ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಿನ ಕಾಲದ ಇಸ್ರಾಯೇಲ್ಯರು ಯುದ್ಧ ಮಾಡ್ತಿದ್ರು ಅಂದಮೇಲೆ ನಾವು ಯಾಕೆ ಮಾಡಬಾರದು?

ಆಗಿನ ಕಾಲದ ಇಸ್ರಾಯೇಲ್ಯರು ಯುದ್ಧ ಮಾಡ್ತಿದ್ರು ಅಂದಮೇಲೆ ನಾವು ಯಾಕೆ ಮಾಡಬಾರದು?

“ನಿಮ್ಮಲ್ಲಿ ಯಾರಾದ್ರೂ ಫ್ರಾನ್ಸ್‌ ಅಥವಾ ಇಂಗ್ಲೆಂಡ್‌ನ ವಿರುದ್ಧ ಯುದ್ಧ ಮಾಡೋಕೆ ಬರಲಿಲ್ಲ ಅಂದ್ರೆ ಹುಟ್ಲಿಲ್ಲ ಅನ್ನಿಸಿಬಿಡ್ತೀನಿ” ಅಂತ ಒಬ್ಬ ನಾಜಿ಼ ಅಧಿಕಾರಿ ಎರಡನೇ ಮಹಾಯುದ್ಧದ ಸಮಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಹೇಳಿದ. ಅಲ್ಲಿದ್ದ ಸೈನಿಕರು ಬಂದೂಕುಗಳನ್ನ ಹಿಡಿದುಕೊಂಡು ಹೆದರಿಸ್ತಿದ್ರು. ಆದ್ರೂ ಯೆಹೋವನ ಸಾಕ್ಷಿಗಳಲ್ಲಿ ಯಾರೂ ಯುದ್ಧಕ್ಕೆ ಹೋಗಲಿಲ್ಲ. ಇವರ ಧೈರ್ಯನ ಮೆಚ್ಚಲೇಬೇಕು! ಇದರಿಂದ ನಮಗೇನು ಗೊತ್ತಾಗುತ್ತೆ? ತಮ್ಮ ಜೀವ ಹೋಗೋ ಪರಿಸ್ಥಿತಿ ಬಂದ್ರೂ ಯೆಹೋವನ ಸಾಕ್ಷಿಗಳು ಯುದ್ಧ ಮಾಡಲ್ಲ, ದೇಶಗಳ ನಡುವೆ ಜಗಳಗಳು ಆದಾಗ ಯಾವ ದೇಶದ ಪರನೂ ವಹಿಸಲ್ಲ.

ಆದ್ರೆ ಕ್ರೈಸ್ತರು ಅಂತ ಹೇಳಿಕೊಳ್ಳೋ ಎಷ್ಟೋ ಜನ, ಯುದ್ಧ ಮಾಡಬಹುದು ಅಂತ ಹೇಳ್ತಾರೆ. ತಮ್ಮ ದೇಶನ ಕಾಪಾಡೋದು ಪ್ರತಿಯೊಬ್ಬರ ಕರ್ತವ್ಯ ಅಂತ ಹೇಳ್ತಾರೆ. ‘ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರೇ ಯುದ್ಧ ಮಾಡಿದ್ದಾರೆ ಅಂದ್ಮೇಲೆ ಇವತ್ತು ಕ್ರೈಸ್ತರು ಯುದ್ಧ ಮಾಡಿದ್ರೆ ತಪ್ಪೇನು?’ ಅಂತ ಅವರು ಕೇಳಬಹುದು. ಈ ತರ ಹೇಳುವವರಿಗೆ ನಾವು ಹೇಗೆ ಉತ್ತರ ಕೊಡಬಹುದು? ನಾವು ಅವರಿಗೆ, ಇಸ್ರಾಯೇಲ್ಯರ ಪರಿಸ್ಥಿತಿನೇ ಬೇರೆ ನಮ್ಮ ಪರಿಸ್ಥಿತಿನೇ ಬೇರೆ ಅಂತ ಅರ್ಥ ಮಾಡಿಸಬೇಕು. ಅದಕ್ಕೆ ಐದು ಅಂಶಗಳನ್ನ ಈಗ ನೋಡೋಣ.

1. ದೇವಜನರೆಲ್ಲರೂ ಒಂದೇ ದೇಶದಲ್ಲಿ ಇದ್ದರು

ಹಿಂದಿನ ಕಾಲದಲ್ಲಿ ಯೆಹೋವ ದೇವರು ಇಸ್ರಾಯೇಲ್ಯರನ್ನ ತನ್ನ ಜನರಾಗಿ ಆರಿಸಿಕೊಂಡನು. “ಎಲ್ಲರಿಗಿಂತ ನೀವು ನನ್ನ ವಿಶೇಷ ಸ್ವತ್ತಾಗ್ತೀರ” ಅಂತ ಆತನು ಅವರಿಗೆ ಹೇಳಿದನು. (ವಿಮೋ. 19:5) ಅವರಿಗೆ ಇರೋಕೆ ಒಂದು ಜಾಗ ಕೊಟ್ಟಿದ್ದನು. ಹಾಗಾಗಿ ದೇವರು ಇಸ್ರಾಯೇಲ್ಯರಿಗೆ ಬೇರೆ ದೇಶದ ಮೇಲೆ ಯುದ್ಧ ಮಾಡಿ ಅಂತ ಹೇಳಿದಾಗ, ಅವರು ಬೇರೆ ಯೆಹೋವನ ಆರಾಧಕರನ್ನ ಕೊಲ್ಲೋ ಸಾಧ್ಯತೆನೇ ಇರುತ್ತಿರಲಿಲ್ಲ. a

ಇವತ್ತು ‘ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯ ಜನರು’ ಯೆಹೋವನ ಆರಾಧಕರಾಗುತ್ತಿದ್ದಾರೆ. (ಪ್ರಕ. 7:9) ಒಂದುವೇಳೆ ಅವರು ಯುದ್ಧಕ್ಕೆ ಹೋದ್ರೆ ಬೇರೆ ದೇಶದಲ್ಲಿರೋ ಯೆಹೋವನ ಸಾಕ್ಷಿಗಳನ್ನ ಕೊಲ್ಲಬೇಕಾಗುತ್ತೆ.

2. ಯೆಹೋವ ಹೇಳಿದ್ದಕ್ಕೇ ಇಸ್ರಾಯೇಲ್ಯರು ಯುದ್ಧ ಮಾಡ್ತಿದ್ರು

ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ಯಾವಾಗ ಯುದ್ಧ ಮಾಡಬೇಕು, ಯಾಕೆ ಯುದ್ಧ ಮಾಡಬೇಕು ಅನ್ನೋದನ್ನ ಯೆಹೋವ ತೀರ್ಮಾನ ಮಾಡ್ತಿದ್ದನು. ಇದಕ್ಕೊಂದು ಉದಾಹರಣೆ ನೋಡಿ. ಯೆಹೋವ ತಾನು ಮಾತು ಕೊಟ್ಟ ದೇಶದಲ್ಲಿದ್ದ ಕಾನಾನ್ಯರ ವಿರುದ್ಧ ಯುದ್ಧ ಮಾಡೋಕೆ ಇಸ್ರಾಯೇಲ್ಯರಿಗೆ ಹೇಳಿದನು. ಯಾಕಂದ್ರೆ ಅವರು ಕೆಟ್ಟ ದೇವದೂತರನ್ನ ಆರಾಧಿಸ್ತಿದ್ದರು. ಅಲ್ಲಿ ಲೈಂಗಿಕ ಅನೈತಿಕತೆ ತುಂಬಿ ತುಳುಕುತ್ತಿತ್ತು. ಮಕ್ಕಳನ್ನ ಬೆಂಕಿಯಲ್ಲಿ ಬಲಿ ಕೊಡ್ತಿದ್ರು. ಇಂಥ ಕೆಟ್ಟ ವಿಷಯಗಳನ್ನ ಇಸ್ರಾಯೇಲ್ಯರು ಕಲಿತುಬಿಡಬಾರದು ಅಂತಾನೇ ಯೆಹೋವ ಅವರ ಮೇಲೆ ಯುದ್ಧ ಮಾಡೋಕೆ ಹೇಳಿದನು. (ಯಾಜ. 18:24, 25) ಇಸ್ರಾಯೇಲ್ಯರು ಆ ದೇಶಕ್ಕೆ ಹೋದ ಮೇಲೆ ಶತ್ರುಗಳು ಆಕ್ರಮಣ ಮಾಡಿದಾಗ ತಮ್ಮನ್ನ ಕಾಪಾಡಿಕೊಳ್ಳಬೇಕಿತ್ತು. ಅದಕ್ಕೆ ಯುದ್ಧ ಮಾಡೋಕೆ ಹೇಳ್ತಿದ್ದನು. (2 ಸಮು. 5:17-25) ಆದ್ರೆ ಇಸ್ರಾಯೇಲ್ಯರು ಯೆಹೋವ ಹೇಳಿದಾಗ ಮಾತ್ರ ಯುದ್ಧ ಮಾಡಬೇಕಿತ್ತು. ತಾವೇ ತೀರ್ಮಾನ ಮಾಡ್ಕೊಂಡು ಯುದ್ಧಕ್ಕೆ ಹೋದಾಗೆಲ್ಲ ಅನಾಹುತಗಳು ಆಗುತ್ತಿತ್ತು.—ಅರ. 14:41-45; 2 ಪೂರ್ವ. 35:20-24.

ಇವತ್ತು ಯೆಹೋವ ದೇವರು ಜನರಿಗೆ ಯುದ್ಧ ಮಾಡೋಕೆ ಹೇಳ್ತಿಲ್ಲ. ಆದ್ರೆ ಜನ್ರೇ ತಮ್ಮ ಸ್ವಾರ್ಥಕ್ಕೋಸ್ಕರ ಯುದ್ಧ ಮಾಡ್ತಿದ್ದಾರೆ. ಬೇರೆ ದೇಶನ ವಶ ಮಾಡ್ಕೊಳ್ಳೋಕೆ, ಆರ್ಥಿಕ ಲಾಭಕ್ಕಾಗಿ ಅಥವಾ ರಾಜಕೀಯ ಕಾರಣಗಳಿಗಾಗಿ ಯುದ್ಧ ಮಾಡ್ತಿದ್ದಾರೆ. ಇನ್ನೂ ಕೆಲವರು ಧರ್ಮಕ್ಕೋಸ್ಕರ ಅಥವಾ ದೇವರ ಶತ್ರುಗಳನ್ನ ಕೊಲ್ಲಕ್ಕೋಸ್ಕರ ಯುದ್ಧ ಮಾಡ್ತೀವಿ ಅಂತ ಹೇಳಿಕೊಳ್ತಾರೆ. ಇದನ್ನ ದೇವರು ಒಪ್ಪುತ್ತಾನಾ? ಇಲ್ಲ. ಯಾಕಂದ್ರೆ ದೇವರು ತನ್ನ ಜನರನ್ನ ಕಾಪಾಡೋಕೆ ತಾನೇ ಮುಂದೆ ಹರ್ಮಗೆದೋನ್‌ ಅನ್ನೋ ಯುದ್ಧ ಮಾಡ್ತಾನೆ. (ಪ್ರಕ. 16:14, 16) ಅದರಲ್ಲಿ ತನ್ನ ಶತ್ರುಗಳನ್ನ ನಾಶ ಮಾಡ್ತಾನೆ. ಈ ಯುದ್ಧಕ್ಕೆ ದೇವರು ಭೂಮಿಯಲ್ಲಿರೋ ಮನುಷ್ಯರನ್ನಲ್ಲ ಸ್ವರ್ಗೀಯ ಸೈನ್ಯವನ್ನ ಉಪಯೋಗಿಸ್ತಾನೆ.—ಪ್ರಕ. 19:11-15.

3. ಇಸ್ರಾಯೇಲ್ಯರು ದೇವರ ಮೇಲೆ ನಂಬಿಕೆ ಇದ್ದವರನ್ನ ಬಿಟ್ಟುಬಿಡ್ತಿದ್ರು

ಯೆರಿಕೋ ನಾಶ ಆಗುವಾಗ ಯೆಹೋವ ರಾಹಾಬ ಮತ್ತು ಅವಳ ಕುಟುಂಬಕ್ಕೆ ಕರುಣೆ ತೋರಿಸಿದನು. ಅದೇ ತರ ಇವತ್ತು ಯುದ್ಧ ಮಾಡೋರು ದೇವರ ಮೇಲೆ ನಂಬಿಕೆ ಇಟ್ಟವರಿಗೆ ಕರುಣೆ ತೋರಿಸ್ತಾರಾ?

ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ಯುದ್ಧಕ್ಕೆ ಹೋಗ್ತಿದ್ದಾಗ ಅಲ್ಲಿದ್ದ ಜನ್ರು ಯಾರಾದ್ರೂ ಯೆಹೋವನ ಮೇಲೆ ನಂಬಿಕೆ ತೋರಿಸಿದ್ರೆ ಅಂಥವರನ್ನ ಕೊಲ್ತಾ ಇರಲಿಲ್ಲ. ಉದಾಹರಣೆಗೆ ಯೆರಿಕೋ ಪಟ್ಟಣವನ್ನ ನಾಶ ಮಾಡಿದಾಗ ಅಲ್ಲಿದ್ದ ರಾಹಾಬ ಮತ್ತು ಅವಳ ಕುಟುಂಬದವರನ್ನ ಕಾಪಾಡಿದ್ರು. ಯಾಕಂದ್ರೆ ರಾಹಾಬ ಯೆಹೋವನ ಮೇಲೆ ನಂಬಿಕೆ ಇಟ್ಟಳು. (ಯೆಹೋ. 2:9-16; 6:16, 17) ಅದೇ ತರನೇ ಗಿಬ್ಯೋನ್ಯರು ಯೆಹೋವನ ಮೇಲೆ ತಮಗೆ ಗೌರವ ಇದೆ ಅಂತ ತೋರಿಸಿದ್ರು. ಅದಕ್ಕೆ ಇಸ್ರಾಯೇಲ್ಯರು ಅವರನ್ನ ನಾಶ ಮಾಡಲಿಲ್ಲ.—ಯೆಹೋ. 9:3-9, 17-19.

ಇವತ್ತು ಯುದ್ಧಗಳು ಆಗುವಾಗ ಸೈನಿಕರು, ದೇವರ ಮೇಲೆ ನಂಬಿಕೆ ಇರೋ ಜನರನ್ನೂ ಕೊಲ್ತಾರೆ. ಅಮಾಯಕ ಜನರನ್ನೂ ಕೊಲ್ತಾರೆ.

4. ಯುದ್ಧ ಮಾಡುವಾಗ ಇಸ್ರಾಯೇಲ್ಯರು ದೇವರು ಕೊಟ್ಟ ನಿಯಮಗಳನ್ನ ಪಾಲಿಸ್ತಿದ್ರು

ಹಿಂದಿನ ಕಾಲದಲ್ಲಿ ಇಸ್ರಾಯೇಲ್‌ ಸೈನಿಕರು ಯುದ್ಧಕ್ಕೆ ಹೋಗುವಾಗ ಯೆಹೋವ ಹೇಳಿದ ತರಾನೇ ನಡಕೊಳ್ತಿದ್ರು. ಕೆಲವೊಮ್ಮೆ ಶತ್ರು ದೇಶದವರ ಜೊತೆ “ಶಾಂತಿ ಒಪ್ಪಂದ” ಮಾಡಿಕೊಳ್ಳಿ ಅಂತ ಯೆಹೋವ ಹೇಳುತ್ತಿದ್ದನು. (ಧರ್ಮೋ. 20:10) ಇಸ್ರಾಯೇಲ್‌ ಸೈನಿಕರು ತಮ್ಮ ಪಾಳೆಯವನ್ನ ಶುಚಿಯಾಗಿ ಇಟ್ಟುಕೊಳ್ಳಬೇಕು ಅಂತ ಹೇಳಿದ್ದನು. (ಧರ್ಮೋ. 23:9-14) ವಿದೇಶಿಯರು ಒಂದು ದೇಶನ ವಶಮಾಡಿಕೊಂಡ್ರೆ ಅಲ್ಲಿನ ಸ್ತ್ರೀಯರನ್ನ ಅತ್ಯಾಚಾರ ಮಾಡುತ್ತಿದ್ದರು. ಆದ್ರೆ ಇಸ್ರಾಯೇಲ್ಯರು ಹಾಗೆ ಮಾಡಬಾರದು ಅಂತ ಯೆಹೋವ ಆಜ್ಞೆ ಕೊಟ್ಟಿದ್ದನು. ಅವರು ಕೈದಿಯಾಗಿ ಕರ್ಕೊಂಡು ಬಂದಿದ್ದ ಸ್ತ್ರೀಯರನ್ನ ಮದುವೆ ಆಗಬಹುದಿತ್ತು. ಆದ್ರೆ ಅವರು ಒಂದು ತಿಂಗಳ ತನಕ ಕಾಯಬೇಕು ಅಂತ ನಿಯಮ ಇತ್ತು.—ಧರ್ಮೋ. 21:10-13.

ಇವತ್ತು ಎಷ್ಟೋ ದೇಶಗಳು ಯುದ್ಧ ಆಗುವಾಗ ಅಮಾಯಕರು ಸಾಯಬಾರದು ಅಂತ ಹೇಳಿ ಕೆಲವೊಂದು ನೀತಿ ನಿಯಮಗಳನ್ನ ಮಾಡಿಕೊಂಡಿದ್ದಾರೆ. ಆ ಒಪ್ಪಂದಕ್ಕೆ ಅವರು ಸಹಿಯನ್ನೂ ಹಾಕಿದ್ದಾರೆ. ಆದ್ರೆ ಯುದ್ಧ ಮಾಡುವಾಗ ಅವರು ಅದನ್ನ ಪಾಲಿಸುತ್ತಿಲ್ಲ.

5. ಯೆಹೋವ ದೇವರು ತನ್ನ ಜನರಿಗೋಸ್ಕರ ಯುದ್ಧ ಮಾಡಿದನು

ಯೆರಿಕೋ ವಿರುದ್ಧ ಯುದ್ಧ ಮಾಡೋಕೆ ಇಸ್ರಾಯೇಲ್ಯರಿಗೆ ಸಹಾಯ ಮಾಡಿದ ಹಾಗೆ ಇವತ್ತು ಯೆಹೋವ ಯಾವ ದೇಶಕ್ಕಾದ್ರೂ ಸಹಾಯ ಮಾಡ್ತಿದ್ದಾನಾ?

ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ಎಷ್ಟೋ ಸಾರಿ ಯುದ್ಧ ಮಾಡಿದಾಗ ಯೆಹೋವ ಅವರನ್ನ ಅದ್ಭುತವಾಗಿ ಗೆಲ್ಲಿಸಿದನು. ಉದಾಹರಣೆಗೆ, ಯೆರಿಕೋ ಪಟ್ಟಣದ ವಿರುದ್ಧ ಯುದ್ಧಕ್ಕೆ ಹೋದಾಗ ಯೆಹೋವ ದೇವರು ಇಸ್ರಾಯೇಲ್ಯರಿಗೆ ಸಹಾಯ ಮಾಡಿದನು. ಆತನು ಹೇಳಿದ ತರನೇ ಇಸ್ರಾಯೇಲ್ಯರು “ಗಟ್ಟಿಯಾಗಿ ಕೂಗಿ ಯುದ್ಧ ಘೋಷ ಮಾಡಿದ ಕೂಡ್ಲೇ” ಪಟ್ಟಣದ ಗೋಡೆ ಕುಸಿದು ನೆಲ ಸಮ ಆಯ್ತು. ಇದರಿಂದ ಅವರು ಸುಲಭವಾಗಿ ಪಟ್ಟಣ ಗೆದ್ದುಬಿಟ್ಟರು. (ಯೆಹೋ. 6:20) ಅಮೋರಿಯರ ವಿರುದ್ಧ ಯುದ್ಧ ನಡೆದಾಗ “ಯೆಹೋವ ಅವ್ರ ಮೇಲೆ ಆಕಾಶದಿಂದ ಆಲಿಕಲ್ಲು ಮಳೆ ಸುರಿಸಿದನು . . . ಇಸ್ರಾಯೇಲ್ಯರ ಕತ್ತಿಯಿಂದ ಸತ್ತವರ ಸಂಖ್ಯೆಗಿಂತ ಆಲಿಕಲ್ಲು ಮಳೆಯಿಂದ ಸತ್ತವರ ಸಂಖ್ಯೆ ಜಾಸ್ತಿ” ಆಗಿತ್ತು. ಹೀಗೆ ಇಸ್ರಾಯೇಲ್ಯರು ಅದ್ಭುತವಾಗಿ ಯುದ್ಧ ಗೆದ್ದರು.—ಯೆಹೋ. 10:6-11.

ಇವತ್ತು ಯೆಹೋವ ದೇವರು ಈ ಲೋಕದಲ್ಲಿರೋ ಯಾವ ದೇಶದ ಪರವಾಗಿನೂ ಯುದ್ಧ ಮಾಡಲ್ಲ. ಆತನ ರಾಜ್ಯದ ರಾಜನಾಗಿರೋ ಯೇಸು ಹೇಳಿದ ಹಾಗೆ ಆತನ “ಆಳ್ವಿಕೆ ಈ ಲೋಕದ್ದಲ್ಲ.” (ಯೋಹಾ. 18:36) ಇವತ್ತಿರೋ ಎಲ್ಲಾ ಮಾನವ ಸರಕಾರಗಳು ಸೈತಾನನ ಕೈಯಲ್ಲಿದೆ. ಹಾಗಾಗಿ ಇವತ್ತು ನಡಿತಿರೋ ಯುದ್ಧಗಳೆಲ್ಲ ಅವನ ತರನೇ ಕ್ರೂರವಾಗಿದೆ.—ಲೂಕ 4:5, 6; 1 ಯೋಹಾ. 5:19.

ನಿಜವಾದ ಕ್ರೈಸ್ತರು ಎಲ್ಲರ ಜೊತೆ ಶಾಂತಿ ಸಮಾಧಾನದಿಂದ ಇರ್ತಾರೆ

ನೋಡಿದ್ರಾ ಇಸ್ರಾಯೇಲ್ಯರ ಕಾಲದಲ್ಲಿದ್ದ ಪರಿಸ್ಥಿತಿನೇ ಬೇರೆ, ನಮ್ಮ ಪರಿಸ್ಥಿತಿನೇ ಬೇರೆ. ನಾವು ಯುದ್ಧ ಮಾಡದೇ ಇರೋಕೆ ಇಷ್ಟೇ ಅಲ್ಲ ಇನ್ನೂ ಬೇರೆ ಕಾರಣಗಳಿವೆ. ಉದಾಹರಣೆಗೆ ಕೊನೇ ದಿನಗಳಲ್ಲಿ ತನ್ನ ಜನರು ಯುದ್ಧ ಮಾಡೋದಿರಲಿ ‘ಯುದ್ಧ ಮಾಡೋದನ್ನ ಕಲಿಯೋದೂ ಇಲ್ಲ’ ಅಂತ ದೇವರು ಭವಿಷ್ಯವಾಣಿ ಹೇಳಿದ್ದನು. (ಯೆಶಾ. 2:2-4) ಅಷ್ಟೇ ಅಲ್ಲ, ತನ್ನ ಶಿಷ್ಯರು ಈ “ಲೋಕದ ಜನ್ರ ತರ ಇಲ್ಲ” ಅಂತ ಯೇಸು ಕ್ರಿಸ್ತ ಹೇಳಿದನು. ಹಾಗಾಗಿ ಆತನ ಶಿಷ್ಯರು ಇವತ್ತು ಯಾವ ದೇಶಗಳ ಪರವಾಗಿಯೂ ಹೋರಾಡೋಕೆ ಹೋಗಲ್ಲ.—ಯೋಹಾ. 15:19.

ಯುದ್ಧ ಮಾಡೋದಿರಲಿ, ತನ್ನ ಶಿಷ್ಯರು ಬೇರೆಯವರ ಮೇಲೆ ಕೋಪನೂ ಮಾಡಿಕೊಳ್ಳಬಾರದು, ಸೇಡು ತೀರಿಸಿಕೊಳ್ಳಲೂಬಾರದು ಅಂತ ಯೇಸು ಅವರಿಗೆ ಕಲಿಸಿದ್ದಾನೆ. (ಮತ್ತಾ. 5:21, 22) ಅಷ್ಟೇ ಅಲ್ಲ, ಅವರು ಬೇರೆಯವರ ಜೊತೆ ‘ಸಮಾಧಾನ ಮಾಡಿಕೊಳ್ಳಬೇಕು’ ಮತ್ತು ಶತ್ರುಗಳನ್ನೂ ಪ್ರೀತಿಸ್ತಾ ಇರಬೇಕು ಅಂತ ಕಲಿಸಿಕೊಟ್ಟನು.—ಮತ್ತಾ. 5:9, 44.

ಹಾಗಾದ್ರೆ ನಾವೇನು ಮಾಡಬೇಕು? ನಾವು ಯುದ್ಧ ಮಾಡೋಕೆ ಹೋಗಲ್ಲ ನಿಜ, ಆದ್ರೆ ಸಭೆಯಲ್ಲಿ ದ್ವೇಷ ಅಥವಾ ಒಡಕನ್ನ ತರುವಂಥ ಯಾವುದಾದರೂ ಕೆಟ್ಟ ಗುಣ ನಮ್ಮಲ್ಲಿ ಇದ್ಯಾ ಅಂತ ಪರೀಕ್ಷೆ ಮಾಡಿಕೊಳ್ಳಬೇಕು. ಅಂಥ ಗುಣಗಳಿದ್ರೆ ಅದನ್ನ ಬೇರು ಸಮೇತ ಕಿತ್ತು ಹಾಕಬೇಕು.—ಯಾಕೋ. 4:1, 11.

ದೇಶಗಳ ನಡುವೆ ಜಗಳ ಆದಾಗ ನಾವು ಯಾವ ದೇಶದ ಪರನೂ ವಹಿಸಲ್ಲ. ಒಬ್ಬರಿಗೊಬ್ಬರು ಪ್ರೀತಿ ತೋರಿಸೋಕೆ, ಶಾಂತಿ ಸಮಾಧಾನದಿಂದ ಇರೋಕೆ ಪ್ರಯತ್ನ ಮಾಡ್ತೀವಿ. (ಯೋಹಾ. 13:34, 35) ಒಂದಿನ ಯೆಹೋವ ದೇವರು ಯುದ್ಧ ಅನ್ನೋ ಹೆಸರೇ ಇಲ್ಲದ ಹಾಗೆ ಮಾಡ್ತಾನೆ. ಆ ದಿನ ಬರೋ ತನಕ ನಾವು ಈ ದೇಶಗಳ ಪಕ್ಷದಲ್ಲಿ ಅಲ್ಲ, ಯೆಹೋವನ ಪಕ್ಷದಲ್ಲಿ ನಿಂತಿರೋಣ.—ಕೀರ್ತ. 46:9.

a ಕೆಲವೊಮ್ಮೆ ಇಸ್ರಾಯೇಲ್ಯರು ತಮ್ಮ ಕುಲಗಳ ಮಧ್ಯೆನೇ ಯುದ್ಧ ಮಾಡ್ಕೊಳ್ತಿದ್ರು. ಇದು ಯೆಹೋವನಿಗೆ ಇಷ್ಟ ಆಗ್ತಿರಲಿಲ್ಲ. (1 ಅರ. 12:24) ಆದ್ರೆ ಕೆಲವರು ಯೆಹೋವನಿಗೆ ದ್ರೋಹ ಮಾಡಿದ್ರಿಂದ ಅಥವಾ ಆತನ ವಿರುದ್ಧ ದೊಡ್ಡ ತಪ್ಪು ಮಾಡಿದ್ರಿಂದ ಆ ಕುಲಗಳ ಮಧ್ಯೆ ಯುದ್ಧ ಆಗೋಕೆ ಆತನು ಕೆಲವೊಮ್ಮೆ ಬಿಟ್ಟುಕೊಟ್ಟನು.—ನ್ಯಾಯ. 20:3-35; 2 ಪೂರ್ವ. 13:3-18; 25:14-22; 28:1-8.