ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 41

ನಿಜವಾದ ಸಂತೋಷ ಎಲ್ಲಿಂದ ಸಿಗುತ್ತೆ?

ನಿಜವಾದ ಸಂತೋಷ ಎಲ್ಲಿಂದ ಸಿಗುತ್ತೆ?

“ಯೆಹೋವನಿಗೆ ಭಯಪಡೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ, ಆತನ ದಾರಿಯಲ್ಲಿ ನಡಿಯೋ ಜನ್ರೆಲ್ಲ ಭಾಗ್ಯವಂತರು.”—ಕೀರ್ತ. 128:1.

ಗೀತೆ 74 ಯೆಹೋವನ ಆನಂದ

ಕಿರುನೋಟ a

1. (ಎ) ದೇವರು ನಮ್ಮಲ್ಲಿ ಯಾವ ಆಸೆ ಇಟ್ಟು ಸೃಷ್ಟಿಸಿದ್ದಾನೆ? (ಬಿ) ಅದಕ್ಕೂ ನಾವು ಖುಷಿಯಾಗಿ ಇರೋಕೂ ಏನು ಸಂಬಂಧ?

 ನಿಜವಾದ ಸಂತೋಷ ಅನ್ನೋದು ನೀರಿನ ಮೇಲಿರೋ ಗುಳ್ಳೆ ತರ ಒಂದು ಕ್ಷಣ ಇದ್ದು ಹೋಗುವಂಥದ್ದಲ್ಲ. ಸಮುದ್ರದ ಅಲೆಗಳ ತರ ನಿರಂತರವಾಗಿರುತ್ತೆ. ಆ ಸಂತೋಷನ ಪಡಕೊಳ್ಳೋದು ಹೇಗೆ ಅಂತ ಯೇಸು ಬೆಟ್ಟದ ಭಾಷಣದಲ್ಲಿ ಹೇಳಿದ್ದಾನೆ. ಆತನು ಹೇಳಿದ್ದು: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ.” (ಮತ್ತಾ. 5:3) ಮನುಷ್ಯರು ಸೃಷ್ಟಿಕರ್ತನ ಬಗ್ಗೆ ತಿಳಿದುಕೊಳ್ಳಬೇಕು, ಆತನನ್ನು ಆರಾಧಿಸಬೇಕು ಅನ್ನೋ ಆಸೆಯನ್ನಿಟ್ಟು ಯೆಹೋವ ಅವರನ್ನ ಸೃಷ್ಟಿಸಿದ್ದಾನೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ನಾವು ಇದನ್ನ ಮಾಡಿದಾಗ ನಮಗೆ ನಿಜ ಸಂತೋಷ ಸಿಗುತ್ತೆ. ಅಷ್ಟೇ ಅಲ್ಲ, ಯೆಹೋವ, “ಖುಷಿಯಾಗಿರೋ” ದೇವರಾಗಿರೋದ್ರಿಂದ ಆತನನ್ನ ಆರಾಧಿಸೋರು ಕೂಡ ಖುಷಿಯಾಗಿರ್ತಾರೆ.—1 ತಿಮೊ. 1:11.

“ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ.”—ಮತ್ತಾ. 5:10 (ಪ್ಯಾರ 2-3 ನೋಡಿ) d

2-3. (ಎ) ಯಾರು ಕೂಡ ಸಂತೋಷವಾಗಿ ಇರೋಕಾಗುತ್ತೆ ಅಂತ ಯೇಸು ಹೇಳಿದನು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ ಮತ್ತು ಯಾಕೆ?

2 ಜೀವನದಲ್ಲಿ ಎಲ್ಲಾ ಚೆನ್ನಾಗಿದ್ರೆ ಮಾತ್ರ ನಾವು ಸಂತೋಷವಾಗಿ ಇರ್ತೀವಿ ಅಂತಾನಾ? ಹಾಗೇನಿಲ್ಲ. ಯಾಕಂದ್ರೆ ಯೇಸು ಭಾಷಣದಲ್ಲಿ “ದುಃಖಪಡುವವರು ಸಂತೋಷವಾಗಿ ಇರ್ತಾರೆ” ಅಂತ ಹೇಳಿದನು. ಹಾಗಾಗಿ ತಾವು ಮಾಡಿದ ತಪ್ಪಿಗಾಗಿ “ದುಃಖಪಡುವವರು,” ಕಷ್ಟದಿಂದ ಅಳ್ತಿರೋರು ಕೂಡ ಸಂತೋಷವಾಗಿ ಇರಬಹುದು. ಅಷ್ಟೇ ಅಲ್ಲ, “ನೀತಿಗಾಗಿ ಹಿಂಸೆ ಅನುಭವಿಸುವವರು,” ತನ್ನ ಶಿಷ್ಯರಾಗಿದ್ರಿಂದ “ಅವಮಾನ” ಅನುಭವಿಸ್ತಾ ಇರೋರು ಸಹ ಸಂತೋಷವಾಗಿ ಇರೋಕಾಗುತ್ತೆ ಅಂತ ಯೇಸು ಹೇಳಿದನು. (ಮತ್ತಾ. 5:4, 10, 11) ಆದ್ರೆ ಇಂಥ ಕಷ್ಟಗಳನ್ನ ಅನುಭವಿಸ್ತಾ ಇರೋ ವ್ಯಕ್ತಿ ನಿಜವಾಗಲೂ ಸಂತೋಷವಾಗಿ ಇರೋಕೆ ಆಗುತ್ತಾ?

3 ಯೇಸು ಹೇಳಿದ ಹಾಗೆ ನಿಜವಾದ ಸಂತೋಷ ಅನ್ನೋದು ನಮ್ಮ ಜೀವನದಲ್ಲಿ ಎಲ್ಲ ಚೆನ್ನಾಗಿರೋದ್ರಿಂದ ಸಿಗಲ್ಲ, ಬದಲಿಗೆ ದೇವರ ಬಗ್ಗೆ ತಿಳಿದುಕೊಂಡಾಗ, ಆತನಿಗೆ ಹತ್ರ ಆದಾಗ ಸಿಗುತ್ತೆ. (ಯಾಕೋ. 4:8) ಹಾಗಾದ್ರೆ ಅದಕ್ಕೆ ನಾವೇನು ಮಾಡಬೇಕು? ಮೂರು ವಿಷಯಗಳನ್ನ ಮಾಡಬೇಕು. ಅದೇನು ಅಂತ ಈಗ ನೋಡೋಣ.

ಬೈಬಲ್‌ ಓದಿ, ಅಧ್ಯಯನ ಮಾಡಿ

4. ನಿಜವಾದ ಖುಷಿ ಪಡಕೊಳ್ಳೋಕೆ ನಾವು ಮಾಡಬೇಕಾದ ಮೊದಲನೇ ವಿಷಯ ಏನು? (ಕೀರ್ತನೆ 1:1-3)

4 ಒಂದು, ನಿಜವಾದ ಖುಷಿ ಪಡಕೊಳ್ಳೋಕೆ ಬೈಬಲ್‌ ಓದಿ ಅಧ್ಯಯನ ಮಾಡಬೇಕು. ಮನುಷ್ಯರು ಮತ್ತು ಪ್ರಾಣಿಗಳು ಬದುಕಬೇಕಂದ್ರೆ ಊಟ ಬೇಕು ಅಂತ ನಮಗೆ ಗೊತ್ತು. ಅದಕ್ಕಿಂತ ಮುಖ್ಯವಾಗಿ ಮನುಷ್ಯರಿಗೆ ಬದುಕೋಕೆ ದೇವರ ಮಾರ್ಗದರ್ಶನೆ ಬೇಕು. ಅದಕ್ಕೆ ಯೇಸು, “ಮನುಷ್ಯ ರೊಟ್ಟಿ ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು” ಅಂತ ಹೇಳಿದನು. (ಮತ್ತಾ. 4:4) ನಮಗೆ ಬದುಕೋಕೆ ಊಟ ಎಷ್ಟು ಮುಖ್ಯನೋ ಹಾಗೇನೇ ಪ್ರತಿದಿನ ಬೈಬಲನ್ನ ಓದಿ, ಅಧ್ಯಯನ ಮಾಡೋದು ತುಂಬ ಮುಖ್ಯ. ಯಾಕಂದ್ರೆ ‘ಯೆಹೋವನ ನಿಯಮವನ್ನ ಪಾಲಿಸುವವನು, ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸುವವನು ಸಂತೋಷವಾಗಿ ಇರ್ತಾನೆ’ ಅಂತ ಕೀರ್ತನೆಗಾರ ಹೇಳಿದ.—ಕೀರ್ತನೆ 1:1-3 ಓದಿ.

5-6. (ಎ) ನಾವು ಬೈಬಲಿಂದ ಏನೆಲ್ಲಾ ತಿಳಿದುಕೊಳ್ತೀವಿ? (ಬಿ) ಅದನ್ನ ಓದೋದ್ರಿಂದ ನಮಗೆ ಹೇಗೆ ಸಹಾಯ ಸಿಗುತ್ತೆ?

5 ಯೆಹೋವ ದೇವರಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದ ನಾವು ಖುಷಿಯಾಗಿರೋಕೆ ಬೇಕಾದ ಎಷ್ಟೋ ವಿಷಯಗಳನ್ನ ಬೈಬಲಲ್ಲಿ ಬರೆಸಿಟ್ಟಿದ್ದಾನೆ. ಆತನು ನಮ್ಮನ್ನ ಯಾಕೆ ಸೃಷ್ಟಿಮಾಡಿದನು, ನಾವು ಆತನಿಗೆ ಹೇಗೆ ಹತ್ರ ಆಗಬಹುದು, ನಮ್ಮ ಪಾಪಗಳಿಗೆ ಕ್ಷಮೆ ಸಿಗಬೇಕಾದ್ರೆ ಏನು ಮಾಡಬೇಕು, ಅಷ್ಟೇ ಅಲ್ಲ, ಆತನು ನಮಗೆ ಭವಿಷ್ಯದಲ್ಲಿ ಏನೆಲ್ಲಾ ಆಶೀರ್ವಾದಗಳನ್ನ ಕೊಡ್ತಾನೆ ಅನ್ನೋದನ್ನೂ ನಮಗೆ ತಿಳಿಸಿದ್ದಾನೆ. (ಯೆರೆ. 29:11) ನಾವು ಬೈಬಲ್‌ ಓದಿ ಇದನ್ನೆಲ್ಲ ಅರ್ಥಮಾಡಿಕೊಂಡಾಗ ನಮಗೆ ಖುಷಿ ಸಿಗುತ್ತೆ!

6 ಬೈಬಲಲ್ಲಿ ನಮ್ಮ ಜೀವನಕ್ಕೆ ಬೇಕಾದ ಬುದ್ಧಿಮಾತುಗಳು ತುಂಬ ಇವೆ. ಅದನ್ನ ಪಾಲಿಸಿದಾಗ ನಾವು ಖುಷಿಯಾಗಿರಬಹುದು. ಜೀವನದಲ್ಲಿ ಕಷ್ಟಗಳು ಜಾಸ್ತಿ ಆದಾಗ ಬೈಬಲನ್ನ ನಾವು ಇನ್ನೂ ಜಾಸ್ತಿ ಓದಬೇಕು ಮತ್ತು ಓದಿದ ವಿಷಯದ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು. ಯಾಕಂದ್ರೆ “ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ” ಅಂತ ಯೇಸು ಹೇಳಿದನು.—ಲೂಕ 11:28.

7. ಖುಷಿಖುಷಿಯಿಂದ ಬೈಬಲ್‌ ಓದೋಕೆ ನೀವೇನು ಮಾಡಬೇಕು?

7 ನಾವು ಸಮಯ ಮಾಡಿಕೊಂಡು ದೇವರ ವಾಕ್ಯವನ್ನ ಚೆನ್ನಾಗಿ ಓದಬೇಕು. ಇದ್ರಿಂದ ನಮಗೆ ಖುಷಿ ಸಿಗುತ್ತೆ. ಇದನ್ನ ಅರ್ಥಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ನಿಮಗೆ ತುಂಬ ಇಷ್ಟವಾದ ಅಡುಗೆಯನ್ನ ಒಬ್ಬರು ಮಾಡಿಕೊಂಡು ಬಂದು ನಿಮಗೆ ಕೊಟ್ಟಿದ್ದಾರೆ ಅಂತ ಅಂದುಕೊಳ್ಳಿ. ಆದ್ರೆ ನೀವು ಯಾವುದೋ ಕೆಲಸದಲ್ಲಿ ಇರೋದ್ರಿಂದ ಅದನ್ನ ಅವಸರ ಅವಸರವಾಗಿ ತಿಂದು ಮುಗಿಸ್ತೀರ. ಆದ್ರೆ ಆಮೇಲೆ, ‘ಅಯ್ಯೋ ನಾನು ನಂಗಿಷ್ಟವಾದ ಊಟವನ್ನ ಅವಸರ ಅವಸರವಾಗಿ ತಿಂದುಬಿಟ್ನಲ್ಲಾ? ಒಂದೊಂದು ತುತ್ತನ್ನೂ ಆಸ್ವಾದಿಸಿ ತಿನ್ನಬೇಕಿತ್ತು’ ಅಂತ ನಿಮಗೆ ಅನಿಸುತ್ತೆ. ಅದೇ ತರ ನೀವು ಬೈಬಲ್‌ ಓದುವಾಗ, ಅವಸರ ಅವಸರವಾಗಿ ಓದುತ್ತೀರಾ ಅಥವಾ ಒಂದೊಂದು ವಿಷಯವನ್ನೂ ಆಸ್ವಾದಿಸಿ ಓದುತ್ತಿದ್ದೀರಾ? ಬೈಬಲ್‌ ಓದುವಾಗ ಸಮಯ ತಗೊಂಡು, ಅಲ್ಲಿ ನಡೆಯೋ ಘಟನೆಗಳನ್ನ ಕಲ್ಪನೆ ಮಾಡಿಕೊಳ್ಳಿ. ಅಲ್ಲಿ ಮಾತಾಡ್ತಿರೋ ಜನರ ಧ್ವನಿಯನ್ನ ಕೇಳಿಸಿಕೊಳ್ಳೋಕೆ ಪ್ರಯತ್ನ ಮಾಡಿ. ಹೀಗೆ ಮಾಡಿದಾಗ ಬೈಬಲ್‌ ಓದೋದು ನಿಮಗೆ ಬೋರ್‌ ಅನಿಸಲ್ಲ, ಖುಷಿಖುಷಿಯಿಂದ ಓದ್ತೀರ.

8. “ನಂಬಿಗಸ್ತ, ವಿವೇಕಿ ಆದ ಆಳು” ತಮಗೆ ಕೊಟ್ಟಿರೋ ಕೆಲಸನ ಹೇಗೆ ಮಾಡ್ತಿದ್ದಾರೆ? (ಪಾದಟಿಪ್ಪಣಿಯನ್ನೂ ನೋಡಿ.)

8 ನಮಗೆ ತಕ್ಕ ಸಮಯಕ್ಕೆ ಆಹಾರ ಕೊಡೋಕೆ ಯೇಸು, ‘ನಂಬಿಗಸ್ತ, ವಿವೇಕಿ ಆದ ಆಳನ್ನ’ ನೇಮಿಸಿದ್ದಾನೆ. ಅವರು ತಮ್ಮ ಕೆಲಸನ ಚೆನ್ನಾಗಿ ಮಾಡ್ತಿದ್ದಾರೆ. ಇಲ್ಲಿ ತನಕ ಎಷ್ಟೋ ಪ್ರಕಾಶನಗಳನ್ನ ತಯಾರಿಸಿದ್ದಾರೆ. b (ಮತ್ತಾ. 24:45) ಅವರು ತಯಾರಿಸೋ ಪ್ರಕಾಶನಗಳೆಲ್ಲಾ ಬೈಬಲ್‌ ಮೇಲೆ ಆಧರಿಸಿರುತ್ತೆ. (1 ಥೆಸ. 2:13) ಇದ್ರಿಂದ ಯೆಹೋವ ಯಾವ ತರ ಯೋಚನೆ ಮಾಡ್ತಾನೆ ಅಂತ ನಮಗೆ ತಿಳಿದುಕೊಳ್ಳೋಕೆ ಆಗಿದೆ. ಹಾಗಾಗಿ ನಾವು ಅವರು ಕೊಡೋ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನ ಓದಬೇಕು. ಮಧ್ಯವಾರ ಹಾಗೂ ವಾರಾಂತ್ಯದ ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಬೇಕು. ಪ್ರತಿ ತಿಂಗಳು ಬರೋ JW ಪ್ರಸಾರವನ್ನ ತಪ್ಪದೇ ನೋಡಬೇಕು. ಹೀಗೆ ಮಾಡೋದ್ರಿಂದ ನಮಗೆ ಇನ್ನೂ ಒಂದು ವಿಷಯ ಮಾಡೋಕೆ ಸಹಾಯ ಸಿಗುತ್ತೆ. ಅದ್ರಿಂದನೂ ನಾವು ನಿಜವಾದ ಖುಷಿ ಪಡಕೊಳ್ತೀವಿ. ಅದೇನು ಅಂತ ಈಗ ನೋಡೋಣ.

ಯೆಹೋವನ ನೀತಿ ನಿಯಮಗಳನ್ನ ಪಾಲಿಸಿ

9. ನಾವು ನಿಜವಾದ ಖುಷಿ ಪಡಕೊಳ್ಳೋಕೆ ಮಾಡಬೇಕಾದ ಎರಡನೇ ವಿಷಯ ಯಾವುದು?

9 ಎರಡು, ನಮಗೆ ನಿಜವಾದ ಖುಷಿ ಸಿಗಬೇಕಂದ್ರೆ ಯೆಹೋವನ ನೀತಿ-ನಿಯಮಗಳನ್ನ ಪಾಲಿಸಬೇಕು. “ಯೆಹೋವನಿಗೆ ಭಯಪಡೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ, ಆತನ ದಾರಿಯಲ್ಲಿ ನಡಿಯೋ ಜನ್ರೆಲ್ಲ ಭಾಗ್ಯವಂತರು” ಅಂತ ಕೀರ್ತನೆಗಾರ ಹೇಳಿದ್ದಾನೆ. (ಕೀರ್ತ. 128:1) ಯೆಹೋವನಿಗೆ ಭಯಪಡೋದು ಅಂದ್ರೆ ಆತನ ಮೇಲೆ ಗೌರವ ಇರೋದ್ರಿಂದ ಆತನಿಗೆ ಇಷ್ಟ ಆಗದಿರೋ ವಿಷಯಗಳನ್ನ ಮಾಡದೇ ಇರೋದು. (ಜ್ಞಾನೋ. 16:6) ಹಾಗಾಗಿ ಬೈಬಲಲ್ಲಿ ಯೆಹೋವ ಯಾವುದು ಸರಿ, ಯಾವುದು ತಪ್ಪು ಅಂತ ಕಲಿಸಿಕೊಟ್ಟಿದ್ದಾನೋ ಅದನ್ನ ತಿಳಿದುಕೊಂಡು ಅದೇ ತರ ನಡಕೊಳ್ಳೋಕೆ ನಾವು ಪ್ರಯತ್ನ ಮಾಡಬೇಕು. (2 ಕೊರಿಂ. 7:1) ಆತನು ದ್ವೇಷಿಸೋ ವಿಷಯಗಳನ್ನ ಬಿಟ್ಟು, ಆತನಿಗೆ ಇಷ್ಟ ಆಗೋ ವಿಷಯಗಳನ್ನ ಮಾಡಿದ್ರೆ ಮಾತ್ರ ನಾವು ಖುಷಿಯಾಗಿ ಇರ್ತೀವಿ.—ಕೀರ್ತ. 37:27; 97:10; ರೋಮ. 12:9.

10. ನಮ್ಮೆಲ್ಲರಿಗೂ ಯಾವ ಜವಾಬ್ದಾರಿ ಇದೆ ಅಂತ ರೋಮನ್ನರಿಗೆ 12:2 ಹೇಳುತ್ತೆ?

10 ರೋಮನ್ನರಿಗೆ 12:2 ಓದಿ. ಯಾವುದು ಸರಿ, ಯಾವುದು ತಪ್ಪು ಅಂತ ನಿರ್ಧಾರ ಮಾಡೋ ಹಕ್ಕು ಅಥವಾ ಅಧಿಕಾರ ಯೆಹೋವ ದೇವರಿಗೆ ಇದೆ ಅಂತ ಒಬ್ಬ ವ್ಯಕ್ತಿಗೆ ಗೊತ್ತಿದ್ರೆ ಮಾತ್ರ ಸಾಕಾಗಲ್ಲ. ಆ ನೀತಿ-ನಿಯಮಗಳನ್ನ ಅವನು ಜೀವನದಲ್ಲಿ ಪಾಲಿಸಬೇಕು. ಇದನ್ನ ಅರ್ಥಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ಗಾಡಿ ಓಡಿಸೋಕೆ ಕೆಲವು ಟ್ರಾಫಿಕ್‌ ರೂಲ್ಸ್‌ನ ಸರ್ಕಾರದವರು ಇಟ್ಟಿರುತ್ತಾರೆ. ಒಬ್ಬ ವ್ಯಕ್ತಿಗೆ ಆ ನಿಯಮಗಳು ಗೊತ್ತಿದ್ರೆ ಮಾತ್ರ ಸಾಕಾಗಲ್ಲ. ಅದನ್ನ ಪಾಲಿಸಬೇಕು. ಅದೇ ತರ ಯೆಹೋವನ ನೀತಿ-ನಿಯಮಗಳು ನಮ್ಮ ಒಳ್ಳೇದಕ್ಕೆ ಅಂತ ತಿಳಿದುಕೊಂಡು ನಾವು ಅದನ್ನ ಪಾಲಿಸಬೇಕು. ಆಗ ನಾವು ಜೀವನದಲ್ಲಿ ಖುಷಿಯಾಗಿ ಇರ್ತೀವಿ. (ಜ್ಞಾನೋ. 12:28) ಇದನ್ನ ಚೆನ್ನಾಗಿ ತಿಳಿದುಕೊಂಡಿದ್ದ ದಾವೀದ ಯೆಹೋವನ ಬಗ್ಗೆ ಹೀಗೆ ಹೇಳಿದ: “ನೀನು ನನಗೆ ಜೀವನದ ದಾರಿಯನ್ನ ತೋರಿಸ್ಕೊಡ್ತೀಯ. ನೀನು ಇರೋ ಕಡೆ ತುಂಬ ಖುಷಿ ಇರುತ್ತೆ. ನಿನ್ನ ಬಲಗಡೆ ಯಾವಾಗ್ಲೂ ಸಂತೋಷ ಇರುತ್ತೆ.”—ಕೀರ್ತ. 16:11.

11-12. (ಎ) ಕಷ್ಟ ಬಂದಾಗ ಅಥವಾ ಬೇಜಾರಲ್ಲಿ ಇರುವಾಗ ನಾವು ಏನು ಮಾಡಬಾರದು? (ಬಿ) ನಾವು ಮನರಂಜನೆ ಆರಿಸಿಕೊಳ್ಳೋಕೆ ಫಿಲಿಪ್ಪಿ 4:8 ಹೇಗೆ ಸಹಾಯ ಮಾಡುತ್ತೆ?

11 ನಮಗೆ ಬೇಜಾರಾದಾಗ ಅಥವಾ ಕಷ್ಟಗಳು ಬಂದಾಗ ಅದ್ರಿಂದ ತಪ್ಪಿಸಿಕೊಳ್ಳೋಕೆ ನೋಡ್ತೀವಿ. ಅದು ಸಹಜನೇ, ಹಾಗಂತ ನಾವು ಯೆಹೋವನಿಗೆ ಇಷ್ಟ ಇಲ್ಲದಿರೋ ವಿಷಯಗಳನ್ನ ಮಾಡಿಬಿಡಬಾರದು.—ಎಫೆ. 5:10-12, 15-17.

12 ಅಪೊಸ್ತಲ ಪೌಲ ಫಿಲಿಪ್ಪಿಯವರಿಗೆ ಬರೆದ ಪತ್ರದಲ್ಲಿ “ಯಾವುದು . . . ನೀತಿನೋ, ಶುದ್ಧನೋ, . . . ಪ್ರೀತಿನ ಚಿಗುರಿಸುತ್ತೋ, ಹೊಗಳಿಕೆಗೆ ಯೋಗ್ಯವಾಗಿದ್ಯೋ” ಆ ವಿಷಯಗಳಿಗೆ ಯಾವಾಗಲೂ ಗಮನಕೊಡಿ ಅಂತ ಹೇಳಿದ. (ಫಿಲಿಪ್ಪಿ 4:8 ಓದಿ.) ಇಲ್ಲಿ ಅಪೊಸ್ತಲ ಪೌಲ ಮನರಂಜನೆ ಬಗ್ಗೆ ಮಾತಾಡ್ತಿಲ್ಲ. ಆದ್ರೂ ಅವನು ಕೊಟ್ಟ ಸಲಹೆನ ನಾವು ಮನರಂಜನೆಗೆ ಅನ್ವಯಿಸಿಕೊಳ್ಳಬಹುದು. ಹಾಗಾಗಿ ನಾವು “ಹಾಡುಗಳನ್ನ” ಕೇಳುವಾಗ, “ಚಲನಚಿತ್ರ” ನೋಡುವಾಗ, “ಕಥೆ-ಕಾದಂಬರಿ” ಓದುವಾಗ ಅಥವಾ “ವಿಡಿಯೋ ಗೇಮ್‌ಗಳನ್ನ” ಆಡುವಾಗ, ಇವೆಲ್ಲಾ ಪೌಲ ಹೇಳಿದ ತರಾನೇ ಇದಿಯಾ ಅಂತ ಯೋಚಿಸೋದು ಒಳ್ಳೇದು. ನಾವು ಈ ರೀತಿ ಮಾಡುವಾಗ ಯೆಹೋವನಿಗೆ ಯಾವುದು ಇಷ್ಟ, ಯಾವುದು ಇಷ್ಟ ಇಲ್ಲ ಅಂತ ಅರ್ಥಮಾಡಿಕೊಳ್ಳೋಕೆ ಆಗುತ್ತೆ ಮತ್ತು ಸರಿಯಾಗಿರೋದನ್ನ ಪಾಲಿಸೋಕೆ ಆಗುತ್ತೆ. (ಕೀರ್ತ. 119:1-3) ಇದ್ರಿಂದ ನಮ್ಮ ಮನಸ್ಸಾಕ್ಷಿ ಯಾವಾಗಲೂ ಶುದ್ಧವಾಗಿರುತ್ತೆ. ಈಗ ನಾವು ನಿಜವಾದ ಖುಷಿ ಪಡಕೊಳ್ಳೋಕೆ ಮಾಡಬೇಕಾದ ಮೂರನೇ ವಿಷಯ ನೋಡೋಣ.—ಅ. ಕಾ. 23:1.

ಯೆಹೋವನ ಆರಾಧನೆಯನ್ನ ಎಲ್ಲಕ್ಕಿಂತ ಮುಖ್ಯವಾಗಿ ಇಡಿ

13. ನಿಜವಾದ ಖುಷಿ ಪಡಕೊಳ್ಳೋಕೆ ನಾವು ಮಾಡಬೇಕಾದ ಮೂರನೇ ವಿಷಯ ಯಾವುದು? (ಯೋಹಾನ 4:23, 24)

13 ಮೂರು, ನಿಮ್ಮ ಜೀವನದಲ್ಲಿ ಯೆಹೋವನ ಆರಾಧನೆಗೆ ಮೊದಲನೇ ಸ್ಥಾನ ಕೊಡಿ. ಯೆಹೋವ ದೇವರು ನಮ್ಮನ್ನ ಸೃಷ್ಟಿಸಿರೋದ್ರಿಂದ ನಾವು ಆತನನ್ನೇ ಆರಾಧಿಸಬೇಕು. (ಪ್ರಕ. 4:11; 14:6, 7) ಅಷ್ಟೇ ಅಲ್ಲ, ಆತನು ಹೇಳೋ ಹಾಗೆ “ಪವಿತ್ರಶಕ್ತಿಗೆ ಮತ್ತು ಸತ್ಯಕ್ಕೆ ತಕ್ಕ ಹಾಗೆ” ನಾವು ಆತನನ್ನ ಆರಾಧಿಸಬೇಕು. (ಯೋಹಾನ 4:23, 24 ಓದಿ.) ಅಂದ್ರೆ ಬೈಬಲಿಲ್ಲಿರೋ ಸತ್ಯನ ಅರ್ಥಮಾಡಿಕೊಂಡು ಪವಿತ್ರಶಕ್ತಿ ಮಾರ್ಗದರ್ಶಿಸೋ ತರ ನಾವು ಆತನನ್ನ ಆರಾಧಿಸಬೇಕು. ನಾವಿರೋ ಕಡೆ ಸರ್ಕಾರದವರು ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಅಥವಾ ನಿರ್ಬಂಧ ಹಾಕಿದ್ರೂ ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಡಬೇಕು. ಯೆಹೋವನ ಸಾಕ್ಷಿಗಳಾಗಿರೋದ್ರಿಂದ ಈಗಲೂ ನೂರಕ್ಕಿಂತ ಹೆಚ್ಚು ಸಹೋದರ ಸಹೋದರಿಯರು ಜೈಲಲ್ಲಿದ್ದಾರೆ. c ಹಾಗಿದ್ರೂ ಅವರು ಪ್ರಾರ್ಥನೆ ಮಾಡೋಕೆ, ಬೈಬಲ್‌ ಓದೋಕೆ, ಯೆಹೋವನ ಬಗ್ಗೆ ಮತ್ತು ಆತನ ಸರ್ಕಾರದ ಬಗ್ಗೆ ಬೇರೆಯವರಿಗೆ ಹೇಳೋಕೆ ತಮ್ಮಿಂದಾದ ಎಲ್ಲವನ್ನ ಸಂತೋಷವಾಗಿ ಮಾಡುತ್ತಿದ್ದಾರೆ. ಜನ ನಮಗೆ ಅವಮಾನ ಮಾಡಿದ್ರೂ, ನಮ್ಮನ್ನ ಹಿಂಸಿಸಿದ್ರೂ ಯೆಹೋವ ನಮ್ಮ ಜೊತೆ ಇರ್ತಾನೆ, ಮುಂದೆ ಪ್ರತಿಫಲ ಕೊಡ್ತಾನೆ ಅನ್ನೋದನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು. ಆಗ ನಾವು ಖುಷಿಯಾಗಿ ಇರ್ತೀವಿ.—ಯಾಕೋ. 1:12; 1 ಪೇತ್ರ 4:14.

ಒಂದು ಒಳ್ಳೇ ಮಾದರಿ

14. ತಜಿಕಿಸ್ತಾನಲ್ಲಿರೋ ಒಬ್ಬ ಸಹೋದರನಿಗೆ ಏನಾಯ್ತು ಮತ್ತು ಯಾಕೆ?

14 ನಮ್ಮ ಪರಿಸ್ಥಿತಿಗಳು ಹೇಗೇ ಇದ್ರೂ ನಾವು ಈ ಮೂರು ವಿಷಯಗಳನ್ನ ಮಾಡಿದ್ರೆ ನಮ್ಮ ಜೀವನದಲ್ಲಿ ಖುಷಿಯಾಗಿರೋಕೆ ಆಗುತ್ತೆ ಅಂತ ತುಂಬ ಜನರು ತೋರಿಸಿಕೊಟ್ಟಿದ್ದಾರೆ. ಸಹೋದರ ಜೋವೆಡೋನ್‌ ಬಬೋಜನೋವ್‌ ಉದಾಹರಣೆ ನೋಡಿ. ಅವನಿಗೆ 19 ವರ್ಷ ಇದ್ದಾಗ ತಜಿಕಿಸ್ತಾನ್‌ ಸರ್ಕಾರ ಅವನನ್ನ ಮಿಲಿಟರಿಗೆ ಸೇರೋಕೆ ಒತ್ತಾಯ ಮಾಡಿತು. ಅದಕ್ಕೆ ಅವನು ಒಪ್ಪದೇ ಇದ್ದಿದ್ದಕ್ಕೆ ಅಕ್ಟೋಬರ್‌ 4, 2019ರಲ್ಲಿ ಪೊಲೀಸರು ಅವನ ಮನೆಗೆ ನುಗ್ಗಿ ಅವನನ್ನ ಹಿಡಿದುಕೊಂಡು ಹೋಗಿ ಜೈಲಿಗೆ ಹಾಕಿದ್ರು. ಅಲ್ಲಿ ಅವನು ಕೆಲವು ತಿಂಗಳುಗಳ ಕಾಲ ಇರಬೇಕಾಯ್ತು. ಅವರು ಅವನನ್ನ ಅಪರಾಧಿ ತರ ನೋಡ್ತಿದ್ರು ಮತ್ತು ಇದು ಕೆಲವು ದೇಶಗಳಲ್ಲಿ ದೊಡ್ಡ ಸುದ್ದಿ ಆಯ್ತು. ‘ಅವನಿಗೆ ತುಂಬ ಹೊಡೆದ್ರು. ಸೈನ್ಯಕ್ಕೆ ಸೇರಿಕೊಳ್ತೀನಿ ಅಂತ ಆಣೆ ಮಾಡೋಕೆ ಅವನಿಗೆ ಹೇಳಿದ್ರು, ಯುನಿಫಾರ್ಮ್‌ ಹಾಕೋ ಅಂತ ಅವನನ್ನ ಒತ್ತಾಯ ಮಾಡಿದ್ರು’ ಅಂತ ಒಂದು ವರದಿ ತಿಳಿಸುತ್ತೆ. ಅಷ್ಟೇ ಅಲ್ಲ, ಕೋರ್ಟ್‌ ಅವನನ್ನ ಅಪರಾಧಿ ಅಂತ ತೀರ್ಪು ಕೊಟ್ಟು, ಕಠಿಣ ಕಾರಾಗೃಹ ಶಿಕ್ಷೆಯನ್ನ ವಿಧಿಸಿತು. ಆದ್ರೆ ಕೊನೆಗೆ ಆ ದೇಶದ ರಾಷ್ಟ್ರಪತಿ ಅವನನ್ನ ಬಿಡುಗಡೆ ಮಾಡೋಕೆ ಹೇಳಿದ್ರು. ಇಷ್ಟೆಲ್ಲಾ ಆದ್ರೂ ಸಹೋದರ ಜೋವೆಡೋನ್‌ ಯೆಹೋವನನ್ನು ಬಿಟ್ಟುಬಿಡಲಿಲ್ಲ ಮತ್ತು ಸಂತೋಷ ಕಳಕೊಳ್ಳಲಿಲ್ಲ. ಇದಕ್ಕೆ ಕಾರಣ, ಅವನು ಜೈಲಲ್ಲಿದ್ರೂ ಯೆಹೋವನ ಬಗ್ಗೆ ಕಲಿತಾನೇ ಇದ್ದ ಮತ್ತು ಆತನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಂಡಿದ್ದ.

ಜೋವೆಡೋನ್‌ ಯೆಹೋವನ ಬಗ್ಗೆ ಕಲೀತಾ ಇದ್ದ, ಆತನ ನೀತಿ-ನಿಯಮಗಳನ್ನ ಪಾಲಿಸ್ತಾ ಇದ್ದ, ತನ್ನ ಜೀವನದಲ್ಲಿ ಆತನ ಆರಾಧನೆಗೆ ಮೊದಲ ಸ್ಥಾನ ಕೊಟ್ಟ (ಪ್ಯಾರ 15-17 ನೋಡಿ)

15. ಜೋವೆಡೋನ್‌ ಜೈಲಲ್ಲಿದ್ದಾಗ ಹೇಗೆ ಬೈಬಲನ್ನ ಓದಿ ಅಧ್ಯಯನ ಮಾಡಿದನು?

15 ಜೋವೆಡೋನ್‌ ಜೈಲಲ್ಲಿದ್ದಾಗ ಅವನ ಹತ್ರ ಬೈಬಲಾಗಲಿ, ಬೇರೆ ಪತ್ರಿಕೆಗಳಾಗಲಿ ಇರಲಿಲ್ಲ. ಹಾಗಿದ್ರೂ ಅವನು ಹೇಗೆ ಯೆಹೋವನ ಬಗ್ಗೆ ಓದಿ ಅಧ್ಯಯನ ಮಾಡಿದನು? ಸಭೆಯಲ್ಲಿದ್ದ ಸಹೋದರ ಸಹೋದರಿಯರು ಅವನಿಗೆ ಊಟ ತಗೊಂಡು ಹೋಗುತ್ತಿದ್ದ ಬ್ಯಾಗ್‌ ಮೇಲೆ ಅವತ್ತಿನ ದಿನವಚನ ಬರೀತಿದ್ರು. ಅದನ್ನ ಸಹೋದರ ಜೋವೆಡೋನ್‌ ಓದಿ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡ್ತಿದ್ದನು. ಅವನು ಬಿಡುಗಡೆ ಆದಮೇಲೆ ಈ ತರ ಕಷ್ಟ ಅನುಭವಿಸದೇ ಇರೋ ಸಹೋದರರಿಗೆ ಹೇಳೋ ಕಿವಿಮಾತು ಏನಂದ್ರೆ “ನಿಮಗೆ ಯೆಹೋವನನ್ನು ಆರಾಧಿಸೋಕೆ ಸ್ವಾತಂತ್ರ್ಯ ಇದ್ರೆ, ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳಿ, ಬೈಬಲನ್ನ, ಪ್ರಕಾಶನಗಳನ್ನ ಓದಿ ಯೆಹೋವನ ಬಗ್ಗೆ ಚೆನ್ನಾಗಿ ಕಲಿರಿ.”

16. ಜೋವೆಡೋನ್‌ ಜೈಲಲ್ಲಿದ್ದಾಗ ಯಾವ ವಿಷಯಗಳ ಬಗ್ಗೆ ಯೋಚನೆ ಮಾಡ್ತಾ ಇದ್ದ?

16 ಸಹೋದರ ಜೋವೆಡೋನ್‌ ಯೆಹೋವನ ನೀತಿ-ನಿಯಮಗಳನ್ನ ಪಾಲಿಸಿದನು. ಅವನು ಜೈಲಲ್ಲಿದ್ದಾಗ ಕೆಟ್ಟ ಆಸೆಗಳನ್ನ ಬೆಳೆಸಿಕೊಂಡು ಕೆಟ್ಟದ್ದನ್ನ ಮಾಡೋಕೆ ಹೋಗಲಿಲ್ಲ. ಬದಲಿಗೆ ಯೆಹೋವ ಇಷ್ಟಪಡೋ ವಿಷಯಗಳ ಬಗ್ಗೆ ಯೋಚಿಸ್ತಾ ಇದ್ದ. ಯೆಹೋವನ ಸೃಷ್ಟಿಗಳ ಬಗ್ಗೆ ಯೋಚನೆ ಮಾಡಿದ. ಪ್ರತಿದಿನ ಬೆಳಗ್ಗೆ ಹಕ್ಕಿಗಳ ಚಿಲಿಪಿಲಿ ಶಬ್ದವನ್ನ ಕೇಳಿಸಿಕೊಳ್ತಾ ಇದ್ದ. ಅಷ್ಟೇ ಅಲ್ಲ, ರಾತ್ರಿ ಹೊತ್ತಲ್ಲಿ ಆಕಾಶ, ಚಂದ್ರ ಮತ್ತು ನಕ್ಷತ್ರಗಳನ್ನ ನೋಡ್ತಾ ಇದ್ದ. “ಯೆಹೋವ ಕೊಟ್ಟಿರೋ ಈ ಉಡುಗೊರೆಗಳಿಂದ ನನಗೆ ತುಂಬ ಖುಷಿ ಆಗ್ತಿತ್ತು, ಉತ್ತೇಜನ ಸಿಗ್ತಿತ್ತು” ಅಂತ ಅವನು ಹೇಳ್ತಾನೆ. ನಾವು ಖುಷಿಯಾಗಿರೋಕೆ ಬೇಕಾಗಿರೋದನ್ನ ಮತ್ತು ಬೈಬಲನ್ನ ಕೊಟ್ಟಿರೋದಕ್ಕೆ ಯೆಹೋವ ದೇವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಈ ಖುಷಿ ನಮಗೆ ಕಷ್ಟಗಳನ್ನ ತಾಳಿಕೊಳ್ಳೋಕೆ ಸಹಾಯಮಾಡುತ್ತೆ.

17. ಜೋವೆಡೋನ್‌ ತರ ಕಷ್ಟ ಅನುಭವಿಸ್ತಿರೋ ಸಹೋದರ ಸಹೋದರಿಯರಿಗೆ ಒಂದನೇ ಪೇತ್ರ 1:6, 7ರಲ್ಲಿ ಹೇಳಿರೋ ತರ ಏನಾಗುತ್ತೆ?

17 ಸಹೋದರ ಜೋವೆಡೋನ್‌ ಎಲ್ಲಕ್ಕಿಂತ ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಟ್ಟ. ಎಷ್ಟೇ ಕಷ್ಟ ಬಂದ್ರೂ ಯೆಹೋವನಿಗೆ ನಿಯತ್ತಾಗಿರಬೇಕು, ಆತನನ್ನು ಬಿಟ್ಟು ಹೋಗಬಾರದು ಅಂತ ಆ ಸಹೋದರನಿಗೆ ಗೊತ್ತಿತ್ತು. ಯಾಕಂದ್ರೆ “ನಿನ್ನ ದೇವರಾಗಿರೋ ಯೆಹೋವನನ್ನೇ ನೀನು ಆರಾಧಿಸಬೇಕು, ಆತನೊಬ್ಬನಿಗೇ ನೀನು ಪವಿತ್ರ ಸೇವೆ ಸಲ್ಲಿಸಬೇಕು” ಅಂತ ಯೇಸುನೇ ಹೇಳಿದ್ದಾನೆ. (ಲೂಕ 4:8) ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಜೋವೆಡೋನ್‌ಗೆ ತನ್ನ ಧರ್ಮನ ಬಿಟ್ಟುಬಿಡೋಕೆ ತುಂಬ ಒತ್ತಾಯ ಮಾಡಿದ್ರು. ಆದ್ರೂ ‘ನಂಬಿಕೆ ಕಳಕೊಳ್ಳದೇ ಇರೋಕೆ ಮತ್ತು ನಿಯತ್ತಾಗಿರೋಕೆ’ ಸಹಾಯ ಮಾಡಪ್ಪಾ ಅಂತ ಆ ಸಹೋದರ ಯೆಹೋವನ ಹತ್ರ ಹಗಲೂರಾತ್ರಿ ಬೇಡಿಕೊಳ್ತಾ ಇದ್ದ. ಇಷ್ಟೆಲ್ಲಾ ಅನ್ಯಾಯ ಆದ್ರೂ ಸಹೋದರ ಜೋವೆಡೋನ್‌ ನಿಷ್ಠೆಯನ್ನ ಬಿಟ್ಟುಕೊಡಲಿಲ್ಲ. ಇದ್ರಿಂದ ಅವನು ತುಂಬ ಖುಷಿಯಾಗಿದ್ದಾನೆ. ಯಾಕಂದ್ರೆ ಹೊಡೆತ ತಿಂದು ಚಿತ್ರಹಿಂಸೆ ಅನುಭವಿಸಿದಾಗ ಅವನ ನಂಬಿಕೆಗೆ ಪರೀಕ್ಷೆ ಬಂತು. ಅವನು ಜೈಲಿಗೆ ಹೋಗೋ ಮುಂಚೆ ಇದ್ದ ನಂಬಿಕೆ, ಈಗ ಎರಡು ಪಟ್ಟು ಜಾಸ್ತಿಯಾಗಿದೆ.—1 ಪೇತ್ರ 1:6, 7 ಓದಿ.

18. ನೀವು ಸಂತೋಷವಾಗಿರೋಕೆ ಏನು ಮಾಡಬೇಕು?

18 ನೀವು ಸಂತೋಷವಾಗಿರೋಕೆ ಏನು ಬೇಕು ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು. ಅದಕ್ಕೆ ನೀವು ಕಲಿತ ಮೂರು ವಿಷಯಗಳನ್ನ ಮಾಡಿದ್ರೆ ನಿಮ್ಮ ಜೀವನದಲ್ಲಿ ಏನೇ ಕಷ್ಟ ಬಂದ್ರೂ ಸಂತೋಷವಾಗಿರಬಹುದು. ಆಗ “ಯಾರಿಗೆ ಯೆಹೋವ ದೇವರಾಗಿ ಇರ್ತಾನೋ ಅಂಥವರು ಭಾಗ್ಯವಂತರು” ಅಥವಾ ಸಂತೋಷವಾಗಿ ಇರ್ತಾರೆ ಅಂತ ನೀವೇ ಹೇಳ್ತೀರಿ.—ಕೀರ್ತ. 144:15.

ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ

a ಇವತ್ತು ಜನ ಹೆಸರು, ಆಸ್ತಿ, ಅಧಿಕಾರದಿಂದ ಸಂತೋಷ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ. ಅದಕ್ಕೆ ಅದರ ಹಿಂದೆನೇ ಹೋಗ್ತಾ ಇರ್ತಾರೆ. ಆದ್ರೆ ಅದ್ರಿಂದ ಅವರಿಗೆ ನಿಜವಾದ ಖುಷಿ ಸಿಕ್ಕಿಲ್ಲ. ಅದು ಎಲ್ಲಿ ಸಿಗುತ್ತೆ ಅಂತ ಯೇಸು ಹೇಳಿದನು. ನಮಗೆ ನಿಜವಾಗಲೂ ಖುಷಿ ಕೊಡೋ ಮೂರು ವಿಷಯಗಳ ಬಗ್ಗೆ ನಾವು ಈ ಲೇಖನದಲ್ಲಿ ನೋಡೋಣ.

b ಆಗಸ್ಟ್‌ 15, 2014ರ ಕಾವಲಿನಬುರುಜುವಿನ “‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?” ಅನ್ನೋ ಲೇಖನ ನೋಡಿ.

c ಹೆಚ್ಚಿನ ಮಾಹಿತಿಗಾಗಿ jw.orgಯಲ್ಲಿ “ನಂಬಿಕೆಗಾಗಿ ಜೈಲಿಗೆ ಹೋದವರು” (ಇಂಗ್ಲಿಷ್‌) ಅಂತ ಹುಡುಕಿ.

d ಚಿತ್ರ ವಿವರಣೆ: ನಮ್ಮ ಸಹೋದರರನ್ನ ಪೊಲೀಸರು ಅರೆಸ್ಟ್‌ ಮಾಡಿ ಕೋರ್ಟ್‌ಗೆ ಕರಕೊಂಡು ಹೋದಾಗೆಲ್ಲ ಅಲ್ಲಿದ್ದ ಸಹೋದರ ಸಹೋದರಿಯರು ಚಪ್ಪಾಳೆ ತಟ್ಟಿ ಧೈರ್ಯ ತುಂಬುತ್ತಿದ್ರು.