ಪ್ರೀತಿ—ಅಮೂಲ್ಯವಾದ ಗುಣ
ಪವಿತ್ರಾತ್ಮ ನಮ್ಮಲ್ಲಿ ಕೆಲಸ ಮಾಡಿದಾಗ ಹುಟ್ಟುವ ಒಂಬತ್ತು ಗುಣಗಳ ಬಗ್ಗೆ ಬರೆಯುವಂತೆ ಯೆಹೋವನು ಅಪೊಸ್ತಲ ಪೌಲನನ್ನು ಪ್ರೇರಿಸಿದನು. (ಗಲಾ. 5:22, 23) ಈ ಗುಣಗಳನ್ನು “ಪವಿತ್ರಾತ್ಮದಿಂದ ಉಂಟಾಗುವ ಫಲ” ಎಂದು ಕರೆಯಲಾಗುತ್ತದೆ. * ಇದು ಕ್ರೈಸ್ತರು ಬೆಳೆಸಿಕೊಳ್ಳಬೇಕಾದ “ನೂತನ ವ್ಯಕ್ತಿತ್ವ”ದ ಭಾಗವಾಗಿದೆ. (ಕೊಲೊ. 3:10) ಒಂದು ಮರಕ್ಕೆ ಚೆನ್ನಾಗಿ ನೀರು ಸಿಕ್ಕಿದಾಗ ಅದು ಫಲ ಕೊಡುವಂತೆ ನಮ್ಮಲ್ಲಿ ಪವಿತ್ರಾತ್ಮ ಕೆಲಸ ಮಾಡಿದಾಗ ನಮ್ಮ ಜೀವನದಲ್ಲಿ ಅದರ ಫಲವನ್ನು ನಾವು ತೋರಿಸುತ್ತೇವೆ.—ಕೀರ್ತ. 1:1-3.
ಪೌಲನು ಪ್ರೀತಿಯನ್ನು ಮೊದಲನೇ ಗುಣವಾಗಿ ಪಟ್ಟಿಮಾಡಿದ್ದಾನೆ. ಈ ಗುಣ ಎಷ್ಟು ಅಮೂಲ್ಯವಾಗಿದೆ? ತನ್ನಲ್ಲಿ ಪ್ರೀತಿ ಇಲ್ಲದಿದ್ದರೆ ತಾನು “ಏನೂ ಅಲ್ಲ” ಎಂದು ಪೌಲ ಹೇಳಿದನು. (1 ಕೊರಿಂ. 13:2) ಪ್ರೀತಿ ಅಂದರೇನು? ಅದನ್ನು ಬೆಳೆಸಿಕೊಳ್ಳುವುದು ಹೇಗೆ? ಪ್ರತಿದಿನ ಅದನ್ನು ತೋರಿಸುವುದು ಹೇಗೆ?
ಪ್ರೀತಿ ಅಂದರೇನು?
ಪ್ರೀತಿ ಅಂದರೇನು ಎಂದು ವಿವರಿಸುವುದು ಸ್ವಲ್ಪ ಕಷ್ಟ. ಆದರೂ ಪ್ರೀತಿ ಇರುವ ವ್ಯಕ್ತಿ ಹೇಗೆ ಯೋಚಿಸುತ್ತಾನೆ, ಹೇಗೆ ನಡಕೊಳ್ಳುತ್ತಾನೆ ಎಂದು ಬೈಬಲ್ ವಿವರಿಸುತ್ತದೆ. ಪ್ರೀತಿ ಇರುವ ವ್ಯಕ್ತಿ ‘ದೀರ್ಘ ಸಹನೆಯಿಂದ, ದಯೆಯಿಂದ’ ನಡಕೊಳ್ಳುತ್ತಾನೆ. ‘ಸತ್ಯದಲ್ಲಿ ಹರ್ಷಿಸುತ್ತಾನೆ. ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ, ಎಲ್ಲವನ್ನೂ ನಂಬುತ್ತಾನೆ, ಎಲ್ಲವನ್ನೂ ನಿರೀಕ್ಷಿಸುತ್ತಾನೆ, ಎಲ್ಲವನ್ನೂ ತಾಳಿಕೊಳ್ಳುತ್ತಾನೆ.’ ಪ್ರೀತಿ ಇರುವ ವ್ಯಕ್ತಿಗೆ ಬೇರೆಯವರ ಮೇಲೆ ತುಂಬ ಮಮತೆ ಇರುತ್ತದೆ, ಕಾಳಜಿ ಇರುತ್ತದೆ. ನಿಷ್ಠಾವಂತ ಸ್ನೇಹಿತನಾಗಿರುತ್ತಾನೆ. ಆದರೆ ಪ್ರೀತಿ ಇಲ್ಲದ ವ್ಯಕ್ತಿಯಲ್ಲಿ ಹೊಟ್ಟೆಕಿಚ್ಚು, ಹೆಮ್ಮೆ, ಸ್ವಾರ್ಥ ಇರುತ್ತದೆ. ಅಸಭ್ಯವಾಗಿ ವರ್ತಿಸುತ್ತಾನೆ ಮತ್ತು ಬೇರೆಯವರನ್ನು ಕ್ಷಮಿಸುವುದಿಲ್ಲ. ನಾವು ಇಂಥ ಕೆಟ್ಟ ಗುಣಗಳನ್ನು ತೋರಿಸಲು ಇಷ್ಟಪಡುವುದಿಲ್ಲ. ಬದಲಿಗೆ ನಮ್ಮ ‘ಸ್ವಹಿತವನ್ನು ಹುಡುಕದೆ’ ನಿಜವಾದ ಪ್ರೀತಿಯನ್ನು ತೋರಿಸಲು ಬಯಸುತ್ತೇವೆ.—1 ಕೊರಿಂ. 13:4-8.
ಪ್ರೀತಿ ತೋರಿಸುವುದರಲ್ಲಿ ಯೆಹೋವ ಮತ್ತು ಯೇಸು ಅತ್ಯುತ್ತಮ ಮಾದರಿ
“ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾ. 4:8) ಆತನ ಎಲ್ಲ ಕೆಲಸಕಾರ್ಯಗಳು ಇದಕ್ಕೆ ಸಾಕ್ಷಿ. ನಮಗಾಗಿ ನೋವು-ಸಾವು ಅನುಭವಿಸುವಂತೆ ತನ್ನ ಮಗನಾದ ಯೇಸುವನ್ನು ಈ ಭೂಮಿಗೆ ಕಳುಹಿಸಿದ್ದು ಆತನ ಪ್ರೀತಿಯ ಕಾರ್ಯಗಳಲ್ಲೇ ಅತಿ ದೊಡ್ಡದು. “ನಾವು ದೇವರ ಏಕೈಕಜಾತ ಪುತ್ರನ ಮೂಲಕ ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಆತನು ಅವನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಿಂದ ದೇವರ ಪ್ರೀತಿಯು ನಮ್ಮ ವಿಷಯದಲ್ಲಿ ಪ್ರಕಟವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಆತನು ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ನಮ್ಮ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವಾಗಿ ಕಳುಹಿಸಿಕೊಟ್ಟದ್ದರಲ್ಲಿ ಪ್ರೀತಿ ಏನೆಂಬುದು ತೋರಿಬಂತು” ಎಂದು ಅಪೊಸ್ತಲ ಯೋಹಾನ ಹೇಳಿದನು. (1 ಯೋಹಾ. 4:9, 10) ದೇವರ ಪ್ರೀತಿಯ ಕಾರಣದಿಂದಲೇ ನಮ್ಮ ಪಾಪಗಳಿಗೆ ಕ್ಷಮೆ ಮತ್ತು ನಿರೀಕ್ಷೆ, ಜೀವ ಸಿಗುತ್ತದೆ.
ಯೇಸು ತನ್ನ ಪ್ರಾಣವನ್ನೇ ಕೊಟ್ಟು ಮಾನವಕುಲದ ಮೇಲಿರುವ ಪ್ರೀತಿಯನ್ನು ತೋರಿಸಿದ್ದಾನೆ. ಇದು ದೇವರ ಚಿತ್ತವಾಗಿತ್ತು. “ಆ ‘ಚಿತ್ತದಿಂದಾಗಿ’ ಯೇಸು ಕ್ರಿಸ್ತನ ದೇಹವನ್ನು ಅರ್ಪಿಸುವ ಮೂಲಕ ಎಲ್ಲ ಕಾಲಕ್ಕಾಗಿ ಒಂದೇ ಸಾರಿ ನಾವು ಪವಿತ್ರೀಕರಿಸಲ್ಪಟ್ಟಿದ್ದೇವೆ” ಎಂದು ಅಪೊಸ್ತಲ ಪೌಲ ಹೇಳಿದನು. (ಇಬ್ರಿ. 10:9, 10) ಇದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಯಾವ ಮಾನವನೂ ತೋರಿಸಲು ಸಾಧ್ಯವಿಲ್ಲ. ಯೇಸು ಹೇಳಿದ್ದು: “ಒಬ್ಬನು ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾರಲ್ಲಿಯೂ ಇಲ್ಲ.” (ಯೋಹಾ. 15:13) ಯೆಹೋವ ಮತ್ತು ಯೇಸು ತೋರಿಸಿದಂಥ ಪ್ರೀತಿಯನ್ನು ಅಪರಿಪೂರ್ಣ ಮಾನವರು ತೋರಿಸಲು ಸಾಧ್ಯವೇ? ಖಂಡಿತ ಸಾಧ್ಯ! ಹೇಗೆ ಎಂದು ಮುಂದೆ ನೋಡೋಣ.
“ಪ್ರೀತಿಯಲ್ಲಿ ನಡೆಯುತ್ತಾ ಇರಿ”
“ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ. ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಿಮಗೋಸ್ಕರ ತನ್ನನ್ನೇ . . . ಒಪ್ಪಿಸಿಕೊಟ್ಟ ಪ್ರಕಾರವೇ ನೀವೂ ಪ್ರೀತಿಯಲ್ಲಿ ನಡೆಯುತ್ತಾ ಇರಿ” ಎಂದು ಪೌಲ ನಮ್ಮನ್ನು ಉತ್ತೇಜಿಸಿದ್ದಾನೆ. (ಎಫೆ. 5:1, 2) “ಪ್ರೀತಿಯಲ್ಲಿ ನಡೆಯುತ್ತಾ” ಇರುವುದು ಅಂದರೆ ಏನು? ಅಂದರೆ ಯಾವಾಗಲೂ ಪ್ರೀತಿ ತೋರಿಸುವುದು ಎಂದರ್ಥ. ನಾವು ಬೇರೆಯವರನ್ನು ಪ್ರೀತಿಸುತ್ತೇವೆ ಎಂದು ಬರೀ ಬಾಯಿಮಾತಲ್ಲಿ ಹೇಳುವುದಿಲ್ಲ, ಮಾಡಿ ತೋರಿಸುತ್ತೇವೆ. ಯೋಹಾನ ಹೇಳಿದ್ದು: “ಚಿಕ್ಕ ಮಕ್ಕಳೇ, ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ.” (1 ಯೋಹಾ. 3:18) ಉದಾಹರಣೆಗೆ, ನಾವು ಯೆಹೋವನನ್ನು, ಜನರನ್ನು ಪ್ರೀತಿಸುವುದರಿಂದ ‘ರಾಜ್ಯದ ಸುವಾರ್ತೆಯನ್ನು’ ಸಾರುತ್ತೇವೆ. (ಮತ್ತಾ. 24:14; ಲೂಕ 10:27) ಬೇರೆಯವರಿಗೆ ತಾಳ್ಮೆ, ದಯೆ ತೋರಿಸುವ ಮತ್ತು ಕ್ಷಮಿಸುವ ಮೂಲಕವೂ “ಪ್ರೀತಿಯಲ್ಲಿ ನಡೆಯುತ್ತಾ” ಇದ್ದೇವೆ ಎಂದು ತೋರಿಸುತ್ತೇವೆ. ನಾವು ಬೈಬಲಿನ ಈ ಸಲಹೆಯನ್ನು ಪಾಲಿಸುತ್ತೇವೆ: “ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.”—ಕೊಲೊ. 3:13.
ನಾವು ಬೇರೆಯವರಿಗೆ ಬುದ್ಧಿವಾದ ಹೇಳಿದರೆ ಅಥವಾ ತಿದ್ದಿದರೆ ಅವರ ಮೇಲೆ ನಮಗೆ ಪ್ರೀತಿ ಇಲ್ಲ ಅಂತಲ್ಲ. ಒಂದು ಉದಾಹರಣೆ ನೋಡಿ. ಕೆಲವು ಹೆತ್ತವರು ತಮ್ಮ ಮಗುವಿನ ಅಳು ನಿಲ್ಲಿಸಲು ಅದು ಕೇಳುವುದನ್ನೆಲ್ಲ ಮಾಡುತ್ತಾರೆ. ಆದರೆ ಮಗುವಿನ ಮೇಲೆ ನಿಜವಾದ ಪ್ರೀತಿ ಇರುವ ಹೆತ್ತವರು ಅಗತ್ಯವಿರುವಾಗ ಕಟ್ಟುನಿಟ್ಟಿನಿಂದ ಇರುತ್ತಾರೆ. ಅದೇ ರೀತಿ ದೇವರು ಪ್ರೀತಿಯಾಗಿದ್ದರೂ “ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತನ್ನು ನೀಡುತ್ತಾನೆ.” (ಇಬ್ರಿ. 12:6) ಆದ್ದರಿಂದ ಅಗತ್ಯವಿರುವಾಗ ಸರಿಯಾದ ಶಿಸ್ತು ಕೊಡುವುದು ಕೂಡ ಪ್ರೀತಿ ತೋರಿಸುವುದೇ ಆಗಿದೆ. (ಜ್ಞಾನೋ. 3:11, 12) ಆದರೆ ನೆನಪಲ್ಲಿಡಿ, ನಾವೆಲ್ಲರೂ ಪಾಪಿಗಳು. ಪ್ರೀತಿ ತೋರಿಸುವುದನ್ನು ಆಗಾಗ ಮರೆತುಬಿಡುತ್ತೇವೆ. ಆದ್ದರಿಂದ ಪ್ರೀತಿ ತೋರಿಸುವ ವಿಷಯದಲ್ಲಿ ನಾವೆಲ್ಲರೂ ಪ್ರಗತಿ ಮಾಡಬೇಕಿದೆ. ಇದನ್ನು ಮಾಡುವುದು ಹೇಗೆ? ಮೂರು ವಿಧಗಳನ್ನು ಇಲ್ಲಿ ಕೊಡಲಾಗಿದೆ.
ಪ್ರೀತಿಯನ್ನು ಬೆಳೆಸಿಕೊಳ್ಳುವುದು ಹೇಗೆ?
ಮೊದಲನೇದಾಗಿ ಪವಿತ್ರಾತ್ಮವನ್ನು ಕೊಡುವಂತೆ ದೇವರನ್ನು ಬೇಡಿಕೊಳ್ಳಿ. ಅದು ಪ್ರೀತಿ ಎಂಬ ಗುಣವನ್ನು ಹುಟ್ಟಿಸುತ್ತದೆ. ಯೆಹೋವನು ‘ತನ್ನನ್ನು ಕೇಳುವವರಿಗೆ ಪವಿತ್ರಾತ್ಮವನ್ನು’ ಕೊಡುತ್ತಾನೆ ಎಂದು ಯೇಸು ಹೇಳಿದ್ದಾನೆ. (ಲೂಕ 11:13) ಆದ್ದರಿಂದ ನಾವು ಪವಿತ್ರಾತ್ಮಕ್ಕಾಗಿ ಬೇಡಿಕೊಂಡರೆ ಮತ್ತು ಅದು ನಮ್ಮ ಮೇಲೆ ಪ್ರಭಾವ ಬೀರುವಂತೆ ಬಿಟ್ಟರೆ, ಹೆಚ್ಚು ಪ್ರೀತಿ ತೋರಿಸಲು ಆರಂಭಿಸುತ್ತೇವೆ. (ಗಲಾ. 5:16) ನೀವೊಬ್ಬ ಹಿರಿಯನಾಗಿದ್ದರೆ, ಬೈಬಲಿನಿಂದ ನೀವು ಬೇರೆಯವರಿಗೆ ಸಲಹೆ ಕೊಡುವಾಗ ಅದನ್ನು ಪ್ರೀತಿಯಿಂದ ಕೊಡಲು ಪವಿತ್ರಾತ್ಮದ ಸಹಾಯಕ್ಕಾಗಿ ಕೇಳಿಕೊಳ್ಳಿ. ನೀವು ಹೆತ್ತವರಾಗಿರುವುದಾದರೆ, ಮಕ್ಕಳಿಗೆ ಕೋಪದಿಂದಲ್ಲ ಪ್ರೀತಿಯಿಂದ ಶಿಸ್ತು ಕೊಡಲು ದೇವರ ಪವಿತ್ರಾತ್ಮದ ಸಹಾಯಕ್ಕಾಗಿ ಬೇಡಿಕೊಳ್ಳಿ.
ಎರಡನೇದಾಗಿ ಯೇಸುವನ್ನು ಬೇರೆಯವರು ಕೆಟ್ಟದಾಗಿ ನಡೆಸಿಕೊಂಡಾಗಲೂ ಅವನು ಹೇಗೆ ಪ್ರೀತಿ ತೋರಿಸಿದನು ಎಂದು ಚೆನ್ನಾಗಿ ಯೋಚಿಸಿ. (1 ಪೇತ್ರ 2:21, 23) ಯಾರಾದರೂ ನಿಮ್ಮ ಮನಸ್ಸು ನೋಯಿಸಿದರೆ, ಅನ್ಯಾಯ ಮಾಡಿದರೆ ‘ನನ್ನ ಜಾಗದಲ್ಲಿ ಯೇಸು ಇದ್ದಿದ್ದರೆ ಏನು ಮಾಡುತ್ತಿದ್ದನು?’ ಎಂದು ಕೇಳಿಕೊಳ್ಳಿ. ಲೀ ಎಂಬ ಸಹೋದರಿ ಇದನ್ನೇ ಮಾಡುತ್ತಾಳೆ. ಇದು ಆಕೆ ಏನೇ ಮಾಡುವ ಮುಂಚೆ ಚೆನ್ನಾಗಿ ಯೋಚಿಸಲು ಸಹಾಯ ಮಾಡಿದೆ. ಆಕೆ ಹೇಳುವುದು: “ನನ್ನ ಜೊತೆ ಕೆಲಸ ಮಾಡುವ ಒಬ್ಬಳು ನನ್ನ ಬಗ್ಗೆ, ನನ್ನ ಕೆಲಸದ ಬಗ್ಗೆ ಇ-ಮೇಲಲ್ಲಿ ಸ್ವಲ್ಪ ಕೆಟ್ಟದಾಗಿ ಬರೆದು ನಮ್ಮ ಆಫೀಸಲ್ಲಿದ್ದ ಬೇರೆಯವರಿಗೆ ಕಳಿಸಿದಳು. ಇದರಿಂದ ನನಗೆ ತುಂಬಾ ಬೇಜಾರಾಯಿತು. ಆದರೆ ‘ಅವಳ ಜೊತೆ ನಾನು ನಡಕೊಳ್ಳೋ ರೀತಿಯಲ್ಲಿ ಯೇಸುವನ್ನು ಹೇಗೆ ಅನುಕರಿಸಬಹುದು?’ ಅಂತ ಯೋಚಿಸಿದೆ. ಇಂಥ ಸನ್ನಿವೇಶದಲ್ಲಿ ಯೇಸು ಏನು ಮಾಡಿರಬಹುದು ಅಂತ ಧ್ಯಾನಿಸಿದೆ. ಆಮೇಲೆ ಆ ವಿಷಯನ ದೊಡ್ಡದು ಮಾಡದೇ ಅಲ್ಲಿಗೇ ಬಿಟ್ಟುಬಿಟ್ಟೆ. ಆಮೇಲೆ ಗೊತ್ತಾಯಿತು, ಅವಳಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಇತ್ತು, ತುಂಬ ಒತ್ತಡದಲ್ಲಿದ್ದಳು ಅಂತ. ಅದರಿಂದಲೇ ನನ್ನ ಬಗ್ಗೆ ಆ ತರ ಬರೆದಿರಬಹುದು, ಬೇಕುಬೇಕೆಂದು ಏನೂ ಮಾಡಿರಲ್ಲ ಎಂದು ಸಮಾಧಾನ ಮಾಡಿಕೊಂಡೆ. ಹೀಗೆ ಕೋಪ ಕೆರಳುವಂಥ ಸನ್ನಿವೇಶ ಎದುರಾದರೂ ಯೇಸು ಹೇಗೆ ಪ್ರೀತಿ ತೋರಿಸಿರಬಹುದು ಎನ್ನುವ ವಿಷಯದ ಬಗ್ಗೆ ಧ್ಯಾನಿಸಿದ್ದು ನನಗೆ ಸಹಾಯ ಮಾಡಿತು.” ಯೇಸುವನ್ನು ಅನುಕರಿಸಿದರೆ ನಾವು ಬೇರೆಯವರಿಗೆ ಯಾವಾಗಲೂ ಪ್ರೀತಿ ತೋರಿಸುತ್ತೇವೆ.
ಮೂರನೇದಾಗಿ ಸ್ವತ್ಯಾಗದ ಪ್ರೀತಿ ತೋರಿಸಲು ಕಲಿಯಿರಿ. ಇಂಥ ಪ್ರೀತಿ ಇದ್ದರೆ ನಾವು ಯೇಸುವಿನ ನಿಜ ಹಿಂಬಾಲಕರು ಎಂದು ಜನರು ಗುರುತಿಸುತ್ತಾರೆ. (ಯೋಹಾ. 13:34, 35) ಯೇಸು ಇಂಥ ಪ್ರೀತಿ ತೋರಿಸಿ ನಮಗೆ ಅತ್ಯುತ್ತಮ ಮಾದರಿ ಇಟ್ಟಿದ್ದಾನೆ. ಹೇಗೆ? ಸ್ವರ್ಗದಿಂದ ಭೂಮಿಗೆ ಬರುವ ಮೂಲಕ ನಮಗೋಸ್ಕರ ‘ತನ್ನನ್ನು ಬರಿದುಮಾಡಿಕೊಂಡನು’ ಮತ್ತು “ಮರಣವನ್ನು ಹೊಂದುವಷ್ಟರ ಮಟ್ಟಿಗೆ” ನಮಗೆ ಪ್ರೀತಿ ತೋರಿಸಿದನು. (ಫಿಲಿ. 2:5-8) ನಾವು ಯೇಸುವಿನಂತೆ ಸ್ವತ್ಯಾಗದ ಪ್ರೀತಿ ತೋರಿಸಲು ಕಲಿತರೆ ನಮ್ಮ ಯೋಚನೆಗಳು, ಭಾವನೆಗಳು ಅವನ ಯೋಚನೆಗಳು, ಭಾವನೆಗಳು ತರನೇ ಇರುತ್ತವೆ. ಆಗ ನಾವು ನಮ್ಮ ಅಗತ್ಯಗಳಿಗಿಂತಲೂ ಬೇರೆಯವರ ಅಗತ್ಯಗಳಿಗೆ ಹೆಚ್ಚು ಗಮನಕೊಡುತ್ತೇವೆ.
ಪ್ರೀತಿ ತೋರಿಸಿದರೆ ಸಿಗುವ ಪ್ರಯೋಜನಗಳು
ನಾವು ಪ್ರೀತಿ ತೋರಿಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿ ಎರಡು ಪ್ರಯೋಜನಗಳು ಇಲ್ಲಿವೆ:
-
ಅಂತಾರಾಷ್ಟ್ರೀಯ ಸಹೋದರತ್ವ: ಲೋಕದ ಯಾವುದೇ ಕಡೆಯಲ್ಲಿರುವ ಸಭೆಗೆ ಹೋದರೂ ಅಲ್ಲಿರುವ ಸಹೋದರ ಸಹೋದರಿಯರು ನಮ್ಮನ್ನು ಪ್ರೀತಿ ತುಂಬಿದ ಹೃದಯದಿಂದ ಸ್ವಾಗತಿಸುವುದು ನಮ್ಮ ಮಧ್ಯೆ ಪ್ರೀತಿ ಇರುವುದರಿಂದಲೇ. “ಲೋಕದಲ್ಲಿರುವ ನಿಮ್ಮ ಸಹೋದರರ ಇಡೀ ಬಳಗ” ನಿಮ್ಮನ್ನು ಪ್ರೀತಿಸುತ್ತದೆ ಎನ್ನುವ ವಿಷಯದಿಂದ ನಿಮಗೆ ರೋಮಾಂಚನ ಆಗುವುದಿಲ್ಲವೇ? (1 ಪೇತ್ರ 5:9) ಇಂಥ ಪ್ರೀತಿ ದೇವರ ಜನರ ಮಧ್ಯೆ ಮಾತ್ರ ನೋಡಲು ಸಿಗುತ್ತದೆ.
-
ಶಾಂತಿ: ‘ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಂಡಾಗ’ ನಾವು “ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ” ಆನಂದಿಸುತ್ತೇವೆ. (ಎಫೆ. 4:2, 3) ಇಂಥ ಶಾಂತಿಯನ್ನು ನಾವು ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ನೋಡುತ್ತೇವೆ. ಅಶಾಂತಿ ತುಂಬಿರುವ ಈ ಲೋಕದಲ್ಲಿ ಇಂಥ ಶಾಂತಿ-ಸಮಾಧಾನ ನೋಡಲು ಸಿಗುವುದು ಅಪರೂಪ ಅಲ್ಲವೇ? (ಕೀರ್ತ. 119:165; ಯೆಶಾ. 54:13) ನಾವು ಬೇರೆಯವರ ಜೊತೆ ಶಾಂತಿ-ಸಮಾಧಾನದಿಂದ ಇದ್ದರೆ ಅವರನ್ನು ನಿಜವಾಗಲೂ ಪ್ರೀತಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ. ಇದು ನಮ್ಮ ಸ್ವರ್ಗೀಯ ತಂದೆಯನ್ನು ಸಂತೋಷಪಡಿಸುತ್ತದೆ.—ಕೀರ್ತ. 133:1-3; ಮತ್ತಾ. 5:9.
“ಪ್ರೀತಿಯು ಭಕ್ತಿವೃದ್ಧಿಮಾಡುತ್ತದೆ”
ಪೌಲ ಬರೆದದ್ದು: “ಪ್ರೀತಿಯು ಭಕ್ತಿವೃದ್ಧಿಮಾಡುತ್ತದೆ.” (1 ಕೊರಿಂ. 8:1) ಇದರ ಅರ್ಥವೇನು? 1 ಕೊರಿಂಥ 13ನೇ ಅಧ್ಯಾಯವನ್ನು “ಪ್ರೀತಿಯ ಕೀರ್ತನೆ” ಎಂದೇ ಕೆಲವರು ಕರೆಯುತ್ತಾರೆ. ಈ ಅಧ್ಯಾಯದಲ್ಲಿ ಪ್ರೀತಿ ಹೇಗೆ ಭಕ್ತಿವೃದ್ಧಿಮಾಡುತ್ತದೆ ಎಂದು ಪೌಲ ವಿವರಿಸಿದ್ದಾನೆ. ಪ್ರೀತಿ ಬೇರೆಯವರ ಒಳಿತನ್ನೇ ಬಯಸುತ್ತದೆ. ಬೇರೆಯವರ ಅಗತ್ಯಗಳಿಗೆ ಗಮನಕೊಡುತ್ತದೆ. (1 ಕೊರಿಂ. 10:24; 13:5) ಪ್ರೀತಿಯು ಪರಹಿತ ಚಿಂತನೆ, ಪರಿಗಣನೆ, ತಾಳ್ಮೆ, ದಯೆ ತೋರಿಸುವುದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿ, ಸಹೋದರ ಸಹೋದರಿಯರ ಮಧ್ಯೆ ಒಗ್ಗಟ್ಟು ಇರುತ್ತದೆ.—ಕೊಲೊ. 3:14.
ಹತ್ತು-ಹಲವಾರು ವಿಧಗಳಲ್ಲಿ ನಾವು ಬೇರೆಯವರಿಗೆ ಪ್ರೀತಿ ತೋರಿಸಬಹುದು. ಆದರೆ ನಮಗೆ ದೇವರ ಮೇಲಿರುವ ಪ್ರೀತಿ ಎಲ್ಲಕ್ಕಿಂತಲೂ ಅಮೂಲ್ಯವಾಗಿದೆ ಮತ್ತು ಭಕ್ತಿವೃದ್ಧಿಮಾಡುತ್ತದೆ. ಯಾಕೆ? ಆತನ ಮೇಲೆ ನಮ್ಮೆಲ್ಲರಿಗೂ ಇರುವ ಈ ಪ್ರೀತಿಯೇ ನಮ್ಮ ಮಧ್ಯೆ ಇರುವ ಐಕ್ಯತೆಗೆ ಕಾರಣ! ಬೇರೆಬೇರೆ ಹಿನ್ನೆಲೆ, ಕುಲ, ಭಾಷೆಯ ಜನರು ಒಟ್ಟಿಗೆ ಯೆಹೋವನನ್ನು ಆರಾಧಿಸುತ್ತಾರೆ, “ಎಲ್ಲರು ಒಂದೇ ಮನಸ್ಸಿನಿಂದ” ಆತನ ಸೇವೆ ಮಾಡುತ್ತಾರೆ. (ಚೆಫ. 3:9) ದೇವರ ಪವಿತ್ರಾತ್ಮದ ಫಲವಾದ ಈ ಅಮೂಲ್ಯ ಗುಣವನ್ನು ಪ್ರತಿದಿನ ತೋರಿಸುವ ದೃಢತೀರ್ಮಾನ ಮಾಡೋಣ.
^ ಪ್ಯಾರ. 2 ಪವಿತ್ರಾತ್ಮದ ಫಲದ ಒಂದೊಂದು ಅಂಶವನ್ನು ಚರ್ಚಿಸುವ ಒಂಬತ್ತು ಲೇಖನಗಳು ಮೂಡಿಬರಲಿವೆ. ಅದರಲ್ಲಿ ಇದು ಮೊದಲನೇ ಲೇಖನ.