ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1918—ನೂರು ವರ್ಷಗಳ ಹಿಂದೆ

1918—ನೂರು ವರ್ಷಗಳ ಹಿಂದೆ

“1918​ರಲ್ಲಿ ಏನೆಲ್ಲ ನಡೆಯಲಿದೆ?” ಇದು 1918, ಜನವರಿ 1​ರ ಕಾವಲಿನ ಬುರುಜು ಪತ್ರಿಕೆಯ ಆರಂಭದಲ್ಲಿದ್ದ ಮಾತುಗಳು. ಆ ವರ್ಷದಲ್ಲೂ ಯುರೋಪಿನಲ್ಲಿ ಮಹಾಯುದ್ಧದ ಬೆಂಕಿ ಉರಿಯುತ್ತಾ ಇತ್ತು. ಆದರೆ ಆ ವರ್ಷದ ಆರಂಭದಲ್ಲಿ ನಡೆದ ಘಟನೆಗಳನ್ನು ನೋಡಿದರೆ ಬೈಬಲ್‌ ವಿದ್ಯಾರ್ಥಿಗಳಿಗೆ ಮತ್ತು ಲೋಕಕ್ಕೆ ಒಳ್ಳೇದಾಗುತ್ತದೆ ಎನ್ನುವಂತೆ ತೋರುತ್ತಿದ್ದವು.

ಯುದ್ಧಕ್ಕೆ ಕೊನೆ ತರಲು ಪ್ರಯತ್ನ

1918, ಜನವರಿ 1​ರಂದು ಅಮೆರಿಕದ ಅಧ್ಯಕ್ಷರಾದ ವುಡ್ರೋ ವಿಲ್ಸನ್‌ ಅಮೆರಿಕದ ಶಾಸನಸಭೆಯಲ್ಲಿ ಭಾಷಣ ನೀಡುತ್ತಾ “ನ್ಯಾಯ ಮತ್ತು ಶಾಂತಿ” ತರಲು 14 ವಿಷಯಗಳು ಬೇಕು ಎಂದು ಹೇಳಿದರು. ಈ 14 ವಿಷಯಗಳಲ್ಲಿ ಕೆಲವು ಯಾವುವೆಂದರೆ, ರಾಷ್ಟ್ರಗಳ ಮಧ್ಯೆ ಒಳ್ಳೇ ಸಂಬಂಧ ಇರಬೇಕು, ಯುದ್ಧಕ್ಕೆ ಬಳಸುವ ಶಸ್ತ್ರಗಳನ್ನು ಕಡಿಮೆಮಾಡಬೇಕು ಮತ್ತು “ಚಿಕ್ಕ-ದೊಡ್ಡ ರಾಷ್ಟ್ರಗಳಿಗೆ” ಪ್ರಯೋಜನ ಆಗುವಂಥ “ಸಮಸ್ತ ರಾಷ್ಟ್ರಗಳ ಒಕ್ಕೂಟವನ್ನು” ಸ್ಥಾಪಿಸಬೇಕು. ಮಹಾಯುದ್ಧವನ್ನು ನಿಲ್ಲಿಸುವ ಉದ್ದೇಶಕ್ಕಾಗಿ ವರ್ಸೈ ಒಪ್ಪಂದ ಮಾಡಲು ಮತ್ತು ಜನಾಂಗ ಸಂಘವನ್ನು ರಚಿಸಲು ಈ “ಹದಿನಾಲ್ಕು ವಿಷಯಗಳು” ಮುಂದಕ್ಕೆ ದಾರಿ ಮಾಡಿಕೊಟ್ಟವು.

ವಿರೋಧಿಗಳ ಸದ್ದಡಗಿತು

1917​ರಲ್ಲಿ ಲೋಕದೆಲ್ಲೆಡೆ ಗಲಭೆ-ಗದ್ದಲಗಳ ಅಬ್ಬರವಿದ್ದರೂ * ಬೈಬಲ್‌ ವಿದ್ಯಾರ್ಥಿಗಳ ಮಧ್ಯೆ ಶಾಂತಿ-ಸಮಾಧಾನವಿತ್ತು. ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ವಾರ್ಷಿಕ ಕೂಟದ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ.

1918, ಜನವರಿ 5​ರಂದು ನಡೆದ ಆ ವಾರ್ಷಿಕ ಕೂಟದಲ್ಲಿ, ಬೆತೆಲಿಂದ ಹೊರಗೆ ಹಾಕಲಾದ ಪ್ರಮುಖ ವ್ಯಕ್ತಿಗಳು ಸಂಘಟನೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರು. ನಂಬಿಗಸ್ತ ಸಂಚರಣ ಮೇಲ್ವಿಚಾರಕರಾದ ರಿಚರ್ಡ್‌ ಎಚ್‌. ಬಾರ್ಬರ್‌ ಈ ಕೂಟವನ್ನು ಪ್ರಾರ್ಥನೆ ಮಾಡಿ ಆರಂಭಿಸಿದರು. ಹಿಂದಿನ ವರ್ಷದ ವರದಿಯನ್ನು ಪ್ರಸ್ತುತಪಡಿಸಿದ ನಂತರ ಪ್ರತಿ ವರ್ಷ ನಡೆಯುತ್ತಿದ್ದಂತೆ ನಿರ್ದೇಶಕರನ್ನು ಆರಿಸುವ ಕಾರ್ಯಕ್ರಮವನ್ನು ಮಾಡಲಾಯಿತು. ಸಹೋದರ ಬಾರ್ಬರ್‌ ಚುನಾವಣೆಗಾಗಿ ಜೋಸೆಫ್‌ ಎಫ್‌. ರದರ್‌ಫರ್ಡ್‌ ಮತ್ತು ಇನ್ನೂ ಆರು ಸಹೋದರರ ಹೆಸರನ್ನು ಕೊಟ್ಟರು. ಆಗ ವಿರೋಧಿ ಪಕ್ಷದ ವಕೀಲ ಬೇರೆ ಏಳು ಪುರುಷರ ಹೆಸರನ್ನು ಕೊಟ್ಟನು. ಅವರಲ್ಲಿ ಬೆತೆಲಿಂದ ಹೊರಗೆ ಹಾಕಲಾದವರ ಹೆಸರುಗಳೂ ಇದ್ದವು. ಅವರೆಲ್ಲರೂ ಚುನಾವಣೆಯಲ್ಲಿ ಸೋತು ಹೋದರು. ಸೊಸೈಟಿಯ ಪಾಲುದಾರರು ಬಹುಮತದಿಂದ ಸಹೋದರ ರದರ್‌ಫರ್ಡ್‌ ಮತ್ತು ಇನ್ನೂ ಆರು ನಂಬಿಗಸ್ತ ಸಹೋದರರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದರು.

ಆ ಕೂಟಕ್ಕೆ ಹಾಜರಾದ ಅನೇಕ ಸಹೋದರರು “ನಾವು ಹಾಜರಾದ ಯಾವುದೇ ಅಧಿವೇಶನಕ್ಕಿಂತ ಈ ಕೂಟದಲ್ಲಿ ಯೆಹೋವನ ಆಶೀರ್ವಾದ ಹೆಚ್ಚು ಇದ್ದದ್ದನ್ನು ನೋಡಿದ್ವಿ” ಎಂದು ಸಂತೋಷದಿಂದ ಹೇಳಿದರು. ಆದರೆ ಅವರ ಸಂತೋಷ ತುಂಬ ಸಮಯ ಇರಲಿಲ್ಲ.

ದ ಫಿನಿಷ್ಡ್‌ ಮಿಸ್ಟರಿ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು

ತುಂಬ ತಿಂಗಳಿಂದ ಬೈಬಲ್‌ ವಿದ್ಯಾರ್ಥಿಗಳು ದ ಫಿನಿಷ್ಡ್‌ ಮಿಸ್ಟರಿ ಪುಸ್ತಕವನ್ನು ವಿತರಿಸುತ್ತಾ ಬಂದಿದ್ದರು. ಸತ್ಯಕ್ಕಾಗಿ ಹಂಬಲಿಸುತ್ತಿದ್ದವರು ಆ ಪುಸ್ತಕದಲ್ಲಿದ್ದ ಬೈಬಲ್‌ ಸತ್ಯವನ್ನು ಓದಿ ಸ್ವೀಕರಿಸಿದರು.

ಒಬ್ಬ ದಂಪತಿ ಈ ಪುಸ್ತಕ ಓದಿ ಐದೇ ವಾರದಲ್ಲಿ ಸತ್ಯವನ್ನು ಸ್ವೀಕರಿಸಿದರು ಎಂದು ಕೆನಡದಲ್ಲಿ ಸಂಚರಣ ಮೇಲ್ವಿಚಾರಕರಾಗಿದ್ದ ಈ. ಎಫ್‌. ಕ್ರಿಸ್ಟ್‌ ಹೇಳಿದರು. “ಪತಿ-ಪತ್ನಿ ಸಮರ್ಪಣೆ ಮಾಡಿಕೊಂಡು ತುಂಬ ಪ್ರಗತಿ ಮಾಡುತ್ತಿದ್ದಾರೆ” ಎಂದೂ ಹೇಳಿದರು.

ಒಬ್ಬ ವ್ಯಕ್ತಿಗೆ ಆ ಪುಸ್ತಕ ಸಿಕ್ಕಿದಾಗ ಅದರಲ್ಲಿರುವ ವಿಷಯಗಳನ್ನು ತನ್ನ ಗೆಳೆಯರಿಗೂ ತಿಳಿಸಿದನು. ಯಾಕೆಂದರೆ ಆ ಪುಸ್ತಕದಲ್ಲಿದ್ದ ಸಂದೇಶ ಅವನ ಹೃದಯಕ್ಕೆ “ತಾಗಿತ್ತು.” ಹೇಗೆ ಎಂದು ಆತನೇ ಹೇಳುತ್ತಾನೆ: ‘ನಾನು ಅವತ್ತು ರಸ್ತೆಯಲ್ಲಿ ನಡಕೊಂಡು ಹೋಗುತ್ತಿದ್ದಾಗ ಮೇಲಿಂದ ಏನೋ ವಸ್ತು ನನ್ನ ಹೆಗಲಿಗೆ ತಾಗಿ ಕೆಳಗೆ ಬಿತ್ತು. ಅದು ಇಟ್ಟಿಗೆ ಅಂದುಕೊಂಡೆ. ಆದರೆ ಅದು “ದ ಫಿನಿಷ್ಡ್‌ ಮಿಸ್ಟರಿ” ಪುಸ್ತಕವಾಗಿತ್ತು. ನಾನದನ್ನು ಮನೆಗೆ ತಂದು ಪೂರ್ತಿ ಓದಿದೆ. ಆಮೇಲೆ ನನಗೆ ಗೊತ್ತಾಯಿತು ಆ ಪುಸ್ತಕವನ್ನು ಯಾರೋ ಒಬ್ಬ ಧರ್ಮಪ್ರಚಾರಕ ಕೋಪದಲ್ಲಿ ಕಿಟಕಿಯಿಂದ ಹೊರಗೆ ಎಸೆದಿದ್ದ. ಅದೇ ನನ್ನ ಹೆಗಲಿಗೆ ತಾಗಿದ್ದು. ಅವನು ಇಡೀ ಜೀವಮಾನದಲ್ಲಿ ಮತಾಂತರ ಮಾಡಿದ್ದ ಜನರಿಗಿಂತ ಹೆಚ್ಚು ಜನರನ್ನು ತನ್ನ ಈ ಒಂದು ಕ್ರಿಯೆಯಿಂದ ನಿತ್ಯಜೀವಕ್ಕೆ ಸೆಳೆದನು. ಆ ಪ್ರಚಾರಕನ ಕೋಪಾನೆ ನಾನು ದೇವರನ್ನು ಸ್ತುತಿಸಲು ಕಾರಣವಾಯಿತು.’

ಆ ಧರ್ಮಪ್ರಚಾರಕನಿಗೆ ಮಾತ್ರವಲ್ಲ ಇನ್ನೂ ಅನೇಕರಿಗೆ ಆ ಪುಸ್ತಕ ಇಷ್ಟವಾಗಲಿಲ್ಲ. ಕೆನಡದಲ್ಲಿ ಅಧಿಕಾರಿಗಳು 1918​ರ ಫೆಬ್ರವರಿ 12​ರಂದು ಆ ಪುಸ್ತಕವನ್ನು ನಿಷೇಧಿಸಿದರು. ಅದರಲ್ಲಿ ದೇಶದ್ರೋಹದ ಮಾತುಗಳಿವೆ ಮತ್ತು ಯುದ್ಧಮಾಡುವುದು ತಪ್ಪು ಎಂದು ಹೇಳಲಾಗಿದೆ ಎನ್ನುವುದು ಅವರ ಆರೋಪವಾಗಿತ್ತು. ಸ್ವಲ್ಪ ಸಮಯದಲ್ಲೇ ಅಮೆರಿಕದ ಅಧಿಕಾರಿಗಳು ಕೇಸ್‌ ಹಾಕಿದರು. ನ್ಯೂಯಾರ್ಕ್‌, ಪೆನ್ಸಿಲ್ವೇನಿಯ, ಕ್ಯಾಲಿಫೋರ್ನಿಯಾಗಳಲ್ಲಿದ್ದ ಬೆತೆಲ್‌ ಮತ್ತು ನಮ್ಮ ಬೇರೆ ಕಚೇರಿಗಳಿಗೆ ಪೊಲೀಸರು ಹೋಗಿ ಸಂಘಟನೆಯಲ್ಲಿ ಮುಂದಾಳತ್ವ ವಹಿಸುವವರ ವಿರುದ್ಧ ಏನಾದರೂ ಸಾಕ್ಷಿ ಸಿಗುತ್ತಾ ಎಂದು ಹುಡುಕಿದರು. 1918​ರ ಮಾರ್ಚ್‌ 14​ರಂದು ಅಮೆರಿಕದ ನ್ಯಾಯಾಲಯ ಆ ಪುಸ್ತಕವನ್ನು ನಿಷೇಧಿಸಿತು. ಈ ಪುಸ್ತಕವನ್ನು ಮುದ್ರಿಸಿ ವಿತರಿಸಿದರೆ ಯುದ್ಧಕ್ಕಾಗಿ ಮಾಡುವ ಪ್ರಯತ್ನಕ್ಕೆ ಅಡಚಣೆಯಾಗುತ್ತದೆ ಮತ್ತು ಗೂಢಚಾರಿಕೆಯ ವಿರುದ್ಧದ ಕಾಯಿದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ ಎನ್ನುವುದು ಅವರ ಆರೋಪವಾಗಿತ್ತು.

ಜೈಲಿನಲ್ಲಿ!

1918​ರ ಮೇ 7​ರಂದು ಜೊವಾನೀ ಡೇಚೆಕ, ಜಾರ್ಜ್‌ ಫಿಶರ್‌, ಅಲೆಕ್ಸಾಂಡರ್‌ ಮ್ಯಾಕ್‌ಮಿಲನ್‌, ರಾಬರ್ಟ್‌ ಮಾರ್ಟಿನ್‌, ಫ್ರೆಡ್ರಿಕ್‌ ರಾಬಸನ್‌, ಜೋಸೆಫ್‌ ರದರ್‌ಫರ್ಡ್‌, ವಿಲ್ಯಮ್‌ ವ್ಯಾನ್‌ ಆಮ್‌ಬರ್ಗ್‌ ಮತ್ತು ಕ್ಲೇಟನ್‌ ವುಡ್‌ವರ್ತ್‌ರನ್ನು ಬಂಧಿಸಲು ವಾರೆಂಟ್‌ ಸಿಕ್ಕಿತು. ಇವರು “ಕಾನೂನು ಮುರಿದಿದ್ದಾರೆ, ನೀಚಕೃತ್ಯ ನಡೆಸಿದ್ದಾರೆ ಮತ್ತು ಅವಿಧೇಯತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ, ಅಮೆರಿಕದ ಭೂಸೇನೆಯ ಮತ್ತು ನೌಕಾಪಡೆಯ ಕರ್ತವ್ಯಗಳನ್ನು ನಿರಾಕರಿಸುವ ಮೂಲಕ ದ್ರೋಹಮಾಡಿದ್ದಾರೆ” ಎಂದು ಸುಳ್ಳಾರೋಪ ಹಾಕಲಾಯಿತು. 1918​ರ ಜೂನ್‌ 5​ರಂದು ಕೇಸಿನ ವಿಚಾರಣೆ ಆರಂಭವಾಯಿತು. ಆದರೆ ಅವರ ಮೇಲಿದ್ದ ಆರೋಪ ಸುಳ್ಳೆಂದು ಸಾಬೀತಾಗುವುದು ಕಷ್ಟವಾಗಿತ್ತು. ಯಾಕೆ?

ಸಹೋದರರು ಗೂಢಚಾರಿಕೆಯ ವಿರುದ್ಧದ ಕಾಯಿದೆಯನ್ನು ಮುರಿದಿದ್ದಾರೆ ಎಂಬ ಆರೋಪ ಅವರಿಗೆ ಶಿಕ್ಷೆ ಕೊಡಿಸಲು “ಶಕ್ತಿಯುತ ಆಯುಧ” ಎಂದು ವಕೀಲರು ಹೇಳಿದರು. 1918​ರ ಮೇ 16​ರಂದು ಅಮೆರಿಕದ ಶಾಸನಸಭೆ ಈ ಕಾಯಿದೆಗೆ ತಿದ್ದುಪಡಿಯನ್ನು ತರಲು ನಿರಾಕರಿಸಿತು. ಒಂದುವೇಳೆ ಕಾಯಿದೆಯನ್ನು ತಿದ್ದುಪಡಿ ಮಾಡಿದ್ದರೆ “ಸತ್ಯವಾಗಿರುವ, ಒಳ್ಳೇ ಉದ್ದೇಶದಿಂದ ಕೂಡಿರುವ, ನ್ಯಾಯವಾದ” ಮಾಹಿತಿಯನ್ನು ಪ್ರಕಾಶಿಸುವವರಿಗೆ ಅದರಿಂದ ಪ್ರಯೋಜನ ಸಿಗುತ್ತಿತ್ತು. ಶಾಸನಸಭೆಯಲ್ಲಿ ಇಡೀ ದಿನ ದ ಫಿನಿಷ್ಡ್‌ ಮಿಸ್ಟರಿ ಪುಸ್ತಕದ ಬಗ್ಗೆನೇ ವಾದ ನಡೆದಿತ್ತು. ಇದರ ಬಗ್ಗೆ ಅಮೆರಿಕದ ಶಾಸನಸಭೆಯ ದಾಖಲೆ ಹೀಗೆ ಹೇಳುತ್ತದೆ: “ತುಂಬ ಅಪಾಯಕಾರಿಯಾದ ದೇಶದ್ರೋಹದ ಪ್ರಚಾರಕ್ಕೆ ಒಂದು ಉತ್ತಮ ಉದಾಹರಣೆ ‘ದ ಫಿನಿಷ್ಡ್‌ ಮಿಸ್ಟರಿ’ ಪುಸ್ತಕ. ಇದು ಯುದ್ಧ ಮಾಡಲು ನಮಗಿರುವ ಕಾರಣಗಳನ್ನು ತಿರಸ್ಕರಿಸಲು ಸೈನಿಕರನ್ನು ಪ್ರೋತ್ಸಾಹಿಸುತ್ತದೆ . . . ಸೈನ್ಯಕ್ಕೆ ಸೇರದಂತೆ ಜನರನ್ನು ತಡೆಯುತ್ತದೆ.”

1918​ರ ಜೂನ್‌ 20​ರಂದು ನ್ಯಾಯಾಧೀಶ ಆ ಎಂಟು ಸಹೋದರರನ್ನು ಅಪರಾಧಿಗಳೆಂದು ತೀರ್ಪು ಕೊಟ್ಟರು. ಮಾರನೇ ದಿನ ಶಿಕ್ಷೆಯನ್ನು ಪ್ರಕಟಿಸಲಾಯಿತು. ಆ ನ್ಯಾಯಾಧೀಶ ಹೇಳಿದ್ದು: “ಇವರು ಹುರುಪಿನಿಂದ ಮಾಡುತ್ತಿರುವ ಮತ್ತು ಹಬ್ಬಿಸುತ್ತಿರುವ ಈ ಮತಪ್ರಚಾರ . . . ಜರ್ಮನಿಯ ಸೈನ್ಯಕ್ಕಿಂತ ಅಪಾಯಕಾರಿ. . . . ಇವರಿಗೆ ಕಠಿಣ ಶಿಕ್ಷೆ ಆಗಬೇಕು.” ಎರಡು ವಾರಗಳ ನಂತರ ಜಾರ್ಜಿಯದ ಅಟ್ಲಾಂಟದಲ್ಲಿರುವ ಸೆರೆಮನೆಗೆ ಆ ಎಂಟು ಸಹೋದರರನ್ನು ಹಾಕಲಾಯಿತು. ಅವರಿಗೆ 10​ರಿಂದ 20 ವರ್ಷಗಳ ಶಿಕ್ಷೆಯಾಯಿತು.

ಸಾರುವ ಕೆಲಸ ಮುಂದುವರಿಯಿತು

ಈ ಸಮಯದಲ್ಲಿ ಬೈಬಲ್‌ ವಿದ್ಯಾರ್ಥಿಗಳು ತೀವ್ರ ವಿರೋಧ ಎದುರಿಸಬೇಕಾಯಿತು. ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ (FBI) ಬೈಬಲ್‌ ವಿದ್ಯಾರ್ಥಿಗಳ ಚಟುವಟಿಕೆಯನ್ನು ತನಿಖೆ ಮಾಡಿ ಸಾವಿರಾರು ಸಾಕ್ಷ್ಯಗಳನ್ನು ಕಲೆಹಾಕಿತು. ನಮ್ಮ ಸಹೋದರರು ಸಾರುತ್ತಾ ಇರಲು ದೃಢನಿರ್ಧಾರ ಮಾಡಿಕೊಂಡಿದ್ದಾರೆ ಎಂದು ಈ ದಾಖಲೆಗಳು ತೋರಿಸಿದವು.

ಫ್ಲಾರಿಡ ಒರ್ಲಾಂಡೊ ಎಂಬ ಸ್ಥಳದ ಅಂಚೆಕಚೇರಿಯ ಅಧಿಕಾರಿ FBIಗೆ ಬರೆದ ಪತ್ರದಲ್ಲಿ ಹೀಗಿತ್ತು: “[ಬೈಬಲ್‌ ವಿದ್ಯಾರ್ಥಿಗಳು] ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಅದೂ ರಾತ್ರಿಯಲ್ಲೇ ಜಾಸ್ತಿ ಮಾಡುತ್ತಿದ್ದಾರೆ. . . . ಏನೇ ಹಿಂಸೆ ಬಂದರೂ ಸುವಾರ್ತೆ ಸಾರುವ ನಿರ್ಧಾರ ಮಾಡಿದ್ದಾರೆ.”

ಫ್ರೆಡ್ರಿಕ್‌ ಡಬ್ಲ್ಯು. ಫ್ರಾನ್ಸ್‌ ಬಗ್ಗೆ ಮಾಹಿತಿ ಕೊಡಲು ಸೈನ್ಯದ ಒಬ್ಬ ಉನ್ನತ ಅಧಿಕಾರಿ FBIಗೆ ಒಂದು ಪತ್ರ ಬರೆದನು. (ಸಹೋದರ ಫ್ರಾನ್ಸ್‌ ಆಮೇಲೆ ಆಡಳಿತ ಮಂಡಲಿಯ ಸದಸ್ಯರಾದರು.) ಅವನು ಬರೆದದ್ದು: “ಫ್ರೆಡ್ರಿಕ್‌ ಡಬ್ಲ್ಯು. ಫ್ರಾನ್ಸ್‌ ‘ಫಿನಿಷ್ಡ್‌ ಮಿಸ್ಟರಿ’ ಪುಸ್ತಕದ ಸಾವಿರಾರು ಪ್ರತಿಗಳನ್ನು ಮಾರುವುದರಲ್ಲಿ ತಲ್ಲೀನನಾಗಿದ್ದಾನೆ.”

ಸಹೋದರ ಚಾರ್ಲ್ಸ್‌ ಫೆಕಲ್‌ ಕೂಡ ತುಂಬ ಹಿಂಸೆಯನ್ನು ಎದುರಿಸಿದರು. ಅವರು ಕೂಡ ಮುಂದಕ್ಕೆ ಆಡಳಿತ ಮಂಡಲಿಯ ಸದಸ್ಯರಾದರು. ಅವರು ಆ ಪುಸ್ತಕವನ್ನು ವಿತರಿಸಿದ್ದರಿಂದ ಅಧಿಕಾರಿಗಳು ಅವರನ್ನು ಬಂಧಿಸಿದರು ಮತ್ತು ಅವರ ವೈಯಕ್ತಿಕ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದರು. ಮೇರಿಲ್ಯಾಂಡಿನ ಬಾಲ್ಟಿಮೋರ್‌ನಲ್ಲಿ ಅವರನ್ನು ಒಂದು ತಿಂಗಳು ಸೆರೆಮನೆಯಲ್ಲಿ ಹಾಕಿದ್ದರು. ಅಲ್ಲಿ ಅವರಿಗೆ “ಆಸ್ಟ್ರಿಯದಿಂದ ಬಂದ ಶತ್ರು” ಎಂದು ಹೆಸರಿಡಲಾಗಿತ್ತು. ಅವರನ್ನು ವಿಚಾರಣೆ ಮಾಡುತ್ತಿದ್ದ ಅಧಿಕಾರಿಗಳಿಗೆ ಅವರು ಧೈರ್ಯವಾಗಿ ಸಾಕ್ಷಿ ಕೊಟ್ಟರು. ಆಗ ಅವರಿಗೆ “ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ!” ಎಂದು ಪೌಲ 1 ಕೊರಿಂಥ 9:16​ರಲ್ಲಿ ಹೇಳಿರುವ ಮಾತು ನೆನಪಾಯಿತು. *

ಬೈಬಲ್‌ ವಿದ್ಯಾರ್ಥಿಗಳು ಹುರುಪಿನಿಂದ ಸಾರುತ್ತಿರುವುದರ ಜೊತೆಗೆ ಇನ್ನೊಂದು ಕೆಲಸವನ್ನೂ ಮಾಡಿದರು. ಅಟ್ಲಾಂಟದ ಸೆರೆಮನೆಯಲ್ಲಿರುವ ನಮ್ಮ ಸಹೋದರರನ್ನು ಬಿಡುಗಡೆ ಮಾಡಬೇಕೆಂಬ ಕೋರಿಕೆಯಿರುವ ಅರ್ಜಿಯನ್ನು ಎಲ್ಲಾ ಕಡೆ ತೆಗೆದುಕೊಂಡು ಹೋದರು. ಅದರ ಬಗ್ಗೆ ಆ್ಯನ ಕೆ. ಗಾರ್ಡನರ್‌ ನೆನಪಿಸಿಕೊಂಡು ಹೀಗೆ ಹೇಳುತ್ತಾರೆ: “ನಾವು ಸುಮ್ಮನೆ ಕೂರಲಿಲ್ಲ. ಸಹೋದರರು ಸೆರೆಮನೆಯಲ್ಲಿ ಇರುವಾಗ ಅರ್ಜಿಯಲ್ಲಿ ಜನರ ಸಹಿ ತೆಗೆದುಕೊಳ್ಳಲಿಕ್ಕಾಗಿ ಮನೆಮನೆಗೆ ಹೋದ್ವಿ. ಸಾವಿರಗಟ್ಟಲೆ ಸಹಿ ಸಿಕ್ಕಿತು. ‘ಆ ಸಹೋದರರು ಪ್ರಾಮಾಣಿಕರಾದ ಕ್ರೈಸ್ತರು. ಏನೂ ತಪ್ಪು ಮಾಡದೆ ಇದ್ದವರನ್ನು ಅನ್ಯಾಯವಾಗಿ ಸೆರೆಮನೆಗೆ ಹಾಕಿದ್ದಾರೆ’ ಎಂದು ಜನರಿಗೆ ಹೇಳುತ್ತಿದ್ವಿ.”

ಅಧಿವೇಶನಗಳು

ಸಹೋದರರ ಆಧ್ಯಾತ್ಮಿಕತೆಯನ್ನು ಬಲಪಡಿಸಲಿಕ್ಕಾಗಿ ಆ ಸಮಯದಲ್ಲಿ ಅಧಿವೇಶನಗಳನ್ನು ಆಗಾಗ ಏರ್ಪಡಿಸುತ್ತಿದ್ದರು. ಕಾವಲಿನ ಬುರುಜು ಹೀಗೆ ಹೇಳಿತ್ತು: “40ಕ್ಕೂ ಹೆಚ್ಚು ಅಧಿವೇಶನಗಳು . . . ಈ ವರ್ಷದಲ್ಲಿ ನಡೆದವು . . . ಈ ಎಲ್ಲ ಅಧಿವೇಶನಗಳ ಬಗ್ಗೆ ಒಳ್ಳೇ ವರದಿಗಳು ಬಂದವು. ಮೊದಲೆಲ್ಲ ಅಧಿವೇಶನಗಳು ಬೇಸಗೆಯ ಕೊನೆಭಾಗದಲ್ಲಿ ಅಥವಾ ಚಳಿಗಾಲದ ಆರಂಭದಲ್ಲಿ ನಡೆಯುತ್ತಿದ್ದವು. ಆದರೆ ಈಗ ಹಾಗಲ್ಲ, ಪ್ರತಿ ತಿಂಗಳು ಅಧಿವೇಶನಗಳು ನಡೆಯುತ್ತಿವೆ.”

ಸಹೃದಯದ ಜನರು ಸುವಾರ್ತೆಗೆ ಕಿವಿಗೊಡುವುದನ್ನು ನಿಲ್ಲಿಸಲಿಲ್ಲ. ಒಹಾಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ಒಂದು ಅಧಿವೇಶನಕ್ಕೆ ಸುಮಾರು 1,200 ಜನರು ಹಾಜರಾದರು. 42 ಜನರು ದೀಕ್ಷಾಸ್ನಾನ ಪಡಕೊಂಡರು. ಅವರಲ್ಲಿ ಒಬ್ಬ ಚಿಕ್ಕ ಹುಡುಗ ಕೂಡ ಇದ್ದ. “ದೇವರ ಮೇಲೆ ಅವನಿಗಿದ್ದ ಕೃತಜ್ಞತಾಭಾವವನ್ನು ನೋಡಿ ಎಷ್ಟೋ ದೊಡ್ಡವರು ತಲೆತಗ್ಗಿಸಬೇಕು.”

ಮುಂದೆ ಏನಾಯಿತು?

1918​ನೇ ವರ್ಷ ಮುಗಿಯುತ್ತಾ ಇದ್ದ ಹಾಗೆ ಬೈಬಲ್‌ ವಿದ್ಯಾರ್ಥಿಗಳಿಗೆ ಏನಾಗುತ್ತದೆ ಎಂದು ಹೇಳುವುದೇ ಕಷ್ಟವಾಗಿತ್ತು. ಬ್ರೂಕ್ಲಿನ್‌ನಲ್ಲಿದ್ದ ಕೆಲವು ಜಾಗಗಳನ್ನು ಮಾರಲಾಯಿತು. ಮುಖ್ಯಕಾರ್ಯಾಲಯವನ್ನು ಪೆನ್ಸಿಲ್ವೇನಿಯದ ಪಿಟ್ಸ್‌ಬರ್ಗ್‌ಗೆ ಸ್ಥಳಾಂತರಿಸಲಾಯಿತು. ಮುಂದಾಳತ್ವ ವಹಿಸುತ್ತಿದ್ದ ಸಹೋದರರು ಜೈಲಿನಲ್ಲೇ ಇದ್ದರು. ಸೊಸೈಟಿಯ ಪಾಲುದಾರರು ವಾರ್ಷಿಕ ಕೂಟವನ್ನು 1919​ರ ಜನವರಿ 4​ರಂದು ನಡೆಸಲು ಏರ್ಪಾಡು ಮಾಡಿದರು. ಮುಂದೆ ಏನಾಯಿತು?

ನಮ್ಮ ಸಹೋದರರು ಸಾರುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಹೋದರು. ತಮಗೆ ಜಯ ಸಿಗುತ್ತೆ ಅಂತ ಅವರಿಗೆ ದೃಢನಂಬಿಕೆಯಿತ್ತು. ಆದುದರಿಂದ “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂಬ ವಚನವನ್ನು 1919​ರ ವರ್ಷವಚನವಾಗಿ ಆರಿಸಿಕೊಂಡರು. (ಯೆಶಾ. 54:17) ಇದ್ದಕ್ಕಿದ್ದಂತೆ ಸನ್ನಿವೇಶ ಬದಲಾಯಿತು. ಅದರಿಂದ ಅವರ ನಂಬಿಕೆ ಬಲವಾಯಿತು. ತಮ್ಮ ಮುಂದಿರುವ ಬೃಹತ್‌ ಪ್ರಮಾಣದ ಕೆಲಸಕ್ಕೆ ಇದು ಅವರನ್ನು ಸಿದ್ಧಪಡಿಸಿತು.

^ ಪ್ಯಾರ. 6 2017​ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ (ಇಂಗ್ಲಿಷ್‌) ಪುಟ 172-176 ನೋಡಿ.

^ ಪ್ಯಾರ. 22 1969, ಮಾರ್ಚ್‌ 1​ರ ಕಾವಲಿನಬುರುಜುವಿನ ಪುಟ 153-156​ರಲ್ಲಿರುವ ಚಾರ್ಲ್ಸ್‌ ಫೆಕಲ್‌ರ ಜೀವನ ಕಥೆ ನೋಡಿ.