ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೇದಿಕೆ ಮತ್ತು ಚಾವಣಿಯಲ್ಲಿ ತೂಗುಹಾಕಿದ್ದ ಬ್ಯಾನರ್‌

1922—ನೂರು ವರ್ಷಗಳ ಹಿಂದೆ

1922—ನೂರು ವರ್ಷಗಳ ಹಿಂದೆ

“ದೇವರು . . . ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ.” (1 ಕೊರಿಂ. 15:57, ಸತ್ಯವೇದವು) ಇದು 1922ರ ವರ್ಷವಚನ ಆಗಿತ್ತು. ಬೈಬಲ್‌ ವಿದ್ಯಾರ್ಥಿಗಳು ಯೆಹೋವನಿಗೆ ನಂಬಿಗಸ್ತರಾಗಿದ್ರೆ ಅವರನ್ನ ಆಶೀರ್ವದಿಸ್ತಾನೆ ಅಂತ ಈ ವಚನ ಭರವಸೆ ತುಂಬಿಸ್ತು. ಇದು ನಿಜ ಆಯ್ತು. ಅವರೇ ಸ್ವಂತವಾಗಿ ಪುಸ್ತಕಗಳನ್ನ ಪ್ರಿಂಟ್‌ ಮಾಡಿ ಬೈಂಡ್‌ ಮಾಡೋಕೆ ಶುರುಮಾಡಿದ್ರು. ದೇವರ ಸಂದೇಶವನ್ನ ಬೇರೆಯವರಿಗೆ ತಲುಪಿಸೋಕೆ ಸ್ವಂತ ರೆಡಿಯೋ ಸ್ಟೇಶನ್‌ ಶುರುಮಾಡಿದ್ರು. ಅಷ್ಟೇ ಅಲ್ಲ, ಯೆಹೋವ ತನ್ನ ಜನರನ್ನ ಆಶೀರ್ವದಿಸುತ್ತಿದ್ದಾನೆ ಅನ್ನೋದು ಆ ವರ್ಷದ ಕೊನೆಯಲ್ಲಿ ಸ್ಪಷ್ಟವಾಗಿ ಗೊತ್ತಾಯ್ತು. ಬೈಬಲ್‌ ವಿದ್ಯಾರ್ಥಿಗಳು ಅಮೆರಿಕಾದ ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ಒಂದು ಅಧಿವೇಶನ ನಡೆಸಿದ್ರು. ಇದು ಇತಿಹಾಸದಲ್ಲೇ ಒಂದು ಮೈಲಿಗಲ್ಲನ್ನ ಸೃಷ್ಟಿಸಿತು.

“ಇದನ್ನೆಲ್ಲ ನಮ್ಮಿಂದ ಮಾಡಕ್ಕಾಗುತ್ತಾ?”

ಸಹೋದರ ಸಹೋದರಿಯರು ಹೆಚ್ಚೆಚ್ಚು ಸಿಹಿಸುದ್ದಿ ಸಾರುತ್ತಾ ಇದ್ದ ಹಾಗೆ ಪುಸ್ತಕಗಳ ಬೇಡಿಕೆ ಹೆಚ್ಚಾಯ್ತು. ಆದ್ರೆ ಬ್ರೂಕ್ಲಿನ್‌ ಬೆತೆಲಲ್ಲಿ ಪತ್ರಿಕೆಗಳನ್ನ ಮಾತ್ರ ಪ್ರಿಂಟ್‌ ಮಾಡ್ತಿದ್ರು. ಪುಸ್ತಕಗಳನ್ನ ಹೊರಗಡೆ ಪ್ರಿಂಟ್‌ ಮಾಡಿಸ್ತಿದ್ರು. ಆದ್ರೆ ಸಾಕಷ್ಟು ಪುಸ್ತಕಗಳನ್ನ ಅವರಿಂದ ಪ್ರಿಂಟ್‌ ಮಾಡಿಕೊಡೋಕೆ ಆಗ್ತಾ ಇರಲಿಲ್ಲ. ಕೆಲವು ತಿಂಗಳು ಹೀಗೇ ಇದ್ದಿದ್ದರಿಂದ ಜನರಿಗೆ ಕೊಡೋಕೆ ಪುಸ್ತಕಗಳೇ ಇರುತ್ತಿರಲಿಲ್ಲ. ಅದಕ್ಕೆ ಸಹೋದರ ರದರ್‌ಫರ್ಡ್‌ ಫ್ಯಾಕ್ಟರಿ ಮೇಲ್ವಿಚಾರಕರಾಗಿದ್ದ ಸಹೋದರ ರಾಬರ್ಟ್‌ ಮಾರ್ಟಿನ್‌ಗೆ ‘ನಾವೇ ಪುಸ್ತಕಗಳನ್ನ ಪ್ರಿಂಟ್‌ ಮಾಡೋಣ’ ಅಂದ್ರು.

ನ್ಯೂಯಾರ್ಕ್‌ ಬ್ರೂಕ್ಲಿನ್‌ನ ಕಾನ್‌ಕರ್ಡ್‌ ಸ್ಟ್ರೀಟ್‌ನಲ್ಲಿದ್ದ ನಮ್ಮ ಫ್ಯಾಕ್ಟರಿ

“ಇದನ್ನ ಕೇಳಿದಾಗ ‘ಇದನ್ನೆಲ್ಲ ನಮ್ಮಿಂದ ಮಾಡಕ್ಕಾಗುತ್ತಾ?’ ಅಂತ ಅನಿಸ್ತು. ಯಾಕಂದ್ರೆ ಪ್ರಿಂಟ್‌ ಮಾಡೋಕೆ, ಬೈಂಡ್‌ ಮಾಡೋಕೆ ಬೇರೆಬೇರೆ ರೀತಿಯ ಮೆಶಿನ್‌ಗಳು ನಮಗೆ ಬೇಕಾಗಿತ್ತು” ಅಂತ ಸಹೋದರ ಮಾರ್ಟಿನ್‌ ಹೇಳ್ತಾರೆ. ಆಮೇಲೆ ಕೆಲಸಕ್ಕೆ ಬೇಕಾಗಿದ್ದ ಮೆಶಿನ್‌ಗಳನ್ನ ಸಹೋದರರು ತಗೊಂಡ್ರು. ಬ್ರೂಕ್ಲಿನ್‌ನ 18ನೇ ಕಾನ್‌ಕರ್ಡ್‌ ಸ್ಟ್ರೀಟ್‌ನಲ್ಲಿ ಒಂದು ಜಾಗವನ್ನ ಭೋಗ್ಯಕ್ಕೆ ಹಾಕಿಸಿಕೊಂಡ್ರು.

ಆದ್ರೆ ಈ ನಿರ್ಧಾರ ಕೆಲವರಿಗೆ ಇಷ್ಟ ಆಗಲಿಲ್ಲ. ನಮ್ಮ ಪುಸ್ತಕಗಳನ್ನ ಬೈಂಡ್‌ ಮಾಡಿ ಕೊಡ್ತಿದ್ದ ಕಂಪೆನಿ ಮಾಲೀಕ ಒಂದು ಸಲ ನಮ್ಮ ಫ್ಯಾಕ್ಟರಿನ ನೋಡೋಕೆ ಬಂದ. ಆಗ ಅವನು “ನಿಮ್ಮ ಬಳಿ ಅತ್ಯುತ್ತಮ ದರ್ಜೆಯ ಮುದ್ರಣಾಲಯವಿದೆ, ಆದರೆ ಇದನ್ನು ನಡೆಸುವುದು ಹೇಗೆಂದು ನಿಮ್ಮಲ್ಲಿ ಯಾರಿಗೂ ಗೊತ್ತಿಲ್ಲ. ಆರು ತಿಂಗಳುಗಳೊಳಗೆ ಇಡೀ ಮುದ್ರಣಾಲಯವು ಕೆಟ್ಟುಹೋದ ಯಂತ್ರಗಳ ಕೊಂಪೆಯಾಗಲಿದೆ” ಅಂದ.

‘ಇವರು ಹೇಳಿದ್ರಲ್ಲೂ ಒಂದರ್ಥ ಇದೆ ಅಂತನಿಸ್ತು. ಆದ್ರೆ ನಾವು, ಯೆಹೋವ ದೇವರು ನಮ್ಮ ಜೊತೆ ಇದ್ದಾನೆ ಅಂತ ನಂಬಿದ್ವಿ. ಯೆಹೋವನ ಬಗ್ಗೆ ಆ ಮಾಲೀಕನಿಗೆ ಗೊತ್ತಿರಲಿಲ್ಲ’ ಅಂತ ಸಹೋದರ ಮಾರ್ಟಿನ್‌ ಹೇಳ್ತಾರೆ. ಅವರು ನಂಬಿಕೆ ಸುಳ್ಳಾಗಲಿಲ್ಲ. ಸಹೋದರರು ಚೆನ್ನಾಗಿ ಕೆಲಸ ಮಾಡೋಕೆ ಕಲಿತ್ರು. ಒಂದು ದಿನಕ್ಕೆ 2,000 ಪುಸ್ತಕಗಳನ್ನ ಪ್ರಿಂಟ್‌ ಮಾಡಿ ಬೈಂಡ್‌ ಮಾಡ್ತಿದ್ರು.

ಫ್ಯಾಕ್ಟರಿಯ ಪ್ರಿಂಟಿಂಗ್‌ ಮೆಶಿನ್‌ನಲ್ಲಿ ಕೆಲಸ ಮಾಡ್ತಿದ್ದ ಸಹೋದರರು

ಸಾವಿರಾರು ಜನ ಸಿಹಿಸುದ್ದಿ ಕೇಳಿಸಿಕೊಂಡ್ರು

ಪುಸ್ತಕಗಳನ್ನ ಪ್ರಿಂಟ್‌ ಮಾಡೋದರ ಜೊತೆಗೆ ಸಿಹಿಸುದ್ದಿ ಸಾರೋಕೆ ಸಹೋದರರು ಇನ್ನೊಂದು ಹೊಸ ವಿಧಾನ ಕಂಡುಹಿಡಿದ್ರು. ಅದು ರೇಡಿಯೋ ಪ್ರಸಾರದ ಮೂಲಕ ಸಿಹಿಸುದ್ದಿ ಸಾರೋದು. ಸಹೋದರ ರದರ್‌ಫರ್ಡ್‌ 1922ರ ಫೆಬ್ರವರಿ 26ನೇ ತಾರೀಕು ಅಂದ್ರೆ ಭಾನುವಾರ ಮಧ್ಯಾಹ್ನ ಮೊದಲನೇ ಸಲ ರೇಡಿಯೋದಲ್ಲಿ ಭಾಷಣ ಕೊಟ್ರು. ಅದರ ವಿಷಯ “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಅಂತ ಇತ್ತು. ಈ ಭಾಷಣವನ್ನ ಅಮೆರಿಕದಲ್ಲಿರೋ ಕ್ಯಾಲಿಫೋರ್ನಿಯದ ಲಾಸ್‌ ಏಂಜಲೀಸ್‌ನಲ್ಲಿ ಕೆ.ಓ.ಜಿ. ರೇಡಿಯೋ ಸ್ಟೇಷನ್‌ನಿಂದ ಪ್ರಸಾರ ಮಾಡಿದ್ರು.

ಸುಮಾರು 25,000 ಜನ ಈ ಕಾರ್ಯಕ್ರಮ ಕೇಳಿಸಿಕೊಂಡ್ರು. ಆ ಭಾಷಣ ತುಂಬ ಇಷ್ಟ ಆಯ್ತು ಅಂತ ಕೆಲವರು ಪತ್ರಗಳನ್ನೂ ಬರೆದ್ರು. ಅದ್ರಲ್ಲಿ ಒಬ್ಬರು ಕ್ಯಾಲಿಫೋರ್ನಿಯದ ಸ್ಯಾಂಟ ಆ್ಯನದಲ್ಲಿರೋ ವಿಲ್ಲರ್ಡ್‌ ಆ್ಯಶ್‌ಫರ್ಡ್‌. ಅವರು ಸಹೋದರ ರದರ್‌ಫರ್ಡ್‌ಗೆ “ನಾನು ಇಂಥಾ ಒಳ್ಳೇ ಭಾಷಣನ ಕೇಳೇ ಇರಲಿಲ್ಲ. ನನಗೆ ಬೋರ್‌ ಅನಿಸಲಿಲ್ಲ. ತುಂಬ ಚೆನ್ನಾಗಿ ಕೊಟ್ರಿ. ನಮ್ಮ ಮನೇಲಿ ಮೂರು ಜನಕ್ಕೂ ಹುಷಾರಿಲ್ಲ. ನೀವು ನಮ್ಮ ಪಕ್ಕದ ಮನೆಗೆ ಬಂದು ಭಾಷಣ ಕೊಟ್ಟಿದ್ರೂ ನಮಗೆ ಕೇಳಿಸಿಕೊಳ್ಳೋಕೆ ಆಗುತ್ತಿರಲಿಲ್ಲ. ರೇಡಿಯೋದಲ್ಲಿ ಬಂದಿದ್ದು ಒಳ್ಳೇದಾಯ್ತು” ಅಂತ ಪತ್ರ ಬರೆದಿದ್ರು.

ಈ ತರದ ಕಾರ್ಯಕ್ರಮ ವಾರವಾರ ಬರ್ತಿತ್ತು. ಆ ವರ್ಷ ಕೊನೆ ಆಗೋಷ್ಟರಲ್ಲಿ “ಕಡಿಮೆ ಅಂದ್ರೂ 3 ಲಕ್ಷ ಜನ ಸಿಹಿಸುದ್ದಿ ಕೇಳಿಸಿಕೊಂಡ್ರು” ಅಂತ ಕಾವಲಿನ ಬುರುಜು ಪತ್ರಿಕೆ ಹೇಳಿತ್ತು.

ಜನರು ಇಷ್ಟು ಚೆನ್ನಾಗಿ ಪ್ರತಿಕ್ರಿಯಿಸುತ್ತಾ ಇದ್ದಿದ್ದನ್ನ ನೋಡಿ ಬೈಬಲ್‌ ವಿದ್ಯಾರ್ಥಿಗಳು ಒಂದು ಸ್ವಂತ ರೇಡಿಯೋ ಸ್ಟೇಷನ್‌ನ ಶುರುಮಾಡೋಕೆ ಯೋಚನೆ ಮಾಡಿದ್ರು. ಬ್ರೂಕ್ಲಿನ್‌ನಲ್ಲಿ ಬೆತೆಲ್‌ ಹತ್ರ ಸ್ಟೇಟನ್‌ ಐಲ್ಯಾಂಡಲ್ಲಿ ಜಾಗ ತಗೊಂಡು WBBR ಅನ್ನೋ ರೇಡಿಯೋ ಸ್ಟೇಷನ್‌ ಶುರುಮಾಡಿದ್ರು. ಈ ರೇಡಿಯೋ ಪ್ರಸಾರದಿಂದ ಲಕ್ಷಾಂತರ ಜನರಿಗೆ ಸಿಹಿಸುದ್ದಿ ಸಾರಿದ್ರು.

“ADV” (ಎಡಿವಿ)

1922, ಸೆಪ್ಟೆಂಬರ್‌ 5ರಿಂದ 13ನೇ ತಾರೀಕಿನ ತನಕ ಒಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ಬೈಬಲ್‌ ವಿದ್ಯಾರ್ಥಿಗಳಿಗೆ ಅಧಿವೇಶನ ಏರ್ಪಡಿಸಲಾಗಿದೆ ಅಂತ ಅದೇ ವರ್ಷದ ಜೂನ್‌ 15ರ ಕಾವಲಿನ ಬುರುಜು ಸಂಚಿಕೆಯಲ್ಲಿ ಪ್ರಕಟಿಸಲಾಯ್ತು. ಎಲ್ಲಾ ಬೈಬಲ್‌ ವಿದ್ಯಾರ್ಥಿಗಳೂ ಕುತೂಹಲದಿಂದ ಆ ಅಧಿವೇಶನಕ್ಕೆ ಹಾಜರಾದ್ರು.

ಸಹೋದರ ರದರ್‌ಫರ್ಡ್‌ ತಮ್ಮ ಮೊದಲನೇ ಭಾಷಣದಲ್ಲಿ “ನಮ್ಮ ಈ ಅಧಿವೇಶನವನ್ನ ಯೆಹೋವ ಖಂಡಿತ ಆಶೀರ್ವದಿಸ್ತಾನೆ ಅನ್ನೋ ನಂಬಿಕೆ ನನಗಿದೆ. ಈ ಅಧಿವೇಶನದಿಂದಾಗಿ ನಾವು ತುಂಬ ಜನರಿಗೆ ಆತನ ಬಗ್ಗೆ ಸಾಕ್ಷಿ ಕೊಡ್ತೀವಿ” ಅಂತ ಹೇಳಿದ್ರು. ಆ ಅಧಿವೇಶನದಲ್ಲಿ ಭಾಷಣ ಕೊಟ್ಟವರೆಲ್ಲರೂ ಸಿಹಿಸುದ್ದಿ ಸಾರೋಕೆ ಸಹೋದರರಿಗೆ ತುಂಬ ಪ್ರೋತ್ಸಾಹ ಕೊಟ್ರು.

1922ರಲ್ಲಿ ಓಹಾಯೋದ ಸೀಡರ್‌ ಪಾಯಿಂಟ್‌ನಲ್ಲಿ ನಡೆದ ಅಧಿವೇಶನ

ಸೆಪ್ಟೆಂಬರ್‌ 8, ಶುಕ್ರವಾರದಂದು ಸುಮಾರು 8,000 ಜನ ಆ ಅಧಿವೇಶನಕ್ಕೆ ಬಂದಿದ್ರು. ಇವರೆಲ್ಲರೂ ಸಹೋದರ ರದರ್‌ಫರ್ಡ್‌ರವರ ಭಾಷಣ ಕೇಳೋಕೆ ಕಾಯ್ತಾ ಇದ್ರು. ಅವರಿಗೆ ಆಮಂತ್ರಣ ಪತ್ರದಲ್ಲಿ ಬರೆದಿದ್ದ “ADV” (ಎಡಿವಿ) ಅನ್ನೋದರ ಅರ್ಥ ಏನು ಅಂತ ತಿಳಿದುಕೊಳ್ಳೋಕೆ ತುಂಬ ಆಸೆಯಿತ್ತು. ವೇದಿಕೆಯ ಮೇಲೆ ಚಾವಣಿಯಲ್ಲಿ ಸುತ್ತಿಟ್ಟಿದ್ದ ಒಂದು ಕ್ಯಾನ್ವಾಸ್‌ ಬಟ್ಟೆಯಲ್ಲಿ ಏನು ಬರೆದಿದೆ ಅಂತ ತಿಳುಕೊಳ್ಳೋಕೆ ಕಾಯ್ತಾ ಇದ್ರು. ಆ ಅಧಿವೇಶನಕ್ಕೆ ಸಹೋದರ ಆರ್ಥರ್‌ ಕ್ಲಾಸ್‌ ಬಂದಿದ್ರು. ಅವರು ಅಮೆರಿಕಾದ ಓಕ್ಲಹಾಮಾ ತುಲ್ಸಾದಿಂದ ಬಂದಿದ್ರು. ಅವರು ಭಾಷಣಗಳನ್ನ ಚೆನ್ನಾಗಿ ಕೇಳಿಸಿಕೊಳ್ಳಬೇಕು ಅಂತ ಒಂದು ಒಳ್ಳೇ ಸೀಟನ್ನ ಹುಡುಕಿ ಕೂತುಕೊಂಡ್ರು. ಯಾಕಂದ್ರೆ ಆಗಿನ ಕಾಲದಲ್ಲಿ ಈಗಿರೋ ತರ ಧ್ವನಿವರ್ಧಕಗಳು ಇರಲಿಲ್ಲ.

“ಒಂದೊಂದು ಪದಕ್ಕೂ ಪೂರ್ತಿಯಾಗಿ ಗಮನಕೊಡುತ್ತಾ ಕೂತಿದ್ದೆ”

ಸಹೋದರ ರದರ್‌ಫರ್ಡ್‌ ಭಾಷಣ ಕೊಡುವಾಗ ಯಾವ ಅಡಚಣೆನೂ ಆಗಬಾರದು ಅಂತ ಅಧಿವೇಶನದ ಆರಂಭದಲ್ಲೇ ಅಧ್ಯಕ್ಷರು ಸಭಾಂಗಣದ ಬಾಗಿಲನ್ನ ಮುಚ್ಚಲಾಗುತ್ತೆ ಅಂತ ಪ್ರಕಟಣೆ ಮಾಡಿದ್ರು. ಸಹೋದರ ರದರ್‌ಫರ್ಡ್‌ ತಮ್ಮ ಭಾಷಣವನ್ನ 9:30ಕ್ಕೆ ಶುರು ಮಾಡಿದ್ರು. ಆಗ ಅವರು ಮತ್ತಾಯ 4:17ರಲ್ಲಿರೋ ಮಾತುಗಳನ್ನ ಹೇಳ್ತಾ “ಪರಲೋಕರಾಜ್ಯವು ಸಮೀಪಿಸಿತು” ಅಂದ್ರು. (ಸತ್ಯವೇದವು) ರಾಜ್ಯದ ಸಂದೇಶವನ್ನ ಜನರು ಹೇಗೆ ಕೇಳಿಸಿಕೊಳ್ತಾರೆ ಅಂತ ಅವರು ವಿವರಿಸಿದ್ರು. “ಯೇಸು ತನ್ನ ಸಾನಿಧ್ಯದ ಸಮಯದಲ್ಲಿ ಕೊಯ್ಲಿನ ಕೆಲಸ ಮಾಡ್ತಾನೆ. ಆಗ ಆತನು ತನಗೆ ನಿಷ್ಠೆ ತೋರಿಸೋ ಜನರನ್ನ ಒಟ್ಟುಸೇರಿಸ್ತಾನೆ” ಅಂದ್ರು.

“ಒಂದೊಂದು ಪದಕ್ಕೂ ಪೂರ್ತಿಯಾಗಿ ಗಮನಕೊಡುತ್ತಾ ಕೂತಿದ್ದೆ” ಅಂತ ಸಹೋದರ ಕ್ಲಾಸ್‌ ಹೇಳ್ತಾರೆ. ಆದ್ರೆ ದಿಢೀರಂತ ಅವರಿಗೆ ಹೊಟ್ಟೆ ನೋವು ಬಂದು ಸಭಾಂಗಣದಿಂದ ಹೊರಗೆ ಹೋಗಬೇಕಾಯ್ತು. ಮತ್ತೆ ಒಳಗೆ ಬರೋಕೆ ಆಗಲ್ಲ ಅನ್ನೋ ಬೇಜಾರಲ್ಲೇ ಅವರು ಹೊರಗೆ ಹೋದ್ರು.

ಕೆಲವೇ ನಿಮಿಷಗಳಲ್ಲಿ ಅವರು ಸುಧಾರಿಸಿಕೊಂಡ್ರು. ಸಭಾಂಗಣದ ಹಿಂದೆ ನಡಕೊಂಡು ಹೋಗ್ತಿದ್ದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟೋ ಶಬ್ದ ಕೇಳಿಸ್ತು. ಆಗ ಅವರು “ಆ ಭಾಷಣವನ್ನ ನಾನೂ ಕೇಳಿಸಿಕೊಳ್ಳಬೇಕು. ಚಾವಣಿ ಹತ್ತಾದ್ರೂ ಹೋಗಿ ಕೇಳಿಸಿಕೊಳ್ತೀನಿ” ಅಂತ ಅಂದ್ಕೊಂಡ್ರು. 23 ವಯಸ್ಸಿನ ಯುವಕನಿಗೆ ಚಾವಣಿ ಹತ್ತೋದೇನು ದೊಡ್ಡ ಕೆಲಸನಾ? ಹತ್ತೇಬಿಟ್ರು. ಅಲ್ಲಿ ಬೆಳಕು ಬೀಳಲಿ ಅಂತ ಮಾಡಿದ್ದ ಕಿಟಕಿಗಳನ್ನ ನೋಡಿ ಅದರ ಹತ್ರ ಹೋದ್ರು. “ಆಗ ನನಗೆ ಭಾಷಣ ಚೆನ್ನಾಗಿ ಕೇಳಿಸ್ತಿತ್ತು” ಅಂತ ಸಹೋದರ ಹೇಳ್ತಾರೆ.

ಆದ್ರೆ ಈಗಾಗಲೇ ಅಲ್ಲಿ ಕೆಲವು ಸಹೋದರರು ಇದ್ರು. ಅವರಲ್ಲಿ ಒಬ್ಬರು ಫ್ರ್ಯಾಂಕ್‌ ಜಾನ್‌ಸನ್‌. ಅವರು ಆರ್ಥರ್‌ನ ನೋಡಿದ್‌ ತಕ್ಷಣ ಅವರ ಹತ್ರ ಓಡಿಬಂದು, ‘ನಿನ್ನ ಹತ್ರ ಚಾಕು ಇದ್ಯಾ?’ ಅಂತ ಕೇಳಿದ್ರು.

ಅದಕ್ಕೆ ಆರ್ಥರ್‌ ‘ಹೌದು, ನನ್ನ ಹತ್ರ ಚಿಕ್ಕ ಚಾಕು ಇದೆ’ ಅಂದ್ರು.

ಆಗ ಸಹೋದರ ಫ್ರ್ಯಾಂಕ್‌, “ನಿನ್ನನ್ನ ದೇವರೇ ಕಳಿಸಿರಬೇಕು. ಇಲ್ಲಿ ಸುತ್ತಿಟ್ಟಿರೋದು ಏನಂತ ನಿನಗೆ ಗೊತ್ತಾ? ಅದು ಬ್ಯಾನರ್‌ ಅದಕ್ಕೆ 4 ಮೂಲೆಗಳಲ್ಲಿ ಹಗ್ಗಗಳನ್ನ ಕಟ್ಟಿ ಇಟ್ಟಿದ್ದೀವಿ. ಜಡ್ಜ್‌ a ಏನ್‌ ಹೇಳ್ತಾರೆ ಅಂತ ಕೇಳಿಸಿಕೊಳ್ತಾ ಇರು. ಅವರು ‘ಪ್ರಕಟಿಸಿರಿ, ಪ್ರಕಟಿಸಿರಿ’ ಅಂತ ಹೇಳಿದ್‌ ತಕ್ಷಣ ಆ ಹಗ್ಗ ಕತ್ತರಿಸು“ ಅಂತ ಹೇಳಿದ್ರು.

ಸಹೋದರ ಆರ್ಥರ್‌ ಚಾಕು ಹಿಡ್ಕೊಂಡು ಹಗ್ಗ ಕತ್ತರಿಸೋಕೆ ಕಾಯ್ತಾ ಇದ್ರು. ಸಹೋದರ ರದರ್‌ಫರ್ಡ್‌ ತಮ್ಮ ಭಾಷಣದ ಕೊನೆಯಲ್ಲಿ ಉತ್ಸಾಹದಿಂದ ಜೋರಾಗಿ “ಕರ್ತನಿಗೆ ನಂಬಿಗಸ್ತರಾಗಿರ್ರಿ ಮತ್ತು ನಿಜ ಸಾಕ್ಷಿಗಳಾಗಿರ್ರಿ. ಬಾಬೆಲ್‌ ಸಂಪೂರ್ಣವಾಗಿ ನಾಶಗೊಳ್ಳುವ ತನಕ ಹೋರಾಟದಲ್ಲಿ ಮುಂದುವರಿಯಿರಿ. ಭೂಮಿಯ ಉದ್ದಗಲಕ್ಕೂ ಸಂದೇಶವನ್ನು ಸಾರಿರಿ. ಯೆಹೋವನು ದೇವರೆಂದೂ ಯೇಸು ಕ್ರಿಸ್ತನು ರಾಜಾಧಿರಾಜನೂ ಕರ್ತರ ಕರ್ತನೂ ಆಗಿದ್ದಾನೆಂದು ಲೋಕವು ತಿಳಿಯಬೇಕು. ಇದು ಅತ್ಯದ್ಭುತವಾದ ದಿನ. ನೋಡಿ, ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಅಂದ್ರು.

ಆರ್ಥರ್‌ ಮತ್ತು ಅಲ್ಲಿದ್ದ ಇನ್ನೂ ಕೆಲವು ಸಹೋದರರು ಆ ಬ್ಯಾನರ್‌ಗೆ ಕಟ್ಟಿದ್ದ ಹಗ್ಗನ ಕತ್ತರಿಸಿದ್ರು. ಆಗ ಆ ಬ್ಯಾನರ್‌ ನಿಧಾನವಾಗಿ ಪೂರ್ತಿ ತೆರೆದುಕೊಳ್ತು. ಆಗ ಆ ಸಭಾಂಗಣದಲ್ಲಿದ್ದ ಎಲ್ಲರಿಗೂ “ADV” (ಎಡಿವಿ) ಅಂದ್ರೆ ಏನು ಅಂತ ಗೊತ್ತಾಯ್ತು. ಯಾಕಂದ್ರೆ ಆ ಬ್ಯಾನರ್‌ನಲ್ಲಿ ಅಡ್ವಟೈಸ್‌ ದ ಕಿಂಗ್‌ ಆ್ಯಂಡ್‌ ದ ಕಿಂಗ್‌ಡಮ್‌” ಅಂತ ಬರೆದಿತ್ತು. (ಅದರ ಅರ್ಥ “ರಾಜನನ್ನೂ ಮತ್ತು ರಾಜ್ಯವನ್ನೂ ಪ್ರಕಟಿಸಿರಿ”)

ಒಂದು ಮುಖ್ಯವಾದ ಕೆಲಸ

ಸೀಡರ್‌ ಪಾಯಿಂಟ್‌ನಲ್ಲಿ ನಡೆದ ಅಧಿವೇಶನ ಅಲ್ಲಿದ್ದ ಸಹೋದರ ಸಹೋದರಿಯರಿಗೆ ಸಿಹಿಸುದ್ದಿ ಸಾರೋದು ಎಷ್ಟು ಮುಖ್ಯ ಅನ್ನೋದನ್ನ ತೋರಿಸ್ತು. ಇನ್ನೂ ಜಾಸ್ತಿ ಸೇವೆ ಮಾಡೋಕೆ ಅವರನ್ನ ಹುರಿದುಂಬಿಸ್ತು. ಅಮೆರಿಕದ ಓಕ್ಲಹಾಮದಲ್ಲಿದ್ದ ಒಬ್ಬ ಕಾಲ್ಪೋರ್ಟರ್‌ (ಈಗ ಪಯನೀಯರ್‌ ಅಂತ ಕರೀತಿವಿ) ಹೀಗೆ ಪತ್ರ ಬರೆದ್ರು: “ನಾನು ಸೇವೆ ಮಾಡೋ ಜಾಗದಲ್ಲಿ ಜನರು ಕಲ್ಲಿದ್ದಲಿನ ಗಣಿಯಲ್ಲಿ ಕೆಲಸ ಮಾಡ್ತಾರೆ. ಅವರೆಲ್ಲ ತುಂಬ ಬಡವರು.” ಗೋಲ್ಡನ್‌ ಏಜ್‌ ಪತ್ರಿಕೆಯಿಂದ ದೇವರ ಸಂದೇಶವನ್ನ ಸಾರಿದಾಗ “ಅವರು ತುಂಬ ಖುಷಿಯಿಂದ ಕೇಳಿಸಿಕೊಳ್ತಾರೆ. ಖುಷಿಯಿಂದ ಅವರು ಎಷ್ಟೋ ಸಲ ಅತ್ತುಬಿಡ್ತಾರೆ. ಇವರ ಮನಸ್ಸಿಗೆ ನೆಮ್ಮದಿ ತರೋ ತರ ಮಾತಾಡೋ ಸುಯೋಗ ಸಿಕ್ಕಿದ್ದು ಒಂದು ದೊಡ್ಡ ಆಶೀರ್ವಾದ.”

“ಕೊಯ್ಲು ಜಾಸ್ತಿ ಇದೆ. ಆದ್ರೆ ಕೆಲಸದವರು ಕಮ್ಮಿ ಇದ್ದಾರೆ” ಅಂತ ಲೂಕ 10:2ರಲ್ಲಿರೋ ಯೇಸುವಿನ ಮಾತನ್ನ ಬೈಬಲ್‌ ವಿದ್ಯಾರ್ಥಿಗಳು ಚೆನ್ನಾಗಿ ಅರ್ಥ ಮಾಡಿಕೊಂಡ್ರು ಮತ್ತು ತುರ್ತಿನಿಂದ ಸಿಹಿಸುದ್ದಿ ಸಾರಿದ್ರು. ಹಾಗಾಗಿ ಆ ವರ್ಷ ಕೊನೆಯಾಗುವಷ್ಟರಲ್ಲಿ ತಮ್ಮಿಂದ ಆದಷ್ಟು ಜಾಸ್ತಿ ಸಿಹಿಸುದ್ದಿ ಸಾರಬೇಕು ಅನ್ನೋ ಹುರುಪು ಎಲ್ಲಾ ಸಹೋದರ ಸಹೋದರಿಯರಲ್ಲಿ ತುಂಬಿತ್ತು.

a ರದರ್‌ಫರ್ಡ್‌ ಅವರನ್ನ “ಜಡ್ಜ್‌” ಅಂತನೂ ಕರೀತಿದ್ರು. ಯಾಕಂದ್ರೆ ಕೆಲವೊಮ್ಮೆ ಅಮೆರಿಕದ ಮಿಸ್ಸೋರಿಯಲ್ಲಿ ಅವರು ನ್ಯಾಯಾಧೀಶರಾಗಿ ಕೆಲಸ ಮಾಡ್ತಿದ್ರು.