ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಇಸ್ರಾಯೇಲ್ಯರಿಗೆ ಸಂಗೀತ ಎಷ್ಟು ಮುಖ್ಯ ಆಗಿತ್ತು?

ಆಗಿನ ಕಾಲದ ಇಸ್ರಾಯೇಲ್ಯರಿಗೆ ಸಂಗೀತ ಅಂದ್ರೆ ತುಂಬ ಇಷ್ಟ. ಅವರು ವಾದ್ಯಗಳನ್ನ ನುಡಿಸಿರೋದ್ರ ಬಗ್ಗೆ, ಹಾಡುಗಳನ್ನ ಹಾಡಿರೋದ್ರ ಬಗ್ಗೆ ಬೈಬಲಲ್ಲಿ ತುಂಬ ಕಡೆ ಇದೆ. ನಿಜ ಹೇಳಬೇಕಂದ್ರೆ, ಬೈಬಲಲ್ಲಿರೋ ಹೆಚ್ಚಿನ ಭಾಗ (ಕೀರ್ತನೆಗಳು, ಪರಮಗೀತ ಮತ್ತು ಪ್ರಲಾಪಗಳು ಪುಸ್ತಕ) ಹಾಡುಗಳಿಂದನೇ ತುಂಬಿದೆ. “ಇಸ್ರಾಯೇಲ್ಯರು ತಮ್ಮ ಜೀವನದಲ್ಲಿ ಪ್ರತಿದಿನ ಸಂಗೀತ ಕೇಳ್ತಿದ್ರು ಅಂತ ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತೆ” ಅಂತ ಮ್ಯೂಸಿಕ್‌ ಇನ್‌ ಬಿಬ್ಲಿಕಲ್‌ ಲೈಫ್‌ ಅನ್ನೋ ಪುಸ್ತಕ ಹೇಳುತ್ತೆ. ಹಾಗಾದ್ರೆ ಇಸ್ರಾಯೇಲ್ಯರು ಯಾವಾಗೆಲ್ಲ ಹಾಡುಗಳನ್ನ ಹಾಡ್ತಿದ್ರು, ಸಂಗೀತ ನುಡಿಸ್ತಿದ್ರು?

ಆಗಾಗ ನುಡಿಸ್ತಿದ್ರು. ಇಸ್ರಾಯೇಲ್ಯರು ತಮ್ಮ ಭಾವನೆಗಳನ್ನೂ ಹಾಡಿನ ಮೂಲಕ ಹೇಳ್ಕೊತಿದ್ರು. (ಯೆಶಾ. 30:29) ಯಾರಾದ್ರೂ ರಾಜರಾದಾಗ, ಸೈನಿಕರು ಯುದ್ಧ ಗೆದ್ದಾಗ ಮತ್ತು ಹಬ್ಬಗಳು ಬಂದಾಗ ಅಲ್ಲಿದ್ದ ಸ್ತ್ರೀಯರು ದಮ್ಮಡಿ ಬಡೀತಾ, ಕುಣಿದಾಡ್ತಾ ಹಾಡುಗಳನ್ನ ಹಾಡ್ತಿದ್ರು. (ನ್ಯಾಯ. 11:34; 1 ಸಮು. 18:6, 7; 1 ಅರ. 1:39, 40) ಯಾರಾದ್ರೂ ತೀರಿಹೋದಾಗ ಶೋಕಗೀತೆಗಳನ್ನ ಹಾಡ್ತಿದ್ರು. (2 ಪೂರ್ವ. 35:25) “ಒಟ್ನಲ್ಲಿ ಇಸ್ರಾಯೇಲ್ಯರಿಗೆ ಸಂಗೀತ ಅಂದ್ರೆ ಪಂಚಪ್ರಾಣ ಆಗಿತ್ತು” ಅಂತ ಮ್ಯಾಕ್‌ ಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ರವರ ಸೈಕ್ಲೋಪಿಡಿಯ ಹೇಳುತ್ತೆ.

ರಾಜರ ಆಸ್ಥಾನದಲ್ಲಿ ನುಡಿಸ್ತಿದ್ರು. ಇಸ್ರಾಯೇಲಿನ ರಾಜರಿಗೂ ಸಂಗೀತ ಅಂದ್ರೆ ತುಂಬ ಇಷ್ಟ ಇತ್ತು. ರಾಜ ಸೌಲ ದಾವೀದನನ್ನ ತನ್ನ ಆಸ್ಥಾನದಲ್ಲಿ ಸಂಗೀತಗಾರನಾಗಿ ನೇಮಿಸಿದ್ದ. (1 ಸಮು. 16:18, 23) ದಾವೀದನೂ ರಾಜ ಆದಾಗ ಅವನೇ ಹೊಸಹೊಸ ಸಂಗೀತ ಉಪಕರಣಗಳನ್ನ ತಯಾರಿಸಿ ಹಾಡುಗಳನ್ನ ರಚಿಸಿದ. ಯೆಹೋವನ ಆಲಯದಲ್ಲಿ ಹಾಡೋಕಂತ ಹಾಡುಗಾರರನ್ನ ಮತ್ತು ಸಂಗೀತ ನುಡಿಸೋರನ್ನ ನೇಮಿಸಿದ. (2 ಪೂರ್ವ. 7:6; ಆಮೋ. 6:5) ರಾಜ ಸೊಲೊಮೋನ ಕೂಡ ತನ್ನ ಆಸ್ಥಾನದಲ್ಲಿ ಹಾಡನ್ನ ಹಾಡೋಕೆ ಕೆಲವು ಗಂಡಸ್ರನ್ನ ಮತ್ತು ಹೆಂಗಸ್ರನ್ನ ನೇಮಿಸಿದ್ದ.—ಪ್ರಸಂ. 2:8.

ಆರಾಧನೆ ಮಾಡುವಾಗ ನುಡಿಸ್ತಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಇಸ್ರಾಯೇಲ್ಯರು ಯೆಹೋವನನ್ನ ಆರಾಧನೆ ಮಾಡುವಾಗ ಹಾಡುಗಳನ್ನ ಹಾಡ್ತಿದ್ರು. ಯೆರೂಸಲೇಮಿನ ಆಲಯದಲ್ಲಿ ಸಂಗೀತ ನುಡಿಸೋಕಂತಾನೇ 4,000 ಜನ್ರು ಇದ್ರು. (1 ಪೂರ್ವ. 23:5) ಅವರು ಝಲ್ಲರಿಗಳನ್ನ ತಂತಿವಾದ್ಯಗಳನ್ನ ನುಡಿಸ್ತಿದ್ರು ಮತ್ತು ತುತ್ತೂರಿ ಊದ್ತಿದ್ರು. (2 ಪೂರ್ವ. 5:12) ಇವರು ಮಾತ್ರನೇ ಹಾಡುಗಳನ್ನ ಹಾಡ್ತಾ ಆರಾಧಿಸಬೇಕು ಅಂತೇನಿರಲಿಲ್ಲ. ಎಷ್ಟೋ ಇಸ್ರಾಯೇಲ್ಯರು ಹಬ್ಬಗಳನ್ನ ಮಾಡೋಕೆ ಯೆರೂಸಲೇಮಿಗೆ ಹೋಗುವಾಗ ದಾರಿಲಿ ‘ಯಾತ್ರೆ ಗೀತೆಗಳನ್ನ’ ಹಾಡ್ಕೊಂಡು ಹೋಗ್ತಿದ್ರು. (ಕೀರ್ತ. 120-134) ಇಸ್ರಾಯೇಲ್ಯರು ಪಸ್ಕದ ಊಟ ಮಾಡುವಾಗ್ಲೂ ಹಾಲೆಲ್‌ ಕೀರ್ತನೆಗಳನ್ನ a ಹಾಡ್ತಿದ್ರು ಅಂತ ಕೆಲವು ಯೆಹೂದಿ ಲೇಖಕರು ಬರೆದ ಪುಸ್ತಕಗಳಿಂದ ಗೊತ್ತಾಗಿದೆ.

ಯೆಹೋವನ ಜನ್ರಿಗೆ ಸಂಗೀತ ಈಗ್ಲೂ ಮುಖ್ಯನೇ. (ಯಾಕೋ. 5:13) ನಾವು ಯೆಹೋವನನ್ನ ಹೊಗಳೋಕೆ ಹಾಡುಗಳನ್ನ ಹಾಡ್ತೀವಿ. (ಎಫೆ. 5:19) ಸಂಗೀತಕ್ಕೆ ನಮ್ಮೆಲ್ರನ್ನೂ ಒಗ್ಗಟ್ಟಾಗಿರಿಸೋ ಶಕ್ತಿ ಇದೆ. (ಕೊಲೊ. 3:16) ಅಷ್ಟೇ ಅಲ್ಲ, ಕಷ್ಟದ ಸಮಯದಲ್ಲೂ ಸಂಗೀತ ನಮ್ಮ ಮನಸ್ಸನ್ನ ಅರಳಿಸುತ್ತೆ. (ಅ. ಕಾ. 16:25) ನಾವು ಹಾಡುಗಳನ್ನ ಹಾಡುವಾಗ ಯೆಹೋವನ ಮೇಲೆ ನಮಗೆ ಎಷ್ಟು ನಂಬಿಕೆ ಇದೆ, ಆತನನ್ನ ನಾವು ಎಷ್ಟು ಪ್ರೀತಿಸ್ತೀವಿ ಅಂತ ತೋರಿಸೋಕಾಗುತ್ತೆ.

a 113ರಿಂದ 118ನೇ ಕೀರ್ತನೆಗಳನ್ನ ಯೆಹೂದ್ಯರು ಹಾಲೆಲ್‌ ಕೀರ್ತನೆಗಳು ಅಂತ ಕರೀತಿದ್ರು. ಯೆಹೋವನನ್ನ ಹೊಗಳೋಕೆ ಅವರು ಈ ಕೀರ್ತನೆಗಳನ್ನ ಹಾಡ್ತಿದ್ರು.