ಅಧ್ಯಯನ ಲೇಖನ 33
ಗೀತೆ 77 ಕ್ಷಮಿಸುವವರಾಗಿರಿ
ಗಂಭೀರ ಪಾಪ ಮಾಡಿದವ್ರ ಜೊತೆ ಸಭೆಯವರು ಹೇಗೆ ನಡ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ?
“ಯಾರಾದ್ರೂ ಪಾಪ ಮಾಡೋದಾದ್ರೆ ಅವ್ರಿಗೆ ಸಹಾಯ ಮಾಡೋಕೆ . . . ಯೇಸು ಕ್ರಿಸ್ತ ಇದ್ದಾನೆ.”—1 ಯೋಹಾ. 2:1.
ಈ ಲೇಖನದಲ್ಲಿ ಏನಿದೆ?
ಕೊರಿಂಥ ಸಭೇಲಿದ್ದ ಒಬ್ಬ ಸಹೋದರ ಒಂದು ಗಂಭೀರ ಪಾಪ ಮಾಡಿದಾಗ ಆ ಸಭೆಯ ಹಿರಿಯರಿಗೆ ಯಾವ ನಿರ್ದೇಶನ ಸಿಕ್ತು ಮತ್ತು ಅದ್ರಿಂದ ನಾವೇನು ಕಲಿಬಹುದು ಅಂತ ನೋಡೋಣ.
1. ನಾವೆಲ್ರೂ ಯಾವ ತೀರ್ಮಾನ ಮಾಡಬೇಕು ಅಂತ ಯೆಹೋವ ಇಷ್ಟಪಡ್ತಾನೆ?
ಯೆಹೋವ ನಮಗೆ ತೀರ್ಮಾನ ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಹಾಗಾಗಿ ನಾವು ಪ್ರತಿದಿನ ಒಂದಲ್ಲ ಒಂದು ತೀರ್ಮಾನ ಮಾಡ್ತಾನೇ ಇರ್ತೀವಿ. ಕೆಲವೊಮ್ಮೆ ಪ್ರಾಮುಖ್ಯವಾದ ತೀರ್ಮಾನನೂ ಮಾಡ್ತೀವಿ. ಆದ್ರೆ ನಾವು ಯೆಹೋವನಿಗೆ ನಮ್ಮನ್ನ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋದೇ ಎಲ್ಲದಕ್ಕಿಂತ ತುಂಬ ಮುಖ್ಯವಾದ ತೀರ್ಮಾನ. ಈ ತೀರ್ಮಾನನ ನಾವೆಲ್ರೂ ಮಾಡಬೇಕು ಅಂತ ದೇವರು ಇಷ್ಟಪಡ್ತಾನೆ. ಯಾಕಂದ್ರೆ ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಮತ್ತು ನಮಗೆ ಒಳ್ಳೇದಾಗಬೇಕು ಅಂತ ಇಷ್ಟಪಡ್ತಾನೆ. ಅಷ್ಟೇ ಅಲ್ಲ ನಾವೆಲ್ರೂ ಆತನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಬೇಕು, ನಾವು ಶಾಶ್ವತವಾಗಿ ಬದುಕಬೇಕು ಅನ್ನೋದು ಆತನ ಆಸೆ.—ಧರ್ಮೋ. 30:19, 20; ಗಲಾ. 6:7, 8.
2. ಪಾಪ ಮಾಡಿದವರು ಏನು ಮಾಡಬೇಕು ಅಂತ ಯೆಹೋವ ಇಷ್ಟಪಡ್ತಾನೆ? (1 ಯೋಹಾನ 2:1)
2 ಎಲ್ರೂ ತನ್ನನ್ನ ಆರಾಧಿಸಬೇಕು ಅಂತ ಯಾವತ್ತೂ ಯಾರನ್ನೂ ಯೆಹೋವ ಒತ್ತಾಯ ಮಾಡಲ್ಲ. ತಾವಾಗೇ ತೀರ್ಮಾನ ಮಾಡೋ ಸ್ವಾತಂತ್ರ್ಯನ ಆತನು ಪ್ರತಿಯೊಬ್ರಿಗೂ ಕೊಟ್ಟಿದ್ದಾನೆ. ಹಾಗಾಗಿ ದೀಕ್ಷಾಸ್ನಾನ ತಗೊಂಡಿರೋ ಒಬ್ಬ ವ್ಯಕ್ತಿ ಗಂಭೀರ ಪಾಪ ಮಾಡೋ ಸಾಧ್ಯತೆ ಇದೆ. ಒಂದುವೇಳೆ ಹಾಗೇನಾದ್ರೂ ಆದ್ರೆ ಹಿರಿಯರು ಏನು ಮಾಡಬೇಕು? ಆ ವ್ಯಕ್ತಿ ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಟ್ಟಿಲ್ಲಾಂದ್ರೆ ಅವನನ್ನ ಸಭೆಯಿಂದ ಹೊರಗೆ ಹಾಕಬೇಕು. (1 ಕೊರಿಂ. 5:13) ಆಗ್ಲೂ ಯೆಹೋವ ದೇವರು ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟು ತನ್ನ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಬೇಕು ಅಂತ ಆಸೆ ಪಡ್ತಾನೆ. ಅವ್ರನ್ನ ಕ್ಷಮಿಸಬೇಕು ಅಂತನೂ ಇಷ್ಟಪಡ್ತಾನೆ. ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಕ್ಕೆ ಇದೂ ಒಂದು ಮುಖ್ಯವಾದ ಕಾರಣ. (1 ಯೋಹಾನ 2:1 ಓದಿ.) ಪಾಪ ಮಾಡಿದ್ರೂ ಅವ್ರ ಮೇಲೆ ಯೆಹೋವನಿಗೆ ಪ್ರೀತಿ ಇರೋದ್ರಿಂದ ಅವರು ಪಶ್ಚಾತ್ತಾಪ ಪಡಬೇಕು ಅಂತ ಕೇಳ್ಕೊಳ್ತಿದ್ದಾನೆ.—ಜೆಕ. 1:3; ರೋಮ. 2:4; ಯಾಕೋ. 4:8.
3. ಈ ಲೇಖನದಲ್ಲಿ ನಾವೇನ್ ಕಲಿತೀವಿ?
3 ಪಾಪದ ಬಗ್ಗೆ ಮತ್ತು ಆ ಪಾಪ ಮಾಡಿದವ್ರ ಬಗ್ಗೆ ನಾವೂ ಯೆಹೋವನ ತರನೇ ಯೋಚಿಸಬೇಕು, ನಡ್ಕೊಬೇಕು ಅಂತ ಯೆಹೋವ ಬಯಸ್ತಾನೆ. ಇದನ್ನ ನಾವು ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೋಡೋಣ. ಒಂದನೇ ಶತಮಾನದ ಕೊರಿಂಥ ಸಭೇಲಿ ಒಬ್ಬ ಸಹೋದರ ಒಂದು ಗಂಭೀರ ಪಾಪ ಮಾಡಿದ. 1) ಆಗ ಸಭೆಯವರು ಅವನಿಗೆ ಏನು ಮಾಡಬೇಕು ಅಂತ ಪೌಲ ಹೇಳಿದ? 2) ಆ ಸಹೋದರ ಪಶ್ಚಾತ್ತಾಪ ಪಟ್ಟಾಗ ಸಭೆಯವರು ವಾಪಸ್ ಏನು ಮಾಡಬೇಕು ಅಂದ? 3) ಕ್ರೈಸ್ತರು ಗಂಭೀರ ಪಾಪ ಮಾಡಿದಾಗ ಯೆಹೋವ ದೇವರಿಗೆ ಹೇಗನಿಸುತ್ತೆ ಅಂತ ಈ ಘಟನೆ ತೋರಿಸುತ್ತೆ?
ಒಬ್ಬ ವ್ಯಕ್ತಿ ಗಂಭೀರ ಪಾಪ ಮಾಡಿದಾಗ ಸಭೆಯವರು ಏನು ಮಾಡಿದ್ರು?
4. ಒಂದನೇ ಶತಮಾನದ ಕೊರಿಂಥ ಸಭೇಲಿ ಏನಾಯ್ತು? (1 ಕೊರಿಂಥ 5:1, 2)
4 ಒಂದನೇ ಕೊರಿಂಥ 5:1, 2 ಓದಿ. ಪೌಲ ಮೂರನೇ ಮಿಷನರಿ ಪ್ರಯಾಣ ಮಾಡ್ತಿದ್ದಾಗ ಅವನ ಮನಸ್ಸಿಗೆ ತುಂಬ ನೋವಾಗೋ ಒಂದು ವಿಷ್ಯ ಅವನ ಕಿವಿಗೆ ಬಿತ್ತು. ಆಗಷ್ಟೇ ಶುರು ಆಗಿದ್ದ ಕೊರಿಂಥ ಸಭೇಲಿ ಒಬ್ಬ ಸಹೋದರ ತನ್ನ ಮಲತಾಯಿಯನ್ನೇ ಇಟ್ಕೊಂಡಿದ್ದ. ಇದು ತುಂಬ ಹೇಸಿಗೆ ಕೆಲಸ ಆಗಿತ್ತು. ಅಷ್ಟೇ ಅಲ್ಲ ಇಂಥ ಕೆಟ್ಟತನ “ಬೇರೆ ಜನಾಂಗದ ಜನ್ರಲ್ಲೂ” ಇರ್ಲಿಲ್ಲ. ಇದನ್ನ ಸಭೆಯವರು ನೋಡಿನೂ ಸುಮ್ಮನಿದ್ರು. ಇದನ್ನೆಲ್ಲ ಸಹಿಸ್ಕೊಳ್ತಾ ಇರೋದಕ್ಕೆ ತಮ್ಮ ಬಗ್ಗೆನೇ ಹೆಮ್ಮೆನೂ ಪಟ್ಕೊಳ್ತಿದ್ರು. ಬಹುಶಃ ಕೆಲವರು ‘ನಾವು ಯೆಹೋವನ ತರ ಕರುಣಾಮಯಿಗಳು, ಅಪರಿಪೂರ್ಣ ಮನುಷ್ಯರನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೀವಿ’ ಅಂತ ತಮ್ಮನ್ನೇ ಸಮರ್ಥಿಸ್ಕೊಳ್ತಾ ಇದ್ರು ಅಂತ ಕಾಣಿಸುತ್ತೆ. ಯೆಹೋವ ದೇವರ ಬಗ್ಗೆ ಅವರು ಅಂದ್ಕೊಂಡಿದ್ದು ಸರಿನಾ? ಇಲ್ಲ, ಯೆಹೋವ ಅಂತೂ ತನ್ನ ಜನ್ರ ಮಧ್ಯದಲ್ಲಿ ಇಂಥ ಕೆಟ್ಟ ಕೆಲಸನ ಸ್ವಲ್ಪನೂ ಸಹಿಸ್ಕೊಳ್ಳೋದಿಲ್ಲ. ಆ ಸಹೋದರ ತೋರಿಸಿದ ಭಂಡತನದಿಂದ ಹೊರಗಿನ ಜನ್ರ ಮುಂದೆ ಯೆಹೋವನ ಜನ್ರ ಹೆಸ್ರು ಹಾಳಾಗಿರುತ್ತೆ. ಅಷ್ಟೇ ಅಲ್ಲ, ಅವನನ್ನ ಸಭೆಯಲ್ಲೇ ಇಟ್ಕೊಂಡಿದ್ರೆ ಒಳ್ಳೆಯವರೂ ಹಾಳಾಗ್ತಿದ್ರು. ಅದಕ್ಕೆ ಪೌಲ ಏನು ಮಾಡೋಕೆ ಹೇಳಿದ?
5. (ಎ) ಕೊರಿಂಥ ಸಭೆಯವರು ಏನು ಮಾಡಬೇಕು ಅಂತ ಪೌಲ ಹೇಳಿದ? (ಬಿ) ಹೊರಗೆ ಹಾಕಿದ ಮೇಲೆ ಆ ವ್ಯಕ್ತಿ ಜೊತೆ ಸಭೆಯವರು ಹೇಗೆ ನಡ್ಕೊಬೇಕಿತ್ತು? (1 ಕೊರಿಂಥ 5:13) (ಚಿತ್ರ ನೋಡಿ.)
5 ಒಂದನೇ ಕೊರಿಂಥ 5:13 ಓದಿ. ಪೌಲ ಪವಿತ್ರಶಕ್ತಿಯ ಸಹಾಯದಿಂದ ಕೊರಿಂಥ ಸಭೆಯವ್ರಿಗೆ ಪತ್ರ ಬರೆದು, ಪಶ್ಚಾತ್ತಾಪ ಪಡದ ಆ ವ್ಯಕ್ತಿಯನ್ನ ಸಭೆಯಿಂದ ಹೊರಗೆ ಹಾಕೋಕೆ ಹೇಳಿದ. ಹೊರಗೆ ಹಾಕಿದ ಮೇಲೆ ಆ ಸಭೆಯವರು ಅವನ ಜೊತೆ ಹೇಗೆ ನಡ್ಕೊಬೇಕಿತ್ತು? “ಅವನ ಜೊತೆ ಸೇರೋದನ್ನ ಬಿಟ್ಟುಬಿಡಿ” ಅಂತ ಪೌಲ ಹೇಳಿದ. ಅಂದ್ರೆ ಅವನ “ಜೊತೆ ಊಟನೂ” ಮಾಡಬಾರದು ಅಂತ ಅದ್ರ ಅರ್ಥ. (1 ಕೊರಿಂ. 5:11) ಯಾಕೆ? ಯಾಕಂದ್ರೆ ಒಬ್ಬ ವ್ಯಕ್ತಿ ಜೊತೆ ಕೂತು ಊಟ ಮಾಡುವಾಗ ಮಾತು ತಾನಾಗೇ ಬೆಳೆಯುತ್ತೆ. ಅದಕ್ಕೆ ಪೌಲ ಸ್ಪಷ್ಟವಾಗಿ ಅಂಥವನ ಜೊತೆ ಅನಾವಶ್ಯಕವಾಗಿ ಸಮಯ ಕಳಿಬೇಡಿ, ಅವನ ಜೊತೆ ಸೇರಬೇಡಿ ಅಂತ ಹೇಳಿದ. (1 ಕೊರಿಂ. 5:5-7) ಇದನ್ನ ಮಾಡಿದ್ರೆ ಬೇರೆಯವರು ಅವನನ್ನ ನೋಡಿ ಹಾಳಾಗದ ಹಾಗೆ ಸಭೆಯನ್ನ ಕಾಪಾಡೋಕೆ ಆಗ್ತಿತ್ತು. ಸಭೆಯವರು ಅವನ ಜೊತೆ ಸೇರದೆ ಇದ್ದಾಗ ಇನ್ನೂ ಏನು ಪ್ರಯೋಜನ ಆಗ್ತಿತ್ತು? ಯೆಹೋವನಿಂದ ತಾನೆಷ್ಟು ದೂರ ಹೋಗಿದ್ದೀನಿ ಅಂತ ಪಾಪ ಮಾಡಿದವನಿಗೆ ಅರ್ಥ ಆಗ್ತಿತ್ತು. ಅಷ್ಟೇ ಅಲ್ಲ ತನ್ನ ತಪ್ಪಿನ ಅರಿವಾಗೋಕೆ ಮತ್ತು ಪಶ್ಚಾತ್ತಾಪ ಪಡೋಕೆ ಅವನಿಗೆ ಸಹಾಯ ಆಗ್ತಿತ್ತು.
6. (ಎ) ಪೌಲ ಕಳಿಸಿದ ಪತ್ರ ಓದಿ ಸಭೆಯವರು ಏನು ಮಾಡಿದ್ರು? (ಬಿ) ಪಾಪ ಮಾಡಿದ ವ್ಯಕ್ತಿ ಏನು ಮಾಡಿದ?
6 ಪೌಲ ಕೊರಿಂಥ ಸಭೆಯವ್ರಿಗೆ ಪತ್ರ ಕಳಿಸಿದ ಮೇಲೆ ಆ ಸಭೆಯವರು ತಾನು ಹೇಳಿದ್ದನ್ನ ಪಾಲಿಸ್ತಾರೋ ಇಲ್ವೋ ಅಂತ ಅವನಿಗೆ ಚಿಂತೆ ಆಗಿರಬೇಕು. ಆದ್ರೆ ಸಭೆಯವರು ಪೌಲ ಹೇಳಿದ್ದನ್ನೆಲ್ಲ ಪಾಲಿಸಿದ್ರು! ಇದನ್ನ ತೀತ ಬಂದು ಪೌಲನ ಹತ್ರ ಹೇಳಿದಾಗ ಅವನಿಗೆ ತುಂಬ ಖುಷಿ ಆಯ್ತು! (2 ಕೊರಿಂ. 7:6, 7) ಪೌಲ ಮೊದಲ ಪತ್ರ ಬರೆದು ಈಗ ಕೆಲವು ತಿಂಗಳು ಆಗಿತ್ತು. ಅಷ್ಟರಲ್ಲಿ ಪಾಪ ಮಾಡಿದ ಆ ವ್ಯಕ್ತಿ ತನ್ನ ಕೆಟ್ಟ ನಡತೆಯನ್ನ ಬಿಟ್ಟುಬಿಟ್ಟಿದ್ದ, ತನ್ನ ಯೋಚ್ನೆನ ತಿದ್ಕೊಂಡಿದ್ದ, ಯೆಹೋವನ ನೀತಿ-ನಿಯಮಗಳನ್ನ ಪಾಲಿಸೋಕೆ ಶುರುಮಾಡಿದ್ದ. (2 ಕೊರಿಂ. 7:8-11) ಇದನ್ನೆಲ್ಲ ಕೇಳಿಸ್ಕೊಂಡ ಮೇಲೆ ಪೌಲ ಸಭೆಯವ್ರಿಗೆ ವಾಪಸ್ ಏನು ಮಾಡೋಕೆ ಹೇಳಿದ?
ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ಸಭೆಯವರು ಏನು ಮಾಡಬೇಕಿತ್ತು?
7. ಪಾಪ ಮಾಡಿದ ವ್ಯಕ್ತಿಗೆ ಶಿಸ್ತು ಕೊಟ್ಟಿದ್ರಿಂದ ಏನಾಯ್ತು? (2 ಕೊರಿಂಥ 2:5-8)
7 ಎರಡನೇ ಕೊರಿಂಥ 2:5-8 ಓದಿ. ಪೌಲ ಆ ಸಭೆಯವ್ರಿಗೆ “ನಿಮ್ಮಲ್ಲಿ ತುಂಬ ಜನ ಅವನಿಗೆ ಕೊಟ್ಟಿರೋ ಶಿಕ್ಷೆನೇ ಸಾಕು” ಅಂತ ಹೇಳಿದ. ಶಿಸ್ತು ಕೊಡೋ ಉದ್ದೇಶನೇ ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡಬೇಕಂತ. ಆ ಸಹೋದರ ಈಗಾಗ್ಲೆ ಪಶ್ಚಾತ್ತಾಪ ಪಟ್ಟಿದ್ರಿಂದ ಇನ್ನೂ ಅವನಿಗೆ ಶಿಸ್ತು ಕೊಡೋ ಅಗತ್ಯ ಇರಲಿಲ್ಲ.—ಇಬ್ರಿ. 12:11.
8. ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟಿದ್ರಿಂದ ಪೌಲ ಕೊರಿಂಥ ಸಭೆಯ ಹಿರಿಯರಿಗೆ ಏನು ಮಾಡೋಕೆ ಹೇಳಿದ?
8 ಪೌಲ ಕೊರಿಂಥ ಸಭೆಯ ಹಿರಿಯರಿಗೆ ಪಶ್ಚಾತ್ತಾಪ ಪಟ್ಟ ಆ ಸಹೋದರನನ್ನ ಮತ್ತೆ ಸಭೇಲಿ ಪುನಃಸ್ಥಾಪಿಸೋಕೆ ಹೇಳಿದ. ಬರೀ ಪುನಃಸ್ಥಾಪಿಸೋದು ಅಷ್ಟೇ ಅಲ್ಲ ಅವನನ್ನ “ಮನಸಾರೆ ಕ್ಷಮಿಸಬೇಕು, ಸಮಾಧಾನ ಮಾಡಬೇಕು” ಅಂತ ಹೇಳಿದ. ಅಷ್ಟೇ ಅಲ್ಲ “ಅವನ ಮೇಲೆ ನಿಮಗೆ ಪ್ರೀತಿ ಇದೆ ಅಂತ ತೋರಿಸ್ಕೊಡಿ” ಅಂತಾನೂ ಹೇಳಿದ. ಹಾಗಾಗಿ ಆ ಹಿರಿಯರು ಪಾಪ ಮಾಡಿದ ಆ ವ್ಯಕ್ತಿಯನ್ನ ಮನಸಾರೆ ಕ್ಷಮಿಸಿದ್ದೀವಿ, ಪ್ರೀತಿಸ್ತೀವಿ ಅಂತ ಅವರು ಮಾತಲ್ಲಿ, ನಡ್ಕೊಳ್ಳೋ ರೀತಿಲಿ ತೋರಿಸ್ಕೊಡಬೇಕಿತ್ತು. ಹೀಗೆ ಅವರು ಪಾಪ ಮಾಡಿದ ಆ ವ್ಯಕ್ತಿ ಸಭೆಗೆ ವಾಪಸ್ ಬರ್ತಾ ಇರೋದ್ರಿಂದ ನಿಜವಾಗ್ಲೂ ಖುಷಿ ಆಗ್ತಿದೆ ಅಂತ ತೋರಿಸ್ಕೊಡ್ತಿದ್ರು.
9. ಪಶ್ಚಾತ್ತಾಪ ಪಟ್ಟ ವ್ಯಕ್ತಿಯನ್ನ ಕ್ಷಮಿಸೋಕೆ ಸಭೆಯವ್ರಿಗೆ ಯಾಕೆ ಕಷ್ಟ ಆಗಿರುತ್ತೆ?
9 ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಟ್ಟು ಮತ್ತೆ ಸಭೆಗೆ ಬಂದಾಗ ಸಭೆಯವರೆಲ್ರೂ ಖುಷಿಪಟ್ರಾ? ಅದ್ರ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದ್ರೆ ಕೆಲವ್ರಿಗೆ ಬೇಜಾರಾಗಿರಬಹುದು. ಯಾಕಂದ್ರೆ ಅವನು ಮಾಡಿದ ಆ ಪಾಪದಿಂದ ಇಡೀ ಸಭೆಗೆ ಸಮಸ್ಯೆಗಳು ಬಂದಿರಬಹುದು. ಕೆಲವ್ರಿಗೆ ಅವನಿಂದ ಅವಮಾನ ಆಗಿರಬಹುದು. ಇನ್ನೂ ಕೆಲವ್ರಿಗೆ ಇದು ಅನ್ಯಾಯ ಅಂತ ಅನಿಸಿರಬಹುದು. ಯಾಕಂದ್ರೆ ನೈತಿಕವಾಗಿ ಶುದ್ಧವಾಗಿರೋಕೆ ಅವರು ತುಂಬ ಪ್ರಯತ್ನ ಮಾಡ್ತಿರುವಾಗ ‘ಇವನು ಇಷ್ಟು ದೊಡ್ಡ ತಪ್ಪು ಮಾಡಿ ಮತ್ತೆ ಒಳಗೆ ಬಂದನಲ್ಲಾ’ ಅಂತ ಅವ್ರಿಗೆ ಅನಿಸಿರಬಹುದು. (ಲೂಕ 15:28-30 ಹೋಲಿಸಿ.) ಆದ್ರೂ ಅವರು ಅವನ ಮೇಲೆ ಬೇಜಾರ್ ಇಟ್ಕೊಳ್ಳದೇ ಆ ವ್ಯಕ್ತಿಯನ್ನ ಮನಸಾರೆ ಕ್ಷಮಿಸಿ ಅವನನ್ನ ಪ್ರೀತಿಸೋದು ತುಂಬ ಪ್ರಾಮುಖ್ಯ ಆಗಿತ್ತು. ಯಾಕೆ?
10-11. ಪಶ್ಚಾತ್ತಾಪ ಪಟ್ಟ ವ್ಯಕ್ತಿಯನ್ನ ಹಿರಿಯರು ಕ್ಷಮಿಸದೇ ಇದ್ದಿದ್ರೆ ಏನೆಲ್ಲಾ ಆಗ್ತಿತ್ತು?
10 ಪಶ್ಚಾತ್ತಾಪ ಪಟ್ಟ ಆ ವ್ಯಕ್ತಿಯನ್ನ ಹಿರಿಯರು ಸಭೆ ಒಳಗೆ ಸೇರಿಸ್ಕೊಳ್ಳದೇ ಇದ್ರೆ ಅಥವಾ ಸಭೇಲಿ ಇರೋರು ಅವನು ವಾಪಸ್ ಬಂದ್ಮೇಲೆ ಅವನಿಗೆ ಪ್ರೀತಿ ತೋರಿಸದೇ ಇದ್ರೆ ಏನಾಗ್ತಿತ್ತು? ಅವನು “ಇನ್ನೂ ದುಃಖದಲ್ಲಿ ಮುಳುಗಿ” ಹೋಗ್ತಿದ್ದ. ‘ಇನ್ಯಾವತ್ತೂ ನಾನು ಸಭೆಗೆ ಬರೋಕೇ ಆಗಲ್ಲ, ಯೆಹೋವನನ್ನ ಆರಾಧಿಸೋಕೂ ಆಗಲ್ಲ’ ಅಂತ ಅವನು ಕುಗ್ಗಿಹೋಗ್ತಿದ್ದ. ಅಷ್ಟೇ ಅಲ್ಲ, ಯೆಹೋವನ ಜೊತೆಗಿನ ಸಂಬಂಧನ ಸರಿ ಮಾಡ್ಕೊಳ್ಳೋಕೆ ಅವನು ಮಾಡ್ತಿರೋ ಪ್ರಯತ್ನನೂ ನಿಲ್ಲಿಸಿಬಿಡ್ತಿದ್ದ.
11 ಇದಕ್ಕಿಂತ ಇನ್ನೊಂದು ದೊಡ್ಡ ಅಪಾಯ ಇದೆ. ಅದೇನಂದ್ರೆ ಪಶ್ಚಾತ್ತಾಪ ಪಟ್ಟ ಆ ಸಹೋದರನನ್ನ ಸಭೇಲಿರೋ ಸಹೋದರ ಸಹೋದರಿಯರು ಒಂದುವೇಳೆ ಕ್ಷಮಿಸಿಲ್ಲ ಅಂದ್ರೆ ಅವರು ತಮ್ಮ ಕೈಯಾರೆ ಯೆಹೋವನ ಜೊತೆಗಿರೋ ತಮ್ಮ ಸಂಬಂಧನ ಹಾಳು ಮಾಡ್ಕೊಳ್ತಿದ್ರು. ಯಾಕೆ? ಯಾಕಂದ್ರೆ ಅವರು ಯೆಹೋವನ ತರ ಅಲ್ಲ ಸೈತಾನನ ತರ ನಡ್ಕೊಳ್ತಿದ್ರು. ಅಂದ್ರೆ ಆ ವ್ಯಕ್ತಿನ ಕ್ಷಮಿಸದೆ, ಕರುಣೆ ತೋರಿಸದೆ ಅವನ ಜೊತೆ ಅನ್ಯಾಯವಾಗಿ ನಡ್ಕೊಂಡುಬಿಡ್ತಿದ್ರು. ಆ ವ್ಯಕ್ತಿ ಯೆಹೋವನ ಸೇವೆನ ನಿಲ್ಲಿಸಬೇಕು ಅಂತ ಸೈತಾನ ಆಸೆ ಪಡ್ತಾನೆ. ಹಾಗಾಗಿ ಸಹೋದರ ಸಹೋದರಿಯರು ಆ ವ್ಯಕ್ತಿನ ಕ್ಷಮಿಸದೇ ಇದ್ದಿದ್ರೆ ಸೈತಾನನ ತರಾನೇ ನಡ್ಕೊಂಡು ಬಿಡ್ತಿದ್ರು.—2 ಕೊರಿಂ. 2:10, 11; ಎಫೆ. 4:27.
12. ಕೊರಿಂಥ ಸಭೆಯವರು ಯೆಹೋವನನ್ನ ಅನುಕರಿಸಬೇಕಂದ್ರೆ ಏನು ಮಾಡಬೇಕಿತ್ತು?
12 ಕೊರಿಂಥ ಸಭೆಯವರು ಯೆಹೋವನನ್ನ ಅನುಕರಿಸಬೇಕಿತ್ತು, ಸೈತಾನನ್ನ ಅಲ್ಲ. ಯೆಹೋವ ದೇವರು ಪಶ್ಚಾತ್ತಾಪ ಪಟ್ಟ ವ್ಯಕ್ತಿ ಜೊತೆ ಹೇಗೆ ನಡ್ಕೊಂಡ್ನೋ ಅದೇ ತರ ಇವರು ನಡ್ಕೊಬೇಕಿತ್ತು. ಯೆಹೋವ ದೇವರು ಪಾಪಿಗಳ ಜೊತೆ ಹೇಗೆ ನಡ್ಕೊಳ್ತಾನೆ ಅಂತ ಬೈಬಲನ್ನ ಬರೆದಿರೋ ಕೆಲವು ನಂಬಿಗಸ್ತರು ಏನು ಹೇಳ್ತಾರೆ ನೋಡಿ. “ಯೆಹೋವನೇ, ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ” ಅಂತ ದಾವೀದ ಹೇಳಿದ. (ಕೀರ್ತ. 86:5) “ನಿನ್ನಂಥ ದೇವರು ಬೇರೆ ಯಾರೂ ಇಲ್ಲ, . . . ತಪ್ಪುಗಳನ್ನ ನೀನು ಕ್ಷಮಿಸ್ತೀಯ, ಅವ್ರ ಅಪರಾಧಗಳನ್ನ ನೆನಪಿಡಲ್ಲ” ಅಂತ ಮೀಕ ಹೇಳಿದ. (ಮೀಕ 7:18) “ಕೆಟ್ಟವನು ತನ್ನ ಮಾರ್ಗವನ್ನ, ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ, ಅವನು ಯೆಹೋವನ ಹತ್ರ ವಾಪಸ್ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ, ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ ಕ್ಷಮಿಸ್ತಾನೆ” ಅಂತ ಯೆಶಾಯ ಹೇಳಿದ.—ಯೆಶಾ. 55:7.
13. ಪಶ್ಚಾತ್ತಾಪ ಪಟ್ಟ ವ್ಯಕ್ತಿಯನ್ನ ಕೆಲವೇ ತಿಂಗಳಲ್ಲಿ ಪುನಃಸ್ಥಾಪಿಸಿದ್ದು ಸರಿಯಾಗಿತ್ತು ಯಾಕೆ? (“ ಕೊರಿಂಥ ಸಭೆಯಿಂದ ಹೊರಗೆ ಹಾಕಿದ ವ್ಯಕ್ತಿನ ಯಾವಾಗ ಪುನಃಸ್ಥಾಪಿಸಿದ್ರು?” ಅನ್ನೋ ಚೌಕ ನೋಡಿ.)
13 ಯೆಹೋವನ ತರಾನೇ ಕೊರಿಂಥ ಸಭೆಯವರು ಪಶ್ಚಾತ್ತಾಪ ಪಟ್ಟ ಆ ವ್ಯಕ್ತಿಯನ್ನ ಸಭೆಗೆ ಸೇರಿಸ್ಕೊಬೇಕಿತ್ತು ಮತ್ತು ಅವನಿಗೆ ಮನಸಾರೆ ಪ್ರೀತಿ ತೋರಿಸಬೇಕಿತ್ತು. ಇದನ್ನ ಕೊರಿಂಥ ಸಭೆಯವರು ಮಾಡಿದ್ರಾ? ಅವರು ಪೌಲ ಹೇಳಿದ ಹಾಗೆ ಆ ವ್ಯಕ್ತಿನ ಮತ್ತೆ ಸಭೆಗೆ ಸೇರಿಸ್ಕೊಂಡ್ರು. ಹೀಗೆ ಪೌಲ ‘ಹೇಳಿದ್ದನ್ನೆಲ್ಲಾ ಅವರು ಪಾಲಿಸಿದ್ರು.’ (2 ಕೊರಿಂ. 2:9) ನಿಜ, ಆ ವ್ಯಕ್ತಿಯನ್ನ ಸಭೆಯಿಂದ ಹೊರಗೆ ಹಾಕಿದ ಕೆಲವೇ ತಿಂಗಳಲ್ಲಿ ಅವನನ್ನ ಸಭೇಲಿ ಪುನಃಸ್ಥಾಪಿಸಿದ್ರು. ಯಾಕಂದ್ರೆ ಕೆಲವೇ ತಿಂಗಳಲ್ಲಿ ಅವನು ಪಶ್ಚಾತ್ತಾಪ ಪಟ್ಟು ಬದಲಾಗಿದ್ರಿಂದ ಅವನನ್ನ ಇನ್ನೂ ಕಾಯಿಸೋದ್ರಲ್ಲಿ ಅರ್ಥ ಇರ್ಲಿಲ್ಲ.
ಯೆಹೋವನ ತರ ನ್ಯಾಯ ಮತ್ತು ಕರುಣೆ ತೋರಿಸಿ
14-15. ಕೊರಿಂಥ ಸಭೇಲಿ ನಡೆದ ಘಟನೆಯಿಂದ ನಾವೇನು ಕಲಿಬಹುದು? (2 ಪೇತ್ರ 3:9) (ಚಿತ್ರ ನೋಡಿ.)
14 ಕೊರಿಂಥ ಸಭೇಲಿ ನಡೆದಿದ್ದನ್ನ ಯೆಹೋವ ದೇವರು ಬೈಬಲಲ್ಲಿ ಯಾಕೆ ಬರೆಸಿಟ್ರು? ಯಾಕಂದ್ರೆ ಈ ಇಡೀ ಘಟನೆಯಲ್ಲಿ ಅವನ ಜೊತೆ ನಡ್ಕೊಂಡ ವಿಧದಿಂದ “ನಾವು ಕಲಿಬೇಕಂತ” ಅದನ್ನ ಬರೆಸಿಟ್ರು. (ರೋಮ. 15:4) ಈ ಘಟನೆಯಿಂದ ನಾವು ಯೆಹೋವನ ಬಗ್ಗೆ ಎರಡು ವಿಷ್ಯಗಳನ್ನ ಕಲಿತೀವಿ. ಒಂದು, ದೇವಜನ್ರಲ್ಲಿ ಯಾರಾದ್ರೂ ಗಂಭೀರ ಪಾಪ ಮಾಡಿದ್ರೆ ಯೆಹೋವ ದೇವರು ಅದನ್ನ ಸಹಿಸ್ಕೊಂಡು ಸುಮ್ನೆ ಇರಲ್ಲ. ಅಷ್ಟೇ ಅಲ್ಲ, ಪಾಪ ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಡದಿದ್ರೆ ಅವನಿಗೆ ಕರುಣೆ ತೋರಿಸಲ್ಲ, ಅವನನ್ನ ಸಭೇಲಿ ಇರೋಕೂ ಬಿಡಲ್ಲ. ಹಾಗಾಗಿ ನಾವು ಒಂದು ವಿಷ್ಯನ ನೆನಪಿಡಬೇಕು. ಅದೇನಂದ್ರೆ ಯೆಹೋವ ಕರುಣಾಮಯಿ, ಪಾಪಗಳನ್ನ ಕ್ಷಮಿಸ್ತಾನೆ. ಹಾಗಂತ ತಪ್ಪನ್ನ ಸರಿ ಅಂತ ಯಾವತ್ತೂ ಒಪ್ಪಿಕೊಳ್ಳಲ್ಲ. (ಯೂದ 4) ಅಷ್ಟೇ ಅಲ್ಲ, ಸರಿತಪ್ಪಿನ ಬಗ್ಗೆ ಆತನಿಟ್ಟಿರೋ ನೀತಿ ನಿಯಮಗಳನ್ನ ಆತನು ಬಿಟ್ಕೊಡೋದೂ ಇಲ್ಲ. ಒಂದುವೇಳೆ ಪಾಪ ಮಾಡಿರೋ ವ್ಯಕ್ತಿನ ಸಭೆಲಿರೋಕೆ ಬಿಟ್ಟುಬಿಟ್ರೆ ಅದು ಕರುಣೆನೇ ಅಲ್ಲ! ಯಾಕಂದ್ರೆ ಅದ್ರಿಂದ ಇಡೀ ಸಭೆಗೆ ಹಾನಿಯಾಗುತ್ತೆ.—ಜ್ಞಾನೋ. 13:20; 1 ಕೊರಿಂ. 15:33.
15 ಯಾರೂ ನಾಶ ಆಗೋದು ಯೆಹೋವನಿಗೆ ಇಷ್ಟ ಇಲ್ಲ. ಅವ್ರನ್ನ ಹೇಗಾದ್ರೂ ಕಾಪಾಡಬೇಕು ಅಂತಾನೇ ಆತನು ಇಷ್ಟಪಡ್ತಾನೆ. ಪಾಪ ಮಾಡಿದ ಒಬ್ಬ ವ್ಯಕ್ತಿ ತನ್ನ ಮನಸ್ಸನ್ನ ಬದಲಾಯಿಸ್ಕೊಂಡಾಗ ಅವನಿಗೆ ದೇವರು ಕರುಣೆ ತೋರಿಸ್ತಾನೆ. ತನ್ನ ಜೊತೆ ಇರೋ ಸಂಬಂಧನ ಸರಿಪಡಿಸ್ಕೊಳ್ಳೋಕೆ ಸಹಾಯ ಮಾಡ್ತಾನೆ. (ಯೆಹೆ. 33:11; 2 ಪೇತ್ರ 3:9 ಓದಿ.) ಅದಕ್ಕೆ ಕೊರಿಂಥ ಸಭೆಯ ಆ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ, ತನ್ನ ಕೆಟ್ಟ ನಡತೆಯನ್ನ ಬಿಟ್ಟಾಗ ಸಭೆಯವರು ಅವನನ್ನ ಕ್ಷಮಿಸಿ ಪ್ರೀತಿಯಿಂದ ಸೇರಿಸ್ಕೊಳ್ಳಬೇಕು ಅಂತ ಪೌಲನ ಮೂಲಕ ಯೆಹೋವ ಸಲಹೆ ಕೊಟ್ಟನು.
16. ಕೊರಿಂಥ ಸಭೇಲಿ ಆದ ಘಟನೆಯಿಂದ ನಾವೇನು ಕಲಿತೀವಿ?
16 ಕೊರಿಂಥ ಸಭೇಲಿ ಆದ ಘಟನೆಯಿಂದ ನಾವೇನು ಕಲಿತೀವಿ? ಯೆಹೋವ ದೇವರು ನಮ್ಮನ್ನ ತುಂಬಾ ಪ್ರೀತಿಸ್ತಾನೆ, ಆತನಿಗೆ ನೀತಿ-ನ್ಯಾಯ ಅಂದ್ರೆ ತುಂಬ ಇಷ್ಟ ಅಂತ ಗೊತ್ತಾಗುತ್ತೆ. (ಕೀರ್ತ. 33:5) ಇದನ್ನ ನೋಡಿದಾಗ ನಾವು ಆತನನ್ನ ಸ್ತುತಿಸಬೇಕು, ಹೊಗಳಬೇಕು ಅಂತ ಅನಿಸುತ್ತೆ ಅಲ್ವಾ? ನಾವೆಲ್ರೂ ಪಾಪಿಗಳು. ದಿನಾ ಒಂದಲ್ಲಾ ಒಂದು ತಪ್ಪು ಮಾಡ್ತಾ ಇರ್ತೀವಿ. ಹಾಗಾಗಿ ನಮಗೂ ಆತನ ಕ್ಷಮೆ ಬೇಕು. ನಮ್ಮನ್ನ ಕ್ಷಮಿಸೋಕಂತಾನೇ ಆತನು ಬಿಡುಗಡೆ ಬೆಲೆ ಕೊಟ್ಟಿದ್ದಾನೆ. ಒಂದುವೇಳೆ ಬಿಡುಗಡೆ ಬೆಲೆ ಇಲ್ಲಾ ಅಂದಿದ್ರೆ ನಮಗೆ ಆತನ ಕ್ಷಮೆನೇ ಸಿಕ್ತಾ ಇರ್ಲಿಲ್ಲ. ಇದನ್ನೆಲ್ಲಾ ಯೋಚ್ನೆ ಮಾಡಿದಾಗ ಯೆಹೋವ ದೇವರು ನಮ್ಮನ್ನ ಎಷ್ಟೊಂದು ಪ್ರೀತಿಸ್ತಾನೆ, ನಮಗೆ ಒಳ್ಳೇದನ್ನೇ ಬಯಸ್ತಾನೆ ಅಂತ ಗೊತ್ತಾಗುತ್ತೆ.
17. ಮುಂದಿನ ಲೇಖನಗಳಲ್ಲಿ ನಾವೇನು ಕಲಿತೀವಿ?
17 ಇವತ್ತು ಸಭೇಲಿ ಯಾರಾದ್ರೂ ಗಂಭೀರ ಪಾಪ ಮಾಡಿದ್ರೆ ಅವರು ಪಶ್ಚಾತ್ತಾಪ ಪಡೋಕೆ ಯೆಹೋವ ದೇವರ ತರಾನೇ ಹಿರಿಯರು ಹೇಗೆ ಸಹಾಯ ಮಾಡಬೇಕು? ಆ ವ್ಯಕ್ತಿನ ಸಭೆಯಿಂದ ಹೊರಗೆ ಹಾಕೋಕೆ ಅಥವಾ ಪುನಃಸ್ಥಾಪಿಸೋಕೆ ಹಿರಿಯರು ತೀರ್ಮಾನ ಮಾಡಿದಾಗ ಸಭೆಯವರು ಏನು ಮಾಡಬೇಕು? ಇದನ್ನೆಲ್ಲಾ ಮುಂದಿನ ಲೇಖನಗಳಲ್ಲಿ ಕಲಿಯೋಣ.
ಗೀತೆ 73 ಹೃದಯದಾಳದಿಂದ ಪ್ರೀತಿಸಿರಿ