ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 42

ಇದೇ ಸತ್ಯ ಅಂತ ನಂಬಿ!

ಇದೇ ಸತ್ಯ ಅಂತ ನಂಬಿ!

“ಎಲ್ಲವನ್ನ ಪರೀಕ್ಷಿಸಿ ಯಾವುದು ಒಳ್ಳೇದು ಅಂತ ಚೆನ್ನಾಗಿ ತಿಳ್ಕೊಳ್ಳಿ.”—1 ಥೆಸ. 5:21.

ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು

ಕಿರುನೋಟ *

1. ಧರ್ಮದ ಬಗ್ಗೆ ಜನರಿಗೆ ಯಾಕೆ ಗಲಿಬಿಲಿ ಇದೆ?

ಇವತ್ತು ಲೋಕದಲ್ಲಿ ಸಾವಿರಾರು ಕ್ರೈಸ್ತ ಪಂಗಡಗಳಿವೆ. ಎಲ್ಲರೂ ‘ನಾವೇ ಸತ್ಯಕ್ರೈಸ್ತರು, ನಮ್ಮ ಧರ್ಮನೇ ಸರಿ’ ಅಂತ ಹೇಳ್ತಾರೆ. ಅದಕ್ಕೇ ಕೆಲವರು “ಯಾವುದು ಸತ್ಯ ಧರ್ಮ? ಎಲ್ಲಾ ಧರ್ಮಗಳೂ ದೇವರಿಗೆ ಇಷ್ಟ ಆಗುತ್ತಾ?” ಅಂತ ಕೇಳ್ತಾರೆ. ಯೆಹೋವನ ಸಾಕ್ಷಿಗಳು ಮಾತ್ರನೇ ಜನರಿಗೆ ಸತ್ಯ ಕಲಿಸ್ತಾ ಇರೋದು, ಅವರು ಮಾತ್ರನೇ ದೇವರು ಹೇಳೋ ತರ ಆತನನ್ನ ಆರಾಧಿಸ್ತಾ ಇರೋದು ಅಂತ ನೀವು ನಂಬ್ತೀರಾ? ಅದಕ್ಕೆ ಆಧಾರಗಳೇನು ಅಂತ ಈಗ ನೋಡೋಣ.

2. ಅಪೊಸ್ತಲ ಪೌಲನಿಗೆ ತಾನು ನಂಬಿದ್ದು ಸತ್ಯ ಅಂತ ಹೇಗೆ ಗೊತ್ತಿತ್ತು? (1 ಥೆಸಲೊನೀಕ 1:5)

2 ಅಪೊಸ್ತಲ ಪೌಲನಿಗೆ ತಾನು ನಂಬಿರೋದೆಲ್ಲ ಸತ್ಯ ಅನ್ನೋದರಲ್ಲಿ ಯಾವ ಸಂಶಯನೂ ಇರಲಿಲ್ಲ. (1 ಥೆಸಲೊನೀಕ 1:5 ಓದಿ.) ಆ ನಂಬಿಕೆ ಅವನಿಗೆ ಸುಮ್ಮನೆ ಹಾಗೆ ಬಂದಿದ್ದಲ್ಲ. ಬೈಬಲನ್ನ ಚೆನ್ನಾಗಿ ಓದಿ ಅಧ್ಯಯನ ಮಾಡಿದ್ದರಿಂದ ಬಂತು. “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು” ಅಂತ ಅವನು ನಂಬಿದ್ದ. (2 ತಿಮೊ. 3:16) ಬೈಬಲನ್ನ ಅವನು ಚೆನ್ನಾಗಿ ಅಧ್ಯಯನ ಮಾಡಿದ್ದರಿಂದಾನೇ ಯೇಸುನೇ ಮೆಸ್ಸೀಯ ಅಂತ ಅವನಿಗೆ ಗೊತ್ತಾಯ್ತು. ಇದೇ ಆಧಾರ ಧಾರ್ಮಿಕ ಮುಖಂಡರ ಕಣ್ಣಮುಂದೆ ಇದ್ರೂ ಅವರು ಬೇಕಂತಾನೇ ಅದನ್ನ ನಂಬಲಿಲ್ಲ. ಅವರು ಜನರಿಗೆ ಸತ್ಯಾನೇ ಕಲಿಸ್ತಾ ಇದ್ದೀವಿ ಅಂತ ಹೇಳಿಕೊಳ್ತಾ ಇದ್ರು. ಆದ್ರೆ ದೇವರಿಗೆ ಇಷ್ಟ ಇಲ್ಲದೇ ಇದ್ದದ್ದನ್ನೇ ಮಾಡುತ್ತಿದ್ರು. (ತೀತ 1:16) ಪೌಲ ಆ ಧರ್ಮಗುರುಗಳ ತರ ದೇವರ ವಾಕ್ಯದಲ್ಲಿ ತನಗೆ ಇಷ್ಟ ಇರೋದನ್ನ ನಂಬಿ, ಇಷ್ಟ ಇಲ್ಲದೇ ಇರೋದನ್ನ ಬಿಟ್ಟುಬಿಡಲಿಲ್ಲ. “ದೇವ್ರ ಇಷ್ಟ ಏನಂತ . . . ಪೂರ್ತಿಯಾಗಿ” ತಿಳುಕೊಂಡು ಅದನ್ನ ಪಾಲಿಸಿದ ಮತ್ತು ಬೇರೆಯವರಿಗೂ ಹೇಳಿಕೊಟ್ಟ.—ಅ. ಕಾ. 20:27.

3. ನಾವು ನಂಬಿರೋದು ಸತ್ಯ ಅನ್ನೋದಕ್ಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಗೊತ್ತಾಗಬೇಕಾ? (“ ಯೆಹೋವನ ಕೆಲಸಗಳನ್ನ ಮತ್ತು ಯೋಚನೆಗಳನ್ನ ನಮ್ಮಿಂದ ಲೆಕ್ಕಮಾಡಕ್ಕಾಗಲ್ಲ” ಅನ್ನೋ ಚೌಕ ಸಹ ನೋಡಿ.)

3 ‘ಸತ್ಯಧರ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೆ, ಬೈಬಲಲ್ಲಿ ಇಲ್ಲದೇ ಇರೋ ವಿಷಯಗಳಿಗೂ ಉತ್ತರ ಕೊಡುತ್ತೆ’ ಅಂತ ಕೆಲವರು ಹೇಳ್ತಾರೆ. ಆದ್ರೆ ಇದು ನಿಜಾನಾ? ಪೌಲನ ಉದಾಹರಣೆ ಗಮನಿಸಿ. ಅವನು ಆಗಿನ ಕ್ರೈಸ್ತರಿಗೆ “ಎಲ್ಲವನ್ನ ಪರೀಕ್ಷಿಸಿ . . . ಚೆನ್ನಾಗಿ ತಿಳ್ಕೊಳ್ಳಿ” ಅಂತ ಹೇಳಿದ. (1 ಥೆಸ. 5:21) ಇನ್ನೊಂದು ಕಡೆ “ನಮಗೆ ಅರ್ಧಂಬರ್ಧ ಜ್ಞಾನ ಇದೆ.” “ಈಗ ನಮಗೆ ಲೋಹದ ಕನ್ನಡಿಯಲ್ಲಿ ಮಬ್ಬುಮಬ್ಬಾಗಿ ಕಾಣ್ತಿದೆ” ಅಂತನೂ ಹೇಳಿದ. (1 ಕೊರಿಂ. 13:9, 12) ಈ ಮಾತಿಂದ ನಮಗೆ ಏನು ಅರ್ಥ ಆಗುತ್ತೆ? ಪೌಲನಿಗೆ ಎಲ್ಲಾ ವಿಷಯ ಗೊತ್ತಿರಲಿಲ್ಲ. ಹಾಗೆ ನಮಗೂ ಎಲ್ಲಾ ವಿಷಯ ಗೊತ್ತಾಗಲ್ಲ. ಆದ್ರೆ ಯೆಹೋವ ದೇವರ ಬಗ್ಗೆ ಮುಖ್ಯವಾಗಿ ತಿಳುಕೊಳ್ಳಬೇಕಿದ್ದ ವಿಷಯಗಳು ಪೌಲನಿಗೆ ಗೊತ್ತಿತ್ತು. ತಾನು ನಂಬಿರೋದು ಸತ್ಯ ಅಂತ ಮನವರಿಕೆ ಆಗೋಕೆ ಅದಷ್ಟೇ ಸಾಕಾಗಿತ್ತು.

4. (ಎ) ನಾವು ನಂಬಿರೋದು ಸತ್ಯಾನೇ ಅಂತ ತಿಳುಕೊಳ್ಳೋಕೆ ಏನು ಮಾಡಬೇಕು? (ಬಿ) ಈ ಲೇಖನದಲ್ಲಿ ನಾವೇನು ನೋಡ್ತೀವಿ?

4 ನಾವು ನಂಬಿರೋದು ಸತ್ಯ ಅಂತ ತಿಳುಕೊಳ್ಳೋಕೆ ಏನು ಮಾಡಬೇಕು? ಯೆಹೋವ ದೇವರನ್ನು ಹೇಗೆ ಆರಾಧಿಸಬೇಕು ಅಂತ ಯೇಸು ಹೇಳಿಕೊಟ್ಟರೋ ಅದೇ ತರ ಯೆಹೋವನ ಸಾಕ್ಷಿಗಳು ಆರಾಧಿಸ್ತಿದ್ದಾರಾ ಅಂತ ಪರೀಕ್ಷೆ ಮಾಡಬೇಕು. ಸತ್ಯಕ್ರೈಸ್ತರು (1) ಮೂರ್ತಿಪೂಜೆ ಮಾಡಲ್ಲ, (2) ಯೆಹೋವನ ಹೆಸರಿಗೆ ಗೌರವ ತರುತ್ತಾರೆ, (3) ಸತ್ಯವನ್ನು ಪ್ರೀತಿಸ್ತಾರೆ, (4) ಒಬ್ಬರನ್ನೊಬ್ಬರು ಪ್ರೀತಿಸ್ತಾರೆ. ಇವತ್ತು ಆ ಸತ್ಯಕ್ರೈಸ್ತರು ಯಾರು ಅಂತ ಈ ಲೇಖನದಲ್ಲಿ ನೋಡೋಣ.

ನಾವು ಮೂರ್ತಿಪೂಜೆ ಮಾಡಲ್ಲ

5. (ಎ) ದೇವರನ್ನ ಯೇಸು ಹೇಗೆ ಆರಾಧಿಸಿದರು? (ಬಿ) ಅದ್ರಿಂದ ನಾವೇನು ಕಲಿತೀವಿ?

5 ಯೇಸುಗೆ ಯೆಹೋವ ದೇವರ ಮೇಲೆ ಪ್ರೀತಿ ಇತ್ತು. ಅದಕ್ಕೇ ಸ್ವರ್ಗದಲ್ಲಿ ಇದ್ದಾಗಲೂ, ಭೂಮಿಗೆ ಬಂದಾಗಲೂ ಯೆಹೋವ ದೇವರನ್ನೇ ಆರಾಧಿಸಿದ್ರು. (ಲೂಕ 4:8) ಅದನ್ನೇ ಅವರ ಶಿಷ್ಯರಿಗೂ ಕಲಿಸಿದ್ರು. ಯೇಸುವಾಗಲಿ, ಆತನ ಶಿಷ್ಯರಾಗಲಿ ಯೆಹೋವನನ್ನು ಆರಾಧಿಸುವಾಗ ಯಾವ ಮೂರ್ತಿಗಳನ್ನೂ ಇಟ್ಟುಕೊಳ್ಳಲಿಲ್ಲ. ಯಾಕಂದ್ರೆ ದೇವರು ಮನುಷ್ಯರ ಕಣ್ಣಿಗೆ ಕಾಣಲ್ಲ. ದೇವರ ಮೂರ್ತಿ ಮಾಡೋಕೆ ಯಾರಿಗೂ ಆಗಲ್ಲ. (ಯೆಶಾ. 46:5) ಸಂತರ ಮೂರ್ತಿಗಳನ್ನು ಇಟ್ಟುಕೊಂಡು ಆರಾಧಿಸೋದು ಸರಿನಾ? ಇಲ್ಲ. ಯಾಕಂದ್ರೆ ಯೆಹೋವ ದೇವರು ಹತ್ತು ಆಜ್ಞೆಗಳನ್ನು ಕೊಡುವಾಗ ಏನು ಹೇಳಿದ್ರು ಅಂತ ನೋಡಿ: “ನೀವು ಮೂರ್ತಿಗಳನ್ನ ಮಾಡ್ಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ . . . ಯಾವುದರ ಮೂರ್ತಿನೂ ರೂಪಾನೂ ಮಾಡ್ಕೊಳ್ಳಬಾರದು. ನೀವು ಅವುಗಳಿಗೆ ಅಡ್ಡಬೀಳಬಾರದು” ಅಂತ ಹೇಳಿದ್ರು. (ವಿಮೋ. 20:4, 5) ಇದರಿಂದ ಯೆಹೋವ ದೇವರಿಗೆ ಮೂರ್ತಿಪೂಜೆ ಇಷ್ಟ ಇಲ್ಲ ಅಂತ ನಮಗೆ ಗೊತ್ತಾಗುತ್ತೆ.

6. ಇವತ್ತು ಯೆಹೋವನ ಸಾಕ್ಷಿಗಳು ಯಾವ ರೀತಿಯ ಆರಾಧನೆ ಮಾಡ್ತಾರೆ?

6 ಒಂದನೇ ಶತಮಾನದ ಕ್ರೈಸ್ತರು ದೇವರಿಗೆ ಮಾತ್ರ ಆರಾಧನೆ ಮಾಡ್ತಾ ಇದ್ರು ಅಂತ ಇತಿಹಾಸಕಾರರು ಹೇಳ್ತಾರೆ. ಉದಾಹರಣೆಗೆ ಚರ್ಚುಗಳ ಇತಿಹಾಸ ಅನ್ನೋ ಇಂಗ್ಲಿಷ್‌ ಪುಸ್ತಕದಲ್ಲಿ ಒಂದನೇ ಶತಮಾನದ ಕ್ರೈಸ್ತರಿಗೆ ಆರಾಧನೆಯಲ್ಲಿ ಮೂರ್ತಿಗಳನ್ನು ಉಪಯೋಗಿಸೋದು “ಅಸಹ್ಯ ಅನಿಸ್ತಿತ್ತು” ಅಂತ ಹೇಳುತ್ತೆ. ಇವತ್ತು ಯೆಹೋವನ ಸಾಕ್ಷಿಗಳು ಒಂದನೇ ಶತಮಾನದ ಕ್ರೈಸ್ತರ ತರಾನೇ ಆರಾಧನೆ ಮಾಡುತ್ತಿದ್ದಾರೆ. ಅವರು “ಸಂತರನ್ನ” ಅಥವಾ ದೇವದೂತರನ್ನ ಆರಾಧನೆ ಮಾಡಲ್ಲ. ಮೂರ್ತಿಗಳನ್ನ ಇಟ್ಟು ಪೂಜೆ ಮಾಡಲ್ಲ. ಯೇಸುವನ್ನೂ ಆರಾಧನೆ ಮಾಡಲ್ಲ. ಧ್ವಜವಂದನೆ ಆಗಲಿ ಅಥವಾ ಇನ್ಯಾವುದೇ ರೀತಿಯಲ್ಲಾಗಲಿ ದೇಶಕ್ಕೆ ಆರಾಧನೆ ಮಾಡಲ್ಲ. ಏನೇ ಆಗಲಿ ಅವರು ಯೇಸು ಹೇಳಿದ್ದನ್ನೇ ಮಾಡ್ತಾರೆ. “ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು” ಅಂತ ಯೇಸು ಹೇಳಿದ ಮಾತನ್ನ ಪಾಲಿಸ್ತಾರೆ.—ಮತ್ತಾ. 4:10.

7. ಯೆಹೋವನ ಸಾಕ್ಷಿಗಳಿಗೂ ಬೇರೆ ಕ್ರೈಸ್ತರಿಗೂ ಏನು ವ್ಯತ್ಯಾಸ?

7 ಇವತ್ತು ಚರ್ಚಲ್ಲಿ ಕೆಲವರು ಮೋಡಿ ಮಾಡುವಂಥ ಭಾಷಣಗಳನ್ನು ಕೊಡ್ತಾರೆ. ಅದಕ್ಕೆ ಮರುಳಾಗಿ ಜನ ಅವರನ್ನ ದೇವರ ತರ ನೋಡ್ತಾರೆ. ಅವರ ಭಾಷಣ ಕೇಳಿಸಿಕೊಳ್ಳೋಕೆ ಚರ್ಚುಗಳಲ್ಲಿ ತುಂಬಿಕೊಳ್ತಾರೆ. ಕಾಣಿಕೆ ಪೆಟ್ಟಿಗೆಗಳಲ್ಲಿ ದುಡ್ಡು ಸುರಿತಾರೆ, ಅವರ ಪುಸ್ತಕಗಳನ್ನ ತಗೊಳ್ತಾರೆ. ಇನ್ನು ಕೆಲವು ಜನರಿಗಂತೂ ಧರ್ಮಗುರುಗಳು ಹೇಳೋದೇ ವೇದವಾಕ್ಯ. ಸ್ವರ್ಗದಿಂದ ಯೇಸುನೇ ಬಂದು ಹೇಳಿದ್ರೂ ಅವರಿಗೆ ಈ ಬೋಧಕರ ಮಾತುಗಳೇ ಮುಖ್ಯ. ಆದ್ರೆ ಯೆಹೋವನ ಸಾಕ್ಷಿಗಳು ಹಾಗಲ್ಲ. ಅವರು ಮೇಲ್ವಿಚಾರಣೆ ಮಾಡುವವರಿಗೆ ಗೌರವ ತೋರಿಸ್ತಾರೆ, ಆದ್ರೆ ಆರಾಧನೆ ಮಾಡಲ್ಲ. “ನೀವೆಲ್ಲ ಸಹೋದರರು” ಅಂತ ಯೇಸು ಹೇಳಿದ ಮಾತನ್ನ ಯಾವಾಗಲೂ ಮನಸ್ಸಲ್ಲಿ ಇಡ್ತಾರೆ. (ಮತ್ತಾ. 23:8-10) ಧರ್ಮಗುರುಗಳನ್ನ, ಜನನಾಯಕರನ್ನ ಆರಾಧಿಸಲ್ಲ, ಅವರ ಕೆಲಸಗಳಿಗೆ ಬೆಂಬಲ ಕೊಡಲ್ಲ, ಅವರ ಪರ ನಿಲ್ಲಲ್ಲ, ಯಾರ ಪಕ್ಷನೂ ವಹಿಸಲ್ಲ. ಆದ್ರೆ ಕ್ರೈಸ್ತರು ಅಂತ ಹೇಳಿಕೊಳ್ಳೋ ಬೇರೆಯವರು ಇದನ್ನ ಮಾಡ್ತಾರೆ.—ಯೋಹಾ. 18:36.

ನಾವು ಯೆಹೋವನ ಹೆಸರಿಗೆ ಗೌರವ ತರುತ್ತೀವಿ

ಸತ್ಯಕ್ರೈಸ್ತರು ದೇವರ ಹೆಸರಿನ ಬಗ್ಗೆ ಹೆಮ್ಮೆಯಿಂದ ಜನರಿಗೆ ಹೇಳ್ತಾರೆ (ಪ್ಯಾರ 8-10 ನೋಡಿ) *

8. ತನ್ನ ಹೆಸರನ್ನ ಬಳಸಬೇಕು ಮತ್ತು ಬೇರೆಯವರಿಗೂ ಅದನ್ನ ತಿಳಿಸಬೇಕು ಅನ್ನೋದು ಯೆಹೋವನಿಗೆ ಇಷ್ಟ ಅಂತ ಹೇಗೆ ಹೇಳಬಹುದು?

8 ಒಮ್ಮೆ ಯೇಸು “ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ” ಅಂತ ಪ್ರಾರ್ಥನೆ ಮಾಡಿದ್ರು. ಯೆಹೋವ ದೇವರು ಕೂಡ ಆ ಪ್ರಾರ್ಥನೆಗೆ ಸ್ವರ್ಗದಿಂದ ಗಟ್ಟಿಯಾಗಿ ‘ನನ್ನ ಹೆಸರಿಗೆ ಗೌರವ ಬರೋ ತರ ಮಾಡ್ತೀನಿ’ ಅಂತ ಹೇಳಿದ್ರು. (ಯೋಹಾ. 12:28) ಯೆಹೋವನ ಹೆಸರನ್ನ ಯೇಸು ಜನರಿಗೆ ತಿಳಿಸಿದ್ರು ಮತ್ತು ಆತನ ಹೆಸರಿಗೆ ಗೌರವ ತರುತ್ತಾ ಇದ್ರು. (ಯೋಹಾ. 17:26) ಅದೇ ತರ ಸತ್ಯಕ್ರೈಸ್ತರು ಹೆಮ್ಮೆಯಿಂದ ದೇವರ ಹೆಸರನ್ನ ಬಳಸ್ತಾರೆ ಮತ್ತು ಬೇರೆಯವರಿಗೂ ಅದನ್ನ ತಿಳಿಸ್ತಾರೆ.

9. ಯೆಹೋವನ ಹೆಸರನ್ನ ಗೌರವಿಸ್ತೀವಿ ಅಂತ ಒಂದನೇ ಶತಮಾನದ ಕ್ರೈಸ್ತರು ಹೇಗೆ ತೋರಿಸಿಕೊಟ್ರು?

9 ಕ್ರೈಸ್ತ ಸಭೆ ಸ್ಥಾಪನೆಯಾದ ಸ್ವಲ್ಪದರಲ್ಲೇ ಯೆಹೋವ ದೇವರು ‘ಯೆಹೂದ್ಯರಲ್ಲದ ಜನ್ರ ಕಡೆ ಗಮನಕೊಟ್ಟು ಅವ್ರನ್ನ ತನ್ನ ಜನ್ರಾಗಿ ಆರಿಸ್ಕೊಂಡರು.’ (ಅ. ಕಾ. 15:14) ಒಂದನೇ ಶತಮಾನದ ಕ್ರೈಸ್ತರು ದೇವರ ಹೆಸರನ್ನ ತುಂಬ ಹೆಮ್ಮೆಯಿಂದ ಬಳಸಿದ್ರು, ಅದನ್ನ ಜನ್ರಿಗೂ ತಿಳಿಸಿದ್ರು. ಹೀಗೆ ಅವರು ಸಾರುವಾಗ ಮಾತ್ರ ಅಲ್ಲ, ಬೈಬಲ್‌ ಪುಸ್ತಕಗಳನ್ನು ಬರೆಯುವಾಗ ಕೂಡ ದೇವರ ಹೆಸರನ್ನ ಬಳಸಿದ್ರು. * ಆ ಕಾಲದಲ್ಲಿ ದೇವರ ಹೆಸರನ್ನ ಜನರಿಗೆ ತಿಳಿಸಿಕೊಡ್ತಾ ಇದ್ದಿದ್ದು ಅವರು ಮಾತ್ರ ಅಂತ ತೋರಿಸಿಕೊಟ್ರು.—ಅ. ಕಾ. 2:14, 21.

10. ಯೆಹೋವನ ಸಾಕ್ಷಿಗಳು ಮಾತ್ರನೇ ದೇವರ ಹೆಸರನ್ನು ಬೇರೆಯವರಿಗೆ ಹೇಳ್ತಿದ್ದಾರೆ ಅಂತ ಹೇಗೆ ಗೊತ್ತು?

10 ಇವತ್ತು ಯೆಹೋವ ದೇವರ ಹೆಸರನ್ನ ಯಾರು ಜನರಿಗೆ ತಿಳಿಸ್ತಾ ಇದ್ದಾರೆ? ಇವತ್ತು ತುಂಬ ಧರ್ಮಗುರುಗಳು ಅವರಲ್ಲಿರೋ ಅಧಿಕಾರ ಉಪಯೋಗಿಸಿ ದೇವರ ಹೆಸರನ್ನ ಮುಚ್ಚಿಹಾಕಿದ್ದಾರೆ. ಯೆಹೋವ ಅನ್ನೋ ಹೆಸರನ್ನ ಅವರ ಬೈಬಲ್‌ಗಳಿಂದ ತೆಗೆದುಹಾಕಿದ್ದಾರೆ. ಅವರ ಚರ್ಚುಗಳಲ್ಲಿ ದೇವರ ಹೆಸರನ್ನ ಉಪಯೋಗಿಸಲೇಬಾರದು ಅಂತ ಹೇಳಿಬಿಟ್ಟಿದ್ದಾರೆ. * ಆದ್ರೆ ಯೆಹೋವನ ಸಾಕ್ಷಿಗಳು ಹಾಗಲ್ಲ. ಅವರು ಯೆಹೋವ ಅನ್ನೋ ಹೆಸರನ್ನ ಬಳಸ್ತಿದ್ದಾರೆ. ಹಾಗಾದ್ರೆ ಯೆಹೋವನ ಸಾಕ್ಷಿಗಳು ದೇವರ ಹೆಸರಿಗೆ ಹೇಗೆ ಗೌರವ ಕೊಡ್ತಾ ಇದ್ದಾರೆ? ಬೇರೆ ಧರ್ಮದವರಿಗಿಂತ ಅವರೇ ತುಂಬ ಜನರಿಗೆ ದೇವರ ಹೆಸರನ್ನ ತಿಳಿಸ್ತಿದ್ದಾರೆ. ಯೆಹೋವನ ಸಾಕ್ಷಿಗಳು ತಮ್ಮ ಹೆಸರಿಗೆ ತಕ್ಕಂತೆ ಜೀವಿಸ್ತಾ ಇದ್ದಾರೆ. (ಯೆಶಾ. 43:10-12) ಅವರು ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ ಬೈಬಲಿನ 24 ಕೋಟಿಗಿಂತ ಜಾಸ್ತಿ ಪ್ರತಿಗಳನ್ನ ತಯಾರಿಸಿದ್ದಾರೆ. ಬೇರೆ ಬೈಬಲ್‌ ಭಾಷಾಂತರಗಾರರು ಯಾವ ಯಾವ ವಚನಗಳಲ್ಲಿ ದೇವರ ಹೆಸರನ್ನು ತೆಗೆದುಹಾಕಿದ್ದಾರೋ ಅಲ್ಲೆಲ್ಲ ಅದನ್ನ ಈ ಬೈಬಲಲ್ಲಿ ಹಾಕಿದ್ದಾರೆ. ಅಷ್ಟೇ ಅಲ್ಲ, ಸಾವಿರಕ್ಕಿಂತ ಹೆಚ್ಚು ಭಾಷೆಗಳಲ್ಲಿ ತಯಾರಿಸಿರೋ ಅವರ ಪ್ರಕಾಶನಗಳಲ್ಲೂ ದೇವರ ಹೆಸರನ್ನ ಬಳಸಿದ್ದಾರೆ.

ನಾವು ಸತ್ಯವನ್ನು ಪ್ರೀತಿಸ್ತೀವಿ

11. ಒಂದನೇ ಶತಮಾನದ ಕ್ರೈಸ್ತರು ಸತ್ಯವನ್ನು ಪ್ರೀತಿಸ್ತಾ ಇದ್ರು ಅಂತ ಹೇಗೆ ತೋರಿಸಿಕೊಟ್ರು?

11 ಯೇಸು ಸತ್ಯವನ್ನು ಅಂದ್ರೆ ದೇವರ ಬಗ್ಗೆ ಮತ್ತು ದೇವರು ಮುಂದೆ ಏನೆಲ್ಲಾ ಮಾಡ್ತಾರೆ ಅನ್ನೋದ್ರ ಬಗ್ಗೆ ಇರೋ ಸತ್ಯವನ್ನ ಪ್ರೀತಿಸಿದ್ರು. ತಾನು ತಿಳಿದುಕೊಂಡಿರೋದು ಸತ್ಯ ಅನ್ನೋದ್ರಲ್ಲಿ ಯಾವ ಸಂಶಯನೂ ಇಲ್ಲ ಅನ್ನೋದನ್ನ ತನ್ನ ನಡತೆಯಲ್ಲಿ ತೋರಿಸಿದ್ರು ಮತ್ತು ಬೇರೆಯವರಿಗೆ ಕೂಡ ಸತ್ಯದ ಬಗ್ಗೆ ತಿಳಿಸಿದ್ರು. (ಯೋಹಾ. 18:37) ಯೇಸುವಿನ ಶಿಷ್ಯರು ಕೂಡ ಸತ್ಯವನ್ನು ತುಂಬ ಪ್ರೀತಿಸಿದ್ರು. (ಯೋಹಾ. 4:23, 24) ಕ್ರೈಸ್ತತ್ವವನ್ನು “ದೇವರ ದಾರಿ” ಅಂತ ಯೇಸುವಿನ ಶಿಷ್ಯ ಪೇತ್ರ ಹೇಳಿದ. (2 ಪೇತ್ರ 2:2) ಶಿಷ್ಯರು ಸತ್ಯವನ್ನ ತುಂಬ ಪ್ರೀತಿಸುತ್ತಿದ್ರು. ಹಾಗಾಗಿ ಅವರು ದೇವರಿಗೆ ವಿರುದ್ಧವಾಗಿದ್ದ ಬೋಧನೆಗಳನ್ನ, ಸಂಪ್ರದಾಯಗಳನ್ನ, ವೈಯಕ್ತಿಕ ಅಭಿಪ್ರಾಯಗಳನ್ನ ಬಿಟ್ಟುಬಿಟ್ರು. (ಕೊಲೊ. 2:8) ಅದೇ ತರ ಇವತ್ತು ಸತ್ಯಕ್ರೈಸ್ತರು “ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ” ಇದ್ದಾರೆ. ಅಂದ್ರೆ ಯೆಹೋವನಿಗೆ ಇಷ್ಟ ಆಗದ ವಿಷಯಗಳನ್ನ ದೂರ ಇಟ್ಟು ಬೈಬಲಲ್ಲಿ ಹೇಳಿರೋ ತರಾನೇ ನಡಿತಾರೆ.—3 ಯೋಹಾ. 3, 4.

12. ಒಂದು ವಿಷಯವನ್ನ ತಪ್ಪಾಗಿ ಅರ್ಥಮಾಡಿಕೊಂಡಿದ್ದೀವಿ ಅಂತ ಗೊತ್ತಾದಾಗ ಆಡಳಿತ ಮಂಡಲಿ ಏನು ಮಾಡ್ತಾರೆ ಮತ್ತು ಯಾಕೆ?

12 ಇವತ್ತು ಯೆಹೋವನ ಸಾಕ್ಷಿಗಳು ತಮಗೆ ಎಲ್ಲಾ ಗೊತ್ತು ಅಂತ ಹೇಳಿಕೊಳ್ಳಲ್ಲ. ಬೈಬಲ್‌ ವಚನಗಳ ಸರಿಯಾದ ಅರ್ಥ ನಮಗೆ ಒಂದೇ ಸಲ ಗೊತ್ತಾಗಿಬಿಡಲ್ಲ, ಸಮಯ ಹೋಗ್ತಾ ಹೋಗ್ತಾ ಗೊತ್ತಾಗುತ್ತೆ ಅಂತ ಬೈಬಲೇ ಹೇಳುತ್ತೆ. (ಕೊಲೊ. 1:9, 10) ಯೆಹೋವ ದೇವರು ಸತ್ಯವನ್ನ ನಿಧಾನವಾಗಿ ತಿಳಿಸ್ತಾರೆ. ಆ ಸತ್ಯದ ಬೆಳಕು ಜಾಸ್ತಿ ಆಗೋ ತನಕ ನಾವು ತಾಳ್ಮೆಯಿಂದ ಕಾಯಬೇಕಾಗುತ್ತೆ. (ಜ್ಞಾನೋ. 4:18) ಹಾಗಾಗಿ ಬೈಬಲ್‌ ವಚನಗಳನ್ನ ಅರ್ಥ ಮಾಡಿಕೊಂಡಿರೋದರಲ್ಲಿ ಮತ್ತು ಸಭೆಯನ್ನ ಸಂಘಟಿಸೋದರಲ್ಲಿ ಕೆಲವೊಮ್ಮೆ ನಮ್ಮಿಂದ ತಪ್ಪುಗಳು ಆಗುತ್ತೆ. ಅದು ಗೊತ್ತಾದ ತಕ್ಷಣ ಆಡಳಿತ ಮಂಡಲಿ ಅದರಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತೆ. ಯಾಕಂದ್ರೆ ನಾವು ದೇವರ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಇಷ್ಟಪಡ್ತೀವಿ ಮತ್ತು ಯೇಸು ಹೇಳಿದ ತರಾನೇ ದೇವರನ್ನ ಆರಾಧಿಸೋಕೆ ಇಷ್ಟಪಡ್ತೀವಿ. (ಯಾಕೋ. 4:4) ಆದ್ರೆ ಎಷ್ಟೋ ಚರ್ಚುಗಳಲ್ಲಿ ಜನರನ್ನ ಮೆಚ್ಚಿಸೋಕೆ ಮತ್ತು ಈ ಲೋಕಕ್ಕೆ ಇಷ್ಟ ಆಗೋ ತರ ಅವರ ಆಚಾರ ವಿಚಾರಗಳಲ್ಲಿ ಬದಲಾವಣೆಗಳನ್ನ ಮಾಡ್ತಾರೆ. ಆದ್ರೆ ನಾವು ಜನರ ಅಭಿಪ್ರಾಯಕ್ಕೆ ಅನುಸಾರವಾಗಿ ಅಲ್ಲ, ಬದಲಿಗೆ ಬೈಬಲಲ್ಲಿ ಇರೋ ಸತ್ಯಗಳನ್ನ ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ರಿಂದ ಬದಲಾವಣೆಗಳನ್ನ ಮಾಡಿಕೊಂಡಿದ್ದೀವಿ. ಯಾಕಂದ್ರೆ ನಾವು ಸತ್ಯವನ್ನು ಪ್ರೀತಿಸ್ತೀವಿ.—1 ಥೆಸ. 2:3, 4.

ನಾವು ಒಬ್ಬರನ್ನೊಬ್ಬರು ಪ್ರೀತಿಸ್ತೀವಿ

13. (ಎ) ಸತ್ಯಕ್ರೈಸ್ತರಲ್ಲಿ ಎದ್ದುಕಾಣೋ ಗುಣ ಯಾವುದು? (ಬಿ) ಅದನ್ನ ಇವತ್ತು ಯೆಹೋವನ ಸಾಕ್ಷಿಗಳು ಹೇಗೆ ತೋರಿಸ್ತಾ ಇದ್ದಾರೆ?

13 “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದ್ರು. (ಯೋಹಾ. 13:34, 35) ಅದೇ ತರ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರ ಮಧ್ಯೆ ಪ್ರೀತಿ ಎದ್ದುಕಾಣುತ್ತಿತ್ತು. ಇವತ್ತು ಲೋಕದ ಯಾವುದೇ ಕಡೆ ಹೋದ್ರೂ ಯೆಹೋವನ ಸಾಕ್ಷಿಗಳು ಇದೇ ತರ ಪ್ರೀತಿ ತೋರಿಸ್ತಾರೆ. ನಮ್ಮ ದೇಶ, ಭಾಷೆ, ಜಾತಿ, ಅಂತಸ್ತು ಬೇರೆಬೇರೆ ಇದ್ರೂ ನಾವು ಒಬ್ಬರನ್ನೊಬ್ಬರು ತುಂಬ ಪ್ರೀತಿಸ್ತೀವಿ. ಇಂಥ ಪ್ರೀತಿ ಎಲ್ಲೂ ಸಿಗಲ್ಲ. ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ನಮ್ಮ ಮಧ್ಯೆ ಎಷ್ಟು ಪ್ರೀತಿ ಇದೆ ಅಂತ ಗೊತ್ತಾಗುತ್ತೆ. ನಾವು ಯೆಹೋವ ದೇವರು ಇಷ್ಟಪಡೋ ರೀತಿಲೇ ಆರಾಧನೆ ಮಾಡ್ತಾ ಇದ್ದೀವಿ ಅನ್ನೋದಕ್ಕೆ ಇದೇ ದೊಡ್ಡ ಸಾಕ್ಷಿ.

14. ಕೊಲೊಸ್ಸೆ 3:12-14ರ ಪ್ರಕಾರ, ನಮ್ಮಲ್ಲಿ ಪ್ರೀತಿ ಇದೆ ಅಂತ ಹೇಗೆ ತೋರಿಸ್ತೀವಿ?

14 ಬೈಬಲ್‌ ನಮಗೆ “ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು” ಅಂತ ಕಲಿಸುತ್ತೆ. (1 ಪೇತ್ರ 4:8) ಬೇರೆಯವರು ತಪ್ಪು ಮಾಡಿದ್ರೆ ನಾವು ಕ್ಷಮಿಸುತ್ತೀವಿ, ನಮ್ಮ ಮನಸ್ಸು ನೋಯಿಸಿದ್ರೂ ಅದನ್ನ ಸಹಿಸಿಕೊಳ್ತೀವಿ. ಸಭೆಲಿರೋ ಎಲ್ರಿಗೂ, ನಮಗೆ ನೋವು ಮಾಡಿದವರಿಗೂ ಅತಿಥಿ ಸತ್ಕಾರ ಮಾಡ್ತೀವಿ. (ಕೊಲೊಸ್ಸೆ 3:12-14 ಓದಿ.) ಈ ತರ ಪ್ರೀತಿ ತೋರಿಸ್ತಾ ನಾವೇ ಸತ್ಯಕ್ರೈಸ್ತರು ಅಂತ ತೋರಿಸಿಕೊಡ್ತೀವಿ.

“ಒಂದೇ ನಂಬಿಕೆ”

15. ನಾವು ಇನ್ನೂ ಯಾವ ವಿಷಯದಲ್ಲಿ ಒಂದನೇ ಶತಮಾನದ ಕ್ರೈಸ್ತರ ತರ ಇದ್ದೀವಿ?

15 ನಾವು ಇನ್ನೂ ಎಷ್ಟೋ ವಿಷಯಗಳಲ್ಲಿ ಒಂದನೇ ಶತಮಾನದ ಕ್ರೈಸ್ತರ ತರಾನೇ ನಡೆದುಕೊಳ್ತೀವಿ. ಉದಾಹರಣೆಗೆ ಅವರ ಕಾಲದಲ್ಲಿ ಇದ್ದ ಹಾಗೆ ನಮ್ಮಲ್ಲಿ ಹಿರಿಯರು, ಸಹಾಯಕ ಸೇವಕರು ಮತ್ತು ಸರ್ಕಿಟ್‌ ಮೇಲ್ವಿಚಾರಕರು ಇದ್ದಾರೆ. (ಫಿಲಿ. 1:1; ತೀತ 1:5) ಲೈಂಗಿಕತೆ ಮತ್ತು ಮದುವೆ ಬಗ್ಗೆ, ರಕ್ತದ ವಿಷಯದಲ್ಲಿ ಮತ್ತು ಯಾರಾದ್ರೂ ಪಶ್ಚಾತ್ತಾಪ ಪಡದೇ ಇದ್ರೆ ಅವರನ್ನ ಏನು ಮಾಡಬೇಕು ಅನ್ನೋ ವಿಷಯದಲ್ಲೂ ಒಂದನೇ ಶತಮಾನದ ಕ್ರೈಸ್ತರು ಏನು ಮಾಡ್ತಾ ಇದ್ರೋ ಅದನ್ನೇ ನಾವು ಪಾಲಿಸ್ತೀವಿ.—ಅ. ಕಾ. 15:28, 29; 1 ಕೊರಿಂ. 5:11-13; 6:9, 10; ಇಬ್ರಿ. 13:4.

16. ಎಫೆಸ 4:4-6 ಈ ವಚನದಿಂದ ನಮಗೇನು ಗೊತ್ತಾಗುತ್ತೆ?

16 ತುಂಬ ಜನರು ತಾವು ಕ್ರೈಸ್ತರು ಅಂತ ಹೇಳಿಕೊಂಡು ಬಂದ್ರೂ ಅವರು ಸತ್ಯಕ್ರೈಸ್ತರಲ್ಲ ಅಂತ ಯೇಸು ಹೇಳಿದ್ರು. (ಮತ್ತಾ. 7:21-23) ಕೊನೇ ದಿನಗಳಲ್ಲಿ ತುಂಬ ಜನ “ದೇವಭಕ್ತಿಯ ವೇಷ ಹಾಕೊಂಡು” ಇರ್ತಾರೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. (2 ತಿಮೊ. 3:1, 5) ಆದ್ರೂ “ಒಂದೇ ನಂಬಿಕೆ” ಅಂದ್ರೆ ದೇವರು ಇಷ್ಟ ಪಡೋ ಒಂದು ಧರ್ಮ ಇರುತ್ತೆ ಅಂತನೂ ಬೈಬಲ್‌ ಸ್ಪಷ್ಟವಾಗಿ ಹೇಳಿದೆ.ಎಫೆಸ 4:4-6 ಓದಿ.

17. ಇವತ್ತು ಯೇಸು ಹೇಳಿಕೊಟ್ಟ ತರ ಯಾರು ಯೆಹೋವ ದೇವರನ್ನ ಆರಾಧನೆ ಮಾಡ್ತಾ ಇದ್ದಾರೆ?

17 ಇಷ್ಟೆಲ್ಲಾ ಆಧಾರಗಳನ್ನು ನೋಡಿದ ಮೇಲೆ ಸತ್ಯ ಧರ್ಮ ಯಾವುದು ಅಂತ ನಿಮಗೆ ಕಂಡುಹಿಡಿಯೋಕೆ ಆಯ್ತಾ? ಒಂದನೇ ಶತಮಾನದ ಕ್ರೈಸ್ತರು ಯೇಸು ಹೇಳಿಕೊಟ್ಟ ತರಾನೇ ಆರಾಧನೆ ಮಾಡಿದ್ರು ಅನ್ನೋದನ್ನ ನಾವು ನೋಡಿದ್ವಿ. ಅದನ್ನ ಇವತ್ತೂ ಪಾಲಿಸ್ತಾ ಇರೋದು ಯೆಹೋವನ ಸಾಕ್ಷಿಗಳು ಮಾತ್ರ. ಯೆಹೋವನ ಜನರಾಗಿದ್ದು, ದೇವರ ಬಗ್ಗೆ ಇರೋ ಸತ್ಯವನ್ನ ತಿಳುಕೊಂಡು, ಅವರು ಮುಂದೆ ಏನೇನು ಮಾಡ್ತಾರೆ ಅಂತ ತಿಳುಕೊಳ್ಳೋದು ಎಂಥ ಸೌಭಾಗ್ಯ ಅಲ್ವಾ? ಹಾಗಾಗಿ ನಾವು ತಿಳುಕೊಂಡಿರೋದೇ ಸತ್ಯ ಅನ್ನೋದರಲ್ಲಿ ಯಾವ ಸಂಶಯನೂ ನಮಗಿಲ್ಲ.

ಗೀತೆ 152 ಯೆಹೋವ ನೀನೇ ಆಶ್ರಯ

^ ಪ್ಯಾರ. 5 ಯೆಹೋವ ದೇವರನ್ನ ಹೇಗೆ ಆರಾಧಿಸಬೇಕು ಅಂತ ಯೇಸು ತೋರಿಸಿಕೊಟ್ಟಿದ್ದಾರೆ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಅದೇ ತರ ಹೇಗೆ ದೇವರನ್ನು ಆರಾಧಿಸಿದ್ರು ಮತ್ತು ಇವತ್ತು ಯೆಹೋವನ ಸಾಕ್ಷಿಗಳು ಅದನ್ನೇ ಪಾಲಿಸ್ತಾ ಇದ್ದಾರೆ ಅನ್ನೋದಕ್ಕೆ ಆಧಾರ ಏನು ಅಂತ ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 9 ಜನವರಿ 1, 2011ರ ಕಾವಲಿನಬುರುಜುವಿನ ಪುಟ 18ರಲ್ಲಿರೋ “ಆದಿ ಕ್ರೈಸ್ತರು ದೇವರ ಹೆಸರನ್ನು ಬಳಸಿದರೋ?” ಅನ್ನೋ ಚೌಕ ನೋಡಿ.

^ ಪ್ಯಾರ. 10 ಉದಾಹರಣೆಗೆ 2008ರಲ್ಲಿ, 16ನೇ ಪೋಪ್‌ ಬೆನೆಡಿಕ್ಟ್‌ ಅವರು ಕ್ಯಾಥೋಲಿಕ್‌ ಚರ್ಚುಗಳಲ್ಲಿ, ಗೀತೆಗಳಲ್ಲಿ, ಪ್ರಾರ್ಥನೆಯಲ್ಲಿ ದೇವರ ಹೆಸರನ್ನು ಹೇಳಲೂಬಾರದು, ಎಲ್ಲೂ ಬಳಸಬಾರದು ಅಂತ ಅಪ್ಪಣೆ ಕೊಟ್ಟಿದ್ರು.

^ ಪ್ಯಾರ. 63 ಚಿತ್ರ ವಿವರಣೆ: ಯೆಹೋವನ ಸಂಘಟನೆ ಬಿಡುಗಡೆ ಮಾಡಿರೋ ಹೊಸ ಲೋಕ ಭಾಷಾಂತರ ಬೈಬಲಲ್ಲಿ ಯೆಹೋವ ದೇವರ ಹೆಸರಿದೆ. ಅದು 200ಕ್ಕೂ ಹೆಚ್ಚು ಭಾಷೆಗಳಲ್ಲಿ ಇರೋದರಿಂದ ಎಲ್ಲಾ ಕಡೆ ಇರೋ ಜನ್ರು ಓದೋಕೆ ಆಗ್ತಿದೆ.