ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ನಾನಿಕನಾದ ಯೋಹಾನ—ಆತನಿಂದ ನಾವು ಕಲಿಯುವ ಪಾಠ

ಸ್ನಾನಿಕನಾದ ಯೋಹಾನ—ಆತನಿಂದ ನಾವು ಕಲಿಯುವ ಪಾಠ

ಸಭೆಯಲ್ಲಿ ನಿಮಗೆ ಇಷ್ಟವಾದ ಒಂದು ನೇಮಕ ಈಗ ಮಾಡೋಕೆ ಆಗುತ್ತಿಲ್ವಾ? ಬಹುಶಃ ಆ ನೇಮಕವನ್ನು ಬೇರೆಯವರು ಮಾಡುತ್ತಿರಬಹುದು. ಅಥವಾ ಅದು ನೀವು ಹಿಂದೆ ಆನಂದಿಸಿದ ವಿಶೇಷ ಸೇವಾ ಸುಯೋಗ ಆಗಿರಬಹುದು. ಆರೋಗ್ಯದ ಸಮಸ್ಯೆ, ಮುದಿ ಪ್ರಾಯ, ಹಣಕಾಸಿನ ಸಮಸ್ಯೆ ಮತ್ತು ಕುಟುಂಬದ ಜವಾಬ್ದಾರಿಯಿಂದಾಗಿ ಈಗ ನಿಮಗೆ ಹೆಚ್ಚು ಮಾಡಕ್ಕೆ ಆಗದೇ ಇರಬಹುದು. ಅಥವಾ ಸಂಘಟನೆಯಲ್ಲಾದ ಬದಲಾವಣೆಯಿಂದಾಗಿ ತುಂಬ ಸಮಯದಿಂದ ಮಾಡಿಕೊಂಡು ಬಂದ ನೇಮಕವನ್ನು ನೀವು ಕಳೆದುಕೊಂಡಿರಬಹುದು. ಕಾರಣ ಏನೇ ಇದ್ದರೂ ದೇವರ ಸೇವೆಯಲ್ಲಿ ನಿಮಗಿಷ್ಟವಾದ ನೇಮಕಗಳನ್ನು ಮಾಡಕ್ಕಾಗುತ್ತಿಲ್ಲ ಅಂತ ನಿಮಗನಿಸಬಹುದು. ಇಂಥ ಸನ್ನಿವೇಶಗಳಲ್ಲಿ ನಿಮಗೆ ಆಗಾಗ ನಿರುತ್ಸಾಹ ಆಗುವುದು ಸಹಜ. ಹೀಗಿದ್ದರೂ ಇಂಥ ನಿರುತ್ಸಾಹ, ಕಹಿಮನೋಭಾವ, ಅಸಮಾಧಾನದಲ್ಲೇ ಮುಳುಗಿಹೋಗದಿರಲು ನಿಮಗೆ ಯಾವುದು ಸಹಾಯ ಮಾಡುತ್ತದೆ? ನೀವು ಹೇಗೆ ಸಂತೋಷ ಕಳಕೊಳ್ಳದೇ ಇರಬಹುದು?

ನಾವು ಏನೇ ಆದರೂ ಹೇಗೆ ಸಂತೋಷವಾಗಿರಬಹುದು ಅಂತ ಸ್ನಾನಿಕನಾದ ಯೋಹಾನನಿಂದ ಕಲಿಯೋಣ. ಯೋಹಾನನಿಗೆ ಅದ್ಭುತ ನೇಮಕಗಳು ಸಿಕ್ಕಿದವು, ಆದರೆ ಆತನ ಜೀವನದಲ್ಲಿ ಬಹುಶಃ ಆತನೂ ನೆನಸಿರದಂಥ ಘಟನೆಗಳು ನಡೆದುಬಿಟ್ಟವು. ಯೇಸುವಿನ ಬಗ್ಗೆ ಸಾರಿದಕ್ಕಿಂತ ಹೆಚ್ಚು ಸಮಯ ಜೈಲಿನಲ್ಲಿ ಕಳೆಯುತ್ತೇನೆ ಅಂತ ಆತನು ಕನಸು ಮನಸಲ್ಲೂ ನೆನಸಿರಲಿಲ್ಲ. ಸನ್ನಿವೇಶ ಬದಲಾದರೂ ಯೋಹಾನ ಜೀವನದಲ್ಲಿ ಸಂತೋಷವನ್ನು ಕಳಕೊಳ್ಳಲಿಲ್ಲ. ಸಂತೋಷವಾಗಿರಲು ಆತನಿಗೆ ಯಾವುದು ಸಹಾಯ ಮಾಡಿತು? ಇಂದು ನಮಗೆ ನಿರುತ್ಸಾಹ ಆದಾಗ ನಾವು ಹೇಗೆ ಸಂತೋಷ ಕಳಕೊಳ್ಳದೇ ಇರಬಹುದು?

ಯೋಹಾನನಿಗೆ ಸಂತೋಷ ತಂದ ನೇಮಕ

ಕ್ರಿ.ಶ. 29 ರಲ್ಲಿ ಯೋಹಾನ ಯೆಹೋವನು ಕೊಟ್ಟ ನೇಮಕವನ್ನು ಮಾಡಲು ಆರಂಭಿಸಿದನು. ಅದು ಮೆಸ್ಸೀಯನ ಆಗಮನಕ್ಕೆ ಜನರನ್ನು ಸಿದ್ಧಗೊಳಿಸುವುದಾಗಿತ್ತು. ಆತನು ಹೀಗೆ ಹೇಳುತ್ತಾ ಬಂದನು: “ಪಶ್ಚಾತ್ತಾಪಪಡಿರಿ, ಸ್ವರ್ಗದ ರಾಜ್ಯವು ಸಮೀಪಿಸಿದೆ.” (ಮತ್ತಾ. 3:2; ಲೂಕ 1:12-17) ಅದಕ್ಕೆ ಅನೇಕರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಯೋಹಾನನು ಹೇಳಿದ ಸಂದೇಶವನ್ನು ಕೇಳಲು ಜನರು ದೂರದೂರದಿಂದ ಬಂದರು ಮತ್ತು ಅನೇಕರು ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ಪಡಕೊಂಡರು. ನೀತಿವಂತರು ಎಂದು ಹೇಳಿಕೊಂಡು ತಿರುಗುತ್ತಿದ್ದ ಧಾರ್ಮಿಕ ಮುಖಂಡರಿಗೂ ಯೋಹಾನನು ಎಚ್ಚರಿಕೆ ಕೊಟ್ಟನು. ಅವರು ಬದಲಾಗದಿದ್ದರೆ ನ್ಯಾಯತೀರ್ಪಾಗುತ್ತದೆ ಎಂದು ಧೈರ್ಯವಾಗಿ ಹೇಳಿದನು. (ಮತ್ತಾ. 3:5-12) ಕ್ರಿ.ಶ. 29 ರಲ್ಲೇ ಸುಮಾರು 6 ತಿಂಗಳಾದ ಮೇಲೆ ಆತನ ಸೇವೆಯಲ್ಲೇ ಅತಿ ಮುಖ್ಯವಾದ ನೇಮಕ ಮಾಡಿದನು. ಅದು ಯೇಸುವಿಗೆ ದೀಕ್ಷಾಸ್ನಾನ ಕೊಡುವುದೇ ಆಗಿತ್ತು. ಅಂದಿನಿಂದ ಯೋಹಾನನು ಜನರಿಗೆ ಯೇಸುವನ್ನು ಹಿಂಬಾಲಿಸುವಂತೆ ಪ್ರೋತ್ಸಾಹಿಸಿದನು.—ಯೋಹಾ. 1:32-37.

ಯೋಹಾನನ ಬಗ್ಗೆ ಯೇಸು ಹೇಳಿದ್ದು: “ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ.” (ಮತ್ತಾ. 11:11) ತನಗೆ ಅಪೂರ್ವ ಆಶೀರ್ವಾದಗಳು ಸಿಕ್ಕಿದ್ದಕ್ಕೆ ಯೋಹಾನ ಖಂಡಿತ ಸಂತೋಷಪಟ್ಟಿರುತ್ತಾನೆ. ಆತನಂತೆ ಇಂದು ಅನೇಕರು ಯೆಹೋವನಿಂದ ಅನೇಕ ಆಶೀರ್ವಾದಗಳನ್ನು ಪಡಕೊಂಡಿದ್ದಾರೆ. ಸಹೋದರ ಟೆರ್ರಿ ಅವರ ಅನುಭವ ನೋಡಿ. ಸಹೋದರ ಮತ್ತವರ ಪತ್ನಿ ಸ್ಯಾಂಡ್ರ ಸುಮಾರು 50 ವರ್ಷ ಪೂರ್ಣ ಸಮಯ ಸೇವೆ ಮಾಡಿದ್ದಾರೆ. ಸಹೋದರ ಟೆರ್ರಿ ಹೇಳುವುದು: “ನನಗೆ ಅನೇಕ ಸುಯೋಗಗಳು ಸಿಕ್ಕಿದವು. ನಾನು ಪಯನೀಯರ್‌ ಸೇವೆ, ಬೆತೆಲ್‌ ಸೇವೆ ಮಾಡಿದೆ, ವಿಶೇಷ ಪಯನೀಯರ್‌ ಆಗಿದ್ದೆ, ಸಂಚರಣ ಮೇಲ್ವಿಚಾರಕನಾದೆ, ಜಿಲ್ಲಾ ಮೇಲ್ವಿಚಾರಕನಾಗಿಯೂ ಸೇವೆ ಮಾಡಿದೆ, ಈಗ ಪುನಃ ವಿಶೇಷ ಪಯನೀಯರನಾಗಿದ್ದೇನೆ.” ಯೆಹೋವನ ಸೇವೆಯಲ್ಲಿ ನಮಗೆ ಸುಯೋಗಗಳು ಸಿಗುವಾಗ ತುಂಬ ಸಂತೋಷವಾಗುತ್ತದೆ, ಆದರೆ ಸನ್ನಿವೇಶ ಬದಲಾದರೂ ಆ ಸಂತೋಷ ಕಳಕೊಳ್ಳದಿರಲು ನಾವು ಪ್ರಯತ್ನ ಮಾಡಬೇಕು. ಇದನ್ನು ಹೇಗೆ ಮಾಡುವುದೆಂದು ಸ್ನಾನಿಕನಾದ ಯೋಹಾನನಿಂದ ಕಲಿಯೋಣ.

ನಿಮಗಿರೋ ನೇಮಕದಲ್ಲಿ ಸಂತೋಷಪಡಿ

ಯೋಹಾನ ತನ್ನ ನೇಮಕವನ್ನು ತುಂಬ ಇಷ್ಟಪಟ್ಟಿದ್ದನು. ಹಾಗಾಗಿ ಆತನು ತನ್ನ ನೇಮಕದಲ್ಲಿ ಸಂತೋಷ ಕಳಕೊಳ್ಳದೇ ಇದ್ದನು. ಈ ಉದಾಹರಣೆ ಗಮನಿಸಿ. ಯೇಸುವಿನ ದೀಕ್ಷಾಸ್ನಾನದ ಬಳಿಕ ಜನರು ಯೋಹಾನನ ಹತ್ತಿರ ಬರುವುದು ಕಡಿಮೆಯಾಗಿ, ಯೇಸುವಿನ ಹತ್ತಿರ ಹೋಗುವುದು ಜಾಸ್ತಿಯಾಯಿತು. ಯೋಹಾನನ ಶಿಷ್ಯರು ಆತನಿಗೆ, “ರಬ್ಬೀ, . . . ಅವನು ದೀಕ್ಷಾಸ್ನಾನ ಮಾಡಿಸುತ್ತಿದ್ದಾನೆ ಮತ್ತು ಎಲ್ಲರೂ ಅವನ ಬಳಿಗೆ ಹೋಗುತ್ತಿದ್ದಾರೆ” ಎಂದರು. (ಯೋಹಾ. 3:26) ಅದಕ್ಕೆ ಯೋಹಾನನು “ಮದುಮಗಳನ್ನು ಹೊಂದಿರುವವನೇ ಮದುಮಗನಾಗಿದ್ದಾನೆ. ಆದರೆ ಮದುಮಗನ ಸ್ನೇಹಿತನು ನಿಂತುಕೊಂಡು ಅವನು ಮಾತಾಡುವುದನ್ನು ಕೇಳಿಸಿಕೊಳ್ಳುವಾಗ, ಮದುಮಗನ ಸ್ವರದ ನಿಮಿತ್ತ ತುಂಬ ಸಂತೋಷಪಡುತ್ತಾನೆ. ಆದುದರಿಂದ ನನ್ನ ಈ ಸಂತೋಷವು ಪೂರ್ಣವಾಗಿದೆ” ಎಂದು ಹೇಳಿದನು. (ಯೋಹಾ. 3:29) ಯೇಸುವಿನ ಕೆಲಸದಿಂದಾಗಿ ತನ್ನ ಕೆಲಸಕ್ಕೆ ಬೆಲೆ ಇಲ್ಲದಂತಾಯಿತು ಅಂತ ಯೋಹಾನ ಯಾವತ್ತೂ ಯೋಚಿಸಲಿಲ್ಲ. ಬದಲಿಗೆ ‘ಮದುಮಗನ ಸ್ನೇಹಿತನಾಗಿ’ ಯೋಹಾನ ತನ್ನ ನೇಮಕವನ್ನು ಇಷ್ಟಪಟ್ಟನು ಮತ್ತು ಸಂತೋಷದಿಂದ ಇದ್ದನು.

ನೇಮಕ ಕಷ್ಟದ್ದಾಗಿದ್ದರೂ ಸಂತೋಷವಾಗಿರಲು ಯೋಹಾನನಿಗೆ ತನ್ನ ಒಳ್ಳೇ ಮನೋಭಾವ ಸಹಾಯ ಮಾಡಿತು. ಆತನು ಹುಟ್ಟಿನಿಂದ ನಾಜೀರನಾಗಿದ್ದರಿಂದ ಯಾವುದೇ ಮದ್ಯವನ್ನು ಸೇವಿಸುವ ಹಾಗಿರಲಿಲ್ಲ. (ಲೂಕ 1:15) ಯೇಸು ಕೂಡ ಆತನ ಸರಳ ಜೀವನಕ್ಕೆ ಸೂಚಿಸುತ್ತಾ, “ಯೋಹಾನನು ಉಣ್ಣುತ್ತಾ ಕುಡಿಯುತ್ತಾ ಬರಲಿಲ್ಲ” ಅಂತ ಹೇಳಿದನು. ಆದರೆ ಯೇಸು ಮತ್ತು ಆತನ ಶಿಷ್ಯರು ಸಾಮಾನ್ಯ ಜನರಂತೆಯೇ ಇದ್ದರು. ಅವರಿಗೆ ಯಾವುದೇ ನಿರ್ಬಂಧ ಇರಲಿಲ್ಲ. (ಮತ್ತಾ. 11:18, 19) ಯೋಹಾನನಿಗೆ ಅದ್ಭುತಗಳನ್ನು ಮಾಡುವ ಶಕ್ತಿ ಸಿಗಲಿಲ್ಲ, ಆದರೆ ಯೇಸುವಿನ ಶಿಷ್ಯರಿಗೆ ಆ ಶಕ್ತಿ ಸಿಕ್ಕಿದೆ ಮತ್ತು ಅವರಲ್ಲಿ ಕೆಲವರು ಹಿಂದೆ ತನ್ನ ಶಿಷ್ಯರಾಗಿದ್ದವರು ಎಂದು ಯೋಹಾನನಿಗೆ ಗೊತ್ತಿತ್ತು. (ಮತ್ತಾ. 10:1; ಯೋಹಾ. 10:41) ತನ್ನ ಶಿಷ್ಯರಾಗಿದ್ದಾಗ ಅವರಿಗೆ ಸಿಗದೇ ಇದ್ದ ಶಕ್ತಿ ಯೇಸುವಿನ ಶಿಷ್ಯರಾದಾಗ ಸಿಕ್ಕಿತಲ್ಲಾ ಎಂದು ಕೊರಗಲಿಲ್ಲ, ಬದಲಿಗೆ ಯೆಹೋವನ ಸೇವೆಯಲ್ಲಿ ನಿರತನಾಗಿದ್ದನು.

ಯೋಹಾನನಂತೆ ನಾವೂ ನಮಗಿರೋ ನೇಮಕವನ್ನು ಅಮೂಲ್ಯವಾಗಿ ನೋಡಿದರೆ ಸಂತೋಷ ಕಳಕೊಳ್ಳದೇ ಇರಬಹುದು. ಮೇಲೆ ತಿಳಿಸಲಾದ ಸಹೋದರ ಟೆರ್ರಿ ತಾನು ಮಾಡಿದ ಸೇವೆಯ ಬಗ್ಗೆ ಹೇಳುವುದು: “ನನಗೆ ಸಿಕ್ಕಿದ ಪ್ರತಿ ನೇಮಕವನ್ನೂ ಪೂರ್ತಿ ಗಮನಕೊಟ್ಟು ಶೃದ್ಧೆಯಿಂದ ಮಾಡಿದೆ. ಅದನ್ನು ನೆನಸಿಕೊಂಡರೆ ಬೇಸರ ಆಗಲ್ಲ, ಖುಷಿ ಆಗುತ್ತೆ.”

ಯೆಹೋವನ ಸಂಘಟನೆಯಲ್ಲಿ ಯಾವುದೇ ನೇಮಕ ಅಥವಾ ಜವಾಬ್ದಾರಿಗಳಿದ್ದರೂ ಅದನ್ನು ಮಾಡುವ ಮೂಲಕ ನಾವು ‘ದೇವರ ಜೊತೆಕೆಲಸಗಾರರಾಗುತ್ತೇವೆ.’ (1 ಕೊರಿಂ. 3:9) ಈ ಅಮೂಲ್ಯ ಸುಯೋಗದ ಕುರಿತು ನಾವು ಧ್ಯಾನಿಸುವುದಾದರೆ ದೇವರ ಸೇವೆಯನ್ನು ತುಂಬ ಸಂತೋಷದಿಂದ ಮಾಡಲು ಆಗುತ್ತದೆ. ಒಂದು ಅಮೂಲ್ಯ ವಸ್ತುವನ್ನು ಜಾಗರೂಕತೆಯಿಂದ ನೋಡಿಕೊಂಡರೆ ಹೇಗೆ ಅದು ತನ್ನ ಸೌಂದರ್ಯವನ್ನು ಕಳಕೊಳ್ಳುವುದಿಲ್ಲವೋ ಹಾಗೆಯೇ ನಾವು ಯೆಹೋವನ ಜೊತೆ ಕೆಲಸ ಮಾಡುವುದು ಎಂಥ ದೊಡ್ಡ ಗೌರವ ಎಂದು ಯೋಚಿಸುತ್ತಾ ಇದ್ದರೆ ನಮ್ಮ ಸಂತೋಷ ಕಳಕೊಳ್ಳುವುದಿಲ್ಲ. ನಾವು ಯಾವತ್ತಿಗೂ ಇತರ ಸಹೋದರರ ಪ್ರಯತ್ನವನ್ನು ನಮ್ಮ ಪ್ರಯತ್ನಗಳ ಜೊತೆ ಹೋಲಿಸಬಾರದು. ಯೆಹೋವನು ನಮಗೆ ಕೊಟ್ಟ ನೇಮಕ ಕೀಳಾದದ್ದು, ಬೇರೆಯವರಿಗೆ ಕೊಟ್ಟ ನೇಮಕ ತುಂಬ ಬೆಲೆಯುಳ್ಳದ್ದು ಅಂತನೂ ಯೋಚಿಸಬಾರದು. —ಗಲಾ. 6:4.

ಯೆಹೋವನ ಸೇವೆಗೆ ಹೆಚ್ಚು ಗಮನಕೊಡಿ

ತನ್ನ ಸಾರುವ ನೇಮಕ ತುಂಬ ಕಾಲದ ವರೆಗೆ ಮುಂದುವರಿಯಲ್ಲ ಎಂದು ಯೋಹಾನನಿಗೆ ಗೊತ್ತಿತ್ತಾದರೂ ಅದು ಇದ್ದಕ್ಕಿದ್ದಂತೆ ನಿಂತು ಹೋಗುತ್ತದೆ ಅಂತ ನೆನಸಿರಲಿಲ್ಲ. (ಯೋಹಾ. 3:30) ಯೇಸುವಿಗೆ ದೀಕ್ಷಾಸ್ನಾನ ಕೊಟ್ಟು ಆರು ತಿಂಗಳಾದ ನಂತರ ಕ್ರಿ.ಶ. 30 ರಲ್ಲಿ ಯೋಹಾನನನ್ನು ರಾಜ ಹೆರೋದನು ಜೈಲಿಗೆ ಹಾಕಿದನು. ಅಲ್ಲೂ ಯೋಹಾನನು ದೇವರ ಮಟ್ಟಗಳ ಬಗ್ಗೆ ಮಾತಾಡುತ್ತಿದ್ದನು. (ಮಾರ್ಕ 6:17-20) ಇಷ್ಟೆಲ್ಲಾ ಬದಲಾವಣೆ ಆದರೂ ಯೋಹಾನನಿಗೆ ಸಂತೋಷವಾಗಿರಲು ಯಾವುದು ಸಹಾಯ ಮಾಡಿತು? ಆತನು ಯೆಹೋವನ ಸೇವೆಗೆ ಹೆಚ್ಚು ಗಮನ ಕೊಟ್ಟನು.

ಯೋಹಾನನು ಜೈಲಿನಲ್ಲಿದ್ದಾಗ ಯೇಸು ಸೇವೆಯನ್ನು ಹೆಚ್ಚಿಸಿದ್ದರ ಬಗ್ಗೆ ತಿಳಿದುಕೊಂಡನು. (ಮತ್ತಾ. 11:2; ಲೂಕ 7:18) ಯೇಸುವೇ ಮೆಸ್ಸೀಯನೆಂದು ಯೋಹಾನನಿಗೆ ಅರ್ಥವಾಯಿತು. ಆದರೂ ಯೇಸು ಹೇಗೆ ಮೆಸ್ಸೀಯನ ಬಗ್ಗೆ ಇರುವ ಎಲ್ಲಾ ಪ್ರವಾದನೆಗಳನ್ನು ನೆರವೇರಿಸುತ್ತಾನೆ ಅಂತ ಆತನು ಯೋಚಿಸಿರಬೇಕು. ಮೆಸ್ಸೀಯನು ರಾಜನಾಗುತ್ತಾನೆ ಎಂದು ಯೋಹಾನನಿಗೆ ಗೊತ್ತಿತ್ತು. ಆದ್ದರಿಂದ ಯೇಸು ಈಗಲೇ ರಾಜನಾಗುತ್ತಾನಾ? ಆಗ ತನ್ನನ್ನು ಜೈಲಿನಿಂದ ಬಿಡಿಸುತ್ತಾನಾ? ಎಂಬ ಪ್ರಶ್ನೆಗಳು ಯೋಹಾನನ ಮನಸ್ಸಿಗೆ ಬಂದಿರಬೇಕು. ಹಾಗಾಗಿ, ಆತನು ಇದರ ಬಗ್ಗೆ ಹೆಚ್ಚು ತಿಳಿಯಲಿಕ್ಕಾಗಿ ಯೇಸುವಿನ ಬಳಿಗೆ ತನ್ನ ಇಬ್ಬರು ಶಿಷ್ಯರನ್ನು ಕಳುಹಿಸಿ “ಬರತಕ್ಕವನು ನೀನೋ ಅಥವಾ ಬೇರೊಬ್ಬನನ್ನು ನಾವು ಎದುರುನೋಡಬೇಕೊ?” ಎಂದು ವಿಚಾರಿಸಿದನು. (ಲೂಕ 7:19) ಆ ಶಿಷ್ಯರು ಹಿಂದಿರುಗಿ ಬಂದು ತಾವು ಯೇಸು ಮಾಡಿದ ಅದ್ಭುತಗಳ ಬಗ್ಗೆ ವಿವರಿಸಿದಾಗ ಯೋಹಾನನು ತನ್ನ ಮೈಯೆಲ್ಲಾ ಕಿವಿಯಾಗಿಸಿ ಕೇಳಿರಬೇಕು. ಅವರು ಯೇಸುವಿನ ಈ ಮಾತುಗಳನ್ನೇ ಯೋಹಾನನಿಗೆ ತಿಳಿಸಿರಬೇಕು: “ಕುರುಡರು ದೃಷ್ಟಿಯನ್ನು ಪಡೆದುಕೊಳ್ಳುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸುತ್ತಿದೆ, ಸತ್ತವರು ಎಬ್ಬಿಸಲ್ಪಡುತ್ತಿದ್ದಾರೆ ಮತ್ತು ಬಡವರಿಗೆ ಸುವಾರ್ತೆಯು ತಿಳಿಸಲ್ಪಡುತ್ತಿದೆ.”—ಲೂಕ 7:20-22.

ತನ್ನ ಶಿಷ್ಯರು ಹೇಳಿದ್ದನ್ನು ಕೇಳಿ ಯೋಹಾನನಿಗೆ ತುಂಬ ಬಲ ಸಿಕ್ಕಿರಬೇಕು. ಮೆಸ್ಸೀಯನ ಬಗ್ಗೆ ಇರುವ ಪ್ರವಾದನೆಗಳೆಲ್ಲವೂ ಯೇಸುವಿನಲ್ಲಿ ನೆರವೇರುತ್ತಾ ಇದೆ ಎಂದು ಅರ್ಥಮಾಡಿಕೊಂಡನು. ಯೇಸು ತನ್ನನ್ನು ಜೈಲಿನಿಂದ ಬಿಡಿಸದಿದ್ದರೂ ತಾನು ಯೆಹೋವನಿಗೆ ಮಾಡಿದ ಸೇವೆ ವ್ಯರ್ಥವಾಗಿಲ್ಲ ಎಂದು ಯೋಹಾನನಿಗೆ ಗೊತ್ತಿತ್ತು. ಹಾಗಾಗಿ, ಆತನು ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಸಂತೋಷವಾಗಿಯೇ ಇದ್ದನು.

ಲೋಕವ್ಯಾಪಕ ಸಾರುವ ಕೆಲಸದ ಬಗ್ಗೆ ಬರುವ ಒಳ್ಳೇ ವರದಿಗಳ ಮೇಲೆ ನಮ್ಮ ಗಮನ ಇಡುವುದಾದರೆ ನಾವು ಸಂತೋಷವಾಗಿರುತ್ತೇವೆ

ನಾವು ಕೂಡ ಯೆಹೋವನ ಸೇವೆಗೇ ಹೆಚ್ಚು ಗಮನ ಕೊಟ್ಟರೆ ಕಷ್ಟಗಳು ಬಂದರೂ ಸಂತೋಷದಿಂದ ತಾಳಿಕೊಳ್ಳಲು ಸಾಧ್ಯ. (ಕೊಲೊ. 1:9-11) ನಾವು ಪ್ರತಿದಿನ ಬೈಬಲನ್ನು ಓದಿ ಧ್ಯಾನಿಸುವ ಮೂಲಕ ಮತ್ತು ಯೆಹೋವನಿಗಾಗಿ ಮಾಡುವ ಕೆಲಸ ವ್ಯರ್ಥವಲ್ಲ ಅನ್ನುವುದನ್ನು ನೆನಪಿನಲ್ಲಿಡುವ ಮೂಲಕ ತಾಳಿಕೊಳ್ಳಬಹುದು. (1 ಕೊರಿಂ. 15:58) ಸ್ಯಾಂಡ್ರ ಹೇಳುವುದು: “ಪ್ರತಿ ದಿನ ಬೈಬಲಿನ ಒಂದು ಅಧ್ಯಾಯ ಓದುವುದರಿಂದ ನನಗೆ ಯೆಹೋವನಿಗೆ ಹತ್ತಿರವಾಗಲು ಸಾಧ್ಯವಾಗಿದೆ. ಇದು ನನ್ನ ಬಗ್ಗೆಯೇ ಯೋಚಿಸುತ್ತಾ ಇರದೆ ಯೆಹೋವನ ಬಗ್ಗೆ ಯೋಚಿಸಲು ನನಗೆ ಸಹಾಯ ಮಾಡಿದೆ.” ನಮ್ಮ ಸಹೋದರ ಸಹೋದರಿಯರು ಯೆಹೋವನಿಗಾಗಿ ಮಾಡಿದ ಕೆಲಸದ ಬಗ್ಗೆ ಪ್ರಕಾಶನಗಳಲ್ಲಿ ಓದುವಾಗ ನಮಗೆ ನಮ್ಮ ಬಗ್ಗೆಯೇ ಯೋಚಿಸದೆ ಯೆಹೋವನ ಬಗ್ಗೆ ಯೋಚಿಸಲು ಸಹಾಯವಾಗುತ್ತದೆ. ಸ್ಯಾಂಡ್ರ ಹೇಳುವುದು: “ಪ್ರತಿ ತಿಂಗಳು ಬರುವ JW ಪ್ರಸಾರ ಯೆಹೋವನಿಗೆ ಮತ್ತು ಆತನ ಸಂಘಟನೆಗೆ ಹತ್ತಿರವಾಗುವಂತೆ ಮಾಡಿದೆ. ಇದೆಲ್ಲವೂ ನನಗೆ ನನ್ನ ನೇಮಕದಲ್ಲಿ ಸಂತೋಷ ಕಳೆದುಕೊಳ್ಳದಿರಲು ಸಹಾಯ ಮಾಡಿದೆ.”

ಸ್ನಾನಿಕನಾದ ಯೋಹಾನನಿಗೆ ಸ್ವಲ್ಪ ಸಮಯ ಮಾತ್ರ ಯೆಹೋವನ ಬಗ್ಗೆ ಸಾರುವ ಅವಕಾಶ ಸಿಕ್ಕಿತು. ಆದರೂ ಆತನು ಎಲೀಯನಿಗಿದ್ದಂಥ “ಹುಮ್ಮಸ್ಸಿನೊಂದಿಗೂ ಶಕ್ತಿಯೊಂದಿಗೂ” ಎಡೆಬಿಡದೆ ಸಾರಿದನು. ಎಲೀಯನಂತೆ ಆತನೂ ‘ನಮ್ಮಂಥ ಭಾವನೆಗಳಿದ್ದ ಮನುಷ್ಯನಾಗಿದ್ದನು.’ (ಲೂಕ 1:17; ಯಾಕೋ. 5:17) ನಾವೂ ಆತನನ್ನು ಅನುಕರಿಸುತ್ತಾ ಯೆಹೋವನ ಸೇವೆಗೆ ಹೆಚ್ಚು ಗಮನ ಕೊಡುತ್ತಾ ಇರುವುದಾದರೆ ಯಾವುದೇ ಸನ್ನಿವೇಶದಲ್ಲೂ ಸಂತೋಷವಾಗಿರುತ್ತೇವೆ.