ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 35

“ಒಬ್ರನ್ನೊಬ್ರು ಬಲಪಡಿಸ್ತಾ” ಇರೋಣ

“ಒಬ್ರನ್ನೊಬ್ರು ಬಲಪಡಿಸ್ತಾ” ಇರೋಣ

“ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ ಇರಿ.”—1 ಥೆಸ. 5:11.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

ಕಿರುನೋಟ a

1. ನಾವು ಏನು ಮಾಡಬೇಕು ಅಂತ 1 ಥೆಸಲೊನೀಕ 5:11 ಹೇಳುತ್ತೆ?

 ರಾಜ್ಯಸಭಾಗೃಹ ಕಟ್ಟೋಕೆ ನೀವು ಯಾವತ್ತಾದರೂ ಕೈ ಜೋಡಿಸಿದ್ದೀರಾ? ಅದು ಕಟ್ಟಿ ಮುಗಿದ ಮೇಲೆ ನಿಮಗೆ ತುಂಬ ಸಂತೋಷ ಆಗಿರುತ್ತೆ. ಅದರ ಸಮರ್ಪಣೆಯ ದಿನ ನೀವು ಯೆಹೋವನಿಗೆ ತುಂಬ ಥ್ಯಾಂಕ್ಸ್‌ ಹೇಳಿರುತ್ತೀರ. ಅವತ್ತು ಎಲ್ರೂ ಎದ್ದು ಹಾಡು ಹಾಡಿದಾಗ ನಿಮ್ಮ ಕಣ್ಣಲ್ಲಿ ಆನಂದದ ಕಣ್ಣೀರು ಹರಿದಿರಬಹುದು. ನಾವು ರಾಜ್ಯಸಭಾಗೃಹ ಕಟ್ಟೋದನ್ನ ನೋಡುವಾಗ ಯೆಹೋವನಿಗೆ ತುಂಬ ಸಂತೋಷ ಆಗುತ್ತೆ. ಇನ್ನೊಂದು ರೀತಿಯ ಕಟ್ಟೋ ಕೆಲಸನೂ ಯೆಹೋವನಿಗೆ ಖುಷಿ ತರುತ್ತೆ. ಅದೇ ನಮ್ಮ ಸಹೋದರ ಸಹೋದರಿಯರ ನಂಬಿಕೆನ ಕಟ್ಟೋ ಕೆಲಸ. ಇದರ ಬಗ್ಗೆ ಅಪೊಸ್ತಲ ಪೌಲ ಈ ಲೇಖನದ ಮುಖ್ಯವಚನದಲ್ಲಿ ಅಂದ್ರೆ 1 ಥೆಸಲೊನೀಕ 5:11ರಲ್ಲಿ ಹೇಳಿದ್ದಾನೆ.—ಓದಿ.

2. ಈ ಲೇಖನದಲ್ಲಿ ನಾವು ಏನು ಕಲಿತೀವಿ?

2 ಪೌಲನಿಗೆ ಸಹೋದರ ಸಹೋದರಿಯರ ಮೇಲೆ ಅನುಕಂಪ ಇತ್ತು. ಅವನು ಅವರನ್ನ ಪ್ರೋತ್ಸಾಹಿಸೋದ್ರಲ್ಲಿ, ಬಲಪಡಿಸೋದ್ರಲ್ಲಿ ನಮಗೆ ಒಳ್ಳೇ ಮಾದರಿಯಾಗಿದ್ದಾನೆ. ಪೌಲ ಅವರಿಗೆ (1) ಕಷ್ಟಗಳನ್ನ ತಾಳಿಕೊಳ್ಳೋಕೆ, (2) ಎಲ್ಲರ ಜೊತೆ ಸಮಾಧಾನವಾಗಿ ಇರೋಕೆ, (3) ಯೆಹೋವನ ಮೇಲಿರೋ ನಂಬಿಕೆನ ಬಲಪಡಿಸಿಕೊಳ್ಳೋಕೆ ಹೇಗೆ ಸಹಾಯ ಮಾಡಿದ ಮತ್ತು ನಾವು ಅವನ ತರ ಇರೋಕೆ ಏನೆಲ್ಲಾ ಮಾಡಬೇಕು ಅಂತ ಈ ಲೇಖನದಲ್ಲಿ ನೊಡೋಣ.—1 ಕೊರಿಂ. 11:1.

ಕಷ್ಟಗಳನ್ನ ತಾಳಿಕೊಳ್ಳೋಕೆ ಪೌಲ ಸಹಾಯ ಮಾಡಿದ

3. ಕಷ್ಟದ ಮಧ್ಯದಲ್ಲೂ ದೇವರ ಸೇವೆ ಮಾಡಬಹುದು ಅಂತ ಪೌಲ ಹೇಗೆ ತೋರಿಸಿಕೊಟ್ಟ?

3 ಪೌಲ ತುಂಬ ಕಷ್ಟಗಳನ್ನ ಅನುಭವಿಸಿದ್ದ. ಅದಕ್ಕೆ ಅವನು ಬೇರೆಯವರ ಕಷ್ಟಗಳನ್ನ ಅರ್ಥ ಮಾಡಿಕೊಳ್ತಿದ್ದ ಮತ್ತು ಅವರಿಗೆ ಕರುಣೆ ತೋರಿಸಿದ. ಒಂದು ಸಲ ಅವನಿಗೆ ಕೈಯಲ್ಲಿ ಕಾಸಿಲ್ಲದ ಪರಿಸ್ಥಿತಿ ಬಂದಾಗ ತನ್ನನ್ನ ನೋಡಿಕೊಳ್ಳೋಕೆ ಮತ್ತು ತನ್ನ ಜೊತೆಯಲ್ಲಿದ್ದವರಿಗೆ ಸಹಾಯ ಮಾಡೋಕೆ ಡೇರೆ ಹೊಲಿಯೋ ಕೆಲಸ ಮಾಡಿದ. (ಅ. ಕಾ. 20:34) ಅವನು ಕೊರಿಂಥಕ್ಕೆ ಬಂದಾಗ ಅಕ್ವಿಲ್ಲ ಮತ್ತು ಪ್ರಿಸ್ಕಿಲ್ಲರ ಜೊತೆ ಈ ಕೆಲಸ ಮಾಡ್ತಿದ್ದ. ಆದ್ರೆ “ಸಬ್ಬತ್‌ ದಿನ ಬಂದಾಗೆಲ್ಲ” ಸಭಾಮಂದಿರಕ್ಕೆ ಹೋಗಿ ಯೆಹೂದ್ಯರಿಗೆ ಮತ್ತು ಗ್ರೀಕರಿಗೆ ಸಿಹಿಸುದ್ದಿ ಸಾರ್ತಿದ್ದ. (ಅ. ಕಾ. 18:2-5) ಸೀಲ ಮತ್ತು ತಿಮೊತಿ ಅಲ್ಲಿಗೆ ಬಂದಮೇಲೆ ಪೌಲ, “ಜಾಸ್ತಿ ಸಮಯ ಸಿಹಿಸುದ್ದಿ ಸಾರೋಕೆ ಕೊಡ್ತಿದ್ದ.” ಯೆಹೋವನ ಸೇವೆ ಮಾಡೋದು ತನ್ನ ಜೀವನದಲ್ಲಿ ತುಂಬ ಮುಖ್ಯ ಅನ್ನೋದನ್ನ ಪೌಲ ಯಾವತ್ತೂ ಮರೆಯಲಿಲ್ಲ. ಎಷ್ಟೇ ಕಷ್ಟ ಇದ್ರೂ ದೇವರ ಸೇವೆಯನ್ನ ನಿಲ್ಲಿಸಲಿಲ್ಲ. ಅದಕ್ಕೇ ಸಹೋದರ ಸಹೋದರಿಯರಿಗೂ ಪ್ರೋತ್ಸಾಹ ಕೊಟ್ಟ. ಎಷ್ಟೇ ಕಷ್ಟ ಇದ್ರೂ, ಕುಟುಂಬನ ನೋಡಿಕೊಳ್ಳೋ ಜವಾಬ್ದಾರಿಗಳಿದ್ರೂ “ತುಂಬ ಮುಖ್ಯವಾದ ವಿಷ್ಯ” ಅಂದ್ರೆ ಯೆಹೋವನ ಸೇವೆ ಮಾಡೋದನ್ನ ಬಿಟ್ಟುಬಿಡಬೇಡಿ ಅಂತ ಹೇಳಿದ.—ಫಿಲಿ. 1:10.

4. ಪೌಲ ಮತ್ತು ತಿಮೊತಿ ಸಭೆಯವರನ್ನ ಹೇಗೆ ಬಲಪಡಿಸಿದ್ರು?

4 ಥೆಸಲೊನೀಕದಲ್ಲಿ ಹೊಸದಾಗಿ ಸಭೆ ಶುರುವಾಯ್ತು. ಅಲ್ಲಿ ಆಗಷ್ಟೇ ಶಿಷ್ಯರಾಗಿದ್ದವರಿಗೆ ವಿರೋಧ ಬಂತು. ವಿರೋಧಿಗಳ ಒಂದು ಗುಂಪು ಪೌಲ ಮತ್ತು ಸೀಲನನ್ನ ಹುಡುಕಿಕೊಂಡು ಬಂತು. ಅವರು ಸಿಗದಿದ್ದಾಗ ಅಲ್ಲಿದ್ದ “ಕೆಲವು ಸಹೋದರರನ್ನ ಪಟ್ಟಣದ ಅಧಿಕಾರಿಗಳ ಹತ್ರ ಎಳ್ಕೊಂಡು ಹೋದ್ರು.” ಇವರು “ನಮ್ಮ ರಾಜನ ಆಜ್ಞೆಗಳಿಗೆ ವಿರುದ್ಧವಾಗಿ ನಡಿತಿದ್ದಾರೆ” ಅಂತ ಕೂಗಿದ್ರು. (ಅ. ಕಾ. 17:6, 7) ಇಡೀ ಊರಿನ ಜನ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದನ್ನ ನೋಡಿದಾಗ ಆಗಷ್ಟೇ ಸತ್ಯಕ್ಕೆ ಬಂದಿದ್ದ ಹೊಸ ಶಿಷ್ಯರಿಗೆ ಎಷ್ಟು ಭಯ ಆಗಿರಬೇಕು ಅಂತ ಯೋಚನೆ ಮಾಡಿ. ಆ ಶಿಷ್ಯರು ಹೆದರಿಕೊಂಡು ಯೆಹೋವನ ಸೇವೆನ ಕಮ್ಮಿ ಮಾಡಬಹುದಿತ್ತು. ಆದ್ರೆ ಪೌಲ ಮತ್ತು ಸೀಲರಿಗೆ ಆ ಊರು ಬಿಟ್ಟು ಹೋಗೋ ಪರಿಸ್ಥಿತಿ ಬಂದ್ರೂನೂ ಅಲ್ಲಿದ್ದ ಹೊಸ ಶಿಷ್ಯರು ತಬ್ಬಲಿಗಳಾಗಬಾರದು ಅಂತ ಒಂದು ವ್ಯವಸ್ಥೆ ಮಾಡಿದ್ರು. ಅದರ ಬಗ್ಗೆ ಪೌಲ ಥೆಸಲೊನೀಕದವರಿಗೆ ಹೀಗೆ ಹೇಳ್ತಾನೆ, “ನಮ್ಮ ಸಹೋದರ ತಿಮೊತಿನ ನಿಮ್ಮ ಹತ್ರ ಕಳಿಸಿದ್ವಿ . . . , ನಿಮ್ಮ ನಂಬಿಕೆಯನ್ನ ಕಟ್ಟಿ ನಿಮ್ಮನ್ನ ಸಂತೈಸೋಕೆ ಅವನನ್ನ ಕಳಿಸಿದ್ವಿ. ಈಗಿರೋ ಕಷ್ಟಗಳಿಂದ ಯಾರ ನಂಬಿಕೆನೂ ಕಮ್ಮಿ ಆಗಬಾರದು ಅನ್ನೋದೇ ನಮ್ಮ ಆಸೆ.” (1 ಥೆಸ. 3:2, 3) ತಿಮೊತಿ ತನ್ನ ಊರಾದ ಲುಸ್ತ್ರದಲ್ಲೂ ಇದೇ ತರದ ಹಿಂಸೆನ ಅನುಭವಿಸಿದ್ದ. ಆಗ ಪೌಲ ಸಹೋದರರನ್ನ ಬಲಪಡಿಸೋಕೆ ಏನೆಲ್ಲಾ ಮಾಡಿದ್ದ ಅಂತ ನೋಡಿದ್ದ ಮತ್ತು ಯೆಹೋವ ಹೇಗೆ ಸಹಾಯ ಮಾಡಿದನು ಅಂತನೂ ಕಣ್ಣಾರೆ ನೋಡಿದ್ದ. ಹಾಗಾಗಿ ಈ ಊರಲ್ಲೂ ಎಲ್ಲ ಸರಿಹೋಗುತ್ತೆ ಅಂತ ಅಲ್ಲಿದ್ದ ಸಹೋದರ ಸಹೋದರಿಯರಿಗೆ ಧೈರ್ಯ ತುಂಬಿದ.—ಅ. ಕಾ. 14:8, 19-22; ಇಬ್ರಿ. 12:2.

5. ಬ್ರೈಯಂಟ್‌ಗೆ ಒಬ್ಬ ಹಿರಿಯನಿಂದ ಹೇಗೆ ಸಹಾಯ ಸಿಕ್ತು?

5 ಪೌಲ ಸಹೋದರ ಸಹೋದರಿಯರನ್ನ ಇನ್ನೂ ಹೇಗೆಲ್ಲಾ ಪ್ರೋತ್ಸಾಹಿಸಿದ? ಅವನು ಮತ್ತು ಬಾರ್ನಬ ಲುಸ್ತ್ರ, ಇಕೋನ್ಯ ಮತ್ತು ಅಂತಿಯೋಕ್ಯಕ್ಕೆ ಎರಡನೇ ಸಲ ಭೇಟಿ ಮಾಡಿದಾಗ ಅಲ್ಲಿರೋ “ಒಂದೊಂದು ಸಭೆಯಲ್ಲೂ ಹಿರಿಯರನ್ನ ನೇಮಿಸಿದ್ರು.” (ಅ. ಕಾ. 14:21-23) ಆ ಹಿರಿಯರು ಅಲ್ಲಿದ್ದ ಸಹೋದರ ಸಹೋದರಿಯರಿಗೆ ತುಂಬ ಪ್ರೋತ್ಸಾಹ ಕೊಟ್ಟಿರುತ್ತಾರೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಈಗ ಇರೋ ಹಿರಿಯರು ಅದನ್ನೇ ಮಾಡ್ತಾರೆ. ಸಹೋದರ ಬ್ರೈಯಂಟ್‌ ಏನು ಹೇಳ್ತಾರೆ ಅಂತ ನೋಡಿ. “ನನಗೆ 15 ವರ್ಷ ಇದ್ದಾಗ ನಮ್ಮ ಅಪ್ಪ ಮನೆ ಬಿಟ್ಟು ಹೋದ್ರು. ನಮ್ಮ ಅಮ್ಮ ಬಹಿಷ್ಕಾರ ಆದ್ರು. ಆಗ ನನಗೆ ಯಾರೂ ಇಲ್ಲ, ನಾನು ತಬ್ಬಲಿ ಅಂತ ಅನಿಸ್ತು. ತುಂಬ ಕುಗ್ಗಿಹೋದೆ.” ಆಗ ಅವರಿಗೆ ಟೋನಿ ಅನ್ನೋ ಒಬ್ಬ ಹಿರಿಯ ತುಂಬ ಸಹಾಯ ಮಾಡಿದ್ರು. ಅದರ ಬಗ್ಗೆ ಬ್ರೈಯಂಟ್‌ ಹೀಗೆ ಹೇಳ್ತಾರೆ: “ಸಹೋದರ ಟೋನಿ ಕೂಟಗಳಲ್ಲಷ್ಟೇ ಅಲ್ಲ ಯಾವಾಗ್ಲೂ ನನ್ನ ಜೊತೆ ಮಾತಾಡ್ತಾ ಇದ್ರು. ಎಷ್ಟೋ ಸಹೋದರ ಸಹೋದರಿಯರು ಕಷ್ಟ ಇದ್ರೂ ಖುಷಿಯಾಗಿ ಇದ್ದಾರೆ ಅಂತ ಹೇಳ್ತಿದ್ರು. ಕೀರ್ತನೆ 27:10ನ್ನ ತೋರಿಸಿದ್ರು ಮತ್ತು ಯೆಹೋವನಿಗೆ ನಂಬಿಗಸ್ತನಾಗಿ ಸೇವೆ ಮಾಡಿದ ರಾಜ ಹಿಜ್ಕೀಯನ ಬಗ್ಗೆ ಯಾವಾಗ್ಲೂ ಮಾತಾಡ್ತಾ ಇದ್ರು. ‘ಅವನ ಅಪ್ಪನೂ ಒಳ್ಳೇ ಮಾದರಿಯಾಗಿರಲಿಲ್ಲ. ಆದ್ರೂ ಹಿಜ್ಕೀಯ ಯೆಹೋವನನ್ನು ಬಿಟ್ಟು ಹೋಗಲಿಲ್ಲ’ ಅಂತ ಹೇಳ್ತಿದ್ರು” ಆ ಹಿರಿಯ ಕೊಟ್ಟ ಪ್ರೋತ್ಸಾಹದಿಂದ ಬ್ರೈಯಂಟ್‌ಗೆ ಹೇಗೆ ಸಹಾಯ ಆಯ್ತು? “ಸಹೋದರ ಟೋನಿ ನನ್ನನ್ನ ಉತ್ತೇಜಿಸಿದ್ರಿಂದ ನಾನು ಪೂರ್ಣ ಸಮಯದ ಸೇವೆ ಶುರು ಮಾಡಿದೆ” ಅಂತ ಬ್ರೈಯಂಟ್‌ ಹೇಳ್ತಾರೆ. ಹಿರಿಯರೇ, ಬ್ರೈಯಂಟ್‌ ತರ ಇರೋ ಸಹೋದರರು ನಿಮ್ಮ ಸಭೆಯಲ್ಲೂ ಇದ್ದಾರಾ ಅಂತ ಯೋಚನೆ ಮಾಡಿ. ನಿಮ್ಮ ‘ಒಳ್ಳೇ ಮಾತಿಂದ’ ಅವರನ್ನ ಪ್ರೋತ್ಸಾಹಿಸಿ.—ಜ್ಞಾನೋ. 12:25.

6. ಪೌಲ ಯೆಹೋವನ ಸೇವಕರ ಜೀವನ ಕಥೆಯಿಂದ ಸಹೋದರ ಸಹೋದರಿಯರನ್ನ ಹೇಗೆ ಪ್ರೋತ್ಸಾಹಿಸಿದ?

6 ಪೌಲ ಅಲ್ಲಿದ್ದ ಕ್ರೈಸ್ತರನ್ನ ತುಂಬ ಪ್ರೋತ್ಸಾಹಿಸಿದ. ಹಿಂದಿನ ಕಾಲದಲ್ಲಿದ್ದ “ಸಾಕ್ಷಿಗಳ ದೊಡ್ಡ ಗುಂಪು” ತುಂಬ ಕಷ್ಟಗಳನ್ನ ಅನುಭವಿಸಿದ್ರೂ ಯೆಹೋವನ ಸಹಾಯದಿಂದ ಅವುಗಳನ್ನ ತಾಳಿಕೊಂಡ್ರು ಅಂತ ಅವರಿಗೆ ನೆನಪಿಸಿದ. (ಇಬ್ರಿ. 12:1) ಇವರ ಜೀವನ ಕಥೆ ಆ ಸಹೋದರರಿಗೆ ಧೈರ್ಯ ತುಂಬುತ್ತೆ ಮತ್ತು ಅವರು “ಜೀವ ಇರೋ ದೇವರ ಪಟ್ಟಣದ” ಮೇಲೆ ಗಮನ ಇಡೋಕೆ ಸಹಾಯ ಮಾಡುತ್ತೆ ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (ಇಬ್ರಿ. 12:22) ಗಿದ್ಯೋನ, ಬಾರಾಕ, ದಾವೀದ, ಸಮುವೇಲ ಇನ್ನೂ ತುಂಬ ಜನರಿಗೆ ಯೆಹೋವ ಸಹಾಯ ಮಾಡಿದ್ದಾನೆ. ಇವರ ಬಗ್ಗೆ ಕಲಿತಾಗ ನಮ್ಮ ನಂಬಿಕೆನೂ ಜಾಸ್ತಿಯಾಗುತ್ತೆ ಅಲ್ವಾ? (ಇಬ್ರಿ. 11:32-35) ಇವರಷ್ಟೇ ಅಲ್ಲ, ಈಗಿರೋ ನಮ್ಮ ಸಹೋದರ ಸಹೋದರಿಯರ ಅನುಭವಗಳನ್ನ ಓದಿದಾಗಲೂ ನಮ್ಮ ನಂಬಿಕೆ ಜಾಸ್ತಿಯಾಗುತ್ತೆ. ಇಂಥ ಅನುಭವಗಳನ್ನ ಓದಿ ನಮಗೆ ತುಂಬ ಪ್ರೋತ್ಸಾಹ ಸಿಕ್ಕಿದೆ ಅಂತ ಎಷ್ಟೋ ಸಹೋದರ ಸಹೋದರಿಯರು ಮುಖ್ಯ ಕಾರ್ಯಾಲಯಕ್ಕೆ ಪತ್ರಗಳನ್ನ ಬರೆದಿದ್ದಾರೆ.

ಎಲ್ಲರೂ ಶಾಂತಿಯಿಂದ ಇರೋಕೆ ಪೌಲ ಸಹಾಯ ಮಾಡಿದ

7. ರೋಮನ್ನರಿಗೆ 14:19-21ರಲ್ಲಿ ಪೌಲ ಕೊಟ್ಟ ಸಲಹೆಯಿಂದ ನಾವೇನು ಕಲಿತೀವಿ?

7 ನಾವು ಶಾಂತಿ ಸಮಾಧಾನದಿಂದ ಮಾತಾಡಿದ್ರೆ, ನಡಕೊಂಡ್ರೆ ಸಭೆಯಲ್ಲಿ ಎಲ್ರನ್ನೂ ಪ್ರೋತ್ಸಾಹಿಸೋಕೆ ಆಗುತ್ತೆ. ನಮ್ಮೆಲ್ಲರ ಯೋಚನೆ ಒಂದೇ ತರ ಇರಲ್ಲ. ಹಾಗಂತ ಅದು ನಮ್ಮ ಮಧ್ಯೆ ಒಡಕನ್ನ ತರಬಾರದು. ಎಲ್ರಿಗೂ ಸ್ವಂತ ನಿರ್ಣಯ ಮಾಡೋ ಹಕ್ಕಿದೆ. ಹಾಗಾಗಿ ಒಬ್ಬ ವ್ಯಕ್ತಿ ತಗೊಂಡಿರೋ ನಿರ್ಧಾರ ಬೈಬಲ್‌ ತತ್ವಗಳಿಗೆ ವಿರುದ್ಧವಾಗಿಲ್ಲ ಅಂದಮೇಲೆ ನಮಗೆ ಸರಿ ಅನಿಸಿದ್ದನ್ನೇ ಅವರು ಮಾಡಬೇಕು ಅಂತ ಒತ್ತಾಯ ಮಾಡಬಾರದು. ರೋಮ್‌ನಲ್ಲಿದ್ದ ಸಭೇಲಿ ಯೆಹೂದ್ಯರು, ಯೆಹೂದ್ಯರಲ್ಲದ ಕ್ರೈಸ್ತರೂ ಇದ್ರು. ಆದ್ರೆ ಆಗ ಕ್ರೈಸ್ತರು ಮೋಶೆಯ ನಿಯಮದ ಕೆಳಗೆ ಇಲ್ಲದೆ ಇದ್ದಿದ್ರಿಂದ ಮೋಶೆ ನಿಯಮ ಪುಸ್ತಕದಲ್ಲಿ ಆಹಾರದ ಬಗ್ಗೆ ಕೊಟ್ಟಿದ್ದ ನಿಯಮಗಳನ್ನ ಅವರು ಪಾಲಿಸೋ ಅವಶ್ಯಕತೆ ಇರಲಿಲ್ಲ. (ಮಾರ್ಕ 7:19) ಆಗಿಂದ ಕೆಲವು ಯೆಹೂದ್ಯರು ಎಲ್ಲಾ ತರದ ಊಟನ ತಿನ್ನೋಕೆ ಶುರು ಮಾಡಿದ್ರು. ಆದ್ರೆ ಇನ್ನೂ ಕೆಲವರಿಗೆ ಇದು ಇಷ್ಟ ಆಗಲಿಲ್ಲ. ಅದಕ್ಕೇ ಕೆಲವರು ಅಂಥ ಆಹಾರವನ್ನ ತಿನ್ನಲೇಬಾರದು ಅಂತ ಹೇಳ್ತಿದ್ರು. ಇದ್ರಿಂದ ಸಭೆಯ ಒಗ್ಗಟ್ಟು ಒಡೆದುಹೋಯ್ತು. ಆಗ ಅಲ್ಲಿದ್ದವರಿಗೆ ಶಾಂತಿಯನ್ನ ಕಾಪಾಡಿಕೊಳ್ಳಿ ಅಂತ ಹೇಳ್ತಾ ಅಪೊಸ್ತಲ ಪೌಲ “ಮಾಂಸ ತಿನ್ನೋದು, ದ್ರಾಕ್ಷಾಮದ್ಯ ಕುಡಿಯೋದು ಅಥವಾ ಬೇರೆ ಯಾವ ವಿಷ್ಯನೂ ನಿನ್ನ ಸಹೋದರನ ನಂಬಿಕೆಯನ್ನ ಹಾಳುಮಾಡಿದ್ರೆ ಅದನ್ನ ಮಾಡದೇ ಇರೋದೇ ಒಳ್ಳೇದು” ಅಂತ ಹೇಳಿದ. (ರೋಮನ್ನರಿಗೆ 14:19-21 ಓದಿ.) ಇಂಥ ಜಗಳಗಳಿಂದ ಸಭೆಯಲ್ಲಿ ಇರುವವರಿಗೆಲ್ಲ ಹೇಗೆ ತೊಂದರೆ ಆಗುತ್ತೆ ಅಂತ ಆ ಸಹೋದರ ಸಹೋದರಿಯರಿಗೆ ಪೌಲ ಅರ್ಥ ಮಾಡಿಸಿದ. ಬೇರೆಯವರ ನಂಬಿಕೆ ಕಮ್ಮಿ ಆಗಬಾರದು ಅಂತ ತನ್ನ ಯೋಚನೆ ಮತ್ತು ನಡತೆಯನ್ನ ಬದಲಾಯಿಸಿಕೊಳ್ಳೋಕೂ ಪೌಲ ರೆಡಿ ಇದ್ದ. (1 ಕೊರಿಂ. 9:19-22) ನಾನು ಯೋಚನೆ ಮಾಡ್ತಿರೋದೇ ಸರಿ, ನಾನು ಹೇಳಿದ್ದೇ ಆಗಬೇಕು ಅಂತ ನಾವು ವಾದ ಮಾಡ್ತಿದ್ರೆ ನಾವು ಬೇರೆಯವ್ರನ್ನ ಪ್ರೋತ್ಸಾಹಿಸೋಕೆ ಆಗಲ್ಲ ಮತ್ತು ಬೇರೆಯವ್ರ ಜೊತೆ ಶಾಂತಿ ಸಮಾಧಾನದಿಂದ ಇರೋಕಾಗಲ್ಲ.

8. ಸಭೆಯಲ್ಲಿ ಒಂದು ದೊಡ್ಡ ಸಮಸ್ಯೆ ಆದಾಗ ಪೌಲ ಏನು ಮಾಡಿದ?

8 ಸಭೆಯಲ್ಲಿ ಇರೋರು ಶಾಂತಿ ಮತ್ತು ಒಗ್ಗಟ್ಟಿಂದ ಇರೋಕೆ ಏನು ಮಾಡಬೇಕು ಅಂತ ಪೌಲ ತೋರಿಸಿಕೊಟ್ಟ. ಉದಾಹರಣೆಗೆ, ಬೇರೆ ಜನಾಂಗದಿಂದ ಬಂದ ಕ್ರೈಸ್ತರು ಸುನ್ನತಿ ಮಾಡಿಸಿಕೊಳ್ಳಬೇಕು ಅಂತ ಕೆಲವು ಯೆಹೂದಿ ಕ್ರೈಸ್ತರು ಹೇಳ್ತಿದ್ರು. ಇಲ್ಲಾಂದ್ರೆ ಬೇರೆ ಯೆಹೂದ್ಯರು ತಮ್ಮನ್ನ ಕೀಳಾಗಿ ನೋಡ್ತಾರೆ ಅಂತ ಹೇಳ್ತಿದ್ರು. (ಗಲಾ. 6:12) ಆದ್ರೆ ಅಪೊಸ್ತಲ ಪೌಲನಿಗೆ ಅವರು ಹೇಳಿದ ವಿಷಯ ಒಂಚೂರೂ ಇಷ್ಟ ಆಗಲಿಲ್ಲ. ಹಾಗಂತ ತಾನು ಇಷ್ಟ ಪಡೋ ತರ ಎಲ್ಲರೂ ನಡೆದುಕೊಳ್ಳಬೇಕು ಅಂತನೂ ಅವನು ಹೇಳಲಿಲ್ಲ. ಈ ವಿಷಯನ ಯೆರೂಸಲೇಮಲ್ಲಿದ್ದ ಹಿರಿಯರಿಗೂ ಮತ್ತು ಅಪೊಸ್ತಲರಿಗೂ ಅವನು ತಿಳಿಸಿದ ಮತ್ತು ದೀನತೆಯಿಂದ ಅವರ ಸಲಹೆ ಕೇಳಿದ. (ಅ. ಕಾ. 15:1, 2) ಅವನು ಹೀಗೆ ಮಾಡಿದ್ರಿಂದ ಅಲ್ಲಿದ್ದ ಕ್ರೈಸ್ತರಿಗೆ ಶಾಂತಿ ಮತ್ತು ಒಗ್ಗಟ್ಟಿಂದ ಇರೋಕೆ ಆಯ್ತು.—ಅ. ಕಾ. 15:30, 31.

9. ಪೌಲನ ತರ ನಾವು ಹೇಗೆ ನಡೆದುಕೊಳ್ಳಬಹುದು?

9 ಸಭೆಯಲ್ಲಿ ಏನಾದ್ರೂ ದೊಡ್ಡ ಸಮಸ್ಯೆ ಆದಾಗ ಹಿರಿಯರ ಹತ್ರ ಹೋಗಿ ಮಾತಾಡಬೇಕು. ಅಷ್ಟೇ ಅಲ್ಲ, ಪ್ರಕಾಶನಗಳಿಂದ ಮತ್ತು ಸಂಘಟನೆಯಿಂದ ನಮಗೆ ನಿರ್ದೇಶನಗಳು ಸಿಗುತ್ತೆ. ನಮಗೇನು ಸರಿ ಅನಿಸುತ್ತೋ ಅದನ್ನ ಮಾಡೋದಕ್ಕಿಂತ ಆ ನಿರ್ದೇಶನಗಳನ್ನ ಪಾಲಿಸಬೇಕು. ಆಗ ಸಭೆಯಲ್ಲಿ ಶಾಂತಿ ಇರುತ್ತೆ.

10. ಸಭೆಯಲ್ಲಿ ಎಲ್ರೂ ಶಾಂತಿಯಿಂದ ಇರೋಕೆ ಅಪೊಸ್ತಲ ಪೌಲ ಇನ್ನೇನು ಮಾಡಿದ?

10 ಸಭೆಯಲ್ಲಿ ಎಲ್ರೂ ಶಾಂತಿಯಿಂದ ಇರೋಕೆ ಅಪೊಸ್ತಲ ಪೌಲ ಏನು ಮಾಡಿದ? ಸಹೋದರ ಸಹೋದರಿಯರಲ್ಲಿ ಇದ್ದ ಒಳ್ಳೇ ಗುಣಗಳ ಬಗ್ಗೆ ಅವರ ಹತ್ರ ಹೇಳಿದ, ಅವರ ತಪ್ಪನ್ನ ಎತ್ತಿ ಆಡಲಿಲ್ಲ. ಉದಾಹರಣೆಗೆ, ರೋಮನ್ನರಿಗೆ ಬರೆದ ಪತ್ರದಲ್ಲಿ ಕೆಲವರ ಹೆಸರುಗಳನ್ನ ಹೇಳಿದ್ದಾನೆ ಮತ್ತು ಅವರು ಮಾಡಿದ ಒಳ್ಳೇ ವಿಷಯಗಳ ಬಗ್ಗೆ ಬರೆದಿದ್ದಾನೆ. ನಾವೂ ನಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ, ಅವರಲ್ಲಿರೋ ಒಳ್ಳೇ ಗುಣಗಳ ಬಗ್ಗೆ ಹೇಳಬೇಕು. ಈ ರೀತಿ ಮಾಡೋದ್ರಿಂದ ಸಭೆಯಲ್ಲಿ ಶಾಂತಿ, ಒಗ್ಗಟ್ಟು ಮತ್ತು ಪ್ರೀತಿ ಇರುತ್ತೆ.

11. ಜಗಳ ಆದಾಗ ಮತ್ತೆ ಒಂದಾಗೋಕೆ ಏನು ಮಾಡಬೇಕು?

11 ತುಂಬ ವರ್ಷಗಳಿಂದ ಸತ್ಯದಲ್ಲಿ ಇರುವವರೇ ಕೆಲವೊಮ್ಮೆ ಜಗಳ ಮಾಡಿಕೊಳ್ತಾರೆ. ಪೌಲ ಮತ್ತು ಅವನ ಸ್ನೇಹಿತ ಬಾರ್ನಬನಿಗೂ ಹೀಗೇ ಆಯ್ತು. ಅವರ ಮುಂದಿನ ಮಿಷನರಿ ಪ್ರಯಾಣಕ್ಕೆ ಮಾರ್ಕನನ್ನ ಕರಕೊಂಡು ಹೋಗಬೇಕಾ ಬೇಡ್ವಾ ಅನ್ನೋ ವಿಷಯದಲ್ಲಿ “ದೊಡ್ಡ ಜಗಳ ಆಗಿ ಅವ್ರಿಬ್ರೂ ಬೇರೆ ಆದ್ರು.” (ಅ. ಕಾ. 15:37-39) ಆದ್ರೆ ಆಮೇಲೆ ಸಭೆಯಲ್ಲಿ ಶಾಂತಿ ಮತ್ತು ಒಗ್ಗಟ್ಟಿಂದ ಇರೋದು ತುಂಬ ಮುಖ್ಯ ಅನ್ನೋದನ್ನ ಅರ್ಥ ಮಾಡಿಕೊಂಡು ಪೌಲ, ಬಾರ್ನಬ ಮತ್ತು ಮಾರ್ಕ ಮತ್ತೆ ಒಂದಾದ್ರು. ಪೌಲ ಅವರನ್ನ ತುಂಬ ಹೊಗಳಿದ. (1 ಕೊರಿಂ. 9:6; ಕೊಲೊ. 4:10) ನಾವೂ ಸಭೆಯಲ್ಲಿ ಯಾರ ಜೊತೆಯಾದ್ರೂ ಜಗಳ ಆಡಿದ್ರೆ ಅದನ್ನ ಸರಿ ಮಾಡ್ಕೊಬೇಕು. ಅವರ ಒಳ್ಳೇ ಗುಣಗಳಿಗೆ ನಾವು ಗಮನ ಕೊಡಬೇಕು. ಇದ್ರಿಂದ ಸಭೇಲಿ ಶಾಂತಿ ಮತ್ತು ಒಗ್ಗಟ್ಟು ಇರೋ ತರ ನೋಡಿಕೊಳ್ತೀವಿ.—ಎಫೆ. 4:3.

ನಂಬಿಕೆನ ಜಾಸ್ತಿ ಮಾಡಿಕೊಳ್ಳೋಕೆ ಪೌಲ ಸಹಾಯ ಮಾಡಿದ

12. ನಮ್ಮ ಸಹೋದರ ಸಹೋದರಿಯರು ಯಾವೆಲ್ಲ ಕಷ್ಟಗಳನ್ನ ಅನುಭವಿಸ್ತಿದ್ದಾರೆ?

12 ನಾವು ಸಹೋದರ ಸಹೋದರಿಯರಿಗೆ ಯೆಹೋವನ ಮೇಲಿರೋ ನಂಬಿಕೆನ ಜಾಸ್ತಿ ಮಾಡಿಕೊಳ್ಳೋಕೆ ಸಹಾಯ ಮಾಡೋದ್ರಿಂದ ಅವರನ್ನ ಪ್ರೋತ್ಸಾಹಿಸ್ತೀವಿ. ಕೆಲವರನ್ನ ಅವರ ಕುಟುಂಬದವರು, ಜೊತೆಕೆಲಸದವರು ಅಥವಾ ಸಹಪಾಠಿಗಳು ಗೇಲಿ ಮಾಡ್ತಿರಬಹುದು. ಕೆಲವರಿಗೆ ದೊಡ್ಡ ಕಾಯಿಲೆ ಇರಬಹುದು ಅಥವಾ ಇನ್ನೂ ಕೆಲವರು, ಬೇರೆಯವರಿಂದ ತಮ್ಮ ಮನಸ್ಸಿಗೆ ಆಗಿರೋ ನೋವಿಂದ ಹೊರಗೆ ಬರೋಕೆ ಪ್ರಯತ್ನ ಮಾಡ್ತಿರಬಹುದು. ತುಂಬ ವರ್ಷಗಳಿಂದ ಸತ್ಯದಲ್ಲಿ ಇರೋರಿಗೆ ಇನ್ನೂ ಅಂತ್ಯ ಬಂದಿಲ್ವಲ್ಲಾ ಅಂತ ಅನಿಸ್ತಿರಬಹುದು. ಇದನ್ನೆಲ್ಲ ಸಹಿಸಿಕೊಳ್ಳೋಕೆ ಕೆಲವರಿಗೆ ಕಷ್ಟ ಆಗುತ್ತೆ, ಅವರ ನಂಬಿಕೆ ಕಡಿಮೆಯಾಗಿಬಿಡುತ್ತೆ. ಒಂದನೇ ಶತಮಾನದ ಕ್ರೈಸ್ತರಿಗೂ ಇದೇ ತರದ ಸಮಸ್ಯೆಗಳು ಇತ್ತು. ಅವರನ್ನ ಪೌಲ ಹೇಗೆ ಬಲಪಡಿಸಿದ ಅಂತ ಈಗ ನೊಡೋಣ.

ಅಪೊಸ್ತಲ ಪೌಲನ ತರ ನಾವು ಹೇಗೆ ಬೇರೆಯವರನ್ನ ಬಲಪಡಿಸಬಹುದು? (ಪ್ಯಾರ 13 ನೋಡಿ) b

13. ತಮ್ಮ ನಂಬಿಕೆ ಬಗ್ಗೆ ಮಾತಾಡೋಕೆ ಸಹೋದರ ಸಹೋದರಿಯರಿಗೆ ಪೌಲ ಹೇಗೆ ಸಹಾಯ ಮಾಡಿದ?

13 ಸಹೋದರ ಸಹೋದರಿಯರ ನಂಬಿಕೆನ ಜಾಸ್ತಿ ಮಾಡೋಕೆ ಪೌಲ ವಚನಗಳನ್ನ ಬಳಸಿದ. ಉದಾಹರಣೆಗೆ, ಕೆಲವು ಯೆಹೂದ್ಯರು ಕ್ರೈಸ್ತರಾದ ಮೇಲೆ ಅವರ ಕುಟುಂಬದವರು ಅವರನ್ನ ಕೀಳಾಗಿ ನೋಡ್ತಿದ್ರು. ಕ್ರೈಸ್ತರಿಗಿಂತ ಯೆಹೂದ್ಯರೇ ತುಂಬ ಶ್ರೇಷ್ಠ ಅಂತ ಹೇಳ್ತಿದ್ರು. ಆಗ ಅವರಿಗೆ ಹೇಗೆ ಉತ್ತರ ಕೊಡಬೇಕು ಅಂತ ಕ್ರೈಸ್ತರಿಗೆ ಗೊತ್ತಾಗುತ್ತಿರಲಿಲ್ಲ. ಆದ್ರೆ ಪೌಲ, ಇಬ್ರಿಯರಿಗೆ ಬರೆದ ಪತ್ರ ಅವರಿಗೆ ತುಂಬ ಸಹಾಯ ಮಾಡ್ತು. (ಇಬ್ರಿ. 1:5, 6; 2:2, 3; 9:24, 25) ಇದ್ರಿಂದ ಆ ಕ್ರೈಸ್ತರಿಗೆ ಅವರ ಸಂಬಂಧಿಕರ ಜೊತೆ ಹೇಗೆ ಮಾತಾಡಬೇಕು ಅಂತ ಗೊತ್ತಾಯ್ತು. ಈಗಿರೋ ನಮ್ಮ ಸಹೋದರ ಸಹೋದರಿಯರು ಇದೇ ಸಮಸ್ಯೆನ ಎದುರಿಸ್ತಿದ್ದಾರೆ. ಅವರು ತಮ್ಮ ನಂಬಿಕೆ ಬಗ್ಗೆ ಹೇಗೆ ಮಾತಾಡಬಹುದು ಅಂತ ನಮ್ಮ ಪ್ರಕಾಶನಗಳಲ್ಲಿ ಇದೆ. ಅವರಿಗೆ ಅದನ್ನ ಹುಡುಕೋಕೆ ನಾವು ಸಹಾಯ ಮಾಡಬಹುದು. ಯುವಜನರಿಗೆ, ದೇವರೇ ಎಲ್ಲವನ್ನ ಸೃಷ್ಟಿ ಮಾಡಿದನು ಅಂತ ನಂಬೋಕೆ ಮತ್ತು ಅದನ್ನ ಬೇರೆಯವರಿಗೆ ಧೈರ್ಯವಾಗಿ ಹೇಳೋಕೆ ನಾವು ಸಹಾಯ ಮಾಡಬಹುದು. ಜೀವ ಸೃಷ್ಟಿಯಾಯಿತಾ? ಮತ್ತು ಜೀವದ ಆರಂಭ: ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಬ್ರೋಷರ್‌ಗಳಲ್ಲಿ ಇರೋ ವಿಷಯವನ್ನ ಅವರಿಗೆ ಹೇಳಿಕೊಡಬಹುದು.

ಅಪೊಸ್ತಲ ಪೌಲನ ತರ ನಾವು ಹೇಗೆ ಬೇರೆಯವರನ್ನ ಬಲಪಡಿಸಬಹುದು? (ಪ್ಯಾರ 14 ನೋಡಿ) c

14. ಸಾರೋದ್ರಲ್ಲಿ ಮತ್ತು ಕಲಿಸೋದ್ರಲ್ಲಿ ಪೌಲ ಬಿಜಿ಼ಯಾಗಿದ್ರೂ ಏನು ಮಾಡಿದ?

14 ಪೌಲ “ಒಳ್ಳೇ ಕೆಲಸಗಳನ್ನ” ಮಾಡ್ತಾ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸಿದ. (ಇಬ್ರಿ. 10:24) ಪೌಲ ಹೇಳಿದ ವಿಷಯಗಳಷ್ಟೇ ಅಲ್ಲ ಅವನು ಮಾಡಿದ ವಿಷಯಗಳೂ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸ್ತಿತ್ತು. ಉದಾಹರಣೆಗೆ, ಯೂದಾಯದಲ್ಲಿ ಬರಗಾಲ ಬಂದಾಗ ಸಹೋದರ ಸಹೋದರಿಯರ ಜೀವನಕ್ಕೆ ಬೇಕಾಗಿದ್ದನ್ನ ಪೌಲ ತಂದುಕೊಟ್ಟ. (ಅ. ಕಾ. 11:27-30) ಅವನು ಸಾರೋದ್ರಲ್ಲಿ ಮತ್ತು ಕಲಿಸೋದ್ರಲ್ಲಿ ಎಷ್ಟೇ ಬಿಜಿ಼ಯಾಗಿದ್ರೂ ಅಲ್ಲಿದ್ದ ಬಡ ಸಹೋದರರಿಗೆ ಏನಾದ್ರೂ ಸಹಾಯ ಬೇಕಾ ಅಂತ ಅವನು ಯಾವಾಗಲೂ ಯೋಚಿಸ್ತಿದ್ದ. (ಗಲಾ. 2:10) ಅವನು ಹೀಗೆ ಮಾಡಿದ್ರಿಂದ ಆ ಸಹೋದರರಿಗೆ ಯೆಹೋವ ತಮ್ಮನ್ನ ನೋಡಿಕೊಳ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಯ್ತು. ಇವತ್ತು ನಾವು ನಮ್ಮ ಸಮಯ, ಶಕ್ತಿ ಮತ್ತು ಕೌಶಲಗಳನ್ನ ವಿಪತ್ತು ಪರಿಹಾರ ಕೆಲಸ ಮಾಡೋಕೆ ಬಳಸಿದಾಗ ನಮ್ಮ ಸಹೋದರ ಸಹೋದರಿಯರಿಗೆ ಯೆಹೋವ ತಮ್ಮನ್ನ ನೋಡಿಕೊಳ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ. ಲೋಕದ ಎಲ್ಲ ಕಡೆ ನಡೀತಿರೋ ಸಾರೋ ಕೆಲಸಕ್ಕೆ ನಾವು ಹಾಕೋ ಕಾಣಿಕೆಗಳು ಕೂಡ ನಮ್ಮ ಸಹೋದರ ಸಹೋದರಿಯರ ನಂಬಿಕೆನ ಬಲಪಡಿಸುತ್ತೆ. ಯೆಹೋವ ತಮ್ಮ ಕೈ ಬಿಡಲ್ಲ ಅನ್ನೋ ಭರವಸೆನೂ ಅವರಿಗೆ ಸಿಗುತ್ತೆ.

ಅಪೊಸ್ತಲ ಪೌಲನ ತರ ನಾವು ಹೇಗೆ ಬೇರೆಯವರನ್ನ ಬಲಪಡಿಸಬಹುದು? (ಪ್ಯಾರ 15-16 ನೋಡಿ) d

15-16. ನಂಬಿಕೆ ಕಮ್ಮಿಯಾಗಿರುವವರ ಜೊತೆ ನಾವು ಹೇಗೆ ನಡೆದುಕೊಳ್ಳಬೇಕು?

15 ನಂಬಿಕೆ ಕಮ್ಮಿಯಾಗಿದ್ದ ಸಹೋದರರಿಗೆ ಪೌಲ ಸಹಾಯ ಮಾಡ್ತಾನೇ ಇದ್ದ. ಅವನು ಅವರಿಗೆ ಅನುಕಂಪ ತೋರಿಸ್ತಿದ್ದ. ಸಲಹೆ ಕೊಡುವಾಗಲೂ ಪ್ರೀತಿಯಿಂದ ಅವರಿಗೆ ಬೇಜಾರಾಗದ ಹಾಗೆ ಕೊಡ್ತಿದ್ದ. (ಇಬ್ರಿ. 6:9; 10:39) ಉದಾಹರಣೆಗೆ, ಅವನು ಇಬ್ರಿಯರಿಗೆ ಬರೆದ ಪತ್ರದಲ್ಲಿ ಸಲಹೆ ಕೊಡುವಾಗಲೂ “ನಾವು” ಮತ್ತು “ನಮ್ಮ” ಅಂತ ಬರೆದ. ಅಂದ್ರೆ ತಾನು ಕೊಟ್ಟ ಸಲಹೆ ತನಗೂ ಅನ್ವಯಿಸುತ್ತೆ ಅಂತ ಹೇಳ್ತಿದ್ದ. (ಇಬ್ರಿ. 2:1, 3) ಪೌಲನ ತರ ನಾವೂ ಇರಬೇಕು. ನಂಬಿಕೆ ಕಮ್ಮಿ ಆದವರನ್ನ ನಾವು ಮರೆತು ಹೋಗಬಾರದು. ಅವರನ್ನ ಪ್ರೋತ್ಸಾಹಿಸ್ತಾನೇ ಇರಬೇಕು. ಅವರ ಮೇಲೆ ಕಾಳಜಿ ಇದೆ ಅಂತ ತೋರಿಸಬೇಕು. ನಾವು ಮಾತಾಡೋ ರೀತಿಯಲ್ಲೂ ಅವರನ್ನ ಪ್ರೀತಿಸ್ತೀವಿ ಅಂತ ಅವರಿಗೆ ಅನಿಸಬೇಕು.

16 ಸಹೋದರ ಸಹೋದರಿಯರು ಮಾಡೋ ಸೇವೆಯನ್ನ ಯೆಹೋವ ಯಾವತ್ತೂ ಮರೆಯಲ್ಲ ಅಂತ ಪೌಲ ಅವರಿಗೆ ಹೇಳಿದ. (ಇಬ್ರಿ. 10:32-34) ನಾವು ಕೂಡ ನಂಬಿಕೆ ಕಮ್ಮಿಯಾಗಿರೋ ಸಹೋದರ ಸಹೋದರಿಯರ ಹತ್ರ ಮಾತಾಡುವಾಗ ಇದನ್ನೇ ಹೇಳಬೇಕು. ಅವರು ಸತ್ಯಕ್ಕೆ ಹೇಗೆ ಬಂದ್ರು, ಈ ಹಿಂದೆ ಯೆಹೋವ ಅವರಿಗೆ ಹೇಗೆಲ್ಲ ಸಹಾಯ ಮಾಡಿದ್ದಾನೆ ಅಂತ ಅವರ ಹತ್ರ ಕೇಳಿ ಮತ್ತು ಅವರು ಯೆಹೋವನಿಗೆ ತೋರಿಸಿರೋ ಪ್ರೀತಿನ ಆತನು ಯಾವತ್ತೂ ಮರೆಯಲ್ಲ, ಅವರ ಕೈ ಬಿಡಲ್ಲ ಅನ್ನೋದನ್ನ ಅವರಿಗೆ ಅರ್ಥ ಮಾಡಿಸಿ. (ಇಬ್ರಿ. 6:10; 13:5, 6) ಹೀಗೆ ಮಾಡೋದ್ರಿಂದ ಅವರಿಗೆ ಯೆಹೋವನ ಮೇಲೆ ನಂಬಿಕೆ ಜಾಸ್ತಿಯಾಗುತ್ತೆ. ಆತನ ಸೇವೆ ಮಾಡಬೇಕು ಅಂತ ಮತ್ತೆ ಆಸೆ ಬರುತ್ತೆ.

“ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ ಇರಿ”

17. ಬೇರೆಯವರ ನಂಬಿಕೆ ಕಟ್ಟೋಕೆ ನಾವೇನು ಮಾಡಬೇಕು?

17 ಒಂದು ಕಟ್ಟಡ ಕೆಲಸನ ಮಾಡ್ತಾ-ಮಾಡ್ತಾ ಅದನ್ನ ಚೆನ್ನಾಗಿ ಕಟ್ಟೋದು ಹೇಗೆ ಅಂತ ನಾವು ತಿಳುಕೊಳ್ತೀವಿ. ಅದೇ ತರ ನಮ್ಮ ಸಹೋದರ ಸಹೋದರಿಯರನ್ನ ಪ್ರೋತ್ಸಾಹಿಸ್ತಾ ಇದ್ರೆ ಅವರ ನಂಬಿಕೆಯನ್ನ ಕಟ್ಟೋದು ಹೇಗೆ ಅಂತ ಕಲಿತುಕೊಳ್ತೀವಿ. ಕಷ್ಟಗಳನ್ನ ಅನುಭವಿಸ್ತಾ ಇರೋ ಸಹೋದರ ಸಹೋದರಿಯರಿಗೆ ಬೇರೆಯವರ ಒಳ್ಳೇ ಅನುಭವಗಳನ್ನ ಹೇಳ್ತಾ ಅವರಿಗೆ ತಾಳಿಕೊಳ್ಳೋಕೆ ಸಹಾಯ ಮಾಡಿ. ಯಾವಾಗಲೂ ಬೇರೆಯವರನ್ನ ಹೊಗಳಿ. ಅವರ ಹತ್ರ ಇರೊ ಒಳ್ಳೇ ಗುಣಗಳನ್ನ ಅವರಿಗೆ ಹೇಳಿ. ಆದಷ್ಟು ಎಲ್ರ ಜೊತೆ ಶಾಂತಿ ಸಮಾಧಾನದಿಂದ ಇರಿ. ನಾನೇ ಸರಿ, ನಾನು ಹೇಳಿದ್ದೇ ನಡಿಬೇಕು ಅಂತ ವಾದ ಮಾಡದೆ ಬೇರೆಯವರ ನಿರ್ಣಯಗಳನ್ನೂ ಗೌರವಿಸಿ. ಸಹೋದರ ಸಹೋದರಿಯರ ನಂಬಿಕೆನ ಕಟ್ಟೋಕೆ ಬೈಬಲ್‌ ವಚನಗಳನ್ನ ತೋರಿಸಿ. ಬೇಕಾದ ಸಹಾಯ ಮಾಡಿ ಮತ್ತು ನಂಬಿಕೆ ಕಡಿಮೆಯಾದವರನ್ನ ಮರೆತುಬಿಡಬೇಡಿ. ಅವರಿಗೆ ಪ್ರೀತಿ ತೋರಿಸಿ.

18. ನಾವೆಲ್ಲ ಏನು ಮಾಡಬೇಕು?

18 ನಮ್ಮ ಸಹೋದರ ಸಹೋದರಿಯರು ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಾಗ ತುಂಬ ಖುಷಿಯಾಗಿ ಇರ್ತಾರೆ. ಅವರಿಗೆ ತೃಪ್ತಿನೂ ಇರುತ್ತೆ. ಅದೇ ತರ ನಾವೂ ಸಹೋದರ ಸಹೋದರಿಯರ ನಂಬಿಕೆ ಕಟ್ಟಿದ್ರೆ ನಮಗೂ ಸಂತೃಪ್ತಿ ಸಿಗುತ್ತೆ. ಕೈಯಿಂದ ಕಟ್ಟಿದ ಕಟ್ಟಡಗಳು ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಆದ್ರೆ ನಮ್ಮ ಸಹೋದರ ಸಹೋದರಿಯರ ನಂಬಿಕೆ ಶಾಶ್ವತವಾಗಿ ಇರುತ್ತೆ. ಹಾಗಾಗಿ “ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ” ಇರೋಣ.—1 ಥೆಸ. 5:11.

ಗೀತೆ 124 ಅವರನ್ನು ಆದರದಿಂದ ಸತ್ಕರಿಸಿ

a ಈ ಲೋಕದಲ್ಲಿ ಜೀವನ ಮಾಡೋದೇ ಕಷ್ಟ ಆಗಿಬಿಟ್ಟಿದೆ. ನಮ್ಮ ಸಹೋದರ ಸಹೋದರಿಯರು ತುಂಬ ಕಷ್ಟ ಪಡ್ತಿದ್ದಾರೆ. ಅವರಿಗೆ ನಾವು ಹೇಗೆಲ್ಲಾ ಸಹಾಯ ಮಾಡಬಹುದು, ಹೇಗೆ ಪ್ರೋತ್ಸಾಹ ಕೊಡಬಹುದು ಅಂತ ಈ ಲೇಖನದಲ್ಲಿ ಅಪೊಸ್ತಲ ಪೌಲನಿಂದ ಕಲಿಯೋಣ.

b ಚಿತ್ರ ವಿವರಣೆ: ಕ್ರಿಸ್ಮಸ್‌ ಹಬ್ಬ ಆಚರಿಸಬೇಕು ಅಂತ ಸ್ಕೂಲಲ್ಲಿ ಒತ್ತಾಯ ಮಾಡಿದಾಗ ತನ್ನ ಮಗಳು ಹೇಗೆ ಉತ್ತರ ಕೊಡಬೇಕು ಅಂತ ಅವಳ ಅಪ್ಪ ನಮ್ಮ ಪ್ರಕಾಶನಗಳನ್ನ ತೋರಿಸಿ ಕಲಿಸ್ತಿದ್ದಾರೆ.

c ಚಿತ್ರ ವಿವರಣೆ: ಒಬ್ಬ ದಂಪತಿ ವಿಪತ್ತು ಪರಿಹಾರ ಕೆಲಸದಲ್ಲಿ ಕೈ ಜೋಡಿಸೋಕೆ ಬೇರೆ ಕಡೆ ಹೋಗಿದ್ದಾರೆ.

d ಚಿತ್ರ ವಿವರಣೆ: ನಂಬಿಕೆ ಕಡಿಮೆಯಾಗಿರೋ ಒಬ್ಬ ಸಹೋದರನನ್ನ ನೊಡೋಕೆ ಒಬ್ಬ ಹಿರಿಯ ಹೋಗಿದ್ದಾರೆ. ಆ ಹಿರಿಯ, ಅವರಿಬ್ಬರು ತುಂಬ ವರ್ಷಗಳ ಹಿಂದೆ ಹಾಜರಾಗಿದ್ದ ಪಯನೀಯರ್‌ ಶಾಲೆಯ ಫೋಟೋಗಳನ್ನ ಆ ಸಹೋದರನಿಗೆ ತೋರಿಸ್ತಿದ್ದಾರೆ. ಆಗ ಆ ಸಹೋದರನಿಗೆ ಸಂತೋಷದ ದಿನಗಳೆಲ್ಲ ನೆನಪಾಗುತ್ತೆ. ಆ ಖುಷಿ ಮತ್ತೆ ಸಿಗಬೇಕು ಅಂತ ಅಂದುಕೊಳ್ತಾರೆ, ಸಭೆಗೆ ವಾಪಸ್‌ ಬರ್ತಾರೆ.