ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 31

ನಮ್ಮ ಪ್ರಯತ್ನ ಬಿಡದಿರೋಣ!

ನಮ್ಮ ಪ್ರಯತ್ನ ಬಿಡದಿರೋಣ!

“ನಾವು ಬಿಟ್ಟುಬಿಡುವುದಿಲ್ಲ.”—2 ಕೊರಿಂ. 4:16.

ಗೀತೆ 135 ಕಡೇ ವರೆಗೆ ತಾಳಿಕೊಳ್ಳುವುದು

ಕಿರುನೋಟ *

1. ಪೌಲನು ಕ್ರೈಸ್ತರಿಗೆ ಯಾವುದನ್ನು ನೆನಪಿಸಿದನು?

ಕ್ರೈಸ್ತರಾದ ನಾವೆಲ್ಲರೂ ಶಾಶ್ವತ ಜೀವನಕ್ಕಾಗಿ ಓಡುತ್ತಿದ್ದೇವೆ. ನಾವು ಈಗಷ್ಟೇ ಓಡುವುದನ್ನು ಶುರುಮಾಡಿದ್ದರೂ ಅನೇಕ ವರ್ಷಗಳಿಂದ ಓಡುತ್ತಿದ್ದರೂ ಅಂತಿಮ ಗೆರೆ ಮುಟ್ಟುವವರೆಗೆ ಓಡುತ್ತಲೇ ಇರಬೇಕು. ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದ ಪತ್ರವು ನಾವು ಕೊನೆವರೆಗೆ ಓಡುವಂತೆ ಉತ್ತೇಜಿಸುತ್ತದೆ. ಪೌಲ ಪತ್ರ ಬರೆದಾಗ ಅಲ್ಲಿದ್ದ ಕೆಲವು ಕ್ರೈಸ್ತರು ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಾ ಇದ್ದರು. ಅವರದನ್ನು ನಂಬಿಗಸ್ತಿಕೆಯಿಂದ ಮಾಡುತ್ತಿದ್ದರೂ ತಾಳ್ಮೆಯಿಂದ ಯಾಕೆ ಓಡಬೇಕು ಎಂದು ಪೌಲ ಅವರಿಗೆ ನೆನಪಿಸಿದನು. ತಾನು “ಗುರಿಯ ಕಡೆಗೆ” ಓಡುತ್ತಿದ್ದಂತೆಯೇ ಅವರು ಸಹ ಓಡಬೇಕೆಂದು ಪೌಲ ಬಯಸಿದನು.—ಫಿಲಿ. 3:14.

2. ಪೌಲನು ಕೊಟ್ಟ ಉತ್ತೇಜನ ಫಿಲಿಪ್ಪಿಯಲ್ಲಿದ್ದವರಿಗೆ ಯಾಕೆ ಸೂಕ್ತವಾಗಿತ್ತು?

2 ಪೌಲನು ಕೊಟ್ಟ ಉತ್ತೇಜನ ಫಿಲಿಪ್ಪಿಯಲ್ಲಿದ್ದವರಿಗೆ ಸೂಕ್ತವಾಗಿತ್ತು. ಯಾಕೆಂದರೆ ಫಿಲಿಪ್ಪಿ ಸಭೆ ಶುರುವಾದಾಗಿಂದಲೂ ಆ ಪಟ್ಟಣದವರು ಸಹೋದರರನ್ನು ತುಂಬ ವಿರೋಧಿಸುತ್ತಿದ್ದರು. ಅಲ್ಲಿ ಸಭೆ ಶುರುವಾದದ್ದು ಹೇಗೆ? ಕ್ರಿ.ಶ. 50​ರಲ್ಲಿ “ಮಕೆದೋನ್ಯಕ್ಕೆ” ಹೋಗಲು ದೇವರು ಹೇಳಿದಾಗ ಪೌಲ ಮತ್ತು ಸೀಲ ಆ ಮಾತಿಗೆ ವಿಧೇಯರಾಗಿ ಅಲ್ಲಿನ ಫಿಲಿಪ್ಪಿಗೆ ಬಂದರು. (ಅ. ಕಾ. 16:9) ಅಲ್ಲಿ ಅವರು ಲುದ್ಯ ಎಂಬ ಸ್ತ್ರೀಯನ್ನು ಭೇಟಿಯಾದರು. ಆಕೆ ಸುವಾರ್ತೆಗೆ “ನಿಕಟವಾಗಿ ಗಮನಕೊಡುವಂತೆ ಯೆಹೋವನು ಅವಳ ಹೃದಯವನ್ನು ವಿಶಾಲವಾಗಿ ತೆರೆದನು.” (ಅ. ಕಾ. 16:14) ಸ್ವಲ್ಪದರಲ್ಲೇ ಆಕೆ ಮತ್ತು ಆಕೆಯ ಮನೆಯವರೆಲ್ಲರೂ ದೀಕ್ಷಾಸ್ನಾನ ಪಡಕೊಂಡರು. ಆದರೆ ಸೈತಾನ ಕೈ ಕಟ್ಟಿ ಕೂರಲಿಲ್ಲ. ಹಿಂಸೆಯ ಅಲೆ ಎಬ್ಬಿಸಿದ. ಆ ಪಟ್ಟಣದ ಪುರುಷರು ಪೌಲ, ಸೀಲರನ್ನು ಅಧಿಕಾರಿಗಳ ಬಳಿಗೆ ಎಳಕೊಂಡು ಹೋದರು. ಇಡೀ ಪಟ್ಟಣದಲ್ಲಿ ಅವರಿಬ್ಬರು ತುಂಬ ಗಲಿಬಿಲಿ ಎಬ್ಬಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದರು. ಆಗ ಅಧಿಕಾರಿಗಳು ಪೌಲ ಮತ್ತು ಸೀಲರಿಗೆ ಚೆನ್ನಾಗಿ ಹೊಡೆಸಿ, ಜೈಲಿಗೆ ಹಾಕಿದರು. ನಂತರ ಪಟ್ಟಣ ಬಿಟ್ಟುಹೋಗಲು ಹೇಳಿದರು. (ಅ. ಕಾ. 16:16-40) ಆದರೂ, ಪೌಲ ಮತ್ತು ಸೀಲ ತಮ್ಮ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ಆ ಪಟ್ಟಣದಲ್ಲಿ ಆಗ ತಾನೇ ಆರಂಭವಾಗಿದ್ದ ಸಭೆಯ ಸದಸ್ಯರು ಏನು ಮಾಡಿದರು? ಅವರು ಸಹ ಕಷ್ಟಗಳನ್ನು ತಾಳಿಕೊಂಡರು! ಇದಕ್ಕೆ ಕಾರಣ ಪೌಲ ಮತ್ತು ಸೀಲ ಇಟ್ಟ ಉತ್ತಮ ಮಾದರಿಯೇ ಆಗಿತ್ತು!

3. (ಎ) ಪೌಲನಿಗೆ ಏನು ಗೊತ್ತಿತ್ತು? (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

3 ಎಷ್ಟೇ ಕಷ್ಟ ಬಂದರೂ ತಾಳಿಕೊಳ್ಳಲು ಪೌಲ ದೃಢತೀರ್ಮಾನ ಮಾಡಿದ್ದನು. (2 ಕೊರಿಂ. 4:16) ತಾನು ಕೊನೆವರೆಗೂ ಓಡಬೇಕಂದರೆ ತನ್ನ ಗುರಿಯ ಮೇಲಿರುವ ಗಮನ ಆಚೀಚೆ ಹೋಗಬಾರದು ಎಂದು ಪೌಲನಿಗೆ ಗೊತ್ತಿತ್ತು. ಪೌಲನ ಮಾದರಿಯಿಂದ ನಾವೇನು ಕಲಿಯಬಹುದು? ನಮಗೆ ಏನೇ ಕಷ್ಟ ಬಂದರೂ ತಾಳಿಕೊಳ್ಳಲು ಸಾಧ್ಯ ಎಂದು ಇಂದಿನ ನಂಬಿಗಸ್ತ ಕ್ರೈಸ್ತರ ಯಾವ ಉದಾಹರಣೆಗಳು ತೋರಿಸಿಕೊಡುತ್ತವೆ? ನಾವು ಯಾವತ್ತಿಗೂ ಪ್ರಯತ್ನ ಬಿಡಬಾರದು ಅನ್ನುವ ದೃಢತೀರ್ಮಾನ ಮಾಡಲು ನಿರೀಕ್ಷೆ ಹೇಗೆ ಸಹಾಯ ಮಾಡುತ್ತದೆ?

ಪೌಲನ ಮಾದರಿಯಿಂದ ಸಿಗುವ ಪ್ರಯೋಜನ

4. ತನ್ನ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಪೌಲನು ಹೇಗೆ ಯೆಹೋವನ ಸೇವೆ ಮಾಡುತ್ತಾ ಇದ್ದನು?

4 ಪೌಲನು ಫಿಲಿಪ್ಪಿಯವರಿಗೆ ಪತ್ರ ಬರೆಯುವಾಗ ಎಂಥ ಸ್ಥಿತಿಯಲ್ಲಿ ಇದ್ದನೆಂದು ನೋಡಿ. ರೋಮ್‌ನಲ್ಲಿ ಆತನನ್ನು ಮನೆಯಲ್ಲಿ ಬಂಧಿಸಿಡಲಾಗಿತ್ತು. ಹೊರಗೆ ಹೋಗಿ ಸುವಾರ್ತೆ ಸಾರುವ ಸ್ವಾತಂತ್ರ್ಯ ಆತನಿಗಿರಲಿಲ್ಲ. ಆದರೂ ತನ್ನನ್ನು ಭೇಟಿ ಮಾಡಲು ಬಂದ ಜನರಿಗೆ ಸಾರುತ್ತಾ ಇದ್ದನು ಮತ್ತು ದೂರದೂರದ ಸಭೆಗಳಿಗೆ ಪತ್ರ ಬರೆಯುತ್ತಿದ್ದನು. ಇಂದು ಸಹ ಅನೇಕ ಕ್ರೈಸ್ತರಿಗೆ ವಯಸ್ಸಾಗಿರುವುದರಿಂದ ಅಥವಾ ಕಾಯಿಲೆ ಇರೋದರಿಂದ ಅವರು ಮನೆಯಿಂದ ಹೊರಹೋಗಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಅವರು ತಮ್ಮ ಮನೆಗೆ ಬರುವ ಪ್ರತಿಯೊಬ್ಬರಿಗೂ ಸಾರಲು ಪ್ರಯತ್ನಿಸುತ್ತಾರೆ. ಮನೆ-ಮನೆ ಸೇವೆಯಲ್ಲಿ ಪ್ರಚಾರಕರಿಗೆ ಸಿಗದ ಜನರಿಗೆ ಅವರು ಪತ್ರ ಬರೆದು ಸಾಕ್ಷಿ ಕೊಡುತ್ತಾರೆ.

5. ಫಿಲಿಪ್ಪಿ 3:12-14​ರಲ್ಲಿ ಪೌಲನು ಹೇಳಿರುವ ಮಾತಿನಂತೆ ಆತನಿಗೆ ತನ್ನ ಗುರಿಯ ಮೇಲೆ ಗಮನ ಇಡಲು ಯಾವುದು ಸಹಾಯ ಮಾಡಿತು?

5 ಪೌಲನು ತಾನು ಹಿಂದೆ ಮಾಡಿದ ಸಾಧನೆಗಳ ಬಗ್ಗೆನೋ ತಪ್ಪುಗಳ ಬಗ್ಗೆನೋ ಯೋಚಿಸುತ್ತಾ ತನ್ನ ಗಮನವನ್ನು ಯೆಹೋವನ ಸೇವೆಯಿಂದ ಬೇರೆ ಕಡೆಗೆ ತಿರುಗಿಸಲಿಲ್ಲ. “ಮುಂದಿನ ವಿಷಯಗಳ ಕಡೆಗೆ ಮುಂದೊತ್ತುತ್ತಾ” ಇರಲು ಅಂದರೆ ಕೊನೆವರೆಗೂ ಓಡಲು ‘ಹಿಂದಿನ ವಿಷಯಗಳನ್ನು ಮರೆತುಬಿಡಬೇಕು’ ಎಂದು ಆತನು ಹೇಳಿದನು. (ಫಿಲಿಪ್ಪಿ 3:12-14 ಓದಿ.) ಯಾವೆಲ್ಲ ವಿಷಯಗಳು ಪೌಲನ ಗಮನವನ್ನು ಆತನ ಗುರಿಯಿಂದ ಬೇರೆಡೆಗೆ ತಿರುಗಿಸುವ ಸಾಧ್ಯತೆ ಇತ್ತು? ಮೊದಲನೇದಾಗಿ, ಆತನು ಕ್ರೈಸ್ತನಾಗುವ ಮುಂಚೆ ಮಾಡಿದ ಸಾಧನೆಗಳು. ಆದರೆ ಆತನು ಅವೆಲ್ಲವನ್ನು “ಕಸ” ಎಂದು ನೆನಸಿದನು. (ಫಿಲಿ. 3:3-8) ಎರಡನೇದಾಗಿ, ಹಿಂದೆ ಕ್ರೈಸ್ತರಿಗೆ ತಾನು ಹಿಂಸೆ ಕೊಟ್ಟಿದ್ದೇನೆ ಅನ್ನುವ ದೋಷಿ ಭಾವನೆ. ಆದರೆ ಅದು ತನ್ನನ್ನು ಯೆಹೋವನ ಸೇವೆಯಿಂದ ದೂರ ಮಾಡಲು ಆತನು ಬಿಟ್ಟುಕೊಡಲಿಲ್ಲ. ಮೂರನೇದಾಗಿ ಆತನು ಯೆಹೋವನಿಗೆ ಈಗಾಗಲೇ ಮಾಡಿದ ಸೇವೆ. ಯೆಹೋವನ ಸೇವೆಯನ್ನು ಸಾಕಷ್ಟು ಮಾಡಿಬಿಟ್ಟಿದ್ದೇನೆ, ಇನ್ನೇನೂ ಉಳಿದಿಲ್ಲ ಅಂತ ಆತನು ಯೋಚಿಸಲಿಲ್ಲ. ಆತನಿಗೆ ಬಂದ ಕಷ್ಟಗಳು ಒಂದಾ ಎರಡಾ? ಜೈಲುಶಿಕ್ಷೆ ಅನುಭವಿಸಿದನು, ಹೊಡೆತ ತಿಂದನು, ಜನ ಆತನ ಮೇಲೆ ಕಲ್ಲೆಸೆದರು, ಹಡಗು ದುರಂತ ಎದುರಿಸಿದನು, ಹೊಟ್ಟೆ-ಬಟ್ಟೆಗೆ ಇರುತ್ತಿರಲಿಲ್ಲ. ಆದರೆ ಇವುಗಳ ಮಧ್ಯೆನೂ ಆತನು ಸೇವೆಯನ್ನು ಚೆನ್ನಾಗಿ ಮಾಡಿದ್ದನು. (2 ಕೊರಿಂ. 11:23-27) ಆತನು ಅಷ್ಟು ಸಾಧಿಸಿದ್ದರೂ, ಕಷ್ಟವನ್ನು ಅನುಭವಿಸಿದ್ದರೂ ಆತನ ಗಮನ ಯೆಹೋವನ ಸೇವೆಯನ್ನು ಮಾಡುತ್ತಾ ಹೋಗಬೇಕು ಅನ್ನುವುದರ ಕಡೆಗೇ ಇತ್ತು. ನಾವೂ ಪೌಲನ ತರ ಇರಬೇಕು.

6. ಯಾವ ಕೆಲವು ‘ಹಿಂದಿನ ವಿಷಯಗಳನ್ನು’ ನಾವು ಮರೆತುಬಿಡಬೇಕು?

6 ‘ಹಿಂದಿನ ವಿಷಯಗಳನ್ನು’ ಮರೆತು ಬಿಡುವುದರಲ್ಲಿ ಪೌಲನನ್ನು ನಾವು ಹೇಗೆ ಅನುಕರಿಸಬಹುದು? ಕೆಲವರಿಗೆ ಹಿಂದೆ ಮಾಡಿದ ತಪ್ಪುಗಳ ಬಗ್ಗೆ ದೋಷಿ ಭಾವನೆ ಕಾಡುತ್ತಿರಬಹುದು. ಅದರಿಂದ ಹೊರಬರಲು ಏನು ಮಾಡಬಹುದು? ಕ್ರಿಸ್ತನ ವಿಮೋಚನಾ ಮೌಲ್ಯದ ಬಗ್ಗೆ ಎಲ್ಲಾ ಮಾಹಿತಿಯನ್ನು ಒಟ್ಟುಸೇರಿಸಿ ಪ್ರತಿದಿನ ಸ್ವಲ್ಪಸ್ವಲ್ಪ ಓದಿ, ಧ್ಯಾನಿಸಿ, ಪ್ರಾರ್ಥಿಸಬೇಕು. ಆಗ ನಮ್ಮಲ್ಲಿರುವ ದೋಷಿ ಭಾವನೆ ಕಡಿಮೆಯಾಗುತ್ತದೆ ಮತ್ತು ಯೆಹೋವನು ಈಗಾಗಲೇ ಕ್ಷಮಿಸಿರುವ ತಪ್ಪುಗಳ ಬಗ್ಗೆ ಕೊರಗುವುದನ್ನೂ ನಿಲ್ಲಿಸಬಹುದು. ಪೌಲನಿಂದ ಇನ್ನೂ ಒಂದು ಪಾಠ ಕಲಿಯಬಹುದು. ನಮ್ಮಲ್ಲಿ ಕೆಲವರು ಯೆಹೋವನ ಸೇವೆ ಹೆಚ್ಚು ಮಾಡಬೇಕೆಂದು ಕೈತುಂಬ ಹಣ ಸಂಪಾದಿಸುವ ಅವಕಾಶಗಳನ್ನು ಕೈಬಿಟ್ಟಿರಬಹುದು. ಅವುಗಳ ಬಗ್ಗೆ ಪುನಃ ಆಸೆಪಡದೇ ಇರುವುದರ ಮೂಲಕ ಹಿಂದಿನ ವಿಷಯಗಳನ್ನು ಮರೆತುಬಿಡಬಹುದು. (ಅರ. 11:4-6; ಪ್ರಸಂ. 7:10) ‘ಹಿಂದಿನ ವಿಷಯಗಳಲ್ಲಿ’ ನಾವು ಯೆಹೋವನ ಸೇವೆಯಲ್ಲಿ ಮಾಡಿದ ಸಾಧನೆಗಳು ಅಥವಾ ಅನುಭವಿಸಿದ ಕಷ್ಟಗಳು ಸಹ ಸೇರಿವೆ. ಅದರರ್ಥ ಯೆಹೋವನು ನಮಗೆ ಕೊಟ್ಟಿರುವ ಆಶೀರ್ವಾದಗಳನ್ನು ಮತ್ತು ಸಹಾಯವನ್ನು ನಾವು ನೆನಪಿಸಿಕೊಳ್ಳಬಾರದು ಅಂತನಾ? ಅಲ್ಲ. ಅದನ್ನು ನೆನಪಿಸಿಕೊಂಡಾಗಲೇ ನಾವು ನಮ್ಮ ತಂದೆಗೆ ಆಪ್ತರಾಗುತ್ತೇವೆ. ಆದರೆ ‘ಯೆಹೋವನ ಸೇವೆಯಲ್ಲಿ ಸಾಕಷ್ಟು ಸಾಧಿಸಿಬಿಟ್ಟಿದ್ದೇವೆ, ಮಾಡಕ್ಕೆ ಇನ್ನೇನು ಉಳಿದಿಲ್ಲ’ ಅಂತ ಮಾತ್ರ ಯೋಚಿಸಬಾರದು.—1 ಕೊರಿಂ. 15:58.

ಜೀವಕ್ಕಾಗಿ ಓಡುವಾಗ ನಮ್ಮ ಗಮನ ಬೇರೆ ಕಡೆಗೆ ಹೋಗಬಾರದು, ಗುರಿಯ ಕಡೆಗೇ ಇರಬೇಕು (ಪ್ಯಾರ 7 ನೋಡಿ)

7. ಒಂದನೇ ಕೊರಿಂಥ 9:24-27​ರ ಪ್ರಕಾರ ಜೀವಕ್ಕಾಗಿ ಓಡುತ್ತಿರುವ ಓಟದಲ್ಲಿ ಗೆಲ್ಲಲು ನಾವೇನು ಮಾಡಬೇಕು? ಉದಾಹರಣೆ ಕೊಡಿ.

7 “ಶಕ್ತಿಯುತವಾಗಿ ಪ್ರಯಾಸಪಡಿರಿ” ಎಂದು ಯೇಸು ಹೇಳಿದ ಮಾತನ್ನು ಪೌಲನು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು. (ಲೂಕ 13:23, 24) ಕ್ರಿಸ್ತನಂತೆ ತಾನು ಸಹ ಕೊನೆವರೆಗೂ ಪ್ರಯಾಸಪಡಬೇಕು ಎಂದು ಪೌಲನು ತಿಳುಕೊಂಡಿದ್ದನು. ಆತನು ಕ್ರೈಸ್ತ ಜೀವನವನ್ನು ಒಂದು ಓಟದ ಸ್ಪರ್ಧೆಗೆ ಹೋಲಿಸಿದನು. (1 ಕೊರಿಂಥ 9:24-27 ಓದಿ.) ಓಟದ ಸ್ಪರ್ಧೆಯಲ್ಲಿ ಓಟಗಾರನ ಮನಸ್ಸೆಲ್ಲಾ ಅಂತಿಮ ಗೆರೆಯನ್ನು ಮುಟ್ಟುವುದರ ಕಡೆಗೇ ಇರುತ್ತದೆ. ಬೇರೆ ಯಾವುದಕ್ಕೂ ಗಮನ ಕೊಡಲ್ಲ. ಉದಾಹರಣೆಗೆ, ಓಟದ ಸ್ಪರ್ಧೆ ಒಂದು ನಗರದ ರಸ್ತೆಯಲ್ಲಿ ಇರುವುದಾದರೆ ಆ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಾರದ ಮಳಿಗೆಗಳು ಮತ್ತು ಬೇರೆ ಆಕರ್ಷಕ ವಿಷಯಗಳು ಇರುತ್ತವೆ. ಒಬ್ಬ ಓಟಗಾರ ಓಡುವುದನ್ನು ಬಿಟ್ಟು ಅವುಗಳನ್ನು ನೋಡುತ್ತಾ ನಿಲ್ಲುತ್ತಾನಾ? ಇಲ್ಲ. ಯಾಕೆಂದರೆ ತಾನು ಓಟದಲ್ಲಿ ಗೆಲ್ಲಬೇಕು ಅನ್ನೋದೇ ಅವನ ಮನಸ್ಸಲ್ಲಿ ಇರುತ್ತದೆ. ಜೀವಕ್ಕಾಗಿ ನಾವು ಓಡುವಾಗಲೂ ನಮ್ಮ ಗಮನ ಬೇರೆ ಕಡೆಗೆ ಹೋಗಬಾರದು. ನಾವು ನಮ್ಮ ಗುರಿಯ ಮೇಲೆ ಗಮನ ಇಟ್ಟು ಪೌಲನಂತೆ ಯೆಹೋವನ ಸೇವೆಯನ್ನು ಹುರುಪಿನಿಂದ ಮಾಡುತ್ತಾ ಮುಂದುವರಿದರೆ ನಮಗೆ ಬಹುಮಾನ ಸಿಕ್ಕೇ ಸಿಗುತ್ತದೆ!

ಸಮಸ್ಯೆಗಳಿದ್ದರೂ ಯೆಹೋವನ ಸೇವೆ ಮಾಡಕ್ಕಾಗುತ್ತದೆ

8. ಯಾವ ಮೂರು ಸನ್ನಿವೇಶಗಳ ಬಗ್ಗೆ ನಾವೀಗ ನೋಡಲಿದ್ದೇವೆ?

8 ನಮ್ಮನ್ನು ನಿರುತ್ತೇಜಿಸುವಂಥ ಮೂರು ಸನ್ನಿವೇಶಗಳನ್ನು ಈಗ ನೋಡೋಣ. ಅದರಲ್ಲಿ ಮೊದಲನೇದು, ನಾವು ಬಯಸಿದ ವಿಷಯಗಳು ತಡವಾದಾಗ. ಎರಡನೇದು ವಯಸ್ಸಾಗುತ್ತಾ ಹೋದಂತೆ ಶಕ್ತಿ ಕಡಿಮೆ ಆದಾಗ. ಮೂರನೇದು, ಸಮಸ್ಯೆ ಬೇಗ ಪರಿಹಾರ ಆಗದಿರುವಾಗ. ಇಂಥ ಸನ್ನಿವೇಶಗಳಲ್ಲಿ ಇದ್ದವರು ಹೇಗೆ ತಾಳಿಕೊಂಡರು ಅನ್ನುವುದನ್ನು ತಿಳುಕೊಳ್ಳುವುದರಿಂದ ನಮಗೆ ಪ್ರಯೋಜನ ಸಿಗುತ್ತದೆ.—ಫಿಲಿಪ್ಪಿ 3:17.

9. ನಾವು ಬಯಸಿದ್ದು ತಡವಾದಾಗ ನಮ್ಮ ಮೇಲೆ ಯಾವ ಪ್ರಭಾವ ಬೀರುತ್ತದೆ?

9 ಬಯಸಿದ ವಿಷಯಗಳು ತಡವಾದಾಗ. ಯೆಹೋವನು ಕೊಟ್ಟಿರುವ ಮಾತುಗಳು ನೆರವೇರುವುದನ್ನು ನೋಡಲು ನಾವೆಲ್ಲರೂ ಹಾತೊರೆಯುವುದು ಸಹಜ. ಯೆಹೋವನ ಪ್ರವಾದಿಯಾಗಿದ್ದ ಹಬಕ್ಕೂಕನು ಸಹ ಯೆಹೂದದಲ್ಲಿರುವ ದುಷ್ಟತನ ಬೇಗ ಕೊನೆಯಾಗುವುದನ್ನು ನೋಡುವುದಕ್ಕೆ ಹಾತೊರೆಯುತ್ತಿದ್ದನು. ಆಗ ಯೆಹೋವನು ಅವನಿಗೆ “ತಡವಾದರೂ ಕಾದಿರು” ಅಂತ ಹೇಳಿದನು. (ಹಬ. 2:3) ಆದರೂ ಕೆಲವೊಮ್ಮೆ ನಾವು ಬಯಸಿದ್ದು ತಡವಾದಾಗ ಹುರುಪನ್ನು ಕಳಕೊಂಡು ಬಿಡುತ್ತೇವೆ, ನಿರುತ್ಸಾಹನೂ ಆಗುತ್ತದೆ. (ಜ್ಞಾನೋ. 13:12) 1914​ರಲ್ಲಿದ್ದ ಸಹೋದರರಿಗೂ ಇದೇ ರೀತಿ ಆಯಿತು. ಆ ಸಮಯದಲ್ಲಿ ಅನೇಕ ಅಭಿಷಿಕ್ತ ಕ್ರೈಸ್ತರು ತಾವು ಅದೇ ವರ್ಷ ಸ್ವರ್ಗಕ್ಕೆ ಹೋಗುತ್ತೇವೆ ಅಂತ ನೆನಸಿದ್ದರು. ಆದರೆ ಅದು ನಡೆಯದಿದ್ದಾಗ ನಂಬಿಗಸ್ತ ಕ್ರೈಸ್ತರು ಏನು ಮಾಡಿದರು?

ರಾಯಲ್‌ ಮತ್ತು ಪರ್ಲ್‌ ಸ್ಪಾಟ್ಸ್‌ ಇಟ್ಟಿದ್ದ ನಿರೀಕ್ಷೆ 1914​ರಲ್ಲಿ ನೆರವೇರಲಿಲ್ಲ, ಆದರೂ ಕೊನೆವರೆಗೆ ಯೆಹೋವನ ಸೇವೆ ಮಾಡಿದರು (ಪ್ಯಾರ 10 ನೋಡಿ)

10. ತಾವು ನೆನಸಿದ್ದು ನಿರೀಕ್ಷಿಸಿದ ಸಮಯದಲ್ಲಿ ನಡೆಯದಿದ್ದಾಗ ಒಬ್ಬ ದಂಪತಿ ಏನು ಮಾಡಿದರು?

10 ಅಂಥ ಸನ್ನಿವೇಶವನ್ನು ಎದುರಿಸಿದ ಇಬ್ಬರು ನಂಬಿಗಸ್ತ ಕ್ರೈಸ್ತರ ಉದಾಹರಣೆಗಳನ್ನು ನೋಡಿ. ಸಹೋದರ ರಾಯಲ್‌ ಸ್ಪಾಟ್ಸ್‌ 1908​ರಲ್ಲಿ ತಮ್ಮ 20​ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡಕೊಂಡರು. ‘ಇನ್ನು ಸ್ವಲ್ಪದರಲ್ಲೇ ಸ್ವರ್ಗಕ್ಕೆ ಹೋಗಿಬಿಡುತ್ತೇನೆ’ ಅಂತ ಅವರು ಅಂದುಕೊಂಡಿದ್ದರು. ಅವರು 1911​ರಲ್ಲಿ ಪರ್ಲ್‌ ಎಂಬ ಸಹೋದರಿಗೆ ಮದುವೆ ಪ್ರಸ್ತಾಪ ಮಾಡುವಾಗಲೂ ಹೀಗೆ ಹೇಳಿದರು: “1914​ರಲ್ಲಿ ಏನು ನಡೆಯುತ್ತೆ ಅಂತ ನಿಂಗೆ ಗೊತ್ತು. ನಿನಗೆ ಈ ಮದುವೆ ಒಪ್ಪಿಗೆಯಾದರೆ ಆದಷ್ಟು ಬೇಗ ಆಗಿಬಿಡೋಣ!” 1914​ರಲ್ಲಿ ಅವರಿಬ್ಬರು ನೆನಸಿದ್ದು ನಡೆಯದಿದ್ದಾಗ ತಮ್ಮ ಕ್ರೈಸ್ತ ಓಟವನ್ನು ಅವರು ನಿಲ್ಲಿಸಿಬಿಟ್ಟರಾ? ಇಲ್ಲ. ಯಾಕೆಂದರೆ ಅವರ ಗಮನ ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಮಾಡುವುದರ ಕಡೆಗಿತ್ತೇ ಹೊರತು ಸ್ವರ್ಗಕ್ಕೆ ಹೋಗುವುದರ ಕಡೆಗಲ್ಲ. ಅವರು ತಾಳ್ಮೆಯಿಂದ ತಮ್ಮ ಓಟವನ್ನು ಮುಂದುವರಿಸಬೇಕೆಂದು ದೃಢಮನಸ್ಸು ಮಾಡಿದ್ದರು. ಅಷ್ಟೇ ಅಲ್ಲ ಅವರಿಬ್ಬರೂ ತಮ್ಮ ಭೂಜೀವಿತ ಮುಗಿಸುವ ವರೆಗೂ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿದರು. ಇಂದು ನಾವು ಸಹ ಯೆಹೋವನು ತನ್ನ ಹೆಸರಿಗೆ ಬಂದ ಕಳಂಕವನ್ನು ತೆಗೆದುಹಾಕಿ ತಾನು ಆಳುವ ರೀತಿಯೇ ಸರಿ ಎಂದು ರುಜುಪಡಿಸುವುದನ್ನು ಮತ್ತು ಆತನು ಕೊಟ್ಟ ಮಾತನ್ನು ನೆರವೇರಿಸುವುದನ್ನು ನೋಡಲು ಕಾಯುತ್ತಿದ್ದೇವೆ. ಯೆಹೋವನು ತಾನು ಅಂದುಕೊಂಡ ಸಮಯಕ್ಕೆ ಅದನ್ನೆಲ್ಲಾ ಖಂಡಿತ ಮಾಡುತ್ತಾನೆ ಅನ್ನುವ ನಂಬಿಕೆ ನಮಗಿರಬೇಕು. ಅಲ್ಲಿಯವರೆಗೂ ‘ನಾವು ನೆನಸಿದ್ದು ಬೇಗ ಆಗ್ತಿಲ್ವಲ್ಲಾ’ ಅಂತ ನಿರುತ್ಸಾಹದಿಂದ ಕೊರಗದೆ ಯೆಹೋವನ ಸೇವೆ ಮಾಡುತ್ತಾ ಇರೋಣ.

ಆರ್ತರ್‌ ಸಿಕಾರ್ಡ್‌ (ಎಡಗಡೆ) ತುಂಬ ವಯಸ್ಸಾದಾಗಲೂ ಉತ್ತಮ ಸೇವೆ ಮಾಡಬೇಕು ಎಂದು ಬಯಸುತ್ತಿದ್ದರು. (ಪ್ಯಾರ 11 ನೋಡಿ)

11-12. ನಮ್ಮ ಶಕ್ತಿ ಕಡಿಮೆಯಾಗುತ್ತಿದ್ದರೂ ನಾವು ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಾ ಇರಲು ಆಗುತ್ತಾ? ಒಂದು ಉದಾಹರಣೆ ಕೊಡಿ.

11 ಶಕ್ತಿ ಕಡಿಮೆ ಆದಾಗ. ಓಟಗಾರನಿಗೆ ಓಡಲು ಶಕ್ತಿ, ಆರೋಗ್ಯ ಬೇಕು. ಆದರೆ ಯೆಹೋವನ ಮೇಲೆ ಹೆಚ್ಚು ನಂಬಿಕೆ ಇಡಲು ಮತ್ತು ಆತನ ಸೇವೆಯನ್ನು ಹುರುಪಿನಿಂದ ಮಾಡಲು ನಮಗೆ ಹೆಚ್ಚಿನ ಶಕ್ತಿ, ಆರೋಗ್ಯ ಬೇಕಂತೇನಿಲ್ಲ. ಯಾಕೆಂದರೆ ದೈಹಿಕವಾಗಿ ಹೆಚ್ಚು ಶಕ್ತಿ ಇಲ್ಲದವರು ಸಹ ಯೆಹೋವನಿಗೆ ತಮ್ಮ ಕೈಲಾದಷ್ಟು ಉತ್ತಮ ಸೇವೆ ಮಾಡುತ್ತಿದ್ದಾರೆ. (2 ಕೊರಿಂ. 4:16) ಇದಕ್ಕೊಂದು ಉದಾಹರಣೆ ಸಹೋದರ ಆರ್ತರ್‌ ಸಿಕಾರ್ಡ್‌. * ಅವರು ಬೆತೆಲ್‌ ಸೇವೆ ಆರಂಭಿಸಿ 55 ವರ್ಷವಾದಾಗ ಅಂದರೆ ಅವರ 88​ನೇ ವಯಸ್ಸಿನಲ್ಲಿ ಆರೋಗ್ಯ ತುಂಬ ಹದಗೆಟ್ಟಿತು, ಶಕ್ತಿನೂ ಕಡಿಮೆಯಾಗಿತ್ತು. ಒಂದು ದಿನ ಒಬ್ಬ ಸಹೋದರಿ ಅವರನ್ನು ನೋಡಿಕೊಳ್ಳಲು ಅವರ ಬೆಡ್‌ ಹತ್ತಿರ ಬಂದರು. ಆಕೆ ಅವರನ್ನು ನೋಡುತ್ತಾ ಪ್ರೀತಿಯಿಂದ “ಬ್ರದರ್‌ ಸಿಕಾರ್ಡ್‌ ನೀವು ಯೆಹೋವನಿಗಾಗಿ ತುಂಬ ದುಡಿದಿದ್ದೀರ!” ಎಂದು ಹೇಳಿದರು. ಆದರೆ ಆ ಸಹೋದರ ತಾನು ಹಿಂದೆ ಮಾಡಿದ ಸೇವೆಗೆ ಗಮನ ಕೊಡಲಿಲ್ಲ. ಅವರು ಆಕೆಯನ್ನು ನೋಡುತ್ತಾ ನಗುಮುಖದಿಂದ “ಹೌದು ನಿಜಾನೇ! ಆದರೆ ನಾವು ಹಿಂದೆ ಏನು ಮಾಡಿದ್ದೇವೆ ಅನ್ನೋದು ಮುಖ್ಯ ಅಲ್ಲ, ನಾವು ಈಗಿನಿಂದ ಏನು ಮಾಡುತ್ತೇವೆ ಅನ್ನೋದೇ ಮುಖ್ಯ” ಅಂದರು.

12 ನೀವು ಅನೇಕ ವರ್ಷಗಳು ಯೆಹೋವನಿಗೆ ಸೇವೆ ಮಾಡಿರಬಹುದು, ಆದರೆ ಈಗ ನಿಮ್ಮ ಆರೋಗ್ಯ ಅಷ್ಟು ಚೆನ್ನಾಗಿಲ್ಲದ ಕಾರಣ ಹಿಂದೆ ಮಾಡಿದಷ್ಟು ಮಾಡಕ್ಕೆ ಆಗದಿರಬಹುದು. ಹಾಗಿದ್ದರೆ ನಿರುತ್ಸಾಹ ಆಗುವ ಅವಶ್ಯಕತೆ ಇಲ್ಲ. ನೀವು ಹಿಂದೆ ಮಾಡಿದ ಸೇವೆಯನ್ನು ಯೆಹೋವನು ಯಾವತ್ತಿಗೂ ಮರೆಯಲ್ಲ ಅನ್ನುವುದಂತೂ ಗ್ಯಾರಂಟಿ. (ಇಬ್ರಿ. 6:10) ಈಗ ಹೆಚ್ಚು ಮಾಡಕ್ಕಾಗುತ್ತಿಲ್ಲ ಅಂತ ಯೋಚನೆ ಮಾಡಬೇಡಿ. ಯಾಕೆಂದರೆ ನಾವು ಹೆಚ್ಚು ಸೇವೆ ಮಾಡಿದರೆನೇ ಯೆಹೋವನ ಮೇಲೆ ನಮಗೆ ತುಂಬ ಪ್ರೀತಿ ಇದೆ ಅಂತ ಅರ್ಥವಲ್ಲ. ಯಾವುದೇ ಪರಿಸ್ಥಿತಿಯಲ್ಲೂ ನಾವು ಒಳ್ಳೇ ಮನೋಭಾವ ತೋರಿಸುತ್ತಾ ನಮ್ಮ ಕೈಲಾದಷ್ಟು ಸೇವೆ ಮಾಡುತ್ತಿದ್ದರೆ ಸಾಕು. ಅದು ನಮಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿಕೊಡುತ್ತದೆ. (ಕೊಲೊ. 3:23) ಯೆಹೋವನು ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಮ್ಮಿಂದ ಆಗದೇ ಇರುವುದನ್ನು ಆತನು ಕೇಳಲ್ಲ.—ಮಾರ್ಕ 12:43, 44.

ಅನಟೋಲಿ ಮತ್ತು ಲಿಡಿಯ ಮೆಲ್ನಿಕ್‌ ಅನೇಕ ಕಷ್ಟಗಳು ಬಂದರೂ ತಾಳಿಕೊಂಡರು (ಪ್ಯಾರ 13 ನೋಡಿ)

13. (ಎ) ಸಹೋದರ ಅನಟೋಲಿ ಮತ್ತು ಲಿಡಿಯರ ಜೀವನದಲ್ಲಿ ಏನು ನಡೆಯಿತು? (ಬಿ) ನಮಗೆ ಕಷ್ಟಗಳಿದ್ದರೂ ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಅವರ ಉದಾಹರಣೆಯಿಂದ ಹೇಗೆ ಉತ್ತೇಜನ ಸಿಗುತ್ತೆ?

13 ಸಮಸ್ಯೆ ಬೇಗ ಪರಿಹಾರ ಆಗದಿರುವಾಗ. ಕೆಲವು ಯೆಹೋವನ ಸೇವಕರು ಅನೇಕ ವರ್ಷಗಳಿಂದ ಕಷ್ಟ-ಹಿಂಸೆಗಳನ್ನು ತಾಳಿಕೊಂಡು ಬಂದಿದ್ದಾರೆ. ಉದಾಹರಣೆಗೆ, ಸಹೋದರ ಅನಟೋಲಿ ಮೆಲ್ನಿಕ್‌ಗೆ * 12 ವಯಸ್ಸಿದ್ದಾಗ ಅವರ ತಂದೆಯನ್ನು ಜೈಲಿಗೆ ಹಾಕಲಾಯಿತು ಮತ್ತು ಮಾಲ್ಡೋವದಲ್ಲಿದ್ದ ಅವರ ಕುಟುಂಬದಿಂದ 7,000 ಕಿ.ಮೀ. (4,000 ಮೈಲಿ) ದೂರದ ಸೈಬೀರಿಯಕ್ಕೆ ಗಡೀಪಾರು ಮಾಡಲಾಯಿತು. ಒಂದು ವರ್ಷದ ನಂತರ ಸಹೋದರ ಅನಟೋಲಿ, ಅವರ ತಾಯಿ ಮತ್ತು ಅಜ್ಜ-ಅಜ್ಜಿಯನ್ನು ಸಹ ಸೈಬೀರಿಯಕ್ಕೆ ಗಡೀಪಾರು ಮಾಡಲಾಯಿತು. ಸ್ವಲ್ಪ ಸಮಯದ ನಂತರ ಅವರು ಬೇರೆ ಹಳ್ಳಿಯಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹೋಗೋಕೆ ಶುರು ಮಾಡಿದರು. ಆದರೆ ಅಲ್ಲಿಗೆ ಹೋಗಲು 30 ಕಿ.ಮೀ. ನಡೆಯಬೇಕಿತ್ತು. ಅದು ಸಹ ಹಿಮದಲ್ಲಿ, ಕೊರೆಯೋ ಚಳಿಯಲ್ಲಿ! ಸುಮಾರು ವರ್ಷಗಳ ನಂತರ ಸಹೋದರ ಅನಟೋಲಿಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಲಾಯಿತು. ಆಗ ಅವರು ತಮ್ಮ ಪತ್ನಿ ಲಿಡಿಯ ಮತ್ತು ಒಂದು ವರ್ಷದ ಮಗಳಿಂದ ದೂರ ಇರಬೇಕಾದ ಪರಿಸ್ಥಿತಿ ಬಂತು. ಇಷ್ಟೆಲ್ಲಾ ಕಷ್ಟ ಬಂದರೂ ಅನಟೋಲಿ ಮತ್ತವರ ಕುಟುಂಬ ಯೆಹೋವನಿಗೆ ಸೇವೆ ಮಾಡುವುದನ್ನು ಮುಂದುವರಿಸಿದರು. ಈಗ ಸಹೋದರ ಅನಟೋಲಿಗೆ 82 ವಯಸ್ಸು. ಸೆಂಟ್ರಲ್‌ ಏಷ್ಯಾದ ಶಾಖಾ ಸಮಿತಿಯ ಸದಸ್ಯರಾಗಿ ಸೇವೆ ಮಾಡುತ್ತಿದ್ದಾರೆ. ನಾವು ಸಹ ಅನಟೋಲಿ ಮತ್ತು ಲಿಡಿಯರ ಮಾದರಿಯನ್ನು ಅನುಕರಿಸೋಣ. ನಾವು ಹಿಂದೆ ಕಷ್ಟಗಳನ್ನು ತಾಳಿಕೊಂಡಿದ್ದರೂ ಇನ್ನೂ ಮುಂದಕ್ಕೂ ತಾಳಿಕೊಂಡು ಯೆಹೋವನ ಸೇವೆಯಲ್ಲಿ ನಮ್ಮಿಂದಾಗೋದೆಲ್ಲಾ ಮಾಡುತ್ತಾ ಮುಂದುವರಿಯೋಣ.—ಗಲಾ. 6:9.

ನಮ್ಮ ಗಮನ ಬಹುಮಾನದ ಕಡೆಗಿರಲಿ

14. ತನ್ನ ಗುರಿ ಮುಟ್ಟಲು ಏನು ಮಾಡಬೇಕೆಂದು ಪೌಲ ಅರ್ಥಮಾಡಿಕೊಂಡನು?

14 ಪೌಲನಿಗೆ ತನ್ನ ಓಟವನ್ನು ಮುಗಿಸಿ ಗುರಿಯನ್ನು ತಲುಪುತ್ತೇನೆ ಎಂಬ ನಂಬಿಕೆ ಇತ್ತು. ಆತನು ಅಭಿಷಿಕ್ತ ಕ್ರೈಸ್ತನಾಗಿದ್ದರಿಂದ “ದೇವರು ಕೊಡುವ ಮೇಲಣ ಕರೆಯ ಬಹುಮಾನ” ಪಡೆಯಲು ಕಾಯುತ್ತಿದ್ದನು. ಆದರೆ ಆ ಗುರಿ ಮುಟ್ಟಲು ತಾನು ಕೊನೆವರೆಗೂ ‘ಓಡುತ್ತಾ ಇರಬೇಕೆಂದು’ ಪೌಲ ಅರ್ಥಮಾಡಿಕೊಂಡನು. (ಫಿಲಿ. 3:14) ಫಿಲಿಪ್ಪಿಯವರು ತಮ್ಮ ಗಮನವನ್ನು ಗುರಿಯ ಕಡೆಗೆ ಇಡುವಂತೆ ಸಹಾಯ ಮಾಡಲು ಪೌಲನು ಒಂದು ಆಸಕ್ತಿಕರ ಉದಾಹರಣೆ ತಿಳಿಸಿದನು.

15. ಪೌರತ್ವದ ಉದಾಹರಣೆ ಬಳಸಿ ಪೌಲ ಫಿಲಿಪ್ಪಿಯ ಕ್ರೈಸ್ತರಿಗೆ ಕೊನೆವರೆಗೂ ‘ಓಡುತ್ತಾ ಇರಲು’ ಹೇಗೆ ಪ್ರೋತ್ಸಾಹಿಸಿದನು?

15 ಅವರ ‘ಪೌರತ್ವ ಸ್ವರ್ಗದಲ್ಲಿದೆ’ ಅಂದರೆ ಅವರು ಸ್ವರ್ಗದಲ್ಲಿ ಪ್ರಜೆಗಳಾಗಿ ಜೀವಿಸುತ್ತಾರೆಂದು ಪೌಲ ಫಿಲಿಪ್ಪಿಯವರಿಗೆ ನೆನಪಿಸಿದನು. (ಫಿಲಿ. 3:20) ಪೌರತ್ವದ ಉದಾಹರಣೆ ಯಾಕೆ ಬಳಸಿದನು? ಆ ದಿನಗಳಲ್ಲಿ ರೋಮನ್‌ ಪ್ರಜೆಯಾದ ವ್ಯಕ್ತಿಗೆ ಅನೇಕ ಸೌಲಭ್ಯ ಸಿಗುತ್ತಿತ್ತು. * ಹಾಗಾಗಿ ರೋಮನ್‌ ಪೌರತ್ವ ಪಡಕೊಳ್ಳಲು ಅನೇಕರು ಪ್ರಯತ್ನಿಸುತ್ತಿದ್ದರು. ಆದರೆ ಅಭಿಷಿಕ್ತ ಕ್ರೈಸ್ತರು ಅದಕ್ಕಿಂತ ಎಷ್ಟೋ ಉತ್ತಮವಾದ ಸ್ವರ್ಗೀಯ ಸರಕಾರದ ಪ್ರಜೆಗಳಾಗಲಿದ್ದರು. ಈ ಸರಕಾರದಿಂದ ಸಿಗುವ ವಿಷಯಗಳಿಗೆ ಹೋಲಿಸಿದರೆ ರೋಮನ್‌ ಪ್ರಜೆಗಳಿಗೆ ಸಿಗುತ್ತಿದ್ದ ಸೌಲಭ್ಯಗಳು ಏನೇನೂ ಅಲ್ಲ. ಈ ಕಾರಣದಿಂದಲೇ ಪೌಲನು ಫಿಲಿಪ್ಪಿಯವರಿಗೆ “ಕ್ರಿಸ್ತನ ಕುರಿತಾದ ಸುವಾರ್ತೆಗೆ ಯೋಗ್ಯವಾದ ರೀತಿಯಲ್ಲೇ ನಡೆದುಕೊಳ್ಳಿರಿ” ಎಂದು ಪ್ರೋತ್ಸಾಹಿಸಿದನು. ಇಲ್ಲಿ “ನಡೆದುಕೊಳ್ಳಿರಿ” ಅನ್ನುವ ಪದದ ಅರ್ಥ “ಪ್ರಜೆಗಳಂತೆ ನಡೆಯಿರಿ” ಎಂದಾಗಿದೆ. (ಫಿಲಿ. 1:27) ಇಂದಿರುವ ಅಭಿಷಿಕ್ತ ಕ್ರೈಸ್ತರು ಈ ವಿಷಯದಲ್ಲಿ ಉತ್ತಮ ಮಾದರಿ ಇಟ್ಟಿದ್ದಾರೆ. ತಮಗೆ ಸ್ವರ್ಗದಲ್ಲಿ ಸಿಗಲಿರುವ ಅಮರ ಜೀವನ ಪಡೆಯಲು ಬಿಡದೇ ಓಡುತ್ತಾ ಇದ್ದಾರೆ.

16. ನಮಗೆ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆ ಇರಲಿ ಅಥವಾ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇರಲಿ, ಫಿಲಿಪ್ಪಿ 4:6, 7 ಹೇಳುವಂತೆ ನಾವು ಏನು ಮಾಡಬೇಕು?

16 ನಮಗೆ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿರಲಿ, ಪರದೈಸ್‌ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿರಲಿ, ನಾವಂತೂ ಆ ಗುರಿ ಮುಟ್ಟಲು ಓಡುತ್ತಾ ಇರಬೇಕು. ನಮ್ಮ ಸನ್ನಿವೇಶ ಹೇಗಿದ್ದರೂ ನಾವು ಹಿಂದಿನ ವಿಷಯಗಳ ಕಡೆಗೆ ತಿರುಗಿ ನೋಡಬಾರದು ಮತ್ತು ಯಾವುದೇ ವಿಷಯ ಯೆಹೋವನ ಸೇವೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. (ಫಿಲಿ. 3:16) ನಾವು ನಿರೀಕ್ಷಿಸಿದ್ದು ನೆರವೇರಲು ತಡವಾಗುತ್ತಿದೆ ಅಂತ ಅನಿಸುತ್ತಿರಬಹುದು ಅಥವಾ ನಮ್ಮ ಶಕ್ತಿ ಕಡಿಮೆಯಾಗುತ್ತಿರಬಹುದು. ಅನೇಕ ವರ್ಷಗಳಿಂದ ಕಷ್ಟ-ಹಿಂಸೆಯನ್ನು ತಾಳಿಕೊಂಡಿರಬಹುದು. ನಮ್ಮ ಸನ್ನಿವೇಶ ಏನೇ ಆಗಿದ್ದರೂ “ಯಾವ ವಿಷಯದ ಕುರಿತಾಗಿಯೂ ಚಿಂತೆ” ಮಾಡುವುದು ಬೇಡ. ಬದಲಿಗೆ ನಮ್ಮ ಬಿನ್ನಹ-ಯಾಚನೆಗಳನ್ನು ದೇವರ ಹತ್ತಿರ ಹೇಳಿಕೊಳ್ಳೋಣ. ಆಗ ಆತನು ನಾವು ನೆನಸಿದ್ದಕ್ಕಿಂತ ಹೆಚ್ಚಿನ ಶಾಂತಿಯನ್ನು ಕೊಡುತ್ತಾನೆ.—ಫಿಲಿಪ್ಪಿ 4:6, 7 ಓದಿ.

17. ಮುಂದಿನ ಲೇಖನದಲ್ಲಿ ನಾವೇನು ನೋಡಲಿದ್ದೇವೆ?

17 ಓಟಗಾರ ಇನ್ನೇನು ಅಂತಿಮ ಗೆರೆ ಮುಟ್ಟುವಾಗ ಪೂರ್ತಿ ಶಕ್ತಿ ಹಾಕಿ ಓಡುತ್ತಾನೆ ಮತ್ತು ಅವನ ಗಮನ ಗುರಿ ಕಡೆ ಮಾತ್ರ ಇರುತ್ತದೆ. ಅದೇ ರೀತಿ ನಮ್ಮ ಓಟ ಇನ್ನೇನು ಕೊನೆಯಾಗುವ ಈ ಸಮಯದಲ್ಲಿ ನಮ್ಮ ಶಕ್ತಿಮೀರಿ ಓಡಲು ಪ್ರಯತ್ನಿಸೋಣ. ಜೊತೆಗೆ, ಮುಂದೆ ಸಿಗಲಿರುವ ಅದ್ಭುತ ವಿಷಯಗಳ ಕಡೆಗೆ ಪೂರ್ತಿ ಗಮನ ಕೊಡೋಣ. ಆದರೆ ನಾವು ಸರಿಯಾದ ದಿಕ್ಕಿನಲ್ಲಿ ಓಡುತ್ತಾ ಇರಲು ಏನು ಮಾಡಬೇಕು? ಮುಂದಿನ ಲೇಖನ, ನಾವು ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು ಮತ್ತು ಹೇಗೆ ‘ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ತಿಳಿಸುತ್ತದೆ.—ಫಿಲಿ. 1:9, 10.

ಗೀತೆ 139 ದೃಢವಾಗಿ ನಿಲ್ಲಲು ಅವರಿಗೆ ಕಲಿಸಿ

^ ಪ್ಯಾರ. 5 ನಾವು ಎಷ್ಟೇ ಸಮಯದಿಂದ ಯೆಹೋವನ ಸೇವೆ ಮಾಡುತ್ತಿದ್ದರೂ ಆತನ ಆರಾಧನೆಯನ್ನು ಇನ್ನೂ ಚೆನ್ನಾಗಿ ಮಾಡಲು ಮತ್ತು ಉತ್ತಮ ಕ್ರೈಸ್ತರಾಗಲು ಪ್ರಯತ್ನ ಮಾಡುತ್ತಲೇ ಇರಬೇಕು. ಈ ಪ್ರಯತ್ನವನ್ನು ಯಾವತ್ತೂ ಬಿಟ್ಟುಬಿಡದಿರಲು ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಉತ್ತೇಜಿಸಿದನು. ಫಿಲಿಪ್ಪಿ ಸಭೆಯವರಿಗೆ ಆತನು ಬರೆದ ಪತ್ರದಿಂದ ಜೀವಕ್ಕಾಗಿ ನಾವು ಓಡುತ್ತಿರುವ ಓಟದಲ್ಲಿ ಕೊನೆವರೆಗೆ ಓಡಲು ಪ್ರೋತ್ಸಾಹ ಸಿಗುತ್ತದೆ. ಪೌಲನು ಬರೆದ ಆ ಮಾತುಗಳನ್ನು ನಾವು ಹೇಗೆ ಅನ್ವಯಿಸಬಹುದೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 11 1965, ಜೂನ್‌ 15​ರ ಕಾವಲಿನಬುರುಜುವಿನಲ್ಲಿ (ಇಂಗ್ಲಿಷ್‌) ಸಹೋದರ ಸಿಕಾರ್ಡ್‌ರ ಜೀವನ ಕಥೆ ನೋಡಿ.

^ ಪ್ಯಾರ. 13 2005 ಜನವರಿ 8​ರ ಎಚ್ಚರ! ಪತ್ರಿಕೆಯಲ್ಲಿ ಸಹೋದರ ಮೆಲ್ನಿಕ್‌ರ ಜೀವನ ಕಥೆ ನೋಡಿ. ಅದರ ಶೀರ್ಷಿಕೆ: “ದೇವರನ್ನು ಪ್ರೀತಿಸುವಂತೆ ಚಿಕ್ಕಂದಿನಿಂದಲೂ ಕಲಿಸಲಾದದ್ದು.”

^ ಪ್ಯಾರ. 15 ಫಿಲಿಪ್ಪಿ ಪಟ್ಟಣ ರೋಮನ್‌ ಸಾಮ್ರಾಜ್ಯದ ಅಧೀನದಲ್ಲಿತ್ತು. ಆದ್ದರಿಂದ ಅಲ್ಲಿದ್ದ ಜನರಿಗೆ ರೋಮನ್‌ ಪ್ರಜೆಗಳಿಗೆ ಸಿಗುತ್ತಿದ್ದ ಕೆಲವು ಸೌಲಭ್ಯಗಳು ಸಿಗುತ್ತಿದ್ದವು. ಹಾಗಾಗಿ ಪೌಲ ಬಳಸಿದ ಉದಾಹರಣೆಯನ್ನು ಅಲ್ಲಿನವರು ಚೆನ್ನಾಗಿ ಅರ್ಥಮಾಡಿಕೊಂಡರು.