ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ತರುವ ಬಿರುಗಾಳಿ ಇನ್ನೇನು ಬರಲಿರುವುದರಿಂದ ಜನರು ಅದರ ಬಗ್ಗೆ ತಿಳುಕೊಳ್ಳಬೇಕು

ದುಷ್ಟರ ನಾಶನ ಆಗುವ ಮುಂಚೆ ದೇವರು ಸಾಕಷ್ಟು ಎಚ್ಚರಿಕೆಗಳನ್ನು ಕೊಡುತ್ತಾನಾ?

ದುಷ್ಟರ ನಾಶನ ಆಗುವ ಮುಂಚೆ ದೇವರು ಸಾಕಷ್ಟು ಎಚ್ಚರಿಕೆಗಳನ್ನು ಕೊಡುತ್ತಾನಾ?

ಹವಾಮಾನದ ಬಗ್ಗೆ ಮುನ್ಸೂಚನೆ ತಿಳಿಸುವವನು ರೇಡಾರ್‌ ನಕ್ಷೆಯಲ್ಲಿ ಕಂಡುಬರುವ ಸೂಚನೆಯನ್ನು ಪರೀಕ್ಷಿಸುತ್ತಾನೆ. ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶದ ಮೇಲೆ ಇನ್ನು ಸ್ವಲ್ಪದರಲ್ಲೇ ತುಂಬ ಭಯಾನಕವಾದ ಬಿರುಗಾಳಿ ಸಹಿತ ಮಳೆ ಬರಲಿದೆ ಎಂದು ಅವನಿಗೆ ಗೊತ್ತಾಗುತ್ತದೆ ಎಂದಿಟ್ಟುಕೊಳ್ಳಿ. ಆಗ ಅವನು ಜನರಿಗೆ ಯಾವ ಅಪಾಯನೂ ಆಗಬಾರದೆಂಬ ಉದ್ದೇಶದಿಂದ ಅವರಿಗೆ ಎಚ್ಚರಿಕೆ ಕೊಡಲು ತನ್ನ ಕೈಲಾದದ್ದನ್ನೆಲ್ಲಾ ಮಾಡುತ್ತಾನೆ.

ಅದೇ ರೀತಿ, ಇಂದು ಯೆಹೋವನು ಭೂನಿವಾಸಿಗಳಿಗೆ ಹಿಂದೆಂದೂ ಕೇಳಿಸಿಕೊಂಡಿರದಂಥ ತುಂಬ ಅಪಾಯಕಾರಿ “ಬಿರುಗಾಳಿ” ಬಗ್ಗೆ ಎಚ್ಚರಿಕೆ ಕೊಡುತ್ತಿದ್ದಾನೆ. ಅದನ್ನು ಆತನು ಹೇಗೆ ಕೊಡುತ್ತಿದ್ದಾನೆ? ಎಚ್ಚರಿಕೆಗೆ ಜನರು ಕಿವಿಗೊಡಲು ಆತನು ಸಾಕಷ್ಟು ಸಮಯ ಕೊಡುತ್ತಾನೆ ಅಂತ ನಾವು ಹೇಗೆ ಹೇಳಬಹುದು? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲಿಕ್ಕಾಗಿ ನಾವು ಮೊದಲು, ಯೆಹೋವನು ಹಿಂದೆ ಕೊಟ್ಟ ಕೆಲವು ಎಚ್ಚರಿಕೆಗಳ ಬಗ್ಗೆ ನೋಡೋಣ.

ದೇವರು ಕೊಟ್ಟ ಮುನ್ನೆಚ್ಚರಿಕೆಗಳು

ಬೈಬಲ್‌ ಸಮಯದಲ್ಲಿ ಯೆಹೋವನು ಅನೇಕ ಸಲ, ತನ್ನ ಆಜ್ಞೆಗಳನ್ನು ಬೇಕು ಬೇಕೆಂದೇ ಮೀರಿದವರ ಮೇಲೆ ತಾನು “ಬಿರುಗಾಳಿ” ಅಥವಾ ನಾಶನ ತರುವುದರ ಬಗ್ಗೆ ತಿಳಿಸಿದ್ದನು. (ಜ್ಞಾನೋ. 10:25; ಯೆರೆ. 30:23) ಪ್ರತಿ ಸಲವೂ ಆತನು ಯಾರ ಮೇಲೆ ನಾಶನ ತರಲಿದ್ದನೋ ಅವರಿಗೆ ಸಾಕಷ್ಟು ಮುಂಚೆಯೇ ಎಚ್ಚರಿಕೆ ಕೊಟ್ಟಿದ್ದನು ಮತ್ತು ಪಾರಾಗಲಿಕ್ಕಾಗಿ ಅವರೇನು ಮಾಡಬೇಕು ಎಂದು ತಿಳಿಹೇಳಿದ್ದನು. (2 ಅರ. 17:12-15; ನೆಹೆ. 9:29, 30) ಯೆಹೋವನು ತನ್ನ ನ್ಯಾಯತೀರ್ಪನ್ನು ಪ್ರಕಟಿಸಲು ಮತ್ತು ಜನರು ತಕ್ಷಣ ಏನು ಮಾಡಬೇಕೆಂದು ತಿಳಿಸಲು ಆಗ ಭೂಮಿಯಲ್ಲಿದ್ದ ತನ್ನ ನಂಬಿಗಸ್ತ ಸೇವಕರನ್ನು ಬಳಸಿದನು. ಇದರಿಂದಾಗಿ ಜನರಿಗೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು.—ಆಮೋ. 3:7.

ಅಂಥ ನಂಬಿಗಸ್ತ ಸೇವಕರಲ್ಲಿ ನೋಹನೂ ಒಬ್ಬನಾಗಿದ್ದ. ಇಡೀ ಭೂಮಿಯನ್ನೇ ಮುಳುಗಿಸಲಿದ್ದ ಜಲಪ್ರಳಯದ ಬಗ್ಗೆ ಆತನು ಆಗಿನ ಸಮಯದಲ್ಲಿದ್ದ ದುಷ್ಟ ಜನರಿಗೆ ತಿಳಿಸಿದನು. ಆ ಜನ ಹಿಂಸಾಚಾರಿಗಳು, ನೈತಿಕತೆ ಇಲ್ಲದವರಾಗಿದ್ದರೂ, ನಿರ್ಭಯವಾಗಿ ಅನೇಕ ವರ್ಷಗಳವರೆಗೆ ಅವರಿಗೆ ಎಚ್ಚರಿಕೆ ಕೊಡುತ್ತಾ ಬಂದನು. (ಆದಿ. 6:9-13, 17) ಅವರು ಜಲಪ್ರಳಯದಿಂದ ಪಾರಾಗಬೇಕೆಂದರೆ ಏನು ಮಾಡಬೇಕು ಅಂತನೂ ತಿಳಿಸಿದನು. ನೋಹ ಅದರ ಬಗ್ಗೆ ಎಷ್ಟು ಸಾರಿದನೆಂದರೆ ಅವನಿಗೆ “ನೀತಿಯನ್ನು ಸಾರುವವ” ಎಂಬ ಹೆಸರೇ ಬಂದುಬಿಟ್ಟಿತು.—2 ಪೇತ್ರ 2:5.

ನೋಹ ಎಷ್ಟು ಹೇಳಿದರೂ ಆಗಿನ ಜನರು ಕೇಳಲಿಲ್ಲ. ದೇವರಿಂದ ಬಂದ ಸಂದೇಶಕ್ಕೆ ಅವರು ಗಮನನೇ ಕೊಡಲಿಲ್ಲ. ತಮಗೆ ನಯಾಪೈಸೆಯಷ್ಟೂ ನಂಬಿಕೆ ಇಲ್ಲ ಅಂತ ಅವರು ತೋರಿಸಿಬಿಟ್ಟರು. “ಮಾಡಿದ್ದುಣ್ಣೋ ಮಾರಾಯ” ಅನ್ನುವಂತೆ ‘ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡು ಹೋಯಿತು.’ (ಮತ್ತಾ. 24:39; ಇಬ್ರಿ. 11:7) ನೀರಲ್ಲಿ ಅವರು ಕೊಚ್ಚಿಕೊಂಡು ಹೋಗುವಾಗ ‘ದೇವರು ನಮಗೆ ಇದರ ಬಗ್ಗೆ ಹೇಳಲೇ ಇಲ್ಲ’ ಅಂತ ದೂರಲು ಅವಕಾಶನೇ ಇರಲಿಲ್ಲ.

ಇನ್ನು ಕೆಲವೊಮ್ಮೆ, ಯೆಹೋವನು “ಬಿರುಗಾಳಿ” ತರ ಇರುವ ತನ್ನ ನ್ಯಾಯತೀರ್ಪನ್ನು ಜಾರಿಗೊಳಿಸುವುದಕ್ಕೂ ಸ್ವಲ್ಪವೇ ಮುಂಚೆ ಅದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾನೆ. ಆದರೆ ಯಾರ ಮೇಲೆ ನ್ಯಾಯತೀರ್ಪು ತರಲಿದ್ದನೋ ಅವರು ತಮ್ಮನ್ನು ರಕ್ಷಿಸಿಕೊಳ್ಳಲಿಕ್ಕೆ ಅಗತ್ಯವಿರುವುದನ್ನು ಮಾಡಲು ಸಾಕಷ್ಟು ಸಮಯನೂ ಕೊಟ್ಟಿದ್ದಾನೆ. ಉದಾಹರಣೆಗೆ, ಪ್ರಾಚೀನ ಈಜಿಪ್ಟಿನ ಜನರಿಗೆ ಹತ್ತು ವಿಪತ್ತುಗಳು (ಬಾಧೆ) ಸಂಭವಿಸಲಿದ್ದಾಗ ಅದರ ಬಗ್ಗೆ ಯೆಹೋವನು ಮುನ್ನೆಚ್ಚರಿಕೆಗಳನ್ನು ಕೊಟ್ಟನು. ಏಳನೆಯ ವಿಪತ್ತಾದ ಆಲಿಕಲ್ಲಿನ ಮಳೆ ಸಂಭವಿಸುವ ಮುಂಚೆ ಯೆಹೋವನು ಏನು ಮಾಡಿದನೆಂದು ಗಮನಿಸಿ. ಅದರ ಬಗ್ಗೆ ಫರೋಹ ಮತ್ತು ಅವನ ಆಳುಗಳಿಗೆ ಎಚ್ಚರಿಕೆ ನೀಡಲು ಮೋಶೆ ಮತ್ತು ಆರೋನನನ್ನು ಕಳುಹಿಸಿದನು. ಆಲಿಕಲ್ಲು ಮಳೆ ಮಾರನೇ ದಿನಾನೇ ಬರಲಿದ್ದ ಕಾರಣ ಆ ವಿಪತ್ತಿನಿಂದ ತಪ್ಪಿಸಿಕೊಂಡು ಆಶ್ರಯ ಪಡಕೊಳ್ಳಲಿಕ್ಕಾಗಿ ಅವರಿಗೆ ಸಾಕಷ್ಟು ಸಮಯ ಸಿಕ್ಕಿತಾ? ಬೈಬಲ್‌ ಹೀಗೆ ಹೇಳುತ್ತದೆ: “ಫರೋಹನ ಸೇವಕರಲ್ಲಿ ಯಾರಾರು ಯೆಹೋವನ ಮಾತಿಗೆ ಹೆದರಿದರೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಬೇಗ ಮನೆಗೆ ಬರಮಾಡಿಕೊಂಡರು; ಯಾರು ಯೆಹೋವನ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲವೋ ಅವರು ತಮ್ಮ ಆಳುಗಳನ್ನೂ ಪಶುಗಳನ್ನೂ ಅಡವಿಯಲ್ಲೇ ಬಿಟ್ಟರು.” (ವಿಮೋ. 9:18-21) ಯೆಹೋವನು ಎಚ್ಚರಿಕೆ ಕೊಟ್ಟಿದ್ದರಿಂದಲೇ, ಆತನ ಮಾತಿಗೆ ಯಾರೆಲ್ಲಾ ಕಿವಿಗೊಟ್ಟರೋ ಅವರು ಆ ವಿಪತ್ತಿನ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.

ಹತ್ತನೆಯ ವಿಪತ್ತು ಸಂಭವಿಸುವ ಮುಂಚೆಯೂ ಫರೋಹನಿಗೆ ಮತ್ತು ಅವನ ಆಳುಗಳಿಗೆ ಎಚ್ಚರಿಕೆ ಕೊಡಲಾಯಿತು. ಆದರೆ ಅವರು ಮೂರ್ಖತನದಿಂದಾಗಿ ಆ ಎಚ್ಚರಿಕೆಗೆ ಗಮನ ಕೊಡಲೇ ಇಲ್ಲ. (ವಿಮೋ. 4:22, 23) ಇದರಿಂದಾಗಿ ಅವರೆಲ್ಲರ ಮೊದಲ ಗಂಡು ಮಕ್ಕಳು ಸತ್ತುಹೋದರು. ಎಂಥ ದುರಂತ! (ವಿಮೋ. 11:4-10; 12:29) ಅವರು ಆ ಎಚ್ಚರಿಕೆಗೆ ಕಿವಿಗೊಟ್ಟು ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಇತ್ತಾ? ಹೌದು! ಇನ್ನೇನು ಸಂಭವಿಸಲಿದ್ದ ಹತ್ತನೆಯ ವಿಪತ್ತಿನ ಬಗ್ಗೆ ಇಸ್ರಾಯೇಲ್ಯರಿಗೆ ಮೋಶೆ ತಕ್ಷಣ ಎಚ್ಚರಿಕೆ ನೀಡಿದ್ದನು ಮತ್ತು ತಮ್ಮ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತ ಅವರಿಗೆ ನಿರ್ದೇಶನವನ್ನೂ ಕೊಟ್ಟಿದ್ದನು. (ವಿಮೋ. 12:21-28) ಎಷ್ಟು ಜನ ಮೋಶೆ ಕೊಟ್ಟ ಎಚ್ಚರಿಕೆಗೆ ಕಿವಿಗೊಟ್ಟರು? ಒಂದು ಅಂದಾಜಿನ ಪ್ರಕಾರ, ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನರು ಈಜಿಪ್ಟಿನಿಂದ ಹೋದರು. ಅವರಲ್ಲಿ ಇಸ್ರಾಯೇಲ್ಯರು, ‘ಬಹು ಮಂದಿ ಅನ್ಯರು’ ಮತ್ತು ಈಜಿಪ್ಟಿನವರು ಇದ್ದರು.—ವಿಮೋ. 12:38

ಈ ಉದಾಹರಣೆಗಳು ತೋರಿಸುವಂತೆ ಎಚ್ಚರಿಕೆಗೆ ಪ್ರತಿಕ್ರಿಯಿಸಲು ಜನರಿಗೆ ಯೆಹೋವನು ಯಾವಾಗಲೂ ಸಾಕಷ್ಟು ಸಮಯವನ್ನು ಕೊಟ್ಟಿದ್ದಾನೆ. (ಧರ್ಮೋ. 32:4) ಈ ರೀತಿ ಮಾಡಲು ಕಾರಣ ಏನು? ಯೆಹೋವನು ‘ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುತ್ತಾನೆ’ ಎಂದು ಅಪೊಸ್ತಲ ಪೇತ್ರ ವಿವರಿಸಿದ್ದಾನೆ. (2 ಪೇತ್ರ 3:9) ದೇವರಿಗೆ ಜನರ ಮೇಲೆ ಕಾಳಜಿ ಇತ್ತು. ತನ್ನ ನ್ಯಾಯತೀರ್ಪನ್ನು ಜಾರಿಗೆ ತರುವ ಮುಂಚೆ ಜನರು ಪಶ್ಚಾತ್ತಾಪಪಟ್ಟು, ತಾನು ಹೇಳಿದಂತೆ ನಡಕೊಳ್ಳಲಿ ಎಂದು ಆತನು ಬಯಸಿದ್ದನು.—ಯೆಶಾ. 48:17, 18; ರೋಮ. 2:4.

ದೇವರು ಇಂದು ಕೊಡುತ್ತಿರುವ ಎಚ್ಚರಿಕೆಗೆ ಜನ ಗಮನ ಕೊಡುತ್ತಿದ್ದಾರಾ?

ಇಂದು ಸಹ ಇಡೀ ಭೂಮಿಯಲ್ಲಿ ಎಚ್ಚರಿಕೆಯನ್ನು ಪ್ರಕಟಿಸಲಾಗುತ್ತಿದೆ. ಅದಕ್ಕೆ ಜನರೆಲ್ಲರೂ ಕಿವಿಗೊಡಬೇಕಿದೆ. ಯೇಸು ಭೂಮಿಯಲ್ಲಿದ್ದಾಗ, ಈ ಲೋಕ ‘ಮಹಾ ಸಂಕಟದ’ ಸಮಯದಲ್ಲಿ ನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದನು. (ಮತ್ತಾ. 24:21) ಈ ನಾಶನ ಇನ್ನೇನು ಬರುತ್ತದೆ ಅನ್ನುವಾಗ ತನ್ನ ಶಿಷ್ಯರು ಏನೆಲ್ಲಾ ನೋಡುತ್ತಾರೆ ಮತ್ತು ಅನುಭವಿಸುತ್ತಾರೆ ಅನ್ನುವುದನ್ನು ಯೇಸು ಸವಿವರವಾಗಿ ಪ್ರವಾದಿಸಿದನು. ಯೇಸು ಆಗ ಹೇಳಿದ ಪ್ರಾಮುಖ್ಯ ವಿಷಯಗಳು ಇಂದು ಭೂಮಿಯಾದ್ಯಂತ ನಡೆಯುತ್ತಿವೆ.—ಮತ್ತಾ. 24:3-12; ಲೂಕ 21:10-13.

ಹಾಗಾಗಿ ಜನರೆಲ್ಲರೂ ತನ್ನನ್ನು ಆರಾಧಿಸಿ, ತನಗೆ ವಿಧೇಯತೆ ತೋರಿಸುವ ಆಯ್ಕೆ ಮಾಡುವಂತೆ ಯೆಹೋವನು ಉತ್ತೇಜಿಸುತ್ತಿದ್ದಾನೆ. ವಿಧೇಯ ಜನರೆಲ್ಲರೂ ಈಗ ಉತ್ತಮ ಜೀವನವನ್ನು ಆನಂದಿಸಬೇಕು ಮತ್ತು ತಾನು ತರುವ ಹೊಸ ಲೋಕದಲ್ಲಿ ಅನೇಕ ಆಶೀರ್ವಾದಗಳನ್ನು ಪಡಕೊಳ್ಳಬೇಕು ಅನ್ನುವುದೇ ಆತನ ಬಯಕೆ. (2 ಪೇತ್ರ 3:13) ತಾನು ಕೊಟ್ಟಿರುವ ಮಾತುಗಳಲ್ಲಿ ಜನರು ನಂಬಿಕೆ ಇಡಬೇಕೆಂದು ಆತನು ಬಯಸುತ್ತಾನೆ. ಹಾಗಾಗಿ ಜೀವ ಕಾಪಾಡುವಂಥ ಸಂದೇಶವನ್ನು ತಿಳುಕೊಳ್ಳಲು ಅವರಿಗೆ ಸಹಾಯ ಮಾಡುತ್ತಿದ್ದಾನೆ. ಈ ಸಂದೇಶ ‘ರಾಜ್ಯದ ಸುವಾರ್ತೆ’ ಆಗಿದೆ. ಇದು “ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು” ಎಂದು ಯೇಸು ಮುಂತಿಳಿಸಿದ್ದನು. (ಮತ್ತಾ. 24:14) ಸತ್ಯ ಆರಾಧಕರು ಸುಮಾರು 240 ದೇಶ-ದ್ವೀಪಗಳಲ್ಲಿ ಈ “ಸಾಕ್ಷಿ” ಕೊಡುವಂತೆ ಅಥವಾ ಈ ದೈವಿಕ ಸಂದೇಶವನ್ನು ಸಾರುವಂತೆ ದೇವರು ಏರ್ಪಾಡು ಮಾಡಿದ್ದಾನೆ. ಆದಷ್ಟು ಹೆಚ್ಚು ಜನರು ಈ ಸಂದೇಶಕ್ಕೆ ಕಿವಿಗೊಟ್ಟು ಮುಂದೆ ಬರಲಿರುವ ಬಿರುಗಾಳಿಯಂಥ ನಾಶನದಿಂದ ತಪ್ಪಿಸಿಕೊಳ್ಳಬೇಕನ್ನುವುದೇ ಯೆಹೋವನ ಇಷ್ಟ.—ಚೆಫ. 1:14, 15; 2:2, 3.

ಎಚ್ಚರಿಕೆಗೆ ಕಿವಿಗೊಟ್ಟು ತಿದ್ದಿಕೊಳ್ಳಲು ಜನರಿಗೆ ಯೆಹೋವನು ಸಾಕಷ್ಟು ಸಮಯ ಕೊಡುತ್ತಾನಾ ಎಂದು ಸಂಶಯಪಡುವ ಅಗತ್ಯನೇ ಇಲ್ಲ. ಯಾಕೆಂದರೆ ಆತನು ಯಾವಾಗಲೂ ಸಮಯ ಕೊಟ್ಟಿದ್ದಾನೆ. ಹಾಗಾದರೆ, ದೇವರು ಈಗ ಕೊಟ್ಟಿರುವ ಸಮಯ ಮುಗಿಯುವುದರೊಳಗೆ ಜನರು ಆತನ ಎಚ್ಚರಿಕೆಗೆ ಕಿವಿಗೊಡುತ್ತಾರಾ? ದೇವರ ಸಂದೇಶವನ್ನು ತಿಳಿಸುತ್ತಿರುವ ನಾವು ಆದಷ್ಟು ಹೆಚ್ಚಿನ ಜನರಿಗೆ ಈ ಲೋಕದ ಅಂತ್ಯವನ್ನು ಪಾರಾಗಲು ಸಹಾಯ ಮಾಡೋಣ.