ಅಧ್ಯಯನ ಲೇಖನ 43
ಯೆಹೋವ ತನ್ನ ಸಂಘಟನೆಯನ್ನ ನಡೆಸ್ತಿದ್ದಾನೆ
“ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರ ಯೆಹೋವನ ನುಡಿ.”—ಜೆಕ. 4:6.
ಗೀತೆ 62 ನಾವು ಯಾರ ಸ್ವತ್ತು?
ಕಿರುನೋಟ *
1. ದೀಕ್ಷಾಸ್ನಾನ ತಗೊಂಡಿರೋ ಕ್ರೈಸ್ತರೆಲ್ಲರೂ ಏನು ಮಾಡೋದನ್ನ ಮುಂದುವರಿಸಬೇಕು?
ನಿಮ್ಮೆಲ್ಲರಿಗೂ ದೀಕ್ಷಾಸ್ನಾನ ತಗೊಂಡ ದಿನ ಖಂಡಿತ ನೆನಪಿರುತ್ತೆ. ಆ ದಿನ, ನಿಮ್ಗೆ ಯೆಹೋವನಲ್ಲಿ ನಂಬಿಕೆ ಇದೆ ಮತ್ತು ಆತನ ಸಂಘಟನೆ ಜೊತೆ ಸೇರಿ ಆತನ ಸೇವೆ ಮಾಡಬೇಕು ಅನ್ನೋ ಬಯಕೆ ಇದೆ ಅಂತ ಬಹಿರಂಗವಾಗಿ ತೋರಿಸಿಕೊಟ್ಟಿರುತ್ತೀರಿ. ಆದ್ರೆ ದೀಕ್ಷಾಸ್ನಾನ ತಗೊಂಡ್ರಷ್ಟೇ ಸಾಕಾಗುತ್ತಾ? ಇಲ್ಲ. ಯೆಹೋವನ ಮೇಲಿರೋ ನಿಮ್ಮ ನಂಬಿಕೆಯನ್ನ ಜಾಸ್ತಿ ಮಾಡಿಕೊಳ್ಳುತ್ತಾ ಇರಬೇಕು. ಅದ್ರ ಜೊತೆಗೆ ಯೆಹೋವನ ಸಂಘಟನೆ * ಆತನ ಇಷ್ಟದಂತೆಯೇ ಕೆಲ್ಸ ಮಾಡ್ತಿದೆ ಅನ್ನೋ ಭರವಸೆಯನ್ನ ಬೆಳೆಸಿಕೊಳ್ತಾ ಇರಬೇಕು.
2-3. ಇವತ್ತು ಯೆಹೋವ ತನ್ನ ಸಂಘಟನೆಯನ್ನ ನಡೆಸ್ತಿರೋ ವಿಧದಿಂದ ಆತನ ಬಗ್ಗೆ ಯಾವ ಮೂರು ಅಂಶಗಳನ್ನ ತಿಳ್ಕೋಬಹುದು?
2 ಇವತ್ತು ಯೆಹೋವ ತನ್ನ ಸಂಘಟನೆಯನ್ನ ಹೇಗೆ ನಡೆಸ್ತಿದ್ದಾನೆ ಅನ್ನೋದನ್ನ ತಿಳುಕೊಂಡ್ರೆ ಆತನ ಗುಣಗಳು, ಉದ್ದೇಶ ಮತ್ತು ಆತನ ನೀತಿ ನಿಯಮಗಳ ಬಗ್ಗೆ ಗೊತ್ತಾಗುತ್ತೆ. ಆತ ತನ್ನ ಸಂಘಟನೆಯನ್ನ ನಡೆಸ್ತಿರೋ ವಿಧದಿಂದ ಆತನ ಬಗ್ಗೆ ಯಾವ ಮೂರು ಅಂಶಗಳನ್ನ ತಿಳ್ಕೋಬಹುದು ಅಂತ ಈಗ ನೋಡೋಣ.
3 ಮೊದಲನೇ ಅಂಶ “ದೇವರು ಪಕ್ಷಪಾತಿಯಲ್ಲ.” (ಅ. ಕಾ. 10:34) ಆತನಿಗೆ ಜನ್ರ ಮೇಲೆ ಪ್ರೀತಿ ಇರೋದ್ರಿಂದಲೇ ‘ಎಲ್ಲರಿಗೋಸ್ಕರ ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ’ ಕೊಟ್ಟಿದ್ದಾನೆ. (1 ತಿಮೊ. 2:6; ಯೋಹಾ. 3:16) ಈ ವಿಮೋಚನಾ ಮೌಲ್ಯದ ಮೇಲೆ ಆದಷ್ಟು ಹೆಚ್ಚು ಜನ ನಂಬಿಕೆ ಇಡ್ಬೇಕು ಮತ್ತು ರಕ್ಷಣೆ ಪಡ್ಕೋಬೇಕು ಅನ್ನೋದು ಯೆಹೋವನ ಇಷ್ಟ. ಹಾಗಾಗಿ ಆತನು ತನ್ನ ಜನ್ರ ಮೂಲಕ ಎಲ್ಲರಿಗೆ ಸುವಾರ್ತೆ ತಲುಪಿಸ್ತಿದ್ದಾನೆ. ಎರಡನೇ ಅಂಶ, ಯೆಹೋವ ಶಾಂತಿಯ ದೇವರು ಮತ್ತು ಎಲ್ಲವನ್ನು ಕ್ರಮವಾಗಿ ಅಥ್ವಾ ವ್ಯವಸ್ಥಿತವಾಗಿ ಮಾಡೋ ದೇವರು. (1 ಕೊರಿಂ. 14:33, 40) ಹಾಗಾಗಿ ಆತನ ಆರಾಧಕರಾದ ನಾವು ಸಹ ಎಲ್ಲ ಕೆಲ್ಸವನ್ನ ವ್ಯವಸ್ಥಿತವಾಗಿ ಮಾಡಬೇಕು ಮತ್ತು ಶಾಂತಿಯ ಜನ್ರಾಗಿರಬೇಕು. ಮೂರನೇದು, ಯೆಹೋವನು ‘ಮಹಾ ಬೋಧಕನಾಗಿದ್ದಾನೆ.’ (ಯೆಶಾ. 30:20, 21) ಆದ್ರಿಂದಲೇ ಆತನ ಸಂಘಟನೆಯು ಸಭೆಯಲ್ಲಿ ಮತ್ತು ಸೇವೆಯಲ್ಲಿ ಆತನ ವಾಕ್ಯವಾದ ಬೈಬಲಿಂದ ಬೋಧಿಸೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೆ. ಯೆಹೋವನ ವ್ಯಕ್ತಿತ್ವದ ಈ ಮೂರು ಅಂಶಗಳನ್ನ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಹೇಗೆ ಅನುಕರಿಸಿದ್ರು? ಇಂದಿನ ಸೇವಕರು ಹೇಗೆ ಅನುಕರಿಸ್ತಿದ್ದಾರೆ? ಯೆಹೋವನ ಸಂಘಟನೆಯಲ್ಲಿ ಸೇವೆ ಮಾಡ್ತಾ ಮುಂದುವರಿಯೋಕೆ ನಿಮ್ಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತೆ?
ಯೆಹೋವ ಪಕ್ಷಪಾತ ಮಾಡಲ್ಲ
4. ಅಪೊಸ್ತಲರ ಕಾರ್ಯಗಳು 1:8 ರಲ್ಲಿ ತಿಳಿಸಿರುವಂತೆ ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆ ಕೊಟ್ಟನು ಮತ್ತು ಅವ್ರಿಗೆ ಯಾವ ಸಹಾಯ ಸಿಗಲಿತ್ತು?
4 ಒಂದನೇ ಶತಮಾನದಲ್ಲಿ. ಯೇಸು ಸಾರಿದ ಸಂದೇಶದಿಂದ ಅನೇಕರಿಗೆ ನಿರೀಕ್ಷೆ ಸಿಕ್ಕಿತು. (ಲೂಕ 4:43) ತಾನು ಆರಂಭಿಸಿದ ಈ ಕೆಲ್ಸವನ್ನ ತನ್ನ ಶಿಷ್ಯರು “ಭೂಮಿಯ ಕಟ್ಟಕಡೆಯವೆರಗೂ” ಮಾಡಬೇಕು ಅಂತ ಯೇಸು ಆಜ್ಞೆ ಕೊಟ್ಟನು. (ಅಪೊಸ್ತಲರ ಕಾರ್ಯಗಳು 1:8 ಓದಿ.) ಇದು ಎಷ್ಟು ದೊಡ್ಡ ಕೆಲ್ಸವಾಗಿತ್ತಂದ್ರೆ ಶಿಷ್ಯರು ತಮ್ಮ ಸ್ವಂತ ಶಕ್ತಿಯಿಂದ ಇದನ್ನ ಮಾಡಿ ಮುಗಿಸೋಕೆ ಆಗ್ತಿರಲಿಲ್ಲ. ಅವ್ರಿಗೆ ಪವಿತ್ರಾತ್ಮದ ಸಹಾಯ ಬೇಕಿತ್ತು. ಈ ‘ಸಹಾಯಕನನ್ನೇ’ ತಾನು ಕೊಡ್ತೀನಿ ಅಂತ ಯೇಸು ಮಾತು ಕೊಟ್ಟನು.—ಯೋಹಾ. 14:26; ಜೆಕ. 4:6.
5-6. ಯೇಸುವಿನ ಹಿಂಬಾಲಕರಿಗೆ ಪವಿತ್ರಾತ್ಮ ಹೇಗೆಲ್ಲಾ ಸಹಾಯ ಮಾಡ್ತು?
5 ಕ್ರಿಸ್ತ ಶಕ 33 ರ ಪಂಚಾಶತ್ತಮ ದಿನ ಯೇಸುವಿನ ಹಿಂಬಾಲಕರು ಪವಿತ್ರಾತ್ಮ ಪಡ್ಕೊಂಡ್ರು. ಇದ್ರ ಸಹಾಯದಿಂದ ಅವ್ರು ಕೂಡ್ಲೇ ಸುವಾರ್ತೆ ಸಾರೋಕೆ ಶುರು ಮಾಡಿದ್ರು. ಸ್ವಲ್ಪ ಸಮಯದಲ್ಲೇ ಸಾವಿರಾರು ಜನ ಸತ್ಯ ಸ್ವೀಕರಿಸಿ ದೀಕ್ಷಾಸ್ನಾನ ಪಡ್ಕೊಂಡ್ರು. (ಅ. ಕಾ. 2:41; 4:4) ಸಾರೋ ಕೆಲ್ಸಕ್ಕೆ ವಿರೋಧ ಬಂದಾಗ ಶಿಷ್ಯರು ಹೆದರಲಿಲ್ಲ. ಬದ್ಲಿಗೆ ಸಹಾಯಕ್ಕಾಗಿ ದೇವರ ಹತ್ರ ಬೇಡಿಕೊಂಡ್ರು. “ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಮಾತಾಡುತ್ತಾ ಇರಲು ನಿನ್ನ ಸೇವಕರಿಗೆ ಸಹಾಯಮಾಡು” ಅಂತ ಪ್ರಾರ್ಥಿಸಿದರು. ನಂತ್ರ ‘ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುತ್ತಾ ಇದ್ದರು.’—ಅ. ಕಾ. 4:18-20, 30, 31.
6 ಯೇಸುವಿನ ಹಿಂಬಾಲಕರಿಗೆ ಬೇರೆ ಅಡ್ಡಿತಡೆಗಳೂ ಇದ್ದವು. ಉದಾಹರಣೆಗೆ ಅವ್ರಲ್ಲಿ ಹೆಚ್ಚಿನವರ ಹತ್ರ ಶಾಸ್ತ್ರಗ್ರಂಥ ಇರಲಿಲ್ಲ ಮತ್ತು ಇವತ್ತು ನಮ್ಮ ಹತ್ರ ಇರುವಂತೆ ಬೈಬಲನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡೋ ಯಾವುದೇ ಪ್ರಕಾಶನ ಇರಲಿಲ್ಲ. ಅಷ್ಟೇ ಅಲ್ಲ, ಅವ್ರು ಬೇರೆಬೇರೆ ಭಾಷೆಯ ಜನ್ರಿಗೆ ಸುವಾರ್ತೆ ಸಾರಬೇಕಿತ್ತು. ಇಷ್ಟೆಲ್ಲಾ ಅಡ್ಡಿತಡೆಗಳಿದ್ರೂ ಆ ಹುರುಪಿನ ಹಿಂಬಾಲಕರು ಅಸಾಧ್ಯವಾದದ್ದನ್ನು ಸಾಧಿಸಿದ್ರು. ‘ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ ಸುವಾರ್ತೆ’ ಸಾರಿದ್ರು.—ಕೊಲೊ. 1:6, 23.
7. (ಎ) ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಇದ್ದ ಯೆಹೋವನ ಜನ್ರು ಆತನ ಇಷ್ಟವನ್ನ ಹೇಗೆ ತಿಳುಕೊಂಡ್ರು? (ಬಿ) ಆಗ ಅವ್ರೇನು ಮಾಡಿದ್ರು?
7 ಆಧುನಿಕ ಸಮಯದಲ್ಲಿ. ಯೆಹೋವನು ಆಧುನಿಕ ಸಮಯದಲ್ಲೂ ತನ್ನ ಜನರನ್ನ ನಡೆಸ್ತಿದ್ದಾನೆ ಮತ್ತು ಮಾರ್ಗದರ್ಶಿಸ್ತಿದ್ದಾನೆ. ತನ್ನ ಕೆಲ್ಸ ಮಾಡಲು ಬೇಕಾದ ಸಾಮರ್ಥ್ಯವನ್ನು ಕೊಡ್ತಿದ್ದಾನೆ. ಮುಖ್ಯವಾಗಿ ಪವಿತ್ರಾತ್ಮದ ಸಹಾಯದಿಂದ ಬರೆಯಲಾಗಿರೋ ಬೈಬಲಿನ ಮೂಲಕ ತನ್ನ ಜನರಿಗೆ ಮಾರ್ಗದರ್ಶನ ಕೊಡ್ತಿದ್ದಾನೆ. ಬೈಬಲಿನಲ್ಲಿ ಯೇಸು ಮಾಡಿದ ಸೇವೆ ಬಗ್ಗೆ ಮತ್ತು ಆತನು ಆರಂಭಿಸಿದ ಈ ಕೆಲ್ಸವನ್ನು ಮಾಡುವಂತೆ ಶಿಷ್ಯರಿಗೆ ಕೊಟ್ಟ ಆಜ್ಞೆಯ ಬಗ್ಗೆ ನೋಡ್ತೇವೆ. (ಮತ್ತಾ. 28:19, 20) 1881 ರ ಜುಲೈ ತಿಂಗಳ ಇಂಗ್ಲಿಷ್ ಕಾವಲಿನಬುರುಜು ಪತ್ರಿಕೆಯಲ್ಲಿ ಹೀಗಿತ್ತು: “ಯೆಹೋವನು ನಾವು ಹೆಚ್ಚು ಶ್ರೀಮಂತರಾಗಬೇಕು ಅಂತನೋ ಅಥ್ವಾ ಜನ್ರ ಮೆಚ್ಚಿಕೆ ಪಡಿಬೇಕು ಅಂತನೋ ನಮ್ಮನ್ನು ಆಯ್ಕೆ ಮಾಡಿಲ್ಲ ಅಥ್ವಾ ಅಭಿಷಿಕ್ತರಾಗಿ ಮಾಡಿಲ್ಲ. ಬದ್ಲಿಗೆ ಸುವಾರ್ತೆ ಸಾರೋ ಕೆಲ್ಸಕ್ಕಾಗಿ ನಮ್ಮ ಹತ್ರ ಇರೋದನ್ನೆಲ್ಲಾ ಕೊಡಬೇಕಂತ ಮತ್ತು ಸ್ವತಃ ನಮ್ಮನ್ನೇ ಕೊಟ್ಟುಕೊಳ್ಳಬೇಕಂತ ಆಯ್ಕೆ ಮಾಡಿದ್ದಾನೆ.” 1919 ರಲ್ಲಿ ಬಿಡುಗಡೆಯಾದ ಟು ಹೂಮ್ ದ ವರ್ಕ್ ಈಸ್ ಎನ್ಟ್ರಸ್ಟೆಡ್ ಅನ್ನೋ ಇಂಗ್ಲಿಷ್ ಕಿರುಹೊತ್ತಗೆಯಲ್ಲಿ ಹೀಗಿತ್ತು: “ನಮ್ಮ ಮುಂದೆ ದೊಡ್ಡ ಕೆಲ್ಸ ಇದೆ. ಇದು ಕರ್ತನ ಕೆಲ್ಸ, ಹಾಗಾಗಿ ನಾವಿದನ್ನ ಮಾಡಿ ಮುಗಿಸಲಿಕ್ಕೆ ಆತನೇ ಸಹಾಯ ಮಾಡ್ತಾನೆ.” ಆಗಿನ ಸಹೋದರರು ಕೂಡ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಂತೆ ಧೈರ್ಯವಂತರಾಗಿದ್ರು. ಸಾರೋ ಕೆಲ್ಸದಲ್ಲಿ ತಮ್ಮ ಶಕ್ತಿನೆಲ್ಲಾ ಧಾರೆಯೆರೆದ್ರು. ಎಲ್ಲಾ ರೀತಿಯ ಜನ್ರಿಗೆ ಸುವಾರ್ತೆ ಸಾರೋಕೆ ಪವಿತ್ರಾತ್ಮ ಖಂಡಿತ ಸಹಾಯ ಮಾಡುತ್ತೆ ಅನ್ನೋ ನಂಬಿಕೆ ಅವ್ರಿಗಿತ್ತು. ಇವತ್ತು ನಮ್ಗೂ ಇದೇ ನಂಬಿಕೆ ಇರಬೇಕು.
8-9. ಸುವಾರ್ತೆ ಹೆಚ್ಚಿನ ಜನ್ರಿಗೆ ತಲುಪಬೇಕು ಅನ್ನೋ ಉದ್ದೇಶದಿಂದ ಯೆಹೋವನ ಸಂಘಟನೆ ಇನ್ನೂ ಯಾವ ವಿಧಾನಗಳನ್ನ ಬಳಸಿದೆ?
8 ಸುವಾರ್ತೆಯನ್ನು ಎಲ್ಲಾ ಕಡೆ ತಲುಪಿಸಲಿಕ್ಕಾಗಿ ಯೆಹೋವನ ಸಂಘಟನೆ ಅನೇಕ ಸಾಧನಗಳನ್ನು ಬಳಸ್ತಾ ಬಂದಿದೆ. ಆ ಸಾಧನಗಳಲ್ಲಿ ಕೆಲ್ವು ಯಾವುವೆಂದ್ರೆ ಮುದ್ರಿತ ಪ್ರಕಾಶನಗಳು, “ಫೋಟೋ ಡ್ರಾಮ ಆಫ್ ಕ್ರಿಯೇಶನ್,” ಫೋನೋಗ್ರಾಫ್, ಸೌಂಡ್ ಕಾರ್, ರೇಡಿಯೋ ಪ್ರಸಾರಗಳು. ಇತ್ತೀಚಿಗೆ ಕಂಪ್ಯೂಟರ್ ಮತ್ತು ಇಂಟರ್ನೆಟ್ ಅನ್ನು ಬಳಸ್ತಿದೆ. ಈ ಎಲ್ಲಾ ಸಾಧನಗಳನ್ನು ಬಳಸಿ ಸುವಾರ್ತೆಯನ್ನ ಸಾರಲಾಗ್ತಿದೆ. ಅದ್ರ ಜೊತೆಗೆ, ಯೆಹೋವನ ಸಂಘಟನೆ ಇವತ್ತು ಭಾಷಾಂತರ ಕೆಲ್ಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡ್ತಿದೆ. ಹಿಂದೆಂದೂ ಇಷ್ಟು ಕೆಲ್ಸ ನಡೆದಿರಲಿಲ್ಲ. ಎಲ್ಲಾ ಜನ್ರು ತಮ್ಮತಮ್ಮ ಭಾಷೆಯಲ್ಲಿ ಸುವಾರ್ತೆಯನ್ನು ತಿಳ್ಕೊಬೇಕು ಅನ್ನೋ ಉದ್ದೇಶದಿಂದಲೇ ಇಷ್ಟೊಂದು ಭಾಷಾಂತರ ಕೆಲ್ಸ ನಡಿತಿದೆ. ಯೆಹೋವ ಬೇಧಭಾವ ಮಾಡೋ ದೇವ್ರಲ್ಲ. ಆತನು ಮುಂಚೆನೇ ತಿಳಿಸಿದಂತೆ ಇಂದು ‘ಸಕಲ ಕುಲ ಜನಾಂಗ ಭಾಷೆಯ ಜನ್ರಿಗೆ ಸುವಾರ್ತೆ’ ಸಾರಲಾಗ್ತಿದೆ. (ಪ್ರಕ. 14:6, 7) ಎಲ್ಲಾ ಜನ್ರು ರಾಜ್ಯದ ಸಂದೇಶ ಕೇಳಿಸಿಕೊಳ್ಳಬೇಕು ಅನ್ನೋದೇ ಆತನ ಇಷ್ಟ.
9 ಒಳಗೆ ಹೋಗಲು ಅನುಮತಿಯಿಲ್ಲದ ದೊಡ್ಡದೊಡ್ಡ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸೋ ಜನ್ರಿಗೆ ಸುವಾರ್ತೆ ಸಾರೋಕಾಗುತ್ತಾ? ಅವ್ರಿಗೂ ಸುವಾರ್ತೆ ತಲುಪಬೇಕು ಅನ್ನೋ ಉದ್ದೇಶದಿಂದ ಯೆಹೋವನ ಸಂಘಟನೆ ಬೇರೆಬೇರೆ ರೀತಿಯ ಸಾರ್ವಜನಿಕ ಸಾಕ್ಷಿಕಾರ್ಯವನ್ನ ಏರ್ಪಾಡು ಮಾಡಿದೆ. ಉದಾಹರಣೆಗೆ, 2001 ರಲ್ಲಿ ಆಡಳಿತ ಮಂಡಲಿಯು ಫ್ರಾನ್ಸ್ ಮತ್ತು ಇನ್ನಿತರ ಸ್ಥಳಗಳಲ್ಲಿ ಮೇಜಿನ ಮೇಲೆ, ತಳ್ಳು ಬಂಡಿಯಲ್ಲಿ ಸಾಹಿತ್ಯಗಳನ್ನು ಇಟ್ಟು ಪ್ರದರ್ಶಿಸೋಕೆ ಅನುಮತಿ ಕೊಡ್ತು. ಇದ್ರಿಂದ ಒಳ್ಳೇ ಫಲಿತಾಂಶ ಸಿಗ್ತು. 2011 ರಲ್ಲಿ ಅಮೆರಿಕದ ನ್ಯೂಯಾರ್ಕಿನ ಪಟ್ಟಣದ ಜನಜಂಗುಳಿಯಿಂದ ತುಂಬಿದ ಸ್ಥಳದಲ್ಲಿ ಹೊಸ ಸಾರ್ವಜನಿಕ ಸಾಕ್ಷಿಕಾರ್ಯವನ್ನ ಏರ್ಪಾಡು ಮಾಡಲಾಯ್ತು. ಮೊದಲ ವರ್ಷದಲ್ಲಿ 1,02,129 ಪುಸ್ತಕಗಳು ಮತ್ತು 68,911 ಪತ್ರಿಕೆಗಳನ್ನು ವಿತರಿಸಲಾಯ್ತು. ಅಷ್ಟೇ ಅಲ್ಲ 4,701 ಜನ್ರು ಬೈಬಲ್ ಸ್ಟಡಿಗಾಗಿ ಕೇಳಿಕೊಂಡ್ರು. ಇದನ್ನೆಲ್ಲಾ ನೋಡುವಾಗ ಈ ಸಾಕ್ಷಿಕಾರ್ಯಕ್ಕೆ ಯೆಹೋವನ ಪವಿತ್ರಾತ್ಮದ ಬೆಂಬಲ ಇತ್ತು ಅನ್ನೋದು ಚೆನ್ನಾಗಿ ಗೊತ್ತಾಗುತ್ತೆ. ಹೀಗೆ ಒಳ್ಳೆ ಫಲಿತಾಂಶ ಸಿಕ್ಕಿದ್ರಿಂದ ಲೋಕದ ಎಲ್ಲಾ ಕಡೆ ಈ ಸಾಕ್ಷಿಕಾರ್ಯವನ್ನ ಮಾಡೋಕೆ ಆಡಳಿತ ಮಂಡಲಿ ಅನುಮತಿ ಕೊಡ್ತು.
10. ನಾವು ಇನ್ನೂ ಚೆನ್ನಾಗಿ ಸುವಾರ್ತೆ ಸಾರೋಕೆ ಮತ್ತು ಕಲಿಸೋಕೆ ಏನು ಮಾಡಬೇಕು?
10 ನೀವೇನು ಮಾಡಬೇಕು? ನಾವು ಹೇಗೆ ಸುವಾರ್ತೆ ಸಾರಬೇಕು ಅಂತ ಯೆಹೋವನು ಕೂಟಗಳ ಮೂಲಕ ಕಲಿಸ್ತಾನೆ. ಅಲ್ಲಿ ಕಲಿಯುವ ವಿಷ್ಯವನ್ನ ಸೇವೆಯಲ್ಲಿ ಉಪಯೋಗಿಸಿ. ನಿಮ್ಮ ಕ್ಷೇತ್ರ ಸೇವಾ ಗುಂಪಿನ ಜೊತೆ ತಪ್ಪದೇ ಸೇವೆ ಮಾಡಿ. ನೀವು ಇನ್ನೂ ಚೆನ್ನಾಗಿ ಸುವಾರ್ತೆ ಸಾರೋಕೆ ಮತ್ತು ಕಲಿಸೋಕೆ ನಿಮ್ಮ ಗುಂಪಿನ ಸಹೋದರ ಸಹೋದರಿಯರು ಕೆಲ್ವು ಸಲಹೆಗಳನ್ನ ಕೊಡ್ಬಹುದು. ಅವ್ರ ಒಳ್ಳೇ ಮಾದರಿಯಿಂದ ನೀವು ಉತ್ತೇಜನ ಪಡ್ಕೊಬಹುದು. ಕಷ್ಟ, ವಿರೋಧಗಳಿದ್ದರೂ ಸೇವೆ ಮಾಡೋದನ್ನ ಮುಂದುವರಿಸಿ. ಈ ಲೇಖನದ ಮುಖ್ಯ ವಚನ ತಿಳಿಸುವಂತೆ ನಾವು ನಮ್ಮ ಸ್ವಂತ ಸಾಮರ್ಥ್ಯದಿಂದಲ್ಲ, ಪವಿತ್ರಾತ್ಮದ ಸಹಾಯದಿಂದ ದೇವರ ಇಷ್ಟವನ್ನ ಸಾಧಿಸೋಕೆ ಆಗುತ್ತೆ. (ಜೆಕ. 4:6) ಯಾಕಂದ್ರೆ ನಾವು ಮಾಡ್ತಿರೋದು ದೇವರ ಕೆಲ್ಸ.
ಯೆಹೋವ ಶಾಂತಿಯ ದೇವರು ಮತ್ತು ಎಲ್ಲವನ್ನು ವ್ಯವಸ್ಥಿತವಾಗಿ ಮಾಡೋ ದೇವರು
11. ಎಲ್ಲವೂ ವ್ಯವಸ್ಥಿತವಾಗಿ ನಡೆಯಬೇಕು ಅನ್ನೋ ಉದ್ದೇಶದಿಂದ ಒಂದನೇ ಶತಮಾನದಲ್ಲಿದ್ದ ಆಡಳಿತ ಮಂಡಲಿ ಹೇಗೆ ಕೆಲ್ಸ ಮಾಡಿತು?
11 ಒಂದನೇ ಶತಮಾನದಲ್ಲಿ. ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯು ಯೆಹೋವನ ಜನ್ರ ಮಧ್ಯೆ ಶಾಂತಿ ಇರಬೇಕು ಮತ್ತು ಎಲ್ಲ ವ್ಯವಸ್ಥಿತವಾಗಿ ನಡೆಯಬೇಕು ಅನ್ನೋ ಕಾರಣಕ್ಕೆ ಒಗ್ಗಟ್ಟಿನಿಂದ ಕೆಲ್ಸ ಮಾಡ್ತು. (ಅ. ಕಾ. 2:42) ಉದಾಹರಣೆಗೆ, ಸುಮಾರು ಕ್ರಿ.ಶ. 49 ರಲ್ಲಿ ಕ್ರೈಸ್ತರಾದ ಎಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕಾ ಅನ್ನೋ ವಿವಾದ ಬಂದಾಗ ಆಡಳಿತ ಮಂಡಲಿ ಏನು ಮಾಡಿತು ಅಂತ ನೋಡಿ. ಪವಿತ್ರಾತ್ಮದ ಮಾರ್ಗದರ್ಶನ ಪಡ್ಕೊಂಡು ಈ ವಿಷ್ಯವನ್ನ ತುಂಬ ಹೊತ್ತು ಚರ್ಚಿಸಿತು. ಸುನ್ನತಿಯ ವಿವಾದದಿಂದ ಸಭೆಯಲ್ಲಿ ಒಡಕು ಏಳೋ ಸಾಧ್ಯತೆ ಇತ್ತು ಮತ್ತು ಸುವಾರ್ತೆ ಸಾರೋ ಕೆಲ್ಸ ಮಾಡೋಕೆ ಕಷ್ಟ ಆಗ್ತಿತ್ತು. ಆಡಳಿತ ಮಂಡಲಿಯಲ್ಲಿದ್ದ ಅಪೊಸ್ತಲರು ಮತ್ತು ಹಿರೀಪುರುಷರು ಯೆಹೂದಿಗಳಾಗಿದ್ರೂ ಯೆಹೂದಿ ಸಂಪ್ರದಾಯಕ್ಕೆ ಅವ್ರು ಒಳಗಾಗ್ಲಿಲ್ಲ ಅಥವಾ ಸುನ್ನತಿ ಆಗ್ಲೇ ಬೇಕು ಅಂತ ಹಠ ಹಿಡಿದ ಸಹೋದರರ ಒತ್ತಡಕ್ಕೂ ಮಣಿಲಿಲ್ಲ. ಈ ವಿಷಯದಲ್ಲಿ ದೇವರ ವಾಕ್ಯ ಯಾವ ಸಲಹೆ ಕೊಡುತ್ತೆ ಅಂತ ಹುಡುಕಿದ್ರು ಮತ್ತು ಪವಿತ್ರಾತ್ಮದ ಮಾರ್ಗದರ್ಶನಕ್ಕಾಗಿ ಬೇಡಿಕೊಂಡ್ರು. (ಅ. ಕಾ. 15:1, 2, 5-20, 28) ಇದ್ರಿಂದಾಗಿ ಯೆಹೋವನು ಅವ್ರ ನಿರ್ಣಯವನ್ನು ಆಶೀರ್ವದಿಸಿದನು. ಕ್ರೈಸ್ತ ಸಭೆಯಲ್ಲಿ ಶಾಂತಿ, ಐಕ್ಯತೆ ತುಂಬಿ ತುಳುಕಿತು ಮತ್ತು ಅವ್ರು ಸುವಾರ್ತೆ ಸಾರೋದನ್ನ ಮುಂದುವರೆಸಿದ್ರು.—ಅ. ಕಾ. 15:30, 31; 16:4, 5.
12. ಇವತ್ತು ಯೆಹೋವನ ಸಂಘಟನೆಯಲ್ಲಿ ಶಾಂತಿ ಇದೆ ಮತ್ತು ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತೆ ಅಂತ ಹೇಗೆ ಹೇಳಬಹುದು?
12 ಆಧುನಿಕ ಸಮಯದಲ್ಲಿ. ಯೆಹೋವನ ಜನರ ಮಧ್ಯೆ ಶಾಂತಿ ಇರಬೇಕು ಮತ್ತು ಎಲ್ಲವೂ ವ್ಯವಸ್ಥಿತವಾಗಿ ನಡೆಯಬೇಕು ಅಂತ ಯೆಹೋವನ ಸಂಘಟನೆ ತುಂಬಾ ಶ್ರಮಪಟ್ಟಿದೆ. 1895, ನವೆಂಬರ್ 15 ರ ಝಯನ್ಸ್ ವಾಚ್ಟವರ್ ಆ್ಯಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ (ಇಂಗ್ಲಿಷ್) ಪತ್ರಿಕೆಯಲ್ಲಿ 1 ಕೊರಿಂಥ 14:40 ರ ಆಧರಿತ “ಸಭ್ಯವಾಗಿಯೂ ಕ್ರಮವಾಗಿಯೂ” ಅನ್ನೋ ಶೀರ್ಷಿಕೆಯಿದ್ದ ಲೇಖನದಲ್ಲಿ ಹೀಗಿತ್ತು: “ವ್ಯವಸ್ಥಿತವಾಗಿ ಕೆಲ್ಸ ಮಾಡೋದು ಹೇಗೆ ಅನ್ನೋದ್ರ ಬಗ್ಗೆ ಒಂದನೇ ಶತಮಾನದಲ್ಲಿದ್ದ ಅಪೊಸ್ತಲರು ಅನೇಕ ವಿಷ್ಯಗಳನ್ನು ಬರೆದ್ರು. . . . ‘ಪೂರ್ವದಲ್ಲಿ ಬರೆದಿರುವ ಎಲ್ಲಾ ವಿಷ್ಯಗಳು’ ನಮ್ಮನ್ನು ಉಪದೇಶಿಸಲು ಬರೆದಿರೋದ್ರಿಂದ ಅವ್ರು ಕೊಟ್ಟಂಥ ಸಲಹೆಗಳನ್ನು ನಾವು ಪಾಲಿಸ್ತಾ ಮುಂದುವರಿಸಿಕೊಂಡು ಹೋಗೋದು ತುಂಬಾ ಒಳ್ಳೇದು.” (ರೋಮ. 15:4) ಒಂದನೇ ಶತಮಾನದಲ್ಲಿದ್ದಂತೆ ಇವತ್ತು ಕೂಡ ಯೆಹೋವನ ಸಂಘಟನೆ ಶಾಂತಿ, ಐಕ್ಯತೆಗಾಗಿ ತುಂಬ ಕೆಲ್ಸ ಮಾಡ್ತಿದೆ. ಆದ್ರಿಂದಲೇ ಸಭೆಗಳಲ್ಲಿ ಶಾಂತಿ ಇದೆ ಮತ್ತು ಎಲ್ಲ ಕೆಲ್ಸ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡಿತಿದೆ. ಉದಾಹರಣೆಗೆ, ಕಾವಲಿನಬುರುಜು ಅಧ್ಯಯನ ಎಲ್ಲಾ ಕಡೆ ಒಂದೇ ತರ ನಡೆಯುತ್ತೆ. ಅದಕ್ಕೇ ನೀವು ನಿಮ್ಮ ದೇಶದ ಬೇರೆ ಸಭೆಗೆ ಹೋದಾಗ್ಲೋ ಅಥ್ವಾ ಬೇರೆ ದೇಶದ ಸಭೆಗೆ ಹೋದಾಗ್ಲೋ ಅಲ್ಲಿ ಕಾವಲಿನಬುರುಜು ಅಧ್ಯಯನ ಹೇಗೆ ನಡೆಸಲಾಗುತ್ತೆ ಮತ್ತು ಯಾವ ಲೇಖನವನ್ನು ಚರ್ಚಿಸಲಾಗುತ್ತೆ ಅನ್ನೋದು ಗೊತ್ತಿರುತ್ತೆ. ನಿಮಗೆ ಎಲ್ಲೋ ಬೇರೆ ಕಡೆ ಹೋದ ತರ ಅನ್ಸೋದೇ ಇಲ್ಲ. ಯೆಹೋವನ ಪವಿತ್ರಾತ್ಮದ ಸಹಾಯದಿಂದಲೇ ಲೋಕದ ಎಲ್ಲಾ ಸಭೆಗಳಲ್ಲೂ ಇಂಥ ಐಕ್ಯತೆ ಇದೆ.—ಚೆಫ. 3:9.
13. ಯಾಕೋಬ 3:17 ಮನಸ್ಸಲ್ಲಿಟ್ಟು ನಮ್ಮನ್ನು ನಾವೇ ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?
13 ನೀವೇನು ಮಾಡಬೇಕು? ಯೆಹೋವನು, ತನ್ನ ಜನರ ಮಧ್ಯೆ ಶಾಂತಿ ಇರಬೇಕು ಮತ್ತು ಅವ್ರು ‘ಪವಿತ್ರಾತ್ಮದ ಮೂಲಕ ಏಕತೆಯನ್ನ ಹೊಂದಬೇಕು’ ಅಂತ ಬಯಸ್ತಾನೆ. (ಎಫೆ. 4:1-3) ಹಾಗಾಗಿ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಸಭೆಯಲ್ಲಿ ಶಾಂತಿ ಮತ್ತು ಐಕ್ಯತೆಯನ್ನ ಹೆಚ್ಚಿಸೋಕೆ ನನ್ನಿಂದ ಆದ ಎಲ್ಲವನ್ನ ಮಾಡ್ತೀನಾ? ಮುಂದಾಳತ್ವ ವಹಿಸುವವ್ರ ಮಾತು ಕೇಳ್ತೀನಾ? ನಾನು ಭರವಸಾರ್ಹ ವ್ಯಕ್ತಿನಾ? ಅದ್ರಲ್ಲೂ ನನ್ಗೆ ಸಭೆಯಲ್ಲಿ ಏನಾದ್ರೂ ಜವಾಬ್ದಾರಿ ಕೊಟ್ರೆ ಅದನ್ನ ಚೆನ್ನಾಗಿ ಮಾಡಿ ಮುಗಿಸ್ತೀನಾ? ನನಗಿರೋ ಎಲ್ಲಾ ಜವಾಬ್ದಾರಿಗಳನ್ನ, ಕೆಲ್ಸಗಳನ್ನ ಸರಿಯಾದ ಸಮಯಕ್ಕೆ ಮಾಡಿ ಮುಗಿಸ್ತೀನಾ? ಸಹೋದರ ಸಹೋದರಿಯರಿಗೆ ಸಹಾಯ ಮಾಡೋ ಮನಸ್ಸು ನನಗಿದ್ಯಾ?’ (ಯಾಕೋಬ 3:17 ಓದಿ.) ಈ ಎಲ್ಲ ವಿಷ್ಯಗಳಲ್ಲಿ ಯಾವುದಾದರೂ ಒಂದನ್ನ ಇನ್ನೂ ಚೆನ್ನಾಗಿ ಮಾಡಬೇಕು ಅಂತ ಅನಿಸಿದ್ರೆ ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಿ. ಪವಿತ್ರಾತ್ಮ ನಿಮ್ಮಲ್ಲಿ ಕಾರ್ಯ ನಡೆಸೋಕೆ ನೀವು ಬಿಟ್ಟುಕೊಟ್ಟಷ್ಟು ನಿಮ್ಮಲ್ಲಿ ಒಳ್ಳೇ ಗುಣಗಳು ಬೆಳೆಯುತ್ತವೆ ಮತ್ತು ಎಲ್ಲರ ಜೊತೆ ಚೆನ್ನಾಗಿ ನಡ್ಕೊಳ್ತೀರಿ. ಆಗ ಸಹೋದರ ಸಹೋದರಿಯರು ನಿಮ್ಮನ್ನ ಇಷ್ಟಪಡ್ತಾರೆ ಮತ್ತು ಮಾನ್ಯ ಮಾಡ್ತಾರೆ.
ಯೆಹೋವ ನಮಗೆ ಕಲಿಸ್ತಾನೆ
14. ಕೊಲೊಸ್ಸೆ 1:9, 10 ರ ಪ್ರಕಾರ ಯೆಹೋವನು ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಹೇಗೆ ಕಲಿಸಿದನು?
14 ಒಂದನೇ ಶತಮಾನದಲ್ಲಿ. ತನ್ನ ಜನ್ರಿಗೆ ಕಲಿಸೋದಂದ್ರೆ ಯೆಹೋವನಿಗೆ ತುಂಬ ಇಷ್ಟ. (ಕೀರ್ತ. 32:8) ನಾವೆಲ್ಲರೂ ಆತನ ಬಗ್ಗೆ ತಿಳ್ಕೊಬೇಕು, ಆತನನ್ನ ಪ್ರೀತಿಸಬೇಕು ಮತ್ತು ಮುಂದೆ ಆತನ ಪ್ರೀತಿಯ ಮಕ್ಕಳಾಗಿ ಶಾಶ್ವತವಾಗಿ ಬಾಳಬೇಕು ಅನ್ನೋದೇ ಆತನ ಆಸೆ. ಆದ್ರೆ ಇದೆಲ್ಲಾ ನಮ್ಗೆ ಸಿಗಬೇಕಂದ್ರೆ ನಾವು ಯೆಹೋವನಿಂದ ಕಲಿಯಲೇಬೇಕು. (ಯೋಹಾ. 17:3) ಯೆಹೋವನು ಒಂದನೇ ಶತಮಾನದಲ್ಲಿದ್ದ ತನ್ನ ಜನರಿಗೆ ಸಭೆಯ ಮೂಲಕ ಕಲಿಸಿದನು. (ಕೊಲೊಸ್ಸೆ 1:9, 10 ಓದಿ.) ಅಷ್ಟೇ ಅಲ್ಲ, ಯೇಸು ಹೇಳಿದ ಹಾಗೇ ‘ಸಹಾಯಕನಾದ’ ಪವಿತ್ರಾತ್ಮದಿಂದಲೂ ಅವ್ರು ಅನೇಕ ವಿಷ್ಯಗಳನ್ನ ಕಲಿತುಕೊಂಡರು. (ಯೋಹಾ. 14:16) ಅವ್ರು ದೇವರ ವಾಕ್ಯದ ಬಗ್ಗೆ ಇನ್ನೂ ಚೆನ್ನಾಗಿ ತಿಳ್ಕೊಳ್ಳಲು ಮತ್ತು ಯೇಸು ಹೇಳಿದ, ಮಾಡಿದ ಅನೇಕ ವಿಷ್ಯಗಳನ್ನ ಅವ್ರ ಮನಸ್ಸಿಗೆ ತರಲು ಹಾಗೂ ಅದನ್ನ ಸಮಯಾನಂತರ ಸುವಾರ್ತಾ ಪುಸ್ತಕದಲ್ಲಿ ಬರೆದಿಡಲು ಪವಿತ್ರಾತ್ಮ ಅವ್ರಿಗೆ ಸಹಾಯ ಮಾಡ್ತು. ಅವ್ರು ಕಲಿತ ಈ ವಿಷ್ಯಗಳೇ ಅವ್ರ ನಂಬಿಕೆಯನ್ನ ಬಲಪಡಿಸ್ತು. ದೇವರ ಮೇಲೆ, ಆತನ ಮಗನ ಮೇಲೆ ಮತ್ತು ಒಬ್ಬರಿಗೊಬ್ಬರ ಮೇಲೆ ಪ್ರೀತಿಯನ್ನ ಹೆಚ್ಚಿಸಿತು.
15. ಯೆಶಾಯ 2:2, 3 ರಲ್ಲಿರೋ ಮಾತನ್ನು ಯೆಹೋವನು ಇವತ್ತು ಹೇಗೆ ನೆರವೇರಿಸ್ತಿದ್ದಾನೆ?
15 ಆಧುನಿಕ ಸಮಯದಲ್ಲಿ. “ಅಂತ್ಯಕಾಲದಲ್ಲಿ” ಎಲ್ಲಾ ದೇಶದ ಜನರು ತನ್ನಿಂದ ಕಲಿಯುತ್ತಾರೆ ಅಂತ ಯೆಹೋವನು ಮೊದಲೇ ತಿಳಿಸಿದ್ದನು. ಇದಕ್ಕೋಸ್ಕರ ಅವ್ರು ತನ್ನ ಪರ್ವತಕ್ಕೆ ಬರ್ತಾರೆ ಅಂದ್ರೆ ತನ್ನ ಆರಾಧಕರ ಜೊತೆಗೂಡುತ್ತಾರೆ ಅಂತ ಆತನು ಹೇಳಿದನು. (ಯೆಶಾಯ 2:2, 3 ಓದಿ.) ಈ ಪ್ರವಾದನೆ ಇವತ್ತು ನೆರವೇರುತ್ತಿರೋದನ್ನ ಕಣ್ಣಾರೆ ನೋಡ್ತಿದ್ದೇವೆ. ಯಾವುದೇ ರೀತಿಯ ಸುಳ್ಳಾರಾಧನೆಗಿಂತ ಸತ್ಯಾರಾಧನೆ ಎಷ್ಟು ಶ್ರೇಷ್ಠವಾಗಿದೆ, ಉನ್ನತವಾಗಿದೆ ಅನ್ನೋದು ನಮ್ಗೆ ಸ್ಪಷ್ಟವಾಗಿ ಗೊತ್ತಾಗ್ತಿದೆ. ಯೆಹೋವನು ನಮಗೆ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮೂಲಕ ಬೈಬಲಿನ ಮಾಹಿತಿಯನ್ನ ಸಮೃದ್ಧವಾಗಿ ಕೊಡ್ತಿದ್ದಾನೆ. (ಮತ್ತಾ. 24:45; ಯೆಶಾ. 25:6) ಅಷ್ಟೇ ಅಲ್ಲ, ಅದನ್ನ ಬೇರೆಬೇರೆ ರೂಪದಲ್ಲೂ ಕೊಡ್ತಿದ್ದಾನೆ. ನಾವು ಓದ್ಲಿಕ್ಕಾಗಿ ಲೇಖನಗಳನ್ನ, ಕೇಳಿಸಿಕೊಳ್ಳಲಿಕ್ಕಾಗಿ ಭಾಷಣಗಳನ್ನ, ನೋಡ್ಲಿಕ್ಕಾಗಿ ಕಾರ್ಟೂನ್ ಮತ್ತು ವಿಡಿಯೋಗಳನ್ನ ಕೊಟ್ಟಿದ್ದಾನೆ. (ಮತ್ತಾ. 24:45) ಯೆಹೋವನು ಇಷ್ಟೆಲ್ಲಾ ಕೊಡೋದನ್ನ ನೋಡುವಾಗ ನಮಗೂ ಯೋಬನ ಸ್ನೇಹಿತನಾದ ಎಲೀಹುವಿನಂತೆ ಅನಿಸುತ್ತೆ. ‘ದೇವರಂಥ ಉಪದೇಶಕನು ಯಾರು?’ ಅಂತ ಅವ್ನು ಹೇಳಿದನು.—ಯೋಬ 36:22.
16. ಯೆಹೋವ ಕೊಡೋ ಶಿಕ್ಷಣದಿಂದ ಪ್ರಯೋಜನ ಪಡ್ಕೊಬೇಕಂದ್ರೆ ನಾವೇನು ಮಾಡಬೇಕು?
16 ನೀವೇನು ಮಾಡಬೇಕು? ಬೈಬಲಿನಲ್ಲಿ ಓದಿದ್ದನ್ನು ಮತ್ತು ಅಧ್ಯಯನ ಮಾಡಿದ್ದನ್ನು ನಿಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳೋಕೆ ಪವಿತ್ರಾತ್ಮ ನಿಮಗೆ ಸಹಾಯ ಮಾಡುತ್ತೆ. ಕೀರ್ತನೆಗಾರನಂತೆ ನೀವು ಸಹ, “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು” ಅಂತ ಪ್ರಾರ್ಥಿಸಿ. (ಕೀರ್ತ. 86:11) ಅದ್ರ ಜೊತೆಗೆ ಯೆಹೋವನ ಸಂಘಟನೆಯಿಂದ ಬರುವ ಬೈಬಲಿಗೆ ಸಂಬಂಧಪಟ್ಟ ಪ್ರಕಾಶನಗಳನ್ನು ಓದಿ, ಧ್ಯಾನಿಸಿ. ಆದ್ರೆ ನಿಮ್ಮ ಉದ್ದೇಶ ಬರೀ ಜ್ಞಾನ ಪಡಕೊಳ್ಳೋದು ಆಗಿರಬಾರದು. ನೀವು ಕಲಿತ ವಿಷ್ಯಗಳು ಸತ್ಯ ಅಂತ ಮನವರಿಕೆ ಮಾಡಿಕೊಳ್ಳಬೇಕು ಮತ್ತು ಜೀವನದಲ್ಲಿ ಅನ್ವಯಿಸಿಕೊಳ್ಬೇಕು. ಇದಕ್ಕೆಲ್ಲಾ ಯೆಹೋವನ ಪವಿತ್ರಾತ್ಮ ಸಹಾಯ ಮಾಡುತ್ತೆ. ಅದ್ರ ಜೊತೆಗೆ ಸಹೋದರ ಸಹೋದರಿಯರನ್ನೂ ನೀವು ಉತ್ತೇಜಿಸಬೇಕು. (ಇಬ್ರಿ. 10:24, 25) ಯಾಕಂದ್ರೆ ಅವ್ರು ನಿಮ್ಮ ಕುಟುಂಬವಾಗಿದ್ದಾರೆ. ಕೂಟಗಳಲ್ಲಿ ಹೃದಯದಾಳದಿಂದ ಉತ್ರ ಕೊಡೋಕೆ ಮತ್ತು ನಿಮ್ಗೆ ಭಾಗ ಇರೋದಾದ್ರೆ ಅದನ್ನ ಚೆನ್ನಾಗಿ ಮಾಡೋಕೆ ಪವಿತ್ರಾತ್ಮದ ಸಹಾಯಕ್ಕಾಗಿ ಬೇಡಿಕೊಳ್ಳಿ. ಹೀಗೆ ಮಾಡೋದಾದ್ರೆ ಯೆಹೋವ ಮತ್ತು ಆತನ ಮಗನ ಅಮೂಲ್ಯ ‘ಕುರಿಗಳನ್ನ’ ನೀವೂ ಅಮೂಲ್ಯರಾಗಿ ನೋಡ್ತೀರಿ ಅಂತ ತೋರಿಸಿಕೊಡ್ತೀರಿ. ಇದನ್ನ ನೋಡಿ ಅವ್ರಿಬ್ರಿಗೂ ತುಂಬ ಖುಷಿಯಾಗುತ್ತೆ.—ಯೋಹಾ. 21:15-17.
17. ಯೆಹೋವನ ಸಂಘಟನೆಗೆ ನಿಮ್ಮ ಸಂಪೂರ್ಣ ಸಹಕಾರ ಬೆಂಬಲ ಕೊಡಲು ಯಾವೆಲ್ಲಾ ವಿಷ್ಯಗಳನ್ನು ಮಾಡಬೇಕು?
17 ಇನ್ನು ಸ್ವಲ್ಪದ್ರಲ್ಲೇ ಇಡೀ ಭೂಮಿಯಲ್ಲಿ ಪವಿತ್ರಾತ್ಮದ ಮಾರ್ಗದರ್ಶನ ಇರೋ ಯೆಹೋವನ ಸಂಘಟನೆ ಮಾತ್ರ ಉಳಿಯುತ್ತೆ. ಹಾಗಾಗಿ ಯೆಹೋವನ ಸಂಘಟನೆಗೆ ನಿಮ್ಮ ಸಂಪೂರ್ಣ ಸಹಕಾರ ಬೆಂಬಲ ಕೊಡಿ. ದೇವರಂತೆ ನೀವೂ ಎಲ್ಲರನ್ನು ಪ್ರೀತಿಸಿರಿ. ಯಾರಿಗೂ ಬೇಧಭಾವ ಮಾಡಬೇಡಿ. ನಿಮಗೆ ಸಿಗೋ ಎಲ್ಲರಿಗೆ ಸುವಾರ್ತೆ ಸಾರಿ. ಯೆಹೋವನಂತೆ ನೀವೂ ಶಾಂತಿಯಿಂದ ಇರಿ. ಎಲ್ಲ ಕೆಲ್ಸನೂ ವ್ಯವಸ್ಥಿತವಾಗಿ ಮಾಡಿ. ಹೀಗೆ ಸಭೆಯಲ್ಲಿ ಐಕ್ಯತೆಯನ್ನು ಹೆಚ್ಚಿಸಿ. ನಿಮ್ಮ ಮಹಾನ್ ಬೋಧಕನಿಂದ ಸಮೃದ್ಧವಾಗಿ ಸಿಗ್ತಿರೋ ಎಲ್ಲಾ ಮಾಹಿತಿಯ ಪೂರ್ಣ ಪ್ರಯೋಜನ ಪಡ್ಕೊಳ್ಳಿ. ಇದನ್ನೆಲ್ಲಾ ಮಾಡಿದ್ರೆ ಸೈತಾನನ ಲೋಕ ಅಂತ್ಯವಾಗುವಾಗ ನೀವು ಭಯಪಡಲ್ಲ. ಬದ್ಲಿಗೆ ಧೈರ್ಯದಿಂದ ಇರ್ತೀರಿ ಮತ್ತು ಯೆಹೋವನ ಸಂಘಟನೆಗೆ ನಂಬಿಗಸ್ತರಾಗಿ ಸೇವೆ ಮಾಡ್ತಾ ಇರ್ತೀರಿ.
ಗೀತೆ 152 ಯೆಹೋವ ನೀನೇ ಆಶ್ರಯ
^ ಪ್ಯಾರ. 5 ಇವತ್ತು ಯೆಹೋವ ತನ್ನ ಸಂಘಟನೆಯನ್ನ ನಡೆಸ್ತಿದ್ದಾನೆ ಅನ್ನೋ ಬಲವಾದ ನಂಬಿಕೆ ನಿಮಗೆ ಇದ್ಯಾ? ಈ ಲೇಖನದಲ್ಲಿ ಯೆಹೋವನು ಒಂದನೇ ಶತಮಾನದ ಕ್ರೈಸ್ತ ಸಭೆಯನ್ನು ಹೇಗೆ ನಡೆಸಿದನು ಮತ್ತು ಇವತ್ತು ತನ್ನ ಜನರನ್ನು ಹೇಗೆ ನಡೆಸ್ತಿದ್ದಾನೆ ಅಂತ ನೋಡ್ತೇವೆ.
^ ಪ್ಯಾರ. 1 ಪದ ವಿವರಣೆ: ಯೆಹೋವನ ಸಂಘಟನೆಯಲ್ಲಿ ಎರಡು ಭಾಗಗಳಿವೆ. ಒಂದು ಸ್ವರ್ಗದಲ್ಲಿದೆ, ಇನ್ನೊಂದು ಭೂಮಿಯಲ್ಲಿದೆ. ಈ ಲೇಖನದಲ್ಲಿ ಭೂಮಿಯಲ್ಲಿರೋ ಸಂಘಟನೆ ಬಗ್ಗೆ ತಿಳ್ಕೊಳ್ತೇವೆ.
^ ಪ್ಯಾರ. 52 ಚಿತ್ರ ವಿವರಣೆ: ಅನೇಕ ಸಹೋದರ ಸಹೋದರಿಯರು ಅಗತ್ಯ ಇರೋ ದೇಶಗಳಿಗೆ ಹೋಗಿ ಸೇವೆ ಮಾಡಿರೋ ವಿಡಿಯೋಗಳನ್ನ ಒಬ್ಬ ಪಯನೀಯರ್ ಸಹೋದರಿ ನೋಡಿದ್ದಾಳೆ. ಆಗ ಅವಳಿಗೆ ತಾನೂ ಅದೇ ತರ ಸೇವೆ ಮಾಡ್ಬೇಕು ಅಂತ ಅನ್ಸಿದೆ. ಕೊನೆಗೂ ಆ ಸಹೋದರಿ ಅಗತ್ಯವಿರೋ ಕಡೆ ಹೋಗಿ ಸೇವೆ ಮಾಡ್ತಿದ್ದಾಳೆ.