ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ

ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ

ನಂಬಿಕೆಗೆ ಅಪಾರ ಶಕ್ತಿಯಿದೆ. ಉದಾಹರಣೆಗೆ, ಸೈತಾನನು ಯೆಹೋವನೊಟ್ಟಿಗಿರುವ ನಮ್ಮ ಸಂಬಂಧವನ್ನು ಹಾಳುಮಾಡಲು ತನ್ನ ಬಾಣಗಳನ್ನು ಪ್ರಯೋಗಿಸುತ್ತಾನೆ, ಆದರೆ ನಂಬಿಕೆ ಅವನ “ಅಗ್ನಿಬಾಣಗಳನ್ನೆಲ್ಲಾ ಆರಿಸಲು” ಸಹಾಯ ಮಾಡುತ್ತದೆ. (ಎಫೆ. 6:16) ನಂಬಿಕೆ ಇದ್ದರೆ ಬೆಟ್ಟದಂಥ ಸಮಸ್ಯೆಗಳನ್ನೂ ಎದುರಿಸಬಹುದು. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮಗೆ ಸಾಸಿವೆ ಕಾಳಿನ ಗಾತ್ರದಷ್ಟು ನಂಬಿಕೆಯಿರುವುದಾದರೆ ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸು’ ಎಂದು ಹೇಳಿದರೆ ಅದು ಹೋಗುವುದು.” (ಮತ್ತಾ. 17:20) ನಂಬಿಕೆ ಯೆಹೋವನೊಟ್ಟಿಗಿನ ನಮ್ಮ ಸಂಬಂಧವನ್ನು ಬಲಪಡಿಸುವುದರಿಂದ ನಾವು ಈ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳೋಣ: ನಂಬಿಕೆ ಅಂದರೇನು? ನಮ್ಮ ಹೃದಯದ ಸ್ಥಿತಿ ನಮ್ಮ ನಂಬಿಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇನ್ನೂ ಹೆಚ್ಚು ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ಮತ್ತು ನಾವು ಯಾರಲ್ಲಿ ನಂಬಿಕೆ ಇಡಬೇಕು?—ರೋಮ. 4:3.

ನಂಬಿಕೆ ಅಂದರೇನು?

ನಂಬಿಕೆ ಅಂದರೆ ಬೈಬಲ್‌ ಹೇಳುವುದನ್ನು ನಿಜ ಅಂತ ಒಪ್ಪಿಕೊಳ್ಳುವುದು ಮಾತ್ರ ಅಲ್ಲ. ಯಾಕೆಂದರೆ “ದೆವ್ವಗಳು ಸಹ [ದೇವರಿದ್ದಾನೆಂದು] ನಂಬಿ ಭಯದಿಂದ ನಡುಗುತ್ತವೆ.” (ಯಾಕೋ. 2:19) ಹಾಗಾದರೆ ನಂಬಿಕೆ ಅಂದರೇನು?

ಬೆಳಗಾಗೋದು, ರಾತ್ರಿಯಾಗೋದು ಯಾವತ್ತೂ ತಪ್ಪಿ ಹೋಗಲ್ಲ ಅಂತ ನಂಬುವಂತೆಯೇ ನಾವು ದೇವರ ಮಾತು ನೆರವೇರುತ್ತೆ ಅಂತಾನೂ ನಂಬುತ್ತೇವೆ

ನಂಬಿಕೆಯ ಅರ್ಥವನ್ನು ಬೈಬಲ್‌ ಎರಡು ವಿಧಗಳಲ್ಲಿ ವಿವರಿಸುತ್ತದೆ. ಮೊದಲನೇದಾಗಿ, “ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಆಗಿದೆ ಎಂದು ತಿಳಿಸುತ್ತದೆ. (ಇಬ್ರಿ. 11:1ಎ) ನಿಮಗೆ ನಂಬಿಕೆ ಇದ್ದರೆ ಯೆಹೋವನು ಹೇಳುವುದೆಲ್ಲಾ ನಿಜ ಮತ್ತು ಅದೆಲ್ಲಾ ಖಂಡಿತ ನಡೆಯುತ್ತೆ ಎಂಬ ದೃಢಭರವಸೆ ಇರುತ್ತದೆ. ಉದಾಹರಣೆಗೆ, ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದು: ‘ನೀವು ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ ಹಗಲನ್ನು, ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಬಹುದಾದರೆ ಆಗ ನನ್ನ ದಾಸನಾದ ದಾವೀದನಿಗೂ ನಾನು ಮಾಡಿದ ನಿಬಂಧನೆಯು ನಿಂತು ಹೋಗುತ್ತದೆ.’ (ಯೆರೆ. 33:20, 21) ಇದರರ್ಥ ಏನು? ‘ಸೂರ್ಯ ಬರದೇ ಹೋದರೆ ಏನು ಮಾಡೋದು, ದಿನ ಯಾವುದು ರಾತ್ರಿ ಯಾವುದು ಅಂತ ಕಂಡುಹಿಡಿಯಕ್ಕೆ ಆಗಲ್ವಲ್ಲಾ!’ ಅಂತ ಯಾವತ್ತಾದರೂ ನಿಮಗನಿಸಿದೆಯಾ? ಖಂಡಿತ ಇಲ್ಲ. ಸೂರ್ಯ ಪ್ರತಿದಿನ ಬೆಳಿಗ್ಗೆ ಹುಟ್ಟುತ್ತಾನೆ, ಸಂಜೆ ಮುಳುಗುತ್ತಾನೆ ಅಂತ ನೀವು ಕಣ್ಣುಮುಚ್ಚಿ ನಂಬುತ್ತೀರಿ. ಅಂದಮೇಲೆ ಅದನ್ನು ಸೃಷ್ಟಿಮಾಡಿರುವ ದೇವರು ತಾನು ಕೊಟ್ಟಿರುವ ಮಾತನ್ನು ನೆರವೇರಿಸುತ್ತಾನೆ ಅಂತ ನಂಬಕ್ಕಾಗಲ್ವಾ?—ಯೆಶಾ. 55:10, 11; ಮತ್ತಾ. 5:18.

ಎರಡನೇದಾಗಿ, ನಂಬಿಕೆಯು “ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನವೂ ಆಗಿದೆ” ಎಂದು ಬೈಬಲ್‌ ಹೇಳುತ್ತದೆ. ಕಣ್ಣಿಗೆ ಕಾಣದ ವಿಷಯಗಳು ನಿಜವಾಗಿಯೂ ಇವೆ ಎಂದು ಆಧಾರಗಳಿಂದ ಮನಗಾಣುವುದೇ ನಂಬಿಕೆ ಆಗಿದೆ. (ಇಬ್ರಿ. 11:1ಬಿ) ಇದಕ್ಕೆ ಯಾವ ಉದಾಹರಣೆ ಕೊಡಬಹುದು? ಒಂದು ಮಗು ನಿಮ್ಮ ಹತ್ತಿರ ಬಂದು ‘ಗಾಳಿ ಇದೆ ಅಂತ ನೀವು ಹೇಗೆ ನಂಬುತ್ತೀರಿ?’ ಎಂದು ಕೇಳುತ್ತೆ ಅಂದುಕೊಳ್ಳಿ. ನೀವು ಗಾಳಿ ನೋಡಿಲ್ಲದಿದ್ದರೂ ಅದು ಇದೆ ಅಂತ ಮಗುವಿಗೆ ಅರ್ಥಮಾಡಿಸಲು ಆಧಾರಗಳನ್ನು ಕೊಡುತ್ತೀರಿ. ಗಾಳಿ ಜೋರಾಗಿ ಬೀಸುವಾಗ ಅದರ ಶಬ್ದ ಕೇಳಿಸುತ್ತೆ ಅಂತನೋ ಅಥವಾ ಗಾಳಿಯಿಂದಲೇ ಮರದ ಎಲೆಗಳು ಅಲ್ಲಾಡುತ್ತವೆ ಅಂತನೋ ಹೇಳಬಹುದು. ಆಗ ಮಗು ಗಾಳಿ ಇದೆ ಅಂತ ನಂಬುತ್ತೆ ಮತ್ತು ತನ್ನ ಕಣ್ಣಿಗೆ ಕಾಣದಿರುವ ಕೆಲವು ವಿಷಯಗಳು ನಿಜವಾಗಲೂ ಇರುತ್ತವೆ ಅನ್ನುವುದನ್ನು ಒಪ್ಪಿಕೊಳ್ಳುತ್ತೆ. ಅದೇ ರೀತಿ, ನಂಬಿಕೆಯು ಬಲವಾದ ಪುರಾವೆಗಳ ಮೇಲೆ ಆಧರಿತವಾಗಿದೆ.—ರೋಮ. 1:20.

ನಮ್ಮ ಹೃದಯದ ಸ್ಥಿತಿ ಹೇಗಿರಬೇಕು?

ನಂಬಿಕೆಯು ಪುರಾವೆಗಳ ಮೇಲೆ ಆಧರಿತವಾಗಿರುವುದರಿಂದ ಒಬ್ಬ ವ್ಯಕ್ತಿಯಲ್ಲಿ ನಂಬಿಕೆ ಇರಬೇಕೆಂದರೆ ಮೊದಲಾಗಿ ಅವನು “ಸತ್ಯದ ನಿಷ್ಕೃಷ್ಟ ಜ್ಞಾನ” ಪಡಕೊಳ್ಳಬೇಕು. (1 ತಿಮೊ. 2:4) ಆದರೆ ಜ್ಞಾನ ಮಾತ್ರ ಸಾಕಾಗಲ್ಲ. ಅಪೊಸ್ತಲ ಪೌಲ ‘ಹೃದಯದಿಂದ ನಂಬಿಕೆಯನ್ನು ಅಭ್ಯಾಸಿಸಬೇಕು’ ಎಂದು ಬರೆದನು. (ರೋಮ. 10:10) ಒಬ್ಬನು ಸತ್ಯವನ್ನು ನಂಬಿದರೆ ಸಾಕಾಗಲ್ಲ ಅದಕ್ಕೆ ಬೆಲೆನೂ ಕೊಡಬೇಕು. ಆಗಲೇ ಅವನಿಗೆ ನಂಬಿಕೆಯನ್ನು ತೋರಿಸಲು, ದೇವರು ಮೆಚ್ಚುವಂಥ ಮಾರ್ಗದಲ್ಲಿ ನಡೆಯಲು ಪ್ರಚೋದನೆ ಸಿಗುತ್ತದೆ. (ಯಾಕೋ. 2:20) ಒಬ್ಬ ವ್ಯಕ್ತಿಗೆ ಸತ್ಯದ ಕಡೆಗೆ ಗೌರವ ಇಲ್ಲದಿದ್ದರೆ ನಂಬುವಂಥ ಆಧಾರಗಳನ್ನೂ ಅವನು ತಿರಸ್ಕರಿಸಿಬಿಡುತ್ತಾನೆ. ಯಾಕೆಂದರೆ ಅಂಥ ವ್ಯಕ್ತಿ ತಾನು ನಂಬುವುದೇ ನಿಜ ಅಂತ ನೆನಸುತ್ತಾನೆ ಅಥವಾ ಅವನಿಗೆ ಅವನ ಇಷ್ಟಗಳೇ ಹೆಚ್ಚಾಗಿರುತ್ತವೆ. (2 ಪೇತ್ರ 3:3, 4; ಯೂದ 18) ಇಂಥ ಮನೋಭಾವ ಬೈಬಲ್‌ ಕಾಲದವರಲ್ಲೂ ಇತ್ತು. ಹಾಗಾಗಿ ಅದ್ಭುತಗಳನ್ನು ನೋಡಿದವರಲ್ಲಿ ಎಲ್ಲರೂ ನಂಬಿಕೆಯನ್ನು ಬೆಳೆಸಿಕೊಳ್ಳಲಿಲ್ಲ. (ಅರ. 14:11; ಯೋಹಾ. 12:37) ಸುಳ್ಳನ್ನು ನಂಬದೆ ಸತ್ಯವನ್ನೇ ಪ್ರೀತಿಸುವವರಲ್ಲಿ ಮಾತ್ರ ಪವಿತ್ರಾತ್ಮವು ನಂಬಿಕೆಯನ್ನು ಉಂಟುಮಾಡುತ್ತದೆ.—ಗಲಾ. 5:22; 2 ಥೆಸ. 2:10, 11.

ದಾವೀದ ಹೇಗೆ ಬಲವಾದ ನಂಬಿಕೆ ಬೆಳೆಸಿಕೊಂಡನು?

ಬಲವಾದ ನಂಬಿಕೆ ಇಟ್ಟವರಲ್ಲಿ ರಾಜ ದಾವೀದನೂ ಒಬ್ಬ. (ಇಬ್ರಿ. 11:32, 33) ಆದರೆ ಅವನ ಕುಟುಂಬದವರೆಲ್ಲರಿಗೂ ಅಂಥ ನಂಬಿಕೆ ಇರಲಿಲ್ಲ. ಉದಾಹರಣೆಗೆ ಅವನ ಮೊದಲನೇ ಅಣ್ಣ ಎಲೀಯಾಬ ಒಂದು ಸಂದರ್ಭದಲ್ಲಿ ಏನು ಮಾಡಿದ ನೋಡಿ. ಗೊಲ್ಯಾತನು ಇಸ್ರಾಯೇಲ್ಯರಿಗೆ ಹಾಕಿದ ಸವಾಲಿನ ಬಗ್ಗೆ ದಾವೀದನು ಚಿಂತೆ ವ್ಯಕ್ತಪಡಿಸಿದಾಗ ಎಲೀಯಾಬನು ಅವನನ್ನು ಗದರಿಸಿದನು. ಹೀಗೆ ಎಲೀಯಾಬನು ತನಗೆ ಯೆಹೋವನ ಶಕ್ತಿಯ ಮೇಲೆ ನಂಬಿಕೆ ಇಲ್ಲ ಅಂತ ತೋರಿಸಿದನು. (1 ಸಮು. 17:26-28) ಇದರಿಂದ ಏನು ಗೊತ್ತಾಗುತ್ತೆ? ಹುಟ್ಟುತ್ತಲೇ ಯಾರಿಗೂ ನಂಬಿಕೆ ಬಂದಿರಲ್ಲ ಅಥವಾ ಅಪ್ಪ-ಅಮ್ಮನಿಂದ ಅದನ್ನು ಪಡಕೊಂಡು ಬಂದಿರಲ್ಲ. ದಾವೀದ ತಾನಾಗಿಯೇ ದೇವರೊಟ್ಟಿಗೆ ಒಳ್ಳೇ ಸಂಬಂಧ ಇಟ್ಟುಕೊಂಡಿದ್ದರಿಂದ ಅವನಿಗೆ ದೃಢ ನಂಬಿಕೆ ಬೆಳೆಯಿತು.

ದಾವೀದನು ತನಗೆ ಅಂಥ ನಂಬಿಕೆ ಹೇಗೆ ಬಂತೆಂದು ಕೀರ್ತನೆ 27​ರಲ್ಲಿ ವಿವರಿಸುತ್ತಾನೆ. (ವಚನ 1) ದಾವೀದ ತನ್ನ ಹಿಂದಿನ ಅನುಭವಗಳ ಬಗ್ಗೆ ಮತ್ತು ತನಗೆ ಕಷ್ಟಗಳು ಬಂದಾಗ ಯೆಹೋವನು ಹೇಗೆ ಸಹಾಯ ಮಾಡಿದನು ಅನ್ನುವುದರ ಬಗ್ಗೆ ಧ್ಯಾನಿಸಿದನು. (ವಚನ 2, 3) ಸತ್ಯಾರಾಧನೆಗಾಗಿ ಯೆಹೋವನು ಮಾಡಿರುವ ಏರ್ಪಾಡನ್ನು ಅವನು ತುಂಬ ಮೆಚ್ಚಿದನು. (ವಚನ 4) ದಾವೀದನು ಜೊತೆ ವಿಶ್ವಾಸಿಗಳೊಟ್ಟಿಗೆ ಸೇರಿ ಗುಡಾರದಲ್ಲಿ ದೇವರನ್ನು ಆರಾಧಿಸಿದನು. (ವಚನ 6) ಅವನು ಯೆಹೋವನಿಗೆ ‘ನಿನ್ನ ಸಾನ್ನಿಧ್ಯವನ್ನು ನನಗೆ ತೋರಿಸು‘ ಎಂದು ಪ್ರಾರ್ಥಿಸಿದನು. (ವಚನ 7, 8) ದೇವರ ಮಾರ್ಗದಲ್ಲಿ ತಾನು ನಡೆಯಲು ಕಲಿಯಬೇಕು ಎಂದು ಅವನು ಬಯಸಿದನು. (ವಚನ 11) ದಾವೀದನಿಗೆ ನಂಬಿಕೆ ಅನ್ನುವುದು ಎಷ್ಟು ಪ್ರಾಮುಖ್ಯವಾಗಿತ್ತೆಂದರೆ ಅವನು, ತನಗೆ ನಂಬಿಕೆ ಇಲ್ಲದಿದ್ದರೆ ತನ್ನ ಗತಿ ಏನಾಗುತ್ತಿತ್ತೋ ಅಂತ ಹೇಳಿದನು.—ವಚನ 13, ನೂತನ ಲೋಕ ಭಾಷಾಂತರ.

ಇನ್ನೂ ಹೆಚ್ಚು ನಂಬಿಕೆ ಹೇಗೆ ಬೆಳೆಸಿಕೊಳ್ಳಬಹುದು?

ಕೀರ್ತನೆ 27​ರಲ್ಲಿ ವಿವರಿಸಿರುವ ಮನೋಭಾವ ಮತ್ತು ರೂಢಿಗಳು ನಿಮಗೂ ಇದ್ದರೆ ದಾವೀದನಿಗಿದ್ದಂಥ ನಂಬಿಕೆಯನ್ನು ಬೆಳೆಸಿಕೊಳ್ಳಬಹುದು. ನಿಷ್ಕೃಷ್ಟ ಜ್ಞಾನ ಪಡಕೊಳ್ಳುವುದರಿಂದ ನಂಬಿಕೆ ಬೆಳೆಸಿಕೊಳ್ಳಬಹುದು ಅಂತ ನೋಡಿದ್ವಿ. ಹಾಗಾಗಿ ಪವಿತ್ರಾತ್ಮ ಫಲದ ಈ ಅಂಶವನ್ನು ಬೆಳೆಸಿಕೊಳ್ಳಲು ದೇವರ ವಾಕ್ಯವನ್ನು ಮತ್ತು ಬೈಬಲ್‌ ಆಧರಿತ ಪ್ರಕಾಶನಗಳನ್ನು ಹೆಚ್ಚೆಚ್ಚು ಓದುತ್ತಾ ಇರಿ. (ಕೀರ್ತ. 1:2, 3) ಓದಿದ ಮೇಲೆ ಅದನ್ನು ಧ್ಯಾನಿಸಿ. ಇದರಿಂದ ಯೆಹೋವನ ಕಡೆಗಿರುವ ಗಣ್ಯತೆ ಇನ್ನೂ ಹೆಚ್ಚಾಗುತ್ತದೆ. ಆಗ ನಿಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ಇನ್ನೂ ಹೆಚ್ಚು ತೋರಿಸಲು ಬಯಸುತ್ತೀರಿ. ಇದನ್ನು ಕೂಟಗಳಲ್ಲಿ ಆತನನ್ನು ಆರಾಧಿಸುವ ಮೂಲಕ ಮತ್ತು ಬೇರೆಯವರಿಗೆ ನಿಮ್ಮ ನಿರೀಕ್ಷೆಯನ್ನು ತಿಳಿಸುವ ಮೂಲಕ ಮಾಡುತ್ತೀರಿ. (ಇಬ್ರಿ. 10:23-25) ನಾವು ‘ಯಾವಾಗಲೂ, ಪಟ್ಟುಹಿಡಿದು ಪ್ರಾರ್ಥಿಸುವ’ ಮೂಲಕವೂ ನಂಬಿಕೆ ಇದೆ ಅಂತ ತೋರಿಸಿಕೊಡುತ್ತೇವೆ. (ಲೂಕ 18:1-8) ಹಾಗಾಗಿ “[ಯೆಹೋವನು] ನಿಮಗೋಸ್ಕರ ಚಿಂತಿಸುತ್ತಾನೆ” ಅಂತ ಭರವಸೆ ಇಟ್ಟು ಆತನಿಗೆ “ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಪೇತ್ರ 5:7; 1 ಥೆಸ. 5:17) ನಂಬಿಕೆ ಇದ್ದರೆ ಒಳ್ಳೇದನ್ನು ಮಾಡುತ್ತೇವೆ ಮತ್ತು ಒಳ್ಳೇದನ್ನು ಮಾಡಿದಾಗ ನಮ್ಮ ನಂಬಿಕೆ ಇನ್ನೂ ಹೆಚ್ಚಾಗುತ್ತದೆ.—ಯಾಕೋ. 2:22.

ಯೇಸುವಿನಲ್ಲಿ ನಂಬಿಕೆ ಇಡಿ

ಯೇಸು ತೀರಿಹೋಗುವ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ, “ದೇವರಲ್ಲಿ ನಂಬಿಕೆಯಿಡಿರಿ, ನನ್ನಲ್ಲಿಯೂ ನಂಬಿಕೆಯಿಡಿರಿ” ಎಂದು ಹೇಳಿದನು. (ಯೋಹಾ. 14:1) ಹಾಗಾಗಿ ನಾವು ಯೆಹೋವನಲ್ಲಿ ಮಾತ್ರವಲ್ಲ ಯೇಸುವಿನಲ್ಲೂ ನಂಬಿಕೆ ಇಡಬೇಕು. ಆತನಲ್ಲಿ ನಂಬಿಕೆ ಇದೆ ಅಂತ ಹೇಗೆ ತೋರಿಸಬಹುದು? ಮೂರು ವಿಧಗಳನ್ನು ನೋಡೋಣ.

ಯೇಸುವಿನಲ್ಲಿ ನಂಬಿಕೆ ಇಡುವುದು ಅಂದರೇನು?

ಮೊದಲನೇದಾಗಿ, ವಿಮೋಚನಾ ಮೌಲ್ಯ ದೇವರು ನಿಮಗೇ ಅಂತ ಕೊಟ್ಟಿರುವ ಉಡುಗೊರೆ ಎಂದು ನೆನಸಿ. ಪೌಲ ಹೀಗೆ ಹೇಳಿದನು: “ನಾನು . . . ಜೀವಿಸುವ ಜೀವಿತವು ದೇವರ ಮಗನ ಕಡೆಗಿನ ನಂಬಿಕೆಯಿಂದಲೇ. ಅವನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ ಒಪ್ಪಿಸಿಬಿಟ್ಟನು.” (ಗಲಾ. 2:20) ನೀವು ಯೇಸುವಿನಲ್ಲಿ ನಂಬಿಕೆ ಇಟ್ಟರೆ ವಿಮೋಚನಾ ಮೌಲ್ಯದಿಂದ ನಿಮಗೆ ಪ್ರಯೋಜನ ಇದೆ ಎಂದು ದೃಢವಾಗಿ ನಂಬುತ್ತೀರಿ. ಆಗ ನಿಮ್ಮ ಪಾಪಗಳಿಗೆಲ್ಲಾ ಕ್ಷಮೆ ಸಿಕ್ಕಿದೆ ಅನ್ನುವ ಭರವಸೆ ಇರುತ್ತೆ, ಸದಾಕಾಲ ಬದುಕುವ ನಿರೀಕ್ಷೆ ಸಿಗುತ್ತೆ ಮತ್ತು ದೇವರು ನಿಮ್ಮನ್ನು ನಿಜವಾಗಲೂ ಪ್ರೀತಿಸುತ್ತಾನೆ ಅನ್ನುವ ಖಾತ್ರಿ ಇರುತ್ತೆ. (ರೋಮ. 8:32, 38, 39; ಎಫೆ. 1:7) ಅಷ್ಟೇ ಅಲ್ಲ, ‘ನಾನು ತಪ್ಪು ಮಾಡಿದ್ದೇನೆ, ತುಂಬ ಕೆಟ್ಟವನು’ ಅಂತ ಮನಸ್ಸು ಚುಚ್ಚುತ್ತಾ ಇರಲ್ಲ.—2 ಥೆಸ. 2:16, 17.

ಎರಡನೇದಾಗಿ, ಪ್ರಾರ್ಥಿಸುವ ಮೂಲಕ ನೀವು ಯೆಹೋವನಿಗೆ ಆಪ್ತರಾಗಿ. ಯೇಸು ಯಜ್ಞ ಕೊಟ್ಟದ್ದರಿಂದಲೇ ನಮಗೆ ಪ್ರಾರ್ಥಿಸುವ ಅವಕಾಶ ಸಿಕ್ಕಿದೆ. ವಿಮೋಚನಾ ಮೌಲ್ಯದಿಂದಾಗಿ “ನಾವು ಕರುಣೆಯನ್ನು ಹೊಂದುವಂತೆಯೂ ಅಪಾತ್ರ ದಯೆಯಿಂದ ಸಮಯೋಚಿತವಾದ ಸಹಾಯವನ್ನು ಕಂಡುಕೊಳ್ಳುವಂತೆಯೂ ವಾಕ್ಸರಳತೆಯಿಂದ” ಯೆಹೋವನಿಗೆ ಪ್ರಾರ್ಥಿಸಲು ಸಾಧ್ಯವಾಗಿದೆ. (ಇಬ್ರಿ. 4:15, 16; 10:19-22) ಹೀಗೆ ಪ್ರಾರ್ಥಿಸುವುದರಿಂದ ಪಾಪ ಮಾಡಬಾರದು ಅನ್ನುವ ನಮ್ಮ ದೃಢತೀರ್ಮಾನ ಇನ್ನೂ ಬಲವಾಗುತ್ತದೆ.—ಲೂಕ 22:40.

ಮೂರನೇದಾಗಿ, ಯೇಸುವಿಗೆ ವಿಧೇಯರಾಗಿ. ಯೋಹಾನನು ಬರೆದದ್ದು: “ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.” (ಯೋಹಾ. 3:36) ಇಲ್ಲಿ ಯೋಹಾನನು, ‘ಅವಿಧೇಯತೆಯನ್ನು’ ‘ನಂಬಿಕೆ ಇಡುವುದಕ್ಕೆ’ ವಿರುದ್ಧ ಪದವಾಗಿ ಬಳಸಿರುವುದನ್ನು ಗಮನಿಸಿ. ಹಾಗಾಗಿ ಯೇಸುವಿಗೆ ವಿಧೇಯರಾಗಿ. ಆಗ ಆತನಲ್ಲಿ ನಂಬಿಕೆ ಇದೆ ಎಂದು ತೋರಿಸುತ್ತೀರಿ. ಆದರೆ ಆತನಿಗೆ ವಿಧೇಯರಾಗುವುದು ಹೇಗೆ? “ಕ್ರಿಸ್ತನ ನಿಯಮವನ್ನು” ಅಂದರೆ ಯೇಸು ಕಲಿಸಿದ್ದನ್ನು ಮತ್ತು ಆಜ್ಞಾಪಿಸಿದ್ದನ್ನು ಮಾಡಿ. (ಗಲಾ. 6:2) ಮತ್ತು ಆತನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮೂಲಕ ಕೊಡುವ ನಿರ್ದೇಶನಗಳನ್ನು ಪಾಲಿಸಿ. (ಮತ್ತಾ. 24:45) ಹೀಗೆ ಯೇಸುವಿಗೆ ವಿಧೇಯರಾದರೆ ಬಿರುಗಾಳಿಯಂಥ ಸಮಸ್ಯೆಗಳು ಬಂದರೂ ಎದುರಿಸುವಷ್ಟು ಶಕ್ತಿ ಪಡಕೊಳ್ಳುತ್ತೀರಿ.—ಲೂಕ 6:47, 48.

‘ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ ಇರಿ’

ಒಮ್ಮೆ ಒಬ್ಬ ಮನುಷ್ಯ ಯೇಸುವಿಗೆ “ನನ್ನಲ್ಲಿ ನಂಬಿಕೆಯಿದೆ! ಅದನ್ನು ಇನ್ನಷ್ಟು ಬಲಗೊಳಿಸಲು ಸಹಾಯಮಾಡು!” ಎಂದು ಕೂಗಿ ಹೇಳಿದನು. (ಮಾರ್ಕ 9:24) ಆ ಮನುಷ್ಯನಲ್ಲಿ ಸ್ವಲ್ಪ ಮಟ್ಟಿಗೆ ನಂಬಿಕೆಯಿತ್ತು ಆದರೆ ಇನ್ನೂ ಹೆಚ್ಚಿನ ನಂಬಿಕೆ ಬೇಕು ಅಂತ ನಮ್ರತೆಯಿಂದ ಒಪ್ಪಿಕೊಂಡನು. ಅವನಂತೆ ನಮಗೂ ಕೆಲವೊಮ್ಮೆ ಹೆಚ್ಚಿನ ನಂಬಿಕೆ ಬೇಕಾಗುತ್ತದೆ. ಈಗಲೇ ನಾವು ಇನ್ನೂ ಹೆಚ್ಚಿನ ನಂಬಿಕೆ ಬೆಳೆಸಿಕೊಳ್ಳಬಹುದು. ಈಗಾಗಲೇ ನೋಡಿದಂತೆ ನಮ್ಮ ನಂಬಿಕೆ ಬಲಪಡಿಸಿಕೊಳ್ಳಲು ದೇವರ ವಾಕ್ಯ ಓದಿ, ಧ್ಯಾನಿಸಬೇಕು. ಆಗ ಯೆಹೋವನ ಮೇಲೆ ನಮ್ಮ ಗಣ್ಯತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಜೊತೆ ಆರಾಧಕರೊಂದಿಗೆ ಯೆಹೋವನನ್ನು ಆರಾಧಿಸುವಾಗ, ಬೇರೆಯವರಿಗೆ ನಮ್ಮ ನಿರೀಕ್ಷೆ ಬಗ್ಗೆ ಹೇಳುವಾಗ ಮತ್ತು ಪಟ್ಟುಹಿಡಿದು ಪ್ರಾರ್ಥಿಸುವಾಗಲೂ ನಮ್ಮ ನಂಬಿಕೆ ಬಲವಾಗುತ್ತದೆ. ಹೀಗೆ ನಮ್ಮ ನಂಬಿಕೆ ಬಲವಾದಾಗ ಅದ್ಭುತ ಪ್ರತಿಫಲ ಪಡಕೊಳ್ಳುತ್ತೇವೆ. ಅಂದರೆ ನಮ್ಮನ್ನು ನಾವು “ದೇವರ ಪ್ರೀತಿಯಲ್ಲಿ” ಕಾಪಾಡಿಕೊಳ್ಳುತ್ತೇವೆ.—ಯೂದ 20, 21.