ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 32

ದೀನತೆ ತೋರಿಸ್ತಾ ನಮ್ರರಾಗಿ ನಡಕೊಳ್ಳಿ

ದೀನತೆ ತೋರಿಸ್ತಾ ನಮ್ರರಾಗಿ ನಡಕೊಳ್ಳಿ

‘ನಿನ್ನ ದೇವರಿಗೆ ನಮ್ರವಾಗಿ ನಡೆದುಕೋ.’—ಮೀಕ 6:8.

ಗೀತೆ 26 ಓ ದೇವರೊಂದಿಗೆ ನಡೆ!

ಕಿರುನೋಟ *

1. ಯೆಹೋವನ ದೀನತೆ ಬಗ್ಗೆ ದಾವೀದ ಏನು ಬರೆದಿದ್ದಾನೆ?

ಯೆಹೋವ ದೀನತೆ ಇರೋ ದೇವ್ರು. ನಾವದನ್ನು ಹೇಗೆ ಹೇಳ್ಬಹುದು? ದಾವೀದನು ಯೆಹೋವನ ಬಗ್ಗೆ “ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಕೃಪಾಕಟಾಕ್ಷವು [ದೀನತೆ] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ” ಅಂತ ಬರೆದ. (2 ಸಮು. 22:36; ಕೀರ್ತ. 18:35) ದಾವೀದ ಈ ಮಾತನ್ನು ಬರೆದಾಗ ಪ್ರವಾದಿ ಸಮುವೇಲ ಅವನನ್ನು ಅಭಿಷೇಕಿಸಲಿಕ್ಕೆ ಬಂದ ಸಂದರ್ಭ ನೆನಪಿಸಿಕೊಂಡಿರಬೇಕು. ದಾವೀದ ಇಷಯನ ಎಂಟು ಮಕ್ಕಳಲ್ಲಿ ಕೊನೆಯವನಾಗಿದ್ದ. ತೀರ ಚಿಕ್ಕವನಾಗಿದ್ರೂ ಸೌಲನ ಬದಲಾಗಿ ಅವನನ್ನೇ ದೇವರು ಇಸ್ರಾಯೇಲಿನ ಮುಂದಿನ ರಾಜನಾಗಿ ಆಯ್ಕೆ ಮಾಡಿದನು.—1 ಸಮು. 16:1, 10-13.

2. ಈ ಲೇಖನದಲ್ಲಿ ನಾವೇನನ್ನು ಕಲಿಯಲಿದ್ದೇವೆ?

2 ಯೆಹೋವ “ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು . . . ಎತ್ತಿ ಪ್ರಭುಗಳ ಜೊತೆಯಲ್ಲಿ . . . ಕುಳ್ಳಿರಿಸುತ್ತಾನೆ” ಅಂತ ಕೀರ್ತನೆಯಲ್ಲಿದೆ. (ಕೀರ್ತ. 113:6-8) ಇದೇ ಅನಿಸಿಕೆ ದಾವೀದನಿಗೂ ಇತ್ತು. ಈ ಲೇಖನದಲ್ಲಿ, ಯೆಹೋವ ದೇವ್ರು ಹೇಗೆ ದೀನತೆಯಿಂದ ನಡಕೊಳ್ತಾನೆ ಮತ್ತು ನಾವೇನು ಪಾಠ ಕಲಿಬಹುದು ಅನ್ನೋದನ್ನು ನೋಡ್ತೀವಿ. ಜೊತೆಗೆ ನಮ್ಮ ಇತಿಮಿತಿಗಳನ್ನು ಅರಿತು ನಡಕೊಳ್ಳೋ ವಿಷ್ಯದಲ್ಲಿ ರಾಜ ಸೌಲ, ಪ್ರವಾದಿ ದಾನಿಯೇಲ ಮತ್ತು ಯೇಸುವಿನ ಉದಾಹರಣೆಯಿಂದ ಏನು ಕಲಿಬಹುದು ಅಂತನೂ ನೋಡ್ತೀವಿ.

ಯೆಹೋವನ ಮಾದರಿಯಿಂದ ನಾವೇನು ಕಲಿಬಹುದು?

3. (ಎ) ಯೆಹೋವ ನಮ್ಮ ಜೊತೆ ಹೇಗೆ ನಡಕೊಳ್ತಾನೆ? (ಬಿ) ಇದ್ರಿಂದ ಆತನ ಬಗ್ಗೆ ನಮಗೇನು ಗೊತ್ತಾಗುತ್ತೆ?

3 ಯೆಹೋವ ಅಪರಿಪೂರ್ಣರಾದ ನಮ್ಮ ಜೊತೆ ನಡಕೊಳ್ಳೋ ವಿಧದಿಂದಲೇ ಆತನಿಗೆ ತುಂಬ ದೀನತೆ ಇದೆ ಅನ್ನೋದು ಗೊತ್ತಾಗುತ್ತೆ. ಆತನು ನಮ್ಮ ಆರಾಧನೆಯನ್ನು ಸ್ವೀಕರಿಸೋದಲ್ಲದೇ ನಮ್ಮನ್ನು ಸ್ನೇಹಿತರಂತೆ ನೋಡ್ತಾನೆ! (ಕೀರ್ತ. 25:14) ನಮ್ಮನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಯೆಹೋವನೇ ಮೊದಲ ಹೆಜ್ಜೆ ತಗೊಂಡಿದ್ದಾನೆ. ಹೇಗಂದ್ರೆ ನಮ್ಮನ್ನು ಪಾಪದಿಂದ ಬಿಡಿಸ್ಲಿಕ್ಕಾಗಿ ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟಿದ್ದಾನೆ. ನಿಜಕ್ಕೂ ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ, ಕರುಣೆ ಇದೆ!

4. ಯೆಹೋವ ನಮಗೆ ಯಾವ ಸ್ವಾತಂತ್ರ್ಯ ಕೊಟ್ಟಿದ್ದಾನೆ ಮತ್ತು ಯಾಕೆ?

4 ಯೆಹೋವ ದೀನತೆ ತೋರಿಸಿರೋ ಇನ್ನೊಂದು ವಿಧ ನೋಡಿ. ಆತನು ನಮ್ಮಲ್ಲಿ ತನ್ನ ಗುಣ ಸ್ವಭಾವಗಳನ್ನಿಟ್ಟು ಸೃಷ್ಟಿ ಮಾಡಿದ್ದಾನೆ ಮತ್ತು ಯಾವುದು ಸರಿ ಯಾವುದು ತಪ್ಪು ಅಂತ ನಾವಾಗೇ ತೀರ್ಮಾನ ತಗೊಳ್ಳೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಸೃಷ್ಟಿಕರ್ತನಾಗಿರೋ ಆತನಿಗೆ ಇದನೆಲ್ಲಾ ನಮಗೆ ಕೊಡಬೇಕು ಅಂತೇನಿರಲಿಲ್ಲ. ಆದ್ರೂ ಕೊಟ್ಟಿದ್ದಾನೆ. ಯಾಕಂದ್ರೆ, ನಾವು ಖುಷಿಯಿಂದ ಆತನ ಸೇವೆ ಮಾಡಬೇಕು ಅನ್ನೋದೇ ಆತನ ಆಸೆ. ನಾವಾತನನ್ನು ಹೃದಯಾಳದಿಂದ ಪ್ರೀತಿಸಿ, ಆತನ ಮಾತು ಪಾಲಿಸಿ ಪ್ರಯೋಜನ ಪಡ್ಕೊಬೇಕು ಅನ್ನೋದೇ ಆತನ ಬಯಕೆ. (ಧರ್ಮೋ. 10:12; ಯೆಶಾ. 48:17, 18) ಯೆಹೋವ ತೋರಿಸಿರೋ ದೀನತೆಗಾಗಿ ನಾವು ಚಿರಋಣಿಗಳಾಗಿರಬೇಕು!

ಸ್ವರ್ಗದಲ್ಲಿ ಯೇಸು ಮತ್ತು ಅವನ ಪಕ್ಕದಲ್ಲಿ ಜೊತೆರಾಜರು ನಿಂತಿದ್ದಾರೆ. ಅವ್ರೆಲ್ರೂ ಕೋಟ್ಯಾಂತರ ದೇವದೂತ್ರನ್ನು ನೋಡ್ತಿದ್ದಾರೆ. ಕೆಲವು ದೇವದೂತ್ರು ತಮಗೆ ಸಿಕ್ಕಿರೋ ನೇಮಕವನ್ನು ಮಾಡಲು ಭೂಮಿಯ ಕಡೆಗೆ ಹೋಗ್ತಿದ್ದಾರೆ. ಈ ಚಿತ್ರದಲ್ಲಿರೋ ಎಲ್ರಿಗೂ ಯೆಹೋವ ದೇವ್ರು ಅಧಿಕಾರ ವಹಿಸಿದ್ದಾನೆ (ಪ್ಯಾರ 5 ನೋಡಿ)

5. ಯೆಹೋವ ನಮಗೆ ಹೇಗೆ ದೀನತೆ ಕಲಿಸ್ತಾನೆ? (ಮುಖಪುಟ ಚಿತ್ರ ನೋಡಿ.)

5 ನಾವು ಹೇಗೆ ದೀನತೆ ತೋರಿಸ್ಬೇಕು ಅನ್ನೋದನ್ನು ಯೆಹೋವ ತನ್ನ ಮಾದರಿ ಮೂಲಕ ಕಲಿಸ್ತಾನೆ. ಇಡೀ ವಿಶ್ವದಲ್ಲಿ ಯೆಹೋವನಷ್ಟು ವಿವೇಕಿ ಯಾರೂ ಇಲ್ಲ. ಆದ್ರೂ ಆತ ಬೇರೆಯವ್ರಿಂದ ಸಲಹೆ ಪಡಕೊಳ್ಳೋಕೆ ಹಿಂಜರಿಯಲ್ಲ. ಉದಾಹರಣೆಗೆ, ವಿಶ್ವವನ್ನು ಸೃಷ್ಟಿ ಮಾಡ್ವಾಗ ಆ ಕೆಲ್ಸದಲ್ಲಿ ಕೈಜೋಡಿಸೋಕೆ ತನ್ನ ಮಗ ಯೇಸುಗೂ ಅವಕಾಶ ಕೊಟ್ಟ. (ಜ್ಞಾನೋ. 8:27-30; ಕೊಲೊ. 1:15, 16) ಯೆಹೋವನಿಗೆ ಎಲ್ಲವನ್ನು ಮಾಡೋ ಶಕ್ತಿಯಿದ್ರೂ ಕೆಲವು ಜವಾಬ್ದಾರಿಗಳನ್ನು ಬೇರೆಯವ್ರಿಗೆ ಕೊಟ್ಟಿದ್ದಾನೆ. ಉದಾಹರಣೆಗೆ, ಯೇಸುವನ್ನು ತನ್ನ ರಾಜ್ಯದ ರಾಜನಾಗಿ ನೇಮಿಸಿದ್ದಾನೆ ಮತ್ತು 1,44,000 ಮನುಷ್ಯರಿಗೆ ಯೇಸುವಿನ ಜೊತೆ ಆಳೋಕೆ ಅಧಿಕಾರ ಕೊಟ್ಟಿದ್ದಾನೆ. (ಲೂಕ 12:32) ಯೆಹೋವನು ಯೇಸುಗೆ ರಾಜನಾಗೋಕೆ ಮತ್ತು ಮಹಾಯಾಜಕನಾಗೋಕೆ ತರಬೇತಿ ಕೊಟ್ಟಿದ್ದಾನೆ. (ಇಬ್ರಿ. 5:8, 9) ಯೇಸುವಿನ ಜೊತೆ ಆಳುವ ಸಹೋದರರಿಗೂ ನೇಮಕನ ಚೆನ್ನಾಗಿ ಮಾಡಲಿಕ್ಕೆ ತರಬೇತಿ ಕೊಡ್ತಾನೆ. ಆದ್ರೆ ಅವ್ರು ಮಾಡೋ ಪ್ರತಿಯೊಂದು ವಿಷ್ಯದಲ್ಲಿ ತಲೆ ಹಾಕದೆ ತಮ್ಮ ನೇಮಕನ ಚೆನ್ನಾಗಿ ಮಾಡ್ತಾರೆ ಅಂತ ನಂಬ್ತಾನೆ.—ಪ್ರಕ. 5:10.

ನಾವು ಯೆಹೋವನನ್ನು ಅನುಕರಿಸೋದಾದ್ರೆ ಇತರರಿಗೆ ತರಬೇತಿ ಕೊಡ್ತೇವೆ ಮತ್ತು ಜವಾಬ್ದಾರಿಗಳನ್ನು ವಹಿಸ್ತೇವೆ (ಪ್ಯಾರ 6-7 ನೋಡಿ) *

6-7. ಕುಟುಂಬದ ಯಜಮಾನರು, ಹಿರಿಯರು ಮತ್ತು ಹೆತ್ತವರು ಯೆಹೋವನಿಂದ ಏನು ಕಲಿಬಹುದು?

6 ಯಾರ ಸಹಾಯದ ಅಗತ್ಯ ಇಲ್ಲದ ಯೆಹೋವನೇ ಜವಾಬ್ದಾರಿಗಳನ್ನ ಬೇರೆಯವ್ರಿಗೆ ವಹಿಸ್ತಾನೆ ಅಂದಮೇಲೆ ಬೇರೆಯವ್ರ ಸಹಾಯ ಬೇಕಿರೋ ನಾವು ಇದನ್ನು ಇನ್ನೆಷ್ಟು ಮಾಡ್ಬೇಕು ಅಲ್ವಾ? ನೀವು ಕುಟುಂಬದ ಯಜಮಾನ ಅಥ್ವಾ ಸಭೆಯ ಹಿರಿಯರಾಗಿದ್ರೆ ಯೆಹೋವನ ತರ ಬೇರೆಯವ್ರಿಗೆ ಜವಾಬ್ದಾರಿಗಳನ್ನು ವಹಿಸಿಕೊಡಿ. ಅವ್ರು ಆ ಕೆಲಸಗಳನ್ನು ಮಾಡ್ವಾಗ ಪ್ರತಿಯೊಂದಕ್ಕೂ ತಲೆ ಹಾಕೋಕೆ ಹೋಗ್ಬೇಡಿ. ಹೀಗೆ ನೀವು ಯೆಹೋವನನ್ನು ಅನುಕರಿಸೋದಾದ್ರೆ ಹೆಚ್ಚಿನ ಕೆಲ್ಸ ಆಗುತ್ತೆ ಮತ್ತು ಬೇರೆಯವ್ರಿಗೆ ತರಬೇತಿ ಕೊಟ್ಟು ಪ್ರೋತ್ಸಾಹಿಸೋಕೂ ಆಗುತ್ತೆ. (ಯೆಶಾ. 41:10) ನೀವು ಯೆಹೋವನಿಂದ ಇನ್ನೂ ಏನೆಲ್ಲಾ ಕಲಿಬಹುದು?

7 ಯೆಹೋವ ತನ್ನ ಮಕ್ಕಳಾದ ದೇವದೂತರ ಅಭಿಪ್ರಾಯಗಳನ್ನು ಕೇಳ್ತಾನೆ ಅನ್ನೋದಕ್ಕೆ ಬೈಬಲಿನಲ್ಲಿ ಆಧಾರ ಇದೆ. (1 ಅರ. 22:19-22) ಹೆತ್ತವರೇ, ಈ ವಿಷ್ಯದಲ್ಲಿ ನೀವು ಹೇಗೆ ಯೆಹೋವನನ್ನು ಅನುಕರಿಸ್ಬಹುದು? ಕೆಲವೊಂದು ಸಂದರ್ಭದಲ್ಲಿ ನಿಮ್ಮ ಮಕ್ಕಳ ಅಭಿಪ್ರಾಯಗಳನ್ನೂ ತಿಳ್ಕೊಳ್ಳಿ. ಅದು ಸರಿ ಅನ್ಸಿದ್ರೆ ಅದ್ರಂತೆನೇ ಮಾಡಿ.

8. ಯೆಹೋವನು ಅಬ್ರಹಾಮ ಮತ್ತು ಸಾರಳ ಜೊತೆ ಹೇಗೆ ತಾಳ್ಮೆಯಿಂದ ನಡ್ಕೊಂಡನು?

8 ಯೆಹೋವ ದೇವರ ತಾಳ್ಮೆಯಲ್ಲೂ ದೀನತೆ ಕಾಣಬಹುದು. ಉದಾಹರಣೆಗೆ, ಆತನ ಸೇವಕರು ಆತನ ನಿರ್ಣಯಗಳ ಬಗ್ಗೆ ಗೌರವಪೂರ್ವಕವಾಗಿ ಪ್ರಶ್ನಿಸಿದಾಗಲೂ ತಾಳ್ಮೆಯಿಂದ ನಡಕೊಂಡನು. ಸೊದೋಮ್‌ ಗೊಮೋರದಲ್ಲಿರೋ ಎಲ್ರನ್ನೂ ನಾಶ ಮಾಡೋದು ಸರಿನಾ ಅಂತ ಅಬ್ರಹಾಮ ಅಭಿಪ್ರಾಯ ವ್ಯಕ್ತಪಡಿಸಿದಾಗ ಯೆಹೋವ ತಾಳ್ಮೆಯಿಂದ ನಡಕೊಂಡನು. (ಆದಿ. 18:22-33) ಅಬ್ರಹಾಮನ ಹೆಂಡತಿ ಸಾರಳ ಹತ್ರನೂ ತಾಳ್ಮೆಯಿಂದ ನಡಕೊಂಡನು. ಅವಳಿಗೆ ಮುಪ್ಪಿನಲ್ಲಿ ಒಬ್ಬ ಮಗ ಹುಟ್ತಾನೆ ಅಂತ ಹೇಳ್ದಾಗ ಅವಳು ನಗಾಡಿದಳು. ಆದ್ರೆ ಯೆಹೋವ ಕೋಪ ಮಾಡಿಕೊಳ್ಳಲಿಲ್ಲ. (ಆದಿ. 18:10-14) ಗೌರವದಿಂದ ನಡ್ಕೊಂಡನು.

9. ಹೆತ್ತವರು ಮತ್ತು ಹಿರಿಯರು ಯೆಹೋವನ ಮಾದರಿಯಿಂದ ಏನನ್ನು ಕಲಿಬಹುದು?

9 ಹೆತ್ತವರು ಮತ್ತು ಹಿರಿಯರು ಯೆಹೋವನ ಮಾದರಿಯಿಂದ ಏನು ಕಲಿಬಹುದು? ನಿಮ್ಮ ನಿರ್ಣಯಗಳನ್ನು ನಿಮ್ಮ ಮಕ್ಕಳು ಅಥ್ವಾ ಸಹೋದರ ಸಹೋದರಿಯರು ಒಪ್ಪದೇ ಇದ್ದಾಗ ನೀವು ಹೇಗೆ ನಡಕೊಳ್ತೀರಾ? ನೀವು ಮಾಡಿದ ನಿರ್ಣಯನೇ ಸರಿ ಅಂತ ವಾದಿಸ್ತೀರಾ? ಅಥ್ವಾ ಅವ್ರು ಹೇಳೋದನ್ನು ಅರ್ಥಮಾಡಿಕೊಳ್ಳೋಕೆ ಪ್ರಯತ್ನಿಸ್ತೀರಾ? ಜವಾಬ್ದಾರಿಯುತ ಸ್ಥಾನದಲ್ಲಿರುವವ್ರು ಯೆಹೋವನನ್ನು ಅನುಕರಿಸಿದ್ರೆ ಕುಟುಂಬ ಮತ್ತು ಸಭೆಯಲ್ಲಿರುವವರು ಖಂಡಿತ ಪ್ರಯೋಜನ ಪಡಕೊಳ್ತಾರೆ. ಇಲ್ಲಿಯವರೆಗೂ ಯೆಹೋವನ ತರ ನಾವು ಹೇಗೆ ದೀನತೆ ತೋರಿಸ್ಬಹುದು ಅಂತ ಕಲಿತ್ವಿ. ಈಗ ಇತಿಮಿತಿಗಳನ್ನು ಅರ್ಥಮಾಡ್ಕೊಂಡು ನಡ್ಕೊಳ್ಳೋ ವಿಷ್ಯದಲ್ಲಿ ಬೈಬಲಿನಲ್ಲಿರುವ ಉದಾಹರಣೆಯಿಂದ ಏನು ಕಲಿಬಹುದು ಅಂತ ನೋಡೋಣ.

ಬೇರೆಯವ್ರ ಮಾದರಿಯಿಂದ ನಾವೇನು ಕಲಿಬಹುದು?

10. ಯೆಹೋವನು ನಮಗೆ ಕಲಿಸಲಿಕ್ಕಾಗಿ ಬೇರೆಯವ್ರ ಮಾದರಿಗಳನ್ನು ಹೇಗೆ ಬಳಸ್ತಾನೆ?

10 ನಮ್ಮ ‘ಮಹಾನ್‌ ಬೋಧಕನಾದ’ ಯೆಹೋವನು ನಮಗೆ ಕಲಿಸಲಿಕ್ಕಾಗಿ ಬೈಬಲಿನಲ್ಲಿ ಕೆಲವು ವ್ಯಕ್ತಿಗಳ ಬಗ್ಗೆ ಬರೆಸಿಟ್ಟಿದ್ದಾನೆ. (ಯೆಶಾ. 30:20, 21) ಅವ್ರ ಬಗ್ಗೆ ಧ್ಯಾನಿಸಿದ್ರೆ ಅವ್ರು ಹೇಗೆ ದೇವರು ಮೆಚ್ಚೋ ಗುಣಗಳನ್ನು ತೋರಿಸಿದ್ರು, ಉದಾಹರಣೆಗೆ ನಮ್ರತೆಯಂಥ ಗುಣವನ್ನು ಹೇಗೆ ತೋರಿಸಿದ್ರು ಅನ್ನೋದನ್ನು ಕಲಿಯುತ್ತೇವೆ. ಬೈಬಲಿನಲ್ಲಿ ನಮ್ರತೆ ಗುಣ ತೋರಿಸದ ಅಥ್ವಾ ತಮ್ಮ ಇತಿಮಿತಿಗಳನ್ನು ಮೀರಿ ನಡಕೊಂಡವ್ರ ಉದಾಹರಣೆಗಳೂ ಇವೆ. ಅವ್ರಲ್ಲಿ ಈ ಗುಣ ಇಲ್ಲದಿದ್ದ ಕಾರಣ ಏನಾಯ್ತು ಅನ್ನೋದನ್ನು ಸಹ ನಾವು ಕಲಿಬಹುದು.—ಕೀರ್ತ. 37:37; 1 ಕೊರಿಂ. 10:11.

11. ಸೌಲನ ಕೆಟ್ಟ ಮಾದರಿಯಿಂದ ನಾವೇನು ಕಲಿಬಹುದು?

11 ರಾಜ ಸೌಲನ ಉದಾಹರಣೆ ನೋಡಿ. ಆರಂಭದಲ್ಲಿ ಅವನಿಗೆ ತುಂಬ ನಮ್ರತೆ ಇತ್ತು. ತನ್ನ ಇತಿಮಿತಿ ಗೊತ್ತಿದ್ರಿಂದ ಮಹತ್ವದ ಜವಾಬ್ದಾರಿ ಸಿಕ್ಕಾಗ ಅದನ್ನು ಸ್ವೀಕರಿಸೋಕೆ ಹಿಂಜರಿದ. (1 ಸಮು. 9:21; 10:20-22) ಆದ್ರೆ ರಾಜನಾದ ಮೇಲೆ ಅವನಲ್ಲಿ ಅಹಂಕಾರ ಚಿಗುರೊಡೆದು ತಾನು ಮಾಡಬಾರದಾಗಿದ್ದ ಕೆಲಸ ಮಾಡೋಕೆ ಮುಂದಾದ. ಒಮ್ಮೆ ಪ್ರವಾದಿ ಸಮುವೇಲ ಬಂದು ಯಜ್ಞ ಅರ್ಪಿಸುವವರೆಗೂ ಅವನು ತಾಳ್ಮೆಯಿಂದ ಕಾಯಬೇಕಿತ್ತು. ಆದ್ರೆ ಸಮುವೇಲ ಬರೋದು ತಡವಾದಾಗ ಅವನು ತಾಳ್ಮೆ ಕಳಕೊಂಡ. ಯಜ್ಞ ಅರ್ಪಿಸೋ ಅಧಿಕಾರ ತನಗಿಲ್ಲದಿದ್ರು ಅದನ್ನು ಅರ್ಪಿಸಿದ. ಯೆಹೋವ ತನ್ನ ಜನ್ರನ್ನು ಕಾಪಾಡ್ತಾನೆ ಅಂತ ಅವನು ಭರವಸೆ ಇಡೋ ಬದ್ಲು ವಿಷ್ಯನಾ ತಾನೇ ನಿರ್ವಹಿಸೋದಕ್ಕೆ ಮುಂದಾದ. ಪರಿಣಾಮ ಏನಾಯ್ತು? ಯೆಹೋವನ ಮೆಚ್ಚುಗೆ ಕಳಕೊಂಡ, ರಾಜನ ಸ್ಥಾನನೂ ಕಳಕೊಂಡ. (1 ಸಮು. 13:8-14) ನಾವ್ಯಾವತ್ತೂ ಸೌಲನ ತರ ಆಗಬಾರ್ದು, ನಮ್ಗೆ ಅಧಿಕಾರವಿರದ ಕೆಲಸ ಮಾಡೋಕೆ ಯಾವತ್ತೂ ಹೋಗಬಾರ್ದು.

12. ದಾನಿಯೇಲ ಯಾವ ವಿಷ್ಯದಲ್ಲಿ ಒಳ್ಳೇ ಮಾದರಿಯಿಟ್ಟ?

12 ಪ್ರವಾದಿ ದಾನಿಯೇಲನ ಉದಾಹರಣೆ ನೋಡಿ. ಅವನು ರಾಜ ಸೌಲನ ತರ ಇರ್ಲಿಲ್ಲ. ಜೀವನಪೂರ್ತಿ ದೀನ ವ್ಯಕ್ತಿಯಾಗಿದ್ದು ಪ್ರತಿಯೊಂದು ವಿಷ್ಯದಲ್ಲೂ ಯೆಹೋವನ ಮಾರ್ಗದರ್ಶನವನ್ನ ಚಾಚೂತಪ್ಪದೆ ಪಾಲಿಸ್ತಿದ್ದ. ಒಂದು ಸಂದರ್ಭದಲ್ಲಿ ಯೆಹೋವನ ಸಹಾಯದಿಂದ ರಾಜ ನೆಬೂಕದ್ನೆಚ್ಚರ ಕಂಡ ಕನಸಿನ ಅರ್ಥ ವಿವರಿಸಿದ. ಆದ್ರೆ ಇದನ್ನು ತನ್ನ ಸ್ವಂತ ಸಾಮರ್ಥ್ಯದಿಂದ ವಿವರಿಸಿದೆ ಅಂತ ಹೇಳಲಿಲ್ಲ. ಬದ್ಲಿಗೆ ಯೆಹೋವನ ಸಹಾಯದಿಂದ ವಿವರಿಸಿದೆ ಅಂತ ಹೇಳಿ ಮಹಿಮೆಯನ್ನ ಯೆಹೋವನಿಗೆ ಸಲ್ಲಿಸಿದ. (ದಾನಿ. 2:26-28) ಇದ್ರಿಂದ ನಾವು ಯಾವ ಪಾಠ ಕಲಿಬಹುದು? ನಮ್ಮ ಭಾಷಣ ಚೆನ್ನಾಗಿತ್ತು ಅಂತ ಎಲ್ರೂ ಹೊಗಳಿದಾಗ ಅಥ್ವಾ ಸೇವೆಯಲ್ಲಿ ನಮ್ಗೆ ಒಳ್ಳೇ ಪ್ರತಿಫಲ ಸಿಕ್ಕಾಗ ನಮ್ಮ ಬಗ್ಗೆ ನಾವೇ ಹೆಮ್ಮೆ ಪಡಬಾರ್ದು. ಎಲ್ಲಾ ಮಹಿಮೆನ ಯೆಹೋವನಿಗೆ ಸಲ್ಲಿಸ್ಬೇಕು. ಯೆಹೋವನ ಸಹಾಯದಿಂದಲೇ ಇದನ್ನೆಲ್ಲಾ ಮಾಡೋಕೆ ಆಗಿದ್ದು ಅಂತ ದೀನತೆಯಿಂದ ಒಪ್ಪಿಕೊಳ್ಬೇಕು. (ಫಿಲಿ. 4:13) ನಮ್ಮಲ್ಲಿ ಇಂಥ ಸ್ವಭಾವ ಇದ್ರೆ ಯೇಸುವನ್ನೂ ಅನುಕರಿಸಿದಂತಾಗುತ್ತೆ. ಹೇಗೆ?

13. ಯೋಹಾನ 5:19, 30 ರಿಂದ ಯೇಸು ಬಗ್ಗೆ ನಾವೇನು ಕಲಿಬಹುದು?

13 ಯೇಸು ಯೆಹೋವನ ಮಗನಾಗಿದ್ರೂ ಯಾವಾಗ್ಲೂ ಯೆಹೋವನ ಮೇಲೆ ಆತುಕೊಂಡಿದ್ದನು. (ಯೋಹಾನ 5:19, 30 ಓದಿ.) ತನ್ನ ತಂದೆಗಿದ್ದ ಅಧಿಕಾರವನ್ನು ಕಸಿದುಕೊಳ್ಳಲು ಯಾವತ್ತಿಗೂ ಪ್ರಯತ್ನಿಸಲಿಲ್ಲ. ಫಿಲಿಪ್ಪಿ 2:6 ಯೇಸುವಿನ ಬಗ್ಗೆ ಹೀಗೆ ಹೇಳುತ್ತೆ: “ಅವನು [ಯೇಸು] . . . ವಶಪಡಿಸಿಕೊಳ್ಳುವುದಕ್ಕೆ ಅಂದರೆ ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ.” ದೇವರ ಮಗನಾಗಿ ಯೇಸು ಯಾವಾಗಲೂ ತನ್ನ ತಂದೆ ಹೇಳಿದಂತೆಯೇ ನಡಕೊಂಡ. ಅವನಿಗೆ ತನ್ನ ಇತಿಮಿತಿಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು ಮತ್ತು ತನ್ನ ತಂದೆಯ ಅಧಿಕಾರದ ಕಡೆಗೆ ತುಂಬ ಗೌರವ ಇತ್ತು.

ಯೇಸುಗೆ ತನ್ನ ಇತಿಮಿತಿಗಳ ಬಗ್ಗೆ ಗೊತ್ತಿತ್ತು ಮತ್ತು ತನ್ನ ಅಧಿಕಾರದಲ್ಲಿ ಇಲ್ಲದ ಕೆಲ್ಸನ ಅವ್ನು ಯಾವತ್ತೂ ಮಾಡ್ಲಿಲ್ಲ (ಪ್ಯಾರ 14 ನೋಡಿ)

14. ತನ್ನ ಅಧಿಕಾರದಲ್ಲಿಲ್ಲದ ಒಂದು ವಿಷ್ಯ ಕೇಳಿಕೊಂಡಾಗ ಯೇಸು ಏನು ಮಾಡಿದ?

14 ಒಮ್ಮೆ ಯಾಕೋಬ, ಯೋಹಾನ ಮತ್ತು ಅವರ ತಾಯಿ ಒಂದು ವಿನಂತಿ ಮಾಡಿದಾಗ ಯೇಸು ಏನು ಮಾಡಿದ ಅಂತ ನೋಡಿ. ಅವರ ತಾಯಿ, ‘ನಿನ್ನ ರಾಜ್ಯದಲ್ಲಿ ನನ್ನ ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿ ಕುಳಿತುಕೊಳ್ಳುವಂತೆ ಮಾತುಕೊಡು’ ಅಂತ ಕೇಳಿದ್ಳು. ಯೇಸು ತಕ್ಷಣ, ‘ನನ್ನ ಎಡಗಡೆ ಮತ್ತು ಬಲಗಡೆ ಯಾರು ಕೂತುಕೊಳ್ಬೇಕು ಅಂತ ತೀರ್ಮಾನ ಮಾಡೋ ಅಧಿಕಾರ ನನ್ನದಲ್ಲ, ನನ್ನ ತಂದೆಯದು’ ಅಂತ ನೇರವಾಗಿ ಹೇಳಿದ. ಯಾಕಂದ್ರೆ ಅದನ್ನು ತೀರ್ಮಾನಿಸೋ ಅಧಿಕಾರ ತನಗಿಲ್ಲ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. (ಮತ್ತಾ. 20:20-23) ಯೇಸು ತನ್ನ ಇತಿಮಿತಿಗಳನ್ನು ಮೀರಿ ನಡಲಿಲ್ಲ. ನಿಜವಾಗ್ಲೂ ಅವನು ದೀನನಾಗಿದ್ದನು. ಅವನು ಯೆಹೋವ ಹೇಳಿದಂತೆ ನಡಕೊಂಡನೇ ಹೊರತು ಯಾವತ್ತಿಗೂ ಅವನ ಮನಸ್ಸಿಗೆ ಬಂದಂತೆ ನಡಕೊಳ್ಳಲಿಲ್ಲ. (ಯೋಹಾ. 12:49) ನಾವು ಹೇಗೆ ಯೇಸುವನ್ನು ಅನುಕರಿಸಬಹುದು?

ನಾವು ಹೇಗೆ ಯೇಸು ತರ ನಮ್ರರಾಗಿ ನಡ್ಕೊಳ್ಳಬಹುದು? (ಪ್ಯಾರ 15-16 ನೋಡಿ) *

15-16. ಒಂದನೇ ಕೊರಿಂಥ 4:6 ರಲ್ಲಿರೋ ಸಲಹೆಯನ್ನು ನಾವು ಹೇಗೆ ಅನ್ವಯಿಸಬಹುದು?

15 ಒಂದನೇ ಕೊರಿಂಥ 4:6 ರಲ್ಲಿರೋ ಸಲಹೆಯನ್ನು ಅನ್ವಯಿಸಿದ್ರೆ ನಾವೂ ಯೇಸುವಿನಂತೆ ನಡ್ಕೊಳ್ತೇವೆ. “ಬರೆದಿರುವ ಸಂಗತಿಗಳನ್ನು ಮೀರಿಹೋಗಬೇಡಿ” ಅಂತ ಅದು ತಿಳ್ಸುತ್ತೆ. ಹಾಗಾಗಿ ಯಾರಾದ್ರೂ ನಮ್ಮ ಹತ್ರ ಸಲಹೆ ಕೇಳಿದ್ರೆ ನಮ್ಮ ಸ್ವಂತ ಅಭಿಪ್ರಾಯವನ್ನ ಹೇಳಬಾರ್ದು ಅಥ್ವಾ ಹಿಂದೆ ಮುಂದೆ ಯೋಚಿಸದೆ ಕೂಡಲೇ ಸಲಹೆ ಕೊಡೋಕೆ ಹೋಗಬಾರ್ದು. ಬದ್ಲಿಗೆ ಬೈಬಲಿನಲ್ಲಿರೋ, ಬೈಬಲಾಧಾರಿತ ಪ್ರಕಾಶನಗಳಲ್ಲಿರೋ ಸಲಹೆ ತಿಳಿಸ್ಬೇಕು. ಹೀಗೆ ಮಾಡಿದ್ರೆ ನಮ್ಮ ಇತಿಮಿತಿಗಳ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಅಂತ ತೋರಿಸಿಕೊಡ್ತೇವೆ. ಒಳ್ಳೇ ಸಲಹೆಗಳನ್ನು ಕೊಡೋಕೆ ಆಗುವುದು ಯೆಹೋವನೊಬ್ಬನಿಗೆ ಹೊರತು ನಮಗಲ್ಲ ಅಂತ ಅರ್ಥಮಾಡ್ಕೊಂಡು ದೀನರಾಗಿರುತ್ತೇವೆ.—ಪ್ರಕ 15:3, 4.

16 ನಾವು ದೀನರಾಗಿ ನಡ್ಕೊಂಡ್ರೆ ಯೆಹೋವನಿಗೆ ಮಹಿಮೆ ಸಲ್ಲಿಸ್ತೇವೆ ಅಂತ ಇಲ್ಲಿವರೆಗೂ ನೋಡಿದ್ವಿ. ನಾವು ದೀನರಾಗಿದ್ರೆ ಮತ್ತು ನಮ್ಮ ಇತಿಮಿತಿಗಳನ್ನು ಅರ್ಥಮಾಡ್ಕೊಂಡು ನಡೆದ್ರೆ ಹೇಗೆ ಸಂತೋಷವಾಗಿರ್ತೇವೆ ಮತ್ತು ಬೇರೆಯವ್ರ ಜೊತೆ ಹೇಗೆ ನಡಕೊಳ್ತೇವೆ ಅನ್ನೋದನ್ನು ಈಗ ನೋಡೋಣ.

ದೀನತೆ ಇದ್ರೆ ಯಾವ ಪ್ರಯೋಜನಗಳು ಸಿಗುತ್ತವೆ?

17. ದೀನತೆ ಇರುವವ್ರು ಯಾಕೆ ಖುಷಿಯಾಗಿರ್ತಾರೆ?

17 ನಮ್ಮಲ್ಲಿ ದೀನತೆ ಇದ್ರೆ ತುಂಬ ಖುಷಿಯಾಗಿರ್ತೇವೆ. ಯಾಕಂದ್ರೆ ದೀನತೆ ಇದ್ರೆ ಕೆಲ್ವೊಂದು ವಿಷ್ಯನಾ ನಾವು ಮಾಡೋಕಾಗಲ್ಲ ಅಂತ ಒಪ್ಪಿಕೊಳ್ತೇವೆ ಮತ್ತು ಬೇರೆಯವ್ರ ಸಹಾಯ ಪಡೆಯೋಕೆ ರೆಡಿ ಇರ್ತೇವೆ. ಅವ್ರು ಮಾಡೋ ಸಹಾಯಕ್ಕೆ ಕೃತಜ್ಞರಾಗಿರ್ತೇವೆ. ಉದಾಹರಣೆಗೆ, ಯೇಸು ಹತ್ತು ಮಂದಿ ಕುಷ್ಟರೋಗಿಗಳನ್ನು ವಾಸಿಮಾಡ್ದಾಗ ಏನಾಯ್ತು ಅಂತ ನೋಡಿ. ಆ ಹತ್ತು ಮಂದಿಯಲ್ಲಿ ಒಬ್ಬ ಮಾತ್ರ ಯೇಸುಗೆ ಕೃತಜ್ಞತೆ ಹೇಳಿದ. ಯಾಕಂದ್ರೆ ಆ ವ್ಯಕ್ತಿ ದೀನನಾಗಿದ್ದ ಮತ್ತು ಆ ಗಂಭೀರ ಕಾಯಿಲೆಯನ್ನ ವಾಸಿಮಾಡಿಕೊಳ್ಳೋ ಸಾಮರ್ಥ್ಯ ತನಗಿಲ್ಲ ಅನ್ನೋದನ್ನು ಅರ್ಥಮಾಡ್ಕೊಂಡಿದ್ದ. ಹಾಗಾಗಿ ಯೇಸು ಕೊಟ್ಟ ಸಹಾಯಕ್ಕೆ ಅವನು ಕೃತಜ್ಞನಾದ ಮತ್ತು ದೇವರಿಗೆ ಮಹಿಮೆ ಸಲ್ಲಿಸಿದ.—ಲೂಕ 17:11-19.

18. ಬೇರೆಯವರ ಜೊತೆ ಹೊಂದಿಕೊಳ್ಳೋಕೆ ದೀನತೆ ಹೇಗೆ ಸಹಾಯ ಮಾಡುತ್ತೆ? (ರೋಮನ್ನರಿಗೆ 12:10)

18 ದೀನತೆ ಇರೋವ್ರು ಬೇರೆಯವ್ರ ಜೊತೆ ಚೆನ್ನಾಗಿ ಹೊಂದಿಕೊಳ್ತಾರೆ, ಅವ್ರಿಗೆ ಹೆಚ್ಚು ಸ್ನೇಹಿತರು ಇರ್ತಾರೆ. ಯಾಕಂದ್ರೆ ಅವ್ರು, ಬೇರೆಯವರಲ್ಲೂ ಒಳ್ಳೇ ಗುಣಗಳಿವೆ ಅನ್ನೋದನ್ನು ಗುರ್ತಿಸ್ತಾರೆ ಮತ್ತು ಅವ್ರಲ್ಲಿ ಭರವಸೆ ಇಡ್ತಾರೆ. ಬೇರೆಯವ್ರು ನೇಮಕವನ್ನ ಚೆನ್ನಾಗಿ ಮಾಡ್ದಾಗ ಸಂತೋಷಪಡ್ತಾರೆ ಮತ್ತು ಮನಸಾರೆ ಶ್ಲಾಘಿಸಿ, ಗೌರವಿಸ್ತಾರೆ.—ರೋಮನ್ನರಿಗೆ 12:10 ಓದಿ.

19. ನಾವ್ಯಾಕೆ ಅಹಂಕಾರಿಗಳಾಗಿ ಇರಬಾರ್ದು?

19 ಇದಕ್ಕೆ ತದ್ವಿರುದ್ಧವಾಗಿ ಅಹಂಕಾರಿಗಳು ಬೇರೆಯವ್ರನ್ನು ಹೊಗಳಲ್ಲ, ಬದ್ಲಿಗೆ ಎಲ್ರೂ ತಮ್ಮನ್ನು ಹೊಗಳಬೇಕು ಅಂತ ಬಯಸ್ತಾರೆ. ಅಷ್ಟೇ ಅಲ್ಲ, ತಾವೊಬ್ಬರೇ ಎಲ್ಲ ಕೆಲ್ಸನೂ ಚೆನ್ನಾಗಿ ಮಾಡೋದು ಅಂತ ಅಂದುಕೊಳ್ತಾರೆ. ಯಾರಾದ್ರೂ ಒಂದು ಕೆಲ್ಸನ ಚೆನ್ನಾಗಿ ಮಾಡಿದ್ರೆ ಇವ್ರು ಅದಕ್ಕಿಂತ ಚೆನ್ನಾಗಿ ಮಾಡೋಕೆ ಪ್ರಯತ್ನಿಸ್ತಾರೆ. ಅಹಂಕಾರಿಗಳು ಬೇರೆಯವ್ರಿಗೆ ತರಬೇತಿ ಕೊಡಲ್ಲ ಮತ್ತು ಅಧಿಕಾರವನ್ನೂ ವಹಿಸಿಕೊಡಲ್ಲ. ಯಾಕಂದ್ರೆ, “ಒಂದು ಕೆಲ್ಸ ಚೆನ್ನಾಗಿ ಆಗ್ಬೇಕಂದ್ರೆ ನಾನೇ ಕೈಹಾಕ್ಬೇಕು, ಅದನ್ನು ಬೇರೆಯವ್ರು ಮಾಡಿದ್ರೆ ಸರಿಯಾಗಲ್ಲ” ಅಂತ ಅಂದುಕೊಳ್ತಾರೆ. ಅಹಂಕಾರ ಇರೋ ವ್ಯಕ್ತಿ ಎಲ್ರಿಗಿಂತ ತಾನೇ ಮುಂದಿರಬೇಕು ಅಂತ ಬಯಸ್ತಾನೆ ಮತ್ತು ಒಂದು ಕೆಲ್ಸನ ಅವ್ನಿಗಿಂತ ಬೇರೆಯವ್ರು ಚೆನ್ನಾಗಿ ಮಾಡಿದ್ರೆ ಹೊಟ್ಟೆಕಿಚ್ಚುಪಡ್ತಾನೆ. (ಗಲಾ. 5:26) ಅಂಥವ್ರಿಗೆ ಸ್ನೇಹಿತರು ಕಡಿಮೆ. ಒಂದುವೇಳೆ ನಮ್ಮಲ್ಲಿ ಇಂಥ ಸ್ವಭಾವ ಇದ್ರೆ ನಮ್ಮ ‘ಮನಸ್ಸನ್ನು ಮಾರ್ಪಡಿಸಿಕೊಳ್ಳಲು’ ಸಹಾಯ ಮಾಡಪ್ಪಾ ಅಂತ ಯೆಹೋವನತ್ರ ಬಿಡದೆ ಪ್ರಾರ್ಥಿಸಬೇಕು. ಹೀಗೆ ಮಾಡಿದ್ರೆ ಯೆಹೋವನ ಸಹಾಯದಿಂದ ಅಹಂಕಾರವನ್ನ ಬೇರುಸಮೇತ ಕಿತ್ತುಹಾಕೋಕೆ ಸಾಧ್ಯವಾಗುತ್ತೆ.—ರೋಮ. 12:2.

20. ನಾವ್ಯಾಕೆ ದೀನತೆ ತೋರಿಸ್ತಾ ನಮ್ರರಾಗಿ ನಡಕೊಳ್ಬೇಕು?

20 ದೀನತೆ ತೋರಿಸೋದ್ರಲ್ಲಿ ಯೆಹೋವನೇ ಮಾದರಿ ಇಟ್ಟಿರೋದ್ರಿಂದ ನಾವಾತನಿಗೆ ಕೃತಜ್ಞರಾಗಿರಬೇಕಲ್ವಾ? ಯೆಹೋವನು ತನ್ನ ಸೇವಕರ ಜೊತೆ ದೀನತೆಯಿಂದ ನಡ್ಕೊಂಡ ಹಾಗೆ ನಾವು ಬೇರೆಯವ್ರ ಜೊತೆ ದೀನತೆಯಿಂದ ನಡ್ಕೊಳ್ಳೋಣ. ಅಷ್ಟೇ ಅಲ್ಲ, ಬೈಬಲಿನಲ್ಲಿ ದಾಖಲಾಗಿರೋ ಯೆಹೋವನ ದೀನ ಸೇವಕರ ಮಾದರಿಯನ್ನೂ ಅನುಕರಿಸೋಣ. ಯೆಹೋವ ದೇವರಿಗೆ ಸಲ್ಲಬೇಕಾದ ಗೌರವ ಮತ್ತು ಮಹಿಮೆನಾ ಯಾವಾಗಲೂ ಸಲ್ಲಿಸೋಣ. (ಪ್ರಕ. 4:11) ಇದನ್ನೆಲ್ಲಾ ಮಾಡಿದ್ರೆ ದೀನ ಜನ್ರನ್ನು ಪ್ರೀತಿಸುವ ನಮ್ಮ ತಂದೆಯಾದ ಯೆಹೋವನ ಸ್ನೇಹಿತರಾಗ್ತೇವೆ!

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

^ ಪ್ಯಾರ. 5 ದೀನತೆ ಇರೋ ವ್ಯಕ್ತಿಗೆ ಬೇರೆಯವರ ಮೇಲೆ ಕನಿಕರ ಇರುತ್ತೆ. ಅಂದಮೇಲೆ ಯೆಹೋವನಿಗೆ ದೀನತೆ ಇದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದೀನತೆ ತೋರಿಸೋ ವಿಷ್ಯದಲ್ಲಿ ಯೆಹೋವನ ಮಾದರಿಯಿಂದ ನಾವೇನು ಕಲಿಬಹುದು ಅಂತ ಈ ಲೇಖನದಲ್ಲಿ ತಿಳಿಯಲಿದ್ದೇವೆ. ಅದ್ರ ಜೊತೆಗೆ ನಮ್ರತೆ ಅಥ್ವಾ ನಮ್ಮ ಇತಿಮಿತಿಗಳನ್ನು ಅರ್ಥಮಾಡ್ಕೊಂಡು ನಡಕೊಳ್ಳೋ ವಿಷ್ಯದಲ್ಲಿ ರಾಜ ಸೌಲ, ಪ್ರವಾದಿ ದಾನಿಯೇಲ ಮತ್ತು ಯೇಸುವಿನ ಉದಾಹರಣೆಯಿಂದ ಏನು ಕಲಿಬಹುದು ಅನ್ನೋದನ್ನೂ ನೋಡಲಿದ್ದೇವೆ.

^ ಪ್ಯಾರ. 58 ಚಿತ್ರ ವಿವರಣೆ: ಒಬ್ಬ ಹಿರಿಯ ಸಮಯ ಮಾಡಿಕೊಂಡು ಯುವ ಸಹೋದರನಿಗೆ ಸಭೆಯ ಟೆರಿಟೊರಿ ನೋಡ್ಕೊಳ್ಳಲು ತರಬೇತಿ ಕೊಡ್ತಿದ್ದಾನೆ. ಯುವ ಸಹೋದರನು ಆ ನೇಮಕವನ್ನ ಮಾಡ್ವಾಗ ಹಿರಿಯ ಅದ್ರಲ್ಲಿ ತಲೆ ಹಾಕ್ತಿಲ್ಲ.

^ ಪ್ಯಾರ. 62 ಚಿತ್ರ ವಿವರಣೆ: ಚರ್ಚಿನಲ್ಲಿ ನಡೆಯೋ ಮದುವೆಗೆ ಹೋಗ್ಬಹುದಾ ಅಂತ ಒಬ್ಬ ಸಹೋದರಿ ಹಿರಿಯನನ್ನು ಕೇಳ್ತಿದ್ದಾಳೆ. ಆಗ ಹಿರಿಯ ತನ್ನ ಸ್ವಂತ ಅಭಿಪ್ರಾಯ ಹೇಳದೆ ಬೈಬಲಲ್ಲಿರೋ ತತ್ವ ತೋರಿಸ್ತಿದ್ದಾನೆ.