ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರೆಯವರಿಗೆ ತರಬೇತಿ ಕೊಡಿ

ಬೇರೆಯವರಿಗೆ ತರಬೇತಿ ಕೊಡಿ

“ನಾನು ನಿಮಗೆ ಸುಬೋಧೆಯನ್ನು ಮಾಡುವೆನು.”—ಜ್ಞಾನೋ. 4:2.

ಗೀತೆಗಳು: 93, 96

1, 2. ದೇವಪ್ರಭುತ್ವ ನೇಮಕಗಳನ್ನು ಸ್ವೀಕರಿಸಲು ನಾವು ಇತರರಿಗೆ ಏಕೆ ತರಬೇತಿ ಕೊಡಬೇಕು?

ದೇವರ ರಾಜ್ಯದ ಕುರಿತು ಸಾರಲು ಯೇಸು ತುಂಬ ಪರಿಶ್ರಮಪಟ್ಟನು. ತನ್ನ ಶಿಷ್ಯರಿಗೆ ತರಬೇತಿಕೊಡಲು ಸಹ ತುಂಬ ಸಮಯ ಕಳೆದನು. ದೇವಜನರಿಗೆ ಕಲಿಸುವುದು, ಅವರನ್ನು ನೋಡಿಕೊಳ್ಳುವುದು ಹೇಗೆಂದು ತೋರಿಸಿಕೊಟ್ಟನು. ಆ ಶಿಷ್ಯರು ತಮ್ಮ ಕುರಿಗಳನ್ನು ಚೆನ್ನಾಗಿ ಪರಾಮರಿಸುವಂಥ ಕುರುಬರಂತಾಗಲು ಕಲಿತರು. (ಮತ್ತಾ. 10:5-7) ಫಿಲಿಪ್ಪನು ಸಾರುವ ಕೆಲಸದಲ್ಲಿ ನಿರತನಾಗಿದ್ದನು ಮಾತ್ರವಲ್ಲ ತನ್ನ ಹೆಣ್ಮಕ್ಕಳು ಸಹ ಅದೇ ಕೆಲಸ ಮಾಡುವಂತೆ ತರಬೇತಿ ಕೊಟ್ಟನು. (ಅ. ಕಾ. 21:8,9) ಇಂದು ನಾವು ಸಹ ಇತರರಿಗೆ ತರಬೇತಿ ಕೊಡುವ ಅಗತ್ಯವಿದೆ. ಏಕೆ?

2 ಲೋಕದೆಲ್ಲೆಡೆ ಇರುವ ಸಭೆಗಳಲ್ಲಿ ದೀಕ್ಷಾಸ್ನಾನವಾಗದ ಅನೇಕಾನೇಕ ಹೊಸಬರಿದ್ದಾರೆ. ಇವರಿಗೆ ತರಬೇತಿಯ ಅಗತ್ಯವಿದೆ. ಅವರು ವೈಯಕ್ತಿಕವಾಗಿ ಬೈಬಲನ್ನು ಓದಿ ಅಧ್ಯಯನ ಮಾಡುವುದು ಏಕೆ ಒಳ್ಳೇದೆಂದು ತಿಳಿಯಲು ನಾವು ಸಹಾಯ ಮಾಡಬೇಕು. ಸುವಾರ್ತೆ ಸಾರಲು ಮತ್ತು ಬೋಧಿಸಲು ಸಹ ಅವರಿಗೆ ತರಬೇತಿ ಕೊಡಬೇಕು. ಇತ್ತೀಚೆಗೆ ದೀಕ್ಷಾಸ್ನಾನ ಪಡೆದಿರುವ ಸಹೋದರರಿಗೆ ತರಬೇತಿ ಬೇಕು ಏಕೆಂದರೆ ಸಮಯಾನಂತರ ಅವರು ಸಹಾಯಕ ಸೇವಕರಾಗಿ, ಹಿರಿಯರಾಗಿ ಸೇವೆಮಾಡಬಹುದು. ಹಾಗಾಗಿ ಸಭೆಯಲ್ಲಿ ಪ್ರೌಢ ಕ್ರೈಸ್ತರು “ಸುಬೋಧೆ” ಮೂಲಕ ಅಂದರೆ ಒಳ್ಳೆಯ ತರಬೇತಿ ಕೊಡುವ ಮೂಲಕ ಹೊಸಬರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಲು ತುಂಬ ನೆರವಾಗಬಲ್ಲರು.—ಜ್ಞಾನೋ. 4:2.

ಬೈಬಲನ್ನು ಅಧ್ಯಯನ ಮಾಡುವುದು ಹೇಗೆಂದು ಹೊಸಬರಿಗೆ ಕಲಿಸಿರಿ

3, 4. (ಎ) ಬೈಬಲಿನ ಅಧ್ಯಯನ ಮಾಡಿದರೆ ಸೇವೆಯು ಹೆಚ್ಚು ಫಲದಾಯಕ ಆಗಿರುವುದೆಂದು ಪೌಲನು ಹೇಗೆ ತೋರಿಸಿದನು? (ಬಿ) ನಮ್ಮ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಬೈಬಲ್‌ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸುವ ಮೊದಲು ನಾವೇನು ಮಾಡಬೇಕು?

3 ಯೆಹೋವನ ಚಿತ್ತವೇನೆಂದು ಕಲಿಯಲು ನಾವು ಪ್ರತಿಯೊಬ್ಬರೂ ಬೈಬಲನ್ನು ಓದಬೇಕು, ಅಧ್ಯಯನ ಮಾಡಬೇಕು. ಅಪೊಸ್ತಲ ಪೌಲನು ಇದನ್ನು ಕೊಲೊಸ್ಸೆಯಲ್ಲಿರುವ ತನ್ನ ಸಹೋದರ ಸಹೋದರಿಯರಿಗೆ ವಿವರಿಸುತ್ತಾ ಅಂದದ್ದು: ‘ನೀವು ಸಕಲ ವಿವೇಕ ಮತ್ತು ಆಧ್ಯಾತ್ಮಿಕ ಗ್ರಹಿಕೆಯನ್ನು ಹೊಂದಿ ಆತನ ಚಿತ್ತದ ನಿಷ್ಕೃಷ್ಟ ಜ್ಞಾನದಿಂದ ತುಂಬಿದವರಾಗಬೇಕೆಂದು ಬೇಡಿಕೊಳ್ಳುವುದನ್ನು ನಾವು ನಿಲ್ಲಿಸಿಲ್ಲ.’ ಅವರು ಶಾಸ್ತ್ರಗ್ರಂಥವನ್ನು ಓದುವುದು, ಅಧ್ಯಯನ ಮಾಡುವುದು ಯಾಕೆ ಅಷ್ಟು ಪ್ರಾಮುಖ್ಯವಾಗಿತ್ತು? ಯಾಕೆಂದರೆ ಆಗ ಅವರು ವಿವೇಕವನ್ನು ಪಡೆದು, “ಯೆಹೋವನಿಗೆ ಯೋಗ್ಯರಾಗಿ ನಡೆದು ಆತನನ್ನು ಸಂಪೂರ್ಣವಾಗಿ ಮೆಚ್ಚಿಸು”ವುದು ಹೇಗೆಂದು ಅರ್ಥಮಾಡಿಕೊಳ್ಳಲು ಆಗುತ್ತಿತ್ತು. ಅಲ್ಲದೆ, ಯೆಹೋವನು ಅವರಿಂದ ಬಯಸುವ “ಪ್ರತಿಯೊಂದು ಸತ್ಕಾರ್ಯ”ವನ್ನು ಮಾಡಲು, ವಿಶೇಷವಾಗಿ ಸುವಾರ್ತೆ ಸಾರಲು ನೆರವಾಗಲಿತ್ತು. (ಕೊಲೊ. 1:9, 10) ಹಾಗಾಗಿ ನಾವು ಬೈಬಲನ್ನು ಪ್ರತಿದಿನ ಓದಿ ತಪ್ಪದೇ ಅಧ್ಯಯನ ಮಾಡುವುದರಿಂದ ಯೆಹೋವನ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನೆರವಾಗುತ್ತದೆ. ಇದನ್ನು ನಮ್ಮ ಬೈಬಲ್‌ ವಿದ್ಯಾರ್ಥಿಗೆ ಕಲಿಸಬೇಕು.

4 ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೈಬಲ್‌ ಅಧ್ಯಯನದ ಮೌಲ್ಯವನ್ನು ಅರ್ಥಮಾಡಿಸಬೇಕಾದರೆ ಮೊದಲು ನಾವೇ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುತ್ತಿರಬೇಕು. ನಿಜವೇನೆಂದರೆ, ನಾವು ಬೈಬಲನ್ನು ಪ್ರತಿದಿನ ಓದಿ ಧ್ಯಾನಿಸಿದರೆ ಅದು ನಮಗೆ ನಮ್ಮ ಜೀವಿತದಲ್ಲಿ ಮತ್ತು ಸೇವೆಯಲ್ಲಿ ನೆರವಾಗುವುದು. ಉದಾಹರಣೆಗೆ, ನಾವು ಸಾರುತ್ತಿರುವಾಗ ಯಾರಾದರೂ ಒಂದು ಕಷ್ಟದ ಪ್ರಶ್ನೆ ಕೇಳಿದರೆ ಬೈಬಲನ್ನು ಬಳಸಿ ಉತ್ತರಕೊಡಲು ಶಕ್ತರಾಗುತ್ತೇವೆ. ಅಥವಾ ಯೇಸು, ಪೌಲ, ಮತ್ತು ಇತರರು ತಮ್ಮ ಸೇವೆಯನ್ನು ಯಾವತ್ತೂ ನಿಲ್ಲಿಸಿಬಿಡಲಿಲ್ಲವೆಂದು ಓದುವಾಗ ಕಷ್ಟಕರ ಸನ್ನಿವೇಶದಲ್ಲೂ ನಾವು ಸುವಾರ್ತೆ ಸಾರುತ್ತಾ ಇರಲು ಬೇಕಾದ ಪ್ರೋತ್ಸಾಹ ಸಿಗುತ್ತದೆ. ನಾವು ನಮ್ಮ ಅಧ್ಯಯನದಿಂದ ಏನು ಕಲಿತಿದ್ದೇವೆ ಮತ್ತು ಅದು ನಮಗೆ ಹೇಗೆ ಸಹಾಯಮಾಡಿತೆಂದು ಇತರರಿಗೆ ತಿಳಿಸುವಾಗ ಬೈಬಲನ್ನು ಇನ್ನೂ ಗಾಢವಾಗಿ ಅಧ್ಯಯನ ಮಾಡುವಂತೆ ಅವರನ್ನೂ ಪ್ರೋತ್ಸಾಹಿಸಬಹುದು. ಆಗ ಅವರೂ ಪ್ರಯೋಜನ ಪಡೆಯುವರು.

5. ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ರೂಢಿಯಾಗಿ ಮಾಡಲು ಹೊಸಬರಿಗೆ ನೆರವಾಗುವ ಒಂದು ಸಲಹೆ ಕೊಡಿ.

5 ‘ನನ್ನ ವಿದ್ಯಾರ್ಥಿಯು ತಪ್ಪದೆ ಅಧ್ಯಯನಮಾಡುವಂತೆ ತರಬೇತಿಕೊಡೋದು ಹೇಗೆ?’ ಎಂಬ ಪ್ರಶ್ನೆ ನಿಮಗೆ ಬರಬಹುದು. ನೀವು ಅವರೊಟ್ಟಿಗೆ ಅಧ್ಯಯನ ಮಾಡುತ್ತಿರುವ ಸಾಹಿತ್ಯವನ್ನೇ ಬಳಸಿ ಅಧ್ಯಯನಮಾಡುವುದು ಹೇಗೆಂದು ತೋರಿಸಿ. ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿನ ವಚನಗಳನ್ನು ತೆರೆದುನೋಡಲು, ಪರಿಶಿಷ್ಟದಲ್ಲಿರುವ ಹೆಚ್ಚಿನ ಮಾಹಿತಿಯನ್ನು ಓದಲು ಹೇಳಬಹುದು. ಕೂಟಗಳಲ್ಲಿ ಉತ್ತರಕೊಡಲು ತಯಾರಿಸುವುದು ಹೇಗೆಂದು ಸಹ ತೋರಿಸಿಕೊಡಿ. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನು ಓದಲು ಪ್ರೋತ್ಸಾಹಿಸಿ. ವಾಚ್‌ಟವರ್‌ ಲೈಬ್ರರಿ ಅಥವಾ ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿಯನ್ನು ಬಳಸಿ ಬೈಬಲ್‌ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ವಿಧಾನವನ್ನೂ ತೋರಿಸಬಹುದು. ವೈಯಕ್ತಿಕ ಅಧ್ಯಯನಮಾಡುವ ಈ ಬೇರೆಬೇರೆ ವಿಧಾನಗಳು ಅವನಿಗೆ ಇಷ್ಟವಾಗುವುದು ಮತ್ತು ಹೆಚ್ಚನ್ನು ಕಲಿಯಲು ಬಯಸಬಹುದು.

6. (ಎ) ನಿಮ್ಮ ವಿದ್ಯಾರ್ಥಿಯು ಬೈಬಲನ್ನು ಹೃತ್ಪೂರ್ವಕವಾಗಿ ಪ್ರೀತಿಸುವಂತೆ ಹೇಗೆ ಸಹಾಯಮಾಡಬಹುದು? (ಬಿ) ಇಂಥ ಪ್ರೀತಿಯನ್ನು ಬೆಳೆಸಿದರೆ ಬೈಬಲ್‌ ವಿದ್ಯಾರ್ಥಿಯು ಏನು ಮಾಡುವ ಸಾಧ್ಯತೆಯಿದೆ?

6 ನಾವು ಒಬ್ಬನೊಂದಿಗೆ ಅಧ್ಯಯನ ಮಾಡುವಾಗ ಬೈಬಲ್‌ ಅತಿ ಅಮೂಲ್ಯವೆಂದು ಅವನು ಮನಗಾಣುವಂತೆ ಸಹಾಯಮಾಡಬೇಕು. ಯಾಕೆಂದರೆ ಯೆಹೋವನನ್ನು ಚೆನ್ನಾಗಿ ತಿಳಿಯುವಂತೆ ಅದು ಅವನಿಗೆ ಸಹಾಯಮಾಡುತ್ತದೆ. ಅಧ್ಯಯನ ಮಾಡುವಂತೆ ಅವನನ್ನು ಒತ್ತಾಯಿಸಬಾರದು ಬದಲಿಗೆ ಅಧ್ಯಯನವನ್ನು ಹೇಗೆ ಆನಂದಿಸಬಹುದೆಂದು ಅವನಿಗೆ ತೋರಿಸಬೇಕು. ಅವನು ಎಷ್ಟು ಹೆಚ್ಚಾಗಿ ಬೈಬಲಿನಿಂದ ಕಲಿಯುತ್ತಾನೊ ಅಷ್ಟು ಹೆಚ್ಚಾಗಿ ಅವನಿಗೆ ಕೀರ್ತನೆಗಾರನಂತೆ ಅನಿಸುವುದು. ಕೀರ್ತನೆಗಾರ ಹಾಡಿದ್ದು: “ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ; . . . ಯೆಹೋವನಾದ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ.” (ಕೀರ್ತ. 73:28, ಪವಿತ್ರ ಗ್ರಂಥ ಭಾಷಾಂತರ) ಯೆಹೋವನ ಸಮೀಪಕ್ಕೆ ಬರಲು ಆಶಿಸುವವರಿಗೆ ಆತನ ಆತ್ಮವು ಖಂಡಿತ ಸಹಾಯಮಾಡುವುದು.

ಸಾರಲು, ಕಲಿಸಲು ಹೊಸಬರಿಗೆ ತರಬೇತಿ ಕೊಡಿ

7. ಸುವಾರ್ತೆ ಸಾರುವವರಿಗೆ ಯೇಸು ಹೇಗೆ ತರಬೇತಿ ಕೊಟ್ಟನು? (ಲೇಖನದ ಆರಂಭದ ಚಿತ್ರ ನೋಡಿ.)

7 ಯೇಸು ತನ್ನ ಅಪೊಸ್ತಲರಿಗೆ ತರಬೇತಿಕೊಟ್ಟ ರೀತಿಯಿಂದ ನಾವು ಬಹಳಷ್ಟನ್ನು ಕಲಿಯಬಹುದು. ಆತನು ಸಾರಲು ಹೋದಾಗ ಅವರನ್ನು ತನ್ನ ಜೊತೆ ಕರಕೊಂಡು ಹೋದನು. ಹಾಗಾಗಿ ಆತನು ಜನರಿಗೆ ಬೋಧಿಸಿದ ರೀತಿಯನ್ನು ಅವರು ನೋಡಿದರು. ಹೇಗೆ ಸಾರಬೇಕೆಂಬ ವಿಷಯದಲ್ಲಿ ನಿರ್ದಿಷ್ಟ ಸೂಚನೆಗಳನ್ನು ಸಹ ಯೇಸು ಅವರಿಗೆ ಕೊಟ್ಟನು. (ಮತ್ತಾಯ ಅಧ್ಯಾಯ 10) [1] ಜನರಿಗೆ ಸತ್ಯ ಕಲಿಸುವುದು ಹೇಗೆಂದು ಅಪೊಸ್ತಲರು ಯೇಸುವಿನಿಂದ ಸ್ವಲ್ಪ ಸಮಯದೊಳಗೆ ಕಲಿತರು. (ಮತ್ತಾ. 11:1) ಸೇವೆಯಲ್ಲಿ ನಾವು ಹೊಸಬರಿಗೆ ತರಬೇತು ಕೊಡಬೇಕಾದ ಎರಡು ವಿಷಯಗಳನ್ನು ಈಗ ನೋಡೋಣ.

8, 9. (ಎ) ಯೇಸು ಜನರೊಂದಿಗೆ ಹೇಗೆ ಮಾತಾಡಿದನು? (ಬಿ) ಸಂಭಾಷಣೆ ಮಾಡುವುದರಲ್ಲಿ ಯೇಸುವನ್ನು ಅನುಕರಿಸಲು ಹೊಸ ಪ್ರಚಾರಕರಿಗೆ ಹೇಗೆ ಸಹಾಯ ಮಾಡಬಹುದು?

8 ಜನರೊಂದಿಗೆ ಸಂಭಾಷಣೆ ಮಾಡಿರಿ. ಯೇಸು ಜನರ ಗುಂಪನ್ನು ಉದ್ದೇಶಿಸಿ ಮಾತ್ರ ಮಾತಾಡುತ್ತಿರಲಿಲ್ಲ. ಹೆಚ್ಚಾಗಿ ಒಬ್ಬೊಬ್ಬರೊಂದಿಗೆ ವೈಯಕ್ತಿಕವಾಗಿಯೂ ಮಾತಾಡಿದನು. ಅದೂ ಸ್ನೇಹಪೂರ್ವಕವಾಗಿ ಮಾತಾಡಿದನು. ಉದಾಹರಣೆಗೆ, ಸಿಖರ್‌ ಊರಿನ ಬಾವಿಯ ಬಳಿ ಒಬ್ಬ ಸ್ತ್ರೀಯೊಂದಿಗೆ ಒಳ್ಳೇ ಸಂಭಾಷಣೆ ಮಾಡಿದನು. (ಯೋಹಾ. 4:5-30) ತೆರಿಗೆ ವಸೂಲಿಗಾರನಾದ ಮತ್ತಾಯ ಲೇವಿ ಜೊತೆ ಮಾತಾಡಿದನು. ತನ್ನ ಶಿಷ್ಯನಾಗುವಂತೆ ಕರೆಕೊಟ್ಟನು. ಮತ್ತಾಯನು ಆ ಕರೆಯನ್ನು ಸ್ವೀಕರಿಸಿ, ನಂತರ ಯೇಸುವನ್ನು ಮತ್ತು ಇತರರನ್ನು ತನ್ನ ಮನೆಯಲ್ಲಿ ಊಟಕ್ಕೆ ಆಮಂತ್ರಿಸಿದನು. ಅಲ್ಲಿ ಯೇಸು ಅನೇಕ ಜನರೊಂದಿಗೆ ಮಾತಾಡಿದನು.—ಮತ್ತಾ. 9:9; ಲೂಕ 5:27-39.

9 ನತಾನಯೇಲನೊಂದಿಗೆ ಯೇಸು ಸ್ನೇಹಪೂರ್ವಕವಾಗಿ ಮಾತಾಡಿದನು. ನಜರೇತಿನ ಜನರ ಕುರಿತು ನತಾನಯೇಲನಿಗೆ ಒಳ್ಳೇ ಅಭಿಪ್ರಾಯ ಇರದಿದ್ದರೂ ಅವನೊಂದಿಗೆ ಸಂಭಾಷಿಸಿದನು. ಯೇಸು ಪ್ರೀತಿಯಿಂದ ಮಾತಾಡಿದ ಕಾರಣ ನತಾನಯೇಲನಿಗೆ ನಜರೇತಿನವನಾದ ಯೇಸುವಿನ ಕಡೆಗಿದ್ದ ಅಭಿಪ್ರಾಯ ಬದಲಾಯಿತು. ಆತನಿಂದ ಇನ್ನೂ ಹೆಚ್ಚನ್ನು ಕಲಿಯಲು ಬಯಸಿದನು. (ಯೋಹಾ. 1:46-51) ನಾವು ಕೂಡ ಜನರೊಂದಿಗೆ ಸ್ನೇಹದಿಂದ, ದಯೆಯಿಂದ ಮಾತಾಡಿದರೆ ಅವರು ನಮ್ಮ ಸಂದೇಶಕ್ಕೆ ಕಿವಿಗೊಡುವ ಸಾಧ್ಯತೆ ಹೆಚ್ಚು. [2] ಈ ರೀತಿಯಲ್ಲಿ ಮಾತಾಡಲು ಹೊಸಬರಿಗೆ ಕಲಿಸುವಾಗ ಅವರು ಸೇವೆಯಲ್ಲಿ ಇನ್ನಷ್ಟು ಆನಂದಿಸುವರು.

10-12. (ಎ) ಸುವಾರ್ತೆಯಲ್ಲಿ ಇತರರು ತೋರಿಸಿದ ಆಸಕ್ತಿಯನ್ನು ಯೇಸು ಬೆಳೆಸಿದ್ದು ಹೇಗೆ? (ಬಿ) ಬೈಬಲ್‌ ಸತ್ಯದ ಬೋಧಕರಾಗಿ ತಮ್ಮ ಕೌಶಲಗಳನ್ನು ಬೆಳೆಸಲು ಹೊಸಬರಿಗೆ ಹೇಗೆ ನೆರವು ನೀಡಬಹುದು?

10 ಕೇಳಲು ಮನಸ್ಸಿರುವವರಿಗೆ ಕಲಿಸಿರಿ. ಯೇಸು ತುಂಬ ಕಾರ್ಯಮಗ್ನನಾಗಿದ್ದನು. ಹಾಗಿದ್ದರೂ ಜನರು ಸುವಾರ್ತೆಯಲ್ಲಿ ಆಸಕ್ತಿ ತೋರಿಸಿದಾಗ ಅವರಿಗೆ ಸಮಯ ಕೊಟ್ಟನು, ಅನೇಕ ವಿಷಯಗಳನ್ನು ಕಲಿಸಿದನು. ಉದಾಹರಣೆಗೆ, ಒಂದು ದಿನ ಜನರ ಗುಂಪು ಯೇಸುವಿಗೆ ಕಿವಿಗೊಡಲು ನದೀ ತೀರದಲ್ಲಿ ಒಟ್ಟುಸೇರಿತು. ಆದ್ದರಿಂದ ಯೇಸು ಪೇತ್ರನೊಂದಿಗೆ ಒಂದು ದೋಣಿಯಲ್ಲಿ ಕೂತು ಜನರಿಗೆ ಕಲಿಸಿದನು. ಆಮೇಲೆ ಪೇತ್ರನಿಗೆ ಒಂದು ಪ್ರಾಮುಖ್ಯ ಪಾಠ ಕಲಿಸಲು ಬಯಸಿದನು. ಹಾಗಾಗಿ ಒಂದು ಅದ್ಭುತಮಾಡಿ ಪೇತ್ರನಿಗೆ ರಾಶಿರಾಶಿ ಮೀನು ಸಿಗುವಂತೆ ಮಾಡಿದನು. ಆಮೇಲೆ ಅವನು ಪೇತ್ರನಿಗೆ ಅಂದದ್ದು: “ಇಂದಿನಿಂದ ನೀನು ಮನುಷ್ಯರನ್ನು ಸಜೀವವಾಗಿ ಹಿಡಿಯುವವನಾಗುವಿ.” ಕೂಡಲೇ ಪೇತ್ರ ಮತ್ತು ಅವನೊಂದಿಗೆ ಇದ್ದವರು “ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು” ಯೇಸುವನ್ನು ಹಿಂಬಾಲಿಸಿದರು.—ಲೂಕ 5:1-11.

11 ನಿಕೊದೇಮನೂ ಯೇಸುವಿನಿಂದ ಬಹಳಷ್ಟನ್ನು ಕಲಿಯಲು ಬಯಸಿದನು. ಆದರೆ ಸನ್ಹೇದ್ರಿನಿನ ಸದಸ್ಯನಾಗಿದ್ದ ಅವನಿಗೆ ತಾನು ಯೇಸುವಿನೊಂದಿಗೆ ಮಾತಾಡುವುದನ್ನು ಇತರರು ನೋಡಿದರೆ ಏನನ್ನುವರು ಎಂಬ ಹೆದರಿಕೆಯಿತ್ತು. ಹಾಗಾಗಿ ರಾತ್ರಿಯಲ್ಲಿ ಬಂದು ಯೇಸುವನ್ನು ಭೇಟಿಯಾದನು. ಆದರೆ ಯೇಸು ಅವನನ್ನು ಹಿಂದೆ ಕಳುಹಿಸಲಿಲ್ಲ. ಬದಲಾಗಿ ಅವನೊಂದಿಗೆ ಸಮಯ ಕಳೆದು ಮಹತ್ವದ ಸತ್ಯಗಳನ್ನು ವಿವರಿಸಿದನು. (ಯೋಹಾ. 3:1, 2) ಯೇಸು ಜನರಿಗೆ ಸತ್ಯ ಕಲಿಸಲಿಕ್ಕಾಗಿ ಮತ್ತು ಅವರ ನಂಬಿಕೆಯನ್ನು ಬಲಗೊಳಿಸಲಿಕ್ಕಾಗಿ ಸಮಯ ಕೊಡಲು ಯಾವಾಗಲೂ ಸಿದ್ಧನಿದ್ದನು. ಅದೇ ರೀತಿಯಲ್ಲಿ ನಾವು ಕೂಡ ಜನರನ್ನು ಅವರಿಗೆ ಅನುಕೂಲವಾದ ಸಮಯದಲ್ಲಿ ಭೇಟಿಯಾಗಲು ಸಿದ್ಧರಿರಬೇಕು. ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತಾ ಅವರೊಂದಿಗೆ ಸಮಯ ಕಳೆಯಬೇಕು.

12 ಹೊಸಬರೊಂದಿಗೆ ಸೇವೆಮಾಡುವಾಗ ಆಸಕ್ತಿ ತೋರಿಸುವ ಜನರನ್ನು ಪುನಃ ಭೇಟಿಮಾಡಲು ನಾವು ಕಲಿಸಬಹುದು. ಪುನರ್ಭೇಟಿ, ಬೈಬಲ್‌ ಅಧ್ಯಯನಗಳಿಗೆ ನಮ್ಮೊಂದಿಗೆ ಬರಲು ಆಮಂತ್ರಿಸಬಹುದು. ಆಗ ಬೇರೆಯವರಿಗೆ ಕಲಿಸುವುದು ಹೇಗೆಂದು ಅವರು ಕಲಿತುಕೊಳ್ಳುವರು ಮತ್ತು ಯೆಹೋವನ ಕುರಿತ ಸತ್ಯವನ್ನು ಕಲಿಸುವಾಗ ಸಿಗುವ ಸಂತೋಷವನ್ನು ಅನುಭವಿಸುವರು. ಆಗ ಅವರಿಗೂ ಜನರನ್ನು ಪುನಃ ಭೇಟಿಯಾಗಬೇಕು, ಬೈಬಲ್‌ ಅಧ್ಯಯನ ನಡೆಸಬೇಕು ಎಂಬ ಉತ್ಸಾಹ ಬರುವುದು. ಪುನರ್ಭೇಟಿಯಲ್ಲಿ ಜನರು ಸಿಗದಿದ್ದರೂ ಬಿಟ್ಟುಕೊಡದಿರಲು, ತಾಳ್ಮೆ ತೋರಿಸಲು ಸಹ ಕಲಿಯುವರು.—ಗಲಾ. 5:22; “ ಅವನು ಬಿಟ್ಟುಕೊಡಲಿಲ್ಲ” ಎಂಬ ಚೌಕ ನೋಡಿ.

ಸಹೋದರರ ಸೇವೆಮಾಡಲು ಹೊಸಬರಿಗೆ ತರಬೇತಿ ಕೊಡಿ

13, 14. (ಎ) ಬೇರೆಯವರ ಪರವಾಗಿ ಮಹಾ ತ್ಯಾಗಗಳನ್ನು ಮಾಡಿದ ಬೈಬಲ್‌ ಮಾದರಿಗಳಿಂದ ನೀವೇನು ಕಲಿಯುತ್ತೀರಿ? (ಬಿ) ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಲು ಹೊಸ ಪ್ರಚಾರಕರಿಗೆ ಮತ್ತು ಯುವಕರಿಗೆ ನೀವು ಹೇಗೆಲ್ಲ ತರಬೇತಿ ಕೊಡಬಹುದು?

13 ತನ್ನ ಸೇವಕರು ಒಬ್ಬರನ್ನೊಬ್ಬರು ಸಹೋದರ ಸಹೋದರಿಯರಂತೆ ಪ್ರೀತಿಸಲು, ಒಬ್ಬರು ಇನ್ನೊಬ್ಬರ ಸೇವೆಮಾಡಲು ಯೆಹೋವನು ಬಯಸುತ್ತಾನೆ. (ಲೂಕ 22:24-27; 1 ಪೇತ್ರ 1:22 ಓದಿ.) ಇತರರ ಸೇವೆಮಾಡಲಿಕ್ಕಾಗಿ ಯೇಸು ಸರ್ವಸ್ವವನ್ನು, ತನ್ನ ಜೀವವನ್ನೂ ಕೊಟ್ಟನೆಂದು ಬೈಬಲ್‌ ವಿವರಿಸುತ್ತದೆ. (ಮತ್ತಾ. 20:28) ದೊರ್ಕಳು “ಸತ್ಕ್ರಿಯೆಗಳಲ್ಲಿಯೂ ದಾನಧರ್ಮಗಳಲ್ಲಿಯೂ ಸದಾ ನಿರತಳಾಗಿದ್ದಳು.” (ಅ. ಕಾ. 9:36, 39) ಮರಿಯಳು ರೋಮ್‌ನಲ್ಲಿದ್ದ ತನ್ನ ಸಹೋದರ ಸಹೋದರಿಯರಿಗಾಗಿ “ಬಹಳ ಪ್ರಯಾಸ”ಪಟ್ಟಳು. (ರೋಮ. 16:6) ತಮ್ಮ ಸಹೋದರ ಸಹೋದರಿಯರಿಗಾಗಿ ಒಳ್ಳೇದನ್ನು ಮಾಡುವುದು ತುಂಬ ಮಹತ್ವದ್ದೆಂದು ಹೊಸಬರಿಗೆ ನಾವು ಹೇಗೆ ಕಲಿಸಬಹುದು?

ಜೊತೆ ವಿಶ್ವಾಸಿಗಳನ್ನು ಪ್ರೀತಿಸಲು, ಅವರಿಗೆ ಸಹಾಯಮಾಡಲು ಹೊಸಬರಿಗೆ ತರಬೇತಿಕೊಡಿ (ಪ್ಯಾರ 13, 14 ನೋಡಿ)

14 ವೃದ್ಧರನ್ನು ಅಥವಾ ಅಸ್ವಸ್ಥರನ್ನು ನಾವು ಭೇಟಿಯಾಗುವಾಗ ಹೊಸಬರನ್ನು ನಮ್ಮೊಂದಿಗೆ ಕರಕೊಂಡು ಹೋಗಬಹುದು. ಹೆತ್ತವರು ಇಂಥವರನ್ನು ಭೇಟಿಯಾಗುವಾಗ ಸೂಕ್ತವಿದ್ದಲ್ಲಿ ಮಕ್ಕಳನ್ನು ಕರಕೊಂಡು ಹೋಗಬಹುದು. ವೃದ್ಧರಿಗಾಗಿ ಊಟ ಒದಗಿಸುವ ಅಥವಾ ಮನೆ ದುರಸ್ತಿ ಮಾಡುವ ಅಗತ್ಯವಿದ್ದಲ್ಲಿ ಹಿರಿಯರು ಯುವ ಜನರನ್ನು ಅಥವಾ ಹೊಸಬರನ್ನು ಜೊತೆಯಲ್ಲಿ ಕರಕೊಂಡು ಹೋಗಬಹುದು. ಸಹೋದರ ಸಹೋದರಿಯರು ಒಬ್ಬರನ್ನೊಬ್ಬರು ಹೇಗೆ ನೋಡಿಕೊಳ್ಳುತ್ತಾರೆಂದು ಯುವಜನರು ಮತ್ತು ಹೊಸಬರು ನೋಡುವಾಗ ಅವರೂ ಅದನ್ನೇ ಮಾಡಲು ಕಲಿಯುವರು. ಉದಾಹರಣೆಗೆ, ಗ್ರಾಮೀಣ ಕ್ಷೇತ್ರದಲ್ಲಿ ಸಾರುವಾಗ ಒಬ್ಬ ಹಿರಿಯನು ಅಲ್ಲಿನ ಸಹೋದರರನ್ನು ಕ್ರಮವಾಗಿ ಭೇಟಿಮಾಡಿ ಕ್ಷೇಮವಿಚಾರಿಸುತ್ತಿದ್ದನು. ಆ ಹಿರಿಯನೊಂದಿಗೆ ಆಗಾಗ ಹೋದ ಒಬ್ಬ ಯುವ ಸಹೋದರನು ಜೊತೆ ವಿಶ್ವಾಸಿಗಳಿಗೆ ಸಹಾಯ ನೀಡುವುದು ಹೇಗೆಂದು ಈ ಉತ್ತಮ ಮಾದರಿಯಿಂದ ಕಲಿತನು.—ರೋಮ. 12:10.

15. ಸಭೆಯಲ್ಲಿರುವ ಪುರುಷರ ಪ್ರಗತಿಯಲ್ಲಿ ಹಿರಿಯರು ಆಸಕ್ತಿ ತೋರಿಸುವುದು ಏಕೆ ಪ್ರಾಮುಖ್ಯ?

15 ದೇವರ ವಾಕ್ಯವನ್ನು ಸಭೆಗೆ ಕಲಿಸುವ ಜವಾಬ್ದಾರಿಯನ್ನು ಯೆಹೋವನು ಪುರುಷರಿಗೆ ಕೊಟ್ಟಿದ್ದಾನೆ. ಆದ್ದರಿಂದ ಭಾಷಣಗಳನ್ನು ಕೊಡುವಾಗ ಸರಿಯಾಗಿ ಕಲಿಸುವುದು ಹೇಗೆಂದು ಸಹೋದರರು ಕಲಿಯುವುದು ಪ್ರಾಮುಖ್ಯ. ನೀವು ಹಿರಿಯರಾಗಿದ್ದರೆ ಸಹಾಯಕ ಸೇವಕನೊಬ್ಬನು ತನ್ನ ಭಾಷಣವನ್ನು ಪ್ರ್ಯಾಕ್ಟಿಸ್‌ ಮಾಡುವಾಗ ಕಿವಿಗೊಡಬಹುದು ಮತ್ತು ಪ್ರಗತಿಮಾಡುವಂತೆ ನೆರವಾಗಬಹುದು.—ನೆಹೆ. 8:8. [3]

16, 17. (ಎ) ತಿಮೊಥೆಯನ ಪ್ರಗತಿಯಲ್ಲಿ ಪೌಲ ಹೇಗೆ ಆಸಕ್ತಿ ತೋರಿಸಿದನು? (ಬಿ) ಸಹೋದರರು ಸಭೆಯಲ್ಲಿ ಮುಂದೆ ಕುರುಬರಾಗುವಂತೆ ಹಿರಿಯರು ಹೇಗೆ ಪರಿಣಾಮಕಾರಿ ತರಬೇತಿ ಕೊಡಬಲ್ಲರು?

16 ಸಭೆಯಲ್ಲಿ ಕುರುಬರಾಗಿ ಕೆಲಸಮಾಡಲು ಹೆಚ್ಚು ಸಹೋದರರಿಗೆ ತರಬೇತಿಕೊಡುವ ಅಗತ್ಯವಿದೆ. ಪೌಲನು ತಿಮೊಥೆಯನಿಗೆ ತರಬೇತಿ ಕೊಟ್ಟನು ಮತ್ತು ಇತರರಿಗೆ ತರಬೇತಿ ಕೊಡುವಂತೆ ಅವನನ್ನು ಪ್ರೋತ್ಸಾಹಿಸಿದನು. ಪೌಲನು ಹೇಳಿದ್ದು: “ನೀನು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ಅಪಾತ್ರ ದಯೆಯಲ್ಲಿ ಬಲವನ್ನು ಹೊಂದುತ್ತಾ ಇರು. ಅನೇಕ ಸಾಕ್ಷಿಗಳ ಬೆಂಬಲದಿಂದ ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು ಇತರರಿಗೆ ಬೋಧಿಸಲು ತಕ್ಕಷ್ಟು ಅರ್ಹರಾಗಿರುವಂಥ ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು.” (2 ತಿಮೊ. 2:1, 2) ಹಿರಿಯನೂ ಅಪೊಸ್ತಲನೂ ಆಗಿದ್ದ ಪೌಲನಿಂದ ತಿಮೊಥೆಯನು ಬಹಳಷ್ಟನ್ನು ಕಲಿತನು. ಉದಾಹರಣೆಗೆ, ತನ್ನ ಸಾರುವಿಕೆಯನ್ನು ಉತ್ತಮಗೊಳಿಸುವುದು ಹೇಗೆ, ಸಭೆಯಲ್ಲಿರುವ ಇತರರಿಗೆ ಸಹಾಯ ನೀಡುವುದು ಹೇಗೆಂದು ಅರಿತುಕೊಂಡನು.—2 ತಿಮೊ. 3:10-12.

17 ತಿಮೊಥೆಯನಿಗೆ ಸರಿಯಾದ ತರಬೇತಿ ಸಿಗುವಂತೆ ಪೌಲನು ಅವನೊಂದಿಗೆ ತುಂಬ ಸಮಯ ಕಳೆದನು. (ಅ. ಕಾ. 16:1-5) ಹಿರಿಯರು ಸಹ ಪೌಲನನ್ನು ಅನುಕರಿಸುತ್ತಾ ಕೆಲವೊಂದು ಪರಿಪಾಲನಾ ಭೇಟಿಗಳಿಗೆ ಅರ್ಹ ಸಹಾಯಕ ಸೇವಕರನ್ನು ಕರಕೊಂಡು ಹೋಗಬಹುದು. ಈ ರೀತಿಯಲ್ಲಿ ಇತರರಿಗೆ ಕಲಿಸುವುದು ಹೇಗೆ, ತಾಳ್ಮೆ ಪ್ರೀತಿಯಿಂದ ನಡೆದುಕೊಳ್ಳುವುದು ಹೇಗೆ, ಯೆಹೋವನ ಮಂದೆಯನ್ನು ನೋಡಿಕೊಳ್ಳಲು ಆತನ ಮೇಲೆ ಆತುಕೊಳ್ಳುವುದು ಹೇಗೆಂದು ಸಹಾಯಕ ಸೇವಕರು ಹಿರಿಯರಿಂದ ಕಲಿತುಕೊಳ್ಳುವರು.—1 ಪೇತ್ರ 5:2.

ತರಬೇತಿ ಪ್ರಾಮುಖ್ಯ

18. ಯೆಹೋವನ ಸೇವೆಯಲ್ಲಿ ಇತರರಿಗೆ ತರಬೇತಿ ಕೊಡುವುದಕ್ಕೆ ನಾವೇಕೆ ಮಹತ್ವ ಕೊಡಬೇಕು?

18 ಈ ಅಂತ್ಯಕಾಲದಲ್ಲಿ ಅನೇಕ ಹೊಸಬರಿಗೆ ಸಾರುವ ಕೆಲಸದಲ್ಲಿ ಕೌಶಲ್ಯಗಳನ್ನು ಬೆಳೆಸಲು ತರಬೇತಿಯ ಅಗತ್ಯವಿದೆ. ಸಹೋದರರು ಸಭೆಯ ಪರಿಪಾಲನೆ ಮಾಡಲು ಕಲಿಯುವ ಅಗತ್ಯ ಸಹ ಇದೆ. ತನ್ನೆಲ್ಲ ಸೇವಕರಿಗೂ ಒಳ್ಳೇ ತರಬೇತಿ ಸಿಗಬೇಕೆಂದು ಯೆಹೋವನು ಬಯಸುತ್ತಾನೆ. ಹೊಸಬರಿಗೆ ಸಹಾಯಕೊಡುವ ಸುಯೋಗವನ್ನು ನಮಗೆ ಕೊಟ್ಟಿರುತ್ತಾನೆ. ಆದ್ದರಿಂದ ಯೇಸು ಮತ್ತು ಪೌಲ ಮಾಡಿದಂತೆ ಇತರರಿಗೆ ತರಬೇತಿ ಕೊಡಲು ಶ್ರಮಿಸುವುದು ಪ್ರಾಮುಖ್ಯ. ನಮ್ಮಿಂದಾದಷ್ಟು ಹೆಚ್ಚು ಮಂದಿಗೆ ತರಬೇತಿ ಕೊಡುವ ಅಗತ್ಯವಿದೆ ಏಕೆಂದರೆ ಅಂತ್ಯಬರುವ ಮೊದಲು ಸಾರುವ ಕೆಲಸದಲ್ಲಿ ಬಹಳಷ್ಟನ್ನು ಮಾಡಲಿಕ್ಕಿದೆ.

19. ಯೆಹೋವನ ಸೇವೆಯಲ್ಲಿ ಇತರರಿಗೆ ತರಬೇತಿ ಕೊಡಲು ಶ್ರದ್ಧೆಯಿಂದ ಮಾಡುವ ಪ್ರಯತ್ನವು ಸಫಲವಾಗುವುದೆಂಬ ಖಾತ್ರಿ ನಮಗಿದೆ ಏಕೆ?

19 ಹೊಸಬರನ್ನು ತರಬೇತಿಗೊಳಿಸಲು ಸಮಯ ಕೊಡಬೇಕು, ಪ್ರಯತ್ನ ಹಾಕಬೇಕು. ಇತರರಿಗೆ ಅತ್ಯುತ್ತಮ ತರಬೇತಿ ಕೊಡುವುದು ಹೇಗೆಂದು ತಿಳಿದುಕೊಳ್ಳಲು ಯೆಹೋವನು ಮತ್ತು ಯೇಸು ನಮಗೆ ಖಂಡಿತ ಸಹಾಯ ಮಾಡುವರು. ನಾವು ಯಾರಿಗೆ ತರಬೇತಿ ಕೊಟ್ಟಿದ್ದೇವೊ ಅವರು ಸಭೆಯಲ್ಲಿ ಅಥವಾ ಸೇವೆಯಲ್ಲಿ ಶ್ರಮಪಟ್ಟು ‘ಕೆಲಸಮಾಡುವಾಗ, ಪ್ರಯಾಸಪಡುವಾಗ’ ನಮಗೆ ತುಂಬ ಸಂತೋಷವಾಗುತ್ತದೆ. (1 ತಿಮೊ. 4:10) ಅದೇ ಸಮಯದಲ್ಲಿ ನಾವು ಆಧ್ಯಾತ್ಮಿಕ ಪ್ರಗತಿ ಮಾಡಲು, ಕ್ರೈಸ್ತ ಗುಣಗಳನ್ನು ಹೆಚ್ಚಿಸಲು, ಯೆಹೋವನಿಗೆ ಹತ್ತಿರವಾಗಲು ನಮ್ಮಿಂದಾದದ್ದೆಲ್ಲವನ್ನು ಮಾಡುತ್ತಾ ಇರಬೇಕು.

^ [1] (ಪ್ಯಾರ 7) ಉದಾಹರಣೆಗೆ ಯೇಸು ತನ್ನ ಶಿಷ್ಯರಿಗೆ (1) ರಾಜ್ಯದ ಕುರಿತು ಸಾರಲು, (2) ಆಹಾರ, ಬಟ್ಟೆಗಾಗಿ ದೇವರಲ್ಲಿ ಭರವಸೆಯಿಡಲು, (3) ಜನರೊಂದಿಗೆ ವಾದಮಾಡದಿರಲು, (4) ಜನರು ಹಿಂಸಿಸುವಾಗ ದೇವರಲ್ಲಿ ಭರವಸೆಯಿಡಲು, (5) ಜನರು ಕಷ್ಟ ಕೊಟ್ಟರೂ ಹೆದರದಿರಲು ಹೇಳಿದನು.

^ [2] (ಪ್ಯಾರ 9) ಸೇವೆಯಲ್ಲಿ ಜನರೊಂದಿಗೆ ಸಂಭಾಷಿಸಲು ಬೇಕಾದ ಅತ್ಯುತ್ತಮ ಸಲಹೆಗಳಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ಪುಟ 62-64 ನೋಡಿ.

^ [3] (ಪ್ಯಾರ 15) ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ, ಪುಟ 52-61⁠ರಲ್ಲಿ ಸಹೋದರರು ಸಭೆಯಲ್ಲಿ ಭಾಷಣ ಕೊಡುವ ರೀತಿಯನ್ನು ಹೇಗೆ ಉತ್ತಮಗೊಳಿಸಬಹುದೆಂದು ವಿವರಿಸಲಾಗಿದೆ.