ಅಧ್ಯಯನ ಲೇಖನ 41
ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು
ಯೇಸು 40 ದಿನಗಳಲ್ಲಿ ಕಲಿಸಿದ ಪಾಠಗಳು!
“[ಆತನು] ಶಿಷ್ಯರಿಗೆ 40 ದಿನಗಳಲ್ಲಿ ತುಂಬ ಸಲ ಕಾಣಿಸ್ಕೊಂಡನು. ದೇವರ ಆಳ್ವಿಕೆ ಬಗ್ಗೆ ಅವ್ರಿಗೆ ಹೇಳ್ತಾ ಇದ್ದನು.”—ಅ. ಕಾ. 1:3.
ಈ ಲೇಖನದಲ್ಲಿ ಏನಿದೆ?
ಯೇಸು ಭೂಮಿ ಮೇಲಿದ್ದ ಕೊನೇ 40 ದಿನಗಳಲ್ಲಿ ಏನು ಮಾಡಿದನು ಮತ್ತು ಆತನ ತರ ಇರೋಕೆ ನಾವೇನು ಮಾಡಬೇಕು ಅಂತ ನೋಡೋಣ.
1-2. ಇಬ್ರು ಶಿಷ್ಯರು ಎಮ್ಮಾಹು ಹಳ್ಳಿಗೆ ಹೋಗ್ತಿದ್ದಾಗ ಏನಾಯ್ತು?
ಅವತ್ತು ಕ್ರಿಸ್ತಶಕ 33, ನೈಸಾನ್ 16ನೇ ತಾರೀಕು. ಯೇಸುವಿನ ಶಿಷ್ಯರೆಲ್ಲ ನೋವಲ್ಲಿ ಮುಳುಗಿ ಹೋಗಿದ್ದಾರೆ, ಭಯದಲ್ಲಿ ಕಂಗಾಲಾಗಿ ಹೋಗಿದ್ದಾರೆ. ಇಬ್ರು ಶಿಷ್ಯರು ಯೆರೂಸಲೇಮಿಂದ 11 ಕಿಲೋಮೀಟರ್ ದೂರದಲ್ಲಿರೋ ಎಮ್ಮಾಹು ಅನ್ನೋ ಹಳ್ಳಿಗೆ ನಡ್ಕೊಂಡು ಹೋಗ್ತಿದ್ದಾರೆ. ಇಷ್ಟು ದಿನ ಅವರು ಯಾರನ್ನ ಗುರು ಅಂತ ಅಂದ್ಕೊಂಡಿದ್ರೋ ಆ ಯೇಸುನ ಜನ ಕೊಂದು ಬಿಟ್ಟಿದ್ದಾರೆ. ಮೆಸ್ಸೀಯ ತಮ್ಮನ್ನ ರಕ್ಷಿಸ್ತಾನೆ ಅಂತ ಅವರು ಇಟ್ಕೊಂಡಿದ್ದ ಆಸೆಯೆಲ್ಲಾ ನುಚ್ಚುನೂರಾಗಿದೆ. ಆದ್ರೆ ಅವ್ರ ಜೀವನದಲ್ಲಿ ಮರಿಯೋಕೆ ಆಗದಿರೋ ಒಂದು ಘಟನೆ ನಡೀತು.
2 ಆ ಶಿಷ್ಯರು ನಡ್ಕೊಂಡು ಹೋಗ್ತಿರುವಾಗ ಅವ್ರಿಗೆ ಪರಿಚಯ ಇಲ್ದೇ ಇರೋ ಒಬ್ಬ ವ್ಯಕ್ತಿ ಅವ್ರ ಹತ್ರ ಬರ್ತಾನೆ. ಅವನೂ ಅವ್ರ ಜೊತೆ ನಡಿತಾನೆ. ಆಗ ಆ ಶಿಷ್ಯರು ಅವ್ರ ಹತ್ರ ತಾವು ಮೆಸ್ಸೀಯನ ಬಗ್ಗೆ ಇಟ್ಕೊಂಡಿದ್ದ ಕನಸೆಲ್ಲಾ ನುಚ್ಚುನೂರಾಗಿದ್ರ ಬಗ್ಗೆ ಮತ್ತು ಆತನು ತೀರಿಹೋಗಿದ್ರಿಂದ ಎಷ್ಟೆಲ್ಲಾ ನೋವಾಗಿದೆ ಅನ್ನೋದ್ರ ಬಗ್ಗೆ ಅವನ ಹತ್ರ ಹೇಳ್ತಾರೆ. ಆಗ ಆ ವ್ಯಕ್ತಿ ಅವ್ರ ಜೀವನನೇ ಬದಲಾಯಿಸೋ ಒಂದು ವಿಷ್ಯನ ಅವ್ರಿಗೆ ಹೇಳ್ತಾನೆ. “ಮೋಶೆ ಮತ್ತು ಪ್ರವಾದಿಗಳು” ಮೆಸ್ಸೀಯ ಕಷ್ಟ ಅನುಭವಿಸಿ ಸಾಯ್ತಾನೆ ಅಂತ ತಿಳಿಸಿರೋ ವಿಷ್ಯನ ಪವಿತ್ರ ಗ್ರಂಥದಿಂದ ಅವ್ರಿಗೆ ವಿವರಿಸ್ತಾನೆ. ಆ ಶಿಷ್ಯರು ಎಮ್ಮಾಹು ತಲುಪಿದ್ಮೇಲೆ ಇಷ್ಟೊತ್ತು ಅವ್ರ ಜೊತೆ ಮಾತಾಡಿದ ವ್ಯಕ್ತಿ ಬೇರೆ ಯಾರೂ ಅಲ್ಲ, ಯೇಸುನೇ ಅಂತ ಗೊತ್ತಾಗುತ್ತೆ. ಮೆಸ್ಸೀಯ ಮತ್ತೆ ಬದುಕಿ ಬಂದಿದ್ದಾನೆ ಅಂತ ಗೊತ್ತಾದಾಗ ಅವ್ರಿಗೆ ಎಷ್ಟು ಖುಷಿಯಾಗಿರಬಹುದು ಅಂತ ಸ್ವಲ್ಪ ಯೋಚಿಸಿ!—ಲೂಕ 24:13-35.
3-4. (ಎ) ನೋವಲ್ಲಿದ್ದ ಶಿಷ್ಯರ ಪರಿಸ್ಥಿತಿ ಹೇಗೆ ಬದಲಾಯ್ತು? (ಬಿ) ಈ ಲೇಖನದಲ್ಲಿ ಏನು ಕಲಿತೀವಿ? (ಅಪೊಸ್ತಲರ ಕಾರ್ಯ 1:3)
3 ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ 40 ದಿನ ಭೂಮಿಲಿದ್ದನು. ಆಗೆಲ್ಲ ಅವನು ಶಿಷ್ಯರಿಗೆ ತುಂಬ ಸಲ ಕಾಣಿಸ್ಕೊಂಡನು. (ಅಪೊಸ್ತಲರ ಕಾರ್ಯ 1:3 ಓದಿ.) ಇದ್ರಿಂದ ಭಯದಲ್ಲಿ, ನೋವಲ್ಲಿ ಮುಳುಗಿ ಹೋಗಿದ್ದ ಶಿಷ್ಯರು ಚುರುಕಿನ ಸೈನಿಕರಾದ್ರು. ಅವರು ಖುಷಿಖುಷಿಯಿಂದ ಧೈರ್ಯದಿಂದ ದೇವರ ಆಳ್ವಿಕೆ ಬಗ್ಗೆ ಹೇಳೋಕೆ ರೆಡಿಯಾದ್ರು. a
4 ಯೇಸು ಭೂಮಿ ಮೇಲಿದ್ದ ಆ 40 ದಿನಗಳು ತುಂಬ ಅದ್ಭುತವಾಗಿತ್ತು. ಅದನ್ನ ತಿಳ್ಕೊಳ್ಳೋದ್ರಿಂದ ನಮಗೆ ತುಂಬ ಪ್ರಯೋಜನ ಇದೆ. ಹಾಗಾಗಿ ನಾವು ಈ ಲೇಖನದಲ್ಲಿ ಯೇಸು ಮಾಡಿದ ಮೂರು ವಿಷ್ಯಗಳ ಬಗ್ಗೆ ನೋಡೋಣ. (1) ಆತನು ತನ್ನ ಶಿಷ್ಯರನ್ನ ಪ್ರೋತ್ಸಾಹಿಸಿದನು. (2) ದೇವರ ವಾಕ್ಯನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಿದನು. (3) ಜಾಸ್ತಿ ಜವಾಬ್ದಾರಿ ತಗೊಳ್ಳೋಕೆ ಶಿಷ್ಯರಿಗೆ ತರಬೇತಿ ಕೊಟ್ಟನು. ಇದ್ರ ಬಗ್ಗೆ ನಾವೀಗ ಒಂದೊಂದಾಗಿ ಚರ್ಚೆ ಮಾಡೋಣ ಮತ್ತು ಅದ್ರಿಂದ ನಾವು ಏನು ಕಲಿಬಹುದು ಅಂತಾನೂ ನೋಡೋಣ.
ಪ್ರೋತ್ಸಾಹಿಸ್ತಾ ಇರಿ
5. ಯೇಸುವಿನ ಶಿಷ್ಯರಿಗೆ ಯಾಕೆ ಪ್ರೋತ್ಸಾಹ ಬೇಕಿತ್ತು?
5 ಯೇಸುವಿನ ಶಿಷ್ಯರನ್ನ ನೋಡಿದ್ರೆ ಪಾಪ ಅನಿಸುತ್ತೆ. ಅವ್ರಿಗೆ ನಿಜವಾಗ್ಲೂ ತುಂಬ ಪ್ರೋತ್ಸಾಹ ಬೇಕಿತ್ತು. ಯಾಕಂದ್ರೆ ಕೆಲವರು ಮನೆ-ಮಠ, ಹೆಂಡ್ತಿ-ಮಕ್ಕಳು, ಕೆಲಸ-ಕಾರ್ಯ ಎಲ್ಲಾ ಬಿಟ್ಟು ಯೇಸು ಜೊತೆನೇ ಇರ್ತಿದ್ರು. (ಮತ್ತಾ. 19:27) ಯೇಸುವಿನ ಶಿಷ್ಯರಾಗಿದ್ದಕ್ಕೆ ಇನ್ನು ಕೆಲವ್ರಿಗೆ ಜನ ಮೂರು ಕಾಸಿನ ಬೆಲೆನೂ ಕೊಡ್ತಿರಲಿಲ್ಲ. ಅವ್ರನ್ನ ತುಂಬ ಕೀಳಾಗಿ ನೋಡ್ತಿದ್ರು. (ಯೋಹಾ. 9:22) ಇಷ್ಟೆಲ್ಲಾ ಆದ್ರೂ ಅವರು ಯಾಕೆ ಯೇಸು ಜೊತೆನೇ ಇದ್ರು? ಯಾಕಂದ್ರೆ ಯೇಸುನೇ ನಿಜವಾದ ಮೆಸ್ಸೀಯ ಅನ್ನೋ ನಂಬಿಕೆ ಅವ್ರಿಗಿತ್ತು. (ಮತ್ತಾ. 16:16) ಆದ್ರೆ ಯೇಸುನ ಜನ ಕೊಂದು ಹಾಕಿದಾಗ ಅವ್ರ ಆಸೆಗೆ ತಣ್ಣೀರು ಎರಚಿದ ಹಾಗೆ ಇತ್ತು. ಅವ್ರ ಪರಿಸ್ಥಿತಿ ನಡುನೀರಲ್ಲಿ ಕೈ ಬಿಟ್ಟ ಹಾಗಿತ್ತು.
6. ಯೇಸು ಮತ್ತೆ ಜೀವ ಪಡ್ಕೊಂಡ ಮೇಲೆ ಏನು ಮಾಡಿದನು?
6 ದುಃಖದಲ್ಲಿದ್ದ ಶಿಷ್ಯರನ್ನ ನೋಡಿದಾಗ ಯೇಸು ಇವ್ರಿಗೆ ನಂಬಿಕೆ ಕೊರತೆ ಇದೆ ಅಂತ ಅಂದ್ಕೊಂಡನಾ? ಇಲ್ಲ. ಯಾರಾದ್ರೂ ತೀರಿ ಹೋದಾಗ ಈ ತರ ಆಗೋದು ಸಹಜ ಅಂತ ಆತನು ಅರ್ಥ ಮಾಡ್ಕೊಂಡನು. ಅದಕ್ಕೇ ಮತ್ತೆ ಜೀವ ಪಡ್ಕೊಂಡ ಅದೇ ದಿನ ಅವ್ರನ್ನ ಪ್ರೋತ್ಸಾಹಿಸೋಕೆ ಅವ್ರಿಗೆ ಕಾಣಿಸ್ಕೊಂಡನು. ತನ್ನ ಸಮಾಧಿ ಹತ್ರ ಅಳ್ತಿದ್ದ ಮಗ್ದಲದ ಮರಿಯಗೆ ಆತನು ಕಾಣಿಸ್ಕೊಂಡನು. (ಯೋಹಾ. 20:11, 16) ಆಮೇಲೆ ಎಮ್ಮಾಹುಗೆ ಹೋಗ್ತಿದ್ದ ಇಬ್ರು ಶಿಷ್ಯರಿಗೆ ಅವನು ಕಾಣಿಸ್ಕೊಂಡನು. ನಂತ್ರ ಅಪೊಸ್ತಲ ಪೇತ್ರನಿಗೂ ಕಾಣಿಸ್ಕೊಂಡನು. (ಲೂಕ 24:34) ಈಗ ನಾವು ಆತನು ಮೊದ್ಲು ಯಾರಿಗೆ ಕಾಣಿಸ್ಕೊಂಡ ಮತ್ತು ಆಗ ಏನಾಯ್ತು ಅಂತ ನೋಡೋಣ.
7. (ಎ) ಮರಿಯ ಸಮಾಧಿ ಹತ್ರ ಏನು ಮಾಡ್ತಿದ್ದಳು? (ಯೋಹಾನ 20:11-16) (ಬಿ) ಯೇಸು ಅವಳನ್ನ ಹೇಗೆ ಪ್ರೋತ್ಸಾಹಿಸಿದನು? (ಚಿತ್ರ ನೋಡಿ.)
7 ಯೋಹಾನ 20:11-16 ಓದಿ. ನೈಸಾನ್ 16ನೇ ತಾರೀಕು ಬೆಳಬೆಳಿಗ್ಗೆ ಕೆಲವು ಸ್ತ್ರೀಯರು ಯೇಸುವಿನ ಸಮಾಧಿ ಹತ್ರ ಹೋಗ್ತಾರೆ. ಅವ್ರ ಜೊತೆ ಮಗ್ದಲದ ಮರಿಯನೂ ಇದ್ದಳು. ಅವಳು ಸಮಾಧಿ ಒಳಗೆ ಹೋಗಿ ನೋಡ್ತಾಳೆ, ಆದ್ರೆ ಅದು ಖಾಲಿಯಾಗಿತ್ತು. (ಲೂಕ 24:1, 10) ಅದಕ್ಕೇ ಅವಳು ಪೇತ್ರ ಮತ್ತು ಯೋಹಾನನಿಗೆ ತಿಳಿಸೋಕೆ ಅವಳು ಓಡಿ ಹೋಗ್ತಾಳೆ. ಇದನ್ನ ಕೇಳಿದ ತಕ್ಷಣನೇ ಅವ್ರಿಬ್ರೂ ನೋಡೋಕೆ ಓಡಿ ಬರ್ತಾರೆ. ಅವ್ರ ಜೊತೆ ಮರಿಯನೂ ಬರ್ತಾಳೆ. ಆಮೇಲೆ ಸಮಾಧಿ ಖಾಲಿ ಆಗಿದ್ದನ್ನ ನೋಡಿ ಪೇತ್ರ ಯೋಹಾನ ಮನೆಗೆ ವಾಪಸ್ ಹೋಗಿಬಿಡ್ತಾರೆ. ಆದ್ರೆ ಮರಿಯ ಅಳ್ತಾ ಅಲ್ಲೇ ಇರ್ತಾಳೆ. ಇದನ್ನೆಲ್ಲ ನೋಡ್ತಾ ಯೇಸು ಅಲ್ಲಿ ನಿಂತಿದ್ದನು. ಆದ್ರೆ ಮರಿಯಗೆ ಅದು ಗೊತ್ತೇ ಇರಲಿಲ್ಲ. ತನಗೋಸ್ಕರ ಅವಳು ಅಳ್ತಿರೋದನ್ನ ನೋಡಿದಾಗ ಯೇಸುಗೆ ತುಂಬ ಬೇಜಾರಾಗುತ್ತೆ. ಅದಕ್ಕೆ ಅವಳ ಹತ್ರ ಹೋಗಿ ಅವಳನ್ನ ಸಮಾಧಾನ ಮಾಡಿ ಅವಳಿಗೆ ಒಂದು ಪ್ರಾಮುಖ್ಯವಾದ ಕೆಲಸ ಕೊಡ್ತಾನೆ. ತನಗೆ ಮತ್ತೆ ಜೀವ ಸಿಕ್ಕಿದೆ ಅಂತ ಶಿಷ್ಯರಿಗೆ ತಿಳಿಸೋಕೆ ಹೇಳ್ತಾನೆ. ಇದ್ರಿಂದ ಮರಿಯಗೆ ತುಂಬ ಪ್ರೋತ್ಸಾಹ ಸಿಕ್ತು.—ಯೋಹಾ. 20:17, 18.
8. ಯೇಸು ತರ ಇರೋಕೆ ನಾವೇನು ಮಾಡಬೇಕು?
8 ಯೇಸು ತರ ಇರೋಕೆ ನಾವೇನು ಮಾಡಬೇಕು? ಆತನ ತರ ನಾವೂ ಬೇರೆಯವ್ರ ಕಷ್ಟನ ಅರ್ಥಮಾಡ್ಕೊಂಡು ಸಮಾಧಾನ ಆಗೋ ತರ ಮಾತಾಡಬೇಕು. ಆಗ ಅವರು ಯೆಹೋವನ ಸೇವೆ ಮಾಡ್ತಾ ಇರೋಕೆ ಪ್ರೋತ್ಸಾಹ ಸಿಗುತ್ತೆ. ಜೋಸ್ಲಿನ್ ಅನ್ನೋ ಸಹೋದರಿ ಬಗ್ಗೆ ನೋಡಿ. ಅವ್ರ ತಂಗಿ ಒಂದು ದೊಡ್ಡ ಆ್ಯಕ್ಸಿಡೆಂಟಲ್ಲಿ ತೀರಿ ಹೋದ್ರು. ಅದ್ರ ಬಗ್ಗೆ ಜೋಸ್ಲಿನ್ ಹೀಗೆ ಹೇಳ್ತಾರೆ: “ಎಷ್ಟೋ ತಿಂಗಳಾದ್ರೂ ನನಗೆ ಆ ನೋವಿಂದ ಹೊರಗೆ ಬರೋಕೇ ಆಗ್ಲಿಲ್ಲ.” ಅದಕ್ಕೇ ಒಬ್ಬ ಸಹೋದರ ಮತ್ತು ಅವನ ಹೆಂಡ್ತಿ ಅವಳಿಗೆ ಸಹಾಯ ಮಾಡಿದ್ರು. ಅವಳನ್ನ ಮನೆಗೆ ಕರೆದು ಮಾತಾಡಿಸಿದ್ರು. ಅವಳು ಹೇಳೋದನ್ನ ಸಮಾಧಾನವಾಗಿ ಕೂತು ಕೇಳಿದ್ರು. ಯೆಹೋವ ಅವಳನ್ನ ಎಷ್ಟು ಅಮೂಲ್ಯವಾಗಿ ನೋಡ್ತಾನೆ ಅಂತ ಅರ್ಥಮಾಡಿಸಿದ್ರು. ಆಗ ಜೋಸ್ಲಿನ್‌ಗೆ ಹೇಗನಿಸ್ತು? ಅವಳ ಮಾತಲ್ಲೇ ಕೇಳಿ: “ನನ್ನ ಪರಿಸ್ಥಿತಿ ಸಮುದ್ರದ ಚಂಡಮಾರುತದಲ್ಲಿ ಸಿಕ್ಕಿ ಹಾಕೊಂಡ ಹಾಗಿತ್ತು. ಆದ್ರೆ ಇವರು ನನ್ನ ಕೈ ಹಿಡಿದು ಹೊರಗೆ ಎಳೆದ್ರು. ನನ್ನನ್ನ ಕಾಪಾಡೋಕೆ ಯೆಹೋವನೇ ಅವ್ರನ್ನ ನನ್ನ ಹತ್ರ ಕಳಿಸಿದ ಹಾಗೆ ನನಗೆ ಅನಿಸ್ತು. ಯೆಹೋವನ ಸೇವೆ ಮಾಡ್ತಾ ಇರೋಕೆ ಮತ್ತೆ ನನ್ನಲ್ಲಿ ಆಸೆ ಚಿಗುರಿಸಿದ್ರು.” ಆ ಸಹೋದರರ ತರನೇ ನಾವೂ ಕಷ್ಟದಲ್ಲಿರೋ ಸಹೋದರರಿಗೆ ಯೆಹೋವನ ಸೇವೆ ಮಾಡ್ತಾ ಇರೋಕೆ ಸಹಾಯ ಮಾಡೋಣ. ಅವರು ಕಷ್ಟ ಹೇಳ್ಕೊಳ್ಳುವಾಗ ಸಮಾಧಾನವಾಗಿ ಕೂತು ಕೇಳೋಣ.—ರೋಮ. 12:15.
ಬೈಬಲನ್ನ ಚೆನ್ನಾಗಿ ಅರ್ಥಮಾಡಿಸಿ
9. ಯೇಸುವಿನ ಶಿಷ್ಯರಿಗೆ ಏನಾಯ್ತು? ಮತ್ತು ಆತನು ಅವ್ರಿಗೆ ಹೇಗೆ ಸಹಾಯ ಮಾಡಿದನು?
9 ಯೇಸುವಿನ ಶಿಷ್ಯರು ಬೈಬಲನ್ನ ನಂಬ್ತಿದ್ರು. ಅದ್ರಲ್ಲಿ ಇರೋದನ್ನೆಲ್ಲಾ ಚೆನ್ನಾಗಿ ಪಾಲಿಸ್ತಿದ್ರು. (ಯೋಹಾ. 17:6) ಆದ್ರೆ ಇಷ್ಟೊಳ್ಳೆ ಯೇಸುನ ಒಬ್ಬ ಅಪರಾಧಿ ತರ ಹಿಂಸಾ ಕಂಬದಲ್ಲಿ ಕೊಂದಾಗ ಅವ್ರ ಮನಸ್ಸಲ್ಲಿ ತುಂಬ ಪ್ರಶ್ನೆಗಳು ಹುಟ್ಕೊಳ್ತು. ಅವ್ರಿಗೆ ಗಲಿಬಿಲಿ ಆಯ್ತು. ಅವ್ರಿಗೆ ಪ್ರಶ್ನೆ ಬಂದಿದೆ ಅಂದ ತಕ್ಷಣ ತನ್ನ ಮೇಲೆ ಮತ್ತು ಯೆಹೋವನ ಮೇಲೆ ಅವ್ರಿಗೆ ಪ್ರೀತಿ ಇಲ್ಲ ಅಂತ ಆತನು ಅಂದ್ಕೊಳ್ಳಲಿಲ್ಲ. (ಲೂಕ 9:44, 45; ಯೋಹಾ. 20:9) ಅವ್ರಿಗೆ ಬೈಬಲನ್ನ ಚೆನ್ನಾಗಿ ಅರ್ಥಮಾಡಿಸಬೇಕು ಅಂತ ತಿಳ್ಕೊಂಡನು. ಆಮೇಲೆ ಅವ್ರಿಗೆ ಅದನ್ನ ಚೆನ್ನಾಗಿ ಅರ್ಥಮಾಡಿಸಿದನು. ಎಮ್ಮಾಹುಗೆ ಹೋಗ್ತಿದ್ದ ಇಬ್ರು ಶಿಷ್ಯರ ಹತ್ರ ಯೇಸು ಏನು ಮಾತಾಡಿದನು ಅಂತ ನೋಡೋಣ ಬನ್ನಿ.
10. ಮೆಸ್ಸೀಯನ ಬಗ್ಗೆ ಇದ್ದ ಸತ್ಯನ ಶಿಷ್ಯರು ಅರ್ಥಮಾಡ್ಕೊಳ್ಳೋಕೆ ಯೇಸು ಹೇಗೆ ಸಹಾಯ ಮಾಡಿದನು? (ಲೂಕ 24:33-48)
10 ಲೂಕ 24:18-27 ಓದಿ. ನೋಡಿದ್ರಾ? ಯೇಸು ತಾನು ಯಾರು ಅಂತ ಶಿಷ್ಯರಿಗೆ ನೇರವಾಗಿ ಹೇಳಲಿಲ್ಲ. ಅವ್ರಿಗೆ ಕೆಲವು ಪ್ರಶ್ನೆಗಳನ್ನ ಕೇಳಿದನು. ಯಾಕೆ? ಯಾಕಂದ್ರೆ ಅವ್ರ ಮನಸ್ಸಲ್ಲಿ ಏನು ಓಡ್ತಿದೆ ಅಂತ ತಿಳ್ಕೊಳ್ಳೋಕೆ ಕೇಳಿದನು. ಆಗ ಅವರು ಮೆಸ್ಸೀಯ ತಮ್ಮನ್ನ ರೊಮನ್ನರ ಕೈಯಿಂದ ಬಿಡಿಸ್ತಾನೆ ಅಂತ ನಂಬ್ಕೊಂಡಿದ್ವಿ ಅಂತ ಹೇಳಿದ್ರು. ಅವ್ರ ಮನಸ್ಸಲ್ಲಿರೋ ಚಿಂತೆಯನ್ನ ಯೇಸು ಅರ್ಥಮಾಡ್ಕೊಂಡ ಮೇಲೆ ಮೆಸ್ಸೀಯನಿಗೆ ಏನೆಲ್ಲಾ ಆಗುತ್ತೆ ಅಂತ ಪವಿತ್ರ ಗ್ರಂಥದಲ್ಲಿ ಮುಂಚೆನೇ ಹೇಳಿದೆ ಅಂತ ವಿವರಿಸಿದನು. b (ಲೂಕ 24:33-48) ಅವತ್ತು ಸಂಜೆ ಯೇಸು ಬೇರೆ ಶಿಷ್ಯರಿಗೂ ಈ ವಿಷ್ಯಗಳನ್ನ ಅರ್ಥಮಾಡಿಸಿದನು. ಈ ಘಟನೆಯಿಂದ ನಾವೇನು ಕಲಿಬಹುದು?
11-12. (ಎ) ಯೇಸು ತರ ಬೈಬಲ್ ಸತ್ಯ ಕಲಿಸೋಕೆ ನಾವೇನು ಮಾಡಬೇಕು? (ಚಿತ್ರಗಳನ್ನ ನೋಡಿ.) (ಬಿ) ನಾರ್ಟೆಯ ಬೈಬಲ್ ಟೀಚರಿಂದ ಏನು ಕಲಿತೀವಿ?
11 ಯೇಸು ತರ ಇರೋಕೆ ನಾವೇನು ಮಾಡಬೇಕು? ನಿಮ್ಮ ಬೈಬಲ್ ವಿದ್ಯಾರ್ಥಿಗಳ ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಳ್ಳೋಕೆ ಮೊದ್ಲು ಪ್ರಶ್ನೆಗಳನ್ನ ಕೇಳಿ. (ಜ್ಞಾನೋ. 20:5) ಆಗ ಅವ್ರ ಪರಿಸ್ಥಿತಿ ಏನು ಅಂತ ನಿಮಗೆ ಅರ್ಥ ಆಗುತ್ತೆ. ಆಮೇಲೆ ಅವ್ರಿಗೆ ಸಹಾಯ ಆಗೋ ವಚನಗಳನ್ನ ಹೇಗೆ ಹುಡುಕೋದು ಅಂತ ತೋರಿಸ್ಕೊಡಿ. ಆದ್ರೆ ಅವ್ರೇನು ಮಾಡಬೇಕು ಅಂತ ನೀವೇ ಹೇಳೋಕೆ ಹೋಗಬೇಡಿ. ಅದ್ರ ಬದ್ಲು ಬೈಬಲ್ ವಚನಗಳನ್ನ ಚೆನ್ನಾಗಿ ಯೋಚಿಸೋಕೆ, ಅದನ್ನ ಹೇಗೆ ಪಾಲಿಸಬೇಕು ಅಂತ ಅರ್ಥ ಮಾಡ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಿ. ಈಗ ನಾವು ಘಾನದಲ್ಲಿರೋ ನಾರ್ಟೆಗೆ ಅವನ ಬೈಬಲ್ ಟೀಚರ್ ಹೇಗೆ ಸಹಾಯ ಮಾಡಿದ್ರು ಅಂತ ನೋಡೋಣ.
12 ನಾರ್ಟೆಗೆ 16 ವಯಸ್ಸಿದ್ದಾಗ ಅವನು ಬೈಬಲ್ ಕಲಿಯೋಕೆ ಶುರು ಮಾಡಿದ. ಇದು ಅವನ ಮನೆಯವ್ರಿಗೆ ಒಂಚೂರು ಇಷ್ಟ ಇರ್ಲಿಲ್ಲ. ಹಾಗಂತ ಅವನು ಬೈಬಲ್ ಕಲಿಯೋದನ್ನ ನಿಲ್ಲಿಸಿಬಿಡಲಿಲ್ಲ. ಅದನ್ನ ಮುಂದುವರಿಸೋಕೆ ಅವನ ಬೈಬಲ್ ಟೀಚರೇ ಮುಂಚೆನೇ ಅವನಿಗೆ ಸಹಾಯ ಮಾಡಿದ್ರು. ಅವರು ಮತ್ತಾಯ 10ನೇ ಅಧ್ಯಾಯ ತೋರಿಸಿ ಕ್ರೈಸ್ತರಾದವ್ರಿಗೆ ಹಿಂಸೆ ಬಂದೇ ಬರುತ್ತೆ ಅಂತ ಅರ್ಥ ಮಾಡಿಸಿದ್ರು. “ಯಾವಾಗ ನನ್ನ ಮನೆಯವರು ನನ್ನನ್ನ ವಿರೋಧಿಸೋಕೆ ಶುರುಮಾಡಿದ್ರೋ ಆಗ ನನಗೆ ನಾನು ಕಲ್ತಿರೋದು ಸತ್ಯನೇ ಅಂತ ನಂಬಿಕೆ ಬಂತು” ಅಂತ ನಾರ್ಟೆ ಹೇಳಿದ. ಇಷ್ಟು ಮಾತ್ರ ಅಲ್ಲ, ಅವನ ಬೈಬಲ್ ಟೀಚರ್ ಮತ್ತಾಯ 10:16ನ್ನ ಅರ್ಥ ಮಾಡ್ಕೊಳ್ಳೋಕೂ ಅವನಿಗೆ ಸಹಾಯ ಮಾಡಿದ್ರು. ಇದ್ರಿಂದ ಅವನು ತನ್ನ ನಂಬಿಕೆ ಬಗ್ಗೆ ತನ್ನ ಮನೆಯವ್ರ ಹತ್ರ ಹೇಳುವಾಗ ಹುಷಾರಾಗಿ ಮಾತಾಡಿದ ಮತ್ತು ಗೌರವ ಕೊಟ್ಟೂ ಮಾತಾಡಿದ. ಸ್ವಲ್ಪ ಸಮಯ ಆದ್ಮೇಲೆ ಅವನು ದೀಕ್ಷಾಸ್ನಾನ ತಗೊಂಡ. ಅವನಿಗೆ ಪಯನೀಯರ್ ಆಗಬೇಕು ಅಂತ ತುಂಬ ಆಸೆ ಇತ್ತು. ಆದ್ರೆ ಅವನ ಅಪ್ಪಂಗೆ ಅವನು ಕಾಲೇಜಿಗೆ ಹೋಗಿ ಇನ್ನೂ ಓದಬೇಕು ಅಂತ ಇಷ್ಟ ಇತ್ತು. ಇದ್ರ ಬಗ್ಗೆ ಅವನು ಅವನ ಬೈಬಲ್ ಟೀಚರ್ ಹತ್ರ ಹೇಳಿದಾಗ ಅವನು ಯಾವ ತೀರ್ಮಾನ ತಗೋಬೇಕು ಅಂತ ಅವನ ಟೀಚರ್ ಹೇಳಲಿಲ್ಲ. ಬದ್ಲಿಗೆ ಅವನ ಹತ್ರ ಕೆಲವೊಂದು ಪ್ರಶ್ನೆ ಕೇಳಿದ್ರು. ಆಮೇಲೆ ಬೈಬಲ್ ವಚನ ತೋರಿಸಿ ಅದ್ರಲ್ಲಿರೋ ತತ್ವನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿದ್ರು. ಆಗ ಅವನೇ ತೀರ್ಮಾನ ಮಾಡಿ ಪಯನೀಯರಿಂಗ್ ಶುರು ಮಾಡಿದ. ಆದ್ರೆ ಅವನ ಅಪ್ಪಂಗೆ ಇದು ಇಷ್ಟ ಆಗದೇ ಇದ್ದಿದ್ರಿಂದ ಅವನನ್ನ ಮನೆಯಿಂದ ಹೊರಗೆ ಹಾಕಿಬಿಟ್ರು. ಆಗ ಸಹೋದರ ನಾರ್ಟೆಗೆ ಹೇಗನಿಸ್ತು? ‘ನಾನು ಸರಿಯಾಗಿರೋ ತೀರ್ಮಾನನೇ ಮಾಡಿದ್ದೀನಿ ಅನ್ನೋ ನಂಬಿಕೆ ನನಗಿತ್ತು’ ಅಂತ ಅವನು ಹೇಳ್ತಾನೆ. ನಾವು ಬೇರೆಯವ್ರಿಗೆ ಬೈಬಲ್ ವಚನಗಳನ್ನ ತೋರಿಸಿ ಸಹಾಯ ಮಾಡೋವಾಗ ಅವ್ರ ನಂಬಿಕೆ ಬಂಡೆ ತರ ಗಟ್ಟಿಯಾಗುತ್ತೆ.—ಎಫೆ. 3:16-19.
‘ಉಡುಗೊರೆಗಳಾಗೋಕೆ’ ಸಹೋದರರಿಗೆ ತರಬೇತಿ ಕೊಡಿ
13. ಸ್ವರ್ಗಕ್ಕೆ ಹೋದ್ಮೇಲೂ ಸಾರೋ ಕೆಲಸ ಮುಂದುವರಿತಾ ಇರೋಕೆ ಯೇಸು ಏನು ಮಾಡಿದನು? (ಎಫೆಸ 4:8)
13 ಯೇಸು ಭೂಮಿಲಿದ್ದಾಗ ತನ್ನ ತಂದೆ ಕೊಟ್ಟ ಕೆಲ್ಸನ ಅಚ್ಚುಕಟ್ಟಾಗಿ ಮಾಡ್ತಿದ್ದ. (ಯೋಹಾ. 17:4) ಹಾಗಂತ ‘ಎಲ್ಲ ಕೆಲ್ಸನ ನಾನು ಮಾಡಿದ್ರೆನೇ ಚೆನ್ನಾಗಿ ಆಗೋದು, ಇಲ್ಲಾಂದ್ರೆ ಎಲ್ಲ ಹಾಳು ಮಾಡಿಬಿಡ್ತಾರೆ’ ಅಂತ ಯೇಸು ಯಾವಾಗಾದ್ರೂ ಅಂದ್ಕೊಂಡನಾ? ಇಲ್ಲ. ಅದಕ್ಕೇ ಮೂರೂವರೆ ವರ್ಷ ಸಿಹಿಸುದ್ದಿ ಸಾರ್ತಿದ್ದಾಗ ಸಾರೋದು ಹೇಗೆ ಅಂತ ಬೇರೆಯವ್ರಿಗೂ ಕಲಿಸ್ಕೊಟ್ಟನು. ಅಷ್ಟೇ ಅಲ್ಲ ಯೇಸು ಸ್ವರ್ಗಕ್ಕೆ ಹೋಗೋ ಮುಂಚೆನೂ ತನ್ನ ಶಿಷ್ಯರಿಗೆ ದೊಡ್ಡದೊಡ್ಡ ಜವಾಬ್ದಾರಿಗಳನ್ನ ವಹಿಸ್ಕೊಟ್ಟನು. ಸಾರೋ ಮತ್ತು ಕಲಿಸೋ ಕೆಲಸನ ಮುಂದೆ ನಿಂತು ನಡಿಸೋಕೆ, ತನ್ನ ಪ್ರೀತಿಯ ಕುರಿಮಂದೆಯನ್ನ ಚೆನ್ನಾಗಿ ನೋಡ್ಕೊಳೋಕೆ ಅವ್ರಿಗೆ ಜವಾಬ್ದಾರಿ ವಹಿಸ್ಕೊಟ್ಟನು. (ಎಫೆಸ 4:8 ಓದಿ.) ಆಗ ಆ ಶಿಷ್ಯರಲ್ಲಿ ಕೆಲವ್ರಿಗೆ ಇನ್ನೂ ಮೂವತ್ತು ವಯಸ್ಸೂ ಆಗಿರಲಿಲ್ಲ. ಆದ್ರೂ ಅವ್ರನ್ನ ನಂಬಿ ಅವ್ರಿಗೆ ಆ ಕೆಲಸ ಕೊಟ್ಟನು. ಯಾಕಂದ್ರೆ ಅವರು ಕಷ್ಟ ಪಟ್ಟು ಕೆಲಸ ಮಾಡ್ತಿದ್ರು ಮತ್ತು ಅವನಿಗೆ ನಿಯತ್ತಾಗಿ ಇದ್ರು. ಅದಕ್ಕೇ ಕುರಿಮಂದೆಗೆ ತನ್ನ ಶಿಷ್ಯರು “ಉಡುಗೊರೆಗಳಾಗಿ” ಇರ್ತಾರೆ ಅನ್ನೋ ನಂಬಿಕೆಯಿಂದ ಆ 40 ದಿನಗಳಲ್ಲಿ ಜಾಸ್ತಿ ತರಬೇತಿ ಕೊಟ್ಟನು. ಹಾಗಾದ್ರೆ ಆತನು ಅವ್ರಿಗೆ ಹೇಗೆ ತರಬೇತಿ ಕೊಟ್ಟನು?
14. ಯೇಸು ಭೂಮಿಲಿದ್ದ ಕೊನೇ 40 ದಿನಗಳಲ್ಲಿ ಏನೆಲ್ಲ ಮಾಡಿದನು? (ಚಿತ್ರ ನೋಡಿ.)
14 ಶಿಷ್ಯರು ಕೆಲವೊಂದು ವಿಷ್ಯಗಳನ್ನ ಸರಿಮಾಡ್ಕೊಬೇಕು ಅಂತ ಯೇಸುಗೆ ಗೊತ್ತಾದಾಗ ನೇರವಾಗಿ ಆದ್ರೆ ಪ್ರೀತಿಯಿಂದ ತಿದ್ದದನು. ಉದಾಹರಣೆಗೆ, ಅವನೇ ಯೇಸುನಾ ಅಂತ ಅವರು ಸಂಶಯ ಪಟ್ಟಾಗ ಅವ್ರನ್ನ ತಿದ್ದಿದನು. (ಲೂಕ 24:25-27; ಯೋಹಾ. 20:27) ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡೋದಕ್ಕಿಂತ ತನ್ನ ಕುರಿಮಂದೆನ ನೋಡ್ಕೊಳ್ಳೋದು ತುಂಬ ಮುಖ್ಯ ಅಂತ ಅವ್ರಿಗೆ ಅರ್ಥ ಮಾಡಿಸಿದನು. (ಯೋಹಾ. 21:15) ದೇವರ ಸೇವೆ ಮಾಡುವಾಗ ಬೇರೆಯವ್ರಿಗೆ ಸುಯೋಗಗಳು ಸಿಗೋದನ್ನ ನೋಡಿ ತಲೆ ಕೆಡಿಸ್ಕೊಬಾರದು ಅಂತನೂ ಅವ್ರಿಗೆ ಹೇಳಿದನು. (ಯೋಹಾ. 21:20-22) ಅಷ್ಟೇ ಅಲ್ಲ ದೇವರ ಆಳ್ವಿಕೆ ಬಗ್ಗೆ ಅವರು ತಪ್ಪರ್ಥ ಮಾಡ್ಕೊಂಡಾಗ ಸಿಹಿಸುದ್ದಿ ಸಾರೋದಕ್ಕೆ ಪ್ರಾಮುಖ್ಯತೆ ಕೊಡಿ ಅಂತ ಅರ್ಥ ಮಾಡಿಸಿದನು. (ಅ. ಕಾ. 1:6-8) ಹಾಗಾದ್ರೆ ಹಿರಿಯರು ಯೇಸುವಿಂದ ಏನು ಕಲಿಬಹುದು?
15-16. (ಎ) ಯೇಸು ತರ ಇರೋಕೆ ಹಿರಿಯರು ಏನು ಮಾಡಬೇಕು? (ಬಿ) ಒಬ್ಬ ಹಿರಿಯ ಕೊಟ್ಟ ಸಲಹೆಯಿಂದ ಪ್ಯಾಟ್ರಿಕ್‌ಗೆ ಹೇಗೆ ಸಹಾಯ ಆಯ್ತು?
15 ಯೇಸು ತರ ಇರೋಕೆ ಹಿರಿಯರು ಏನು ಮಾಡಬೇಕು? ಹಿರಿಯರು ಸಹೋದರರಿಗೆ ಒಳ್ಳೇ ತರಬೇತಿ ಕೊಡಬೇಕು. ಅವರು ವಯಸ್ಸಲ್ಲಿ ಚಿಕ್ಕವರಾಗಿದ್ರೂ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಮಾಡೋಕೆ ಅವ್ರಿಗೆ ಕಲಿಸ್ಕೊಡಬೇಕು. c ಅವರು ಯಾವ ತಪ್ಪನ್ನೂ ಮಾಡಬಾರದು, ಎಲ್ಲಾ ಪರ್ಫೆಕ್ಟಾಗಿ ಮಾಡಬೇಕು ಅಂತ ಹಿರಿಯರು ಅಂದ್ಕೊಬಾರದು. ತಪ್ಪೇನಾದ್ರೂ ಮಾಡಿದ್ರೆ ಅವ್ರನ್ನ ಪ್ರೀತಿಯಿಂದ ತಿದ್ದಬೇಕು. ಆಗ ಅವರು ಕೆಲಸನ ಚೆನ್ನಾಗಿ ಮಾಡೋಕೆ ಕಲಿತಾರೆ. ಅಷ್ಟೇ ಅಲ್ಲ ದೀನತೆ ತೋರಿಸೋದು, ನಂಬಿಕೆ ಗಳಿಸೋದು, ಬೇರೆಯವ್ರ ಸೇವೆ ಮಾಡೋದು ಎಷ್ಟು ಮುಖ್ಯ ಅಂತ ಅರ್ಥ ಮಾಡ್ಕೊಳ್ತಾರೆ.—1 ತಿಮೊ. 3:1; 2 ತಿಮೊ. 2:2; 1 ಪೇತ್ರ 5:5.
16 ಒಬ್ಬ ಹಿರಿಯ ಪ್ಯಾಟ್ರಿಕ್ ಅನ್ನೋ ಸಹೋದರನನ್ನ ಪ್ರೀತಿಯಿಂದ ತಿದ್ದಿದ್ರು. ಪ್ಯಾಟ್ರಿಕ್ ಒರಟಾಗಿ ಮಾತಾಡ್ತಿದ್ರು. ಸಹೋದರಿಯರ ಜೊತೆನೂ ಹೀಗೇ ನಡ್ಕೊಳ್ತಿದ್ರು. ಅದಕ್ಕೇ ಆ ಹಿರಿಯ ಪ್ರೀತಿಯಿಂದ ನೇರವಾಗಿ ಸಲಹೆ ಕೊಟ್ರು. ಇದ್ರ ಬಗ್ಗೆ ಪ್ಯಾಟ್ರಿಕ್, “ನನಗೆ ಇದ್ರಿಂದ ಒಳ್ಳೇದೇ ಆಯ್ತು. ಯಾಕಂದ್ರೆ ನಾನು ಸಭೇಲಿ ಏನು ಸುಯೋಗ ಸಿಗಬೇಕು ಅಂತ ಅಂದ್ಕೊಳ್ತಾ ಇದ್ನೋ ಅದು ಬೇರೆಯವ್ರಿಗೆ ಸಿಗೋದನ್ನ ನೋಡಿದಾಗ ನನಗೆ ತುಂಬ ಬೇಜಾರಾಗ್ತಿತ್ತು. ಆದ್ರೆ ಆ ಸಹೋದರ ಸಲಹೆ ಕೊಟ್ಟಿದ್ರಿಂದ ತುಂಬ ಪ್ರಯೋಜನ ಪಡ್ಕೊಂಡೆ. ಸುಯೋಗ ಅಥವಾ ಸ್ಥಾನಕ್ಕಿಂತ ಸಹೋದರರ ಸೇವೆ ಮಾಡೋದು ತುಂಬ ಮುಖ್ಯ ಅಂತ ಅರ್ಥ ಮಾಡ್ಕೊಂಡೆ” ಅಂತ ಹೇಳ್ತಾರೆ. ಪ್ಯಾಟ್ರಿಕ್ ಈ ಬದಲಾವಣೆ ಮಾಡ್ಕೊಂಡಿದ್ರಿಂದ ಏನಾದ್ರೂ ಪ್ರಯೋಜನ ಆಯ್ತಾ? ಆಯ್ತು, 23ನೇ ವಯಸ್ಸಲ್ಲೇ ಅವರು ಹಿರಿಯರಾದ್ರು.—ಜ್ಞಾನೋ. 27:9.
17. ಶಿಷ್ಯರ ಮೇಲೆ ನಂಬಿಕೆ ಇತ್ತು ಅಂತ ಯೇಸು ಹೇಗೆ ತೋರಿಸಿದನು?
17 ಯೇಸು ತನ್ನ ಶಿಷ್ಯರಿಗೆ ಸಾರೋ ಜವಾಬ್ದಾರಿ ಅಷ್ಟೇ ಅಲ್ಲ ಕಲಿಸೋ ಜವಾಬ್ದಾರಿನೂ ಕೊಟ್ಟನು. (ಮತ್ತಾ. 28:20) ಆದ್ರೆ ಶಿಷ್ಯರಿಗೆ ಅದನ್ನ ಮಾಡೋಕೆ ತಮ್ಮಿಂದ ಆಗಲ್ವೆನೋ ಅಂತ ಅನಿಸಿರಬಹುದು. ಆದ್ರೆ ಯೇಸುಗೆ ಅವ್ರ ಮೇಲೆ ಒಂಚೂರೂ ಸಂಶಯ ಇರಲಿಲ್ಲ. ಅದಕ್ಕೆ ಅವ್ರ ಹತ್ರ ನೇರವಾಗಿ “ಅಪ್ಪ ನನ್ನನ್ನ ಕಳಿಸಿದ ತರ ನಾನೂ ನಿಮ್ಮನ್ನ ಕಳಿಸ್ತಾ ಇದ್ದೀನಿ” ಅಂತ ಪೂರ್ತಿ ನಂಬಿಕೆಯಿಂದ ಹೇಳಿದನು.—ಯೋಹಾ. 20:21.
18. ಯೇಸು ತರ ಇರೋಕೆ ಹಿರಿಯರು ಏನು ಮಾಡಬೇಕು?
18 ಯೇಸು ತರ ಇರೋಕೆ ಹಿರಿಯರು ಏನು ಮಾಡಬೇಕು? ಅವರು ಕೆಲವು ಜವಾಬ್ದಾರಿಗಳನ್ನ ಬೇರೆಯವ್ರಿಗೆ ವಹಿಸ್ಕೊಡಬೇಕು. (ಫಿಲಿ. 2:19-22) ಉದಾಹರಣೆಗೆ, ಸಭೇಲಿ ಕ್ಲೀನಿಂಗ್ ಇರೋದಾದ್ರೆ, ರಿಪೇರಿ ಕೆಲಸ ಮಾಡೋದಾದ್ರೆ ಮಕ್ಕಳನ್ನ ಯುವಕರನ್ನ ತಮ್ಮ ಜೊತೆ ಸೇರಿಸ್ಕೊಬೇಕು. ಯಾವುದಾದ್ರೂ ಒಂದು ಕೆಲಸ ಕೊಟ್ಟು ಅದನ್ನ ಹೇಗೆ ಮಾಡೋದು ಅಂತ ಕಲಿಸ್ಕೊಡಬೇಕು. ಆಮೇಲೆ ಅವರು ಅದನ್ನ ಚೆನ್ನಾಗಿ ಮಾಡ್ತಾರೆ ಅಂತ ನಂಬಬೇಕು. ಮ್ಯಾಥ್ಯು ಅನ್ನೋ ಸಹೋದರನಿಗೂ ಸಭೆಯಲ್ಲಿರೋ ಹಿರಿಯರು ಸಹಾಯ ಮಾಡಿದ್ರು. ಕೊಟ್ಟ ಕೆಲಸನ ಮ್ಯಾಥ್ಯು ಮಾಡ್ತಾನೆ ಅಂತ ಅವರು ನಂಬಿಕೆ ಇಟ್ರು. ಅದಕ್ಕೆ ಆ ಹಿರಿಯರ ಮೇಲೆ ಅವನಿಗೆ ತುಂಬ ಗೌರವ ಇದೆ. ಅದ್ರ ಬಗ್ಗೆ ಅವನು ಹೀಗೆ ಹೇಳ್ತಾನೆ: “ನಾನು ಕೆಲಸ ಮಾಡಿದಾಗ ತಪ್ಪುಗಳನ್ನ ಮಾಡ್ತಿದ್ದೆ. ಆಗ ಅವರು, ಕಲೀವಾಗ ತಪ್ಪು ಮಾಡೋದು ಸಾಮಾನ್ಯ ಅಂತ ಅರ್ಥ ಮಾಡ್ಕೊಂಡು ಮತ್ತೆಮತ್ತೆ ಹೇಳ್ಕೊಟ್ರು.” d
19. ನಾವೆಲ್ರೂ ಯಾವ ತೀರ್ಮಾನ ಮಾಡಬೇಕು?
19 ಯೇಸು ಭೂಮಿ ಮೇಲಿದ್ದ 40 ದಿನ ಬೇರೆಯವ್ರಿಗೆ ಪ್ರೋತ್ಸಾಹ ಕೊಟ್ಟನು, ಕಲಿಸಿದನು, ತರಬೇತಿ ಕೊಟ್ಟನು. ಯೇಸು ತರ ನೀವು ಇದನ್ನೆಲ್ಲ ಮಾಡ್ಲೇಬೇಕು ಅಂತ ತೀರ್ಮಾನ ಮಾಡಿ. (1 ಪೇತ್ರ 2:21) ಅದಕ್ಕೆ ಆತನೇ ನಿಮಗೆ ಸಹಾಯ ಮಾಡ್ತಾನೆ. ಯಾಕಂದ್ರೆ “ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ ನಾನು ನಿಮ್ಮ ಜೊತೆ ಇರ್ತಿನಿ” ಅಂತ ಮಾತು ಕೊಟ್ಟಿದ್ದಾನೆ.—ಮತ್ತಾ. 28:20.
ಗೀತೆ 109 ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!
a ಮತ್ತಾಯ, ಮಾರ್ಕ, ಲೂಕ, ಯೋಹಾನ ಪುಸ್ತಕಗಳಲ್ಲದೆ ಬೇರೆ ಪುಸ್ತಕಗಳಲ್ಲೂ ಯೇಸು ಇವ್ರಿಗೆ ಕಾಣಿಸ್ಕೊಂಡನು ಅಂತ ಹೇಳುತ್ತೆ: ಮಗ್ದಲದ ಮರಿಯಗೆ (ಯೋಹಾ. 20:11-18); ಬೇರೆ ಸ್ತ್ರೀಯರಿಗೆ (ಮತ್ತಾ. 28:8-10; ಲೂಕ 24:8-11); ಇಬ್ರು ಶಿಷ್ಯರಿಗೆ (ಲೂಕ 24:13-15); ಪೇತ್ರನಿಗೆ (ಲೂಕ 24:34); ತೋಮನನ್ನ ಬಿಟ್ಟು ಉಳಿದ ಅಪೊಸ್ತಲರಿಗೆ (ಯೋಹಾ. 20:19-24); ತೋಮನನ್ನ ಸೇರಿಸಿ ಎಲ್ಲಾ ಅಪೊಸ್ತಲರಿಗೆ (ಯೋಹಾ. 20:26); ಏಳು ಶಿಷ್ಯರಿಗೆ (ಯೋಹಾ. 21:1, 2); 500ಕ್ಕಿಂತ ಜಾಸ್ತಿ ಶಿಷ್ಯರಿಗೆ (ಮತ್ತಾ. 28:16; 1 ಕೊರಿಂ. 15:6) ತಮ್ಮನಾದ ಯಾಕೋಬನಿಗೆ (1 ಕೊರಿಂ. 15:7); ಎಲ್ಲಾ ಅಪೊಸ್ತಲರಿಗೆ (ಅ. ಕಾ. 1:4); ಬೇಥಾನ್ಯದ ಹತ್ರ ಇದ್ದ ಅಪೊಸ್ತಲರಿಗೆ (ಲೂಕ 24:50-52); ಇನ್ನೂ ಕೆಲವ್ರಿಗೆ ಯೇಸು ಕಾಣಿಸ್ಕೊಂಡಿದ್ದಾನೆ. ಅದ್ರ ಬಗ್ಗೆ ಬೈಬಲಲ್ಲಿ ಇಲ್ಲ.—ಯೋಹಾ. 21:25.
b ಮೆಸ್ಸೀಯನ ಬಗ್ಗೆ ಬೈಬಲಲ್ಲಿ ಹೇಳಿರೋ ಭವಿಷ್ಯವಾಣಿಗಳ ಬಗ್ಗೆ ತಿಳ್ಕೊಳ್ಳೋಕೆ jw.orgನಲ್ಲಿ “ಮೆಸ್ಸೀಯನ ಪ್ರವಾದನೆಗಳು ಯೇಸುವೇ ಮೆಸ್ಸೀಯ ಅಂತ ತೋರಿಸಿಕೊಡುತ್ತಾ?” ಅನ್ನೋ ಲೇಖನ ನೋಡಿ.
c ಕೆಲವೊಮ್ಮೆ 25-30 ವರ್ಷ ಆಗಿರೋ ಅರ್ಹರಾದ ಹಿರಿಯರು ಸಂಚರಣ ಮೇಲ್ವಿಚಾರಕರಾಗ್ತಾರೆ. ಆದ್ರೆ ಅವರು ಹಿರಿಯರಾಗಿ ಮುಂಚೆನೇ ಚೆನ್ನಾಗಿ ತರಬೇತಿ ಪಡ್ಕೊಂಡಿರಬೇಕು.
d ಯುವ ಸಹೋದರರು ಜವಾಬ್ದಾರಿ ತಗೊಳ್ಳೋಕೆ ಅರ್ಹರಾಗಿ ಇರಬೇಕಂದ್ರೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ ಹೆಚ್ಚಿನ ಮಾಹಿತಿಗಾಗಿ 2018 ಆಗಸ್ಟ್ ಕಾವಲಿನಬುರುಜುವಿನ ಪುಟ 11-12, ಪ್ಯಾರ 15-17 ನೋಡಿ. 2015, ಏಪ್ರಿಲ್ 15ರ ಕಾವಲಿನಬುರುಜುವಿನ ಪುಟ 3-13 ನೋಡಿ.
e ಚಿತ್ರ ವಿವರಣೆ: ಒಬ್ಬ ಸಹೋದರ ಬೈಬಲ್ ವಿದ್ಯಾರ್ಥಿಗೆ ಬೈಬಲ್ ವಚನಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡ್ತಿದ್ದಾನೆ. ಆಮೇಲೆ ಆ ವಿದ್ಯಾರ್ಥಿ ಕ್ರಿಸ್‌ಮಸ್ ಹಬ್ಬಕ್ಕೆ ಅಲಂಕಾರ ಮಾಡೋಕೆ ತಂದ ವಸ್ತುಗಳನ್ನೆಲ್ಲ ಬಿಸಾಕ್ತಿದ್ದಾನೆ.