ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಏನೇ ಆದರೂ ಕೈಚೆಲ್ಲಿ ಕೂರಲ್ಲ

ಏನೇ ಆದರೂ ಕೈಚೆಲ್ಲಿ ಕೂರಲ್ಲ

ಬೆತೆಲ್‌ನಲ್ಲಿರುವ ಯುವಕರು ನನ್ನನ್ನು “ಡ್ಯಾಡಿ” “ಪಪಾ” “ಅಂಕಲ್‌” ಎಂದು ಕರೆಯುತ್ತಾರೆ. 89 ವರ್ಷ ಆಗಿರುವ ನನಗೆ ಅವರು ಹಾಗೆ ಕರೆಯುವುದು ಇಷ್ಟ. ಪೂರ್ಣ ಸಮಯ ಸೇವೆಯಲ್ಲಿ 72 ವರ್ಷ ಕಳೆದಿರುವ ನನಗೆ ಯೆಹೋವನು ಕೊಟ್ಟಿರುವ ಬಹುಮಾನಗಳಲ್ಲಿ ಮಕ್ಕಳು ನನ್ನನ್ನು ಹಾಗೆ ಕರೆಯುವುದೂ ಒಂದು ಎಂದು ಅಂದುಕೊಂಡಿದ್ದೇನೆ. ದೇವರ ಸೇವೆಯಲ್ಲಿ ನನಗೆ ಸಿಕ್ಕಿರುವ ಅನುಭವದ ಮೇಲೆ ಆಧರಿಸಿ ನಾನು ಈ ಯುವಕರಿಗೆ, ‘ನೀವು ಕೈಚೆಲ್ಲಿ ಕೂರದಿದ್ದರೆ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗುತ್ತದೆ’ ಎಂದು ಆಶ್ವಾಸನೆ ಕೊಡುತ್ತೇನೆ.—2 ಪೂರ್ವ. 15:7.

ನನ್ನ ಕುಟುಂಬ

ನನ್ನ ಹೆತ್ತವರು ಯುಕ್ರೇನ್‌ನಿಂದ ಕೆನಡಕ್ಕೆ ವಲಸೆ ಬಂದರು. ಮನಿಟೋಬಾ ಎಂಬ ಪ್ರಾಂತದ ರಾಸ್‌ಬರ್ನ್‌ ಎಂಬ ಪಟ್ಟಣದಲ್ಲಿ ಅವರು ನೆಲೆಸಿದರು. ನನ್ನ ಅಮ್ಮ 8 ಗಂಡುಮಕ್ಕಳಿಗೆ ಮತ್ತು 8 ಹೆಣ್ಮಕ್ಕಳಿಗೆ ಜನ್ಮಕೊಟ್ಟರು. ಅವಳಿಗಳಿರಲಿಲ್ಲ. ನಾನು 14​ನೇ ಮಗು. ಅಪ್ಪಂಗೆ ಬೈಬಲಂದರೆ ಪಂಚಪ್ರಾಣ. ಭಾನುವಾರಗಳಂದು ಬೆಳಗ್ಗೆ ನಮಗೆ ಬೈಬಲನ್ನು ಓದಿ ಹೇಳುತ್ತಿದ್ದರು. ಆದರೆ ಧರ್ಮದ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ಬರೀ ದುಡ್ಡು ಮಾಡೋದೇ ಧರ್ಮಗುರುಗಳ ಉದ್ದೇಶ ಎಂದು ನೆನಸುತ್ತಿದ್ದರು. ಅವರು ಕೆಲವೊಮ್ಮೆ “ಯೇಸು ಮಾಡಿದ ಸೇವೆಗೆ ಯಾರಾದರೂ ದುಡ್ಡು ಕೊಟ್ರಾ” ಎಂದು ತಮಾಷೆಯಾಗಿ ಕೇಳುತ್ತಿದ್ದರು.

ನಾವು 5 ಜನ ಗಂಡುಮಕ್ಕಳು ಮತ್ತು 4 ಜನ ಹೆಣ್ಮಕ್ಕಳು, ಒಟ್ಟು 9 ಮಂದಿ ಸತ್ಯ ಸ್ವೀಕರಿಸಿದ್ವಿ. ನನ್ನ ಅಕ್ಕ ರೋಸ್‌ ತೀರಿಹೋಗುವ ವರೆಗೆ ಪಯನೀಯರ್‌ ಸೇವೆ ಮಾಡಿದಳು. ಅವಳು ತೀರಿಹೋಗಕ್ಕೆ ಮುಂಚೆ ದೇವರ ವಾಕ್ಯಕ್ಕೆ ಗಮನ ಕೊಡಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸಿದಳು. “ನಾನು ನಿಮ್ಮನ್ನು ಹೊಸ ಲೋಕದಲ್ಲಿ ನೋಡಲು ಇಷ್ಟಪಡುತ್ತೇನೆ” ಎಂದು ಹೇಳಿ ಪ್ರೋತ್ಸಾಹಿಸಿದಳು. ನನ್ನ ಅಣ್ಣ ಟೆಡ್‌ ಮೊದಲು ಅಗ್ನಿನರಕದ ಬಗ್ಗೆ ಸಾರುತ್ತಿದ್ದ. ಪ್ರತಿ ಭಾನುವಾರ ಬೆಳಗ್ಗೆ ಅವನು ರೇಡಿಯೋದಲ್ಲಿ ಪ್ರಸಂಗ ಮಾಡುತ್ತಿದ್ದ. ಪಾಪಿಗಳು ಎಂದಿಗೂ ಆರಿಹೋಗದ ಅಗ್ನಿನರಕದಲ್ಲಿ ಸದಾಕಾಲಕ್ಕೂ ನರಳುತ್ತಾರೆ ಎಂದು ಹೇಳಿ ತನ್ನ ಕೇಳುಗರನ್ನು ಹೆದರಿಸುತ್ತಿದ್ದ. ಆದರೆ ನಂತರ ಯೆಹೋವನ ಹುರುಪುಳ್ಳ ನಂಬಿಗಸ್ತ ಸೇವಕನಾದ.

ನನ್ನ ಪೂರ್ಣ ಸಮಯದ ಸೇವೆ

1944​ರ ಜೂನ್‌ ತಿಂಗಳಲ್ಲಿ ಒಂದು ದಿನ ನಾನು ಶಾಲೆಯಿಂದ ಮನೆಗೆ ಬಂದಾಗ ಮೇಜಿನ ಮೇಲೆ ಒಂದು ಕಿರುಪುಸ್ತಕವನ್ನು (ದ ಕಮಿಂಗ್‌ ವರ್ಲ್ಡ್‌ ರೀಜೆನರೇಷನ್‌) * ನೋಡಿದೆ. ನಾನು ಅದನ್ನು ತೆಗೆದು ಮೊದಲನೇ ಪುಟ ಓದಿದೆ, ನಂತರ ಎರಡನೇ ಪುಟ ಓದಿದೆ, ಆಮೇಲೆ ನಿಲ್ಲಿಸಕ್ಕೆ ಆಗಲಿಲ್ಲ. ಕಿರುಪುಸ್ತಕವನ್ನು ಪೂರ್ತಿ ಓದಿದ ಮೇಲೆ, ನಾನು ಯೇಸು ತರ ಯೆಹೋವನ ಸೇವೆ ಮಾಡಬೇಕು ಎಂದು ತೀರ್ಮಾನ ಮಾಡಿದೆ.

ಈ ಕಿರುಪುಸ್ತಕವನ್ನು ನಮ್ಮ ಮನೆಗೆ ಯಾರು ತಂದರು? ಯಾರೋ ಇಬ್ಬರು ಗಂಡಸರು ಪುಸ್ತಕಗಳನ್ನು “ಮಾರುತ್ತಾ” ಬಂದಿದ್ದರು ಎಂದು ಅಣ್ಣ ಸ್ಟೀವ್‌ ಹೇಳಿದ. ಈ ಕಿರುಪುಸ್ತಕಕ್ಕೆ ತುಂಬ ಕಡಿಮೆ ಬೆಲೆ ಇದ್ದದರಿಂದ ಇದನ್ನು ತೊಗೊಂಡೆ ಎಂದ. ಇದನ್ನು ಮಾರಿದ್ದ ಗಂಡಸರು ಮುಂದಿನ ಭಾನುವಾರ ನಮ್ಮ ಮನೆಗೆ ಪುನಃ ಬಂದರು. ತಾವು ಯೆಹೋವನ ಸಾಕ್ಷಿಗಳು, ಜನರಿಗಿರುವ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ತರ ಕೊಡುತ್ತೇವೆ ಎಂದು ಹೇಳಿದರು. ನಮಗೆ ತುಂಬ ಖುಷಿಯಾಯಿತು. ಯಾಕೆಂದರೆ ನಮ್ಮ ಹೆತ್ತವರಿಂದಾಗಿ ನಮಗೆ ದೇವರ ವಾಕ್ಯದ ಮೇಲೆ ಗೌರವ ಇತ್ತು. ತುಂಬ ಬೇಗ ವಿನ್ನಿಪೆಗ್‌ನಲ್ಲಿ ಸಾಕ್ಷಿಗಳ ಒಂದು ಅಧಿವೇಶನ ನಡೆಯಲಿದೆ ಎಂದು ಸಹ ಆ ಗಂಡಸರು ಹೇಳಿದರು. ನನ್ನ ಅಕ್ಕ ಎಲ್ಸಿ ಇದ್ದ ಊರದು. ನಾನು ಆ ಅಧಿವೇಶನಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ.

ವಿನ್ನಿಪೆಗ್‌ ಸುಮಾರು 320 ಕಿ.ಮೀ. ದೂರದಲ್ಲಿತ್ತು. ನಾನು ಅಲ್ಲಿಗೆ ಸೈಕಲಲ್ಲೇ ಹೋದೆ. ನಾನು ಹೋಗುವ ದಾರಿಯಲ್ಲಿ ಕೆಲ್‌ವುಡ್‌ ಎಂಬ ಊರಿತ್ತು. ನಮ್ಮ ಮನೆಗೆ ಬಂದಿದ್ದ ಗಂಡಸರು ಈ ಊರಿನವರೇ. ನಾನು ಕೆಲ್‌ವುಡ್‌ನಲ್ಲಿ ಉಳುಕೊಂಡೆ. ಇಲ್ಲಿ ಕೂಟಕ್ಕೆ ಹಾಜರಾದಾಗ ಒಂದು ಸಭೆ ಅಂದರೆ ಏನೆಂದು ತಿಳುಕೊಂಡೆ. ಯೇಸುವಿನಂತೆ ಪ್ರತಿಯೊಬ್ಬ ಪುರುಷ, ಸ್ತ್ರೀ, ಯುವಕ ಮನೆಯಿಂದ ಮನೆಗೆ ಹೋಗಿ ಬೋಧಿಸಬೇಕೆಂದು ಸಹ ಅರ್ಥಮಾಡಿಕೊಂಡೆ.

ವಿನ್ನಿಪೆಗ್‌ನಲ್ಲಿ ನನಗೆ ನನ್ನ ಅಣ್ಣ ಜ್ಯಾಕ್‌ ಸಿಕ್ಕಿದ. ಅಧಿವೇಶನಕ್ಕೆ ಹಾಜರಾಗಲು ಅವನು ಉತ್ತರ ಆಂಟೇರಿಯೋದಿಂದ ಬಂದಿದ್ದ. ಅಧಿವೇಶನದ ಮೊದಲನೇ ದಿನ ದೀಕ್ಷಾಸ್ನಾನ ಮಾಡಲಾಗುತ್ತದೆ ಎಂಬ ಪ್ರಕಟಣೆ ಮಾಡಲಾಯಿತು. ನಾನು ಮತ್ತು ಜ್ಯಾಕ್‌ ಆ ಅಧಿವೇಶನದಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ತೀರ್ಮಾನಿಸಿದೆವು. ದೀಕ್ಷಾಸ್ನಾನ ತೆಗೆದುಕೊಂಡ ಕೂಡಲೆ ಪಯನೀಯರ್‌ ಸೇವೆ ಮಾಡಬೇಕೆಂದು ತೀರ್ಮಾನಿಸಿದೆವು. ಅಧಿವೇಶನ ಆದ ಕೂಡಲೆ ಜ್ಯಾಕ್‌ ಪೂರ್ಣ ಸಮಯದ ಸೇವೆ ಆರಂಭಿಸಿದ. ನನಗಾಗ 16 ವರ್ಷ, ಶಾಲೆ ಮುಗಿಸಿರಲಿಲ್ಲ. ಆದರೆ ಮುಂದಿನ ವರ್ಷ ನಾನೂ ಪಯನೀಯರ್‌ ಆದೆ.

ನಾನು ಕಲಿತ ಪಾಠಗಳು

ನಾನು ಸ್ಟ್ಯಾನ್‌ ನಿಕಲ್ಸನ್‌ ಎಂಬ ಸಹೋದರನ ಜೊತೆ ಸೇರಿ ಮನಿಟೋಬಾ ಪ್ರಾಂತದ ಸುರಸ್‌ ಎಂಬ ಪಟ್ಟಣದಲ್ಲಿ ಪಯನೀಯರ್‌ ಸೇವೆ ಆರಂಭಿಸಿದೆ. ಪಯನೀಯರ್‌ ಸೇವೆ ಮಾಡುವುದು ಯಾವಾಗಲೂ ಸುಲಭವಾಗಿರಲ್ಲ ಎಂದು ನನಗೆ ಬೇಗ ಅರ್ಥವಾಯಿತು. ನಮ್ಮ ಕೈಯಲ್ಲಿದ್ದ ಹಣ ಎಲ್ಲಾ ಖಾಲಿಯಾಗುತ್ತಾ ಬಂತು. ಆದರೂ ನಾವು ನಮ್ಮ ಸೇವೆಯನ್ನು ನಿಲ್ಲಿಸಲಿಲ್ಲ. ಒಂದು ದಿನ ನಾವು ಸೇವೆ ಮುಗಿಸಿ ಮನೆ ದಾರಿ ಹಿಡಿದಿದ್ವಿ. ಕೈಯಲ್ಲಿ ಒಂದು ಕಾಸೂ ಇರಲಿಲ್ಲ ಮತ್ತು ತುಂಬ ಹಸಿವೆ ಆಗಿತ್ತು. ಆದರೆ ಮನೆ ಹತ್ತಿರ ಬಂದಾಗ ಬಾಗಿಲ ಮುಂದೆ ಒಂದು ದೊಡ್ಡ ಚೀಲದ ತುಂಬ ಊಟ ಇದ್ದದ್ದನ್ನು ನೋಡಿ ನಮಗೆ ತುಂಬ ಆಶ್ಚರ್ಯ ಆಯಿತು. ಅದನ್ನು ಯಾರು ತಂದು ಇಟ್ಟರೆಂದು ನಮಗೆ ಇವತ್ತಿನ ತನಕ ಗೊತ್ತಿಲ್ಲ. ಆವತ್ತು ನಾವು ರಾಜರ ತರ ತಿಂದ್ವಿ. ನಾವು ಕೈಚೆಲ್ಲಿ ಕೂರದಿದ್ದಕ್ಕೆ ಸಿಕ್ಕಿದ ಫಲ ಇದು ಅನ್ನಬಹುದು. ಆ ತಿಂಗಳ ಕೊನೆಗೆ ನನ್ನ ತೂಕ ಜಾಸ್ತಿಯಾಗಿತ್ತು. ನನ್ನ ಜೀವಮಾನದಲ್ಲಿ ಬೇರೆ ಯಾವ ಸಮಯದಲ್ಲೂ ನನ್ನ ತೂಕ ಅಷ್ಟಿರಲಿಲ್ಲ.

ಕೆಲವು ತಿಂಗಳ ನಂತರ ನಮ್ಮನ್ನು ಸುರಸ್‌ನ ಉತ್ತರಕ್ಕೆ 240 ಕಿ.ಮೀ. ದೂರದಲ್ಲಿದ್ದ ಗಿಲ್ಬರ್ಟ್‌ ಪ್ಲೇನ್ಸ್‌ ಎಂಬ ಪಟ್ಟಣಕ್ಕೆ ನೇಮಿಸಲಾಯಿತು. ಆಗೆಲ್ಲಾ ವೇದಿಕೆಯ ಮೇಲೆ ಒಂದು ದೊಡ್ಡ ಚಾರ್ಟನ್ನು ಹಾಕುತ್ತಿದ್ದರು. ಅದರಲ್ಲಿ ಸಭೆಯ ಪ್ರತಿ ತಿಂಗಳ ಕ್ಷೇತ್ರ ಸೇವಾ ಚಟುವಟಿಕೆ ಹೇಗಿತ್ತೆಂದು ತೋರಿಸಲಾಗಿತ್ತು. ಹೀಗೇ ಒಂದು ತಿಂಗಳ ಸೇವೆ ಕಮ್ಮಿಯಾದಾಗ ನಾನು ಸಭೆಗೆ ಒಂದು ಭಾಷಣ ಕೊಟ್ಟೆ. ಸಹೋದರ ಸಹೋದರಿಯರು ತಮ್ಮ ಸೇವೆಯನ್ನು ಹೆಚ್ಚು ಮಾಡಬೇಕೆಂದು ಒತ್ತಿಹೇಳಿದೆ. ಕೂಟವಾದ ನಂತರ ಒಬ್ಬ ವೃದ್ಧ ಪಯನೀಯರ್‌ ಸಹೋದರಿ ನನ್ನ ಹತ್ತಿರ ಬಂದರು. ಅವರ ಗಂಡ ಸತ್ಯದಲ್ಲಿರಲಿಲ್ಲ. ಅವರು ಕಣ್ಣೀರು ಹಾಕುತ್ತಾ, “ನಾನು ಪ್ರಯತ್ನ ಮಾಡಿದರೂ ಹೆಚ್ಚು ಸೇವೆ ಮಾಡಲು ಆಗಲಿಲ್ಲ” ಎಂದರು. ಆಗ ನನ್ನ ಕಣ್ಣಲ್ಲೂ ನೀರು ತುಂಬಿಬಂತು. ನಾನು ಅವರ ಹತ್ತಿರ ಕ್ಷಮೆ ಕೇಳಿದೆ.

ಬಿಸಿರಕ್ತ ಇರುವ ಯುವ ಪ್ರಾಯದ ಸಹೋದರರು ಈ ತರ ಎಡವಟ್ಟು ಮಾಡಿ ನಂತರ ಬೇಜಾರು ಮಾಡಿಕೊಳ್ಳುವುದು ಸಹಜ. ಆದರೆ ಹೀಗಾದಾಗ ಕೈಚೆಲ್ಲಿ ಕೂರುವ ಬದಲು ಮಾಡಿದ ತಪ್ಪಿನಿಂದ ಪಾಠ ಕಲಿತು ಮುಂದೆ ಸಾಗುವುದು ಉತ್ತಮ ಎಂದು ನಾನು ಅರ್ಥಮಾಡಿಕೊಂಡೆ. ನಾವು ಮುಂದೆ ಮಾಡುವ ಸೇವೆಗೆ ಒಳ್ಳೇ ಪ್ರತಿಫಲ ಸಿಗುತ್ತದೆ.

ಕ್ವಿಬೆಕ್‌ ಯುದ್ಧ

ನನಗೆ 21 ವರ್ಷ ಇದ್ದಾಗ 14​ನೇ ಗಿಲ್ಯಡ್‌ ಶಾಲೆಗೆ ಹಾಜರಾಗುವ ದೊಡ್ಡ ಸುಯೋಗ ಸಿಕ್ಕಿತು. 1950​ರ ಫೆಬ್ರವರಿ ತಿಂಗಳಲ್ಲಿ ಪದವಿಪ್ರಾಪ್ತಿ ಆಯಿತು. ಪದವಿ ಪಡೆದವರಲ್ಲಿ ಕಾಲು ಭಾಗದಷ್ಟು ಮಂದಿಯನ್ನು ಕೆನಡದ ಫ್ರೆಂಚ್‌ ಭಾಷೆಯ ಪ್ರಾಂತವಾದ ಕ್ವಿಬೆಕ್‌ಗೆ ಕಳುಹಿಸಲಾಯಿತು. ಇಲ್ಲಿ ಸಾಕ್ಷಿಗಳ ವಿರುದ್ಧ ಧಾರ್ಮಿಕ ಹಿಂಸಾಚಾರ ತುಂಬ ನಡೆಯುತ್ತಿತ್ತು. ನನ್ನನ್ನು ಚಿನ್ನದ ಗಣಿಗಾರಿಕೆಯ ಪ್ರದೇಶವಾದ ವಾಲ್‌-ಡೋರ್‌ ಎಂಬ ಪಟ್ಟಣಕ್ಕೆ ಕಳುಹಿಸಲಾಯಿತು. ಒಂದು ದಿನ ನಾವು ಕೆಲವು ಸಾಕ್ಷಿಗಳು ಸೇರಿಕೊಂಡು ಹತ್ತಿರದಲ್ಲಿದ್ದ ವಾಲ್‌-ಸೆನ್‌ವಿಲ್‌ ಎಂಬ ಹಳ್ಳಿಗೆ ಸಾರಲು ಹೋದೆವು. ಅಲ್ಲಿದ್ದ ಪಾದ್ರಿ ನಾವು ತಕ್ಷಣ ಹಳ್ಳಿಯನ್ನು ಬಿಟ್ಟುಹೋಗಿಲ್ಲ ಅಂದ್ರೆ ಹೊಡೆತ ತಿನ್ನಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ. ಇದು ಒಂದು ಕೋರ್ಟ್‌ ಕೇಸಿಗೆ ನಡೆಸಿತು. ನನ್ನ ಹೆಸರಲ್ಲಿ ದೂರು ಕೊಟ್ಟೆವು. ಪಾದ್ರಿ ದಂಡ ಕಟ್ಟಬೇಕಾಗಿ ಬಂತು. *

ಇಂಥ ಅನೇಕ ಘಟನೆಗಳು ಒಟ್ಟುಸೇರಿ “ಕ್ವಿಬೆಕ್‌ ಯುದ್ಧ”ದ ಭಾಗವಾದವು. ಕ್ವಿಬೆಕ್‌ ಪ್ರಾಂತವನ್ನು ರೋಮನ್‌ ಕ್ಯಾಥೋಲಿಕ್‌ ಚರ್ಚು 300 ವರ್ಷಗಳಿಂದ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿತ್ತು. ಪಾದ್ರಿಗಳು ಮತ್ತು ಅವರ ಸ್ನೇಹಿತರಾಗಿದ್ದ ರಾಜಕಾರಣಿಗಳು ಯೆಹೋವನ ಸಾಕ್ಷಿಗಳಿಗೆ ಹಿಂಸೆ ಕೊಡುತ್ತಿದ್ದರು. ಆಗೆಲ್ಲಾ ತುಂಬ ಕಷ್ಟ ಇತ್ತು. ನಾವು ಸ್ವಲ್ಪವೇ ಮಂದಿ ಬೇರೆ. ಆದರೂ ನಾವು ಕೈಚೆಲ್ಲಿ ಕೂರಲಿಲ್ಲ. ಕ್ವಿಬೆಕ್‌ನಲ್ಲಿದ್ದ ಸಹೃದಯದ ಜನರು ಸತ್ಯಕ್ಕೆ ಸ್ಪಂದಿಸಿದರು. ಇಂಥ ಅನೇಕರೊಂದಿಗೆ ಬೈಬಲ್‌ ಅಧ್ಯಯನ ಮಾಡುವ ಸುಯೋಗ ನನಗೆ ಸಿಕ್ಕಿತು. ನಾನು ಅಧ್ಯಯನ ಮಾಡುತ್ತಿದ್ದ ಒಂದು ಕುಟುಂಬದಲ್ಲಿ ಹತ್ತು ಮಂದಿ ಇದ್ದರು. ಇವರೆಲ್ಲರೂ ಯೆಹೋವನ ಸೇವಕರಾದರು. ಇವರ ಧೀರ ಮಾದರಿಯನ್ನು ನೋಡಿ ಬೇರೆಯವರೂ ಕ್ಯಾಥೋಲಿಕ್‌ ಚರ್ಚನ್ನು ಬಿಟ್ಟುಬರಲು ಧೈರ್ಯಮಾಡಿದರು. ನಾವು ಸಾರುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಈ ಆಧ್ಯಾತ್ಮಿಕ ಯುದ್ಧದಲ್ಲಿ ನಾವೇ ಗೆದ್ದೆವು!

ಸಹೋದರರಿಗೆ ತಮ್ಮ ಸ್ವಂತ ಭಾಷೆಯಲ್ಲಿ ತರಬೇತಿ

1956​ರಲ್ಲಿ ನನ್ನನ್ನು ಹೈಟಿಗೆ ನೇಮಿಸಲಾಯಿತು. ಅಲ್ಲಿಗೆ ಹೋದ ಹೆಚ್ಚಿನ ಹೊಸ ಮಿಷನರಿಗಳು ಫ್ರೆಂಚ್‌ ಕಲಿಯಲು ತುಂಬ ಕಷ್ಟಪಟ್ಟರು. ಆದರೂ ಜನ ಕಿವಿಗೊಡುತ್ತಿದ್ದರು. ಸ್ಟ್ಯಾನ್ಲಿ ಬೋಗಸ್‌ ಎಂಬ ಮಿಷನರಿ ಹೇಳಿದ್ದು: “ನಾವು ಏನು ಹೇಳಲು ಬಂದೆವೋ ಅದನ್ನು ಹೇಳಲು ಜನರು ನಮಗೆ ತುಂಬ ಸಹಾಯ ಮಾಡಿದ್ದನ್ನು ನೋಡಿ ಆಶ್ಚರ್ಯ ಆಯಿತು.” ನಾನು ಕ್ವಿಬೆಕ್‌ನಲ್ಲಿ ಫ್ರೆಂಚ್‌ ಕಲಿತಿದ್ದರಿಂದ ಆರಂಭದಲ್ಲಿ ನನಗೆ ಆರಾಮ ಅನಿಸಿತು. ಆದರೆ ಅಲ್ಲಿದ್ದ ಹೆಚ್ಚಿನ ಸಹೋದರರಿಗೆ ಹೈಟಿಯನ್‌ ಕ್ರಿಯೋಲ್‌ ಭಾಷೆ ಮಾತ್ರ ಬರುತ್ತದೆ ಎಂದು ಗೊತ್ತಾಯಿತು. ಆದ್ದರಿಂದ ಮಿಷನರಿಗಳಾಗಿ ನಾವು ಯಶಸ್ಸು ಪಡೆಯಬೇಕಾದರೆ ಈ ಭಾಷೆ ಕಲಿಯಬೇಕಾಯಿತು. ನಾವು ಸ್ಥಳೀಯ ಭಾಷೆಯನ್ನು ಕಲಿತಿದ್ದರಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿದವು.

ಸಹೋದರರಿಗೆ ಹೆಚ್ಚು ಸಹಾಯ ಮಾಡಲಿಕ್ಕಾಗಿ ನಾವು ಕಾವಲಿನಬುರುಜು ಪತ್ರಿಕೆ ಮತ್ತು ಇತರ ಪ್ರಕಾಶನಗಳನ್ನು ಹೈಟಿಯನ್‌ ಕ್ರಿಯೋಲ್‌ ಭಾಷೆಗೆ ಭಾಷಾಂತರಿಸಲು ಆಡಳಿತ ಮಂಡಲಿಯಿಂದ ಅನುಮತಿ ಪಡೆದೆವು. ಇದರಿಂದ ಕೂಟದ ಹಾಜರಿ ಒಮ್ಮೆಲೆ ಜಾಸ್ತಿಯಾಯಿತು. 1950​ರಲ್ಲಿ ಹೈಟಿಯಲ್ಲಿ 99 ಪ್ರಚಾರಕರಿದ್ದರು. ಆದರೆ 1960​ರಷ್ಟಕ್ಕೆ ಪ್ರಚಾರಕರ ಸಂಖ್ಯೆ 800​ಕ್ಕೆ ಏರಿತು. ಅದೇ ಸಮಯಕ್ಕೆ ನನ್ನನ್ನು ಬೆತೆಲಿನಲ್ಲಿ ಸೇವೆ ಮಾಡುವಂತೆ ನೇಮಿಸಲಾಯಿತು. 1961​ರಲ್ಲಿ ರಾಜ್ಯ ಶುಶ್ರೂಷಾ ಶಾಲೆಯನ್ನು ನಡೆಸುವ ಸುಯೋಗ ನನಗೆ ಸಿಕ್ಕಿತು. ಒಟ್ಟು 40 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಾಧ್ಯವಾಯಿತು. ಅವರಲ್ಲಿ ಸಭಾ ಮೇಲ್ವಿಚಾರಕರು ಮತ್ತು ವಿಶೇಷ ಪಯನೀಯರರು ಇದ್ದರು. 1962​ರ ಜನವರಿ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ತಮ್ಮ ಸೇವೆಯನ್ನು ಹೆಚ್ಚಿಸುವಂತೆ ಅರ್ಹ ಸ್ಥಳೀಯ ಸಹೋದರರನ್ನು ಪ್ರೋತ್ಸಾಹಿಸಿದೆವು. ಹೀಗೆ ಕೆಲವರನ್ನು ವಿಶೇಷ ಪಯನೀಯರರಾಗಿ ನೇಮಿಸಲಾಯಿತು. ಸರಿಯಾದ ಸಮಯಕ್ಕೆ ಈ ಕ್ರಮ ತೆಗೆದುಕೊಂಡೆವು ಎಂದು ಅನಿಸಿತು. ಯಾಕೆಂದರೆ ವಿರೋಧ ತಲೆ ಎತ್ತಿತು.

ಅಧಿವೇಶನ ಮುಗಿದು ಸ್ವಲ್ಪ ಸಮಯದಲ್ಲಿ, 1962​ರ ಜನವರಿ 23​ರಂದು ನನ್ನನ್ನು ಮತ್ತು ಆ್ಯಂಡ್ರು ಡಾಮಿಕೋ ಎಂಬ ಮಿಷನರಿಯನ್ನು ಪೊಲೀಸರು ಶಾಖಾ ಕಚೇರಿಗೆ ಬಂದು ಬಂಧಿಸಿದರು. ಮುದ್ರಿಸಿ ಇಡಲಾಗಿದ್ದ ಜನವರಿ 8, 1962​ರ ಎಚ್ಚರ! ಪತ್ರಿಕೆಯ (ಫ್ರೆಂಚ್‌) ಸಂಚಿಕೆಯನ್ನು ಜಪ್ತಿ ಮಾಡಲಾಯಿತು. ಹೈಟಿಯಲ್ಲಿ ವೂಡೂ ಎಂಬ ಮಂತ್ರವಿದ್ಯೆಯನ್ನು ನಡೆಸಲಾಗುತ್ತದೆ ಎಂದು ಫ್ರೆಂಚ್‌ ವಾರ್ತಾಪತ್ರಿಕೆಗಳಲ್ಲಿ ಬಂದಿದ್ದ ಸುದ್ದಿಯನ್ನು ಎಚ್ಚರ! ಪತ್ರಿಕೆ ಉಲ್ಲೇಖಿಸಿತ್ತು. ಕೆಲವು ಜನರಿಗೆ ಆ ಹೇಳಿಕೆ ಇಷ್ಟವಾಗಲಿಲ್ಲ. ನಾವು ಆ ಲೇಖನವನ್ನು ಶಾಖಾ ಕಚೇರಿಯಲ್ಲಿ ಬರೆದ್ವಿ ಅಂದುಕೊಂಡರು. ಕೆಲವು ವಾರಗಳ ನಂತರ ಮಿಷನರಿಗಳನ್ನು ಗಡೀಪಾರು ಮಾಡಲಾಯಿತು. * ಆದರೆ ತರಬೇತಿ ಪಡೆದಿದ್ದ ಸ್ಥಳೀಯ ಸಹೋದರರು ಕೆಲಸವನ್ನು ತುಂಬ ಚೆನ್ನಾಗಿ ನಡೆಸಿಕೊಂಡು ಹೋದರು. ಅವರು ತೋರಿಸಿದ ತಾಳ್ಮೆ ಮತ್ತು ಮಾಡಿದ ಆಧ್ಯಾತ್ಮಿಕ ಪ್ರಗತಿಗಾಗಿ ನಾನು ಇಂದು ತುಂಬ ಸಂತೋಷಪಡುತ್ತೇನೆ. ಈಗ ಹೈಟಿಯನ್‌ ಕ್ರಿಯೋಲ್‌ನಲ್ಲಿ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಕೂಡ ಇದೆ. ಇದನ್ನು ಮಾಡಕ್ಕಾಗುತ್ತದೆ ಎಂದು ನಾವು ಆಗ ನೆನಸಿರಲಿಲ್ಲ.

ಮಧ್ಯ ಆಫ್ರಿಕ ಗಣರಾಜ್ಯದಲ್ಲಿ ನಿರ್ಮಾಣ ಕೆಲಸ

ಹೈಟಿಯಲ್ಲಿ ಸೇವೆ ಮಾಡಿದ ಮೇಲೆ ನನ್ನನ್ನು ಮಧ್ಯ ಆಫ್ರಿಕ ಗಣರಾಜ್ಯದಲ್ಲಿ ಮಿಷನರಿಯಾಗಿ ನೇಮಿಸಲಾಯಿತು. ನಂತರ ನಾನು ಅಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡಿದೆ. ಆಮೇಲೆ ಶಾಖಾ ಮೇಲ್ವಿಚಾರಕನಾಗಿ ಸೇವೆ ಮಾಡಿದೆ.

ಆ ಕಾಲದಲ್ಲಿ ಅನೇಕ ರಾಜ್ಯ ಸಭಾಗೃಹಗಳು ನೋಡಲು ತುಂಬ ಸಾಧಾರಣವಾಗಿದ್ದವು. ನಾನು ಹುಲ್ಲನ್ನು ತಂದು ಚಾವಣಿಯನ್ನು ಕಟ್ಟುವುದು ಹೇಗೆ ಎಂದು ಕಲಿತೆ. ನಾನು ಈ ಹೊಸ ಕೈಕಸುಬನ್ನು ಕಲಿಯಲು ಒದ್ದಾಡುತ್ತಿರುವುದನ್ನು ಆಚೀಚೆ ಓಡಾಡುತ್ತಿದ್ದ ಜನ ಆಶ್ಚರ್ಯದಿಂದ ನೋಡುತ್ತಿದ್ದರು. ನನ್ನ ಪ್ರಯಾಸವನ್ನು ಸ್ಥಳೀಯ ಸಹೋದರರು ನೋಡಿದಾಗ ತಮ್ಮ ಸ್ವಂತ ರಾಜ್ಯ ಸಭಾಗೃಹಗಳನ್ನು ಕಟ್ಟಿಕೊಳ್ಳಲು ಮತ್ತು ಅದನ್ನು ಚೆನ್ನಾಗಿ ನೋಡಿಕೊಳ್ಳಲು ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು. ಧರ್ಮಗುರುಗಳು ನಮ್ಮನ್ನು ಗೇಲಿಮಾಡುತ್ತಿದ್ದರು. ಯಾಕೆಂದರೆ ಅವರ ಚರ್ಚುಗಳಲ್ಲಿ ತಗಡಿನ ಚಾವಣಿ ಇತ್ತು ಆದರೆ ನಮ್ಮದು ಬರೀ ಹುಲ್ಲು. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಹುಲ್ಲಿನ ಚಾವಣಿಗಳಿರುವ ರಾಜ್ಯ ಸಭಾಗೃಹಗಳನ್ನು ಕಟ್ಟುವುದನ್ನು ಮುಂದುವರಿಸಿದೆವು. ಒಂದು ಭೀಕರ ಚಂಡಮಾರುತ ರಾಜಧಾನಿಯಾದ ಬಾಂಗೀಯನ್ನು ಬಡಿದಾಗ ಗೇಲಿಮಾಡುವುದು ನಿಂತುಹೋಯಿತು. ಯಾಕೆಂದರೆ ಚಂಡಮಾರುತ ಒಂದು ಚರ್ಚಿನ ತಗಡಿನ ಚಾವಣಿಯನ್ನು ಎತ್ತಿ ಮಧ್ಯ ರಸ್ತೆಯಲ್ಲಿ ಬಿಸಾಡಿತ್ತು. ಆದರೆ ಹುಲ್ಲಿನಿಂದ ಮಾಡಿದ್ದ ನಮ್ಮ ರಾಜ್ಯ ಸಭಾಗೃಹಗಳ ಚಾವಣಿಗಳಿಗೆ ಏನೂ ಆಗಲಿಲ್ಲ. ದೇವರ ರಾಜ್ಯದ ಕೆಲಸವನ್ನು ಒಳ್ಳೇದಾಗಿ ಮಾರ್ಗದರ್ಶಿಸಲು ನಾವು ಒಂದು ಹೊಸ ಶಾಖಾ ಕಚೇರಿಯನ್ನು ಮತ್ತು ಮಿಷನರಿ ಗೃಹವನ್ನು ಐದೇ ತಿಂಗಳಲ್ಲಿ ಕಟ್ಟಿ ಮುಗಿಸಿದೆವು. *

ಮದುವೆ ಜೀವನ—ಹುರುಪಿನ ಸಂಗಾತಿಯ ಜೊತೆ

ನಮ್ಮ ಮದುವೆ ದಿನದಂದು

1976​ರಲ್ಲಿ ಮಧ್ಯ ಆಫ್ರಿಕ ಗಣರಾಜ್ಯದಲ್ಲಿ ನಮ್ಮ ಕೆಲಸವನ್ನು ನಿಷೇಧಿಸಲಾಯಿತು.ನನ್ನನ್ನು ಹತ್ತಿರದ ಚಾಡ್‌ ದೇಶದ ರಾಜಧಾನಿಯಾದ ಎನ್‌ಜಮೀನಗೆ ನೇಮಿಸಲಾಯಿತು. ಒಳ್ಳೆ ವಿಷಯ ಏನೆಂದರೆ, ನನಗಲ್ಲಿ ಹ್ಯಾಪಿ ಸಿಕ್ಕಿದಳು. ಹುರುಪುಳ್ಳ ವಿಶೇಷ ಪಯನೀಯರ್‌ ಆಗಿದ್ದಳು. ಮೂಲತಃ ಕ್ಯಾಮರೂನ್‌ನವಳು. ನಾವು 1978​ರ ಏಪ್ರಿಲ್‌ 1​ರಂದು ಮದುವೆ ಮಾಡಿಕೊಂಡ್ವಿ. ಅದೇ ತಿಂಗಳಲ್ಲಿ ಚಾಡ್‌ ದೇಶದಲ್ಲಿ ಆಂತರಿಕ ಯುದ್ಧ ಶುರುವಾಯಿತು. ಅನೇಕರಂತೆ ನಾವು ಸಹ ದೇಶದ ದಕ್ಷಿಣ ಭಾಗಕ್ಕೆ ಓಡಿಹೋದ್ವಿ. ಯುದ್ಧ ಮುಗಿದ ಮೇಲೆ ಹಿಂದೆ ಬಂದಾಗ ನಮ್ಮ ಮನೆ ಒಂದು ಶಸ್ತ್ರಸಜ್ಜಿತ ಗುಂಪಿನ ಮುಖ್ಯಕಾರ್ಯಾಲಯ ಆಗಿರುವುದನ್ನು ನೋಡಿದ್ವಿ. ನಮ್ಮ ಸಾಹಿತ್ಯ ಅಷ್ಟೇ ಅಲ್ಲ, ಹ್ಯಾಪಿಯ ಮದುವೆ ಬಟ್ಟೆ ಮತ್ತು ನಮ್ಮ ಮದುವೆಗೆ ಬಂದವರು ಕೊಟ್ಟಿದ್ದ ಉಡುಗೊರೆಗಳೂ ನಮಗೆ ಸಿಗಲಿಲ್ಲ. ಆದರೂ ನಾವು ಕೈಚೆಲ್ಲಿ ಕೂರಲಿಲ್ಲ. ನನಗೆ ನನ್ನ ಹೆಂಡತಿ ಇದ್ದಳು, ಅವಳಿಗೆ ನಾನಿದ್ದೆ. ಹೆಚ್ಚಿನ ಸೇವೆಗೆ ಗಮನಕೊಡಲು ತೀರ್ಮಾನಿಸಿದೆವು.

ಸುಮಾರು ಎರಡು ವರ್ಷಗಳ ನಂತರ ಮಧ್ಯ ಆಫ್ರಿಕ ಗಣರಾಜ್ಯದಲ್ಲಿ ನಮ್ಮ ಕೆಲಸದ ಮೇಲಿದ್ದ ನಿಷೇಧವನ್ನು ತೆಗೆಯಲಾಯಿತು. ನಾವು ಅಲ್ಲಿಗೆ ಪುನಃ ಹೋಗಿ ಸಂಚರಣ ಕೆಲಸ ಮಾಡಿದ್ವಿ. ಒಂದು ವ್ಯಾನ್‌ ನಮ್ಮ ಮನೆಯಾಗಿತ್ತು. ಅದರಲ್ಲಿ ಮಡಚಲಾಗುವ ಒಂದು ಮಂಚ ಇತ್ತು, 200 ಲೀ. ನೀರು ಹಿಡಿಯುವ ಒಂದು ಡ್ರಮ್‌ ಇತ್ತು, ಪ್ರೊಪೇನ್‌ ಗ್ಯಾಸ್‌ನಲ್ಲಿ ನಡೆಯುವ ಫ್ರಿಡ್ಜ್‌ ಇತ್ತು ಮತ್ತು ಒಂದು ಗ್ಯಾಸ್‌ ಸ್ಟವ್‌ ಇತ್ತು. ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಒಂದು ಸಲ ನಾವು ಒಂದು ಸ್ಥಳಕ್ಕೆ ಹೋಗುತ್ತಿದ್ದಾಗ ನಮ್ಮನ್ನು 117 ಚೆಕ್‌ಪೋಸ್ಟ್‌ಗಳಲ್ಲಿ ನಿಲ್ಲಿಸಿ ಪೊಲೀಸರು ಚೆಕ್‌ ಮಾಡಿದ್ದರು.

ಹೆಚ್ಚಾಗಿ ತಾಪಮಾನ 50 ಡಿಗ್ರೀ ಸೆಲ್ಸಿಯಸ್‌ ವರೆಗೆ ಏರುತ್ತಿತ್ತು. ಕೆಲವೊಮ್ಮೆ ಸಮ್ಮೇಳನಗಳಲ್ಲಿ ದೀಕ್ಷಾಸ್ನಾನ ಕೊಡಲು ಸಾಕಷ್ಟು ನೀರು ಸಿಗುತ್ತಿರಲಿಲ್ಲ. ಆದ್ದರಿಂದ ಸಹೋದರರು ಒಣಗಿಹೋಗಿದ್ದ ನದಿ ತಳಗಳನ್ನು ಅಗೆದು ಸ್ವಲ್ಪಸ್ವಲ್ಪವಾಗಿ ದೀಕ್ಷಾಸ್ನಾನಕ್ಕೆ ಬೇಕಾದಷ್ಟು ನೀರನ್ನು ತಂದು ಹೆಚ್ಚಾಗಿ ಒಂದು ಡ್ರಮ್‌ನಲ್ಲಿ ತುಂಬಿಸುತ್ತಿದ್ದರು.

ಆಫ್ರಿಕದ ಬೇರೆ ದೇಶಗಳಲ್ಲಿ ಹೆಚ್ಚಿನ ಸೇವೆ

1980​ರಲ್ಲಿ ನಮ್ಮನ್ನು ನೈಜೀರಿಯಕ್ಕೆ ನೇಮಿಸಲಾಯಿತು. ಅಲ್ಲಿ ಎರಡೂವರೆ ವರ್ಷ ಹೊಸ ಶಾಖಾ ಕಚೇರಿಯನ್ನು ಕಟ್ಟಲು ಬೇಕಾದ ಸಿದ್ಧತೆಗಳನ್ನು ಮಾಡುವುದರಲ್ಲಿ ಸಹಾಯ ಮಾಡಿದ್ವಿ. ಸಹೋದರರು ಎರಡು ಅಂತಸ್ತಿನ ಒಂದು ಗೋದಾಮನ್ನು ಖರೀದಿಸಿದ್ದರು. ಈ ಗೋದಾಮನ್ನು ಬಿಡಿಬಿಡಿಯಾಗಿ ಬಿಚ್ಚಿ ನಮ್ಮ ಸೈಟ್‌ಗೆ ತೆಗೆದುಕೊಂಡು ಹೋಗಿ ಜೋಡಿಸಬೇಕಿತ್ತು. ಒಂದು ದಿನ ಬೆಳಗ್ಗೆ ಎಲ್ಲರೂ ಸೇರಿ ಗೋದಾಮನ್ನು ಬಿಚ್ಚುತ್ತಿದ್ದಾಗ ನಾನು ಈ ಕಟ್ಟಡದ ತುತ್ತತುದಿಗೆ ಹೋಗಿ ಸಹಾಯ ಮಾಡುತ್ತಿದ್ದೆ. ಮಧ್ಯಾಹ್ನದಷ್ಟಕ್ಕೆ ಪುನಃ ನಾನು ಹತ್ತಿದ ದಾರಿಯಲ್ಲೇ ಇಳಿಯಲು ಪ್ರಯತ್ನಿಸಿದೆ. ಆದರೆ ಎಲ್ಲರೂ ಬೇರೆ ಬೇರೆ ಕಡೆ ಒಂದೊಂದೇ ಭಾಗವನ್ನು ಬಿಚ್ಚುತ್ತಾ ಇದ್ದದರಿಂದ ನಾನು ಎಲ್ಲಿ ಕಾಲಿಡುತ್ತಿದ್ದೇನೆ ಎಂದು ಗೊತ್ತಾಗದೆ ಕೆಳಗೆ ಬಿದ್ದುಬಿಟ್ಟೆ. ನನ್ನ ಪರಿಸ್ಥಿತಿ ತುಂಬ ಗಂಭೀರವಾಗಿ ಕಂಡಿತು. ಆದರೆ ಎಕ್ಸರೇ ಮತ್ತು ತಪಾಸಣೆ ಮಾಡಿದ ಮೇಲೆ ಡಾಕ್ಟರು ಹ್ಯಾಪಿಗೆ, “ಚಿಂತೆ ಮಾಡಬೇಡಿ. ಕೆಲವು ಮೂಳೆ ನಾರುಗಳು ಮಾತ್ರ ಹಾನಿಯಾಗಿವೆ. ಒಂದೆರಡು ವಾರದಲ್ಲಿ ಸರಿ ಹೋಗುತ್ತೆ” ಅಂದರು.

ದಾರಿಯಲ್ಲಿ ಸಿಕ್ಕಿದ ಒಂದು ಗಾಡಿಯನ್ನು ಹತ್ತಿ ಸಮ್ಮೇಳನಕ್ಕೆ ಹೋಗುತ್ತಿರುವುದು”

1986​ರಲ್ಲಿ ನಾವು ಕೋಟ್‌ ಡೀವಾರ್‌ಗೆ ಹೋದ್ವಿ. ಅಲ್ಲಿ ನಾವು ಸಂಚರಣ ಕೆಲಸ ಮಾಡಿದ್ವಿ. ಹತ್ತಿರದ ಬುರ್ಕಿನಾ ಫಾಸೊಗೂ ನಾವು ಭೇಟಿಕೊಡಬೇಕಿತ್ತು. ಮುಂದೊಂದು ದಿನ ನಾವು ಬುರ್ಕಿನಾಗೆ ಬಂದು ಸ್ವಲ್ಪ ಸಮಯ ನೆಲೆಸುತ್ತೇವೆ ಎಂದು ನಾನು ಆಗ ನೆನಸಿರಲಿಲ್ಲ.

ಸಂಚರಣ ಕೆಲಸದಲ್ಲಿದ್ದಾಗ ಒಂದು ವ್ಯಾನ್‌ ನಮ್ಮ ಮನೆಯಾಗಿತ್ತು

ನಾನು ಕೆನಡ ದೇಶವನ್ನು ಬಿಟ್ಟು ಹೊರಟದ್ದು 1956​ರಲ್ಲಿ. 47 ವರ್ಷಗಳಾದ ಮೇಲೆ, ಅಂದರೆ 2003​ರಲ್ಲಿ ಕೆನಡದ ಬೆತೆಲಿಗೆ ಬಂದೆ. ಈಗ ನನ್ನ ಜೊತೆ ಹ್ಯಾಪಿನೂ ಇದ್ದಳು. ನಾವು ಕೆನಡದ ಪ್ರಜೆಗಳಾಗಿದ್ದರೂ ನಮ್ಮ ಮನಸ್ಸು ಆಫ್ರಿಕದಲ್ಲಿತ್ತು.

ಬುರ್ಕಿನಾ ಫಾಸೊದಲ್ಲಿ ಒಂದು ಬೈಬಲ್‌ ಅಧ್ಯಯನ ನಡೆಸುತ್ತಿರುವುದು

ನಂತರ 2007​ರಲ್ಲಿ ನನಗೆ 79 ವರ್ಷ ಇದ್ದಾಗ ನಾವು ಪುನಃ ಆಫ್ರಿಕಕ್ಕೆ ಹೋದ್ವಿ! ನಮ್ಮನ್ನು ಬುರ್ಕಿನಾ ಫಾಸೊಗೆ ನೇಮಿಸಲಾಗಿತ್ತು. ಅಲ್ಲಿ ನಾನು ದೇಶೀಯ ಸಮಿತಿಯ ಸದಸ್ಯನಾಗಿ ಸೇವೆ ಮಾಡಿದೆ. ನಂತರ ಈ ಕಚೇರಿಯನ್ನು ಬೆನಿನ್‌ ಶಾಖೆಯ ಕೆಳಗೆ ಒಂದು ಪ್ರಾದೇಶಿಕ ಭಾಷಾಂತರ ಕಚೇರಿಯಾಗಿ ಮಾಡಲಾಯಿತು. 2013​ರ ಆಗಸ್ಟ್‌ ತಿಂಗಳಲ್ಲಿ ನಮ್ಮನ್ನು ಬೆನಿನ್‌ನಲ್ಲಿದ್ದ ಬೆತೆಲಿಗೆ ನೇಮಿಸಲಾಯಿತು.

ಹ್ಯಾಪಿ ಜೊತೆ, ಬೆನಿನ್‌ ಶಾಖೆಯಲ್ಲಿದ್ದಾಗ

ನನ್ನ ಶಾರೀರಿಕ ಇತಿಮಿತಿಗಳ ಹೊರತೂ ಸುವಾರ್ತೆ ಸಾರುವುದು ಅಂದರೆ ನನಗೆ ತುಂಬ ಇಷ್ಟ. ಕಳೆದ ಮೂರು ವರ್ಷಗಳಲ್ಲಿ ಹಿರಿಯರ ಮತ್ತು ನನ್ನ ಪ್ರಿಯ ಪತ್ನಿಯ ಸಹಾಯದಿಂದ ನನ್ನ ಇಬ್ಬರು ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ತೆಗೆದುಕೊಳ್ಳುವುದನ್ನು ನಾನು ನೋಡಿದೆ. ಅವರ ಹೆಸರು ಜೇಡೇಯೋನ್‌ ಮತ್ತು ಫ್ರೇಜಿಸ್‌. ಅವರು ಯೆಹೋವನ ಸೇವೆಯನ್ನು ಹುರುಪಿನಿಂದ ಮಾಡುತ್ತಿದ್ದಾರೆ.

ನಂತರ ನಮ್ಮನ್ನು ದಕ್ಷಿಣ ಆಫ್ರಿಕ ಶಾಖೆಗೆ ನೇಮಿಸಲಾಯಿತು. ಇಲ್ಲಿರುವ ಬೆತೆಲ್‌ ಕುಟುಂಬ ಪ್ರೀತಿಯಿಂದ ನನ್ನ ಆರೋಗ್ಯಾರೈಕೆ ಮಾಡುತ್ತದೆ. ನಾನು ಆಫ್ರಿಕದಲ್ಲಿ ಸೇವೆ ಮಾಡುವ ಸುಯೋಗ ಸಿಕ್ಕಿದ ಏಳನೇ ದೇಶ ದಕ್ಷಿಣ ಆಫ್ರಿಕ. ನಂತರ 2017​ರ ಅಕ್ಟೋಬರ್‌ ತಿಂಗಳಲ್ಲಿ ನಮಗೆ ಒಂದು ದೊಡ್ಡ ಆಶೀರ್ವಾದ ಸಿಕ್ಕಿತು. ನ್ಯೂಯಾರ್ಕಿನ ವಾರ್ವಿಕ್‌ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯದ ಸಮರ್ಪಣೆಗೆ ನಾವು ಹಾಜರಾದ್ವಿ. ಇದನ್ನು ನಾವು ಮರೆಯಕ್ಕೇ ಆಗಲ್ಲ.

1994​ರ ವರ್ಷಪುಸ್ತಕ (ಇಂಗ್ಲಿಷ್‌) ಪುಟ 255​ರಲ್ಲಿ ಹೀಗೆ ಹೇಳುತ್ತದೆ: “ಅನೇಕ ವರ್ಷಗಳಿಂದ ಸೇವೆ ಮಾಡುತ್ತಿರುವ ಎಲ್ಲರಿಗೂ ನಾವು ಈ ಉತ್ತೇಜನ ಕೊಡುತ್ತೇವೆ: ‘ಧೈರ್ಯವಾಗಿರಿ, ಕೈಚೆಲ್ಲಿ ಕೂರಬೇಡಿ. ಯಾಕೆಂದರೆ ನಿಮ್ಮ ಪ್ರಯತ್ನಕ್ಕೆ ಖಂಡಿತ ಫಲ ಸಿಗುತ್ತದೆ.’—2 ಪೂರ್ವ. 15:7.” ನಾನು ಮತ್ತು ಹ್ಯಾಪಿ ಇದನ್ನೇ ಮಾಡಲು ಬಯಸುತ್ತೇವೆ. ಬೇರೆಯವರಿಗೂ ಇದನ್ನೇ ಮಾಡುವಂತೆ ಪ್ರೋತ್ಸಾಹಿಸುತ್ತೇವೆ.

^ ಪ್ಯಾರ. 9 1944​ರಲ್ಲಿ ಯೆಹೋವನ ಸಾಕ್ಷಿಗಳು ಹೊರತಂದ ಪ್ರಕಾಶನ. ಈಗ ಮುದ್ರಿಸಲಾಗುವುದಿಲ್ಲ.

^ ಪ್ಯಾರ. 18 1953, ನವೆಂಬರ್‌ 8​ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟ 3-5​ರಲ್ಲಿರುವ “Quebec Priest Convicted for Attack on Jehovah’s Witnesses” ಎಂಬ ಲೇಖನ ನೋಡಿ.

^ ಪ್ಯಾರ. 23 ಹೆಚ್ಚಿನ ವಿವರಗಳನ್ನು 1994​ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ (ಇಂಗ್ಲಿಷ್‌) ಪುಟ 148-150​ರಲ್ಲಿ ಕೊಡಲಾಗಿದೆ.

^ ಪ್ಯಾರ. 26 1966, ಮೇ 8​ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟ 27​ರಲ್ಲಿರುವ “Building on a Solid Foundation” ಎಂಬ ಲೇಖನವನ್ನು ನೋಡಿ.