1919—ನೂರು ವರ್ಷಗಳ ಹಿಂದೆ
1919ರಷ್ಟಕ್ಕೆ ಮೊದಲನೇ ಮಹಾ ಯುದ್ಧ ಮುಗಿದಿತ್ತು. ಈ ಯುದ್ಧ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ನಡೆದಿತ್ತು. 1918ರ ಕೊನೆಯಷ್ಟಕ್ಕೆ ಎಲ್ಲಾ ದೇಶಗಳು ಯುದ್ಧವನ್ನು ನಿಲ್ಲಿಸಿದವು ಮತ್ತು ಜನವರಿ 18, 1919ರಂದು ಪ್ಯಾರಿಸ್ ಶಾಂತಿ ಸಮ್ಮೇಳನ ಆರಂಭವಾಯಿತು. ಆ ಸಮ್ಮೇಳನದ ಒಂದು ಸಾಧನೆ ವರ್ಸೈಲ್ಸ್ ಒಪ್ಪಂದ. ಈ ಒಪ್ಪಂದದಿಂದಾಗಿ ಜರ್ಮನಿಯ ವಿರುದ್ಧ ಬೇರೆ-ಬೇರೆ ರಾಷ್ಟ್ರಗಳು ಒಟ್ಟಾಗಿ ಮಾಡಿದ ಯುದ್ಧ ನಿಂತುಹೋಯಿತು. ಈ ಒಪ್ಪಂದಕ್ಕೆ ಜೂನ್ 28, 1919ರಂದು ಸಹಿ ಹಾಕಲಾಯಿತು.
ಈ ಒಪ್ಪಂದದಿಂದಾಗಿ ಜನಾಂಗ ಸಂಘ (ರಾಷ್ಟ್ರಗಳ ಸಂಘ) ಎಂಬ ಹೊಸ ಸಂಸ್ಥೆಯ ಸ್ಥಾಪನೆಯಾಯಿತು. “ಅಂತಾರಾಷ್ಟ್ರೀಯ ಸಹಕಾರ, ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವುದೇ” ಇದರ ಉದ್ದೇಶವಾಗಿತ್ತು. ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕ ಧರ್ಮಗಳವರು ಈ ಸಂಸ್ಥೆಗೆ ಬೆಂಬಲ ನೀಡಿದರು. ಈ ಸಂಸ್ಥೆಯು “ಭೂಮಿಯಲ್ಲಿರುವ ದೇವರ ರಾಜ್ಯ” ಎಂದು ಅಮೆರಿಕದ ಫೆಡರಲ್ ಕೌನ್ಸಿಲ್ ಆಫ್ ದ ಚರ್ಚಸ್ ಆಫ್ ಕ್ರೈಸ್ಟ್ ಹಾಡಿಹೊಗಳಿತು. ಈ ಕೌನ್ಸಿಲ್ ತನ್ನ ಪ್ರತಿನಿಧಿಗಳನ್ನು ಪ್ಯಾರಿಸ್ ಶಾಂತಿ ಸಮ್ಮೇಳನಕ್ಕೆ ಕಳುಹಿಸುವ ಮೂಲಕ ಜನಾಂಗ ಸಂಘಕ್ಕೆ ತನ್ನ ಬೆಂಬಲ ನೀಡಿತು. ಆ ಪ್ರತಿನಿಧಿಗಳಲ್ಲಿ ಒಬ್ಬರು, ಈ ಸಮ್ಮೇಳನವು “ಲೋಕದ ಇತಿಹಾಸದಲ್ಲೇ ಹೊಸ ಯುಗವನ್ನು ಸ್ಥಾಪಿಸಿದೆ” ಎಂದು ಹೇಳಿದರು.
ಅವರು ಹೇಳಿದಂತೆ ಹೊಸ ಯುಗ ಆರಂಭವಾಗಿತ್ತು. ಆದರೆ ಅದನ್ನು ಆರಂಭಿಸಿದ್ದು ಆ ಸಮ್ಮೇಳನದಲ್ಲಿದ್ದ ಜನರಲ್ಲ. 1919ರಲ್ಲಿ ಹೊಸ ಯುಗ ಆರಂಭವಾಗಿದ್ದು ಸಾರುವ ಕೆಲಸದಲ್ಲಿ. ಆಗಿನಿಂದ ಯೆಹೋವನು ಹಿಂದೆಂದಿಗಿಂತಲೂ ಹೆಚ್ಚು ಸಾರುವಂತೆ ತನ್ನ ಜನರಿಗೆ ಬೇಕಾದ ಬಲವನ್ನು ಕೊಟ್ಟನು. ಆದರೆ ಇದೆಲ್ಲಾ ನಡೆಯುವುದಕ್ಕೂ ಮುಂಚೆ ಬೈಬಲ್ ವಿದ್ಯಾರ್ಥಿಗಳಲ್ಲಿ ಕೆಲವು ದೊಡ್ಡ ಬದಲಾವಣೆಗಳು ಆಗಲಿದ್ದವು.
ಕಠಿಣ ನಿರ್ಣಯ
ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ವಾರ್ಷಿಕ ಚುನಾವಣೆಯು 1919ರ ಜನವರಿ 4ರಂದು ನಡೆಯಬೇಕೆಂದು ಯೋಜಿಸಲಾಗಿತ್ತು. ಆದರೆ ಆ ಸಮಯದಲ್ಲಿ ಯೆಹೋವನ ಜನರ ಮುಂದಾಳುತ್ವ ವಹಿಸುತ್ತಿದ್ದ ಜೋಸೆಫ್ ಎಫ್. ರದರ್‌ಫರ್ಡ್‌ರನ್ನು ಮತ್ತು ಇತರ ಏಳು ಸಹೋದರರನ್ನು ಅನ್ಯಾಯವಾಗಿ ಅಮೆರಿಕದ ಜಾರ್ಜಿಯದಲ್ಲಿನ ಅಟ್ಲಾಂಟದ ಜೈಲಿಗೆ ಹಾಕಲಾಗಿತ್ತು. ಹಾಗಾಗಿ, ಆಫೀಸರ್‌ಗಳಾಗಿದ್ದ ಈ ಸಹೋದರರ ಹೆಸರನ್ನೂ ಚುನಾವಣೆಯಲ್ಲಿ ಸೇರಿಸಬೇಕಾ ಅಥವಾ ಅವರ ಬದಲಿಗೆ ಬೇರೆಯವರನ್ನು ಆರಿಸಬೇಕಾ ಎಂಬ ಗೊಂದಲ ಉಂಟಾಯಿತು.
ಜೈಲಿನಲ್ಲಿದ್ದ ಸಹೋದರ ರದರ್‌ಫರ್ಡ್‌ರಿಗೆ ನಮ್ಮ ಸಂಘಟನೆಯ ಭವಿಷ್ಯದ ಬಗ್ಗೆ ಯೋಚನೆಯಾಯಿತು. ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ಚುನಾಯಿಸುವುದೇ ಒಳ್ಳೇದು ಎಂದು ಕೆಲವು ಸಹೋದರರು ಯೋಚಿಸುತ್ತಿದ್ದಾರೆ ಎಂದು ರದರ್‌ಫರ್ಡ್‌ರಿಗೆ ಗೊತ್ತಿತ್ತು. ಆದ್ದರಿಂದ ಅವರು ವಾರ್ಷಿಕ ಚುನಾವಣೆಗಾಗಿ ಸೇರಿ ಬಂದಿದ್ದ ಜನರಿಗಾಗಿ ಒಂದು ಪತ್ರ ಬರೆದರು. ಅದರಲ್ಲಿ ಇವ್ಯಾಂಡರ್ ಜೆ. ಕೌರ್ಡ್‌ರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಹೇಳಿದರು. ಸಹೋದರ ಕೌರ್ಡ್ “ಪ್ರಶಾಂತ” ಸ್ವಭಾವದ, ‘ವಿವೇಚನೆಯುಳ್ಳ’ ಮತ್ತು ‘ಕರ್ತನಿಗೆ ನಿಷ್ಠರಾಗಿರುವ’ ಸಹೋದರರಾಗಿದ್ದಾರೆ ಎಂದು ರದರ್‌ಫರ್ಡ್‌ರು ಬರೆದಿದ್ದರು. ಆದರೆ ಅನೇಕ ಸಹೋದರರು ಈ ಚುನಾವಣೆಯನ್ನೇ ಆರು ತಿಂಗಳು ಮುಂದೂಡಲು ಬಯಸಿದರು.
ಸೆರೆಯಲ್ಲಿದ್ದ ಸಹೋದರರ ಪರವಾಗಿ ವಾದಿಸಿದ ವಕೀಲರ ತಂಡ ಇದಕ್ಕೆ ಒಪ್ಪಿತು. ಹೀಗೆ ಅವರೆಲ್ಲರೂ ಚರ್ಚೆ ಮಾಡುತ್ತಾ ಇದ್ದಾಗ ಕೆಲವು ಸಹೋದರರಿಗೆ ಕೋಪ ಬಂತು.ನಂತರ ಒಬ್ಬರು ಈ ಕಷ್ಟದ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು ಎಂದು ಸಹೋದರ ರಿಚರ್ಡ್ ಹೆಚ್. ಬಾರ್ಬರ್ ತಿಳಿಸಿದ್ದಾರೆ. ಕೂಡಿಬಂದವರಲ್ಲಿ ಒಬ್ಬ ಸಹೋದರ ಹೀಗೆ ಹೇಳಿದರು: “ನಾನು ವಕೀಲನಲ್ಲ, ಆದರೆ ನನಗೆ ಕಾನೂನಿಗೆ ಸಂಬಂಧಿಸಿದ ಕೆಲವು ವಿಷಯಗಳು ಗೊತ್ತಿವೆ. ದೇವರು ನಮ್ಮಿಂದ ಕೇಳಿಕೊಳ್ಳುವುದು ನಾವು ನಂಬಿಗಸ್ತರಾಗಿರಬೇಕೆಂದು. ನಾವು ಆತನಿಗೆ ನಂಬಿಗಸ್ತರಾಗಿದ್ದೇವೆ ಎಂದು ತೋರಿಸುವ ಅತ್ಯುತ್ತಮ ವಿಧಾನ ಚುನಾವಣೆ ನಡೆಸುವುದು ಮತ್ತು ಪುನಃ ಸಹೋದರ ರದರ್‌ಫರ್ಡ್‌ರನ್ನೇ ಅಧ್ಯಕ್ಷರನ್ನಾಗಿ ಆರಿಸುವುದೇ ಆಗಿದೆ.”—ಕೀರ್ತ. 18:25.
ಮರುದಿನ ಏನಾಯಿತೆಂದು ಸಹೋದರ ಎ. ಹೆಚ್. ಮ್ಯಾಕ್‌ಮಿಲನ್ ಹೇಳಿದರು. ಸಹೋದರ ರದರ್‌ಫರ್ಡ್‌ರು ಮ್ಯಾಕ್‌ಮಿಲನ್‌ರ ಜೈಲಿನ ಕೊಠಡಿಯ ಗೋಡೆಗೆ ತಟ್ಟಿ, “ನಿನ್ನ ಕೈ ಚಾಚು” ಅಂದರು. ಅವರು ಚಾಚಿದಾಗ ಚುನಾವಣೆಯ ಫಲಿತಾಂಶದ ಬಗ್ಗೆ ಒಂದು ಪತ್ರವನ್ನು ಕೊಟ್ಟರು. ಅದರಲ್ಲಿ ಏನಿರಬಹುದೆಂದು ತಕ್ಷಣ ಸಹೋದರ ಮ್ಯಾಕ್‌ಮಿಲನ್‌ರಿಗೆ ಅರ್ಥವಾಯಿತು. ಎಲ್ಲಾ ನಿರ್ದೇಶಕರನ್ನು ಪುನಃ ಚುನಾಯಿಸಲಾಗಿದೆ, ಜೋಸೆಫ್ ರದರ್‌ಫರ್ಡ್ ಹಾಗೂ ವಿಲ್ಯಮ್ ವ್ಯಾನ್ ಆ್ಯಂಬರ್ಗ್‌ರು ಆಫೀಸರ್‌ಗಳಾಗಿ ಮುಂದುವರಿಯುತ್ತಾರೆ, ಸಹೋದರ ರದರ್‌ಫರ್ಡ್‌ರು ಅಧ್ಯಕ್ಷರಾಗಿರುತ್ತಾರೆ ಎಂದು ಆ ಪತ್ರದಿಂದ ತಿಳಿದುಬಂತು.
ಜೈಲಿನಿಂದ ಬಿಡುಗಡೆ
ಜೈಲಿನಲ್ಲಿದ್ದ ಎಂಟು ಸಹೋದರರನ್ನು ಬಿಡಿಸಲು ನಂಬಿಗಸ್ತ ಬೈಬಲ್ ವಿದ್ಯಾರ್ಥಿಗಳು ಮನವಿ ಪತ್ರವನ್ನು ತಯಾರಿಸಿದರು. ಅದಕ್ಕೆ ಸಹಿ ಮಾಡುವಂತೆ ಅವರು ಬೇರೆ ಜನರನ್ನು ಕೇಳಿಕೊಂಡರು. ಹೀಗೆ ಅವರು 7 ಲಕ್ಷಕ್ಕೂ ಹೆಚ್ಚಿನ ಸಹಿಗಳನ್ನು ಪಡೆದರು. ಆ ಮನವಿ ಪತ್ರವನ್ನು ಸರಕಾರಕ್ಕೆ ಸಲ್ಲಿಸುವ ಮೊದಲೇ ಅಂದರೆ 1919 ಮಾರ್ಚ್ 26, ಬುಧವಾರದಂದು ಸಹೋದರ ರದರ್‌ಫರ್ಡ್ ಮತ್ತು ಜವಾಬ್ದಾರಿ ಸ್ಥಾನದಲ್ಲಿದ್ದ ಇತರ ಸಹೋದರರ ಬಿಡುಗಡೆಯಾಯಿತು.
ಜೈಲಿನಿಂದ ಬಿಡುಗಡೆಯಾದಾಗ ಸಹೋದರ ರದರ್‌ಫರ್ಡ್‌ರು ತಮ್ಮನ್ನು ಸ್ವಾಗತಿಸಲು ಬಂದವರಿಗೆ ಹೀಗೆ ಹೇಳಿದರು: “ಈ ಅನುಭವದಿಂದ ನನಗೊಂದು ವಿಷಯ ಸ್ಪಷ್ಟವಾಗಿದೆ. ಹೆಚ್ಚು ಕಷ್ಟದ ಸಮಯಕ್ಕಾಗಿ ನಮ್ಮನ್ನು ಸಿದ್ಧಮಾಡಲು ಇದೆಲ್ಲಾ ಆಯಿತು. . . . ನೀವು ಹೋರಾಡಿದ್ದು ನಿಮ್ಮ ಸಹೋದರರನ್ನು ಜೈಲಿನಿಂದ ಬಿಡಿಸಲಿಕ್ಕಲ್ಲ. ಸಹೋದರರನ್ನು ಬಿಡಿಸುವುದು ಒಂದು ಚಿಕ್ಕ ಅಂಶ ಅಷ್ಟೇ. . . . ಈ ಹೋರಾಟದ ಉದ್ದೇಶ ಸತ್ಯಕ್ಕಾಗಿ ಸಾಕ್ಷಿ ನೀಡುವುದೇ ಆಗಿತ್ತು. ಇದನ್ನು ಮಾಡಿದವರು ಅದ್ಭುತಕರ ಆಶೀರ್ವಾದಗಳನ್ನು ಪಡೆದಿದ್ದಾರೆ.”
ನಮ್ಮ ಸಹೋದರರ ಮೇಲಿನ ಕೇಸು ನಡೆಯುತ್ತಿದ್ದ ಸನ್ನಿವೇಶವನ್ನು ನೋಡಿದರೆ ಯೆಹೋವನೇ ಮಾರ್ಗದರ್ಶಿಸುತ್ತಿದ್ದನು ಎಂದು ಸ್ಪಷ್ಟವಾಗುತ್ತದೆ. 1919ರ ಮೇ 14ರಂದು ನ್ಯಾಯಾಲಯವು ನಮ್ಮ ಮನವಿಗೆ ಸಮ್ಮತಿಸುತ್ತಾ ಹೀಗೆ ಹೇಳಿತು: “ಈ ಕೇಸಿನ ಪ್ರತಿವಾದಿಗಳಿಗೆ . . . ನಿಷ್ಪಕ್ಷಪಾತದಿಂದ ವಿಚಾರಣೆ ನಡೆಯಬೇಕಿತ್ತು, ಆದರೆ ಹಾಗೆ ನಡೆದಿಲ್ಲ. ಆದ್ದರಿಂದ ಹಿಂದಿನ ತೀರ್ಪನ್ನು ರದ್ದುಗೊಳಿಸಲಾಗುತ್ತದೆ.” ಸಹೋದರರ ಮೇಲೆ ಗಂಭೀರ ಅಪರಾಧಗಳನ್ನು ಮಾಡಿದ್ದಾರೆಂಬ ಆರೋಪವಿತ್ತು. ಅವರಿಗೆ ಕ್ಷಮಾಪಣೆ ನೀಡುವ ಅಥವಾ ಶಿಕ್ಷೆಯ ಅವಧಿ ಕಡಿಮೆ ಮಾಡುವ ತೀರ್ಪು ನೀಡಿದ್ದರೆ ಅವರು ಅಪರಾಧ ಮಾಡಿದ್ದಾರೆಂದು ದಾಖಲೆಗಳಲ್ಲಿ ಉಳಿಯುತ್ತಿತ್ತು. ಆದರೆ ಇಲ್ಲಿ ಸಹೋದರರು ಯಾವುದೇ ಅಪರಾಧ ಮಾಡಿಲ್ಲ ಎಂದು ತೀರ್ಪಾಯಿತು. ಇದರಿಂದಾಗಿ, ಜಡ್ಜ್ ರದರ್‌ಫರ್ಡ್‌ರಿಗೆ ಅಮೆರಿಕದ ಸರ್ವೋಚ್ಛ ನ್ಯಾಯಾಲಯದಲ್ಲಿ ಯೆಹೋವನ ಸಾಕ್ಷಿಗಳ ಪರವಾಗಿ ವಾದಿಸಲಿಕ್ಕಾಗಿ ತಮ್ಮ ಲೈಸೆನ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಬಿಡುಗಡೆಯಾದ ನಂತರ ಅವರು ಅನೇಕ ಸಾರಿ ಸಹೋದರರ ಪರವಾಗಿ ವಾದಿಸಿದರು.
ಸಾರಲೇಬೇಕೆಂಬ ದೃಢತೀರ್ಮಾನ
“ಕರ್ತನು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವವರೆಗೆ ನಾವು ಕೈಕಟ್ಟಿ ಕಾಯುತ್ತಾ ಕೂರಲು ಸಿದ್ಧರಿರಲಿಲ್ಲ. ಕರ್ತನ ಚಿತ್ತ ಏನಾಗಿತ್ತೆಂದು ತಿಳಿಯಲು ನಾವು ಏನಾದರೂ ಮಾಡಲೇಬೇಕು ಎಂದು ಅರ್ಥಮಾಡಿಕೊಂಡಿದ್ದೆವು” ಎಂದರು ಸಹೋದರ ಮ್ಯಾಕ್‌ಮಿಲನ್.
ಆದರೆ ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಕೆಲಸವನ್ನು ತಕ್ಷಣವೇ ಪ್ರಾರಂಭಿಸಲು ಮುಖ್ಯಕಾರ್ಯಾಲಯದಲ್ಲಿದ್ದ ಸಹೋದರರಿಂದ ಆಗಲಿಲ್ಲ. ಯಾಕೆಂದರೆ, ಸಹೋದರರನ್ನು ಬಂಧಿಸಿದಾಗ ಸಾಹಿತ್ಯಗಳನ್ನು ಮುದ್ರಿಸಲು ಉಪಯೋಗಿಸಲಾಗುತ್ತಿದ್ದ ಎಲ್ಲಾ ಮುದ್ರಣ ಪ್ಲೇಟ್‌ಗಳನ್ನು ನಾಶಮಾಡಲಾಗಿತ್ತು. ಇದರಿಂದ ಕೆಲವರಿಗೆ ನಿರುತ್ತೇಜನವಾಯಿತು. ಕೆಲವು ಸಹೋದರರು ಸಾರುವ ಕೆಲಸ ಮುಗಿದಿರಬೇಕು ಎಂದು ಭಾವಿಸಿದರು.
ಹಾಗಾಗಿ ತಾವು ಸಾರುತ್ತಿದ್ದ ಸಂದೇಶದ ಬಗ್ಗೆ ಯಾರಿಗಾದರೂ ಇನ್ನೂ ಆಸಕ್ತಿ ಇದೆಯಾ ಎಂದು ಬೈಬಲ್ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿತ್ತು. ಇದನ್ನು ತಿಳಿಯಲಿಕ್ಕಾಗಿ ತಾನೊಂದು ಭಾಷಣ ಕೊಡಬೇಕು, ಆ ಭಾಷಣಕ್ಕೆ ಸಾರ್ವಜನಿಕರನ್ನು ಕರೆಯಬೇಕು ಎಂದು ಸಹೋದರ ರದರ್‌ಫರ್ಡ್‌ರು ನಿರ್ಧರಿಸಿದರು. ಸಹೋದರ ಮ್ಯಾಕ್‌ಮಿಲನ್ ಹೇಳಿದ್ದು: “ಆ ಕೂಟಕ್ಕೆ ಯಾರೂ ಬರದಿದ್ದರೆ ಸಾರುವ ಕೆಲಸ ಮುಗಿದಿದೆ ಎಂದು ಅರ್ಥಮಾಡಿಕೊಳ್ಳಬೇಕು ಅಂತ ನಾವು ಅಂದುಕೊಂಡ್ವಿ.”
ಆ ಭಾಷಣ ಮೇ 4, 1919ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಸಹೋದರ ರದರ್‌ಫರ್ಡ್‌ರಿಗೆ ತುಂಬ ಹುಷಾರಿಲ್ಲದಿದ್ದರೂ ಬಂದು ಭಾಷಣ ನೀಡಿದರು. ಅದರ ಶೀರ್ಷಿಕೆ, “ಸಂಕಟಕ್ಕೀಡಾದ ಮಾನವ ಕುಲಕ್ಕೆ ನಿರೀಕ್ಷೆ” ಎಂದಾಗಿತ್ತು. ಅದಕ್ಕೆ ಸುಮಾರು 3,500 ಜನರು ಹಾಜರಾದರು ಮತ್ತು ಸ್ಥಳ ಇಲ್ಲದ ಕಾರಣ ನೂರಾರು ಜನರು ಹಿಂದಕ್ಕೆ ಹೋಗಬೇಕಾಯಿತು. ಮರುದಿನ 1,500 ಜನ ಹಾಜರಾದರು. ಇದರಿಂದ ಜನರಿಗೆ ಆಸಕ್ತಿ ಇತ್ತು ಎಂದು ಸಹೋದರರಿಗೆ ಗೊತ್ತಾಯಿತು.
ಅದರ ನಂತರ ಸಹೋದರರು ಸಾರಲಿಕ್ಕಾಗಿ ಯಾವ ವಿಧಾನವನ್ನು ಬಳಸಿದರೋ ಅದೇ ವಿಧಾನವನ್ನು ಇಂದಿನ ಯೆಹೋವನ ಸಾಕ್ಷಿಗಳೂ ಅನುಕರಿಸುತ್ತಾ ಬಂದಿದ್ದಾರೆ.
ಸಾರಲು ಮಾಡಿದ ಸಿದ್ಧತೆ
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಒಹಾಯೋದ ಸೀಡರ್ ಪಾಯಿಂಟ್‌ನಲ್ಲಿ ಎಲ್ಲರಿಗಾಗಿ ಒಂದು ಅಧಿವೇಶನವನ್ನು ನಡೆಸಲಾಗುವುದು ಎಂದು 1919 ಆಗಸ್ಟ್ 1ರ ದ ವಾಚ್ ಟವರ್‌ನಲ್ಲಿ (ಕಾವಲಿನ ಬುರುಜು) ಪ್ರಕಟಿಸಲಾಯಿತು. “ಎಲ್ಲರಿಗೂ ಅಲ್ಲಿಗೆ
ಹೋಗಬೇಕೆನಿಸಿತು” ಎಂದು ಮಿಸೌರಿಯ ಯುವ ಬೈಬಲ್ ವಿದ್ಯಾರ್ಥಿಯಾಗಿದ್ದ ಕ್ಲ್ಯಾರನ್ಸ್ ಬಿ. ಬೀಟೀ ಹೇಳಿದರು. 6 ಸಾವಿರಕ್ಕೂ ಹೆಚ್ಚು ಸಹೋದರ ಸಹೋದರಿಯರು ಅದಕ್ಕೆ ಹಾಜರಾಗಿದ್ದರು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮಂದಿಯೇ ಬಂದಿದ್ದರು. ಅಷ್ಟೇ ಅಲ್ಲದೆ, 200ಕ್ಕೂ ಹೆಚ್ಚು ಮಂದಿ ಅಲ್ಲೇ ಹತ್ತಿರದ ಎರಿ ಸರೋವರದಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು. ಇದು ಎಲ್ಲರ ಉತ್ಸಾಹವನ್ನು ಹೆಚ್ಚಿಸಿತು.ಸೆಪ್ಟೆಂಬರ್ 5, 1919ರಂದು ಅಂದರೆ ಅಧಿವೇಶನದ 5ನೇ ದಿನದಂದು ಸಹೋದರ ರದರ್‌ಫರ್ಡ್‌ರು ಭಾಷಣ ಕೊಡುವಾಗ ದ ಗೋಲ್ಡನ್ ಏಜ್ * ಎಂಬ ಹೊಸ ಪತ್ರಿಕೆಯ ಬಗ್ಗೆ ಪ್ರಕಟಣೆ ಮಾಡಿದರು. ಆ ಪತ್ರಿಕೆಯಲ್ಲಿ “ಇತ್ತೀಚೆಗೆ ನಡೆದ ಪ್ರಮುಖ ಸುದ್ದಿಗಳ ಬಗ್ಗೆ ತಿಳಿಸುತ್ತಾ ಯಾಕೆ ಹೀಗಾಗಿದೆ ಎನ್ನುವುದಕ್ಕೆ ಬೈಬಲಾಧಾರಿತ ವಿವರಣೆ ಇರುತ್ತದೆ” ಎಂದರು.
ಈ ಹೊಸ ಸಾಹಿತ್ಯವನ್ನು ಉಪಯೋಗಿಸಿ ಧೈರ್ಯದಿಂದ ಸಾರುವಂತೆ ಆಗಿನ ಎಲ್ಲಾ ಸಹೋದರ ಸಹೋದರಿಯರನ್ನು ಉತ್ತೇಜಿಸಲಾಯಿತು. ಈ ಕೆಲಸವನ್ನು ವ್ಯವಸ್ಥಿತವಾಗಿ ಹೇಗೆ ಮಾಡಬೇಕೆಂದು ತಿಳಿಸುವ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು: “ಇಡೀ ಲೋಕಕ್ಕೆ ಸಾಕ್ಷಿ ನೀಡಲಿಕ್ಕಾಗಿ ತಮ್ಮಿಂದಾಗುವುದೆಲ್ಲ ಮಾಡುವುದು ಮತ್ತು ಸಾರುವ ಈ ಅವಕಾಶವನ್ನು ಈಗಲೇ ಸ್ವೀಕರಿಸಿ ಸೇವೆ ಮಾಡುವುದು ದೊಡ್ಡ ಸುಯೋಗ ಎಂದು ಸಮರ್ಪಿತರಾಗಿರುವ [ದೀಕ್ಷಾಸ್ನಾನ ಪಡೆದಿರುವ] ಪ್ರತಿಯೊಬ್ಬ ವ್ಯಕ್ತಿಯೂ ಮರೆಯದಿರಲಿ.” ಆಗ ಅನೇಕರು ಸಾರಲು ಮುಂದೆ ಬಂದರು. ಇದರಿಂದಾಗಿ, ಡಿಸೆಂಬರಷ್ಟಕ್ಕೆ ಈ ಹೊಸ ಪತ್ರಿಕೆಗಾಗಿ 50,000ಕ್ಕೂ ಹೆಚ್ಚು ಬೇಡಿಕೆ ಬಂತು.
1919ರ ಕೊನೆಯಷ್ಟಕ್ಕೆ ಯೆಹೋವನ ಜನರು ಹೊಸ ಬಲ ಪಡೆದು ಮತ್ತೆ ವ್ಯವಸ್ಥಿತವಾಗಿ ಕೆಲಸ ಮಾಡಲು ಆರಂಭಿಸಿದರು. ಅಷ್ಟೇ ಅಲ್ಲ, ಕಡೇ ದಿವಸಗಳ ಕುರಿತಾದ ಅನೇಕ ಮುಖ್ಯ ಪ್ರವಾದನೆಗಳೂ ನೆರವೇರಿದ್ದವು. ಮಲಾಕಿಯ 3:1-4ರಲ್ಲಿ ತಿಳಿಸಿದಂತೆ ದೇವಜನರನ್ನು ಪರೀಕ್ಷಿಸಿ ಶೋಧಿಸಲಾಗಿತ್ತು. ಯೆಹೋವನ ಜನರಿಗೆ ಮಹಾ ಬಾಬೆಲಿನ ಬಂಧಿವಾಸದಿಂದ ಬಿಡುಗಡೆಯಾಗಿತ್ತು. ಯೇಸು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ * ನೇಮಿಸಿದ್ದನು. (ಪ್ರಕ. 18:2, 4; ಮತ್ತಾ. 24:45) ಹಾಗಾಗಿ, ಬೈಬಲ್ ವಿದ್ಯಾರ್ಥಿಗಳು ಯೆಹೋವನು ಬಯಸಿದ ಕೆಲಸವನ್ನು ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದರು.
^ ಪ್ಯಾರ. 22 ದ ಗೋಲ್ಡನ್ ಏಜ್‌ಗೆ 1937ರಲ್ಲಿ ಕನ್ಸೊಲೇಶನ್ ಎಂಬ ಹೆಸರು, 1946ರಲ್ಲಿ ಅವೇಕ್! (ಎಚ್ಚರ!) ಎಂಬ ಹೆಸರು ಬಂತು.