ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 40

ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಏನು?

ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಏನು?

“[ಪಶ್ಚಾತ್ತಾಪ ಪಡಿ ಅಂತ] ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ.”—ಲೂಕ 5:32.

ಗೀತೆ 52 ನಿನ್ನ ಹೃದಯವನ್ನು ಕಾಪಾಡಿಕೋ

ಕಿರುನೋಟ *

1-2. (ಎ) ರಾಜ ಅಹಾಬ ಮತ್ತು ಮನಸ್ಸೆಯ ಮಧ್ಯೆ ಯಾವ ವ್ಯತ್ಯಾಸ ಇತ್ತು? (ಬಿ) ನಾವು ಈ ಲೇಖನದಲ್ಲಿ ಏನು ಕಲಿತೀವಿ?

ಹಿಂದಿನ ಕಾಲದಲ್ಲಿದ್ದ ಇಬ್ಬರು ರಾಜರ ಬಗ್ಗೆ ನೋಡೋಣ. ಒಬ್ಬ ಇಸ್ರಾಯೇಲಿನ ಹತ್ತು ಕುಲಗಳನ್ನ ಆಳುತ್ತಿದ್ದ. ಇನ್ನೊಬ್ಬ ಯೆಹೂದದ ಎರಡು ಕುಲಗಳನ್ನ ಆಳುತ್ತಿದ್ದ. ಅವರಿಬ್ಬರೂ ಬೇರೆಬೇರೆ ಸಮಯದಲ್ಲಿ ಬದುಕಿದ್ರು. ಆ ರಾಜರು ಯೆಹೋವನ ವಿರುದ್ಧ ಪಾಪ ಮಾಡಿದ್ರು. ಅಷ್ಟೇ ಅಲ್ಲ, ಜನರನ್ನ ತಪ್ಪುದಾರಿಗೆ ಎಳೆದ್ರು, ಮೂರ್ತಿ ಪೂಜೆಗಳನ್ನ ಮಾಡಿದ್ರು, ಕೊಲೆಗಳನ್ನ ಮಾಡಿದ್ರು. ಆದ್ರೆ ಅವರಿಬ್ಬರ ಮಧ್ಯೆ ಒಂದು ವ್ಯತ್ಯಾಸ ಇತ್ತು. ಅವರಲ್ಲಿ ಒಬ್ಬ ಸಾಯೋ ತನಕ ಕೆಟ್ಟವನಾಗಿದ್ದ. ಆದ್ರೆ ಇನ್ನೊಬ್ಬ ಪಶ್ಚಾತ್ತಾಪ ಪಟ್ಟು ದೇವರ ಕ್ಷಮೆ ಪಡೆದುಕೊಂಡ. ಅವರು ಯಾರು?

2 ಇಸ್ರಾಯೇಲಿನ ರಾಜ ಅಹಾಬ ಮತ್ತು ಯೆಹೂದದ ರಾಜ ಮನಸ್ಸೆ. ಅವರಿಬ್ಬರಿಂದ ನಾವು ಏನು ಕಲಿತೀವಿ? ಪಶ್ಚಾತ್ತಾಪ ಅಂದ್ರೇನು, ನಾವು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀವಿ ಅಂತ ಹೇಗೆ ತೋರಿಸೋದು ಅಂತ ಕಲಿತೀವಿ. (ಅ. ಕಾ. 17:30; ರೋಮ. 3:23) ಒಂದುವೇಳೆ ನಾವು ಪಾಪ ಮಾಡಿದಾಗ ಯೆಹೋವ ದೇವರ ಕ್ಷಮೆ ಸಿಗಬೇಕಂದ್ರೆ ಇದನ್ನ ನಾವು ತಿಳಿದುಕೊಳ್ಳಬೇಕು. ಮನಸಾರೆ ಪಶ್ಚಾತ್ತಾಪ ಪಡುವುದರ ಬಗ್ಗೆ ಯೇಸು ಏನು ಕಲಿಸಿದ್ದಾರೆ ಅಂತಾನೂ ಈ ಲೇಖನದಲ್ಲಿ ನೋಡೋಣ.

ರಾಜ ಅಹಾಬನಿಂದ ಏನು ಕಲಿಬಹುದು?

3. ಅಹಾಬ ಎಂಥ ರಾಜನಾಗಿದ್ದ?

3 ಅಹಾಬ ಇಸ್ರಾಯೇಲಿನ ಏಳನೇ ರಾಜನಾಗಿದ್ದ. ಅವನು ಸೀದೋನ್‌ ದೇಶದ ರಾಜನ ಮಗಳಾದ ಈಜೆಬೇಲಳನ್ನ ಮದುವೆಯಾದ. ಸೀದೋನ್‌ ಶ್ರೀಮಂತ ದೇಶವಾಗಿತ್ತು. ಆ ಮದುವೆ ಸಂಬಂಧದಿಂದ ಇಸ್ರಾಯೇಲ್‌ ದೇಶಕ್ಕೆ ಸ್ವಲ್ಪ ಸಿರಿಸಂಪತ್ತು ಸಿಕ್ಕಿರಬಹುದು. ಆದ್ರೆ ಈಗಾಗಲೇ ಯೆಹೋವನಿಂದ ದೂರ ಆಗಿದ್ದ ಇಸ್ರಾಯೇಲ್‌ ಜನರನ್ನ ಈ ಸಂಬಂಧ ಇನ್ನೂ ದೂರ ಮಾಡಿಬಿಡ್ತು. ಈಜೆಬೇಲ್‌ ಬಾಳ್‌ ದೇವರನ್ನ ಆರಾಧನೆ ಮಾಡುತ್ತಿದ್ದಳು. ಅವಳು ಅಹಾಬನ ಮೂಲಕ ಇಡೀ ದೇಶದಲ್ಲಿ ಆ ಕೆಟ್ಟ ಧರ್ಮವನ್ನ ಹಬ್ಬಿಸಿಬಿಟ್ಟಳು. ಆ ಧರ್ಮದವರು ಎಷ್ಟು ಕೆಟ್ಟವರಾಗಿದ್ರು ಅಂದ್ರೆ ಅವರು ದೇವರುಗಳನ್ನ ಆರಾಧಿಸೋ ಜಾಗದಲ್ಲಿ ವೇಶ್ಯಾವಾಟಿಕೆ ನಡಿಸ್ತಿದ್ರು, ಮಕ್ಕಳನ್ನ ಬಲಿ ಕೊಡ್ತಿದ್ರು. ಈಜೆಬೇಲ್‌ ರಾಣಿಯಾಗಿದ್ದಾಗ ಯೆಹೋವನ ಪ್ರವಾದಿಗಳ ಪ್ರಾಣಕ್ಕೆ ತುಂಬ ಅಪಾಯ ಇತ್ತು. ಅವಳು ತುಂಬ ಪ್ರವಾದಿಗಳನ್ನ ಕೊಲ್ಲಿಸಿದ್ದಳು. (1 ಅರ. 18:13) ‘ಯೆಹೋವನ ದೃಷ್ಟಿಯಲ್ಲಿ ಅಹಾಬ ಮುಂಚೆ ಇದ್ದ ಎಲ್ರಿಗಿಂತ ತುಂಬ ಕೆಟ್ಟವನಾಗಿದ್ದ.’ (1 ಅರ. 16:30) ಅಹಾಬ ಮತ್ತು ಈಜೆಬೇಲ್‌ ಮಾಡ್ತಿದ್ದ ಎಲ್ಲಾ ಕೆಟ್ಟ ಕೆಲಸಗಳನ್ನ ಯೆಹೋವ ನೋಡ್ತಾ ಇದ್ರು. ಆದ್ರೂ ಕರುಣೆ ತೋರಿಸಿ ಪ್ರವಾದಿ ಎಲೀಯನನ್ನ ಜನರ ಹತ್ರ ಕಳಿಸಿ ‘ತಪ್ಪನ್ನ ತಿದ್ದಿಕೊಳ್ಳಿ, ವಾಪಸ್ಸು ಬನ್ನಿ’ ಅಂತ ಹೇಳಿದ್ರು. ಆದ್ರೆ ಅಹಾಬ ಮತ್ತು ಈಜೆಬೇಲ್‌ ಈ ಮಾತುಗಳನ್ನ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಟ್ರು.

4. (ಎ) ಅಹಾಬನಿಗೆ ಯಾವ ಶಿಕ್ಷೆ ಕೊಡ್ತೀನಿ ಅಂತ ಯೆಹೋವ ಹೇಳಿದ್ರು? (ಬಿ) ಆಗ ಅಹಾಬ ಏನು ಮಾಡಿದ?

4 ಆದ್ರೆ ಯೆಹೋವ ದೇವರು ಇದನ್ನೆಲ್ಲ ತುಂಬ ದಿನ ಸಹಿಸಿಕೊಳ್ಳಲಿಲ್ಲ. ಪ್ರವಾದಿ ಎಲೀಯನನ್ನ ರಾಜ ಅಹಾಬ ಮತ್ತು ಈಜೆಬೇಲ್‌ ಹತ್ರ ಕಳಿಸಿ ಅವರ ಮನೆಯವರಲ್ಲಿ ಯಾರನ್ನೂ ಉಳಿಸಲ್ಲ ಅಂತ ಹೇಳಿಸಿದ್ರು. ಇದನ್ನ ಕೇಳಿದಾಗ ಅಹಾಬನಿಗೆ ಬುದ್ಧಿ ಬಂತು. ಅಹಂಕಾರಿ ಆಗಿದ್ದವನು ದೇವರ “ಮುಂದೆ ತಗ್ಗಿಸಿಕೊಂಡ.”—1 ಅರ. 21:19-29.

ರಾಜ ಅಹಾಬ ಪ್ರವಾದಿಯನ್ನ ಜೈಲಿಗೆ ಹಾಕಿಸಿ ಪಶ್ಚಾತ್ತಾಪ ಪಟ್ಟಿಲ್ಲ ಅಂತ ತೋರಿಸಿಕೊಟ್ಟ (ಪ್ಯಾರ 5-6 ನೋಡಿ) *

5-6. ಅಹಾಬ ಮನಸಾರೆ ಪಶ್ಚಾತ್ತಾಪ ಪಡಲಿಲ್ಲ ಅಂತ ನಾವು ಹೇಗೆ ಹೇಳಬಹುದು?

5 ಆ ಸಮಯದಲ್ಲಿ ಅಹಾಬ ತನ್ನನ್ನ ತಗ್ಗಿಸಿಕೊಂಡ ನಿಜ. ಆದ್ರೆ ಆಮೇಲೆ ತಾನು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ತನ್ನ ನಡತೆಯಲ್ಲಿ ತೋರಿಸಿಕೊಡಲಿಲ್ಲ. ಬಾಳನ ಆರಾಧನೆ ಬಿಡೋಕೆ ಅವನಿಗೆ ಮನಸ್ಸು ಬರಲಿಲ್ಲ ಮತ್ತು ಯೆಹೋವನನ್ನ ಆರಾಧಿಸೋಕೆ ಜನರಿಗೆ ಸಹಾಯ ಮಾಡಲಿಲ್ಲ. ಇದಿಷ್ಟೇ ಅಲ್ಲ, ಅವನು ಮನಸಾರೆ ಪಶ್ಚಾತ್ತಾಪ ಪಡಲಿಲ್ಲ ಅಂತ ಬೇರೆ ವಿಷಯಗಳಿಂದಾನೂ ಗೊತ್ತಾಗುತ್ತೆ.

6 ಅಹಾಬ ಅರಾಮ್ಯರ ವಿರುದ್ಧ ಯುದ್ಧಕ್ಕೆ ಹೋಗುವಾಗ ರಾಜ ಯೆಹೋಷಾಫಾಟನನ್ನ ತನ್ನ ಜೊತೆ ಕರೆದ. ಯೆಹೋಷಾಫಾಟ ಒಳ್ಳೆ ರಾಜನಾಗಿದ್ದ. ಅದಕ್ಕೆ ಅವನು ‘ಯುದ್ಧಕ್ಕೆ ಹೋಗೋ ಮುಂಚೆ ಯೆಹೋವನನ್ನ ಒಂದು ಮಾತು ಕೇಳೋಣ’ ಅಂದ. ಆದ್ರೆ ಅಹಾಬ ‘ಇದನ್ನೆಲ್ಲಾ ಕೇಳಬೇಕಾಗಿಲ್ಲ, ಯಾಕಂದ್ರೆ ಇನ್ನೂ ಒಬ್ಬ ಪ್ರವಾದಿ ಇದ್ದಾನೆ. ಅವನ ಮೂಲಕ ನಾವು ಯೆಹೋವನ ಹತ್ರ ಕೇಳಬಹುದು. ಆದ್ರೆ ನಾನು ಅವನನ್ನ ದ್ವೇಷಿಸ್ತೀನಿ. ಅವನು ಇಲ್ಲಿ ತನಕ ನನ್ನ ಬಗ್ಗೆ ಒಳ್ಳೇ ಭವಿಷ್ಯ ಹೇಳಿದ್ದೇ ಇಲ್ಲ. ಬರೀ ಕೆಟ್ಟದ್ದೇ ಹೇಳ್ತಾನೆ’ ಅಂತ ಹೇಳಿದ. ಮನಸ್ಸಿಲ್ಲದೆ ಇದ್ರೂ, ಇರಲಿ ಅಂತ ಮೀಕಾಯೆಹುವನ್ನ ಒಂದು ಮಾತು ಕೇಳಿದ. ಆಗಲೂ ಪ್ರವಾದಿ, ಅಹಾಬನಿಗೆ ಕೆಟ್ಟದಾಗುತ್ತೆ ಅಂತನೇ ಭವಿಷ್ಯವಾಣಿ ಹೇಳಿದ. ಇಷ್ಟೆಲ್ಲಾ ಕೇಳಿಸಿಕೊಂಡ ಮೇಲೂ ಅಹಾಬ ಪಶ್ಚಾತ್ತಾಪ ಪಡಲಿಲ್ಲ. ಯೆಹೋವ ದೇವರ ಹತ್ರ ಕ್ಷಮೆ ಕೇಳಲೇ ಇಲ್ಲ. ಅಹಂಕಾರದಿಂದ ಆ ಪ್ರವಾದಿಯನ್ನ ಜೈಲಿಗೆ ಹಾಕಿಸಿದ. (1 ಅರ. 22:7-9, 23, 27) ಅಹಾಬ ಮೀಕಾಯೆಹುವಿನ ಬಾಯಿ ಮುಚ್ಚಿಸೋಕೆ ಅವನನ್ನ ಜೈಲಿಗೆ ಹಾಕಿಸಿದ್ರೂ ಭವಿಷ್ಯವಾಣಿ ನಿಜ ಆಗೋದನ್ನ ಅವನಿಂದ ತಡಿಯೋಕೆ ಆಗಿಲ್ಲ. ಭವಿಷ್ಯವಾಣಿಯಲ್ಲಿ ಹೇಳಿದ ಹಾಗೆ ಯುದ್ಧದಲ್ಲಿ ಅಹಾಬ ಸತ್ತುಹೋದ.—1 ಅರ. 22:34-38.

7. ಅಹಾಬ ಸತ್ತಮೇಲೆ ಯೆಹೋವ ದೇವರು ಅವನ ಬಗ್ಗೆ ಏನು ಹೇಳಿದ್ರು?

7 ಅಹಾಬ ಸತ್ತ ಮೇಲೆ ಯೆಹೋವ ದೇವರು ಅವನ ಬಗ್ಗೆ ಏನು ಹೇಳಿದ್ರು? ಒಳ್ಳೇ ರಾಜನಾಗಿದ್ದ ಯೆಹೋಷಾಫಾಟ ಯುದ್ಧದಿಂದ ಮನೆಗೆ ಬಂದ ಮೇಲೆ ಯೆಹೋವ ದೇವರು ಯೇಹುವನ್ನ ಅವನ ಹತ್ರ ಕಳಿಸಿ “ಕೆಟ್ಟವನಿಗೆ ಸಹಾಯ ಮಾಡೋದು ಸರಿನಾ? ಯೆಹೋವನನ್ನ ದ್ವೇಷಿಸೋ ವ್ಯಕ್ತಿನ ಪ್ರೀತಿಸೋದು ಸರಿನಾ?” ಅಂತ ಕೇಳಿದ್ರು. (2 ಪೂರ್ವ. 19:1, 2ಬಿ) ಅಹಾಬ ಮನಸಾರೆ ಪಶ್ಚಾತ್ತಾಪ ಪಟ್ಟಿದ್ರೆ ಯೆಹೋವ ದೇವರು ಅವನನ್ನ ಕೆಟ್ಟವನು, ನನ್ನನ್ನ ದ್ವೇಷಿಸೋ ವ್ಯಕ್ತಿ ಅಂತೆಲ್ಲಾ ಕರೆಯುತ್ತಿದ್ರಾ? ಅಹಾಬನಿಗೆ ತಾನು ಮಾಡಿದ್ದು ತಪ್ಪು ಅಂತ ಅರ್ಥ ಆಯ್ತು. ಆದ್ರೆ ಅವನು ಪಶ್ಚಾತ್ತಾಪ ಪಡಲಿಲ್ಲ ಅಂತ ಇದ್ರಿಂದ ಗೊತ್ತಾಗುತ್ತೆ.

8. ಅಹಾಬನಿಂದ ನಾವೇನು ಕಲಿಯಬಹುದು?

8 ಅಹಾಬನಿಂದ ನಾವೇನು ಕಲಿತೀವಿ? ನಾವೇನಾದ್ರು ತಪ್ಪು ಮಾಡಿದ್ರೆ ‘ಅಯ್ಯೋ, ತಪ್ಪು ಮಾಡಿಬಿಟ್ಟೆ’ ಅಂತ ಬೇಜಾರು ಮಾಡಿಕೊಂಡ್ರೆ ಮಾತ್ರ ಸಾಕಾಗಲ್ಲ. ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀವಿ ಅಂತ ತೋರಿಸೋಕೆ ಇನ್ನೂ ಕೆಲವು ವಿಷಯಗಳನ್ನ ಮಾಡಬೇಕು. ಅದೇನು ಅಂತ ರಾಜ ಮನಸ್ಸೆಯಿಂದ ಕಲಿಯೋಣ.

ರಾಜ ಮನಸ್ಸೆಯಿಂದ ಏನು ಕಲಿಬಹುದು?

9. ಮನಸ್ಸೆ ಎಂಥ ರಾಜನಾಗಿದ್ದ?

9 ಇನ್ನೂರು ವರ್ಷಗಳ ನಂತರ ಮನಸ್ಸೆ ಯೆಹೂದದ ರಾಜನಾದ. ಅವನು ಅಹಾಬನಿಗಿಂತ ಕೆಟ್ಟವನಾಗಿದ್ದ! ಕೆಟ್ಟದ್ದನ್ನು “ಮಾಡೋದ್ರಲ್ಲಿ ಎಲ್ಲೆಮೀರಿ ಹೋಗಿ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡಿ ಆತನಿಗೆ ತುಂಬ ಕೋಪ ಬರಿಸಿದ” ಅಂತ ಬೈಬಲ್‌ ಹೇಳುತ್ತೆ. (2 ಪೂರ್ವ. 33:1-9) ಮನಸ್ಸೆ ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನ ಕಟ್ಟಿಸಿದ. ಅಷ್ಟೇ ಅಲ್ಲ, ಅವನು ಒಂದು ಪೂಜಾಕಂಬ ಮಾಡಿ ಅದನ್ನ ಯೆಹೋವನ ಆಲಯದ ಒಳಗೇ ತಂದಿಟ್ಟ! ಆ ಕಂಬ ಸಂತಾನೋತ್ಪತ್ತಿ ದೇವತೆಯ ಮೂರ್ತಿ ಆಗಿರಬಹುದು. ಅವನು ಮಾಟಮಂತ್ರ ಮಾಡುತ್ತಿದ್ದ, ಕಣಿ ಹೇಳುತ್ತಿದ್ದ. ಅಷ್ಟೇ ಅಲ್ಲ, ‘ನಿರಪರಾಧಿಗಳ ರಕ್ತವನ್ನ ದೊಡ್ಡ ಪ್ರಮಾಣದಲ್ಲಿ ಸುರಿಸಿದ.’ ಅವನು ಸುಳ್ಳು ದೇವರುಗಳಿಗೆ “ತನ್ನ ಸ್ವಂತ ಮಕ್ಕಳನ್ನ . . . ಬೆಂಕಿಯಲ್ಲಿ ಬಲಿ ಕೊಟ್ಟ.”—2 ಅರ. 21:6, 7, 10, 11, 16.

10. (ಎ) ಮನಸ್ಸೆಯನ್ನ ತಿದ್ದೋಕೆ ಯೆಹೋವ ದೇವರು ಏನು ಮಾಡಿದ್ರು? (ಬಿ) ಆಗ ಮನಸ್ಸೆ ಏನು ಮಾಡಿದ?

10 ಅಹಾಬನ ತರ ಮನಸ್ಸೆ ಕೂಡ ಯೆಹೋವ ದೇವರು ಕೊಟ್ಟ ಎಚ್ಚರಿಕೆಗಳನ್ನ ಕಿವಿಗೇ ಹಾಕಿಕೊಳ್ಳಲಿಲ್ಲ. “ಹಾಗಾಗಿ ಯೆಹೋವ ಅಶ್ಶೂರ್ಯರ ರಾಜನ ಸೇನಾಪತಿಗಳನ್ನ ಅವ್ರ [ಯೆಹೂದದ] ವಿರುದ್ಧ ಬರೋ ತರ ಮಾಡಿದ. ಅವರು ಮನಸ್ಸೆಯನ್ನ ಕೊಕ್ಕೆಗಳಿಂದ ಬಂಧಿಸಿ, ಅವನಿಗೆ ಬೇಡಿಹಾಕಿ ಬಾಬೆಲಿಗೆ ಕರ್ಕೊಂಡು ಹೋದ್ರು.” ಆಮೇಲೆ ಅವನಿಗೆ ತಾನೆಷ್ಟು ತಪ್ಪು ಮಾಡಿದ್ದೀನಿ ಅಂತ ಅರ್ಥ ಆಯ್ತು. “ತನ್ನ ಪೂರ್ವಜರ ದೇವರ ಮುಂದೆ ತನ್ನನ್ನೇ ತುಂಬ ತಗ್ಗಿಸಿಕೊಂಡ.” “ಸಹಾಯಕ್ಕಾಗಿ ಯೆಹೋವನ ಹತ್ರ ಬೇಡ್ಕೊಂಡ” “ಅವನು ದೇವರಿಗೆ ಪ್ರಾರ್ಥಿಸುತ್ತಾ ಇದ್ದ.” ಮನಸ್ಸೆ ಒಳ್ಳೆಯವನಾಗೋಕೆ ಮನಸ್ಸು ಮಾಡಿದ.—2 ಪೂರ್ವ. 33:10-13.

ರಾಜ ಮನಸ್ಸೆ ಸುಳ್ಳಾರಾಧನೆಯನ್ನ ತೆಗೆದುಹಾಕಿ ಪಶ್ಚಾತ್ತಾಪ ಪಟ್ಟ ಅಂತ ತೋರಿಸಿಕೊಟ್ಟ (ಪ್ಯಾರ 11 ನೋಡಿ) *

11. ಮನಸ್ಸೆ ಮನಸಾರೆ ಪಶ್ಚಾತ್ತಾಪ ಪಟ್ಟ ಅಂತ 2 ಪೂರ್ವಕಾಲವೃತ್ತಾಂತ 33:15, 16ರಿಂದ ಹೇಗೆ ಗೊತ್ತಾಗುತ್ತೆ?

11 ಮನಸ್ಸೆ ಪ್ರಾರ್ಥನೆ ಮಾಡ್ತಿದ್ದಾಗ ಅವನ ಮನಸ್ಸು ಬದಲಾಗ್ತಾ ಇರೋದನ್ನ ಯೆಹೋವ ದೇವರು ನೋಡಿದ್ರು. ಅದಕ್ಕೆ ಅವನನ್ನ ಕ್ಷಮಿಸಿದ್ರು, ಸ್ವಲ್ಪ ಸಮಯ ಆದಮೇಲೆ ಅವನ ಅಧಿಕಾರನ ವಾಪಸ್‌ ಕೊಟ್ರು. ಅವನು ರಾಜ ಆದಮೇಲೆ ತಾನು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ತೋರಿಸಿಕೊಟ್ಟ, ಒಳ್ಳೆಯವನಾದ. ಆಹಾಬ ಏನನ್ನ ಮಾಡೋಕೆ ತಪ್ಪಿ ಹೋದನೋ ಅದನ್ನ ಇವನು ಮಾಡಿದ. ಸುಳ್ಳು ದೇವರುಗಳನ್ನ ಆರಾಧನೆ ಮಾಡೋದನ್ನ ಬಿಟ್ಟುಬಿಟ್ಟ. ಯೆಹೋವ ದೇವರ ಆರಾಧನೆ ಮಾಡೋಕೆ ಜನರಿಗೆ ಪ್ರೋತ್ಸಾಹ ಕೊಟ್ಟ. (2 ಪೂರ್ವಕಾಲವೃತ್ತಾಂತ 33:15, 16 ಓದಿ.) ಇದನ್ನ ಮಾಡೋದು ಮನಸ್ಸೆಗೆ ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಅವನೇ ತನ್ನ ಕುಟುಂಬದವರನ್ನ, ಪ್ರಜೆಗಳನ್ನ, ಪ್ರಧಾನರನ್ನ ತಪ್ಪುದಾರಿಗೆ ಎಳೆದುಬಿಟ್ಟಿದ್ದ. ಇಷ್ಟು ವರ್ಷಗಳಿಂದ ಹೀಗಿದ್ದ ಜನರನ್ನ ಸರಿದಾರಿಗೆ ತರೋಕೆ ಅವನಿಗೆ ತುಂಬ ಧೈರ್ಯ ಮತ್ತು ನಂಬಿಕೆ ಬೇಕಿತ್ತು. ಅವನಿಗೆ ವಯಸ್ಸಾಗಿದ್ರೂ ತನ್ನ ತಪ್ಪುಗಳನ್ನ ತಿದ್ದೋಕೆ ಹೆಜ್ಜೆ ತಗೊಂಡ. ಇದು ಅವನ ಮೊಮ್ಮಗನಾದ ಯೋಷೀಯನ ಮೇಲೆ ಒಳ್ಳೇ ಪ್ರಭಾವ ಬೀರಿರಬೇಕು. ಯೋಷೀಯನೂ ಮುಂದೆ ಒಳ್ಳೇ ರಾಜನಾದ.—2 ಅರ. 22:1, 2.

12. ಮನಸ್ಸೆಯಿಂದ ನಾವೇನು ಕಲಿಬಹುದು?

12 ಮನಸ್ಸೆಯಿಂದ ನಾವು ಏನು ಕಲಿಬಹುದು? ಅವನು ದೇವರ ಮುಂದೆ ತನ್ನನ್ನ ತಗ್ಗಿಸಿಕೊಂಡ. ಅಷ್ಟೇ ಅಲ್ಲ, ಇನ್ನೂ ಕೆಲವು ವಿಷಯಗಳನ್ನ ಮಾಡಿದ. ದೇವರ ಹತ್ರ ‘ಕರುಣೆ ತೋರಿಸಪ್ಪಾ’ ಅಂತ ಬೇಡಿಕೊಂಡ. ಅವನು ಒಳ್ಳೆಯವನಾದ. ತಾನು ಮಾಡಿದ ಕೆಲಸಗಳಿಂದ ಆದ ನಷ್ಟವನ್ನ ಸರಿಮಾಡೋಕೆ ತನ್ನ ಕೈಯಿಂದ ಆಗಿದ್ದೆಲ್ಲಾ ಮಾಡಿದ. ಅವನೂ ಯೆಹೋವ ದೇವರನ್ನ ಆರಾಧಿಸಿದ, ಜನರಿಗೂ ಅದನ್ನೇ ಮಾಡೋಕೆ ಹೇಳಿದ. ತುಂಬ ಕೆಟ್ಟ ಕೆಲಸ ಮಾಡಿರೋರನ್ನ, ದೊಡ್ಡ-ದೊಡ್ಡ ಪಾಪ ಮಾಡಿರೋರನ್ನೂ, ಯೆಹೋವ ದೇವರು ಕ್ಷಮಿಸ್ತಾರೆ. ಯಾಕಂದ್ರೆ ‘ಯೆಹೋವ ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿರೋ’ ದೇವರು. (ಕೀರ್ತ. 86:5) ಆದ್ರೆ ಯಾರು ಮನಸಾರೆ ಪಶ್ಚಾತ್ತಾಪ ಪಡ್ತಾರೋ ಅವರಿಗೆ ಮಾತ್ರ ಯೆಹೋವನ ಕ್ಷಮೆ ಸಿಗೋದು ಅಂತ ಮನಸ್ಸೆಯ ಉದಾಹರಣೆಯಿಂದ ಗೊತ್ತಾಗುತ್ತೆ.

13. ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೇನು? ವಿವರಿಸಿ.

13 ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಮಾಡಿದ ತಪ್ಪಿಗೆ ಬರೀ ಬೇಜಾರು ಮಾಡಿಕೊಳ್ಳೋದಲ್ಲ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ನೀವು ಬೇಕರಿಗೆ ಹೋಗಿ ‘ಒಂದು ಪ್ಯಾಕೆಟ್‌ ಬ್ರೆಡ್‌ ಕೊಡಿ’ ಅಂತ ಕೇಳ್ತೀರಿ. ಅಂಗಡಿಯವನು ಒಂದು ಪ್ಯಾಕೆಟ್‌ ಹಿಟ್ಟು ಕೊಡ್ತಾನೆ. ‘ಹಿಟ್ಟಲ್ಲ ಬ್ರೆಡ್ಡೇ ಬೇಕು’ ಅಂತ ಹೇಳ್ತೀರಿ. ಆಗ ಅಂಗಡಿಯವನು ‘ಈ ಹಿಟ್ಟಿಂದಾನೇ ಬ್ರೆಡ್‌ ಮಾಡೋದು’ ಅಂತ ಹೇಳ್ತಾನೆ. ಆಗ ನೀವು ಆ ಹಿಟ್ಟು ತಗೊಂಡು ಮನೆಗೆ ಬಂದುಬಿಡಲ್ಲ. ಅದೇ ತರ ಯೆಹೋವ ದೇವರು ಪಾಪಿಗಳಿಗೆ ‘ಮನಸಾರೆ ಪಶ್ಚಾತ್ತಾಪ ಪಡಿ’ ಅಂತ ಹೇಳ್ತಾರೆ. ಹಾಗಾಗಿ ಪಾಪ ಮಾಡಿದವರು ಮಾಡಿದ ತಪ್ಪಿಗೆ ಬೇಜಾರು ಮಾಡಿಕೊಳ್ಳೋದು ತುಂಬ ಮುಖ್ಯ. ಆದ್ರೆ ಅದು ಪೂರ್ತಿ ಪಶ್ಚಾತ್ತಾಪ ಆಗಲ್ಲ, ಅದು ಬರೀ ಹಿಟ್ಟು ಕೊಟ್ಟ ಹಾಗಿರುತ್ತೆ. ಅವರು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀವಿ ಅಂತ ತೋರಿಸಿಕೊಡೋಕೆ ಇನ್ನೂ ಕೆಲವು ವಿಷಯಗಳನ್ನ ಮಾಡಬೇಕು. ಅದನ್ನ ಯೇಸು ಹೇಳಿದ ಕಥೆಯಲ್ಲಿ ನೋಡೋಣ.

ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾರಾ ಅಂತ ಕಂಡುಹಿಡಿಯೋದು ಹೇಗೆ?

ಮನೆಬಿಟ್ಟು ಹೋದ ಮಗನಿಗೆ ಬುದ್ಧಿ ಬಂದ ಮೇಲೆ ವಾಪಸ್‌ ಬಂದ (ಪ್ಯಾರ 14-15 ನೋಡಿ) *

14. ಮನೆಬಿಟ್ಟು ಹೋದ ಮಗನಿಗೆ ಪಶ್ಚಾತ್ತಾಪ ಪಡೋ ಮನಸ್ಸಿತ್ತು ಅಂತ ಹೇಗೆ ಹೇಳಬಹುದು?

14 ಯೇಸು ಲೂಕ 15:11-32ರಲ್ಲಿ ಮನೆಬಿಟ್ಟು ಹೋದ ಮಗನ ಕಥೆ ಹೇಳಿದ್ದಾರೆ. ಆ ಮಗ ಅಪ್ಪನ ಮಾತಿಗೆ ವಿರುದ್ಧವಾಗಿ “ದೂರದೇಶಕ್ಕೆ” ಹೋಗಿಬಿಟ್ಟ. ಅಲ್ಲಿ ಅವನು ಚೆನ್ನಾಗಿ ಮಜಾ ಮಾಡಿದ. ಆದ್ರೆ ಕಷ್ಟ ಬಂದಾಗ ಅವನಿಗೆ ಅಪ್ಪನ ಜೊತೆ ಇದ್ದಾಗಲೇ ಜೀವನ ಚೆನ್ನಾಗಿತ್ತು ಅಂತ ಅರ್ಥ ಆಯ್ತು. ಯೇಸು ಹೇಳಿದ ಹಾಗೆ ಆಗ “ಅವನಿಗೆ ಬುದ್ಧಿ ಬಂತು.” ‘ನಾನು ಅಪ್ಪನ ಹತ್ರ ವಾಪಸ್ಸು ಹೋಗ್ತೀನಿ, ಅವರ ಹತ್ರ ಕ್ಷಮೆ ಕೇಳ್ತೀನಿ’ ಅಂತ ತೀರ್ಮಾನ ಮಾಡಿದ. ಅವನು ತನ್ನ ತಪ್ಪನ್ನ ಅರ್ಥಮಾಡಿಕೊಂಡಿದ್ದು ಚಿಕ್ಕ ವಿಷಯ ಅಲ್ಲ, ದೊಡ್ಡ ವಿಷಯನೇ. ಇಷ್ಟೆ ಸಾಕಾ? ಇಲ್ಲ. ಅವನು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನೆ ಅಂತ ತನ್ನ ನಡತೆಯಲ್ಲಿ ತೋರಿಸಬೇಕು!

15. ಮನೆಬಿಟ್ಟು ಹೋದ ಮಗ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ಹೇಗೆ ತೋರಿಸಿಕೊಟ್ಟ?

15 ಮನೆಬಿಟ್ಟು ಹೋದ ಮಗ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀನಿ ಅಂತ ತನ್ನ ನಡತೆಯಲ್ಲಿ ತೋರಿಸ್ತಾನೆ. ಅವನು ಅಷ್ಟು ದೂರದಿಂದ ವಾಪಸ್ಸು ಮನೆಗೆ ಬಂದ. ಅವನು ಅಪ್ಪನಿಗೆ “ಅಪ್ಪಾ, ನಾನು ದೇವರ ವಿರುದ್ಧ, ನಿನ್ನ ವಿರುದ್ಧ ತಪ್ಪು ಮಾಡಿಬಿಟ್ಟೆ. ನಿನ್ನ ಮಗ ಅಂತ ಹೇಳಕ್ಕೂ ನಂಗೆ ಯೋಗ್ಯತೆ ಇಲ್ಲ” ಅಂತ ಹೇಳಿದ. (ಲೂಕ 15:21) ಅವನು ದೇವರ ವಿರುದ್ಧ ತಪ್ಪು ಮಾಡಿದ್ದೀನಿ ಅಂತ ಮನಸಾರೆ ಒಪ್ಪಿಕೊಂಡ. ಇದ್ರಿಂದ ಯೆಹೋವನ ಜೊತೆ ಹಾಳಾಗಿರೋ ಸಂಬಂಧ ಸರಿಮಾಡೋಕೆ ಅವನಿಗೆ ಆಸೆ ಇತ್ತು ಅಂತ ಗೊತ್ತಾಗುತ್ತೆ. ತನ್ನಿಂದ ಅಪ್ಪನಿಗೂ ನೋವಾಗಿದೆ ಅಂತ ಅವನಿಗೆ ಅರ್ಥ ಆಯ್ತು. ಅಪ್ಪನ ಮೆಚ್ಚಿಗೆ ಗಳಿಸೋಕೆ ಕೂಲಿ ಆಳುಗಳಲ್ಲಿ ಒಬ್ಬನಾಗಿ ಕೆಲಸ ಮಾಡಕ್ಕೂ ಅವನು ರೆಡಿ ಇದ್ದ. (ಲೂಕ 15:19) ಈ ಕಥೆ ಹಿರಿಯರಿಗೆ ತುಂಬ ಸಹಾಯ ಮಾಡುತ್ತೆ. ಸಭೆಯಲ್ಲಿ ಯಾರಾದ್ರೂ ಪಾಪ ಮಾಡಿದ್ರೆ ಅವರು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾರಾ ಇಲ್ವಾ ಅನ್ನೋದನ್ನ ಕಂಡುಹಿಡಿಯೋದು ಹೇಗೆ ಅಂತ ಈ ಕಥೆಯಿಂದ ತಿಳಿದುಕೊಳ್ತಾರೆ.

16. ಒಬ್ಬ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನಾ ಇಲ್ವಾ ಅಂತ ಕಂಡುಹಿಡಿಯೋಕೆ ಹಿರಿಯರಿಗೆ ಯಾಕೆ ಕಷ್ಟ ಆಗಬಹುದು?

16 ಒಬ್ಬ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನಾ ಇಲ್ವಾ ಅಂತ ಕಂಡುಹಿಡಿಯೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಹಿರಿಯರಿಗೆ ಅವರ ಮನಸ್ಸನ್ನ ಓದೋಕೆ ಆಗಲ್ಲ. ಅದಕ್ಕೆ ಆ ವ್ಯಕ್ತಿ ಹೇಗೆ ನಡಕೊಳ್ತಿದ್ದಾನೆ ಅಂತ ನೋಡಿ ತಿಳಿದುಕೊಳ್ಳಬೇಕಾಗುತ್ತೆ. ಒಬ್ಬ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನೆ ಅಂತ ನಂಬೋಕೆ ಹಿರಿಯರಿಗೆ ಕೆಲವೊಮ್ಮೆ ಕಷ್ಟ ಆಗಬಹುದು. ಯಾಕಂದ್ರೆ ಆ ವ್ಯಕ್ತಿ ಅಂಥ ದೊಡ್ಡ ಪಾಪ ಮಾಡಿರುತ್ತಾನೆ.

17. (ಎ) ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಬೇಜಾರು ಮಾಡಿಕೊಂಡ್ರೆ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನೆ ಅಂತ ಅರ್ಥನಾ? ವಿವರಿಸಿ. (ಬಿ) ಎರಡನೇ ಕೊರಿಂಥ 7:11ರ ಪ್ರಕಾರ ಒಬ್ಬ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ರೆ ಏನು ಮಾಡ್ತಾನೆ?

17 ಒಂದು ಉದಾಹರಣೆ ನೋಡಿ. ಒಬ್ಬ ಸಹೋದರ ತುಂಬ ವರ್ಷಗಳಿಂದ ವ್ಯಭಿಚಾರ ಮಾಡ್ತಾ ಇದ್ದಾನೆ. ಅದನ್ನ ತನ್ನ ಹೆಂಡತಿಯಿಂದ, ಸ್ನೇಹಿತರಿಂದ ಮತ್ತು ಹಿರಿಯರಿಂದ ಮುಚ್ಚಿಡುತ್ತಾನೆ. ಕೊನೆಗೆ ಒಂದು ದಿನ ಹಿರಿಯರಿಗೆ ಅದು ಗೊತ್ತಾಗುತ್ತೆ, ಸಾಕ್ಷಿನೂ ಸಿಗುತ್ತೆ. ಈ ವಿಷಯ ಹಿರಿಯರಿಗೆ ಗೊತ್ತಾಗಿದೆ ಅಂತ ಗೊತ್ತಾದ ತಕ್ಷಣ ಆ ಸಹೋದರ ತಾನು ಮಾಡಿದ್ದು ತಪ್ಪು ಅಂತ ಒಪ್ಪಿಕೊಳ್ತಾನೆ, ಮಾಡಿದ ತಪ್ಪಿಗೆ ಬೇಜಾರೂ ಮಾಡಿಕೊಳ್ತಾನೆ. ಇದರ ಅರ್ಥ ಅವನು ಮನಸಾರೆ ಪಶ್ಚಾತ್ತಾಪ ಪಟ್ಟ ಅಂತನಾ? ಇಲ್ಲ. ಹಿರಿಯರು ಇನ್ನೂ ಕೆಲವು ವಿಷಯಗಳಿಗೆ ಗಮನ ಕೊಡಬೇಕಾಗುತ್ತೆ. ಅದೇನಂದ್ರೆ ಈ ಸಹೋದರ ತಪ್ಪನ್ನ ಬರೀ ಒಂದ್ಸಲ ಮಾಡಿಲ್ಲ, ವರ್ಷಗಳಿಂದ ಮಾಡ್ತಾ ಬಂದಿದ್ದಾನೆ. ಅವನೇ ಮುಂದೆ ಬಂದು ಆ ತಪ್ಪನ್ನ ಒಪ್ಪಿಕೊಳ್ಳಲಿಲ್ಲ, ಬೇರೆಯವರು ಕಂಡುಹಿಡಿದ್ರು. ಹಾಗಾಗಿ ಹಿರಿಯರು ಆ ಸಹೋದರನ ಮನಸ್ಸು ಮತ್ತು ನಡತೆಯಲ್ಲಿ ಬದಲಾವಣೆಗಳು ಆಗ್ತಾ ಇದೆಯಾ ಅಂತ ಗಮನಿಸಬೇಕು. (2 ಕೊರಿಂಥ 7:11 ಓದಿ.) ಬದಲಾವಣೆಗಳನ್ನ ಮಾಡೋಕೆ ಆ ಸಹೋದರನಿಗೆ ಸ್ವಲ್ಪ ಸಮಯ ಹಿಡಿಯಬಹುದು. ಅಲ್ಲಿ ತನಕ ಅವನನ್ನ ಸಭೆಯಿಂದ ಬಹಿಷ್ಕಾರ ಮಾಡಬೇಕಾಗಿ ಬರಬಹುದು.—1 ಕೊರಿಂ. 5:11-13; 6:9, 10.

18. (ಎ) ಬಹಿಷ್ಕಾರ ಆದ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನೆ ಅಂತ ಹೇಗೆ ತೋರಿಸಿಕೊಡ್ತಾನೆ? (ಬಿ) ಪಾಪ ಮಾಡಿರೋ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ರೆ ಏನಾಗುತ್ತೆ?

18 ಬಹಿಷ್ಕಾರ ಆದ ವ್ಯಕ್ತಿ ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಾನೆ ಅಂತ ಹೇಗೆ ತೋರಿಸಿಕೊಡ್ತಾನೆ? ಹಿರಿಯರು ಸಲಹೆ ಕೊಟ್ಟ ಪ್ರಕಾರನೇ ಅವನು ತಪ್ಪದೆ ಪ್ರಾರ್ಥನೆ ಮಾಡ್ತಾನೆ, ಬೈಬಲ್‌ ಓದುತ್ತಾನೆ, ಕೂಟಗಳಿಗೆ ಬರ್ತಾನೆ, ಅವನನ್ನ ಅದೇ ತಪ್ಪಿಗೆ ನಡೆಸೋ ವಿಷಯಗಳಿಂದ ದೂರ ಇರೋಕೆ ತುಂಬ ಪ್ರಯತ್ನ ಮಾಡ್ತಾನೆ. ಹೀಗೆ ಅವನು ಯೆಹೋವ ದೇವರ ಜೊತೆ ಇದ್ದ ಸಂಬಂಧನ ಸರಿಮಾಡೋಕೆ ತನ್ನ ಕೈಲಾಗಿದ್ದೆಲ್ಲಾ ಮಾಡುವಾಗ ದೇವರು ಅವನನ್ನ ಖಂಡಿತ ಕ್ಷಮಿಸ್ತಾರೆ ಮತ್ತು ಹಿರಿಯರು ಸಭೆಗೆ ಪುನಃ ಸೇರಿಸಿಕೊಳ್ತಾರೆ. ತಪ್ಪು ಮಾಡಿದವರಲ್ಲಿ ಒಬ್ಬೊಬ್ಬರ ಸನ್ನಿವೇಶ ಒಂದೊಂದು ತರ ಇರುತ್ತೆ ಅನ್ನೋದನ್ನ ಹಿರಿಯರು ಮನಸ್ಸಲ್ಲಿ ಇಡ್ತಾರೆ. ಹಾಗಾಗಿ ಪ್ರತಿಯೊಂದು ವಿಷಯವನ್ನೂ ಪರೀಕ್ಷಿಸಿ ನೋಡ್ತಾರೆ, ದುಡುಕಿ ತೀರ್ಮಾನ ಮಾಡಲ್ಲ.

19. ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೇನು? (ಯೆಹೆಜ್ಕೇಲ 33:14-16)

19 ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಪಾಪ ಮಾಡಿರೋ ವ್ಯಕ್ತಿ ತಾನು ತಪ್ಪು ಮಾಡಿದ್ದೀನಿ ಅಂತ ಬೇಜಾರು ಮಾಡಿಕೊಳ್ಳೋದು ಮಾತ್ರ ಅಲ್ಲ, ತನ್ನ ಯೋಚನೆಯಲ್ಲಿ, ನಡತೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದೀನಿ ಅಂತನೂ ತೋರಿಸಿಕೊಡಬೇಕು. ಅಂದ್ರೆ ಅವನ ತಪ್ಪು ಮಾಡೋದನ್ನ ಬಿಟ್ಟು ಯೆಹೋವ ದೇವರ ಮಾತನ್ನ ಪಾಲಿಸಬೇಕು. (ಯೆಹೆಜ್ಕೇಲ 33:14-16 ಓದಿ.) ಯೆಹೋವನ ಜೊತೆ ಸಂಬಂಧ ಸರಿಮಾಡಿಕೊಳ್ಳಬೇಕು ಅನ್ನೋದೇ ಅವನ ಗುರಿ ಆಗಿರಬೇಕು.

ಪಶ್ಚಾತ್ತಾಪ ಪಡೋಕೆ ಸಹಾಯಮಾಡಿ

20-21. ಒಬ್ಬ ವ್ಯಕ್ತಿ ದೊಡ್ಡ ಪಾಪ ಮಾಡಿದ್ರೆ ಅವನಿಗೆ ಹೇಗೆ ಸಹಾಯ ಮಾಡಬಹುದು?

20 ಯೇಸು ಸಿಹಿಸುದ್ದಿ ಸಾರೋಕೆ ಮಾತ್ರ ಅಲ್ಲ, ಇನ್ನೊಂದು ಕೆಲಸ ಮಾಡೋಕೂ ಭೂಮಿಗೆ ಬಂದ್ರು. ಅದರ ಬಗ್ಗೆ ಯೇಸು ಹೇಳಿದ್ದು “[ಪಶ್ಚಾತ್ತಾಪ ಪಡಿ ಅಂತ] ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ.” (ಲೂಕ 5:32) ಪಾಪ ಮಾಡಿದವರಿಗೆ ಪಶ್ಚಾತ್ತಾಪ ಪಡೋಕೆ ಯೇಸು ತರಾನೇ ನಾವೂ ಸಹಾಯ ಮಾಡಬೇಕು. ನಮ್ಮ ಸ್ನೇಹಿತರೊಬ್ಬರು ಪಾಪ ಮಾಡಿದ್ದಾರೆ ಅಂತ ಗೊತ್ತಾದ್ರೆ ನಾವೇನು ಮಾಡಬೇಕು?

21 ನಾವು ಆ ಸ್ನೇಹಿತನ ತಪ್ಪನ್ನ ಮುಚ್ಚಿಹಾಕೋಕೆ ಪ್ರಯತ್ನ ಮಾಡಿದಷ್ಟು ಅವರಿಗೆ ತೊಂದ್ರೆನೇ ಜಾಸ್ತಿ. ನಾವು ಆ ತರ ಮುಚ್ಚಿಡಕ್ಕೂ ಆಗಲ್ಲ, ಯಾಕಂದ್ರೆ ಯೆಹೋವ ದೇವರು ಎಲ್ಲಾನೂ ನೋಡ್ತಿದ್ದಾರೆ. (ಜ್ಞಾನೋ. 5:21, 22; 28:13) ಹಿರಿಯರ ಹತ್ರ ಹೋಗಿ ಮಾತಾಡೋಕೆ ನಿಮ್ಮ ಫ್ರೆಂಡ್‌ಗೆ ಹೇಳಬೇಕು. ಅವರು ಅದಕ್ಕೆ ಒಪ್ಪಲಿಲ್ಲ ಅಂದ್ರೆ ನೀವೇ ಹೋಗಿ ಹಿರಿಯರ ಹತ್ರ ಆ ವಿಷಯನ ತಿಳಿಸಬೇಕು. ಆಗ ಅವರು ಹಿರಿಯರ ಸಹಾಯ ಪಡ್ಕೊಂಡು ಪಶ್ಚಾತ್ತಾಪ ಪಡೋಕಾಗುತ್ತೆ. ಯೆಹೋವ ದೇವರ ಜೊತೆ ಸಂಬಂಧ ಸರಿಮಾಡಿಕೊಳ್ಳೋಕೆ ಆಗುತ್ತೆ. ಹೀಗೆ ಮಾಡಿದಾಗ ನಿಮ್ಮ ಸ್ನೇಹಿತನಿಗೆ ನೀವು ಸಹಾಯ ಮಾಡಿದ ಹಾಗೆ ಆಗುತ್ತೆ.

22. ಮುಂದಿನ ಲೇಖನದಲ್ಲಿ ಏನು ಕಲಿತೀವಿ?

22 ತುಂಬ ವರ್ಷಗಳಿಂದ ಪಾಪ ಮಾಡ್ತಾ ಇರೋರನ್ನ ಬಹಿಷ್ಕಾರ ಮಾಡಿದ್ರೆ ಹಿರಿಯರು ಅವರಿಗೆ ಕರುಣೆ ತೋರಿಸಿಲ್ಲ ಅಂತ ಅರ್ಥನಾ? ಪಾಪ ಮಾಡಿದವರ ಮೇಲೆ ಶಿಸ್ತು ಕ್ರಮ ತಗೊಳ್ಳುವಾಗ ಯೆಹೋವ ದೇವರು ಹೇಗೆ ಕರುಣೆ ತೋರಿಸ್ತಾರೆ? ಯೆಹೋವ ದೇವರ ತರಾನೇ ನಾವು ಹೇಗೆ ನಡೆದುಕೊಳ್ಳಬಹುದು? ಇದನ್ನ ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.

ಗೀತೆ 123 “ಕುರಿಪಾಲರು—ಮನುಷ್ಯರಲ್ಲಿ ದಾನಗಳು”

^ ಪ್ಯಾರ. 5 ಪಾಪ ಮಾಡಿದವರು ‘ನಾನೊಂದು ದೊಡ್ಡ ತಪ್ಪು ಮಾಡಿಬಿಟ್ಟೆ. ನನ್ನನ್ನ ಕ್ಷಮಿಸಿಬಿಡಿ’ ಅಂತ ಹೇಳಿದ್ರೆ ಸಾಕಾ? ಮನಸಾರೆ ಪಶ್ಚಾತ್ತಾಪ ಪಡೋದು ಅಂದ್ರೆ ಇಷ್ಟೇ ಅಲ್ಲ, ಇನ್ನೂ ತುಂಬ ವಿಷಯ ಇದೆ. ಅದೇನು ಅಂತ ರಾಜ ಅಹಾಬ, ರಾಜ ಮನಸ್ಸೆ ಮತ್ತು ಮನೆಬಿಟ್ಟು ಹೋದ ಮಗನ ಕಥೆಯಿಂದ ಕಲಿಯೋಣ. ಒಬ್ಬ ವ್ಯಕ್ತಿ ಒಂದು ಪಾಪ ಮಾಡಿದ್ರೆ ಅವನು ಮನಸಾರೆ ಪಶ್ಚಾತ್ತಾಪ ಪಡುತ್ತಿದ್ದಾನಾ, ಇಲ್ವಾ ಅಂತ ಹಿರಿಯರು ಹೇಗೆ ಕಂಡುಹಿಡಿಯಬಹುದು ಅಂತಾನೂ ಕಲಿಯೋಣ.

^ ಪ್ಯಾರ. 60 ಚಿತ್ರ ವಿವರಣೆ: ಪ್ರವಾದಿ ಮೀಕಾಯೆಹುವನ್ನ ಜೈಲಿಗೆ ಹಾಕಿ ಅಂತ ರಾಜ ಅಹಾಬ ತನ್ನ ಸೈನಿಕರ ಹತ್ರ ಕೋಪದಿಂದ ಹೇಳ್ತಿದ್ದಾನೆ.

^ ಪ್ಯಾರ. 62 ಚಿತ್ರ ವಿವರಣೆ: ರಾಜ ಮನಸ್ಸೆ ದೇವಾಲಯದ ಒಳಗೆ ತಾನಿಟ್ಟ ಮೂರ್ತಿಗಳನ್ನ ಒಡೆದುಹಾಕಿ ಅಂತ ಕೆಲಸದವರಿಗೆ ಹೇಳ್ತಿದ್ದಾನೆ.

^ ಪ್ಯಾರ. 64 ಚಿತ್ರ ವಿವರಣೆ: ಮನೆಬಿಟ್ಟು ಹೋದ ಮಗ ತುಂಬ ದೂರ ಪ್ರಯಾಣ ಮಾಡಿ ಸುಸ್ತಾಗಿ ಬರುತ್ತಿರುವಾಗ ದೂರದಿಂದ ತನ್ನ ಮನೆಯನ್ನ ನೋಡಿ ಅವನಿಗೆ ಖುಷಿ ಆಗ್ತಿದೆ.