ಅಧ್ಯಯನ ಲೇಖನ 34
ಸತ್ಯದ ಹಾದಿಯಲ್ಲಿ ನಡಿತಾ ಇರಿ
‘ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ ಇರಿ.’—3 ಯೋಹಾ. 4.
ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು
ಕಿರುನೋಟ a
1. “ಸತ್ಯಕ್ಕೆ” ಹೇಗೆ ಬಂದ್ವಿ ಅಂತ ಮಾತಾಡಿಕೊಳ್ಳೋದ್ರಿಂದ ನಮಗೆ ಹೇಗೆ ಪ್ರಯೋಜನ ಆಗುತ್ತೆ?
ಸಾಮಾನ್ಯವಾಗಿ ನಾವು ಮೊದಲನೇ ಸಲ ನಮ್ಮ ಸಹೋದರ ಸಹೋದರಿಯರನ್ನ ಭೇಟಿ ಮಾಡಿದಾಗ “ನೀವು ಸತ್ಯಕ್ಕೆ ಹೇಗೆ ಬಂದ್ರಿ?” ಅಂತ ಕೇಳ್ತೀವಿ. ಅವರಿಗೆ ಯೆಹೋವನ ಬಗ್ಗೆ ಹೇಗೆ ಗೊತ್ತಾಯ್ತು, ಆತನ ಮೇಲೆ ಹೇಗೆ ನಂಬಿಕೆ ಬೆಳೆಸಿಕೊಂಡ್ರು ಅಂತೆಲ್ಲಾ ಕೇಳಿ ತಿಳಿದುಕೊಳ್ತೀವಿ. ನಮಗೆ ಯೆಹೋವ ಅಂದ್ರೆ ಯಾಕೆ ಇಷ್ಟ ಅಂತ ಹೇಳ್ತೀವಿ. (ರೋಮ. 1:11) ಈ ರೀತಿ ಮಾತಾಡಿದಾಗ ಬೈಬಲ್ ಸತ್ಯಗಳು ನಮಗೆ ಎಷ್ಟು ಅಮೂಲ್ಯ ಅನ್ನೋದು ನೆನಪಿಗೆ ಬರುತ್ತೆ. ಅಷ್ಟೇ ಅಲ್ಲ, “ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ” ಇರಬೇಕು ಅನ್ನೋ ನಮ್ಮ ಆಸೆ ಕೂಡ ಜಾಸ್ತಿಯಾಗುತ್ತೆ. ಇದರಿಂದ ಯೆಹೋವನ ಆಶೀರ್ವಾದ ಮತ್ತು ಮೆಚ್ಚುಗೆ ಪಡ್ಕೊಳ್ತೀವಿ.—3 ಯೋಹಾ. 4.
2. ಈ ಲೇಖನದಲ್ಲಿ ನಾವೇನು ಕಲಿತೀವಿ?
2 ನಾವು ಬೈಬಲ್ ಸತ್ಯಗಳನ್ನ ಯಾಕೆ ಪ್ರೀತಿಸ್ತೀವಿ ಅಂತ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಈ ಪ್ರೀತಿಯನ್ನ ಯಾವಾಗಲೂ ತೋರಿಸ್ತಾ ಇರೋಕೆ ಏನು ಮಾಡಬೇಕು ಅಂತನೂ ನೋಡೋಣ. ನಾವು ಈ ವಿಷಯಗಳನ್ನ ಚರ್ಚೆ ಮಾಡುವಾಗ ಯೆಹೋವ ನಮ್ಮನ್ನ ಸತ್ಯಕ್ಕೆ ಕರಕೊಂಡು ಬಂದಿದ್ದಕ್ಕೆ ನಾವು ಆತನಿಗೆ ಋಣಿಗಳಾಗಿರಬೇಕು ಅನ್ನೋದನ್ನ ನೆನಪಿಸುತ್ತೆ. (ಯೋಹಾ. 6:44) ಅಷ್ಟೇ ಅಲ್ಲ, ಬೇರೆಯವರಿಗೂ ಈ ಸತ್ಯ ತಿಳಿಸಬೇಕು ಅನ್ನೋ ಆಸೆ ಜಾಸ್ತಿಯಾಗುತ್ತೆ.
ನಾವ್ಯಾಕೆ ‘ಸತ್ಯವನ್ನ’ ಪ್ರೀತಿಸ್ತೀವಿ
3. ನಾವು ಯಾಕೆ ಸತ್ಯವನ್ನ ಪ್ರೀತಿಸ್ತೀವಿ?
3 ನಾವು ಸತ್ಯವನ್ನ ಪ್ರೀತಿಸೋಕೆ ತುಂಬ ಕಾರಣಗಳಿವೆ. ಅದರಲ್ಲಿ ಮೊದಲನೇ ಕಾರಣ ಏನಂದ್ರೆ ನಾವು ಯೆಹೋವನನ್ನು ತುಂಬ ಪ್ರೀತಿಸ್ತೀವಿ. ಯೆಹೋವ ಆಕಾಶ-ಭೂಮಿಯನ್ನ ಸೃಷ್ಟಿ ಮಾಡಿರೋ ಶಕ್ತಿಶಾಲಿ ದೇವರಷ್ಟೇ ಅಲ್ಲ, ಆತನು ನಮ್ಮನ್ನ ಪ್ರೀತಿಸೋ, ನಮ್ಮ ಕಾಳಜಿ ವಹಿಸೋ ಸ್ವರ್ಗೀಯ ಅಪ್ಪ ಆಗಿದ್ದಾನೆ ಅಂತ ಬೈಬಲ್ ಹೇಳುತ್ತೆ. (1 ಪೇತ್ರ 5:7) ನಮಗೆ ಸತ್ಯ ಕಲಿಸಿ ಕೊಟ್ಟಿರೋದು ಆತನೇ. ಆತನು “ಕರುಣೆ ಮತ್ತು ಕನಿಕರ ಇರೋ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ, ಯಾವಾಗ್ಲೂ ಸತ್ಯವಂತ ಆಗಿರ್ತಾನೆ.” (ವಿಮೋ. 34:6) ಆತನು ನ್ಯಾಯವನ್ನು ಪ್ರೀತಿಸ್ತಾನೆ. (ಯೆಶಾ. 61:8) ನಾವು ಈ ತರ ಕಷ್ಟ ಪಡೋದನ್ನ ನೋಡಿದಾಗ ಆತನಿಗೆ ತುಂಬ ನೋವಾಗುತ್ತೆ. ಅದಕ್ಕೆ ಸರಿಯಾದ ಸಮಯಕ್ಕೆ ಇದಕ್ಕೆಲ್ಲ ಅಂತ್ಯ ಹಾಡೋಕೆ ಕಾಯ್ತಾ ಇದ್ದಾನೆ. (ಯೆರೆ. 29:11) ನಾವೂ ಅದಕ್ಕೇ ಕಾಯ್ತಾ ಇದ್ದೀವಿ. ಯೆಹೋವನನ್ನು ಪ್ರೀತಿಸೋಕೆ ನಮಗೆ ಇದಕ್ಕಿಂತ ಕಾರಣ ಬೇಕಾ!
4-5. ಅಪೊಸ್ತಲ ಪೌಲ ನಮ್ಮ ನಿರೀಕ್ಷೆಯನ್ನ ಲಂಗರಕ್ಕೆ ಯಾಕೆ ಹೋಲಿಸಿದ?
4 ನಾವು ಸತ್ಯವನ್ನ ಪ್ರೀತಿಸೋಕೆ ಇನ್ನೊಂದು ಕಾರಣ ಏನಂದ್ರೆ ಅದ್ರಿಂದ ನಮ್ಮ ಜೀವನದಲ್ಲಿ ತುಂಬ ಒಳ್ಳೇದಾಗಿದೆ. ಉದಾಹರಣೆಗೆ, ಬೈಬಲ್ ಸತ್ಯಗಳಲ್ಲಿ ಭವಿಷ್ಯದ ಬಗ್ಗೆ ಇರೋ ನಿರೀಕ್ಷೆನೂ ಒಂದು. ಈ ಸತ್ಯವನ್ನ ತಿಳಿದುಕೊಂಡಿದ್ರಿಂದ ಕತ್ತಲಾಗಿದ್ದ ನಮ್ಮ ಭವಿಷ್ಯಕ್ಕೆ ನಿರೀಕ್ಷೆ ಅನ್ನೋ ಬೆಳಕು ಸಿಕ್ತು. ಈ ನಿರೀಕ್ಷೆ ನಮಗೆ ತುಂಬ ಮುಖ್ಯ ಅಂತ ಅಪೊಸ್ತಲ ಪೌಲ ಹೇಳಿದ. ಇದು “ನಮ್ಮ ಜೀವನಕ್ಕೆ ಲಂಗರದ ಹಾಗಿದೆ. ಸಂಶಯಪಡದೆ ದೃಢವಾಗಿರೋಕೆ ಅದು ಸಹಾಯ ಮಾಡುತ್ತೆ” (ಇಬ್ರಿ. 6:19) ಬಿರುಗಾಳಿಯಲ್ಲಿ ಹಡಗು ದಿಕ್ಕಾಪಾಲಾಗಿ ಹೋಗದೇ ಇರೋಕೆ ಒಂದು ಲಂಗರ ಹೇಗೆ ಸಹಾಯ ಮಾಡುತ್ತೋ ಅದೇ ತರ ಬೈಬಲಲ್ಲಿ ಇರೋ ನಿರೀಕ್ಷೆ ನಾವು ಕಷ್ಟಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಾಗ ಅದರಲ್ಲಿ ಮುಳುಗಿ ಹೋಗದ ಹಾಗೆ ನಮ್ಮನ್ನ ಕಾಪಾಡುತ್ತೆ.
5 ಪೌಲ ಇದನ್ನ ಸ್ವರ್ಗಕ್ಕೆ ಹೋಗೋ ಅಭಿಷಿಕ್ತರಿಗೆ ಹೇಳ್ತಿರೋದಾದ್ರೂ ಈ ಮಾತುಗಳು ಪರದೈಸಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋ ನಮಗೂ ಅನ್ವಯಿಸುತ್ತೆ. (ಯೋಹಾ. 3:16) ಈ ನಿರೀಕ್ಷೆ ಬಗ್ಗೆ ತಿಳಿದುಕೊಂಡಾಗ ನಮ್ಮ ಜೀವನಕ್ಕೊಂದು ಅರ್ಥ ಸಿಕ್ಕಿದೆ.
6-7. ಭವಿಷ್ಯದ ಬಗ್ಗೆ ಸತ್ಯ ತಿಳಿದುಕೊಂಡಿದ್ರಿಂದ ಯುವೋನ್‌ಗೆ ಹೇಗೆ ಪ್ರಯೋಜನ ಆಯ್ತು?
6 ಯುವೋನ್ ಅನ್ನೋ ಸಹೋದರಿಯ ಅನುಭವ ನೋಡಿ. ಅವಳು ಯೆಹೋವನ ಸಾಕ್ಷಿಯಾಗಿರಲಿಲ್ಲ. ಅವಳಿಗೆ ಸಾವು ಅಂದ್ರೆ ತುಂಬ ಭಯ ಇತ್ತು. ಚಿಕ್ಕ ವಯಸ್ಸಲ್ಲಿ ಅವಳು “ಸಾವಿಂದ ಯಾರೂ ತಪ್ಪಿಸಿಕೊಳ್ಳೋಕಾಗಲ್ಲ” ಅಂತ ಓದಿದ್ದ ವಿಷಯ ಅವಳ ಮನಸ್ಸನ್ನ ಕೊರಿತಾನೇ ಇತ್ತು. “ಈ ಮಾತುಗಳು ನನ್ನ ಮನಸ್ಸಲ್ಲಿ ಎಷ್ಟು ಆಳವಾಗಿ ಹೋಗಿಬಿಟ್ಟಿತ್ತು ಅಂದ್ರೆ ಮುಂದೆ ಏನಾಗುತ್ತೋ ಅಂತ ಚಿಂತೆ ಮಾಡ್ತಾ ರಾತ್ರಿಯೆಲ್ಲ ಎದ್ದು ಕೂತಿರುತ್ತಿದ್ದೆ. ಸ್ವಲ್ಪ ದಿನ ಇದ್ದು ಸಾಯೋಕಾ ನಾವು ಹುಟ್ಟಿರೋದು? ನಾನ್ಯಾಕೆ ಇಲ್ಲಿದ್ದೀನಿ? ನನಗೆ ಸಾಯೋಕೆ ಇಷ್ಟ ಇಲ್ಲ” ಅಂತ ಅವಳು ಯೋಚನೆ ಮಾಡ್ತಿದ್ದಳು.
7 ಯುವೋನ್‌ಗೆ ಹದಿವಯಸ್ಸಲ್ಲಿ ಸತ್ಯ ಸಿಕ್ತು. “ಮುಂದೆ ಪರದೈಸ್ ಭೂಮಿಯಲ್ಲಿ ಶಾಶ್ವತ ಜೀವ ಸಿಗುತ್ತೆ ಅನ್ನೋದು ನನಗೆ ಗೊತ್ತಾಯ್ತು. ಈಗ ನಾನು ಮುಂಚಿನ ತರ ಮಧ್ಯ ರಾತ್ರಿಯಲ್ಲಿ ಎದ್ದು ಕೂತು ನನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡಲ್ಲ” ಅಂತ ಆ ಸಹೋದರಿ ಹೇಳ್ತಾಳೆ. ಯುವೋನ್‌ಗೆ ಈ ಬೈಬಲ್ ಸತ್ಯ ಎಷ್ಟು ಇಷ್ಟ ಆಯ್ತು ಅಂದ್ರೆ ಅವಳು ಕಲ್ತಿದ್ದನ್ನ ಈಗ ಖುಷಿಖುಷಿಯಿಂದ ಬೇರೆಯವರಿಗೆ ಹೇಳ್ತಾ ಇದ್ದಾಳೆ.—1 ತಿಮೊ. 4:16.
8-9. (ಎ) ಯೇಸು ಹೇಳಿದ ಉದಾಹರಣೆಯಲ್ಲಿ ಅ ವ್ಯಕ್ತಿ ನಿಧಿ ಪಡೆದುಕೊಳ್ಳೋಕೆ ಏನು ಮಾಡಿದ? (ಬಿ) ಬೈಬಲ್ ಸತ್ಯ ನಿಮಗೆಷ್ಟು ಮುಖ್ಯವಾಗಿದೆ?
8 ಬೈಬಲ್ ಸತ್ಯದಲ್ಲಿ ದೇವರ ಸರ್ಕಾರದ ಸಂದೇಶನೂ ಸೇರಿದೆ. ಈ ಸತ್ಯವನ್ನ ಯೇಸು ನೆಲದಲ್ಲಿ ಬಚ್ಚಿಟ್ಟಿದ್ದ ನಿಧಿಗೆ ಹೋಲಿಸಿದನು. ಮತ್ತಾಯ 13:44ರಲ್ಲಿ ಯೇಸು ಹೀಗೆ ಹೇಳಿದನು, “ದೇವರ ಆಳ್ವಿಕೆಯನ್ನ ಹೊಲದಲ್ಲಿ ಬಚ್ಚಿಟ್ಟ ನಿಧಿಗೆ ಹೋಲಿಸಬಹುದು. ಒಬ್ಬ ಅದನ್ನ ಪತ್ತೆಹಚ್ಚಿ ಅಲ್ಲೇ ಮುಚ್ಚಿಡ್ತಾನೆ. ಅವನು ಖುಷಿಯಿಂದ ಹೋಗಿ ತನ್ನ ಹತ್ರ ಇರೋದೆಲ್ಲ ಮಾರಿ ಇಡೀ ಹೊಲ ತಗೊಳ್ತಾನೆ.” ಇಲ್ಲಿ ಹೇಳಿರೋ ವ್ಯಕ್ತಿ ನಿಧಿಯನ್ನ ಹುಡುಕ್ತಾ ಇರಲಿಲ್ಲ. ಆದ್ರೆ ಅದು ಅವನಿಗೆ ಸಿಕ್ಕಿದಾಗ ಅದನ್ನ ಪಡ್ಕೊಳ್ಳೋಕೆ ತನ್ನ ಹತ್ತಿರ ಇರೋದನ್ನೆಲ್ಲ ಮಾರಿದ. ಯಾಕೆ? ಯಾಕಂದ್ರೆ ಈ ನಿಧಿಯ ಬೆಲೆ ಏನು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ತನ್ನ ಹತ್ರ ಇರೋ ವಸ್ತುಗಳನ್ನ ಈ ನಿಧಿಗೆ ಹೋಲಿಸಿದ್ರೆ ಅವು ಏನೇನು ಅಲ್ಲ ಅಂತ ಅವನಿಗೆ ಅನಿಸ್ತು.
9 ಸತ್ಯ ಸಿಕ್ದಾಗ ನಿಮಗೂ ಆ ವ್ಯಕ್ತಿ ತರನೇ ಅನಿಸಿರುತ್ತೆ ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಯಾಕಂದ್ರೆ ಯೆಹೋವನ ಸೇವೆಯಲ್ಲಿ ಈಗ ನಮಗೆ ಸಿಕ್ತಾ ಇರೋ ಖುಷಿಯನ್ನ ಮತ್ತು ದೇವರ ಸರಕಾರದಲ್ಲಿ ಸಿಗೋ ಶಾಶ್ವತ ಜೀವದ ನಿರೀಕ್ಷೆಯನ್ನ ಈ ಲೋಕದಿಂದ ಕೊಡೋಕೆ ಆಗಲ್ಲ. ಯೆಹೋವನ ಜೊತೆಗಿರೋ ಸಂಬಂಧಕ್ಕಿಂತ ದೊಡ್ಡದು ಈ ಲೋಕದಲ್ಲಿ ಯಾವುದೂ ಇಲ್ಲ. ಅದಕ್ಕೋಸ್ಕರ ನಾವು ಏನೇ ತ್ಯಾಗ ಮಾಡಿದ್ರೂ ಅದು ಸಾರ್ಥಕ. “ಆತನನ್ನ ತುಂಬ ಖುಷಿಪಡಿಸಬೇಕು” ಅನ್ನೋದೇ ನಮ್ಮಾಸೆ.—ಕೊಲೊ. 1:10.
10-11. ಮೈಕಲ್ ತನ್ನ ಜೀವನದಲ್ಲಿ ಯಾಕೆ ಬದಲಾವಣೆಗಳನ್ನ ಮಾಡಿಕೊಂಡ?
10 ನಮ್ಮಲ್ಲಿ ಕೆಲವರು ಯೆಹೋವನಿಗೋಸ್ಕರ ದೊಡ್ಡದೊಡ್ಡ ತ್ಯಾಗಗಳನ್ನ ಮಾಡಿದ್ದೀವಿ. ಕೆಲವರು ಈ ಲೋಕದಲ್ಲಿ ಹೆಸರು ಮಾಡಿಕೊಳ್ಳೋಕೆ ಅವರಿಗೆ ಸಿಕ್ಕಿದ್ದ ಅವಕಾಶವನ್ನ ಬಿಟ್ಟುಬಿಟ್ಟಿದ್ದಾರೆ. ಕೆಲವರು ಹಣ ಆಸ್ತಿ ಹಿಂದೆ ಹೋಗೋದನ್ನ ಬಿಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಜೀವನ ರೀತಿನೇ ಬದಲಾಯಿಸಿಕೊಂಡಿದ್ದಾರೆ. ಮೈಕಲ್ ಕೂಡ ಅದನ್ನೇ ಮಾಡಿದ. ಅವನು ಯೆಹೋವನ ಸಾಕ್ಷಿಯಾಗಿರಲಿಲ್ಲ. ಅವನು ಕರಾಟೆ ಕಲ್ತಿದ್ದ. “ನನ್ನ ದೇಹ ಇಷ್ಟು ಗಟ್ಟಿಮುಟ್ಟಾಗಿರೋದನ್ನ ನೋಡಿದಾಗೆಲ್ಲ ನನಗೆ ತುಂಬ ಹೆಮ್ಮೆಯಾಗುತ್ತಿತ್ತು. ನನ್ನ ಯಾರೂ ಏನೂ ಮಾಡಕ್ಕಾಗಲ್ಲ, ಯಾರೂ ಸೋಲಿಸೋಕಾಗಲ್ಲ ಅಂತ ಅಂದುಕೊಳ್ತಿದ್ದೆ” ಅಂತ ಅವನು ಹೇಳ್ತಾನೆ. ಆದ್ರೆ ಮೈಕಲ್ ಬೈಬಲ್‌ನ ಕಲಿಯೋಕೆ ಶುರು ಮಾಡಿದಾಗ ಯೆಹೋವ ದೇವರಿಗೆ ಹೊಡೆದಾಟ ಎಲ್ಲ ಇಷ್ಟ ಆಗಲ್ಲ ಅಂತ ಗೊತ್ತಾಯ್ತು. (ಕೀರ್ತ. 11:5) ತನಗೆ ಬೈಬಲ್ ಕಲಿಸ್ತಿದ್ದ ದಂಪತಿಗಳ ಬಗ್ಗೆ ಅವನು ಹೀಗೆ ಹೇಳಿದ: “ಅವರು ನನ್ನ ಹತ್ರ ಯಾವತ್ತೂ ‘ನೀನು ಕರಾಟೆ ಬಿಟ್ಟುಬಿಡು’ ಅಂತ ಹೇಳಲಿಲ್ಲ. ಬದಲಿಗೆ ಬೈಬಲ್ ಸತ್ಯನಾ ಕಲಿಸ್ತಾ ಹೋದ್ರು.”
11 ಮೈಕಲ್ ಯೆಹೋವನ ಬಗ್ಗೆ ಕಲಿತಾ-ಕಲಿತಾ ಆತನನ್ನು ಪ್ರೀತಿಸೋಕೆ ಶುರು ಮಾಡಿದ. ಯೆಹೋವನ ಕರುಣೆಯ ಗುಣ ಅವನಿಗೆ ತುಂಬ ಇಷ್ಟ ಆಯ್ತು. ಸ್ವಲ್ಪ ದಿನಗಳಾದ ಮೇಲೆ ತನ್ನ ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಬೇಕು ಅಂತ ಮೈಕಲ್‌ಗೆ ಗೊತ್ತಾಯ್ತು. “ಕರಾಟೆ ಬಿಡೋಕೆ ನನಗೆ ತುಂಬ ಕಷ್ಟ ಆಗ್ತಿತ್ತು. ಆದ್ರೆ ಇದ್ರಿಂದ ಯೆಹೋವನಿಗೆ ಖುಷಿಯಾಗುತ್ತೆ ಅನ್ನೋದಾದ್ರೆ ನಾನು ಇದನ್ನ ಬಿಟ್ಟುಬಿಡ್ತೀನಿ” ಅಂತ ಅವನು ಹೇಳಿದ. ಮೈಕಲ್ ತನಗೆ ಸಿಕ್ಕಿದ್ದ ಬೈಬಲ್ ಸತ್ಯವನ್ನ ಅಮೂಲ್ಯವಾಗಿ ನೋಡಿದ. ಅದಕ್ಕೇ ತನ್ನ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆಗಳನ್ನ ಮಾಡಿಕೊಂಡ.—ಯಾಕೋ. 1:25.
12-13. ಬೈಬಲ್ ಸತ್ಯದ ಬೆಳಕು ಮೈಲೀಗೆ ಹೇಗೆ ಸಹಾಯ ಮಾಡ್ತು?
12 ಸತ್ಯಕ್ಕೆ ಎಷ್ಟು ಬೆಲೆ ಇದೆ ಅನ್ನೋದನ್ನ ಅರ್ಥಮಾಡಿಸೋಕೆ ಬೈಬಲ್ ಅದನ್ನ ಕತ್ತಲಲ್ಲಿ ಇರೋ ದೀಪಕ್ಕೆ ಹೋಲಿಸಿದೆ. (ಕೀರ್ತ. 119:105; ಎಫೆ. 5:8) ಅಜರ್ಬೈಜಾನ್‌ನಲ್ಲಿರೋ ಸಹೋದರಿ ಮೈಲೀ ಅವರ ಉದಾಹರಣೆ ನೋಡಿ. ಅವರ ಅಪ್ಪಅಮ್ಮ ಬೇರೆಬೇರೆ ಧರ್ಮದಿಂದ ಬಂದವರು. ಅಪ್ಪ ಮುಸ್ಲಿಂ, ಅಮ್ಮ ಯೆಹೂದಿಯಾಗಿದ್ದರು. “ಚಿಕ್ಕ ವಯಸ್ಸಿಂದ ನನಗೆ ದೇವರಲ್ಲಿ ನಂಬಿಕೆ ಇತ್ತು. ಆದ್ರೆ ನನ್ನ ಮನಸ್ಸಲ್ಲಿ ಕೆಲವು ಪ್ರಶ್ನೆಗಳು ಇದ್ದವು. ದೇವರು ಮನುಷ್ಯರನ್ನ ಯಾಕೆ ಸೃಷ್ಟಿ ಮಾಡಿದನು? ಜೀವನ ಪೂರ್ತಿ ನಮಗೆ ಕಷ್ಟ ಕೊಟ್ಟು ಆಮೇಲೆ ನರಕಕ್ಕೆ ಹಾಕೋಕೆ ನಮ್ಮನ್ನ ಯಾಕೆ ಸೃಷ್ಟಿ ಮಾಡಬೇಕಿತ್ತು? ದೇವರು ಹಣೆ ಮೇಲೆ ಬರೆದಿರೋ ತರಾನೇ ಎಲ್ಲ ನಡಿಯೋದು ಅಂತ ಜನ ಹೇಳ್ತಾರೆ. ಹಾಗಾದ್ರೆ ನಾವೆಲ್ಲಾ ದೇವರ ಕೈಯಲ್ಲಿರೋ ಬೊಂಬೆಗಳು ಅಂದಮೇಲೆ ಆತನು ನಮ್ಮನ್ನ ತನಗೆ ಇಷ್ಟ ಬಂದ ಹಾಗೆ ಆಡಿಸ್ತಾನೆ ಅಂತ ನನಗೆ ಅನಿಸ್ತಿತ್ತು” ಅಂತ ಸಹೋದರಿ ಹೇಳ್ತಾರೆ. ಆದ್ರೆ ಸತ್ಯದ ಬೆಳಕು ತನ್ನ ಜೀವನದಲ್ಲಿ ದೊಡ್ಡ ಆಶೀರ್ವಾದವಾಗಿತ್ತು ಅಂತ ಅವಳು ಹೇಳ್ತಾಳೆ.
13 ಮೈಲೀ ಪ್ರಯತ್ನ ಬಿಡಲಿಲ್ಲ. ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕ್ತಾನೇ ಇದ್ದಳು. ಆಮೇಲೆ ಬೈಬಲ್ ಕಲಿಯೋಕೆ ಶುರು ಮಾಡಿದಳು, ಸತ್ಯಕ್ಕೆ ಬಂದಳು. “ನನಗಿದ್ದ ಪ್ರಶ್ನೆಗಳಿಗೆ ಬೈಬಲ್ ಕೊಟ್ಟ ಸರಿಯಾದ ಉತ್ತರದಿಂದ ನನ್ನ ಜೀವನನೇ ಬದಲಾಯ್ತು. ನನಗೆ ತುಂಬ ಖುಷಿಯಾಯ್ತು ಬೈಬಲಲ್ಲಿ ಕೊಟ್ಟಿರೋ ವಿವರಣೆಗಳೆಲ್ಲ ನೂರಕ್ಕೆ ನೂರು ಸತ್ಯ. ಇದನ್ನ ಅರ್ಥ ಮಾಡಿಕೊಂಡಾಗ ನನಗೆ ನೆಮ್ಮದಿ ಸಿಕ್ತು” ಅಂತ ಮೈಲೀ ಹೇಳ್ತಾಳೆ. ಯೆಹೋವ ದೇವರು ನಮ್ಮನ್ನೂ ಮೈಲೀ ತರ ಕತ್ತಲೆಯಿಂದ ತನ್ನ ಅದ್ಭುತ ಬೆಳಕಿಗೆ ಕರಕೊಂಡು ಬಂದಿದ್ದಾನೆ. ಆತನಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಕಾಗಲ್ಲ.—1 ಪೇತ್ರ 2:9.
14. ನಾವು ಸತ್ಯವನ್ನ ಇನ್ನೂ ಜಾಸ್ತಿ ಪ್ರೀತಿಸೋಕೆ ಏನು ಮಾಡಬೇಕು? (“ ಬೈಬಲ್‌ನ ಇವುಗಳಿಗೂ ಹೋಲಿಸಬಹುದು” ಅನ್ನೋ ಚೌಕ ನೋಡಿ.)
14 ಸತ್ಯ ಎಷ್ಟು ಅಮೂಲ್ಯ ಅಂತ ತಿಳಿದುಕೊಳ್ಳೋಕೆ ನಾವು ಕೆಲವು ಉದಾಹರಣೆಗಳನ್ನ ಮಾತ್ರ ನೋಡಿದ್ವಿ. ಆದ್ರೆ ಆ ಸತ್ಯನ ಪ್ರೀತಿಸೋಕೆ ಇನ್ನೂ ತುಂಬ ಕಾರಣಗಳಿವೆ. ನಿಮ್ಮ ವೈಯಕ್ತಿಕ ಅಧ್ಯಯನದಲ್ಲಿ ಆ ಕಾರಣಗಳನ್ನ ಹುಡುಕೋಕೆ ಪ್ರಯತ್ನ ಮಾಡಿ. ಯಾಕಂದ್ರೆ ನಾವು ಸತ್ಯವನ್ನ ಪ್ರೀತಿಸಿದಷ್ಟು ಆ ಸತ್ಯದ ಮೇಲಿರೋ ಒಲವನ್ನ ತೋರಿಸೋಕೆ ಅವಕಾಶಗಳನ್ನ ಹುಡುಕ್ತಾ ಇರ್ತೀವಿ.
ಸತ್ಯದ ಮೇಲಿರೋ ಒಲವನ್ನ ತೋರಿಸಿ
15. ಸತ್ಯವನ್ನ ನಾವು ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು?
15 ಬೈಬಲನ್ನ, ಬೈಬಲ್ ಆಧಾರಿತ ಪ್ರಕಾಶನಗಳನ್ನ ಪ್ರತೀ ದಿನ ಓದೋದ್ರಿಂದ ಮತ್ತು ಅಧ್ಯಯನ ಮಾಡೋದ್ರಿಂದ ನಾವು ಸತ್ಯವನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸಿಕೊಡ್ತೀವಿ. ನಾವು ಎಷ್ಟೇ ವರ್ಷಗಳಿಂದ ಸತ್ಯದಲ್ಲಿ ಇರಲಿ ಕಲಿಯೋಕೆ ಹೊಸ-ಹೊಸ ವಿಷಯಗಳು ಇದ್ದೇ ಇರುತ್ತೆ. ಕಾವಲಿನಬುರುಜುವಿನ ಮೊಟ್ಟಮೊದಲ ಸಂಚಿಕೆಯಲ್ಲಿ ಹೀಗೆ ಹೇಳಿತ್ತು: “ಸತ್ಯ ಅನ್ನೋದು ಕಳೆ ಗಿಡಗಳ ಮಧ್ಯೆ ಅಡಗಿರುವ ಒಂದು ಹೂವು. ಒಬ್ಬ ವ್ಯಕ್ತಿಗೆ ಆ ಹೂವು ಬೇಕಾದರೆ ಕಳೆಗಿಡಗಳ ಮಧ್ಯೆ ಚೆನ್ನಾಗಿ ಹುಡುಕಬೇಕಾಗುತ್ತದೆ. ಅವನಿಗದು ಸಿಕ್ಕಿದಾಗ ಅಷ್ಟಕ್ಕೆ ಸುಮ್ಮನಿರಬಾರದು. ಇನ್ನೂ ಹೆಚ್ಚು ಹೂವುಗಳಿಗಾಗಿ ಹುಡುಕಬೇಕು.” ಅದೇ ರೀತಿ ನಾವು ಒಂದೇ ಒಂದು ಸತ್ಯ ಕಲಿತ ಮೇಲೆ ಅಲ್ಲಿಗೇ ನಿಲ್ಲಿಸಬಾರದು ಇನ್ನೂ ಹೆಚ್ಚು ಸತ್ಯಗಳನ್ನ ಹುಡುಕಿ ಕಂಡುಕೊಳ್ಳಬೇಕು. ಅದನ್ನ ಹುಡುಕಬೇಕಂದ್ರೆ ಬೈಬಲ್ ಅಧ್ಯಯನ ಮಾಡಬೇಕು ಇದನ್ನ ಮಾಡೋಕೆ ನಾವು ಹಾಕೋ ಪ್ರಯತ್ನ ಯಾವಾಗಲೂ ಸಾರ್ಥಕ .
16. ವೈಯಕ್ತಿಕ ಅಧ್ಯಯನವನ್ನ ಯಾವ ತರ ಮಾಡಿದ್ರೆ ನಿಮಗೆ ಇಷ್ಟ? (ಜ್ಞಾನೋಕ್ತಿ 2:4-6)
16 ನಮ್ಮಲ್ಲಿ ಎಲ್ಲರಿಗೂ ಓದೋಕೆ, ಅಧ್ಯಯನ ಮಾಡೋಕೆ ಅಷ್ಟು ಇಷ್ಟ ಆಗದೆ ಇರಬಹುದು. ಆದ್ರೂ ಸತ್ಯನ ಚೆನ್ನಾಗಿ ತಿಳ್ಕೊಬೇಕಂದ್ರೆ ಅದನ್ನ ‘ಹುಡುಕ್ತಾ ಇರಿ’ ಅಂತ ಯೆಹೋವ ಹೇಳ್ತಿದ್ದಾನೆ. (ಜ್ಞಾನೋಕ್ತಿ 2:4-6 ಓದಿ.) ಈ ತರ ಮಾಡೋದ್ರಿಂದ ನಮಗೆ ತುಂಬ ಪ್ರಯೋಜನ ಆಗುತ್ತೆ. ಸಹೋದರ ಕೊರೆ ಬೈಬಲ್ ಅಧ್ಯಯನ ಮಾಡುವಾಗ ಒಂದೊಂದು ವಚನನೂ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಾರೆ. “ಅದಕ್ಕೆ ಪ್ರತಿಯೊಂದು ವಚನದಲ್ಲಿ ಬರೋ ಪಾದಟಿಪ್ಪಣಿಗಳನ್ನ, ಕ್ರಾಸ್ ರೆಫೆರೆನ್ಸ್‌ಗಳನ್ನ ನಾನು ನೋಡ್ತೀನಿ. ಅದರ ಬಗ್ಗೆ ಜಾಸ್ತಿ ಸಂಶೋಧನೆ ಮಾಡ್ತೀನಿ. ಹೀಗೆ ಮಾಡೋದ್ರಿಂದ ನನಗೆ ತುಂಬ ವಿಷಯಗಳನ್ನ ಕಲಿಯೋಕಾಗುತ್ತೆ” ಅಂತ ಅವರು ಹೇಳ್ತಾರೆ. ನಾವು ವೈಯಕ್ತಿಕ ಅಧ್ಯಯನ ಮಾಡೋ ರೀತಿ ಬೇರೆಬೇರೆ ಆಗಿದ್ರೂ ಅದಕ್ಕಾಗಿ ನಾವು ಕೊಡೋ ಸಮಯ ಮತ್ತು ಪ್ರಯತ್ನ ನಾವು ಸತ್ಯವನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸುತ್ತೆ.—ಕೀರ್ತ. 1:1-3.
17. ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡೋದು ಅಂದ್ರೆ ಏನು? (ಯಾಕೋಬ 1:25)
17 ನಾವು ಸತ್ಯನಾ ಬರೀ ಕಲಿತುಕೊಂಡ್ರೆ ಸಾಕಾಗಲ್ಲ. ಅದಕ್ಕೆ ತಕ್ಕ ಹಾಗೆ ನಡಿಬೇಕು. ಅಂದ್ರೆ ನಮ್ಮ ಜೀವನದಲ್ಲಿ ಅದನ್ನ ಪಾಲಿಸಬೇಕು. ಆಗ ಮಾತ್ರ ನಮಗೆ ಅದ್ರಿಂದ ಪ್ರಯೋಜನ ಸಿಗುತ್ತೆ ಮತ್ತು ನಾವು ಖುಷಿಯಾಗಿ ಇರ್ತೀವಿ. (ಯಾಕೋಬ 1:25 ಓದಿ.) ನಾವು ಸತ್ಯಕ್ಕೆ ತಕ್ಕ ಹಾಗೆ ಜೀವಿಸ್ತಾ ಇದ್ದೀವಾ, ಇಲ್ವಾ ಅಂತ ಹೇಗೆ ಕಂಡು ಹಿಡಿಯೋದು? “ಸತ್ಯ ಕಲಿತ ಮೇಲೆ ನಾನು ನನ್ನ ಜೀವನದಲ್ಲಿ ಏನೆಲ್ಲ ಬದಲಾವಣೆ ಮಾಡಿಕೊಂಡಿದ್ದೀನಿ ಮತ್ತು ಬೇರೆ ಏನೆಲ್ಲಾ ಬದಲಾವಣೆಗಳನ್ನ ಮಾಡ್ಕೊಬೇಕು ಅನ್ನೋದನ್ನ ಕಂಡುಹಿಡಿಬೇಕು” ಅಂತ ಒಬ್ಬ ಸಹೋದರ ಹೇಳ್ತಾರೆ. ಇದರ ಬಗ್ಗೆ ಅಪೊಸ್ತಲ ಪೌಲ “ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ” ಅಂತ ಹೇಳಿದ.—ಫಿಲಿ. 3:16.
18. ನಾವ್ಯಾಕೆ ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ ಇರಬೇಕು?
18 ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡೋದ್ರಿಂದ ನಮಗೆ ಏನೆಲ್ಲ ಒಳ್ಳೆದಾಗುತ್ತೆ ಅಂತ ಸ್ವಲ್ಪ ಯೋಚಿಸಿ. ಇದ್ರಿಂದ ನಮ್ಮ ಜೀವನ ಚೆನ್ನಾಗಿರೋದಷ್ಟೇ ಅಲ್ಲ ಯೆಹೋವನನ್ನು ಮತ್ತು ನಮ್ಮ ಸಹೋದರ ಸಹೋದರಿಯರನ್ನು ಖುಷಿಪಡಿಸ್ತೀವಿ. (ಜ್ಞಾನೋ. 27:11; 3 ಯೋಹಾ. 4) ಸತ್ಯನ ಪ್ರೀತಿಸೋಕೆ ಅದಕ್ಕೆ ತಕ್ಕ ಹಾಗೆ ಜೀವಿಸೋಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಾ?
ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!
a ನಾವು ನಮ್ಮ ನಂಬಿಕೆಗಳನ್ನ ಮತ್ತು ನಮ್ಮ ಜೀವನ ರೀತಿಯನ್ನ ‘ಸತ್ಯ’ ಅಂತ ಕರಿತೀವಿ. ನಾವು ಹೊಸದಾಗಿ ಸತ್ಯಕ್ಕೆ ಬಂದಿರಲಿ ಅಥವಾ ತುಂಬ ವರ್ಷಗಳಿಂದ ಸತ್ಯದಲ್ಲಿ ಇರಲಿ ನಾವು ಯಾಕೆ ಸತ್ಯವನ್ನ ಪ್ರೀತಿಸ್ತೀವಿ ಅಂತ ತಿಳುಕೊಳ್ಳಬೇಕು. ಇದ್ರಿಂದ ತುಂಬ ಪ್ರಯೋಜನ ಇದೆ. ಹೀಗೆ ಮಾಡೋದ್ರಿಂದ ಯೆಹೋವನಿಗೆ ಇಷ್ಟ ಆಗೋ ತರಾನೇ ನಡೆದುಕೊಳ್ಳಬೇಕು ಅಂತ ಇನ್ನೂ ಆಸೆಪಡ್ತೀವಿ.