ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 32

ಇನ್ನೂ ಹೆಚ್ಚು ಪ್ರೀತಿಸಿ

ಇನ್ನೂ ಹೆಚ್ಚು ಪ್ರೀತಿಸಿ

‘ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಸಮೃದ್ಧಿಹೊಂದಲಿ.’—ಫಿಲಿ. 1:9.

ಗೀತೆ 72 ಪ್ರೀತಿಯ ಗುಣವನ್ನು ಬೆಳೆಸುವುದು

ಕಿರುನೋಟ *

1. ಫಿಲಿಪ್ಪಿಯಲ್ಲಿ ಹೊಸ ಸಭೆಯನ್ನು ಯಾರು ಸ್ಥಾಪಿಸಿದರು?

ಅಪೊಸ್ತಲ ಪೌಲ, ಸೀಲ, ಲೂಕ ಮತ್ತು ತಿಮೊಥೆಯರು ರೋಮನ್‌ ಪ್ರಾಂತವಾದ ಫಿಲಿಪ್ಪಿಗೆ ಹೋದಾಗ ಅನೇಕರು ಸುವಾರ್ತೆಯ ಬಗ್ಗೆ ಹೆಚ್ಚನ್ನು ತಿಳಿಯಲು ಆಸಕ್ತಿ ತೋರಿಸಿದರು. ಈ ನಾಲ್ಕು ಹುರುಪಿನ ಸಹೋದರರು ಅಲ್ಲಿ ಸಭೆಯನ್ನು ಸ್ಥಾಪಿಸಿದರು. ಹೊಸದಾಗಿ ಸತ್ಯ ಕಲಿತ ಎಲ್ಲಾ ಸಹೋದರ ಸಹೋದರಿಯರು ಕೂಟಕ್ಕಾಗಿ ಕೂಡಿಬರಲು ಆರಂಭಿಸಿದರು. ಅವರು ಬಹುಶಃ ಅತಿಥಿಸತ್ಕಾರದಲ್ಲಿ ಒಳ್ಳೇ ಮಾದರಿಯಿಟ್ಟಿದ್ದ ಲುದ್ಯ ಎಂಬ ಸಹೋದರಿಯ ಮನೆಯಲ್ಲಿ ಕೂಡಿಬರುತ್ತಿದ್ದರು.—ಅ. ಕಾ. 16:40.

2. ಸ್ವಲ್ಪದರಲ್ಲೇ ಹೊಸ ಸಭೆಗೆ ಯಾವ ಸಮಸ್ಯೆ ಎದುರಾಯಿತು?

2 ಆದರೆ, ಸ್ವಲ್ಪದರಲ್ಲೇ ಆ ಹೊಸ ಸಭೆಯವರ ಮೇಲೆ ಹಿಂಸೆ ಬಂತು. ಪೌಲ ಮತ್ತು ಆತನ ಜೊತೆಯಲ್ಲಿದ್ದವರ ಮೇಲೆ ಸೈತಾನನು ವಿರೋಧ ತಂದನು. ಸತ್ಯದ ವಿರೋಧಿಗಳು ಅವರ ಸಾರುವ ಕೆಲಸವನ್ನು ತೀವ್ರವಾಗಿ ವಿರೋಧಿಸಿದರು. ಪೌಲ ಮತ್ತು ಸೀಲನನ್ನು ಹಿಡಿದು ಕೋಲುಗಳಿಂದ ಹೊಡೆಸಿ ಬಂಧಿಸಲಾಯಿತು. ಅವರು ಜೈಲಿನಿಂದ ಬಿಡುಗಡೆಯಾದ ನಂತರ ಹೊಸ ಶಿಷ್ಯರನ್ನು ಭೇಟಿ ಮಾಡಿ ಉತ್ತೇಜಿಸಿದರು. ನಂತರ ಪೌಲ, ಸೀಲ ಮತ್ತು ತಿಮೊಥೆಯ ಅಲ್ಲಿಂದ ಹೋದರು. ಆದರೆ ಲೂಕ ಬಹುಶಃ ಅಲ್ಲೇ ಉಳುಕೊಂಡನು. ಹಿಂಸೆ-ವಿರೋಧ ಬಂದಿದ್ದನ್ನು ನೋಡಿ ಹೊಸ ಸಭೆಯವರು ಭಯಪಟ್ಟರಾ? ಇಲ್ಲ. ಯೆಹೋವನ ಪವಿತ್ರಾತ್ಮದ ಸಹಾಯ ಪಡೆದು ಅವರು ಹುರುಪಿನಿಂದ ಸಾರುವುದನ್ನು ಮುಂದುವರಿಸಿದರು. (ಫಿಲಿ. 2:12) ಆದ್ದರಿಂದಲೇ ಪೌಲನಿಗೆ ಅವರ ಬಗ್ಗೆ ಹೆಮ್ಮೆ ಅನಿಸಿತು.

3. ಪೌಲನು ಯಾವೆಲ್ಲಾ ವಿಷಯಗಳ ಬಗ್ಗೆ ಪ್ರಾರ್ಥಿಸಿದನೆಂದು ಫಿಲಿಪ್ಪಿ 1:9-11 ತಿಳಿಸುತ್ತದೆ?

3 ಸುಮಾರು ಹತ್ತು ವರ್ಷಗಳ ನಂತರ ಪೌಲನು ಫಿಲಿಪ್ಪಿ ಸಭೆಗೆ ಒಂದು ಪತ್ರ ಬರೆದನು. ಪೌಲನಿಗೆ ಅವರ ಮೇಲೆ ಎಷ್ಟು ಪ್ರೀತಿ ಇತ್ತೆಂದು ಆ ಪತ್ರ ಓದುವಾಗ ಗೊತ್ತಾಗುತ್ತದೆ. ‘ಕ್ರಿಸ್ತ ಯೇಸುವಿಗಿರುವಂಥ ಕೋಮಲ ಮಮತೆಯಿಂದ ನಿಮ್ಮೆಲ್ಲರಿಗೋಸ್ಕರ ನಾನು ಹಂಬಲಿಸುತ್ತಿದ್ದೇನೆ’ ಎಂದು ಆತನು ಬರೆದನು. (ಫಿಲಿ. 1:8) ಮಾತ್ರವಲ್ಲ, ಅವರಿಗೋಸ್ಕರ ಪ್ರಾರ್ಥಿಸುತ್ತಿದ್ದೇನೆ ಎಂದು ಸಹ ಬರೆದನು. ಅವರು ಪರಸ್ಪರ ಇನ್ನೂ ಹೆಚ್ಚು ಪ್ರೀತಿ ತೋರಿಸಲು, ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಲು, ನಿರ್ದೋಷಿಗಳಾಗಿರಲು, ಇತರರನ್ನು ಎಡವಿಸದಿರಲು ಮತ್ತು ನೀತಿಯ ಫಲದಿಂದ ತುಂಬಿರಲು ಸಹಾಯ ಮಾಡುವಂತೆ ಯೆಹೋವನನ್ನು ಕೇಳಿಕೊಂಡನು. ಪೌಲನು ಬರೆದ ಮಾತುಗಳಿಂದ ಇಂದು ನಾವು ಸಹ ಖಂಡಿತ ಪ್ರಯೋಜನ ಪಡೆಯುತ್ತೇವೆ. ಆದ್ದರಿಂದ ಆತನು ಫಿಲಿಪ್ಪಿಯವರಿಗೆ ಏನು ಬರೆದಿದ್ದಾನೆಂದು ಓದೋಣ. (ಫಿಲಿಪ್ಪಿ 1:9-11 ಓದಿ.) ನಂತರ, ಆತನು ಹೇಳಿದ ಪ್ರತಿಯೊಂದು ವಿಷಯವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು ಎಂದು ಚರ್ಚಿಸೋಣ.

ಇನ್ನೂ ಹೆಚ್ಚು ಪ್ರೀತಿ ಬೆಳೆಸಿಕೊಳ್ಳಿ

4. (ಎ) ಒಂದನೇ ಯೋಹಾನ 4:9, 10​ರ ಪ್ರಕಾರ ಯೆಹೋವನು ನಮ್ಮ ಮೇಲಿರುವ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆ? (ಬಿ) ನಾವು ದೇವರನ್ನು ಎಷ್ಟು ಪ್ರೀತಿಸಬೇಕು?

4 ಯೆಹೋವನು ತನ್ನ ಮಗನನ್ನು ನಮ್ಮ ಪಾಪಗಳಿಗಾಗಿ ಸಾಯುವಂತೆ ಭೂಮಿಗೆ ಕಳುಹಿಸುವ ಮೂಲಕ ನಮ್ಮ ಮೇಲೆ ತುಂಬ ಪ್ರೀತಿ ಇದೆ ಎಂದು ತೋರಿಸಿದ್ದಾನೆ. (1 ಯೋಹಾನ 4:9, 10 ಓದಿ.) ಹೀಗೆ ದೇವರು ತೋರಿಸಿರುವ ನಿಸ್ವಾರ್ಥ ಪ್ರೀತಿ ನಮಗೂ ಆತನನ್ನು ಪ್ರೀತಿಸುವಂತೆ ಪ್ರಚೋದಿಸುತ್ತದೆ. (ರೋಮ. 5:8) ನಾವು ದೇವರನ್ನು ಎಷ್ಟು ಪ್ರೀತಿಸಬೇಕು? ಇದಕ್ಕೆ ಉತ್ತರ ಯೇಸು ಒಬ್ಬ ಫರಿಸಾಯನಿಗೆ ಹೇಳಿದ ಈ ಮಾತುಗಳಲ್ಲಿದೆ: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.” (ಮತ್ತಾ. 22:36, 37) ನಾವು ದೇವರನ್ನು ಅರೆಮನಸ್ಸಿನಿಂದ ಪ್ರೀತಿಸುವುದಿಲ್ಲ. ಬದಲಿಗೆ ಆತನ ಮೇಲಿರುವ ಪ್ರೀತಿಯನ್ನು ದಿನೇ ದಿನೇ ಇನ್ನೂ ಹೆಚ್ಚು ಬೆಳೆಸಿಕೊಳ್ಳಲು ಬಯಸುತ್ತೇವೆ. ‘ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಸಮೃದ್ಧಿಹೊಂದಬೇಕು’ ಎಂದು ಪೌಲನು ಫಿಲಿಪ್ಪಿಯವರಿಗೆ ತಿಳಿಸಿದನು. ದೇವರನ್ನು ಇನ್ನೂ ಹೆಚ್ಚು ಪ್ರೀತಿಸಲು ನಾವೇನು ಮಾಡಬಹುದು?

5. ದೇವರ ಮೇಲಿರುವ ನಮ್ಮ ಪ್ರೀತಿ ಹೆಚ್ಚಾಗುತ್ತಾ ಹೋಗಲು ನಾವೇನು ಮಾಡಬೇಕು?

5 ದೇವರನ್ನು ಪ್ರೀತಿಸಬೇಕೆಂದರೆ ನಾವು ಆತನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. “ಪ್ರೀತಿಸದವನು ದೇವರನ್ನು ತಿಳಿದವನಲ್ಲ, ಏಕೆಂದರೆ ದೇವರು ಪ್ರೀತಿಯಾಗಿದ್ದಾನೆ” ಅಂತ ಬೈಬಲ್‌ ಹೇಳುತ್ತದೆ. (1 ಯೋಹಾ. 4:8) ನಾವು ಆತನ ಬಗ್ಗೆ “ನಿಷ್ಕೃಷ್ಟ ಜ್ಞಾನ” ಪಡೆಯುತ್ತಾ, ಆತನು ಹೇಗೆ ಯೋಚಿಸುತ್ತಾನೆಂದು ತಿಳಿಯುತ್ತಾ ಹೋದಂತೆ ನಮಗೆ ಆತನ ಮೇಲಿರುವ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಅಪೊಸ್ತಲ ಪೌಲನು ತಿಳಿಸಿದ್ದಾನೆ. (ಫಿಲಿ. 1:9) ನಾವು ಬೈಬಲ್‌ ಕಲಿಯಲು ಆರಂಭಿಸಿದಾಗ ನಮಗೆ ದೇವರ ಮೇಲೆ ಪ್ರೀತಿ ಹುಟ್ಟಿಕೊಂಡಿತು. ಆದರೆ ಆತನ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ನಂತರ ಆತನ ಬಗ್ಗೆ ಹೆಚ್ಚು ಕಲಿಯುತ್ತಾ ಹೋದಂತೆ ಆತನ ಮೇಲಿನ ಪ್ರೀತಿ ಸಹ ಹೆಚ್ಚಾಗುತ್ತಾ ಹೋಯಿತು. ಹಾಗಾಗಿ, ನಾವು ನಮ್ಮ ಜೀವನದಲ್ಲಿ ಪ್ರತಿದಿನ ಬೈಬಲ್‌ ಓದಿ ಧ್ಯಾನಿಸುವುದಕ್ಕೆ ಮೊದಲ ಸ್ಥಾನ ಕೊಡುತ್ತೇವೆ.—ಫಿಲಿ. 2:16.

6. ಒಂದನೇ ಯೋಹಾನ 4:11, 20, 21​ರಲ್ಲಿ ಹೇಳುವ ಪ್ರಕಾರ ನಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ನಾವು ಯಾರನ್ನು ಸಹ ಪ್ರೀತಿಸಬೇಕು?

6 ದೇವರಿಗೆ ನಮ್ಮ ಮೇಲಿರುವ ಅಪಾರ ಪ್ರೀತಿ ನಾವು ನಮ್ಮ ಸಹೋದರರನ್ನು ಪ್ರೀತಿಸುವಂತೆ ಪ್ರಚೋದಿಸುತ್ತದೆ. (1 ಯೋಹಾನ 4:11, 20, 21 ಓದಿ.) ನಮಗೆ ಸಹೋದರ ಸಹೋದರಿಯರ ಮೇಲೆ ತನ್ನಿಂದ ತಾನೇ ಪ್ರೀತಿ ಬಂದು ಬಿಡುತ್ತದೆ ಅಂತ ಅನಿಸಬಹುದು. ಯಾಕೆಂದರೆ, ನಾವು ಯೆಹೋವನನ್ನು ಆರಾಧಿಸಿ ಆತನ ಗುಣಗಳನ್ನೇ ಅನುಕರಿಸಲು ಪ್ರಯತ್ನಿಸುತ್ತೇವೆ. ನಮಗಾಗಿ ತನ್ನ ಪ್ರಾಣವನ್ನೇ ಕೊಡುವಷ್ಟರ ಮಟ್ಟಿಗೆ ಪ್ರೀತಿ ತೋರಿಸಿದ ಯೇಸುವಿನ ಮಾದರಿಯನ್ನು ನಾವು ಅನುಕರಿಸುತ್ತೇವೆ. ಆದರೂ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬ ಆಜ್ಞೆಯನ್ನು ಪಾಲಿಸಲು ಕೆಲವೊಮ್ಮೆ ಕಷ್ಟವಾಗಬಹುದು. ಇದಕ್ಕೆ ಫಿಲಿಪ್ಪಿ ಸಭೆಯ ಉದಾಹರಣೆ ನೋಡೋಣ.

7. ಯುವೊದ್ಯ ಮತ್ತು ಸಂತುಕೆಗೆ ಪೌಲ ನೀಡಿದ ಸಲಹೆಯಿಂದ ನಾವೇನು ಕಲಿಯುತ್ತೇವೆ?

7 ಯುವೊದ್ಯ ಮತ್ತು ಸಂತುಕೆ ಎಂಬ ಸಹೋದರಿಯರು ಅಪೊಸ್ತಲ ಪೌಲನ ಜೊತೆ “ಹೆಗಲಿಗೆ ಹೆಗಲುಕೊಟ್ಟು” ಹುರುಪಿನಿಂದ ಸೇವೆ ಮಾಡಿದ್ದರು. ಆದರೂ ನಂತರ ಆ ಸಹೋದರಿಯರ ಮಧ್ಯೆ ಮನಸ್ತಾಪ ಆಗಿ ಅವರ ಸ್ನೇಹ ಮುರಿದು ಬಿತ್ತು. ಆ ಸಹೋದರಿಯರಿದ್ದ ಸಭೆಗೆ ಬರೆದ ಪತ್ರದಲ್ಲಿ ಪೌಲನು ಅವರಿಬ್ಬರ ಹೆಸರನ್ನು ಉಲ್ಲೇಖಿಸುತ್ತಾ “ಒಂದೇ ಮನಸ್ಸುಳ್ಳವರಾಗಿರಿ” ಎಂದು ಬುದ್ಧಿ ಹೇಳಿದನು. (ಫಿಲಿ. 4:2, 3) ಇಡೀ ಸಭೆಗೂ ಬುದ್ಧಿವಾದ ಹೇಳುವ ಅಗತ್ಯ ಇದೆ ಎಂದು ಯೋಚಿಸಿ ಆತನು ಹೀಗೆ ಹೇಳಿದನು: “ಎಲ್ಲ ವಿಷಯಗಳನ್ನು ಗುಣುಗುಟ್ಟದೆಯೂ ವಾಗ್ವಾದಿಸದೆಯೂ ಮಾಡುತ್ತಾ ಇರಿ.” (ಫಿಲಿ. 2:14) ಆತನು ಕೊಟ್ಟ ನೇರ ಸಲಹೆ ಈ ನಿಷ್ಠಾವಂತ ಸಹೋದರಿಯರಿಗೆ ಮಾತ್ರವಲ್ಲ ಇಡೀ ಸಭೆಗೆ ಒಬ್ಬರಿಗೊಬ್ಬರು ಹೆಚ್ಚು ಪ್ರೀತಿ ತೋರಿಸಲು ಸಹಾಯ ಮಾಡಿತು.

ನಾವು ಯಾಕೆ ಸಹೋದರರ ಬಗ್ಗೆ ಒಳ್ಳೇದನ್ನೇ ಯೋಚಿಸಬೇಕು? (ಪ್ಯಾರ 8 ನೋಡಿ) *

8. (ಎ) ಸಹೋದರರನ್ನು ಪ್ರೀತಿಸಲು ನಮಗೆ ಯಾಕೆ ಕಷ್ಟವಾಗಬಹುದು? (ಬಿ) ಅವರನ್ನು ಪ್ರೀತಿಸಲು ಯಾವುದು ಸಹಾಯ ಮಾಡುತ್ತದೆ?

8 ಕೆಲವೊಮ್ಮೆ ನಮಗೂ ಸಹೋದರ ಸಹೋದರಿಯರನ್ನು ಪ್ರೀತಿಸಲು ತುಂಬ ಕಷ್ಟವಾಗಬಹುದು. ಯಾಕೆಂದರೆ ಯುವೊದ್ಯ ಮತ್ತು ಸಂತುಕೆ ಮಾಡಿದಂತೆ ನಾವು ಸಹ ಅವರ ತಪ್ಪುಗಳನ್ನೇ ನೋಡುತ್ತಿರಬಹುದು. ಪ್ರತಿದಿನ ನಾವೆಲ್ಲರೂ ತಪ್ಪು ಮಾಡುತ್ತೇವೆ. ನಾವು ಇತರರ ತಪ್ಪುಗಳನ್ನೇ ನೋಡುವುದಾದರೆ ಅವರ ಮೇಲೆ ನಮಗಿರುವ ಪ್ರೀತಿ ಕಡಿಮೆಯಾಗುತ್ತದೆ. ಉದಾಹರಣೆಗೆ, ನಾವು ರಾಜ್ಯ ಸಭಾಗೃಹ ಶುಚಿ ಮಾಡುವಾಗ ಒಬ್ಬ ಸಹೋದರನು ನಮಗೆ ಸಹಾಯ ಮಾಡಕ್ಕೆ ಮರೆಯಬಹುದು. ಇದರಿಂದ ನಮಗೆ ಕಿರಿಕಿರಿಯಾಗಬಹುದು. ಆಗ ನಾವು ಆತನು ಮಾಡಿದ ಬೇರೆಲ್ಲಾ ತಪ್ಪುಗಳನ್ನು ನೆನಪಿಸಿಕೊಂಡರೆ ನಮಗೆ ಇನ್ನೂ ಹೆಚ್ಚು ಕಿರಿಕಿರಿಯಾಗುತ್ತದೆ. ಅವರ ಮೇಲಿನ ಪ್ರೀತಿ ಕಡಿಮೆಯಾಗುತ್ತದೆ. ನಿಮ್ಮ ಸಭೆಯಲ್ಲಿರುವ ಒಬ್ಬರನ್ನು ಕಂಡರೆ ನಿಮಗೂ ಈ ತರ ಕಿರಿಕಿರಿಯಾಗುತ್ತಿದ್ದರೆ ಈ ವಿಷಯದ ಬಗ್ಗೆ ಯೋಚಿಸಿ: ಯೆಹೋವನಿಗೆ ನಮ್ಮ ತಪ್ಪುಗಳೂ ಗೊತ್ತು, ಆ ಸಹೋದರನ ತಪ್ಪುಗಳೂ ಗೊತ್ತು. ಆದರೂ ಆತನು ಆ ಸಹೋದರನನ್ನೂ ನಮ್ಮನ್ನೂ ಪ್ರೀತಿಸುತ್ತಾನೆ. ಆದ್ದರಿಂದ ನಾವು ಯೆಹೋವನಂತೆ ಪ್ರೀತಿ ತೋರಿಸಬೇಕು. ಸಹೋದರರ ಬಗ್ಗೆ ಒಳ್ಳೇದನ್ನೇ ಯೋಚಿಸಬೇಕು. ಅವರನ್ನು ಪ್ರೀತಿಸಲು ನಮ್ಮಿಂದಾಗುವ ಎಲ್ಲಾ ಪ್ರಯತ್ನ ಮಾಡುವುದಾದರೆ ಅವರೊಂದಿಗೆ ನಾವು ಅನ್ಯೋನ್ಯವಾಗಿ ಇರುತ್ತೇವೆ.—ಫಿಲಿ. 2:1, 2.

‘ಹೆಚ್ಚು ಪ್ರಮುಖವಾದ ವಿಷಯಗಳು’

9. ಪೌಲನು ಫಿಲಿಪ್ಪಿಯವರಿಗೆ ಬರೆದ ಪತ್ರದಲ್ಲಿ ತಿಳಿಸಲಾದ ‘ಹೆಚ್ಚು ಪ್ರಮುಖವಾದ ವಿಷಯಗಳಲ್ಲಿ’ ಕೆಲವು ಯಾವುವು?

9 ಯೆಹೋವನ ಪ್ರೇರಣೆಯಿಂದ ಪೌಲನು ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ, ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ’ ಅಂತ ಸಲಹೆ ಕೊಟ್ಟನು. ಆ ಸಲಹೆ ನಮಗೂ ಅನ್ವಯಿಸುತ್ತದೆ. (ಫಿಲಿ. 1:10) ಆ ಪ್ರಮುಖ ವಿಷಯಗಳಲ್ಲಿ ಯೆಹೋವನ ಹೆಸರಿನ ಪವಿತ್ರೀಕರಣ, ಆತನ ಉದ್ದೇಶಗಳ ನೆರವೇರಿಕೆ ಮತ್ತು ಸಭೆಯ ಶಾಂತಿ-ಐಕ್ಯತೆ ಸೇರಿದೆ. (ಮತ್ತಾ. 6:9, 10; ಯೋಹಾ. 13:35) ಇವುಗಳಿಗೆ ನಮ್ಮ ಜೀವನದಲ್ಲಿ ಮೊದಲನೇ ಸ್ಥಾನ ಕೊಡುವುದಾದರೆ ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸಿಕೊಡುತ್ತೇವೆ.

10. ಯೆಹೋವನ ದೃಷ್ಟಿಯಲ್ಲಿ ನಿರ್ದೋಷಿಗಳಾಗಬೇಕೆಂದರೆ ನಾವೇನು ಮಾಡಬೇಕು?

10 ನಾವು ‘ನಿರ್ದೋಷಿಗಳಾಗಿರಬೇಕು’ ಎಂದು ಸಹ ಪೌಲನು ಹೇಳಿದನು. ಅದರರ್ಥ ನಮ್ಮಿಂದ ತಪ್ಪೇ ಆಗಬಾರದು ಅಂತನಾ? ನಾವು ಏನೇ ಮಾಡಿದರೂ ಯೆಹೋವನ ತರ ಪರಿಪೂರ್ಣರಾಗಲು ಸಾಧ್ಯವಿಲ್ಲ. ಆದರೆ ನಾವು ಪ್ರೀತಿಯನ್ನು ಹೆಚ್ಚಿಸಲು ಮತ್ತು ಹೆಚ್ಚು ಪ್ರಮುಖವಾದ ವಿಷಯಗಳಿಗೆ ಮೊದಲ ಸ್ಥಾನ ಕೊಡಲು ನಮ್ಮಿಂದಾಗುವ ಎಲ್ಲವನ್ನೂ ಮಾಡುವುದಾದರೆ ಯೆಹೋವನ ದೃಷ್ಟಿಯಲ್ಲಿ ನಾವು ನಿರ್ದೋಷಿಗಳಾಗುತ್ತೇವೆ. ನಾವು ಪ್ರೀತಿ ತೋರಿಸುವ ಒಂದು ವಿಧ ಇತರರನ್ನು ಎಡವಿಸದೆ ಇರಲು ನಮ್ಮಿಂದಾಗುವ ಎಲ್ಲವನ್ನು ಮಾಡುವುದೇ ಆಗಿದೆ.

11. ನಾವು ಯಾಕೆ ಇತರರನ್ನು ಎಡವಿಸಬಾರದು?

11 ಇತರರನ್ನು ಎಡವಿಸಬೇಡಿ ಅನ್ನುವುದು ತುಂಬ ಗಂಭೀರ ಎಚ್ಚರಿಕೆಯಾಗಿದೆ. ನಮ್ಮಿಂದ ಬೇರೆಯವರು ಹೇಗೆ ಎಡವಬಹುದು? ನಾವು ಆರಿಸಿಕೊಳ್ಳುವ ಮನೋರಂಜನೆ, ಹಾಕುವ ಬಟ್ಟೆ ಮತ್ತು ಮಾಡುವ ಉದ್ಯೋಗದಿಂದಾಗಿ ಇತರರು ಎಡವಬಹುದು. ನಮ್ಮ ಆಯ್ಕೆಗಳು ಯೆಹೋವನ ಮಟ್ಟಗಳಿಗೆ ವಿರುದ್ಧವಾಗಿ ಇಲ್ಲದಿರಬಹುದು. ಆದರೆ ನಮ್ಮ ಆಯ್ಕೆಗಳನ್ನು ಬೇರೆಯವರ ಮನಸ್ಸಾಕ್ಷಿ ತಪ್ಪೆಂದು ಹೇಳುವುದಾದರೆ ಅಥವಾ ಅವರು ಎಡವುದಾದರೆ ನಾವದನ್ನು ಕಡೆಗಣಿಸಬಾರದು. ಯಾಕೆಂದರೆ ಅದು ತುಂಬ ಗಂಭೀರವಾದ ವಿಷಯ. ನಾವು ನಮ್ಮ ಪ್ರೀತಿಯ ಸಹೋದರರಲ್ಲಿ ಒಬ್ಬರನ್ನು ಎಡವಿಸುವುದಕ್ಕಿಂತ ನಮ್ಮ ಕುತ್ತಿಗೆಗೆ ದೊಡ್ಡ ಕಲ್ಲನ್ನು ಕಟ್ಟಿ ಸಮುದ್ರಕ್ಕೆ ಎಸೆಯುವುದೇ ಒಳ್ಳೇದು ಎಂದು ಯೇಸು ಹೇಳಿದನು.—ಮತ್ತಾ. 18:6.

12. ಒಬ್ಬ ಪಯನೀಯರ್‌ ದಂಪತಿಯ ಮಾದರಿಯಿಂದ ನಾವೇನು ಕಲಿಯಬಹುದು?

12 ಯೇಸುವಿನ ಈ ಎಚ್ಚರಿಕೆಯನ್ನು ಒಬ್ಬ ಪಯನೀಯರ್‌ ದಂಪತಿ ಎಷ್ಟು ಗಂಭೀರವಾಗಿ ತೆಗೆದುಕೊಂಡರೆಂದು ನೋಡಿ. ಅವರಿದ್ದ ಸಭೆಯಲ್ಲಿ ಹೊಸದಾಗಿ ದೀಕ್ಷಾಸ್ನಾನ ಪಡೆದ ಒಬ್ಬ ದಂಪತಿ ಇದ್ದರು. ಆ ದಂಪತಿ ತುಂಬ ಕಟ್ಟುನಿಟ್ಟಿನ ಕುಟುಂಬದಲ್ಲಿ ಬೆಳೆದು ಬಂದಿದ್ದರು. ಕ್ರೈಸ್ತರು ಯಾವುದೇ ಫಿಲಂ ನೋಡಬಾರದು, ಕೆಟ್ಟದ್ದಿಲ್ಲದಿರುವ ಫಿಲಂ ಸಹ ನೋಡಬಾರದು ಎಂದು ಅವರು ಅಂದುಕೊಂಡಿದ್ದರು. ಪಯನೀಯರ್‌ ದಂಪತಿ ಫಿಲಂ ನೋಡಿದ್ದಾರೆಂದು ತಿಳಿದಾಗ ಈ ಹೊಸ ದಂಪತಿಗೆ ಅದನ್ನು ಅರಗಿಸಿಕೊಳ್ಳಲಿಕ್ಕೇ ಆಗಲಿಲ್ಲ. ಆದ್ದರಿಂದ, ಹೊಸ ದಂಪತಿ ತಮ್ಮ ಮನಸ್ಸಾಕ್ಷಿಯನ್ನು ಸರಿಯಾಗಿ ತರಬೇತಿಗೊಳಿಸುವವರೆಗೆ ಆ ಪಯನೀಯರ್‌ ದಂಪತಿ ಫಿಲಂ ನೋಡಲು ಹೋಗಲೇ ಇಲ್ಲ. (ಇಬ್ರಿ. 5:14) ಹೀಗೆ ನಿಸ್ವಾರ್ಥದಿಂದ ನಡಕೊಳ್ಳುವ ಮೂಲಕ ಪಯನೀಯರ್‌ ದಂಪತಿ ಆ ಹೊಸ ಸಹೋದರ ಸಹೋದರಿಯನ್ನು ಪ್ರೀತಿಸುತ್ತೇವೆ ಎಂದು ಮಾತಿನಲ್ಲಿ ಮಾತ್ರವಲ್ಲ, ತಮ್ಮ ನಡತೆಯಲ್ಲೂ ತೋರಿಸಿಕೊಟ್ಟರು.—ರೋಮ. 14:19-21; 1 ಯೋಹಾ. 3:18.

13. ಬೇರೆಯವರು ತಪ್ಪು ಮಾಡುವುದಕ್ಕೆ ನಾವು ಹೇಗೆ ಕಾರಣರಾಗಬಹುದು?

13 ಇತರರನ್ನು ತಪ್ಪು ಮಾಡುವಂತೆ ಪ್ರೇರೇಪಿಸುವ ಮೂಲಕ ಸಹ ನಾವು ಅವರನ್ನು ಎಡವಿಸಬಹುದು. ಹೇಗೆ? ಈ ಉದಾಹರಣೆ ನೋಡಿ. ಒಬ್ಬ ಬೈಬಲ್‌ ವಿದ್ಯಾರ್ಥಿ ತನಗಿದ್ದ ಕುಡಿಯುವ ಚಟವನ್ನು ತುಂಬ ಕಷ್ಟಪಟ್ಟು ಬಿಟ್ಟಿದ್ದಾನೆ ಎಂದಿಟ್ಟುಕೊಳ್ಳಿ. ಅದನ್ನು ಬಿಡಲು ತುಂಬ ಸಮಯ ತಗೊಂಡಿದ್ದಾನೆ. ಮತ್ತೆ ಆ ಚಟಕ್ಕೆ ಬೀಳಬಾರದೆಂದರೆ ಅವನು ಕುಡಿಯಲೇಬಾರದು ಅಂತ ತೀರ್ಮಾನಿಸುತ್ತಾನೆ. ಅವನು ಬೇಗನೆ ಪ್ರಗತಿ ಮಾಡಿ ದೀಕ್ಷಾಸ್ನಾನ ಸಹ ಪಡೆದುಕೊಳ್ಳುತ್ತಾನೆ. ಒಮ್ಮೆ ಒಬ್ಬ ಸಹೋದರ ಕೆಲವರನ್ನು ತನ್ನ ಮನೆಗೆ ಊಟಕ್ಕೆ ಕರೆದಾಗ ಇವನನ್ನೂ ಕರೆಯುತ್ತಾರೆ. ಅವರು ಇವನಿಗೆ ಸ್ವಲ್ಪ ಕುಡಿಯುವಂತೆ ಹೇಳುತ್ತಾ, “ನೀನೀಗ ಒಬ್ಬ ಕ್ರೈಸ್ತ. ನಿನಗೆ ಯೆಹೋವನ ಪವಿತ್ರಾತ್ಮ ಸಹಾಯ ಮಾಡುತ್ತೆ. ಪವಿತ್ರಾತ್ಮದ ಒಂದು ಗುಣ ಸ್ವನಿಯಂತ್ರಣ. ನಿನಗೆ ಸ್ವನಿಯಂತ್ರಣ ಇದ್ದರೆ ಸ್ವಲ್ಪ ಕುಡಿದರೂ ಆ ಚಟಕ್ಕೆ ಬೀಳಲ್ಲ” ಅನ್ನುತ್ತಾರೆ. ಇವರ ಮಾತು ಕೇಳಿ ಆ ಹೊಸ ಸಹೋದರ ಕುಡಿದರೆ ಏನಾಗಬಹುದು ಅಂತ ಯೋಚಿಸಿ!

14. ಫಿಲಿಪ್ಪಿ 1:10​ರಲ್ಲಿರುವ ಸಲಹೆಗಳನ್ನು ಅನ್ವಯಿಸಿಕೊಳ್ಳಲು ಕ್ರೈಸ್ತ ಕೂಟ ಹೇಗೆ ಸಹಾಯ ಮಾಡುತ್ತದೆ?

14 ಫಿಲಿಪ್ಪಿ 1:10​ರಲ್ಲಿ ಕೊಡಲಾದ ಸಲಹೆಯನ್ನು ಅನ್ವಯಿಸಿಕೊಳ್ಳಲು ನಮ್ಮ ಕ್ರೈಸ್ತ ಕೂಟಗಳು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತವೆ. ಮೊದಲನೇದಾಗಿ, ನಾವು ಕೂಟಗಳಲ್ಲಿ ಚರ್ಚಿಸುವ ವಿಷಯಗಳಿಂದ ಯೆಹೋವನಿಗೆ ಯಾವುದು ಮುಖ್ಯ ಎಂದು ತಿಳುಕೊಳ್ಳುತ್ತೇವೆ. ಎರಡನೇದಾಗಿ ನಾವು ಕಲಿತದ್ದನ್ನು ಅನ್ವಯಿಸಿಕೊಳ್ಳುತ್ತಾ ನಿರ್ದೋಷಿಗಳಾಗಿರುವುದು ಹೇಗೆಂದು ಕಲಿಯುತ್ತೇವೆ. ಮೂರನೇದಾಗಿ, “ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ” ನಮಗೆ ಉತ್ತೇಜನ ಸಿಗುತ್ತದೆ. (ಇಬ್ರಿ. 10:24, 25) ಸಹೋದರರಿಂದ ನಮಗೆ ಹೆಚ್ಚೆಚ್ಚು ಉತ್ತೇಜನ ಸಿಕ್ಕಿದಂತೆ ದೇವರ ಮತ್ತು ಸಹೋದರರ ಮೇಲೆ ನಮಗಿರುವ ಪ್ರೀತಿ ಸಹ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿ ಹೆಚ್ಚಾದರೆ ಸಹೋದರರನ್ನು ಎಡವಿಸದೇ ಇರಲು ನಮ್ಮಿಂದಾಗುವ ಎಲ್ಲವನ್ನೂ ಮಾಡುತ್ತೇವೆ.

‘ನೀತಿಯ ಫಲದಿಂದ ತುಂಬಿರಿ’

15. ‘ನೀತಿಯ ಫಲದಿಂದ ತುಂಬಿರುವುದು’ ಅಂದರೇನು?

15 ಫಿಲಿಪ್ಪಿಯವರು ‘ನೀತಿಯ ಫಲದಿಂದ ತುಂಬಿರಬೇಕು’ ಎಂದು ಪೌಲನು ಪಟ್ಟುಹಿಡಿದು ಪ್ರಾರ್ಥಿಸಿದನು. (ಫಿಲಿ. 1:11) ಈ ‘ನೀತಿಯ ಫಲದಲ್ಲಿ’ ಯೆಹೋವನ ಮೇಲೆ ಮತ್ತು ಆತನ ಜನರ ಮೇಲೆ ಅವರಿಗಿರುವ ಪ್ರೀತಿ ಒಳಗೂಡಿತ್ತು. ಅಷ್ಟೇ ಅಲ್ಲ, ಯೇಸುವಿನ ಮೇಲೆ ಅವರಿಗಿರುವ ನಂಬಿಕೆಯ ಬಗ್ಗೆ ಮತ್ತು ಅವರ ಅದ್ಭುತ ನಿರೀಕ್ಷೆಯ ಬಗ್ಗೆ ಬೇರೆಯವರಿಗೆ ತಿಳಿಸುವುದೂ ಸೇರಿತ್ತು. ಫಿಲಿಪ್ಪಿ 2:15​ರಲ್ಲಿ ಪೌಲನು ಅವರಿಗೆ “ಲೋಕದಲ್ಲಿ ಬೆಳಕು ಕೊಡುವ ವ್ಯಕ್ತಿಗಳಂತೆ ಹೊಳೆಯುವವರಾಗಿ” ಎಂದು ಹೇಳಿದ್ದಾನೆ. ಈ ಹೋಲಿಕೆ ಸರಿಯಾಗಿದೆ, ಯಾಕೆಂದರೆ ಯೇಸು ತನ್ನ ಶಿಷ್ಯರನ್ನು ‘ಲೋಕದ ಬೆಳಕು’ ಎಂದು ಕರೆದಿದ್ದಾನೆ. (ಮತ್ತಾ. 5:14-16) ಯೇಸು ತನ್ನ ಹಿಂಬಾಲಕರಿಗೆ, “ಶಿಷ್ಯರನ್ನಾಗಿ ಮಾಡಿರಿ” ಎಂದು ಆಜ್ಞೆ ಕೊಟ್ಟನು ಮಾತ್ರವಲ್ಲ ಅವರು ಭೂಮಿಯ ಕಟ್ಟಕಡೆಯ ವರೆಗೂ ತನಗೆ ಸಾಕ್ಷಿಗಳಾಗಿರುತ್ತಾರೆ ಎಂದು ಹೇಳಿದನು. (ಮತ್ತಾ. 28:18-20; ಅ. ಕಾ. 1:8) ಈ ಬಹು ಮುಖ್ಯ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸಿದರೆ ನಾವು ‘ನೀತಿಯ ಫಲವನ್ನು’ ಕೊಡುತ್ತೇವೆ.

ರೋಮ್‌ನಲ್ಲಿ ಗೃಹಬಂಧನದಲ್ಲಿರುವ ಪೌಲ ಫಿಲಿಪ್ಪಿ ಸಭೆಗೆ ಪತ್ರ ಬರೆಯುತ್ತಿದ್ದಾನೆ. ಜೊತೆಗೆ, ಆತನು ಅಲ್ಲಿರುವ ಕಾವಲುಗಾರರಿಗೆ ಮತ್ತು ತನ್ನನ್ನು ನೋಡಲು ಬಂದವರಿಗೆ ಸಾರುತ್ತಿದ್ದಾನೆ (ಪ್ಯಾರ 16 ನೋಡಿ)

16. ಎಷ್ಟೇ ಕಷ್ಟದ ಸನ್ನಿವೇಶದಲ್ಲಿದ್ದರೂ ನಾವು ಬೆಳಕು ಕೊಡುವ ವ್ಯಕ್ತಿಗಳಂತೆ ಹೊಳೆಯಲು ಸಾಧ್ಯ ಎಂದು ಫಿಲಿಪ್ಪಿ 1:12-14 ಹೇಗೆ ತೋರಿಸಿಕೊಡುತ್ತದೆ? (ಮುಖಪುಟ ಚಿತ್ರ ನೋಡಿ.)

16 ನಮ್ಮ ಸನ್ನಿವೇಶ ಹೇಗೇ ಇದ್ದರೂ ನಾವು ಬೆಳಕು ಕೊಡುವ ವ್ಯಕ್ತಿಗಳಂತೆ ಹೊಳೆಯಲು ಸಾಧ್ಯ. ಕೆಲವೊಮ್ಮೆ, ಸುವಾರ್ತೆ ಸಾರಲು ಯಾವುದು ಅಡ್ಡಿ ಅಂತ ಎಣಿಸುತ್ತೇವೋ ಅದೇ ಸಾರುವ ಅವಕಾಶ ಆಗಬಹುದು. ಉದಾಹರಣೆಗೆ, ಅಪೊಸ್ತಲ ಪೌಲನು ಫಿಲಿಪ್ಪಿಯವರಿಗೆ ಪತ್ರ ಬರೆದಾಗ ರೋಮ್‌ನ ಒಂದು ಮನೆಯಲ್ಲಿ ಬಂಧನದಲ್ಲಿದ್ದನು. ಹಾಗಿದ್ದರೂ ಆತನು ತನ್ನನ್ನು ನೋಡಲು ಬಂದವರಿಗೆ ಮತ್ತು ತನಗೆ ಕಾವಲಿದ್ದ ಸೈನಿಕರಿಗೆ ಸಾರಿದನು. ಇಂಥ ಸನ್ನಿವೇಶದಲ್ಲೂ ಪೌಲನು ಹುರುಪಿನಿಂದ ಸಾರಿದನು. ಇದರಿಂದ ಸಹೋದರರಿಗೆ “ದೇವರ ವಾಕ್ಯವನ್ನು ನಿರ್ಭಯದಿಂದ ಮಾತಾಡಲು” ಬಲ ಸಿಕ್ಕಿತು.—ಫಿಲಿಪ್ಪಿ 1:12-14 ಓದಿ; 4:22.

ಸುವಾರ್ತೆ ಸಾರಲು ಅವಕಾಶ ಸಿಗುತ್ತಾ ಎಂದು ನೋಡುತ್ತಾ ಇರಿ (ಪ್ಯಾರ 17 ನೋಡಿ) *

17. ಕಷ್ಟದ ಪರಿಸ್ಥಿತಿಯಲ್ಲೂ ಫಲ ನೀಡಿದ ಆಧುನಿಕ ಉದಾಹರಣೆಯನ್ನು ತಿಳಿಸಿ.

17 ಪೌಲನಂತೆ ಧೈರ್ಯದಿಂದ ಸಾರುವ ಅವಕಾಶ ಇಂದು ಅನೇಕ ಸಹೋದರ ಸಹೋದರಿಯರಿಗಿದೆ. ಅವರ ದೇಶದಲ್ಲಿ ಬಹಿರಂಗವಾಗಿ ಅಥವಾ ಮನೆಯಿಂದ ಮನೆಗೆ ಹೋಗಿ ಸಾರುವ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಅವರು ಬೇರೆ ವಿಧಾನಗಳ ಮೂಲಕ ಸುವಾರ್ತೆ ಸಾರುತ್ತಾರೆ. (ಮತ್ತಾ. 10:16-20) ಈ ರೀತಿ ಸ್ವಾತಂತ್ರ್ಯ ಇಲ್ಲದ ಒಂದು ದೇಶದಲ್ಲಿನ ಸಂಚರಣ ಮೇಲ್ವಿಚಾರಕರು ಪ್ರತಿಯೊಬ್ಬ ಪ್ರಚಾರಕರಿಗೆ ತಮ್ಮತಮ್ಮ ಸಂಬಂಧಿಕರು, ನೆರೆಹೊರೆಯವರು, ಸಹಪಾಠಿಗಳು, ಸಹೋದ್ಯೋಗಿಗಳು ಮತ್ತು ಪರಿಚಯಸ್ಥರಿಗೆ ಸಾರಬೇಕೆಂದು ಸಲಹೆ ಕೊಟ್ಟರು. ‘ಅವರೇ ನಿಮ್ಮ “ಸೇವಾಕ್ಷೇತ್ರ”’ ಅಂದರು. ಎರಡು ವರ್ಷಗಳಲ್ಲೇ, ಆ ಸರ್ಕಿಟಿನಲ್ಲಿರುವ ಸಭೆಗಳ ಸಂಖ್ಯೆ ಹೆಚ್ಚಾಯಿತು. ನಾವಿರುವ ದೇಶದಲ್ಲಿ ಸಾರುವ ಕೆಲಸದ ಮೇಲೆ ನಿಷೇಧ ಇಲ್ಲದಿರಬಹುದು. ಆದರೂ ನಮ್ಮ ಆ ಸಹೋದರರಿಂದ ಈ ಅಮೂಲ್ಯ ಪಾಠಗಳನ್ನು ಕಲಿಯಬಹುದು: ಯಾವಾಗಲೂ ಸುವಾರ್ತೆ ಸಾರಲು ಅವಕಾಶ ಸಿಗುತ್ತಾ ಅಂತ ನೋಡಬೇಕು. ಯಾವುದೇ ಅಡ್ಡಿತಡೆಗಳನ್ನು ಎದುರಿಸಲು ಯೆಹೋವನು ನಮಗೆ ಶಕ್ತಿ ನೀಡುತ್ತಾನೆಂದು ಭರವಸೆ ಇಡಬೇಕು.—ಫಿಲಿ. 2:13.

18. ನಾವೇನು ಮಾಡುವ ದೃಢತೀರ್ಮಾನ ಮಾಡಬೇಕು?

18 ಈ ಬಹು ಮುಖ್ಯ ಸಮಯದಲ್ಲಿ, ನಾವು ಪೌಲನು ಫಿಲಿಪ್ಪಿಯವರಿಗೆ ಬರೆದ ಪತ್ರದಲ್ಲಿರುವ ಸಲಹೆಗಳನ್ನು ಅನ್ವಯಿಸುವ ದೃಢ ತೀರ್ಮಾನ ಮಾಡೋಣ. ಪ್ರಮುಖ ವಿಷಯಗಳಿಗೆ ಮೊದಲ ಸ್ಥಾನ ಕೊಡೋಣ, ನಿರ್ದೋಷಿಗಳಾಗಿರೋಣ, ಇತರರನ್ನು ಎಡವಿಸದಿರೋಣ ಮತ್ತು ನೀತಿಯ ಫಲ ಕೊಡೋಣ. ಹೀಗೆ ಮಾಡುವುದಾದರೆ ನಾವು ಹೆಚ್ಚು ಪ್ರೀತಿ ತೋರಿಸುತ್ತೇವೆ ಮತ್ತು ನಮ್ಮನ್ನು ಪ್ರೀತಿಸುವ ತಂದೆಯಾದ ಯೆಹೋವನಿಗೆ ಮಹಿಮೆ ತರುತ್ತೇವೆ.

ಗೀತೆ 84 “ನನಗೆ ಮನಸ್ಸುಂಟು”

^ ಪ್ಯಾರ. 5 ನಮ್ಮ ಸಹೋದರ-ಸಹೋದರಿಯರನ್ನು ಇನ್ನೂ ಹೆಚ್ಚು ಪ್ರೀತಿಸುವುದು ಹಿಂದೆಂದಿಗಿಂತ ಈಗ ತುಂಬ ಮುಖ್ಯ. ಕಷ್ಟವಾದರೂ ನಾವು ಹೇಗೆ ಅದನ್ನು ಮಾಡಬಹುದು ಎಂದು ತಿಳಿದುಕೊಳ್ಳಲು ಫಿಲಿಪ್ಪಿಯವರಿಗೆ ಬರೆದ ಪತ್ರ ಸಹಾಯಮಾಡುತ್ತದೆ.

^ ಪ್ಯಾರ. 54 ಚಿತ್ರ ವಿವರಣೆ: ರಾಜ್ಯ ಸಭಾಗೃಹ ಶುಚಿ ಮಾಡುವಾಗ ಜೋ ಎಂಬ ಸಹೋದರ ಕೆಲಸ ಮಾಡುವುದನ್ನು ನಿಲ್ಲಿಸಿ ಒಬ್ಬ ಸಹೋದರ ಮತ್ತವರ ಮಗನ ಜೊತೆ ಮಾತಾಡುತ್ತಾರೆ. ಪಕ್ಕದಲ್ಲೇ ಶುಚಿ ಮಾಡುತ್ತಿರುವ ಮೈಕ್‌ ಎಂಬ ಸಹೋದರನಿಗೆ ಇದು ಇಷ್ಟವಾಗುವುದಿಲ್ಲ. ‘ಬ್ರದರ್‌ ಜೋ ಕೆಲಸ ಮಾಡೋದನ್ನು ಬಿಟ್ಟು ಮಾತಾಡ್ತಾ ನಿಂತಿದ್ದಾರಲ್ಲಾ’ ಅಂತ ಯೋಚಿಸುತ್ತಾನೆ. ಸ್ವಲ್ಪ ಸಮಯದ ನಂತರ, ಜೋ ಒಬ್ಬ ವೃದ್ಧ ಸಹೋದರಿಗೆ ಸಹಾಯ ಮಾಡುತ್ತಿರುವುದನ್ನು ನೋಡಿದ ಮೈಕ್‌ ಸಹೋದರ ಜೋರವರ ಒಳ್ಳೇ ಗುಣಗಳ ಬಗ್ಗೆ ಯೋಚಿಸುತ್ತಾನೆ.

^ ಪ್ಯಾರ. 58 ಚಿತ್ರ ವಿವರಣೆ: ಬಹಿರಂಗವಾಗಿ ಸಾರುವುದಕ್ಕೆ ಸಾಧ್ಯವಿರದ ದೇಶದಲ್ಲಿ ಒಬ್ಬ ಸಹೋದರ ಪರಿಚಯಸ್ಥನೊಬ್ಬನಿಗೆ ಜಾಣ್ಮೆಯಿಂದ ಸುವಾರ್ತೆ ಸಾರುತ್ತಾನೆ. ನಂತರ, ಕೆಲಸದ ಸ್ಥಳದಲ್ಲಿ ಅದೇ ಸಹೋದರ ತನ್ನ ಸಹೋದ್ಯೋಗಿಗೆ ಸಾರುತ್ತಾನೆ.