ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 41

ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 1

ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 1

“ನೀವು ಶುಶ್ರೂಷಕರಾದ ನಮ್ಮಿಂದ ಬರೆಯಲ್ಪಟ್ಟಿರುವ ಕ್ರಿಸ್ತನ ಪತ್ರವಾಗಿ ತೋರಿಸಲ್ಪಟ್ಟಿದ್ದೀರಿ.”—2 ಕೊರಿಂ. 3:3.

ಗೀತೆ 94 ದೇವರ ಒಳ್ಳೆಯ ದಾನಗಳಿಂದ ತೃಪ್ತರು

ಕಿರುನೋಟ *

ನಿಮ್ಮ ಸಭೆಗೆ ಬರುತ್ತಿದ್ದ ಬೈಬಲ್‌ ವಿದ್ಯಾರ್ಥಿಯೊಬ್ರು ದೀಕ್ಷಾಸ್ನಾನ ತಗೊಳ್ಳುವಾಗ ನಿಮ್ಗೆ ಹೇಗನಿಸುತ್ತೆ? ಖುಷಿಯಾಗುತ್ತಲ್ವಾ? (ಪ್ಯಾರ 1 ನೋಡಿ)

1. ಎರಡನೇ ಕೊರಿಂಥ 3:1-3 ರ ಪ್ರಕಾರ ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನ ತಗೊಳ್ಳೋಕೆ ಸಹಾಯ ಮಾಡೋದು ನಮ್ಗೆ ಸಿಗೋ ದೊಡ್ಡ ಅವಕಾಶ ಅಂತ ಯಾಕೆ ಹೇಳಬಹುದು? (ಮುಖಪುಟ ಚಿತ್ರ ನೋಡಿ.)

ನಿಮ್ಮ ಸಭೆಗೆ ಬರುತ್ತಿದ್ದ ಬೈಬಲ್‌ ವಿದ್ಯಾರ್ಥಿಯೊಬ್ರು ದೀಕ್ಷಾಸ್ನಾನ ತಗೊಳ್ಳುವಾಗ ನಿಮ್ಗೆ ಹೇಗನಿಸುತ್ತೆ? ಖುಷಿಯಾಗುತ್ತಲ್ವಾ? (ಮತ್ತಾ. 28:19) ಆ ವಿದ್ಯಾರ್ಥಿಗೆ ನೀವೇ ಬೈಬಲ್‌ ಕಲಿಸಿರೋದಾದ್ರೆ ಇನ್ನೆಷ್ಟು ಖುಷಿ ಆಗುತ್ತಲ್ವಾ? (1 ಥೆಸ. 2:19, 20) ಹೀಗೆ ಹೊಸದಾಗಿ ದೀಕ್ಷಾಸ್ನಾನ ತಗೊಂಡಿರೋ ಶಿಷ್ಯರು ಬೈಬಲ್‌ ಕಲಿಸಿದವ್ರಿಗೆ ಮಾತ್ರ ಅಲ್ಲ, ಇಡೀ ಸಭೆಗೆ ಒಂದು ಒಳ್ಳೇ ‘ಶಿಫಾರಸ್ಸು ಪತ್ರದಂತೆ’ ಇದ್ದಾರೆ.—2 ಕೊರಿಂಥ 3:1-3 ಓದಿ.

2. (ಎ) ನಾವು ಯಾವ ಮುಖ್ಯ ಪ್ರಶ್ನೆಯ ಬಗ್ಗೆ ಯೋಚಿಸಬೇಕು ಮತ್ತು ಯಾಕೆ? (ಬಿ) ಬೈಬಲ್‌ ಸ್ಟಡಿ ಅಂದ್ರೇನು? (ಪಾದಟಿಪ್ಪಣಿ ನೋಡಿ.)

2 ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ತಿಂಗಳು ಲೋಕವ್ಯಾಪಕವಾಗಿ ಸುಮಾರು 1 ಕೋಟಿ ಬೈಬಲ್‌ ಸ್ಟಡಿಗಳನ್ನ * ವರದಿ ಮಾಡಲಾಗಿದೆ. ಇದನ್ನ ನೋಡುವಾಗ ತುಂಬ ಸಂತೋಷ ಆಗುತ್ತೆ. ಆ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ 80 ಸಾವಿರಕ್ಕೂ ಹೆಚ್ಚು ಜನ್ರು ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಗಳಾಗಿದ್ದಾರೆ. ಬೈಬಲ್‌ ಕಲಿಯುತ್ತಿರೋ ಇನ್ನೂ ಲಕ್ಷಾಂತರ ಜನ್ರು ದೀಕ್ಷಾಸ್ನಾನ ತಗೊಳ್ಳೋಕೆ ನಾವು ಹೇಗೆ ಸಹಾಯ ಮಾಡಬಹುದು? ಈ ಪ್ರಶ್ನೆ ಬಗ್ಗೆ ಯೋಚಿಸೋದು ತುಂಬ ಮುಖ್ಯ. ಯಾಕಂದ್ರೆ ಯೆಹೋವನು, ಕ್ರಿಸ್ತನ ಶಿಷ್ಯರಾಗೋ ಅವಕಾಶವನ್ನ ಜನ್ರಿಗೆ ಈಗಲೂ ಕೊಡ್ತಿದ್ದಾನೆ ಮತ್ತು ತಾಳ್ಮೆಯಿಂದ ಕಾಯ್ತಿದ್ದಾನೆ. ಆದ್ರಿಂದ ಅವ್ರು ಬೇಗ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ನಾವು ನಮ್ಮಿಂದ ಆಗೋದೆಲ್ಲ ಮಾಡ್ಬೇಕು. ಯಾಕಂದ್ರೆ ಉಳಿದಿರೋ ಸಮ್ಯ ತುಂಬನೇ ಕಡಿಮೆ.—1 ಕೊರಿಂ. 7:29ಎ; 1 ಪೇತ್ರ 4:7.

3. ಬೈಬಲ್‌ ಸ್ಟಡಿ ಮಾಡೋದ್ರ ಬಗ್ಗೆ ನಾವು ಈ ಲೇಖನದಲ್ಲಿ ಏನನ್ನ ನೋಡಲಿದ್ದೇವೆ?

3 ಶಿಷ್ಯರನ್ನ ಮಾಡೋ ಕೆಲ್ಸ ತುಂಬ ತುರ್ತಿನದ್ದಾಗಿದೆ. ಅದಕ್ಕೆ ಆಡಳಿತ ಮಂಡಲಿಯು ಬ್ರಾಂಚ್‌ ಆಫೀಸ್‌ಗಳನ್ನ ಸಂಪರ್ಕಿಸಿ ಬೈಬಲ್‌ ಕಲಿತಾ ಇರುವವರು ಪ್ರಗತಿ ಮಾಡಿ ದೀಕ್ಷಾಸ್ನಾನ ತಗೋಬೇಕಂದ್ರೆ ನಾವು ಅವ್ರಿಗೆ ಹೇಗೆ ಸಹಾಯ ಮಾಡಬಹುದು ಅಂತ ವಿಚಾರಿಸಿತು. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಅನುಭವ ಇರೋ ಪಯನೀಯರರು, ಮಿಷನರಿಗಳು ಮತ್ತು ಸರ್ಕಿಟ್‌ ಮೇಲ್ವಿಚಾರಕರಿಂದ ನಾವೇನನ್ನ ಕಲಿಬಹುದು ಅಂತ ನೋಡ್ತೇವೆ. * (ಜ್ಞಾನೋ. 11:14; 15:22) ಬೈಬಲ್‌ ಕಲಿತಾ ಇರುವವ್ರು ಮತ್ತು ಕಲಿಸುತ್ತಿರುವವರು ಇಬ್ರೂ ಏನು ಮಾಡ್ಬೇಕು ಅಂತ ಈ ಸಹೋದರ ಸಹೋದರಿಯರು ತಿಳಿಸ್ತಾರೆ. ಈ ಲೇಖನದಲ್ಲಿ, ಬೈಬಲ್‌ ಕಲಿತಾ ಇರುವವ್ರು ಪ್ರಗತಿ ಮಾಡಿ ದೀಕ್ಷಾಸ್ನಾನ ತಗೋಬೇಕಂದ್ರೆ ಮಾಡಬೇಕಾಗಿರೋ 5 ವಿಷ್ಯಗಳ ಬಗ್ಗೆ ನೋಡ್ತೇವೆ.

ಪ್ರತಿ ವಾರ ಸ್ಟಡಿ ತಗೋಬೇಕು

ಎಲ್ಲಾದ್ರೂ ಒಂದು ಕಡೆ ಕೂತು ಬೈಬಲ್‌ ಚರ್ಚೆ ಮಾಡಬಹುದಾ ಅಂತ ವಿದ್ಯಾರ್ಥಿಯನ್ನ ಕೇಳಿ (ಪ್ಯಾರ 4-6 ನೋಡಿ)

4. ಮನೆ ಬಾಗಿಲಲ್ಲೇ ಬೈಬಲನ್ನ ಕಲಿಸೋದ್ರ ಬಗ್ಗೆ ನಾವು ಏನನ್ನ ಅರ್ಥಮಾಡ್ಕೊಬೇಕು?

4 ಅನೇಕ ಸಹೋದರ ಸಹೋದರಿಯರು ಮನೆ ಬಾಗಿಲಲ್ಲೇ ನಿಂತು ಬೈಬಲ್‌ ಸ್ಟಡಿ ಮಾಡ್ತಾರೆ. ಜನ್ರ ಆಸಕ್ತಿಯನ್ನ ಹೆಚ್ಚಿಸೋಕೆ ಈ ರೀತಿ ಮಾಡೋದು ಒಳ್ಳೇದೇ. ಆದ್ರೆ ಮನೆ ಬಾಗಿಲಲ್ಲೇ ನಿಂತು ಹೆಚ್ಚು ಸಮ್ಯ ಸ್ಟಡಿ ಮಾಡೋಕಾಗಲ್ಲ. ಪ್ರತಿ ವಾರ ತಪ್ಪದೇ ಸ್ಟಡಿ ಮಾಡೋಕೂ ಕಷ್ಟ ಆಗಬಹುದು. ಅದಕ್ಕೇ ಕೆಲವು ಸಹೋದರ ಸಹೋದರಿಯರು ತಮ್ಮ ವಿದ್ಯಾರ್ಥಿಗಳ ಫೋನ್‌ ನಂಬರನ್ನ ತಗೊಳ್ತಾರೆ. ನಂತ್ರ ಫೋನ್‌ ಮಾಡಿ ಅಥವಾ ಮೆಸೇಜ್‌ ಮಾಡಿ ಅವ್ರಿಗೆ ಬೈಬಲಿನಲ್ಲಿರೋ ಕೆಲವು ಮಾಹಿತಿಯನ್ನ ತಿಳಿಸ್ತಾರೆ. ಅವರು ಈ ರೀತಿಯಲ್ಲಿ ಚರ್ಚೆಯನ್ನ ಅನೇಕ ತಿಂಗಳವರೆಗೆ ನಡೆಸಬಹುದು. ಆದ್ರೆ ವಿದ್ಯಾರ್ಥಿ ಈ ತರ ಆಗೊಮ್ಮೆ ಈಗೊಮ್ಮೆ ಸ್ಟಡಿ ತಗೋಳೋದಾದ್ರೆ ಮತ್ತು ಹೆಚ್ಚು ಸಮಯ ಕೊಡದೇ ಇದ್ರೆ ಅವನು * ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡೋಕೆ ಆಗುತ್ತಾ? ಆಗಲ್ಲ ಅನ್ಸುತ್ತೆ.

5. ಲೂಕ 14:27-33 ರ ಪ್ರಕಾರ ನಾವು ನಮ್ಮ ವಿದ್ಯಾರ್ಥಿಗೆ ಏನನ್ನ ಅರ್ಥಮಾಡಿಸ್ಬೇಕು?

5 ಒಂದು ಸಲ ಯೇಸು, ಒಬ್ಬ ವ್ಯಕ್ತಿ ತನ್ನ ಶಿಷ್ಯನಾಗಬೇಕು ಅಂತಿದ್ರೆ ಏನು ಮಾಡಬೇಕು ಅಂತ ಹೇಳಿದನು. ಅದಕ್ಕಾಗಿ ಆತನು, ಒಂದು ಬುರುಜನ್ನ ಕಟ್ಟೋಕೆ ಇಷ್ಟಪಡ್ತಿರೋ ಒಬ್ಬ ವ್ಯಕ್ತಿ ಬಗ್ಗೆ ಮತ್ತು ಯುದ್ಧ ಮಾಡ್ಬೇಕಂತಿರೋ ಒಬ್ಬ ಅರಸನ ಬಗ್ಗೆ ಹೇಳಿದನು. ಬುರುಜನ್ನ ಕಟ್ಟಬೇಕನ್ನೋ ವ್ಯಕ್ತಿ ಮೊದಲು ಕೂತುಕೊಂಡು ಅದನ್ನ ಕಟ್ಟಿಮುಗಿಸೋಕೆ ಸಾಕಾಗುವಷ್ಟು ಹಣ ತನ್ನಲ್ಲಿ ಇದೆಯಾ ಅಂತ ಲೆಕ್ಕ ಮಾಡಬೇಕು. ಯುದ್ಧ ಮಾಡ್ಬೇಕಂತಿರೋ ಅರಸ ತಾನು ಏನನ್ನ ಸಾಧಿಸಬೇಕು ಅಂತಿದ್ದಾನೋ ಅದನ್ನ ತನ್ನ ಸೈನ್ಯ ಮಾಡೋಕಾಗುತ್ತಾ ಅಂತ ಮೊದಲು ಕೂತುಕೊಂಡು ಸಮಾಲೋಚನೆ ಮಾಡಬೇಕು. (ಲೂಕ 14:27-33 ಓದಿ.) ಅದೇ ರೀತಿ ಒಬ್ಬ ವ್ಯಕ್ತಿ ಶಿಷ್ಯನಾಗಬೇಕಂದ್ರೆ ಏನೆಲ್ಲಾ ಮಾಡಬೇಕು ಅಂತ ಮೊದ್ಲೇ ಯೋಚಿಸಬೇಕು ಅನ್ನೋದನ್ನ ಯೇಸು ಈ ಎರಡು ಉದಾಹರಣೆಗಳ ಮೂಲಕ ತಿಳಿಸಿದನು. ಈ ವಿಷ್ಯವನ್ನು ನಮ್ಮ ವಿದ್ಯಾರ್ಥಿ ಅರ್ಥಮಾಡ್ಕೋಬೇಕು ಅಂತ ನಾವು ಇಷ್ಟಪಡ್ತೇವೆ. ಹಾಗಾಗಿ ಪ್ರತೀ ವಾರ ತಪ್ಪದೇ ಬೈಬಲನ್ನ ಕಲಿಯೋಕೆ ನಾವು ನಮ್ಮ ವಿದ್ಯಾರ್ಥಿಗೆ ಉತ್ತೇಜಿಸಬೇಕು. ಆದ್ರೆ ಇದನ್ನ ಮಾಡೋದು ಹೇಗೆ?

6. ಬೈಬಲ್‌ ವಿದ್ಯಾರ್ಥಿ ಪ್ರಗತಿ ಆಗಬೇಕಂದ್ರೆ ನಾವೇನು ಮಾಡ್ಬಹುದು?

6 ಮನೆ ಬಾಗಿಲಲ್ಲಿ ಸ್ಟಡಿ ಮಾಡ್ತಿರೋದಾದ್ರೂ ಸ್ವಲ್ಪ ಹೆಚ್ಚು ಸಮ್ಯ ಸ್ಟಡಿ ಮಾಡೋಕೆ ಪ್ರಯತ್ನಿಸಿ. ಸ್ಟಡಿಗಾಗಿ ಪ್ರತಿ ಸಲ ಹೋದಾಗಲೂ ಬರೀ ಒಂದು ವಚನದ ಬಗ್ಗೆ ಚರ್ಚಿಸೋ ಬದಲಿಗೆ ಎರಡು ವಚನಗಳ ಬಗ್ಗೆ ಚರ್ಚಿಸಿ. ಬೈಬಲ್‌ ಕಲಿಯೋಕೆ ವಿದ್ಯಾರ್ಥಿ ಹೆಚ್ಚು ಸಮ್ಯ ಕೊಡೋ ಮನಸ್ಸು ಮಾಡಿದಾಗ, ಎಲ್ಲಾದ್ರೂ ಒಂದು ಕಡೆ ಕೂತು ಬೈಬಲ್‌ ಕಲಿಯೋಕಾಗುತ್ತಾ ಅಂತ ನೀವು ಕೇಳಬಹುದು. ಇದಕ್ಕೆ ಅವ್ರು ಕೊಡೋ ಉತ್ರದಿಂದ ಬೈಬಲ್‌ ಕಲಿಯೋದನ್ನ ಅವರೆಷ್ಟು ಮಾನ್ಯಮಾಡ್ತಾರೆ ಅನ್ನೋದು ನಿಮಗೆ ಗೊತ್ತಾಗುತ್ತೆ. ಸ್ವಲ್ಪ ಸಮಯ ಆದ ಮೇಲೆ ವಾರದಲ್ಲಿ ಎರಡು ಸಲ ಬೈಬಲ್‌ ಸ್ಟಡಿ ಮಾಡಬಹುದಾ ಅಂತ ವಿದ್ಯಾರ್ಥಿಯನ್ನ ಕೇಳಿ. ಯಾಕಂದ್ರೆ ಎರಡು ಸಲ ಸ್ಟಡಿ ಮಾಡೋದ್ರಿಂದ ವಿದ್ಯಾರ್ಥಿ ಹೆಚ್ಚು ಪ್ರಗತಿ ಮಾಡೋಕೆ ಆಗುತ್ತೆ. ಆದ್ರೆ ವಾರದಲ್ಲಿ ಒಂದು ಸಲ ಅಥವಾ ಎರಡು ಸಲ ಸ್ಟಡಿ ಮಾಡಿದ್ರಷ್ಟೇ ಸಾಕಾಗಲ್ಲ, ಜೊತೆಗೆ ಇನ್ನೊಂದು ವಿಷ್ಯವನ್ನೂ ಮಾಡಬೇಕು.

ಪ್ರತಿ ಸಲ ತಯಾರಿ ಮಾಡಬೇಕು

ಬೈಬಲ್‌ ಸ್ಟಡಿಗೆ ಚೆನ್ನಾಗಿ ತಯಾರಿ ಮಾಡಿ ಮತ್ತು ತಯಾರಿ ಮಾಡೋದು ಹೇಗಂತ ವಿದ್ಯಾರ್ಥಿಗೆ ತೋರಿಸಿ (ಪ್ಯಾರ 7-9 ನೋಡಿ)

7. ಬೈಬಲ್‌ ಕಲಿಸೋದಕ್ಕೂ ಮುಂಚೆ ನಾವು ಹೇಗೆ ಚೆನ್ನಾಗಿ ತಯಾರಿ ಮಾಡಬಹುದು?

7 ಪ್ರತಿ ಸಲ ಬೈಬಲ್‌ ಕಲಿಸೋಕೆ ಹೋಗೋ ಮುಂಚೆ ನೀವು ಚೆನ್ನಾಗಿ ತಯಾರಿ ಮಾಡಬೇಕು. ಇದಕ್ಕೋಸ್ಕರ ಮೊದಲು ನೀವು ಚರ್ಚಿಸಲಿರೋ ವಿಷ್ಯನ ಓದಬೇಕು ಮತ್ತು ಅದರಲ್ಲಿರೋ ವಚನಗಳನ್ನ ನೋಡಬೇಕು. ಆಗ ಮುಖ್ಯ ವಿಷ್ಯನ ಅರ್ಥ ಮಾಡ್ಕೊಳೋಕಾಗುತ್ತೆ. ಅಧ್ಯಾಯದ ಶೀರ್ಷಿಕೆ, ಉಪ ಶೀರ್ಷಿಕೆ, ಪ್ರಶ್ನೆಗಳು, ಓದಿ ಅಂತ ಕೊಟ್ಟಿರೋ ವಚನಗಳು, ಚಿತ್ರಗಳು ಮತ್ತು ವಿಷ್ಯವನ್ನ ವಿವರಿಸಲಿಕ್ಕಾಗಿ ಇರೋ ವಿಡಿಯೋಗಳ ಬಗ್ಗೆ ಯೋಚಿಸಬೇಕು. ಆಮೇಲೆ ಈ ವಿಷ್ಯವನ್ನ ವಿದ್ಯಾರ್ಥಿ ಅರ್ಥಮಾಡಿಕೊಳ್ಳೋಕೆ ಸರಳವಾಗಿ ಮತ್ತು ಸ್ಪಷ್ಟವಾಗಿ ಕಲಿಸೋದು ಹೇಗೆ ಅಂತ ಯೋಚಿಸಬೇಕು. ಹೀಗೆ ಮಾಡೋದ್ರಿಂದ ವಿದ್ಯಾರ್ಥಿಯು ಸುಲಭವಾಗಿ ಅರ್ಥಮಾಡ್ಕೊಂಡು ಅದನ್ನ ಅನ್ವಯಿಸಿಕೊಳ್ಳೋಕೆ ಸಹಾಯ ಆಗುತ್ತೆ.—ನೆಹೆ. 8:8; ಜ್ಞಾನೋ. 15:28ಎ.

8. ವಿದ್ಯಾರ್ಥಿಗಾಗಿ ಪ್ರಾರ್ಥಿಸೋದ್ರ ಬಗ್ಗೆ ಕೊಲೊಸ್ಸೆ 1:9, 10 ರಲ್ಲಿರೋ ಅಪೊಸ್ತಲ ಪೌಲನ ಮಾತುಗಳಿಂದ ನಾವೇನು ಕಲಿತೇವೆ?

8 ತಯಾರಿ ಮಾಡೋ ಮುಂಚೆ ಪ್ರಾರ್ಥನೆ ಮಾಡಿ. ಪ್ರಾರ್ಥನೆಯಲ್ಲಿ ವಿದ್ಯಾರ್ಥಿ ಬಗ್ಗೆ ಮತ್ತು ಅವನ ಅಗತ್ಯಗಳ ಬಗ್ಗೆ ಯೆಹೋವನಿಗೆ ತಿಳಿಸಿ. ವಿದ್ಯಾರ್ಥಿಯ ಮನಸ್ಸಿಗೆ ನಾಟೋ ರೀತಿಯಲ್ಲಿ ಬೈಬಲಿಂದ ಕಲಿಸೋಕೆ ಸಹಾಯ ಮಾಡುವಂತೆ ಯೆಹೋವನತ್ರ ಕೇಳಿಕೊಳ್ಳಿ. (ಕೊಲೊಸ್ಸೆ 1:9, 10 ಓದಿ.) ನಂತ್ರ, ಯಾವ ವಿಷ್ಯವನ್ನ ಅರ್ಥಮಾಡ್ಕೊಳ್ಳೋಕೆ ಅಥವಾ ಒಪ್ಪಿಕೊಳ್ಳೋಕೆ ವಿದ್ಯಾರ್ಥಿಗೆ ಕಷ್ಟ ಆಗಬಹುದು ಅಂತ ಯೋಚಿಸಿ. ಒಂದು ವಿಷ್ಯ ಮರೀಬೇಡಿ, ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೋಬೇಕು ಅನ್ನೋದೇ ನಿಮ್ಮ ಗುರಿಯಾಗಿರಬೇಕು.

9. ವಿದ್ಯಾರ್ಥಿ ಸ್ಟಡಿಗೆ ಚೆನ್ನಾಗಿ ತಯಾರಿ ಮಾಡೋಕೆ ನಾವು ಹೇಗೆ ಸಹಾಯ ಮಾಡಬಹುದು? ವಿವರಿಸಿ.

9 ನೀವು ತಪ್ಪದೇ ಬೈಬಲ್‌ ಸ್ಟಡಿ ಮಾಡೋದಾದ್ರೆ ವಿದ್ಯಾರ್ಥಿಯು ಯೆಹೋವ ಮತ್ತು ಯೇಸು ತನಗಾಗಿ ಮಾಡಿರೋ ವಿಷ್ಯಗಳಿಗಾಗಿ ಗಣ್ಯತೆಯನ್ನ ಬೆಳೆಸಿಕೊಳ್ತಾನೆ. ಜೊತೆಗೆ, ಅವರಿಬ್ಬರ ಬಗ್ಗೆ ಇನ್ನೂ ಹೆಚ್ಚನ್ನ ತಿಳ್ಕೋಬೇಕಂತ ಬಯಸ್ತಾನೆ. (ಮತ್ತಾ. 5:3, 6) ಸ್ಟಡಿಯಿಂದ ವಿದ್ಯಾರ್ಥಿಗೆ ಪೂರ್ಣ ಪ್ರಯೋಜನ ಸಿಗಬೇಕಂದ್ರೆ ಅವನು ಕಲಿಯುತ್ತಿರೋ ವಿಷ್ಯಗಳ ಕಡೆಗೆ ಪೂರ್ತಿ ಗಮನ ಕೊಡಬೇಕು. ಇದಕ್ಕೋಸ್ಕರ ಪ್ರತಿ ಸಲ ಸ್ಟಡಿ ಮಾಡೋ ಮುಂಚೆ ಅವನು ತಯಾರಾಗಿರಬೇಕು ಮತ್ತು ಆ ವಿಷ್ಯ ತನಗೆ ಹೇಗೆ ಅನ್ವಯಿಸುತ್ತೆ ಅಂತ ಯೋಚಿಸಿರಬೇಕು. ಇದನ್ನೆಲ್ಲಾ ವಿದ್ಯಾರ್ಥಿ ಮಾಡಬೇಕಂದ್ರೆ ಈ ವಿಷ್ಯಗಳು ಎಷ್ಟು ಪ್ರಾಮುಖ್ಯ ಅಂತ ನೀವು ಅವನಿಗೆ ಮನಗಾಣಿಸಬೇಕು. ಈ ವಿಷ್ಯದಲ್ಲಿ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಬಹುದು? ಒಂದು ಅಧ್ಯಾಯವನ್ನ ವಿದ್ಯಾರ್ಥಿಯ ಜೊತೆಯಲ್ಲೇ ತಯಾರಿ ಮಾಡಿ ಮತ್ತು ತಯಾರಿ ಮಾಡೋದು ಹೇಗಂತ ಅವನಿಗೆ ತೋರಿಸಿಕೊಡಿ. * ಅಧ್ಯಾಯದಲ್ಲಿರೋ ಪ್ರಶ್ನೆಗಳಿಗೆ ನೇರ ಉತ್ತರವನ್ನ ಕಂಡುಹಿಡಿಯೋದು ಹೇಗಂತ ತೋರಿಸಿ. ಮುಖ್ಯ ಪದಗಳಿಗೆ ಅಥವಾ ಮುಖ್ಯ ಅಂಶಗಳಿಗೆ ಮಾತ್ರ ಮಾರ್ಕ್‌ ಮಾಡೋಕೆ ಹೇಳಿಕೊಡಿ. ಇದ್ರಿಂದ ವಿದ್ಯಾರ್ಥಿ ಉತ್ತರವನ್ನ ನೆನಪಿಸಿಕೊಳ್ಳೋಕೆ ಸಹಾಯ ಆಗುತ್ತೆ. ನಂತ್ರ ಸ್ವಂತ ಮಾತಲ್ಲಿ ಉತ್ತರ ಕೊಡೋಕೆ ಹೇಳಿ. ವಿದ್ಯಾರ್ಥಿ ಸ್ವಂತ ಮಾತಲ್ಲಿ ಉತ್ರ ಕೊಡುವಾಗ ಅವನಿಗೆ ವಿಷ್ಯ ಎಷ್ಟರ ಮಟ್ಟಿಗೆ ಅರ್ಥ ಆಗಿದೆ ಅಂತ ನೀವು ತಿಳುಕೊಳ್ಳೋಕೆ ಸಾಧ್ಯ ಆಗುತ್ತೆ. ಇದೆಲ್ಲದರ ಜೊತೆ ಇನ್ನೊಂದು ವಿಷ್ಯನೂ ಮಾಡೋಕೆ ನೀವು ವಿದ್ಯಾರ್ಥಿಗೆ ಉತ್ತೇಜಿಸಬೇಕು.

ಪ್ರತಿ ದಿನ ಯೆಹೋವನ ಜೊತೆ ಮಾತಾಡೋಕೆ ಮತ್ತು ಆತನ ಮಾತನ್ನ ಕೇಳಿಸಿಕೊಳ್ಳೋಕೆ ಕಲಿಬೇಕು

ಯೆಹೋವನಿಗೆ ಹೇಗೆ ಪ್ರಾರ್ಥನೆ ಮಾಡ್ಬೇಕು ಅಂತ ವಿದ್ಯಾರ್ಥಿಗೆ ಕಲಿಸಿ (ಪ್ಯಾರ 10-11 ನೋಡಿ)

10. (ಎ) ವಿದ್ಯಾರ್ಥಿ ಯಾಕೆ ಬೈಬಲ್‌ ಓದಬೇಕು? (ಬಿ) ಅವನು ಬೈಬಲ್‌ ಓದೋದ್ರ ಜೊತೆ ಇನ್ನೂ ಏನು ಮಾಡ್ಬೇಕು?

10 ಪ್ರತಿ ವಾರ ಬೈಬಲ್‌ ಕಲಿಯೋದ್ರ ಜೊತೆಗೆ ವಿದ್ಯಾರ್ಥಿ ಸ್ವತಃ ಕೆಲವು ವಿಷ್ಯಗಳನ್ನ ಮಾಡಿದ್ರೆ ಹೆಚ್ಚು ಪ್ರಯೋಜನ ಪಡ್ಕೊಳ್ತಾನೆ. ಅವನು ಯೆಹೋವನು ಹೇಳೋದನ್ನ ಕೇಳಿಸಿಕೊಳ್ಳಬೇಕು ಮತ್ತು ಆತನ ಹತ್ರ ಮಾತಾಡಬೇಕು. ಪ್ರತಿದಿನ ಬೈಬಲನ್ನ ಓದೋ ಮೂಲಕ ಅವನು ಯೆಹೋವನು ಹೇಳೋದನ್ನ ಕೇಳಿಸಿಕೊಳ್ಳಬಹುದು. (ಯೆಹೋ. 1:8; ಕೀರ್ತ. 1:1-3) jw.orgನಲ್ಲಿರುವ “ಬೈಬಲ್‌ ಓದುವಿಕೆ ಶೆಡ್ಯೂಲ್‌” ಅನ್ನು ಉಪಯೋಗಿಸೋದು ಹೇಗೆ ಅಂತ ಅವನಿಗೆ ತೋರಿಸಿ. * ವಿದ್ಯಾರ್ಥಿಗೆ ಪ್ರಯೋಜನ ಆಗ್ಬೇಕಂದ್ರೆ ಬೈಬಲನ್ನ ಓದೋದಷ್ಟೇ ಅಲ್ಲ, ಓದಿದ್ರ ಬಗ್ಗೆ ಧ್ಯಾನಿಸಬೇಕು ಅಂತ ಹೇಳಿ. ಓದಿದ ವಿಷ್ಯ ಯೆಹೋವನ ಬಗ್ಗೆ ಏನನ್ನ ಕಲಿಸುತ್ತೆ ಮತ್ತು ಕಲಿತ ವಿಷ್ಯವನ್ನ ಜೀವನದಲ್ಲಿ ಹೇಗೆ ಅನ್ವಯಿಸ್ಕೋಬಹುದು ಅಂತ ಧ್ಯಾನಿಸಲು ಅವನಿಗೆ ಉತ್ತೇಜಿಸಿ.—ಅ. ಕಾ. 17:11; ಯಾಕೋ. 1:25.

11. (ಎ) ವಿದ್ಯಾರ್ಥಿಯು ಸರಿಯಾಗಿ ಪ್ರಾರ್ಥನೆ ಮಾಡೋಕೆ ಹೇಗೆ ಕಲಿಬಹುದು? (ಬಿ) ಅವನು ಯೆಹೋವನಿಗೆ ಪ್ರತಿದಿನ ಪ್ರಾರ್ಥನೆ ಮಾಡ್ತಾ ಇರೋದು ಯಾಕಷ್ಟು ಪ್ರಾಮುಖ್ಯ?

11 ಪ್ರತಿದಿನ ಪ್ರಾರ್ಥನೆ ಮಾಡೋ ಮೂಲಕ ಯೆಹೋವನ ಜೊತೆ ಮಾತಾಡುವಂತೆ ನಿಮ್ಮ ವಿದ್ಯಾರ್ಥಿಗೆ ಉತ್ತೇಜಿಸಿ. ಪ್ರತಿ ವಾರ ಬೈಬಲ್‌ ಕಲಿಸೋ ಮುಂಚೆ ಮತ್ತು ನಂತರ ನಿಮ್ಮ ವಿದ್ಯಾರ್ಥಿ ಜೊತೆ ಮತ್ತು ವಿದ್ಯಾರ್ಥಿಗಾಗಿ ಮನದಾಳದಿಂದ ಪ್ರಾರ್ಥನೆ ಮಾಡಿ. ಅವನು ನಿಮ್ಮ ಪ್ರಾರ್ಥನೆಯನ್ನ ಕೇಳಿಸಿಕೊಳ್ಳುವಾಗ ಮನದಾಳದಿಂದ ಯೆಹೋವನಿಗೆ ಯೇಸು ಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥನೆ ಮಾಡೋದು ಹೇಗಂತ ಕಲಿತಾನೆ. (ಮತ್ತಾ. 6:9; ಯೋಹಾ. 15:16) ನಿಮ್ಮ ವಿದ್ಯಾರ್ಥಿ ಪ್ರತಿದಿನ ಬೈಬಲ್‌ ಓದೋದ್ರಿಂದ (ಯೆಹೋವ ಹೇಳೋದನ್ನ ಕೇಳಿಸಿಕೊಳ್ಳೋದ್ರಿಂದ) ಮತ್ತು ಪ್ರಾರ್ಥನೆ ಮಾಡೋದ್ರಿಂದ (ಯೆಹೋವನ ಹತ್ರ ಮಾತಾಡೋದ್ರಿಂದ) ದೇವರಿಗೆ ಇನ್ನೂ ಆಪ್ತನಾಗ್ತಾನೆ. (ಯಾಕೋ. 4:8) ಇದನ್ನ ಅವನು ಪ್ರತಿದಿನ ಮಾಡೋದಾದ್ರೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡ್ತಾನೆ. ಈ ರೀತಿ ಪ್ರಗತಿ ಮಾಡಲು ಅವನಿಗೆ ಇನ್ಯಾವ ವಿಷಯ ಸಹಾಯ ಮಾಡುತ್ತೆ?

ಯೆಹೋವನ ಸ್ನೇಹಿತನಾಗಬೇಕು

12. ವಿದ್ಯಾರ್ಥಿಯು ಯೆಹೋವನ ಸ್ನೇಹಿತನಾಗಲು ನಾವು ಹೇಗೆ ಸಹಾಯ ಮಾಡಬಹುದು?

12 ಬೈಬಲ್‌ ಸ್ಟಡಿಯಲ್ಲಿ ಕಲಿಯೋ ವಿಷ್ಯಗಳು ವಿದ್ಯಾರ್ಥಿಗೆ ಅರ್ಥವಾದ್ರೆ ಸಾಕಾಗಲ್ಲ, ಅದು ಅವನ ಮನಸ್ಸಿಗೆ ನಾಟಬೇಕು. ಯಾಕೆ? ಮನಸ್ಸಿಗೆ ನಾಟಿದ್ರೆನೇ ಅವನು ಕಲಿತಿದ್ದನ್ನ ಜೀವನದಲ್ಲಿ ಅನ್ವಯಿಸಿಕೊಳ್ತಾನೆ. ಯೇಸು ಜನ್ರಿಗೆ ಅನೇಕ ವಿಷ್ಯಗಳನ್ನ ಕಲಿಸಿದನು. ಅವನಿಂದ ಕಲಿಯೋಕೆ ಅವ್ರು ತುಂಬ ಇಷ್ಟಪಟ್ರು. ಅವನ ಮಾತುಗಳು ಜನ್ರ ಮನಸ್ಸಿಗೆ ನಾಟೋ ತರ ಇರುತಿತ್ತು. ಅದಕ್ಕೇ ಅವ್ರು ಅವನನ್ನ ಹಿಂಬಾಲಿಸಿದ್ರು. (ಲೂಕ 24:15, 27, 32) ಯೆಹೋವನು ನಿಜವಾಗಿಯೂ ಇದ್ದಾನೆ ಅಂತ ನಿಮ್ಮ ವಿದ್ಯಾರ್ಥಿಗೆ ಅರ್ಥವಾಗಬೇಕು. ತಾನೂ ಆತನ ಜೊತೆ ಸ್ನೇಹ ಬೆಳೆಸೋಕೆ ಸಾಧ್ಯ ಅಂತ ಅವನಿಗೆ ಅನಿಸಬೇಕು ಮತ್ತು ಆತ ತನ್ನ ತಂದೆ, ದೇವರು, ಸ್ನೇಹಿತನು ಅಂತ ಅರ್ಥ ಆಗಬೇಕು. (ಕೀರ್ತ. 25:4, 5) ಬೈಬಲ್‌ ಸ್ಟಡಿಯಲ್ಲಿ ನೀವು ಯಾವುದೇ ವಿಷ್ಯದ ಬಗ್ಗೆ ಚರ್ಚೆ ಮಾಡ್ತಾ ಇದ್ರೂ ದೇವ್ರ ಗುಣಗಳ ಬಗ್ಗೆ ವಿವರಿಸಲು ಹೆಚ್ಚು ಒತ್ತು ನೀಡಿ. (ವಿಮೋ. 34:5, 6; 1 ಪೇತ್ರ 5:6, 7) ಯೆಹೋವ ದೇವ್ರಲ್ಲಿರೋ ಪ್ರೀತಿ, ದಯೆ, ಕನಿಕರ ಮುಂತಾದ ಒಳ್ಳೇ ಗುಣಗಳ ಕಡೆಗೆ ಗಣ್ಯತೆ ಬೆಳೆಸಿಕೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ. “ನಿನ್ನ ದೇವರಾದ ಯೆಹೋವನನ್ನು ಪ್ರೀತಿಸಬೇಕು” ಅನ್ನೋದೇ ‘ಅತಿ ದೊಡ್ಡ ಮತ್ತು ಮೊದಲನೇ ಆಜ್ಞೆ’ ಅಂತ ಯೇಸು ಹೇಳಿದ್ದನು. (ಮತ್ತಾ. 22:37, 38) ಹಾಗಾಗಿ, ದೇವ್ರ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ವಿದ್ಯಾರ್ಥಿಗೆ ಸಹಾಯಮಾಡಿ.

13. ಯೆಹೋವನ ಗುಣಗಳ ಬಗ್ಗೆ ಕಲಿಯೋಕೆ ನಾವು ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಬಹುದು ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

13 ನಿಮ್ಮ ವಿದ್ಯಾರ್ಥಿ ಜೊತೆ ಮಾತಾಡುವಾಗ ನೀವು ಯಾಕೆ ಯೆಹೋವನನ್ನ ಪ್ರೀತಿಸ್ತೀರಿ ಅನ್ನೋದನ್ನ ಹೇಳಿ. ಹೀಗೆ ಮಾಡೋದ್ರಿಂದ ವಿದ್ಯಾರ್ಥಿ ಸಹ ತಾನು ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆಸಿಕೊಳ್ಳಬೇಕು ಅನ್ನೋದನ್ನ ಅರ್ಥಮಾಡ್ಕೊಳ್ಳೋಕೆ ಆಗುತ್ತೆ. (ಕೀರ್ತ. 73:28) ಉದಾಹರಣೆಗೆ, ಬೈಬಲ್‌ನಲ್ಲೋ ನೀವು ಸ್ಟಡಿ ಮಾಡ್ತಿರೋ ಪುಸ್ತಕದಲ್ಲೋ ಯೆಹೋವನ ಪ್ರೀತಿ, ವಿವೇಕ, ನ್ಯಾಯ ಅಥವಾ ಶಕ್ತಿ ಬಗ್ಗೆ ಇರೋ ಯಾವುದಾದ್ರೂ ಒಂದು ಮಾತು ನಿಮಗೆ ತುಂಬ ಇಷ್ಟ ಆಗಿದೆಯಾ? ಹಾಗಾದ್ರೆ ಅದನ್ನ ನಿಮ್ಮ ವಿದ್ಯಾರ್ಥಿಗೆ ತಿಳಿಸಿ. ಸ್ವರ್ಗದಲ್ಲಿರೋ ತಂದೆಯನ್ನ ನೀವು ಪ್ರೀತಿಸೋಕೆ ಇದು ಸಹ ಒಂದು ಕಾರಣ ಅಂತ ಅವ್ರಿಗೆ ತಿಳಿಸಿ. ಒಬ್ಬ ಬೈಬಲ್‌ ವಿದ್ಯಾರ್ಥಿಯು ದೀಕ್ಷಾಸ್ನಾನ ತಗೊಳ್ಳುವಷ್ಟರ ಮಟ್ಟಿಗೆ ಪ್ರಗತಿ ಮಾಡ್ಬೇಕಂದ್ರೆ ಅವನು ಇನ್ನೂ ಒಂದು ವಿಷ್ಯ ಮಾಡ್ಬೇಕು.

ಕೂಟಗಳಿಗೆ ಹಾಜರಾಗಬೇಕು

ಸಾಧ್ಯವಾದಷ್ಟು ಬೇಗ ಕೂಟಗಳಿಗೆ ಬರೋಕೆ ಶುರುಮಾಡುವಂತೆ ವಿದ್ಯಾರ್ಥಿಗೆ ಉತ್ತೇಜಿಸಿ (ಪ್ಯಾರ 14-15 ನೋಡಿ)

14. ಇಬ್ರಿಯ 10:24, 25 ರಲ್ಲಿ ತಿಳಿಸಲಾಗಿರೋ ಯಾವ ವಿಷ್ಯ ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡುತ್ತೆ?

14 ನಾವೆಲ್ರೂ ನಮ್ಮ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೋಬೇಕು ಅಂತ ಬಯಸ್ತೇವೆ. ಇದನ್ನ ಮಾಡೋಕೆ ನಾವು ಅವ್ರಿಗೆ ಸಹಾಯ ಮಾಡೋ ಒಂದು ವಿಧ ಅವ್ರನ್ನ ಕೂಟಗಳಿಗೆ ಹಾಜರಾಗೋಕೆ ಉತ್ತೇಜಿಸೋದೇ ಆಗಿದೆ. ಕೂಟಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತುಂಬ ಬೇಗ ಪ್ರಗತಿ ಮಾಡ್ತಾರೆ ಅಂತ ಬೈಬಲ್‌ ಸ್ಟಡಿ ಮಾಡಿ ಅನುಭವ ಇರೋ ಅನೇಕರು ಹೇಳ್ತಾರೆ. (ಕೀರ್ತ. 111:1) ಬೈಬಲ್‌ ಬಗ್ಗೆ ಸ್ವಲ್ಪ ವಿಷ್ಯನಾ ಸ್ಟಡಿಯಲ್ಲಿ ತಿಳುಕೊಂಡ್ರೆ ಇನ್ನು ಸ್ವಲ್ಪ ವಿಷ್ಯಗಳನ್ನ ಕೂಟಗಳಲ್ಲಿ ತಿಳುಕೊಳ್ಳೋಕೆ ಆಗುತ್ತೆ ಅಂತ ಕೆಲವ್ರು ತಮ್ಮ ವಿದ್ಯಾರ್ಥಿಗೆ ವಿವರಿಸ್ತಾರೆ. ಇಬ್ರಿಯ 10:24, 25ನ್ನ ಓದಿ, ಕೂಟಗಳಿಗೆ ಹಾಜರಾಗೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಅಂತ ನಿಮ್ಮ ವಿದ್ಯಾರ್ಥಿಗೆ ವಿವರಿಸಿ. ರಾಜ್ಯಸಭಾಗೃಹದಲ್ಲಿ ಏನು ನಡೆಯುತ್ತದೆ? * ಅನ್ನೋ ವಿಡಿಯೋ ತೋರಿಸಿ. ಪ್ರತಿ ವಾರ ತಪ್ಪದೇ ಕೂಟಗಳಿಗೆ ಹಾಜರಾಗೋ ದೃಢನಿರ್ಧಾರ ಮಾಡಲು ನಿಮ್ಮ ವಿದ್ಯಾರ್ಥಿಯನ್ನು ಉತ್ತೇಜಿಸಿ.

15. ಕೂಟಗಳಿಗೆ ಹಾಜರಾಗೋಕೆ ನಾವು ವಿದ್ಯಾರ್ಥಿಗೆ ಹೇಗೆ ಉತ್ತೇಜಿಸಬಹುದು?

15 ನಿಮ್ಮ ವಿದ್ಯಾರ್ಥಿ ಒಂದು ಸಲನೂ ಕೂಟಗಳಿಗೆ ಹಾಜರಾಗಿಲ್ಲ ಅಂತಾದ್ರೆ ಅಥವಾ ಅಪರೂಪಕ್ಕೊಮ್ಮೆ ಹಾಜರಾಗ್ತಾ ಇರೋದಾದ್ರೆ ನೀವೇನು ಮಾಡಬಹುದು? ಇತ್ತೀಚಿನ ಕೂಟದಲ್ಲಿ ಕಲಿತ ವಿಷ್ಯವನ್ನ ಉತ್ಸಾಹದಿಂದ ನಿಮ್ಮ ವಿದ್ಯಾರ್ಥಿಗೆ ತಿಳಿಸಿ. ಕೂಟಗಳಿಗೆ ಬರೋಕೆ ಆಮಂತ್ರಿಸೋದಕ್ಕಿಂತ ಈ ರೀತಿ ಹೇಳೋದ್ರಿಂದ ಹೆಚ್ಚು ಉತ್ತೇಜನ ಸಿಗುತ್ತೆ. ವಿದ್ಯಾರ್ಥಿಗೆ ಕೂಟದಲ್ಲಿ ಉಪಯೋಗಿಸಲಾಗ್ತಿರೋ ಕಾವಲಿನಬುರುಜು ಅಥವಾ ಜೀವನ ಮತ್ತು ಸೇವೆ ಕೂಟದ ಕೈಪಿಡಿಯನ್ನ ಕೊಡಿ. ಮುಂದಿನ ವಾರ ಯಾವ ವಿಷ್ಯವನ್ನ ಚರ್ಚಿಸಲಾಗುತ್ತೆ ಅಂತ ತೋರಿಸಿ. ಅದ್ರಲ್ಲಿ ಯಾವ ಭಾಗ ತುಂಬ ಆಸಕ್ತಿಕರವಾಗಿದೆ ಅಂತ ಅವನನ್ನ ಕೇಳಿ. ಅವನು ಕೂಟಕ್ಕೆ ಬಂದ್ರೆ ಖಂಡಿತ ಅವ್ನಿಗೆ ಚೆನ್ನಾಗನಿಸುತ್ತೆ. ಬೇರೆ ಯಾವುದೇ ಧರ್ಮದ ಕೂಟಕ್ಕಿಂತಲೂ ಇದು ತುಂಬ ಭಿನ್ನವಾಗಿದೆ ಅನ್ನೋದು ಅವನಿಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. (1 ಕೊರಿಂ. 14:24, 25) ಕೂಟಗಳಲ್ಲಿ ಬೇರೆ ಸಹೋದರ ಸಹೋದರಿಯರನ್ನು ಭೇಟಿ ಮಾಡ್ತಾನೆ, ಅವ್ರಿಂದ ಅವ್ನಿಗೆ ತುಂಬ ವಿಷ್ಯಗಳು ಕಲಿಯೋಕೆ ಸಿಗುತ್ತೆ. ಅವ್ರು ಸಹ ಅವನು ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ಸಹಾಯ ಮಾಡಬಹುದು.

16. (ಎ) ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೋಬೇಕಂದ್ರೆ ನಾವೇನು ಮಾಡ್ಬೇಕು? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನ ಕಲಿತೇವೆ?

16 ಬೈಬಲ್‌ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ನಾವು ಹೇಗೆ ಸಹಾಯ ಮಾಡಬಹುದು? ಪ್ರತಿ ವಾರ ಸ್ಟಡಿ ತಗೊಳ್ಳೋಕೆ ಮತ್ತು ಸ್ಟಡಿಗೂ ಮುಂಚೆ ತಯಾರಿ ಮಾಡೋಕೆ ವಿದ್ಯಾರ್ಥಿಯನ್ನ ಉತ್ತೇಜಿಸಬೇಕು. ಆಗ ಅವನು ಸ್ಟಡಿ ಎಷ್ಟು ಪ್ರಾಮುಖ್ಯ ಅಂತ ಅರ್ಥಮಾಡಿಕೊಳ್ತಾನೆ. ಪ್ರತಿದಿನ ಯೆಹೋವನ ಮಾತನ್ನ ಕೇಳಿಸಿಕೊಳ್ಳೋಕೆ ಮತ್ತು ಆತನ ಜೊತೆ ಮಾತಾಡೋಕೆ ಅವನನ್ನ ಉತ್ತೇಜಿಸಬೇಕು. ಯೆಹೋವನ ಆಪ್ತ ಸ್ನೇಹಿತನಾಗೋಕೆ ಮತ್ತು ತಪ್ಪದೇ ಕೂಟಗಳಿಗೆ ಹಾಜರಾಗೋಕೆ ಅವನನ್ನ ಪ್ರೋತ್ಸಾಹಿಸಬೇಕು. (“ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿ ಏನು ಮಾಡಬೇಕು?” ಚೌಕ ನೋಡಿ.) ಆದ್ರೆ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೋಬೇಕಂದ್ರೆ ನಾವು ಇನ್ನೂ 5 ವಿಷ್ಯಗಳನ್ನ ಮಾಡ್ಬೇಕು. ಅವುಗಳ ಬಗ್ಗೆ ಮುಂದಿನ ಲೇಖನದಲ್ಲಿ ನೋಡ್ತೇವೆ.

ಗೀತೆ 153 ಹೇಗನಿಸುತ್ತದೆ?

^ ಪ್ಯಾರ. 5 ಒಬ್ಬ ವ್ಯಕ್ತಿಗೆ ಯಾವುದೇ ಒಂದು ವಿಷ್ಯನ ಕಲಿಸೋದ್ರ ಅರ್ಥ ಅವ್ನು ಹೊಸ ರೀತಿಯಲ್ಲಿ ಯೋಚಿಸಲು ಮತ್ತು ನಡಕೊಳ್ಳಲು ಸಹಾಯ ಮಾಡೋದೇ ಆಗಿದೆ. 2020 ರ ವರ್ಷ ವಚನ ಮತ್ತಾಯ 28:19 ಆಗಿದೆ. ಈ ವಚನ ಜನ್ರಿಗೆ ಬೈಬಲ್‌ ಕಲಿಸೋದು ಎಷ್ಟು ಪ್ರಾಮುಖ್ಯ ಅಂತ ನೆನಪಿಸುತ್ತೆ. ನಾವು ಈ ಮುಖ್ಯ ಕೆಲ್ಸ ಮಾಡೋದ್ರಿಂದಲೇ ಜನ್ರು ದೀಕ್ಷಾಸ್ನಾನ ತಗೊಂಡು ಯೇಸುವಿನ ಶಿಷ್ಯರಾಗೋಕೆ ಸಾಧ್ಯ. ಈ ಕೆಲಸದಲ್ಲಿ ಹೇಗೆ ಪ್ರಗತಿ ಮಾಡಬಹುದು ಅಂತ ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನೋಡ್ತೇವೆ.

^ ಪ್ಯಾರ. 2 ಪದ ವಿವರಣೆ: ನೀವು ಒಬ್ಬ ವ್ಯಕ್ತಿ ಜೊತೆ ತಪ್ಪದೇ ಬೈಬಲಲ್ಲಿರೋ ವಿಷಯಗಳ ಬಗ್ಗೆ ಚರ್ಚೆಯನ್ನ ಮಾಡ್ತಿರೋದಾದ್ರೆ ಬೈಬಲ್‌ ಸ್ಟಡಿ ಮಾಡ್ತಿದ್ದೀರಿ ಅಂತ ಹೇಳಬಹುದು. ಬೈಬಲ್‌ ಸ್ಟಡಿಯನ್ನ ಹೇಗೆ ಮಾಡೋದು ಅಂತ ತೋರಿಸಿದ ನಂತ್ರ ತಪ್ಪದೇ ಎರಡು ಸಲ ಅವರ ಜೊತೆ ಚರ್ಚೆ ಮಾಡಿರೋದಾದ್ರೆ ಮತ್ತು ಈ ಸ್ಟಡಿ ಮುಂದುವರಿಯುತ್ತೆ ಅಂತ ನಿಮಗೆ ನಂಬಿಕೆ ಇರೋದಾದ್ರೆ ನೀವದನ್ನ ಒಂದು ಸ್ಟಡಿ ಅಂತ ವರದಿ ಮಾಡಬಹುದು.

^ ಪ್ಯಾರ. 3 ಈ ಎರಡು ಲೇಖನಗಳಲ್ಲಿ, 2004 ರ ಜುಲೈಯಿಂದ 2005 ರ ಮೇ ವರೆಗಿನ ನಮ್ಮ ರಾಜ್ಯ ಸೇವೆಯಲ್ಲಿ ಬಂದ “ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು” ಅನ್ನೋ ಸರಣಿ ಲೇಖನದಲ್ಲಿರೋ ಸಲಹೆಗಳು ಸಹ ಇವೆ.

^ ಪ್ಯಾರ. 4 ಈ ಲೇಖನದಲ್ಲಿ ವಿದ್ಯಾರ್ಥಿಯನ್ನು ಅವನು ಅಂತ ತಿಳಿಸಿರೋದಾದ್ರೂ ಇಲ್ಲಿ ಕೊಟ್ಟಿರೋ ವಿಷ್ಯಗಳು ಬೈಬಲ್‌ ಕಲಿಯುತ್ತಿರೋ ಹುಡುಗಿಯರು ಮತ್ತು ಸ್ತ್ರೀಯರಿಗೂ ಅನ್ವಯವಾಗುತ್ತೆ.

^ ಪ್ಯಾರ. 9 ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ ಅನ್ನೋ ನಾಲ್ಕು ನಿಮಿಷದ ವಿಡಿಯೋ ನೋಡಿ. ಇದಕ್ಕಾಗಿ JW ಲೈಬ್ರರಿಯಲ್ಲಿ ಮೀಡಿಯಾ > ನಮ್ಮ ಕೂಟಗಳು ಮತ್ತು ಸೇವೆ > ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ ನೋಡಿ.

^ ಪ್ಯಾರ. 10 ಲೈಬ್ರರಿ > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ನೋಡಿ.

^ ಪ್ಯಾರ. 14 JW ಲೈಬ್ರರಿಯಲ್ಲಿ ಮೀಡಿಯಾ > ನಮ್ಮ ಕೂಟಗಳು ಮತ್ತು ಸೇವೆ > ಸೇವೆಗಾಗಿ ಸಾಧನಗಳು ನೋಡಿ.