ ಸುಳ್ಳೇ ಕಾರಣ.

4. (ಎ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ? (ಬಿ) ಯಾರು ಮಾತ್ರ ಯೆಹೋವನ ಸ್ನೇಹಿತರಾಗಲು ಸಾಧ್ಯ ಎಂದು ಕೀರ್ತನೆ 15:1, 2 ಹೇಳುತ್ತದೆ?

4 ಸೈತಾನನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ; ಯಾಕೆಂದರೆ ಸತ್ಯವು ಅವನಲ್ಲಿ ಇಲ್ಲ” ಎಂದು ಯೇಸು ಹೇಳಿದನು. ಇವತ್ತೂ ಸೈತಾನ ಬದಲಾಗಿಲ್ಲ. “ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ” ನಡೆಸಲು ಸುಳ್ಳುಗಳನ್ನು ಕಕ್ಕುತ್ತಾ ಇದ್ದಾನೆ. (ಪ್ರಕ. 12:9) ಆದರೆ ನಾವು ಅವನಿಂದಾಗಿ ದಾರಿತಪ್ಪಬಾರದು. ದಾರಿತಪ್ಪದಿರಲು ಮೂರು ಪ್ರಶ್ನೆಗಳಿಗೆ ನಾವು ಉತ್ತರ ತಿಳುಕೊಳ್ಳಬೇಕು. ಇಂದು ಸೈತಾನ ಜನರನ್ನು ಹೇಗೆ ತಪ್ಪುದಾರಿಗೆ ನಡೆಸುತ್ತಿದ್ದಾನೆ? ಜನರು ಯಾಕೆ ಸುಳ್ಳು ಹೇಳುತ್ತಾರೆ? ಆದಾಮಹವ್ವರಂತೆ ನಾವು ಯೆಹೋವನ ಸ್ನೇಹವನ್ನು ಕಳಕೊಳ್ಳದೆ ಇರಲು ಹೇಗೆ ಯಾವಾಗಲೂ ಸತ್ಯವನ್ನೇ ಹೇಳುತ್ತಿರಬೇಕು?—ಕೀರ್ತನೆ 15:1, 2 ಓದಿ.

ಸೈತಾನ ಜನರನ್ನು ಹೇಗೆ ತಪ್ಪುದಾರಿಗೆ ನಡೆಸುತ್ತಿದ್ದಾನೆ?

5. ಸೈತಾನ ಇಂದು ಜನರನ್ನು ಹೇಗೆ ತಪ್ಪುದಾರಿಗೆ ನಡೆಸುತ್ತಿದ್ದಾನೆ?

5 ಸೈತಾನನ ಬಲೆಗೆ ಬೀಳದಂತೆ ನಾವು ತಪ್ಪಿಸಿಕೊಳ್ಳಬಹುದು. “ಅವನ ಕುತಂತ್ರಗಳ ವಿಷಯದಲ್ಲಿ ನಾವು ಅಜ್ಞಾನಿಗಳಾಗಿರುವುದಿಲ್ಲ” ಎಂದು ಅಪೊಸ್ತಲ ಪೌಲ ಹೇಳಿದನು. (2 ಕೊರಿಂ. 2:11) ಸುಳ್ಳು ಧರ್ಮ, ಭ್ರಷ್ಟ ಸರ್ಕಾರ ಮತ್ತು ಹಣದಾಸೆಯಿಂದ ತುಂಬಿರುವ ವಾಣಿಜ್ಯ ಜಗತ್ತು ಸೇರಿ ಇಡೀ ಲೋಕ ಸೈತಾನನ ಕೈಯಲ್ಲಿದೆ ಎಂದು ನಮಗೆ ಗೊತ್ತು. (1 ಯೋಹಾ. 5:19) ಆದ್ದರಿಂದ ದೊಡ್ಡ ದೊಡ್ಡ ವ್ಯಕ್ತಿಗಳು ದೊಡ್ಡ ದೊಡ್ಡ ಸುಳ್ಳುಗಳನ್ನು ಹೇಳುವಂತೆ ಸೈತಾನ ಮತ್ತು ಅವನ ದೆವ್ವಗಳು ಪ್ರಚೋದಿಸುತ್ತವೆ. (1 ತಿಮೊ. 4:1, 2) ಉದಾಹರಣೆಗೆ, ಕೆಲವು ವ್ಯಾಪಾರಸ್ಥರು ಜಾಹೀರಾತುಗಳಲ್ಲಿ ಸುಳ್ಳು ಹೇಳಿ ಹಾನಿಕರ ವಸ್ತುಗಳನ್ನು ಮಾರುತ್ತಿದ್ದಾರೆ ಅಥವಾ ಜನರನ್ನು ವಂಚಿಸಿ ಅವರ ದುಡ್ಡನ್ನು ದೋಚುತ್ತಿದ್ದಾರೆ.

6, 7. (ಎ) ಧರ್ಮಗುರುಗಳು ಸುಳ್ಳುಹೇಳುವುದು ತುಂಬ ದೊಡ್ಡ ತಪ್ಪು ಯಾಕೆ? (ಬಿ) ಧರ್ಮಗುರುಗಳು ಹೇಳಿರುವ ಯಾವ ಸುಳ್ಳುಗಳನ್ನು ನೀವು ಕೇಳಿಸಿಕೊಂಡಿದ್ದೀರಿ?

6 ಧರ್ಮಗುರುಗಳು ಸುಳ್ಳುಹೇಳುವುದು ತುಂಬ ದೊಡ್ಡ ತಪ್ಪು. ಯಾಕೆ? ಯಾಕೆಂದರೆ ಒಬ್ಬ ವ್ಯಕ್ತಿ ತಪ್ಪಾದ ಬೋಧನೆಗಳನ್ನು ನಂಬಿ ದೇವರು ದ್ವೇಷಿಸುವ ವಿಷಯಗಳನ್ನು ಮಾಡಿದರೆ ಶಾಶ್ವತವಾಗಿ ಬದುಕುವ ಅವಕಾಶವನ್ನು ಕಳಕೊಳ್ಳಬಹುದು. (ಹೋಶೇ. 4:9) ತನ್ನ ಕಾಲದಲ್ಲಿದ್ದ ಧರ್ಮಗುರುಗಳು ಜನರಿಗೆ ಮೋಸಮಾಡುತ್ತಿದ್ದಾರೆ ಎಂದು ಯೇಸುವಿಗೆ ಗೊತ್ತಿತ್ತು. ಹಾಗಾಗಿ ಆತನು ಧೈರ್ಯದಿಂದ “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ಒಬ್ಬನನ್ನು ಮತಾವಲಂಬಿಯಾಗಿಸಲು ನೀವು ಸಮುದ್ರವನ್ನೂ ಒಣನೆಲವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಮತಾವಲಂಬಿಯಾದಾಗ ಅವನನ್ನು ನಿಮಗಿಂತ ಎರಡು ಪಟ್ಟು ಗೆಹೆನ್ನಕ್ಕೆ [ಅಂದರೆ ನಿತ್ಯನಾಶನಕ್ಕೆ] ಪಾತ್ರನನ್ನಾಗಿ ಮಾಡುತ್ತೀರಿ” ಎಂದು ಹೇಳಿದನು. (ಮತ್ತಾ. 23:15) ಸುಳ್ಳು ಧರ್ಮದ ಮುಖಂಡರು ‘ನರಹಂತಕನಾದ’ ತಮ್ಮ ತಂದೆ ಪಿಶಾಚನಂತಿದ್ದಾರೆ ಎಂದು ಯೇಸು ಹೇಳಿದನು.—ಯೋಹಾ. 8:44.

7 ಇಂಥ ಧರ್ಮಗುರುಗಳು ಇಂದು ಕೂಡ ಇದ್ದಾರೆ. ಅವರನ್ನು ಜನರು ಪಾಸ್ಟ್ರು, ಪಾದ್ರಿ, ರಬ್ಬಿ, ಸ್ವಾಮೀಜಿ ಹೀಗೆ ಬೇರೆಬೇರೆ ಬಿರುದುಗಳಿಂದ ಕರೆಯುತ್ತಾರೆ. ಇವರು ಆ ಕಾಲದ ಫರಿಸಾಯರಂತೆ ದೇವರ ವಾಕ್ಯದಲ್ಲಿರುವ ಸತ್ಯವನ್ನು ಕಲಿಸುವುದಿಲ್ಲ. ಬದಲಿಗೆ ‘ದೇವರ ಸತ್ಯವನ್ನು ಸುಳ್ಳಿನೊಂದಿಗೆ ಬದಲಾಯಿಸಿಕೊಂಡಿದ್ದಾರೆ.’ (ರೋಮ. 1:18, 25) ಧರ್ಮಗುರುಗಳು ಕಲಿಸುವ ಕೆಲವು ಸುಳ್ಳುಗಳು ಏನೆಂದರೆ, ಕೆಟ್ಟವರು ನರಕಕ್ಕೆ ಹೋಗುತ್ತಾರೆ, ಆತ್ಮಕ್ಕೆ ಸಾವಿಲ್ಲ, ಸತ್ತವರಿಗೆ ಪುನರ್ಜನ್ಮ ಇದೆ, ದೇವರು ಸಲಿಂಗಕಾಮವನ್ನು ಮತ್ತು ಸಲಿಂಗಿಗಳ ಮದುವೆಯನ್ನು ಒಪ್ಪುತ್ತಾನೆ.

8. (ಎ) ರಾಜಕೀಯ ನಾಯಕರು ಇನ್ನು ಸ್ವಲ್ಪ ಸಮಯದಲ್ಲೇ ಯಾವ ಸುಳ್ಳನ್ನು ಹೇಳಲಿದ್ದಾರೆ? (ಬಿ) ಆ ಸುಳ್ಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

8 ರಾಜಕೀಯ ನಾಯಕರು ಕೂಡ ಜನರಿಗೆ ಸುಳ್ಳು ಹೇಳಿ ಮೋಸಮಾಡುತ್ತಿದ್ದಾರೆ. ಇನ್ನು ಸ್ವಲ್ಪ ಸಮಯದಲ್ಲೇ ಅವರು ಲೋಕಕ್ಕೆ “ಶಾಂತಿ ಮತ್ತು ಭದ್ರತೆ” ತಂದಿದ್ದೇವೆ ಎಂದು ಒಂದು ದೊಡ್ಡ ಸುಳ್ಳನ್ನು ಹೇಳಲಿದ್ದಾರೆ. ಆದರೆ ‘ಹೀಗೆ ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಫಕ್ಕನೆ ಬರಲಿದೆ.’ ಆದ್ದರಿಂದ ಲೋಕದ ಪರಿಸ್ಥಿತಿ ಸುಧಾರಣೆ ಆಗುತ್ತಿದೆ ಎಂದು ಅವರು ಹೇಳುವುದನ್ನು ನಾವು ನಂಬಬಾರದು. “ರಾತ್ರಿಯಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಯೆಹೋವನ ದಿನವು ಬರುತ್ತದೆ” ಎಂಬ ಸತ್ಯ ನಮಗೆ ಚೆನ್ನಾಗಿ ಗೊತ್ತು.—1 ಥೆಸ. 5:1-4.

ಜನರು ಯಾಕೆ ಸುಳ್ಳು ಹೇಳುತ್ತಾರೆ?

9, 10. (ಎ) ಜನರು ಯಾಕೆ ಸುಳ್ಳು ಹೇಳುತ್ತಾರೆ? (ಬಿ) ಸುಳ್ಳು ಹೇಳುವುದರಿಂದ ಏನಾಗುತ್ತದೆ? (ಸಿ) ನಾವು ಯೆಹೋವನ ಬಗ್ಗೆ ಯಾವ ವಿಷಯವನ್ನು ಮನಸ್ಸಲ್ಲಿಡಬೇಕು?

9 ಇಂದು ದೊಡ್ಡ ದೊಡ್ಡ ವ್ಯಕ್ತಿಗಳು ಮಾತ್ರವಲ್ಲ ಸಾಮಾನ್ಯ ಜನರೂ ಸುಳ್ಳು ಹೇಳುತ್ತಾರೆ. ಯುಧಿಜಿತ್‌ ಭಟ್ಟಾಚಾರ್ಜಿ ಎಂಬವರು “ನಾವ್ಯಾಕೆ ಸುಳ್ಳು ಹೇಳುತ್ತೇವೆ” (ಇಂಗ್ಲಿಷ್‌) ಎಂಬ ಲೇಖನದಲ್ಲಿ ಹೀಗೆ ಬರೆದಿದ್ದಾರೆ: “ಸುಳ್ಳು ಹೇಳುವ ಸ್ವಭಾವ ಮಾನವನ ರಕ್ತದಲ್ಲಿ ಬೆರೆತುಹೋಗಿದೆ.” ಇದರರ್ಥ ಸುಳ್ಳು ಹೇಳುವುದನ್ನು ಜನರು ಸಾಮಾನ್ಯವಾದ ವಿಷಯವಾಗಿ ನೋಡುತ್ತಾರೆ. ಜನರು ಹೆಚ್ಚಾಗಿ ತಾವು ಮಾಡಿರುವ ತಪ್ಪನ್ನು ಅಥವಾ ಅಪರಾಧವನ್ನು ಮುಚ್ಚಿಡಲು, ಅದರಿಂದಾಗುವ ಪರಿಣಾಮದಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಹಣಕ್ಕಾಗಿ ಅಥವಾ ಬೇರೆ ರೀತಿಯಲ್ಲಿ ಲಾಭ ಪಡೆಯಲಿಕ್ಕಾಗಿ ಕೂಡ ಸುಳ್ಳು ಹೇಳುತ್ತಾರೆ. “ಅಪರಿಚಿತರಿಗೆ, ಜೊತೆಯಲ್ಲಿ ಕೆಲಸ ಮಾಡುವವರಿಗೆ, ಸ್ನೇಹಿತರಿಗೆ ಮತ್ತು ಸ್ವಂತ ಕುಟುಂಬದವರಿಗೆ” ಸುಳ್ಳು ಹೇಳಲು ಕೆಲವರಿಗೆ ಕಷ್ಟಾನೇ ಆಗಲ್ಲ ಎಂದೂ ಆ ಲೇಖನ ಹೇಳುತ್ತದೆ.

10 ಈ ರೀತಿ ಸುಳ್ಳು ಹೇಳುವುದರಿಂದ ಏನಾಗುತ್ತದೆ? ಜನರಿಗೆ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಲ್ಲ. ಎಷ್ಟೋ ಜನರ ಸಂಬಂಧ ಹಾಳಾಗಿದೆ. ಉದಾಹರಣೆಗೆ ಒಬ್ಬ ಒಳ್ಳೇ ಗಂಡನಿಗೆ ತನ್ನ ಹೆಂಡತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಮತ್ತು ಅದನ್ನು ಮುಚ್ಚಿಡಲು ಸುಳ್ಳು ಹೇಳಿದ್ದಾಳೆ ಎಂದು ಗೊತ್ತಾದರೆ ಹೇಗಿರುತ್ತದೆ? ಒಬ್ಬ ವ್ಯಕ್ತಿ ಮನೆಯಲ್ಲಿ ಹೆಂಡತಿ-ಮಕ್ಕಳ ಹತ್ತಿರ ಕೆಟ್ಟದಾಗಿ ನಡಕೊಂಡು ಬೇರೆಯವರ ಮುಂದೆ ತನ್ನ ಕುಟುಂಬದ ಮೇಲೆ ತುಂಬ ಪ್ರೀತಿ ಇರುವ ತರ ನಟಿಸಿದರೆ ಹೇಗಿರುತ್ತದೆ? ಇಂಥ ವ್ಯಕ್ತಿಗಳು ಮನುಷ್ಯರ ಕಣ್ಣಿಗೆ ಮಣ್ಣೆರೆಚಬಹುದು, ಆದರೆ ಯೆಹೋವನಿಗೆ ಮೋಸ ಮಾಡಕ್ಕಾಗಲ್ಲ. ಯಾಕೆಂದರೆ ಆತನಿಗೆ “ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ” ಎಂದು ಬೈಬಲ್‌ ಹೇಳುತ್ತದೆ.—ಇಬ್ರಿ. 4:13.

11. ಅನನೀಯ ಮತ್ತು ಸಪ್ಫೈರರ ಕೆಟ್ಟ ಉದಾಹರಣೆಯಿಂದ ನಾವೇನು ಕಲಿಯಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

11 ಸೈತಾನನ ಪ್ರಭಾವಕ್ಕೆ ಒಳಗಾಗಿ ದೇವರಿಗೆ ಸುಳ್ಳು ಹೇಳಿದ ಒಬ್ಬ ದಂಪತಿಯ ಬಗ್ಗೆ ಬೈಬಲಲ್ಲಿದೆ. ಆ ದಂಪತಿ ಅನನೀಯ ಮತ್ತು ಸಪ್ಫೈರ. ಇವರು ಅಪೊಸ್ತಲರಿಗೆ ಮೋಸ ಮಾಡಲು ಪ್ರಯತ್ನಿಸಿದರು. ತಮ್ಮ ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅಪೊಸ್ತಲರಿಗೆ ಕೊಟ್ಟರು. ಕೊಡುವಾಗ ಸಭೆಯಲ್ಲಿರುವ ಬೇರೆ ಸಹೋದರ ಸಹೋದರಿಯರ ಮುಂದೆ ಒಳ್ಳೇ ಹೆಸರು ಬರಬೇಕು ಎಂಬ ಕಾರಣಕ್ಕೆ ಅಪೊಸ್ತಲರ ಹತ್ತಿರ ಪೂರ್ತಿ ಹಣ ಕೊಡುತ್ತಿದ್ದೇವೆ ಎಂದು ಹೇಳಿದರು. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಯೆಹೋವನಿಗೆ ಗೊತ್ತಿತ್ತು. ಆ ತಪ್ಪಿಗೆ ತಕ್ಕ ಶಿಕ್ಷೆಯನ್ನೂ ಕೊಟ್ಟನು.—ಅ. ಕಾ. 5:1-10.

12. ಬೇರೆಯವರಿಗೆ ಹಾನಿ ಮಾಡಲು ಸುಳ್ಳು ಹೇಳುವವರು ಪಶ್ಚಾತ್ತಾಪಪಡದಿದ್ದರೆ ಏನಾಗುತ್ತದೆ? ಯಾಕೆ?

12 ಸುಳ್ಳುಗಾರರನ್ನು ಯೆಹೋವನು ಏನು ಮಾಡುತ್ತಾನೆ? ಬೇರೆಯವರಿಗೆ ಹಾನಿ ಮಾಡುವ ಅಥವಾ ಅವರ ಹೆಸರನ್ನು ಕೆಡಿಸುವ ಉದ್ದೇಶದಿಂದ ಸುಳ್ಳು ಹೇಳುವವರು ಪಶ್ಚಾತ್ತಾಪಪಡದಿದ್ದರೆ ಸೈತಾನನಂತೆ ಅವರಿಗೂ ‘ಬೆಂಕಿಯ ಕೆರೆಯೇ’ ಗತಿಯಾಗುತ್ತದೆ. ಅಂದರೆ ಅವರು ಶಾಶ್ವತವಾಗಿ ನಾಶವಾಗುತ್ತಾರೆ. (ಪ್ರಕ. 20:10; 21:8; ಕೀರ್ತ. 5:6) ಯಾಕೆ? ಯಾಕೆಂದರೆ ಸುಳ್ಳು ಹೇಳುವವರನ್ನೂ ಬೇರೆ ರೀತಿಯ ಅಸಹ್ಯ ಕೆಲಸಗಳನ್ನು ಮಾಡುವವರನ್ನೂ ಯೆಹೋವನು ಒಂದೇ ದೃಷ್ಟಿಯಿಂದ ನೋಡುತ್ತಾನೆ.—ಪ್ರಕ. 22:15.

13. (ಎ) ನಮಗೆ ಯೆಹೋವನ ಬಗ್ಗೆ ಏನು ಗೊತ್ತಿದೆ? (ಬಿ) ಆದ್ದರಿಂದ ನಾವೇನು ಮಾಡಬೇಕು?

13 “ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ” ಮತ್ತು “ಸುಳ್ಳಾಡಲಾರ” ಎಂದು ನಮಗೆ ಗೊತ್ತಿದೆ. (ಅರ. 23:19; ಇಬ್ರಿ. 6:18) ‘ಯೆಹೋವನು ಸುಳ್ಳಿನ ನಾಲಿಗೆಯನ್ನು ಹಗೆಮಾಡುತ್ತಾನೆ.’ (ಜ್ಞಾನೋ. 6:16, 17) ನಾವು ಸತ್ಯವನ್ನೇ ಹೇಳಿದರೆ ದೇವರಿಗೆ ಸಂತೋಷವಾಗುತ್ತದೆ. ಆದ್ದರಿಂದ ನಾವು ‘ಒಬ್ಬರಿಗೊಬ್ಬರು ಸುಳ್ಳಾಡಬಾರದು.’—ಕೊಲೊ. 3:9.

ನಾವು ಸತ್ಯವನ್ನೇ ಹೇಳುತ್ತೇವೆ

14. (ಎ) ಸತ್ಯ ಕ್ರೈಸ್ತರಿಗೂ ಸುಳ್ಳು ಧರ್ಮದವರಿಗೂ ಇರುವ ವ್ಯತ್ಯಾಸ ಏನು? (ಬಿ) ಲೂಕ 6:45​ರಲ್ಲಿರುವ ತತ್ವವನ್ನು ವಿವರಿಸಿ.

14 ಸತ್ಯ ಕ್ರೈಸ್ತರಿಗೂ ಸುಳ್ಳು ಧರ್ಮದವರಿಗೂ ಇರುವ ಒಂದು ವ್ಯತ್ಯಾಸ ಏನು? ನಾವು ‘ನಿಜವನ್ನೇ ಆಡುತ್ತೇವೆ.’ (ಜೆಕರ್ಯ 8:16, 17 ಓದಿ.) ಪೌಲನು ಹೇಳುವಂತೆ ‘ನಾವು ಸತ್ಯವಾದ ಮಾತಿನಿಂದ ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತೇವೆ.’ (2 ಕೊರಿಂ. 6:4, 7) ಯಾಕೆಂದರೆ “ಹೃದಯದಲ್ಲಿ ತುಂಬಿರುವುದನ್ನೇ . . . ಬಾಯಿ ಮಾತಾಡುತ್ತದೆ” ಎಂದು ಯೇಸು ಹೇಳಿದ್ದಾನೆ. (ಲೂಕ 6:45) ಇದರ ಅರ್ಥ ಒಬ್ಬ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ ಸತ್ಯವನ್ನೇ ಹೇಳುತ್ತಾನೆ. ಅವನು ಅಪರಿಚಿತರೊಂದಿಗೆ, ಜೊತೆಯಲ್ಲಿ ಕೆಲಸ ಮಾಡುವವರೊಂದಿಗೆ, ಸ್ನೇಹಿತರೊಂದಿಗೆ, ತನ್ನ ಸ್ವಂತ ಕುಟುಂಬದವರೊಂದಿಗೆ ಸತ್ಯವನ್ನೇ ಮಾತಾಡುತ್ತಾನೆ. ನಾವು ಹೇಗೆ ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರು ಆಗಿರಬಹುದು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.

ಈ ಸಹೋದರಿ ಯಾವ ರೀತಿಯ ಜೀವನ ನಡೆಸುತ್ತಿದ್ದಾಳೆ? (ಪ್ಯಾರ 15, 16 ನೋಡಿ)

15. (ಎ) ಇಬ್ಬಗೆಯ ಜೀವನ ನಡೆಸುವುದು ಯಾಕೆ ತಪ್ಪು? (ಬಿ) ಸಮಾನಸ್ಥರ ಒತ್ತಡವನ್ನು ಜಯಿಸಲು ಯುವಜನರಿಗೆ ಯಾವುದು ಸಹಾಯ ಮಾಡುತ್ತದೆ? (ಪಾದಟಿಪ್ಪಣಿ ನೋಡಿ.)

15 ನೀವು ಒಬ್ಬ ಯುವ ವ್ಯಕ್ತಿಯಾಗಿದ್ದರೆ ಸಮಾನಸ್ಥರು ನಿಮ್ಮನ್ನು ಅವರ ಜೊತೆ ಸೇರಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಈ ಆಸೆಯಿಂದಾಗಿ ಕೆಲವು ಯುವಜನರು ಇಬ್ಬಗೆಯ ಜೀವನ ನಡೆಸುತ್ತಾರೆ. ಹೆತ್ತವರೊಂದಿಗೆ, ಸಭೆಯವರೊಂದಿಗೆ ಇರುವಾಗ ನೈತಿಕವಾಗಿ ಶುದ್ಧರಾಗಿ ಇರುವಂತೆ ನಟಿಸುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಲೋಕದ ಜನರೊಂದಿಗೆ ಇರುವಾಗ ಬೇರೆ ತರಾನೇ ಇರುತ್ತಾರೆ. ಅವರು ಕೆಟ್ಟ ಮಾತು ಆಡುತ್ತಾರೆ, ಅಸಭ್ಯ ಬಟ್ಟೆಗಳನ್ನು ಹಾಕುತ್ತಾರೆ, ಅಶ್ಲೀಲ ಸಂಗೀತವನ್ನು ಕೇಳುತ್ತಾರೆ, ತುಂಬ ಕುಡಿಯುತ್ತಾರೆ, ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ, ಕದ್ದುಮುಚ್ಚಿ ಡೇಟಿಂಗ್‌ ಮಾಡುತ್ತಾರೆ. ಅವರು ಅಪ್ಪಅಮ್ಮಗೆ, ಸಹೋದರ ಸಹೋದರಿಯರಿಗೆ ಮತ್ತು ಯೆಹೋವ ದೇವರಿಗೆ ಸುಳ್ಳು ಹೇಳುತ್ತಾರೆ. (ಕೀರ್ತ. 26:4, 5) ಆದರೆ ನಾವು ಯೆಹೋವನನ್ನು ಗೌರವಿಸುತ್ತೇವೆ ಎಂದು ಹೇಳಿ ಆತನು ದ್ವೇಷಿಸುವ ವಿಷಯಗಳನ್ನು ಮಾಡಿದರೆ ಆತನಿಗೆ ಗೊತ್ತಾಗುತ್ತದೆ. (ಮಾರ್ಕ 7:6) ಆದ್ದರಿಂದ “ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ; ಯೆಹೋವನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿರು” ಎಂಬ ಜ್ಞಾನೋಕ್ತಿಯ ಪ್ರಕಾರ ನಡೆಯುವುದು ಬುದ್ಧಿವಂತಿಕೆ.—ಜ್ಞಾನೋ. 23:17. *

16. ಪೂರ್ಣಸಮಯದ ಸೇವೆಯ ಅರ್ಜಿಯನ್ನು ತುಂಬಿಸುವಾಗ ಅದರಲ್ಲಿರುವ ಪ್ರಶ್ನೆಗಳಿಗೆ ನಾವು ಹೇಗೆ ಉತ್ತರ ಕೊಡಬೇಕು?

16 ನಿಮಗೆ ಪಯನೀಯರ್‌ ಸೇವೆ ಮಾಡಬೇಕು ಅಥವಾ ಬೆತೆಲ್‌ ಸೇವೆಯಂಥ ವಿಶೇಷ ಪೂರ್ಣಸಮಯದ ಸೇವೆಯನ್ನು ಮಾಡಬೇಕು ಎಂಬ ಆಸೆ ಇರಬಹುದು. ಇದಕ್ಕಾಗಿ ನೀವು ಅರ್ಜಿಯನ್ನು ತುಂಬಿಸಬೇಕಾಗುತ್ತದೆ. ಆ ಅರ್ಜಿಯಲ್ಲಿ ನಿಮ್ಮ ಆರೋಗ್ಯ, ನೀವು ನೋಡುವ ಅಥವಾ ಕೇಳುವ ಮನೋರಂಜನೆ, ನಿಮ್ಮ ನೈತಿಕ ಮಟ್ಟಗಳ ಬಗ್ಗೆ ಇರುವ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ಕೊಡಬೇಕು. (ಇಬ್ರಿ. 13:18) ಯೆಹೋವನು ದ್ವೇಷಿಸುವ ಯಾವುದೋ ಒಂದು ವಿಷಯವನ್ನು ಮಾಡಿ ನಿಮ್ಮ ಮನಸ್ಸಾಕ್ಷಿ ಚುಚ್ಚುತ್ತಿದ್ದರೆ ಏನು ಮಾಡಬೇಕು? ಅದರ ಬಗ್ಗೆ ನೀವಿನ್ನೂ ಹಿರಿಯರ ಹತ್ತಿರ ಮಾತಾಡಿಲ್ಲವಾದರೆ ಅವರ ಹತ್ತಿರ ಹೋಗಿ ಮಾತಾಡಿ. ನೀವು ಶುದ್ಧ ಮನಸ್ಸಾಕ್ಷಿಯಿಂದ ಯೆಹೋವನ ಸೇವೆಮಾಡಲು ಅವರು ಸಹಾಯ ಮಾಡುತ್ತಾರೆ.—ರೋಮ. 9:1; ಗಲಾ. 6:1.

17. ಸಹೋದರರ ಬಗ್ಗೆ ವಿರೋಧಿಗಳು ಪ್ರಶ್ನೆಗಳನ್ನು ಕೇಳಿದರೆ ನಾವೇನು ಮಾಡಬೇಕು?

17 ಯೆಹೋವನ ಸಾಕ್ಷಿಗಳ ಕೆಲಸವನ್ನು ನಿಷೇಧಿಸಿರುವ ಒಂದು ಸ್ಥಳದಲ್ಲಿ ನೀವು ವಾಸಿಸುತ್ತಿದ್ದೀರಿ ಎಂದು ನೆನಸಿ. ಅಧಿಕಾರಿಗಳು ನಿಮ್ಮನ್ನು ಬಂಧಿಸಿ ಸಹೋದರರ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಏನು ಮಾಡಬೇಕು? ನಿಮಗೆ ಗೊತ್ತಿರುವುದನ್ನೆಲ್ಲ ಹೇಳಬೇಕಾ? ಯೇಸುವಿಗೆ ಒಬ್ಬ ರೋಮನ್‌ ರಾಜ್ಯಪಾಲ ಪ್ರಶ್ನೆ ಕೇಳಿದಾಗ ಏನು ಮಾಡಿದನು? “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆ ಎಂಬ ಬೈಬಲ್‌ ತತ್ವವನ್ನು ಯೇಸು ಅನ್ವಯಿಸಿಕೊಂಡು ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. (ಪ್ರಸಂ. 3:1, 7; ಮತ್ತಾ. 27:11-14) ನಾವು ಇಂಥ ಸನ್ನಿವೇಶದಲ್ಲಿದ್ದರೆ ವಿವೇಚನೆ ತೋರಿಸಬೇಕು. ನಮ್ಮ ಸಹೋದರರನ್ನು ಅಪಾಯಕ್ಕೆ ಸಿಕ್ಕಿಸಿಹಾಕದಂತೆ ಹುಷಾರಾಗಿರಬೇಕು.—ಜ್ಞಾನೋ. 10:19; 11:12.

ಯಾವಾಗ ಸುಮ್ಮನಿರಬೇಕು, ಯಾವಾಗ ಪೂರ್ತಿ ಸತ್ಯ ಹೇಳಬೇಕು? (ಪ್ಯಾರ 17, 18 ನೋಡಿ)

18. ಹಿರಿಯರು ನಮ್ಮ ಸಹೋದರರ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಏನು ಮಾಡಬೇಕು?

18 ನಿಮ್ಮ ಸಭೆಯಲ್ಲಿರುವ ಒಬ್ಬರು ಗಂಭೀರವಾದ ಪಾಪವನ್ನು ಮಾಡಿರುವುದು ನಿಮಗೆ ಗೊತ್ತಿದ್ದರೆ ಏನು ಮಾಡಬೇಕು? ಹಿರಿಯರಿಗೆ ಸಭೆಯನ್ನು ನೈತಿಕವಾಗಿ ಶುದ್ಧವಾಗಿಡುವ ಜವಾಬ್ದಾರಿ ಇರುವುದರಿಂದ ನಿಮಗೆ ಗೊತ್ತಿರುವ ವಿಷಯಗಳನ್ನು ಹೇಳುವಂತೆ ಹಿರಿಯರು ನಿಮ್ಮನ್ನು ಕೇಳಬಹುದು. ತಪ್ಪು ಮಾಡಿರುವ ವ್ಯಕ್ತಿ ನಿಮ್ಮ ಆಪ್ತ ಸ್ನೇಹಿತ ಅಥವಾ ಸಂಬಂಧಿಕನಾಗಿದ್ದರೆ ಏನು ಮಾಡುತ್ತೀರಿ? “ಸತ್ಯವನ್ನಾಡುವವನು ನ್ಯಾಯವನ್ನು ತೋರ್ಪಡಿಸುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 12:17; 21:28) ಆದ್ದರಿಂದ ನೀವು ಹಿರಿಯರ ಹತ್ತಿರ ಏನೂ ಮುಚ್ಚಿಡದೆ ಪೂರ್ತಿ ಸತ್ಯ ಹೇಳಬೇಕು. ಹಿರಿಯರಿಗೆ ಏನು ನಡೆಯಿತೆಂದು ತಿಳುಕೊಳ್ಳುವ ಹಕ್ಕಿದೆ. ಯಾಕೆಂದರೆ ಹಾಗೆ ತಿಳುಕೊಂಡಾಗಲೇ ತಪ್ಪು ಮಾಡಿರುವ ವ್ಯಕ್ತಿಗೆ ಯೆಹೋವನೊಂದಿಗಿನ ಸಂಬಂಧವನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡಕ್ಕಾಗುತ್ತದೆ.—ಯಾಕೋ. 5:14, 15.

19. ಮುಂದಿನ ಲೇಖನದಲ್ಲಿ ನಾವು ಏನು ಚರ್ಚಿಸಲಿದ್ದೇವೆ?

19 “ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ” ಎಂದು ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. (ಕೀರ್ತ. 51:6, ಪವಿತ್ರ ಗ್ರಂಥ ಭಾಷಾಂತರ) ನಾವು ಅಂತರಂಗದಲ್ಲಿ ಅಥವಾ ಹೃದಯದಲ್ಲಿ ಸತ್ಯವಂತರಾಗಿ ಇರುವುದು ಮುಖ್ಯ ಎಂದು ದಾವೀದನು ಹೇಳುತ್ತಾನೆ. ಆದ್ದರಿಂದ ಸತ್ಯ ಕ್ರೈಸ್ತರು ಯಾವಾಗಲೂ ಸತ್ಯ ಹೇಳುತ್ತಾರೆ. ಸುಳ್ಳು ಧರ್ಮಗಳ ಜನರಿಗೂ ನಮಗೂ ಇರುವ ಇನ್ನೊಂದು ವ್ಯತ್ಯಾಸ ಏನೆಂದರೆ ನಾವು ಬೈಬಲಿನಿಂದ ಜನರಿಗೆ ಸತ್ಯವನ್ನು ಕಲಿಸುತ್ತೇವೆ. ನಾವು ಸೇವೆಯಲ್ಲಿ ಜನರಿಗೆ ಹೇಗೆ ಸತ್ಯ ಕಲಿಸಬಹುದು ಎಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.

^ ಪ್ಯಾರ. 15 ಯುವಜನರ 10 ಪ್ರಶ್ನೆಗಳಿಗೆ ಉತ್ತರ ಕಿರುಹೊತ್ತಗೆಯ “ಒತ್ತಡ ಹಾಕಿದಾಗ ಏನು ಮಾಡಲಿ?” ಎಂಬ 6​ನೇ ಪ್ರಶ್ನೆಯನ್ನು ಮತ್ತು ಯುವ ಜನರ ಪ್ರಶ್ನೆಗಳು ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್‌) ಸಂಪುಟ 2​ರ 16​ನೇ ಅಧ್ಯಾಯವನ್ನು ನೋಡಿ.