ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 32

ಗೀತೆ 68 ವಿನಮ್ರನ ಪ್ರಾರ್ಥನೆ

ಎಲ್ರೂ ಪಶ್ಚಾತ್ತಾಪ ಪಡಬೇಕು ಅನ್ನೋದೇ ಯೆಹೋವನ ಆಸೆ

ಎಲ್ರೂ ಪಶ್ಚಾತ್ತಾಪ ಪಡಬೇಕು ಅನ್ನೋದೇ ಯೆಹೋವನ ಆಸೆ

“ಯಾರೂ ನಾಶ ಆಗಬಾರದು . . . ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.”2 ಪೇತ್ರ 3:9.

ಈ ಲೇಖನದಲ್ಲಿ ಏನಿದೆ?

ಪಶ್ಚಾತ್ತಾಪ ಅಂದ್ರೇನು? ಪಶ್ಚಾತ್ತಾಪ ಪಡೋದು ಯಾಕೆ ಮುಖ್ಯ? ತಪ್ಪು ಮಾಡಿದವರು ಪಶ್ಚಾತ್ತಾಪ ಪಡೋಕೆ ಯೆಹೋವ ಹೇಗೆ ಸಹಾಯ ಮಾಡಿದ್ದಾನೆ?

1. ಪಶ್ಚಾತ್ತಾಪ ಪಡೋದ್ರಲ್ಲಿ ಏನೆಲ್ಲ ಸೇರಿದೆ?

 ಒಬ್ಬ ವ್ಯಕ್ತಿ ತಪ್ಪು ಮಾಡಿದ್ರೆ ಪಶ್ಚಾತ್ತಾಪ ಪಡೋದು ತುಂಬ ಮುಖ್ಯ. ಅವನು ಆ ತಪ್ಪಿನ ಬಗ್ಗೆ ತನ್ನ ಯೋಚ್ನೆನ ಬದಲಾಯಿಸ್ಕೊಬೇಕು, ಆ ತಪ್ಪನ್ನ ಬಿಟ್ಟುಬಿಡಬೇಕು, ಇನ್ಯಾವತ್ತೂ ಆ ತಪ್ಪನ್ನ ಮಾಡಲ್ಲ ಅಂತ ತೀರ್ಮಾನ ತಗೊಬೇಕು. ಪಶ್ಚಾತ್ತಾಪ ಪಡೋದ್ರಲ್ಲಿ ಇದೆಲ್ಲ ಸೇರಿದೆ ಅಂತ ಬೈಬಲ್‌ ಹೇಳುತ್ತೆ.—ಬೈಬಲಿನ ಪದವಿವರಣೆಯಲ್ಲಿ “ಪಶ್ಚಾತ್ತಾಪ” ನೋಡಿ.

2. ಪಶ್ಚಾತ್ತಾಪದ ಬಗ್ಗೆ ಪ್ರತಿಯೊಬ್ರು ಯಾಕೆ ಕಲಿಬೇಕು? (ನೆಹೆಮೀಯ 8:9-11)

2 ಭೂಮಿ ಮೇಲಿರೋ ಪ್ರತಿಯೊಬ್ರೂ ಪಶ್ಚಾತ್ತಾಪ ಅಂದ್ರೆ ಏನು ಅಂತ ತಿಳ್ಕೊಳ್ಳಲೇಬೇಕು. ಯಾಕಂದ್ರೆ ನಾವೆಲ್ರೂ ದಿನಾ ಒಂದಲ್ಲ ಒಂದು ತಪ್ಪು ಮಾಡ್ತೀವಿ. ಅಷ್ಟೇ ಅಲ್ಲ ನಾವು ಆದಾಮ ಹವ್ವರ ಮಕ್ಕಳಾಗಿರೋದ್ರಿಂದ ಹುಟ್ಟಿದಾಗಿಂದನೇ ಪಾಪಿಗಳು. (ರೋಮ. 3:23; 5:12) ಅದಕ್ಕೆ ಪೌಲನ ತರ ಯೆಹೋವನಿಗೆ ನಿಯತ್ತಾಗಿದ್ದವರು ಕೂಡ ತಪ್ಪು ಮಾಡಿದ್ರು. (ರೋಮ. 7:21-24) ಹಾಗಂತ ನಮ್ಮ ಪಾಪನ ನೆನಸ್ಕೊಂಡು ದುಃಖದಲ್ಲಿ ಮುಳುಗಿಹೋಗಬೇಕು ಅಂತ ದೇವರು ಇಷ್ಟಪಡ್ತಾನಾ? ಇಲ್ಲ. ದೇವರು ನಮಗೆ ಕರುಣೆ ತೋರಿಸ್ತಾನೆ, ನಾವು ಖುಷಿಖುಷಿಯಾಗಿ ಇರಬೇಕು ಅಂತ ಇಷ್ಟಪಡ್ತಾನೆ. ಅದಕ್ಕೇ ನೆಹೆಮೀಯನ ಕಾಲದಲ್ಲಿದ್ದ ಯೆಹೂದ್ಯರಿಗೆ ತಪ್ಪುಗಳನ್ನ ನೆನಸ್ಕೊಳ್ತಾ ಕೊರಗ್ತಾ ಇರಬೇಡಿ, ಯೆಹೋವನ ಆರಾಧನೆ ಮಾಡ್ತಾ ಖುಷಿಖುಷಿಯಾಗಿ ಇರಿ ಅಂದನು. (ನೆಹೆಮೀಯ 8:9-11 ಓದಿ.) ನಾವು ಪಶ್ಚಾತ್ತಾಪಪಟ್ರೆ ಖುಷಿಯಾಗಿ ಇರ್ತೀವಿ ಅಂತ ದೇವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ನಮಗೆ ಪಶ್ಚಾತ್ತಾಪದ ಬಗ್ಗೆ ಕಲಿಸ್ತಿದ್ದಾನೆ. ನಾವು ಪಶ್ಚಾತ್ತಾಪಪಟ್ರೆ ನಮಗೆ ಕರುಣೆ ತೋರಿಸ್ತಾನೆ, ನಮ್ಮ ಪಾಪಗಳನ್ನ ಕ್ಷಮಿಸ್ತಾನೆ.

3. ಈ ಲೇಖನದಲ್ಲಿ ನಾವೇನ್‌ ಕಲಿತೀವಿ?

3 ನಾವು ಈ ಲೇಖನದಲ್ಲಿ ಪಶ್ಚಾತ್ತಾಪದ ಬಗ್ಗೆ 3 ವಿಷ್ಯಗಳನ್ನ ತಿಳ್ಕೊಳ್ಳೋಣ: 1) ಪಶ್ಚಾತ್ತಾಪದ ಬಗ್ಗೆ ಯೆಹೋವ ಇಸ್ರಾಯೇಲ್ಯರಿಗೆ ಏನು ಕಲಿಸಿದನು? 2) ಪಾಪ ಮಾಡಿದವರು ಪಶ್ಚಾತ್ತಾಪ ಪಡೋಕೆ ಯೆಹೋವ ಹೇಗೆ ಸಹಾಯ ಮಾಡಿದನು? 3) ಯೇಸುವಿನ ಶಿಷ್ಯರು ಪಶ್ಚಾತ್ತಾಪದ ಬಗ್ಗೆ ಏನು ಕಲಿತ್ರು?

ಯೆಹೋವ ಇಸ್ರಾಯೇಲ್ಯರಿಗೆ ಪಶ್ಚಾತ್ತಾಪ ಪಡೋದ್ರ ಬಗ್ಗೆ ಏನು ಕಲಿಸಿದನು?

4. ಯೆಹೋವ ಇಸ್ರಾಯೇಲ್ಯರಿಗೆ ಪಶ್ಚಾತ್ತಾಪದ ಬಗ್ಗೆ ಏನು ಕಲಿಸಿದನು?

4 ಯೆಹೋವ ದೇವರು ಇಸ್ರಾಯೇಲ್ಯರನ್ನ ತನ್ನ ಜನ್ರಾಗಿ ಆರಿಸ್ಕೊಂಡಾಗ ಅವ್ರ ಜೊತೆ ಒಂದು ಒಪ್ಪಂದ ಮಾಡ್ಕೊಂಡನು. ಅವರು ಆತನ ನಿಯಮಗಳನ್ನ ಪಾಲಿಸಿದ್ರೆ ಅವ್ರನ್ನ ಕಾಪಾಡ್ತೀನಿ, ಅವ್ರನ್ನ ಆಶೀರ್ವದಿಸ್ತೀನಿ ಅಂತ ಮಾತು ಕೊಟ್ಟನು. “ನಾನು ಇವತ್ತು ನಿಮಗೆ ಕೊಟ್ಟ ಈ ಆಜ್ಞೆಗಳು ನಿಮಗೆ ಪಾಲಿಸೋಕೆ ತುಂಬ ಕಷ್ಟ ಆಗಲ್ಲ. ಅವು ನಿಮಗೆ ಕೈಗೆಟುಕದಷ್ಟು ದೂರನೂ ಇಲ್ಲ” ಅಂತಾನೂ ಅಂದನು. (ಧರ್ಮೋ. 30:11, 16) ಆದ್ರೆ ಒಂದುವೇಳೆ ಇಸ್ರಾಯೇಲ್ಯರು ಯೆಹೋವನ ನಿಯಮಗಳನ್ನ ಮುರಿದ್ರೆ ಉದಾಹರಣೆಗೆ, ಆತನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸಿದ್ರೆ ಅವರು ಆತನ ಆಶೀರ್ವಾದ ಕಳ್ಕೊಳ್ತಿದ್ರು. ಅಷ್ಟೇ ಅಲ್ಲ ಅವರು ಮಾಡಿದ ತಪ್ಪಿಂದ ಕಷ್ಟನೂ ಅನುಭವಿಸ್ತಿದ್ರು. ಆ ತರ ಆದ್ರೂ ಯೆಹೋವ ಅವ್ರ ಕೈ ಬಿಡ್ತಿರಲಿಲ್ಲ. ಅವ್ರಿಗೆ ಸಹಾಯ ಮಾಡೋಕೆ ರೆಡಿ ಇದ್ದನು. ಆದ್ರೆ ಜನ್ರು ಆತನ ಮೆಚ್ಚಿಗೆ ಪಡ್ಕೊಬೇಕಂದ್ರೆ ‘ಆತನ ಹತ್ರ ವಾಪಸ್‌ ಬರಬೇಕಿತ್ತು, ಅವರು ಆತನು ಹೇಳಿದ್ದನ್ನೆಲ್ಲ ಪಾಲಿಸಬೇಕಿತ್ತು.’ (ಧರ್ಮೋ. 30:1-3, 17-20) ಅಂದ್ರೆ ಅವರು ಪಶ್ಚಾತ್ತಾಪ ಪಡಬೇಕಿತ್ತು. ಅವರು ಹೀಗೆ ಮಾಡಿದ್ರೆ ಮಾತ್ರ ಆತನಿಗೆ ಹತ್ರ ಆಗೋಕೆ ಆಗ್ತಿತ್ತು. ಆತನ ಆಶೀರ್ವಾದನ ಮತ್ತೆ ಪಡ್ಕೊಳ್ಳೋಕೆ ಆಗ್ತಿತ್ತು.

5. ಜನ್ರು ಕೆಟ್ಟ ದಾರಿ ಹಿಡಿದ್ರೂ ಅವರು ಬದಲಾಗ್ತಾರೆ ಅನ್ನೋ ನಂಬಿಕೆನ ಯೆಹೋವ ಹೇಗೆ ತೋರಿಸಿದನು? (2 ಅರಸು 17:13, 14)

5 ಇಸ್ರಾಯೇಲ್ಯರು ಮತ್ತೆ ಮತ್ತೆ ಯೆಹೋವನ ವಿರುದ್ಧ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ರು. ಮೂರ್ತಿಪೂಜೆ ತಪ್ಪು ಅಂತ ಗೊತ್ತಿದ್ರೂ ಅದನ್ನೇ ಮಾಡಿದ್ರು. ಇನ್ನೂ ಕೆಟ್ಟಕೆಟ್ಟ ವಿಷ್ಯಗಳನ್ನ ಮಾಡಿದ್ರು. ಇದ್ರಿಂದ ಅವ್ರೇ ಕಷ್ಟಗಳನ್ನ ಅನುಭವಿಸಿದ್ರು. ಆದ್ರೆ ಆ ಜನ್ರು ಕೆಟ್ಟ ದಾರಿ ಹಿಡಿದಿದ್ರೂ ಯೆಹೋವ ಅವ್ರನ್ನ ಯಾವತ್ತೂ ಕೈಬಿಡಲಿಲ್ಲ. ಮನಸಾರೆ ಪಶ್ಚಾತ್ತಾಪ ಪಡೋಕೆ, ತನ್ನ ಹತ್ರ ವಾಪಸ್‌ ಬರೋಕೆ ಮತ್ತೆ ಮತ್ತೆ ಪ್ರವಾದಿಗಳನ್ನ ಅವ್ರ ಹತ್ರ ಕಳಿಸಿ ಸಹಾಯ ಮಾಡಿದನು.2 ಅರಸು 17:13, 14 ಓದಿ.

6. ಜನ್ರು ಪಶ್ಚಾತ್ತಾಪ ಪಡೋದು ತುಂಬ ಮುಖ್ಯ ಅಂತ ಯೆಹೋವ ಪ್ರವಾದಿಗಳ ಮೂಲಕ ಹೇಗೆ ತಿಳಿಸಿದನು? (ಚಿತ್ರ ನೋಡಿ.)

6 ಇಸ್ರಾಯೇಲ್ಯರ ಹತ್ರ ಯೆಹೋವ ಪ್ರವಾದಿಗಳನ್ನ ಕಳಿಸಿ ಎಚ್ಚರಿಸಿದನು, ತಿದ್ದಿದನು. ಉದಾಹರಣೆಗೆ ಆತನು ಯೆರೆಮೀಯನ ಮೂಲಕ ಹೀಗೆ ಹೇಳಿದನು: “ಧರ್ಮಭ್ರಷ್ಟ ಇಸ್ರಾಯೇಲೇ, ವಾಪಸ್‌ ಬಾ . . . ನಾನು ನಿಷ್ಠಾವಂತ. ಹಾಗಾಗಿ ನಿನ್ನನ್ನ ಕೋಪದಿಂದ ನೋಡಲ್ಲ . . . ನಾನು ಶಾಶ್ವತವಾಗಿ ಕೋಪ ಮಾಡ್ಕೊಂಡು ಇರೋನಲ್ಲ. ನೀನು ಪಾಪ ಮಾಡಿದ್ದೀಯ ಅಂತ ಒಪ್ಕೊಂಡ್ರೆ ಸಾಕು.” (ಯೆರೆ. 3:12, 13) ಯೋವೇಲನನ್ನ ಕಳಿಸಿ “ಪೂರ್ಣ ಹೃದಯದಿಂದ ನನ್ನ ಹತ್ರ ವಾಪಸ್‌ ಬನ್ನಿ” ಅಂತ ಹೇಳಿದನು. (ಯೋವೇ. 2:12, 13) ಯೆಶಾಯನನ್ನ ಕಳಿಸಿ “ನಿಮ್ಮನ್ನ . . . ಶುದ್ಧಮಾಡ್ಕೊಳ್ಳಿ, ನನ್ನ ಕಣ್ಮುಂದಿಂದ ನಿಮ್ಮ ಕೆಟ್ಟ ಕೆಲಸಗಳನ್ನ ದೂರತಳ್ಳಿ, ಕೆಟ್ಟದ್ದು ಮಾಡೋದನ್ನ ನಿಲ್ಲಿಸಿ” ಅಂತ ಎಚ್ಚರಿಸಿದನು. (ಯೆಶಾ. 1:16-19) ಅಷ್ಟೇ ಅಲ್ಲ, ಯೆಹೆಜ್ಕೇಲನ ಮೂಲಕ ಯೆಹೋವ “ಒಬ್ಬ ದುಷ್ಟ ಸತ್ತರೆ ನನಗೆ ಸ್ವಲ್ಪಾನೂ ಖುಷಿ ಆಗಲ್ಲ. ಅವನು ಕೆಟ್ಟ ದಾರಿ ಬಿಟ್ಟು ಬಾಳಬೇಕು ಅನ್ನೋದೇ ನನ್ನಾಸೆ. . . . ಯಾರೂ ಸಾಯೋದು ನನಗೆ ಇಷ್ಟ ಇಲ್ಲ, ಸ್ವಲ್ಪಾನೂ ಇಷ್ಟ ಇಲ್ಲ. ಹಾಗಾಗಿ ಪಾಪ ಮಾಡೋದನ್ನ ಬಿಟ್ಟು ಬಾಳಿ” ಅಂತ ಬುದ್ಧಿ ಹೇಳಿದನು. (ಯೆಹೆ. 18:23, 32) ಇದ್ರಿಂದ ಏನು ಗೊತ್ತಾಗುತ್ತೆ? ಪಾಪ ಮಾಡಿದವರು ಪಶ್ಚಾತ್ತಾಪ ಪಟ್ಟಾಗ ಆತನಿಗೆ ತುಂಬ ಖುಷಿ ಆಗುತ್ತೆ, ಅವರು ಶಾಶ್ವತವಾಗಿ ಬದುಕಬೇಕು ಅನ್ನೋದು ಆತನ ಆಸೆ ಅಂತ ಗೊತ್ತಾಗುತ್ತೆ. ಹಾಗಂತ ಪಾಪ ಮಾಡಿದವರು ‘ಮೊದ್ಲು ಪಶ್ಚಾತ್ತಾಪಪಡ್ಲಿ, ಆಮೇಲೆ ನಾನು ಅವ್ರಿಗೆ ಸಹಾಯ ಮಾಡ್ತೀನಿ’ ಅಂತ ಯೆಹೋವ ಅಂದ್ಕೊಳ್ಳಲ್ಲ. ಇದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನ ನೋಡೋಣ.

ಕೆಟ್ಟ ದಾರಿ ಹಿಡಿದಿದ್ದ ಜನ್ರು ಪಶ್ಚಾತ್ತಾಪ ಪಡೋಕೆ ಯೆಹೋವ ತನ್ನ ಪ್ರವಾದಿಗಳನ್ನ ಮತ್ತೆ ಮತ್ತೆ ಅವ್ರ ಹತ್ರ ಕಳಿಸಿದನು (ಪ್ಯಾರ 6-7 ನೋಡಿ)


7. ಪ್ರವಾದಿ ಹೋಶೇಯ ಮತ್ತು ಅವನ ಹೆಂಡ್ತಿ ಉದಾಹರಣೆಯಿಂದ ಯೆಹೋವ ಇಸ್ರಾಯೇಲ್ಯರಿಗೆ ಏನು ಕಲಿಸಿದನು?

7 ಒಬ್ಬ ವ್ಯಕ್ತಿ ತಪ್ಪು ಮಾಡ್ತಾ ಇರುವಾಗ್ಲೂ ಯೆಹೋವ ಅವನಿಗೆ ಸಹಾಯ ಮಾಡ್ತಾನೆ ಅಂತ ತಿಳ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಪ್ರವಾದಿ ಹೋಶೇಯನ ಹೆಂಡ್ತಿ ಗೋಮೆರ ಅವನನ್ನ ಬಿಟ್ಟು ಬೇರೆ ಗಂಡಸ್ರ ಹಿಂದೆ ಹೋದಳು. ಅವಳು ಒಬ್ರಾದ ಮೇಲೆ ಒಬ್ರು ಜೊತೆ ವ್ಯಭಿಚಾರ ಮಾಡಿದಳು. ಹಾಗಂತ ಅವಳು ತಪ್ಪನ್ನ ತಿದ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಕೆಟ್ಟುಹೋಗಿದ್ಲಾ? ಹೃದಯಗಳನ್ನ ಓದೋ ಶಕ್ತಿ ಇರೋ ಯೆಹೋವ ಹೋಶೇಯನಿಗೆ ಏನು ಹೇಳಿದನು ಅಂತ ನೋಡಿ. “ಇಸ್ರಾಯೇಲ್‌ ಜನ ನನ್ನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸೋಕೆ ತುಂಬ ಇಷ್ಟಪಡ್ತಾರೆ. ಆದ್ರೂ ಯೆಹೋವನಾದ ನಾನು ಅವ್ರನ್ನ ಪ್ರೀತಿಸ್ತೀನಿ. ಅದೇ ರೀತಿ, ಬೇರೊಬ್ಬ ಗಂಡಸಿಗೆ ಪ್ರಿಯಳಾಗಿರೋ ಮತ್ತು ವ್ಯಭಿಚಾರ ಮಾಡ್ತಿರೋ ನಿನ್ನ ಆ ಸ್ತ್ರೀಯನ್ನ ನೀನು ಮತ್ತೆ ಪ್ರೀತಿಸು.” (ಹೋಶೇ. 3:1; ಜ್ಞಾನೋ. 16:2) ಯೆಹೋವ ಇದನ್ನ ಹೋಶೇಯನ ಹತ್ರ ಹೇಳುವಾಗ ಅವನ ಹೆಂಡ್ತಿ ಆ ಗಂಭೀರ ಪಾಪನ ಇನ್ನೂ ಮಾಡ್ತಾ ಇದ್ದಳು. ಆದ್ರೂ ಯೆಹೋವ ಅವನ ಹತ್ರ ಅವಳನ್ನ ಕ್ಷಮಿಸಿ ಮತ್ತೆ ನಿನ್ನತ್ರ ಕರ್ಕೊಂಡು ಬಾ ಅಂತ ಹೇಳಿದನು. a ಇದ್ರಿಂದ ಯೆಹೋವ ಇಸ್ರಾಯೇಲ್ಯರಿಗೆ ಏನನ್ನ ಅರ್ಥ ಮಾಡಿಸಿದನು? ಅವರು ಕೆಟ್ಟ ದಾರಿ ಹಿಡಿದ್ರೂ ಯೆಹೋವ ಅವ್ರ ಕೈ ಬಿಟ್ಟಿರಲಿಲ್ಲ. ಅವರು ಗಂಭೀರ ಪಾಪಗಳನ್ನ ಮಾಡಿದ್ರೂ ಅವ್ರ ಮೇಲೆ ಆತನಿಗಿರೋ ಪ್ರೀತಿ ಒಂಚೂರೂ ಕಮ್ಮಿ ಆಗಿರಲಿಲ್ಲ. ಅದಕ್ಕೆ ಅವರು ಪಶ್ಚಾತ್ತಾಪ ಪಡೋಕೆ ಮತ್ತು ತಮ್ಮ ತಪ್ಪನ್ನ ತಿದ್ಕೊಳೋಕೆ ಪದೇ ಪದೇ ಪ್ರವಾದಿಗಳನ್ನ ಅವ್ರ ಹತ್ರ ಕಳಿಸಿದನು. ಇದ್ರಿಂದ ಏನು ಗೊತ್ತಾಗುತ್ತೆ? ಯೆಹೋವನಿಗೆ ಪ್ರತಿಯೊಬ್ರ ಹೃದಯದಲ್ಲಿ ಏನಿದೆ ಅಂತ ಚೆನ್ನಾಗಿ ಗೊತ್ತು. ಹಾಗಾಗಿ ಒಬ್ಬ ವ್ಯಕ್ತಿ ಗಂಭೀರ ಪಾಪ ಮಾಡ್ತಾ ಇದ್ರೂ ಅವನು ಪಶ್ಚಾತ್ತಾಪ ಪಡೋಕೆ ಆತನು ಖಂಡಿತ ಸಹಾಯ ಮಾಡ್ತಾನೆ.—ಜ್ಞಾನೋ. 17:3.

ಜನ್ರು ಪಶ್ಚಾತ್ತಾಪಪಡೋಕೆ ಯೆಹೋವ ಹೇಗೆ ಸಹಾಯ ಮಾಡ್ತಾನೆ?

8. ಕಾಯಿನ ಪಶ್ಚಾತ್ತಾಪ ಪಡೋಕೆ ಯೆಹೋವ ಅವನಿಗೆ ಹೇಗೆ ಸಹಾಯ ಮಾಡಿದನು? (ಆದಿಕಾಂಡ 4:3-7) (ಚಿತ್ರ ನೋಡಿ.)

8 ಕಾಯಿನ ತಪ್ಪು ಮಾಡಿದಾಗ್ಲೂ ಅವನು ಪಶ್ಚಾತ್ತಾಪ ಪಡೋಕೆ ಯೆಹೋವ ಅವನಿಗೆ ಸಹಾಯ ಮಾಡಿದನು. ಆದಾಮನಿಂದ ಬಂದ ಅಪರಿಪೂರ್ಣತೆ ಕಾಯಿನನಲ್ಲೂ ಇದ್ದಿದ್ರಿಂದ ಅವನಲ್ಲಿ ತಪ್ಪಾದ ಆಸೆ ಬರೋದು ಸಹಜ ಆಗಿತ್ತು. ಅದಕ್ಕೆ ಅವನು ಆ ಆಸೆ ವಿರುದ್ಧ ಹೋರಾಡಬೇಕಿತ್ತು. ಆದ್ರೆ ಅವನು ಹೋರಾಡಲಿಲ್ಲ, “ಅವನು ಮಾಡ್ತಾ ಇದ್ದಿದ್ದೆಲ್ಲ ಕೆಟ್ಟದಾಗಿತ್ತು” ಅಂತ ಬೈಬಲ್‌ ಹೇಳುತ್ತೆ. (1 ಯೋಹಾ. 3:12) ಅದಕ್ಕೆ ಅವನು ಅರ್ಪಣೆಗಳನ್ನ ಕೊಟ್ಟಾಗ್ಲೂ ಯೆಹೋವ “ಕಾಯಿನನನ್ನ ಅವನ ಅರ್ಪಣೆಯನ್ನ ಸ್ವಲ್ಪನೂ ಇಷ್ಟಪಡಲಿಲ್ಲ.” ಆಗ್ಲಾದ್ರೂ ಕಾಯಿನ ಬದಲಾಗಬೇಕಿತ್ತು. ಆದ್ರೆ ಅವನ “ಕೋಪ ನೆತ್ತಿಗೇರಿತು, ಅವನ ಮುಖ ಬಾಡಿಹೋಯ್ತು” ಅಂತ ಬೈಬಲ್‌ ಹೇಳುತ್ತೆ. ಆಗ ಯೆಹೋವ ಅವನನ್ನ ಪ್ರೀತಿಯಿಂದ ತಿದ್ದಿದನು. (ಆದಿಕಾಂಡ 4:3-7 ಓದಿ.) ಅವನು ಒಳ್ಳೇದು ಮಾಡೋದಾದ್ರೆ ಅವನನ್ನ ಮೆಚ್ಕೊಳ್ತೀನಿ ಅಂತ ಹೇಳಿದನು. ಆದ್ರೆ ಅವನು ಕೋಪನ ಹಾಗೇ ಇಟ್ಕೊಂಡ್ರೆ ಅದ್ರಿಂದ ಅವನಿಗೆ ಹಾನಿ ಆಗುತ್ತೆ ಅಂತನೂ ಎಚ್ಚರಿಸಿದನು. ಆದ್ರೆ ಕಾಯಿನ ಯೆಹೋವನ ಮಾತನ್ನ ಕಿವಿಗೇ ಹಾಕೊಳ್ಳಲಿಲ್ಲ. ಪಶ್ಚಾತ್ತಾಪ ಪಡೋಕೆ ಯೆಹೋವ ಕೊಟ್ಟ ಸಹಾಯನ ಅವನು ತಳ್ಳಿ ಹಾಕಿದ. ಹಾಗಂತ ಯೆಹೋವ, ‘ಇನ್ಮೇಲೆ ನಾನು ಯಾರಿಗೂ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡೋದೇ ಇಲ್ಲ’ ಅಂದ್ಕೊಂಡ್ನಾ? ಖಂಡಿತ ಇಲ್ಲ. ಆತನು ಆ ತರ ಯೋಚಿಸೋಕೆ ಸಾಧ್ಯನೇ ಇಲ್ಲ!

ಕಾಯಿನನಿಗೆ ಯೆಹೋವ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಿದನು ಮತ್ತು ತಿದ್ಕೊಂಡ್ರೆ ಆಶೀರ್ವದಿಸ್ತೀನಿ ಅಂತನೂ ಹೇಳಿದನು (ಪ್ಯಾರ 8 ನೋಡಿ)


9. ದಾವೀದ ಪಶ್ಚಾತ್ತಾಪ ಪಡೋಕೆ ಯೆಹೋವ ಅವನಿಗೆ ಹೇಗೆ ಸಹಾಯ ಮಾಡಿದನು?

9 ಯೆಹೋವ ತಾನು ತುಂಬ ಪ್ರೀತಿಸ್ತಿದ್ದ ರಾಜ ದಾವೀದನಿಗೆ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಿದನು. ದಾವೀದ ಯೆಹೋವನ “ಮನಸ್ಸಿಗೆ ತುಂಬ ಇಷ್ಟ” ಆಗಿದ್ದನು. (ಅ. ಕಾ. 13:22) ಆದ್ರೆ ಅವನು ದೊಡ್ಡ ಪಾಪಗಳನ್ನೇ ಮಾಡಿದ. ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಇಷ್ಟು ದೊಡ್ಡ ಪಾಪ ಮಾಡಿದ ಅವನನ್ನ ಮೋಶೆಯ ನಿಯಮದ ಪ್ರಕಾರ ಸಾಯಿಸಬೇಕಿತ್ತು. (ಯಾಜ. 20:10; ಅರ. 35:31) ಆದ್ರೆ ಯೆಹೋವ ಹಾಗೆ ಆಗೋಕೆ ಬಿಡಲಿಲ್ಲ, ಅವನು ಪಶ್ಚಾತ್ತಾಪ ಪಡೋಕೆ ಸಹಾಯ ಮಾಡಿದನು. b ಆದ್ರೆ ದಾವೀದ ತಾನು ಮಾಡಿದ ತಪ್ಪಿಗೆ ತಾನಾಗೇ ಒಂಚೂರೂ ಪಶ್ಚಾತ್ತಾಪ ಪಡಲಿಲ್ಲ. ಆದ್ರೂ ಯೆಹೋವ ಪ್ರವಾದಿ ನಾತಾನನ್ನ ದಾವೀದನ ಹತ್ರ ಕಳಿಸಿದನು. ನಾತಾನ ಅವನ ಮನಸ್ಸಿಗೆ ನಾಟೋ ಒಂದು ಉದಾಹರಣೆ ಹೇಳಿದನು. ಅದನ್ನ ಕೇಳಿದಾಗ ದಾವೀದ ಯೆಹೋವನಿಗೆ ಎಷ್ಟು ನೋವು ಮಾಡಿದ್ದೀನಿ ಅಂತ ಅರ್ಥ ಮಾಡ್ಕೊಂಡ. ಆಮೇಲೆ ಪಶ್ಚಾತ್ತಾಪ ಪಟ್ಟ. (2 ಸಮು. 12:1-14) ಅವನು ಎಷ್ಟು ಪಶ್ಚಾತ್ತಾಪ ಪಟ್ಟ ಅಂತ ಅವನು ಬರೆದ ಕೀರ್ತನೆಗಳಿಂದನೇ ಗೊತ್ತಾಗುತ್ತೆ. (ಕೀರ್ತ. 51, ಮೇಲ್ಬರಹ) ಇವತ್ತಿಗೂ ಪಾಪ ಮಾಡಿದವ್ರಿಗೆ ಆ ಕೀರ್ತನೆ ತುಂಬ ಸಾಂತ್ವನ ಕೊಡುತ್ತೆ, ಪಶ್ಚಾತ್ತಾಪ ಪಡೋಕೆ ಪ್ರೇರೇಪಿಸುತ್ತೆ. ಯೆಹೋವ ದಾವೀದನನ್ನ ಕ್ಷಮಿಸಿದ್ದು ಎಷ್ಟು ಒಳ್ಳೆದಾಯ್ತು ಅಲ್ವಾ? ಆತನು ಕ್ಷಮಿಸಿದ್ರಿಂದಾನೇ ಇಷ್ಟು ಒಳ್ಳೇ ಕೀರ್ತನೆಗಳನ್ನ ಅವನು ಬರೆಯೋಕೆ ಆಗಿದ್ದು.

10. ಪಾಪ ಮಾಡಿದವ್ರನ್ನ ಯೆಹೋವ ಕ್ಷಮಿಸ್ತಾನೆ, ಅವ್ರಿಗೆ ತಾಳ್ಮೆ ತೋರಿಸ್ತಿದ್ದಾನೆ ಅಂತ ಗೊತ್ತಾದಾಗ ನಿಮಗೆ ಹೇಗೆ ಅನಿಸುತ್ತೆ?

10 ನಾವು ಮಾಡೋ ಪಾಪ, ಚಿಕ್ಕದಿರಲಿ, ದೊಡ್ಡದಿರಲಿ ಯೆಹೋವನಿಗೆ ಒಂಚೂರೂ ಇಷ್ಟ ಆಗಲ್ಲ. ಯೆಹೋವ ಅದನ್ನ ದ್ವೇಷಿಸ್ತಾನೆ. (ಕೀರ್ತ. 5:4, 5) ಆತನಿಗೆ ನಾವು ಪಾಪಿಗಳು ಅಂತ ಚೆನ್ನಾಗಿ ಗೊತ್ತಿದೆ. ಆದ್ರೂ ಆತನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇರೋದ್ರಿಂದ ನಾವು ಪಾಪ ಮಾಡಿದಾಗ ಪಶ್ಚಾತ್ತಾಪ ಪಡೋಕೆ ಸಹಾಯ ಮಾಡ್ತಾನೆ. ತುಂಬ ಕೆಟ್ಟ-ಕೆಟ್ಟ ವಿಷ್ಯ ಮಾಡ್ತಿದ್ದ ಪಾಪಿಗಳು ಪಶ್ಚಾತ್ತಾಪ ಪಡೋಕೆ ಮತ್ತು ತನಗೆ ಹತ್ರ ಆಗೋಕೆ ಯಾವಾಗ್ಲೂ ಸಹಾಯ ಮಾಡ್ತಾನೆ. ಇದನ್ನ ಕೇಳಿಸ್ಕೊಂಡಾಗ ನಮಗೆ ಎಷ್ಟೊಂದು ಸಮಾಧಾನ ಆಗುತ್ತಲ್ವಾ? ಯೆಹೋವ ನಮಗೆ ಎಷ್ಟು ತಾಳ್ಮೆ ತೋರಿಸ್ತಿದ್ದಾನೆ, ಎಷ್ಟು ಕ್ಷಮಿಸ್ತಾನೆ ಅಂತ ಗೊತ್ತಾದಾಗ ನಾವು ಯಾವಾಗ್ಲೂ ಆತನಿಗೆ ನಿಯತ್ತಾಗಿ ಇರಬೇಕು ಅಂತ ಅನಿಸುತ್ತೆ. ಅಷ್ಟೇ ಅಲ್ಲ ಅಕಸ್ಮಾತ್‌ ಪಾಪ ಮಾಡಿದ್ರೆ ತಕ್ಷಣ ಪಶ್ಚಾತ್ತಾಪ ಪಡಬೇಕು ಅಂತನೂ ಅನಿಸುತ್ತೆ. ಈಗ ನಾವು ಪಶ್ಚಾತ್ತಾಪದ ಬಗ್ಗೆ ಯೇಸು ತನ್ನ ಶಿಷ್ಯರಿಗೆ ಏನು ಕಲಿಸ್ಕೊಟ್ಟ ಅಂತ ನೋಡೋಣ.

ಪಶ್ಚಾತ್ತಾಪದ ಬಗ್ಗೆ ಯೇಸುವಿನ ಶಿಷ್ಯರು ಏನು ಕಲಿತ್ರು?

11-12. ಯೆಹೋವ ನಮ್ಮನ್ನ ಕ್ಷಮಿಸೋಕೆ ರೆಡಿ ಇರ್ತಾನೆ ಅಂತ ನಾವು ಅರ್ಥ ಮಾಡ್ಕೊಳ್ಳೋಕೆ ಯೇಸು ಯಾವ ಉದಾಹರಣೆ ಹೇಳಿದನು? (ಚಿತ್ರ ನೋಡಿ.)

11 ಒಂದನೇ ಶತಮಾನದಲ್ಲಿ ಮೆಸ್ಸೀಯ ಬರೋ ಸಮಯ ಹತ್ರ ಆಗಿತ್ತು. ಪಶ್ಚಾತ್ತಾಪ ಪಡೋದು ಎಷ್ಟು ಪ್ರಾಮುಖ್ಯ ಅಂತ ಯೆಹೋವ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮತ್ತು ಯೇಸುವಿನಿಂದ ಕಲಿಸಿದನು. ಇದ್ರ ಬಗ್ಗೆ ನಾವು ಕಳೆದ ಲೇಖನದಲ್ಲಿ ನೋಡಿದ್ವಿ.—ಮತ್ತಾ. 3:1, 2; 4:17.

12 ಪಾಪ ಮಾಡಿದವ್ರನ್ನ ಕ್ಷಮಿಸೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ. ಇದನ್ನ ಯೇಸು ಜನ್ರಿಗೆ ಎಷ್ಟೋ ಸಲ ಅರ್ಥ ಮಾಡಿಸಿದನು. ಯೇಸು ಒಂದ್ಸಲ, ಮನೆಬಿಟ್ಟು ಹೋದ ಮಗನ ಕಥೆಯನ್ನ ಹೇಳಿದನು. ಅವನು ಕೆಟ್ಟ ದಾರಿ ಹಿಡಿದು ಅಪ್ಪನನ್ನ ಬಿಟ್ಟು ಹೋಗಿದ್ದ. ಸ್ವಲ್ಪ ಸಮಯ ಅವನು ಕೆಟ್ಟ ಜೀವನ ನಡೆಸಿದ. ಆದ್ರೆ “ಆಮೇಲೆ ಅವನಿಗೆ ಬುದ್ಧಿ ಬಂತು.” ಅದಕ್ಕೆ ಅವನು ಆಮೇಲೆ ಮನೆಗೆ ವಾಪಸ್‌ ಬಂದ. ಆಗ ಅವನ ಅಪ್ಪ ಏನು ಮಾಡಿದ? “ಮಗ ಇನ್ನೂ ತುಂಬ ದೂರ ಇರುವಾಗಲೇ ಅಪ್ಪ ಅವನನ್ನ ನೋಡಿ ಕನಿಕರಪಟ್ಟು ಓಡೋಡಿ ಬಂದು ಅಪ್ಕೊಂಡು ಮುತ್ತು ಕೊಟ್ಟ.” ಆಗ ಆ ಮಗ ತುಂಬ ಬೇಜಾರಿಂದ ಅವನು ಅವನ ಅಪ್ಪನ ಹತ್ರ ‘ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಾಗಿ ನನ್ನ ಸೇರಿಸ್ಕೊಳ್ತಿಯಾ?’ ಅಂತ ಕೇಳಬೇಕಂತ ಇದ್ದ. ಆದ್ರೆ ಅದಕ್ಕೆ ಮುಂಚೆನೇ ಅವನ ಅಪ್ಪ ಅವನನ್ನ ಮನೆಗೆ ಸೇರಿಸ್ಕೊಂಡ. ಅವನು ಅಷ್ಟು ತಪ್ಪು ಮಾಡಿದ್ರೂ ಅವನನ್ನ ಪ್ರೀತಿಯಿಂದ “ನನ್ನ ಚಿಕ್ಕ ಮಗ” ಅಂತ ಕರೆದ. ಆಮೇಲೆ ಆ ಅಪ್ಪ ಅವನು “ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ” ಅಂತ ಹೇಳಿದ. (ಲೂಕ 15:11-32) ಈ ಕಥೆಲಿರೋ ಅಪ್ಪನ ತರನೇ ಯೆಹೋವ ಪಶ್ಚಾತ್ತಾಪಪಟ್ಟ ಎಷ್ಟೋ ಪಾಪಿಗಳನ್ನ ಕ್ಷಮಿಸಿದ್ದನ್ನ ಯೇಸು ಸ್ವರ್ಗದಲ್ಲಿದ್ದಾಗ್ಲೇ ನೋಡಿದ್ದನು. ಅದಕ್ಕೆ ಅವನು ಭೂಮಿಗೆ ಬಂದಾಗ ಯೆಹೋವ ಎಷ್ಟು ಕರುಣಾಮಯಿ ಅಂತ ಜನ ಅರ್ಥ ಮಾಡ್ಕೊಳೋಕೆ ಈ ಕಥೆನ ಹೇಳಿದನು. ಪಾಪಿಗಳಾಗಿರೋ ನಮ್ಮ ಮೇಲೆ ಯೆಹೋವನಿಗೆ ತುಂಬ ಪ್ರೀತಿಯಿದೆ ಕರುಣೆಯಿದೆ ಅಂತ ತಿಳ್ಕೊಂಡಾಗ ನಮ್ಮ ಮನಸ್ಸು ಎಷ್ಟು ಹಗುರ ಆಗುತ್ತೆ ಅಲ್ವಾ?

ಯೇಸು ಉದಾಹರಣೆಲಿ ಹೇಳಿದ ತರ, ಮನೆ ಬಿಟ್ಟು ಹೋದ ಮಗ ವಾಪಸ್‌ ಮನೆಗೆ ಬಂದಾಗ ಅವನನ್ನ ಅಪ್ಕೊಳ್ಳೋಕೆ ಅಪ್ಪ ಓಡಿ ಬರ್ತಿದ್ದಾನೆ (ಪ್ಯಾರ 11-12 ನೋಡಿ)


13-14. (ಎ) ಪಶ್ಚಾತ್ತಾಪ ಪಡೋದ್ರ ಬಗ್ಗೆ ಪೇತ್ರ ಏನು ಕಲಿತ? (ಬಿ) ಇದ್ರಿಂದ ಅವನು ಬೇರೆಯವ್ರಿಗೆ ಏನು ಅರ್ಥ ಮಾಡಿಸಿದ? (ಚಿತ್ರ ನೋಡಿ.)

13 ಪಾಪ ಮಾಡಿದವ್ರನ್ನ ಯೆಹೋವ ಹೇಗೆ ಕ್ಷಮಿಸ್ತಾನೆ ಅಂತ ಪೇತ್ರ ಯೇಸುವಿನಿಂದ ಕಲಿತ. ಪೇತ್ರ ಪದೇ ಪದೇ ತಪ್ಪು ಮಾಡ್ತಾನೇ ಇದ್ದ. ಆಗೆಲ್ಲ ಯೇಸು ಅವನನ್ನ ಕ್ಷಮಿಸ್ತಾನೇ ಇದ್ದ. ಉದಾಹರಣೆಗೆ ಯೇಸು ಯಾರಂತನೇ ಗೊತ್ತಿಲ್ಲ ಅಂತ ಪೇತ್ರ ಮೂರು ಸಲ ಹೇಳಿದ. ಆಮೇಲೆ ದೊಡ್ಡ ತಪ್ಪು ಮಾಡಿಬಿಟ್ಟೆ ಅಂತ ಅದನ್ನ ನೆನಸಿ ಕೊರಗ್ತಾ ಇದ್ದ. (ಮತ್ತಾ. 26:34, 35, 69-75) ಅದಕ್ಕೆ ಯೇಸು ಮತ್ತೆ ಜೀವ ಪಡ್ಕೊಂಡ ಮೇಲೆ ಪೇತ್ರನ ಹತ್ರ ಮಾತಾಡೋಕಂತಾನೇ ಅವನೊಬ್ಬನೇ ಇದ್ದಾಗ ಕಾಣಿಸ್ಕೊಂಡ, ಪ್ರೀತಿಯಿಂದ ಮಾತಾಡಿದ. (ಲೂಕ 24:33, 34; 1 ಕೊರಿಂ. 15:3-5) ಅವನನ್ನ ಕ್ಷಮಿಸ್ತೀನಿ ಅಂತ ಅರ್ಥ ಮಾಡಿಸಿದ.—ಮಾರ್ಕ 16:7.

14 ಪೇತ್ರನಿಗೆ ತನ್ನ ಜೀವನದಲ್ಲಾದ ಈ ಅನುಭವದಿಂದ ಯೆಹೋವ ಪಾಪ ಮಾಡಿದವ್ರನ್ನ ಕ್ಷಮಿಸೋಕೆ ಎಷ್ಟು ಆಸೆ ಪಡ್ತಾನೆ ಅಂತ ಅರ್ಥ ಆಯ್ತು. ಅದಕ್ಕೆ ಅವನು ಪಶ್ಚಾತ್ತಾಪ ಪಡೋದು ತುಂಬ ಮುಖ್ಯ ಅಂತ ಬೇರೆಯವ್ರಿಗೆ ಕಲಿಸಿದ. ಐವತ್ತನೇ ದಿನದ ಹಬ್ಬ ಮುಗಿದು ಸ್ವಲ್ಪ ದಿನ ಆದ್ಮೇಲೆ ಯೇಸುವನ್ನ ನಂಬದೇ ಇದ್ದ ಯೆಹೂದ್ಯರಿಗೆ ಅವನೊಂದು ಭಾಷಣ ಕೊಟ್ಟ. ಅದ್ರಲ್ಲಿ ಯೇಸುನ ಮೆಸ್ಸೀಯ ಅಂತ ನಂಬದೇ ಅವರು ಕೊಂದಾಕಿಬಿಟ್ರು ಅಂತ ಅವರು ಮಾಡಿದ ತಪ್ಪನ್ನ ಹೇಳಿದ. “ಹಾಗಾಗಿ ಪಶ್ಚಾತ್ತಾಪಪಟ್ಟು ಸರಿಯಾದ ದಾರಿಗೆ ಬನ್ನಿ. ಆಗ ಯೆಹೋವ ದೇವರು ನಿಮ್ಮ ಪಾಪಗಳನ್ನ ಅಳಿಸಿಹಾಕಿ, ನೆಮ್ಮದಿ ಕೊಡ್ತಾನೆ” ಅಂತ ಅವ್ರಿಗೆ ಪ್ರೀತಿಯಿಂದ ಹೇಳಿದ. (ಅ. ಕಾ. 3:14, 15, 17, 19) ಪೇತ್ರ ಇಲ್ಲಿ, ಪಾಪ ಮಾಡಿದವರು ಪಶ್ಚಾತ್ತಾಪಪಟ್ಟು ಸರಿದಾರಿಗೆ ಬರ್ತಾರೆ ಅಂತ ಹೇಳಿದ. ಅಂದ್ರೆ ಅವರು ತಮ್ಮ ಯೋಚನೆನ ಬದಲಾಯಿಸ್ಕೊಳ್ತಾರೆ, ಮಾಡ್ತಾ ಇದ್ದ ಕೆಟ್ಟ ಕೆಲಸನ ಬಿಟ್ಟುಬಿಡ್ತಾರೆ ಮತ್ತು ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ತಾರೆ ಅಂತ ಅರ್ಥ ಮಾಡಿಸಿದ. ಅಷ್ಟೇ ಅಲ್ಲ ಯೆಹೋವ ಅವ್ರ ಪಾಪಗಳನ್ನ ಅಳಿಸಿ ಹಾಕ್ತಾನೆ ಅಂತನೂ ಹೇಳಿದ. ಅಂದ್ರೆ ಪಾಪಗಳನ್ನ ಯೆಹೋವ ಒಂದು ಸಲ ಕ್ಷಮಿಸಿದ ಮೇಲೆ ಅದನ್ನ ಯಾವತ್ತೂ ನೆನಪಿಸ್ಕೊಳ್ಳಲ್ಲ ಅಂತನೂ ಅರ್ಥ ಮಾಡಿಸಿದ. ಇದಾಗಿ ಸುಮಾರು ವರ್ಷಗಳು ಕಳೆದ ಮೇಲೆನೂ ಅವನು ಕ್ರೈಸ್ತರಿಗೆ ‘ಯಾರೂ ನಾಶ ಆಗಬಾರದು ಅಂತ ಯೆಹೋವ ತಾಳ್ಮೆಯಿಂದ ಕಾಯ್ತಾ ಇದ್ದಾನೆ. ಎಲ್ರಿಗೂ ತಮ್ಮ ತಪ್ಪನ್ನ ತಿದ್ಕೊಳ್ಳೋಕೆ’ ಅಥವಾ ಪಶ್ಚಾತ್ತಾಪ ಪಡೋಕೆ “ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ” ಅಂತ ನೆನಪಿಸಿದ. (2 ಪೇತ್ರ 3:9) ಹೌದು ನಾವು ಎಷ್ಟೇ ದೊಡ್ಡ ತಪ್ಪು ಮಾಡಿದ್ರೂ ಯೆಹೋವ ಅದನ್ನ ಕ್ಷಮಿಸ್ತಾನೆ ಅಂತ ಗೊತ್ತಾದಾಗ ನಮಗೆ ಎಷ್ಟು ಸಮಾಧಾನ ಆಗುತ್ತೆ ಅಲ್ವಾ?

ಪಶ್ಚಾತ್ತಾಪ ಪಟ್ಟ ಅಪೊಸ್ತಲನನ್ನ ಮನಸಾರೆ ಕ್ಷಮಿಸಿದ್ದೀನಿ ಅಂತ ಯೇಸು ಅವನಿಗೆ ಅರ್ಥಮಾಡಿಸಿದನು (ಪ್ಯಾರ 13-14 ನೋಡಿ)


15-16. (ಎ) ಕ್ಷಮೆ ಬಗ್ಗೆ ಅಪೊಸ್ತಲ ಪೌಲ ಏನು ಕಲಿತ? (1 ತಿಮೊತಿ 1:12-15) (ಬಿ) ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

15 ದೊಡ್ಡ-ದೊಡ್ಡ ತಪ್ಪುಗಳನ್ನ ಮಾಡಿದವರು ಪಶ್ಚಾತ್ತಾಪ ಪಡಲ್ಲ, ಅವ್ರನ್ನ ಯೆಹೋವ ಕ್ಷಮಿಸೋದಿಲ್ಲ ಅಂತ ಕೆಲವರು ಅಂದ್ಕೊಳ್ತಾರೆ. ಆದ್ರೆ ಸೌಲನ ಉದಾಹರಣೆ ನೋಡಿ, ಅವನು ಯೇಸುವಿನ ಶಿಷ್ಯರಿಗೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಅವ್ರಿಗೆ ಅವನು ಚಿತ್ರಹಿಂಸೆ ಕೊಟ್ಟ. ಆಗ ಕೆಲವು ಕ್ರೈಸ್ತರು ಇವನು ಬದಲಾಗೋಕೆ ಸಾಧ್ಯನೇ ಇಲ್ಲ ಅಂತ ಅಂದ್ಕೊಂಡಿರಬಹುದು. ಆದ್ರೆ ಯೆಹೋವ ಮತ್ತು ಯೇಸು ಹಾಗೆ ಅಂದ್ಕೊಳ್ಳಲಿಲ್ಲ, ಅವನು ಪಶ್ಚಾತ್ತಾಪ ಪಡ್ತಾನೆ, ಬದಲಾಗ್ತಾನೆ ಅಂತ ನಂಬಿಕೆ ಇಟ್ರು. ಯಾಕಂದ್ರೆ ಅವನಲ್ಲಿರೋ ಒಳ್ಳೆ ಗುಣಗಳನ್ನ ಅವ್ರಿಬ್ರೂ ನೋಡಿದ್ರು. ಅದಕ್ಕೆ ಯೇಸು “ನಾನು ಅವನನ್ನ ಆರಿಸ್ಕೊಂಡಿದ್ದೀನಿ” ಅಂತ ಹೇಳಿದ. (ಅ. ಕಾ. 9:15) ಸೌಲ ಪಶ್ಚಾತ್ತಾಪ ಪಡೋಕೆ ಯೇಸು ಒಂದು ಅದ್ಭುತನೂ ಮಾಡಿದನು. (ಅ. ಕಾ. 7:58–8:3; 9:1-9, 17-20) ಸೌಲ ಒಬ್ಬ ಕ್ರೈಸ್ತನಾದ ಮೇಲೆ ಅವನಿಗೆ ಪೌಲ ಅಂತ ಹೆಸ್ರು ಬಂತು. ಹೀಗೆ ಯೆಹೋವ ಮತ್ತು ಯೇಸು ಅವನಿಗೆ ದಯೆ ಕರುಣೆ ತೋರಿಸಿದ್ರು. ಅದಕ್ಕೆ ಅವನು ಅವ್ರಿಬ್ರಿಗೂ ಋಣಿಯಾಗಿದ್ದ. (1 ತಿಮೊತಿ 1:12-15 ಓದಿ.) ಹಾಗಾಗಿ ಅವನು ಸಹೋದರ ಸಹೋದರಿಯರಿಗೆ ‘ನೀವು ಪಶ್ಚಾತ್ತಾಪ ಪಡಬೇಕಂತ ದೇವರು ನಿಮಗೆ ದಯೆ ತೋರಿಸ್ತಿದ್ದಾನೆ’ ಅಂತ ಹೇಳಿದ.—ರೋಮ. 2:4.

16 ಕೊರಿಂಥ ಸಭೇಲಿ ಒಬ್ಬ ವ್ಯಕ್ತಿ ಅನೈತಿಕ ಜೀವನ ನಡೆಸ್ತಿದ್ದ. ಇದ್ರ ಬಗ್ಗೆ ಪೌಲನಿಗೆ ಗೊತ್ತಾಯ್ತು. ಆಗ ಅವನು ಆ ಸಭೆಗೆ ಒಂದು ಬುದ್ಧಿವಾದ ಕೊಟ್ಟ. ಯೆಹೋವ ಪ್ರೀತಿಸೋರಿಗೆ ಶಿಸ್ತು ಕೊಡ್ತಾನೆ ಮತ್ತು ಒಬ್ಬ ವ್ಯಕ್ತಿ ಪಶ್ಚಾತ್ತಾಪ ಪಡುವಾಗ ಕರುಣೆ ತೋರಿಸ್ತಾನೆ ಅನ್ನೋ ವಿಷ್ಯನ ಅವನು ಕೊಟ್ಟ ಬುದ್ಧಿವಾದದಿಂದ ನಾವು ಕಲಿತೀವಿ. ಇದ್ರ ಬಗ್ಗೆ ಹೆಚ್ಚನ್ನ ಮುಂದಿನ ಲೇಖನದಲ್ಲಿ ಕಲಿತೀವಿ. ಅಷ್ಟೇ ಅಲ್ಲ ಯೆಹೋವ ತರ ಇರೋಕೆ ನಾವೇನು ಮಾಡಬೇಕು ಅಂತನೂ ತಿಳ್ಕೊತೀವಿ.

ಗೀತೆ 38 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

a ಇಲ್ಲಿ ಹೇಳಿರೋ ನಿರ್ದೇಶನ ಹೋಶೇಯನ ಘಟನೆಗೆ ಮಾತ್ರ ಅನ್ವಯಿಸುತ್ತೆ. ಈಗಿನ ಕಾಲದಲ್ಲಿ ಯಾರಾದ್ರೂ ವ್ಯಭಿಚಾರ ಮಾಡಿ ಸಂಗಾತಿಗೆ ದ್ರೋಹ ಮಾಡಿದ್ರೆ ನಿರ್ದೋಷಿ ಸಂಗಾತಿ ಆ ವ್ಯಕ್ತಿ ಜೊತೆನೇ ಕೂಡಿ ಬಾಳಬೇಕು ಅಂತ ಯೆಹೋವ ಈಗ ಹೇಳ್ತಿಲ್ಲ. ನಿಜವಾಗಿ ಹೇಳಬೇಕಂದ್ರೆ, ಯೆಹೋವ ತನ್ನ ಮಗನ ಮೂಲಕ ನಿರ್ದೋಷಿ ಸಂಗಾತಿಗೋಸ್ಕರ ಒಂದು ಏರ್ಪಾಡು ಮಾಡಿದನು. ಅದೇನಂದ್ರೆ ನಿರ್ದೋಷಿ ಸಂಗಾತಿ ಬಯಸಿದ್ರೆ ವ್ಯಭಿಚಾರ ಮಾಡಿದ ಸಂಗಾತಿಗೆ ವಿಚ್ಛೇದನ ಕೊಡಬಹುದು.—ಮತ್ತಾ. 5:32; 19:9.