ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 40

ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ

ಯೆಹೋವ “ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ”

ಯೆಹೋವ “ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ”

“ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ, ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.”ಕೀರ್ತ. 147:3.

ಈ ಲೇಖನದಲ್ಲಿ ಏನಿದೆ?

ಮನಸ್ಸಿಗಾದ ನೋವಿಂದ ಕೊರಗ್ತಾ ಇರೋರ ಬಗ್ಗೆ ಯೆಹೋವ ತುಂಬ ಯೋಚ್ನೆ ಮಾಡ್ತಾನೆ. ಆ ನೋವನ್ನ ಸಹಿಸ್ಕೊಳ್ಳೋಕೆ ಮತ್ತು ಬೇರೆಯವ್ರನ್ನ ಸಂತೈಸೋಕೆ ನಮಗೆ ಸಹಾಯ ಮಾಡ್ತಾನೆ.

1. (ಎ) ಯೆಹೋವನಿಗೆ ನಮ್ಮನ್ನ ನೋಡಿದಾಗ ಹೇಗನಿಸುತ್ತೆ? (ಬಿ) ನಮಗೋಸ್ಕರ ಏನು ಮಾಡೋಕೆ ಕಾಯ್ತಿದ್ದಾನೆ?

 ನಮ್ಮ ಪ್ರೀತಿಯ ಅಪ್ಪಾ ಯೆಹೋವ ನಮ್ಮನ್ನ ಒಂದೊಂದು ಕ್ಷಣನೂ ನೋಡ್ತಿದ್ದಾನೆ. ನಾವು ನಗುನಗ್ತಾ ಇರೋದನ್ನಷ್ಟೇ ಅಲ್ಲ ನಾವು ಕೊರಗ್ತಾ ಇರೋದನ್ನೂ ನೋಡ್ತಾನೆ. (ಕೀರ್ತ. 37:18) ನಾವು ನೋವನ್ನ ನುಂಗ್ಕೊಂಡು ಆತನ ಸೇವೆ ಮಾಡೋದನ್ನ ನೋಡುವಾಗ ಆತನಿಗೆ ನಮ್ಮ ಬಗ್ಗೆ ತುಂಬ ಹೆಮ್ಮೆ ಆಗುತ್ತೆ. ಹಾಗಂತ ಆತನು ನಮ್ಮ ಕಷ್ಟನ ನೋಡ್ಕೊಂಡು ಸುಮ್ನೆ ಇರಲ್ಲ. ನಮಗೆ ಸಹಾಯ ಮಾಡೋಕೆ, ಸಾಂತ್ವನ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ.

2. (ಎ) ಯೆಹೋವ ಹೃದಯ ಒಡೆದು ಹೋಗಿರೋರಿಗೆ ಏನು ಮಾಡ್ತಾನೆ? (ಬಿ) ಆತನು ಕೊಡೋ ಸಹಾಯದಿಂದ ಪ್ರಯೋಜನ ಪಡ್ಕೊಳ್ಳೋಕೆ ನಾವೇನು ಮಾಡಬೇಕು?

2 ಯೆಹೋವ ಹೃದಯ ಒಡೆದು ಹೋಗಿರೋರ “ಗಾಯಗಳಿಗೆ ಪಟ್ಟಿ ಕಟ್ತಾನೆ” ಅಂತ ಕೀರ್ತನೆ 147:3 ಹೇಳುತ್ತೆ. ಅಂದ್ರೆ ಮನಸ್ಸಿಗೆ ಗಾಯ ಆದವ್ರನ್ನ ತುಂಬ ಚೆನ್ನಾಗಿ ನೋಡ್ಕೊಳ್ತಾನೆ ಅಂತ ಈ ವಚನ ಹೇಳುತ್ತೆ. ಹಾಗಾದ್ರೆ ಯೆಹೋವ ಕೊಡೋ ಸಹಾಯದಿಂದ ನಾವು ಹೇಗೆ ಪ್ರಯೋಜನ ಪಡ್ಕೊಬಹುದು? ಇದಕ್ಕೊಂದು ಉದಾಹರಣೆ ನೋಡಿ. ನಮಗೆ ಗಾಯ ಆದಾಗ ನಾವು ಒಬ್ಬ ಒಳ್ಳೇ ಡಾಕ್ಟರ್‌ ಹತ್ರ ಹೋಗ್ತೀವಿ. ಅವರು ನಮ್ಮ ಗಾಯನ ವಾಸಿ ಮಾಡೋಕೆ ಪಟ್ಟಿ ಕಟ್ತಾರೆ. ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ ಹೇಳ್ತಾರೆ. ಅದನ್ನ ನಾವು ಪಾಲಿಸಬೇಕಲ್ವಾ? ಯೆಹೋವ ದೇವರು ಕೂಡ ಆ ಡಾಕ್ಟರ್‌ ತರ ಇದ್ದಾನೆ. ನಮ್ಮ ಮನಸ್ಸಿಗಾದ ನೋವಿಂದ ಹೊರಗೆ ಬರೋಕೆ ಏನೆಲ್ಲ ಮಾಡಬೇಕು ಅಂತ ಬೈಬಲಲ್ಲಿ ಹೇಳಿದ್ದಾನೆ. ಹಾಗಾಗಿ ನಾವು ಈ ಲೇಖನದಲ್ಲಿ, ಆತನು ಏನು ಹೇಳಿದ್ದಾನೆ ಮತ್ತು ನಾವು ಅದನ್ನ ಹೇಗೆ ಪಾಲಿಸಬೇಕು ಅಂತ ನೋಡೋಣ.

ಯೆಹೋವನಿಗೆ ನೀವು ತುಂಬ ಅಮೂಲ್ಯ

3. ಯಾವುದಕ್ಕೂ ಉಪಯೋಗ ಇಲ್ಲದವರು ಅಂತ ಕೆಲವ್ರಿಗೆ ಯಾಕೆ ಅನಿಸುತ್ತೆ?

3 ಪ್ರೀತಿ ಕಣ್ಮರೆ ಆಗಿರೋ ಲೋಕದಲ್ಲಿ ನಾವು ಜೀವಿಸ್ತಾ ಇದ್ದೀವಿ. ಅದಕ್ಕೇ ಕೆಲವ್ರಿಗೆ ‘ನಮ್ಮನ್ನ ಯಾರೂ ಪ್ರೀತಿಸಲ್ಲ, ನಾವು ಯಾವುದಕ್ಕೂ ಉಪಯೋಗ ಇಲ್ಲದವರು’ ಅನ್ನೋ ಯೋಚ್ನೆ ಅವ್ರ ಮನಸ್ಸಲ್ಲಿ ಕೂತುಬಿಟ್ಟಿದೆ. ಸಹೋದರಿ ಹೆಲೆನ್‌ಗೂ a ಹೀಗೇ ಆಯ್ತು. “ನಾವು ಪ್ರೀತಿನೇ ಇಲ್ಲದಿರೋ ಕುಟುಂಬದಲ್ಲಿ ಬೆಳೆದ್ವಿ. ಅಪ್ಪ ಯಾವಾಗ್ಲೂ ನಮ್ಮನ್ನ ಹೊಡೀತಿದ್ರು, ಬಡೀತಿದ್ರು. ಪ್ರಯೋಜನಕ್ಕೇ ಬಾರದಿರೋ ದಂಡಪಿಂಡಗಳು ಅಂತ ಬೈತಿದ್ರು” ಅಂತ ಅವರು ಹೇಳ್ತಾರೆ. ಹೆಲೆನ್‌ ತರ ನಿಮಗೂ ಆಗಿರಬಹುದು. ಯಾರಾದ್ರೂ ನಿಮಗೆ ಅವಮಾನ ಮಾಡಿರಬಹುದು, ಹೊಡೆದಿರಬಹುದು, ಕೆಲಸಕ್ಕೆ ಬಾರದಿರೋ ಅಯೋಗ್ಯರು ಅಂತ ಬೈದಿರಬಹುದು. ಹಾಗಾಗಿ ಯಾರಾದ್ರೂ ನಿಮ್ಮನ್ನ ನಿಜವಾಗ್ಲೂ ಪ್ರೀತಿಸ್ತಾರೆ ಅಂತ ಹೇಳಿದಾಗ ನಂಬೋಕೆ ತುಂಬ ಕಷ್ಟ ಆಗುತ್ತೆ.

4. ಕೀರ್ತನೆ 34:18ರಲ್ಲಿ ಯೆಹೋವ ನಮಗೆ ಏನಂತ ಮಾತು ಕೊಟ್ಟಿದ್ದಾನೆ?

4 ನಿಮ್ಮನ್ನ ಯಾರೂ ಪ್ರೀತಿಸಿಲ್ಲಾಂದ್ರೂ ಯೆಹೋವ ತುಂಬ ಪ್ರೀತಿಸ್ತಾನೆ, ನಿಮಗೆ ತುಂಬ ಬೆಲೆ ಕೊಡ್ತಾನೆ, ನಿಮ್ಮನ್ನ ಅಮೂಲ್ಯವಾಗಿ ನೋಡ್ತಾನೆ. ಅದಕ್ಕೇ ಬೈಬಲ್‌ “ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ” ಅಂತ ಹೇಳುತ್ತೆ. (ಕೀರ್ತನೆ 34:18 ಓದಿ.) ನಿಮ್ಮ “ಮನಸ್ಸು ಚೂರುಚೂರಾಗಿ” ಇರಬಹುದು ನಿಜ. ಆದ್ರೆ ನಿಮ್ಮಲ್ಲಿರೋ ಒಳ್ಳೇದನ್ನ ನೋಡಿನೇ ಯೆಹೋವ ತನ್ನ ಕಡೆಗೆ ಸೆಳ್ಕೊಂಡಿದ್ದಾನೆ ಅನ್ನೋದನ್ನ ನೆನಪಿಡಿ. (ಯೋಹಾ. 6:44) ನೀವು ಆತನ ಕಣ್ಮಣಿಗಳು! ಹಾಗಾಗಿ ನಿಮಗೆ ಸಹಾಯ ಮಾಡೋಕೆ ಆತನು ಯಾವಾಗ್ಲೂ ರೆಡಿ ಇರ್ತಾನೆ.

5. ಯೇಸು ಜನ್ರ ಜೊತೆ ನಡ್ಕೊಂಡ ರೀತಿಯಿಂದ ನಮಗೇನು ಗೊತ್ತಾಗುತ್ತೆ?

5 ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥ ಮಾಡ್ಕೊಬೇಕಂದ್ರೆ ನಾವು ಯೇಸು ಬಗ್ಗೆ ತಿಳ್ಕೊಬೇಕು. ಯೇಸು ಭೂಮಿಲಿದ್ದಾಗ ಅಲ್ಲಿದ್ದ ಜನ್ರನ್ನ ಕೆಲವರು ತುಂಬ ಕೀಳಾಗಿ ನೋಡ್ತಿದ್ರು. ಅವ್ರ ಜೊತೆ ಚೆನ್ನಾಗಿ ನಡ್ಕೊಳ್ತಾ ಇರಲಿಲ್ಲ. ಆದ್ರೆ ಯೇಸು ಅವ್ರನ್ನ ತುಂಬ ಪ್ರೀತಿಸಿದನು, ಅವ್ರ ಜೊತೆ ಚೆನ್ನಾಗಿ ನಡ್ಕೊಂಡನು. (ಮತ್ತಾ. 9:9-12) ಅದಕ್ಕೆ ಕಾಯಿಲೆಯಿಂದ ನರಳ್ತಿದ್ದ ಒಬ್ಬ ಸ್ತ್ರೀ ತನಗೆ ವಾಸಿ ಆಗುತ್ತೆ ಅನ್ನೋ ನಂಬಿಕೆಯಿಂದ ಆತನ ಬಟ್ಟೆ ಮುಟ್ಟಿದಾಗ ಆತನು ಅವಳನ್ನ ಬೈಲಿಲ್ಲ. ಅವಳ ನಂಬಿಕೆ ನೋಡಿ ಹೊಗಳಿದನು. (ಮಾರ್ಕ 5:25-34) ಯೇಸು ಯೆಹೋವ ದೇವರ ಮನಸ್ಸಿಗೆ ಹಿಡಿದ ಕನ್ನಡಿ ತರ ಇದ್ದನು. (ಯೋಹಾ. 14:9) ಹಾಗಾಗಿ ಯೇಸು ತರನೇ ಯೆಹೋವನೂ ನಮ್ಮಲ್ಲಿರೋ ಒಳ್ಳೇ ಗುಣಗಳನ್ನ ನೋಡ್ತಾನೆ, ನಾವು ಆತನನ್ನ ಎಷ್ಟು ನಂಬ್ತೀವಿ, ಆತನ ಮೇಲೆ ನಮಗೆಷ್ಟು ಪ್ರೀತಿ ಇದೆ ಅಂತ ನೋಡ್ತಾನೆ. ಅದಕ್ಕೇ ಆತನು ನಮಗೆ ತುಂಬ ಬೆಲೆ ಕೊಡ್ತಾನೆ ಅಂತ ನಾವು ನಂಬಬಹುದು.

6. ‘ನನ್ನಿಂದ ಯಾರಿಗೂ ಉಪಯೋಗ ಇಲ್ಲ’ ಅಂತ ನಿಮಗೆ ಇನ್ನೂ ಅನಿಸ್ತಿದ್ರೆ ಏನ್‌ ಮಾಡಬಹುದು?

6 ‘ನನ್ನಿಂದ ಯಾರಿಗೂ ಉಪಯೋಗನೇ ಇಲ್ಲ’ ಅಂತ ನಿಮಗಿನ್ನೂ ಅನಿಸ್ತಿದ್ರೆ ಏನು ಮಾಡಬಹುದು? ಯೆಹೋವ ನಮಗೆ ತುಂಬ ಬೆಲೆ ಕೊಡ್ತಾನೆ ಅಂತ ತಿಳಿಸೋ ವಚನಗಳನ್ನ ಓದಿ, ಅದ್ರ ಬಗ್ಗೆ ಯೋಚ್ನೆ ಮಾಡಿ. b (ಕೀರ್ತ. 94:19) ನೀವಿಟ್ಟಿರೋ ಗುರಿ ಮುಟ್ಟೋಕೆ ಆಗಿಲ್ಲಾಂದ್ರೆ ಅಥವಾ ಬೇರೆಯವ್ರ ತರ ಸೇವೆ ಮಾಡೋಕೆ ಆಗ್ತಿಲ್ಲಾಂದ್ರೆ ನೀವು ಕೈಲಾಗದವರು ಅಂತ ಅಂದ್ಕೊಬೇಡಿ. ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗ್ತಿಲ್ವೋ ಅದ್ರ ಬಗ್ಗೆ ತಲೆ ಕೆಡಿಸ್ಕೊಬೇಡಿ. ಯಾಕಂದ್ರೆ ನಮ್ಮಿಂದ ಏನು ಮಾಡೋಕೆ ಆಗುತ್ತೋ ಅದನ್ನ ಮಾಡಿ ಅಂತ ಯೆಹೋವ ಕೇಳ್ಕೊಳ್ತಾ ಇದ್ದಾನೆ. (ಕೀರ್ತ. 103:13, 14) ಯಾರಾದ್ರೂ ನಿಮಗೆ ಕಿರುಕುಳ ಕೊಟ್ಟಿದ್ರೆ, ದೌರ್ಜನ್ಯ-ದಬ್ಬಾಳಿಕೆ ಮಾಡಿದ್ರೆ ‘ಎಲ್ಲಾ ನನ್ನಿಂದಾನೇ ಆಯ್ತು’ ಅಂತ ನಿಮ್ಮನ್ನೇ ದೂರಿಕೊಳ್ಳಬೇಡಿ. ಅದಕ್ಕೆ ನೀವು ಕಾರಣ ಅಲ್ಲ. ಯಾರು ತಪ್ಪು ಮಾಡಿದ್ದಾರೋ ಅವ್ರಿಂದಾನೇ ಯೆಹೋವ ಲೆಕ್ಕ ಕೇಳ್ತಾನೆ ಹೊರತು ನಿಮ್ಮಿಂದ ಅಲ್ಲ. (1 ಪೇತ್ರ 3:12) ಚಿಕ್ಕ ವಯಸ್ಸಲ್ಲಿ ಸ್ಯಾಂಡ್ರ ಅನ್ನೋ ಸಹೋದರಿಗೆ ಮನೇಲಿ ಹೊಡಿತಿದ್ರು, ಕಿರುಕುಳ ಕೊಡ್ತಿದ್ರು. “ಯೆಹೋವ ದೇವರೇ, ನೀನು ನನ್ನಲ್ಲಿ ಒಳ್ಳೇ ಗುಣಗಳನ್ನ ನೋಡೋ ತರ ನನಗೂ ನನ್ನಲ್ಲಿ ಒಳ್ಳೇ ಗುಣಗಳನ್ನ ನೋಡೋಕೆ ಸಹಾಯ ಮಾಡಪ್ಪಾ ಅಂತ ಪ್ರಾರ್ಥಿಸ್ತಿದ್ದೆ” ಅಂತ ಅವರು ಹೇಳ್ತಾರೆ.

7. ನಮ್ಮ ಜೀವನದಲ್ಲಿ ಆದ ಕಹಿಘಟನೆಯಿಂದ ನಾವು ಬೇರೆಯವ್ರಿಗೆ ಹೇಗೆ ಸಹಾಯ ಮಾಡಬಹುದು?

7 ನಾವು ದೇವರ ಜೊತೆ ಕೆಲಸ ಮಾಡೋರು. ಅದಕ್ಕೆ ನಮ್ಮನ್ನ ಬಳಸಿ ಆತನು ಬೇರೆಯವ್ರಿಗೆ ಸಹಾಯ ಮಾಡ್ತಾನೆ. ಹಾಗಾಗಿ ನಮ್ಮನ್ನ ಬಳಸ್ತಾನಾ ಅಂತ ಯಾವತ್ತೂ ಸಂಶಯ ಪಡಬೇಡಿ. (1 ಕೊರಿಂ. 3:9) ಒಂದುವೇಳೆ ನಿಮ್ಮ ಜೀವನದಲ್ಲಿ ಏನಾದ್ರೂ ಕಹಿಘಟನೆ ನಡೆದಿದ್ರೆ ಅದೇ ಪರಿಸ್ಥಿತಿಯಲ್ಲಿ ಇರೋರನ್ನ ಅರ್ಥ ಮಾಡ್ಕೊಳ್ಳೋಕೆ, ಅವ್ರನ್ನ ಕೈ ಹಿಡಿದು ಮೇಲೆ ಎತ್ತೋಕೆ ನಿಮ್ಮಿಂದ ಆಗುತ್ತೆ. ಹೆಲೆನ್‌ಗೂ ಇದೇ ತರನೇ ಸಹಾಯ ಸಿಕ್ತು. ಇದ್ರಿಂದ ಅವರು ಬೇರೆಯವ್ರಿಗೂ ಸಹಾಯ ಮಾಡೋಕೆ ಆಯ್ತು. ಅವರು ಅದ್ರ ಬಗ್ಗೆ ಹೀಗೆ ಹೇಳ್ತಾರೆ: “ನನ್ನ ಅಪ್ಪ ನನ್ನನ್ನ ಯಾವಾಗ್ಲೂ ಉಪಯೋಗಕ್ಕೆ ಬಾರದವಳು ಅಂತ ಹೇಳ್ತಿದ್ರು. ಆದ್ರೆ ಯೆಹೋವ ಅಪ್ಪ ನನ್ನನ್ನೇ ಉಪಯೋಗಿಸಿ ಬೇರೆಯವ್ರಿಗೆ ಸಹಾಯ ಮಾಡ್ತಿದ್ದಾರೆ.” ಈಗ ಹೆಲೆನ್‌ ಖುಷಿಖುಷಿಯಾಗಿ ರೆಗ್ಯುಲರ್‌ ಪಯನಿಯರಿಂಗ್‌ ಮಾಡ್ತಿದ್ದಾರೆ.

ಯೆಹೋವ ನಿಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬಿ

8. ಯೆಶಾಯ 1:18 ಓದುವಾಗ ನಮಗೆ ಯಾಕೆ ಸಮಾಧಾನ ಆಗುತ್ತೆ?

8 ನಾವು ದೀಕ್ಷಾಸ್ನಾನ ತಗೊಳ್ಳೋ ಮುಂಚೆನೋ ಅಥವಾ ತಗೊಂಡ ಮೇಲೆನೋ ದೊಡ್ಡ ತಪ್ಪು ಮಾಡಿರಬಹುದು. ಆ ಕೊರಗು ನಮ್ಮ ಬೆನ್ನುಬಿಡದೆ ಮತ್ತೆ ಮತ್ತೆ ಕಾಡ್ತಾ ಇರಬಹುದು. ಅದ್ರಿಂದ ಹೊರಗೆ ಬರೋಕೆ ನಾವು ಒದ್ದಾಡ್ತಾ ಇರಬಹುದು. ಆದ್ರೆ ಒಂದು ವಿಷ್ಯನ ನೆನಪಲ್ಲಿಡಬೇಕು. ಅದೇನಂದ್ರೆ ಯೆಹೋವ ನಮ್ಮ ಮೇಲೆ ಜೀವನೇ ಇಟ್ಕೊಂಡಿದ್ದಾನೆ. ಅದಕ್ಕೆ ಆತನ ಒಬ್ಬನೇ ಮಗನನ್ನ ಬಿಡುಗಡೆ ಬೆಲೆಯಾಗಿ ನಮಗೆ ಕೊಟ್ಟಿದ್ದಾನೆ. ಈ ಗಿಫ್ಟನ್ನ ನಾವು ಒಪ್ಕೊಬೇಕು ಅನ್ನೋದೇ ಆತನ ಆಸೆ. ಅಷ್ಟೇ ಅಲ್ಲ, ನಮ್ಮ ತಪ್ಪನ್ನ ಆತನು ಒಂದುಸಲ ಕ್ಷಮಿಸಿದ ಮೇಲೆ ಅದನ್ನ ಯಾವತ್ತೂ ನೆನಪಿಸ್ಕೊಳ್ಳಲ್ಲ ಅಂತ ಮಾತುಕೊಟ್ಟಿದ್ದಾನೆ. ಅದಕ್ಕೆ “ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ” ಮಾಡ್ಕೊಂಡಿದ್ದಾನೆ. c (ಯೆಶಾಯ 1:18 ಓದಿ.) ದೇವರು ನಮ್ಮ ತಪ್ಪನ್ನ ಕ್ಷಮಿಸಿ ಅದನ್ನ ಮರೆತುಬಿಡ್ತಾನೆ ಅಂದ್ಮೇಲೆ ನಾವು ಮಾಡಿರೋ ಒಳ್ಳೇ ವಿಷ್ಯಗಳನ್ನೂ ಮರೆತುಬಿಡ್ತಾನೆ ಅಂತನಾ? ಖಂಡಿತ ಇಲ್ಲ. ಅದನ್ನ ಯಾವಾಗ್ಲೂ ನೆನಪಲ್ಲಿ ಇಟ್ಕೊತಾನೆ. ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ನೋಡಿ.—ಕೀರ್ತ. 103:9, 12; ಇಬ್ರಿ. 6:10.

9. ಹಿಂದೆ ಮಾಡಿದ ತಪ್ಪಿನ ಬಗ್ಗೆ ಯೋಚಿಸ್ತಾ ಕೂರೋ ಬದ್ಲು ನಾವೇನು ಮಾಡಬೇಕು?

9 ನಾವು ಹಿಂದೆ ಮಾಡಿರೋ ತಪ್ಪನ್ನ ನೆನಸಿ ಕೊರಗಬಾರದು. ಅದ್ರ ಬದ್ಲು ಈಗ ಏನು ಮಾಡ್ತಾ ಇದ್ದೀವಿ, ಮುಂದೆ ನಮಗೆ ಯಾವ ಆಶೀರ್ವಾದಗಳು ಸಿಗುತ್ತೆ ಅಂತ ಯೋಚ್ನೆ ಮಾಡಬೇಕು. ಪೌಲನೂ ಅದನ್ನೇ ಮಾಡಿದ. ಅವನು ಯೆಹೂದಿ ಧರ್ಮದಲ್ಲಿದ್ದಾಗ ಕ್ರೈಸ್ತರಿಗೆ ತುಂಬ ಹಿಂಸೆ ಕೊಟ್ಟ. ಆದ್ರೆ ಅವನು ಮಾಡಿದ ತಪ್ಪನ್ನ ಯೆಹೋವ ಕ್ಷಮಿಸಿದನು. (1 ತಿಮೊ. 1:12-15) ಆಗ್ಲೂ ಪೌಲ ತನ್ನ ತಪ್ಪನ್ನೇ ನೆನಸ್ಕೊಂಡು ಕೊರಗ್ತಾ ಇದ್ನಾ? ಅವನು ಯೆಹೂದಿ ಆಗಿದ್ದಾಗ ಮಾಡಿದ ದೊಡ್ಡ ದೊಡ್ಡ ಸಾಧನೆಗಳನ್ನ ಹೇಗೆ ನೆನಸ್ಕೊಳ್ಳಲಿಲ್ವೋ ಅದೇ ತರ ಅವನ ತಪ್ಪುಗಳನ್ನೂ ನೆನಸ್ಕೊಳ್ಳಲಿಲ್ಲ. (ಫಿಲಿ. 3:4-8, 13-15) ಅದ್ರ ಬದ್ಲು ಚೆನ್ನಾಗಿ ಯೆಹೋವನ ಸೇವೆ ಮಾಡೋಕೆ ಗಮನ ಕೊಟ್ಟ ಮತ್ತು ಮುಂದೆ ಸಿಗೋ ಆಶೀರ್ವಾದಗಳ ಬಗ್ಗೆ ಯೋಚ್ನೆ ಮಾಡಿದ. ಪೌಲನ ತರ ನಮಗೂ ಹಿಂದೆ ಆಗಿದ್ದನ್ನ ಸರಿಮಾಡೋಕೆ ಆಗಲ್ಲ. ಅದಕ್ಕೇ ನಾವೂ ಅವನ ತರ ಯೆಹೋವನ ಸೇವೆನ ಜಾಸ್ತಿ ಮಾಡಬೇಕು. ಮುಂದೆ ಸಿಗೋ ಆಶೀರ್ವಾದಗಳ ಬಗ್ಗೆ ಯೋಚ್ನೆ ಮಾಡಬೇಕು.

10. ನಾವು ಮಾಡಿರೋ ತಪ್ಪಿಂದ ಬೇರೆಯವ್ರಿಗೆ ನೋವಾದ್ರೆ ಏನು ಮಾಡಬೇಕು?

10 ನೀವು ಮಾಡಿರೋ ಯಾವುದೋ ಒಂದು ತಪ್ಪಿಂದ ಬೇರೆಯವ್ರಿಗೆ ನೋವಾದ್ರೆ ನೀವೇನ್‌ ಮಾಡಬಹುದು? ಅವ್ರ ಹತ್ರ ಹೋಗಿ ಮನಸಾರೆ ಕ್ಷಮೆ ಕೇಳಿ. (2 ಕೊರಿಂ. 7:11) ಅವ್ರಿಗೆ ಆಗಿರೋ ಹಾನಿಯನ್ನ ಸರಿಮಾಡೋಕೆ ನಿಮ್ಮಿಂದ ಏನೆಲ್ಲಾ ಮಾಡಕ್ಕಾಗುತ್ತೋ ಅದನ್ನೆಲ್ಲ ಮಾಡಿ. ಅಷ್ಟೇ ಅಲ್ಲ ಅವ್ರಿಗೆ ಸಹಾಯ ಮಾಡಪ್ಪಾ ಅಂತ ಯೆಹೋವನನ್ನ ಬೇಡ್ಕೊಳ್ಳಿ. ಆಗ ಯೆಹೋವ ದೇವರು ನಿಮಗೂ ಅವ್ರಿಗೂ ಸಮಾಧಾನವಾಗಿ ಇರೋಕೆ, ಆ ನೋವನ್ನ ಸಹಿಸ್ಕೊಳ್ಳೋಕೆ ಶಕ್ತಿ ಕೊಟ್ಟೇ ಕೊಡ್ತಾನೆ.

11. ಯೋನನಿಂದ ನಾವೇನ್‌ ಕಲಿಬಹುದು? (ಚಿತ್ರ.)

11 ನಾವು ಮಾಡಿರೋ ತಪ್ಪಿಂದ ಪಾಠ ಕಲಿಬೇಕು ಮತ್ತು ಯೆಹೋವ ಏನೇ ಕೆಲಸ ಕೊಟ್ರೂ ಅದನ್ನ ಮಾಡೋಕೆ ರೆಡಿ ಇರಬೇಕು. ಇದಕ್ಕೊಂದು ಒಳ್ಳೇ ಉದಾಹರಣೆ ಯೋನ. ಯೆಹೋವ ಅವನ ಹತ್ರ ನಿನೆವೆಗೆ ಹೋಗೋಕೆ ಹೇಳಿದನು. ಆದ್ರೆ ಅವನು ಅದ್ರ ವಿರುದ್ಧ ದಿಕ್ಕಿಗೆ ಹೋದ. ಆಗ ಯೆಹೋವ ಅವನನ್ನ ತಿದ್ದಿದಾಗ ಅವನು ಅದನ್ನ ಒಪ್ಕೊಂಡ. (ಯೋನ 1:1-4, 15-17; 2:7-10) ಹಾಗಂತ ಯೆಹೋವ ‘ಇನ್ನು ಇವನನ್ನ ಪ್ರವಾದಿಯಾಗಿ ಬಳಸೋದೇ ಬೇಡ’ ಅಂತ ಅಂದ್ಕೊಂಡ್ನಾ? ಇಲ್ಲ. ಅವನಿಗೆ ಇನ್ನೊಂದು ಅವಕಾಶ ಕೊಟ್ಟನು. ಆಗ ಯೋನ ಯೆಹೋವನ ಮಾತು ಕೇಳಿ ತಕ್ಷಣ ಆ ಊರಿಗೆ ಹೋದ. ಒಂದುವೇಳೆ ಯೋನ ತಾನು ಮಾಡಿದ ತಪ್ಪನ್ನೇ ಯೋಚಿಸ್ತಾ ಕೂತಿದ್ರೆ ಯೆಹೋವ ಕೊಟ್ಟ ಕೆಲಸನ ಮಾಡೋಕೆ ಆಗ್ತಿತ್ತಾ ಹೇಳಿ?—ಯೋನ 3:1-3.

ಯೋನ ಒಂದು ದೊಡ್ಡ ಮೀನಿನ ಹೊಟ್ಟೆಯಿಂದ ಬದುಕುಳಿದು ಬಂದ್ಮೇಲೆ ನಿನೆವೆಗೆ ಹೋಗಿ ಸಾರೋಕೆ ಯೆಹೋವ ಹೇಳಿದನು (ಪ್ಯಾರ 11 ನೋಡಿ)


ಯೆಹೋವ ಪವಿತ್ರಶಕ್ತಿ ಕೊಟ್ಟು ಸಮಾಧಾನ ಮಾಡ್ತಾನೆ

12. ನಮ್ಮ ಜೀವನದಲ್ಲಿ ದೊಡ್ಡ ದುರಂತ ನಡೆದಾಗ ಯೆಹೋವ ನಮಗೆ ಹೇಗೆ ಸಮಾಧಾನ ಮಾಡ್ತಾನೆ? (ಫಿಲಿಪ್ಪಿ 4:6, 7)

12 ನಮ್ಮ ಕುಟುಂಬದಲ್ಲಿ ಯಾರಾದ್ರೂ ತೀರಿಹೋದಾಗ ಅಥವಾ ನಮ್ಮ ಜೀವನದಲ್ಲಿ ಕೆಟ್ಟ ಘಟನೆ ನಡೆದಾಗ ಯೆಹೋವ ನಮಗೆ ಪವಿತ್ರಶಕ್ತಿ ಕೊಟ್ಟು ಸಮಾಧಾನ ಮಾಡ್ತಾನೆ. ರಾನ್‌ ಮತ್ತು ಕ್ಯಾರಲ್‌ ಜೀವನದಲ್ಲೂ ಹೀಗೇ ಆಯ್ತು. ಅವ್ರ ಮಗ ಆತ್ಮಹತ್ಯೆ ಮಾಡ್ಕೊಂಡ. ಅದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ನಾವು ಜೀವನದಲ್ಲಿ ಎಷ್ಟೋ ಕಷ್ಟಗಳನ್ನ ನೋಡಿದ್ವಿ. ಆದ್ರೆ ಈ ಕಷ್ಟನ ಸಹಿಸ್ಕೊಳ್ಳೋಕೇ ಆಗ್ಲಿಲ್ಲ. ಇದು ನಮ್ಮ ಜೀವನದಲ್ಲಿ ನಡೆದ ದೊಡ್ಡ ದುರಂತ. ಎಷ್ಟೋ ರಾತ್ರಿ ನಮಗೆ ನಿದ್ದೆನೇ ಬಂದಿಲ್ಲ. ಆಗೆಲ್ಲ ನಾವು ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ವಿ. ಆಗ ನಮಗೆ ಫಿಲಿಪ್ಪಿ 4:6, 7ರಲ್ಲಿ ಹೇಳಿರೋ ಶಾಂತಿ ಸಿಕ್ತು.” (ಓದಿ.) ಈ ತರ ನಮಗೂ ಎದೆನೇ ಹೊಡೆದೋಗೋ ತರ ಕಷ್ಟಗಳು ಬಂದಾಗ ಯೆಹೋವನ ಹತ್ರ ಮನಸ್ಸುಬಿಚ್ಚಿ ಮಾತಾಡಬೇಕು. ಒಂದೆರಡು ಸಲ ಅಲ್ಲ, ಎಷ್ಟು ಸಲ ಬೇಕಾದ್ರೂ ಎಷ್ಟೊತ್ತು ಬೇಕಾದ್ರೂ ಮಾತಾಡಬಹುದು. (ಕೀರ್ತ. 86:3; 88:1) ನಾವು ಪವಿತ್ರಶಕ್ತಿಗೋಸ್ಕರ ಬೇಡ್ಕೊಳ್ತಾ ಇರಬೇಕು. ಆಗ ದೇವರು ನಮ್ಮ ಪ್ರಾರ್ಥನೆನ ತಳ್ಳಿಹಾಕಲ್ಲ, ಅದನ್ನ ಕೊಟ್ಟೇ ಕೊಡ್ತಾನೆ.—ಲೂಕ 11:9-13.

13. ಯೆಹೋವನನ್ನ ಆರಾಧನೆ ಮಾಡ್ತಾ ಇರೋಕೆ ಪವಿತ್ರಶಕ್ತಿ ನಮಗೆ ಹೇಗೆ ಸಹಾಯ ಮಾಡುತ್ತೆ? (ಎಫೆಸ 3:16)

13 ಇಂಥ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಶಕ್ತಿನೇ ಇಲ್ಲ ಅಂತ ನಿಮಗೆ ಅನಿಸ್ತಿದ್ಯಾ? ಹಾಗಿದ್ರೆ ಧೈರ್ಯ ಕಳ್ಕೊಬೇಡಿ. ಯೆಹೋವ ಅಪ್ಪಾ ಪವಿತ್ರಶಕ್ತಿ ಕೊಟ್ಟು ಆತನನ್ನ ಆರಾಧಿಸ್ತಾ ಇರೋಕೆ ಆತನೇ ನಿಮಗೆ ಸಹಾಯ ಮಾಡ್ತಾನೆ. (ಎಫೆಸ 3:16 ಓದಿ.) ಸಹೋದರಿ ಫ್ಲೋರಾ ಜೀವನದಲ್ಲಿ ಏನಾಯ್ತು ಅಂತ ನೋಡಿ. ಅವರು ಮತ್ತು ಅವ್ರ ಗಂಡ ಇಬ್ರೂ ಮಿಷನರಿ ಆಗಿದ್ರು. ಆದ್ರೆ ಅವ್ರ ಗಂಡ ಅವ್ರಿಗೆ ಮೋಸ ಮಾಡಿಬಿಟ್ರು. ಆಮೇಲೆ ಡಿವೋರ್ಸ್‌ ಆಯ್ತು. ಅದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ನನ್ನ ಗಂಡ ಮಾಡಿದ ಮೋಸನ ನೆನಸ್ಕೊಂಡು ಕಣ್ಣೀರಲ್ಲೇ ಕೈತೊಳೆದೆ. ಆ ಕಷ್ಟನ ಸಹಿಸ್ಕೊಳ್ಳೋಕೆ ಪವಿತ್ರಶಕ್ತಿ ಕೊಟ್ಟು ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಕೇಳ್ಕೊಂಡೆ. ಆ ನೋವಿಂದ ಹೊರಗೆ ಬರೋಕೆ ಆಗೋದೇ ಇಲ್ಲ ಅಂತ ಅಂದ್ಕೊಂಡಿದ್ದೆ. ಆದ್ರೆ ಅದನ್ನ ಸಹಿಸ್ಕೊಳ್ಳೋಕೆ ಯೆಹೋವ ಶಕ್ತಿ ಕೊಟ್ಟನು” ಅಂತ ಅವರು ಹೇಳ್ತಾರೆ. ಈ ಸಹೋದರಿಗೆ ಅದೇನೇ ಕಷ್ಟ ಬಂದ್ರೂ ಅದನ್ನ ಸಹಿಸ್ಕೊಳ್ಳೋಕೆ ಯೆಹೋವ ಸಹಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆ ಈಗ ಜಾಸ್ತಿ ಆಗಿದೆ. “ಕೀರ್ತನೆ 119:32ರಲ್ಲಿರೋ ಮಾತು ಈಗ ನಿಜ ಆಗಿದೆ. ‘ನಾನು ನಿನ್ನ ಆಜ್ಞೆಗಳ ದಾರಿಯಲ್ಲಿ ತುಂಬ ಆಸೆಪಟ್ಟು ನಡೀತೀನಿ. ಯಾಕಂದ್ರೆ ನೀನು ನನ್ನ ಹೃದಯದಲ್ಲಿ ಅದಕ್ಕಾಗಿ ಒಂದು ಮನೆ ಮಾಡಿದ್ದೀಯ’” ಅಂತ ಆ ಸಹೋದರಿ ಹೇಳ್ತಾರೆ.

14. ನಿಮಗೆ ಪವಿತ್ರಶಕ್ತಿ ಜಾಸ್ತಿ ಸಿಗಬೇಕಂದ್ರೆ ಏನು ಮಾಡಬೇಕು?

14 ಯೆಹೋವ ದೇವರ ಹತ್ರ ಪವಿತ್ರಶಕ್ತಿ ಕೊಡಪ್ಪಾ ಅಂತ ಬೇಡ್ಕೊಂಡ ಮೇಲೆ ನೀವೂ ಕೆಲವೊಂದು ವಿಷ್ಯಗಳನ್ನ ಮಾಡಬೇಕು. ಆಗ ನಿಮಗೆ ಜಾಸ್ತಿ ಪವಿತ್ರಶಕ್ತಿ ಸಿಗುತ್ತೆ. ಅದಕ್ಕೆ ನೀವು ತಪ್ಪದೆ ಕೂಟಗಳಿಗೆ ಹೋಗಬೇಕು, ಸಿಹಿಸುದ್ದಿ ಸಾರಬೇಕು, ದೇವರ ವಾಕ್ಯನ ದಿನಾ ಓದಬೇಕು. ಆಗ ನಿಮಗೆ ಯೆಹೋವನ ತರನೇ ಯೋಚ್ನೆ ಮಾಡೋಕೆ ಆಗುತ್ತೆ. (ಫಿಲಿ. 4:8, 9) ಬೈಬಲ್‌ ಓದುವಾಗ ನೀವೇನು ಮಾಡಬಹುದು? ಅದ್ರಲ್ಲಿ ಕಷ್ಟಬಂದವ್ರ ಬಗ್ಗೆ ಓದಿ. ಅವ್ರಿಗೆ ಯಾವೆಲ್ಲ ಕಷ್ಟಗಳು ಬಂತು, ಆ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಯೆಹೋವ ಅವ್ರಿಗೆ ಹೇಗೆಲ್ಲ ಸಹಾಯ ಮಾಡಿದನು ಅಂತ ಯೋಚ್ನೆ ಮಾಡಿ. ಸ್ಯಾಂಡ್ರಗೂ ಒಂದರ ಮೇಲೊಂದು ಕಷ್ಟ ಬಂದಾಗ ಇದನ್ನೇ ಮಾಡಿದಳು. ಅದ್ರ ಬಗ್ಗೆ ಅವಳು ಹೀಗೆ ಹೇಳ್ತಾಳೆ: “ನನಗೆ ಯೋಸೇಫ ಅಂದ್ರೆ ತುಂಬ ಇಷ್ಟ. ನನಗೆ ಬಂದ ತರನೇ ಯೋಸೇಫನಿಗೂ ಕಷ್ಟಗಳು ಬಂತು. ಅವನಿಗೆ ಅಷ್ಟು ಕಷ್ಟಗಳು ಬಂದ್ರೂ ಅನ್ಯಾಯ ಆದ್ರೂ ಅವನು ಯಾವತ್ತೂ ಯೆಹೋವನ ಜೊತೆ ಇದ್ದ ಸಂಬಂಧನ ಹಾಳು ಮಾಡ್ಕೊಂಡಿಲ್ಲ.”—ಆದಿ. 39:21-23.

ಯೆಹೋವ ಸಭೆಯವ್ರಿಂದ ಸಮಾಧಾನ ಮಾಡ್ತಾನೆ

15. (ಎ) ಯೆಹೋವ ನಮಗೆ ಯಾರಿಂದ ಸಹಾಯ ಮಾಡ್ತಾನೆ (ಬಿ) ಅವರು ನಮಗೆ ಹೇಗೆ ಸಹಾಯ ಮಾಡ್ತಾರೆ? (ಚಿತ್ರ ನೋಡಿ.)

15 ಕಷ್ಟದ ಸಮಯದಲ್ಲಿ ಸಭೆಯವರು ‘ನಮ್ಮನ್ನ ಬಲಪಡಿಸಿ ಸಹಾಯ ಮಾಡ್ತಾರೆ.’ (ಕೊಲೊ. 4:11) ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಸಹೋದರ ಸಹೋದರಿಯರಿಂದನೂ ತೋರಿಸ್ತಾನೆ. ಕೆಲವರು ನಮಗೆ ಏನೂ ಸಹಾಯ ಮಾಡದಿದ್ರೂ ಅವರು ನಮ್ಮ ಜೊತೆ ಇರೋದೇ ನಮಗೆ ತುಂಬ ಧೈರ್ಯ ಕೊಡುತ್ತೆ. ಇನ್ನು ಕೆಲವರು ನಾವು ಹೇಳೋದನ್ನೆಲ್ಲ ಸಮಾಧಾನವಾಗಿ ಕೇಳಿಸ್ಕೊಳ್ತಾರೆ. ಅಷ್ಟೇ ಅಲ್ಲ, ನಮಗೆ ಧೈರ್ಯ ತುಂಬೋಕೆ ಬೈಬಲ್‌ ವಚನಗಳನ್ನ ತೋರಿಸ್ತಾರೆ, ನಮ್ಮ ಜೊತೆ ಪ್ರಾರ್ಥನೆ ಮಾಡ್ತಾರೆ. d (ರೋಮ. 15:4) ಇನ್ನು ಕೆಲವೊಮ್ಮೆ ನಾವೇನಾದ್ರೂ ತಪ್ಪಾಗಿ ಯೋಚ್ನೆ ಮಾಡ್ತಿರೋದಾದ್ರೆ ಯೆಹೋವನ ತರ ಸರಿಯಾಗಿ ಯೋಚ್ನೆ ಮಾಡೋಕೆ ಸಹಾಯ ಮಾಡ್ತಾರೆ. ಆಗ ಕಷ್ಟಗಳಿಂದ ಅಲ್ಲೋಲ ಕಲ್ಲೋಲ ಆಗಿರೋ ನಮ್ಮ ಮನಸ್ಸು ಶಾಂತ ಆಗುತ್ತೆ. ಇನ್ನು ಕೆಲವರು ಅಡಿಗೆ ಮಾಡಿ ಕೊಡಬಹುದು ಅಥವಾ ಬೇರೆ ತರನೂ ಸಹಾಯ ಮಾಡಬಹುದು.

ಯೆಹೋವನನ್ನ ಪ್ರೀತಿಸೋ ಮತ್ತು ನಿಮಗೆ ನಿಯತ್ತಾಗಿರೋ ಸ್ನೇಹಿತರು ಸಾಂತ್ವನ, ಸಹಾಯ ಕೊಡ್ತಾರೆ (ಪ್ಯಾರ 15 ನೋಡಿ)


16. ಬೇರೆಯವ್ರಿಂದ ಸಹಾಯ ಸಿಗಬೇಕಂದ್ರೆ ನೀವೇನ್‌ ಮಾಡಬೇಕು?

16 ನಮ್ಮ ಸಹೋದರ ಸಹೋದರಿಯರು ನಮ್ಮನ್ನ ತುಂಬ ಪ್ರೀತಿಸ್ತಾರೆ ಮತ್ತು ನಮಗೆ ಸಹಾಯ ಮಾಡೋಕೆ ಇಷ್ಟಪಡ್ತಾರೆ. ಹಾಗಾಗಿ ನಿಮ್ಮ ಪರಿಸ್ಥಿತಿ ಹೇಗಿದೆ ಅಂತ ಅವ್ರ ಹತ್ರ ಮನಸ್ಸುಬಿಚ್ಚಿ ಮಾತಾಡಿ. ನಿಮಗೇನಾದ್ರೂ ಸಹಾಯ ಬೇಕಿದ್ರೆ ಕೇಳಿ. (ಜ್ಞಾನೋ. 17:17) ನೀವಿದನ್ನ ಹೇಳಿಲ್ಲಾಂದ್ರೆ ಅವ್ರಿಗೆ ಹೇಗೆ ಅರ್ಥ ಆಗುತ್ತೆ? (ಜ್ಞಾನೋ. 14:10) ಅದಕ್ಕೆ ಅವ್ರ ಹತ್ರ ಸಹಾಯ ಕೇಳಿ. ನಿಮಗೆ ಒಳ್ಳೇ ಫ್ರೆಂಡ್ಸ್‌ ಇದ್ರೆ ನಿಮ್ಮ ಮನಸ್ಸಲ್ಲಿರೋ ನೋವನ್ನೆಲ್ಲ ಹೇಳ್ಕೊಳಿ. ಸಹಾಯ ಬೇಕಿದ್ರೆ ಅದನ್ನೂ ಕೇಳಿ. ಕೆಲವರು ಒಬ್ಬ ಅಥವಾ ಇಬ್ರು ಹಿರಿಯರ ಹತ್ರ ಮಾತಾಡೋಕೆ ಇಷ್ಟಪಡ್ತಾರೆ. ಇನ್ನು ಕೆಲವು ಸಹೋದರಿಯರು ಅನುಭವ ಇರೋ ಅಥವಾ ಪ್ರೌಢರಾಗಿರೋ ಸಹೋದರಿಯರ ಹತ್ರ ಮಾತಾಡೋಕೆ ಇಷ್ಟಪಡ್ತಾರೆ.

17. (ಎ) ಬೇರೆಯವ್ರಿಂದ ಯಾವ ಸಹಾಯನೂ ಬೇಡ ಅಂತ ನಮಗೆ ಯಾಕೆ ಅನಿಸಬಹುದು? (ಬಿ) ಆದ್ರೆ ನಾವೇನ್‌ ಮಾಡಬೇಕು?

17 ನಮ್ಮ ಮನಸ್ಸಿಗೆ ತುಂಬ ನೋವು ಆದಾಗ ಒಬ್ರೇ ಇದ್ದು ಬಿಡೋಣ ಅಂತ ಅನಿಸುತ್ತೆ. ಇನ್ನು ಕೆಲವೊಮ್ಮೆ ಸಹೋದರ ಸಹೋದರಿಯರು ನಮ್ಮನ್ನ ತಪ್ಪರ್ಥ ಮಾಡ್ಕೊಬಹುದು ಅಥವಾ ನಮ್ಮ ಮನಸ್ಸಿಗೆ ನೋವಾಗೋ ತರ ಮಾತಾಡಿಬಿಡಬಹುದು. (ಯಾಕೋ. 3:2) ಆದ್ರೆ ನಾವು ಅದನ್ನ ಮನಸ್ಸಿಗೆ ಹಚ್ಕೊಂಡು ಯಾರ ಸಹಾಯನೂ ಬೇಡ ಅಂತ ಅಂದ್ಕೊಬಾರದು. ಹಿರಿಯರಾಗಿರೋ ಗೆವಿನ್‌ಗೂ ಹೀಗೆ ಆಯ್ತು. ಅವ್ರಿಗೆ ಖಿನ್ನತೆ ಕಾಯಿಲೆ ಇದೆ. ಅವರು ಹೀಗೆ ಹೇಳ್ತಾರೆ: “ಯಾರ ಹತ್ರನೂ ಮಾತಾಡೋದು ಬೇಡ, ಎಲ್ರಿಂದ ದೂರ ಇದ್ದುಬಿಡೋಣ ಅಂತ ಅಂದ್ಕೊಳ್ತಿದ್ದೆ.” ಆದ್ರೆ ಹೀಗಿರೋದು ಒಳ್ಳೇದಲ್ಲ ಅಂತ ಅರ್ಥ ಮಾಡ್ಕೊಂಡು ಅವರು ಸಹೋದರ ಸಹೋದರಿಯರ ಜೊತೆ ಬೆರೆಯೋಕೆ ಶುರುಮಾಡಿದ್ರು. ಇದ್ರಿಂದ ಅವ್ರಿಗೆ ತುಂಬ ಪ್ರಯೋಜನನೂ ಆಯ್ತು. ಏಮಿ ಏನು ಮಾಡಿದ್ರು ನೋಡಿ: “ನನ್ನ ಜೀವನದಲ್ಲಿ ಆಗಿರೋ ಅನುಭವದಿಂದ ನಾನು ಯಾರನ್ನೂ ನಂಬ್ತಾನೇ ಇರಲಿಲ್ಲ. ಆದ್ರೆ ಯೆಹೋವ ದೇವರು ಸಹೋದರ ಸಹೋದರಿಯರನ್ನ ತುಂಬ ಪ್ರೀತಿಸ್ತಾನೆ, ನಂಬ್ತಾನೆ. ಆತನ ತರಾನೇ ಇರೋಕೆ ನಾನು ಕಲೀತಾ ಇದ್ದೀನಿ. ಇದ್ರಿಂದ ಯೆಹೋವನಿಗೆ ತುಂಬ ಖುಷಿ ಆಗುತ್ತೆ. ನಾನೂ ಖುಷಿಯಾಗಿ ಇರ್ತೀನಿ” ಅಂತ ಹೇಳಿದ್ರು.

ಮುಂದೆ ಸಿಗೋ ಆಶೀರ್ವಾದನ ಯೋಚಿಸಿ, ಸಾಂತ್ವನ ಪಡ್ಕೊಳ್ಳಿ

18. (ಎ) ಮುಂದೆ ಏನು ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ? (ಬಿ) ಈಗ ನಾವು ಏನ್‌ ಮಾಡಬೇಕು?

18 ನಮ್ಮ ಕಷ್ಟಗಳಿಗೆ ನೋವಿಗೆ ಕಾರಣ ಆಗಿರೋ ಪ್ರತಿಯೊಂದು ವಿಷ್ಯನೂ ಯೆಹೋವ ದೇವರು ಪೂರ್ತಿಯಾಗಿ ತೆಗೆದುಹಾಕ್ತಾನೆ ಅಂತ ಮಾತು ಕೊಟ್ಟಿದ್ದಾನೆ. (ಪ್ರಕ. 21:3, 4) ಹೊಸ ಲೋಕದಲ್ಲಿ ನಾವು ಈಗ ಪಡ್ತಿರೋ ನೋವನ್ನ “ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.” ಇದನ್ನ ನೀವು ಯಾವತ್ತೂ ಮರಿಬೇಡಿ. (ಯೆಶಾ. 65:17) ನಮ್ಮ ಮನಸ್ಸಿಗೆ ಆಗಿರೋ ನೋವಿಗೆ ಯೆಹೋವ ಈಗ್ಲೂ ಪಟ್ಟಿ ಕಟ್ತಾನೆ ಅಂತ ಈ ಲೇಖನದಲ್ಲಿ ನೋಡಿದ್ವಿ. ಹಾಗಾಗಿ ಯೆಹೋವ ನಮ್ಮನ್ನ ಸಮಾಧಾನ ಮಾಡೋಕೆ ಕೊಡೋ ಸಹಾಯವನ್ನ ಪಡ್ಕೊಳ್ಳಿ. “ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ” ಅನ್ನೋ ವಿಷ್ಯದಲ್ಲಿ ಸಂಶಯನೇ ಪಡಬೇಡಿ!—1 ಪೇತ್ರ 5:7.

ಗೀತೆ 23 ಯೆಹೋವನು ನಮ್ಮ ಬಲ

a ಕೆಲವ್ರ ಹೆಸ್ರು ಬದಲಾಗಿದೆ.

c ಯೆಹೋವ ನಮ್ಮ ಮತ್ತು ಆತನ “ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ” ಮಾಡ್ಕೊಬೇಕಂದ್ರೆ ನಾವು ಪಶ್ಚಾತ್ತಾಪ ಪಡಬೇಕು ಮತ್ತು ತಪ್ಪನ್ನ ತಿದ್ಕೊಬೇಕು. ಒಂದುವೇಳೆ ನಾವು ದೊಡ್ಡ ತಪ್ಪು ಮಾಡಿದ್ರೆ ಹಿರಿಯರ ಸಹಾಯನೂ ಕೇಳಬೇಕು.—ಯಾಕೋ. 5:14, 15.

d ಉದಾಹರಣೆಗೆ, ಬಾಳಿಗೆ ಬೆಳಕಾಗೋ ಬೈಬಲ್‌ ವಚನಗಳು ಪುಸ್ತಕದಲ್ಲಿರೋ “ಚಿಂತೆ” ಮತ್ತು “ಸಾಂತ್ವನ, ಸಮಾಧಾನ” ಅನ್ನೋ ವಿಷ್ಯಗಳಲ್ಲಿರೋ ವಚನಗಳನ್ನ ನೋಡಿ.