ಅಧ್ಯಯನ ಲೇಖನ 33
ಯೆಹೋವ ನಮ್ಮನ್ನ ತನ್ನ ಕಣ್ಗಾವಲಲ್ಲಿ ಇಟ್ಟುಕೊಂಡಿದ್ದಾನೆ
“ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ.”—ಕೀರ್ತ. 33:18.
ಗೀತೆ 22 “ಯೆಹೋವ ನನಗೆ ಕುರುಬನು”
ಕಿರುನೋಟ a
1. ಶಿಷ್ಯರನ್ನ ಕಾಪಾಡು ಅಂತ ಯೇಸು ಯೆಹೋವನ ಹತ್ರ ಯಾಕೆ ಬೇಡಿಕೊಂಡನು?
ಯೇಸು ಸಾಯೋಕೆ ಸ್ವಲ್ಪ ಮುಂಚೆ ತನ್ನ ಸ್ವರ್ಗೀಯ ಅಪ್ಪನಿಗೆ ಪ್ರಾರ್ಥನೆ ಮಾಡಿದನು. ತನ್ನ ಶಿಷ್ಯರನ್ನ ಕಾಪಾಡು ಅಂತ ಆತನ ಹತ್ರ ಕೇಳಿಕೊಂಡನು. (ಯೋಹಾ. 17:15, 20) ಆದ್ರೆ ಯೆಹೋವ ತನ್ನ ಜನರನ್ನ ಚೆನ್ನಾಗಿ ನೋಡಿಕೊಳ್ತಾನೆ, ಕಾಪಾಡ್ತಾನೆ ಅಂತ ಗೊತ್ತಿದ್ರೂ ಯೇಸು ಯಾಕೆ ಹೀಗೆ ಬೇಡಿಕೊಂಡನು? ಯಾಕಂದ್ರೆ ಮುಂದೆ ತನ್ನ ಶಿಷ್ಯರು ಸೈತಾನನಿಂದ ಹಿಂಸೆ, ವಿರೋಧಗಳನ್ನ ಅನುಭವಿಸುತ್ತಾರೆ ಅಂತ ಆತನಿಗೆ ಗೊತ್ತಿತ್ತು. ಅದನ್ನೆಲ್ಲಾ ಸಹಿಸಿಕೊಳ್ಳೋಕೆ ಅವರಿಗೆ ಯೆಹೋವನ ಸಹಾಯ ಬೇಕು ಅಂತಾನೂ ಆತನಿಗೆ ಗೊತ್ತಿತ್ತು. ಅದಕ್ಕೆ ಆತನು ಯೆಹೋವನ ಹತ್ರ ಆ ತರ ಬೇಡಿಕೊಂಡನು.
2. ಕಷ್ಟಗಳು ಬಂದ್ರೂ ಯಾಕೆ ಭಯಪಡಬಾರದು ಅಂತ ಕೀರ್ತನೆ 33:18-20 ಹೇಳುತ್ತೆ?
2 ಸೈತಾನನ ಕೈಯಲ್ಲಿರೋ ಈ ಲೋಕ ಸತ್ಯ ಕ್ರೈಸ್ತರಿಗೆ ತುಂಬ ಕಷ್ಟಗಳನ್ನ ಕೊಡುತ್ತಿದೆ. ಈ ಕಷ್ಟಗಳು ನಮ್ಮನ್ನ ಕುಗ್ಗಿಸಬಹುದು. ಯೆಹೋವನ ಮೇಲಿರೋ ನಂಬಿಕೆನ ಕಳಕೊಳ್ಳೋ ತರ ಮಾಡಿಬಿಡಬಹುದು. ಆದ್ರೆ ನಾವು ಭಯಪಡೋ ಅವಶ್ಯಕತೆ ಇಲ್ಲ. ಯೆಹೋವ ನಾವು ಪಡುತ್ತಿರೋ ಕಷ್ಟಗಳನ್ನ ನೋಡುತ್ತಿದ್ದಾನೆ, ನಮಗೆ ಸಹಾಯ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ. “ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ” ಅಂತ ಬೈಬಲ್ ಹೇಳುತ್ತೆ. ಇದು ತುಂಬ ಜನರ ಜೀವನದಲ್ಲಿ ನಿಜ ಆಗಿದೆ. ಈಗ ಇಬ್ಬರ ಉದಾಹರಣೆಗಳನ್ನ ನೋಡೋಣ.—ಕೀರ್ತನೆ 33:18-20 ಓದಿ.
ನಮಗೆ ಯಾರೂ ಇಲ್ಲ ಅಂತ ಅನಿಸಿದಾಗ
3. ನಾವು ಒಂಟಿ ಅಂತ ನಮಗೆ ಯಾವಾಗ ಅನಿಸುತ್ತೆ?
3 ನಮ್ಮ ಜೊತೆ ದೊಡ್ಡ ಆಧ್ಯಾತ್ಮಿಕ ಕುಟುಂಬನೇ ಇದ್ರೂ ಕೆಲವೊಮ್ಮೆ ನಮಗೆ ಯಾರೂ ಇಲ್ಲ ಅಂತ ಅನಿಸುತ್ತೆ. ಉದಾಹರಣೆಗೆ, ಮಕ್ಕಳು ಸ್ಕೂಲಲ್ಲಿ ಎಲ್ಲರ ಮುಂದೆ ತಮ್ಮ ನಂಬಿಕೆ ಬಗ್ಗೆ ಹೇಳಬೇಕಾದ ಪರಿಸ್ಥಿತಿ ಬಂದಾಗ ಅಥವಾ ಒಂದು ಸಭೆ ಬಿಟ್ಟು ಇನ್ನೊಂದು ಸಭೆಗೆ ಹೋದಾಗ ‘ನಾನು ಒಂಟಿಯಾಗಿಬಿಟ್ಟೆ, ನನ್ನ ಜೊತೆ ಯಾರೂ ಇಲ್ಲ’ ಅಂತ ಅನಿಸುತ್ತೆ. ನಾವೂ ಕೆಲವೊಮ್ಮೆ ದುಃಖದಲ್ಲಿ ಮುಳುಗಿ ಹೋದಾಗ, ಕುಗ್ಗಿಹೋದಾಗ ಹೀಗನಿಸಿದೆ. ನಮ್ಮ ಭಾವನೆಗಳನ್ನ ಹೇಳಿಕೊಳ್ಳೋಕೆ ನಮಗೆ ಯಾರೂ ಇಲ್ಲ ಅಥವಾ ಹೇಳಿದ್ರೂ ಅವರಿಗೆ ಅರ್ಥ ಆಗಲ್ಲ ಅಂತ ಅಂದುಕೊಂಡುಬಿಡ್ತೀವಿ. ಇನ್ನೂ ಕೆಲವೊಮ್ಮೆ ನಾವು ಎಲ್ಲರಿಗೂ ಬೇಡವಾದವರು ಅಂತ ಅನಿಸಿಬಿಡಬಹುದು. ಕಾರಣ ಏನೇ ಇರಲಿ, ನಮಗೆ ಒಂಟಿತನ ಕಾಡಿದಾಗ ತುಂಬ ಚಿಂತೆ ಆಗುತ್ತೆ. ಆದ್ರೆ ನಾವು ಯಾವಾಗಲೂ ಖುಷಿಖುಷಿಯಾಗಿರಬೇಕು, ಚಿಂತೆ ಮಾಡಬಾರದು ಅನ್ನೋದೇ ಯೆಹೋವನ ಆಸೆ.
4. “ಈಗ ಜೀವಂತವಾಗಿ ಇರೋನು ನಾನೊಬ್ಬನೇ” ಅಂತ ಎಲೀಯ ಯಾಕೆ ಹೇಳಿದ?
4 ಎಲೀಯನ ಉದಾಹರಣೆ ನೋಡಿ. ರಾಣಿ ಈಜೆಬೇಲಳು ಅವನ ಜೀವ ತೆಗೆಯೋಕೆ ಪಣತೊಟ್ಟಿದ್ದಾಳೆ. ಅವನು ಜೀವ ಕಾಪಾಡಿಕೊಳ್ಳೋಕೆ ಓಡಿಹೋಗಿಬಿಟ್ಟಿದ್ದಾನೆ. 40 ದಿವಸ ಆದ್ರೂ ಇನ್ನೂ ಓಡುತ್ತಾನೇ ಇದ್ದಾನೆ. (1 ಅರ. 19:1-9) ಈಗ ಅವನು ಒಂದು ಗವಿಯಲ್ಲಿ ಅವಿತುಕೊಂಡಿದ್ದಾನೆ. ಪ್ರವಾದಿಗಳಲ್ಲಿ “ಜೀವಂತವಾಗಿ ಇರೋನು ನಾನೊಬ್ಬನೇ” ಅಂತ ಅಳುತ್ತಾ ಯೆಹೋವನಿಗೆ ಹೇಳ್ತಿದ್ದಾನೆ. (1 ಅರ. 19:10) ಆದ್ರೆ ಆ ಊರಲ್ಲಿ ಇನ್ನೂ ಬೇರೆ ಪ್ರವಾದಿಗಳೂ ಇದ್ರು. ಓಬದ್ಯ ಈಜೆಬೇಲಳ ಕೈಯಿಂದ 100 ಪ್ರವಾದಿಗಳ ಪ್ರಾಣವನ್ನ ಕಾಪಾಡಿದ್ದ. (1 ಅರ. 18:7, 13) ಇಷ್ಟೆಲ್ಲಾ ಆಗಿದ್ರೂ ಎಲೀಯನಿಗೆ ತಾನೊಬ್ಬನೇ ಇದ್ದೀನಿ ಅಂತ ಯಾಕೆ ಅನಿಸಿತು? ಓಬದ್ಯ ಕಾಪಾಡಿದ ಪ್ರವಾದಿಗಳು ಸತ್ತು ಹೋದ್ರು ಅಂತ ಅವನು ಅಂದುಕೊಂಡನಾ? ಯೆಹೋವನೇ ನಿಜವಾದ ದೇವರು ಅಂತ ಕರ್ಮೆಲ್ ಬೆಟ್ಟದ ಹತ್ರ ಸಾಬೀತಾದ್ರೂ ಜನರು ಯೆಹೋವನ ಕಡೆ ಬರದೆ ಇದ್ದಿದ್ರಿಂದ ಅವನಿಗೆ ಆ ತರ ಅನಿಸಿತಾ? ಅಥವಾ ತನ್ನ ಜೀವ ಅಪಾಯದಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ, ತನ್ನನ್ನ ಕಾಪಾಡೋಕೆ ಯಾರೂ ಬರಲ್ಲ ಅಂತ ಅಂದುಕೊಂಡನಾ? ಅವನ ಮನಸ್ಸಲ್ಲಿ ಏನೆಲ್ಲಾ ಓಡುತ್ತಿತ್ತು ಅಂತ ನಮಗೆ ಗೊತ್ತಿಲ್ಲ. ಆದ್ರೆ ಒಂದಂತೂ ನಿಜ, ಎಲೀಯನಿಗೆ ತಾನು ಒಂಟಿ ಅಂತ ಯಾಕೆ ಅನಿಸುತ್ತಿತ್ತು ಅನ್ನೋದು ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು ಮತ್ತು ಅವನಿಗೆ ಬೇಕಾದ ಸಹಾಯನೂ ಮಾಡಿದನು.
5. ಎಲೀಯ ಒಂಟಿಯಲ್ಲ ಅಂತ ಯೆಹೋವ ಅವನಿಗೆ ಹೇಗೆ ಅರ್ಥಮಾಡಿಸಿದನು?
5 ಯೆಹೋವ ಎಲೀಯನಿಗೆ ತುಂಬ ವಿಧಗಳಲ್ಲಿ ಸಹಾಯ ಮಾಡಿದನು. ಮೊದಲು ಅವನನ್ನ ಮಾತಾಡಿಸಿದನು. “ನೀನಿಲ್ಲಿ ಏನು ಮಾಡ್ತಿದ್ದೀಯ” ಅಂತ ಎರಡು ಸಲ ಕೇಳಿದನು. (1 ಅರ. 19:9, 13) ಆಗ ಎಲೀಯ ತನ್ನ ಮನಸ್ಸಲ್ಲಿದ್ದ ಭಾವನೆಗಳನ್ನ ತೋಡಿಕೊಂಡ. ಅದನ್ನ ಯೆಹೋವ ಗಮನಕೊಟ್ಟು ಕೇಳಿಸಿಕೊಂಡನು. ತಾನು ಎಲೀಯನ ಜೊತೆ ಇರ್ತೀನಿ ಅಂತ ಆಶ್ವಾಸನೆ ಕೊಟ್ಟನು, ತನಗೆ ಎಷ್ಟು ಶಕ್ತಿ ಇದೆ ಅನ್ನೋದನ್ನ ತೋರಿಸಿದನು. ತನ್ನನ್ನ ಆರಾಧಿಸೋರು ಇಸ್ರಾಯೇಲಲ್ಲಿ ಇನ್ನೂ ಸಾವಿರಾರು ಜನ ಇದ್ದಾರೆ ಅಂತಾನೂ ಹೇಳಿದನು. (1 ಅರ. 19:11, 12, 18) ಎಲೀಯ ತನ್ನ ಮನಸ್ಸಲ್ಲಿ ಇರೋದನ್ನೆಲ್ಲ ಯೆಹೋವನ ಹತ್ರ ಹೇಳಿಕೊಂಡಾಗ ಮತ್ತು ಆತನು ಅವನಿಗೆ ಉತ್ತರ ಕೊಟ್ಟಾಗ ಎಲೀಯನಿಗೆ ಎಷ್ಟು ಸಮಾಧಾನ ಆಗಿರಬೇಕಲ್ವಾ? ಯೆಹೋವ ದೇವರು ಎಲೀಯನಿಗೆ ಕೆಲವು ಮುಖ್ಯವಾದ ಕೆಲಸಗಳನ್ನ ಕೊಟ್ಟನು. ಹಜಾಯೇಲನನ್ನ ಅರಾಮ್ಯದ ರಾಜನಾಗಿ, ಯೇಹುವನ್ನ ಇಸ್ರಾಯೇಲಿನ ರಾಜನಾಗಿ ಮತ್ತು ಎಲೀಷನನ್ನ ಪ್ರವಾದಿಯಾಗಿ ಅಭಿಷೇಕಿಸೋಕೆ ಹೇಳಿದನು. (1 ಅರ. 19:15, 16) ಹೀಗೆ ಹಳೆಯದನ್ನೇ ನೆನಸಿಕೊಂಡು ಚಿಂತೆ ಮಾಡ್ತಾ ಕೂರದೆ ತಾನು ಕೊಟ್ಟ ಕೆಲಸದ ಮೇಲೆ ಗಮನ ಕೊಡೋಕೆ ಯೆಹೋವ ಎಲೀಯನಿಗೆ ಸಹಾಯ ಮಾಡಿದನು. ಅಷ್ಟೇ ಅಲ್ಲ, ಅವನು ಒಂಟಿಯಾಗಿರಬಾರದು ಅಂತ ಅವನ ಹತ್ರ ಎಲೀಷನನ್ನ ಕಳುಹಿಸಿದನು. ನಮಗೂ ಒಂಟಿತನ ಕಾಡಿದಾಗ ಯೆಹೋವ ಹೇಗೆ ಸಹಾಯಮಾಡ್ತಾನೆ?
6. ನೀವು ಒಂಟಿ ಅಂತ ಅನಿಸಿದಾಗ ಪ್ರಾರ್ಥನೆಯಲ್ಲಿ ಏನೆಲ್ಲಾ ಕೇಳಬಹುದು? (ಕೀರ್ತನೆ 62:8)
6 ಏನೇ ಸಮಸ್ಯೆ ಬಂದ್ರೂ ನಾವು ಆತನಿಗೆ ಪ್ರಾರ್ಥನೆ ಮಾಡಬೇಕು ಅಂತ ಯೆಹೋವ ಬಯಸುತ್ತಾನೆ. ನಮ್ಮ ಕಷ್ಟಗಳನ್ನ ಆತನು ನೋಡ್ತಿದ್ದಾನೆ. ನಾವು ಯಾವಾಗ ಪ್ರಾರ್ಥನೆ ಮಾಡಿದ್ರೂ ಆತನು ಕೇಳಿಸಿಕೊಳ್ತಾನೆ. (1 ಥೆಸ. 5:17) ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ಳೋ ಆಸೆ ತನಗಿದೆ ಅಂತಾನೂ ಆತನು ಹೇಳಿದ್ದಾನೆ. (ಜ್ಞಾನೋ. 15:8) ನಿಮಗೆ ಒಂಟಿ ಅನಿಸಿದಾಗ ಎಲೀಯನ ತರಾನೇ ಯೆಹೋವನ ಹತ್ರ ನಿಮ್ಮ ಮನಸ್ಸಲ್ಲಿರೋ ಭಾವನೆಗಳನ್ನೆಲ್ಲಾ ತೋಡಿಕೊಳ್ಳಿ. (ಕೀರ್ತನೆ 62:8 ಓದಿ.) ನಿಮ್ಮ ಚಿಂತೆಗಳೇನು, ನಿಮಗೆ ಹೇಗನಿಸುತ್ತಿದೆ ಅನ್ನೋದನ್ನೆಲ್ಲ ನೀವು ಯೆಹೋವನ ಹತ್ರ ಹೇಳಿಕೊಂಡ್ರೆ ಆತನು ನಿಮಗೆ ಖಂಡಿತ ಸಹಾಯ ಮಾಡ್ತಾನೆ. ಉದಾಹರಣೆಗೆ, ಸ್ಕೂಲ್‌ನಲ್ಲಿ ಇಡೀ ಕ್ಲಾಸ್ ಮುಂದೆ ನೀವು ನಿಮ್ಮ ನಂಬಿಕೆ ಬಗ್ಗೆ ಮಾತಾಡಬೇಕಾದ ಪರಿಸ್ಥಿತಿ ಬಂದಾಗ ನಿಮಗೆ ಭಯ ಆಗಬಹುದು. ಆಗ ಧೈರ್ಯಕ್ಕಾಗಿ, ವಿವೇಕಕ್ಕಾಗಿ ಯೆಹೋವನ ಹತ್ರ ಕೇಳಿ. (ಲೂಕ 21:14, 15) ನೀವು ಕುಗ್ಗಿಹೋಗಿರುವಾಗ ಅಥವಾ ಬೇಜಾರಲ್ಲಿ ಇರುವಾಗ ಪ್ರೌಢ ಕ್ರೈಸ್ತರ ಹತ್ರ ಮಾತಾಡೋಕೆ ಸಹಾಯ ಮಾಡಪ್ಪಾ ಅಂತ ನೀವು ಯೆಹೋವನನ್ನು ಕೇಳಿ. ನೀವು ಮಾತಾಡುವಾಗ ಅದನ್ನ ಕೇಳಿಸಿಕೊಳ್ಳೋಕೆ ಮತ್ತು ಅದನ್ನ ಅರ್ಥಮಾಡಿಕೊಳ್ಳೋಕೆ ಅವರಿಗೆ ಒಳ್ಳೇ ಮನಸ್ಸು ಕೊಡಪ್ಪಾ ಅಂತಾನೂ ಕೇಳಿ. ನಿಮಗೆ ಒಂಟಿ ಅಂತ ಅನಿಸಿದಾಗ ಯೆಹೋವನ ಹತ್ರ ಮನಸ್ಸು ಬಿಚ್ಚಿ ಮಾತಾಡಿ. ನಿಮ್ಮ ಪ್ರಾರ್ಥನೆಗೆ ಆತನು ಹೇಗೆ ಉತ್ತರ ಕೊಡುತ್ತಾನೆ ಅಂತ ನೋಡಿ. ಬೇರೆಯವರು ಕೊಡೋ ಸಹಾಯನೂ ತಗೊಳ್ಳಿ. ಇದ್ರಿಂದ ನೀವು ಒಂಟಿ ಭಾವನೆಯಿಂದ ಹೊರಗೆ ಬರೋಕೆ ಆಗುತ್ತೆ.
7. ಸಹೋದರ ಮೊರೆಸ್ಸಿಯೋ ಅವರಿಂದ ನೀವೇನು ಕಲಿತ್ರಿ?
7 ಯೆಹೋವ ದೇವರು ನಮಗೆ ಸಭೆಯಲ್ಲಿ ಮತ್ತು ಸೇವೆಯಲ್ಲಿ ಮಾಡೋಕೆ ತುಂಬ ಕೆಲಸಗಳನ್ನ ಕೊಟ್ಟಿದ್ದಾನೆ. ಈ ಕೆಲಸಗಳನ್ನ ಮಾಡೋಕೆ ನಾವು ಎಷ್ಟು ಪ್ರಯತ್ನ ಮಾಡ್ತಿದ್ದೀವಿ ಅನ್ನೋದನ್ನ ಆತನು ನೋಡ್ತಾನೆ ಮತ್ತು ಅದನ್ನ ಮೆಚ್ಚಿಕೊಳ್ತಾನೆ. (ಕೀರ್ತ. 110:3) ಯೆಹೋವ ಕೊಟ್ಟಿರೋ ಕೆಲಸನ ಮಾಡ್ತಾ ನಾವು ಬಿಜಿ಼ಯಾಗಿದ್ರೆ ಒಂಟಿತನದಿಂದ ಹೊರಬರೋಕೆ ಆಗುತ್ತೆ. ಅದಕ್ಕೆ ಮೊರೆಸ್ಸಿಯೋ ಅನ್ನೋ ಒಬ್ಬ ಯುವ ಸಹೋದರನ ಉದಾಹರಣೆ ನೋಡಿ. b ಅವನು ದೀಕ್ಷಾಸ್ನಾನ ತಗೊಂಡ ಸ್ವಲ್ಪ ಸಮಯದಲ್ಲೇ ಅವನ ಫ್ರೆಂಡ್ ಸತ್ಯ ಬಿಟ್ಟುಹೋದ. “ಆಗ ನಂಗೆ ನನ್ನ ಮೇಲಿದ್ದ ನಂಬಿಕೆನೇ ಹೊರಟು ಹೋಯ್ತು. ನಾನು ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವಾಗ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತೀನಾ ಅನ್ನೋ ಸಂಶಯ ಬಂತು. ನಾನು ಒಂಟಿಯಾಗಿಬಿಟ್ಟಿದ್ದೆ. ನನ್ನ ಮನಸ್ಸಲ್ಲಿ ನಡೀತಿದ್ದ ಹೋರಾಟನ ಬೇರೆಯವರಿಗೆ ಹೇಳಿದ್ರೂ ಅವರಿಗೆ ಅರ್ಥ ಆಗಲ್ಲ ಅನಿಸುತ್ತಿತ್ತು” ಅಂತ ಅವನು ಹೇಳ್ತಾನೆ. ಆಗ ಅವನಿಗೆ ಯಾವುದು ಸಹಾಯ ಮಾಡಿತು? “ನಾನು ಸೇವೆನ ಜಾಸ್ತಿ ಮಾಡಿದೆ. ಇದ್ರಿಂದ ನನ್ನ ಬಗ್ಗೆನೇ ಯೋಚಿಸ್ತಾ ಚಿಂತೆಯಲ್ಲಿ ಮುಳುಗದೇ ಇರೋಕೆ ಸಹಾಯ ಸಿಕ್ತು. ಅಷ್ಟೇ ಅಲ್ಲ, ಬೇರೆಯವರ ಜೊತೆ ಸೇವೆ ಮಾಡಿದ್ರಿಂದ ಖುಷಿಖುಷಿಯಾಗಿ ಇರೋಕೆ ಆಗುತ್ತಿತ್ತು ಮತ್ತು ನಾನು ಒಂಟಿ ಅನಿಸ್ತಿರಲಿಲ್ಲ” ಅಂತ ಅವನು ಹೇಳ್ತಾನೆ. ನಾವು ಮುಂಚಿನ ತರ ಸಹೋದರ ಸಹೋದರಿಯರ ಜೊತೆ ಸೇವೆ ಮಾಡೋಕೆ ಆಗದೆ ಇದ್ರೂ ಟೆಲಿಫೋನ್ ಮತ್ತು ಪತ್ರ ಬರೆಯೋ ಮೂಲಕ ಸೇವೆ ಮಾಡುತ್ತಾ ಅವರ ಜೊತೆ ಸಮಯ ಕಳೆಯಬಹುದು. ಮೊರೆಸ್ಸಿಯೋಗೆ ಇನ್ನೂ ಯಾವುದು ಸಹಾಯ ಮಾಡ್ತು ಅಂತ ಅವರ ಮಾತಲ್ಲೇ ಕೇಳಿ: “ನಾನು ಸಭೆ ಕೆಲಸಗಳನ್ನ ಮಾಡ್ತಾ ಬಿಜಿ಼ಯಾಗಿ ಇರ್ತಿದ್ದೆ. ವಿದ್ಯಾರ್ಥಿ ನೇಮಕನ ಚೆನ್ನಾಗಿ ತಯಾರಿ ಮಾಡೋಕೆ ಜಾಸ್ತಿ ಸಮಯ ಕಳೆಯುತ್ತಿದ್ದೆ. ಈ ನೇಮಕಗಳಿಂದ ಯೆಹೋವ ದೇವರು ಮತ್ತು ಸಭೆಯವರು ನನ್ನನ್ನ ಎಷ್ಟು ಇಷ್ಟಪಡ್ತಾರೆ ಅಂತ ತಿಳಿದುಕೊಂಡೆ.”
ನಾವು ಕಷ್ಟಗಳಲ್ಲಿ ಮುಳುಗಿ ಹೋದಾಗ
8. ನಮಗೆ ಕಷ್ಟಗಳು ಬಂದಾಗ ಹೇಗನಿಸುತ್ತೆ?
8 ಕೊನೇ ದಿನಗಳಲ್ಲಿ ಕಷ್ಟ ಬರುತ್ತೆ ಅಂತ ನಮಗೆ ಗೊತ್ತು. (2 ತಿಮೊ. 3:1) ಆದ್ರೆ ಕೆಲವೊಮ್ಮೆ ಇಂಥ ಕಷ್ಟಗಳು ಬಂದಾಗ ಸಿಡಿಲು ಬಡಿದ ಹಾಗಾಗುತ್ತೆ. ಉದಾಹರಣೆಗೆ, ನಮಗೆ ಹಣಕಾಸಿನ ತೊಂದರೆಗಳು ಬರಬಹುದು, ದೊಡ್ಡ ಕಾಯಿಲೆ ಬರಬಹುದು ಅಥವಾ ನಮ್ಮವರು ಯಾರಾದ್ರೂ ತೀರಿಹೋಗಬಹುದು. ಅದ್ರಲ್ಲೂ ಇಂಥ ಸಮಸ್ಯೆಗಳು ಒಂದಾದ ಮೇಲೊಂದು ಬಂದಾಗ ಅಥವಾ ಒಟ್ಟೊಟ್ಟಿಗೆ ಬಂದಾಗ ನಿಂತ ನೆಲನೇ ಕುಸಿದ ಹಾಗಾಗುತ್ತೆ. ಆದ್ರೆ ಒಂದು ವಿಷಯ ನೆನಪಿಡಿ. ಯೆಹೋವ ನಮ್ಮನ್ನ ನೋಡ್ತಿದ್ದಾನೆ, ನಾವು ಪಡುತ್ತಿರೋ ಕಷ್ಟಗಳು ಆತನಿಗೆ ಚೆನ್ನಾಗಿ ಗೊತ್ತು. ಕಷ್ಟಗಳನ್ನ ತಾಳಿಕೊಳ್ಳೋಕೆ ಆತನು ಖಂಡಿತ ಸಹಾಯ ಮಾಡ್ತಾನೆ.
9. ಯೋಬನಿಗೆ ಯಾವೆಲ್ಲಾ ಕಷ್ಟಗಳು ಬಂದವು? ವಿವರಿಸಿ.
9 ಯೋಬನಿಗೆ ಯೆಹೋವ ಹೇಗೆ ಸಹಾಯ ಮಾಡಿದನು ಅಂತ ನೋಡಿ. ಯೋಬನ ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬಂತು. ಒಂದೇ ದಿನದಲ್ಲಿ ಅವನ ಎದೆನೇ ಒಡೆದು ಹೋಗೋ ಸುದ್ದಿಗಳನ್ನ ಕೇಳಿಸಿಕೊಂಡ. ಅವನ ಆಳುಗಳು ತೀರಿಹೋದ್ರು. ತನ್ನ ಆಸ್ತಿಪಾಸ್ತಿನೆಲ್ಲಾ ಕಳಕೊಂಡ ಮತ್ತು ಮಕ್ಕಳನ್ನೂ ಕಳಕೊಂಡ. (ಯೋಬ 1:13-19) ಈ ಸುದ್ದಿಗಳನ್ನೆಲ್ಲಾ ಕೇಳಿಸಿಕೊಂಡು ಸುಧಾರಿಸಿಕೊಳ್ಳುವಷ್ಟರಲ್ಲಿ ಅವನಿಗೆ ಕೆಟ್ಟ ಕಾಯಿಲೆ ಬಂದು ಅವನ ಶರೀರ ವಿಕಾರವಾಗೋಯ್ತು. (ಯೋಬ 2:7) ಅವನು ನೋವಲ್ಲಿ ನರಳುತ್ತಾ “ಜೀವನದಲ್ಲಿ ಜಿಗುಪ್ಸೆ ಹುಟ್ಟಿದೆ, ಬದುಕೋ ಆಸೆ ನನಗಿಲ್ಲ.” ಅಂತ ಯೆಹೋವನಿಗೆ ಹೇಳಿದ.—ಯೋಬ 7:16.
10. ಯೋಬ ಕಷ್ಟಗಳನ್ನ ತಾಳಿಕೊಳ್ಳೋಕೆ ಯೆಹೋವ ಹೇಗೆ ಸಹಾಯ ಮಾಡಿದನು? (ಮುಖಪುಟ ಚಿತ್ರ ನೋಡಿ.)
10 ಯೆಹೋವ ದೇವರು ಯೋಬನನ್ನ ಮತ್ತು ಅವನಿಗೆ ಬಂದ ಕಷ್ಟಗಳನ್ನ ನೋಡ್ತಾ ಇದ್ದನು. ಆತನಿಗೆ ಯೋಬನ ಮೇಲೆ ಪ್ರೀತಿ ಇದ್ದಿದ್ರಿಂದಾನೇ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಅವನಿಗೆ ಸಹಾಯ ಮಾಡಿದನು. ಯೋಬನ ಹತ್ರ ಮಾತಾಡುವಾಗ ಯೆಹೋವ ತನಗೆಷ್ಟು ವಿವೇಕ ಇದೆ, ತನ್ನ ಸೃಷ್ಟಿಜೀವಿಗಳ ಮೇಲೆ ತನಗೆ ಎಷ್ಟು ಪ್ರೀತಿ, ಕಾಳಜಿ ಇದೆ ಅಂತ ಹೇಳ್ತಾ ಅನೇಕ ಪ್ರಾಣಿಗಳ ಬಗ್ಗೆ ಮಾತಾಡಿದನು. (ಯೋಬ 38:1, 2; 39:9, 13, 19, 27; 40:15; 41:1, 2) ಅಷ್ಟೇ ಅಲ್ಲ, ಯೋಬನಿಗೆ ಸಮಾಧಾನ ಮಾಡೋಕೆ ಮತ್ತು ಧೈರ್ಯ ತುಂಬೋಕೆ ಎಲೀಹುನ ಅವನ ಹತ್ರ ಕಳುಹಿಸಿದನು. ಕಷ್ಟಗಳು ಬಂದಾಗ ತಾಳಿಕೊಳ್ಳುವವರ ಕೈಯನ್ನ ಯೆಹೋವ ಯಾವತ್ತೂ ಬಿಡಲ್ಲ, ಅವರನ್ನ ಆಶೀರ್ವದಿಸುತ್ತಾನೆ ಅಂತ ಎಲೀಹು ಯೋಬನಿಗೆ ಅರ್ಥಮಾಡಿಸಿದನು. ಯೋಬ ತಪ್ಪಾಗಿ ಯೋಚನೆ ಮಾಡುತ್ತಿದ್ದಾಗ ಎಲೀಹು ಅವನನ್ನ ಪ್ರೀತಿಯಿಂದ ತಿದ್ದಿದ. ಇಡೀ ವಿಶ್ವವನ್ನೇ ಸೃಷ್ಟಿಸಿರೋ ಯೆಹೋವನ ಮುಂದೆ ನಾವು ಏನೇನೂ ಅಲ್ಲ. ಹಾಗಾಗಿ ನಾವು ನಮ್ಮ ಬಗ್ಗೆನೇ ಯೋಚನೆ ಮಾಡ್ತಾ ಇರೋದು ತಪ್ಪು ಅಂತ ಯೋಬನಿಗೆ ಅರ್ಥಮಾಡಿಸಿದ. (ಯೋಬ 37:14) ಅಷ್ಟೇ ಅಲ್ಲ, ಯೆಹೋವ ಯೋಬನಿಗೆ ಒಂದು ಕೆಲಸ ಕೊಟ್ಟನು. ತಪ್ಪುಮಾಡಿದ ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥನೆ ಮಾಡೋಕೆ ಅವನಿಗೆ ಹೇಳಿದನು. (ಯೋಬ 42:8-10) ಯೋಬನ ತರ ನಮಗೂ ಕಷ್ಟಗಳು ಬಂದಾಗ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ?
11. ಬೈಬಲಲ್ಲಿ ಯಾವ ಸಾಂತ್ವನದ ಮಾತುಗಳಿವೆ?
11 ಯೋಬನ ಹತ್ರ ಮಾತಾಡಿದ ತರ ಯೆಹೋವ ದೇವರು ನಮ್ಮ ಹತ್ರ ನೇರವಾಗಿ ಮಾತಾಡಲ್ಲ, ನಿಜ. ಆದ್ರೆ ಬೈಬಲ್ ಮೂಲಕ ಮಾತಾಡುತ್ತಾನೆ. (ರೋಮ. 15:4) ಮುಂದೆ ಎಲ್ಲ ಸರಿಹೋಗುತ್ತೆ ಅನ್ನೋ ಸಾಂತ್ವನದ ಮಾತುಗಳನ್ನ ಬೈಬಲ್‌ನಲ್ಲಿ ಹೇಳಿದ್ದಾನೆ. ಅವುಗಳಲ್ಲಿ ಕೆಲವೊಂದು ಉದಾಹರಣೆಗಳನ್ನ ನೋಡೋಣ. ಯಾವ ಕಷ್ಟಗಳೂ “ದೇವರು ತೋರಿಸೋ ಪ್ರೀತಿಯಿಂದ ನಮ್ಮನ್ನ ದೂರ ಮಾಡಕ್ಕಾಗಲ್ಲ” ಅಂತ ಬೈಬಲಲ್ಲಿದೆ. (ರೋಮ. 8:38, 39) ಅಷ್ಟೇ ಅಲ್ಲ, ಯಾರು ಆತನಿಗೆ ಪ್ರಾರ್ಥನೆ ಮಾಡುತ್ತಾರೋ “ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ” ಅಂತಾನೂ ಹೇಳಿದೆ. (ಕೀರ್ತ. 145:18) ನಾವು ಕಷ್ಟದಲ್ಲಿ ಇದ್ದಾಗಲೂ ಯೆಹೋವನ ಮೇಲೆ ಭರವಸೆ ಇಟ್ರೆ ಖುಷಿಖುಷಿಯಾಗಿ ಇರೋಕೆ ಮತ್ತು ಅದನ್ನ ತಾಳಿಕೊಳ್ಳೋಕೆ ಆಗುತ್ತೆ ಅಂತ ಆತನು ಹೇಳಿದ್ದಾನೆ. (1 ಕೊರಿಂ. 10:13; ಯಾಕೋ. 1:2, 12) ಈಗ ನಾವು ಅನುಭವಿಸ್ತಿರೋ ಕಷ್ಟಗಳೆಲ್ಲ ಬರೀ ಸ್ವಲ್ಪಕಾಲ ಮಾತ್ರ, ಇವನ್ನ ನಾವು ಸಹಿಸಿಕೊಂಡ್ರೆ ಮುಂದೆ ಶಾಶ್ವತವಾದ ಆಶೀರ್ವಾದಗಳು ಸಿಗುತ್ತೆ ಅಂತ ಬೈಬಲ್ ಹೇಳುತ್ತೆ. (2 ಕೊರಿಂ. 4:16-18) ನಮ್ಮ ಕಷ್ಟಕ್ಕೆ ಕಾರಣ ಆಗಿರೋ ಸೈತಾನನನ್ನ ಮತ್ತು ಅವನ ತರ ನಡೆದುಕೊಳ್ಳೋ ಜನರನ್ನ ನಾಶ ಮಾಡುತ್ತೀನಿ ಅಂತಾನೂ ಯೆಹೋವ ಮಾತುಕೊಟ್ಟಿದ್ದಾನೆ. (ಕೀರ್ತ. 37:10) ಸಾಂತ್ವನ ಕೊಡೋ ಇಂಥ ವಚನಗಳನ್ನ ನೀವು ಬಾಯಿಪಾಠ ಮಾಡಿಕೊಂಡಿದ್ದೀರಾ?
12. ಬೈಬಲಿಂದ ಸಹಾಯ ಪಡೆದುಕೊಳ್ಳೋಕೆ ನಾವೇನು ಮಾಡಬೇಕು?
12 ನಾವು ಪ್ರತಿದಿನ ಬೈಬಲ್ ಓದಬೇಕು, ಓದಿದ್ರ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು ಅಂತ ಯೆಹೋವ ಬಯಸ್ತಾನೆ. ನಾವು ಕಲಿತಿದ್ದನ್ನ ಜೀವನದಲ್ಲಿ ಪಾಲಿಸಿದಾಗ ನಮ್ಮ ನಂಬಿಕೆ ಗಟ್ಟಿಯಾಗುತ್ತೆ, ಯೆಹೋವನಿಗೆ ಹತ್ರ ಆಗ್ತೀವಿ ಮತ್ತು ಕಷ್ಟಗಳನ್ನ ತಾಳಿಕೊಳ್ಳೋಕೆ ಆಗುತ್ತೆ. ಯೆಹೋವನ ಮಾತನ್ನ ಕೇಳಿ ಯಾರು ಅದರ ತರ ನಡೆದುಕೊಳ್ತಾರೋ ಅವರಿಗೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಅಂದ್ರೆ ಪವಿತ್ರಶಕ್ತಿಯನ್ನ ಆತನು ಕೊಡ್ತಾನೆ. ಇದ್ರಿಂದ ನಾವು ಎಂಥ ಕಷ್ಟ ಬಂದ್ರೂ ಸಹಿಸಿಕೊಳ್ಳೋಕೆ ಆಗುತ್ತೆ.—2 ಕೊರಿಂ. 4:7-10.
13. “ನಂಬಿಗಸ್ತ, ವಿವೇಕಿ ಆದ ಆಳು” ಕೊಡೋ ಆಧ್ಯಾತ್ಮಿಕ ಆಹಾರ ಕಷ್ಟಗಳನ್ನ ತಾಳಿಕೊಳ್ಳೋಕೆ ಹೇಗೆ ಸಹಾಯ ಮಾಡುತ್ತೆ?
13 ಯೆಹೋವನ ಸಹಾಯದಿಂದ “ನಂಬಿಗಸ್ತ, ವಿವೇಕಿ ಆದ ಆಳು” ಎಷ್ಟೋ ಪತ್ರಿಕೆಗಳನ್ನ, ವಿಡಿಯೋಗಳನ್ನ ಮತ್ತು ಸಂಗೀತಗಳನ್ನ ಬಿಡುಗಡೆ ಮಾಡ್ತಾ ಇದ್ದಾರೆ. ಇದ್ರಿಂದ ನಮ್ಮ ನಂಬಿಕೆ ಬಲ ಆಗ್ತಿದೆ ಮತ್ತು ಯೆಹೋವನ ಜೊತೆಗಿರೋ ನಮ್ಮ ಸಂಬಂಧ ಗಟ್ಟಿಯಾಗ್ತಾ ಇದೆ. (ಮತ್ತಾ. 24:45) ಸಮಯಕ್ಕೆ ಸರಿಯಾಗಿ ಯೆಹೋವ ಕೊಡುತ್ತಿರೋ ಈ ಆಧ್ಯಾತ್ಮಿಕ ಸಹಾಯವನ್ನ ನಾವು ಪಡೆದುಕೊಳ್ಳಬೇಕು. ಅಮೆರಿಕದಲ್ಲಿರೋ ಒಬ್ಬ ಸಹೋದರಿಯ ಅನುಭವ ನೋಡಿ. ಒಬ್ಬ ವ್ಯಕ್ತಿ ಕುಡಿದು ಗಾಡಿ ಓಡಿಸಿ ಅವರ ತಾತನಿಗೆ ಗುದ್ದಿಬಿಟ್ರು. ಇದ್ರಿಂದ ಅವರ ತಾತ ತೀರಿಹೋದ್ರು. ಅವರ ಅಪ್ಪ-ಅಮ್ಮಗೆ ಮಾರಕ ಕಾಯಿಲೆ ಬಂತು ಮತ್ತು ಆ ಸಹೋದರಿಗೆ ಎರಡು ಸಲ ಕ್ಯಾನ್ಸರ್ ಕಾಯಿಲೆ ಬಂತು. ಆದ್ರೂ ಇವನ್ನೆಲ್ಲಾ ತಾಳಿಕೊಳ್ಳೋಕೆ ಅವರಿಗೆ ಯಾವುದು ಸಹಾಯಮಾಡ್ತು? ಇದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ನಾನು 40 ವರ್ಷದಿಂದ ಯೆಹೋವನ ಸೇವೆ ಮಾಡ್ತಾ ಇದ್ದೀನಿ. ಎಷ್ಟೋ ಕಷ್ಟಗಳನ್ನೂ ಅನುಭವಿಸಿದ್ದೀನಿ. ಆದ್ರೆ ಯೆಹೋವ ಯಾವತ್ತೂ ನನ್ನ ಕೈಬಿಟ್ಟಿಲ್ಲ. ಆತನು ನಂಬಿಗಸ್ತ, ವಿವೇಕಿ ಆದ ಆಳಿನಿಂದ ಸಮಯಕ್ಕೆ ಸರಿಯಾದ ಆಧ್ಯಾತ್ಮಿಕ ಆಹಾರ ಕೊಟ್ಟಿದ್ದಾನೆ. ಇದ್ರಿಂದ ಕಷ್ಟಗಳನ್ನ ತಾಳಿಕೊಳ್ಳೋಕೆ ನನಗೆ ಸಹಾಯ ಆಗಿದೆ. ಹಾಗಾಗಿ ‘ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!’ ಅಂತ ಯೋಬ ಹೇಳಿದ ತರಾನೇ ನಾನೂ ಹೇಳ್ತೀನಿ.”—ಯೋಬ 27:5.
14. ನಮಗೆ ಕಷ್ಟಗಳು ಬಂದಾಗ ಸಹೋದರ ಸಹೋದರಿಯರಿಂದ ಹೇಗೆ ಸಹಾಯ ಸಿಗುತ್ತೆ? (1 ಥೆಸಲೊನೀಕ 4:9)
14 ಕಷ್ಟ ಬಂದಾಗ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬೇಕು, ಪ್ರೀತಿ ತೋರಿಸಬೇಕು, ಸಾಂತ್ವನ ಕೊಡಬೇಕು ಅಂತ ಯೆಹೋವ ನಮಗೆ ಕಲಿಸಿಕೊಟ್ಟಿದ್ದಾನೆ. (2 ಕೊರಿಂ. 1:3, 4; 1 ಥೆಸಲೊನೀಕ 4:9 ಓದಿ.) ಕಷ್ಟಗಳು ಬಂದಾಗ ನಮ್ಮ ಸಹೋದರ ಸಹೋದರಿಯರು ಎಲೀಹು ತರ ನಮಗೆ ಸಹಾಯ ಮಾಡೋಕೆ ಮುಂದೆ ಬರುತ್ತಾರೆ. (ಅ. ಕಾ. 14:22) ಸಹೋದರಿ ಡ್ಯಾನ್ ಅವರ ಗಂಡನಿಗೆ ಆರೋಗ್ಯದ ಸಮಸ್ಯೆ ಬಂದಾಗ ಸಭೆಯವರು ಅವರಿಗೆ ಧೈರ್ಯ ತುಂಬಿದ್ರು ಮತ್ತು ಯೆಹೋವನ ಮೇಲಿರೋ ನಂಬಿಕೆ ಕಳಕೊಳ್ಳದೇ ಇರೋಕೆ ಸಹಾಯ ಮಾಡಿದ್ರು. ಇದ್ರ ಬಗ್ಗೆ ಆ ಸಹೋದರಿ ಹೀಗೆ ಹೇಳ್ತಾರೆ: “ಆಗ ನಂಗೆ ತುಂಬ ಕಷ್ಟ ಆಯ್ತು. ಅಂಥ ಸಮಯದಲ್ಲಿ ಯೆಹೋವ ನಮ್ಮನ್ನ ಹೇಗೆ ಕಾಪಾಡಿದನು, ಹೇಗೆ ಪ್ರೀತಿ ತೋರಿಸಿದನು ಅನ್ನೋದನ್ನ ನೋಡಿದೆ. ನಮ್ಮ ಸಭೆಯವರು ಆಗಾಗ ನಮಗೆ ಫೋನ್ ಮಾಡುತ್ತಿದ್ರು, ನಮ್ಮನ್ನ ನೋಡೋಕೆ ಬರುತ್ತಿದ್ರು, ತಬ್ಬಿಕೊಂಡು ಸಮಾಧಾನ ಮಾಡ್ತಿದ್ರು. ನಂಗೆ ಗಾಡಿ ಓಡಿಸೋಕೆ ಬರದೇ ಇದ್ದಿದ್ರಿಂದ ನನ್ನನ್ನ ಮೀಟಿಂಗ್‌ಗೆ ಮತ್ತು ಸೇವೆಗೆ ಅವರೇ ಬಂದು ಕರಕೊಂಡು ಹೋಗುತ್ತಿದ್ರು.” ಇಂಥ ಆಧ್ಯಾತ್ಮಿಕ ಕುಟುಂಬದಲ್ಲಿ ನಾವೂ ಒಬ್ಬರಾಗಿರೋದು ದೊಡ್ಡ ಆಶೀರ್ವಾದ ಅಲ್ವಾ!
ಯೆಹೋವ ಅಪ್ಪಾಗೆ ನಾವು ಋಣಿಗಳು
15. ಏನೇ ಕಷ್ಟ ಬಂದ್ರೂ ತಾಳಿಕೊಳ್ಳೋಕೆ ಆಗುತ್ತೆ ಅಂತ ನಾವು ಯಾಕೆ ಹೇಳಬಹುದು?
15 ನಮ್ಮೆಲ್ಲರಿಗೂ ಒಂದಲ್ಲ ಒಂದು ಕಷ್ಟ ಇದೆ. ಆದ್ರೆ ನಾವು ಒಂಟಿಯಲ್ಲ, ನಮ್ಮ ಪ್ರೀತಿಯ ಅಪ್ಪ ಯೆಹೋವ ನಮ್ಮ ಜೊತೆ ಇರೋದ್ರಿಂದ ಈ ಕಷ್ಟಗಳನ್ನ ತಾಳಿಕೊಳ್ಳೋಕೆ ಆಗುತ್ತೆ. ಆತನು ಯಾವಾಗಲೂ ನಮ್ಮನ್ನ ನೋಡ್ತಾ ಇರ್ತಾನೆ, ನಮ್ಮ ಪ್ರಾರ್ಥನೆಗಳನ್ನ ಕೇಳೋಕೆ ರೆಡಿ ಇದ್ದಾನೆ ಮತ್ತು ನಮಗೆ ಸಹಾಯ ಮಾಡೋಕೆ ತುದಿಗಾಲಲ್ಲಿ ನಿಂತಿರುತ್ತಾನೆ. (ಯೆಶಾ. 43:2) ಕಷ್ಟಗಳನ್ನ ತಾಳಿಕೊಳ್ಳೋಕೆ ಬೇಕಾಗಿರೋದನ್ನ ಆತನು ನಮಗೆ ಧಾರಾಳವಾಗಿ ಕೊಟ್ಟಿದ್ದಾನೆ. ಬೈಬಲ್, ಪ್ರಾರ್ಥನೆ, ಆಧ್ಯಾತ್ಮಿಕ ಆಹಾರ, ನಮ್ಮ ಪ್ರೀತಿಯ ಸಹೋದರ ಸಹೋದರಿಯರನ್ನೂ ಕೊಟ್ಟಿದ್ದಾನೆ.
16. ಯೆಹೋವ ದೇವರ ಪ್ರೀತಿ ಪಡೆದುಕೊಳ್ಳಬೇಕಾದ್ರೆ ನಾವೇನು ಮಾಡಬೇಕು?
16 ನಮ್ಮನ್ನ ಯಾವಾಗಲೂ ತನ್ನ ಕಣ್ಗಾವಲಿನಲ್ಲಿ ಇಟ್ಟುಕೊಂಡಿರೋ, ನಮ್ಮ ಕಷ್ಟಗಳನ್ನ ಅರ್ಥಮಾಡಿಕೊಳ್ಳೋ ಸ್ವರ್ಗೀಯ ಅಪ್ಪನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ. “ನಮ್ಮ ಹೃದಯಗಳು ಆತನಲ್ಲಿ ಖುಷಿಪಡುತ್ತೆ.” (ಕೀರ್ತ. 33:21) ಯೆಹೋವ ನಮ್ಮ ಸಹಾಯಕ್ಕಾಗಿ ತುಂಬ ವಿಷಯಗಳನ್ನ ಕೊಟ್ಟಿದ್ದಾನೆ. ಆ ಸಹಾಯವನ್ನ ನಾವು ಪಡಕೊಳ್ಳಬೇಕು. ಆಗ ನಾವು ಆತನಿಗೆ ಥ್ಯಾಂಕ್ಸ್ ಹೇಳಿದ ಹಾಗಿರುತ್ತೆ. ಆದ್ರೆ ನಾವು ಯೆಹೋವನ ಪ್ರೀತಿ ಪಡೆದುಕೊಳ್ಳಬೇಕಾದ್ರೆ ಆತನ ಮಾತು ಕೇಳಬೇಕು. ಆತನಿಗೆ ಇಷ್ಟ ಆಗೋ ತರಾನೇ ನಡಕೊಳ್ಳಬೇಕು. ಆಗ ಆತನು ನಮ್ಮನ್ನ ಈಗಷ್ಟೇ ಅಲ್ಲ, ಮುಂದಕ್ಕೂ ತನ್ನ ಕಣ್ಗಾವಲಿನಲ್ಲಿ ಇಟ್ಟುಕೊಂಡಿರುತ್ತಾನೆ.—1 ಪೇತ್ರ 3:12.
ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ