ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 33

ಇರೋ ನೇಮಕವನ್ನ ಖುಷಿಯಿಂದ ಮಾಡಿ

ಇರೋ ನೇಮಕವನ್ನ ಖುಷಿಯಿಂದ ಮಾಡಿ

“ಬಯಕೆಗಳ ಬೆನ್ನು ಹತ್ತೋದಕ್ಕಿಂತ ಕಣ್ಮುಂದೆ ಇರೋದನ್ನ ಆನಂದಿಸೋದೇ ಮೇಲು.”—ಪ್ರಸಂ. 6:9.

ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು

ಕಿರುನೋಟ *

1. ಯೆಹೋವ ದೇವರ ಸೇವೆ ಮಾಡೋಕೆ ಕೆಲವರು ಯಾವ್ಯಾವ ಗುರಿ ಇಟ್ಟಿದ್ದಾರೆ?

 ಲೋಕದ ಅಂತ್ಯ ಹತ್ರ ಆಗ್ತಿರೋದ್ರಿಂದ ನಮಗೆ ಮಾಡೋಕೆ ತುಂಬ ಕೆಲಸಗಳಿವೆ. (ಮತ್ತಾ. 24:14; ಲೂಕ 10:2; 1 ಪೇತ್ರ 5:2) ಅದಕ್ಕೆ ನಾವು ನಮ್ಮಿಂದ ಆದಷ್ಟು ಜಾಸ್ತಿ ಸೇವೆ ಮಾಡಬೇಕು ಅಂದುಕೊಂಡಿದ್ದೀವಿ. ಅದಕ್ಕೋಸ್ಕರ ಬೇರೆಬೇರೆ ಗುರಿಗಳನ್ನೂ ಇಟ್ಟಿದ್ದೀವಿ. ಕೆಲವರು ಪಯನೀಯರ್‌ ಸೇವೆ ಮಾಡಬೇಕು ಅಂದುಕೊಂಡಿದ್ದಾರೆ. ಇನ್ನೂ ಕೆಲವರು ಬೆತೆಲ್‌ ಅಥವಾ ಕಟ್ಟಡ ನಿರ್ಮಾಣ ಕೆಲಸದಲ್ಲಿ ಸೇವೆಮಾಡಬೇಕು ಅಂದುಕೊಂಡಿದ್ದಾರೆ. ಇನ್ನೂ ಎಷ್ಟೋ ಸಹೋದರರು ಸಹಾಯಕ ಸೇವಕರಾಗಿ ಅಥವಾ ಹಿರಿಯರಾಗಿ ಸೇವೆ ಮಾಡೋ ಗುರಿ ಇಟ್ಟಿದ್ದಾರೆ. (1 ತಿಮೊ. 3:1, 8) ಈ ತರ ಸೇವೆ ಮಾಡೋಕೆ ತಾವಾಗೇ ಮುಂದೆ ಬರುತ್ತಿರೋ ಸಹೋದರ ಸಹೋದರಿಯರನ್ನ ನೋಡಿ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ.—ಕೀರ್ತ. 110:3; ಯೆಶಾ. 6:8.

2. ಗುರಿ ಮುಟ್ಟೋಕೆ ಆಗದೆ ಇದ್ದಾಗ ನಮಗೆ ಹೇಗನಿಸುತ್ತೆ?

2 ಗುರಿಯಿಟ್ಟು ತುಂಬ ಸಮಯ ಆದ್ರೂ ಇನ್ನೂ ಅದನ್ನ ಮುಟ್ಟೋಕೆ ಆಗದೇ ಇದ್ದಾಗ ತುಂಬ ಬೇಜಾರಾಗುತ್ತೆ. ವಯಸ್ಸಾಗಿರೋದ್ರಿಂದ, ಅನುಕೂಲವಾದ ಪರಿಸ್ಥಿತಿ ಇಲ್ಲದೇ ಇರೋದ್ರಿಂದ ಅಥವಾ ಬೇರೆ ಕಾರಣಗಳಿಂದ ಗುರಿ ಮುಟ್ಟೋಕೆ ಆಗದೆ ಇದ್ದಾಗಲೂ ಬೇಜಾರಾಗುತ್ತೆ. (ಜ್ಞಾನೋ. 13:12) ಮೆಲೀಸಾ * ಅನ್ನೋ ಸಹೋದರಿಗೆ ಬೆತೆಲಿಗೆ ಹೋಗಿ ಸೇವೆ ಮಾಡೋಕೆ ಅಥವಾ ರಾಜ್ಯ ಪ್ರಚಾರಕರ ಶಾಲೆಗೆ ಹೋಗೋಕೆ ತುಂಬ ಇಷ್ಟ ಇತ್ತು. ಆದ್ರೆ ‘ನನಗೆ ವಯಸ್ಸಾಗಿದ್ರಿಂದ ಅದೆಲ್ಲಾ ಕನಸಾಗೇ ಉಳೀತು. ಅದನ್ನ ನೆನಸಿಕೊಂಡ್ರೆ ಕೆಲವೊಮ್ಮೆ ಬೇಜಾರಾಗುತ್ತೆ’ ಅಂತ ಅವರು ಹೇಳ್ತಾರೆ.

3. ಕೆಲವೊಂದು ಜವಾಬ್ದಾರಿಗಳನ್ನ ಪಡಕೊಳ್ಳಬೇಕಂದ್ರೆ ನಾವೇನು ಮಾಡಬೇಕು?

3 ಯುವ ಸಹೋದರರಿಗೆ ಹೆಚ್ಚಾಗಿ ಒಳ್ಳೇ ಆರೋಗ್ಯ, ಬುದ್ಧಿ, ಚುರುಕುತನ, ಕಲಿಯೋ ಮನಸ್ಸು ಇರುತ್ತೆ. ಆದ್ರೆ ಅವರು ಕೆಲವು ಜವಾಬ್ದಾರಿಗಳನ್ನ ಪಡಕೊಳ್ಳಬೇಕಂದ್ರೆ ಪ್ರೌಢತೆ ಮತ್ತು ಇನ್ನೂ ಕೆಲವು ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳಬೇಕಾಗುತ್ತೆ. ತಾಳ್ಮೆ ತೋರಿಸೋಕೆ, ಶಿಸ್ತಿನಿಂದ ಕೆಲಸ ಮಾಡೋಕೆ, ಬೇರೆಯವರಿಗೆ ಗೌರವ ಕೊಡೋಕೆ ಇನ್ನೂ ಸ್ವಲ್ಪ ಕಲಿಬೇಕಾಗುತ್ತೆ. ಈ ತರ ಒಳ್ಳೇ ಗುಣಗಳನ್ನ ನೀವು ಬೆಳೆಸಿಕೊಳ್ಳೋದನ್ನ ಸಹೋದರರು ನೋಡಿದಾಗ ನಿಮಗೆ ಕೆಲವು ಜವಾಬ್ದಾರಿಗಳನ್ನ ಕೊಡಬಹುದು. ಸಹೋದರ ನಿಕ್‌ ಅವರ ಅನುಭವ ನೋಡಿ. ಅವರಿಗೆ 20 ವರ್ಷ ಇದ್ದಾಗ ಸಹಾಯಕ ಸೇವಕ ಆಗೋಕೆ ಆಗಲಿಲ್ಲ ಅಂತ ತುಂಬ ಬೇಜಾರಾಗಿತ್ತು. ‘ನನ್ನಲ್ಲೇ ಏನೋ ಕೊರತೆ ಇರಬೇಕು ಅಂತ ನಾನು ಅರ್ಥಮಾಡಿಕೊಂಡೆ’ ಅಂತ ಅವರು ಹೇಳ್ತಾರೆ. ಅವರು ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ ಪ್ರಯತ್ನ ಹಾಕುತ್ತಾ ಇದ್ರು, ನಿಲ್ಲಿಸಲಿಲ್ಲ. ಸಭೆಯಲ್ಲಿ ಸಿಗೋ ಸಣ್ಣ-ಪುಟ್ಟ ಕೆಲಸಗಳನ್ನ, ಸಾರೋ ಕೆಲಸನಾ ಚೆನ್ನಾಗಿ ಮಾಡ್ತಿದ್ರು. ಈಗ ಅವರು ಬ್ರಾಂಚ್‌ ಕಮಿಟಿಯ ಸದಸ್ಯನಾಗಿ ಸೇವೆ ಮಾಡ್ತಿದ್ದಾರೆ.

4. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ತೀವಿ?

4 ನೀವು ಇಟ್ಟ ಗುರಿಯನ್ನು ಮುಟ್ಟೋಕೆ ಆಗ್ತಿಲ್ಲ ಅಂತ ಬೇಜಾರಾ? ಹಾಗಾದ್ರೆ ಆ ಬೇಜಾರನ್ನ ಯೆಹೋವ ದೇವರ ಹತ್ರ ಹೇಳಿಕೊಳ್ಳಿ. (ಕೀರ್ತ. 37:5-7) ಇದ್ರ ಜೊತೆಗೆ ದೇವರ ಸೇವೆನ ಇನ್ನೂ ಚೆನ್ನಾಗಿ ಹೇಗೆಲ್ಲಾ ಮಾಡಬಹುದು ಅಂತ ಅನುಭವ ಇರೋ ಸಹೋದರರನ್ನ ಕೇಳಿ. ಅವರು ಕೊಡೋ ಸಲಹೆನಾ ಪಾಲಿಸಿ. ಆಗ ನಿಮ್ಮ ಗುರಿನಾ ಮುಟ್ಟೋಕೆ ಆಗಬಹುದು. ಆದ್ರೆ ಸಹೋದರಿ ಮೆಲೀಸಾ ತರ ಕೆಲವು ಗುರಿಗಳನ್ನ ನಿಮ್ಮಿಂದ ಮುಟ್ಟೋಕೆ ಆಗದೇ ಇರಬಹುದು. ಆದ್ರೂ ಯೆಹೋವನ ಸೇವೆ ಮಾಡ್ತಾ ಖುಷಿಖುಷಿಯಾಗಿ ಇರೋಕೆ ಆಗುತ್ತೆ. ಈ ಲೇಖನದಲ್ಲಿ (1) ನಿಮಗೆ ಖುಷಿ ಎಲ್ಲಿಂದ ಸಿಗುತ್ತೆ? (2) ನೀವು ಇನ್ನೂ ಖುಷಿಯಾಗಿರೋಕೆ ಏನು ಮಾಡಬೇಕು? (3) ಯಾವ ತರದ ಗುರಿಗಳನ್ನ ಇಟ್ರೆ ನೀವು ಖುಷಿಯಾಗಿರೋಕೆ ಆಗುತ್ತೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳೋಣ.

ನಿಮಗೆ ಖುಷಿ ಎಲ್ಲಿಂದ ಸಿಗುತ್ತೆ?

5. ನಾವು ಖುಷಿಯಾಗಿ ಇರಬೇಕು ಅಂದ್ರೆ ಏನು ಮಾಡಬೇಕು? (ಪ್ರಸಂಗಿ 6:9)

5 ನಾವು ಖುಷಿಯಾಗಿರಬೇಕು ಅಂದ್ರೆ ಏನು ಮಾಡಬೇಕು ಅಂತ ಪ್ರಸಂಗಿ 6:9 ಹೇಳುತ್ತೆ. (ಓದಿ.) ನಾವು “ಕಣ್ಮುಂದೆ ಇರೋದನ್ನ” ಆನಂದಿಸಬೇಕು. ಆಗ ಇರೋದ್ರಲ್ಲೇ ತೃಪ್ತರಾಗಿ ಇರ್ತೀವಿ. ಬಯಕೆಗಳ ಬೆನ್ನು ಹತ್ತಿದ್ರೆ ನಮಗೆ ಎಷ್ಟು ಸಿಕ್ಕಿದ್ರೂ ತೃಪ್ತಿ ಇರಲ್ಲ. ನಾವು ಖುಷಿಯಾಗಿರಬೇಕು ಅಂದ್ರೆ ನಮ್ಮಿಂದ ಮುಟ್ಟೋಕೆ ಆಗೋ ಗುರಿ ಇಡಬೇಕು.

6. ನಾವೀಗ ಯಾವ ಉದಾಹರಣೆ ನೋಡ್ತೀವಿ? ಮತ್ತು ಅದು ನಮಗೆ ಏನು ಕಲಿಸುತ್ತೆ?

6 ನಾವು ಇರೋದ್ರಲ್ಲೇ ತೃಪ್ತರಾಗಿರೋಕೆ ಆಗುತ್ತಾ? ಆಗಲ್ಲ ಅಂತ ಕೆಲವರು ಹೇಳ್ತಾರೆ. ಯಾಕಂದ್ರೆ ಹೊಸ ಹೊಸ ವಿಷಯಗಳನ್ನ ಕಲಿಬೇಕು, ಇನ್ನೂ ಏನಾದ್ರೂ ಸಾಧನೆ ಮಾಡಬೇಕು ಅನ್ನೋದು ಮನುಷ್ಯರ ಗುಣ. ಆದ್ರೆ ನಮಗೆ ಇರೋದ್ರಲ್ಲೇ ತೃಪ್ತರಾಗಿರೋಕೆ ಆಗುತ್ತೆ. ಹಾಗಾದ್ರೆ ಈಗ ಇರೋ ನೇಮಕದಲ್ಲಿ ಖುಷಿಯಾಗಿರೋಕೆ ಏನು ಮಾಡಬೇಕು? ಇದರ ಜೊತೆಗೆ ಇನ್ನೂ ಖುಷಿಯಾಗಿರೋದು ಹೇಗೆ? ಇದಕ್ಕೆ ಉತ್ತರ ಮತ್ತಾಯ 25:14-30ರಲ್ಲಿ ಯೇಸು ಹೇಳಿದ ತಲಾಂತಿನ ಉದಾಹರಣೆಯಲ್ಲಿ ನೋಡೋಣ.

ನೀವು ಇನ್ನೂ ಖುಷಿಯಾಗಿರೋಕೆ ಏನು ಮಾಡಬೇಕು?

7. ಯೇಸು ಕೊಟ್ಟ ಉದಾಹರಣೆಯನ್ನ ಚುಟುಕಾಗಿ ವಿವರಿಸಿ.

7 ಈ ಕಥೆಯಲ್ಲಿ ಯಜಮಾನ ದೂರದ ಊರಿಗೆ ಹೋಗ್ತಾನೆ. ಹೋಗೋಕೂ ಮುಂಚೆ ತನ್ನ ಸೇವಕರನ್ನು ಕರೆದು ವ್ಯಾಪಾರ ಮಾಡೋಕೆ ತಲಾಂತುಗಳನ್ನ ಕೊಡ್ತಾನೆ. * ಅವರವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಮೊದಲನೆಯವನಿಗೆ 5 ತಲಾಂತು, ಎರಡನೆಯವನಿಗೆ 2 ತಲಾಂತು, ಮೂರನೆಯವನಿಗೆ 1 ತಲಾಂತು ಕೊಡ್ತಾನೆ. ಮೊದಲನೆಯವನು ಮತ್ತು ಎರಡನೆಯವನು ಆ ಹಣದಿಂದ ಚೆನ್ನಾಗಿ ವ್ಯಾಪಾರ ಮಾಡಿ ಇನ್ನೂ ಜಾಸ್ತಿ ಸಂಪಾದನೆ ಮಾಡ್ತಾರೆ. ಆದ್ರೆ ಮೂರನೆಯವನು ಏನೂ ಮಾಡಲ್ಲ. ಅದಕ್ಕೆ ಯಜಮಾನ ಅವನನ್ನ ಕೆಲಸದಿಂದ ತೆಗೆದು ಬಿಡ್ತಾನೆ.

8. ಮೊದಲನೇ ಸೇವಕನಿಗೆ ಯಾಕೆ ಖುಷಿಯಾಗಿರಬೇಕು?

8 ಯಜಮಾನ 5 ತಲಾಂತು ಕೊಟ್ಟಿದ್ದಕ್ಕೆ ಮೊದಲನೇ ಸೇವಕನಿಗೆ ತುಂಬ ಖುಷಿಯಾಗಿರಬೇಕು. ಅಷ್ಟು ಹಣ ಕೊಟ್ಟಿದ್ದು ಯಜಮಾನನಿಗೆ ಆ ಸೇವಕನ ಮೇಲೆ ನಂಬಿಕೆ ಇತ್ತು ಅನ್ನೋದನ್ನ ತೋರಿಸುತ್ತಿತ್ತು. ಇದನ್ನ ನೋಡಿದಾಗ ಎರಡನೇ ಸೇವಕನಿಗೆ ಹೇಗನಿಸಿತು? ‘ಅವನಿಗೆ ಅಷ್ಟು ಕೊಟ್ಟು ನನಗೆ ಇಷ್ಟೇ ಇಷ್ಟು ಕೊಟ್ರಲ್ವಾ’ ಅಂತ ಬೇಜಾರು ಮಾಡಿಕೊಂಡನಾ?

ಎರಡನೇ ಸೇವಕನಿಂದ ಏನು ಕಲಿಯಬಹುದು? 1. ಯಜಮಾನ ಒಬ್ಬ ಸೇವಕನಿಗೆ ಎರಡು ಹಣದ ಚೀಲ ಕೊಟ್ಟಿದ್ದಾನೆ. 2. ಆ ಸೇವಕ ಬಟ್ಟೆ ವ್ಯಾಪಾರ ಮಾಡ್ತಾ ವ್ಯಾಪಾರಿಗಳ ಹತ್ರ ಮಾತಾಡ್ತಾ ಇದ್ದಾನೆ. 3. ಆ ಸೇವಕ ನಾಲ್ಕು ಹಣದ ಚಿಲಗಳನ್ನ ಯಜಮಾನನಿಗೆ ತಂದು ಕೊಡ್ತಿದ್ದಾನೆ. (ಪ್ಯಾರ 9-11 ನೋಡಿ)

9. ಎರಡನೇ ಸೇವಕ ಏನು ಮಾಡಲಿಲ್ಲ? (ಮತ್ತಾಯ 25:22, 23)

9 ಮತ್ತಾಯ 25:22, 23 ಓದಿ. ತನಗೆ 2 ತಲಾಂತು ಮಾತ್ರ ಸಿಕ್ತು ಅಂತ ಆ ಸೇವಕ ಬೇಜಾರು ಮಾಡ್ಕೊಂಡ ಅಂತ ಯೇಸು ಎಲ್ಲೂ ಹೇಳಲಿಲ್ಲ. ಅಥವಾ ‘ನಾನು ಅವನ ತರಾನೇ ಕಷ್ಟಪಟ್ಟು ದುಡಿತೀನಿ. ಅವನಿಗೆ ಮಾತ್ರ ಜಾಸ್ತಿ ಕೊಟ್ಟು ನನಗೆ ಯಾಕೆ ಇಷ್ಟು ಕಮ್ಮಿ ಕೊಟ್ಟಿದ್ದಾರೆ? ನನ್ನನ್ನ ಈ ಯಜಮಾನ ನಾಲಾಯಕ್ಕು ಅಂತ ಅಂದುಕೊಂಡಿದ್ದಾನಾ? ಒಂದು ಕೆಲ್ಸ ಮಾಡ್ತೀನಿ, ಈ ತಲಾಂತುಗಳನ್ನ ಹೂತುಬಿಟ್ಟು ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡು ಹೋಗ್ತೀನಿ’ ಅಂತ ದೂರಿದ ಅಂತಾಗಲಿ ಯೇಸು ಹೇಳಲಿಲ್ಲ.

10. ಎರಡನೇ ಸೇವಕ ಯಜಮಾನ ಕೊಟ್ಟ ಹಣನ ಏನು ಮಾಡಿದ?

10 ಮೊದಲನೇ ಸೇವಕನ ತರಾನೇ ಎರಡನೇ ಸೇವಕನೂ ಕಷ್ಟಪಟ್ಟು ದುಡಿದು ಆ ಹಣನ ಎರಡರಷ್ಟು ಮಾಡಿಕೊಟ್ಟ. ಆ ಸೇವಕ ಕಷ್ಟಪಟ್ಟು ದುಡಿದಿದ್ದಕ್ಕೆ ಯಜಮಾನ ‘ಶಭಾಷ್‌’ ಅಂತ ಹೇಳಿ ಅವನಿಗೆ ಇನ್ನೂ ಹೆಚ್ಚು ಜವಾಬ್ದಾರಿಗಳನ್ನ ಕೊಟ್ಟ.

11. ನಮ್ಮ ಖುಷಿ ಜಾಸ್ತಿ ಆಗಬೇಕು ಅಂದ್ರೆ ಏನು ಮಾಡಬೇಕು?

11 ಯೆಹೋವನ ಸೇವೆಲಿ ನಿಮಗೆ ಸಿಗೋ ಕೆಲಸನ ಕಷ್ಟಪಟ್ಟು ಚೆನ್ನಾಗಿ ಮಾಡಿ. ಆಗ ನಿಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. “ಜಾಸ್ತಿ ಸಮಯ” ಸಿಹಿಸುದ್ದಿ ಸಾರಿ, ಸಭೆ ಕೆಲಸಗಳಲ್ಲಿ ಬಿಝಿ ಆಗಿರಿ. (ಅ. ಕಾ. 18:5; ಇಬ್ರಿ. 10:24, 25) ಕೂಟಗಳಿಗೆ ಚೆನ್ನಾಗಿ ತಯಾರಿಮಾಡಿ. ಒಳ್ಳೇ ಉತ್ತರಗಳನ್ನ ಕೊಡಿ. ವಾರಮಧ್ಯದ ಕೂಟದಲ್ಲಿ ವಿದ್ಯಾರ್ಥಿ ನೇಮಕನ ಚೆನ್ನಾಗಿ ಮಾಡಿ. ಕೊಟ್ಟ ಕೆಲಸನ ಹೇಳಿದ ಸಮಯಕ್ಕೆ ನಿಯತ್ತಾಗಿ ಮಾಡಿ. ‘ಒಂದು ಚಿಕ್ಕ ಕೆಲಸಕ್ಕೆ ಅಷ್ಟೊಂದು ಸಮಯ ಕೊಡಬೇಕಾ?’ ಅಂತ ನೆನಸಬೇಡಿ. ಒಂದು ಕೆಲಸನಾ ಚೆನ್ನಾಗಿ ಮಾಡೋಕೆ ಕಲಿಯಿರಿ. (ಜ್ಞಾನೋ. 22:29) ಯೆಹೋವನ ಸೇವೆನ ಕಷ್ಟಪಟ್ಟು ಚೆನ್ನಾಗಿ ಮಾಡಿದ್ರೆ ನಿಮ್ಮ ಮತ್ತು ಯೆಹೋವನ ಸ್ನೇಹ ಚೆನ್ನಾಗಿರುತ್ತೆ, ನಿಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. (ಗಲಾ. 6:4) ಅಷ್ಟೇ ಅಲ್ಲ, ನೀವು ಇಷ್ಟಪಡೋ ಸುಯೋಗ ಬೇರೆಯವರಿಗೆ ಸಿಕ್ಕಿದಾಗ ನೀವು ಬೇಜಾರು ಮಾಡಿಕೊಳ್ಳಲ್ಲ, ಖುಷಿಯಾಗಿ ಇರ್ತೀರ.—ರೋಮ. 12:15; ಗಲಾ. 5:26.

12. (ಎ) ಖುಷಿಯಾಗಿರೋಕೆ ಸಹೋದರಿ ಮೆಲೀಸಾ ಏನು ಮಾಡಿದ್ರು? (ಬಿ) ಸಹೋದರ ನಿಕ್‌ ಏನು ಮಾಡಿದ್ರು?

12 ಸಹೋದರಿ ಮೆಲೀಸಾಗೆ ಯಾವ ಆಸೆ ಇತ್ತು ಅಂತ ನೆನಪಿದ್ಯಾ? ಅವರಿಗೆ ಬೆತೆಲಿಗೋ ಅಥವಾ ರಾಜ್ಯ ಪ್ರಚಾರಕರ ಶಾಲೆಗೋ ಹೋಗೋ ಆಸೆ ಇತ್ತು ಅಲ್ವಾ? ಅದು ಆಗಲ್ಲ ಅಂತ ಗೊತ್ತಾದಾಗ ಅವರು ಏನು ಮಾಡಿದ್ರು ಅಂತ ಅವರ ಮಾತಲ್ಲೇ ಕೇಳಿ. ‘ನಾನು ನನ್ನ ಪಯನೀಯರ್‌ ಸೇವೆನ ಚೆನ್ನಾಗಿ ಮಾಡೋಕೆ ಗಮನಕೊಟ್ಟೆ. ಬೇರೆಬೇರೆ ವಿಧಾನದಲ್ಲಿ ಸಿಹಿಸುದ್ದಿ ಸಾರೋಕೆ ಶುರುಮಾಡಿದೆ.’ ಸಹೋದರ ನಿಕ್‌ಗೆ ಸಹಾಯಕ ಸೇವಕರಾಗಿ ಸೇವೆ ಮಾಡೋಕೆ ಆಗದೇ ಇದ್ದಾಗ ಅವರೇನು ಮಾಡಿದ್ರು ಗೊತ್ತಾ? ‘ಸಭೆಯಲ್ಲಿ ನನಗೆ ಸಿಗುತ್ತಿದ್ದ ನೇಮಕಗಳನ್ನ, ಸಾರೋ ಕೆಲಸನ ಚೆನ್ನಾಗಿ ಮಾಡುತ್ತಿದ್ದೆ. ಕೂಟಗಳಲ್ಲಿ ಒಳ್ಳೇ ಉತ್ತರಗಳನ್ನ ಕೊಡ್ತಿದ್ದೆ. ಅದರ ಜೊತೆಗೆ ಬೆತೆಲ್‌ಗೆ ಹೋಗೋಕೆ ಅರ್ಜಿ ಹಾಕಿದೆ. ಒಂದು ವರ್ಷ ಆದಮೇಲೆ ನನ್ನನ್ನ ಬೆತೆಲಿಗೆ ಕರೆದ್ರು’ ಅಂತ ಸಹೋದರ ನಿಕ್‌ ಹೇಳ್ತಾರೆ.

13. ಈಗ ನೀವು ಯೆಹೋವನ ಸೇವೆಲಿ ನಿಮಗೆ ಸಿಕ್ಕಿರೋ ಕೆಲಸನ ಯಾಕೆ ಚೆನ್ನಾಗಿ ಮಾಡಬೇಕು? (ಪ್ರಸಂಗಿ 2:24)

13 ಈಗ ಯೆಹೋವನ ಸೇವೆಲಿ ಸಿಕ್ಕಿದ ಕೆಲಸನ ಚೆನ್ನಾಗಿ ಮಾಡ್ಕೊಂಡು ಹೋದ್ರೆ ಮುಂದೆ ಹೆಚ್ಚಿನ ಜವಾಬ್ದಾರಿಗಳು ಸಿಗುತ್ತಾ? ಸಿಕ್ಕಿದ್ರೂ ಸಿಗಬಹುದು. ಸಹೋದರ ನಿಕ್‌ಗೂ ಹೀಗೇ ಆಯ್ತು. ಒಂದುವೇಳೆ ಸಿಗದೇ ಇದ್ರೂ ಸಹೋದರಿ ಮೆಲೀಸಾ ತರ ನೀವೂ ಖುಷಿಯಾಗಿರಬಹುದು. ಯೆಹೋವ ದೇವರ ಸೇವೆ ಮಾಡ್ತಾ ತೃಪ್ತಿಯಾಗಿ ಇರ್ತೀರ. (ಪ್ರಸಂಗಿ 2:24 ಓದಿ.) ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮ್ಮ ಕೈಲಾದ ಸೇವೆ ಮಾಡಿ ಯಜಮಾನನಾದ ಯೇಸುವನ್ನ ಮೆಚ್ಚಿಸ್ತಾ ಇದ್ದೀರಿ ಅನ್ನೋ ಸಂತೃಪ್ತಿ ನಿಮಗಿರುತ್ತೆ.

ಯಾವ ಗುರಿಗಳನ್ನು ಇಡಬೇಕು?

14. ನಾವು ಯಾವ ತರದ ಗುರಿಗಳನ್ನ ಇಡಬೇಕು?

14 ಈಗ ಸಿಕ್ಕಿರೋ ಕೆಲಸದ ಮೇಲೆ ಗಮನ ಇಡಬೇಕು ಅಂದ್ರೆ ಅದರ ಅರ್ಥ ನಾವು ಬೇರೆ ಗುರಿಗಳನ್ನ ಇಡಬಾರದು ಅಂತನಾ? ಇಲ್ಲ. ಹಾಗಾದ್ರೆ ಯಾವ ತರದ ಗುರಿಗಳನ್ನ ಇಡಬೇಕು? ಸಿಹಿಸುದ್ದಿ ಸಾರೋಕೆ ಮತ್ತು ಸಹೋದರ ಸಹೋದರಿಯರ ಸೇವೆ ಮಾಡೋಕೆ ಸಹಾಯ ಮಾಡೋ ಗುರಿಗಳನ್ನ ಇಡಬೇಕು. ಚೆನ್ನಾಗಿ ಯೋಚನೆ ಮಾಡಿ ನಮ್ಮ ಕೈಯಲ್ಲಿ ಆಗೋ ಗುರಿಗಳನ್ನ ಇಡಬೇಕು. ಆಗ ಗುರಿಗಳನ್ನ ಮುಟ್ಟೋಕೆ ಆಗುತ್ತೆ.—ಜ್ಞಾನೋ. 11:2; ಅ. ಕಾ. 20:35.

15. ನೀವು ಯಾವ್ಯಾವ ಗುರಿಗಳನ್ನ ಇಡಬಹುದು?

15 ಯಾವ ಗುರಿಗಳನ್ನ ನಿಮ್ಮಿಂದ ಮುಟ್ಟೋಕೆ ಆಗುತ್ತೆ ಅಂತ ತಿಳಿದುಕೊಳ್ಳೋಕೆ ಯೆಹೋವ ದೇವರ ಹತ್ರ ಸಹಾಯ ಕೇಳಿ. (ಜ್ಞಾನೋ. 16:3; ಯಾಕೋ. 1:5)  ಒಂದನೇ ಪ್ಯಾರದಲ್ಲಿ ಹೇಳಿರೋ ಗುರಿಗಳನ್ನ ಇಟ್ಟು ನೋಡ್ತೀರಾ? ನೀವು ಸಹಾಯಕ ಅಥವಾ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಬಹುದು. ಬೆತೆಲ್‌ಗೆ ಹೋಗಬಹುದು. ಕಟ್ಟಡ ನಿರ್ಮಾಣ ಕೆಲಸ ಮಾಡಬಹುದು. ಬೇರೆ ಭಾಷೆ ಕಲಿತು ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡಬಹುದು. ಈ ಗುರಿ ಇಡೋ ಮುಂಚೆ ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು ಪುಸ್ತಕದ 10ನೇ ಅಧ್ಯಾಯವನ್ನ ಓದಿ ನಿಮ್ಮ ಸಭೆಯ ಹಿರಿಯರ ಹತ್ರ ಮಾತಾಡಿ. * ಇಂಥ ಗುರಿಗಳನ್ನ ಇಟ್ಟು ಮುಟ್ಟೋಕೆ ಪ್ರಯತ್ನಿಸುವಾಗ ಅದನ್ನ ಬೇರೆಯವರೂ ಗಮನಿಸ್ತಾರೆ. ನಿಮ್ಮ ಖುಷಿನೂ ಹೆಚ್ಚಾಗುತ್ತೆ.

16. ಈ ಲೇಖನದಲ್ಲಿ ಹೇಳಿದ ಗುರಿಗಳನ್ನ ಮುಟ್ಟೋಕೆ ಆಗದೇ ಇದ್ದಾಗ ನೀವೇನು ಮಾಡಬಹುದು?

16 ಈ ಲೇಖನದಲ್ಲಿ ಹೇಳಿದ ಗುರಿಗಳನ್ನ ಮುಟ್ಟೋಕೆ ಆಗದೇ ಇದ್ರೆ ಏನು ಮಾಡೋದು? ನಿಮ್ಮಿಂದ ಮುಟ್ಟೋಕೆ ಆಗೋ ಬೇರೆ ಗುರಿಗಳನ್ನ ಇಡಿ. ಅದ್ರಲ್ಲಿ ಕೆಲವು ಯಾವುದು ಅಂತ ಈಗ ನೋಡೋಣ.

ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡ್ತೀರಾ? (ಪ್ಯಾರ 17 ನೋಡಿ) *

17. ಒಂದನೇ ತಿಮೊತಿ 4:13, 15ರ ಪ್ರಕಾರ ಸಹೋದರರು ಏನು ಮಾಡಬೇಕು?

17 ಒಂದನೇ ತಿಮೊತಿ 4:13, 15 ಓದಿ. ದೀಕ್ಷಾಸ್ನಾನ ಆಗಿರೋ ಸಹೋದರರು ಮಾತಾಡೋದ್ರಲ್ಲಿ, ಕಲಿಸೋದ್ರಲ್ಲಿ ಪ್ರಗತಿ ಮಾಡಬಹುದು. ಯಾಕಂದ್ರೆ ಚೆನ್ನಾಗಿ ಓದಿದ್ರೆ, ಭಾಷಣ ಕೊಟ್ರೆ, ಕಲಿಸಿದ್ರೆ ಅದ್ರಿಂದ ಬೇರೆಯವರಿಗೆ ತುಂಬ ಪ್ರಯೋಜನ ಆಗುತ್ತೆ. ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಕಿರುಹೊತ್ತಗೆಯ ಒಂದೊಂದೇ ಪಾಠಗಳನ್ನ ಓದಿ ಅದ್ರಲ್ಲಿ ಕೊಟ್ಟಿರೋ ಒಂದೊಂದು ಸಲಹೆನಾ ಪಾಲಿಸೋ ಗುರಿ ಇಡಿ. ಆ ಸಲಹೆಗಳನ್ನ ಮನೆಯಲ್ಲಿ ಚೆನ್ನಾಗಿ ಪ್ರ್ಯಾಕ್ಟಿಸ್‌ ಮಾಡಿ ಮತ್ತು ಕೂಟಗಳಲ್ಲಿ ಭಾಷಣ ಕೊಡುವಾಗ ಅದನ್ನ ಅನ್ವಯಿಸಿ. “ಮಾತಾಡೋದ್ರಲ್ಲಿ, ಕಲಿಸೋದ್ರಲ್ಲಿ ಶ್ರಮ ಹಾಕೋ” ಸಹಾಯಕ ಸಲಹೆಗಾರರು ಮತ್ತು ಬೇರೆ ಹಿರಿಯರಿಂದ ಸಹಾಯ ಪಡಕೊಳ್ಳಿ. * (1 ತಿಮೊ. 5:17) ಭಾಷಣ ಕೊಡುವಾಗ ಕಲಿತಿದ್ದನ್ನ ಅನ್ವಯಿಸಿಕೊಳ್ಳೋದ್ರ ಜೊತೆಗೆ ನಿಮ್ಮ ಮಾತು ಸಹೋದರ ಸಹೋದರಿಯರನ್ನ ಹುರಿದುಂಬಿಸೋ ತರ ಇರಬೇಕು ಮತ್ತು ಅದನ್ನ ಪಾಲಿಸಬೇಕು ಅಂತ ಅವರಿಗೆ ಅನಿಸಬೇಕು. ಹೀಗೆ ಮಾಡಿದ್ರೆ ನಿಮ್ಮ ಸಂತೋಷನೂ ಜಾಸ್ತಿ ಆಗುತ್ತೆ, ಸಹೋದರರ ಸಂತೋಷನೂ ಜಾಸ್ತಿ ಆಗುತ್ತೆ.

ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡ್ತೀರಾ? (ಪ್ಯಾರ 18 ನೋಡಿ) *

18. ಸಾರೋ ಮತ್ತು ಕಲಿಸೋ ನೇಮಕನ ಚೆನ್ನಾಗಿ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

18 ಜನರಿಗೆ ಸಿಹಿಸುದ್ದಿ ಸಾರೋ ಮತ್ತು ಅವರನ್ನ ಶಿಷ್ಯರಾಗಿ ಮಾಡೋ ನೇಮಕ ನಮ್ಮೆಲ್ಲರಿಗೂ ಇದೆ. (ಮತ್ತಾ. 28:19, 20; ರೋಮ. 10:14) ಈ ನೇಮಕನ ಚೆನ್ನಾಗಿ ಮಾಡಬೇಕು ಅಂದ್ರೆ ಏನು ಮಾಡಬೇಕು ಅಂತ ಗೊತ್ತಾ? ಪ್ರಗತಿ ಕಿರುಹೊತ್ತಗೆಯನ್ನ ಚೆನ್ನಾಗಿ ಓದಿ, ಅದರಲ್ಲಿರೋ ಸಲಹೆಗಳನ್ನ ಅನ್ವಯಿಸೋ ಗುರಿಯಿಡಿ. ಇದರ ಜೊತೆ ವಾರಮಧ್ಯದ ಕೂಟಗಳಲ್ಲಿ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಭಾಗದಲ್ಲಿ ಚರ್ಚೆ ಮಾಡೋ ಮಾದರಿ ಸಂಭಾಷಣೆಯ ವಿಡಿಯೋಗಳಿಂದ ಟಿಪ್ಸ್‌ ಸಿಗುತ್ತೆ. ಇಲ್ಲಿ ಕೊಟ್ಟಿರೋ ಬೇರೆಬೇರೆ ಸಲಹೆಗಳನ್ನ ಟ್ರೈ ಮಾಡಿ ನೋಡಿ. ಆಗ ನಿಮ್ಮ ಟೆರಿಟೊರಿಗೆ ಯಾವುದು ಸರಿಯಾದ ಸಲಹೆ ಅಂತ ಗೊತ್ತಾಗುತ್ತೆ. ಇದನ್ನೆಲ್ಲ ಪಾಲಿಸಿದ್ರೆ ನೀವು ಜನರಿಗೆ ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಮತ್ತು ಕಲಿಸೋಕೆ ಆಗುತ್ತೆ. ಆಗ ನೀವು ಖುಷಿಖುಷಿಯಾಗಿ ಇರ್ತೀರ.—2 ತಿಮೊ. 4:5.

ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡ್ತೀರಾ? (ಪ್ಯಾರ 19 ನೋಡಿ) *

19. ಯೆಹೋವನಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸಿಕೊಳ್ಳಬೇಕಂದ್ರೆ ಏನು ಮಾಡಬೇಕು?

19 ಯೆಹೋವ ದೇವರಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸಿಕೊಳ್ಳೋದು ಒಂದು ಗುರಿನೇ. ಅದನ್ನೂ ಇಡಬಹುದು. (ಗಲಾ. 5:22, 23; ಕೊಲೊ. 3:12; 2 ಪೇತ್ರ 1:5-8) ಆದ್ರೆ ಅದನ್ನ ಹೇಗೆ ಮಾಡೋದು? ಉದಾಹರಣೆಗೆ ಯೆಹೋವ ದೇವರ ಮೇಲೆ ಪ್ರೀತಿನ ಇನ್ನೂ ಜಾಸ್ತಿ ಮಾಡಿಕೊಳ್ಳಬೇಕು ಅನ್ನೋ ಗುರಿ ಇಟ್ಟಿದ್ದೀರಾ ಅಂದುಕೊಳ್ಳಿ. ಅದನ್ನ ಹೇಗೆ ಮಾಡಬೇಕು ಅಂತ ನಮ್ಮ ಪ್ರಕಾಶನಗಳಲ್ಲಿ ಇದೆ. ಅದನ್ನ ನೀವು ಓದಿ. ನಮ್ಮ ಸಹೋದರ ಸಹೋದರಿಯರು ಕಷ್ಟ ಬಂದಾಗ ಹೇಗೆ ಯೆಹೋವನ ಮೇಲಿರೋ ನಂಬಿಕೆನ ಜಾಸ್ತಿ ಮಾಡ್ಕೊಂಡ್ರು ಅಂತ JW ಪ್ರಸಾರದಲ್ಲಿದೆ. ಆ ವಿಡಿಯೋಗಳನ್ನ ನೋಡಿ. ಆಮೇಲೆ ಅವರ ತರ ನೀವೂ ಹೇಗೆ ನಂಬಿಕೆ ತೋರಿಸೋದು ಅಂತ ಯೋಚನೆ ಮಾಡಿ.

20. ನಾವು ಖುಷಿ ಖುಷಿಯಾಗಿ ಇರೋಕೆ ಏನು ಮಾಡಬೇಕು?

20 ಯೆಹೋವ ದೇವರ ಸೇವೆನಾ ನಾವು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅಂತ ನಮಗೆ ಆಗಾಗ ಅನಿಸುತ್ತೆ. ಆದ್ರೆ ಇದನ್ನೆಲ್ಲಾ ಚೆನ್ನಾಗಿ ಮಾಡೋಕೆ ಆಗೋದು ದೇವರ ಸರ್ಕಾರ ಬಂದಮೇಲೆನೇ. ಅಲ್ಲಿ ತನಕ ಈಗಿರೋ ನೇಮಕನ ಚೆನ್ನಾಗಿ ಮಾಡೋಕೆ ಪ್ರಯತ್ನ ಹಾಕುವಾಗ ನಮ್ಮ ಖುಷಿ ಇನ್ನೂ ಜಾಸ್ತಿ ಆಗುತ್ತೆ. ‘ನಾನು ಜಾಸ್ತಿ ಸೇವೆ ಮಾಡ್ತಿಲ್ಲ’ ಅನ್ನೋ ಬೇಜಾರು ಇರಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ‘ಖುಷಿಯಾಗಿರೋ ದೇವರಾದ’ ಯೆಹೋವನಿಗೆ ನಾವು ಒಳ್ಳೇ ಹೆಸರು ತರುತ್ತೀವಿ. (1 ತಿಮೊ. 1:11) ಹಾಗಾಗಿ ನಮಗೆ ಸಿಕ್ಕಿರೋ ನೇಮಕನ ಮಾಡ್ಕೊಂಡು ಖುಷಿಯಾಗಿ ಇರೋಣ!

ಗೀತೆ 93 ‘ನಿಮ್ಮ ಬೆಳಕು ಪ್ರಕಾಶಿಸಲಿ’

^ ಪ್ಯಾರ. 5 ನಾವು ಯೆಹೋವ ದೇವರನ್ನ ತುಂಬ ಪ್ರೀತಿಸ್ತೀವಿ. ಆತನಿಗೋಸ್ಕರ ಏನು ಮಾಡಕ್ಕೂ ರೆಡಿ ಇದ್ದೀವಿ. ಹಾಗಾಗಿ ಅಗತ್ಯ ಇರೋ ಕಡೆ ಸಿಹಿಸುದ್ದಿ ಸಾರೋ ಅಥವಾ ಸಭೆಯಲ್ಲಿ ಹೆಚ್ಚಿನ ಸುಯೋಗ ಪಡಕೊಳ್ಳೋ ಗುರಿ ಇಡ್ತೀವಿ. ಆದ್ರೆ ಎಷ್ಟೇ ಕಷ್ಟಪಟ್ಟು ಪ್ರಯತ್ನ ಹಾಕಿದ್ರೂ ನಾವಿಟ್ಟಿರೋ ಗುರಿನ ಮುಟ್ಟೋಕೆ ಆಗಲಿಲ್ಲ ಅಂದ್ರೆ ಏನು ಮಾಡಬೇಕು? ಯೆಹೋವ ದೇವರ ಕೆಲಸ ಮಾಡ್ತಾ ಖುಷಿಖುಷಿಯಾಗಿ ಇರೋಕೆ ಏನು ಮಾಡಬೇಕು? ಈ ಎರಡು ಪ್ರಶ್ನೆಗಳಿಗೆ ಯೇಸು ಕೊಟ್ಟ ತಲಾಂತುಗಳ ಉದಾಹರಣೆಯಿಂದ ಉತ್ತರ ತಿಳಿದುಕೊಳ್ಳೋಣ.

^ ಪ್ಯಾರ. 2 ಕೆಲವು ಹೆಸರುಗಳು ಬದಲಾಗಿವೆ.

^ ಪ್ಯಾರ. 7 ಪದವಿವರಣೆ: 1 ತಲಾಂತು ಒಬ್ಬ ವ್ಯಕ್ತಿಯ 20 ವರ್ಷದ ಸಂಬಳಕ್ಕೆ ಸಮ.

^ ಪ್ಯಾರ. 15 ದೀಕ್ಷಾಸ್ನಾನ ಆದ ಸಹೋದರರು, ಸಹಾಯಕ ಸೇವಕರೋ ಅಥವಾ ಹಿರಿಯರಾಗಬೇಕಾದ್ರೆ ಅವರಿಗೆ ಕೆಲವು ಅರ್ಹತೆಗಳು ಬೇಕು. ಅದೇನು ಅಂತ ತಿಳುಕೊಳ್ಳೋಕೆ ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು ಪುಸ್ತಕದ 5 ಮತ್ತು 6ನೇ ಅಧ್ಯಾಯ ನೋಡಿ.

^ ಪ್ಯಾರ. 17 ಪದವಿವರಣೆ: ಸಹಾಯಕ ಸಲಹೆಗಾರರು ಹಿರಿಯರಾಗಿರುತ್ತಾರೆ. ಬೇರೆ ಹಿರಿಯರು ಅಥವಾ ಸಹಾಯಕ ಸೇವಕರು ಕೂಟಗಳಲ್ಲಿ ನೇಮಕಗಳನ್ನ ಮಾಡಿ ಮುಗಿಸಿದ ಮೇಲೆ ಇನ್ನೂ ಯಾವುದರಲ್ಲಿ ಪ್ರಗತಿ ಮಾಡಬಹುದು ಅಂತ ಅವರು ಸಲಹೆ ಕೊಡ್ತಾರೆ.

^ ಪ್ಯಾರ. 64 ಚಿತ್ರ ವಿವರಣೆ: ಜನರಿಗೆ ಚೆನ್ನಾಗಿ ಕಲಿಸಬೇಕು ಅನ್ನೋ ಗುರಿಯಿಟ್ಟು ಒಬ್ಬ ಸಹೋದರ ಸಂಶೋಧನೆ ಮಾಡ್ತಿದ್ದಾರೆ.

^ ಪ್ಯಾರ. 66 ಚಿತ್ರ ವಿವರಣೆ: ಅನೌಪಚಾರಿಕ ಸಾಕ್ಷಿ ಕೊಡಬೇಕು ಅನ್ನೋ ಗುರಿ ಇಟ್ಟಿರೋ ಸಹೋದರಿ ಹೋಟೆಲ್‌ನಲ್ಲಿ ವೇಯ್ಟರ್‌ ಆಗಿ ಕೆಲಸ ಮಾಡ್ತಿರೋ ಹುಡುಗಿಗೆ ಕಾಂಟ್ಯಾಕ್ಟ್‌ ಕಾರ್ಡ್‌ ಕೊಡ್ತಿದ್ದಾರೆ.

^ ಪ್ಯಾರ. 68 ಚಿತ್ರ ವಿವರಣೆ: ಯೆಹೋವ ದೇವರಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸಿಕೊಳ್ಳಬೇಕು ಅಂತ ಗುರಿ ಇಟ್ಟಿರೋ ಸಹೋದರಿ ಇನ್ನೊಬ್ಬ ಸಹೋದರಿಗೆ ಗಿಫ್ಟ್‌ ಕೊಟ್ಟು ಅವರನ್ನ ಖುಷಿ ಪಡಿಸ್ತಿದ್ದಾರೆ.