ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 42

ನೀವೇನು ಆಗುವಂತೆ ಯೆಹೋವನು ಮಾಡುತ್ತಾನೆ?

ನೀವೇನು ಆಗುವಂತೆ ಯೆಹೋವನು ಮಾಡುತ್ತಾನೆ?

“ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ [ಮನಸ್ಸು ಮಾಡುವಂತೆ ಮತ್ತು ಶಕ್ತಿ ಪಡೆಯುವಂತೆ, NW] ನಿಮ್ಮಲ್ಲಿ ಕಾರ್ಯನಡಿಸುವಾತನು ದೇವರೇ ಆಗಿದ್ದಾನೆ.”—ಫಿಲಿ. 2:13.

ಗೀತೆ 71 ಪವಿತ್ರಾತ್ಮವೆಂಬ ದೇವರ ವರ

ಕಿರುನೋಟ *

1. ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ಏನೆಲ್ಲಾ ಮಾಡುತ್ತಾನೆ?

ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ಏನು ಬೇಕಾದರೂ ಆಗುತ್ತಾನೆ. ಉದಾಹರಣೆಗೆ, ಆತನು ಬೋಧಕನಾಗುತ್ತಾನೆ, ಸಂತೈಸುವ ತಂದೆ ಆಗುತ್ತಾನೆ ಮತ್ತು ಸುವಾರ್ತೆ ತಿಳಿಸುವ ವ್ಯಕ್ತಿ ಆಗುತ್ತಾನೆ. ಆತನು ಹೀಗೆ ಇನ್ನೂ ಬೇರೆ-ಬೇರೆ ಪಾತ್ರಗಳನ್ನು ನಿರ್ವಹಿಸುತ್ತಾನೆ. (ಯೆಶಾ. 48:17; 2 ಕೊರಿಂ. 7:6; ಗಲಾ. 3:8) ಆದರೂ ಕೆಲವೊಮ್ಮೆ ತನ್ನ ಉದ್ದೇಶ ನೆರವೇರಿಸಲಿಕ್ಕೋಸ್ಕರ ಆತನು ಮನುಷ್ಯರನ್ನು ಉಪಯೋಗಿಸುತ್ತಾನೆ. (ಮತ್ತಾ. 24:14; 28:19, 20; 2 ಕೊರಿಂ. 1:3, 4) ತನ್ನ ಇಷ್ಟ ನೆರವೇರಿಸಲು ನಮ್ಮಲ್ಲಿ ಯಾರಿಗೆ ಬೇಕಾದರೂ ವಿವೇಕ ಮತ್ತು ಶಕ್ತಿ-ಸಾಮರ್ಥ್ಯ ಕೊಡುತ್ತಾನೆ. ಯೆಹೋವ ಎಂಬ ಹೆಸರಿನ ಅರ್ಥ ಇದೇ ಆಗಿದೆ ಎಂದು ಅನೇಕ ತತ್ವಜ್ಞಾನಿಗಳು ಹೇಳಿದ್ದಾರೆ.

2. (ಎ) ಯೆಹೋವನು ನಮ್ಮನ್ನು ಉಪಯೋಗಿಸುತ್ತಾನಾ ಎಂಬ ಸಂಶಯ ನಮಗೆ ಯಾಕೆ ಬರಬಹುದು? (ಬಿ) ಈ ಲೇಖನದಲ್ಲಿ ನಾವೇನನ್ನು ಕಲಿಯಲಿದ್ದೇವೆ?

ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲಿಕ್ಕೆ ನಮ್ಮನ್ನೂ ಉಪಯೋಗಿಸಬೇಕು ಎಂದು ನಾವೆಲ್ಲರೂ ಬಯಸುತ್ತೇವಲ್ವಾ? ಆದರೆ ಕೆಲವರು, ‘ಯೆಹೋವನು ನನ್ನನ್ನು ಉಪಯೋಗಿಸುತ್ತಾನಾ’ ಅಂತ ಸಂಶಯಪಡುತ್ತಾರೆ. ವೃದ್ಧರಾಗಿರುವುದರಿಂದ, ಹೆಚ್ಚು ಸೇವೆ ಮಾಡುವ ಪರಿಸ್ಥಿತಿ ಅಥವಾ ಹೆಚ್ಚು ಸಾಮರ್ಥ್ಯ ಇಲ್ಲದಿರುವುದರಿಂದ ಅವರಿಗೆ ಹಾಗನಿಸಬಹುದು. ಇನ್ನು ಕೆಲವರು ‘ನಾನು ಈಗ ಮಾಡುತ್ತಿರೋದೇ ಸಾಕು, ಇನ್ನೇನು ಪ್ರಗತಿ ಮಾಡಬೇಕಾಗಿಲ್ಲ’ ಅಂತ ನೆನಸುತ್ತಾರೆ. ಆದರೆ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ನಮಗೆ ಬೇಕಾದದ್ದನ್ನು ಕೊಡುತ್ತಾನೆ. ಅದು ಶಕ್ತಿ-ಸಾಮರ್ಥ್ಯನೇ ಆಗಿರಬಹುದು, ಮನಸ್ಸೇ ಆಗಿರಬಹುದು. ಇದನ್ನು ಆತನು ಬೈಬಲ್‌ ಕಾಲದ ಸೇವಕ-ಸೇವಕಿಯರಿಗೂ ಕೊಟ್ಟನು. ಅಂಥ ಕೆಲವರ ಉದಾಹರಣೆಗಳನ್ನು ಈಗ ನೋಡಲಿದ್ದೇವೆ. ಜೊತೆಗೆ, ಯೆಹೋವನು ನಮ್ಮನ್ನು ಉಪಯೋಗಿಸಬೇಕೆಂದರೆ ನಾವೇನು ಮಾಡಬೇಕು ಎಂದು ಸಹ ಕಲಿಯಲಿದ್ದೇವೆ.

ಯೆಹೋವನು ಕೊಡುವ ಸಹಾಯ

3. ಫಿಲಿಪ್ಪಿ 2:13​ರಲ್ಲಿ ತಿಳಿಸುವಂತೆ ಯೆಹೋವನ ಕೆಲಸ ಮಾಡಲು ನಾವು ಮನಸ್ಸು ಮಾಡುವಂತೆ ಸ್ವತಃ ಆತನೇ ನಮ್ಮನ್ನು ಹೇಗೆ ಪ್ರೇರೇಪಿಸುತ್ತಾನೆ?

ಫಿಲಿಪ್ಪಿ 2:13 ಓದಿ. * ಯೆಹೋವನ ಕೆಲಸ ಮಾಡಲು ನಾವು ಮನಸ್ಸು ಮಾಡುವಂತೆ ಸ್ವತಃ ಆತನೇ ನಮ್ಮನ್ನು ಪ್ರೇರೇಪಿಸುತ್ತಾನೆ. ಆದರೆ ಹೇಗೆ? ಉದಾಹರಣೆಗೆ, ಸಭೆಯಲ್ಲಿ ಯಾರಿಗೋ ಸಹಾಯ ಬೇಕಿದೆ ಅಥವಾ ಯಾವುದೋ ಕೆಲಸ ಆಗಬೇಕಿದೆ ಅಂತ ನಮಗೆ ಗೊತ್ತಾಗಬಹುದು. ಅಥವಾ ಸೇವೆ ಮಾಡಲು ಸಹಾಯದ ಅಗತ್ಯವಿರುವ ಯಾವುದೋ ಒಂದು ಸ್ಥಳದ ಬಗ್ಗೆ ಶಾಖೆಯಿಂದ ಬಂದಿರುವ ಪತ್ರವನ್ನು ಹಿರಿಯರು ಓದಬಹುದು. ಆಗ ನಾವು, ‘ನಾನು ಹೇಗೆ ಸಹಾಯ ಮಾಡಬಹುದು?’ ಅಂತ ಯೋಚಿಸಬಹುದು. ಅಥವಾ ನಮಗೆ ಕಷ್ಟಕರವಾದ ಒಂದು ನೇಮಕ ಸಿಕ್ಕಿದ್ದು ‘ಅದನ್ನು ಚೆನ್ನಾಗಿ ಮಾಡಲು ನನ್ನಿಂದ ಆಗುತ್ತಾ’ ಅಂತ ಯೋಚಿಸುತ್ತಿರಬಹುದು. ಅಥವಾ ಬೈಬಲಿನ ಒಂದು ಭಾಗವನ್ನು ಓದಿದ ನಂತರ ‘ಇದನ್ನು ಬೇರೆಯವರಿಗೆ ಸಹಾಯ ಮಾಡಲಿಕ್ಕಾಗಿ ನಾನು ಹೇಗೆ ಉಪಯೋಗಿಸಬಹುದು’ ಎಂದು ಯೋಚಿಸಬಹುದು. ಯೆಹೋವನು ಯಾವತ್ತೂ ನಾವು ಹೀಗೇ ಮಾಡಬೇಕು ಅಂತ ಬಲವಂತ ಮಾಡಲ್ಲ. ಆದರೆ ನಾವು ನಮ್ಮನ್ನೇ ಪರೀಕ್ಷಿಸಿಕೊಳ್ಳಲು ಮುಂದಾಗುವಾಗ ಆತನ ಸೇವೆ ಮಾಡಲು ಮನಸ್ಸು ಮಾಡುವಂತೆ ಆತನು ನಮ್ಮನ್ನು ಪ್ರೇರೇಪಿಸುತ್ತಾನೆ.

4. ಯೆಹೋವನು ನಮಗೆ ಬೇಕಾದ ಶಕ್ತಿ-ಸಾಮರ್ಥ್ಯವನ್ನು ಹೇಗೆ ಕೊಡುತ್ತಾನೆ?

ಯೆಹೋವನು ನಮಗೆ ಬೇಕಾದ ಶಕ್ತಿ-ಸಾಮರ್ಥ್ಯವನ್ನು ಸಹ ಕೊಡುತ್ತಾನೆ. (ಯೆಶಾ. 40:29) ಆತನು ಪವಿತ್ರಾತ್ಮವನ್ನು ಕೊಟ್ಟು ನಮ್ಮಲ್ಲಿ ಈಗಾಗಲೇ ಇರುವ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು. (ವಿಮೋ. 35:30-35) ಕೆಲವೊಂದು ನೇಮಕಗಳನ್ನು ಹೇಗೆ ಮಾಡಬೇಕೆಂದು ಯೆಹೋವನು ತನ್ನ ಸಂಘಟನೆಯ ಮೂಲಕ ನಮಗೆ ಕಲಿಸಬಹುದು. ಒಂದು ನೇಮಕ ಸಿಕ್ಕಿದಾಗ ಅದನ್ನು ಹೇಗೆ ಮಾಡಬೇಕೆಂದು ಗೊತ್ತಾಗದಿದ್ದರೆ ನಾವು ಬೇರೆಯವರ ಸಹಾಯ ಕೇಳಬೇಕು. ಜೊತೆಗೆ, ಉದಾರಿಯಾದ ಸ್ವರ್ಗೀಯ ತಂದೆಯ ಹತ್ತಿರನೂ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಕೊಡುವಂತೆ ಬೇಡಿಕೊಳ್ಳಬೇಕು. (2 ಕೊರಿಂ. 4:7; ಲೂಕ 11:13) ಹಿಂದಿನ ಕಾಲದಲ್ಲೂ ಆತನು ತನ್ನ ಸೇವಕರು ತನ್ನ ಚಿತ್ತ ನೆರವೇರಿಸುವುದಕ್ಕೆ ಮನಸ್ಸು ಮಾಡುವಂತೆ ಪ್ರೇರೇಪಿಸಿದ್ದಾನೆ ಮತ್ತು ಅದಕ್ಕಾಗಿ ಅವರಿಗೆ ಶಕ್ತಿ-ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಅಂಥ ಅನೇಕ ಸ್ತ್ರೀಪುರುಷರ ಉದಾಹರಣೆಗಳು ಬೈಬಲಿನಲ್ಲಿವೆ. ಅವರಲ್ಲಿ ಕೆಲವರ ಬಗ್ಗೆ ನೋಡುವಾಗ ಯೆಹೋವನು ನಮಗೂ ಅದೇ ರೀತಿ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸೋಣ.

ಯೆಹೋವನ ಸಹಾಯದಿಂದ ಸಮರ್ಥರಾದ ಪುರುಷರು

5. ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಲು ಯೆಹೋವನು ಮೋಶೆಯನ್ನು ಹೇಗೆ ಮತ್ತು ಯಾವಾಗ ಉಪಯೋಗಿಸಿದನು ಎಂಬ ವಿಷಯದಿಂದ ನಾವೇನು ಕಲಿಯುತ್ತೇವೆ?

ಯೆಹೋವನು ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡಿಸಲು ಮೋಶೆಯನ್ನು ಸಮರ್ಥನನ್ನಾಗಿ ಮಾಡಿದನು. ಆದರೆ ಯೆಹೋವನು ಅವನನ್ನು ಯಾವಾಗ ಉಪಯೋಗಿಸಿದನು? ಮೋಶೆ ‘ಈಜಿಪ್ಟಿನವರ ಸರ್ವವಿದ್ಯೆಗಳಲ್ಲಿ ಉಪದೇಶಹೊಂದಿದ’ ಸಮಯದಲ್ಲಾ? (ಅ. ಕಾ. 7:22-25) ಅಲ್ಲ, ಯೆಹೋವನು ಅವನನ್ನು ದೀನ ಮತ್ತು ಶಾಂತ ಸ್ವಭಾವದ ವ್ಯಕ್ತಿಯಾಗಿ ರೂಪಿಸಿದ ನಂತರವೇ ಉಪಯೋಗಿಸಿದನು. (ಅ. ಕಾ. 7:30, 34-36) ಇಡೀ ಐಗುಪ್ತದಲ್ಲೇ ಅತಿ ಹೆಚ್ಚು ಅಧಿಕಾರವಿದ್ದ ವ್ಯಕ್ತಿಯ ಮುಂದೆ ನಿಂತು ಮಾತಾಡುವ ಧೈರ್ಯವನ್ನು ಮೋಶೆಗೆ ಕೊಟ್ಟನು. (ವಿಮೋ. 9:13-19) ಯೆಹೋವನು ಮೋಶೆಯನ್ನು ಹೇಗೆ ಮತ್ತು ಯಾವಾಗ ಉಪಯೋಗಿಸಿದನು ಎಂಬ ವಿಷಯದಿಂದ ನಾವೇನು ಕಲಿಯುತ್ತೇವೆ? ಯೆಹೋವನು ತನ್ನ ಗುಣಗಳನ್ನು ತೋರಿಸಲು ಪ್ರಯತ್ನಿಸುವವರನ್ನು ಮತ್ತು ಬಲಕ್ಕಾಗಿ ತನ್ನನ್ನು ಆಶ್ರಯಿಸುವವರನ್ನು ಉಪಯೋಗಿಸುತ್ತಾನೆ.—ಫಿಲಿ. 4:13.

6. ರಾಜ ದಾವೀದನಿಗೆ ಸಹಾಯ ಮಾಡಲು ಯೆಹೋವನು ಬರ್ಜಿಲ್ಲೈಯನ್ನು ಉಪಯೋಗಿಸಿದ ರೀತಿಯಿಂದ ನಾವೇನನ್ನು ಕಲಿಯಬಹುದು?

ಇದಾಗಿ ನೂರಾರು ವರ್ಷಗಳ ನಂತರ ಯೆಹೋವನು ಬರ್ಜಿಲ್ಲೈಯನ್ನು ಉಪಯೋಗಿಸಿ ದಾವೀದನಿಗೆ ಸಹಾಯ ಮಾಡಿದನು. ಅದು ದಾವೀದ ಮತ್ತವನ ಜನರು ಅಬ್ಷಾಲೋಮನಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಸಮಯವಾಗಿತ್ತು. ಅವರಿಗೆ ಹಸಿವಾಗಿತ್ತು, ತುಂಬ ಸುಸ್ತಾಗಿ ಹೋಗಿದ್ದರು, ಬಾಯಾರಿಕೆಯಾಗಿತ್ತು. ಆಗ ವೃದ್ಧ ಬರ್ಜಿಲ್ಲೈ ಮತ್ತು ಕೆಲವರು ದಾವೀದನಿಗೂ ಅವನ ಜೊತೆಯಲ್ಲಿದ್ದವರಿಗೂ ಬೇಕಾದ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಕೊಡಲಿಕ್ಕಾಗಿ ತಮ್ಮ ಪ್ರಾಣಗಳನ್ನೇ ಪಣಕ್ಕೊಡ್ಡಿದರು. ಬರ್ಜಿಲ್ಲೈ, ‘ನನಗೆ ವಯಸ್ಸಾಗಿದೆ, ನನ್ನಿಂದ ಯೆಹೋವನಿಗೆ ಈಗ ಏನೂ ಪ್ರಯೋಜನ ಇಲ್ಲ’ ಅಂತ ನೆನಸಲಿಲ್ಲ. ಬದಲಿಗೆ ಸಹಾಯದ ಅಗತ್ಯವಿರುವ ದೇವಸೇವಕರಿಗಾಗಿ ತನ್ನ ಹತ್ತಿರ ಇರುವುದನ್ನು ಆತನು ಧಾರಾಳವಾಗಿ ನೀಡಿದನು. (2 ಸಮು. 17:27-29) ಇದರಿಂದ ನಾವೇನು ಕಲಿಯುತ್ತೇವೆ? ನಮಗೆಷ್ಟೇ ವಯಸ್ಸಾಗಿದ್ದರೂ ಯೆಹೋವನು ನಮ್ಮನ್ನು ಉಪಯೋಗಿಸಿ ನಮ್ಮ ಜೊತೆ ವಿಶ್ವಾಸಿಗಳ ಅಗತ್ಯಗಳನ್ನು ಪೂರೈಸಬಹುದು. ಜೀವನ ಮಾಡಲು ಬೇಕಾದ ಅಗತ್ಯ ವಿಷಯಗಳು ಸಹ ಇಲ್ಲದವರು ನಮ್ಮ ಸುತ್ತಮುತ್ತಲೂ ಇರಬಹುದು, ಬೇರೆ ದೇಶಗಳಲ್ಲೂ ಇರಬಹುದು. ಅಂಥವರಿಗೆ ನಾವು ಸಹಾಯ ಮಾಡಬಹುದು. (ಜ್ಞಾನೋ. 3:27, 28; 19:17) ಒಂದುವೇಳೆ, ಅವರಿಗೆ ನೇರವಾಗಿ ಸಹಾಯ ಮಾಡಲು ನಮ್ಮಿಂದ ಆಗದಿದ್ದರೂ ಲೋಕವ್ಯಾಪಕ ಕೆಲಸಕ್ಕಾಗಿ ನಾವು ಕಾಣಿಕೆ ನೀಡಬಹುದು. ಈ ಹಣದಿಂದ, ವಿಪತ್ತು ಅನುಭವಿಸಿದವರಿಗೆ ಪರಿಹಾರ ನೀಡಲು ಮತ್ತು ಅಗತ್ಯದಲ್ಲಿ ಇರುವವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.—2 ಕೊರಿಂ. 8:14, 15; 9:11.

7. (ಎ) ಯೆಹೋವನು ಸಿಮೆಯೋನನನ್ನು ಹೇಗೆ ಉಪಯೋಗಿಸಿದನು? (ಬಿ) ಅದರಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ?

ಯೆರೂಸಲೇಮಿನಲ್ಲಿದ್ದ ನಿಷ್ಠಾವಂತ ವೃದ್ಧ ಸಿಮೆಯೋನನಿಗೆ ಯೆಹೋವನು ಒಂದು ಮಾತು ಕೊಟ್ಟಿದ್ದನು. ಅವನು ಸಾಯುವ ಮುಂಚೆ ಮೆಸ್ಸೀಯನನ್ನು ಕಣ್ಣಾರೆ ನೋಡುತ್ತಾನೆ ಅಂತ ಹೇಳಿದ್ದನು. ಈ ಮಾತಿನಿಂದ ಸಿಮೆಯೋನನಿಗೆ ತುಂಬ ಖುಷಿಯಾಗಿರಬೇಕು. ಯಾಕೆಂದರೆ ಅವನು ಅನೇಕ ವರ್ಷಗಳಿಂದ ಮೆಸ್ಸೀಯನು ಬರುವುದಕ್ಕಾಗಿ ಕಾಯುತ್ತಿದ್ದನು. ಕೊನೆಗೂ ಒಂದು ದಿನ ಅವನ ನಂಬಿಕೆ ಮತ್ತು ತಾಳ್ಮೆಗೆ ತಕ್ಕ ಪ್ರತಿಫಲ ಸಿಕ್ಕಿತು. ಆ ದಿನ ಅವನು “ದೇವರಾತ್ಮದ ಪ್ರೇರಣೆಯಿಂದ ದೇವಾಲಯಕ್ಕೆ” ಹೋಗಿದ್ದನು. ಅಲ್ಲಿ ಅವನು ಎಳೆ ಮಗುವಾಗಿದ್ದ ಯೇಸುವನ್ನು ನೋಡಿದನು. ಆಗ ಸಿಮೆಯೋನನು, ಕ್ರಿಸ್ತನಾಗಲಿದ್ದ ಆ ಮಗುವಿನ ಬಗ್ಗೆ ಪ್ರವಾದಿಸುವಂತೆ ಯೆಹೋವನು ಅವನನ್ನು ಪ್ರೇರಿಸಿದನು. (ಲೂಕ 2:25-35) ಅದರ ನಂತರ ಅವನು ಹೆಚ್ಚು ಕಾಲ ಬದುಕಿರಲಿಕ್ಕಿಲ್ಲ. ಹಾಗಾಗಿ ಅವನಿಗೆ, ಯೇಸು ಭೂಮಿಯಲ್ಲಿ ಮಾಡುವ ಸೇವೆಯನ್ನು ನೋಡುವ ಅವಕಾಶ ಸಿಗಲಿಲ್ಲ. ಆದರೂ ಯೆಹೋವನು ತನಗೆ ಕೊಟ್ಟ ಅವಕಾಶಕ್ಕಾಗಿ ಅವನು ಕೃತಜ್ಞನಾಗಿದ್ದನು. ಮುಂದೆ ಅವನಿಗೆ ಇದೆಲ್ಲದಕ್ಕಿಂತಲೂ ಅತ್ಯುತ್ತಮ ಆಶೀರ್ವಾದ ಸಿಗಲಿದೆ. ಹೊಸಲೋಕದಲ್ಲಿ ಅವನು, ಯೇಸುವಿನ ಆಳ್ವಿಕೆಯ ಮೂಲಕ ಭೂಮಿಯಲ್ಲಿರುವ ಎಲ್ಲ ಜನಾಂಗಗಳಿಗೂ ಆಶೀರ್ವಾದ ಸಿಗುವುದನ್ನು ಕಣ್ಣಾರೆ ನೋಡಲಿದ್ದಾನೆ. (ಆದಿ. 22:18) ಇಂದು ಯೆಹೋವನು ನಮಗೆ ತನ್ನ ಸೇವೆಯಲ್ಲಿ ಯಾವುದೇ ಸುಯೋಗ ಕೊಟ್ಟರೂ ಅದಕ್ಕೆ ನಾವು ಕೃತಜ್ಞರಾಗಿರಬೇಕು.

8. ಯೆಹೋವನು ಬಾರ್ನಬನನ್ನು ಉಪಯೋಗಿಸಿದಂತೆ ನಮ್ಮನ್ನು ಸಹ ಹೇಗೆಲ್ಲಾ ಉಪಯೋಗಿಸಬಹುದು?

ಕ್ರಿ.ಶ. ಒಂದನೇ ಶತಮಾನದಲ್ಲಿ ಯೋಸೇಫನೆಂಬ ಉದಾರಿಯು ಯೆಹೋವನ ಸೇವೆಗಾಗಿ ತನ್ನನ್ನೇ ಬಿಟ್ಟುಕೊಟ್ಟನು. (ಅ. ಕಾ. 4:36, 37) ಇತರರನ್ನು ಸಂತೈಸುವುದರಲ್ಲಿ ಯೋಸೇಫನು ಎತ್ತಿದ ಕೈ. ಆದ್ದರಿಂದಲೇ ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದಿರಬೇಕು. ಬಾರ್ನಬ ಅಂದರೆ ಸಾಂತ್ವನದ ಪುತ್ರ ಎಂದರ್ಥ. ಸೌಲನು (ಪೌಲ) ಕ್ರೈಸ್ತನಾದಾಗ ಏನಾಯಿತೆಂದು ಗಮನಿಸಿ. ಹಿಂದೆ ಸೌಲನು ಕ್ರೈಸ್ತರನ್ನು ತುಂಬ ಹಿಂಸಿಸಿದ್ದರಿಂದ ಅನೇಕ ಸಹೋದರರು ಅವನೊಂದಿಗೆ ಬೆರೆಯಲು ಭಯಪಟ್ಟರು. ಆಗ ಈ ಬಾರ್ನಬನೇ ಸೌಲನ ಸಹಾಯಕ್ಕೆ ಬಂದನು. ಅದಕ್ಕೆ ಸೌಲನು ಚಿರಋಣಿಯಾಗಿ ಇದ್ದಿರಬೇಕು. (ಅ. ಕಾ. 9:21, 26-28) ನಂತರ, ಸಿರಿಯದ ಅಂತಿಯೋಕ್ಯದಲ್ಲಿದ್ದ ಸಹೋದರರಿಗೆ ಉತ್ತೇಜನದ ಅಗತ್ಯವಿದೆ ಎಂದು ತಿಳಿದಾಗ ಯೆರೂಸಲೇಮಿನಲ್ಲಿದ್ದ ಹಿರಿಯರು ಯಾರನ್ನು ಕಳುಹಿಸಿದರು ಗೊತ್ತಾ? ಬಾರ್ನಬನನ್ನೇ. ಅವರು ಸರಿಯಾದ ವ್ಯಕ್ತಿಯನ್ನೇ ಆರಿಸಿದ್ದರು. ಬಾರ್ನಬನು “ದೃಢಮನಸ್ಸಿನಿಂದ ಕರ್ತನಲ್ಲಿ ಮುಂದುವರಿಯುವಂತೆ ಅವರೆಲ್ಲರನ್ನು ಉತ್ತೇಜಿಸಿದನು” ಎನ್ನುತ್ತದೆ ಬೈಬಲ್‌. (ಅ. ಕಾ. 11:22-24) ಇಂದು ನಾವು ಸಹ ನಮ್ಮ ಸಹೋದರ-ಸಹೋದರಿಯರಿಗೆ ಸಾಂತ್ವನ ನೀಡಲು ಯೆಹೋವನು ನಮಗೆ ಸಹಾಯಮಾಡುತ್ತಾನೆ. ಉದಾಹರಣೆಗೆ, ಪ್ರಿಯರ ಸಾವಿನ ನೋವಿನಲ್ಲಿ ಇರುವವರನ್ನು ಸಂತೈಸಲು ಯೆಹೋವನು ನಮ್ಮನ್ನು ಉಪಯೋಗಿಸಬಹುದು. ಆರೋಗ್ಯ ಸಮಸ್ಯೆ ಅಥವಾ ಖಿನ್ನತೆ ಇರುವವರನ್ನು ಭೇಟಿ ಮಾಡಿ ಇಲ್ಲವೆ ಫೋನ್‌ ಮಾಡಿ ದಯೆಯಿಂದ ಮಾತಾಡುವಂತೆ ಯೆಹೋವನು ನಮ್ಮನ್ನು ಪ್ರೇರಿಸಬಹುದು. ಯೆಹೋವನು ಬಾರ್ನಬನನ್ನು ಉಪಯೋಗಿಸಿದಂತೆ ನಿಮ್ಮನ್ನೂ ಉಪಯೋಗಿಸಲು ಬಿಟ್ಟುಕೊಡುತ್ತೀರಾ?—1 ಥೆಸ. 5:14.

9. ಸಭೆಯಲ್ಲಿರುವವರನ್ನು ಚೆನ್ನಾಗಿ ಪರಿಪಾಲಿಸಲು ಯೆಹೋವನು ವಸಿಲಿಗೆ ಸಹಾಯ ಮಾಡಿದ ರೀತಿಯಿಂದ ನಾವೇನು ಕಲಿಯುತ್ತೇವೆ?

ಯೆಹೋವನು ವಸಿಲಿ ಎಂಬ ಸಹೋದರನಿಗೆ ಸಭೆಯಲ್ಲಿರುವವರನ್ನು ಚೆನ್ನಾಗಿ ಪರಿಪಾಲಿಸಲು ಸಹಾಯ ಮಾಡಿದನು. ಹಿರಿಯನಾಗಿ ನೇಮಕ ಪಡೆದಾಗ ವಸಿಲಿಗೆ 26 ವರ್ಷ. ಅವನಿಗೆ ಅನುಭವ ಇಲ್ಲದಿದ್ದರಿಂದ, ಸಭೆಯಲ್ಲಿರುವವರಿಗೆ ಆಧ್ಯಾತ್ಮಿಕ ಸಹಾಯ ಮಾಡುವ ಅರ್ಹತೆ ತನಗಿಲ್ಲ ಎಂದು ನೆನಸುತ್ತಿದ್ದನು. ಅದರಲ್ಲೂ ತುಂಬ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ತನ್ನಿಂದಾಗಲ್ಲ ಅಂತ ಅಂದುಕೊಳ್ಳುತ್ತಿದ್ದನು. ತುಂಬ ವರ್ಷಗಳಿಂದ ಹಿರಿಯರಾಗಿದ್ದ ಸಹೋದರರು ಅವನಿಗೆ ಒಳ್ಳೇ ತರಬೇತಿ ನೀಡಿದರು. ಮಾತ್ರವಲ್ಲ, ರಾಜ್ಯ ಶುಶ್ರೂಷಾ ಶಾಲೆಯಲ್ಲೂ ಅವನಿಗೆ ತರಬೇತಿ ಸಿಕ್ಕಿತು. ವಸಿಲಿ ಸಹ ಪ್ರಗತಿ ಮಾಡಲು ತುಂಬ ಪ್ರಯತ್ನಿಸಿದನು. ಇದಕ್ಕಾಗಿ ಅವನು ಚಿಕ್ಕ-ಚಿಕ್ಕ ಗುರಿಗಳ ಪಟ್ಟಿಮಾಡಿದನು. ಒಂದೊಂದೇ ಗುರಿಯನ್ನು ತಲುಪುತ್ತಾ ಹೋದ ಹಾಗೆ ಅವನ ಆತ್ಮವಿಶ್ವಾಸ ಹೆಚ್ಚಾಗುತ್ತಾ ಹೋಯಿತು. “ಹಿಂದೆ ನಾನು ಏನು ಮಾಡೋಕೆ ಭಯ ಪಡ್ತಿದ್ದೆನೋ ಈಗ ಅದೇ ಕೆಲಸ ಮಾಡುವಾಗ ತುಂಬ ಸಂತೋಷ ಸಿಗುತ್ತೆ. ಯೆಹೋವನ ಸಹಾಯದಿಂದ ಸೂಕ್ತ ವಚನವನ್ನು ಕಂಡುಹಿಡಿದು ಸಭೆಯಲ್ಲಿರುವ ಸಹೋದರ ಸಹೋದರಿಯರಿಗೆ ಸಾಂತ್ವನ ನೀಡುವಾಗ ನನಗೆ ತೃಪ್ತಿ ಆಗುತ್ತೆ” ಎಂದವನು ಹೇಳುತ್ತಾನೆ. ವಸಿಲಿಯಂತೆ ನೀವು ಕೂಡ ಯೆಹೋವನು ನಿಮ್ಮನ್ನು ಉಪಯೋಗಿಸುವಂತೆ ಬಿಟ್ಟುಕೊಡುವುದಾದರೆ ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಯೆಹೋವನೇ ನಿಮಗೆ ಕೊಡುತ್ತಾನೆ.

ಯೆಹೋವನ ಸಹಾಯದಿಂದ ಸಮರ್ಥರಾದ ಸ್ತ್ರೀಯರು

10. (ಎ) ಅಬೀಗೈಲಳು ಏನು ಮಾಡಿದಳು? (ಬಿ) ಅವಳಿಂದ ನೀವೇನನ್ನು ಕಲಿಯುತ್ತೀರಿ?

10 ದಾವೀದ ಮತ್ತು ಅವನ ಸಂಗಡಿಗರು ರಾಜ ಸೌಲನ ಕೈಯಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗ ಅವರಿಗೆ ಒಮ್ಮೆ ಸಹಾಯ ಬೇಕಾಯಿತು. ಆಗ ದಾವೀದನ ಸಂಗಡಿಗರು ಶ್ರೀಮಂತ ಇಸ್ರಾಯೇಲ್ಯನಾಗಿದ್ದ ನಾಬಾಲನ ಹತ್ತಿರ ಹೋಗಿ ತಮಗೆ ಸ್ವಲ್ಪ ಆಹಾರವನ್ನು ಕೊಡುವಂತೆ ಕೇಳಿಕೊಂಡರು. ಅವರು ತುಂಬ ಸಮಯದಿಂದ ನಾಬಾಲನ ಕುರಿಹಿಂಡನ್ನು ಸಂರಕ್ಷಿಸಿದ್ದರು. ಹಾಗಾಗಿ, ತಾವು ಅವನ ಹತ್ತಿರ ಸಹಾಯ ಕೇಳಬಹುದು ಎಂದವರು ನೆನಸಿದರು. ಆದರೆ ಸ್ವಾರ್ಥಿ ನಾಬಾಲನು ಆಹಾರ ಕೊಡಲು ಸುತರಾಂ ಒಪ್ಪಲಿಲ್ಲ. ಇದರಿಂದಾಗಿ ದಾವೀದನು ಕೋಪದಿಂದ ರೊಚ್ಚಿಗೆದ್ದನು. ನಾಬಾಲ ಮತ್ತವನ ಮನೆಯಲ್ಲಿರುವ ಎಲ್ಲಾ ಪುರುಷರನ್ನು ಕೊಂದುಬಿಡಬೇಕೆಂದು ನಿರ್ಧರಿಸಿದನು. (1 ಸಮು. 25:3-13, 22) ಆಗ ನಾಬಾಲನ ರೂಪವತಿ ಹೆಂಡತಿ ಅಬೀಗೈಲಳು ವಿವೇಚನೆಯಿಂದ ಕೆಲಸ ಮಾಡಿದಳು. ಅವಳು ಧೈರ್ಯದಿಂದ ದಾವೀದನ ಮುಂದೆ ಹೋಗಿ ಅವನ ಕಾಲಿಗೆ ಬಿದ್ದು, ‘ನೀವು ಪ್ರತೀಕಾರ ತೀರಿಸಬೇಡಿ, ನಿಮ್ಮ ತಲೆ ಮೇಲೆ ರಕ್ತಾಪರಾಧ ಹಾಕಿಕೊಳ್ಳಬೇಡಿ’ ಎಂದು ಬೇಡಿದಳು. ಜಾಣೆಯಾಗಿದ್ದ ಅವಳು ಆ ಸಮಸ್ಯೆಯನ್ನು ಯೆಹೋವನೇ ಬಗೆಹರಿಸುವಂತೆ ಬಿಟ್ಟುಕೊಡಲು ಹೇಳಿದಳು. ಅಬೀಗೈಲಳು ತಗ್ಗಿಸಿಕೊಂಡು ವಿವೇಚನೆಯಿಂದ ನಡಕೊಂಡದ್ದನ್ನು ನೋಡಿ ದಾವೀದನು ಮನಸ್ಸು ಬದಲಾಯಿಸಿಕೊಂಡನು. ಯೆಹೋವನೇ ಆಕೆಯನ್ನು ಕಳುಹಿಸಿದ್ದು ಎಂದು ಅವನು ಅರ್ಥಮಾಡಿಕೊಂಡನು. (1 ಸಮು. 25:23-28, 32-34) ಅಬೀಗೈಲಳು ದೀನತೆ, ಧೈರ್ಯ ಮತ್ತು ವಿವೇಚನೆ ಮುಂತಾದ ಒಳ್ಳೇ ಗುಣಗಳನ್ನು ಬೆಳೆಸಿಕೊಂಡದ್ದರಿಂದ ಯೆಹೋವನು ಆಕೆಯನ್ನು ಉಪಯೋಗಿಸಲು ಸಾಧ್ಯವಾಯಿತು. ಯೆಹೋವನು ಇಂದು ಸಹ ವಿವೇಚನೆಯನ್ನು ಬೆಳೆಸಿಕೊಳ್ಳುವ ಮತ್ತು ಪ್ರೀತಿಯಿಂದ ನೋಯಿಸದೆ ಸಲಹೆ ನೀಡುವ ಕ್ರೈಸ್ತ ಸಹೋದರಿಯರನ್ನು ಉಪಯೋಗಿಸುತ್ತಾನೆ. ಆತನು ಅವರ ಮೂಲಕ ಅವರ ಕುಟುಂಬಗಳನ್ನು ಮತ್ತು ಸಭೆಯಲ್ಲಿರುವ ಇತರರನ್ನು ಬಲಪಡಿಸುತ್ತಾನೆ.—ಜ್ಞಾನೋ. 24:3; ತೀತ 2:3-5.

11. (ಎ) ಶಲ್ಲೂಮನ ಮಕ್ಕಳು ಏನು ಮಾಡಿದರು? (ಬಿ) ಇಂದು ಯಾರು ಅವರಂತೆ ಕೆಲಸ ಮಾಡುತ್ತಿದ್ದಾರೆ?

11 ಇದಾಗಿ ನೂರಾರು ವರ್ಷಗಳ ನಂತರ ಯೆರೂಸಲೇಮಿನ ಗೋಡೆಗಳನ್ನು ಕಟ್ಟಲು ಯೆಹೋವನು ಉಪಯೋಗಿಸಿದ ಜನರಲ್ಲಿ ಶಲ್ಲೂಮನ ಹೆಣ್ಣುಮಕ್ಕಳೂ ಇದ್ದರು. (ನೆಹೆ. 2:20; 3:12) ತಂದೆ ಒಬ್ಬ ಉನ್ನತ ಅಧಿಕಾರಿಯಾಗಿದ್ದರೂ ಆ ಹೆಣ್ಣು ಮಕ್ಕಳು ತುಂಬ ಕಷ್ಟದ, ಅಪಾಯಕರ ಕೆಲಸ ಮಾಡಲು ಮುಂದೆ ಬಂದರು. (ನೆಹೆ. 4:15-18) ಆದರೆ ತೆಕೋವದ ಶ್ರೀಮಂತ ಪುರುಷರು ಆ ಕೆಲಸಕ್ಕೆ “ಹೆಗಲನ್ನು ಕೊಡಲಿಲ್ಲ.” (ನೆಹೆ. 3:5) ಕೇವಲ 52 ದಿನಗಳಲ್ಲೇ ಗೋಡೆ ನಿರ್ಮಾಣ ಕೆಲಸ ಪೂರ್ತಿಯಾದಾಗ ಶಲ್ಲೂಮನ ಹೆಣ್ಣು ಮಕ್ಕಳಿಗೆ ಎಷ್ಟು ಖುಷಿ ಆಗಿದ್ದಿರಬೇಕು! (ನೆಹೆ. 6:15) ಇಂದು ಸಹ ಅನೇಕ ಸಹೋದರಿಯರು ಒಂದು ವಿಶೇಷ ರೀತಿಯಲ್ಲಿ ಯೆಹೋವನ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರು ಯೆಹೋವನ ಆರಾಧನೆಗೆ ಸಂಬಂಧಿಸಿದ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಚೆನ್ನಾಗಿ ಮಾಡಿ ಮುಗಿಸಲು ಕೌಶಲ, ಹುರುಪು ಮತ್ತು ನಿಷ್ಠೆಯಿರುವ ಆ ಸಹೋದರಿಯರು ತುಂಬನೇ ಅಗತ್ಯ.

12. ತಬಿಥಾಳಂತೆ ನಮ್ಮನ್ನು ಸಹ ಯೆಹೋವನು ಹೇಗೆ ಉಪಯೋಗಿಸಬಹುದು?

12 ಯೆಹೋವನು ತಬಿಥಾಳನ್ನು ಸದಾ ‘ಸತ್ಕ್ರಿಯೆ, ದಾನಧರ್ಮ’ ಮಾಡುವಂತೆ ಪ್ರೇರೇಪಿಸಿದನು. (ಅ. ಕಾ. 9:36) ಮುಖ್ಯವಾಗಿ ವಿಧವೆಯರಿಗೆ ಸಹಾಯ ಮಾಡುವಂತೆ ಪ್ರೇರೇಪಿಸಿದನು. ಅವಳು ಉದಾರತೆ, ದಯೆ ತೋರಿಸೋದರಲ್ಲಿ ಹೆಸರುವಾಸಿಯಾಗಿದ್ದಳು. ಹಾಗಾಗಿ ಅವಳು ಸತ್ತಾಗ ಅನೇಕರು ತುಂಬ ಗೋಳಾಡಿದರು. ಆದರೆ ಪೇತ್ರ ಅವಳನ್ನು ಪುನರುತ್ಥಾನ ಮಾಡಿದಾಗ ಅವರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. (ಅ. ಕಾ. 9:39-41) ತಬಿಥಾಳಿಂದ ನಾವೇನು ಕಲಿಯಬಹುದು? ವೃದ್ಧರಾಗಿರಲಿ ಯುವಕರಾಗಿರಲಿ, ಪುರುಷರಾಗಿರಲಿ ಸ್ತ್ರೀಯರಾಗಿರಲಿ ನಾವೆಲ್ಲರೂ ನಮ್ಮ ಸಹೋದರ ಸಹೋದರಿಯರಿಗೆ ಬೇಕಾದ ಸಹಾಯ ಮಾಡಲು ಸಾಧ್ಯ.—ಇಬ್ರಿ. 13:16.

13. (ಎ) ರೂತ್‌ ಎಂಬ ಸಹೋದರಿಯನ್ನು ಯೆಹೋವನು ಹೇಗೆ ಉಪಯೋಗಿಸಿದನು? (ಬಿ) ಆಕೆ ಏನು ಹೇಳುತ್ತಾಳೆ?

13 ರೂತ್‌ ಎಂಬ ಸಹೋದರಿಗೆ ತುಂಬ ನಾಚಿಕೆ ಸ್ವಭಾವವಿತ್ತು. ಆದರೆ ಆಕೆಗೆ ಮಿಷನರಿ ಆಗಬೇಕೆಂಬ ಆಸೆ ಇತ್ತು. ಚಿಕ್ಕವಳಿದ್ದಾಗ ಆಕೆ ಹುರುಪಿನಿಂದ ಮನೆಯಿಂದ ಮನೆಗೆ ಹೋಗಿ ಕರಪತ್ರಗಳನ್ನು ಕೊಡುತ್ತಿದ್ದಳು. ಹೀಗೆ ಕರಪತ್ರ ಕೊಡುವ ಕೆಲಸ ಅವಳಿಗೆ ತುಂಬ ಇಷ್ಟ ಆಗ್ತಿತ್ತು. ಆದರೆ, ಒಬ್ಬರ ಮನೆಗೆ ಹೋಗಿ ಅವರ ಹತ್ತಿರ ದೇವರ ರಾಜ್ಯದ ಬಗ್ಗೆ ಮಾತಾಡೋಕೆ ತುಂಬ ಕಷ್ಟ ಆಗ್ತಿತ್ತು. ಅವಳು ನಾಚಿಕೆ ಸ್ವಭಾವದವಳಾಗಿದ್ದರೂ 18ನೇ ವಯಸ್ಸಿಗೇ ಪಯನೀಯರ್‌ ಸೇವೆ ಆರಂಭಿಸಿದಳು. 1946ರಲ್ಲಿ ಅವಳು ಗಿಲ್ಯಡ್‌ ಶಾಲೆಗೆ ಹೋದಳು. ನಂತರ ಹವಾಯಿ ಮತ್ತು ಜಪಾನ್‌ ದೇಶಗಳಲ್ಲಿ ಸೇವೆ ಮಾಡಿದಳು. ಅಲ್ಲಿ ಎಷ್ಟೋ ಜನರಿಗೆ ಸುವಾರ್ತೆ ಸಾರಲು ಯೆಹೋವನು ಅವಳನ್ನು ಉಪಯೋಗಿಸಿದನು. ಹೀಗೆ 80 ವರ್ಷ ಸೇವೆಯಲ್ಲಿ ಕಳೆದ ನಂತರ ಆಕೆ ಹೀಗೆ ಹೇಳುತ್ತಾಳೆ: “ಯೆಹೋವನು ನನಗೆ ಯಾವಾಗಲೂ ಬಲ ಕೊಟ್ಟಿದ್ದಾನೆ. ನಾಚಿಕೆ ಸ್ವಭಾವವನ್ನು ಮೆಟ್ಟಿನಿಲ್ಲೋಕೆ ನನಗೆ ಸಹಾಯ ಮಾಡಿದ್ದಾನೆ. ಆತನ ಮೇಲೆ ಭರವಸೆ ಇಡುವ ಯಾರನ್ನೇ ಆದರೂ ಆತನು ಉಪಯೋಗಿಸುತ್ತಾನೆ.”

ಯೆಹೋವನು ನಿಮ್ಮನ್ನು ಉಪಯೋಗಿಸುವಂತೆ ಬಿಡಿ

14. ಯೆಹೋವನು ನಮ್ಮನ್ನು ಉಪಯೋಗಿಸಬೇಕೆಂದರೆ ನಾವೇನು ಮಾಡಬೇಕು ಅಂತ ಕೊಲೊಸ್ಸೆ 1:29 ಹೇಳುತ್ತದೆ?

14 ಯೆಹೋವನು ಹಿಂದಿನ ಕಾಲದಿಂದಲೂ ತನ್ನ ಸೇವಕರನ್ನು ಅನೇಕ ವಿಧಗಳಲ್ಲಿ ಉಪಯೋಗಿಸಿದ್ದಾನೆ. ಆತನು ನಮ್ಮನ್ನು ಯಾವ ರೀತಿಯಲ್ಲಿ ಉಪಯೋಗಿಸಬಹುದು? ಅದು ನಾವು ಪ್ರಯಾಸಪಟ್ಟು ದುಡಿಯಲು ಎಷ್ಟರ ಮಟ್ಟಿಗೆ ಸಿದ್ಧರಿದ್ದೇವೆ ಅನ್ನುವುದರ ಮೇಲೆ ಹೊಂದಿಕೊಂಡಿದೆ. (ಕೊಲೊಸ್ಸೆ 1:29 ಓದಿ.) ಯೆಹೋವನು ನಮ್ಮನ್ನು ಉಪಯೋಗಿಸುವಂತೆ ನಾವು ಬಿಟ್ಟುಕೊಟ್ಟರೆ ಉತ್ತಮವಾಗಿ ಸಾರಲು, ಬೋಧಿಸಲು, ಬೇರೆಯವರನ್ನು ಒಳ್ಳೇ ರೀತಿ ಸಂತೈಸಲು, ಚೆನ್ನಾಗಿ ಕೆಲಸ ಮಾಡಲು, ಒಳ್ಳೇ ಸ್ನೇಹಿತರಾಗಲು ಆತನು ನಮಗೆ ಸಹಾಯ ಮಾಡುತ್ತಾನೆ ಅಥವಾ ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ಇನ್ಯಾವುದೇ ರೀತಿಯಲ್ಲೂ ಉಪಯೋಗಿಸುತ್ತಾನೆ.

15. ಒಂದನೇ ತಿಮೊಥೆಯ 4:12, 15​ರ ಪ್ರಕಾರ ಯುವ ಸಹೋದರರು ಯಾವುದಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು?

15 ಯುವ ಸಹೋದರರೇ ನೀವೇನು ಮಾಡಬಹುದು ಅಂತ ನಿಮಗನಿಸುತ್ತೆ? ಸಹಾಯಕ ಸೇವಕರಾಗಿ ಸಭೆಯಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ನಿಮ್ಮ ತರ ಶಕ್ತಿ ಇರುವ ಯುವ ಸಹೋದರರ ಅಗತ್ಯ ಇದೆ. ಅನೇಕ ಸಭೆಗಳಲ್ಲಿ ಹಿರಿಯರಿಗಿಂತ ಸಹಾಯಕ ಸೇವಕರೇ ಕಡಿಮೆ ಇದ್ದಾರೆ. ಹಾಗಾಗಿ, ಯುವಜನರೇ, ನೀವು ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬರಬಹುದು ಅಲ್ವಾ? ಕೆಲವು ಸಹೋದರರು, “ನಾನು ಪ್ರಚಾರಕನಾಗೇ ಇರುತ್ತೀನಿ” ಅಂತ ಹೇಳುತ್ತಾರೆ. ನಿಮಗೂ ಇದೇ ರೀತಿ ಅನಿಸುತ್ತಾ? ಹಾಗಾದರೆ, ಸಹಾಯಕ ಸೇವಕರಾಗಬೇಕೆಂಬ ಬಯಕೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿ. ಮಾತ್ರವಲ್ಲ, ಆತನ ಸೇವೆಯಲ್ಲಿ ನಿಮ್ಮಿಂದ ಆಗುವುದನ್ನೆಲ್ಲ ಮಾಡಲು ಬೇಕಾದ ಸಾಮರ್ಥ್ಯವನ್ನು ನೀಡುವಂತೆಯೂ ಕೇಳಿಕೊಳ್ಳಿ. (ಪ್ರಸಂ. 12:1) ಸಭೆಯಲ್ಲಿ ನಿಮ್ಮ ಸಹಾಯದ ಅಗತ್ಯ ತುಂಬನೇ ಇದೆ.—1 ತಿಮೊಥೆಯ 4:12, 15 ಓದಿ.

16. ನಾವು ಯೆಹೋವನ ಹತ್ತಿರ ಯಾವುದಕ್ಕಾಗಿ ಪ್ರಾರ್ಥಿಸಬೇಕು ಮತ್ತು ಯಾಕೆ?

16 ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ನೀವೇನಾಗಬೇಕು ಎಂದು ಬಯಸುತ್ತಾನೋ ಅದಾಗುವಂತೆ ಮಾಡಬಲ್ಲನು. ಆದ್ದರಿಂದ ಆತನ ಕೆಲಸ ಮಾಡಲು ಬೇಕಾದ ಮನಸ್ಸು ಮತ್ತು ಶಕ್ತಿ-ಸಾಮರ್ಥ್ಯವನ್ನು ಕೊಡುವಂತೆ ಆತನಲ್ಲಿ ಕೇಳಿಕೊಳ್ಳಿ. ನೀವು ಯಾವುದೇ ವಯಸ್ಸಿನವರಾಗಿರಲಿ, ನಿಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಯೆಹೋವನಿಗೆ ಮಹಿಮೆ ಕೊಡಲಿಕ್ಕಾಗಿ ಉಪಯೋಗಿಸಿ. (ಪ್ರಸಂ. 9:10) ‘ನನಗೆ ಅರ್ಹತೆ ಇಲ್ಲ’ ಎಂಬ ಭಾವನೆಯಿಂದಾಗಿ ಯೆಹೋವನ ಸೇವೆ ಹೆಚ್ಚು ಮಾಡುವ ಅವಕಾಶಗಳು ಕೈಜಾರಿ ಹೋಗಲು ಬಿಡಬೇಡಿ. ನಮ್ಮ ಸ್ವರ್ಗೀಯ ತಂದೆಗೆ ಸಿಗಬೇಕಾಗಿರುವ ಮಹಿಮೆಯನ್ನು ಕೊಡಲು ನಮ್ಮಿಂದ ಆಗುವುದೆಲ್ಲ ಮಾಡುವುದು ನಮಗೆ ಸಿಕ್ಕಿರುವ ಸುಯೋಗ ಅಂತನೇ ಹೇಳಬಹುದು.

ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?

^ ಪ್ಯಾರ. 5 ಯೆಹೋವನ ಸೇವೆ ಹೆಚ್ಚು ಮಾಡಕ್ಕೆ ಆಗ್ತಾ ಇಲ್ಲ ಅಂತ ನಿಮಗನಿಸುತ್ತಾ? ಅಥವಾ ಯೆಹೋವನು ನಿಮ್ಮನ್ನು ಈಗಲೂ ಉಪಯೋಗಿಸುತ್ತಾನಾ ಅಂತ ಯೋಚಿಸುತ್ತಿದ್ದೀರಾ? ಅಥವಾ ಈಗ ಮಾಡುತ್ತಿರುವ ಸೇವೆನೇ ಸಾಕು, ಇನ್ನೇನು ಮಾಡುವ ಅವಶ್ಯಕತೆ ಇಲ್ಲ ಅಂತ ಅನಿಸುತ್ತಾ? ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ನಾವೇನು ಆಗಬೇಕೋ ಅದಾಗಲು ಬೇಕಾದ ಮನಸ್ಸು ಮತ್ತು ಶಕ್ತಿ-ಸಾಮರ್ಥ್ಯವನ್ನು ನಮಗೆ ಹೇಗೆಲ್ಲಾ ಕೊಡುತ್ತಾನೆ ಎಂದು ಈ ಲೇಖನದಲ್ಲಿ ನೋಡಲಿದ್ದೇವೆ.

^ ಪ್ಯಾರ. 3 ಪೌಲನು ಈ ಮಾತನ್ನು ಒಂದನೇ ಶತಮಾನದ ಕ್ರೈಸ್ತರಿಗೆ ಬರೆದರೂ ಅದು ಯೆಹೋವನ ಎಲ್ಲಾ ಸೇವಕರಿಗೂ ಅನ್ವಯಿಸುತ್ತದೆ.