ಅಧ್ಯಯನ ಲೇಖನ 43
ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ
ಸಂಶಯ ಬಿಡಿ, ನಂಬಿಕೆ ಇಡಿ
“ಎಲ್ಲವನ್ನ ಪರೀಕ್ಷಿಸಿ . . . ಚೆನ್ನಾಗಿ ತಿಳ್ಕೊಳ್ಳಿ.”—1 ಥೆಸ. 5:21.
ಈ ಲೇಖನದಲ್ಲಿ ಏನಿದೆ?
ನಮಗೆ ಸಂಶಯ ಬಂದುಬಿಟ್ರೆ ಯೆಹೋವನ ಸೇವೆನ ಖುಷಿಯಿಂದ ಮಾಡೋಕೆ ಆಗಲ್ಲ. ಅದಕ್ಕೇ ಸಂಶಯನ ನಮ್ಮ ಮನಸ್ಸಿಂದ ಕಿತ್ತು ಹಾಕೋಕೆ ಏನು ಮಾಡಬೇಕು ಅಂತ ನೋಡೋಣ.
1-2. (ಎ) ಸಾಮಾನ್ಯವಾಗಿ ನಮಗೆ ಯಾವ ಪ್ರಶ್ನೆಗಳು ಬರಬಹುದು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?
ನಾವು ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ ನಮ್ಮೆಲ್ರಿಗೂ ಒಂದಲ್ಲಾ ಒಂದು ಸಲ ಸಂಶಯ a ಬಂದೇ ಬರುತ್ತೆ. ಉದಾಹರಣೆಗೆ ಯೆಹೋವನ ಸಾಕ್ಷಿಯಾಗಿರೋ ಒಬ್ಬ ಹುಡುಗನಿಗೆ ಯೆಹೋವ ದೇವರು ತನ್ನನ್ನ ಇಷ್ಟಪಡ್ತಾನೋ ಇಲ್ವೋ ಅನ್ನೋ ಸಂಶಯ ತಲೆಲಿ ಓಡ್ತಾ ಇರುತ್ತೆ ಅಂದ್ಕೊಳಿ. ಇದ್ರಿಂದ ಅವನು ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೆಮುಂದೆ ನೋಡ್ತಿದ್ದಾನೆ. ಇನ್ನೊಬ್ಬ ಸಹೋದರ ತನ್ನ ಯೌವನದಲ್ಲಿ ಹಣ-ಆಸ್ತಿ ಹಿಂದೆ ಹೋಗದೆ ಯೆಹೋವನ ಸೇವೆ ಮಾಡೋಕೆ ಎಲ್ಲಾನೂ ತ್ಯಾಗ ಮಾಡಿದ್ದಾನೆ ಅಂದ್ಕೊಳ್ಳಿ. ಆದ್ರೆ ಈಗ ಅವನಿಗೆ ವಯಸ್ಸಾಗ್ತಿದೆ, ಬರ್ತಿರೋ ಸಂಬಳ ಎಲ್ಲ ಕುಟುಂಬ ನೋಡ್ಕೊಳ್ಳೋದ್ರಲ್ಲೇ ಹೋಗ್ತಿದೆ. ಇದ್ರಿಂದ ಅವನಿಗೆ ತಾನು ಮಾಡಿದ್ದ ನಿರ್ಧಾರ ಸರಿಯಾಗಿತ್ತಾ ಅಂತ ಯೋಚಿಸ್ತಿದ್ದಾನೆ. ಇನ್ನೊಬ್ಬ ವಯಸ್ಸಾದ ಸಹೋದರಿಗೆ ಮುಂಚಿನಷ್ಟು ಚೆನ್ನಾಗಿ ಯೆಹೋವನ ಸೇವೆ ಈಗ ಆಗ್ತಿಲ್ಲ ಅಂದ್ಕೊಳಿ. ಇದ್ರಿಂದ ಅವ್ರಿಗೆ ಅವ್ರು ಮಾಡೋ ಸೇವೆನ ಯೆಹೋವ ಲೆಕ್ಕಕ್ಕೆ ತಗೊಳ್ತಾರಾ ಅಂತ ಸಂಶಯ ಬಂದುಬಿಟ್ಟಿದೆ. ನಿಮಗೂ ಯಾವಾಗಾದ್ರೂ ಇವ್ರ ತರಾನೇ ಅನಿಸಿದ್ಯಾ? ‘ಯೆಹೋವ ನನ್ನನ್ನ ನಿಜವಾಗ್ಲೂ ಇಷ್ಟಪಡ್ತಾನಾ? ದೇವರಿಗೋಸ್ಕರ ನಾನು ಮಾಡಿರೋ ತ್ಯಾಗಗಳೆಲ್ಲ ಸಾರ್ಥಕನಾ? ಯೆಹೋವ ಈಗ್ಲೂ ನನ್ನನ್ನ ತನ್ನ ಸೇವೆಲಿ ಉಪಯೋಗಿಸ್ತಾನಾ?’ ಅನ್ನೋ ಸಂಶಯ ಸಾಮಾನ್ಯ ಬರಬಹುದು.
2 ಒಂದುವೇಳೆ ಈ ಸಂಶಯನ ಹಾಗೇ ಬಿಟ್ಟುಬಿಟ್ರೆ ಯೆಹೋವನ ಮೇಲಿರೋ ನಂಬಿಕೆ ಕಳ್ಕೊಂಡುಬಿಡಬಹುದು. ಕೊನೆಗೊಂದು ದಿನ ಆತನನ್ನ ಆರಾಧಿಸೋದನ್ನೇ ಬಿಟ್ಟುಬಿಡಬಹುದು. ಹಾಗಾಗಿ ಈ ಲೇಖನದಲ್ಲಿ (1) ಯೆಹೋವ ನಿಜವಾಗ್ಲೂ ನನ್ನನ್ನ ಇಷ್ಟಪಡ್ತಾನಾ ಅಂತ ಅನುಮಾನ ಬಂದ್ರೆ (2) ನಾವು ಯೆಹೋವನಿಗೋಸ್ಕರ ಮಾಡಿರೋ ತ್ಯಾಗ ಸಾರ್ಥಕನಾ ಅಂತ ಸಂಶಯ ಬಂದ್ರೆ (3) ನನ್ನಿಂದ ಯೆಹೋವ ದೇವರಿಗೆ ಉಪಯೋಗನೇ ಇಲ್ವೆನೋ ಅಂತ ಅನಿಸಿದಾಗ ನಮಗೆ ಯಾವ ಬೈಬಲ್ ತತ್ವಗಳು ಸಹಾಯ ಮಾಡುತ್ತೆ ಅಂತ ನೋಡೋಣ. ಆಗ ನಮಗೆ ಈ ಸಂಶಯಗಳಿಂದ ಹೊರಗೆ ಬರೋಕೆ ಆಗುತ್ತೆ.
ಸಂಶಯ ಬಂದಾಗ ಏನು ಮಾಡಬೇಕು?
3. ನಮಗಿರೋ ಪ್ರಶ್ನೆಗಳಿಗೆ ಉತ್ರ ಸಿಗಬೇಕಂದ್ರೆ ಏನು ಮಾಡಬೇಕು?
3 ನಮಗೆ ಸಂಶಯ ಬಂದಾಗ ನಾವು ಮಾಡಬೇಕಾದ ಒಂದು ಕೆಲಸ ಏನಂದ್ರೆ ನಮಗಿರೋ ಪ್ರಶ್ನೆಗಳಿಗೆ ಬೈಬಲಲ್ಲಿ ಉತ್ರ ಹುಡುಕಬೇಕು. ಆಗ ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಆಗುತ್ತೆ, ಆತನ ಜೊತೆ ಇರೋ ಸಂಬಂಧ ಗಟ್ಟಿ ಆಗುತ್ತೆ ಮತ್ತು “ನಂಬಿಕೆಯಲ್ಲಿ ದೃಢವಾಗಿ” ನಿಲ್ಲೋಕಾಗುತ್ತೆ.—1 ಕೊರಿಂ. 16:13.
4. ‘ಎಲ್ಲವನ್ನ ಪರೀಕ್ಷಿಸಿ ತಿಳ್ಕೊಳ್ಳೋಕೆ’ ಏನು ಮಾಡಬೇಕು? (1 ಥೆಸಲೊನೀಕ 5:21)
4 ಒಂದನೇ ಥೆಸಲೊನೀಕ 5:21 ಓದಿ. ನಾವು ‘ಎಲ್ಲವನ್ನ ಪರೀಕ್ಷಿಸಿ ತಿಳ್ಕೊಬೇಕು’ ಅಂತ ಬೈಬಲ್ ಸಲಹೆ ಕೊಡುತ್ತೆ. ನಾವು ಇದನ್ನ ಹೇಗೆ ಮಾಡೋದು? ಕೆಲವೊಂದು ಸಲ ನಮಗನಿಸಿದ್ದೇ ನಿಜ ಅಂತ ಅಂದ್ಕೊಳ್ಳೋ ಬದಲು, ಅದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ಪರೀಕ್ಷಿಸಿ ನೋಡಬೇಕು. ಉದಾಹರಣೆಗೆ, ನಾವು ಆಗ್ಲೇ ನೋಡಿದ ಹುಡುಗನ ಬಗ್ಗೆ ನೆನಪಿಸ್ಕೊಳ್ಳಿ. ಯೆಹೋವ ತನ್ನನ್ನ ಇಷ್ಟಪಡಲ್ಲ ಅಂತ ಅವನಿಗೆ ಅನಿಸ್ತಿತ್ತು. ಅವನಿಗೆ ಹಾಗೆ ಅನಿಸಿದ ತಕ್ಷಣ ಅದು ನಿಜ ಆಗಿಬಿಡುತ್ತಾ? ಇಲ್ಲ. ಯೆಹೋವ ಅವನ ಬಗ್ಗೆ ಏನು ಯೋಚ್ನೆ ಮಾಡ್ತಾನೆ ಅಂತ ಅವನು ‘ಪರೀಕ್ಷಿಸಿ ತಿಳ್ಕೊಬೇಕು.’ ಅದಕ್ಕೆ ಅವನು ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಬೇಕು.
5. ನಮಗಿರೋ ಪ್ರಶ್ನೆಗಳಿಗೆ ಯೆಹೋವ ಕೊಡೋ ಉತ್ರ “ಕೇಳಿಸ್ಕೊಳ್ಳೋಕೆ” ಏನು ಮಾಡಬೇಕು?
5 ನಾವು ಬೈಬಲನ್ನ ಓದುವಾಗ ಯೆಹೋವ ಮಾತಾಡೋದನ್ನ “ಕೇಳಿಸ್ಕೊಳ್ತೀವಿ.” ಆದ್ರೆ ನಮಗಿರೋ ಪ್ರಶ್ನೆಗೆ ಯೆಹೋವ ಕೊಡೋ ಉತ್ರ ತಿಳ್ಕೊಬೇಕಂದ್ರೆ ನಾವು ಪ್ರಯತ್ನ ಮಾಡಬೇಕು. ಹೇಗೆ? ನಾವು ಆ ಪ್ರಶ್ನೆಗೆ ಸಂಬಂಧಪಟ್ಟ ಬೈಬಲ್ ವಚನಗಳನ್ನ ಹುಡುಕಿ ಅದ್ರ ಬಗ್ಗೆ ಅಧ್ಯಯನ ಮಾಡಬೇಕು. ಜೊತೆಗೆ, ಸಂಘಟನೆ ಕೊಟ್ಟಿರೋ ಸಂಶೋಧನಾ ಸಾಧನಗಳನ್ನ ಬಳಸಬೇಕು. (ಜ್ಞಾನೋ. 2:3-6) ಸರಿಯಾದ ಉತ್ರ ತಿಳ್ಕೊಳೋಕೆ ಸಹಾಯ ಮಾಡಪ್ಪ ಅಂತ ಯೆಹೋವನ ಹತ್ರ ಬೇಡ್ಕೊಬೇಕು. ನಮಗೆ ಸಹಾಯ ಮಾಡೋ ಬೈಬಲ್ ತತ್ವಗಳನ್ನ, ಮಾಹಿತಿಯನ್ನ ಹುಡುಕಬೇಕು. ಬೈಬಲಲ್ಲಿ ನಮ್ಮ ತರಾನೇ ಸನ್ನಿವೇಶಗಳಲ್ಲಿದ್ದ ಒಳ್ಳೇ ವ್ಯಕ್ತಿಗಳ ಬಗ್ಗೆ ಚೆನ್ನಾಗಿ ತಿಳ್ಕೊಬೇಕು.
6. ನಮಗಿರೋ ಪ್ರಶ್ನೆಗಳಿಗೆ ಕೂಟಗಳಲ್ಲಿ ಹೇಗೆ ಉತ್ರ ಸಿಗುತ್ತೆ?
6 ನಾವು ಕೂಟಕ್ಕೆ ಹೋದಾಗ್ಲೂ ಯೆಹೋವ ಹೇಳೋದನ್ನ “ಕೇಳಿಸ್ಕೊಬಹುದು.” ಸಭೆಯಲ್ಲಿ ಯಾರಾದ್ರೂ ಕೊಡೋ ಉತ್ರದಲ್ಲಿ ಅಥವಾ ಭಾಷಣದಲ್ಲಿ ನಮಗಿರೋ ಪ್ರಶ್ನೆಗಳಿಗೆ ಉತ್ರ ಸಿಗಬಹುದು. ಅದಕ್ಕೇ ನಾವು ಕೂಟಗಳಿಗೆ ತಪ್ಪದೆ ಹೋಗಬೇಕು. (ಜ್ಞಾನೋ. 27:17) ಹಾಗಾದ್ರೆ ನಾವೀಗ ನಮಗೆ ಬರೋ ಕೆಲವು ಸಂಶಯಗಳನ್ನ ಹೇಗೆ ಹೊಡೆದೋಡಿಸೋದು ಅಂತ ನೋಡೋಣ.
ಯೆಹೋವ ನಿಮ್ಮನ್ನ ಇಷ್ಟಪಡ್ತಾನೆ ಅಂತ ನಂಬಿ
7. ಕೆಲವ್ರ ಮನಸ್ಸಲ್ಲಿ ಯಾವ ಪ್ರಶ್ನೆ ಬರಬಹುದು?
7 ‘ಯೆಹೋವ ನಿಜವಾಗ್ಲೂ ನನ್ನನ್ನ ಇಷ್ಟಪಡ್ತಾನಾ’ ಅಂತ ನಿಮಗೆ ಯಾವತ್ತಾದ್ರೂ ಅನಿಸಿದ್ಯಾ? ಈ ಪ್ರಶ್ನೆ ಏನಾದ್ರೂ ನಿಮ್ಮ ಮನಸ್ಸಲ್ಲಿ ಹಾಗೇ ಉಳ್ಕೊಂಡುಬಿಟ್ರೆ ನೀವು ಯಾವತ್ತೂ ಯೆಹೋವನಿಗೆ ಹತ್ರ ಆಗೋಕೆ ಆಗಲ್ಲ. ಇಡೀ ವಿಶ್ವನ ಸೃಷ್ಟಿಮಾಡಿದ ‘ಯೆಹೋವ ಎಲ್ಲಿ, ನಾನೆಲ್ಲಿ‘ ಅಂತ ನಿಮಗೇ ಅನಿಸಿಬಿಡುತ್ತೆ. ದಾವೀದನಿಗೂ ಒಂದುಸಲ ಹೀಗೇ ಅನಿಸ್ತು. ಆದ್ರೆ ಯೆಹೋವ ಮನುಷ್ಯರನ್ನ ಗಮನಿಸ್ತಾನೆ ಅಂತ ಅವನಿಗೆ ಆಮೇಲೆ ಗೊತ್ತಾಯ್ತು. ಆಗ ಅವನು ಆಶ್ಚರ್ಯದಿಂದ, “ಯೆಹೋವ, ಮನುಷ್ಯನ ಕಡೆಗೆ ನೀನು ಯಾಕೆ ಗಮನ ಕೊಡಬೇಕು? ನಾಶವಾಗೋ ಮನುಷ್ಯನಿಗೆ ನೀನು ಯಾಕೆ ಬೆಲೆ ಕೊಡಬೇಕು?” ಅಂತ ಕೇಳಿದ. (ಕೀರ್ತ. 144:3) ಹಾಗಾದ್ರೆ ನಿಮಗೇನು ಅನ್ಸುತ್ತೆ? ಯೆಹೋವ ನಿಜವಾಗ್ಲೂ ನಿಮ್ಮನ್ನ ಇಷ್ಟಪಡ್ತಾನಾ? ಅದಕ್ಕೆ ಉತ್ರ ಬೈಬಲ್‌ನಲ್ಲಿದೆ.
8. ಯೆಹೋವ ಒಬ್ಬೊಬ್ರಲ್ಲೂ ಏನು ನೋಡ್ತಾನೆ? (1 ಸಮುವೇಲ 16:6, 7, 10-12)
8 ಯಾರನ್ನ ಜನ್ರು ಕೀಳಾಗಿ ನೋಡ್ತಾರೋ ಅಂಥವ್ರಿಗೂ ಯೆಹೋವ ಬೆಲೆ ಕೊಡ್ತಾನೆ. ಉದಾಹರಣೆಗೆ, ಇಸ್ರಾಯೇಲಿನ ಮುಂದಿನ ರಾಜನನ್ನ ಅಭಿಷೇಕ ಮಾಡೋಕೆ ಯೆಹೋವ ಸಮುವೇಲನನ್ನ ಇಷಯನ ಮನೆಗೆ ಕಳಿಸ್ತಾನೆ. ಆಗ ಇಷಯ ತನ್ನ ಏಳು ಮಕ್ಕಳನ್ನ ಕರೆಸ್ತಾನೆ. ಆದ್ರೆ ದಾವೀದನನ್ನ ಚಿಕ್ಕವನು b ಅಂತ ಬಿಟ್ಟುಬಿಡ್ತಾನೆ. ಆದ್ರೂ ಯೆಹೋವ ಆರಿಸ್ಕೊಂಡಿದ್ದು ದಾವೀದನನ್ನೇ. (1 ಸಮುವೇಲ 16:6, 7, 10-12 ಓದಿ) ಯಾಕಂದ್ರೆ ಯೆಹೋವ ದಾವೀದನ ಮನಸ್ಸನ್ನ ನೋಡಿದ. ದಾವೀದನಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದನ್ನ ಗಮನಿಸಿದ.
9. ಯೆಹೋವ ದೇವರಿಗೆ ನೀವಂದ್ರೆ ಇಷ್ಟ ಅಂತ ಹೇಗೆ ಗೊತ್ತಾಗುತ್ತೆ? (ಚಿತ್ರ ನೋಡಿ.)
9 ಯೆಹೋವ ದೇವರು ಈ ಮುಂಚೆ ನಿಮಗೆ ಹೇಗೆಲ್ಲ ಸಹಾಯ ಮಾಡಿದ್ದಾನೆ ಅಂತ ಯೋಚ್ನೆ ಮಾಡಿ. ಆತನು ನಿಮ್ಮ ಪರಿಸ್ಥಿತಿನ ಅರ್ಥಮಾಡ್ಕೊಂಡು ಅದಕ್ಕೆ ತಕ್ಕ ಹಾಗೆ ಸಲಹೆ ಕೊಟ್ಟಿದ್ದಾನೆ. (ಕೀರ್ತ. 32:8) ಒಂದುವೇಳೆ ನಿಮ್ಮ ಬಗ್ಗೆ ಆತನು ಚೆನ್ನಾಗಿ ತಿಳ್ಕೊಂಡಿಲ್ಲ ಅಂದಿದ್ರೆ ನಿಮಗೆ ಸರಿಯಾಗಿರೋ ಸಲಹೆ ಕೊಡೋಕೆ ಆಗ್ತಿತ್ತಾ? (ಕೀರ್ತ. 139:1) ಹಾಗಾಗಿ ಯೆಹೋವ ಕೊಡೋ ಸಲಹೆನ ಪಾಲಿಸಿ ಅದ್ರಿಂದ ಸಿಗೋ ಸಹಾಯನ ನೋಡಿದಾಗ ಆತನಿಗೆ ನಿಮ್ಮ ಮೇಲೆ ಎಷ್ಟು ಕಾಳಜಿ ಇದೆ ಅಂತ ನಿಮಗೇ ಗೊತ್ತಾಗುತ್ತೆ. (1 ಪೂರ್ವ. 28:9; ಅ. ಕಾ. 17:26, 27) ನೀವು ಯೆಹೋವನ ಮಾತನ್ನ ಕೇಳೋಕೆ, ಆತನ ಸೇವೆ ಮಾಡೋಕೆ ಎಷ್ಟು ಪ್ರಯತ್ನ ಹಾಕ್ತೀರ ಅಂತ ಯೆಹೋವ ಗಮನಿಸ್ತಾನೆ. ಆತನು ನಿಮ್ಮಲ್ಲಿರೋ ಒಳ್ಳೇ ಗುಣಗಳನ್ನ ನೋಡ್ತಾನೆ ಮತ್ತು ನಿಮ್ಮ ಫ್ರೆಂಡ್ ಆಗಬೇಕು ಅಂತ ಇಷ್ಟಪಡ್ತಾನೆ. (ಯೆರೆ. 17:10) ನೀವೂ ಆತನ ಫ್ರೆಂಡ್ ಆಗಬೇಕು ಅಂತ ಆಸೆಪಡ್ತಾನೆ.—1 ಯೋಹಾ. 4:19.
ನಿಮ್ಮ ನಿರ್ಧಾರ ಸರಿಯಾಗಿತ್ತು ಅಂತ ನಂಬಿ
10. ನಾವು ಮಾಡಿರೋ ತೀರ್ಮಾನಗಳ ಬಗ್ಗೆ ಕೆಲವೊಮ್ಮೆ ನಮಗೇನು ಅನಿಸಬಹುದು?
10 ಕೆಲವರು ಯೆಹೋವನ ಸೇವೆ ಜಾಸ್ತಿ ಮಾಡೋಕಂತ ಒಳ್ಳೇ ಕೆಲಸ ಬಿಟ್ಟಿದ್ದಾರೆ, ಬಿಸ್ನೆಸ್‌ಗೆ ಕೈ ಹಾಕದೇ ತ್ಯಾಗಗಳನ್ನ ಮಾಡಿದ್ದಾರೆ. ಆದ್ರೆ ಕೆಲವು ವರ್ಷಗಳಾದ ಮೇಲೆ ತಾವು ಮಾಡಿದ ನಿರ್ಧಾರ ಸರಿಯಾಗಿತ್ತಾ ಅನ್ನೋ ಸಂಶಯ ಅವರಿಗೆ ಬರಬಹುದು. ಯಾಕಂದ್ರೆ ಅವ್ರಿಗೆ ಪರಿಚಯ ಇರೋ ಎಷ್ಟೋ ಜನ ಅವ್ರ ಕಣ್ಮುಂದೆನೇ ಹಣ-ಆಸ್ತಿ ಮಾಡ್ಕೊಂಡು ಸೆಟ್ಲಾಗಿರ್ತಾರೆ, ಜೀವನದಲ್ಲಿ ಆರಾಮಾಗಿ ಇರ್ತಾರೆ. ಅದನ್ನೆಲ್ಲ ನೋಡ್ದಾಗ ‘ನಾನು ಯೆಹೋವನಿಗೋಸ್ಕರ ಮಾಡಿದ್ದೆಲ್ಲ ವ್ಯರ್ಥನಾ? ನಾನೂ ಜೀವನದಲ್ಲಿ ಮೊದ್ಲು ಸೆಟ್ಲಾಗಿ ಆಮೇಲೆ ಯೆಹೋವನ ಸೇವೆ ಮಾಡಿದ್ದಿದ್ರೆ ಚೆನ್ನಾಗಿರ್ತಿತ್ತು ಅಲ್ವಾ?’ ಅಂತ ಅನಿಸಬಹುದು.
11. ಕೀರ್ತನೆ 73ನ್ನ ಬರೆದವನಿಗೆ ಯಾವ ಯೋಚ್ನೆ ಕಾಡ್ತಿತ್ತು?
11 ಕೀರ್ತನೆ 73ನ್ನ ಬರೆದವನಿಗೂ ಹೀಗೇ ಅನಿಸ್ತು. ಅವನ ಸುತ್ತಮುತ್ತ ಇದ್ದ ಎಷ್ಟೋ ಜನ ಯೆಹೋವನನ್ನ ಆರಾಧಿಸ್ತಿರಲಿಲ್ಲ. ಆದ್ರೂ ಅವರು ನೋಡೋಕೆ ಆರೋಗ್ಯವಾಗಿದ್ರು, ಶ್ರೀಮಂತರಾಗಿದ್ರು, ಅವ್ರ ಜೀವನದಲ್ಲಿ ಕಷ್ಟಾನೇ ಇಲ್ವೆನೋ ಅಂತ ಅವನಿಗೆ ಅನಿಸ್ತಿತ್ತು. (ಕೀರ್ತ. 73:3-5, 12) ಇವತ್ತಿದ್ದು ನಾಳೆ ಕಣ್ಮರೆಯಾಗೋ ಅವ್ರ ಖುಷಿನ ನೋಡಿ ಆ ಕೀರ್ತನೆಗಾರನಿಗೆ ಯೆಹೋವನ ಸೇವೆ ಮಾಡೋದ್ರಲ್ಲಿ ಏನೂ ಉಪಯೋಗ ಇಲ್ಲ ಅಂತ ಅನಿಸಿಬಿಡ್ತು. ಅವನು ಈ ತರ ಯೋಚ್ನೆ ಮಾಡಿಮಾಡಿ ‘ಇಡೀ ದಿನ ಕಷ್ಟಪಡ್ತಿದ್ದ.’ (ಕೀರ್ತ. 73:13, 14) ಇಂಥ ಯೋಚ್ನೆಯಿಂದ ಹೊರಗೆ ಬರೋಕೆ ಅವನಿಗೆ ಯಾವುದು ಸಹಾಯ ಮಾಡ್ತು?
12. ತಪ್ಪಾದ ಯೋಚ್ನೆಯಿಂದ ಹೊರಗೆ ಬರೋಕೆ ಕೀರ್ತನೆಗಾರ ಏನು ಮಾಡಿದ? (ಕೀರ್ತನೆ 73:16-18)
12 ಕೀರ್ತನೆ 73:16-18 ಓದಿ. ಆ ಕೀರ್ತನೆಗಾರ ಯೆಹೋವನ ಆಲಯಕ್ಕೆ ಹೋದ. ಅಲ್ಲಿ ಸ್ವಲ್ಪ ಹೊತ್ತು ಕೂತು ಚೆನ್ನಾಗಿ ಯೋಚ್ನೆ ಮಾಡಿದ. ಆಗ ಅವನಿಗೆ ಈ ಜನ್ರೆಲ್ಲ ಈಗೇನೋ ಆರಾಮಾಗಿ ಇದ್ದಾರೆ, ಆದ್ರೆ ಮುಂದೆ ಅವ್ರ ಜೀವನಕ್ಕೆ ಯಾವ ಗ್ಯಾರಂಟಿನೂ ಇಲ್ಲ ಅಂತ ಗೊತ್ತಾಯ್ತು. ಇದು ಅರ್ಥ ಆದ್ಮೇಲೆ ತಾನು ಯೆಹೋವನ ಸೇವೆ ಮಾಡಿದ್ದು, ಯೆಹೋವನನ್ನ ಆರಾಧಿಸೋ ನಿರ್ಧಾರ ಮಾಡಿದ್ದು ಒಳ್ಳೇದೇ ಆಯ್ತು ಅಂತ ಅವನು ಅರ್ಥಮಾಡ್ಕೊಂಡ. ಇದ್ರಿಂದ ಅವನ ಮನಸ್ಸಿಗೆ ತುಂಬ ನೆಮ್ಮದಿ ಸಿಕ್ತು. ಮುಂದೆನೂ ಯೆಹೋವನನ್ನೇ ಆರಾಧಿಸಬೇಕು ಅಂತ ನಿರ್ಧಾರ ಮಾಡಿದ.—ಕೀರ್ತ. 73:23-28.
13. ನಾವು ತಗೊಂಡಿರೋ ನಿರ್ಧಾರದ ಬಗ್ಗೆ ಸಂಶಯ ಇದ್ರೆ ಏನು ಮಾಡಬೇಕು? (ಚಿತ್ರ ನೋಡಿ.)
13 ಕೀರ್ತನೆಗಾರನ ತರಾನೇ ನಿಮಗೂ ತಪ್ಪಾದ ಯೋಚ್ನೆಯಿಂದ ಹೊರಗೆ ಬರೋಕೆ ಬೈಬಲ್ ಸಹಾಯ ಮಾಡುತ್ತೆ. ಬೈಬಲ್ ಹೇಳೋ ಹಾಗೆ, ನಾವು ನಮ್ಮ ಆಸ್ತಿನ ಸ್ವರ್ಗದಲ್ಲಿ ಕೂಡಿಸಿ ಇಟ್ಟಿದ್ದೀವಿ ಅನ್ನೋದನ್ನ ಮನಸ್ಸಲ್ಲಿಡಬೇಕು. ಈ ಆಸ್ತಿ ಮುಂದೆ ಜನ ಕೂಡಿಸೋ ಹಣ-ಆಸ್ತಿ ಏನೇನೂ ಅಲ್ಲ. ಜನ್ರಿಗೆ ಮುಂದೆ ಜೀವನ ಚೆನ್ನಾಗಾಗುತ್ತೆ ಅನ್ನೋ ನಿರೀಕ್ಷೆ ಇಲ್ಲದೇ ಇರೋದ್ರಿಂದ ಈಗ ಹಣ-ಆಸ್ತಿ ಮಾಡಿ ಖುಷಿಯಾಗಿದ್ರೆ ಸಾಕು ಅಂತ ಅಂದ್ಕೊಂಡಿದ್ದಾರೆ. ಆದ್ರೆ ನಮಗೆ ಯೆಹೋವ ದೇವರು ಒಳ್ಳೇ ನಿರೀಕ್ಷೆ ಕೊಟ್ಟಿದ್ದಾನೆ. ಮುಂದೆ ನಾವು ಕಲ್ಪಿಸ್ಕೊಳ್ಳೋಕೂ ಆಗದೆ ಇರೋಷ್ಟು ಆಶೀರ್ವಾದಗಳನ್ನ ಕೊಡ್ತಾನೆ. (ಕೀರ್ತ. 145:16) ಇನ್ನೊಂದು ವಿಷ್ಯದ ಬಗ್ಗೆನೂ ಯೋಚ್ನೆ ಮಾಡಿ. ಒಂದುವೇಳೆ ನೀವು ಯೆಹೋವನ ಸೇವೆ ಮಾಡೋ ಬದ್ಲು ಹಣ ಮಾಡೋದ್ರ ಹಿಂದೆ ಹೋಗಿದ್ರೆ ಏನಾಗ್ತಿತ್ತು? ಜೀವನ ನೀವು ಅಂದ್ಕೊಂಡಿದ್ದ ತರಾನೇ ಇರ್ತಿತ್ತು ಅನ್ನೋದಕ್ಕೆ ಏನಾದ್ರೂ ಗ್ಯಾರಂಟಿ ಇದ್ಯಾ? ಇಲ್ಲ ತಾನೇ? ಆದ್ರೆ ಒಂದು ವಿಷ್ಯದಲ್ಲಿ ನೀವು ಈಗಲೂ ಗ್ಯಾರಂಟಿಯಾಗಿ ಇರಬಹುದು. ಅದೇನಂದ್ರೆ, ಯೆಹೋವನ ಮೇಲೆ ಮತ್ತು ಜನ್ರ ಮೇಲೆ ಇರೋ ಪ್ರೀತಿಯಿಂದ ನೀವು ತ್ಯಾಗಗಳನ್ನ ಮಾಡಿದ್ದೀರ. ಇದ್ರಿಂದ ನಿಮಗೆ ಒಳ್ಳೇದೇ ಆಗುತ್ತೆ ಮತ್ತು ನೀವು ಖುಷಿಖುಷಿಯಾಗಿ ಇರ್ತೀರ!
ನಿಮ್ಮಿಂದನೂ ಉಪಯೋಗ ಇದೆ ಅಂತ ನಂಬಿ
14. (ಎ) ಕೆಲವ್ರ ಪರಿಸ್ಥಿತಿ ಹೇಗಿದೆ? (ಬಿ) ಇದ್ರಿಂದ ಅವ್ರಿಗೆ ಯಾವ ಸಂಶಯ ಬರುತ್ತೆ?
14 ಕೆಲವು ಸಹೋದರ ಸಹೋದರಿಯರಿಗೆ ವಯಸ್ಸಾಗಿರೋದ್ರಿಂದ, ಹುಷಾರಿಲ್ಲದೆ ಇರೋದ್ರಿಂದ ಅಥವಾ ಅವರು ವಿಕಲಚೇತನರು ಆಗಿರೋದ್ರಿಂದ ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಆಗದೇ ಹೋಗಬಹುದು. ಇದ್ರಿಂದ ಅವ್ರಿಗೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಿಬಿಡಬಹುದು. ಆಗ ‘ನನ್ನಿಂದ ಯೆಹೋವನಿಗೆ ಏನಾದ್ರೂ ಉಪಯೋಗ ಇದ್ಯಾ?’ ಅನ್ನೋ ಸಂಶಯ ಅವ್ರಿಗೆ ಬಂದುಬಿಡುತ್ತೆ.
15. ಕೀರ್ತನೆ 71ನ್ನ ಬರೆದವನಿಗೂ ಯಾವ ವಿಷ್ಯ ಚೆನ್ನಾಗಿ ಗೊತ್ತಿತ್ತು?
15 ಕೀರ್ತನೆ 71ನ್ನ ಬರೆದವನಿಗೂ ಹೀಗೇ ಅನಿಸ್ತು. ಅದಕ್ಕೇ ಅವನು ಪ್ರಾರ್ಥನೆ ಮಾಡುವಾಗ “ನನಗೆ ಶಕ್ತಿ ಇಲ್ಲದೆ ಹೋದಾಗ ನನ್ನ ಕೈಬಿಡಬೇಡ” ಅಂತ ಹೇಳಿದ. (ಕೀರ್ತ. 71:9, 18) ಅವನಿಗೆ ಈ ತರ ಅನಿಸಿದ್ರೂ ಕೊನೇ ತನಕ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡಿದ್ರೆ ಯೆಹೋವ ಖಂಡಿತ ತನಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಅವನಿಗಿತ್ತು. ಅಷ್ಟೇ ಅಲ್ಲ, ನಾವಿರೋ ಪರಿಸ್ಥಿತಿಯಲ್ಲಿ ನಮ್ಮಿಂದ ಎಷ್ಟಾಗುತ್ತೋ ಅಷ್ಟು ಸೇವೆ ಮಾಡಿದ್ರೆ ಯೆಹೋವ ಅದನ್ನ ಅಮೂಲ್ಯವಾಗಿ ನೋಡ್ತಾನೆ, ಆತನು ಖುಷಿಪಡ್ತಾನೆ ಅಂತನೂ ಅವನಿಗೆ ಗೊತ್ತಿತ್ತು.—ಕೀರ್ತ. 37:23-25.
16. ವಯಸ್ಸಾಗಿದ್ರೂ ನೀವು ಮಾಡೋ ಯಾವೆಲ್ಲ ಸೇವೆಗಳನ್ನ ಯೆಹೋವ ಅಮೂಲ್ಯವಾಗಿ ನೋಡ್ತಾನೆ? (ಕೀರ್ತನೆ 92:12-15)
16 ಸಹೋದರ ಸಹೋದರಿಯರೇ, ನಿಮಗೆ ವಯಸ್ಸಾಗಿದ್ರೆ ಯೆಹೋವ ನಿಮ್ಮ ಪರಿಸ್ಥಿತಿನ ಚೆನ್ನಾಗಿ ಅರ್ಥ ಮಾಡಿಕೊಳ್ತಾನೆ ಅಂತ ನೆನಪಿಡಿ. ನಿಮಗೆ ಶಕ್ತಿ ಇಲ್ದೆ ಇದ್ರೂ ನಿಮ್ಮಿಂದಾದಷ್ಟು ಸೇವೆ ಮಾಡೋಕೆ ಆತನು ನಿಮಗೆ ಸಹಾಯ ಮಾಡ್ತಾನೆ. (ಕೀರ್ತನೆ 92:12-15 ಓದಿ.) ಹಾಗಾಗಿ ನಿಮ್ಮಿಂದ ಏನಾಗಲ್ವೋ ಅದ್ರ ಮೇಲಲ್ಲ, ಏನಾಗುತ್ತೋ ಅದ್ರ ಮೇಲೆ ಗಮನಕೊಡಿ. ಉದಾಹರಣೆಗೆ, ನೀವು ನಿಮ್ಮ ಅನುಭವಗಳನ್ನ ಬೇರೆಯವ್ರಿಗೆ ಹೇಳಿ ಅವ್ರ ನಂಬಿಕೆನ ಗಟ್ಟಿ ಮಾಡಿ. ಇಷ್ಟು ವರ್ಷ ಯೆಹೋವ ನಿಮಗೆ ಹೇಗೆ ಸಹಾಯ ಮಾಡ್ತಾ ಬಂದನು ಅನ್ನೋದ್ರ ಬಗ್ಗೆ, ಆತನು ಮುಂದೆ ಕೊಡೋ ಆಶೀರ್ವಾದಗಳ ಮೇಲೆ ನಿಮಗೆಷ್ಟು ನಂಬಿಕೆ ಇದೆ ಅನ್ನೋದ್ರ ಬಗ್ಗೆ ಅವ್ರಿಗೆ ಹೇಳಿ. ಅದಷ್ಟೇ ಅಲ್ಲ, ನೀವು ಬೇರೆಯವ್ರಿಗೋಸ್ಕರ ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ ಅನ್ನೋದನ್ನ ಮರಿಬೇಡಿ. (1 ಪೇತ್ರ 3:12) ನಮ್ಮೆಲ್ರ ಪರಿಸ್ಥಿತಿ ಹೇಗೇ ಇರಲಿ ಯೆಹೋವ ದೇವರಿಗೋಸ್ಕರ ನಮ್ಮ ಕೈಲಾದಷ್ಟು ಸೇವೆ ಮಾಡೋಕೆ ಆಗೇ ಆಗುತ್ತೆ.
17. ನಾವ್ಯಾಕೆ ನಮ್ಮನ್ನ ಬೇರೆಯವ್ರ ಜೊತೆ ಹೋಲಿಸ್ಕೊಬಾರದು?
17 ನಿಮಗೆ ಮುಂಚಿನಷ್ಟು ಯೆಹೋವನ ಸೇವೆ ಮಾಡಕ್ಕಾಗ್ತಿಲ್ಲ ಅಂತ ಬೇಜಾರ್ ಮಾಡ್ಕೊಬೇಡಿ. ಯಾಕಂದ್ರೆ ಈಗ ನಿಮ್ಮಿಂದ ಎಷ್ಟು ಮಾಡೋಕೆ ಆಗ್ತಿದ್ಯೋ ಅಷ್ಟನ್ನ ಮಾಡಿದ್ರೂ ಸಾಕು ಯೆಹೋವ ಮೆಚ್ಕೊತಾನೆ. ನೀವು ಮಾಡೋ ಸೇವೆನ ಬೇರೆಯವರು ಮಾಡೋ ಸೇವೆಗೆ ಹೋಲಿಸೋಕೆ ಹೋಗಬೇಡಿ. (ಗಲಾ. 6:4) ಯಾಕಂದ್ರೆ ಯೆಹೋವ ಯಾವತ್ತೂ ನಮ್ಮನ್ನ ಬೇರೆಯವ್ರ ಜೊತೆ ಹೋಲಿಸಲ್ಲ. ಉದಾಹರಣೆಗೆ, ಮರಿಯ ಒಂದುಸಲ ಯೇಸುಗೆ ತುಂಬ ದುಬಾರಿಯಾಗಿರೋ ಸುಗಂಧ ತೈಲ ತಂದುಕೊಟ್ಟಳು. (ಯೋಹಾ. 12:3-5) ಆದ್ರೆ ಒಬ್ಬ ಬಡ ವಿಧವೆ ಕಡಿಮೆ ಬೆಲೆಯ 2 ಚಿಕ್ಕ ನಾಣ್ಯಗಳನ್ನ ದೇವಾಲಯದಲ್ಲಿ ಕಾಣಿಕೆಯಾಗಿ ಕೊಟ್ಟಳು. (ಲೂಕ 21:1-4) ಆಗ ಯೇಸು ಇವ್ರಿಬ್ರನ್ನ ಹೋಲಿಸಲಿಲ್ಲ. ಬದಲಿಗೆ ಅವರು ತೋರಿಸಿದ ನಂಬಿಕೆ ನೋಡಿ ಹೊಗಳಿದ. ಯೇಸುವಿನ ಅಪ್ಪ ಯೆಹೋವ ಕೂಡ ನೀವು ಮಾಡೋ ಚಿಕ್ಕಪುಟ್ಟ ಸೇವೆನ ತುಂಬ ಅಮೂಲ್ಯವಾಗಿ ನೋಡ್ತಾನೆ. ಯೆಹೋವ ದೇವರು ನೀವೆಷ್ಟು ಸೇವೆ ಮಾಡ್ತಿದ್ದೀರ ಅನ್ನೋದನ್ನಲ್ಲ ನಿಮಗೆ ಆತನ ಮೇಲೆ ಎಷ್ಟು ಪ್ರೀತಿ, ಭಕ್ತಿ ಇದೆ ಅನ್ನೋದನ್ನ ನೋಡ್ತಾನೆ.
18. ಸಂಶಯಗಳಿಂದ ಹೊರಗೆ ಬರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (“ ಸಂಶಯ ಬಿಡೋಕೆ ಬೈಬಲಿನ ಸಹಾಯ” ಅನ್ನೋ ಚೌಕ ನೋಡಿ.)
18 ನಮ್ಮೆಲ್ರಿಗೂ ಆಗಾಗ ಸಂಶಯ ಬರುತ್ತೆ. ಆದ್ರೆ ದೇವರ ವಾಕ್ಯವಾದ ಬೈಬಲಿನ ಸಹಾಯದಿಂದ ನಾವು ಆ ಸಂಶಯಗಳನ್ನ ಹೊಡೆದೋಡಿಸಬಹುದು. ನಮಗೆ ಬರೋ ಪ್ರಶ್ನೆಗಳಿಗೆ ಉತ್ರಗಳನ್ನ ನಾವು ಬೈಬಲಲ್ಲಿ ಕಂಡುಹಿಡಿಬೇಕು. ಆಗ ಯೆಹೋವ ನಮ್ಮಲ್ಲಿ ಒಬ್ಬೊಬ್ರನ್ನೂ ತುಂಬ ಪ್ರೀತಿಸ್ತಾನೆ ಅನ್ನೋದನ್ನ ಅರ್ಥ ಮಾಡ್ಕೊತೀವಿ. ನಾವು ಮಾಡೋ ತ್ಯಾಗಗಳನ್ನ ಆತನು ಗಮನಿಸ್ತಾನೆ, ಅದಕ್ಕೆ ತಕ್ಕ ಆಶೀರ್ವಾದಗಳನ್ನ ಕೊಟ್ಟೇ ಕೊಡ್ತಾನೆ ಅಂತ ನಂಬ್ತೀವಿ. ನಾವು ಇಷ್ಟು ವರ್ಷ ಮಾಡಿರೋ ಸೇವೆನ ಆತನು ಯಾವತ್ತೂ ಮರಿಯಲ್ಲ ಅನ್ನೋದನ್ನ ನೆನಪಲ್ಲಿ ಇಟ್ಕೊತೀವಿ. ಹೀಗೆ ಮಾಡಿದ್ರೆ ಸಂಶಯದಿಂದ ಹೊರಗೆ ಬಂದು ಸಂತೋಷದಿಂದ ಯೆಹೋವನ ಸೇವೆ ಮಾಡೋಕೆ ಆಗುತ್ತೆ.
ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು
a ಪದ ವಿವರಣೆ: ನಮಗೆ ನಂಬಿಕೆ ಕಮ್ಮಿ ಆದ್ರೆ ಯೆಹೋವನ ಮೇಲೆ ಮತ್ತು ಆತನು ಕೊಟ್ಟಿರೋ ಮಾತಿನ ಮೇಲೆ ಸಂಶಯ ಬಂದುಬಿಡುತ್ತೆ ಅಂತ ಬೈಬಲ್ ಹೇಳುತ್ತೆ. ಆದ್ರೆ ನಾವು ಈ ಲೇಖನದಲ್ಲಿ ಮಾತಾಡ್ತಿರೋದು ಆ ತರದ ಸಂಶಯಗಳ ಬಗ್ಗೆ ಅಲ್ಲ. ಇಲ್ಲಿ ಹೇಳ್ತಿರೋ ಸಂಶಯ ‘ಯೆಹೋವ ನನ್ನನ್ನ ಇಷ್ಟಪಡ್ತಾನಾ? ನಾನು ಮಾಡಿರೋ ನಿರ್ಧಾರಗಳು ಸರಿನಾ?’ ಅಂತ ನಮ್ಮ ಮನಸ್ಸಲ್ಲಿ ಬರೋ ಕೆಲವು ಪ್ರಶ್ನೆಗಳಾಗಿವೆ.
b ಯೆಹೋವ ದಾವೀದನನ್ನ ಆರಿಸ್ಕೊಂಡಾಗ ದಾವೀದನ ವಯಸ್ಸು ಎಷ್ಟಿತ್ತು ಅಂತ ಬೈಬಲ್ ಹೇಳಲ್ಲ. ಆದ್ರೆ ಅವನು ತನ್ನ ಹದಿವಯಸ್ಸಿನಲ್ಲಿ ಇದ್ದಿರಬಹುದು.—ಕಾವಲಿನಬುರುಜು (ಸಾರ್ವಜನಿಕ) ನಂ. 4, 2016, ಪುಟ 9 ನೋಡಿ.