ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 41

‘ಮಹಾ ಸಂಕಟದಲ್ಲಿ’ ನಂಬಿಗಸ್ತರಾಗಿರಲು ನಾವು ಏನು ಮಾಡಬೇಕು?

‘ಮಹಾ ಸಂಕಟದಲ್ಲಿ’ ನಂಬಿಗಸ್ತರಾಗಿರಲು ನಾವು ಏನು ಮಾಡಬೇಕು?

“ಭಕ್ತರೇ [ನಿಷ್ಠಾವಂತರೇ, NW] ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ. ಆತನು ನಂಬಿಗಸ್ತರನ್ನು ಕಾಪಾಡುತ್ತಾನೆ.”—ಕೀರ್ತ. 31:23.

ಗೀತೆ 154 ತಾಳಿಕೊಳ್ಳುತ್ತಾ ಇರೋಣ

ಕಿರುನೋಟ *

1-2. (ಎ) ಅತೀ ಶೀಘ್ರದಲ್ಲೇ ಲೋಕದ ಮುಖಂಡರು ಯಾವ ಘೋಷಣೆ ಮಾಡಲಿದ್ದಾರೆ? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೋಬೇಕಿದೆ?

ಬೈಬಲಿನಲ್ಲಿ ತಿಳಿಸುವಂತೆ ಲೋಕದ ಮುಖಂಡರು “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯನ್ನು ಮಾಡಿದ್ದಾರೆ ಎಂದು ಊಹಿಸಿ. ಹಿಂದೆಂದೂ ಲೋಕದಲ್ಲಿ ಇಷ್ಟೊಂದು ಶಾಂತಿ ಇರಲಿಲ್ಲ ಅಂತ ಅವರು ಕೊಚ್ಚಿಕೊಳ್ಳಬಹುದು. ಅವರು ಲೋಕದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಅಂತ ನಾವೂ ನಂಬಬೇಕೆಂದು ಬಯಸುತ್ತಾರೆ. ಆದರೆ ಆ ಘೋಷಣೆಯ ನಂತರ ನಡೆಯಲಿರುವ ವಿಷಯವನ್ನು ತಡೆಯಲು ಅವರಿಂದ ಆಗಲ್ಲ! ಯಾಕೆ? ಯಾಕೆಂದರೆ ಬೈಬಲ್‌ ಪ್ರವಾದನೆಗನುಸಾರ “ಅವರ ಮೇಲೆ ನಾಶನವು . . . ಫಕ್ಕನೆ ಬರುವುದು ಮತ್ತು ಅವರು ಹೇಗೂ ತಪ್ಪಿಸಿಕೊಳ್ಳಲಾರರು.”—1 ಥೆಸ. 5:3.

ಹಾಗಾಗಿ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ನಾವು ಉತ್ತರ ತಿಳ್ಕೋಬೇಕಿದೆ: ‘ಮಹಾ ಸಂಕಟದ’ ಸಮಯದಲ್ಲಿ ಏನು ನಡೆಯುತ್ತದೆ? ಆ ಸಮಯದಲ್ಲಿ ನಾವು ಏನು ಮಾಡಬೇಕಂತ ಯೆಹೋವನು ಬಯಸುತ್ತಾನೆ? ಮಹಾ ಸಂಕಟದಲ್ಲಿ ನಂಬಿಗಸ್ತರಾಗಿ ಉಳಿಯಲು ನಾವು ಈಗಲೇ ಹೇಗೆ ತಯಾರಾಗಬಹುದು?—ಮತ್ತಾ. 24:21.

‘ಮಹಾ ಸಂಕಟದ’ ಸಮಯದಲ್ಲಿ ಏನು ನಡೆಯುತ್ತದೆ?

3. ಪ್ರಕಟನೆ 17:5, 15-18​ರ ಪ್ರಕಾರ ದೇವರು ಹೇಗೆ ‘ಮಹಾ ಬಾಬೆಲನ್ನು’ ನಾಶ ಮಾಡುತ್ತಾನೆ?

ಪ್ರಕಟನೆ 17:5, 15-18 ಓದಿ. ಮೊದಲಿಗೆ, “ಮಹಾ ಬಾಬೆಲ್‌” ಮಣ್ಣುಪಾಲಾಗುತ್ತದೆ! ಇದನ್ನು ತಡೆಯಲು ಲೋಕದ ಮುಖಂಡರಿಗೆ ಆಗಲ್ಲ. ಯಾಕೆಂದರೆ ‘ದೇವರು ತನ್ನ ಯೋಚನೆಯನ್ನು ಕಾರ್ಯರೂಪಕ್ಕೆ ತರುವಂತೆ ಅವರ ಹೃದಯಗಳಲ್ಲಿ ಹಾಕುತ್ತಾನೆ.’ ದೇವರ ಯೋಚನೆ ಏನಾಗಿದೆ? ಸುಳ್ಳು ಕ್ರೈಸ್ತರನ್ನೂ * ಸೇರಿಸಿ ಎಲ್ಲಾ ಸುಳ್ಳು ಧರ್ಮಗಳನ್ನು ನಾಶ ಮಾಡುವುದೇ ದೇವರ ಯೋಚನೆಯಾಗಿದೆ. ಈ ಯೋಚನೆಯನ್ನು ದೇವರು ವಿಶ್ವಸಂಸ್ಥೆಯನ್ನು ಬೆಂಬಲಿಸುವ ಎಲ್ಲಾ ಮಾನವ ಸರಕಾರಗಳ “ಹೃದಯಗಳಲ್ಲಿ” ಹಾಕುತ್ತಾನೆ. ಬೈಬಲಿನಲ್ಲಿ ವಿಶ್ವಸಂಸ್ಥೆಯನ್ನು ‘ಕಡುಗೆಂಪು ಬಣ್ಣದ ಕಾಡುಮೃಗಕ್ಕೆ’ ಮತ್ತು ಅದನ್ನು ಬೆಂಬಲಿಸುವ ಸರಕಾರಗಳನ್ನು ಆ ಮೃಗದ ‘ಹತ್ತು ಕೊಂಬುಗಳಿಗೆ’ ಸೂಚಿಸಲಾಗಿದೆ. (ಪ್ರಕ. 17:3, 11-13; 18:8) ಯಾವಾಗ ಈ ಮಾನವ ಸರ್ಕಾರಗಳು ಸುಳ್ಳು ಧರ್ಮಗಳ ವಿರುದ್ಧ ದಾಳಿ ಮಾಡುತ್ತವೋ ಆಗ ಮಹಾ ಸಂಕಟ ಶುರುವಾಗುತ್ತದೆ. ದಿಢೀರನೆ ನಡೆಯುವ, ತುಂಬ ಭಯಾನಕವಾದ ಈ ಘಟನೆ ಭೂಮಿಯಲ್ಲಿರುವ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ.

4. (ಎ) ಸುಳ್ಳು ಧರ್ಮದ ಮೇಲೆ ತಾವು ಮಾಡುವ ದಾಳಿಗೆ ಲೋಕದ ಮುಖಂಡರು ಯಾವ ಕಾರಣಗಳನ್ನು ಕೊಡಬಹುದು? (ಬಿ) ಆ ಧರ್ಮಗಳಲ್ಲಿ ಸದಸ್ಯರಾಗಿದ್ದವರು ಏನು ಮಾಡಬಹುದು?

ಲೋಕದ ಮುಖಂಡರು ಮಹಾ ಬಾಬೆಲ್‌ ಮೇಲೆ ದಾಳಿ ಮಾಡಲು ಯಾವ ಕಾರಣ ಕೊಡುತ್ತಾರೋ ನಮಗೆ ಗೊತ್ತಿಲ್ಲ. ಧರ್ಮಗಳಿಂದಾಗಿ ಲೋಕದಲ್ಲಿ ಶಾಂತಿ ಇಲ್ಲ ಮತ್ತು ಅವು ಸರ್ಕಾರಗಳ ವಿಷಯದಲ್ಲಿ ಮೂಗು ತೂರಿಸುತ್ತವೆ ಅಂತ ಅವರು ಕಾರಣ ಕೊಡಬಹುದು. ಧಾರ್ಮಿಕ ಸಂಘಟನೆಗಳು ಹಣ-ಆಸ್ತಿಯನ್ನೆಲ್ಲಾ ಕೊಳ್ಳೆ ಹೊಡೆದಿವೆ ಎಂದು ಸಹ ಅವರು ಹೇಳಬಹುದು. (ಪ್ರಕ. 18:3, 7) ಸರ್ಕಾರಗಳು ಸುಳ್ಳು ಧರ್ಮದ ಮೇಲೆ ದಾಳಿ ಮಾಡುವಾಗ ಬಹುಶಃ ಆ ಧರ್ಮಗಳಿಗೆ ಸೇರಿರುವ ಎಲ್ಲಾ ಸದಸ್ಯರನ್ನು ನಾಶಮಾಡುವುದಿಲ್ಲ. ಬದಲಿಗೆ ಆ ಧರ್ಮಗಳನ್ನು ಮಾತ್ರ ನಾಶ ಮಾಡುತ್ತವೆ. ಧರ್ಮಗಳು ನಾಶವಾದಾಗ, ಧಾರ್ಮಿಕ ಮುಖಂಡರು ಹೇಳಿದ್ದೆಲ್ಲಾ ಸುಳ್ಳು ಅಂತ ಅದರ ಸದಸ್ಯರಾಗಿದ್ದವರಿಗೆ ಅರ್ಥವಾಗುತ್ತದೆ. ಹಾಗಾಗಿ ಅವರು ತಮಗೂ ಈ ಧರ್ಮಗಳಿಗೂ ಸಂಬಂಧನೇ ಇಲ್ಲ ಅಂತ ಹೇಳಿಬಿಡಬಹುದು.

5. ಮಹಾ ಸಂಕಟದ ಬಗ್ಗೆ ಯೆಹೋವನು ಯಾವ ಮಾತು ಕೊಟ್ಟಿದ್ದಾನೆ ಮತ್ತು ಯಾಕೆ?

ಮಹಾ ಬಾಬೆಲ್‌ ನಾಶವಾಗಲು ಎಷ್ಟು ಸಮಯ ಹಿಡಿಯುತ್ತದೋ ನಮಗೆ ಗೊತ್ತಿಲ್ಲ. ಆದರೆ ಅದಕ್ಕೆ ತುಂಬ ಸಮಯವಂತೂ ಹಿಡಿಯಲ್ಲ ಅಂತ ಗೊತ್ತು. (ಪ್ರಕ. 18:10, 21) ಯೆಹೋವನು “ತಾನು ಆಯ್ದುಕೊಂಡಿರುವವರ ನಿಮಿತ್ತವಾಗಿ [ಸಂಕಟದ] ದಿನಗಳನ್ನು ಕಡಿಮೆ” ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. (ಮಾರ್ಕ 13:19, 20) ಆದರೆ ಮಹಾ ಸಂಕಟದ ಆರಂಭದಿಂದ ಅರ್ಮಗೆದ್ದೋನ್‌ ಯುದ್ಧದವರೆಗಿನ ಸಮಯಾವಧಿಯಲ್ಲಿ ನಾವು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?

ಸತ್ಯಾರಾಧನೆಯನ್ನು ಯಾವತ್ತೂ ಬಿಡಬೇಡಿ

6. ಸುಳ್ಳು ಧರ್ಮದಿಂದ ದೂರವಿರುವುದರ ಜೊತೆಗೆ ನಾವು ಇನ್ನೂ ಏನು ಮಾಡಬೇಕು?

ತನ್ನ ಆರಾಧಕರೆಲ್ಲರೂ ಸುಳ್ಳು ಧರ್ಮದಿಂದ ದೂರವಿರಬೇಕಂತ ಯೆಹೋವನು ಬಯಸುತ್ತಾನೆ ಎಂದು ಹಿಂದಿನ ಲೇಖನದಲ್ಲಿ ಕಲಿತೆವು. ಆದರೆ ನಾವು ಸುಳ್ಳುಧರ್ಮದಿಂದ ದೂರವಿದ್ದರೆ ಮಾತ್ರ ಸಾಕಾಗಲ್ಲ. ಸತ್ಯ ಧರ್ಮವನ್ನು ಅಂದರೆ ಯೆಹೋವನ ಆರಾಧನೆಯನ್ನು ಯಾವಾಗಲೂ ಬೆಂಬಲಿಸಬೇಕು ಎಂಬ ದೃಢತೀರ್ಮಾನ ಮಾಡಬೇಕು. ನಾವಿದನ್ನು ಹೇಗೆ ಬೆಂಬಲಿಸಬಹುದು? ಎರಡು ವಿಧಗಳನ್ನು ನೋಡೋಣ.

ಕಷ್ಟದ ಸಮಯಗಳಲ್ಲೂ ನಾವು ಕೂಟಕ್ಕಾಗಿ ಕೂಡಿಬರುವುದನ್ನು ಬಿಟ್ಟುಬಿಡದಿರೋಣ (ಪ್ಯಾರ 7 ನೋಡಿ) *

7. (ಎ) ನಾವು ಹೇಗೆ ನೈತಿಕತೆಯ ವಿಷಯದಲ್ಲಿ ಯೆಹೋವನು ಕೊಟ್ಟಿರುವ ನೀತಿ-ನಿಯಮಗಳನ್ನು ಯಾವತ್ತಿಗೂ ಮೀರದೇ ಇರಬಹುದು? (ಬಿ) ನಾವು ಒಟ್ಟಾಗಿ ಕೂಡಿ ಬರಬೇಕೆಂದು ಇಬ್ರಿಯ 10:24, 25 ಯಾಕೆ ಹೇಳುತ್ತದೆ? (ಸಿ) ಈಗಂತೂ ಅದು ಇನ್ನೂ ಪ್ರಾಮುಖ್ಯ ಯಾಕೆ?

ಒಂದನೇದಾಗಿ, ನೈತಿಕತೆಯ ವಿಷಯದಲ್ಲಿ ಯೆಹೋವ ದೇವರು ಕೊಟ್ಟಿರುವ ನೀತಿ-ನಿಯಮಗಳನ್ನು ಯಾವತ್ತಿಗೂ ಮೀರಬಾರದು. ಲೋಕದಲ್ಲಿರುವ ಅನೈತಿಕ ವಿಷಯಗಳನ್ನು ನಾವು ಯಾವತ್ತಿಗೂ ಸರಿ ಅಂತ ಒಪ್ಪಿಕೊಳ್ಳಬಾರದು. ಇದಕ್ಕೊಂದು ಉದಾಹರಣೆ, ಯಾವುದೇ ತರದ ಲೈಂಗಿಕ ಅನೈತಿಕತೆ. ಅದರಲ್ಲಿ ಒಂದೇ ಲಿಂಗದ ವ್ಯಕ್ತಿಗಳ ಮದುವೆ ಮತ್ತು ಸಲಿಂಗಕಾಮಕ್ಕೆ ಸಂಬಂಧಿಸಿದ ಎಲ್ಲವೂ ಸೇರಿದೆ. (ಮತ್ತಾ. 19:4, 5; ರೋಮ. 1:26, 27) ಎರಡನೇದಾಗಿ, ಜೊತೆ ಕ್ರೈಸ್ತರೊಟ್ಟಿಗೆ ಆರಾಧಿಸುವುದನ್ನು ಮುಂದುವರಿಸಬೇಕು. ಇದನ್ನು ನಾವು ಎಲ್ಲೇ ಇದ್ದರೂ ಮಾಡುತ್ತೇವೆ. ರಾಜ್ಯ ಸಭಾಗೃಹನೇ ಆಗಿರಬಹುದು, ಒಬ್ಬ ಸಾಕ್ಷಿಯ ಮನೆಯೇ ಆಗಿರಬಹುದು ಅಥವಾ ರಹಸ್ಯ ಸ್ಥಳನೇ ಆಗಿರಬಹುದು. ಅದೇನೇ ಆದರೂ, ನಾವು ಆರಾಧನೆಗಾಗಿ ಒಟ್ಟಾಗಿ ಕೂಡಿ ಬರುವ ರೂಢಿಯನ್ನಂತೂ ತಪ್ಪಿಸಲ್ಲ. ‘ಆ ದಿನವು ಸಮೀಪಿಸುತ್ತಾ ಇರುವುದರಿಂದ’ ನಾವು ಕೂಟಕ್ಕೆ ಕೂಡಿಬರುವುದನ್ನು ಈಗ ‘ಇನ್ನಷ್ಟು ಹೆಚ್ಚು ಮಾಡಬೇಕು.’—ಇಬ್ರಿಯ 10:24, 25 ಓದಿ.

8. ಮುಂದೆ ನಾವು ತಿಳಿಸುವ ಸಂದೇಶದಲ್ಲಿ ಯಾವ ಬದಲಾವಣೆ ಆಗಬಹುದು?

ನಾವು ಸಾರುವ ಸಂದೇಶವು ಮಹಾ ಸಂಕಟದ ಸಮಯದಲ್ಲಿ ಬದಲಾಗಬಹುದು. ಈಗ ನಾವು ದೇವರ ರಾಜ್ಯದ ಸುವಾರ್ತೆ ಸಾರುತ್ತಿದ್ದೇವೆ ಮತ್ತು ಜನರನ್ನು ಶಿಷ್ಯರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಆ ಸಮಯದಲ್ಲಿ ನಾವು ಸಾರುವ ಸಂದೇಶವು ಜನರ ಮೇಲೆ ದೊಡ್ಡ ಆಲಿಕಲ್ಲುಗಳು ಬಂದು ಬಿದ್ದಂತೆ ಇರುತ್ತದೆ ಎಂದು ಬೈಬಲ್‌ ಹೇಳುತ್ತದೆ. (ಪ್ರಕ. 16:21) ಆ ಸಂದೇಶ, ಸೈತಾನನ ಲೋಕ ಇನ್ನು ಸ್ವಲ್ಪದರಲ್ಲೇ ಸಂಪೂರ್ಣವಾಗಿ ನಾಶವಾಗಲಿದೆ ಅನ್ನುವುದೇ ಆಗಿರಬಹುದು. ನಾವು ಸಾರುವ ಸಂದೇಶ ಏನಾಗಿದೆ ಮತ್ತು ಅದನ್ನು ಹೇಗೆ ಮಾಡಬೇಕು ಅನ್ನುವುದು ನಮಗೆ ಸೂಕ್ತ ಸಮಯದಲ್ಲಿ ಗೊತ್ತಾಗುತ್ತದೆ. ಸುವಾರ್ತೆ ಸಾರಲು ಮತ್ತು ಕಲಿಸಲು ನೂರಕ್ಕಿಂತ ಹೆಚ್ಚು ವರ್ಷಗಳಿಂದ ನಾವು ಬಳಸುತ್ತಾ ಬಂದಿರುವ ವಿಧಾನಗಳನ್ನೇ ಈ ಸಂದೇಶ ಸಾರಲಿಕ್ಕೂ ಬಳಸುತ್ತೇವಾ? ಅಥವಾ ಬೇರೆ ವಿಧಾನಗಳನ್ನು ಬಳಸುತ್ತೇವಾ? ಅದಕ್ಕಾಗಿ ಕಾದು ನೋಡಬೇಕು. ಅದನ್ನು ನಾವು ಹೇಗೇ ಸಾರಲಿ, ನಮಗಂತೂ ಯೆಹೋವನ ನ್ಯಾಯತೀರ್ಪಿನ ಸಂದೇಶವನ್ನು ಧೈರ್ಯದಿಂದ ತಿಳಿಸುವ ಸುಯೋಗ ಇದೆ!—ಯೆಹೆ. 2:3-5.

9. (ಎ) ನಾವು ತಿಳಿಸುವ ಸಂದೇಶ ಕೇಳಿ ಜನರು ಹೇಗೆ ಪ್ರತಿಕ್ರಿಯಿಸಬಹುದು? (ಬಿ) ಆದರೆ ನಮಗೆ ಏನು ಭರವಸೆ ಇದೆ?

ಆಗ ನಾವು ತಿಳಿಸುವ ಸಂದೇಶ ಕೇಳಿ ಜನರಿಗೆ ಕೋಪ ಬರಬಹುದು, ನಮ್ಮ ಸಾರುವ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಲು ಅವರು ಪ್ರಯತ್ನಿಸಬಹುದು. ಈಗ ನಾವು ಸೇವೆ ಮಾಡುವಾಗ ಹೇಗೆ ಯೆಹೋವನ ಸಹಾಯಕ್ಕಾಗಿ ಎದುರುನೋಡುತ್ತೇವೋ, ಆಗಲೂ ಆತನ ಬೆಂಬಲಕ್ಕಾಗಿ ಎದುರುನೋಡಬೇಕು. ತನ್ನ ಚಿತ್ತ ನೆರವೇರಿಸಲು ಯೆಹೋವನು ನಮಗೆ ಖಂಡಿತ ಬಲ ಕೊಡುತ್ತಾನೆ.—ಮೀಕ 3:8.

ದೇವ ಜನರ ಮೇಲೆ ಆಗುವ ಆಕ್ರಮಣಕ್ಕೆ ತಯಾರಾಗಿರಿ

10. ಲೂಕ 21:25-28​ರಲ್ಲಿ ತಿಳಿಸಿದಂತೆ ಮಹಾ ಸಂಕಟದ ಸಮಯದಲ್ಲಿ ನಡೆಯುವಂಥ ವಿಷಯಗಳಿಗೆ ಜನರಲ್ಲಿ ಹೆಚ್ಚಿನವರು ಹೇಗೆ ಪ್ರತಿಕ್ರಿಯಿಸುತ್ತಾರೆ?

10 ಲೂಕ 21:25-28 ಓದಿ. ಮಹಾ ಸಂಕಟದ ಸಮಯದಲ್ಲಿ ಜನರಿಗೆ ಆಘಾತ ಆಗುತ್ತದೆ. ಯಾಕೆಂದರೆ ಯಾವುದೆಲ್ಲ ಶಾಶ್ವತವಾಗಿ ಉಳಿಯುತ್ತೆ ಅಂತ ಅವರು ನೆನಸಿದ್ದರೋ ಅದೆಲ್ಲಾ ಅಂದರೆ ಈ ಲೋಕದ ರಾಜಕೀಯ, ವಾಣಿಜ್ಯ ವ್ಯವಸ್ಥೆ ಮತ್ತು ಬೇರೆಲ್ಲಾ ವಿಷಯಗಳು ನಾಶವಾಗುತ್ತವೆ. ಮಾನವ ಇತಿಹಾಸದಲ್ಲೇ ಯಾವತ್ತಿಗೂ ಅಂಥ ಕರಾಳ ಸಮಯ ಬಂದಿರದ ಕಾರಣ ಜನರಿಗೆ, ತಾವು ಸತ್ತು ಹೋಗಿಬಿಡುತ್ತೇವೆ ಅಂತ ಚಿಂತೆ ಮತ್ತು “ಸಂಕಟ” ಆಗುತ್ತದೆ. (ಚೆಫ. 1:14, 15) ಆ ಸಮಯದಲ್ಲಿ ಜೀವನ ತುಂಬ ಕಷ್ಟವಾಗಬಹುದು. ಅದರಲ್ಲೂ ಯೆಹೋವನ ಜನರಾದ ನಾವು ಲೋಕದ ಭಾಗವಾಗಿಲ್ಲದೇ ಇರುವುದರಿಂದ ಇನ್ನೂ ಹೆಚ್ಚು ಕಷ್ಟವಾಗಬಹುದು. ಜೀವನ ನಡೆಸಲು ನಮಗೆ ತುಂಬ ಅಗತ್ಯವಿರುವ ಕೆಲವು ವಿಷಯಗಳೂ ಸಿಗದೇ ಹೋಗಬಹುದು.

11. (ಎ) ಎಲ್ಲರ ಗಮನ ಯೆಹೋವನ ಜನರ ಮೇಲೆ ಯಾಕೆ ಹೋಗುತ್ತದೆ? (ಬಿ) ಮಹಾ ಸಂಕಟದ ಬಗ್ಗೆ ನಾವು ಭಯಪಡುವ ಅವಶ್ಯಕತೆ ಇಲ್ಲ ಯಾಕೆ?

11 ಯಾರ ಧರ್ಮಗಳು ನಾಶವಾಗಿರುತ್ತವೋ ಆ ಜನರಿಗೆ ಯೆಹೋವನ ಸಾಕ್ಷಿಗಳ ಧರ್ಮ ಇನ್ನೂ ನಾಶವಾಗದೇ ಇರುವುದನ್ನು ನೋಡಿ ಕೋಪ ಬರಬಹುದು. ಇದರ ಬಗ್ಗೆ ಎಲ್ಲರಿಗೂ ಗೊತ್ತಾಗಲಿ ಅಂತ ಅವರು ಈ ಸುದ್ದಿಯನ್ನು ಹಬ್ಬಿಸಲು ಪ್ರಯತ್ನಿಸಬಹುದು. ಉದಾಹರಣೆಗೆ, ಇಂಟರ್‌ನೆಟ್‌ ಮೂಲಕ ಅದನ್ನು ಹಬ್ಬಿಸಬಹುದು. ನಮ್ಮ ಧರ್ಮ ಮಾತ್ರ ಉಳಿಯುವುದರಿಂದ ಜನಾಂಗಗಳು ಮತ್ತು ಅವರ ಅಧಿಕಾರಿಯಾದ ಸೈತಾನನು ನಮ್ಮ ಮೇಲೆ ದ್ವೇಷ ಕಾರುತ್ತಾರೆ. ಭೂಮಿಯಿಂದ ಎಲ್ಲ ಧರ್ಮಗಳನ್ನು ತೆಗೆದುಹಾಕಬೇಕೆಂಬ ತಮ್ಮ ಗುರಿ ಮುಟ್ಟುವುದಕ್ಕೆ ಜನಾಂಗಗಳವರಿಗೆ ಆಗಿರಲ್ಲ. ಹಾಗಾಗಿ ಎಲ್ಲರ ಗಮನ ನಮ್ಮ ಮೇಲೆ ಬರುತ್ತದೆ. ಆ ಸಮಯದಲ್ಲಿ ಜನಾಂಗಗಳವರು ಮಾಗೋಗಿನ ಗೋಗನಾಗಿ * ಕೆಲಸ ಮಾಡುತ್ತಾರೆ. ಅವರೆಲ್ಲರೂ ಒಟ್ಟಾಗಿ ತಮ್ಮ ಬಲವನ್ನೆಲ್ಲಾ ಉಪಯೋಗಿಸಿ ಯೆಹೋವನ ಜನರ ಮೇಲೆ ದಾಳಿಮಾಡಲು ಮುಂದಾಗುತ್ತಾರೆ. (ಯೆಹೆ. 38:2, 14-16) ಮಹಾ ಸಂಕಟದ ಸಮಯದಲ್ಲಿ ಏನಾಗುತ್ತೆ ಅಂತ ನಮಗೆ ಸರಿಯಾಗಿ ಗೊತ್ತಿಲ್ಲದೇ ಇರುವುದರಿಂದ ಚಿಂತೆ ಆಗಬಹುದು. ಆದರೆ ಮಹಾ ಸಂಕಟದ ಬಗ್ಗೆ ನಾವು ಭಯಪಡಬೇಕಾಗಿಲ್ಲ. ಯಾಕೆಂದರೆ ನಮ್ಮ ಜೀವವನ್ನು ಕಾಪಾಡಿಕೊಳ್ಳಲು ಬೇಕಾದ ಸಲಹೆ-ಸೂಚನೆಗಳನ್ನು ಯೆಹೋವನು ಕೊಟ್ಟೇ ಕೊಡುತ್ತಾನೆ. (ಕೀರ್ತ. 34:19) ನಮ್ಮ “ಬಿಡುಗಡೆ ಸಮೀಪವಾಗುತ್ತಿದೆ” * ಎಂದು ನಮಗೆ ಗೊತ್ತಾಗುವುದರಿಂದ ‘ನಾವು ನೆಟ್ಟಗೆ ನಿಂತು ನಮ್ಮ ತಲೆಯನ್ನು ಮೇಲಕ್ಕೆತ್ತಲು’ ಸಾಧ್ಯವಾಗುತ್ತದೆ.

12. ಮುಂದೆ ನಡೆಯುವಂಥ ವಿಷಯಗಳಿಗೆ ನಾವು ಸಿದ್ಧರಾಗಿರಲು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಏನು ಮಾಡುತ್ತಿದ್ದಾನೆ?

12 ಮಹಾ ಸಂಕಟದ ಸಮಯದಲ್ಲಿ ನಾವು ನಂಬಿಗಸ್ತರಾಗಿ ಉಳಿಯಲು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ನಮ್ಮನ್ನು ಸಿದ್ಧ ಮಾಡುತ್ತಿದ್ದಾನೆ. (ಮತ್ತಾ. 24:45) ಇದನ್ನು ಅನೇಕ ವಿಧಗಳಲ್ಲಿ ಮಾಡಲಾಗುತ್ತಿದೆ. ಇದಕ್ಕೊಂದು ಉದಾಹರಣೆ, 2016ರಿಂದ 2018ರವರೆಗೆ ನಡೆದ ಅಧಿವೇಶನದ ಕಾರ್ಯಕ್ರಮಗಳು. ಯೆಹೋವನ ದಿನ ಹತ್ತಿರ ಇರುವ ಈ ಸಮಯದಲ್ಲಿ ನಾವು ಯಾವ ಗುಣಗಳನ್ನು ಇನ್ನೂ ಹೆಚ್ಚು ತೋರಿಸಲು ಕಲಿಯಬೇಕೆಂದು ಈ ಕಾರ್ಯಕ್ರಮಗಳಲ್ಲಿ ಉತ್ತೇಜಿಸಲಾಯಿತು. ಆ ಗುಣಗಳ ಬಗ್ಗೆ ಈಗ ಪುನಃ ನೋಡೋಣ.

ನಿಷ್ಠೆ, ತಾಳ್ಮೆ ಮತ್ತು ಧೈರ್ಯವನ್ನು ಇನ್ನೂ ಹೆಚ್ಚು ತೋರಿಸುತ್ತಾ ಇರಿ

‘ಮಹಾ ಸಂಕಟದಲ್ಲಿ’ ಪಾರಾಗಲು ಈಗಲೇ ಸಿದ್ಧರಾಗಿ (ಪ್ಯಾರ 13-16 ನೋಡಿ) *

13. (ಎ) ಯೆಹೋವನ ಕಡೆಗಿರುವ ನಮ್ಮ ನಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ನಾವೇನು ಮಾಡಬೇಕು? (ಬಿ) ನಾವಿದನ್ನು ಯಾಕೆ ಈಗಲೇ ಮಾಡಬೇಕು?

13 ನಿಷ್ಠೆ: 2016ರ ಅಧಿವೇಶನದ ಮುಖ್ಯವಿಷಯ “ಯೆಹೋವನಿಗೆ ನಿಷ್ಠೆಯಿಂದಿರಿ!” ಎಂದಾಗಿತ್ತು. ನಮಗೆ ಯೆಹೋವನ ಜೊತೆ ಆಪ್ತ ಸಂಬಂಧವಿದ್ದರೆ ನಾವು ಆತನಿಗೆ ನಿಷ್ಠರಾಗಿರಬಹುದು ಎಂದು ಆ ಅಧಿವೇಶನದಲ್ಲಿ ಕಲಿತೆವು. ಮನಬಿಚ್ಚಿ ಪ್ರಾರ್ಥನೆ ಮಾಡುವ ಮೂಲಕ ಮತ್ತು ಬೈಬಲನ್ನು ಚೆನ್ನಾಗಿ ಅಧ್ಯಯನ ಮಾಡುವ ಮೂಲಕ ನಾವು ಯೆಹೋವನಿಗೆ ಆಪ್ತರಾಗಬಹುದು ಎಂದು ಅಲ್ಲಿ ಕಲಿತೆವು. ಇದನ್ನೆಲ್ಲಾ ಮಾಡಿದರೆ ತುಂಬ ಕಷ್ಟಕರವಾದ ಸಮಸ್ಯೆಗಳನ್ನೂ ಎದುರಿಸಲು ನಮಗೆ ಬಲ ಸಿಗುತ್ತದೆ. ಮಹಾ ಸಂಕಟ ಹತ್ತಿರವಾಗುತ್ತಿರುವುದರಿಂದ ದೇವರಿಗೆ ಮತ್ತು ಆತನ ರಾಜ್ಯಕ್ಕೆ ನಾವು ತೋರಿಸುವ ನಿಷ್ಠೆ ಇನ್ನೂ ಹೆಚ್ಚು ಪರೀಕ್ಷೆಗೆ ಒಳಗಾಗಬಹುದು. ಜನರು ನಮ್ಮನ್ನು ಕುಚೋದ್ಯ ಮಾಡುವುದನ್ನು ಮುಂದುವರಿಸಬಹುದು. (2 ಪೇತ್ರ 3:3, 4) ಇದಕ್ಕೆ ಮುಖ್ಯ ಕಾರಣ ನಾವು ಸೈತಾನನ ಲೋಕದ ಯಾವುದೇ ವಿಷಯಗಳಿಗೆ ಬೆಂಬಲ ಕೊಡದಿರುವುದೇ ಆಗಿದೆ. ನಾವು ಈಗ ನಿಷ್ಠೆಯನ್ನು ಹೆಚ್ಚಿಸಿಕೊಂಡರೆ ಮುಂದೆ ಮಹಾ ಸಂಕಟದ ಸಮಯದಲ್ಲೂ ನಿಷ್ಠರಾಗಿ ಉಳಿಯುತ್ತೇವೆ.

14. (ಎ) ಭೂಮಿಯ ಮೇಲೆ ನಡೆಯುತ್ತಿರುವ ಮೇಲ್ವಿಚಾರಣೆ ವಿಷಯದಲ್ಲಿ ಯಾವ ಬದಲಾವಣೆ ಆಗುತ್ತದೆ? (ಬಿ) ಆ ಸಮಯದಲ್ಲಿ ನಾವು ಯಾಕೆ ನಿಷ್ಠರಾಗಿರಬೇಕು?

14 ಮಹಾ ಸಂಕಟದ ಸಮಯದಲ್ಲಿ ಭೂಮಿಯ ಮೇಲೆ ನಡೆಯುತ್ತಿರುವ ಮೇಲ್ವಿಚಾರಣೆ ವಿಷಯದಲ್ಲಿ ಒಂದು ಬದಲಾವಣೆಯಾಗುತ್ತದೆ. ಭೂಮಿಯಲ್ಲಿ ಉಳಿದಿರುವ ಎಲ್ಲಾ ಅಭಿಷಿಕ್ತರೂ ಅರ್ಮಗೆದ್ದೋನ್‌ ಯುದ್ಧದಲ್ಲಿ ಭಾಗವಹಿಸಬೇಕಾಗಿ ಇರುವುದರಿಂದ ಅವರೆಲ್ಲರನ್ನು ಮಹಾ ಸಂಕಟದ ಯಾವುದೋ ಒಂದು ಹಂತದಲ್ಲಿ ಸ್ವರ್ಗಕ್ಕೆ ಕೊಂಡೊಯ್ಯಲಾಗುತ್ತದೆ. (ಮತ್ತಾ. 24:31; ಪ್ರಕ. 2:26, 27) ಅದರರ್ಥ ಆಗ ಭೂಮಿಯಲ್ಲಿ ಆಡಳಿತ ಮಂಡಲಿ ಇರುವುದಿಲ್ಲ. ಆದರೂ ಮಹಾ ಸಮೂಹದವರು ಸಂಘಟಿತರಾಗಿಯೇ ಇರುತ್ತಾರೆ. ಯಾಕೆಂದರೆ ಆಗ ಮಹಾ ಸಮೂಹದ ಭಾಗವಾಗಿರುವ ಅರ್ಹ ಸಹೋದರರು ಮೇಲ್ವಿಚಾರಣೆ ಮಾಡುತ್ತಾರೆ. ನಾವು ಈ ಸಹೋದರರಿಗೆ ಬೆಂಬಲ ಕೊಡುವ ಮೂಲಕ ಮತ್ತು ದೇವರ ಸಹಾಯದಿಂದ ಅವರು ಕೊಡುವ ನಿರ್ದೇಶನಗಳನ್ನು ಪಾಲಿಸುವ ಮೂಲಕ ನಿಷ್ಠೆ ತೋರಿಸಬೇಕು. ಇದನ್ನು ಮಾಡಿದರೆ ಮಾತ್ರ ನಾವು ಬದುಕುಳಿಯುತ್ತೇವೆ.

15. (ಎ) ತಾಳ್ಮೆಯನ್ನು ಇನ್ನೂ ಹೆಚ್ಚು ತೋರಿಸಲು ನಾವು ಹೇಗೆ ಕಲಿಯಬಹುದು? (ಬಿ) ಈಗ ಅದನ್ನು ಮಾಡುವುದು ಯಾಕೆ ತುಂಬ ಪ್ರಾಮುಖ್ಯ?

15 ತಾಳ್ಮೆ: 2017ರ ಅಧಿವೇಶನದ ಮುಖ್ಯವಿಷಯ “ಎಂದಿಗೂ ಪ್ರಯತ್ನ ಬಿಡಬೇಡಿ!” ಎಂದಾಗಿತ್ತು. ಕಷ್ಟಗಳು ಬಂದಾಗ ತಾಳಿಕೊಳ್ಳುವುದು ಹೇಗೆಂದು ಕಲಿಯಲು ಈ ಅಧಿವೇಶನ ಸಹಾಯ ಮಾಡಿತು. ತಾಳ್ಮೆಯನ್ನು ಇನ್ನೂ ಹೆಚ್ಚು ತೋರಿಸಲು ನಾವು ಯೆಹೋವನ ಮೇಲೆ ಆತುಕೊಳ್ಳಬೇಕು, ಬದಲಿಗೆ ಮುಂದೆ ಎಲ್ಲಾ ಸರಿಹೋಗುತ್ತೆ ಎಂಬ ನಿರೀಕ್ಷೆಯ ಮೇಲಲ್ಲ ಎಂದು ಕಲಿತೆವು. (ರೋಮ. 12:12) ಯೇಸು ಕೊಟ್ಟ ಮಾತನ್ನು ನಾವು ಯಾವತ್ತಿಗೂ ಮರೆಯದಿರೋಣ. “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು” ಎಂದು ಆತನು ಹೇಳಿದನು. (ಮತ್ತಾ. 24:13) ಇದರರ್ಥ ನಮಗೆ ಎಂಥ ಸವಾಲುಗಳು ಬಂದರೂ ನಾವು ನಂಬಿಗಸ್ತರಾಗಿ ಉಳಿಯಬೇಕು. ಈಗ ನಮಗೆ ಬರುವ ಪರೀಕ್ಷೆಗಳನ್ನು ತಾಳಿಕೊಂಡರೆ ಮಹಾ ಸಂಕಟ ಆರಂಭವಾಗುವ ಮುಂಚೆ ನಮ್ಮ ನಂಬಿಕೆ ಇನ್ನೂ ಹೆಚ್ಚು ಬಲವಾಗುತ್ತದೆ.

16. (ಎ) ನಾವು ಧೈರ್ಯಶಾಲಿಗಳಾಗಲು ಯಾವುದು ಸಹಾಯ ಮಾಡುತ್ತದೆ? (ಬಿ) ಈಗ ನಾವು ಹೇಗೆ ಧೈರ್ಯವನ್ನು ಬಲಪಡಿಸಿಕೊಳ್ಳಬಹುದು?

16 ಧೈರ್ಯ: 2018ರ ಅಧಿವೇಶನದ ಮುಖ್ಯವಿಷಯ “ಧೈರ್ಯವಾಗಿರಿ!” ಎಂದಾಗಿತ್ತು. ನಮ್ಮ ಸ್ವಂತ ಸಾಮರ್ಥ್ಯದಿಂದ ನಾವು ಧೈರ್ಯಶಾಲಿಗಳಾಗಿರಲು ಸಾಧ್ಯವಿಲ್ಲ ಎಂದು ಈ ಅಧಿವೇಶನದಲ್ಲಿ ಕಲಿತೆವು. ತಾಳ್ಮೆ ತೋರಿಸಲಿಕ್ಕಾಗಿ ಹೇಗೆ ನಾವು ಯೆಹೋವನನ್ನು ಆಶ್ರಯಿಸಬೇಕೋ ಅದೇ ರೀತಿ ಧೈರ್ಯಶಾಲಿಗಳಾಗಿರಲು ಸಹ ಆತನನ್ನು ಆಶ್ರಯಿಸಬೇಕು. ಯೆಹೋವನನ್ನು ಇನ್ನೂ ಹೆಚ್ಚು ಆಶ್ರಯಿಸಲು ನಾವು ಹೇಗೆ ಕಲಿಯಬಹುದು? ಪ್ರತಿದಿನ ಆತನ ವಾಕ್ಯವನ್ನು ಓದುವ ಮೂಲಕ ಮತ್ತು ಹಿಂದೆ ಆತನು ತನ್ನ ಜನರನ್ನು ಹೇಗೆ ಕಾಪಾಡಿದ್ದಾನೆ ಅನ್ನುವುದನ್ನು ಧ್ಯಾನಿಸುವ ಮೂಲಕ ನಾವು ಕಲಿಯಬಹುದು. (ಕೀರ್ತ. 68:20; 2 ಪೇತ್ರ 2:9) ಮಹಾ ಸಂಕಟದ ಸಮಯದಲ್ಲಿ ಜನಾಂಗಗಳು ನಮ್ಮ ಮೇಲೆ ದಾಳಿ ಮಾಡಿದಾಗ ನಾವು ಧೈರ್ಯಶಾಲಿಗಳಾಗಿರಬೇಕು ಮತ್ತು ಹಿಂದೆಂದಿಗಿಂತಲೂ ಆಗ ನಾವು ಯೆಹೋವನ ಮೇಲೆ ಹೆಚ್ಚು ಭರವಸೆ ಇಡಬೇಕು. (ಕೀರ್ತ. 112:7, 8; ಇಬ್ರಿ. 13:6) ಈಗ ನಾವು ಯೆಹೋವನನ್ನು ಆಶ್ರಯಿಸಿದರೆ ಮುಂದೆ ಗೋಗನ ಆಕ್ರಮಣವನ್ನು ಎದುರಿಸಲು ಬೇಕಾದ ಧೈರ್ಯ ನಮಗೆ ಸಿಗುತ್ತದೆ. *

ನಿಮ್ಮ ಬಿಡುಗಡೆಗಾಗಿ ತವಕದಿಂದ ಎದುರುನೋಡಿ

ಯೇಸು ಮತ್ತು ಆತನ ಸ್ವರ್ಗೀಯ ಸೈನ್ಯ ಅರ್ಮಗೆದ್ದೋನ್‌ ಯುದ್ಧದಲ್ಲಿ ದೇವರ ವೈರಿಗಳನ್ನು ನಾಶ ಮಾಡಲಿಕ್ಕಾಗಿ ಬಲುಬೇಗನೆ ಬರಲಿದೆ (ಪ್ಯಾರ 17 ನೋಡಿ)

17. ಅರ್ಮಗೆದ್ದೋನ್‌ ಯುದ್ಧದ ಬಗ್ಗೆ ನಾವು ಯಾಕೆ ಭಯಪಡಬೇಕಾಗಿಲ್ಲ? (ಮುಖಪುಟ ಚಿತ್ರ ನೋಡಿ.)

17 ಹಿಂದಿನ ಲೇಖನದಲ್ಲಿ ತಿಳಿಸಿದಂತೆ ನಮ್ಮಲ್ಲಿ ಹೆಚ್ಚಿನವರು ಹುಟ್ಟಿನಿಂದ ಹಿಡಿದು ಈಗಿನವರೆಗೂ ಕಡೇ ದಿವಸಗಳಲ್ಲೇ ಜೀವಿಸುತ್ತಿದ್ದೇವೆ. ಆದರೆ ಮಹಾ ಸಂಕಟದಲ್ಲಿ ನಾವು ಪಾರಾಗುತ್ತೇವೆ ಅನ್ನುವ ನಿರೀಕ್ಷೆಯೂ ನಮಗಿದೆ. ಅರ್ಮಗೆದ್ದೋನ್‌ ಯುದ್ಧದಿಂದ ಸೈತಾನನ ಲೋಕ ಸಂಪೂರ್ಣವಾಗಿ ನಾಶವಾಗುತ್ತದೆ. ಆದರೆ ನಾವು ಭಯಪಡುವ ಅವಶ್ಯಕತೆ ಇಲ್ಲ. ಯಾಕೆ? ಯಾಕೆಂದರೆ ಇದು ಯೆಹೋವನು ಮಾಡುವ ಯುದ್ಧ. (ಜ್ಞಾನೋ. 1:33; ಯೆಹೆ. 38:18-20; ಜೆಕ. 14:3) ಯೆಹೋವನು ಅಪ್ಪಣೆ ಕೊಟ್ಟಾಗ ಯೇಸು, ದೇವರ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸುತ್ತಾನೆ. ಪುನರುತ್ಥಾನವಾಗಿರುವ ಅಭಿಷಿಕ್ತರು ಮತ್ತು ಕೋಟ್ಯಾಂತರ ದೇವದೂತರು ಯೇಸುವಿನ ಜೊತೆ ಇರುತ್ತಾರೆ. ಅವರೆಲ್ಲರೂ ಒಟ್ಟಾಗಿ ಸೈತಾನ, ಅವನ ದೂತರು ಮತ್ತು ಭೂಮಿಯಲ್ಲಿರುವ ಅವರ ಸೈನ್ಯದ ವಿರುದ್ಧ ಯುದ್ಧ ಮಾಡುತ್ತಾರೆ.—ದಾನಿ. 12:1; ಪ್ರಕ. 6:2; 17:14.

18. (ಎ) ಯೆಹೋವನು ನಮಗೆ ಯಾವ ಮಾತು ಕೊಟ್ಟಿದ್ದಾನೆ? (ಬಿ) ಭವಿಷ್ಯದ ಬಗ್ಗೆ ಭರವಸೆಯಿಂದ ಇರಲು ಪ್ರಕಟನೆ 7:9, 13-17 ಹೇಗೆ ಸಹಾಯ ಮಾಡುತ್ತದೆ?

18 “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂದು ಯೆಹೋವನು ನಮಗೆ ಮಾತು ಕೊಟ್ಟಿದ್ದಾನೆ. (ಯೆಶಾ. 54:17) ಯೆಹೋವನ ನಂಬಿಗಸ್ತ ಆರಾಧಕರ “ಮಹಾ ಸಮೂಹವು” “ಮಹಾ ಸಂಕಟವನ್ನು ಪಾರಾಗಿ” ಬದುಕುಳಿಯುತ್ತದೆ! ನಂತರ ಅವರು ಆತನ ಸೇವೆ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಬೈಬಲ್‌ ಹೇಳುತ್ತದೆ. (ಪ್ರಕಟನೆ 7:9, 13-17 ಓದಿ.) ನಮಗೆ ಸಂರಕ್ಷಣೆ ಸಿಗುತ್ತದೆ ಎಂಬ ಭರವಸೆಯಿಂದ ಇರಲು ಇಂಥ ಎಷ್ಟೋ ಕಾರಣಗಳನ್ನು ಬೈಬಲ್‌ ನಮಗೆ ಕೊಡುತ್ತದೆ! ‘ಯೆಹೋವನು ನಂಬಿಗಸ್ತರನ್ನು ಕಾಪಾಡುತ್ತಾನೆ’ ಎಂದು ನಮಗೆ ಗೊತ್ತಿದೆ. (ಕೀರ್ತ. 31:23) ಯೆಹೋವನು ತನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ರುಜುಪಡಿಸುವಾಗ ಆತನನ್ನು ಪ್ರೀತಿಸುವ, ಆರಾಧಿಸುವ ಜನರಿಗೆ ಖುಷಿಯಾಗುತ್ತದೆ.—ಯೆಹೆ. 38:23.

19. ಇನ್ನು ಸ್ವಲ್ಪದರಲ್ಲೇ ನಮಗೆ ಎಂಥ ಜೀವನ ಸಿಗಲಿದೆ?

19 ಒಂದು ವೇಳೆ 2 ತಿಮೊಥೆಯ 3:2-5​ರಲ್ಲಿ ಹೊಸ ಲೋಕದಲ್ಲಿ ಜೀವಿಸುವ ಜನರ ಬಗ್ಗೆ ತಿಳಿಸಿದ್ದರೆ ಹೇಗಿರುತ್ತಿತ್ತು ಅಂತ ಊಹಿಸಿ. ಅಲ್ಲಿ ಸೈತಾನನ ಪ್ರಭಾವನೇ ಇರಲ್ಲ! (“ಆಗ ಇರುವ ಜನರು” ಎಂಬ ಚೌಕ ನೋಡಿ.) ಆಡಳಿತ ಮಂಡಲಿಯ ಸದಸ್ಯರಾಗಿದ್ದ ಸಹೋದರ ಜಾರ್ಜ್‌ ಗ್ಯಾಂಗಸ್‌ * ಅದರ ಬಗ್ಗೆ ಹೀಗೆ ಹೇಳಿದ್ದರು: “ಆಗ ಲೋಕ ಹೇಗಿರಬಹುದು ಎಂದು ಯೋಚಿಸಿ. ಇಡೀ ಭೂಮಿಯಲ್ಲಿ ನಮ್ಮ ಸಹೋದರ-ಸಹೋದರಿಯರೇ ಇರುತ್ತಾರೆ! ಆ ಹೊಸ ವ್ಯವಸ್ಥೆಯಲ್ಲಿ ಜೀವಿಸುವ ಸುಯೋಗ ನಿಮಗೆ ಇನ್ನು ಸ್ವಲ್ಪದರಲ್ಲೇ ಸಿಗಲಿದೆ. ಯೆಹೋವನು ಜೀವಿಸುವಷ್ಟು ಕಾಲ ನೀವೂ ಜೀವಿಸುತ್ತೀರಿ. ನಾವೆಲ್ಲರೂ ಸದಾಕಾಲ ಜೀವಿಸಲಿದ್ದೇವೆ.” ಎಂಥ ಅದ್ಭುತಕರ ನಿರೀಕ್ಷೆಯಲ್ವಾ ಅದು!

ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!

^ ಪ್ಯಾರ. 5 ಇನ್ನು ಸ್ವಲ್ಪ ಸಮಯದಲ್ಲೇ ಎಲ್ಲಾ ಜನರಿಗೆ “ಮಹಾ ಸಂಕಟ” ಬರಲಿದೆ. ಆ ಸಮಯದಲ್ಲಿ ಯೆಹೋವನ ಆರಾಧಕರಾದ ನಮಗೆ ಏನಾಗುತ್ತದೆ? ಆಗ ನಾವು ಏನು ಮಾಡಬೇಕಂತ ಯೆಹೋವನು ಬಯಸುತ್ತಾನೆ? ಮಹಾ ಸಂಕಟದಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಬೇಕೆಂದರೆ ನಾವು ಈಗ ಯಾವ ಗುಣಗಳನ್ನು ಇನ್ನೂ ಹೆಚ್ಚು ತೋರಿಸಲು ಕಲಿಯಬೇಕು? ಇವುಗಳ ಉತ್ತರಗಳನ್ನು ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 3 ಪದ ವಿವರಣೆ: ಸುಳ್ಳು ಕ್ರೈಸ್ತರು ತಾವು ಕ್ರಿಸ್ತನನ್ನು ಹಿಂಬಾಲಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ಬೈಬಲಿನಲ್ಲಿ ಕೊಟ್ಟಿರುವ ನೀತಿ-ನಿಯಮಗಳ ಪ್ರಕಾರ ಅವರು ಯೆಹೋವನನ್ನು ಆರಾಧಿಸುವುದಿಲ್ಲ.

^ ಪ್ಯಾರ. 11 ಪದ ವಿವರಣೆ: ಮಾಗೋಗಿನ ಗೋಗ (ಅಥವಾ ಗೋಗ) ಅಂದರೆ ಮಹಾ ಸಂಕಟದ ಸಮಯದಲ್ಲಿ ಯೆಹೋವನ ಆರಾಧಕರ ಮೇಲೆ ದಾಳಿ ಮಾಡುವ ಜನಾಂಗಗಳ ಗುಂಪು ಆಗಿದೆ.

^ ಪ್ಯಾರ. 11 ಪಾದಟಿಪ್ಪಣಿ: ಅರ್ಮಗೆದ್ದೋನ್‌ ಯುದ್ಧದ ಮುಂಚೆ ಏನೆಲ್ಲಾ ನಡೆಯುತ್ತದೆ ಅನ್ನುವುದರ ಬಗ್ಗೆ ತಿಳಿಯಲು ಗಾಡ್ಸ್‌ಕಿಂಗ್‌ಡಮ್‌ ರೂಲ್ಸ್‌! (ಇಂಗ್ಲಿಷ್‌) ಪುಸ್ತಕದ ಅಧ್ಯಾಯ 21ನ್ನು ಮತ್ತು 2013, ಜುಲೈ 15ರ ಕಾವಲಿನಬುರುಜು ಪತ್ರಿಕೆಯ ಪುಟ 3-8ನ್ನು ನೋಡಿ. ಮಾಗೋಗಿನ ಗೋಗನು ಮಾಡುವ ಆಕ್ರಮಣದ ಬಗ್ಗೆ ಮತ್ತು ಅರ್ಮಗೆದ್ದೋನ್‌ ಸಮಯದಲ್ಲಿ ಯೆಹೋವನು ತನ್ನ ಜನರನ್ನು ಹೇಗೆ ಸಂರಕ್ಷಿಸುತ್ತಾನೆ ಅನ್ನುವುದರ ಬಗ್ಗೆ ವಿವರವಾಗಿ ತಿಳಿಯಲು ಪ್ಯೂರ್‌ ವರ್ಷಿಪ್‌ ಆಫ್‌ ಜೆಹೋವ—ರಿಸ್ಟೋರ್ಡ್‌ ಎಟ್‌ ಲಾಸ್ಟ್‌! (ಇಂಗ್ಲಿಷ್‌) ಪುಸ್ತಕದ ಅಧ್ಯಾಯ 17 ಮತ್ತು 18 ಹಾಗೂ 2015, ಜುಲೈ 15ರ ಕಾವಲಿನಬುರುಜು ಪತ್ರಿಕೆಯ ಪುಟ 14-19ನ್ನು ನೋಡಿ.

^ ಪ್ಯಾರ. 16 2019ರ ಅಧಿವೇಶನದ ಮುಖ್ಯವಿಷಯ “ಪ್ರೀತಿ ಶಾಶ್ವತ!” ಎಂದಾಗಿದೆ. ಯೆಹೋವನ ಪ್ರೀತಿಯ ಆರೈಕೆಯ ಕೆಳಗೆ ನಾವು ಯಾವಾಗಲೂ ಸುರಕ್ಷಿತರಾಗಿರಬಹುದು ಅನ್ನುವುದನ್ನು ಇದು ಮನಗಾಣಿಸಲಿದೆ.—1 ಕೊರಿಂ. 13:8.

^ ಪ್ಯಾರ. 19 1994, ಡಿಸೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯಲ್ಲಿ ಬಂದಿರುವ ‘ಅವನ ಕೃತ್ಯಗಳು ಅವನನ್ನು ಹಿಂಬಾಲಿಸುವವು’ ಎಂಬ ಲೇಖನ ನೋಡಿ.

^ ಪ್ಯಾರ. 65 ಚಿತ್ರ ವಿವರಣೆ: ಮಹಾ ಸಂಕಟದ ಸಮಯದಲ್ಲಿ ಸಾಕ್ಷಿಗಳ ಒಂದು ಚಿಕ್ಕ ಗುಂಪು ಸಭಾ ಕೂಟಕ್ಕಾಗಿ ಒಂದು ಕಾಡಿನಲ್ಲಿ ಧೈರ್ಯವಾಗಿ ಕೂಡಿಬಂದಿದೆ.

^ ಪ್ಯಾರ. 67 ಚಿತ್ರ ವಿವರಣೆ: ಯೆಹೋವನ ನಂಬಿಗಸ್ತ ಆರಾಧಕರ ಮಹಾ ಸಮೂಹವು ಮಹಾ ಸಂಕಟದಿಂದ ಪಾರಾಗುತ್ತದೆ ಮತ್ತು ಸಂತೋಷದಿಂದ ಜೀವಿಸುತ್ತದೆ!