ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ವಿವಾಹ ಜೀವನವನ್ನು ಯಶಸ್ವಿಗೊಳಿಸಿರಿ

ನಿಮ್ಮ ವಿವಾಹ ಜೀವನವನ್ನು ಯಶಸ್ವಿಗೊಳಿಸಿರಿ

‘ಪ್ರತಿಯೊಬ್ಬನು ತನ್ನನ್ನು ಪ್ರೀತಿಸುವಂತೆ ತನ್ನ ಹೆಂಡತಿಯನ್ನೂ ಪ್ರೀತಿಸಲಿ; ಹೆಂಡತಿಗೆ ಗಂಡನ ಕಡೆಗೆ ಆಳವಾದ ಗೌರವವಿರಬೇಕು.’—ಎಫೆ. 5:33.

ಗೀತೆಗಳು: 87, 3

1. ವಿವಾಹ ಜೀವನ ಸಂತೋಷದಿಂದ ಆರಂಭವಾಗುತ್ತದಾದರೂ ದಂಪತಿಗಳು ಏನನ್ನು ನಿರೀಕ್ಷಿಸಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

ಮದುವೆ ದಿನ. ಎಲ್ಲೆಲ್ಲೂ ಸಂಭ್ರಮಸಂತೋಷ. ತನ್ನ ಸುಂದರ ವಧು ಅಲಂಕೃತಳಾಗಿ ಮೆಲ್ಲಮೆಲ್ಲ ಹೆಜ್ಜೆಯಿಟ್ಟು ಬರುವುದನ್ನು ನೋಡುವಾಗ ವರನ ಮುಖ ಆನಂದದಿಂದ ಅರಳುತ್ತದೆ. ಮದುವೆ ಮುಂಚೆ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡರು, ಪ್ರೀತಿ ಹೆಚ್ಚಾಯಿತು, ಮದುವೆಯಾಗಲು ನಿಶ್ಚಯಿಸಿದರು. ತಾವು ಕೊನೆ ತನಕ ನಿಷ್ಠರಾಗಿರುತ್ತೇವೆಂದು ಮದುವೆ ದಿನ ಭಾಷೆ ಕೊಟ್ಟರು. ಹೊಸ ಬಾಳಿಗೆ ಕಾಲಿಟ್ಟ ಬಳಿಕ ಹೊಂದಾಣಿಕೆಗಳನ್ನು ಮಾಡಲಿಕ್ಕಿರುತ್ತದೆ. ವಿವಾಹವನ್ನು ಆರಂಭಿಸಿದ ಯೆಹೋವನು ಪ್ರತಿಯೊಂದು ದಂಪತಿಯ ಜೀವನ ಸಂತೋಷವಾಗಿರಬೇಕು, ಯಶಸ್ವಿಯಾಗಬೇಕು ಎಂದು ಬಯಸುತ್ತಾನೆ. ಹಾಗಾಗಿ ಆತನು ಬೈಬಲಿನಲ್ಲಿ ವಿವೇಕಭರಿತ ಬುದ್ಧಿವಾದ ಕೊಟ್ಟಿದ್ದಾನೆ. (ಜ್ಞಾನೋ. 18:22) ಹಾಗಿದ್ದರೂ ಅಪರಿಪೂರ್ಣರಾದ ಕಾರಣ ದಂಪತಿಗಳಿಗೆ “ಶರೀರದಲ್ಲಿ ಸಂಕಟ” ಅಂದರೆ ಸಮಸ್ಯೆಗಳು ಇರುವವೆಂದು ಬೈಬಲ್‌ ಹೇಳುತ್ತದೆ. (1 ಕೊರಿಂ. 7:28) ಆ ಸಮಸ್ಯೆಗಳನ್ನು ಆದಷ್ಟು ಕಡಿಮೆಮಾಡುವುದು ಹೇಗೆ? ವಿವಾಹ ಜೀವನವನ್ನು ಕ್ರೈಸ್ತರು ಹೇಗೆ ಯಶಸ್ವಿಗೊಳಿಸಬಹುದು?

2. ವಿವಾಹ ಸಂಗಾತಿಗಳು ಯಾವೆಲ್ಲ ವಿಧದ ಪ್ರೀತಿ ತೋರಿಸಬೇಕು?

2 ಪ್ರಾಮುಖ್ಯವಾಗಿ ಬೇಕಾಗಿರುವುದು ಪ್ರೀತಿ ಎನ್ನುತ್ತದೆ ಬೈಬಲ್‌. ಗಂಡಹೆಂಡಿರು ತಮ್ಮ ಜೀವನದಲ್ಲಿ ತೋರಿಸಬೇಕಾದ ಪ್ರೀತಿಯಲ್ಲಿ ಹಲವಾರು ವಿಧಗಳಿವೆ. ಉದಾಹರಣೆಗೆ ಅವರು ಕೋಮಲ ಮಮತೆ (ಗ್ರೀಕ್‌ನಲ್ಲಿ ಫಿಲಿಯಾ) ತೋರಿಸಬೇಕು. ಗಂಡುಹೆಣ್ಣಿನ ನಡುವೆ ಇರುವ ಪ್ರಣಯಾತ್ಮಕ ಪ್ರೀತಿ (ಈರೊಸ್‌) ಅವರಲ್ಲಿರಬೇಕು. ಮಕ್ಕಳಾದ ಮೇಲೆ ಕುಟುಂಬ ಸದಸ್ಯರ ನಡುವೆ ಇರುವಂಥ ಸಹಜ ಪ್ರೀತಿಯನ್ನು (ಸ್ಟೊರ್ಜೆ) ತೋರಿಸಬೇಕು. ಆದರೆ ವಿವಾಹ ಜೀವನ ಯಶಸ್ವಿಯಾಗಲು ಮುಖ್ಯವಾಗಿ ಬೇಕಾಗಿರುವುದು ತತ್ವಗಳ ಮೇಲೆ ಆಧರಿತವಾದ ಪ್ರೀತಿ (ಅಗಾಪೆ). ಅಪೊಸ್ತಲ ಪೌಲನು ಈ ವಿಧದ ಪ್ರೀತಿಯನ್ನೇ ವರ್ಣಿಸುತ್ತಾ ಹೇಳಿದ್ದು: “ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ; ಅದೇ ಸಮಯದಲ್ಲಿ, ಹೆಂಡತಿಗೆ ತನ್ನ ಗಂಡನ ಕಡೆಗೆ ಆಳವಾದ ಗೌರವವಿರಬೇಕು.”—ಎಫೆ. 5:33.

ಗಂಡಹೆಂಡತಿಯ ಜವಾಬ್ದಾರಿಗಳ ಕಡೆಗೆ ಸೂಕ್ಷ್ಮ ನೋಟ

3. ವಿವಾಹಬಂಧದಲ್ಲಿ ಪ್ರೀತಿ ಎಷ್ಟು ಗಾಢವಾಗಿರಬೇಕು?

3 ಪೌಲನು ಬರೆದದ್ದು: “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ.” (ಎಫೆ. 5:25) ಯೇಸು ತನ್ನ ಶಿಷ್ಯರನ್ನು ಪ್ರೀತಿಸಿದಂತೆಯೇ ಇಂದು ಕ್ರೈಸ್ತರು ಪರಸ್ಪರರನ್ನು ಪ್ರೀತಿಸುವ ಮೂಲಕ ಆತನ ಮಾದರಿಯನ್ನು ಅನುಕರಿಸುತ್ತಾರೆ. (ಯೋಹಾನ 13:34, 35; 15:12, 13 ಓದಿ.) ಆದ್ದರಿಂದ ಕ್ರೈಸ್ತ ಗಂಡಹೆಂಡತಿ ಮಧ್ಯೆ ಎಷ್ಟು ಗಾಢವಾದ ಪ್ರೀತಿಯಿರಬೇಕೆಂದರೆ ಅವರು ಒಬ್ಬರಿಗೊಬ್ಬರು ಜೀವ ಕೊಡಲೂ ಸಿದ್ಧರಿರಬೇಕು. ಆದರೆ ಗಂಭೀರ ಸಮಸ್ಯೆಗಳಿರುವಾಗ ಕೆಲವು ಗಂಡಹೆಂಡತಿಯರಿಗೆ ತಮ್ಮ ಮಧ್ಯೆ ಅಷ್ಟು ಗಾಢ ಪ್ರೀತಿ ಇಲ್ಲವೆಂದು ಅನಿಸಬಹುದು. ಅವರಿಗೆ ಯಾವುದು ಸಹಾಯಮಾಡುತ್ತದೆ? ತತ್ವಗಳ ಮೇಲೆ ಆಧರಿತವಾದ ಪ್ರೀತಿಯೇ. ಇಂಥ ಪ್ರೀತಿ “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ.” ಇಂಥ “ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.” (1 ಕೊರಿಂ. 13:7, 8) ಒಬ್ಬರನ್ನೊಬ್ಬರು ಪ್ರೀತಿಸುವೆವು, ಒಬ್ಬರಿಗೊಬ್ಬರು ನಿಷ್ಠರಾಗಿರುವೆವು ಎಂದು ಮದುವೆ ದಿನದಂದು ಮಾತುಕೊಟ್ಟದ್ದನ್ನು ದಂಪತಿ ನೆನಪಿಸಿಕೊಳ್ಳಬೇಕು. ಇದು ಯೆಹೋವನ ಸಹಾಯ ಕೋರಲು ಮತ್ತು ಯಾವುದೇ ಸಮಸ್ಯೆಯನ್ನು ಒಟ್ಟಾಗಿ ಬಗೆಹರಿಸಲು ಅವರನ್ನು ಪ್ರೇರಿಸುವುದು.

4, 5. (ಎ) ಕುಟುಂಬದ ಶಿರಸ್ಸಾಗಿ ಗಂಡನ ಜವಾಬ್ದಾರಿಯೇನು? (ಬಿ) ಶಿರಸ್ಸುತನದ ಬಗ್ಗೆ ಹೆಂಡತಿಯ ಅಭಿಪ್ರಾಯ ಏನಾಗಿರಬೇಕು? (ಸಿ) ಒಂದು ದಂಪತಿ ಯಾವ ಹೊಂದಾಣಿಕೆಗಳನ್ನು ಮಾಡಬೇಕಾಯಿತು?

4 ಗಂಡಹೆಂಡತಿಯ ಜವಾಬ್ದಾರಿಗಳನ್ನು ಪೌಲ ಹೀಗೆ ವಿವರಿಸಿದನು: “ಕರ್ತನಿಗೆ ಹೇಗೋ ಹಾಗೆಯೇ ಹೆಂಡತಿಯರು ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿರಲಿ, ಏಕೆಂದರೆ ಕ್ರಿಸ್ತನು ಸಭೆಯೆಂಬ ದೇಹದ ರಕ್ಷಕನಾಗಿದ್ದು ಅದರ ಶಿರಸ್ಸಾಗಿರುವಂತೆಯೇ ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ.” (ಎಫೆ. 5:22, 23) ಹೆಂಡತಿಗಿಂತ ಗಂಡ ಶ್ರೇಷ್ಠನು, ಉತ್ತಮ ಎಂದು ಇದರರ್ಥವಲ್ಲ. ಹೆಂಡತಿಯ ಅಮೂಲ್ಯ ಪಾತ್ರದ ಬಗ್ಗೆ ಯೆಹೋವನೇ ಹೇಳಿದ್ದು: “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು.” (ಆದಿ. 2:18) ಗಂಡ ಕುಟುಂಬದ ಒಳ್ಳೇ ಶಿರಸ್ಸಾಗಿರಲು ಹೆಂಡತಿ ಸಹಾಯಮಾಡಬೇಕು. ಗಂಡನು ‘ಸಭೆಯ ಶಿರಸ್ಸಾಗಿರುವ’ ಕ್ರಿಸ್ತನು ತೋರಿಸಿದಂಥ ಪ್ರೀತಿಯನ್ನು ತೋರಿಸುವಾಗ ಹೆಂಡತಿಗೆ ತುಂಬ ಸಂತೋಷ ಮತ್ತು ಸುರಕ್ಷಿತಭಾವ ಇರುತ್ತದೆ. ಅವನಿಗೆ ಗೌರವ, ಬೆಂಬಲ ಕೊಡಲು ಆಕೆಗೆ ತುಂಬ ಸುಲಭವಾಗುತ್ತದೆ.

5 ಫ್ರೆಡ್‌ ಎಂಬವನ ಹೆಂಡತಿ ಕ್ಯಾತಿ [1] ಹೇಳುವುದು: “ಮದುವೆ ಮುಂಚೆ ನಾನು ಸ್ವತಂತ್ರಳಾಗಿದ್ದು ನನ್ನನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆದರೆ ಮದುವೆಯಾದ ಮೇಲೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಅಂದರೆ ಗಂಡನ ಮೇಲೆ ಅವಲಂಬಿಸಲು ಕಲಿಯಬೇಕಾಯಿತು. ಇದು ಸುಲಭವಲ್ಲ. ಆದರೂ ಯೆಹೋವನು ಬಯಸುವಂಥ ರೀತಿಯಲ್ಲಿ ವಿಷಯಗಳನ್ನು ಮಾಡುವುದರಿಂದ ಗಂಡಹೆಂಡತಿಯಾಗಿ ಹೆಚ್ಚು ಆಪ್ತರಾಗಿದ್ದೇವೆ.” ಫ್ರೆಡ್‌ ಹೇಳುವುದು: “ನಿರ್ಣಯಗಳನ್ನು ಮಾಡುವುದೆಂದರೆ ನನಗೆ ಮೊದಲೇ ತುಂಬ ಕಷ್ಟವಾಗಿತ್ತು. ಮದುವೆಯಾದ ಮೇಲಂತೂ ಇನ್ನೂ ಕಷ್ಟವಾಯಿತು. ಏಕೆಂದರೆ ನಮ್ಮಿಬ್ಬರ ಅಭಿಪ್ರಾಯ, ಅನಿಸಿಕೆಗಳನ್ನು ಮನಸ್ಸಿನಲ್ಲಿಟ್ಟು ನಿರ್ಣಯಗಳನ್ನು ಮಾಡಬೇಕಲ್ಲಾ. ಆದರೆ ಪ್ರಾರ್ಥನೆಯಲ್ಲಿ ಯೆಹೋವನ ಮಾರ್ಗದರ್ಶನ ಕೋರುತ್ತೇನೆ. ನನ್ನ ಹೆಂಡತಿಗೆ ಏನು ಹೇಳಲಿಕ್ಕಿದೆಯೊ ಅದನ್ನು ಗಮನಕೊಟ್ಟು ಕೇಳುತ್ತೇನೆ. ಹಾಗಾಗಿ ದಿನ ಹೋದ ಹಾಗೆ ನಿರ್ಣಯಗಳನ್ನು ಮಾಡುವುದು ಸುಲಭವಾಗುತ್ತಿದೆ. ಈಗಂತೂ ನಾವು ಜೊತೆಯಾಗಿ ಕೆಲಸಮಾಡುತ್ತೇವೆ.”

6. ಗಂಡಹೆಂಡತಿ ಮಧ್ಯೆ ಸಮಸ್ಯೆಗಳೇಳುವಾಗ “ಐಕ್ಯದ ಪರಿಪೂರ್ಣ ಬಂಧ” ಆಗಿರುವ ಪ್ರೀತಿಯನ್ನು ಹೇಗೆ ತೋರಿಸಬೇಕು?

6 ಗಂಡಹೆಂಡತಿ “ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿ”ಸಿದರೆ ಅವರ ವಿವಾಹಬಂಧ ಗಟ್ಟಿಯಾಗಿರುತ್ತದೆ. ಇಬ್ಬರೂ ಅಪರಿಪೂರ್ಣರು, ಹಾಗಾಗಿ ಖಂಡಿತ ತಪ್ಪುಗಳನ್ನು ಮಾಡುತ್ತಾರೆ. ಆಗ ಅವರು ಆ ತಪ್ಪುಗಳಿಂದ ಕಲಿಯಬಹುದು, ಕ್ಷಮಿಸಲು ಕಲಿಯಬಹುದು ಮತ್ತು ಬೈಬಲ್‌ ತತ್ವಗಳ ಮೇಲೆ ಆಧರಿತವಾದ ಪ್ರೀತಿ ತೋರಿಸಬಹುದು. ಈ ಪ್ರೀತಿ “ಐಕ್ಯದ ಪರಿಪೂರ್ಣ ಬಂಧವಾಗಿದೆ.” (ಕೊಲೊ. 3:13, 14) ಗಂಡಹೆಂಡತಿ ತಾಳ್ಮೆ ದಯೆ ತೋರಿಸುವ ಮತ್ತು “ಅನ್ಯಾಯದ ಲೆಕ್ಕವನ್ನು ಇಟ್ಟು”ಕೊಳ್ಳದಿರುವ ಮೂಲಕ ಇಂಥ ಪ್ರೀತಿ ತೋರಿಸಬೇಕು. (1 ಕೊರಿಂ. 13:4, 5) ಮನಸ್ತಾಪಗಳನ್ನು ಸಾಧ್ಯವಾದಷ್ಟು ಬೇಗ, ದಿನ ಕೊನೆಗೊಳ್ಳುವ ಮುಂಚೆ ಬಗೆಹರಿಸಲು ಪ್ರಯತ್ನಿಸಬೇಕು. (ಎಫೆ. 4:26, 27) “ತಪ್ಪಾಯಿತು, ನಿನ್ನ ಮನಸ್ಸನ್ನು ನೋಯಿಸಿದಕ್ಕೆ ಕ್ಷಮಿಸು” ಎಂದು ಹೇಳಲು ದೀನಭಾವ, ಧೈರ್ಯ ಬೇಕು. ಇದರಿಂದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯವಾಗುತ್ತದೆ. ಆಪ್ತತೆ ಹೆಚ್ಚಾಗುತ್ತದೆ.

ಕೋಮಲಭಾವ ತೋರಿಸುವ ವಿಶೇಷ ಅಗತ್ಯ

7, 8. (ಎ) ವಿವಾಹದಲ್ಲಿ ಲೈಂಗಿಕ ಸಂಬಂಧದ ಬಗ್ಗೆ ಬೈಬಲ್‌ ಯಾವ ಬುದ್ಧಿವಾದ ಕೊಡುತ್ತದೆ? (ಬಿ) ಗಂಡಹೆಂಡತಿ ಏಕೆ ಕೋಮಲತೆ ತೋರಿಸಬೇಕು?

7 ಗಂಡಹೆಂಡತಿ ಲೈಂಗಿಕ ಸಂಬಂಧದ ಬಗ್ಗೆ ಸರಿಯಾದ ನೋಟ ಹೊಂದಿರಲು ನೆರವಾಗುವ ಒಳ್ಳೇ ಬುದ್ಧಿವಾದ ಬೈಬಲಿನಲ್ಲಿದೆ. (1 ಕೊರಿಂಥ 7:3-5 ಓದಿ.) ಇಬ್ಬರೂ ಪರಸ್ಪರರ ಭಾವನೆಗಳನ್ನು, ಬೇಕುಬೇಡಗಳನ್ನು ಮನಸ್ಸಿನಲ್ಲಿಡಬೇಕು. ಲೈಂಗಿಕ ಸಂಬಂಧದಲ್ಲಿ ಗಂಡನು ಹೆಂಡತಿಯ ಜೊತೆ ಕೋಮಲತೆಯಿಂದ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಅವಳಿಗೆ ಅದರಿಂದ ಆನಂದ ಸಿಗಲಿಕ್ಕಿಲ್ಲ. ಅವನು ಅವಳ ಜೊತೆ “ಜ್ಞಾನಾನುಸಾರವಾಗಿ” ನಡಕೊಳ್ಳಬೇಕು. (1 ಪೇತ್ರ 3:7) ಸಂಭೋಗಕ್ಕಾಗಿ ಬಲವಂತ ಮಾಡಬಾರದು ಅಥವಾ ತನ್ನ ಹಕ್ಕೆಂದು ಒತ್ತಾಯದಿಂದ ಕೇಳಲೂ ಬಾರದು. ಅದು ಸ್ವಾಭಾವಿಕವಾಗಿ ನಡೆಯಬೇಕು. ಹೆಚ್ಚಾಗಿ ಗಂಡಸರು ಲೈಂಗಿಕವಾಗಿ ಬೇಗ ಉದ್ರೇಕಗೊಳ್ಳುತ್ತಾರೆ ಆದರೆ ಸ್ತ್ರೀಯರಿಗೆ ಹೆಚ್ಚು ಸಮಯ ಹಿಡಿಯುತ್ತದೆ. ಇಬ್ಬರಿಗೂ ಅದು ಭಾವನಾತ್ಮಕವಾಗಿ ಸರಿಯಾದ ಸಮಯವಾಗಿರಬೇಕು.

8 ಗಂಡಹೆಂಡತಿ ಸಂಭೋಗಕ್ಕೆ ಮುಂಚೆ ನಡೆಸುವ ಪ್ರಣಯಚೇಷ್ಟೆಯಲ್ಲಿ ಏನೆಲ್ಲಾ ಕೂಡಿರಬೇಕು ಎಂಬ ವಿಷಯದಲ್ಲಿ ಬೈಬಲಿನಲ್ಲಿ ನಿರ್ದಿಷ್ಟ ನಿಯಮಗಳಿಲ್ಲ. ಆದರೆ ಪ್ರೀತಿ ತೋರಿಸಬೇಕೆಂದು ಅದು ಹೇಳುತ್ತದೆ. (ಪರಮ. 1:2; 2:6) ಈ ವಿಷಯದಲ್ಲಿ ಕ್ರೈಸ್ತ ಗಂಡಹೆಂಡತಿ ಒಬ್ಬರಿಗೊಬ್ಬರು ಕೋಮಲತೆ ತೋರಿಸಬೇಕು.

9. ನಮ್ಮ ವಿವಾಹ ಸಂಗಾತಿಯಲ್ಲದ ವ್ಯಕ್ತಿಯಲ್ಲಿ ಲೈಂಗಿಕ ಆಸಕ್ತಿ ತೋರಿಸುವುದು ತಪ್ಪೇಕೆ?

9 ದೇವರ ಮತ್ತು ನೆರೆಯವರ ಮೇಲೆ ನಮಗೆ ಗಾಢ ಪ್ರೀತಿಯಿರುವಾಗ ನಮ್ಮ ವಿವಾಹ ಬಂಧಕ್ಕೆ ಯಾರೇ ಆಗಲಿ, ಏನೇ ಆಗಲಿ ಕುತ್ತು ತರುವಂತೆ ನಾವು ಬಿಡುವುದಿಲ್ಲ. ಕೆಲವರು ಅಶ್ಲೀಲ ಚಿತ್ರಗಳನ್ನು ನೋಡುವ ಚಟಕ್ಕೆ ಬಿದ್ದಿರುವುದರಿಂದ ಅವರ ವಿವಾಹಬಂಧ ದುರ್ಬಲವಾಗಿದೆ, ಮುರಿದುಹೋಗಿದೆ ಸಹ. ಅಶ್ಲೀಲ ಚಿತ್ರಗಳನ್ನು ನೋಡುವ ಯಾವುದೇ ಆಕರ್ಷಣೆಯನ್ನು ಇಲ್ಲವೆ ಬೇರಾವುದೇ ರೀತಿಯ ಅಯೋಗ್ಯ ಲೈಂಗಿಕ ವಿಷಯಗಳಲ್ಲಿನ ಆಸಕ್ತಿಯನ್ನು ಪ್ರತಿರೋಧಿಸಬೇಕು. ನಮ್ಮ ವಿವಾಹ ಸಂಗಾತಿಯಲ್ಲದ ಯಾರೊಂದಿಗೂ ಚೆಲ್ಲಾಟವಾಡಬಾರದು, ಅವರಲ್ಲಿ ಅಂಥ ಭಾವನೆಯನ್ನು ಮೂಡಿಸುವ ಯಾವುದನ್ನೂ ಮಾಡಬಾರದು. ಹಾಗೆ ಮಾಡುವುದು ಖಂಡಿತ ಪ್ರೀತಿಯಲ್ಲ. ನಾವೇನು ಯೋಚಿಸುತ್ತೇವೆ, ಮಾಡುತ್ತೇವೆ ಇದೆಲ್ಲ ದೇವರಿಗೆ ತಿಳಿದಿದೆಯೆಂದು ನೆನಪಿಟ್ಟರೆ ಆತನನ್ನು ಮೆಚ್ಚಿಸುವ, ಸಂಗಾತಿಗೆ ನಿಷ್ಠರಾಗಿ ಉಳಿಯುವ ಆಸೆ ಇನ್ನಷ್ಟು ಬಲಗೊಳ್ಳುವುದು.ಮತ್ತಾಯ 5:27, 28; ಇಬ್ರಿಯ 4:13 ಓದಿ.

ವಿವಾಹ ಜೀವನದಲ್ಲಿ ಸಮಸ್ಯೆಗಳಿರುವಾಗ . . .

10, 11. (ಎ) ವಿಚ್ಛೇದನ ಎಷ್ಟು ಸಾಮಾನ್ಯವಾಗಿಬಿಟ್ಟಿದೆ? (ಬಿ) ಗಂಡಹೆಂಡತಿ ಬೇರೆಬೇರೆಯಾಗಿ ವಾಸಿಸುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ? (ಸಿ) ಬೇರೆಬೇರೆಯಾಗಿ ವಾಸಿಸಲು ಯಾಕೆ ತಟ್ಟನೆ ತೀರ್ಮಾನಕ್ಕೆ ಬರಬಾರದು?

10 ಕೆಲವು ಗಂಡಹೆಂಡತಿಯರು ತಮಗಿರುವ ಗಂಭೀರ ಸಮಸ್ಯೆಗಳನ್ನು ಬಗೆಹರಿಸದಿರುವ ಕಾರಣ ಬೇರೆಬೇರೆಯಾಗಿ ವಾಸಿಸಲು ಇಲ್ಲವೆ ವಿಚ್ಛೇದನ ಪಡೆಯಲು ನಿರ್ಣಯಿಸುತ್ತಾರೆ. ಕೆಲವು ದೇಶಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. ಕ್ರೈಸ್ತ ಸಭೆಯಲ್ಲಿ ಅಷ್ಟೊಂದು ಆಗುವುದಿಲ್ಲ ನಿಜ. ಆದರೂ ವಿವಾಹ ಜೀವನದಲ್ಲಿ ಗಂಭೀರ ಸಮಸ್ಯೆಗಳಿರುವ ಕ್ರೈಸ್ತ ದಂಪತಿಗಳ ಸಂಖ್ಯೆ ಹೆಚ್ಚೆಚ್ಚಾಗುತ್ತಿದೆ.

11 ಬೈಬಲ್‌ ನಮಗೆ ಈ ಸೂಚನೆಗಳನ್ನು ಕೊಡುತ್ತದೆ: “ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಅಗಲಬಾರದು. ಒಂದುವೇಳೆ ಅಗಲಬೇಕಾದರೂ ಅವಳು ಮದುವೆಯಾಗದೇ ಉಳಿಯಲಿ ಅಥವಾ ತನ್ನ ಗಂಡನೊಂದಿಗೆ ಪುನಃ ಸಮಾಧಾನಮಾಡಿಕೊಳ್ಳಲಿ; ಮತ್ತು ಗಂಡನು ತನ್ನ ಹೆಂಡತಿಯನ್ನು ಬಿಡಬಾರದು.” (1 ಕೊರಿಂ. 7:10, 11) ಕೆಲವು ದಂಪತಿಗಳು ತಮ್ಮ ಸಮಸ್ಯೆಗಳು ತುಂಬ ದೊಡ್ಡದು, ಬೇರೆಬೇರೆಯಾಗಿ ವಾಸಿಸಿದರೇ ಒಳ್ಳೇದೆಂದು ನೆನಸುತ್ತಾರೆ. ಆದರೆ ಈ ರೀತಿ ಪ್ರತ್ಯೇಕವಾಗಿ ವಾಸಿಸುವುದು ಒಂದು ಚಿಕ್ಕ ವಿಷಯವಲ್ಲವೆಂದು ಯೇಸು ತೋರಿಸಿದನು. ಅದಕ್ಕಾಗಿ ಆತನು ದೇವರು ಆರಂಭದಲ್ಲಿ ಹೇಳಿದ ಮಾತುಗಳನ್ನು ಉಲ್ಲೇಖಿಸಿ ನಂತರ ಹೀಗೆ ಕೂಡಿಸಿದನು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:3-6; ಆದಿ. 2:24) ಗಂಡಹೆಂಡತಿ ಕೂಡಿ ಬಾಳಬೇಕೆಂದು ಯೆಹೋವನು ಬಯಸುತ್ತಾನೆ. (1 ಕೊರಿಂ. 7:39) ನಾವೇನೇ ಮಾಡಿದರೂ ಯೆಹೋವನಿಗೆ ಲೆಕ್ಕಕೊಡಬೇಕೆಂದು ನಾವೆಲ್ಲರೂ ನೆನಪಿಡಬೇಕು. ಇದು ಸಮಸ್ಯೆಗಳು ತುಂಬ ಗಂಭೀರವಾಗುವ ಮುಂಚೆಯೇ ಬೇಗನೆ ಬಗೆಹರಿಸಲು ನೆರವುನೀಡುತ್ತದೆ.

12. ಯಾವ ಸಮಸ್ಯೆಗಳಿಂದಾಗಿ ಗಂಡಹೆಂಡಿರು ಬೇರೆಬೇರೆಯಾಗಿ ವಾಸಿಸಲು ನಿರ್ಣಯಿಸುತ್ತಾರೆ?

12 ಕೆಲವು ದಂಪತಿಗಳ ಮಧ್ಯೆ ಏಕೆ ಗಂಭೀರ ಸಮಸ್ಯೆಗಳೇಳುತ್ತವೆ? ಕೆಲವರ ವೈವಾಹಿಕ ಜೀವನ ಅವರು ಕನಸು ಕಂಡಂತೆ ಇರುವುದಿಲ್ಲ. ಹಾಗಾಗಿ ಅವರಿಗೆ ನಿರಾಶೆ ಆಗುತ್ತದೆ, ಸಿಟ್ಟುಗೊಳ್ಳುತ್ತಾರೆ. ಅಲ್ಲದೆ, ಗಂಡಹೆಂಡತಿ ಬೆಳೆದುಬಂದ ರೀತಿ, ಅವರ ಸ್ವಭಾವ ಎಷ್ಟೋ ಸಲ ಬೇರೆಬೇರೆ ಆಗಿರುವುದರಿಂದಲೂ ಸಮಸ್ಯೆಗಳು ಏಳುತ್ತವೆ. ಅತ್ತೆಮಾವಂದಿರೊಟ್ಟಿಗೆ ಒಗ್ಗದಿರುವುದು, ಮತ್ತು ಹಣ ಖರ್ಚುಮಾಡುವ, ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳೂ ಸಮಸ್ಯೆಗೆ ಕಾರಣವಾಗುತ್ತವೆ. ಸಂತೋಷದ ವಿಷಯವೇನೆಂದರೆ ಹೆಚ್ಚಿನ ಕ್ರೈಸ್ತ ದಂಪತಿಗಳು ದೇವರ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುತ್ತಾರೆ.

13. ಗಂಡಹೆಂಡತಿ ಬೇರೆಬೇರೆಯಾಗಿ ವಾಸಿಸಲು ಯೋಗ್ಯವಾದ ಕಾರಣಗಳಾವವು?

13 ಬೇರೆಬೇರೆಯಾಗಿ ವಾಸಮಾಡಲು ದಂಪತಿಗೆ ಯೋಗ್ಯ ಕಾರಣಗಳೂ ಇವೆ. ತೀರ ಕಠಿನ ಪರಿಸ್ಥಿತಿಗಳಲ್ಲಿ ಅಂದರೆ ಗಂಡ ಬೇಕುಬೇಕೆಂದೇ ಜೀವನಾವಶ್ಯಕತೆಗಳನ್ನು ಒದಗಿಸದಿದ್ದಾಗ, ಸಂಗಾತಿ ಕೊಡುವ ಹಿಂಸೆಯಿಂದ ಆರೋಗ್ಯ ಅಥವಾ ಜೀವಕ್ಕೆ ಅಪಾಯ ಇರುವಾಗ, ದೇವರ ಸೇವೆಮಾಡಲು ಸಂಗಾತಿ ಅಸಾಧ್ಯವನ್ನಾಗಿ ಮಾಡುವಾಗ ಕೆಲವರು ಪ್ರತ್ಯೇಕವಾಗಿದ್ದಾರೆ. ಗಂಭೀರ ಸಮಸ್ಯೆಗಳಿರುವಾಗ ದಂಪತಿಗಳು ಹಿರಿಯರ ಸಹಾಯ ಕೇಳಬೇಕು. ಹಿರಿಯರಿಗೆ ತುಂಬ ಅನುಭವವಿದೆ, ದೇವರ ಬುದ್ಧಿವಾದವನ್ನು ಅನ್ವಯಿಸಲು ಸಹಾಯಮಾಡಬಲ್ಲರು. ಗಂಡಹೆಂಡತಿ ಯೆಹೋವನ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. ಆಗ ಬೈಬಲ್‌ ತತ್ವಗಳನ್ನು ಅನ್ವಯಿಸಲು ಮತ್ತು ಕ್ರೈಸ್ತ ಗುಣಗಳನ್ನು ತೋರಿಸಲು ಪವಿತ್ರಾತ್ಮ ಸಹಾಯಮಾಡಬಲ್ಲದು.—ಗಲಾ. 5:22,23. [2]

14. ಅವಿಶ್ವಾಸಿ ಸಂಗಾತಿಗಳಿರುವ ಕ್ರೈಸ್ತರಿಗೆ ಬೈಬಲ್‌ ಏನು ಹೇಳುತ್ತದೆ?

14 ವಿವಾಹ ಸಂಗಾತಿ ಯೆಹೋವನ ಆರಾಧಕರಲ್ಲದಿದ್ದರೂ ಕ್ರೈಸ್ತರು ಅವರ ಜೊತೆ ಬಾಳ್ವೆ ನಡೆಸಲು ಒಳ್ಳೇ ಕಾರಣಗಳಿವೆಯೆಂದು ಬೈಬಲ್‌ ತೋರಿಸುತ್ತದೆ. (1 ಕೊರಿಂಥ 7:12-14 ಓದಿ.) ದಂಪತಿಯಲ್ಲಿ ಒಬ್ಬರು ದೇವರ ಸೇವಕರಾಗಿದ್ದರೆ ಅವರಿಂದಾಗಿ ಅವರ ಅವಿಶ್ವಾಸಿ ಸಂಗಾತಿ ಕೂಡ ‘ಪವಿತ್ರೀಕರಿಸಲ್ಪಡುತ್ತಾರೆ.’ ಅವರ ಎಳೆಯ ಮಕ್ಕಳನ್ನು ಕೂಡ ‘ಪವಿತ್ರರೆಂದು’ ಎಣಿಸಲಾಗುತ್ತದೆ, ಹಾಗಾಗಿ ಅವರಿಗೆ ದೇವರ ಸಂರಕ್ಷಣೆಯಿರುತ್ತದೆ. ಪೌಲನು ಕ್ರೈಸ್ತ ಸಂಗಾತಿಗಳಿಗೆ ಪ್ರೋತ್ಸಾಹ ನೀಡಿದ್ದು: “ಹೆಂಡತಿಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು? ಗಂಡನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು?” (1 ಕೊರಿಂ. 7:16) ಅನೇಕ ಕ್ರೈಸ್ತ ಗಂಡಂದಿರು ಮತ್ತು ಹೆಂಡತಿಯರು ತಮ್ಮ ಅವಿಶ್ವಾಸಿ ಸಂಗಾತಿಗಳಿಗೆ ಯೆಹೋವನ ಸೇವಕರಾಗಲು ಸಹಾಯಮಾಡಿದ ಉದಾಹರಣೆಗಳಿವೆ.

15, 16. (ಎ) ದೇವರ ಸೇವಕರಲ್ಲದ ಗಂಡಂದಿರಿರುವ ಕ್ರೈಸ್ತ ಹೆಂಡತಿಯರಿಗೆ ಬೈಬಲ್‌ ಯಾವ ಸಲಹೆ ಕೊಡುತ್ತದೆ? (ಬಿ) “ಅವಿಶ್ವಾಸಿಯು ಅಗಲಿಹೋಗಬೇಕೆಂದಿದ್ದರೆ” ಕ್ರೈಸ್ತ ಸಂಗಾತಿ ಏನು ಮಾಡಬೇಕು?

15 ಕ್ರೈಸ್ತ ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕೆಂದು ಅಪೊಸ್ತಲ ಪೇತ್ರನು ಹೇಳಿದನು. ಆಗ ಆ ಗಂಡಂದಿರಲ್ಲಿ “ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.” ಹೆಂಡತಿ ದಿನವಿಡೀ ತನ್ನ ನಂಬಿಕೆಗಳ ಬಗ್ಗೆ ಗಂಡನೊಟ್ಟಿಗೆ ಮಾತಾಡುತ್ತಾ ಇರಬಾರದು. ಬದಲಿಗೆ “ದೇವರ ದೃಷ್ಟಿಯಲ್ಲಿ ಅತಿ ಬೆಲೆಯುಳ್ಳ ಶಾಂತ ಮತ್ತು ಸೌಮ್ಯಭಾವ”ವನ್ನು ತೋರಿಸಬೇಕು. ಆಗ ಅವಳ ಗಂಡ ಸತ್ಯವನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚು.—1 ಪೇತ್ರ 3:1-4.

16 ಆದರೆ ಅವಿಶ್ವಾಸಿ ಸಂಗಾತಿಯು ಪ್ರತ್ಯೇಕವಾಗಿ ವಾಸಿಸಲು ನಿರ್ಣಯಿಸಿದರೆ ಆಗೇನು? ಬೈಬಲ್‌ ಹೇಳುವುದು: “ಒಂದುವೇಳೆ ಅವಿಶ್ವಾಸಿಯು ಅಗಲಿಹೋಗಬೇಕೆಂದಿದ್ದರೆ ಅಗಲಿಹೋಗಲಿ. ಅಂಥ ಸನ್ನಿವೇಶದಲ್ಲಿ ಒಬ್ಬ ಸಹೋದರನಾಗಲಿ ಸಹೋದರಿಯಾಗಲಿ ಅಧೀನತೆಗೆ ಬದ್ಧರಲ್ಲ. ದೇವರು ನಿಮ್ಮನ್ನು ಶಾಂತಿಗೆ ಕರೆದಿದ್ದಾನೆ.” (1 ಕೊರಿಂ. 7:15) ಅವಿಶ್ವಾಸಿ ಸಂಗಾತಿ ಪ್ರತ್ಯೇಕವಾಗಿ ವಾಸಿಸುವುದರಿಂದ ಕ್ರೈಸ್ತ ಸಂಗಾತಿಗೆ ಸ್ವಲ್ಪ ಶಾಂತಿ ಸಿಗಬಹುದಾದರೂ ಕ್ರೈಸ್ತ ಸಂಗಾತಿ ಇನ್ನೊಂದು ಮದುವೆಯಾಗುವಂತಿಲ್ಲ ಎಂದು ಬೈಬಲ್‌ ಹೇಳುತ್ತದೆ. ಆದರೆ ತನ್ನ ಜೊತೆ ಬಾಳುವಂತೆ ಅವಿಶ್ವಾಸಿ ಸಂಗಾತಿಯನ್ನು ಒತ್ತಾಯ ಮಾಡಬೇಕಾಗಿಲ್ಲ. ಮುಂದೆ ಯಾವತ್ತಾದರೂ ಆ ಸಂಗಾತಿ ವಾಪಸ್‌ ಬಂದು, ವಿವಾಹ ಸಂಬಂಧವನ್ನು ಮುಂದುವರಿಸಲು ನಿರ್ಣಯಿಸಬಹುದು. ಯೆಹೋವನ ಸೇವಕರಾಗಲೂಬಹುದು.

ವಿವಾಹ ಜೀವನದಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು?

ಯೆಹೋವನ ಆರಾಧನೆಗೆ ನಾವು ಮೊದಲ ಸ್ಥಾನ ಕೊಟ್ಟರೆ ನಮ್ಮ ವಿವಾಹ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ (ಪ್ಯಾರ 17 ನೋಡಿ)

17. ಕ್ರೈಸ್ತ ದಂಪತಿಗಳು ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು?

17 ನಾವು “ಕಡೇ ದಿವಸಗಳ” ಕೊನೆಭಾಗದಲ್ಲಿ ಜೀವಿಸುತ್ತಿರುವುದರಿಂದ “ನಿಭಾಯಿಸಲು ಕಷ್ಟಕರವಾದ ಕಠಿನಕಾಲ”ವನ್ನು ಅನುಭವಿಸುತ್ತೇವೆ. (2 ತಿಮೊ. 3:1-5) ಆದ್ದರಿಂದ ನಮಗೆ ಯೆಹೋವನ ಜೊತೆ ಬಲವಾದ ಸಂಬಂಧ ತುಂಬ ಅಗತ್ಯ. ಅದು ನಮಗೆ ಸಂರಕ್ಷಣೆಯಾಗಿದೆ. ಪೌಲನು ಬರೆದದ್ದು: “ಉಳಿದಿರುವ ಸಮಯವು ಕೊಂಚವೇ ಆಗಿದೆ . . . ಆದುದರಿಂದ ಇನ್ನು ಮೇಲೆ ಹೆಂಡತಿಯಿರುವವರು ಹೆಂಡತಿಯಿಲ್ಲದವರಂತೆಯೂ . . . ಲೋಕವನ್ನು ಅನುಭೋಗಿಸುವವರು ಅದನ್ನು ಪೂರ್ಣವಾಗಿ ಅನುಭೋಗಿಸದವರಂತೆಯೂ ಇರಲಿ.” (1 ಕೊರಿಂ. 7:29-31) ಪೌಲನ ಮಾತಿನ ಅರ್ಥ ಮದುವೆಯಾದವರು ಸಂಗಾತಿಗಳನ್ನು ಅಲಕ್ಷಿಸಬೇಕೆಂದಲ್ಲ. ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿರುವುದರಿಂದ ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಡಬೇಕೆಂದು ಹೇಳುತ್ತಿದ್ದನು.—ಮತ್ತಾ. 6:33.

18. ಸಂತೋಷಭರಿತ, ಯಶಸ್ವಿ ವಿವಾಹ ಜೀವನ ನಡೆಸಲು ಕ್ರೈಸ್ತರು ಏನು ಮಾಡಬೇಕು?

18 ಈಗಿನ ಕಷ್ಟಕರ ಸಮಯಗಳಲ್ಲಿ ಅನೇಕ ವಿವಾಹಬಂಧಗಳು ಮುರಿದು ಬೀಳುತ್ತಿರುವುದನ್ನು ನೋಡುತ್ತೇವೆ. ಹೀಗಿರುವಾಗ ಸಂತೋಷ ತುಂಬಿದ, ಯಶಸ್ವಿ ವಿವಾಹ ಜೀವನ ನಡೆಸಲು ಸಾಧ್ಯವೇ? ಖಂಡಿತ! ಅದಕ್ಕಾಗಿ ನಾವು ಯೆಹೋವನಿಗೆ, ಆತನ ಜನರಿಗೆ ಹತ್ತಿರವಾಗಿರಬೇಕು, ಬೈಬಲ್‌ ತತ್ವಗಳನ್ನು ಅನ್ವಯಿಸಬೇಕು ಮತ್ತು ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನ ಸ್ವೀಕರಿಸಬೇಕು. ಹೀಗೆ ಮಾಡಿದರೆ, “ದೇವರು ಒಟ್ಟುಗೂಡಿಸಿ”ರುವ ವಿವಾಹಬಂಧಕ್ಕೆ ಗೌರವ ತೋರಿಸುತ್ತೇವೆ.—ಮಾರ್ಕ 10:9.

^ [1] (ಪ್ಯಾರ 5) ಹೆಸರುಗಳನ್ನು ಬದಲಾಯಿಸಲಾಗಿದೆ.

^ [2] (ಪ್ಯಾರ 13) “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದಲ್ಲಿ “ವಿವಾಹ ವಿಚ್ಛೇದನ ಮತ್ತು ಪ್ರತ್ಯೇಕವಾಸದ ವಿಷಯದಲ್ಲಿ ಬೈಬಲಿನ ದೃಷ್ಟಿಕೋನ” ಪುಟ 251-253.