ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇನ್ನಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಿರಿ

ಇನ್ನಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಿರಿ

‘ಸಾರ್ವಜನಿಕ ವಾಚನದಲ್ಲಿ, ಬುದ್ಧಿಹೇಳುವುದರಲ್ಲಿ, ಬೋಧಿಸುವುದರಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು.’—1 ತಿಮೊ. 4:13.

ಗೀತೆಗಳು: 45, 70

1, 2. (ಎ) ಈ ಅಂತ್ಯಕಾಲದಲ್ಲಿ ಯೆಶಾಯ 60:22 ಹೇಗೆ ಸತ್ಯವಾಗಿದೆ? (ಬಿ) ಯೆಹೋವನ ಸಂಘಟನೆಯ ಭೂಭಾಗದಲ್ಲಿ ಯಾವ ಅಗತ್ಯಗಳು ಉಂಟಾಗಿವೆ?

“ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು.” (ಯೆಶಾ. 60:22) ಈ ಮಾತುಗಳು ಈಗ ಅಂತ್ಯಕಾಲದಲ್ಲಿ ನೆರವೇರುತ್ತಾ ಇವೆ. ನಿಜವೇನೆಂದರೆ 2015⁠ರಲ್ಲಿ ಇಡೀ ಲೋಕದಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಸಾರಿದ ಯೆಹೋವನ ಸಾಕ್ಷಿಗಳ ಸಂಖ್ಯೆ 82,20,105 ಆಗಿತ್ತು. ತನ್ನ ಜನರ ಅಭಿವೃದ್ಧಿಯ ಕುರಿತು ದೇವರು ಹೇಳಿದ್ದು: “ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” ಆದ್ದರಿಂದ ಸಮಯ ದಾಟಿದಷ್ಟಕ್ಕೆ ನಮಗೆಲ್ಲರಿಗೂ ಹೆಚ್ಚೆಚ್ಚು ಕೆಲಸ ಮಾಡಲಿಕ್ಕಿದೆ. ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಈಗ ನಾವು ಕೈಲಾದದ್ದೆಲ್ಲವನ್ನೂ ಮಾಡುತ್ತಿದ್ದೇವಾ? ಹೆಚ್ಚಿನ ಸಹೋದರ ಸಹೋದರಿಯರು ಈಗಾಗಲೇ ರೆಗ್ಯುಲರ್‌ ಅಥವಾ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡುತ್ತಿದ್ದಾರೆ. ಕೆಲವರು ಬೇರೆ ಕಡೆ ಸ್ಥಳಾಂತರಿಸಿ ಸಾರುವ ಕೆಲಸದಲ್ಲಿ ನೆರವಾಗುತ್ತಿದ್ದಾರೆ. ಇನ್ನೂ ಕೆಲವರು ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ ಶ್ರಮಪಟ್ಟು ಕೆಲಸಮಾಡುತ್ತಿದ್ದಾರೆ.

2 ಪ್ರತಿ ವರ್ಷ ಸುಮಾರು 2,000 ಹೊಸ ಸಭೆಗಳು ಆರಂಭವಾಗುತ್ತಿವೆ. ಈ ಸಭೆಗಳಿಗೆ ಹಿರಿಯರ, ಸಹಾಯಕ ಸೇವಕರ ಅಗತ್ಯವಿದೆ. ಪ್ರತಿ ವರ್ಷ ಸಾವಿರಾರು ಸಹಾಯಕ ಸೇವಕರು ಹಿರಿಯರಾಗುವ ಅಗತ್ಯವಿದೆ. ಸಾವಿರಾರು ಸಹೋದರರು ಸಹಾಯಕ ಸೇವಕರಾಗುವ ಅಗತ್ಯವಿದೆ. ಇಂದು ಸಹೋದರರು ಮಾತ್ರವಲ್ಲ ಸಹೋದರಿಯರು ಸಹ ‘ಕರ್ತನ ಕೆಲಸವನ್ನು ಹೇರಳವಾಗಿ’ ಮಾಡಬೇಕಿದೆ.—1 ಕೊರಿಂ. 15:58.

ಆಧ್ಯಾತ್ಮಿಕ ಪ್ರಗತಿಗಾಗಿ ಏನು ಮಾಡಬೇಕು?

3, 4. ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ಇಡಬಹುದು?

3 ಒಂದು ತಿಮೊಥೆಯ 3:1 ಓದಿ. ಮೇಲ್ವಿಚಾರಕರಾಗಲು ‘ಎಟುಕಿಸಿಕೊಳ್ಳುತ್ತಿದ್ದ’ ಸಹೋದರರನ್ನು ಅಪೊಸ್ತಲ ಪೌಲ ಪ್ರಶಂಸಿಸಿದನು. ದೂರವಿರುವ ಒಂದು ವಸ್ತುವನ್ನು ಎಟುಕಿಸಿಕೊಳ್ಳಬೇಕಾದರೆ ಪ್ರಯತ್ನ ಮಾಡಬೇಕು, ಬಹುಶಃ ಕೈಚಾಚಬೇಕಾಗುತ್ತದೆ. ಅದೇ ರೀತಿ, ಸಹಾಯಕ ಸೇವಕನಾಗಿ ಅರ್ಹತೆ ಪಡೆಯಲು ಬಯಸುವ ಸಹೋದರನು ತನ್ನ ಕ್ರೈಸ್ತ ಗುಣಗಳನ್ನು ಹೆಚ್ಚಿಸಲು ಪ್ರಯತ್ನ ಹಾಕಬೇಕು. ಸಹಾಯಕ ಸೇವಕನಾದ ನಂತರ ಶ್ರಮಪಟ್ಟು ದುಡಿಯುವುದನ್ನು ಮುಂದುವರಿಸಬೇಕು. ಆಗ ಮೇಲ್ವಿಚಾರಕನಾಗಲು ಅರ್ಹತೆ ಪಡೆಯುತ್ತಾನೆ.

4 ಕೆಲವು ಸಹೋದರ ಸಹೋದರಿಯರಿಗೆ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಮನಸ್ಸಿದೆ. ಉದಾಹರಣೆಗೆ ಅವರಿಗೆ ಪಯನೀಯರ್‌ ಸೇವೆ, ಬೆತೆಲ್‌ ಸೇವೆ ಅಥವಾ ರಾಜ್ಯ ಸಭಾಗೃಹ ಕಟ್ಟುವ ಕೆಲಸದಲ್ಲಿ ನೆರವಾಗುವ ಬಯಕೆಯಿದೆ. ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡುತ್ತಿದ್ದಾರೆ. ನಾವೆಲ್ಲರೂ ಹೀಗೆ ಪ್ರಗತಿ ಮಾಡುತ್ತಾ ಇರಲು ಬೈಬಲ್‌ ಹೇಗೆ ನೆರವಾಗುತ್ತದೆಂದು ನೋಡೋಣ.

ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಇರಿ

5. ಯುವ ಜನರು ರಾಜ್ಯ ಸೇವೆಯಲ್ಲಿ ತಮ್ಮ ಬಲಶಕ್ತಿಯನ್ನು ಹೇಗೆ ಬಳಸುತ್ತಾರೆ?

5 ಯುವ ಜನರು ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಬಲ್ಲರು ಯಾಕೆಂದರೆ ಅವರಿಗೆ ಬಲಶಕ್ತಿ ಇದೆ, ಒಳ್ಳೇ ಆರೋಗ್ಯ ಕೂಡ ಇದೆ. (ಜ್ಞಾನೋಕ್ತಿ 20:29 ಓದಿ.) ಬೆತೆಲಿನಲ್ಲಿರುವ ಕೆಲವು ಯುವ ಸಹೋದರರು ಪುಸ್ತಕಗಳನ್ನು, ಬೈಬಲುಗಳನ್ನು ಮುದ್ರಿಸುವ, ಬೈಂಡ್‌ ಮಾಡುವ ಕೆಲಸಮಾಡುತ್ತಾರೆ. ಅನೇಕ ಯುವ ಸಹೋದರ ಸಹೋದರಿಯರು ರಾಜ್ಯ ಸಭಾಗೃಹಗಳನ್ನು ಕಟ್ಟುವ ಅಥವಾ ದುರಸ್ತಿಮಾಡುವ ಕೆಲಸದಲ್ಲಿ ನೆರವಾಗುತ್ತಾರೆ. ಇನ್ನೂ ಕೆಲವು ಸ್ವಯಂಸೇವಕರು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹಾಯ ಕೊಡುತ್ತಾರೆ. ಹೆಚ್ಚಿನ ಯುವ ಪಯನೀಯರರು ಇನ್ನೊಂದು ಭಾಷೆ ಕಲಿಯುತ್ತಾರೆ ಅಥವಾ ಬೇರೆ ಊರಿಗೆ ಹೋಗಿ ಸುವಾರ್ತೆ ಸಾರುತ್ತಾರೆ.

6-8. (ಎ) ಒಬ್ಬ ಯೌವನಸ್ಥನು ದೇವರ ಸೇವೆಯ ಬಗ್ಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ದು ಹೇಗೆ? ಫಲಿತಾಂಶವೇನು? (ಬಿ) ನಾವು ಹೇಗೆ ‘ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ಸವಿದು’ ನೋಡಬಹುದು?

6 ನಾವು ಯೆಹೋವನನ್ನು ಪ್ರೀತಿಸುತ್ತೇವೆ, ನಮ್ಮಿಂದ ಅತ್ಯುತ್ತಮವಾದದ್ದನ್ನು ಆತನಿಗೆ ಕೊಡಲು ಬಯಸುತ್ತೇವೆ. ಹಾಗಿದ್ದರೂ ಏರನ್‌ ಎಂಬ ಸಹೋದರನಿಗೆ ಅನಿಸಿದಂತೆ ಕೆಲವೊಮ್ಮೆ ನಮಗೂ ಅನಿಸಬಹುದು. ದೇವರ ಸೇವೆಯನ್ನು ಸಂತೋಷದಿಂದ ಮಾಡಲು ಏರನ್‌ ಬಯಸಿದರೂ ಅದು ಅವನಿಂದ ಆಗಲಿಲ್ಲ. ಬಾಲ್ಯದಿಂದಲೇ ಕೂಟಗಳಿಗೆ, ಕ್ಷೇತ್ರ ಸೇವೆಗೆ ಹೋಗುತ್ತಿದ್ದ ಅವನು ಹೇಳಿದ್ದು: “ಕೂಟ, ಸೇವೆ ಅಂದರೆ ಸಾಕು ನನಗೆ ಬೋರ್‌ ಆಗುತ್ತಿತ್ತು.” ಆಗೇನು ಮಾಡಿದನು?

7 ಏರನ್‌ ಬೈಬಲನ್ನು ದಿನಾಲೂ ಓದಲು, ಕೂಟಗಳಿಗೆ ಮುಂಚಿತವಾಗಿಯೇ ತಯಾರಿಸಲು, ಕೂಟಗಳಲ್ಲಿ ಉತ್ತರ ಕೊಡಲು ಪ್ರಯತ್ನ ಮಾಡಿದ. ಹೆಚ್ಚು ಪ್ರಾರ್ಥಿಸಲೂ ಆರಂಭಿಸಿದ. ಇದೆಲ್ಲವೂ ಅವನಿಗೆ ಆಧ್ಯಾತ್ಮಿಕ ಪ್ರಗತಿ ಮಾಡಲು, ಯೆಹೋವನನ್ನು ಹೆಚ್ಚು ಚೆನ್ನಾಗಿ ತಿಳಿದುಕೊಳ್ಳಲು ಸಹಾಯಮಾಡಿತು. ಆತನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲು ಆರಂಭಿಸಿದನು. ಪರಿಣಾಮ? ದೇವರ ಸೇವೆಮಾಡುವುದರಲ್ಲಿ ಸಂತೋಷ ಕಂಡುಕೊಂಡನು. ಪಯನೀಯರನಾದನು. ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಇತರರಿಗೆ ನೆರವು ನೀಡಿದನು. ಇನ್ನೊಂದು ದೇಶಕ್ಕೆ ಹೋಗಿ ಸೇವೆಮಾಡಿದನು. ಈಗ ಒಬ್ಬ ಹಿರಿಯನಾಗಿದ್ದಾನೆ, ಬೆತೆಲಿನಲ್ಲಿ ಸೇವೆಮಾಡುತ್ತಿದ್ದಾನೆ. ತನ್ನ ಜೀವನದ ಕುರಿತು ಅವನಿಗೆ ಹೇಗನಿಸುತ್ತದೆ? ಅವನು ಹೇಳುವುದು: “‘ಯೆಹೋವನು ಒಳ್ಳೆಯವನೆಂದು ಅನುಭವದಿಂದ ತಿಳಿದಿದ್ದೇನೆ.’ ಆತನ ಆಶೀರ್ವಾದಕ್ಕಾಗಿ ನಾನಾತನಿಗೆ ಋಣಿಯಾಗಿದ್ದೇನೆ. ಅಲ್ಲದೆ, ಆತನ ಸೇವೆಯನ್ನು ಹೆಚ್ಚು ಮಾಡಲು ಪ್ರೇರಣೆ ಸಿಕ್ಕಿದೆ. ಇದರಿಂದಾಗಿ ಇನ್ನೂ ಹೆಚ್ಚು ಆಶೀರ್ವಾದಗಳು ಸಿಕ್ಕಿವೆ.”

8 ಕೀರ್ತನೆಗಾರನು ಹೇಳಿದ್ದು: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; . . . ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವದಿಲ್ಲ.” (ಕೀರ್ತನೆ 34:8-10 ಓದಿ.) ನಾವು ಯೆಹೋವನಿಗೆ ಅತ್ಯುತ್ತಮವಾದದ್ದನ್ನು ಕೊಡುವಾಗ ನಿಜವಾದ ಸಂತೋಷ ಸಿಗುತ್ತದೆ ಯಾಕೆಂದರೆ ನಾವಾತನನ್ನು ಮೆಚ್ಚಿಸುತ್ತೇವೆ. ಆತನು ಮಾತು ಕೊಟ್ಟಂತೆ ನಮ್ಮನ್ನು ನೋಡಿಕೊಳ್ಳುವನು.

ಬಿಟ್ಟುಕೊಡಬೇಡಿ

9, 10. ನಾವು ಯಾಕೆ ತಾಳ್ಮೆಯಿಂದಿರಬೇಕು?

9 ಯೆಹೋವನ ಸೇವೆಯಲ್ಲಿ ನಾವು ಹೆಚ್ಚನ್ನು ಮಾಡಲು ಬಯಸಬಹುದು. ಆದರೆ ನೆನಸಿ, ನಾವು ಸಭೆಯಲ್ಲಿ ಒಂದು ನಿರ್ದಿಷ್ಟ ಸುಯೋಗಕ್ಕಾಗಿ ಕಾಯುತ್ತಿದ್ದರೂ ಅದು ಸಿಗುವುದಿಲ್ಲ. ಅಥವಾ ನಮ್ಮ ಪರಿಸ್ಥಿತಿಗಳು ಬದಲಾಗಿ ನಾವು ಹೆಚ್ಚನ್ನು ಮಾಡಲಾಗುವಂತೆ ತುಂಬ ಸಮಯದಿಂದ ಕಾಯುತ್ತಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಆಗೇನು? ನಾವು ತಾಳ್ಮೆಯಿಂದಿರಬೇಕು. (ಮೀಕ 7:7) ನಾವಿರುವಂಥ ಆ ಸನ್ನಿವೇಶದಲ್ಲಿ ಮುಂದುವರಿಯಲು ಯೆಹೋವನು ಒಂದುವೇಳೆ ಅನುಮತಿಸಿದರೂ ಆತನು ಯಾವಾಗಲೂ ನಮ್ಮನ್ನು ಬೆಂಬಲಿಸುವನು ಎಂಬ ಖಾತ್ರಿ ನಮಗಿರಬೇಕು. ನಾವು ಅಬ್ರಹಾಮನ ಮಾದರಿಯಿಂದ ಪಾಠ ಕಲಿಯಸಾಧ್ಯವಿದೆ. ಅವನಿಗೊಬ್ಬ ಮಗ ಹುಟ್ಟುವನೆಂದು ಯೆಹೋವನು ವಚನವಿತ್ತನು. ಆದರೆ ಇಸಾಕನು ಹುಟ್ಟಿದ್ದು ಅನೇಕ ವರ್ಷಗಳ ನಂತರ. ಆ ಸಮಯದಲ್ಲಿ ಅಬ್ರಹಾಮನು ತಾಳ್ಮೆಯಿಂದ ಕಾದನು. ಯೆಹೋವನಲ್ಲಿ ತನ್ನ ನಂಬಿಕೆಯನ್ನು ಎಂದೂ ಕಳಕೊಳ್ಳಲಿಲ್ಲ.—ಆದಿ. 15:3, 4; 21:5; ಇಬ್ರಿ. 6:12-15.

10 ಕೋರಿದ ವಿಷಯಕ್ಕಾಗಿ ತುಂಬ ಸಮಯ ಕಾಯುವುದು ಸುಲಭವಲ್ಲ ನಿಶ್ಚಯ. (ಜ್ಞಾನೋ. 13:12) ಆದರೆ ನಮ್ಮ ಸನ್ನಿವೇಶದ ಕುರಿತೇ ಯೋಚಿಸುತ್ತಾ ನಿರಾಶರಾದರೆ ಧೈರ್ಯಗುಂದಿ ಹೋಗುತ್ತೇವೆ. ಅದಕ್ಕೆ ಬದಲಾಗಿ ಸಭೆಯಲ್ಲಿ ನಿರ್ದಿಷ್ಟ ಜವಾಬ್ದಾರಿಗಳನ್ನು ಹೊಂದಲು ಬೇಕಾದ ಗುಣಗಳನ್ನು ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳಲು ಆ ಸಮಯವನ್ನು ಬಳಸಬಹುದು.

11. (ಎ) ಯಾವ ಗುಣಗಳನ್ನು ಬೆಳೆಸಿಕೊಳ್ಳಲು ಶ್ರಮಿಸಬೇಕು? (ಬಿ) ಆ ಗುಣಗಳು ಯಾಕೆ ಪ್ರಾಮುಖ್ಯ?

11 ನಿಮಗೆ ಅಗತ್ಯವಿರುವ ಗುಣಗಳನ್ನು, ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಿ. ಬೈಬಲನ್ನು ಓದುವಲ್ಲಿ, ಓದಿದ್ದನ್ನು ಧ್ಯಾನಿಸುವಲ್ಲಿ ವಿವೇಕಿಗಳಾಗುವಿರಿ. ಸರಿಯಾಗಿ ಯೋಚಿಸಲು, ವಿವೇಚಿಸಲು, ಒಳ್ಳೇ ನಿರ್ಣಯಗಳನ್ನು ಮಾಡಲು ಕಲಿಯುವಿರಿ. ಸಭೆಯನ್ನು ನೋಡಿಕೊಳ್ಳಲು ಸಹೋದರರಲ್ಲಿ ಇಂಥ ಗುಣ, ಸಾಮರ್ಥ್ಯಗಳು ಇರಬೇಕು. (ಜ್ಞಾನೋ. 1:1-4; ತೀತ 1:7-9) ಬೈಬಲನ್ನು ಅಧ್ಯಯನ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಯೆಹೋವನ ಅನಿಸಿಕೆಯೇನೆಂದು ಕಲಿಯಬಹುದು. ಇದರಿಂದಾಗಿ ನಾವು ಪ್ರತಿ ದಿನ ಯೆಹೋವನಿಗೆ ಮೆಚ್ಚಿಕೆಯಾಗುವ ನಿರ್ಣಯಗಳನ್ನು ಮಾಡಬಲ್ಲೆವು. ಉದಾಹರಣೆಗಾಗಿ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹಣವನ್ನು ಹೇಗೆ ಬಳಸಬೇಕು, ಯಾವ ಮನೋರಂಜನೆ, ಉಡುಪನ್ನು ಆಯ್ಕೆಮಾಡಬೇಕು ಎಂದು ಕಲಿಯುತ್ತೇವೆ.

12. ಸಭೆಯ ಸದಸ್ಯರು ತಮ್ಮ ನಂಬಿಗಸ್ತಿಕೆಯನ್ನು ಹೇಗೆ ತೋರಿಸಿಕೊಡಬಹುದು?

12 ನಿಮಗೆ ಕೊಡಲಾದ ಯಾವುದೇ ನೇಮಕವನ್ನು ನಂಬಿಗಸ್ತಿಕೆಯಿಂದ ಮಾಡಿ. ಆಲಯವನ್ನು ಪುನಃ ಕಟ್ಟುವ ಕೆಲಸದಲ್ಲಿ ಬೇರೆಬೇರೆ ಜವಾಬ್ದಾರಿಗಳನ್ನು ನಿರ್ವಹಿಸಲು ನೆಹೆಮೀಯನಿಗೆ ಅನೇಕ ಪುರುಷರು ಬೇಕಾಗಿದ್ದರು. ಒಳ್ಳೇ ಗುಣಗಳಿದ್ದ, ದೇವರ ಮೇಲೆ ಪ್ರೀತಿಯಿದ್ದ, ಯಾವುದೇ ಕೆಲಸ ಕೊಟ್ಟರೂ ಶ್ರಮವಹಿಸಿ ಮಾಡುವಂಥ ಪುರುಷರನ್ನು ಅವನು ಆರಿಸಿಕೊಂಡನು. (ನೆಹೆ. 7:2; 13:12, 13) ಅದೇ ರೀತಿಯಲ್ಲಿ ಇಂದು ನಂಬಿಗಸ್ತರಾಗಿರುವವರಿಗೆ, ಶ್ರಮಪಟ್ಟು ದುಡಿಯುವವರಿಗೆ ಒಳ್ಳೇ ಹೆಸರು ಇರುತ್ತದೆ. ಅವರಿಗೆ ಹೆಚ್ಚು ಜವಾಬ್ದಾರಿಗಳನ್ನು ಕೊಡಲಾಗುತ್ತದೆ. (1 ಕೊರಿಂ. 4:2) ಆದ್ದರಿಂದ ಸಹೋದರರಾಗಿರಲಿ, ಸಹೋದರಿಯರಾಗಿರಲಿ ನಮಗೆ ಕೊಡಲಾದ ಯಾವುದೇ ಕೆಲಸವನ್ನು ಆದಷ್ಟು ಉತ್ತಮವಾಗಿ ಮಾಡಲು ಯಾವಾಗಲೂ ಪ್ರಯತ್ನಿಸಬೇಕು.1 ತಿಮೊಥೆಯ 5:25 ಓದಿ.

13. ಬೇರೆಯವರು ನಿಮಗೆ ಅನ್ಯಾಯ ಮಾಡಿದಾಗ ಯೋಸೇಫನ ಮಾದರಿಯನ್ನು ಹೇಗೆ ಅನುಕರಿಸುವಿರಿ?

13 ಯೆಹೋವನ ಮೇಲೆ ಭರವಸೆಯಿಡಿ. ಇತರರು ನಿಮ್ಮ ಜೊತೆ ಸರಿಯಾಗಿ ನಡೆದುಕೊಳ್ಳದಿದ್ದರೆ, ಅನ್ಯಾಯದಿಂದ ವರ್ತಿಸಿದರೆ ನೀವೇನು ಮಾಡುವಿರಿ? ನಿಮಗೆ ಹೇಗನಿಸುತ್ತದೆಂದು ಅವರಿಗೆ ವಿವರಿಸಬಹುದು. ಆದರೆ ನೀವೇ ಸರಿಯೆಂದು ವಾದಿಸುತ್ತಾ ಹಟಹಿಡಿದರೆ ಸಮಸ್ಯೆ ಇನ್ನಷ್ಟು ದೊಡ್ಡದಾಗುತ್ತದೆ. ಯೋಸೇಫನ ಮಾದರಿಯಿಂದ ನಾವು ಬಹಳಷ್ಟನ್ನು ಕಲಿಯಬಹುದು. ಅವನ ಸಹೋದರರು ಅವನೊಂದಿಗೆ ಕೆಟ್ಟದ್ದಾಗಿ ನಡೆದುಕೊಂಡರು. ಜನರು ಅವನ ಬಗ್ಗೆ ಸುಳ್ಳು ಹೇಳಿದರು. ಅವನು ಮಾಡದೇ ಇದ್ದ ತಪ್ಪಿಗಾಗಿ ಅವನನ್ನು ಸೆರೆಮನೆಗೆ ಹಾಕಲಾಯಿತು. ಆದರೆ ಯೋಸೇಫನು ಯೆಹೋವನ ಮೇಲೆ ಭರವಸೆಯಿಟ್ಟನು. ಯೆಹೋವನ ವಾಗ್ದಾನಗಳ ಬಗ್ಗೆ ಯೋಚಿಸಿದನು. ನಂಬಿಗಸ್ತನಾಗಿ ಉಳಿದನು. (ಕೀರ್ತ. 105:19) ಆ ಕಷ್ಟದ ಸಮಯಗಳಲ್ಲಿ ಅನೇಕ ಒಳ್ಳೇ ಗುಣಗಳನ್ನು ಬೆಳೆಸಿಕೊಂಡನು. ಆ ಗುಣಗಳು ಮುಂದಕ್ಕೆ ಅವನಿಗೆ ಕೊಡಲಾದ ಮಹತ್ವದ ಕೆಲಸವನ್ನು ಮಾಡಿಮುಗಿಸಲು ಸಹಾಯಮಾಡಿದವು. (ಆದಿ. 41:37-44; 45:4-8) ಬೇರೆಯವರು ನಿಮಗೆ ಅನ್ಯಾಯ ಮಾಡಿರುವಲ್ಲಿ ವಿವೇಕಕ್ಕಾಗಿ ಯೆಹೋವನಿಗೆ ಪ್ರಾರ್ಥನೆಮಾಡಿರಿ. ನೀವು ನಿರಾಳವಾಗಿ ಉಳಿಯಲು, ಅವರೊಂದಿಗೆ ದಯೆಯಿಂದ ಮಾತಾಡಲು, ನಡೆದುಕೊಳ್ಳಲು ಆತನು ಸಹಾಯಮಾಡುವನು.1 ಪೇತ್ರ 5:10 ಓದಿ.

ಸೇವೆಯಲ್ಲಿ ಪ್ರಗತಿ ಮಾಡಿ

14, 15. (ಎ) ನಾವು ಸಾರುವ ರೀತಿಗೆ ಸದಾ ಗಮನಕೊಡುವ ಅಗತ್ಯ ಏಕಿದೆ? (ಬಿ) ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ನೀವು ಹೇಗೆ ಹೊಂದಿಕೊಳ್ಳಬಹುದು? (ಲೇಖನದ ಆರಂಭದ ಚಿತ್ರ ಮತ್ತು “ ಬೇರೊಂದು ವಿಧಾನವನ್ನು ಪ್ರಯತ್ನಿಸಿ ನೋಡಲು ಸಿದ್ಧರಿದ್ದೀರಾ?” ಚೌಕ ನೋಡಿ.)

14 ದೇವರ ವಾಕ್ಯವನ್ನು ವಿವರಿಸುವ ರೀತಿಯಲ್ಲಿ ಪ್ರಗತಿಮಾಡುತ್ತಾ ಇರುವಂತೆ ಪೌಲನು ತಿಮೊಥೆಯನಿಗೆ ಹೇಳಿದನು. ಪೌಲನಂದದ್ದು: “ನಿನ್ನ ವಿಷಯದಲ್ಲಿಯೂ ನಿನ್ನ ಬೋಧನೆಯ ವಿಷಯದಲ್ಲಿಯೂ ಸದಾ ಗಮನಕೊಡುವವನಾಗಿರು.” (1 ತಿಮೊ. 4:13, 16) ಈಗಾಗಲೇ ಅನೇಕ ವರ್ಷಗಳಿಂದ ಸಾರುತ್ತಿದ್ದ ತಿಮೊಥೆಯನಿಗೆ ಪ್ರಗತಿ ಮಾಡುವ ಅಗತ್ಯ ಏಕಿತ್ತು? ಜನರು ಬದಲಾಗುತ್ತಾರೆ, ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ, ಹಾಗಾಗಿ ಅವರು ಕಿವಿಗೊಡುತ್ತಾ ಇರಬೇಕಾದರೆ ಅವನು ಪ್ರಗತಿ ಮಾಡುತ್ತಾ ಇರಬೇಕಾಗಿತ್ತು. ಕಲಿಸುವ ರೀತಿಯಲ್ಲೂ ಬದಲಾವಣೆ ಮಾಡಬೇಕಿತ್ತು. ಇಂದು ನಾವು ಕೂಡ ಅದನ್ನೇ ಮಾಡಬೇಕು.

15 ಕೆಲವು ಸ್ಥಳಗಳಲ್ಲಿ ನಾವು ಮನೆಮನೆ ಸಾರುವಾಗ ಅನೇಕರು ಮನೆಯಲ್ಲಿ ಇರುವುದಿಲ್ಲ. ಇನ್ನೂ ಕೆಲವು ಸ್ಥಳಗಳಲ್ಲಿ ಜನರು ಮನೆಯಲ್ಲಿದ್ದರೂ ಅವರ ಮನೆಬಾಗಲಿಗೆ ಹೋಗಲು ನಮಗೆ ಆಗಲಿಕ್ಕಿಲ್ಲ. ಏಕೆಂದರೆ ಅವರು ವಾಸಮಾಡುತ್ತಿರುವ ಕಟ್ಟಡವನ್ನು ಪ್ರವೇಶಿಸಲು ಅನುಮತಿ ಸಿಗಲಿಕ್ಕಿಲ್ಲ. ನಿಮ್ಮ ಕ್ಷೇತ್ರದಲ್ಲಿ ಹೀಗಾಗುತ್ತಿದ್ದರೆ, ಜನರನ್ನು ಭೇಟಿಮಾಡಲು ಬೇರಾವ ವಿಧಾನವನ್ನು ಪ್ರಯತ್ನಿಸಬಹುದು?

16. ಸಾರ್ವಜನಿಕ ಸಾಕ್ಷಿಕಾರ್ಯವನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು?

16 ಅನೇಕ ಸಹೋದರ ಸಹೋದರಿಯರು ಸಾರ್ವಜನಿಕ ಸಾಕ್ಷಿಕಾರ್ಯವನ್ನು ಆನಂದಿಸುತ್ತಾರೆ. ಉದಾಹರಣೆಗೆ ಜನರನ್ನು ಭೇಟಿಯಾಗಿ ಮಾತಾಡಲಿಕ್ಕಾಗಿ ರೈಲು ನಿಲ್ದಾಣ, ಬಸ್‌ ನಿಲ್ದಾಣ, ಮಾರ್ಕೆಟ್‌ ಮತ್ತು ಉದ್ಯಾನಗಳಿಗೆ ಹೋಗುತ್ತಾರೆ. ಸಂಭಾಷಣೆ ಆರಂಭಿಸಲು ನೀವು ಇತ್ತೀಚಿನ ವಾರ್ತಾ ವರದಿಯ ಕುರಿತು ಮಾತಾಡಬಹುದು. ಇಲ್ಲವೆ ನೀವು ಮಾತಾಡುತ್ತಿರುವ ವ್ಯಕ್ತಿಯ ಜೊತೆಯಲ್ಲಿ ಅವರ ಮಕ್ಕಳಿದ್ದರೆ ಆ ಮಕ್ಕಳ ಬಗ್ಗೆ ಒಂದೆರಡು ಒಳ್ಳೇ ಮಾತು ಹೇಳಬಹುದು. ಅಥವಾ ಆ ವ್ಯಕ್ತಿಯ ಕೆಲಸದ ಬಗ್ಗೆ ಮಾತಾಡಬಹುದು. ಆ ವ್ಯಕ್ತಿ ತುಂಬ ಚೆನ್ನಾಗಿ ಕೇಳುತ್ತಿದ್ದಾನೆಂದು ಅನಿಸಿದರೆ ಬೈಬಲಿನ ಒಂದು ವಿಷಯವನ್ನು ತಿಳಿಸಿ, ಅವನ ಅಭಿಪ್ರಾಯವನ್ನು ಕೇಳಿ ತಿಳಿಯಬಹುದು. ಕೆಲವರಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿಯಲು ಇಷ್ಟವಿರುತ್ತದೆ.

17, 18. (ಎ) ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ನೀವು ಹೇಗೆ ಆತ್ಮವಿಶ್ವಾಸದಿಂದ ಮಾತಾಡಬಹುದು? (ಬಿ) ಯೆಹೋವನನ್ನು ಸ್ತುತಿಸಲು ದಾವೀದನಿಗಿದ್ದ ಉತ್ಸಾಹ ನಿಮಗಿದ್ದರೆ ಅದು ಹೇಗೆ ಸೇವೆಯಲ್ಲಿ ಸಹಾಯ ಮಾಡಬಲ್ಲದು?

17 ಸಾರ್ವಜನಿಕ ಸಾಕ್ಷಿಕಾರ್ಯ ನಿಮಗೆ ಕಷ್ಟವೆನಿಸುವುದಾದರೆ ಪ್ರಯತ್ನವನ್ನು ಬಿಟ್ಟುಬಿಡಬೇಡಿ. ನ್ಯೂ ಯಾರ್ಕ್‌ ನಗರದ ಎಡ್ಡಿ ಎಂಬ ಪಯನೀಯರ್‌ ಸಹೋದರನಿಗೂ ಈ ಸಾಕ್ಷಿಕಾರ್ಯ ಕಷ್ಟವೆನಿಸುತ್ತಿತ್ತು. ಹೆಚ್ಚು ಆತ್ಮವಿಶ್ವಾಸದಿಂದ ಮಾತಾಡಲು ಅವನಿಗೆ ಏನು ಸಹಾಯಮಾಡಿತು? ಅವನು ಹೇಳಿದ್ದು: “ಕುಟುಂಬ ಆರಾಧನೆಯ ಸಮಯದಲ್ಲಿ ನನ್ನ ಪತ್ನಿ ಮತ್ತು ನಾನು ಜನರ ಆಕ್ಷೇಪಣೆ, ಅಭಿಪ್ರಾಯಗಳಿಗೆ ಹೇಗೆ ಉತ್ತರ ಕೊಡುವುದೆಂದು ಸಂಶೋಧನೆ ಮಾಡುತ್ತೇವೆ. ಸಲಹೆಗಳಿಗಾಗಿ ಬೇರೆ ಸಾಕ್ಷಿಗಳನ್ನು ಸಹ ಕೇಳುತ್ತೇವೆ.” ಈಗ ಎಡ್ಡಿ ಸಾರ್ವಜನಿಕ ಸಾಕ್ಷಿಕಾರ್ಯಕ್ಕೆ ಹೋಗಲು ಆತುರದಿಂದ ಮುನ್ನೋಡುತ್ತಾನೆ.

18 ನಾವು ಸೇವೆಯಲ್ಲಿ ಆನಂದಿಸುತ್ತಾ ಸುವಾರ್ತೆಯ ಕುರಿತು ಜನರೊಂದಿಗೆ ಮಾತಾಡುವ ವಿಧದಲ್ಲಿ ಪ್ರಗತಿಮಾಡುವಾಗ ನಮ್ಮ ಆಧ್ಯಾತ್ಮಿಕ ಪ್ರಗತಿ ಇತರರಿಗೆ ತೋರಿಬರುತ್ತದೆ. (1 ತಿಮೊಥೆಯ 4:15 ಓದಿ.) ಒಬ್ಬ ವ್ಯಕ್ತಿಗೆ ಯೆಹೋವನ ಸೇವಕನಾಗಲೂ ಸಹಾಯ ಮಾಡಬಲ್ಲೆವು. ದಾವೀದನು ಹೇಳಿದ್ದು: “ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು. ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು; ಇದನ್ನು ದೀನರು ಕೇಳಿ ಸಂತೋಷಿಸುವರು.”—ಕೀರ್ತ. 34:1, 2.

ಆಧ್ಯಾತ್ಮಿಕ ಪ್ರಗತಿ ಮಾಡುವ ಮೂಲಕ ಯೆಹೋವನನ್ನು ಸ್ತುತಿಸುತ್ತಾ ಇರಿ

19. ಯೆಹೋವನಿಗೆ ನಿಷ್ಠನಾಗಿರುವ ವ್ಯಕ್ತಿ ಕಷ್ಟಕರ ಪರಿಸ್ಥಿತಿಯಲ್ಲಿದ್ದರೂ ಏಕೆ ಸಂತೋಷದಿಂದಿರಬಹುದು?

19 ದಾವೀದನು ಹೀಗೂ ಹೇಳಿದನು: “ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವದು; ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು; ನಿನ್ನ ಪ್ರತಾಪವನ್ನು ವರ್ಣಿಸುವರು. ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು.” (ಕೀರ್ತ. 145:10-12) ಯೆಹೋವನನ್ನು ಯಾರು ಪ್ರೀತಿಸುತ್ತಾರೊ, ಆತನಿಗೆ ಯಾರು ನಿಷ್ಠರಾಗಿರುತ್ತಾರೊ ಅವರೆಲ್ಲರಲ್ಲಿ ಆತನ ಕುರಿತು ಇತರರಿಗೆ ತಿಳಿಸುವ ಬಲವಾದ ಅಪೇಕ್ಷೆ ಇರುತ್ತದೆ. ಆದರೆ ಅಸೌಖ್ಯದಿಂದಾಗಲಿ, ವೃದ್ಧಾಪ್ಯದಿಂದಾಗಲಿ ಹೆಚ್ಚು ಮನೆಮನೆ ಸೇವೆ ಮಾಡಲು ಆಗದಿದ್ದರೆ ಆಗೇನು? ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ, ಉದಾಹರಣೆಗೆ ನರ್ಸ್‌ಗಳಿಗೆ, ಡಾಕ್ಟರುಗಳಿಗೆ ಸಾಕ್ಷಿಕೊಡುವಾಗ ಯೆಹೋವನನ್ನು ಸ್ತುತಿಸುತ್ತಿದ್ದೀರೆಂದು ಯಾವಾಗಲೂ ನೆನಪಿಡಿ. ನಿಮ್ಮ ನಂಬಿಕೆಗಾಗಿ ನೀವು ಸೆರೆಯಲ್ಲಿದ್ದಲ್ಲಿ ಆಗಲೂ ಯೆಹೋವನ ಕುರಿತು ಇತರರಿಗೆ ತಿಳಿಸಸಾಧ್ಯವಿದೆ. ಅದು ಆತನ ಹೃದಯವನ್ನು ಸಂತೋಷಪಡಿಸುತ್ತದೆ. (ಜ್ಞಾನೋ. 27:11) ನಿಮ್ಮ ಕುಟುಂಬದಲ್ಲಿ ಬೇರೆ ಯಾರೂ ಸಾಕ್ಷಿಗಳಲ್ಲದಿದ್ದರೂ ನೀವು ಯೆಹೋವನ ಸೇವೆಮಾಡುವಾಗ ಆತನಿಗೆ ತುಂಬ ಸಂತೋಷವಾಗುತ್ತದೆ. (1 ಪೇತ್ರ 3:1-4) ಅತಿ ಕಷ್ಟಕರ ಸನ್ನಿವೇಶಗಳಲ್ಲೂ ಯೆಹೋವನನ್ನು ಸ್ತುತಿಸಲು, ಆತನಿಗೆ ಇನ್ನೂ ಹತ್ತಿರವಾಗುತ್ತಾ ಇರಲು, ಆಧ್ಯಾತ್ಮಿಕ ಪ್ರಗತಿ ಮಾಡಲು ನಿಮ್ಮಿಂದ ಖಂಡಿತ ಆಗುತ್ತದೆ.

20, 21. ಯೆಹೋವನ ಸಂಘಟನೆಯಲ್ಲಿ ನಿಮಗೆ ಹೆಚ್ಚಿನ ಕೆಲಸವನ್ನು ವಹಿಸಲಾಗಿರುವಲ್ಲಿ ಇತರರಿಗೆ ನೀವು ಹೇಗೆ ಆಶೀರ್ವಾದವಾಗಿರಬಲ್ಲಿರಿ?

20 ನೀವು ಯೆಹೋವನಿಗೆ ಹತ್ತಿರವಾಗುತ್ತಾ ಇದ್ದರೆ, ಆತನ ಸೇವೆಯಲ್ಲಿ ಕೈಲಾದದ್ದೆಲ್ಲವನ್ನು ಮಾಡಿದರೆ ಆತನು ಖಂಡಿತ ನಿಮ್ಮನ್ನು ಆಶೀರ್ವದಿಸುವನು. ಬಹುಶಃ ನಿಮ್ಮ ಕೆಲಸಕಾರ್ಯದಲ್ಲಿ ಇಲ್ಲವೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ದೇವರ ಸುಂದರ ವಾಗ್ದಾನಗಳ ಕುರಿತು ಜನರಿಗೆ ಕಲಿಸಲು ಹೆಚ್ಚು ಅವಕಾಶಗಳು ನಿಮಗೆ ಸಿಗುವವು. ನಿಮ್ಮ ಸಹೋದರರಿಗೆ ಕೂಡ ಹೆಚ್ಚು ಸಹಾಯಮಾಡಲು ಸಾಧ್ಯವಾಗುವುದು. ಸಭೆಯಲ್ಲಿ ನೀವು ಶ್ರಮಪಟ್ಟು ಕೆಲಸಮಾಡುವುದನ್ನು ನೋಡಿ ನಿಮ್ಮ ಸಹೋದರ ಸಹೋದರಿಯರು ನಿಮ್ಮನ್ನು ಖಂಡಿತ ತುಂಬ ಪ್ರೀತಿಸುವರು.

21 ಯೆಹೋವನ ಸೇವೆಯನ್ನು ನಾವು ಎಷ್ಟೇ ಸಮಯದಿಂದ ಮಾಡುತ್ತಿರಲಿ ನಾವೆಲ್ಲರೂ ಆತನಿಗೆ ಇನ್ನೂ ಹತ್ತಿರವಾಗಲು, ಇನ್ನಷ್ಟು ಆಧ್ಯಾತ್ಮಿಕ ಪ್ರಗತಿ ಮಾಡಲು ಅವಕಾಶಗಳಿವೆ. ಅಂಥ ಪ್ರಗತಿಯನ್ನು ಮಾಡುವಂತೆ ಇತರರಿಗೆ ಹೇಗೆ ನೆರವು ನೀಡಬಹುದೆಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.