ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೇಸುವಿನ ಆರಂಭದ ಜೀವನದ ಬಗ್ಗೆ ಮತ್ತಾಯ ಬರೆದಿರುವುದಕ್ಕೂ ಲೂಕ ಬರೆದಿರುವುದಕ್ಕೂ ಯಾಕೆ ವ್ಯತ್ಯಾಸವಿದೆ?

ಯೇಸುವಿನ ಜನನ ಮತ್ತು ಆರಂಭದ ಜೀವನದ ಬಗ್ಗೆ ಮತ್ತಾಯ ಬರೆದ ವಿಷಯಗಳಲ್ಲಿ ಮತ್ತು ಲೂಕ ಬರೆದ ವಿಷಯಗಳಲ್ಲಿ ವ್ಯತ್ಯಾಸಗಳಿವೆ. ಯಾಕೆಂದರೆ ಮತ್ತಾಯ ಒಬ್ಬ ವ್ಯಕ್ತಿಯನ್ನು ಮನಸ್ಸಲ್ಲಿಟ್ಟು ಅವರ ಯೋಚನೆ, ಅನುಭವಗಳನ್ನು ಬರೆದನು ಮತ್ತು ಲೂಕ ಇನ್ನೊಬ್ಬ ವ್ಯಕ್ತಿಯ ಯೋಚನೆ, ಅನುಭವಗಳನ್ನು ಬರೆದನು.

ಮತ್ತಾಯನು ಯೋಸೇಫನಿಗಾದ ಅನುಭವಗಳನ್ನು ಬರೆದಿದ್ದಾನೆ. ಮರಿಯ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಾಗ ಯೋಸೇಫನ ಪ್ರತಿಕ್ರಿಯೆಯನ್ನು, ಅವನಿಗೆ ಮರಿಯಳ ಪರಿಸ್ಥಿತಿಯ ಬಗ್ಗೆ ಒಬ್ಬ ದೇವದೂತ ಕನಸಿನಲ್ಲಿ ವಿವರಿಸಿದ್ದನ್ನು ಮತ್ತು ಅವನು ಆ ದೇವದೂತ ಹೇಳಿದಂತೆ ಮಾಡಿದ್ದನ್ನು ಮತ್ತಾಯ ವಿವರಿಸಿದನು. (ಮತ್ತಾ. 1:19-25) ಯೋಸೇಫನಿಗೆ ಒಬ್ಬ ದೇವದೂತ ಕನಸಿನಲ್ಲಿ ಕಾಣಿಸಿಕೊಂಡು ಅವನ ಕುಟುಂಬವನ್ನು ಕರೆದುಕೊಂಡು ಈಜಿಪ್ಟಿಗೆ ಓಡಿಹೋಗುವಂತೆ ಹೇಳಿದ್ದನ್ನು ಮತ್ತು ಯೋಸೇಫ ಅದನ್ನು ಮಾಡಿದನೆಂದೂ ವಿವರಿಸಿದನು. ನಂತರ ಇನ್ನೊಂದು ಕನಸಿನಲ್ಲಿ ಒಬ್ಬ ದೇವದೂತ ಯೋಸೇಫನನ್ನು ಇಸ್ರಾಯೇಲಿಗೆ ಹಿಂದೆ ಹೋಗುವಂತೆ ಹೇಳಿದ್ದು, ಆಮೇಲೆ ಯೋಸೇಫ ನಜರೇತಿಗೆ ಬಂದು ನೆಲೆಸಿದ್ದನ್ನು ಮತ್ತಾಯ ತನ್ನ ಪುಸ್ತಕದಲ್ಲಿ ವಿವರಿಸಿದನು. (ಮತ್ತಾ. 2:13, 14, 19-23) ಮತ್ತಾಯ ಪುಸ್ತಕದ ಮೊದಲ ಎರಡು ಅಧ್ಯಾಯಗಳಲ್ಲಿ ಯೋಸೇಫನ ಹೆಸರು ಎಂಟು ಸಾರಿ ಕಂಡುಬರುತ್ತದೆ, ಆದರೆ ಮರಿಯಳ ಹೆಸರು ಬರೀ ಐದು ಸಾರಿಯಷ್ಟೆ.

ಲೂಕನು ಮರಿಯಳಿಗಾದ ಅನುಭವಗಳನ್ನು ಬರೆದಿದ್ದಾನೆ. ಮರಿಯಳಿಗೆ ಗಬ್ರಿಯೇಲ ದೇವದೂತ ಕಾಣಿಸಿಕೊಂಡ ಘಟನೆಯನ್ನು, ಅವಳು ತನ್ನ ಸಂಬಂಧಿಕಳಾದ ಎಲಿಸಬೇತಳನ್ನು ಹೋಗಿ ನೋಡಿದ್ದನ್ನು ಮತ್ತು ಯೆಹೋವನನ್ನು ಮರಿಯ ಸ್ತುತಿಸಿದ್ದನ್ನು ತನ್ನ ಪುಸ್ತಕದಲ್ಲಿ ಬರೆದನು. (ಲೂಕ 1:26-56) ಅಷ್ಟೇ ಅಲ್ಲ ಯೇಸು ಮುಂದೆ ಯಾವ ಕಷ್ಟ ಅನುಭವಿಸಲಿದ್ದಾನೆ ಎಂದು ಸಿಮೆಯೋನ ಮರಿಯಳಿಗೆ ಹೇಳಿದ ಮಾತನ್ನೂ ಬರೆದನು. 12 ವಯಸ್ಸಿನ ಯೇಸು ತನ್ನ ಕುಟುಂಬದ ಜೊತೆ ದೇವಾಲಯಕ್ಕೆ ಹೋದ ಘಟನೆಯನ್ನೂ ಲೂಕ ವಿವರಿಸಿದನು. ಆ ಸಂದರ್ಭದಲ್ಲಿ ಯೋಸೇಫ ಹೇಳಿದ ಮಾತನ್ನಲ್ಲ ಮರಿಯ ಹೇಳಿದ ಮಾತನ್ನು ಬರೆದನು. ಆ ಘಟನೆಗಳು ಮರಿಯಳ ಮೇಲೆ ಎಷ್ಟು ಪರಿಣಾಮ ಬೀರಿದವು ಎಂದೂ ತನ್ನ ಪುಸ್ತಕದಲ್ಲಿ ಹೇಳಿದನು. (ಲೂಕ 2:19, 34, 35, 48, 51) ಲೂಕ ಬರೆದ ಪುಸ್ತಕದ ಮೊದಲ ಎರಡು ಅಧ್ಯಾಯಗಳಲ್ಲಿ ಮರಿಯಳ ಹೆಸರು 12 ಸಲ ಕಂಡುಬಂದರೆ, ಯೋಸೇಫನ ಹೆಸರು ಬರೀ ಮೂರು ಸಲ ಕಂಡುಬರುತ್ತದೆ. ಹೀಗೆ ಮತ್ತಾಯನು ಯೋಸೇಫ ಯೋಚಿಸಿದ್ದನ್ನು, ಮಾಡಿದ್ದನ್ನು ಬರೆದನು ಮತ್ತು ಲೂಕನು ಮರಿಯಳ ಯೋಚನೆ, ಅನುಭವಗಳನ್ನು ಬರೆದನು.

ಈ ಎರಡು ಸುವಾರ್ತಾ ವೃತ್ತಾಂತಗಳಲ್ಲಿ ಇರುವ ಯೇಸುವಿನ ವಂಶಾವಳಿಯ ಪಟ್ಟಿಯಲ್ಲೂ ವ್ಯತ್ಯಾಸಗಳಿವೆ. ಮತ್ತಾಯನು ಯೋಸೇಫನ ವಂಶಾವಳಿಯನ್ನು ಪಟ್ಟಿಮಾಡಿದ್ದಾನೆ. ಯೇಸು ಯೋಸೇಫನ ದತ್ತುಮಗ ಆಗಿರುವುದರಿಂದ ದಾವೀದನ ಸಿಂಹಾಸನವನ್ನು ಪಡೆಯಲು ಅವನಿಗೆ ಕಾನೂನುಬದ್ಧ ಹಕ್ಕು ಇದೆ ಎಂದು ತೋರಿಸಿದ್ದಾನೆ. ಯೋಸೇಫನು ದಾವೀದನ ಮಗನಾದ ಸೊಲೊಮೋನನ ಮೂಲಕ ದಾವೀದನ ಸಂತತಿಯಲ್ಲೇ ಹುಟ್ಟಿದವನು. (ಮತ್ತಾ. 1:6, 16) ಆದರೆ ಲೂಕನು ಮರಿಯಳ ವಂಶಾವಳಿಯನ್ನು ಪಟ್ಟಿಮಾಡಿದ್ದಾನೆ. ಯೇಸುವಿಗೆ “ಶರೀರಾನುಸಾರವಾಗಿ” ಅಂದರೆ ದಾವೀದನ ಸಿಂಹಾಸನವನ್ನು ಪಡೆಯಲು ಸ್ವಾಭಾವಿಕ ಹಕ್ಕು ಇದೆ ಎಂದು ತೋರಿಸಿದ್ದಾನೆ. (ರೋಮ. 1:3) ಮರಿಯಳು ದಾವೀದನ ಮಗನಾದ ನಾತಾನನ ಮೂಲಕ ದಾವೀದನ ಸಂತತಿಯಲ್ಲಿ ಹುಟ್ಟಿದವಳು. (ಲೂಕ 3:31) ಆದರೆ ವಂಶಾವಳಿಯ ಪಟ್ಟಿಯಲ್ಲಿ ಮರಿಯಳು ಹೇಲೀಯ ಮಗಳು ಎಂದು ಲೂಕ ಯಾಕೆ ಉಲ್ಲೇಖಿಸಿಲ್ಲ? ಯಾಕೆಂದರೆ ಸಾಮಾನ್ಯವಾಗಿ ಅಲ್ಲಿನ ಅಧಿಕೃತ ದಾಖಲೆಗಳಲ್ಲಿ ಕುಟುಂಬದಲ್ಲಿರುವ ಗಂಡಸರನ್ನು ಮಾತ್ರ ಸೇರಿಸಲಾಗುತ್ತಿತ್ತು. ಆದ್ದರಿಂದ ಲೂಕನು ವಂಶಾವಳಿಯ ಪಟ್ಟಿಯಲ್ಲಿ ಯೋಸೇಫನನ್ನು ಹೇಲೀಯ ಮಗನೆಂದು ಬರೆದಾಗ ಜನರು ಅವನು ಹೇಲೀಯ ಅಳಿಯ ಎಂದು ಅರ್ಥಮಾಡಿಕೊಂಡರು.—ಲೂಕ 3:23.

ಮತ್ತಾಯ ಮತ್ತು ಲೂಕ ಪುಸ್ತಕಗಳಲ್ಲಿರುವ ಯೇಸುವಿನ ವಂಶಾವಳಿಯ ಪಟ್ಟಿಯಿಂದ ಗೊತ್ತಾಗುವ ವಿಷಯ ಏನೆಂದರೆ, ದೇವರು ವಾಗ್ದಾನಮಾಡಿದ ಮೆಸ್ಸೀಯನು ಯೇಸುವೇ. ಅವನು ದಾವೀದನ ವಂಶಸ್ಥ ಎನ್ನುವುದು ಅಂದು ಜನರೆಲ್ಲರಿಗೂ ಗೊತ್ತಿತ್ತು. ಆದ್ದರಿಂದಲೇ ಫರಿಸಾಯರು ಮತ್ತು ಸದ್ದುಕಾಯರು ಈ ವಿಷಯವನ್ನು ಅಲ್ಲಗಳೆಯಲು ಆಗಲಿಲ್ಲ. ಮತ್ತಾಯ ಮತ್ತು ಲೂಕ ಬರೆದಿರುವ ಯೇಸುವಿನ ವಂಶಾವಳಿಯಿಂದ ನಮ್ಮ ನಂಬಿಕೆ ಹೆಚ್ಚಾಗುತ್ತದೆ ಮತ್ತು ದೇವರ ಇನ್ನು ಉಳಿದ ವಾಗ್ದಾನಗಳೆಲ್ಲ ನೆರವೇರುತ್ತವೆ ಎಂಬ ಭರವಸೆಯನ್ನು ಕೊಡುತ್ತದೆ.