ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 43

ಯೆಹೋವನನ್ನು ಮಾತ್ರ ಆರಾಧಿಸಿ

ಯೆಹೋವನನ್ನು ಮಾತ್ರ ಆರಾಧಿಸಿ

“ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು.”—ಮತ್ತಾ. 4:10.

ಗೀತೆ 59 ನಾವು ದೇವರಿಗೆ ಸಮರ್ಪಿತರು!

ಕಿರುನೋಟ *

1. ನಾವು ಯೆಹೋವನನ್ನು ಮಾತ್ರ ಯಾಕೆ ಆರಾಧಿಸಬೇಕು?

ಯೆಹೋವನು ನಮ್ಮನ್ನು ಸೃಷ್ಟಿ ಮಾಡಿ ನಮಗೆ ಜೀವ ಕೊಟ್ಟಿದ್ದಾನೆ. ಆದುದರಿಂದ ನಾವು ಆತನಿಗೆ ಸಂಪೂರ್ಣ ಭಕ್ತಿಯನ್ನು ತೋರಿಸಬೇಕು ಅಂದರೆ ಆತನನ್ನು ಮಾತ್ರ ಆರಾಧಿಸಬೇಕು. (ಪ್ರಕ. 4:11) ನಾವು ಯೆಹೋವನನ್ನು ಪ್ರೀತಿಸಿ, ಗೌರವಿಸುವುದಾದರೂ ಕೆಲವೊಮ್ಮೆ ಆತನಿಗೆ ಸಲ್ಲಬೇಕಾದ ಸಂಪೂರ್ಣ ಭಕ್ತಿಯನ್ನು ಸಲ್ಲಿಸಲು ತಪ್ಪಿಹೋಗಬಹುದು. ಹಾಗೆ ತಪ್ಪಿಹೋಗಲು ಕಾರಣ ಏನಿರಬಹುದು ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದರೆ ಮೊದಲಾಗಿ, ಯೆಹೋವನನ್ನು ಮಾತ್ರ ಆರಾಧಿಸುವುದು ಅಂದರೇನು ಎಂದು ನೋಡೋಣ.

2. ವಿಮೋಚನಕಾಂಡ 34:14​ರ ಪ್ರಕಾರ ಯೆಹೋವನನ್ನು ಮಾತ್ರ ಆರಾಧಿಸುವುದಾದರೆ ನಾವೇನು ಮಾಡುತ್ತೇವೆ?

ಬೈಬಲ್‌ ಪ್ರಕಾರ, ಯೆಹೋವನನ್ನು ಮಾತ್ರ ಆರಾಧಿಸುವುದರ ಅರ್ಥ ಆತನನ್ನು ತುಂಬ ಪ್ರೀತಿಸುವುದೇ ಆಗಿದೆ. ಅಂದರೆ ನಮ್ಮ ಹೃದಯದಲ್ಲಿ ಯೆಹೋವನನ್ನು ಬಿಟ್ಟು ಬೇರೆ ಯಾರಿಗೂ ಅಥವಾ ಬೇರೆ ಯಾವ ವಿಷಯಗಳಿಗೂ ನಾವು ಮೊದಲ ಸ್ಥಾನ ಕೊಡುವುದಿಲ್ಲ.—ವಿಮೋಚನಕಾಂಡ 34:14 ಓದಿ.

3. ಯೆಹೋವನ ಮೇಲಿರುವ ನಮ್ಮ ಪ್ರೀತಿ ಕುರುಡು ಪ್ರೀತಿಯಲ್ಲ ಎಂದು ಹೇಗೆ ಹೇಳಬಹುದು?

ಯೆಹೋವನ ಮೇಲಿರುವ ನಮ್ಮ ಪ್ರೀತಿ ಕುರುಡು ಪ್ರೀತಿಯಲ್ಲ. ಯಾಕೆಂದರೆ, ಆತನ ಬಗ್ಗೆ ಕಲಿತ ನಂತರವೇ ನಾವು ಆತನನ್ನು ಪ್ರೀತಿಸುತ್ತಿದ್ದೇವೆ. ಆತನ ಒಳ್ಳೇ ಗುಣಗಳನ್ನು ನೋಡಿ ಇಷ್ಟಪಟ್ಟಿದ್ದೇವೆ. ಆತನಿಗೇನು ಇಷ್ಟ, ಏನು ಇಷ್ಟ ಇಲ್ಲ ಅಂತ ತಿಳಿದಿದ್ದೇವೆ ಮತ್ತು ನಮಗೂ ಅದು ಸರಿ ಅನಿಸುತ್ತೆ. ನಮ್ಮ ಬಗ್ಗೆ ಆತನ ಉದ್ದೇಶ ಏನಂತ ತಿಳಿದಿದ್ದೇವೆ ಮತ್ತು ಆ ಉದ್ದೇಶ ನೆರವೇರಲಿಕ್ಕೆ ನಮ್ಮ ಸಂಪೂರ್ಣ ಬೆಂಬಲ ಕೊಡುತ್ತೇವೆ. ಯೆಹೋವನು ನಮಗೆ ತನ್ನ ಆಪ್ತಮಿತ್ರನಾಗಲು ಅವಕಾಶ ಕೊಟ್ಟು ನಮ್ಮನ್ನು ಗೌರವಿಸಿದ್ದಾನೆ. (ಕೀರ್ತ. 25:14) ಆತನ ಬಗ್ಗೆ ನಾವು ಕಲಿತಿರುವ ಎಲ್ಲಾ ವಿಷಯಗಳು ನಮ್ಮನ್ನು ಆತನಿಗೆ ಹತ್ತಿರವಾಗುವಂತೆ ಮಾಡಿವೆ.—ಯಾಕೋ. 4:8.

4. (ಎ) ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ಕುಗ್ಗಿಸಲು ಸೈತಾನನು ಏನು ಮಾಡುತ್ತಾನೆ? (ಬಿ)ನಾವು ಈ ಲೇಖನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

ಈ ಲೋಕ ಸೈತಾನನ ನಿಯಂತ್ರಣದಲ್ಲಿದೆ. ಹಾಗಾಗಿ, ನಾವು ಇಷ್ಟಪಡುವಂಥ ವಸ್ತುಗಳಿಗೆ ಜೀವನದಲ್ಲಿ ತುಂಬ ಪ್ರಾಮುಖ್ಯತೆ ಕೊಡಲು ಮತ್ತು ನಮ್ಮಲ್ಲಿರುವ ಕೆಟ್ಟ ಆಸೆಗಳನ್ನು ಬಡಿದೆಬ್ಬಿಸಲು ಸೈತಾನನು ಈ ಲೋಕವನ್ನು ಉಪಯೋಗಿಸುತ್ತಾನೆ. (ಎಫೆ. 2:1-3; 1 ಯೋಹಾ. 5:19) ಯೆಹೋವನೊಬ್ಬನಿಗೇ ನಮ್ಮ ಭಕ್ತಿ ಸಲ್ಲಿಸಲು ನಾವು ತಪ್ಪಿಹೋಗಬೇಕು ಅನ್ನುವುದೇ ಸೈತಾನನ ಉದ್ದೇಶವಾಗಿದೆ. ಹಾಗಾಗಿ, ನಮ್ಮ ಗಮನ ಬೇರೆ ವಿಷಯಗಳ ಕಡೆಗೆ ಹೋಗುವಂತೆ ಮಾಡುತ್ತಾನೆ. ಇದನ್ನು ಮಾಡಲು ಅವನು ಉಪಯೋಗಿಸುವ ಎರಡು ವಿಷಯಗಳ ಬಗ್ಗೆ ನಾವೀಗ ಪರಿಗಣಿಸೋಣ. (1) ಹಣ-ಆಸ್ತಿ ಮತ್ತು (2) ತಪ್ಪಾದ ಮನೋರಂಜನೆ.

ಹಣ-ಆಸ್ತಿ ಮಾಡುವ ಆಸೆಗೆ ಬಲಿಯಾಗಬೇಡಿ

5. ನಾವು ಯಾಕೆ ಹೆಚ್ಚು ಹಣ-ಆಸ್ತಿ ಮಾಡುವ ಆಸೆಯಿಂದ ದೂರವಿರಬೇಕು?

ನಮ್ಮೆಲ್ಲರಿಗೂ ಆಹಾರ, ಬಟ್ಟೆ ಮತ್ತು ಮನೆಯ ಅಗತ್ಯವಿದೆ. ಆದರೆ ನಾವು ಹೆಚ್ಚು ಹಣ-ಆಸ್ತಿ ಮಾಡುವ ಆಸೆಯಿಂದ ದೂರವಿರಬೇಕು. ಇಂದು ಹೆಚ್ಚಿನ ಜನರು ಹಣವನ್ನು ಮತ್ತು ಹಣದಿಂದ ಖರೀದಿಸಬಹುದಾದ ವಸ್ತುಗಳನ್ನು ತುಂಬ ಪ್ರೀತಿಸುತ್ತಾರೆ. (2 ತಿಮೊ. 3:2) ತನ್ನ ಶಿಷ್ಯರಿಗೆ ಕೂಡ ಹೆಚ್ಚು ಹಣ-ಆಸ್ತಿ ಮಾಡುವ ಆಸೆ ಬರಬಹುದು ಎಂದು ಯೇಸುವಿಗೆ ಗೊತ್ತಿತ್ತು. ಹಾಗಾಗಿ ಆತನು “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುವನು; ಅಥವಾ ಒಬ್ಬನಿಗೆ ಅಂಟಿಕೊಂಡು ಇನ್ನೊಬ್ಬನನ್ನು ಕಡೆಗಣಿಸುವನು. ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ” ಎಂದು ಹೇಳಿದನು. (ಮತ್ತಾ. 6:24) ಯೆಹೋವನ ಆರಾಧನೆ ಮಾಡುವ ಯಾರೇ ಆಗಲಿ ಹಣ-ಆಸ್ತಿ ಮಾಡುವುದರಲ್ಲಿ ಹೆಚ್ಚು ಸಮಯ-ಶಕ್ತಿಯನ್ನು ಕಳೆಯುವುದಾದರೆ ಅವರು ಇಬ್ಬರು ಯಜಮಾನರಿಗೆ ಸೇವೆ ಮಾಡುತ್ತಿದ್ದಾರೆ ಎಂದರ್ಥ. ಹೀಗೆ ಮಾಡುವವರು ಯೆಹೋವನನ್ನು ಮಾತ್ರ ಆರಾಧಿಸುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.

ಲವೊದಿಕೀಯದಲ್ಲಿದ್ದ ಕೆಲವರು ತಮ್ಮ ಬಗ್ಗೆ ಏನು ನೆನಸಿದರು? ಆದರೆ ಯೆಹೋವ ಮತ್ತು ಯೇಸುವಿಗೆ ಅವರ ಬಗ್ಗೆ ಏನನಿಸಿತು?(ಪ್ಯಾರ 6 ನೋಡಿ)

6. ಲವೊದಿಕೀಯ ಸಭೆಯವರಿಗೆ ಯೇಸು ಹೇಳಿದ ಮಾತುಗಳಿಂದ ನಾವೇನು ಕಲಿಯಬಹುದು?

ಒಂದನೇ ಶತಮಾನದಲ್ಲಿದ್ದ ಲವೊದಿಕೀಯ ಸಭೆಯವರು ‘ತಾವು ಐಶ್ವರ್ಯವಂತರು, ಐಶ್ವರ್ಯವನ್ನು ಗಳಿಸಿದ್ದೇವೆ ಮತ್ತು ತಮಗೆ ಯಾವುದರ ಆವಶ್ಯಕತೆಯೂ ಇಲ್ಲ’ ಎಂದು ನೆನೆಸಿದ್ದರು. ಆದರೆ ಯೆಹೋವ ಮತ್ತು ಯೇಸುವಿನ ದೃಷ್ಟಿಯಲ್ಲಿ ಅವರು ‘ದುರವಸ್ಥೆಯುಳ್ಳವರು, ಶೋಚನೀಯ ಸ್ಥಿತಿಯಲ್ಲಿರುವವರು, ಬಡವರು, ಕುರುಡರು ಮತ್ತು ಬಟ್ಟೆಯಿಲ್ಲದವರು ಆಗಿದ್ದರು.’ ಅವರು ಶ್ರೀಮಂತರಾಗಿದ್ದಾರೆ ಎಂಬ ಕಾರಣಕ್ಕೆ ಯೇಸು ಅವರಿಗೆ ಬುದ್ಧಿವಾದ ಕೊಡಲಿಲ್ಲ. ಬದಲಿಗೆ ಹಣ-ಆಸ್ತಿ ಮಾಡುವುದರ ಮೇಲೆ ಅವರಿಗಿದ್ದ ವ್ಯಾಮೋಹದಿಂದ ಯೆಹೋವನೊಟ್ಟಿಗಿದ್ದ ತಮ್ಮ ಸಂಬಂಧವನ್ನೇ ಹಾಳುಮಾಡಿಕೊಳ್ಳುತ್ತಿದ್ದರು. ಹಾಗಾಗಿ ಯೇಸು ಅವರಿಗೆ ಬುದ್ಧಿವಾದ ನೀಡಿದನು. (ಪ್ರಕ. 3:14-17) ನಮ್ಮ ಹೃದಯದಲ್ಲೂ ಹಣ-ಆಸ್ತಿ ಮಾಡುವುದರ ಬಗ್ಗೆ ಆಸೆ ಮೊಳಕೆ ಒಡೆಯುತ್ತಾ ಇದ್ದರೆ ಅಂಥ ಯೋಚನೆಯನ್ನು ಕೂಡಲೇ ಚಿವುಟಿ ಹಾಕಬೇಕು. ಇರುವುದರಲ್ಲೇ ತೃಪ್ತರಾಗಿರಲು ಕಲಿಯಬೇಕು. (1ತಿಮೊ. 6:7, 8) ಹಾಗೆ ಮಾಡದಿದ್ದಲ್ಲಿ, ನಾವು ಯೆಹೋವನನ್ನು ಪ್ರೀತಿಸುವುದರ ಜೊತೆಗೆ ಬೇರೆ ವಿಷಯಗಳನ್ನೂ ಪ್ರೀತಿಸಲು ಶುರುಮಾಡುತ್ತೇವೆ ಮತ್ತು ಯೆಹೋವನು ಅಂಥ ಆರಾಧನೆಯನ್ನು ಸ್ವೀಕರಿಸುವುದಿಲ್ಲ. ಯಾಕೆಂದರೆ ನಾವು ಆತನನ್ನು ‘ಪೂರ್ಣ ಹೃದಯದಿಂದ ಪ್ರೀತಿಸಬೇಕು’ ಎಂದು ಆತನು ಬಯಸುತ್ತಾನೆ. (ಮಾರ್ಕ 12:30) ಆದರೆ, ನಮ್ಮ ಜೀವನದಲ್ಲಿ ಹಣ-ಆಸ್ತಿನೇ ಹೇಗೆ ಸರ್ವಸ್ವ ಆಗಿಬಿಡಬಹುದು?

7-9. ಡೇವಿಡ್‌ ಎಂಬ ಹಿರಿಯನ ಅನುಭವದಿಂದ ನೀವೇನು ಕಲಿತಿರಿ?

ಅಮೆರಿಕದಲ್ಲಿರುವ ಡೇವಿಡ್‌ ಎಂಬ ಹಿರಿಯನ ಉದಾಹರಣೆ ಗಮನಿಸಿ. ಅವನು ತುಂಬ ಶ್ರಮಜೀವಿಯಾಗಿದ್ದನು. ಅವನಿಗೆ ಕೆಲಸನೇ ಜೀವನ ಆಗಿತ್ತು. ಹಾಗಾಗಿ ಅವನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಅವನಿಗೆ ಇನ್ನೂ ದೊಡ್ಡ ಸ್ಥಾನ, ಹೆಚ್ಚು ಸಂಬಳ ಸಿಕ್ಕಿತು. ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದ ಕಾರಣ ರಾಷ್ಟ್ರ ಮಟ್ಟದಲ್ಲಿ ಅವನಿಗೆ ಪ್ರಖ್ಯಾತಿ ಸಿಕ್ಕಿತು. ಇದು ಯೆಹೋವನಿಂದ ಸಿಕ್ಕಿರುವ ಆಶೀರ್ವಾದ ಎಂದು ಡೇವಿಡ್‌ ನೆನಸಿದನು. ಆದರೆ ಅದು ನಿಜನಾ?

ಮೂರು ಹೊತ್ತೂ ಕೆಲಸ ಮಾಡುವುದರಿಂದ ತಾನು ಯೆಹೋವನಿಂದ ದೂರ ಹೋಗುತ್ತಿದ್ದೀನಿ ಅಂತ ಡೇವಿಡ್‌ಗೆ ನಿಧಾನವಾಗಿ ಅರ್ಥವಾಯಿತು. “ಕೂಟಗಳಿಗೆ, ಸೇವೆಗೆ ಹೋದಾಗಲೂ ನನ್ನ ಕೆಲಸದಲ್ಲಿರುವ ಸಮಸ್ಯೆಗಳ ಬಗ್ಗೆನೇ ಯೋಚಿಸುತ್ತಿದ್ದೆ. ನಾನು ಕೈತುಂಬ ಹಣ ಸಂಪಾದಿಸುತ್ತಿದ್ದೆ, ಆದರೆ ತುಂಬ ಒತ್ತಡ ಇರುತ್ತಿತ್ತು. ನಮ್ಮ ಸಂಸಾರದಲ್ಲೂ ಸಮಸ್ಯೆಗಳು ಶುರುವಾದವು” ಎಂದು ಡೇವಿಡ್‌ ಹೇಳುತ್ತಾನೆ.

ಡೇವಿಡ್‌ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅಂತ ಯೋಚಿಸಿದನು. ಅವನು ತನ್ನ ಸನ್ನಿವೇಶವನ್ನು ಸರಿಪಡಿಸಲು ಒಂದು ನಿರ್ಧಾರ ಮಾಡಿದನು. ತನ್ನ ಕೆಲಸದ ಸಮಯವನ್ನು ಕಡಿಮೆ ಮಾಡಲು ಬಾಸ್‌ಗೆ ತಿಳಿಸಿದನು. ಬಾಸ್‌ ಒಪ್ಪಿಕೊಂಡರಾ? ಇಲ್ಲ, ಡೇವಿಡ್‌ ಕೆಲಸ ಕಳಕೊಂಡನು. ಆಗ ಅವನು ಏನು ಮಾಡಿದನು ಗೊತ್ತಾ? ಅವನ ಮಾತಲ್ಲೇ ಕೇಳಿ: “ಮಾರನೇ ದಿನನೇ, ಪ್ರತಿ ತಿಂಗಳು ಸಹಾಯಕ ಪಯನೀಯರ್‌ ಸೇವೆ ಮಾಡಲು ಅರ್ಜಿ ತುಂಬಿಸಿದೆ.” ಜೀವನಕ್ಕಾಗಿ ಡೇವಿಡ್‌ ಮತ್ತವನ ಪತ್ನಿ ಕ್ಲೀನಿಂಗ್‌ ಕೆಲಸ ಮಾಡೋಕೆ ಶುರುಮಾಡಿದರು. ಸ್ವಲ್ಪ ಸಮಯದ ನಂತರ ಅವನು ಪಯನೀಯರ್‌ ಸೇವೆ ಆರಂಭಿಸಿದನು. ನಂತರ ಅವನ ಪತ್ನಿಯೂ ಆರಂಭಿಸಿದಳು. ಜನರು ಕೀಳಾಗಿ ನೋಡುವಂಥ ಕೆಲಸವನ್ನು ಈ ದಂಪತಿ ಆರಿಸಿಕೊಂಡರು. ಅವರಿಗೆ ಯಾವ ರೀತಿಯ ಕೆಲಸ ಮಾಡುತ್ತಿದ್ದೇವೆ ಅನ್ನುವುದು ಮುಖ್ಯವಾಗಿರಲಿಲ್ಲ. ಮುಂಚೆ ಸಿಗುತ್ತಿದ್ದ ಸಂಬಳಕ್ಕೆ ಹೋಲಿಸಿದರೆ ಈಗಿನ ಸಂಬಳ ತುಂಬನೇ ಕಡಿಮೆ ಆಗಿತ್ತು. ಆದರೆ ಪ್ರತಿ ತಿಂಗಳು ಖರ್ಚಿಗೆ ಅಗತ್ಯವಿದ್ದಷ್ಟು ಹಣ ಅವರಿಗೆ ಸಿಗುತ್ತಿತ್ತು. ಅವರು ಯೆಹೋವನಿಗೆ ಮೊದಲ ಸ್ಥಾನ ಕೊಟ್ಟರು. ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡುವವರ ಅಗತ್ಯಗಳನ್ನು ಯೆಹೋವನು ಖಂಡಿತ ಪೂರೈಸುತ್ತಾನೆ ಎಂದು ಅವರು ಕಲಿತರು.—ಮತ್ತಾ. 6:31-33.

10. ನಮ್ಮ ಹೃದಮನದ ಯೋಚನೆ ಬಗ್ಗೆ ಜಾಗ್ರತೆವಹಿಸೋದು ಹೇಗೆ?

10 ನಾವು ಶ್ರೀಮಂತರಾಗಿರಲಿ ಬಡವರಾಗಿರಲಿ ನಮ್ಮ ಹೃದಮನದ ಯೋಚನೆ ಬಗ್ಗೆ ಜಾಗ್ರತೆವಹಿಸಬೇಕು. ಹೇಗೆ? ಹಣ-ಆಸ್ತಿ ಮೇಲೆ ಹೆಚ್ಚು ಪ್ರೀತಿ ಬೆಳೆಸಿಕೊಳ್ಳಬಾರದು. ಯೆಹೋವನ ಸೇವೆಗಿಂತ ನಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬಾರದು. ಹಾಗೇನಾದರೂ ಕೊಡುತ್ತಿದ್ದೇವಾ ಅಂತ ಹೇಗೆ ಕಂಡುಹಿಡಿಯೋದು? ಈ ಪ್ರಶ್ನೆಗಳನ್ನು ಕೇಳಿಕೊಳ್ಳೋಣ: ‘ಕೂಟಕ್ಕೆ, ಸೇವೆಗೆ ಹೋದಾಗಲೂ ಕೆಲಸದ ಬಗ್ಗೆನೇ ಯೋಚಿಸುತ್ತೇನಾ? ಭವಿಷ್ಯಕ್ಕಾಗಿ ಹಣ-ಆಸ್ತಿ ಕೂಡಿಡಬೇಕೆಂದು ಯಾವಾಗಲೂ ಯೋಚಿಸುತ್ತೇನಾ? ಹಣ-ಆಸ್ತಿಯ ಆಸೆಯಿಂದಾಗಿ ನನ್ನ ಸಂಸಾರದಲ್ಲಿ ಸಮಸ್ಯೆಗಳು ಬರುತ್ತಿವೆಯಾ? ಯೆಹೋವನ ಸೇವೆ ಹೆಚ್ಚು ಮಾಡಬೇಕೆಂಬ ಉದ್ದೇಶದಿಂದ ಜನ ಕೀಳಾಗಿ ನೋಡುವಂಥ ಕೆಲಸ ಮಾಡಕ್ಕೂ ಮುಂದೆ ಬರುತ್ತೇನಾ?’ (1 ತಿಮೊ. 6:9-12) ಈ ಪ್ರಶ್ನೆಗಳ ಬಗ್ಗೆ ಯೋಚಿಸುವಾಗ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ತನ್ನನ್ನು ಆರಾಧಿಸುವವರನ್ನು ‘ಎಂದಿಗೂ ಕೈಬಿಡುವುದಿಲ್ಲ, ತೊರೆಯುವುದಿಲ್ಲ’ ಎಂದು ಮಾತು ಕೊಟ್ಟಿದ್ದಾನೆ ಅನ್ನೋದನ್ನು ಮರೆಯದಿರೋಣ. ಆ ನಂಬಿಕೆಯಿಂದಲೇ ಪೌಲ “ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ” ಎಂದು ಬರೆದನು.—ಇಬ್ರಿ. 13:5, 6.

ಮನೋರಂಜನೆಯನ್ನು ಆರಿಸುವಾಗ ಎಚ್ಚರವಹಿಸಿ

11. ಒಬ್ಬ ವ್ಯಕ್ತಿಯ ಮೇಲೆ ಮನೋರಂಜನೆ ಹೇಗೆ ಪ್ರಭಾವ ಬೀರಬಹುದು?

11 ನಾವು ಜೀವನವನ್ನು ಆನಂದಿಸಬೇಕು ಅನ್ನುವುದೇ ಯೆಹೋವನ ಆಸೆ. ಬೈಬಲ್‌ ಸಹ “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ” ಎಂದು ಹೇಳುತ್ತದೆ. (ಪ್ರಸಂ. 2:24) ಇಂಥ ಆನಂದ ನಮಗೆ ಮನೋರಂಜನೆಯಿಂದ ಸಿಗುತ್ತದೆ. ಆದರೆ ಹೆಚ್ಚಿನ ಮನೋರಂಜನೆಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ದೇವರ ವಾಕ್ಯವು ಖಂಡಿಸುವಂಥ ವಿಷಯಗಳನ್ನು ಸರಿ ಎಂದು ಒಪ್ಪಿಕೊಂಡು, ಅವನ್ನು ಪ್ರೀತಿಸುವಷ್ಟರ ಮಟ್ಟಿಗೆ ಈ ಮನೋರಂಜನೆಗಳು ಜನರನ್ನು ಪ್ರೇರಿಸುತ್ತವೆ.

ನೀವು ನೋಡುವ ಮನೋರಂಜನೆಯನ್ನು ಯಾರು ತಯಾರಿಸುತ್ತಾರೆ? (ಪ್ಯಾರ 11-14 ನೋಡಿ) *

12. ಒಂದನೇ ಕೊರಿಂಥ 10:21, 22​ರಲ್ಲಿ ತಿಳಿಸಲಾದಂತೆ ನಾವೇಕೆ ಮನೋರಂಜನೆಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಎಚ್ಚರ ವಹಿಸಬೇಕು?

12 ನಾವು ಯೆಹೋವನನ್ನು ಮಾತ್ರ ಆರಾಧಿಸಲು ಬಯಸುವುದರಿಂದ ‘ಯೆಹೋವನ ಮೇಜಿನಲ್ಲಿರುವ’ ಆಹಾರ ತಿನ್ನುತ್ತಾ ಅದೇ ಸಮಯದಲ್ಲಿ ‘ದೆವ್ವಗಳ ಮೇಜಿನಲ್ಲಿರುವುದನ್ನು’ ತಿನ್ನುವುದಕ್ಕೆ ಸಾಧ್ಯವಿಲ್ಲ. (1 ಕೊರಿಂಥ 10:21, 22 ಓದಿ.) ಒಬ್ಬರ ಜೊತೆ ಕೂತು ಊಟ ಮಾಡುವುದು ಅವರ ಜೊತೆ ಆಪ್ತ ಸ್ನೇಹವಿದೆ ಅನ್ನುವುದನ್ನು ಸೂಚಿಸುತ್ತದೆ. ಹಿಂಸಾಚಾರ, ದೆವ್ವ-ಭೂತ, ಅನೈತಿಕತೆ ಇರುವ ಅಥವಾ ತಪ್ಪಾದ ಆಸೆ ಮತ್ತು ಮನೋಭಾವ ಹುಟ್ಟಿಸುವ ಮನೋರಂಜನೆಯನ್ನು ನೋಡುವುದಾದರೆ ನಾವು ದೇವರ ವೈರಿಗಳು ತಯಾರಿಸಿದ ಆಹಾರವನ್ನು ಅವರ ಜೊತೆನೇ ಕೂತು ತಿಂದಂತೆ ಇರುತ್ತದೆ. ಇದರಿಂದಾಗಿ ನಾವು ಹಾಳಾಗೋದು ಮಾತ್ರ ಅಲ್ಲ, ಯೆಹೋವನ ಜೊತೆಗಿರುವ ನಮ್ಮ ಸ್ನೇಹನೂ ಹಾಳಾಗುತ್ತದೆ.

13-14. (ಎ) ಮನೋರಂಜನೆಯನ್ನು ಆಹಾರಕ್ಕೆ ಹೇಗೆ ಹೋಲಿಸಬಹುದು? (ಬಿ) ಕೆಟ್ಟ ಮನೋರಂಜನೆಯಿಂದ ಹಾನಿಯಾಗುತ್ತದೆ ಎಂದು ಯಾಕೋಬ 1:14, 15​ರಿಂದ ಹೇಗೆ ಗೊತ್ತಾಗುತ್ತದೆ?

13 ಮನೋರಂಜನೆಯನ್ನು ಆಹಾರಕ್ಕೆ ಹೇಗೆ ಹೋಲಿಸಬಹುದು? ಆಹಾರವನ್ನು ನಾವು ತಿನ್ನೋ ಮುಂಚೆ ಅದನ್ನು ತಿನ್ನಬೇಕಾ ಬೇಡವಾ ಅಂತ ನಿರ್ಧರಿಸಬಹುದು. ಆದರೆ ಅದನ್ನು ತಿಂದ ಮೇಲೆ ತನ್ನಿಂದ ತಾನೇ ಜೀರ್ಣವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವುದರಿಂದ ಅದು ನಮ್ಮ ದೇಹದ ಮೇಲೆ ಪ್ರಭಾವ ಬೀರದಂತೆ ತಡೆಯಲು ನಮಗೆ ಸಾಧ್ಯವಿಲ್ಲ. ಹಾಗಾಗಿ ನಾವು ಒಳ್ಳೆಯ ಆಹಾರ ಸೇವಿಸಿದರೆ ಆರೋಗ್ಯವಾಗಿರುತ್ತೇವೆ. ಕೆಟ್ಟ ಆಹಾರ ಸೇವಿಸಿದರೆ ನಮ್ಮ ಆರೋಗ್ಯ ಕೆಡುತ್ತದೆ. ಅದರ ಪರಿಣಾಮ ನಮಗೆ ತಿಂದ ತಕ್ಷಣ ಗೊತ್ತಾಗದಿದ್ದರೂ, ಸಮಯ ಹೋಗುತ್ತಾ ಖಂಡಿತ ಗೊತ್ತಾಗುತ್ತದೆ.

14 ಅದೇ ರೀತಿ ಯಾವ ಮನೋರಂಜನೆಯನ್ನು ಆರಿಸಿಕೊಳ್ಳಬೇಕು, ಯಾವುದನ್ನು ಆರಿಸಿಕೊಳ್ಳಬಾರದು ಅಂತ ಮೊದಲೇ ನಿರ್ಧರಿಸಬಹುದು. ಆದರೆ ಅದನ್ನು ಆರಿಸಿದ ನಂತರ ಅದು ನಮ್ಮ ಮನಸ್ಸು-ಭಾವನೆಗಳ ಮೇಲೆ ಪ್ರಭಾವ ಬೀರದಂತೆ ತಡೆಯಲು ನಮಗೆ ಆಗಲ್ಲ. ಒಳ್ಳೇ ಮನೋರಂಜನೆ ನಮಗೆ ಚೈತನ್ಯ ಕೊಡುತ್ತದೆ, ಕೆಟ್ಟ ಮನೋರಂಜನೆ ಹಾನಿ ಮಾಡುತ್ತದೆ. (ಯಾಕೋಬ 1:14, 15 ಓದಿ.) ಕೆಟ್ಟ ಮನೋರಂಜನೆಯಿಂದಾಗುವ ಪರಿಣಾಮಗಳು ಕೂಡಲೇ ಕಾಣಿಸದೇ ಇರಬಹುದು. ಆದರೆ ನಿಧಾನವಾಗಿಯಾದರೂ ಅವು ನಮ್ಮ ಮೇಲೆ ಖಂಡಿತ ಪರಿಣಾಮ ಬೀರಿರುತ್ತವೆ. “ಮೋಸಹೋಗಬೇಡಿರಿ; ದೇವರು ಅಪಹಾಸ್ಯವನ್ನು ಸಹಿಸುವಂಥವನಲ್ಲ. ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು; ತನ್ನ ಶರೀರಭಾವಕ್ಕೆ ಅನುಸಾರವಾಗಿ ಬಿತ್ತುತ್ತಿರುವವನು ತನ್ನ ಶರೀರಭಾವದಿಂದ ನಾಶನವನ್ನು ಕೊಯ್ಯುವನು” ಎಂದು ಬೈಬಲ್‌ ನಮ್ಮನ್ನು ಎಚ್ಚರಿಸುತ್ತದೆ. (ಗಲಾ. 6:7, 8) ಯೆಹೋವನು ದ್ವೇಷಿಸುವಂಥ ಎಲ್ಲಾ ಮನೋರಂಜನೆಯನ್ನು ನಾವೂ ದ್ವೇಷಿಸುವುದು ತುಂಬ ಪ್ರಾಮುಖ್ಯ.—ಕೀರ್ತ. 97:10.

15. ನಾವು ಸಂತೋಷವಾಗಿರಲು ಯೆಹೋವನು ಯಾವ ಉಡುಗೊರೆಯನ್ನು ಕೊಟ್ಟಿದ್ದಾನೆ?

15 ಅನೇಕ ಯೆಹೋವನ ಸಾಕ್ಷಿಗಳು ನಮ್ಮ ಇಂಟರ್‌ನೆಟ್‌ ಟಿ.ವಿ. ಸ್ಟೇಷನ್‌ ಆಗಿರುವ JW ಪ್ರಸಾರ ನೋಡಲು ಇಷ್ಟಪಡುತ್ತಾರೆ. ಮೆರ್ಲಿನ್‌ ಎಂಬ ಸಹೋದರಿ ಹೇಳುವುದು: “JW ಪ್ರಸಾರದಿಂದ ನನಗೆ ತುಂಬಾನೇ ಸಂತೋಷ ಸಿಕ್ಕಿದೆ. ಅದರಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನಾನು ನೋಡಬಹುದು, ಯಾಕೆಂದರೆ ಅದರಲ್ಲಿ ಬರೋದೆಲ್ಲಾ ಒಳ್ಳೇ ವಿಷಯಗಳೇ. ನನಗೆ ಒಂಟಿತನ ಕಾಡಿದಾಗ ಅಥವಾ ನಿರುತ್ಸಾಹ ಆದಾಗ JW ಪ್ರಸಾರದಲ್ಲಿ ಬರುವ ಭಾಷಣ ಅಥವಾ ಮಾರ್ನಿಂಗ್‌ ವರ್ಶಿಪ್‌ ನೋಡಿ ಉತ್ತೇಜನ ಪಡಕೊಳ್ಳುತ್ತೇನೆ. ಇದು ಯೆಹೋವ ಮತ್ತು ಆತನ ಸಂಘಟನೆಗೆ ನಾನು ಹತ್ತಿರವಾಗಲಿಕ್ಕೆ ಸಹಾಯ ಮಾಡಿದೆ. JW ಪ್ರಸಾರವು ನನ್ನ ಬದುಕನ್ನೇ ಬದಲಾಯಿಸಿದೆ.” ಯೆಹೋವನು ಕೊಟ್ಟಿರುವ ಉಡುಗೊರೆಯಿಂದ ನೀವು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದೀರಾ? JW ಪ್ರಸಾರದಲ್ಲಿ ಪ್ರತಿ ತಿಂಗಳು ಹೊಸ ಕಾರ್ಯಕ್ರಮ ಬರುತ್ತದೆ. ಅದನ್ನು ಮತ್ತು ಅನೇಕ ಆಡಿಯೋ, ವಿಡಿಯೋ ಕಾರ್ಯಕ್ರಮಗಳು ಮತ್ತು ಪ್ರೋತ್ಸಾಹ ಕೊಡುವಂಥ ಗೀತೆಗಳನ್ನು ನೀವು ಯಾವಾಗ ಬೇಕಿದ್ದರೂ ನೋಡಬಹುದು ಅಥವಾ ಕೇಳಿಸಿಕೊಳ್ಳಬಹುದು.

16-17. (ಎ) ಮನೋರಂಜನೆಗಾಗಿ ಸಮಯ ಕಳೆಯುವ ವಿಷಯದಲ್ಲಿ ನಾವು ಯಾಕೆ ಎಚ್ಚರ ವಹಿಸಬೇಕು? (ಬಿ) ಇದನ್ನು ಹೇಗೆ ಮಾಡಬಹುದು?

16 ನಾವು ಎಂಥ ಮನೋರಂಜನೆಯನ್ನು ಆಯ್ಕೆ ಮಾಡಬೇಕು ಅನ್ನುವುದರ ಜೊತೆಗೆ, ಅದಕ್ಕಾಗಿ ಎಷ್ಟು ಸಮಯ ಕಳೆಯುತ್ತಿದ್ದೇವೆ ಅನ್ನುವ ವಿಷಯದಲ್ಲೂ ಎಚ್ಚರ ವಹಿಸಬೇಕು. ಇಲ್ಲದೆ ಹೋದರೆ ಯೆಹೋವನ ಸೇವೆಯನ್ನೂ ಬದಿಗಿಟ್ಟು ಮನೋರಂಜನೆಯಲ್ಲಿಯೇ ಕಾಲ ಕಳೆದುಬಿಡುತ್ತೇವೆ. ಮನೋರಂಜನೆಯಲ್ಲಿ ಹೆಚ್ಚು ಸಮಯ ಕಳೆಯೋದನ್ನು ಕಡಿಮೆ ಮಾಡೋದು ಕೆಲವರಿಗೆ ತುಂಬ ಕಷ್ಟ. 18 ವಯಸ್ಸಿನ ಅಬೀಗೈಲ್‌ ಎಂಬ ಸಹೋದರಿ ಹೇಳುವುದು: “ದಿನವೆಲ್ಲಾ ಬ್ಯುಸಿ ಇರ್ತೇನೆ. ಸಂಜೆ ಮನೆಗೆ ಬಂದು ಟಿವಿ ನೋಡುವಾಗ ಹಾಯೆನಿಸುತ್ತೆ. ಆದರೆ ಎಚ್ಚರ ವಹಿಸದಿದ್ದರೆ ಗಂಟೆಗಟ್ಟಲೆ ಟಿವಿ ಮುಂದೆ ಕೂತುಕೊಂಡು ಬಿಡುತ್ತೇನೆ.” 21 ವಯಸ್ಸಿನ ಸ್ಯಾಮ್ಯೆಲ್‌ ಹೇಳುವುದು: “ಇಂಟರ್‌ನೆಟ್‌ನಲ್ಲಿ ಬರುವ ಚಿಕ್ಕ ವಿಡಿಯೋಗಳನ್ನು ನೋಡೋಕೆ ನನಗಿಷ್ಟ. ಒಂದೇ ಒಂದು ನೋಡಬೇಕು ಅಂತ ಅಂದುಕೊಂಡು ಕೂರುತ್ತೇನೆ, ಆದರೆ ನನಗೇ ಗೊತ್ತಿಲ್ಲದೆ ಒಂದಾದ ಮೇಲೊಂದು ನೋಡುತ್ತಾ ಮೂರು-ನಾಲ್ಕು ಗಂಟೆ ಅದರಲ್ಲೇ ಕಳೆದಿರುತ್ತೇನೆ.”

17 ಮನೋರಂಜನೆಗಾಗಿ ನೀವು ಕಳೆಯುವ ಸಮಯವನ್ನು ಹೇಗೆ ಕಡಿಮೆ ಮಾಡಬಹುದು? ಮೊದಲಿಗೆ ನೀವು ಅದಕ್ಕಾಗಿ ಎಷ್ಟು ಸಮಯ ಕಳೆಯುತ್ತಿದ್ದೀರಿ ಎಂದು ಗೊತ್ತುಮಾಡಿಕೊಳ್ಳಬೇಕು. ನೀವದನ್ನು ಬರೆದಿಡಬಹುದು. ಟಿವಿ, ಇಂಟರ್‌ನೆಟ್‌ ನೋಡುವುದರಲ್ಲಿ ಮತ್ತು ಮೊಬೈಲ್‌ನಲ್ಲಿ ಗೇಮ್ಸ್‌ ಆಡುವುದರಲ್ಲಿ ನೀವು ಎಷ್ಟು ಸಮಯ ಕಳೆಯುತ್ತಿದ್ದೀರಿ ಅಂತ ಕ್ಯಾಲೆಂಡರ್‌ನಲ್ಲಿ ಬರೆಯಿರಿ. ತುಂಬ ಸಮಯ ಅದಕ್ಕಾಗಿ ನೀವು ಕಳೆಯುತ್ತಿದ್ದರೆ ಒಂದು ಶೆಡ್ಯೂಲ್‌ ಮಾಡಿ. ಅದರಲ್ಲಿ ಮೊದಲಿಗೆ ತುಂಬ ಪ್ರಾಮುಖ್ಯ ವಿಷಯಗಳಿಗೆ ಎಷ್ಟು ಸಮಯ ಕಳೆಯಬೇಕು ಅನ್ನುವುದನ್ನು ಬರೆಯಿರಿ. ನಂತರ ಮನೋರಂಜನೆಗಾಗಿ ಎಷ್ಟು ಸಮಯ ಕಳೆಯಬೇಕು ಅನ್ನುವುದನ್ನು ಬರೆಯಿರಿ. ನೀವು ಮಾಡಿರುವ ಶೆಡ್ಯೂಲ್‌ ಪ್ರಕಾರನೇ ನಡಕೊಳ್ಳುವುದಕ್ಕೆ ಯೆಹೋವನ ಸಹಾಯ ಕೇಳಿ. ಆಗ ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಕುಟುಂಬ ಆರಾಧನೆ ಮಾಡಲು, ಸಭಾ ಕೂಟಗಳಿಗೆ ಮತ್ತು ಸೇವೆಗೆ ಹೋಗಲು ನಿಮಗೆ ಸಮಯ, ಶಕ್ತಿ ಇರುತ್ತದೆ. ನೀವು ಯೆಹೋವನಿಗಾಗಿ ಹೆಚ್ಚು ಸಮಯ ಬದಿಗಿಡುವುದರಿಂದ ಮನೋರಂಜನೆಗಾಗಿ ಸಮಯ ಕಳೆಯುವಾಗ ನಿಮ್ಮ ಮನಸ್ಸಾಕ್ಷಿಯೂ ಚುಚ್ಚುವುದಿಲ್ಲ.

ಯೆಹೋವನನ್ನು ಮಾತ್ರ ಆರಾಧಿಸುವುದನ್ನು ಯಾವತ್ತೂ ನಿಲ್ಲಿಸಬೇಡಿ

18-19. ನಮ್ಮ ಸಂಪೂರ್ಣ ಭಕ್ತಿ ಯೆಹೋವನೊಬ್ಬನಿಗೇ ಅನ್ನುವುದನ್ನು ನಾವು ಹೇಗೆ ತೋರಿಸಿಕೊಡಬಹುದು?

18 ಅಪೊಸ್ತಲ ಪೇತ್ರನು ಸೈತಾನನ ಲೋಕದ ಅಂತ್ಯದ ಬಗ್ಗೆ ಮತ್ತು ಮುಂದೆ ಬರಲಿರುವ ಹೊಸ ಲೋಕದ ಬಗ್ಗೆ ಬರೆದ ನಂತರ ಹೀಗೆ ಹೇಳಿದನು: “ಪ್ರಿಯರೇ, ನೀವು ಇವುಗಳನ್ನು ಎದುರುನೋಡುತ್ತಿರುವುದರಿಂದ ಕೊನೆಗೆ ಆತನ ದೃಷ್ಟಿಯಲ್ಲಿ ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು ಆಗಿ ಕಂಡುಬರಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ.” (2 ಪೇತ್ರ 3:14) ನಾವು ಈ ಮಾತಿಗೆ ವಿಧೇಯರಾಗಿ ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಜೀವಿಸಿದರೆ ಮತ್ತು ಆತನನ್ನು ಮಾತ್ರ ಆರಾಧಿಸಿದರೆ ನಮ್ಮ ಸಂಪೂರ್ಣ ಭಕ್ತಿ ಯೆಹೋವನೊಬ್ಬನಿಗೇ ಎಂದು ತೋರಿಸಿಕೊಡುತ್ತೇವೆ.

19 ಸೈತಾನ ಮತ್ತು ಅವನ ಲೋಕ ಇನ್ನು ಮುಂದಕ್ಕೂ ನಮ್ಮ ಜೀವನದಲ್ಲಿ ನಾವು ಯೆಹೋವನಿಗಿಂತ ಬೇರೆ ವಿಷಯಗಳಿಗೇ ಹೆಚ್ಚು ಪ್ರಾಮುಖ್ಯತೆ ಕೊಡುವಂತೆ ಪ್ರೇರಿಸುತ್ತಲೇ ಇರುತ್ತದೆ. (ಲೂಕ 4:13) ಏನೇ ಆದರೂ ನಮ್ಮ ಹೃದಯದಲ್ಲಿ ಯೆಹೋವನಿಗಿರುವ ಸ್ಥಾನವನ್ನು ಬೇರೆ ಯಾರಿಗೇ ಆಗಲಿ, ಯಾವುದಕ್ಕೇ ಆಗಲಿ ಕೊಡುವುದಿಲ್ಲ. ಯೆಹೋವನನ್ನು ಮಾತ್ರ ಆರಾಧಿಸಬೇಕೆಂಬ ನಮ್ಮ ನಿರ್ಣಯವನ್ನು ಯಾವತ್ತಿಗೂ ಬಿಟ್ಟುಕೊಡಲ್ಲ.

ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ

^ ಪ್ಯಾರ. 5 ಯೆಹೋವನ ಸೇವೆ ಮಾಡುವುದೆಂದರೆ ನಮಗೆ ಪಂಚಪ್ರಾಣ. ಆದರೆ ನಾವು ಯೆಹೋವನನ್ನು ಮಾತ್ರ ಆರಾಧಿಸುತ್ತಿದ್ದೇವಾ? ಇದಕ್ಕೆ ಉತ್ತರ ನಾವು ಮಾಡುವ ನಿರ್ಣಯಗಳಿಂದ ಗೊತ್ತಾಗುತ್ತದೆ. ಹಾಗಾಗಿ, ನಾವು ಹಣ-ಆಸ್ತಿ ಮತ್ತು ಮನೋರಂಜನೆಯ ಬಗ್ಗೆ ಯಾವ ನಿರ್ಣಯ ಮಾಡುತ್ತಿದ್ದೇವೆ ಎಂದು ಪರೀಕ್ಷಿಸೋಣ.

^ ಪ್ಯಾರ. 53 ಚಿತ್ರ ವಿವರಣೆ: ಗಲೀಜಾದ ಅಡುಗೆ ಮನೆಯಲ್ಲಿ ತಯಾರಿಸಿರುವ ಆಹಾರವನ್ನು ತಿನ್ನಲು ನಾವು ಇಷ್ಟಪಡಲ್ಲ ಅಲ್ವಾ? ಅಂದ ಮೇಲೆ ಹಿಂಸಾಚಾರ, ದೆವ್ವ-ಭೂತ ಅಥವಾ ಅನೈತಿಕತೆ ಇರುವ ಮನೋರಂಜನೆ ನೋಡಲು ಇಷ್ಟಪಡ್ತೀವಾ?