ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 42

ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 2

ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 2

“ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು.”—1 ತಿಮೊ. 4:16.

ಗೀತೆ 143 ಕತ್ತಲೆಯಲ್ಲಿ ಬೆಳಕು

ಕಿರುನೋಟ *

1. ಶಿಷ್ಯರನ್ನಾಗಿ ಮಾಡುವ ಕೆಲ್ಸ ಜೀವ ರಕ್ಷಿಸೋ ಕೆಲ್ಸ ಅಂತ ಹೇಗೆ ಹೇಳಬಹುದು?

ಶಿಷ್ಯರನ್ನಾಗಿ ಮಾಡೋ ಕೆಲ್ಸ ಜೀವ ರಕ್ಷಿಸೋ ಕೆಲ್ಸ. ನಾವದನ್ನ ಹೇಗೆ ಹೇಳಬಹುದು? ಮತ್ತಾಯ 28:19, 20 ರಲ್ಲಿ ಯೇಸು ನಮಗೆ, ‘ಹೋಗಿ ಶಿಷ್ಯರನ್ನಾಗಿ ಮಾಡಿ ಮತ್ತು ದೀಕ್ಷಾಸ್ನಾನ ಮಾಡಿಸಿ’ ಅಂತ ಆಜ್ಞೆ ಕೊಟ್ಟಿದ್ದಾನೆ. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ತಗೊಳ್ಳೋದ್ರಿಂದ ಅವನ ಜೀವನ ಚೆನ್ನಾಗಾಗುತ್ತೆ ಅಂತ ನಮಗೆ ಗೊತ್ತು. ಯಾರಾದ್ರೂ ದೀಕ್ಷಾಸ್ನಾನ ತಗೋಬೇಕಂತಿದ್ರೆ ಮೊದ್ಲು ಅವ್ರು, ಯೇಸು ಎಲ್ಲರಿಗೋಸ್ಕರ ತನ್ನ ಜೀವ ಕೊಟ್ಟಿದ್ದಾನೆ, ಪುನಃ ಜೀವಂತವಾಗಿ ಎದ್ದು ಬಂದಿದ್ದಾನೆ ಮತ್ತು ಇದ್ರಿಂದನೇ ಜನ್ರಿಗೆ ಶಾಶ್ವತ ಜೀವನ ಸಿಗುತ್ತೆ ಅಂತ ನಂಬಬೇಕು. ಅಪೊಸ್ತಲ ಪೇತ್ರ ಸಹ ಕ್ರೈಸ್ತರಿಗೆ, “ದೀಕ್ಷಾಸ್ನಾನವು . . . ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಿಮ್ಮನ್ನು ರಕ್ಷಿಸುತ್ತಿದೆ” ಅಂತ ಹೇಳಿದ. (1 ಪೇತ್ರ 3:21) ಹಾಗಾಗಿ ನಾವು ಜನ್ರನ್ನ ಶಿಷ್ಯರನ್ನಾಗಿ ಮಾಡುವಾಗ ಅವ್ರ ಜೀವವನ್ನ ಕಾಪಾಡ್ತೇವೆ ಅಂತ ಹೇಳಬಹುದು.

2. ನಾವು ಯಾವ ರೀತಿಯ ಬೋಧಕರಾಗಿರಬೇಕು ಅಂತ 2 ತಿಮೊತಿ 4:1, 2 ಹೇಳುತ್ತೆ?

2 ಜನ್ರನ್ನ ಶಿಷ್ಯರನ್ನಾಗಿ ಮಾಡ್ಬೇಕಂದ್ರೆ ನಾವು ‘ಬೋಧಿಸುವ ಕಲೆಯನ್ನ’ ಬೆಳೆಸಿಕೊಳ್ಳಬೇಕು. (2 ತಿಮೊತಿ 4:1, 2 ಓದಿ.) ಯಾಕಂದ್ರೆ ಯೇಸು ನಮಗೆ ‘ಹೋಗಿ ಶಿಷ್ಯರನ್ನಾಗಿ ಮಾಡಿ ಮತ್ತು ಬೋಧಿಸಿ’ ಅಂತ ಆಜ್ಞಾಪಿಸಿದ್ದಾನೆ. ಅಪೊಸ್ತಲ ಪೌಲ ಸಹ ಬೋಧಿಸುವ ಅಥವಾ ಕಲಿಸೋ ಕೆಲ್ಸದಲ್ಲಿ ‘ನಿರತರಾಗಿರೋಕೆ’ ಹೇಳಿದ್ದಾನೆ. ಯಾಕಂದ್ರೆ ಹೀಗೆ ಮಾಡೋ ಮೂಲಕ ‘ನಾವು ನಮ್ಮನ್ನ ಮತ್ತು ನಮಗೆ ಕಿವಿಗೊಡುವವರನ್ನ ರಕ್ಷಿಸ್ತೇವೆ.’ ಇದು ಪ್ರಾಣ ರಕ್ಷಿಸೋ ಕೆಲ್ಸ ಆಗಿರೋದ್ರಿಂದನೇ ಪೌಲನು, ನಮ್ಮ ‘ಬೋಧನೆಯ ವಿಷ್ಯದಲ್ಲಿ ಸದಾ ಗಮನ ಕೊಡಬೇಕು’ ಅಂತ ಹೇಳಿದನು. (1 ತಿಮೊ. 4:16) ನಾವು ಜನ್ರಿಗೆ ಚೆನ್ನಾಗಿ ಕಲಿಸಿದ್ರೆನೇ ಅವ್ರು ಶಿಷ್ಯರಾಗೋಕೆ ಸಾಧ್ಯ. ಹಾಗಾಗಿ ಚೆನ್ನಾಗಿ ಕಲಿಸೋದು ಹೇಗಂತ ಮೊದ್ಲು ನಾವು ಕಲಿಬೇಕು.

3. ಈ ಲೇಖನದಲ್ಲಿ ನಾವೇನನ್ನ ಕಲಿತೇವೆ?

3 ನಾವು ಎಷ್ಟೋ ಲಕ್ಷ ಜನ್ರಿಗೆ ಬೈಬಲ್‌ ಕಲಿಸ್ತಾ ಇದ್ದೇವೆ. ಹಿಂದಿನ ಲೇಖನದಲ್ಲಿ ನೋಡಿದ ಹಾಗೆ ಈ ಜನ್ರಲ್ಲಿ ಹೆಚ್ಚಿನವ್ರು ದೀಕ್ಷಾಸ್ನಾನ ತಗೊಂಡು ಶಿಷ್ಯರಾಗಬೇಕು ಅನ್ನೋದೇ ನಮ್ಮ ಆಸೆ. ನಾವು ನಮ್ಮ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಇನ್ನೂ 5 ವಿಧಗಳನ್ನ ಈ ಲೇಖನದಲ್ಲಿ ಕಲಿತೇವೆ.

ಬೈಬಲನ್ನ ಚೆನ್ನಾಗಿ ಉಪಯೋಗಿಸಬೇಕು

ಬೈಬಲನ್ನ ಚೆನ್ನಾಗಿ ಉಪಯೋಗಿಸೋದು ಹೇಗೆ ಅಂತ ಅನುಭವಸ್ಥ ಪ್ರಚಾರಕರ ಹತ್ರ ಸಲಹೆಯನ್ನ ಕೇಳಿ (ಪ್ಯಾರ 4-6 ನೋಡಿ) *

4. ಬೈಬಲನ್ನ ಕಲಿಸುವಾಗ ನಾವ್ಯಾಕೆ ತುಂಬ ಮಾತಾಡಬಾರದು? (ಪಾದಟಿಪ್ಪಣಿ ನೋಡಿ.)

4 ನಮಗೆ ಬೈಬಲಲ್ಲಿರೋ ವಿಷ್ಯಗಳಂದ್ರೆ ತುಂಬ ಇಷ್ಟ. ಹಾಗಾಗಿ ಬೈಬಲ್‌ ಬಗ್ಗೆ ತುಂಬ ವಿಷ್ಯಗಳನ್ನ ಬೇರೆಯವ್ರಿಗೆ ಹೇಳಬೇಕು ಅಂತ ನಮಗನಿಸಬಹುದು. ಆದ್ರೆ ಬೇರೆಯವ್ರಿಗೆ ಕಲಿಸುವಾಗ ನಾವೇ ತುಂಬ ಮಾತಾಡ್ದೇ ಇರೋ ತರ ಎಚ್ಚರ ವಹಿಸಬೇಕು. ನಾವು ಕಾವಲಿನಬುರುಜು ಅಧ್ಯಯನ ನಡೆಸ್ತಾ ಇರಬಹುದು, ಸಭಾ ಬೈಬಲ್‌ ಅಧ್ಯಯನ ಮಾಡ್ತಾ ಇರಬಹುದು ಅಥವಾ ಒಬ್ಬ ವ್ಯಕ್ತಿಗೆ ಬೈಬಲ್‌ ಕಲಿಸ್ತಾ ಇರಬಹುದು. ಆಗ ನಾವೇ ತುಂಬ ವಿವರಣೆ ಕೊಡೋ ಬದಲಿಗೆ ಬೈಬಲನ್ನ ಚೆನ್ನಾಗಿ ಉಪಯೋಗಿಸಬೇಕು. ಬೈಬಲಿನ ಒಂದು ವಿಷ್ಯದ ಬಗ್ಗೆ ಅಥವಾ ವಚನದ ಬಗ್ಗೆ ನಮಗೆ ತುಂಬ ವಿಷ್ಯ ಗೊತ್ತಿದ್ರೂ ಅದೆಲ್ಲವನ್ನ ಒಂದೇ ಸರಿಗೆ ಹೇಳಿಬಿಡಬಾರದು. * (ಯೋಹಾ. 16:12) ನಮಗೆ ದೀಕ್ಷಾಸ್ನಾನವಾದಾಗ್ಲೂ ಬೈಬಲ್‌ ಬಗ್ಗೆ ಎಲ್ಲಾ ವಿಷ್ಯ ಗೊತ್ತಿರಲಿಲ್ಲ. ಕೆಲವು ಮುಖ್ಯ ವಿಷ್ಯಗಳು ಮಾತ್ರ ಗೊತ್ತಿತ್ತು. (ಇಬ್ರಿ. 6:1) ಈಗ ನಮಗೆ ಏನು ಗೊತ್ತಿದೆಯೋ ಅಷ್ಟನ್ನ ತಿಳುಕೊಳ್ಳೋಕೆ ನಮಗೆ ತುಂಬ ವರ್ಷಗಳೇ ಹಿಡಿದಿವೆ. ಹಾಗಾಗಿ, ಹೊಸ ವಿದ್ಯಾರ್ಥಿಗೆ ಒಂದೇ ಸಲಕ್ಕೆ ಎಲ್ಲಾ ವಿಷ್ಯಗಳನ್ನ ಹೇಳಬಾರದು.

5. (ಎ) ಒಂದನೇ ಥೆಸಲೊನೀಕ 2:13 ರ ಪ್ರಕಾರ ನಾವು ವಿದ್ಯಾರ್ಥಿಗೆ ಏನನ್ನ ಅರ್ಥಮಾಡಿಸಬೇಕು? (ಬಿ) ವಿದ್ಯಾರ್ಥಿ ಕಲಿಯುತ್ತಿರೋ ವಿಷ್ಯದ ಬಗ್ಗೆ ಮಾತಾಡೋಕೆ ನಾವೇನು ಮಾಡಬಹುದು?

5 ಬೈಬಲಲ್ಲಿ ಇರೋದನ್ನೇ ನಾವು ಕಲಿಸ್ತಿದ್ದೇವೆ ಅಂತ ನಮ್ಮ ವಿದ್ಯಾರ್ಥಿಗೆ ಅರ್ಥ ಮಾಡಿಸಬೇಕು. (1 ಥೆಸಲೊನೀಕ 2:13 ಓದಿ.) ಇದನ್ನ ಹೇಗೆ ಮಾಡೋದು? ಎಲ್ಲಾ ಬೈಬಲ್‌ ವಚನಗಳನ್ನ ನಾವೇ ವಿವರಿಸೋ ಬದಲಿಗೆ ಕೆಲವನ್ನ ವಿವರಿಸುವಂತೆ ಬೈಬಲ್‌ ವಿದ್ಯಾರ್ಥಿಗೆ ಹೇಳಬಹುದು. ಹೀಗೆ ಬೈಬಲ್‌ ಬಗ್ಗೆ ಮಾತಾಡೋಕೆ ಅವ್ರಿಗೆ ಅವಕಾಶ ಕೊಡಬೇಕು. ಬೈಬಲಲ್ಲಿರೋ ವಿಷ್ಯಗಳನ್ನ ಅವ್ರು ತಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳೋದು ಅಂತ ತಿಳುಕೊಳ್ಳೋಕೆ ನಾವು ಅವ್ರಿಗೆ ಸಹಾಯ ಮಾಡ್ಬೇಕು. ಯಾವುದೇ ವಚನವನ್ನ ಓದಿದಾಗ ಚಿಕ್ಕ ಚಿಕ್ಕ ಪ್ರಶ್ನೆಗಳನ್ನ ಕೇಳಿ ಅವ್ರ ಅನಿಸಿಕೆ, ಅಭಿಪ್ರಾಯ ಮತ್ತು ಯೋಚನೆಯನ್ನ ತಿಳುಕೊಳ್ಳಬೇಕು. (ಲೂಕ 10:25-28) ಉದಾಹರಣೆಗೆ, “ಈ ವಚನದಿಂದ ಯೆಹೋವನ ಯಾವ ಗುಣದ ಬಗ್ಗೆ ಗೊತ್ತಾಗುತ್ತೆ?” “ಬೈಬಲಿನಲ್ಲಿ ತಿಳಿಸಲಾಗಿರೋ ಈ ವಿಷ್ಯದಿಂದ ನಿಮಗೇನು ಪ್ರಯೋಜನ?” “ಇವತ್ತು ನಾವು ಕಲಿತ ವಿಷ್ಯದ ಬಗ್ಗೆ ನಿಮಗೇನು ಅನ್ಸುತ್ತೆ?” ಅಂತ ಕೇಳಿ. (ಜ್ಞಾನೋ. 20:5) ವಿದ್ಯಾರ್ಥಿ ಎಷ್ಟು ವಿಷ್ಯನ ತಿಳುಕೊಂಡಿದ್ದಾರೆ ಅನ್ನೋದು ಮುಖ್ಯ ಅಲ್ಲ, ತಿಳುಕೊಂಡಿದ್ದನ್ನ ಇಷ್ಟಪಡ್ತಿದ್ದಾರಾ, ತಮ್ಮ ಜೀವನದಲ್ಲಿ ಅನ್ವಯಿಸ್ತಿದ್ದಾರಾ ಅನ್ನೋದೇ ಮುಖ್ಯ.

6. ನಮ್ಮ ಬೈಬಲ್‌ ಸ್ಟಡಿಗೆ ಅನುಭವ ಇರೋ ಪ್ರಚಾರಕರನ್ನ ಕರ್ಕೊಂಡು ಹೋಗೋದ್ರಿಂದ ಏನು ಪ್ರಯೋಜನ?

6 ಚೆನ್ನಾಗಿ ಬೈಬಲ್‌ ಕಲಿಸಿ ಅನುಭವ ಇರುವಂಥವ್ರನ್ನ ನಿಮ್ಮ ಸ್ಟಡಿಗೆ ಯಾವತ್ತಾದ್ರೂ ಕರ್ಕೊಂಡು ಹೋಗಿದ್ದೀರಾ? ಹಾಗೆ ಕರ್ಕೊಂಡು ಹೋದ್ರೆ ಸ್ಟಡಿ ನಂತ್ರ ಅವ್ರತ್ರ ‘ನಾನು ಸ್ಟಡಿ ಹೇಗೆ ಮಾಡಿದೆ? ಬೈಬಲನ್ನ ಸರಿಯಾಗಿ ಉಪಯೋಗಿಸಿದ್ನಾ?’ ಅಂತ ಕೇಳಿ. ನೀವು ಬೈಬಲ್‌ ಸ್ಟಡಿಯನ್ನ ಚೆನ್ನಾಗಿ ಮಾಡೋಕೆ ಇಷ್ಟಪಡ್ತೀರಾ? ಹಾಗಾದ್ರೆ ನಿಮ್ಮನ್ನು ನೀವು ತಗ್ಗಿಸಿಕೊಳ್ಳೋದು ಮತ್ತು ಅನುಭವ ಇರುವವ್ರ ಹತ್ರ ಸಲಹೆ ಕೇಳೋದು ತುಂಬ ಮುಖ್ಯ. (ಅಪೊಸ್ತಲರ ಕಾರ್ಯಗಳು 18:24-26ನ್ನ ಹೋಲಿಸಿ.) ವಿದ್ಯಾರ್ಥಿ ಏನನ್ನ ಕಲಿತಾ ಇದ್ದಾನೋ ಅದವನಿಗೆ ಅರ್ಥ ಆಗ್ತಿದ್ಯಾ ಅಂತ ಸ್ಟಡಿ ನಂತ್ರ ನಿಮ್ಮ ಜೊತೆ ಬಂದ ಅನುಭವಸ್ಥ ಪ್ರಚಾರಕರನ್ನ ಕೇಳಿ. ಒಂದೆರಡು ವಾರ ನೀವೆಲ್ಲಿಗಾದ್ರೂ ಹೋಗೋದಾದ್ರೆ ಆ ಸಮ್ಯದಲ್ಲಿ ಸ್ಟಡಿ ಮಾಡೋಕೆ ಆ ಪ್ರಚಾರಕರ ಹತ್ರ ಕೇಳಿಕೊಳ್ಳಿ. ಈ ರೀತಿ ಮಾಡೋದ್ರಿಂದ ಸ್ಟಡಿ ಮಧ್ಯದಲ್ಲಿ ನಿಂತು ಹೋಗಲ್ಲ. ಅಷ್ಟೇ ಅಲ್ಲ, ಸ್ಟಡಿ ಮಾಡೋದು ಎಷ್ಟು ಪ್ರಾಮುಖ್ಯ ಅಂತ ವಿದ್ಯಾರ್ಥಿಗೆ ಅರ್ಥ ಆಗುತ್ತೆ. ನಿಮ್ಮ ವಿದ್ಯಾರ್ಥಿ ಚೆನ್ನಾಗಿ ಕಲಿತು ಪ್ರಗತಿ ಮಾಡ್ಬೇಕು ಅನ್ನೋದೇ ನಿಮ್ಮ ಆಸೆ ತಾನೆ? ಹಾಗಿರುವಾಗ ಯಾವತ್ತೂ ‘ಇದು ನನ್ನ ಸ್ಟಡಿ, ನಾನೇ ಮಾಡ್ಬೇಕು’ ಅಂತ ಯೋಚಿಸಬೇಡಿ.

ಉತ್ಸಾಹ ಮತ್ತು ದೃಢ ಭರವಸೆಯಿಂದ ಕಲಿಸಬೇಕು

ಸಹೋದರ ಸಹೋದರಿಯರ ಅನುಭವಗಳನ್ನ ತಿಳಿಸಿ. ಇದ್ರಿಂದ ಬೈಬಲಿನಲ್ಲಿರೋ ವಿಷ್ಯಗಳನ್ನ ತನ್ನ ಜೀವನದಲ್ಲಿ ಅನ್ವಯಿಸಿಕೊಳ್ಳೋದು ಹೇಗಂತ ವಿದ್ಯಾರ್ಥಿಗೆ ಗೊತ್ತಾಗುತ್ತೆ (ಪ್ಯಾರ 7-9 ನೋಡಿ) *

7. ವಿದ್ಯಾರ್ಥಿ ಬೈಬಲ್‌ ಕಲಿಯೋಕೆ ಉತ್ಸಾಹ ತೋರಿಸಬೇಕಂದ್ರೆ ಅವ್ನಿಗೆ ನೀವು ಹೇಗೆ ಕಲಿಸಬೇಕು?

7 ಸ್ಟಡಿ ಮಾಡುವಾಗ ನೀವು ಉತ್ಸಾಹದಿಂದ ಕಲಿಸಬೇಕು ಮತ್ತು ಬೈಬಲಲ್ಲಿ ಇರೋದನ್ನ ನಂಬ್ತೀರಿ ಅನ್ನೋದು ನಿಮ್ಮ ಮಾತಿಂದ ಗೊತ್ತಾಗಬೇಕು. (1 ಥೆಸ. 1:5) ಇದನ್ನ ನೋಡುವಾಗ, ಬೈಬಲಲ್ಲಿರೋ ವಿಷ್ಯ ನಿಮಗೆ ಎಷ್ಟು ಇಷ್ಟ, ಅದ್ರ ಮೇಲೆ ನಿಮಗೆಷ್ಟು ಭರವಸೆ ಇದೆ ಅಂತ ವಿದ್ಯಾರ್ಥಿಗೆ ಗೊತ್ತಾಗುತ್ತೆ. ಇದ್ರಿಂದ ಅವನು ಸಹ ಕಲಿಯೋಕೆ ತುಂಬ ಉತ್ಸಾಹ ತೋರಿಸ್ತಾನೆ. ಸಾಧ್ಯ ಆಗೋದಾದ್ರೆ ಬೈಬಲಲ್ಲಿರೋ ವಿಷ್ಯಗಳನ್ನ ಕಲ್ತಿದ್ರಿಂದ ನಿಮಗೇನು ಪ್ರಯೋಜನ ಆಯ್ತು ಅನ್ನೋದನ್ನ ಹೇಳಿ. ಹೀಗೆ ಮಾಡೋದ್ರಿಂದ ನಿಮ್ಮ ವಿದ್ಯಾರ್ಥಿ ಸಹ ಬೈಬಲಲ್ಲಿರೋ ವಿಷ್ಯಗಳನ್ನ ತಿಳುಕೊಂಡ್ರೆ ತನಗೂ ಪ್ರಯೋಜನ ಆಗುತ್ತೆ ಅಂತ ಅರ್ಥಮಾಡಿಕೊಳ್ತಾನೆ.

8. (ಎ) ನೀವು ನಿಮ್ಮ ಬೈಬಲ್‌ ವಿದ್ಯಾರ್ಥಿಗಾಗಿ ಇನ್ನೂ ಏನೆಲ್ಲಾ ಮಾಡಬಹುದು? (ಬಿ) ಹೀಗೆ ಮಾಡೋದ್ರಿಂದ ಏನು ಪ್ರಯೋಜನ?

8 ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ಇರುವಂಥದ್ದೇ ಸಮಸ್ಯೆಗಳನ್ನ ಅನುಭವಿಸಿ, ಅವನ್ನು ಜಯಿಸಿರೋ ಸಹೋದರ ಸಹೋದರಿಯರ ಅನುಭವಗಳನ್ನ ತಿಳಿಸಿ. ಇಂಥ ಸಹೋದರ ಸಹೋದರಿಯರು ನಿಮ್ಮ ಸಭೆಯಲ್ಲೇ ಇರೋದಾದ್ರೆ ಅವ್ರನ್ನ ನಿಮ್ಮ ಜೊತೆ ಸ್ಟಡಿಗೆ ಕರ್ಕೊಂಡು ಹೋಗಿ. ಇಲ್ಲದಿದ್ರೆ jw.orgನಲ್ಲಿರೋ “ಬದುಕು ಬದಲಾದ ವಿಧ * ಅನ್ನೋ ಸರಣಿಯಲ್ಲಿ ಬಂದಿರೋ ಅನುಭವಗಳನ್ನ ತಿಳಿಸಿ. ಬೈಬಲಿನಲ್ಲಿರೋ ವಿಷ್ಯಗಳನ್ನ ಅನ್ವಯಿಸೋದ್ರಿಂದ ತನ್ನ ಜೀವನ ಚೆನ್ನಾಗಾಗುತ್ತೆ ಅಂತ ಅರ್ಥಮಾಡ್ಕೊಳ್ಳೋಕೆ ವಿದ್ಯಾರ್ಥಿಗೆ ಅದ್ರಲ್ಲಿರೋ ಲೇಖನಗಳು ಮತ್ತು ವಿಡಿಯೋಗಳು ಸಹಾಯ ಮಾಡ್ತವೆ.

9. ಕಲಿತ ವಿಷ್ಯವನ್ನ ಕುಟುಂಬದವ್ರಿಗೆ ಮತ್ತು ಸ್ನೇಹಿತರಿಗೆ ಹೇಳೋಕೆ ನೀವು ನಿಮ್ಮ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಬಹುದು?

9 ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ಮದುವೆ ಆಗಿರೋದಾದ್ರೆ ಅವ್ರ ಸಂಗಾತಿ ಸಹ ಸ್ಟಡಿ ತಗೊಳ್ತಿದ್ದಾರಾ? ಒಂದುವೇಳೆ ತಗೊಳ್ತಾ ಇಲ್ಲಾಂದ್ರೆ ಸ್ಟಡಿ ತಗೊಳ್ಳೋಕೆ ಅವ್ರನ್ನ ಪ್ರೋತ್ಸಾಹಿಸಿ. ನಿಮ್ಮ ವಿದ್ಯಾರ್ಥಿ ಸ್ಟಡಿಯಲ್ಲಿ ಏನೆಲ್ಲಾ ಕಲಿತಾ ಇದ್ದಾನೋ ಅದನ್ನೆಲ್ಲಾ ತನ್ನ ಕುಟುಂಬದವ್ರಿಗೆ ಮತ್ತು ಸ್ನೇಹಿತರಿಗೆ ತಿಳಿಸುವಂತೆ ಹೇಳಿ. (ಯೋಹಾ. 1:40-45) ನೀವು ಅವ್ರನ್ನು ಹೀಗೆ ಕೇಳ್ಬಹುದು: “ಈಗ ಕಲಿತ ವಿಷ್ಯವನ್ನ ನೀವು ನಿಮ್ಮ ಕುಟುಂಬದವ್ರಿಗೆ ಹೇಗೆ ಹೇಳ್ತೀರಾ? ಬೈಬಲಿನಿಂದ ಕಲಿತ ಈ ವಿಷ್ಯದ ಬಗ್ಗೆ ನಿಮ್ಮ ಸ್ನೇಹಿತರ ಹತ್ರ ಮಾತಾಡುವಾಗ ಅದು ನಿಜ ಅಂತ ತೋರಿಸೋಕೆ ಯಾವ ವಚನ ಉಪಯೋಗಿಸ್ತೀರಾ?” ಹೀಗೆ ಮಾಡಿದ್ರೆ ನಿಮ್ಮ ವಿದ್ಯಾರ್ಥಿ ಮುಂದೆ ಬೋಧಕನಾಗೋಕೆ ಸಹಾಯ ಮಾಡಿದಂತೆ ಆಗುತ್ತೆ. ಮುಂದೆ ಅವನು ದೀಕ್ಷಾಸ್ನಾನವಾಗಿರದ ಪ್ರಚಾರಕನಾಗೋಕೆ ಅರ್ಹನಾದಾಗ ಸಭೆಯಲ್ಲಿರೋ ಸಹೋದರ ಸಹೋದರಿಯರ ಜೊತೆ ಸೇರಿ ಸಾರೋಕೆ ಸಾಧ್ಯ ಆಗುತ್ತೆ. ನಿಮ್ಮ ವಿದ್ಯಾರ್ಥಿಗೆ ಪರಿಚಯ ಇರೋ ಯಾರಾದ್ರೂ ಬೈಬಲ್‌ ಕಲಿಯೋಕೆ ಇಷ್ಟಪಡ್ತಾರಾ ಅಂತನೂ ಕೇಳಿ. ಯಾರಾದ್ರೂ ಇಷ್ಟ ಪಡೋದಾದ್ರೆ ತಕ್ಷಣ ಅವ್ರನ್ನ ಭೇಟಿ ಮಾಡಿ ಬೈಬಲ್‌ ಸ್ಟಡಿ ಬಗ್ಗೆ ತಿಳಿಸಿ. ಜೊತೆಗೆ, ಬೈಬಲ್‌ ಅಧ್ಯಯನ ಅಂದರೇನು? * ಅನ್ನೋ ವಿಡಿಯೋ ತೋರಿಸಿ.

ಸಭೆಯಲ್ಲಿ ಸ್ನೇಹಿತರನ್ನ ಮಾಡ್ಕೊಳ್ಳೋಕೆ ಪ್ರೋತ್ಸಾಹಿಸಬೇಕು

ಸಭೆಯಲ್ಲಿ ಇರುವವ್ರ ಸ್ನೇಹಿತರಾಗೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ (ಪ್ಯಾರ 10-11 ನೋಡಿ) *

10. ಒಂದನೇ ಥೆಸಲೊನೀಕ 2:7, 8 ರ ಪ್ರಕಾರ ನಾವು ಪೌಲನನ್ನ ಹೇಗೆ ಅನುಕರಿಸಬಹುದು?

10 ನಾವು ನಮ್ಮ ವಿದ್ಯಾರ್ಥಿ ಬಗ್ಗೆ ಕಾಳಜಿ ತೋರಿಸಬೇಕು. ಅವ್ರು ಮುಂದೆ ನಮ್ಮ ಸಭೆಯ ಭಾಗವಾಗ್ತಾರೆ ಅಂತ ನೆನಸಬೇಕು. (1 ಥೆಸಲೊನೀಕ 2:7, 8 ಓದಿ.) ಲೋಕದ ಸ್ನೇಹಿತರನ್ನ ಬಿಟ್ಟು ಜೀವನದಲ್ಲಿ ಬದಲಾವಣೆ ಮಾಡ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹಾಗಾಗಿ ಸಭೆಯಲ್ಲಿ ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋಕೆ ನಾವು ಅವ್ರಿಗೆ ಸಹಾಯ ಮಾಡ್ಬೇಕು. ಸ್ವತಃ ನಾವೇ ಅವ್ರಿಗೆ ಒಳ್ಳೇ ಸ್ನೇಹಿತರಾಗಿರಬೇಕು. ಬೈಬಲ್‌ ಸ್ಟಡಿ ಮಾಡುವಾಗ ಮಾತ್ರ ಅಲ್ಲ, ಬೇರೆ ಸಮ್ಯದಲ್ಲೂ ನಾವು ಅವ್ರ ಜೊತೆ ಸಮ್ಯ ಕಳಿಬೇಕು. ಅವ್ರು ಹೇಗಿದ್ದಾರೆ ಅಂತ ತಿಳುಕೊಳ್ಳೋಕೆ ಅವ್ರಿಗೆ ಫೋನ್‌ ಮಾಡಬಹುದು, ಮೆಸೇಜ್‌ ಕಳಿಸಬಹುದು ಅಥವಾ ಅವ್ರ ಮನೆಗೆ ಹೋಗಿ ನೋಡ್ಕೊಂಡು ಬರಬಹುದು. ಹೀಗೆ ಮಾಡೋದ್ರಿಂದ ನಮಗೆ ನಿಜವಾಗಿಯೂ ಅವ್ರ ಬಗ್ಗೆ ಕಾಳಜಿ ಇದೆ ಅಂತ ತೋರಿಸಬಹುದು.

11. ನಾವು ನಮ್ಮ ವಿದ್ಯಾರ್ಥಿಯನ್ನ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಯಾಕೆ ಪರಿಚಯ ಮಾಡಿಸಬೇಕು?

11 ಒಂದು ಮಗುನ ಬೆಳೆಸೋಕೆ ಇಡೀ ಊರಿನ ಸಹಾಯ ಬೇಕು ಅನ್ನೋ ಮಾತಿದೆ. ಅದೇ ತರ ಒಬ್ಬ ವ್ಯಕ್ತಿ ಯೇಸುವಿನ ಶಿಷ್ಯನಾಗಬೇಕಂದ್ರೆ ಇಡೀ ಸಭೆಯ ಸಹಾಯ ಬೇಕು. ನಾವು ಒಳ್ಳೇ ಬೋಧಕರಾಗಿರೋದಾದ್ರೆ ನಮ್ಮ ವಿದ್ಯಾರ್ಥಿಯನ್ನ ಸಹೋದರ ಸಹೋದರಿಯರಿಗೆ ಪರಿಚಯ ಮಾಡಿಸ್ತೇವೆ. ಇದ್ರಿಂದ ವಿದ್ಯಾರ್ಥಿ ಯೆಹೋವನ ಜನ್ರ ಮಧ್ಯ ಸಹವಾಸ ಮಾಡೋಕೆ ಸಾಧ್ಯವಾಗುತ್ತೆ. ಅಷ್ಟೇ ಅಲ್ಲ, ವಿದ್ಯಾರ್ಥಿ ಯೆಹೋವನಿಗೆ ಹತ್ರ ಆಗೋಕೆ ಸಭೆಯವ್ರು ಸಹಾಯ ಮಾಡ್ತಾರೆ ಮತ್ತು ಅವ್ನಿಗೆ ಕಷ್ಟ ಬಂದಾಗ ಧೈರ್ಯ ತುಂಬಿಸ್ತಾರೆ. ನಮ್ಮ ವಿದ್ಯಾರ್ಥಿ ಕೂಡ ‘ನಾನು ಸಹ ಸಭೆಯ ಭಾಗ, ಇವ್ರೆಲ್ಲಾ ನನ್ನ ಕುಟುಂಬದವ್ರು’ ಅಂತ ನೆನಸಬೇಕಂತ ನಾವು ಬಯಸ್ತೇವೆ. ಅಷ್ಟೇ ಅಲ್ಲ, ನಮ್ಮ ಸಹೋದರ ಸಹೋದರಿಯರ ಪ್ರೀತಿ ಅವ್ನಿಗೆ ಸಿಗಬೇಕು, ಅವ್ನು ಅವ್ರಿಗೆ ಹತ್ರ ಆಗ್ಬೇಕು ಅಂತನೂ ಇಷ್ಟಪಡ್ತೇವೆ. ಆಗಲೇ ಅವ್ನು ಲೋಕದ ಜನ್ರಿಂದ ದೂರ ಇರೋಕೆ ಸಾಧ್ಯ ಆಗುತ್ತೆ. (ಜ್ಞಾನೋ. 13:20) ಸಭೆಯಲ್ಲಿ ವಿದ್ಯಾರ್ಥಿಗೆ ಒಳ್ಳೇ ಸ್ನೇಹಿತರು ಸಿಗೋದಾದ್ರೆ ಮುಂದೆ ಲೋಕದ ಸ್ನೇಹಿತರು ಅವನ ಸ್ನೇಹನ ಬೇಡ ಅಂತ ಹೇಳಿದ್ರೂ ಅವನಿಗೆ ಬೇಜಾರಾಗಲ್ಲ.—ಮಾರ್ಕ 10:29, 30; 1 ಪೇತ್ರ 4:4.

ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ಮಾತಾಡಬೇಕು

ವಿದ್ಯಾರ್ಥಿ ಹಂತ ಹಂತವಾಗಿ ಪ್ರಗತಿ ಮಾಡ್ವಾಗ ದೀಕ್ಷಾಸ್ನಾನದ ಗುರಿಯನ್ನ ತಲಪುತ್ತಾರೆ (ಪ್ಯಾರ 12-13 ನೋಡಿ)

12. ನಾವ್ಯಾಕೆ ವಿದ್ಯಾರ್ಥಿ ಹತ್ರ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ಮಾತಾಡಬೇಕು?

12 ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ವಿದ್ಯಾರ್ಥಿ ಹತ್ರ ಮುಚ್ಚುಮರೆ ಇಲ್ಲದೆ ಮಾತಾಡಿ. ಹೇಗಿದ್ರೂ ನಾವು ಬೈಬಲ್‌ ಸ್ಟಡಿ ಮಾಡೋ ಉದ್ದೇಶ ಅವನು ದೀಕ್ಷಾಸ್ನಾನ ತಗೊಂಡು ಯೇಸುವಿನ ಶಿಷ್ಯನಾಗಬೇಕು ಅನ್ನೋದು ತಾನೇ? ಒಂದು ವೇಳೆ ವಿದ್ಯಾರ್ಥಿ ಕೆಲವು ತಿಂಗಳಿಂದ ಸ್ಟಡಿ ತಗೊಳ್ತಾ ಇದ್ದು, ಕೂಟಗಳಿಗೂ ಬರ್ತಾ ಇರೋದಾದ್ರೆ ಬೈಬಲ್‌ ಸ್ಟಡಿಯ ಉದ್ದೇಶ ಏನಂತ ಅವನಿಗೆ ಅರ್ಥ ಆಗಿರುತ್ತೆ. ಅವನು ಯೆಹೋವನ ಸಾಕ್ಷಿಯಾಗಿ ದೇವರ ಸೇವೆ ಮಾಡಬೇಕನ್ನೋದೇ ನಮ್ಮ ಉದ್ದೇಶ ಅಂತ ಅವ್ನಿಗೆ ಗೊತ್ತಾಗಿರುತ್ತೆ.

13. ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳೋ ಮುಂಚೆ ಏನೆಲ್ಲಾ ಮಾಡ್ತಾನೆ?

13 ಬೈಬಲ್‌ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳೋ ಮುಂಚೆ ಹಂತ ಹಂತವಾಗಿ ಕೆಲವು ವಿಷ್ಯಗಳನ್ನ ಮಾಡ್ತಾನೆ. ಮೊದಲನೇದಾಗಿ, ಅವನು ಯೆಹೋವನ ಬಗ್ಗೆ ತಿಳುಕೊಳ್ತಾನೆ, ಆತನನ್ನ ಪ್ರೀತಿಸ್ತಾನೆ ಮತ್ತು ಆತನ ಮೇಲೆ ನಂಬಿಕೆ ಇಡ್ತಾನೆ. (ಯೋಹಾ. 3:16; 17:3) ಯೆಹೋವನಿಗೆ ಅವನು ಆಪ್ತನಾಗ್ತಾನೆ. ಸಭೆಯಲ್ಲಿರೋ ಸಹೋದರ ಸಹೋದರಿಯರ ಜೊತೆ ಸ್ನೇಹ ಮಾಡ್ತಾನೆ. (ಇಬ್ರಿ. 10:24, 25; ಯಾಕೋ. 4:8) ಸಮಯ ಹೋದಂತೆ, ಅವನು ತನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಡ್ತಾನೆ ಮತ್ತು ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಡ್ತಾನೆ. (ಅ. ಕಾ. 3:19) ಬೈಬಲಿನಲ್ಲಿರೋ ಸತ್ಯವನ್ನ ಅವನು ನಂಬ್ತಾ ಹೋದ ಹಾಗೆ ಅದ್ರ ಬಗ್ಗೆ ಬೇರೆಯವ್ರಿಗೂ ತಿಳಿಸ್ತಾನೆ. (2 ಕೊರಿಂ. 4:13) ನಂತ್ರ ಅವನು ತನ್ನ ಜೀವನವನ್ನ ಯೆಹೋವನಿಗೆ ಸಮರ್ಪಿಸಿಕೊಂಡು, ತಾನು ಸಮರ್ಪಣೆ ಮಾಡ್ಕೊಂಡಿದ್ದೇನೆ ಅನ್ನೋದನ್ನ ದೀಕ್ಷಾಸ್ನಾನದ ಮೂಲಕ ತೋರಿಸಿಕೊಡ್ತಾನೆ. (1 ಪೇತ್ರ 3:21; 4:2) ಆ ದೀಕ್ಷಾಸ್ನಾನದ ದಿನ ನಮಗೆಲ್ರಿಗೂ ತುಂಬ ಖುಷಿಯಾಗುತ್ತೆ. ಹೀಗೆ ವಿದ್ಯಾರ್ಥಿ ಹಂತ ಹಂತವಾಗಿ ಒಂದೊಂದು ಹೆಜ್ಜೆಯನ್ನ ಇಡುವಾಗ ನಾವು ಅವನನ್ನ ಉದಾರವಾಗಿ ಪ್ರಶಂಸಿಸಬೇಕು. ಅವನನ್ನ ಉತ್ತೇಜಿಸಬೇಕು. ಹೀಗೆ ಮಾಡೋದ್ರಿಂದ ಅವನು ಪ್ರಗತಿ ಮಾಡ್ತಾ ಹೋಗ್ತಾನೆ.

ಪ್ರಗತಿ ಮಾಡ್ತಿದ್ದಾನಾ ಅಂತ ಪರೀಕ್ಷಿಸಬೇಕು

14. ವಿದ್ಯಾರ್ಥಿ ಪ್ರಗತಿ ಮಾಡ್ತಿದ್ದಾನಾ ಇಲ್ವಾ ಅಂತ ತಿಳುಕೊಳ್ಳೋಕೆ ಏನು ಮಾಡ್ಬೇಕು?

14 ನಮ್ಮ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ನಾವು ಸಹಾಯ ಮಾಡ್ವಾಗ ತಾಳ್ಮೆ ತೋರಿಸಬೇಕು. ವಿದ್ಯಾರ್ಥಿ ಯೆಹೋವನ ಸೇವೆ ಮಾಡೋಕೆ ಇಷ್ಟಪಡ್ತಿದ್ದಾನಾ ಅಂತನೂ ತಿಳ್ಕೊಬೇಕು. ಅವನು ಯೇಸುವಿನ ಆಜ್ಞೆಗಳನ್ನ ಪಾಲಿಸೋಕೆ ಪ್ರಯತ್ನಿಸ್ತಿದ್ದಾನಾ ಅಥವಾ ಬರೀ ಬೈಬಲ್‌ ಬಗ್ಗೆ ತಿಳುಕೊಳ್ಳೋಕಂತ ಸ್ಟಡಿ ತಗೋತಿದ್ದಾನಾ ಅಂತ ನೋಡ್ಬೇಕು.

15. ವಿದ್ಯಾರ್ಥಿ ಪ್ರಗತಿ ಮಾಡ್ತಾ ಇದ್ದಾನಾ ಇಲ್ವಾ ಅಂತ ತಿಳುಕೊಳ್ಳೋಕೆ ನಾವೇನನ್ನ ಗಮನಿಸಬೇಕು?

15 ವಿದ್ಯಾರ್ಥಿ ಪ್ರಗತಿ ಮಾಡ್ತಿದ್ದಾನಾ ಅಂತ ಆಗಿಂದಾಗ್ಗೆ ಪರೀಕ್ಷಿಸಿ. ಯೆಹೋವನ ಬಗ್ಗೆ ಏನನ್ಸುತ್ತೆ ಅಂತ ಅವನು ಹೇಳ್ತಾನಾ? ಯೆಹೋವನಿಗೆ ಪ್ರಾರ್ಥನೆ ಮಾಡ್ತಾನಾ? (ಕೀರ್ತ. 116:1, 2) ಅವನಿಗೆ ಬೈಬಲ್‌ ಓದೋದಂದ್ರೆ ಇಷ್ಟನಾ? (ಕೀರ್ತ. 119:97) ಕೂಟಗಳಿಗೆ ತಪ್ಪದೇ ಹಾಜರಾಗ್ತಿದ್ದಾನಾ? (ಕೀರ್ತ. 22:22) ಜೀವನದಲ್ಲಿ ಬದಲಾವಣೆ ಮಾಡ್ಕೊಂಡಿದ್ದಾನಾ? (ಕೀರ್ತ. 119:112) ಕಲಿತದ್ದನ್ನ ತನ್ನ ಸ್ನೇಹಿತರಿಗೆ, ಕುಟುಂಬದವ್ರಿಗೆ ಹೇಳ್ತಿದ್ದಾನಾ? (ಕೀರ್ತ. 9:1) ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಸಾಕ್ಷಿಯಾಗೋಕೆ ಅವನು ಇಷ್ಟಪಡ್ತಾನಾ? ಅಂತ ಗಮನಿಸಿ. (ಕೀರ್ತ. 40:8) ಇವುಗಳಲ್ಲಿ ಒಂದು ವಿಷ್ಯನೂ ಅವನು ಮಾಡ್ತಿಲ್ಲ ಅಂದ್ರೆ ಯಾಕೆ ಮಾಡ್ತಿಲ್ಲ ಅಂತ ತಿಳುಕೊಳ್ಳೋಕೆ ಪ್ರಯತ್ನಿಸಿ. ನಂತ್ರ ಅದ್ರ ಬಗ್ಗೆ ನೀವು ಅವನ ಹತ್ರ ಮುಚ್ಚುಮರೆ ಇಲ್ಲದೆ ನೇರವಾಗಿ ಆದ್ರೆ ಪ್ರೀತಿಯಿಂದ ಮಾತಾಡಿ. *

16. ಒಬ್ಬ ವ್ಯಕ್ತಿಗೆ ಸ್ಟಡಿ ಮಾಡೋದನ್ನ ಯಾವಾಗ ನಿಲ್ಲಿಸಬೇಕಾಗುತ್ತೆ?

16 ವಿದ್ಯಾರ್ಥಿಗೆ ಸ್ಟಡಿ ಮಾಡೋದನ್ನ ಮುಂದುವರಿಸಬೇಕಾ ಬೇಡ್ವಾ ಅನ್ನೋದನ್ನ ಆಗಿಂದಾಗ್ಗೆ ಪರೀಕ್ಷಿಸಿ. ಅವನು ಸ್ಟಡಿಗೆ ತಯಾರಾಗ್ತಿದ್ದಾನಾ? ಕೂಟಗಳಿಗೆ ಬರೋಕೆ ಇಷ್ಟಪಡ್ತಿದ್ದಾನಾ? ಕೆಟ್ಟ ಅಭ್ಯಾಸಗಳನ್ನ ಬಿಟ್ಟಿದ್ದಾನಾ? ಸುಳ್ಳು ಧರ್ಮವನ್ನ ಬಿಟ್ಟುಬಿಟ್ಟಿದ್ದಾನಾ? ಅಂತ ನೋಡಿ. ಇವುಗಳಲ್ಲಿ ಯಾವುದನ್ನೂ ಮಾಡ್ತಾ ಇಲ್ಲ ಅಂತಾದ್ರೆ ಅವನಿಗೆ ಸ್ಟಡಿ ಮಾಡೋದ್ರಿಂದ ಏನು ಪ್ರಯೋಜನ? ಹೀಗಿದ್ರೂ ನಾವು ಸ್ಟಡಿ ಮಾಡೋದಾದ್ರೆ, ಅದು ನೀರಿಗಿಳಿಯೋಕೆ ತಯಾರಿಲ್ಲದಿರೋ ಒಬ್ಬ ವ್ಯಕ್ತಿಗೆ ಈಜೋದನ್ನ ಕಲಿಸ್ತಾ ಇರೋ ತರ ಇರುತ್ತೆ. ವಿದ್ಯಾರ್ಥಿಗೆ ಕಲಿತಾ ಇರೋ ವಿಷ್ಯಗಳ ಕಡೆಗೆ ಗಣ್ಯತೆ ಇಲ್ಲಾಂದ್ರೆ ಮತ್ತು ಅವನು ಜೀವನದಲ್ಲಿ ಯಾವುದೇ ಬದಲಾವಣೆ ಮಾಡ್ತಾ ಇಲ್ಲಾಂದ್ರೆ ಅಂಥ ಸ್ಟಡಿನ ನಿಲ್ಲಿಸೋದೇ ಒಳ್ಳೇದು.

17. ಒಂದನೇ ತಿಮೊತಿ 4:16 ರಲ್ಲಿರೋ ಪ್ರಕಾರ ನಮ್ಮ ಬೋಧನೆಯ ವಿಷಯದಲ್ಲಿ ಸದಾ ಗಮನ ಕೊಡಲು ನಾವೇನು ಮಾಡ್ಬೇಕು?

17 ಶಿಷ್ಯರನ್ನಾಗಿ ಮಾಡೋದು ನಮ್ಮ ಜವಾಬ್ದಾರಿ ಮತ್ತು ಅದನ್ನ ನಾವು ಚೆನ್ನಾಗಿ ನಿರ್ವಹಿಸಬೇಕು. ಜೊತೆಗೆ, ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ನಾವು ಅವನಿಗೆ ಸಹಾಯ ಮಾಡ್ಬೇಕು. ಇದಕ್ಕೋಸ್ಕರ ನಾವು ಸ್ಟಡಿ ಮಾಡುವಾಗ ಬೈಬಲನ್ನ ಚೆನ್ನಾಗಿ ಉಪಯೋಗಿಸಬೇಕು. ಉತ್ಸಾಹ ಮತ್ತು ದೃಢ ಭರವಸೆಯಿಂದ ಮಾತಾಡಬೇಕು. ಸಭೆಯಲ್ಲಿರೋ ಸಹೋದರ ಸಹೋದರಿಯರ ಜೊತೆ ಸ್ನೇಹ ಮಾಡೋಕೆ ವಿದ್ಯಾರ್ಥಿಗೆ ಪ್ರೋತ್ಸಾಹಿಸಬೇಕು. ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ನಾವು ಅವನತ್ರ ಮಾತಾಡ್ತಿರಬೇಕು. ವಿದ್ಯಾರ್ಥಿ ಪ್ರಗತಿ ಮಾಡ್ತಿದ್ದಾನಾ ಇಲ್ವಾ ಅಂತ ಆಗಿಂದಾಗ್ಗೆ ಪರೀಕ್ಷಿಸ್ತಿರಬೇಕು. (“ ವಿದ್ಯಾರ್ಥಿ ದೀಕ್ಷಾಸ್ನಾನ ತಗೋಬೇಕಂದ್ರೆ ನೀವೇನು ಮಾಡಬೇಕು?” ಚೌಕ ನೋಡಿ.) ಜನ್ರ ಜೀವವನ್ನ ರಕ್ಷಿಸೋ ಈ ಕೆಲ್ಸವನ್ನ ಮಾಡೋಕೆ ನಮಗೆ ತುಂಬ ಖುಷಿ ಆಗುತ್ತೆ. ಹಾಗಾಗಿ, ಇದನ್ನ ನಮ್ಮಿಂದಾದಷ್ಟು ಪೂರ್ಣ ಪ್ರಯತ್ನ ಹಾಕಿ ಮಾಡೋಣ. ಹೀಗೆ ಬೈಬಲ್‌ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳೋಕೆ ಸಹಾಯ ಮಾಡೋಣ.

ಗೀತೆ 139 ದೃಢವಾಗಿ ನಿಲ್ಲಲು ಅವರಿಗೆ ಕಲಿಸಿ

^ ಪ್ಯಾರ. 5 ಜನ್ರಿಗೆ ಬೈಬಲ್‌ ಕಲಿಸೋ ಅವಕಾಶವನ್ನ ಯೆಹೋವ ನಮಗೆ ಕೊಟ್ಟಿದ್ದಾನೆ. ನಾವು ಅವ್ರಿಗೆ ಬೈಬಲ್‌ ಕಲಿಸ್ವಾಗ ಯೆಹೋವನ ತರ ಯೋಚಿಸೋಕೆ, ನಡ್ಕೊಳ್ಳೋಕೆ ಹೇಳಿಕೊಡ್ತೇವೆ. ಜನ್ರಿಗೆ ಇನ್ನೂ ಚೆನ್ನಾಗಿ ಕಲಿಸ್ಬೇಕಂದ್ರೆ ನಾವೇನೆಲ್ಲಾ ಮಾಡ್ಬೇಕು ಅಂತ ಈ ಲೇಖನದಲ್ಲಿ ಕಲಿತೇವೆ.

^ ಪ್ಯಾರ. 4 ಸೆಪ್ಟೆಂಬರ್‌ 2016 ರ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಬಂದ “ಬೈಬಲ್‌ ಅಧ್ಯಯನ ಮಾಡುವಾಗ ಈ ವಿಷಯಗಳಿಂದ ದೂರವಿರಿ” ಅನ್ನೋ ಲೇಖನ ನೋಡಿ.

^ ಪ್ಯಾರ. 8 ನಮ್ಮ ಬಗ್ಗೆ > ಅನುಭವಗಳು ನೋಡಿ.

^ ಪ್ಯಾರ. 9 JW ಲೈಬ್ರರಿಯಲ್ಲಿ ಮೀಡಿಯಾ > ನಮ್ಮ ಕೂಟಗಳು ಮತ್ತು ಸೇವೆ > ಸೇವೆಗಾಗಿ ಸಾಧನಗಳು ನೋಡಿ.

^ ಪ್ಯಾರ. 15 ಮಾರ್ಚ್‌ 2020 ರ ಕಾವಲಿನಬುರುಜುವಿನಲ್ಲಿ ಬಂದಿರುವ “ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ” ಮತ್ತು “ನೀವು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀರಾ?” ಲೇಖನಗಳನ್ನ ನೋಡಿ.

^ ಪ್ಯಾರ. 77 ಚಿತ್ರ ವಿವರಣೆ: ಸ್ಟಡಿ ಆದ ನಂತ್ರ ಅನುಭವಸ್ಥ ಸಹೋದರಿ ಸ್ಟಡಿ ಮಾಡಿದ ಸಹೋದರಿಗೆ ಸ್ಟಡಿಯಲ್ಲಿ ನಾವೇ ತುಂಬ ಮಾತಾಡಬಾರದು ಅಂತ ಹೇಳ್ತಿದ್ದಾರೆ.

^ ಪ್ಯಾರ. 79 ಚಿತ್ರ ವಿವರಣೆ: ಒಳ್ಳೇ ಹೆಂಡತಿ ಆಗಬೇಕಂದ್ರೆ ಏನು ಮಾಡಬೇಕು ಅಂತ ಒಬ್ಬ ಸ್ತ್ರೀ ಸ್ಟಡಿಯಲ್ಲಿ ತಿಳುಕೊಳ್ತಿದ್ದಾಳೆ. ನಂತ್ರ ತಾನು ಕಲಿತದ್ದನ್ನ ಗಂಡನಿಗೆ ಹೇಳ್ತಿದ್ದಾಳೆ.

^ ಪ್ಯಾರ. 81 ಚಿತ್ರ ವಿವರಣೆ: ರಾಜ್ಯ ಸಭಾಗೃಹದಲ್ಲಿ ಆ ಸ್ತ್ರೀ ಒಬ್ಬ ಸಹೋದರಿಯ ಪರಿಚಯ ಮಾಡ್ಕೊಳ್ತಿದ್ದಾಳೆ. ಆಮೇಲೆ ಅವಳು ಮತ್ತು ಅವಳ ಗಂಡ ಆ ಸಹೋದರಿಯ ಮನೆಯಲ್ಲಿ ಸಂತೋಷದಿಂದ ಸಮ್ಯ ಕಳಿತಿದ್ದಾರೆ.