ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಕೊಡುವುದರಲ್ಲೇ ನನಗೆ ಸಿಕ್ಕಿತು ಸಂತೋಷ

ಕೊಡುವುದರಲ್ಲೇ ನನಗೆ ಸಿಕ್ಕಿತು ಸಂತೋಷ

ಇತರರಿಗೆ ಕೊಡಲು ಬೆಲೆಬಾಳುವ ಒಂದು ವಿಷಯ ನನ್ನಲ್ಲಿದೆ ಎಂದು ಗೊತ್ತಾದಾಗ ನನಗೆ 12 ವಯಸ್ಸು. ಒಂದು ಸಮ್ಮೇಳನದಲ್ಲಿ ಒಬ್ಬ ಸಹೋದರನು ನನಗೆ ಸಾರಲು ಇಷ್ಟವಿದೆಯಾ ಎಂದು ಕೇಳಿದಾಗ, ನಾನು ಹಿಂದೆ ಸಾರಿರದಿದ್ದರೂ ಒಪ್ಪಿಕೊಂಡು ಸೇವೆಗೆ ಹೋದೆ. ಆ ಸಹೋದರ ಕೆಲವು ಕಿರುಪುಸ್ತಿಕೆಗಳನ್ನು ನನಗೆ ಕೊಟ್ಟು “ನೀನು ರಸ್ತೆಯ ಆ ಪಕ್ಕದಲ್ಲಿ ಸಾರು, ನಾನು ಈ ಪಕ್ಕದಲ್ಲಿ ಸಾರುತ್ತೇನೆ” ಎಂದ. ತುಂಬ ಭಯವಾದರೂ ಮನೆಮನೆ ಹೋಗಿ ಸಾರಿದೆ. ಆಶ್ಚರ್ಯವೇನೆಂದರೆ ನನ್ನ ಎಲ್ಲ ಕಿರುಪುಸ್ತಿಕೆಗಳು ಬೇಗನೆ ಖಾಲಿಯಾದವು. ಕೊಟ್ಟದ್ದನ್ನು ಹೆಚ್ಚಿನವರು ತಕ್ಕೊಂಡರು.

ನಾನು ಹುಟ್ಟಿದ್ದು 1923ರಲ್ಲಿ ಇಂಗ್ಲೆಂಡ್‌ನ ಕೆಂಟ್‌ ಪ್ರಾಂತದ ಚಥಮ್‌ ನಗರದಲ್ಲಿ. ಒಂದನೇ ಮಹಾ ಯುದ್ಧದ ನಂತರ ಲೋಕದ ಪರಿಸ್ಥಿತಿ ಒಳ್ಳೇದಾಗುತ್ತದೆಂದು ಜನರು ನೆನಸಿದ್ದರು. ಆದರೆ ಹಾಗಾಗಲಿಲ್ಲ. ಇದರಿಂದ ಬೇರೆಲ್ಲ ಜನರಂತೆ ನನ್ನ ಹೆತ್ತವರಿಗೂ ತುಂಬ ನಿರಾಶೆಯಾಯಿತು. ಬ್ಯಾಪ್ಟಿಸ್ಟ್‌ ಪಾದ್ರಿಗಳ ನಡವಳಿಕೆಯಿಂದಲೂ ನನ್ನ ಹೆತ್ತವರು ಬೇಸತ್ತಿದ್ದರು ಏಕೆಂದರೆ ಆ ಪಾದ್ರಿಗಳು ಸ್ವಂತ ಲಾಭವನ್ನೇ ನೋಡುತ್ತಿದ್ದರು. ನಾನು ಸುಮಾರು 9 ವರ್ಷದವನಿದ್ದಾಗ ಅಮ್ಮ ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳ ಸಭೆಗೆ ಹೋಗಲಾರಂಭಿಸಿದರು. ‘ಯೆಹೋವನ ಸಾಕ್ಷಿಗಳು’ ಎಂಬ ಹೆಸರನ್ನು ಸ್ವೀಕರಿಸಿದ ಆ ವಿದ್ಯಾರ್ಥಿಗಳು “ಕ್ಲಾಸ್‌ಗಳನ್ನು” ಅಂದರೆ ಕೂಟಗಳನ್ನು ನಡೆಸುತ್ತಿದ್ದರು. ಮಕ್ಕಳಾದ ನಮಗೆ ಅಲ್ಲಿ ಒಬ್ಬ ಸಹೋದರಿ ಬೈಬಲ್‌ ಮತ್ತು ಹಾರ್ಪ್‌ ಆಫ್‌ ಗಾಡ್‌ ಪುಸ್ತಕದಿಂದ ಪಾಠಗಳನ್ನು ಕಲಿಸಿದರು. ಅದು ನನಗೆ ತುಂಬ ಇಷ್ಟವಾಯಿತು.

ಹಿರಿ ಸಹೋದರರಿಂದ ಕಲಿತೆ

ಹದಿವಯಸ್ಸಿನಲ್ಲಿ ಜನರಿಗೆ ಬೈಬಲಿನ ನಿರೀಕ್ಷೆಯನ್ನು ಕೊಡುವುದರಲ್ಲಿ ಆನಂದಿಸಿದೆ. ಹೆಚ್ಚಾಗಿ ಮನೆಮನೆ ಸೇವೆಯಲ್ಲಿ ಒಬ್ಬನೇ ಹೋಗಿ ಸಾರುತ್ತಿದ್ದೆ. ಕೆಲವೊಮ್ಮೆ ಇತರರೊಂದಿಗೂ ಹೋಗಿ ಹೆಚ್ಚನ್ನು ಕಲಿತೆ. ಉದಾಹರಣೆಗೆ ಒಂದು ದಿನ ಒಬ್ಬ ಹಿರಿ ಸಹೋದರನ ಜೊತೆ ಸೈಕಲಿನಲ್ಲಿ ಸೇವೆಗೆ ಹೋಗುತ್ತಿದ್ದೆ. ಆ ದಾರಿಯಾಗಿ ಒಬ್ಬ ಪಾದ್ರಿ ಸಹ ಹೋಗುತ್ತಿದ್ದ. “ನೋಡಿ, ಒಂದು ಆಡು ಹೋಗ್ತಿದೆ” ಎಂದೆ ನಾನು. ಆಗ ಆ ಸಹೋದರ ಸೈಕಲ್‌ ನಿಲ್ಲಿಸಿ, ಅಲ್ಲಿದ್ದ ಒಂದು ದಿಮ್ಮಿಯ ಮೇಲೆ ತನ್ನ ಜೊತೆ ಕೂರಲು ಹೇಳಿ, “ನೋಡು, ಆಡು ಯಾರೆಂದು ತೀರ್ಪು ಮಾಡುವ ಕೆಲಸ ನಿನ್ನದಲ್ಲ. ಜನರಿಗೆ ಸುವಾರ್ತೆ ತಿಳಿಸುವುದೇ ನಮ್ಮ ಕೆಲಸ, ಅದರಲ್ಲೇ ಆನಂದಿಸೋಣ. ತೀರ್ಪು ಮಾಡೋದನ್ನು ಯೆಹೋವನಿಗೆ ಬಿಡುವ” ಎಂದು ಬುದ್ಧಿಹೇಳಿದರು. ಕೊಡುವುದರಿಂದ ಸಿಗುವ ಸಂತೋಷದ ಬಗ್ಗೆ ಆ ದಿನಗಳಲ್ಲಿ ನಾನು ಹೆಚ್ಚನ್ನು ಕಲಿತುಕೊಂಡೆ.—ಮತ್ತಾ. 25:31-33; ಅ. ಕಾ. 20:35.

ಕೊಡುವುದರಲ್ಲಿ ಸಂತೋಷ ಸಿಗಬೇಕಾದರೆ ಕೆಲವೊಮ್ಮೆ ತಾಳ್ಮೆಯಿಂದ ಸಹಿಸಿಕೊಳ್ಳಬೇಕೆಂದು ವಯಸ್ಸಾದ ಇನ್ನೊಬ್ಬ ಸಹೋದರ ಕಲಿಸಿದರು. ಅವರ ಪತ್ನಿಗೆ ಯೆಹೋವನ ಸಾಕ್ಷಿಗಳೆಂದರೆ ಇಷ್ಟವಿರಲಿಲ್ಲ. ಒಮ್ಮೆ ಆ ಸಹೋದರ ನನ್ನನ್ನು ಮನೆಗೆ ತಿಂಡಿಗೆ ಕರೆದಿದ್ದರು. ಅವರು ಸಾರಲು ಹೋದದ್ದಕ್ಕೆ ಹೆಂಡತಿಗೆ ತುಂಬ ಸಿಟ್ಟು ಬಂದಿತ್ತು. ಚಹಾಪುಡಿಯ ಪೊಟ್ಟಣಗಳನ್ನು ನಮ್ಮ ಕಡೆಗೆ ಎಸೆಯಲು ಶುರುಮಾಡಿದಳು. ಆದರೆ ಸಹೋದರರು ಅವಳನ್ನು ಗದರಿಸಲಿಲ್ಲ. ನಗುನಗುತ್ತಾ ಅವುಗಳನ್ನೆಲ್ಲ ಎತ್ತಿ ಅದರ ಜಾಗದಲ್ಲಿಟ್ಟರು. ಅವರ ಈ ತಾಳ್ಮೆಗೆ ಕೊನೆಗೂ ಪ್ರತಿಫಲ ಸಿಕ್ಕಿತು. ವರ್ಷಾನಂತರ ಆಕೆ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದಳು.

ಭವಿಷ್ಯದ ಕುರಿತ ನಿರೀಕ್ಷೆಯನ್ನು ಇತರರಿಗೆ ಕೊಡುವ ನನ್ನಾಸೆ ಬೆಳೆಯುತ್ತಾ ಹೋಯಿತು. 1940ರ ಮಾರ್ಚ್‌ನಲ್ಲಿ ನಾನು ಮತ್ತು ಅಮ್ಮ ಡೋವರ್‌ ಊರಲ್ಲಿ ದೀಕ್ಷಾಸ್ನಾನ ಪಡೆದೆವು. 1939ರ ಸೆಪ್ಟೆಂಬರ್‌ನಲ್ಲಿ ಜರ್ಮನಿಯ ಮೇಲೆ ಬ್ರಿಟನ್‌ ಯುದ್ಧ ಘೋಷಿಸಿತ್ತು. ನನಗಾಗ 16 ವರ್ಷ. 1940ರ ಜೂನ್‌ನಲ್ಲಿ ಡನ್‌ಕರ್ಕ್‌ ಕದನದಲ್ಲಿ ಘಾಸಿಗೊಂಡ ಸಾವಿರಾರು ಸೈನಿಕರು ತುಂಬಿದ್ದ ಲಾರಿಗಳು ದಾಟಿಹೋಗುತ್ತಿರುವುದನ್ನು ನನ್ನ ಮನೆ ಬಾಗಿಲಲ್ಲಿ ನಿಂತುಕೊಂಡು ನೋಡಿದೆ. ಅವರ ಕಣ್ಣುಗಳಲ್ಲಿ ನಿರಾಶೆ ಎದ್ದುಕಾಣುತ್ತಿತ್ತು. ದೇವರ ರಾಜ್ಯದ ಕುರಿತು ಅವರಿಗೆ ತಿಳಿಸಲು ನನ್ನ ಮನಸ್ಸು ತುಡಿಯುತ್ತಿತ್ತು. ನಂತರ ಆ ವರ್ಷದಲ್ಲಿ ಬ್ರಿಟನ್‌ನ ಮೇಲೆ ಮತ್ತೆಮತ್ತೆ ಬಾಂಬ್‌ ದಾಳಿ ನಡೆಯಿತು. ಜರ್ಮನ್‌ ಬಾಂಬ್‌ ವಿಮಾನಗಳು ನಾವು ವಾಸಿಸುವ ಕ್ಷೇತ್ರದ ಮೇಲೆ ಹಾರಿಹೋಗುವುದನ್ನು ಪ್ರತಿ ರಾತ್ರಿ ನೋಡುತ್ತಿದ್ದೆ. ಬಾಂಬ್‌ಗಳು ಬೀಳುತ್ತಿರುವಾಗ ಬರುತ್ತಿದ್ದ ಸಿಳ್ಳಿನಂಥ ಸದ್ದು ಕೇಳಿ ನಮಗೆ ತುಂಬ ಹೆದರಿಕೆ ಆಗುತ್ತಿತ್ತು. ಮರುದಿನ ಬೆಳಗ್ಗೆ ಹೊರಗೆ ಕಾಲಿಟ್ಟಾಗ ಮನೆಗಳ ಸಾಲುಸಾಲೇ ಸುಟ್ಟು ಬೂದಿಯಾಗಿರುವುದು ಕಾಣುತ್ತಿತ್ತು. ದೇವರ ರಾಜ್ಯ ಮಾತ್ರ ಭವಿಷ್ಯತ್ತಿಗಾಗಿ ನನಗಿರುವ ನಿರೀಕ್ಷೆ ಎಂದು ಹೆಚ್ಚೆಚ್ಚಾಗಿ ಅರಿವಾಯಿತು.

ಕೊಡುವುದರಲ್ಲಿ ಸಂತೋಷಿಸುವ ಜೀವನಾರಂಭ

ನನ್ನ ಅತ್ಯಂತ ಸಂತೋಷದ ಜೀವನ ನಿಜವಾಗಿ ಆರಂಭ ಆದದ್ದು 1941ರಲ್ಲಿ. ಅದಕ್ಕೆ ಮುಂಚೆ ನಾನು ಚಥಮ್‌ ನಗರದ ರಾಯಲ್‌ ಡಾಕ್‌ಯಾರ್ಡ್‌ನಲ್ಲಿ ಹಡಗುಗಳನ್ನು ನಿರ್ಮಿಸುವ ಕೆಲಸ ಕಲಿಯುತ್ತಿದ್ದೆ. ಅತ್ಯುತ್ತಮ ಸೌಲಭ್ಯಗಳು ದೊರಕುತ್ತಿದ್ದ ಕೆಲಸ ಅದಾಗಿತ್ತು. ಕ್ರೈಸ್ತರು ಯುದ್ಧದಲ್ಲಿ ಭಾಗವಹಿಸಬಾರದೆಂದು ಯೆಹೋವನ ಸೇವಕರಿಗೆ ಬಹಳ ಹಿಂದೆಯೇ ತಿಳಿದಿತ್ತು. ಆದರೆ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಂಪನಿಗಳಲ್ಲೂ ಕ್ರೈಸ್ತರು ಕೆಲಸ ಮಾಡಬಾರದೆಂದು 1941ರಷ್ಟಕ್ಕೆ ತಿಳಿಯಿತು. (ಯೋಹಾ. 18:36) ಡಾಕ್‌ಯಾರ್ಡ್‌ನಲ್ಲಿ ಜಲಾಂತರ್ಗಾಮಿಗಳನ್ನು ಕಟ್ಟಲಾಗುತ್ತಿತ್ತು. ಹಾಗಾಗಿ ಆ ಕೆಲಸ ಬಿಟ್ಟು ಪೂರ್ಣ ಸಮಯದ ಸೇವೆ ಆರಂಭಿಸಿದೆ. ನನ್ನ ಮೊದಲ ನೇಮಕ ಸೈರೆನ್‌ಸೆಸ್ಟರ್‌ ಎಂಬಲ್ಲಿ. ಅದು ಕಾಟ್ಸ್‌ಒಲ್ಡ್‌ನಲ್ಲಿನ ಒಂದು ಅತಿ ಸುಂದರ ಊರು.

ಮಿಲಿಟರಿಯಲ್ಲಿ ಸೇರಲು ನಿರಾಕರಿಸಿದ್ದಕ್ಕಾಗಿ 18 ವಯಸ್ಸಿನಲ್ಲಿ ನನಗೆ 9 ತಿಂಗಳ ಜೈಲು ಶಿಕ್ಷೆಯಾಯಿತು. ಅಧಿಕಾರಿಗಳು ನನ್ನನ್ನು ಜೈಲಿನಲ್ಲಿ ಹಾಕಿ, ಬಾಗಿಲನ್ನು ಮುಚ್ಚಿದಾಗ ನನ್ನಲ್ಲಿ ಏಕಾಂತಭಾವದಿಂದ ಭೀಕರ ಅನಿಸಿಕೆ ಉಂಟಾಯಿತು. ಆದರೆ ಸ್ವಲ್ಪ ಸಮಯದಲ್ಲೇ ಕಾವಲುಗಾರರು ಮತ್ತು ಜೈಲಿನಲ್ಲಿದ್ದ ಇತರರು ನನಗೇಕೆ ಈ ಶಿಕ್ಷೆ ಎಂದು ಕೇಳಲಾರಂಭಿಸಿದರು. ಆಗ ನನ್ನ ನಂಬಿಕೆ ವಿವರಿಸಿದಾಗ ಸಂತೋಷವಾಯಿತು.

ಸೆರೆಯಿಂದ ಬಿಡುಗಡೆಯಾದ ನಂತರ ನನಗೆ ಲೆನ್ನಾರ್ಡ್‌ ಸ್ಮಿತ್‌ರನ್ನು * ಜೊತೆಗೂಡುವಂತೆ ಹೇಳಲಾಯಿತು. ಕೆಂಟ್‌ ಪ್ರಾಂತದವರೇ ಆದ ನಮ್ಮಿಬ್ಬರಿಗೆ ಅಲ್ಲಿನ ಬೇರೆಬೇರೆ ಊರುಗಳಲ್ಲಿ ಸಾರುವ ನೇಮಕ ಸಿಕ್ಕಿತು. ಲಂಡನ್‌ ಮೇಲೆ ಬಾಂಬ್‌ ದಾಳಿ ಮಾಡಲು ನಾಜಿ ವಿಮಾನಗಳು ಕೆಂಟ್‌ ಮಾರ್ಗವಾಗಿ ಹಾರಬೇಕಿತ್ತು. 1944ರಲ್ಲಿ ಆರಂಭಿಸಿ ಕೆಂಟ್‌ ಪ್ರಾಂತದ ಮೇಲೆ ‘ಡೂಡಲ್‌ಬಗ್ಸ್‌’ ಎಂದು ಕರೆಯಲಾಗುತ್ತಿದ್ದ ಸಾವಿರಾರು ಬಾಂಬುಗಳನ್ನು ಹಾಕಲಾಯಿತು. ಈ ಬಾಂಬುಗಳು ನಿಜವಾಗಿ ಸ್ಫೋಟಕಗಳು ತುಂಬಿರುವ ಜೆಟ್‌ ವಿಮಾನಗಳಾಗಿದ್ದವು. ಅವುಗಳಲ್ಲಿ ಚಾಲಕರು ಇರುತ್ತಿರಲಿಲ್ಲ. ಇದು ಜನರಲ್ಲಿ ಭಯಹುಟ್ಟಿಸಲು ನಡೆಸಲಾದ ಕಾರ್ಯಾಚರಣೆಯಾಗಿತ್ತು. ಏಕೆಂದರೆ ಎಂಜಿನ್‌ ನಿಂತ ಸದ್ದು ಕೇಳಿಸಿದ ನಂತರ ಕೆಲವೇ ಕ್ಷಣಗಳಲ್ಲಿ ವಿಮಾನ ಕೆಳಗುರುಳಿ ಸ್ಫೋಟಿಸುತ್ತಿದ್ದವು. ಹಾಗೆ ಅನೇಕಬಾರಿ ಆಗುತ್ತಿತ್ತು. ಐದು ಮಂದಿಯಿದ್ದ ಒಂದು ಕುಟುಂಬದೊಂದಿಗೆ ನಾವು ಬೈಬಲ್‌ ಅಧ್ಯಯನ ನಡಿಸುವಾಗ ಕಬ್ಬಿಣದ ಮೇಜಿನ ಕೆಳಗೆ ಕೂರುತ್ತಿದ್ದೆವು. ಫಕ್ಕನೆ ಮನೆ ಕುಸಿದುಬಿದ್ದರೆ ರಕ್ಷಣೆಗಾಗಿ ಆ ಮೇಜನ್ನು ರಚಿಸಲಾಗಿತ್ತು. ಆ ಇಡೀ ಕುಟುಂಬ ಸಮಯಾನಂತರ ದೀಕ್ಷಾಸ್ನಾನ ಪಡೆಯಿತು.

ವಿದೇಶಗಳಲ್ಲಿ ಸುವಾರ್ತೆ ಸಾರಿದೆ

ನನ್ನ ಪಯನೀಯರ್‌ ಸೇವೆಯ ಆರಂಭದ ದಿನಗಳಲ್ಲಿ ಐರ್ಲೆಂಡಿನಲ್ಲಿ ಒಂದು ಅಧಿವೇಶನದ ಬಗ್ಗೆ ಪ್ರಕಟಿಸುತ್ತಿರುವುದು (ಕೆಳಗೆ)

ಯುದ್ಧಾನಂತರ ಎರಡು ವರ್ಷ ದಕ್ಷಿಣ ಐರ್ಲೆಂಡಲ್ಲಿ ಸೇವೆಮಾಡಿದೆ. ಐರ್ಲೆಂಡ್‌ ಇಂಗ್ಲೆಂಡಿಗಿಂತ ತುಂಬ ಭಿನ್ನವೆಂದು ನಮಗೆ ಗೊತ್ತಿರಲಿಲ್ಲ. ಮನೆಮನೆಗೆ ಹೋಗಿ ನಾವು ಮಿಷನರಿಗಳೆಂದು ಹೇಳಿಕೊಂಡು ಉಳುಕೊಳ್ಳಲು ಜಾಗ ಕೇಳಿದೆವು. ಬೀದಿಗಳಲ್ಲಿ ನಮ್ಮ ಪತ್ರಿಕೆಗಳನ್ನು ನೀಡಿದೆವು. ಕ್ಯಾಥೊಲಿಕರಿಂದ ತುಂಬಿದ್ದ ಆ ದೇಶದಲ್ಲಿ ಹಾಗೆ ಮಾಡಿದ್ದು ಪೆದ್ದತನವೆಂದು ನಂತರ ತಿಳಿಯಿತು. ಒಬ್ಬನು ನಮ್ಮನ್ನು ಹೊಡೆಯುತ್ತೇನೆಂದು ಬೆದರಿಕೆ ಹಾಕಿದಕ್ಕೆ ಪೊಲೀಸ್‌ಗೆ ದೂರುಕೊಟ್ಟೆವು. ಅದಕ್ಕವನು “ನಿಮ್ಮಂಥವರಿಗೆ ಇನ್ನೇನು ಮಾಡಬೇಕು?!” ಎಂದು ಮರುಸವಾಲು ಹಾಕಿದ. ಅಲ್ಲಿ ಪಾದ್ರಿಗಳದ್ದೇ ರಾಜ್ಯ ಎಂದು ನಮಗೆ ಮೊದಲು ಗೊತ್ತಿರಲಿಲ್ಲ. ಜನರು ನಮ್ಮ ಪುಸ್ತಕಗಳನ್ನು ತಕ್ಕೊಂಡರೆ ಅವರ ಕೆಲಸ ಹೋಗುತ್ತಿತ್ತು. ನಮ್ಮನ್ನೂ ನಮ್ಮ ವಸತಿಗಳಿಂದ ಹೊರಗಟ್ಟಿದರು.

ಒಂದು ಹೊಸ ಊರಿಗೆ ಬಂದಾಗ ಮೊದಲು ನಮ್ಮ ಮನೆಯಿಂದ ದೂರಕ್ಕೆ, ನಮ್ಮ ಪರಿಚಯವಿಲ್ಲದ ಪಾದ್ರಿಯಿರುವ ಸ್ಥಳಗಳಿಗೆ ಸೈಕಲಲ್ಲಿ ಹೋಗಿ ಸಾರುತ್ತಿದ್ದೆವು. ಮನೆ ಹತ್ತಿರ ವಾಸಿಸುವ ಜನರಿಗೆ ಕೊನೆಯಲ್ಲಿ ಮಾತ್ರ ಸಾರುತ್ತಿದ್ದೆವು. ಕಿಲ್ಕೆನ್ನಿ ಪ್ರಾಂತದಲ್ಲಿ ಹಿಂಸಾತ್ಮಕ ದೊಂಬಿಗಳು ನಮಗೆ ಬೆದರಿಕೆ ಹಾಕಿದರೂ ಒಬ್ಬ ಯುವಕನೊಂದಿಗೆ ವಾರಕ್ಕೆ ಮೂರು ಸಲ ಅಧ್ಯಯನ ನಡಿಸಿದೆವು. ಬೈಬಲಿನ ಸತ್ಯಗಳನ್ನು ಕಲಿಸಲು ನನಗೆಷ್ಟು ಸಂತೋಷ ಆಗುತ್ತಿತ್ತೆಂದರೆ ಮಿಷನರಿ ಸೇವೆ ಮಾಡಲು ಬಯಸಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಅರ್ಜಿಹಾಕಿದೆ.

1948ರಿಂದ 1953ರ ವರೆಗೆ ನಮ್ಮ ಮಿಷನರಿ ಮನೆಯಾದ ಸಿಬಿಯ ಹಾಯಿಹಡಗು (ಬಲ)

ನ್ಯೂಯಾರ್ಕ್‌ನಲ್ಲಿ ಐದು ತಿಂಗಳ ತರಬೇತಿ ಸಿಕ್ಕಿತು. ಕ್ಯಾರಿಬಿಯನ್‌ ಸಮುದ್ರದ ಕಿರುದ್ವೀಪಗಳಲ್ಲಿ ಸೇವೆಮಾಡಲು ನೇಮಕಪಡೆದ ನಾಲ್ಕು ಮಂದಿ ಗಿಲ್ಯಡ್‌ ಪದವೀಧರರಲ್ಲಿ ನಾನೂ ಒಬ್ಬ. 1948ರ ನವೆಂಬರ್‌ನಲ್ಲಿ ನಾವು ಸಿಬಿಯ ಎಂಬ 59 ಅಡಿ ಉದ್ದದ ಹಾಯಿಹಡಗಿನಲ್ಲಿ ನ್ಯೂಯಾರ್ಕ್‌ನಿಂದ ಹೊರಟೆವು. ಹಿಂದೆ ನಾನೆಂದೂ ಹಡಗು ಪ್ರಯಾಣ ಮಾಡಿರಲಿಲ್ಲ. ಆದ್ದರಿಂದ ತುಂಬ ಸಡಗರದಲ್ಲಿದ್ದೆ. ನಮ್ಮಲ್ಲಿ ಗಸ್ಟ್‌ ಮ್ಯಾಕೀ ಎಂಬವನು ಅನುಭವಸ್ಥ ಕಪ್ತಾನ. ಅವನು ಸಮುದ್ರಯಾನದ ಕೆಲವು ಮೂಲಭೂತ ವಿಷಯಗಳನ್ನು ನಮಗೆ ಕಲಿಸಿದ. ವಿವಿಧ ಹಾಯಿಗಳನ್ನು ಏರಿಸುವ ಇಳಿಸುವ ವಿಧ, ದಿಕ್ಸೂಚಿ ಬಳಸುವುದು, ಗಾಳಿಗೆ ಎದುರಾಗಿ ದಿಕ್ಕುಬದಲಾಯಿಸುವುದು ಮುಂತಾದವನ್ನು ಕಲಿಸಿದ. ವಿಪತ್ಕಾರಕ ಬಿರುಗಾಳಿಗಳಿದ್ದರೂ ಅವನು 30 ದಿನ ನಮ್ಮ ಹಡಗನ್ನು ಬಹು ಕುಶಲತೆಯಿಂದ ನಡಿಸಿದ್ದರಿಂದ ಬಹಾಮಸ್‌ ದೇಶ ತಲಪಿದೆವು.

“ದೂರದ್ವೀಪಗಳಲ್ಲಿ ಸಾರಿರಿ’’

ಬಹಾಮಸ್‌ನ ಕಿರುದ್ವೀಪಗಳಲ್ಲಿ ಕೆಲವು ತಿಂಗಳು ಸಾರಿದ ಬಳಿಕ ಲೀವರ್ಡ್‌ ಮತ್ತು ವಿಂಡರ್ಡ್‌ ದ್ವೀಪಗಳಿಗೆ ಯಾನ ಆರಂಭಿಸಿದೆವು. ಇವು ವರ್ಜಿನ್‌ ಐಲೆಂಡ್ಸ್‌ನಿಂದ ಟ್ರಿನಿಡಾಡ್‌ ದೇಶದ ವರೆಗೂ ಸುಮಾರು 800 ಕಿ.ಮೀ. ವರೆಗೂ ವಿಸ್ತರಿಸಿವೆ. ಐದು ವರ್ಷಗಳ ತನಕ ನಾವು ಮುಖ್ಯವಾಗಿ ಸಾರಿದ್ದು ಯೆಹೋವನ ಸಾಕ್ಷಿಗಳೇ ಇಲ್ಲದ ದೂರದೂರದ ದ್ವೀಪಗಳಲ್ಲಿ. ನಮಗಲ್ಲಿ ಕೆಲವು ಸಲ ಎಷ್ಟೋ ವಾರ ಅಂಚೆ ಸಿಗುತ್ತಿರಲಿಲ್ಲ, ಅಂಚೆ ಕಳುಹಿಸಲೂ ಆಗುತ್ತಿರಲಿಲ್ಲ. ಆದರೆ ಈ “ದೂರದ್ವೀಪಗಳಲ್ಲಿ” ಯೆಹೋವನ ವಾಕ್ಯವನ್ನು ಸಾರಲು ಸಾಧ್ಯವಾದದ್ದಕ್ಕಾಗಿ ನಮಗಾದ ಸಂತೋಷ ಅಷ್ಟಿಷ್ಟಲ್ಲ!—ಯೆರೆ. 31:10.

ಸಿಬಿಯದಲ್ಲಿದ್ದ ಮಿಷನರಿಗಳ ನಾವಿಕ ತಂಡ (ಎಡದಿಂದ ಬಲಕ್ಕೆ): ರಾನ್‌ ಪಾರ್ಕನ್‌, ಡಿಕ್‌ ರೈಡ್‌, ಗಸ್ಟ್‌ ಮ್ಯಾಕಿ, ಸ್ಟ್ಯಾನ್ಲಿ ಕಾರ್ಟರ್‌

ನಾವು ಯಾವುದಾದರೂ ಒಂದು ದ್ವೀಪದ ತೀರಕ್ಕೆ ತಲಪಿದಾಗ ಅಲ್ಲಿನ ಹಳ್ಳಿಗರಲ್ಲಿ ತುಂಬ ಸಡಗರ. ನಾವ್ಯಾರೆಂದು ತಿಳಿಯಲು ಹಡಗುಕಟ್ಟೆಯಲ್ಲಿ ಗುಂಪುಗೂಡುತ್ತಿದ್ದರು. ಕೆಲವರು ಹಾಯಿಹಡಗನ್ನಾಗಲಿ ಬಿಳಿ ಜನರನ್ನಾಗಲಿ ಎಂದೂ ನೋಡಿದವರಲ್ಲ. ಆದರೆ ಆ ದ್ವೀಪವಾಸಿಗಳು ಸ್ನೇಹಪರರು. ಅವರಿಗೆ ಬೈಬಲಿನ ಬಗ್ಗೆ ಚೆನ್ನಾಗಿ ತಿಳಿದಿತ್ತು. ನಮಗೆ ತಾಜಾ ಮೀನು, ಆವಕಾಡೊ ಹಣ್ಣು, ನೆಲಗಡಲೆಯನ್ನು ಆಗಾಗ ತಂದು ಕೊಡುತ್ತಿದ್ದರು. ನಮ್ಮ ಚಿಕ್ಕ ಹಡಗಲ್ಲಿ ಹೆಚ್ಚು ಸ್ಥಳವಿರದಿದ್ದರೂ ಅದರಲ್ಲೇ ಹೇಗೊ ಮಲಗುತ್ತಿದ್ದೆವು, ಅಡಿಗೆಮಾಡುತ್ತಿದ್ದೆವು, ಬಟ್ಟೆ ಒಗೆಯುತ್ತಿದ್ದೆವು.

ನಾವು ಹಡಗಿನಿಂದ ಇಳಿದು ಚಿಕ್ಕ ದೋಣಿಯಲ್ಲಿ ದ್ವೀಪಕ್ಕೆ ಬಂದು ದಿನವಿಡೀ ಜನರನ್ನು ಭೇಟಿಮಾಡುತ್ತಿದ್ದೆವು. ‘ಬೈಬಲ್‌ ಭಾಷಣ ಇದೆ, ಬರಬೇಕು’ ಎಂದು ಹೇಳುತ್ತಿದ್ದೆವು. ಸಂಜೆಯಾಗುತ್ತಲೇ ಜನರ ಗಮನ ಸೆಳೆಯಲು ಹಡಗಿನ ಗಂಟೆ ಬಾರಿಸುತ್ತಿದ್ದೆವು. ಜನರು ಬರುವುದನ್ನು ನೋಡುವಾಗ ನಮಗೆ ಎಲ್ಲಿಲ್ಲದ ಆನಂದ! ಅವರ ಕಂದೀಲುಗಳು ಗುಡ್ಡದಾಚೆಯಿಂದ ಇಳಿದು ಬರುವ ಮಿನುಗುವ ನಕ್ಷತ್ರಗಳಂತೆ ಕಾಣುತ್ತಿದ್ದವು. ಕೆಲವೊಮ್ಮೆ ನೂರು ಜನರು ಬರುತ್ತಿದ್ದರು, ತಡರಾತ್ರಿಯ ತನಕ ಉಳಿದು ಪ್ರಶ್ನೆಗಳನ್ನು ಕೇಳುತ್ತಾ ಇದ್ದರು. ಹಾಡುವುದೆಂದರೆ ಅವರಿಗೆ ಬಲು ಇಷ್ಟ. ಹಾಗಾಗಿ ಕೆಲವು ರಾಜ್ಯ ಗೀತೆಗಳನ್ನು ಟೈಪ್‌ ಮಾಡಿ ಅವರಿಗೆ ಹಂಚಿದೆವು. ನಾವು ನಾಲ್ವರೂ ನಮ್ಮಿಂದಾಗುವಷ್ಟರ ಮಟ್ಟಿಗೆ ಸ್ವರಗೂಡಿಸಿ ಹಾಡುತ್ತಿದ್ದೆವು. ಆಗ ಆ ಜನರು ಸ್ವರಗೂಡಿಸಿ ಇಂಪಾಗಿ ಹಾಡುತ್ತಿದ್ದರು. ನಿಜಕ್ಕೂ ಸಂತಸದ ಸಮಯಗಳವು!

ನಮ್ಮ ಕೆಲವು ವಿದ್ಯಾರ್ಥಿಗಳು ನಾವು ಅವರೊಂದಿಗೆ ಅಧ್ಯಯನ ನಡಿಸಿದ ಮೇಲೆ ನಮ್ಮ ಬೇರೆ ಅಧ್ಯಯನಕ್ಕೂ ಬಂದು ಕೂರುತ್ತಿದ್ದರು. ಒಂದು ಸ್ಥಳದಲ್ಲಿ ಕೆಲವು ವಾರ ಕಳೆದ ಮೇಲೆ ನಾವು ಬೇರೆ ಕಡೆಗೆ ಹೋಗಬೇಕಾಗುತ್ತಿತ್ತು. ಪುನಃ ಬರುವ ವರೆಗೆ ನಮ್ಮ ಅಧ್ಯಯನಗಳನ್ನು ನಡಿಸುವಂತೆ ತುಂಬ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆವು. ಕೆಲವರು ಈ ನೇಮಕವನ್ನು ಶ್ರದ್ಧೆಯಿಂದ ಪೂರೈಸಿದ್ದನ್ನು ನೋಡಿ ಖುಷಿಯಾಗುತ್ತಿತ್ತು.

ಹವಳ ದಿಬ್ಬಗಳು, ಮರಳ ತೀರಗಳು, ತಾಳೆ ಮರಗಳಿಂದ ಕಂಗೊಳಿಸುತ್ತಿದ್ದ ಆ ಪ್ರಶಾಂತ ದ್ವೀಪಗಳಲ್ಲಿ ಹೆಚ್ಚಿನವು ಈಗ ಗೌಜುಗದ್ದಲವಿರುವ ಪ್ರವಾಸಿ ತಾಣಗಳಾಗಿವೆ. ಹೆಚ್ಚಾಗಿ ನಾವು ದ್ವೀಪದಿಂದ ದ್ವೀಪಕ್ಕೆ ರಾತ್ರಿ ಪ್ರಯಾಣಿಸುತ್ತಿದ್ದೆವು. ಡಾಲ್ಫಿನ್‌ ಮೀನುಗಳು ನಮ್ಮ ಹಡಗಿನ ಪಕ್ಕದಲ್ಲೇ ಆಟವಾಡುತ್ತಾ ಈಜಾಡುತ್ತಿದ್ದವು. ಚಲಿಸುವ ಹಡಗಿನ ಮೂತಿ ನೀರನ್ನು ಸೀಳಿಕೊಂಡು ಹೋಗುತ್ತಿದ್ದ ಸದ್ದು ಮಾತ್ರ ಕೇಳಿಬರುತ್ತಿತ್ತು. ಶಾಂತ ಸಮುದ್ರದ ಮೇಲೆ ಚಂದ್ರನ ಬೆಳಕು ಬೆಳ್ಳಿಯ ಹೆದ್ದಾರಿಯಂತೆ ದೂರ ದಿಗಂತದ ತನಕ ವ್ಯಾಪಿಸುತ್ತಿತ್ತು.

ಆ ದ್ವೀಪಗಳಲ್ಲಿ ಐದು ವರ್ಷ ಸಾರಿದ ಮೇಲೆ ನಾವು ನಮ್ಮ ಹಾಯಿಹಡಗನ್ನು ಕೊಟ್ಟು ಎಂಜಿನ್‌ ಹಡಗನ್ನು ತರಲು ಪೋರ್ಟರಿಕೊಗೆ ಹೋದೆವು. ಅಲ್ಲಿ ನಾನು ಮ್ಯಾಕ್ಸಿನ್‌ ಬಾಯ್ಡ್‌ ಎಂಬ ಸುಂದರಿಯಾದ ಮಿಷನರಿ ಸಹೋದರಿಯನ್ನು ಭೇಟಿಯಾದೆ. ಅವಳು ಚಿಕ್ಕಂದಿನಿಂದ ಸುವಾರ್ತೆಯನ್ನು ಹುರುಪಿನಿಂದ ಸಾರಿದವಳು. ನಂತರ ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಮಿಷನರಿಯಾಗಿ ಸೇವೆಮಾಡಿದ್ದಳು. ಅಲ್ಲಿನ ಕ್ಯಾಥೊಲಿಕ್‌ ಸರ್ಕಾರ ಅವಳನ್ನು 1950ರಲ್ಲಿ ದೇಶದಿಂದ ಹೊರಗಟ್ಟಿತ್ತು. ನಾವಿಕ ತಂಡದಲ್ಲಿದ್ದ ನನಗೆ ಪೋರ್ಟರಿಕೊದಲ್ಲಿ ಒಂದೇ ತಿಂಗಳು ಉಳಿಯಲು ಅನುಮತಿಯಿತ್ತು. ದೂರದ ದ್ವೀಪಗಳಿಗೆ ಹೋಗಿ ಸಾರಲಾರಂಭಿಸಿದರೆ ವಾಪಸ್‌ ಬರಲು ಕೆಲವು ವರ್ಷ ಹಿಡಿಯಲಿದ್ದವು. ಆದ್ದರಿಂದ “ರಾನಲ್ಡ್‌, ಆ ಹುಡುಗಿಯನ್ನು ಮದುವೆಯಾಗಬೇಕೆಂದಿದ್ದರೆ, ತಡಮಾಡಬೇಡ, ಬೇಗ ಏನಾದರೂ ಮಾಡು” ಎಂದು ಮನಸ್ಸಲ್ಲೇ ಅಂದುಕೊಂಡೆ. ಮೂರು ವಾರಗಳ ನಂತರ ನಾನು ಅವಳಿಗೆ ನನ್ನನ್ನು ಮದುವೆಯಾಗ್ತೀಯಾ ಎಂದು ಕೇಳಿದೆ. ಆರು ವಾರಗಳ ನಂತರ ನಮ್ಮ ಮದುವೆಯಾಯಿತು. ಆಮೇಲೆ ನಮ್ಮಿಬ್ಬರಿಗೆ ಪೋರ್ಟರಿಕೊದಲ್ಲಿ ಮಿಷನರಿ ನೇಮಕ ಸಿಕ್ಕಿತು. ಹಾಗಾಗಿ ಹೊಸ ಹಡಗಿನಲ್ಲಿ ಪ್ರಯಾಣಿಸುವ ಅವಕಾಶ ನನಗೆ ಸಿಗಲಿಲ್ಲ.

1956ರಲ್ಲಿ ನಾವು ಸರ್ಕಿಟ್‌ ಕೆಲಸ ಆರಂಭಿಸಿದೆವು. ಹೆಚ್ಚಿನ ಸಹೋದರರು ಬಡವರಾಗಿದ್ದರೂ ಅವರ ಮನೆಗಳಿಗೆ ಹೋಗಲು ತುಂಬ ಖುಷಿಯಾಗುತ್ತಿತ್ತು. ಉದಾಹರಣೆಗೆ ಪೊಟಾಲ ಪಾಸ್ಟಿಲೊ ಎಂಬ ಹಳ್ಳಿಯಲ್ಲಿ ತುಂಬ ಮಕ್ಕಳಿದ್ದ ಎರಡು ಸಾಕ್ಷಿ ಕುಟುಂಬಗಳಿದ್ದವು. ಅವರ ಮನರಂಜಿಸಲು ನಾನು ಕೆಲವೊಮ್ಮೆ ಕೊಳಲೂದುತ್ತಿದ್ದೆ. ಅವರಲ್ಲಿ ಚಿಕ್ಕ ಹುಡುಗಿ ಈಲ್ಡಾಳಿಗೆ “ನಮ್ಮೊಂದಿಗೆ ಸಾರಲು ಬರ್ತಿಯಾ” ಎಂದು ಕೇಳಿದಾಗ “ಬರ್ತೇನೆ ಆದ್ರೆ ನನ್ನ ಹತ್ರ ಶೂಸ್‌ ಇಲ್ಲ” ಎಂದಳು. ನಾವು ಶೂಸ್‌ ಕೊಡಿಸಿದಾಗ ನಮ್ಮೊಂದಿಗೆ ಸಾರಲು ಬಂದಳು. ಹಲವು ವರ್ಷಗಳ ನಂತರ 1972ರಲ್ಲಿ ನಾನು, ನನ್ನ ಹೆಂಡತಿ ಬ್ರೂಕ್ಲಿನ್‌ ಬೆತೆಲಿಗೆ ಭೇಟಿ ನೀಡಿದಾಗ ಗಿಲ್ಯಡ್‌ ಶಾಲೆಯಿಂದ ಆಗಷ್ಟೇ ಪದವಿ ಪಡೆದ ಸಹೋದರಿಯೊಬ್ಬಳು ನಮ್ಮ ಹತ್ತಿರ ಬಂದು “ನಾನು ಯಾರಂತ ಗೊತ್ತಾಯ್ತಾ? ಪಾಸ್ಟಿಲೊದಲ್ಲಿ ನೀವು ಶೂಸ್‌ ಕೊಡಿಸಿದ್ದ ಚಿಕ್ಕ ಹುಡುಗಿಯೇ ನಾನು” ಎಂದಳು. ಹೌದು, ಅವಳು ಅದೇ ಈಲ್ಡಾ. ಅವಳು ಈಕ್ವಡಾರ್‌ಗೆ ನೇಮಕ ಪಡೆದು ಇನ್ನೇನು ಹೊರಡಲಿದ್ದಳು. ನಾವು ಸಂತೋಷದಿಂದ ಅತ್ತೇ ಬಿಟ್ಟೆವು!

1960ರಲ್ಲಿ ನಮಗೆ ಪೋರ್ಟರಿಕೊದ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡಲು ಹೇಳಲಾಯಿತು. ಆ ಬ್ರಾಂಚ್‌ ಸಾನ್‌ವಾನ್‌ನ ಸಾನ್‌ಟರ್ಸನಲ್ಲಿದ್ದ ಒಂದು ಚಿಕ್ಕ ಮನೆಯಲ್ಲಿತ್ತು. ಮೊದಮೊದಲು ಹೆಚ್ಚಿನ ಕೆಲಸವನ್ನು ನಾನು ಮತ್ತು ಲೆನಾರ್ಟ್‌ ಜಾನ್‌ಸನ್‌ ಮಾಡುತ್ತಿದ್ದೆವು. ಜಾನ್‌ಸನ್‌ ಮತ್ತು ಅವನ ಪತ್ನಿ ಡೊಮಿನಿಕನ್‌ ಗಣರಾಜ್ಯದ ಮೊದಲ ಯೆಹೋವನ ಸಾಕ್ಷಿಗಳು. 1957ರಲ್ಲಿ ಪೋರ್ಟರಿಕೊಗೆ ಬಂದರು. ನನ್ನ ಹೆಂಡತಿ ಪತ್ರಿಕೆಗಳ ಚಂದಾಗಳನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದಳು. ವಾರಕ್ಕೆ ಸಾವಿರಕ್ಕಿಂತಲೂ ಹೆಚ್ಚು ಚಂದಾಗಳನ್ನು ಕಳುಹಿಸಲಿಕ್ಕಿರುತ್ತಿತ್ತು. ಇದರಿಂದ ಎಷ್ಟೋ ಜನರಿಗೆ ಆಧ್ಯಾತ್ಮಿಕ ಆಹಾರ ಸಿಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟು ಅವಳು ಸಂತೋಷದಿಂದ ಮಾಡುತ್ತಿದ್ದಳು.

ನನಗೆ ಬೆತೆಲ್‌ ಸೇವೆಯೆಂದರೆ ತುಂಬ ಇಷ್ಟ. ಏಕೆಂದರೆ ಕೊಡುವುದರಲ್ಲಿ ಸಂತೋಷ ಕಂಡುಕೊಳ್ಳಲು ಅಲ್ಲಿ ಅನೇಕ ಅವಕಾಶಗಳಿವೆ. ಆದರೆ ಕಷ್ಟದ ಸವಾಲುಗಳೂ ಇವೆ. ಉದಾಹರಣೆಗೆ 1967ರಲ್ಲಾದ ಪೋರ್ಟರಿಕೊದ ಮೊದಲನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನನ್ನ ಮೇಲೆ ತುಂಬ ಜವಾಬ್ದಾರಿಯ ಹೊರೆಯಿತ್ತು. ಆಗ ಯೆಹೋವನ ಸಾಕ್ಷಿಗಳ ಮುಂದಾಳತ್ವ ವಹಿಸಿದ್ದ ನೇತನ್‌ ನಾರ್‌ರವರು ಪೋರ್ಟರಿಕೊಗೆ ಬಂದಿದ್ದರು. ಸಮ್ಮೇಳನಕ್ಕೆ ಬಂದ ಮಿಷನರಿಗಳಿಗೆ ಸರಿಯಾಗಿ ವಾಹನ ವ್ಯವಸ್ಥೆ ಮಾಡಿಲ್ಲವೆಂದು ಅವರು ನನ್ನ ಬಗ್ಗೆ ತಪ್ಪು ತಿಳಿದುಕೊಂಡರು. ನಿಜವೇನೆಂದರೆ ನಾನು ಎಲ್ಲ ವ್ಯವಸ್ಥೆ ಮಾಡಿದ್ದೆ. ಆದರೆ ನಾನು ನನ್ನ ಕೆಲಸವನ್ನು ಹೆಚ್ಚು ವ್ಯವಸ್ಥಿತವಾಗಿ ಮಾಡಬೇಕಂತ ಕಟು ಸಲಹೆ ಕೊಟ್ಟರು. ನನ್ನ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ನಾನು ವಾದಿಸಲು ಹೋಗಲಿಲ್ಲ. ಆದರೆ ನನ್ನ ಬಗ್ಗೆ ಹಾಗೆ ತಪ್ಪು ತಿಳಿದುಕೊಂಡರಲ್ಲ ಅಂತ ಸ್ವಲ್ಪ ಸಮಯ ಬೇಸರಪಟ್ಟೆ. ಆದರೆ ಇನ್ನೊಮ್ಮೆ ಸಹೋದರ ನಾರ್‌ರನ್ನು ಭೇಟಿಯಾದಾಗ ಅವರು ನಮ್ಮನ್ನು ತಮ್ಮ ಕೋಣೆಗೆ ಆಮಂತ್ರಿಸಿ ನಮಗಾಗಿ ಊಟ ತಯಾರಿಸಿ ಕೊಟ್ಟರು.

ಪೋರ್ಟರಿಕೊದಲ್ಲಿ ಇದ್ದಾಗ ನಾವು ಇಂಗ್ಲೆಂಡ್‌ನಲ್ಲಿದ್ದ ನನ್ನ ಕುಟುಂಬವನ್ನು ನೋಡಲು ಹಲವಾರು ಬಾರಿ ಹೋದೆವು. ಅಮ್ಮ ಮತ್ತು ನಾನು ಸತ್ಯವನ್ನು ಸ್ವೀಕರಿಸಿದಾಗ ಅಪ್ಪ ಸ್ವೀಕರಿಸಿರಲಿಲ್ಲ. ಆದರೆ ಬೆತೆಲಿನಿಂದ ಭಾಷಣಕಾರರು ಬಂದಾಗ ಅವರಿಗೆ ಉಳುಕೊಳ್ಳಲು ನನ್ನ ಅಮ್ಮ ಮನೆಯಲ್ಲಿ ಜಾಗ ಕೊಡುತ್ತಿದ್ದರು. ವರ್ಷಗಳ ಹಿಂದೆ ಪಾದ್ರಿಗಳಿಂದ ಬೇಸತ್ತುಹೋಗಿದ್ದ ಅಪ್ಪಗೆ ಬೆತೆಲಿನ ಮೇಲ್ವಿಚಾರಕರು ಪಾದ್ರಿಗಳಂತಿಲ್ಲ, ದೀನ ಮನಸ್ಸುಳ್ಳವರೆಂದು ಗೊತ್ತಾಯಿತು. ಕೊನೆಗೆ 1962ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದರು.

ಪೋರ್ಟರಿಕೊದಲ್ಲಿ ನಮ್ಮ ಮದುವೆಯ ನಂತರ ಮತ್ತು 2003ರಲ್ಲಿ ನಮ್ಮ 50ನೇ ವಿವಾಹ ವಾರ್ಷಿಕೋತ್ಸವದಲ್ಲಿ ಮ್ಯಾಕ್ಸಿನಳ ಜೊತೆ

ನನ್ನ ಪ್ರಿಯ ಪತ್ನಿ ಮ್ಯಾಕ್ಸಿನ್‌ 2011ರಲ್ಲಿ ತೀರಿಕೊಂಡಳು. ಪುನರುತ್ಥಾನ ನಿಜಕ್ಕೂ ತುಂಬ ಸಾಂತ್ವನ ಕೊಡುವ ವಿಷಯ! ಅವಳನ್ನು ಪುನಃ ನೋಡಲು ಕಾಯುತ್ತಿದ್ದೇನೆ. 58 ವರ್ಷ ಒಟ್ಟಿಗಿದ್ದೆವು. ಆ ಸಮಯದಲ್ಲೆಲ್ಲಾ ಪೋರ್ಟರಿಕೊದಲ್ಲಿ ಕೇವಲ 650 ಮಂದಿಯಿದ್ದ ಯೆಹೋವನ ಜನರು 26,000ಕ್ಕೆ ಏರುವುದನ್ನು ಕಂಡೆವು. 2013ರಲ್ಲಿ ಪೋರ್ಟರಿಕೊದ ಬ್ರಾಂಚ್‌ ಅಮೆರಿಕಾದ ಬ್ರಾಂಚ್‌ನೊಂದಿಗೆ ಒಂದಾಯಿತು. ನನ್ನನ್ನು ನ್ಯೂಯಾರ್ಕ್‌ನ ವಾಲ್‌ಕಿಲ್‌ನಲ್ಲಿ ಸೇವೆಮಾಡಲು ಕರೆಯಲಾಯಿತು. 60 ವರ್ಷಗಳಿಂದ ಪೋರ್ಟರಿಕೊ ದ್ವೀಪದಲ್ಲಿ ಸೇವೆಮಾಡಿದ ನಾನು ಪೂರಾ ಅಲ್ಲಿಯವನೇ ಆಗಿಬಿಟ್ಟಿದ್ದೆ. ಆದರೆ ಈಗ ನಾನು ಅಲ್ಲಿಂದ ಹೊರಡುವ ಸಮಯ ಬಂದಿತ್ತು!

“ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ”

ನಾನು ಇನ್ನೂ ಬೆತೆಲಿನಲ್ಲಿ ಸಂತೋಷದಿಂದ ದೇವರ ಸೇವೆ ಮಾಡುತ್ತಿದ್ದೇನೆ. ನನಗೀಗ 90 ದಾಟಿದೆ. ಈಗ ನನ್ನ ಕೆಲಸ ಬೆತೆಲ್‌ ಕುಟುಂಬದ ಸದಸ್ಯರಿಗೆ ಆಧ್ಯಾತ್ಮಿಕ ಕುರುಬನಾಗಿ ಪ್ರೋತ್ಸಾಹ ನೀಡುವುದು. ವಾಲ್‌ಕಿಲ್‌ಗೆ ಬಂದಂದಿನಿಂದ ನಾನು 600ಕ್ಕಿಂತಲೂ ಹೆಚ್ಚು ಮಂದಿಗೆ ಹೀಗೆ ಪ್ರೋತ್ಸಾಹ ನೀಡಿದ್ದೇನೆ. ಕೆಲವರು ವೈಯಕ್ತಿಕ ಅಥವಾ ಕುಟುಂಬ ಸಮಸ್ಯೆಗಳನ್ನು ಚರ್ಚಿಸಲು ಬಯಸುತ್ತಾರೆ. ಇತರರು ತಮ್ಮ ಬೆತೆಲ್‌ ಸೇವೆಯನ್ನು ಯಶಸ್ವಿಗೊಳಿಸಲು ಏನು ಮಾಡಬೇಕೆಂದು ಕೇಳುತ್ತಾರೆ. ಇತ್ತೀಚೆಗೆ ಮದುವೆಯಾದ ಇನ್ನೂ ಕೆಲವರು ವಿವಾಹ ಜೀವನದ ಕುರಿತು ಸಲಹೆ ಕೇಳುತ್ತಾರೆ. ಬೆತೆಲ್‌ನಲ್ಲಿರುವ ಕೆಲವರು ಪಯನೀಯರರಾಗಿ ನೇಮಕ ಪಡೆದಾಗ ಸಲಹೆ ಕೇಳಲು ಬರುತ್ತಾರೆ. ನಾನು ಎಲ್ಲರಿಗೂ ಕಿವಿಗೊಡುತ್ತೇನೆ. ಸೂಕ್ತವಿದ್ದಾಗಲೆಲ್ಲಾ ಅವರಿಗೆ, “‘ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ’ ಹಾಗಾಗಿ ಸಂತೋಷದಿಂದ ಕೆಲಸಮಾಡಿ, ಇದು ಯೆಹೋವನ ಕೆಲಸ” ಎಂದು ಹೇಳುತ್ತೇನೆ.—2 ಕೊರಿಂ. 9:7.

ನಾವು ಮಾಡುತ್ತಿರುವ ಕೆಲಸ ಏಕೆ ಪ್ರಾಮುಖ್ಯ ಎಂಬದನ್ನು ಯಾವಾಗಲೂ ಮನಸ್ಸಿನಲ್ಲಿಡಬೇಕು. ಆಗ ಬೆತೆಲಿನಲ್ಲಾಗಲಿ ಬೇರೆಲ್ಲೇ ಆಗಲಿ ಸವಾಲುಗಳಿದ್ದರೂ ಸಂತೋಷದಿಂದಿರಲು ಆಗುತ್ತದೆ. ಬೆತೆಲಿನಲ್ಲಿ ನಾವು ಮಾಡುವ ಪ್ರತಿಯೊಂದೂ ಪವಿತ್ರ ಸೇವೆಯೇ. ಈ ಮೂಲಕ ‘ನಂಬಿಗಸ್ತ ವಿವೇಚನೆಯುಳ್ಳ ಆಳು’ ಲೋಕವ್ಯಾಪಕವಾಗಿ ಸಹೋದರರಿಗೆ ಆಧ್ಯಾತ್ಮಿಕ ಆಹಾರ ಒದಗಿಸುವಂತೆ ಸಹಾಯ ಕೊಡುತ್ತೇವೆ. (ಮತ್ತಾ. 24:45) ನಾವು ಯೆಹೋವನ ಸೇವೆಯನ್ನು ಎಲ್ಲೇ ಮಾಡಲಿ ಆತನನ್ನು ಸ್ತುತಿಸುವ ಅವಕಾಶಗಳು ನಮಗೆ ಸಿಗುತ್ತವೆ. ಆತನು ಏನನ್ನು ಮಾಡಲು ಹೇಳುತ್ತಾನೋ ಅದನ್ನು ಮಾಡುವುದರಲ್ಲಿ ಸಂತೋಷಪಡೋಣ. ಏಕೆಂದರೆ “ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”

^ ಪ್ಯಾರ. 13 ಲೆನ್ನಾರ್ಡ್‌ ಸ್ಮಿತ್‌ರ ಜೀವನ ಕಥೆ 2012, ಏಪ್ರಿಲ್‌ 15ರ ಕಾವಲಿನಬುರುಜುವಿನಲ್ಲಿದೆ.