ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1924—ನೂರು ವರ್ಷಗಳ ಹಿಂದೆ

1924—ನೂರು ವರ್ಷಗಳ ಹಿಂದೆ

“ಹೊಸ ವರ್ಷ ಇನ್ನೇನು ಶುರು ಆಗ್ತಿದೆ, ಯೆಹೋವನ ಸೇವೆ ಮಾಡೋಕೆ ಕೈ ತುಂಬ ಅವಕಾಶ ಕಾಯ್ತಿವೆ. ದೀಕ್ಷಾಸ್ನಾನ ಪಡ್ಕೊಂಡ ಪ್ರತಿಯೊಬ್ರೂ ಇದ್ರ ಬಗ್ಗೆ ಚೆನ್ನಾಗಿ ಯೋಚಿಸಬೇಕು” ಅಂತ 1924ರ ಜನವರಿ ಬುಲೆಟಿನ್‌ a ಹೇಳ್ತು. ಈ ಸಲಹೆನ ಬೈಬಲ್‌ ವಿದ್ಯಾರ್ಥಿಗಳು ಕೇಳಿಸ್ಕೊಂಡಾಗ ಏನು ಮಾಡಿದ್ರು? ಅವರು ಎರಡು ವಿಷ್ಯಗಳನ್ನ ಮಾಡಿದ್ರು. ಒಂದು, ಧೈರ್ಯವಾಗಿ ಹೊಸಹೊಸ ಕೆಲಸಗಳನ್ನ ಕೈಗೆತ್ಕೊಂಡ್ರು. ಎರಡು, ಭಯಪಡದೆ ಸಿಹಿಸುದ್ದಿ ಸಾರಿದ್ರು.

ರೇಡಿಯೋ ಸ್ಟೇಷನ್‌ ಶುರು ಮಾಡಿದ್ರು

ಬೆತೆಲಲ್ಲಿದ್ದ ಕೆಲವು ಸಹೋದರರು ಒಂದು ವರ್ಷದಿಂದ ನ್ಯೂಯಾರ್ಕಿನ ಸ್ಟೇಟನ್‌ ಐಲೆಂಡಲ್ಲಿ ಒಂದು ರೇಡಿಯೋ ಸ್ಟೇಷನ್‌ (ಡಬ್ಲ್ಯೂಬಿಬಿಆರ್‌) ಕಟ್ತಾ ಇದ್ರು. ಆ ಜಾಗನ ಕ್ಲೀನ್‌ ಮಾಡಿ ಕೆಲಸದವರು ಇರೋಕೆ ಮತ್ತು ಮಷಿನ್‌ಗಳನ್ನ ಇಡೋಕೆ ಎರಡು ಬಿಲ್ಡಿಂಗ್‌ ಕಟ್ಟಿದ್ರು. ಈ ಕೆಲಸ ಆದ್ಮೇಲೆ ಅವರು ಲೈವ್‌ ಪ್ರೋಗ್ರಾಂ ಕೊಡೋಕೆ ಪ್ಲ್ಯಾನ್‌ ಮಾಡಿದ್ರು. ಆದ್ರೆ ಮುಂದೆ ಸಮಸ್ಯೆಗಳ ಸರಮಾಲೆನೇ ಕಾದಿತ್ತು.

ಈ ರೇಡಿಯೋ ಸ್ಟೇಷನ್‌ ಕಟ್ಟೋಕೆ ಸುಮಾರು 300 ಅಡಿ ಉದ್ದ ಇರೋ ಆ್ಯಂಟನಾವನ್ನ ನೇರವಾಗಿ ನಿಲ್ಲಿಸಬೇಕಿತ್ತು. ಇದೇ ದೊಡ್ಡ ಕಷ್ಟದ ಕೆಲಸ ಆಗಿತ್ತು. ಯಾಕಂದ್ರೆ ಸುಮಾರು 200 ಅಡಿ ಎತ್ರ ಇರೋ ಮರದ ಎರಡು ಕಂಬಗಳ ಸಪೋರ್ಟ್‌ ಕೊಟ್ಟು ಈ ಆ್ಯಂಟನಾವನ್ನ ನಿಲ್ಲಿಸಬೇಕಿತ್ತು. ಇದು ಅಷ್ಟು ಸುಲಭ ಆಗಿರಲಿಲ್ಲ. ಮೊದಲನೇ ಸಲ ಪ್ರಯತ್ನ ಮಾಡಿದ್ರು, ಸೋತು ಹೋದ್ರು. ಆದ್ರೆ ಯೆಹೋವನ ಮೇಲೆ ನಂಬಿಕೆ ಇಟ್ಟು ಇನ್ನೊಂದು ಸಲ ಪ್ರಯತ್ನ ಮಾಡಿದ್ರು. ಈ ಸಲ ಅಂದ್ಕೊಂಡ ತರನೇ ಸಾಧಿಸಿಬಿಟ್ರು. ಈ ಪ್ರಾಜೆಕ್ಟಲ್ಲಿ ಕೆಲಸ ಮಾಡಿದ ಕ್ಯಾಲ್ವಿನ್‌ ಪ್ರೋಸರ್‌ ಏನು ಹೇಳಿದ್ರು ನೋಡಿ: “ಮೊದಲನೇ ಸಲನೇ ನಾವೇನಾದ್ರೂ ಇದನ್ನ ಮಾಡಿಬಿಟ್ಟಿದ್ರೆ ನಾವೆಲ್ಲಾ ನಮ್ಮ ಬೆನ್ನು ತಟ್ಕೊಂಡು ‘ನೋಡ್ರೋ ನಾವು ಸಾಧಿಸಿಬಿಟ್ವಿ’ ಅಂತ ಅಂದ್ಕೊತಿದ್ವಿ. ಆದ್ರೆ ಇದೆಲ್ಲ ಯೆಹೋವನ ಸಹಾಯದಿಂದಾನೇ ಆಯ್ತು ಅಂತ ಅರ್ಥ ಆಗಿದ್ರಿಂದ ಪೂರ್ತಿ ಮಹಿಮೆ ಯೆಹೋವನಿಗೇ ಕೊಟ್ವಿ.” ಇಲ್ಲಿಗೆ ಸಮಸ್ಯೆಗಳೆಲ್ಲಾ ಮುಗೀತಾ? ಇಲ್ಲ. ಇನ್ನೂ ಕಾದಿತ್ತು.

ರೇಡಿಯೋ ಸ್ಟೇಷನ್‌ನ ಆ್ಯಂಟನಗೆ ಬೇಕಾಗಿರೋ ಕಂಬ ನಿಲ್ಲಿಸ್ತಿದ್ದಾರೆ

ರೇಡಿಯೋ ಸ್ಟೇಷನ್‌ ಆಗತಾನೆ ರೆಡಿ ಆಗ್ತಿತ್ತು. ಆದ್ರೆ ಅವ್ರಿಗೆ ಬೇಕಾದ ಎಲ್ಲಾ ವಸ್ತುಗಳು ಇನ್ನೂ ಸಿಗ್ತಿರಲಿಲ್ಲ. ಅದಕ್ಕೇ ಅವರು ಒಂದು ಸೆಕೆಂಡ್‌-ಹ್ಯಾಂಡ್‌ 500 ವ್ಯಾಟ್‌ ಟ್ರಾನ್ಸ್‌ಮೀಟರನ್ನ ಅಲ್ಲೇ ಸ್ಥಳೀಯವಾಗಿ ಖರೀದಿ ಮಾಡಿದ್ರು. ಒಂದು ಹೊಸ ಮೈಕ್‌ ಬೇಕಾಗಿತ್ತು. ಆದ್ರೆ ಅದನ್ನ ತಗೊಳ್ಳೋ ಬದ್ಲು ಅವರು ಟೆಲಿಫೋನಲ್ಲೇ ಸಿಗೋ ಒಂದು ಆರ್ಡಿನರಿ ಮೈಕನ್ನ ಉಪಯೋಗಿಸಿದ್ರು. ಫೆಬ್ರವರಿಯಲ್ಲಿ ಒಂದಿನ ರಾತ್ರಿ ಅವರು ಈ ರೇಡಿಯೋನ ಟೆಸ್ಟ್‌ ಮಾಡಬೇಕು ಅಂದ್ಕೊಂಡ್ರು. ಅದಕ್ಕೆ ಅವರು ರಾಜ್ಯ ಗೀತೆಗಳನ್ನ ಹಾಡಿದ್ರು. ಆಗ ಒಂದು ತಮಾಷೆ ಆಯ್ತು. ಅದೇನಂತ ಸಹೋದರ ಅರ್ನೆಸ್ಟ್‌ ಲೋ ಹೇಳ್ತಾರೆ. ಇವರು ಹಾಡಿದ ಹಾಡನ್ನ ಸುಮಾರು 25 ಕಿಲೋಮೀಟರ್‌ ದೂರದಲ್ಲಿ ಅಂದ್ರೆ ಬ್ರೂಕ್ಲಿನ್‌ನಲ್ಲಿ ಜಡ್ಜ್‌ ರದರ್‌ಫರ್ಡ್‌ b ಕೇಳಿಸ್ಕೊಂಡ್ರು.

ಅವರು ಫೋನ್‌ ಮಾಡಿ “ಸಾಕ್ರಪ್ಪಾ ಸಾಕು, ನಿಲ್ಲಿಸ್ರಿ! ಬೆಕ್ಕುಗಳ ತರ ಕಿರಿಚ್ತಾ ಇದ್ದೀರ” ಅಂತ ಹೇಳಿದ್ರು. ಆಗ ನಮಗೆ ಸ್ವಲ್ಪ ಮುಜುಗರ ಆಯ್ತು. ಕೂಡ್ಲೇ ಪ್ರೋಗ್ರಾಂ ನಿಲ್ಲಿಸಿಬಿಟ್ವಿ. ಆದ್ರೆ ಒಂದಂತೂ ತುಂಬ ಖುಷಿಯಾಯ್ತು, ಏನಂದ್ರೆ ರೇಡಿಯೋ ಕೆಲಸ ಮಾಡ್ತಿತ್ತು. ಅಷ್ಟೇ ಅಲ್ಲ, ಇನ್ಮೇಲೆ ಲೈವ್‌ ಪ್ರೋಗ್ರಾಂ ಕೊಡಬಹುದು ಅಂತ ನಮಗೆ ಗೊತ್ತಾಯ್ತು.

ಹೀಗೆ 1924, ಫೆಬ್ರವರಿ 24ರಂದು ಮೊದಲ ರೇಡಿಯೋ ಪ್ರಸಾರ ಮಾಡಿದ್ವಿ. ಅದ್ರಲ್ಲಿ ಸಹೋದರ ರದರ್‌ಫರ್ಡ್‌ “ಕ್ರಿಸ್ತನ ರಾಜ್ಯದ ಬಗ್ಗೆ ಜನ್ರಿಗೆ ತಿಳಿಸೋಕೆನೇ ನಾವು ಇದನ್ನ ಬಳಸ್ತೀವಿ” ಅಂತ ಹೇಳಿದ್ರು. “ಬೇಧಭಾವ ಇಲ್ಲದೇ ಎಲ್ಲಾ ರೀತಿಯ ಜನ್ರು ಬೈಬಲ್‌ ಬಗ್ಗೆ ತಿಳ್ಕೊಂಡು ತಾವು ಯಾವ ಸಮಯದಲ್ಲಿ ಜೀವಿಸ್ತಾ ಇದ್ದೀವಿ ಅಂತ ಅರ್ಥಮಾಡ್ಕೊಳ್ಳೋದೇ ಈ ರೇಡಿಯೋ ಸ್ಟೇಷನ್‌ ಉದ್ದೇಶ” ಅಂತ ಹೇಳಿದ್ರು.

ಎಡಗಡೆ: ಮೊದಲ ಸ್ಟುಡಿಯೋದಲ್ಲಿ ನಿಂತಿರೋ ಸಹೋದರ ರದರ್‌ಫರ್ಡ್‌

ಬಲಗಡೆ: ಟ್ರಾನ್ಸ್‌ಮೀಟರ್‌ ಮತ್ತು ಪ್ರಸಾರದ ಉಪಕರಣಗಳು

ಮೊದಲ ಕಾರ್ಯಕ್ರಮ ತುಂಬ ಚೆನ್ನಾಗಿ ಬಂತು. ಅವತ್ತಿಂದ 33 ವರ್ಷ ನಮ್ಮ ಎಲ್ಲಾ ರೇಡಿಯೋ ಕಾರ್ಯಕ್ರಮಗಳು ಈ ಸ್ಟೇಷನಿಂದಾನೇ ಪ್ರಸಾರ ಆಯ್ತು.

ಪಾದ್ರಿಗಳ ಮುಖವಾಡ ಕಳಚಿದ್ರು

ಜುಲೈ 1924ರಲ್ಲಿ ಕೊಲಂಬಸ್‌ನ ಒಹಾಯೊದಲ್ಲಿ ಬೈಬಲ್‌ ವಿದ್ಯಾರ್ಥಿಗಳ ಒಂದು ಅಧಿವೇಶನ ನಡೀತು. ಅದಕ್ಕೆ ಪ್ರಪಂಚದ ಬೇರೆಬೇರೆ ಕಡೆಯಿಂದ ಜನ್ರು ಬಂದ್ರು. ಹಾಗಾಗಿ ಅರೇಬಿಕ್‌, ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ಗ್ರೀಕ್‌, ಹಂಗೇರಿಯನ್‌, ಇಟಾಲಿಯನ್‌, ಲಿಥುವೇನಿಯನ್‌, ಪೋಲಿಶ್‌, ರಷ್ಯನ್‌, ಯುಕ್ರೇನಿಯನ್‌ ಮತ್ತು ಸ್ಕ್ಯಾಂಡಿನೇವಿಯನ್‌ ಭಾಷೆಗಳಲ್ಲಿ ಭಾಷಣ ಕೊಟ್ರು. ಆ ಭಾಷಣಗಳ ಕೆಲವೊಂದು ಭಾಗಗಳನ್ನ ರೆಡಿಯೋದಲ್ಲೂ ಪ್ರಸಾರ ಮಾಡಿದ್ರು. ಜೊತೆಗೆ ಈ ಅಧಿವೇಶದ ಬಗ್ಗೆ ಒಹಾಯೊ ಸ್ಟೇಟ್‌ ಜರ್ನಲ್‌ ಅನ್ನೋ ನ್ಯೂಸ್‌ ಪೇಪರಲ್ಲೂ ಲೇಖನಗಳನ್ನ ಬರಿಯೋಕೆ ಪ್ಲ್ಯಾನ್‌ ಮಾಡಿದ್ರು.

1924ರಲ್ಲಿ ಒಹಾಯೊದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನ

ಜುಲೈ 24, ಗುರುವಾರ ಸುಮಾರು 5,000 ಸಹೋದರ ಸಹೋದರಿಯರು ಆ ನಗರದಲ್ಲಿ ಸಿಹಿಸುದ್ದಿ ಸಾರಿದ್ರು. ಅವರು 30 ಸಾವಿರ ಪುಸ್ತಕಗಳನ್ನ ಜನ್ರಿಗೆ ಕೊಟ್ರು ಮತ್ತು ಸಾವಿರಾರು ಬೈಬಲ್‌ ಅಧ್ಯಯನಗಳನ್ನ ಶುರುಮಾಡಿದ್ರು. ಅದಕ್ಕೆ ಕಾವಲಿನ ಬುರುಜು ಆ ದಿನಾನ “ಅಧಿವೇಶದಲ್ಲೇ ತುಂಬ ಖುಷಿಪಟ್ಟ ದಿನ” ಅಂತ ಹೇಳ್ತು.

ಜುಲೈ 25, ಶುಕ್ರವಾರ ಇನ್ನೊಂದು ಮುಖ್ಯವಾದ ವಿಷ್ಯ ನಡೀತು. ಅವತ್ತು ಸಹೋದರ ರದರ್‌ಫರ್ಡ್‌ ಒಂದು ಡಾಕ್ಯುಮೆಂಟನ್ನ ಓದಿದ್ರು. ಅದ್ರಲ್ಲಿ ಪಾದ್ರಿಗಳ ಮುಖವಾಡನ ಕಳಚೋ ಎಷ್ಟೋ ವಿಷ್ಯಗಳಿದ್ವು. ರಾಜಕಾರಣಿಗಳು, ಧರ್ಮಗುರುಗಳು, ದೊಡ್ಡದೊಡ್ಡ ವ್ಯಾಪಾರಿಗಳು “ದೇವರ ಆಳ್ವಿಕೆ ಆಶೀರ್ವಾದ ತರುತ್ತೆ ಅನ್ನೋ ಸತ್ಯನ ಜನ್ರು ತಿಳ್ಕೊಳ್ಳೋಕೆ ಬಿಡ್ತಿಲ್ಲ” ಅಂತ ಸಹೋದರ ರದರ್‌ಫರ್ಡ್‌ ಹೇಳಿದ್ರು. ಅಷ್ಟೇ ಅಲ್ಲ “ಈ ನಾಯಕರು ಜನಾಂಗ ಸಂಘನ ಬೆಂಬಲಿಸ್ತಿದ್ದಾರೆ, ದೇವರು ಅದ್ರ ಮೂಲಕನೇ ಭೂಮಿನ ಆಳ್ತಿದ್ದಾನೆ ಅಂತ ಹೇಳ್ತಿದ್ದಾರೆ, ಆದ್ರೆ ಇದೆಲ್ಲ ತಪ್ಪು!” ಅಂತ ಸಹೋದರ ರದರ್‌ಫರ್ಡ್‌ ಹೇಳಿದ್ರು. ಈ ಸತ್ಯನ ಜನ್ರಿಗೆ ಹೇಳಬೇಕಂದ್ರೆ ಬೈಬಲ್‌ ವಿದ್ಯಾರ್ಥಿಗಳಿಗೆ ತುಂಬಾನೇ ಧೈರ್ಯ ಬೇಕಿತ್ತು.

ಈ ಅಧಿವೇಶನ ಸಹೋದರ ಸಹೋದರಿಯಲ್ಲಿ ಎಷ್ಟು ಬಲ ತುಂಬ್ತು ಅಂತ ಆ ಕಾವಲಿನ ಬುರುಜು ಹೀಗೆ ಹೇಳ್ತು: “ಕೊಲಂಬಸ್‌ನಲ್ಲಿ ನಡೆದ ಆ ಅಧಿವೇಶನಕ್ಕೆ ಬಂದಿದ್ದ ಸಹೋದರ ಸಹೋದರಿಯರು . . . ಕ್ರಿಸ್ತನ ಒಂದು ಚಿಕ್ಕ ಸೈನ್ಯದ ತರ ಇದ್ರು. ಆದ್ರೆ ಆ ಅಧಿವೇಶನ ಮುಗಿಯೋಷ್ಟರಲ್ಲಿ ನಂಬಿಕೆ, ಹುರುಪು ತುಂಬಿದ್ದ ಬಲಿಷ್ಠ ಸೈನಿಕರಾಗಿದ್ರು.” ಯಾರು ಎಷ್ಟೇ ವಿರೋಧ ಮಾಡಿದ್ರೂ ಈ ಕಾರ್ಯಕ್ರಮ ಸತ್ಯನ ಸಾರೋಕೆ ಬೇಕಾದ ಧೈರ್ಯ ತುಂಬ್ತು. ಇದನ್ನ ನೆನಸ್ಕೊಂಡು ಸಹೋದರ ಲಿಯೋ ಕ್ಲಾಸ್‌ “ಅಧಿವೇಶನ ಮುಗಿದ ತಕ್ಷಣ ಟೆರಿಟೊರಿಯಲ್ಲಿರೋ ಜನ್ರಿಗೆಲ್ಲ ಧರ್ಮಗುರುಗಳ ಬಗ್ಗೆ ಇರೋ ಸತ್ಯನ ಸಾರಬೇಕು ಅಂತ ಅಂದ್ಕೊಂಡ್ವಿ” ಅಂತ ಹೇಳಿದ್ರು.

ಎಕ್ಲೀಸಿಯಾಸ್ಟಿಕ್ಸ್‌ ಇಂಡಿಕ್ಟೆಡ್‌ ಕರಪತ್ರ

ಸಹೋದರ ರದರ್‌ಫರ್ಡ್‌ ಭಾಷಣದಲ್ಲಿ ಹೇಳಿದ್ದನ್ನೆಲ್ಲ ಎಕ್ಲೀಸಿಯಾಸ್ಟಿಕ್ಸ್‌ ಇಂಡಿಕ್ಟೆಡ್‌ ಅನ್ನೋ ಕರಪತ್ರದಲ್ಲಿ ಪ್ರಿಂಟ್‌ ಮಾಡಿದ್ರು. ಅಕ್ಟೋಬರ್‌ ತಿಂಗಳಲ್ಲಿ ಅದ್ರ ಲಕ್ಷಗಟ್ಟಲೆ ಕಾಪಿಗಳನ್ನ ಬೈಬಲ್‌ ವಿದ್ಯಾರ್ಥಿಗಳು ಜನ್ರಿಗೆ ಹಂಚೋಕೆ ಶುರುಮಾಡಿದ್ರು. ಒಂದಿನ ಸಹೋದರ ಫ್ರಾಂಕ್‌ ಜಾನ್ಸನ್‌ ಓಕ್ಲಹಾಮಾದ ಕ್ಲೀವ್‌ಲ್ಯಾಂಡ್‌ ಅನ್ನೋ ಚಿಕ್ಕ ಪಟ್ಟಣದಲ್ಲಿ ಈ ಕರಪತ್ರನ ಹಂಚ್ತಾ ಇದ್ರು. ಅವ್ರ ಟೆರಿಟೊರಿಯಲ್ಲಿದ್ದ ಜನ್ರಿಗೆಲ್ಲ ಈ ಕರಪತ್ರನ ಬೇಗ ಬೇಗ ಹಂಚಿದ್ರು. ಅದಾದ್ಮೇಲೆ ಬೇರೆ ಸಹೋದರ ಸಹೋದರಿಯರಿಗೋಸ್ಕರ ಅವ್ರಿನ್ನೂ 20 ನಿಮಿಷ ಕಾಯಬೇಕಿತ್ತು. ಆದ್ರೆ ಅವರು ರಸ್ತೆಯಲ್ಲೇ ನಿಂತು ಕಾಯೋಕೆ ಆಗ್ತಿರಲಿಲ್ಲ. ಯಾಕಂದ್ರೆ ಅವರು ಸಾರಿದ್ದನ್ನ ನೋಡಿ ಆ ಪಟ್ಟಣದಲ್ಲಿದ್ದ ಗಂಡಸ್ರು ಕೋಪದಿಂದ ಅವ್ರನ್ನ ಹುಡ್ಕೊಂಡು ಬರ್ತಾ ಇದ್ರು. ಅದಕ್ಕೆ ಅವರು ಬಚ್ಚಿಟ್ಕೊಳ್ಳೋಕೆ ಒಂದು ಚರ್ಚ್‌ ಒಳಗೆ ಹೋದ್ರು. ಅಲ್ಲಿ ಯಾರೂ ಇರಲಿಲ್ಲ. ಅದಕ್ಕೆ ಅವರು ಪಾದ್ರಿಯ ಬೈಬಲಲ್ಲಿ ಮತ್ತು ಅಲ್ಲಿದ್ದ ಸೀಟುಗಳಲ್ಲಿ ಒಂದೊಂದು ಕರಪತ್ರ ಇಟ್ರು. ಅವ್ರಿಗೆ ಇನ್ನೂ ಸಮಯ ಇದ್ದಿದ್ರಿಂದ ಇನ್ನೂ ಎರಡು ಚರ್ಚಿಗೆ ಹೋಗಿ ಇದನ್ನೇ ಮಾಡಿದ್ರು.

ಸಹೋದರ ಸಹೋದರಿಯರೆಲ್ಲ ಎಲ್ಲಿ ಸೇರಿ ಬರಬೇಕು ಅಂತ ಮಾತಾಡ್ಕೊಂಡಿದ್ರೋ ಆ ಜಾಗಕ್ಕೆ ಫ್ರಾಂಕ್‌ ಓಡಿ ಬಂದ್ರು. ಆದ್ರೆ ಆ ಗಂಡಸ್ರ ಕಣ್ಣಿಗೆ ಕಾಣಿಸದೇ ಇರೋಕೆ ಒಂದು ಪೆಟ್ರೋಲ್‌ ಬಂಕ್‌ ಹಿಂದೆ ಅಡಗಿಕೊಂಡ್ರು. ಅವರು ಅಲ್ಲಿಗೆ ಬಂದ್ರೂ ಫ್ರಾಂಕ್‌ ಅವ್ರ ಕಣ್ಣಿಗೆ ಬೀಳಲಿಲ್ಲ. ಆಗ ಆ ಗಂಡಸ್ರು ವಾಪಸ್‌ ಹೋಗಿಬಿಟ್ರು. ಇದಾದ್ಮೇಲೆ ಹತ್ರದಲ್ಲೇ ಸೇವೆ ಮಾಡ್ತಿದ್ದ ಸಹೋದರ ಸಹೋದರಿಯರೆಲ್ಲ ಬಂದು ಎಲ್ರೂ ಒಟ್ಟಿಗೆ ಗಾಡೀಲಿ ಹೋದ್ರು.

ಅವ್ರಲ್ಲಿ ಒಬ್ಬ ಸಹೊದರ “ನಾವು ಆ ಪಟ್ಟಣದಿಂದ ಹೊರಗೆ ಬರುವಾಗ ಮೂರೂ ಚರ್ಚ್‌ಗಳ ಮುಂದೆ ಐವತೈವತ್ತು ಜನ ನಿಂತಿದ್ದನ್ನ ನೋಡಿದ್ವಿ. ಅವ್ರೆಲ್ರ ಕೈಯಲ್ಲೂ ಕರಪತ್ರ ಇತ್ತು. ಕೆಲವರು ಅದನ್ನ ಓದ್ತಾ ಇದ್ರು, ಇನ್ನು ಕೆಲವರು ಪಾದ್ರಿಗೆ ಅದನ್ನ ತೋರಿಸ್ತಾ ಇದ್ರು. ನಾವು ಅದೇ ಜಾಗದಿಂದ ಬಂದ್ವಿ, ಆದ್ರೆ ನಮಗೇನೂ ಆಗಲಿಲ್ಲ. ಯಾಕಂದ್ರೆ ಜನ್ರಿಗೆ ಈ ಕರಪತ್ರನ ಹಂಚೋಕೆ ಮತ್ತು ವಿರೋಧಿಗಳ ಕೈಯಿಂದ ತಪ್ಪಿಸ್ಕೊಳ್ಳೋಕೆ ಯೆಹೋವ ದೇವರೇ ನಮಗೆ ಸಹಾಯ ಮಾಡಿದ್ರು” ಅಂತ ಹೇಳಿದ್ರು.

ಬೇರೆ ದೇಶಗಳಲ್ಲೂ ಧೈರ್ಯದಿಂದ ಸಾರಿದ್ರು

ಜೊಸೆಫ್‌ ಕ್ರೆಟ್‌

ಬೇರೆ ದೇಶಗಳಲ್ಲೂ ಬೈಬಲ್‌ ವಿದ್ಯಾರ್ಥಿಗಳು ಇದೇ ತರ ಧೈರ್ಯ ತೋರಿಸಿದ್ರು. ಉದಾಹರಣೆಗೆ, ಉತ್ತರ ಫ್ರಾನ್ಸ್‌ನಲ್ಲಿ ಜೋಸೆಫ್‌ ಕ್ರೆಟ್‌ ಗಣಿಕೆಲಸಕ್ಕೆ ಪೋಲೆಂಡಿಂದ ಬಂದವ್ರಿಗೆ ಸಾರಿದ್ರು. ಅವರು ಒಂದಿನ “ದ ರಿಸರೆಕ್ಷನ್‌ ಆಫ್‌ ದ ಡೆಡ್‌ ಸೂನ್‌” ಅನ್ನೋ ಭಾಷಣ ಕೊಡಬೇಕು ಅಂದ್ಕೊಂಡ್ರು. ಅದಕ್ಕೋಸ್ಕರ ಆ ಪಟ್ಟಣದಲ್ಲಿದ್ದ ಜನ್ರಿಗೆ ಆಮಂತ್ರಣ ಪತ್ರ ಕೊಟ್ಟು ಕರೆದ್ರು. ಆದ್ರೆ ಅಲ್ಲಿನ ಪಾದ್ರಿ ಜನ್ರಿಗೆ ‘ಆ ಭಾಷಣ ಕೇಳೋಕೆ ಹೋಗಬಾರದು’ ಅಂತ ಎಚ್ಚರಿಸಿದ್ರು. ಆದ್ರೆ ಜನ ತಲೆ ಕೆಡಿಸ್ಕೊಳ್ಳಲಿಲ್ಲ. ಸುಮಾರು 5,000 ಜನ ಆ ಭಾಷಣ ಕೇಳೋಕೆ ಬಂದ್ರು. ಅಲ್ಲಿ ನೋಡಿದ್ರೆ ಆ ಪಾದ್ರಿನೂ ಬಂದಿದ್ದ! ಆಗ ಸಹೋದರ ಕ್ರೆಟ್‌ ಆ ಪಾದ್ರಿಯ ನಂಬಿಕೆಗೆ ಏನು ಆಧಾರ ಅಂತ ವಿವರಿಸೋಕೆ ಅವ್ರ ಹತ್ರ ಹೇಳಿದ್ರು. ಆದ್ರೆ ಪಾದ್ರಿ ಒಪ್ಲಿಲ್ಲ. ಆದ್ರೆ ಅಲ್ಲಿ ಬಂದಿದ್ದ ಜನ್ರಿಗೆ ದೇವರ ವಾಕ್ಯದ ಬಗ್ಗೆ ಜಾಸ್ತಿ ತಿಳ್ಕೊಬೇಕು ಅನ್ನೋ ಆಸೆ ಇದ್ದಿದ್ರಿಂದ ಸಹೋದರ ಕ್ರೆಟ್‌ ಅವ್ರತ್ರ ಇದ್ದ ಪುಸ್ತಕ ಮತ್ತು ಕಿರುಪುಸ್ತಕಗಳನ್ನೆಲ್ಲ ಕೊಟ್ರು.—ಆಮೋಸ 8:11.

ಕ್ಲಾಡ್‌ ಬ್ರೌನ್‌

ಆಫ್ರಿಕಾದಲ್ಲಿ ಗೋಲ್ಡ್‌ ಕೋಸ್ಟ್‌ ಅನ್ನೋ ಜಾಗದಲ್ಲಿ ಮೊದ್ಲು ಕ್ಲಾಡ್‌ ಬ್ರೌನ್‌ ಸಿಹಿಸುದ್ದಿ ಸಾರಿದ್ರು. ಆ ದೇಶನ ಈಗ ಘಾನ ಅಂತ ಕರಿತಾರೆ. ಕ್ಲಾಡ್‌ ಬ್ರೌನ್‌ ಕೊಟ್ಟ ಭಾಷಣದಿಂದ, ಪ್ರಕಾಶನಗಳಿಂದ ಆ ದೇಶದಲ್ಲಿ ಸತ್ಯ ಬೇಗ ಹರಡ್ತು. ಆಗ ಫಾರ್ಮಸಿ ಕೋರ್ಸ್‌ ಕಲೀತಿದ್ದ ಜಾನ್‌ ಬ್ಲ್ಯಾಂಕ್‌ಸನ್‌ ಅನ್ನೋ ಹುಡುಗ ಅವರು ಕೊಟ್ಟ ಒಂದು ಭಾಷಣನ ಕೇಳಿಸ್ಕೊಂಡ. ಆಗ ಅವನಿಗೆ ಇದೇ ಸತ್ಯ ಅಂತ ಗೊತ್ತಾಯ್ತು. ಅದನ್ನ ನೆನಪಿಸ್ಕೊಂಡು ಅವನು ಹೀಗೆ ಹೇಳಿದ: “ಈ ಸತ್ಯ ತಿಳ್ಕೊಂಡಾಗ ನಂಗೆ ತುಂಬ ಖುಷಿ ಆಯ್ತು. ಅದಕ್ಕೆ ಕಾಲೇಜಲ್ಲಿ ಇದ್ದವ್ರಿಗೆಲ್ಲ ಅದ್ರ ಬಗ್ಗೆ ಹೇಳಿದೆ.”

ಜಾನ್‌ ಬ್ಲ್ಯಾಂಕ್‌ಸನ್‌

ಜಾನ್‌ಗೆ ತ್ರಿಯೇಕದ ಬಗ್ಗೆ ಸತ್ಯ ಗೊತ್ತಾಯ್ತು. ಅದಕ್ಕೆ ಒಂದಿನ ಅವನು ಆ್ಯಂಗ್ಲಿಕನ್‌ ಚರ್ಚಿನ ಪಾದ್ರಿ ಹತ್ರ ಹೋಗಿ ಅದ್ರ ಬಗ್ಗೆ ಕೇಳಿದ. ಆಗ ಆ ಪಾದ್ರಿಗೆ ತುಂಬ ಕೋಪ ಬಂತು. ಅವರು ಅವನಿಗೆ “ನೀನು ಯೇಸು ಕಡೆಯವನ್ನಲ್ಲ ಸೈತಾನನ ಕಡೆಯವನು. ಇಲ್ಲಿಂದ ಮೊದ್ಲು ತೊಲಗು” ಅಂತ ಓಡಿಸಿಬಿಟ್ರು.

ಜಾನ್‌ ಮನೆಗೆ ಹೋದ್ಮೇಲೆ ಪಾದ್ರಿಗೆ ಪತ್ರ ಬರೆದು “ಬನ್ನಿ, ಜನ್ರ ಮುಂದೆ ನಾವು ತ್ರಿಯೇಕದ ಬಗ್ಗೆ ಮಾತಾಡೋಣ” ಅಂತ ಅವ್ರನ್ನ ಕರೆದ. ಅದಕ್ಕೆ ಪಾದ್ರಿ “ನೀನು ಹೋಗಿ ನಿಮ್ಮ ಪ್ರಿನ್ಸಿಪಲ್‌ ಹತ್ರ ಮಾತಾಡು” ಅಂತ ಪತ್ರ ಬರೆದ್ರು. ಅವನು ಕಾಲೇಜಿಗೆ ಹೋದ. ಆಗ ಪ್ರಿನ್ಸಿಪಲ್‌, “ನೀನು ನಿಜವಾಗ್ಲೂ ಪಾದ್ರಿಗೆ ಪತ್ರ ಬರೆದ್ಯಾ?” ಅಂತ ಕೇಳಿದ್ರು.

“ಹೌದು ಸರ್‌” ಅಂದ ಜಾನ್‌.

ಪ್ರಿನ್ಸಿಪಲ್‌ ಅವನಿಗೆ ಆ ಪಾದ್ರಿ ಹತ್ರ ಕ್ಷಮೆ ಕೇಳಿ ಒಂದು ಪತ್ರ ಬರಿಲೇಬೇಕು ಅಂತ ಒತ್ತಾಯ ಮಾಡಿದ್ರು. ಅದಕ್ಕೆ ಜಾನ್‌,

“ಸರ್‌, ನಮ್ಮ ಪ್ರಿನ್ಸಿಪಲ್‌ ನಿಮ್ಮ ಹತ್ರ ಕ್ಷಮೆ ಕೇಳೋಕೆ ಹೇಳಿದ್ರು. ಆದ್ರೆ ನೀವು ಕಲಿಸ್ತಿರೋದೆಲ್ಲ ತಪ್ಪು ಅಂತ ನೀವು ಒಪ್ಕೊಂಡ್ರೆ ಮಾತ್ರ ನಾನು ನಿಮ್ಮ ಹತ್ರ ಕ್ಷಮೆ ಕೇಳ್ತೀನಿ” ಅಂತ ಪತ್ರ ಬರೆದ.

ಇದನ್ನ ನೋಡಿ ಪ್ರಿನ್ಸಿಪಲ್‌ ತುಂಬ ಶಾಕ್‌ ಆಗಿ “ನಿಂಗೆ ನಾನ್‌ ಇದನ್ನಾ ಬರೆಯೋಕೆ ಹೇಳಿದ್ದು” ಅಂತ ಕೇಳಿದ್ರು.

ಆಗ ಅವನು “ನ್ಯಾಯವಾಗಿ ಹೇಳೋದಾದ್ರೆ ನಂಗೆ ಇದನ್ನಷ್ಟೇ ಬರೆಯೋಕೆ ಆಗೋದು ಸರ್‌” ಅಂದ.

“ಹಾಗಾದ್ರೆ ನಿನ್ನನ್ನ ಕಾಲೇಜಿಂದ ತೆಗೆದುಹಾಕ್ತೀವಿ. ಅವ್ರ ಮಾತನ್ನ ಸರ್ಕಾರನೇ ಕೇಳುತ್ತೆ ಅಂದ್ಮೇಲೆ ಅವ್ರನ್ನ ಪ್ರಶ್ನೆ ಮಾಡೋಕೆ ನೀನ್ಯಾರು?” ಅಂತ ಪ್ರಿನ್ಸಿಪಲ್‌ ಬೈದ್ರು.

ಆಗ ಜಾನ್‌ “ಸರ್‌, ನೀವೇ ಹೇಳಿ, ನೀವು ಕಲಿಸಿದ್ರಲ್ಲಿ ಏನಾದ್ರೂ ಅರ್ಥ ಆಗಿಲ್ಲಾಂದ್ರೆ ಅದ್ರ ಬಗ್ಗೆ ನಿಮ್ಮ ಹತ್ರ ಪ್ರಶ್ನೆ ಕೇಳೋದು ತಪ್ಪಾ” ಅಂತ ಕೇಳಿದ.

ಅದಕ್ಕೆ ಅವರು “ನಾನು ಯಾವಾಗಪ್ಪಾ ತಪ್ಪು ಅಂತ ಹೇಳಿದೆ” ಅಂದ್ರು.

“ಸರ್‌ ನೀವು ಹೇಳಿಲ್ಲ, ಆದ್ರೆ ಅದನ್ನೇ ಅಲ್ವಾ ಸರ್‌ ಆ ಪಾದ್ರಿ ಹೇಳ್ತಿರೋದು. ಅವರು ಬೈಬಲಿಂದ ಏನೋ ಹೇಳ್ಕೊಟ್ರು. ಆಗ ನಂಗೊಂದು ಪ್ರಶ್ನೆ ಬಂತು. ನನ್ನ ಪ್ರಶ್ನೆಗೆ ಅವರು ಉತ್ರ ಕೊಡಕ್ಕಾಗಲಿಲ್ಲ. ಅದಕ್ಕೆ ನಾನ್ಯಾಕೆ ಸರ್‌ ಸ್ಸಾರಿ ಕೇಳಬೇಕು” ಅಂತ ಜಾನ್‌ ಹೇಳಿದ.

ಕೊನೆಗೆ ಜಾನ್‌ ಸ್ಸಾರಿ ಕೇಳಿ ಪತ್ರನೂ ಬರೀಲಿಲ್ಲ, ಅವನನ್ನ ಕಾಲೇಜಿಂದನೂ ತೆಗೀಲಿಲ್ಲ.

ಇನ್ನೂ ಜಾಸ್ತಿ ಸೇವೆ ಮಾಡೋಕೆ ರೆಡಿ ಆದ್ರು

ಆ ಇಡೀ ವರ್ಷ ಏನೆಲ್ಲಾ ನಡಿತೋ ಅದ್ರ ಬಗ್ಗೆ ಆ ಕಾವಲಿನ ಬುರುಜು ಹೀಗೆ ಹೇಳ್ತು: “‘ಯುದ್ಧಕ್ಕೆ ಬೇಕಾಗಿರೋ ಬಲನ ಕೊಟ್ಟು ನೀನು ನನ್ನನ್ನ ಸಿದ್ಧಮಾಡ್ತೀಯ’ ಅಂತ ದಾವೀದ ಹೇಳಿದ ಮಾತನ್ನ ನಾವೂ ಒಪ್ತೀವಿ. (ಕೀರ್ತನೆ 18:39) ಈ ವರ್ಷ ನಮಗೆ ತುಂಬ ಪ್ರೋತ್ಸಾಹ ಕೊಟ್ಟಿದೆ. ನಾವು ದೇವರ ಸೇವೆನ ಖುಷಿಖುಷಿಯಾಗಿ ಮಾಡೋಕೆ ದೇವರೇ ನಮಗೆ ಸಹಾಯ ಮಾಡಿದ್ದಾನೆ.”

ಆ ವರ್ಷದ ಕೊನೇಲಿ ರೇಡಿಯೋ ಮೂಲಕ ಇನ್ನೂ ಜಾಸ್ತಿ ಸಿಹಿಸುದ್ದಿ ಸಾರೋಕೆ ಸಹೋದರರು ಪ್ಲ್ಯಾನ್‌ ಮಾಡಿದ್ರು. ಅದಕ್ಕಂತಾನೇ ಅವರು ಚಿಕಾಗೋದಲ್ಲಿ ಇನ್ನೊಂದು ರೆಡಿಯೋ ಸ್ಟೇಷನನ್ನ ಶುರುಮಾಡಿದ್ರು. ಅದಕ್ಕೆ “ವರ್ಡ್‌” ಅಂತ ಹೆಸ್ರಿಟ್ರು. ವರ್ಡ್‌ ಅಂದ್ರೆ ದೇವರ ವಾಕ್ಯ ಅಂತ ಅರ್ಥ. ದೇವರ ಸಂದೇಶನ ಸಾರುತ್ತಾ ಇದ್ದಿದ್ರಿಂದ ಈ ಹೆಸ್ರನ್ನ ಇಟ್ರು. ಈ ಸ್ಟೇಷನ್ನಲ್ಲಿ 5,000 ವ್ಯಾಟ್‌ ಟ್ರಾನ್ಸ್‌ಮೀಟರ್‌ ಬಳಸ್ತಾ ಇದ್ರು. ಇದ್ರಿಂದ ಸಾವಿರಾರು ಕಿಲೋಮೀಟರ್‌ ತನಕ ಅಂದ್ರೆ ಕೆನಡಾದ ಉತ್ತರ ಭಾಗದ ತನಕ ರೆಡಿಯೋ ಪ್ರಸಾರ ಮಾಡೋಕೆ ಆಯ್ತು.

1925ರಲ್ಲಿ ಬೈಬಲ್‌ ವಿದ್ಯಾರ್ಥಿಗಳಿಗೆ ಪ್ರಕಟನೆ 12ನೇ ಅಧ್ಯಾಯಲ್ಲಿರೋ ಸತ್ಯನ ಅರ್ಥ ಮಾಡ್ಕೊಳ್ಳೋಕೆ ಯೆಹೋವ ಸಹಾಯ ಮಾಡಿದನು. ಈ ಸತ್ಯನ ಚೆನ್ನಾಗಿ ತಿಳ್ಕೊಳ್ಳದೇ ಇದ್ದಿದ್ರಿಂದ ಕೆಲವರು ಯೆಹೋವನನ್ನೇ ಬಿಟ್ಟುಹೋದ್ರು. ಆದ್ರೆ ಸತ್ಯದಲ್ಲಿ ಇದ್ದವ್ರಿಗೆ ಖುಷಿಪಡೋಕೆ ಒಂದು ದೊಡ್ಡ ಕಾರಣ ಇತ್ತು. ಏನಂದ್ರೆ ಅವರು ಸ್ವರ್ಗದಲ್ಲಿ ನಡೆದ ಘಟನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡ್ರು ಮತ್ತು ಆ ಘಟನೆಗಳಿಂದ ಭೂಮಿಲಿ ಏನೆಲ್ಲ ಆಯ್ತು ಅಂತನೂ ತಿಳ್ಕೊಂಡ್ರು.

a ಈಗ ಇದು, ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ.

b ಆ ಕಾಲದಲ್ಲಿ ಜೆ.ಎಫ್‌. ರದರ್‌ಫರ್ಡ್‌ ಬೈಬಲ್‌ ವಿದ್ಯಾರ್ಥಿಗಳನ್ನ ಮುಂದೆ ನಿಂತು ನಡಿಸ್ತಿದ್ರು. ಇವ್ರನ್ನ ‘ಜಡ್ಜ್‌ ರದರ್‌ಫರ್ಡ್‌’ ಅಂತಾನೂ ಕರೀತಿದ್ರು. ಯಾಕಂದ್ರೆ ಅವರು ಬೆತೆಲಲ್ಲಿ ಸೇವೆ ಮಾಡೋ ಮುಂಚೆ ‘ಎಯ್ತ್‌ ಜುಡೀಶಿಯಲ್‌ ಸರ್ಕಿಟ್‌ ಕೋರ್ಟ್‌ ಆಫ್‌ ಮಿಸೌರಿಯಲ್ಲಿ’ ವಿಶೇಷ ನ್ಯಾಯಾಧೀಶರಾಗಿ ಕೆಲಸ ಮಾಡ್ತಿದ್ರು.