ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಸಂಗ್ರಹಾಲಯ

“ಮುಂದಿನ ಸಮ್ಮೇಳನ ಯಾವಾಗ ನಡೆಯುತ್ತದೆ?”

“ಮುಂದಿನ ಸಮ್ಮೇಳನ ಯಾವಾಗ ನಡೆಯುತ್ತದೆ?”

ಇಸವಿ 1932, ನವೆಂಬರ್‌ ತಿಂಗಳ ಕೊನೆ. ಹತ್ತು ಲಕ್ಷಕ್ಕಿಂತ ಹೆಚ್ಚು ಜನರಿಂದ ತುಂಬಿರುವ ಮೆಕ್ಸಿಕೋ ಸಿಟಿ. ಗಿಜಿಗುಡುತ್ತಿದ್ದ ಈ ನಗರದಲ್ಲಿ ಒಂದು ವಾರದ ಹಿಂದೆಯಷ್ಟೇ ಮೊದಲನೇ ಸಾರಿ ಟ್ರಾಫಿಕ್‌ ಸಿಗ್ನಲ್‌ ಅನ್ನು ಅಳವಡಿಸಲಾಯಿತು. ಆದರೆ ಈಗ ಜನರು ಬೇರೊಂದು ವಿಷಯದಿಂದ ತುಂಬ ಕುತೂಹಲಗೊಂಡಿದ್ದಾರೆ. ಪತ್ರಿಕಾ ಮಾಧ್ಯಮದವರು ತಮ್ಮ ಕ್ಯಾಮರಾಗಳೊಂದಿಗೆ ರೈಲು ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿದ್ದಾರೆ. ಒಬ್ಬ ವಿಶೇಷ ಅತಿಥಿ ಬರುವುದಕ್ಕಾಗಿ ಕಾಯುತ್ತಿದ್ದಾರೆ. ಯಾರದು? ಜೋಸೆಫ್‌ ಎಫ್‌. ರದರ್‌ಫರ್ಡ್‌. ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರು. ಮೂರು ದಿನದ ಅಧಿವೇಶನಕ್ಕೆ ಹಾಜರಾಗಲು ಬರುತ್ತಿರುವ ಸಹೋದರ ರದರ್‌ಫರ್ಡ್‌ ಅನ್ನು ಬರಮಾಡಿಕೊಳ್ಳಲು ಸ್ಥಳೀಯ ಸಾಕ್ಷಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.

ದ ಗೋಲ್ಡನ್‌ ಏಜ್‌ ಪತ್ರಿಕೆ ಹೇಳಿದ್ದೇನೆಂದರೆ, “ಈ ಅಧಿವೇಶನ ಅತಿ ಪ್ರಾಮುಖ್ಯ ಘಟನೆ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.” ಏಕೆಂದರೆ ಮೆಕ್ಸಿಕೋದಲ್ಲಿ ಸತ್ಯವನ್ನು ಹಬ್ಬಿಸುವುದರಲ್ಲಿ ಇದು ಮುಖ್ಯ ಪಾತ್ರ ವಹಿಸಲಿತ್ತು. ಆದರೆ ಇದೊಂದು ಚಿಕ್ಕ ಅಧಿವೇಶನ ಆಗಿತ್ತು, ಬರೀ 150 ಜನ ಬಂದಿದ್ದರು. ಹಾಗಾದರೆ ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಡಲು ಕಾರಣವೇನು?

ಈ ಅಧಿವೇಶನಕ್ಕೆ ಮುಂಚೆ ಮೆಕ್ಸಿಕೋ ದೇಶದಲ್ಲಿ ಸತ್ಯ ಅಷ್ಟು ಹಬ್ಬಿರಲಿಲ್ಲ. 1919ರಿಂದ ಸಣ್ಣ ಸಮ್ಮೇಳನಗಳನ್ನು ನಡೆಸಲಾಗುತ್ತಿತ್ತು. ಆದರೆ ಆ ವರ್ಷದ ನಂತರ ಸಭೆಗಳ ಸಂಖ್ಯೆ ಕಮ್ಮಿಯಾಯಿತು. 1929ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಶಾಖಾ ಕಚೇರಿ ತೆರೆದಾಗ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು ಎಂದು ಅನಿಸಿತು. ಆದರೆ ಕೆಲವು ಅಡ್ಡಿತಡೆಗಳಿದ್ದವು. ಆಗ ಕಾಲ್ಪೋರ್ಟರರು ಎಂದು ಕರೆಯಲಾಗುತ್ತಿದ್ದ ಪಯನೀಯರರು ಸುವಾರ್ತೆ ಸಾರುವಾಗ ವ್ಯಾಪಾರ ಮಾಡಬಾರದು ಎಂದು ಸಂಘಟನೆ ಹೇಳಿತು. ಇದರಿಂದ ಒಬ್ಬ ಕಾಲ್ಪೋರ್ಟರನಿಗೆ ಎಷ್ಟು ಕೋಪ ಬಂತೆಂದರೆ ಅವನು ಸತ್ಯವನ್ನೇ ಬಿಟ್ಟು ಹೋಗಿ ತನ್ನದೇ ಒಂದು ಬೈಬಲ್‌ ಅಧ್ಯಯನ ಗುಂಪನ್ನು ಮಾಡಿಕೊಂಡ. ಇದೇ ಸಮಯದಲ್ಲಿ ಶಾಖಾ ಮೇಲ್ವಿಚಾರಕನ ತಪ್ಪು ನಡತೆಯಿಂದಾಗಿ ಅವನನ್ನು ಆ ಸ್ಥಾನದಿಂದ ತೆಗೆಯಲಾಯಿತು. ಮೆಕ್ಸಿಕೋದಲ್ಲಿದ್ದ ನಿಷ್ಠಾವಂತ ಸಾಕ್ಷಿಗಳಿಗೆ ಪ್ರೋತ್ಸಾಹ ಬೇಕಿತ್ತು.

ಸಹೋದರ ರದರ್‌ಫರ್ಡ್‌ ಅಧಿವೇಶನದಲ್ಲಿ ಎರಡು ಉತ್ತೇಜನದಾಯಕ ಭಾಷಣಗಳನ್ನು ಕೊಡುವ ಮೂಲಕ ಈ ನಂಬಿಗಸ್ತ ಸಹೋದರ ಸಹೋದರಿಯರನ್ನು ಪ್ರೋತ್ಸಾಹಿಸಿದರು. ರೇಡಿಯೋದಲ್ಲಿ ಪ್ರಸಾರವಾದ ಐದು ಉಪನ್ಯಾಸಗಳಿಂದಲೂ ಪ್ರೋತ್ಸಾಹ ಸಿಕ್ಕಿತು. ಮೆಕ್ಸಿಕೋದಾದ್ಯಂತ ಸುವಾರ್ತೆಯನ್ನು ಹಬ್ಬಿಸಲು ರೇಡಿಯೋವನ್ನು ಬಳಸಿದ್ದು ಇದೇ ಮೊದಲನೇ ಸಾರಿ. ಅಧಿವೇಶನದ ನಂತರ, ಕೆಲಸವನ್ನು ನೋಡಿಕೊಳ್ಳಲು ಒಬ್ಬ ಹೊಸ ಶಾಖಾ ಮೇಲ್ವಿಚಾರಕನನ್ನು ನೇಮಿಸಲಾಯಿತು. ಸಾಕ್ಷಿಗಳಲ್ಲಿ ಹೊಸ ಹುಮ್ಮಸ್ಸು ಕಾಣಿಸಿಕೊಂಡಿತು. ಯೆಹೋವನ ಅನುಗ್ರಹದೊಂದಿಗೆ ಅವರು ಸಾರುವ ಕೆಲಸವನ್ನು ಮುಂದುವರಿಸಿದರು.

ಅಧಿವೇಶನ, ಮೆಕ್ಸಿಕೋ ಸಿಟಿ

ಮುಂದಿನ ವರ್ಷ ಅಂದರೆ 1933ರಲ್ಲಿ ಮೆಕ್ಸಿಕೋದಲ್ಲಿ ಎರಡು ಅಧಿವೇಶನಗಳನ್ನು ನಡೆಸಲಾಯಿತು. ಒಂದು ವೆರಾಕ್ರೂಸ್‌ನಲ್ಲಿತ್ತು, ಇನ್ನೊಂದು ಮೆಕ್ಸಿಕೋ ಸಿಟಿಯಲ್ಲಿತ್ತು. ಸಹೋದರರು ಕ್ಷೇತ್ರದಲ್ಲಿ ತುಂಬ ಹುರುಪಿನಿಂದ ಸೇವೆ ಮಾಡಿದರು, ಇದರಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿದವು. ಉದಾಹರಣೆಗೆ, 1931ರಲ್ಲಿ 82 ಪ್ರಚಾರಕರಿದ್ದರು. ಆದರೆ 1941ರಷ್ಟಕ್ಕೆ ಪ್ರಚಾರಕರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಯಿತು! 1941ರ ದೇವಪ್ರಭುತ್ವ ಸಮ್ಮೇಳನಕ್ಕೆ ಸುಮಾರು 1,000 ಮಂದಿ ಮೆಕ್ಸಿಕೋ ಸಿಟಿಗೆ ಬಂದರು.

“ಬೀದಿಬೀದಿಯಲ್ಲೂ ಸಾಕ್ಷಿಗಳ ದಂಡು”

1943ರಲ್ಲಿ ಸಾಕ್ಷಿಗಳು “ಸ್ವತಂತ್ರ ಜನಾಂಗ” ಎಂಬ ದೇವಪ್ರಭುತ್ವ ಸಮ್ಮೇಳನದ ಬಗ್ಗೆ ಪ್ರಕಟಿಸಲು ಆರಂಭಿಸಿದರು. ಈ ಸಮ್ಮೇಳನವನ್ನು ಮೆಕ್ಸಿಕೋ ದೇಶದ 12 ನಗರಗಳಲ್ಲಿ ನಡೆಸುವ ಯೋಜನೆ ಮಾಡಲಾಗಿತ್ತು. * ಸಮ್ಮೇಳನದ ಸುದ್ದಿಯನ್ನು ಸಾಕ್ಷಿಗಳು ಹಬ್ಬಿಸಲು ಸ್ಯಾಂಡ್‌ವಿಚ್‌ ಬೋರ್ಡ್‌ಗಳನ್ನು ಬಳಸಿದರು. ಇದನ್ನು ಎರಡು ದೊಡ್ಡ ಫಲಕಗಳಿಂದ ಮಾಡುತ್ತಿದ್ದರು. ಈ ಫಲಕಗಳನ್ನು ಒಂದಕ್ಕೊಂದು ಕಟ್ಟಿ ಹೆಗಲಿಗೆ ಹಾಕಿಕೊಳ್ಳುತ್ತಿದ್ದರು. ಒಂದು ಫಲಕ ಮುಂದೆ ಇತ್ತು, ಇನ್ನೊಂದು ಬೆನ್ನ ಹಿಂದೆ ಇತ್ತು. ಸಾಕ್ಷಿಗಳು ತಮ್ಮ ಅಧಿವೇಶನಗಳ ಬಗ್ಗೆ ಪ್ರಕಟಿಸಲು ಇಂಥ ಫಲಕಗಳನ್ನು 1936ರಿಂದ ಬಳಸುತ್ತಾ ಬಂದಿದ್ದಾರೆ.

1944ರಲ್ಲಿ ಒಂದು ಪತ್ರಿಕೆಯಲ್ಲಿ ಬಂದ ಚಿತ್ರ; ಮೆಕ್ಸಿಕೋ ಸಿಟಿಯಲ್ಲಿ ನಮ್ಮ ಸಹೋದರರು ಸ್ಯಾಂಡ್‌ವಿಚ್‌ ಬೋರ್ಡ್‌ಗಳನ್ನು ಹಾಕಿಕೊಂಡು ಹೋಗುತ್ತಿದ್ದಾರೆ

ಸ್ಯಾಂಡ್‌ವಿಚ್‌ ಬೋರ್ಡ್‌ಗಳನ್ನು ಹಾಕಿ ಪ್ರಚಾರ ಮಾಡಿದ್ದು ಮೆಕ್ಸಿಕೋ ಸಿಟಿಯಲ್ಲಿ ಎಷ್ಟು ಯಶಸ್ವಿಕರವಾಗಿತ್ತೆಂದರೆ, ಸಮ್ಮೇಳನಕ್ಕೆ ಬಂದಿದ್ದ ಸಾಕ್ಷಿಗಳ ಬಗ್ಗೆ ಲಾ ನಸಿಯೊನ್‌ ಎಂಬ ವಾರ್ತಾಪತ್ರಿಕೆ ಬರೆದದ್ದು: “ಮೊದಲನೇ ದಿನ, ಹೆಚ್ಚು ಜನರನ್ನು ಆಮಂತ್ರಿಸಿ ಎಂದು ಅವರಿಗೆ ಹೇಳಲಾಯಿತು. ಎರಡನೇ ದಿನ, ಅವರು ಕೂಡಿಬಂದಿದ್ದ ಸ್ಥಳದಲ್ಲಿ ಕೂತುಕೊಳ್ಳಲು ಜಾಗ ಇಲ್ಲದಷ್ಟು ಜನ ತುಂಬಿಕೊಂಡರು.” ಈ ಯಶಸ್ಸನ್ನು ಕಂಡು ಕ್ಯಾಥೊಲಿಕ್‌ ಚರ್ಚಿನವರಿಗೆ ಹೊಟ್ಟೆ ಉರಿದು ಹೋಯಿತು. ಅವರು ಸಾಕ್ಷಿಗಳನ್ನು ವಿರೋಧಿಸಲು ಆರಂಭಿಸಿದರು. ಆದರೆ ಸಹೋದರ ಸಹೋದರಿಯರು ಹೆದರಲಿಲ್ಲ. ಅಧಿವೇಶನದ ಬಗ್ಗೆ ಪ್ರಕಟಿಸುವುದನ್ನು ಮುಂದುವರಿಸಿದರು. ಲಾ ನಸಿಯೊನ್‌ನಲ್ಲಿ ಬಂದ ಇನ್ನೊಂದು ಲೇಖನ ಹೇಳಿದ್ದೇನೆಂದರೆ, “ಇಡೀ ನಗರವೇ ಅವರನ್ನು ನೋಡಿತು.” ಸಹೋದರ ಸಹೋದರಿಯರು “ಜಾಹೀರಾತು ‘ಸ್ಯಾಂಡ್‌ವಿಚ್‌ಗಳಾಗಿ’ ಬದಲಾಗಿದ್ದರು” ಎಂದು ಹೇಳಿತು. ಈ ಲೇಖನದಲ್ಲಿ ನಮ್ಮ ಸಹೋದರರು ಮೆಕ್ಸಿಕೋ ಸಿಟಿಯ ಬೀದಿಗಿಳಿದಿರುವ ಒಂದು ಚಿತ್ರ ಸಹ ಇತ್ತು. ಅದರ ಕೆಳಗಿದ್ದ ವಾಕ್ಯ ಹೀಗಿತ್ತು: “ಬೀದಿಬೀದಿಯಲ್ಲೂ ಸಾಕ್ಷಿಗಳ ದಂಡು.”

“ಸಿಮೆಂಟ್‌ ನೆಲದಂತೆ ಇಲ್ಲದೆ ಮೆತ್ತಗಿತ್ತು, ಬೆಚ್ಚಗಿತ್ತು”

ಆ ಎಲ್ಲ ವರ್ಷಗಳಲ್ಲಿ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಕೆಲವು ಅಧಿವೇಶನಗಳಿಗೆ ಹಾಜರಾಗಲು ಹೆಚ್ಚಿನ ಸಾಕ್ಷಿಗಳು ದೊಡ್ಡ ತ್ಯಾಗಗಳನ್ನು ಮಾಡಬೇಕಿತ್ತು. ಅನೇಕ ಸಹೋದರ ಸಹೋದರಿಯರು ಯಾವುದೇ ರಸ್ತೆ ಅಥವಾ ರೈಲು ವ್ಯವಸ್ಥೆ ಇಲ್ಲದ ದೂರದೂರದ ಹಳ್ಳಿಗಳಿಂದ ಬಂದರು. ಆದ್ದರಿಂದ ಅಧಿವೇಶನದ ನಗರಕ್ಕೆ ಹೋಗುವ ರೈಲನ್ನು ಹತ್ತುವ ಸ್ಥಳಕ್ಕೆ ಬಂದು ಮುಟ್ಟಲು ಸಹೋದರ ಸಹೋದರಿಯರು ಅನೇಕ ದಿನಗಳ ವರೆಗೆ ನಡೆಯಬೇಕಿತ್ತು ಅಥವಾ ಕತ್ತೆಯ ಮೇಲೆ ಬರಬೇಕಿತ್ತು.

ಹೆಚ್ಚಿನ ಸಾಕ್ಷಿಗಳು ಬಡವರಾಗಿದ್ದರು ಮತ್ತು ಅಧಿವೇಶನಕ್ಕೆ ಬಂದು ಮುಟ್ಟಲು ಬೇಕಾದ ಹಣ ಮಾತ್ರ ಅವರ ಹತ್ತಿರ ಇತ್ತು. ಆದ್ದರಿಂದ ಅವರು ಸ್ಥಳೀಯ ಸಾಕ್ಷಿಗಳ ಮನೆಯಲ್ಲಿ ಉಳುಕೊಂಡರು. ಸ್ಥಳೀಯ ಸಾಕ್ಷಿಗಳು ತುಂಬ ಪ್ರೀತಿ ತೋರಿಸಿದರು ಮತ್ತು ಅತಿಥಿಸತ್ಕಾರ ಮಾಡಿದರು. ಬೇರೆಯವರು ರಾಜ್ಯ ಸಭಾಗೃಹಗಳಲ್ಲಿ ಉಳುಕೊಂಡರು. ಒಂದು ಸಂದರ್ಭದಲ್ಲಿ 90 ಸಹೋದರರು ಶಾಖಾ ಕಚೇರಿಯಲ್ಲಿ ಉಳುಕೊಳ್ಳುವ ವ್ಯವಸ್ಥೆ ಮಾಡಲಾಯಿತು. ಅಲ್ಲಿ ಅವರು ಪುಸ್ತಕಗಳಿದ್ದ ಬಾಕ್ಸ್‌ಗಳ ಮೇಲೆ ಮಲಗಿದರು. ವರ್ಷಪುಸ್ತಕ ಹೇಳಿದ್ದೇನೆಂದರೆ, ಸಹೋದರರು ಈ ಏರ್ಪಾಡನ್ನು ತುಂಬ ಮೆಚ್ಚಿದರು. ಏಕೆಂದರೆ ಬಾಕ್ಸ್‌ಗಳು “ಸಿಮೆಂಟ್‌ ನೆಲದಂತೆ ಇಲ್ಲದೆ ಮೆತ್ತಗಿತ್ತು, ಬೆಚ್ಚಗಿತ್ತು.”

ಈ ಸಾಕ್ಷಿಗಳಿಗೆ ತಮ್ಮ ಸಹೋದರ ಸಹೋದರಿಯರೊಟ್ಟಿಗೆ ಸೇರಿಬರಲು ಎಷ್ಟು ಸಂತೋಷವಾಯಿತೆಂದರೆ ಅವರು ಯಾವುದೇ ಕಷ್ಟ ಸಹಿಸಲೂ ಸಿದ್ಧರಿದ್ದರು. ಇದೇ ಗಣ್ಯತಾಭಾವ ಈಗ ಮೆಕ್ಸಿಕೋದಲ್ಲಿರುವ 8,50,000ಕ್ಕೂ ಹೆಚ್ಚು ಸಾಕ್ಷಿಗಳಿಗೂ ಇದೆ. * 1949ರ ವರ್ಷಪುಸ್ತಕ ಹೇಳಿದ್ದೇನೆಂದರೆ, ಸಹೋದರರು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗಿ ಬಂದರೂ ಇದರಿಂದ ಯೆಹೋವನ ಆರಾಧನೆಗಾಗಿರುವ ಹುರುಪು ಅವರಲ್ಲಿ ಕಮ್ಮಿಯಾಗಲಿಲ್ಲ. ಅವರು ಒಂದೊಂದು ಸಮ್ಮೇಳನಕ್ಕೆ ಹಾಜರಾದ ಮೇಲೆ “ಅದರ ಬಗ್ಗೆಯೇ ತುಂಬ ದಿನದ ವರೆಗೆ ಮಾತಾಡುತ್ತಾ ಇರುತ್ತಿದ್ದರು.” ಒಂದೊಂದು ಸಮ್ಮೇಳನಕ್ಕೆ ಹಾಜರಾದ ನಂತರ ಸಹೋದರರು, “ಮುಂದಿನ ಸಮ್ಮೇಳನ ಯಾವಾಗ ನಡೆಯುತ್ತದೆ?” ಎಂದು ಪುನಃ ಪುನಃ ಕೇಳುತ್ತಿದ್ದರು.—ಮಧ್ಯ ಅಮೆರಿಕದಲ್ಲಿರುವ ನಮ್ಮ ಸಂಗ್ರಹಾಲಯದಿಂದ.

^ ಪ್ಯಾರ. 9 1944ರ ವರ್ಷಪುಸ್ತಕ ಹೇಳುವಂತೆ ಈ ಸಮ್ಮೇಳನದಿಂದಾಗಿ ಮೆಕ್ಸಿಕೋದಲ್ಲಿ ಯೆಹೋವನ ಸಾಕ್ಷಿಗಳು ಪ್ರಸಿದ್ಧರಾದರು.

^ ಪ್ಯಾರ. 14 ಮೆಕ್ಸಿಕೋದಲ್ಲಿ 22,62,646 ಜನರು 2016ರ ಸ್ಮರಣೆಗೆ ಬಂದಿದ್ದರು.