ಅಧ್ಯಯನ ಲೇಖನ 31
ಗೀತೆ 112 ಮಹಾ ದೇವರಾದ ಯೆಹೋವನು
ಪಾಪಿಗಳಾಗಿರೋ ನಮ್ಮನ್ನ ಬಿಡಿಸೋಕೆ ದೇವರು ಏನೆಲ್ಲಾ ಮಾಡಿದ್ದಾನೆ?
“ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು.”—ಯೋಹಾ. 3:16.
ಈ ಲೇಖನದಲ್ಲಿ ಏನಿದೆ?
ನಾವು ಪಾಪಗಳಾಗಿದ್ರೂ ಯೆಹೋವನಿಗೆ ಹತ್ರ ಆಗೋಕೆ ಆತನೇ ನಮಗೆ ಸಹಾಯ ಮಾಡಿದ್ದಾನೆ. ನಮ್ಮನ್ನ ಪಾಪದಿಂದ ಬಿಡಿಸಿ ನಾವು ಶಾಶ್ವತವಾಗಿ ಜೀವಿಸೋಕೆ ಆತನು ನಮಗೆ ದಾರಿ ಮಾಡ್ಕೊಟ್ಟಿದ್ದಾನೆ. ಅದು ಹೇಗೆ ಅಂತ ನೋಡೋಣ.
1-2. (ಎ) ಪಾಪ ಅಂದ್ರೇನು? ಮತ್ತು ನಮ್ಮನ್ನ ಅದ್ರಿಂದ ಯಾರಿಗೆ ಮಾತ್ರ ಬಿಡಿಸೋಕೆ ಆಗುತ್ತೆ? (“ಪದ ವಿವರಣೆ” ನೋಡಿ.) (ಬಿ) ಈ ಲೇಖನದಲ್ಲಿ ಮತ್ತು ಈ ಕಾವಲಿನಬುರುಜುವಿನ ಬೇರೆ ಲೇಖನಗಳಲ್ಲಿ ನಾವೇನು ಕಲಿತೀವಿ? (ಈ ಪತ್ರಿಕೆಯಲ್ಲಿ “ಓದುಗರ ಗಮನಕ್ಕೆ . . . ” ಅನ್ನೋ ಭಾಗನೂ ನೋಡಿ.)
ಯೆಹೋವ ದೇವರು ನಿಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ತಿಳ್ಕೊಳ್ಳೋಕೆ ನಿಮಗೆ ಇಷ್ಟ ಇದ್ಯಾ? ಹಾಗಿದ್ರೆ ಪಾಪ ಮತ್ತು ಸಾವಿಂದ ನಮ್ಮನ್ನ ಬಿಡಿಸೋಕೆ ಆತನು ಏನೆಲ್ಲಾ ಮಾಡಿದ್ದಾನೆ ಅಂತ ನಾವು ತಿಳ್ಕೊಬೇಕು. ಯಾಕಂದ್ರೆ ಪಾಪ a ನಮ್ಮೆಲ್ರ ದೊಡ್ಡ ಶತ್ರು. ಈ ಶತ್ರುನ ಸೋಲಿಸೋಕೆ ಮನುಷ್ಯರಾಗಿರೋ ನಮ್ಮ ಕೈಯಿಂದ ಆಗಲ್ಲ. ಯಾಕಂದ್ರೆ ನಾವು ಪ್ರತಿದಿನ ಪಾಪ ಮಾಡ್ತೀವಿ. ಕೊನೆಗೆ ಒಂದಿನ ಸಾಯ್ತೀವಿ. (ರೋಮ. 5:12) ಆದ್ರೆ ನಮಗೆಲ್ರಿಗೂ ಇರೋ ಒಂದು ಸಿಹಿಸುದ್ದಿ ಏನಂದ್ರೆ ಪಾಪ ಮತ್ತು ಸಾವನ್ನ ಪೂರ್ತಿಯಾಗಿ ತೆಗೆದು ಹಾಕ್ತೀನಿ ಅಂತ ಯೆಹೋವ ನಮಗೆ ಮಾತು ಕೊಟ್ಟಿದ್ದಾನೆ. ಆತನು ನಮಗೆ ಖಂಡಿತ ಸಹಾಯನೂ ಮಾಡ್ತಾನೆ.
2 ಪಾಪಿಗಳಾಗಿರೋ ಮನುಷ್ಯರು ಯೆಹೋವನಿಗೆ ಹತ್ರ ಆಗೋಕೆ ಸುಮಾರು 6,000 ವರ್ಷಗಳಿಂದ ಆತನು ಸಹಾಯ ಮಾಡ್ತಾನೇ ಬಂದಿದ್ದಾನೆ. ಯಾಕಂದ್ರೆ ಮನುಷ್ಯರನ್ನ ಸೃಷ್ಟಿ ಮಾಡಿದಾಗಿಂದ ಇಲ್ಲಿ ತನಕ ಆತನಿಗೆ ಅವ್ರ ಮೇಲಿರೋ ಪ್ರೀತಿ ಒಂಚೂರೂ ಕಮ್ಮಿ ಆಗಿಲ್ಲ. ಅದಕ್ಕೇ ಅವ್ರನ್ನ ಪಾಪದಿಂದ ಬಿಡಿಸೋಕೆ ಆತನು ಮಾಡಿರೋ ವಿಷ್ಯಗಳು ಅಷ್ಟಿಷ್ಟಲ್ಲ. ಮನುಷ್ಯರು ಪಾಪಿಗಳಾಗಿರೋದ್ರಿಂದ ಸಾಯ್ತಾರೆ ಅಂತ ಆತನಿಗೆ ಚೆನ್ನಾಗಿ ಗೊತ್ತು. ಆದ್ರೂ ಅವರು ಸಾಯೋದು ಆತನಿಗೆ ಒಂಚೂರೂ ಇಷ್ಟ ಇಲ್ಲ, ಅವರು ಶಾಶ್ವತವಾಗಿ ಬದುಕಬೇಕು ಅನ್ನೋದೇ ಆತನ ಆಸೆ. (ರೋಮ. 6:23) ಹಾಗಾಗಿ ನಿಮ್ಮಲ್ಲಿ ಒಬ್ಬೊಬ್ರೂ ಈ ಶಾಶ್ವತ ಜೀವ ಪಡ್ಕೊಬೇಕು ಅಂತ ಆತನು ಇಷ್ಟಪಡ್ತಾನೆ. ಅದಕ್ಕೆ ನಾವು ಈ ಲೇಖನದಲ್ಲಿ ಮೂರು ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ. (1) ಪಾಪಿಗಳಾಗಿರೋ ಮನುಷ್ಯರಿಗೆ ಯೆಹೋವ ಯಾವ ನಿರೀಕ್ಷೆ ಕೊಟ್ಟಿದ್ದಾನೆ? (2) ಯೆಹೋವನ ಮೆಚ್ಚಿಕೆ ಪಡ್ಕೊಳ್ಳೋಕೆ ಹಿಂದಿನ ಕಾಲದಲ್ಲಿದ್ದ ಜನ್ರು ಏನು ಮಾಡಿದ್ರು? (3) ಮನುಷ್ಯರನ್ನ ಪಾಪದಿಂದ ಬಿಡಿಸೋಕೆ ಯೇಸು ಏನು ಮಾಡಿದನು?
ಪಾಪಿಗಳಾಗಿರೋ ನಮಗೆ ಯೆಹೋವ ಯಾವ ನಿರೀಕ್ಷೆ ಕೊಟ್ಟಿದ್ದಾನೆ?
3. ಆದಾಮ ಹವ್ವ ಹೇಗೆ ಪಾಪಿಗಳಾದ್ರು?
3 ಯೆಹೋವ ದೇವರು ಮೊದಲ ಗಂಡನ್ನ ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು ಮತ್ತು ಅವರು ಸಂತೋಷವಾಗಿ ಇರಬೇಕು ಅಂತ ಆಸೆ ಪಟ್ಟನು. ಅವ್ರಿಗೆ ಒಂದು ಸುಂದರವಾದ ತೋಟನ ಮನೆಯಾಗಿ ಕೊಟ್ಟನು, ಅವ್ರಿಗೆ ಮದುವೆ ಮಾಡಿಸಿದನು, ಮಾಡೋಕೆ ಒಳ್ಳೇ ಕೆಲಸನೂ ಕೊಟ್ಟನು. ಅವರು ಇಡೀ ಭೂಮಿಲಿ ತಮ್ಮ ಮಕ್ಕಳು ತುಂಬ್ಕೊಳ್ಳೋ ತರ ಮಾಡಬೇಕಿತ್ತು, ಏದೆನ್ ತೋಟದ ತರನೇ ಇಡೀ ಭೂಮಿಯನ್ನ ಪರದೈಸಾಗಿ ಮಾಡಬೇಕಿತ್ತು. ಅದ್ರ ಜೊತೆಗೆ ಆತನು ಅವ್ರಿಗೆ ಒಂದು ಚಿಕ್ಕ ನಿಯಮನೂ ಕೊಟ್ಟನು. ಆ ನಿಯಮನ ಮುರಿದ್ರೆ ಬೇಕುಬೇಕಂತ ಪಾಪ ಮಾಡಿದ ಹಾಗೆ ಇರುತ್ತೆ ಮತ್ತು ಅದ್ರಿಂದ ಸಾವು ಬರುತ್ತೆ ಅಂತ ಅವ್ರನ್ನ ಎಚ್ಚರಿಸಿದನು. ಆಮೇಲೆ ಏನಾಯ್ತು ಅಂತ ನಮಗೇ ಚೆನ್ನಾಗಿ ಗೊತ್ತು. ಒಬ್ಬ ದೇವದೂತ ಅವ್ರ ಹತ್ರ ಬಂದ, ಅವನು ದೇವರ ನಿಯಮ ಮುರಿಯೋಕೆ ಅವ್ರನ್ನ ಪುಸಲಾಯಿಸಿದ. ಅವನಿಗೆ ದೇವರ ಮೇಲಾಗಲಿ, ಇವ್ರ ಮೇಲಾಗಲಿ ಒಂಚೂರೂ ಪ್ರೀತಿ ಇರಲಿಲ್ಲ. ಆದ್ರೆ ಅವರು ಅವನ ಮಾತನ್ನ ಕಣ್ಮುಚ್ಚಿ ನಂಬಿದ್ರು. ಹೀಗೆ ಪ್ರೀತಿಯ ಅಪ್ಪ ಆಗಿರೋ ಯೆಹೋವ ಇಟ್ಟಿದ್ದ ನಂಬಿಕೆನ ಅವರು ಉಳಿಸ್ಕೊಳ್ಳಲಿಲ್ಲ. ಹೀಗೆ ಪಾಪ ಮಾಡಿದ್ರಿಂದ ಏನಾಯ್ತು? ಅವ್ರಿಗೆ ವಯಸ್ಸಾಯ್ತು, ಕೊನೆಗೆ ಸತ್ತುಹೋದ್ರು. ಹೀಗೆ ಯೆಹೋವ ಹೇಳಿದ ಮಾತು ನಿಜ ಆಯ್ತು.—ಆದಿ. 1:28, 29; 2:8, 9, 16-18; 3:1-6, 17-19, 24; 5:5.
4. ಯೆಹೋವ ಪಾಪನ ಯಾಕೆ ದ್ವೇಷಿಸ್ತಾನೆ ಮತ್ತು ನಮಗೆ ಯಾಕೆ ಸಹಾಯ ಮಾಡ್ತಾನೆ? (ರೋಮನ್ನರಿಗೆ 8:20, 21)
4 ಏದೆನಲ್ಲಿ ನಡೆದಿದ್ದನ್ನೆಲ್ಲ ಯೆಹೋವ ಬೈಬಲಲ್ಲಿ ಯಾಕೆ ಬರೆಸಿಟ್ಟಿದ್ದಾನೆ? ಆತನು ಪಾಪನ ಎಷ್ಟು ದ್ವೇಷಿಸ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ಬರೆಸಿಟ್ಟಿದ್ದಾನೆ. ಪಾಪ ಒಬ್ಬ ವ್ಯಕ್ತಿಯನ್ನ ಯೆಹೋವನಿಂದ ದೂರ ಮಾಡುತ್ತೆ. ಅಷ್ಟೇ ಅಲ್ಲ ಅದ್ರಿಂದ ಸಾವೂ ಬರುತ್ತೆ. (ಯೆಶಾ. 59:2) ಸೈತಾನನಿಗೆ ಇದೆಲ್ಲ ಚೆನ್ನಾಗಿ ಗೊತ್ತಿದ್ರಿಂದಾನೇ ಆದಾಮ ಹವ್ವ ಪಾಪ ಮಾಡೋಕೆ ಅವನು ಪುಸಲಾಯಿಸಿದ. ಆಗಷ್ಟೇ ಅಲ್ಲ ಅವನು ಈಗ್ಲೂ ಅದನ್ನೇ ಮಾಡ್ತಿದ್ದಾನೆ. ಏದೆನಲ್ಲಿ ಆದಾಮ ಹವ್ವ ಪಾಪ ಮಾಡೋ ತರ ಮಾಡಿದ್ರಿಂದ ತಾನು ಗೆದ್ದುಬಿಟ್ಟೆ ಅಂತ ಅವನು ಅಂದ್ಕೊಂಡ. ಆದ್ರೆ ಯೆಹೋವ ಮನುಷ್ಯರನ್ನ ಎಷ್ಟೊಂದು ಪ್ರೀತಿಸ್ತಾನೆ ಅಂತ ಸೈತಾನ ಕನಸು ಮನಸ್ಸಲ್ಲೂ ಯೋಚ್ನೆ ಮಾಡಿರಲ್ಲ. ಯೆಹೋವನಿಗೆ ಮನುಷ್ಯರಂದ್ರೆ ಪಂಚಪ್ರಾಣ! ಆದಾಮ ಹವ್ವ ತಪ್ಪು ಮಾಡಿದ್ರೂ ಅವ್ರ ಸಂತತಿ ಬಗ್ಗೆ ಇದ್ದ ಆತನ ಉದ್ದೇಶನ ಬದಲಾಯಿಸ್ಲಿಲ್ಲ. ಅವ್ರಿಗೆ ತಕ್ಷಣನೇ ಒಂದು ನಿರೀಕ್ಷೆ ಕೊಟ್ಟ. (ರೋಮನ್ನರಿಗೆ 8:20, 21 ಓದಿ.) ಆದಾಮ ಹವ್ವರ ಸಂತಾನದಲ್ಲಿ ಕೆಲವರು ತನ್ನನ್ನ ಪ್ರೀತಿಸ್ತಾರೆ, ತನ್ನ ಮಾತು ಕೇಳ್ತಾರೆ ಅಂತ ಯೆಹೋವನಿಗೆ ಗೊತ್ತಿತ್ತು. ಅದಕ್ಕೇ ಯೆಹೋವ ಒಬ್ಬ ಅಪ್ಪನಾಗಿ, ಒಬ್ಬ ಸೃಷ್ಟಿಕರ್ತನಾಗಿ ಅವ್ರ ಮಕ್ಕಳನ್ನ ಪಾಪದಿಂದ ಬಿಡಿಸೋಕೆ ಮತ್ತು ತನಗೆ ಹತ್ರ ಆಗೋಕೆ ಆತನು ಒಂದು ಏರ್ಪಾಡನ್ನ ಮಾಡಿದನು. ಅದೇನು ಅಂತ ನಾವೀಗ ನೋಡೋಣ.
5. ಮನುಷ್ಯರಿಗಿರೋ ನಿರೀಕ್ಷೆ ಬಗ್ಗೆ ಯೆಹೋವ ಯಾವಾಗ ಹೇಳಿದನು? ವಿವರಿಸಿ. (ಆದಿಕಾಂಡ 3:15)
5 ಆದಿಕಾಂಡ 3:15 ಓದಿ. ಯೆಹೋವ ದೇವರು ಏದೆನ್ ತೋಟದಲ್ಲಿ ಸೈತಾನನಿಗೆ ಯಾವ ಶಿಕ್ಷೆ ಸಿಗುತ್ತೆ ಅಂತ ತಕ್ಷಣ ಹೇಳಿದನು. ಮನುಷ್ಯರನ್ನ ಕಾಪಾಡೋಕೆ ಒಂದು ಸಂತತಿ ಬರುತ್ತೆ, ಈ ಸಂತತಿ ಸೈತಾನನನ್ನ ಜಜ್ಜುತ್ತಾನೆ ಮತ್ತು ಏದೆನಲ್ಲಾದ ಎಲ್ಲಾ ಅನಾಹುತನ ಸರಿ ಮಾಡ್ತಾನೆ ಅಂತ ಹೇಳಿದನು. (1 ಯೋಹಾ. 3:8) ಆದ್ರೆ ಅದಕ್ಕೂ ಮುಂಚೆ ಸೈತಾನ ಆ ಸಂತತಿಗೆ ಗಾಯ ಮಾಡ್ತಾನೆ, ಅಂದ್ರೆ ಕೊಲ್ಲಿಸ್ತಾನೆ ಅಂತ ಹೇಳಿದನು. ಈ ಸಂತತಿಗೆ ಗಾಯ ಆಗೋದನ್ನ ಯೆಹೋವ ಕಣ್ಣಾರೆ ನೋಡಿದಾಗ ಆತನಿಗೆ ಕರುಳೇ ಕಿತ್ತು ಬಂದ ಹಾಗೆ ಆಯ್ತು. ಆದ್ರೂ ಆ ನೋವನ್ನೆಲ್ಲ ಸಹಿಸ್ಕೊಂಡನು. ಯಾಕಂದ್ರೆ ಇದ್ರಿಂದಾನೇ ಮನುಷ್ಯರನ್ನ ಪಾಪದಿಂದ ಮತ್ತು ಸಾವಿಂದ ಬಿಡಿಸೋಕೆ ಆಗುತ್ತೆ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು.
ಯೆಹೋವನ ಮೆಚ್ಚಿಕೆ ಪಡ್ಕೊಳ್ಳೋಕೆ ಬೈಬಲ್ ಕಾಲದಲ್ಲಿ ಪಾಪಿಗಳಾಗಿದ್ದ ಮನುಷ್ಯರು ಏನು ಮಾಡಿದ್ರು?
6. ಯೆಹೋವನಿಗೆ ಹತ್ರ ಆಗೋಕೆ ಆತನ ಮೇಲೆ ನಂಬಿಕೆ ಇಟ್ಟ ಹೇಬೆಲ ಮತ್ತು ನೋಹ ಏನು ಮಾಡಿದ್ರು?
6 ಮನುಷ್ಯರು ತನಗೆ ಹತ್ರ ಆಗೋಕೆ ಏನು ಮಾಡಬೇಕು ಅಂತ ಯೆಹೋವ ದೇವರು ಸಮಯ ಕಳೆದ ಹಾಗೆ ಸ್ಪಷ್ಟವಾಗಿ ತಿಳಿಸ್ತಾ ಬಂದನು. ಉದಾಹರಣೆಗೆ ಆದಾಮ ಹವ್ವರ ಎರಡನೇ ಮಗನಾದ ಹೇಬೆಲನ ಬಗ್ಗೆ ನೋಡಿ. ಯೆಹೋವನ ಮೇಲೆ ನಂಬಿಕೆ ಇಟ್ಟವ್ರಲ್ಲಿ ಹೇಬೆಲನೇ ಮೊದಲನೇ ಮನುಷ್ಯ. ಅವನಿಗೆ ಯೆಹೋವ ಅಂದ್ರೆ ತುಂಬ ಇಷ್ಟ. ಆತನನ್ನ ಮೆಚ್ಚಿಸಬೇಕು ಆತನಿಗೆ ಹತ್ರ ಆಗಬೇಕು ಅಂತ ಅವನಿಗೆ ತುಂಬ ಆಸೆ ಇದ್ದಿದ್ರಿಂದ ಒಂದು ಬಲಿ ಕೊಟ್ಟ. ಹೇಬೆಲ ಒಬ್ಬ ಕುರುಬ ಆಗಿದ್ದ. ಹಾಗಾಗಿ ಅವನು ತನ್ನ ಮಂದೆಯಲ್ಲಿದ್ದ ಒಳ್ಳೇ ಕುರಿಮರಿಗಳನ್ನ ತಂದು ಕಡಿದು ಅದನ್ನ ಬಲಿ ಕೊಟ್ಟ. ಆಗ ಯೆಹೋವ ಏನು ಮಾಡಿದನು? “ಯೆಹೋವ ಹೇಬೆಲನನ್ನ ಅವನ ಅರ್ಪಣೆಯನ್ನ ಇಷ್ಟಪಟ್ಟನು.” (ಆದಿ. 4:4) ಹೇಬೆಲನ ತರನೇ ನೋಹ ಮತ್ತು ಇನ್ನೂ ಕೆಲವರು ಯೆಹೋವನನ್ನ ಪ್ರೀತಿಸಿದ್ರಿಂದ, ಆತನನ್ನ ನಂಬಿದ್ರಿಂದ ಬಲಿಗಳನ್ನ ಕೊಟ್ರು. (ಆದಿ. 8:20, 21) ಹೀಗೆ ಬಲಿಗಳನ್ನ ಸ್ವೀಕರಿಸಿದಾಗ ಮನುಷ್ಯರು ಪಾಪಗಳಾಗಿದ್ರೂ ತನ್ನನ್ನ ಮೆಚ್ಚಿಸೋಕೆ ಆಗುತ್ತೆ ಮತ್ತು ತನಗೆ ಹತ್ರ ಆಗೋಕೆ ಆಗುತ್ತೆ ಅಂತ ಯೆಹೋವ ತೋರಿಸ್ಕೊಟ್ಟನು. b
7. ಅಬ್ರಹಾಮ ತನ್ನ ಮಗನನ್ನ ಬಲಿ ಕೊಡೋಕೆ ಮುಂದೆ ಬಂದಿದ್ರಿಂದ ನಮಗೆ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?
7 ತುಂಬ ನಂಬಿಕೆ ತೋರಿಸಿದವ್ರಲ್ಲಿ ಅಬ್ರಹಾಮನೂ ನಮಗೆ ಒಳ್ಳೇ ಮಾದರಿ. ತುಂಬ ಕಷ್ಟ ಆಗಿರೋ ಒಂದು ಕೆಲಸ ಮಾಡೋಕೆ ಯೆಹೋವ ದೇವರು ಅವನಿಗೆ ಹೇಳಿದನು. ಅದೇನಂದ್ರೆ ಅವನ ಒಬ್ಬನೇ ಮುದ್ದಿನ ಮಗನನ್ನ ಬಲಿಯಾಗಿ ಕೊಡೋಕೆ ಹೇಳಿದನು. ಇದ್ರಿಂದ ಅಬ್ರಹಾಮನಿಗೆ ಎಷ್ಟು ನೋವಾಗುತ್ತೆ ಅಂತ ಗೊತ್ತಿದ್ರೂ ಆತನು ಅದನ್ನ ಹೇಳಿದನು. ಕಷ್ಟ ಆದ್ರೂ ಯೆಹೋವ ಹೇಳಿದ ಹಾಗೆ ಮಾಡೋಕೆ ಅಬ್ರಹಾಮ ಮುಂದೆ ಬಂದ. ಇನ್ನೇನು ಇಸಾಕನನ್ನ ಕೊಲ್ಲಬೇಕಂತ ಇದ್ದಾಗ ಯೆಹೋವ ಅವನನ್ನ ತಡೆದನು. ಈ ಘಟನೆ ಯೆಹೋವ ದೇವರು ಮುಂದೆ ಜನ್ರಿಗೋಸ್ಕರ ಎಷ್ಟು ದೊಡ್ಡ ತ್ಯಾಗ ಮಾಡ್ತಾನೆ ಅನ್ನೋ ಸತ್ಯನ ತೋರಿಸ್ತು. ಯೆಹೋವ ಮನುಷ್ಯರನ್ನ ಎಷ್ಟು ಪ್ರೀತಿಸ್ತಾನೆ ಅಂದ್ರೆ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಡೋಕೆ ಹಿಂಜರಿಲಿಲ್ಲ!—ಆದಿ. 22:1-18.
8. ಇಸ್ರಾಯೇಲ್ಯರು ಕೊಟ್ಟ ಬಲಿಗಳು ಏನನ್ನ ಸೂಚಿಸ್ತು? (ಯಾಜಕಕಾಂಡ 4:27-29; 17:11)
8 ನೂರಾರು ವರ್ಷಗಳು ಆದ್ಮೇಲೆ ಯೆಹೋವ ದೇವರು ಪಾಪ ಪರಿಹಾರಕ್ಕಾಗಿ ಬಲಿಗಳನ್ನ ಕೊಡಬೇಕು ಅಂತ ಜನ್ರಿಗೆ ನಿಯಮ ಕೊಟ್ಟನು. (ಯಾಜಕಕಾಂಡ 4:27-29; 17:11 ಓದಿ.) ಈ ಬಲಿಗಳು ಏನನ್ನ ಸೂಚಿಸ್ತು? ಮನುಷ್ಯರೆಲ್ರ ಪಾಪನ ಪೂರ್ತಿಯಾಗಿ ತೆಗೆದುಹಾಕೋಕೆ ಈ ಎಲ್ಲಾ ಬಲಿಗಳಿಗಿಂತ ಇನ್ನೂ ಒಳ್ಳೇ ಒಂದು ಬಲಿಯನ್ನ ಯೆಹೋವ ಕೊಡ್ತಾನೆ ಅನ್ನೋದನ್ನ ಸೂಚಿಸ್ತು. ಅದ್ರ ಬಗ್ಗೆ ಇನ್ನೂ ಜಾಸ್ತಿ ವಿಷ್ಯಗಳನ್ನ ಪ್ರವಾದಿಗಳಿಂದ ತಿಳಿಸಿದನು. ಆತನು ಹೇಳಿದ ಆ ಸಂತಾನ, ಅಂದ್ರೆ ಆತನ ಪ್ರೀತಿಯ ಮಗನೇ ಆ ಬಲಿಯಾಗಿದ್ದನು. ಯೇಸು ಜನ್ರನ್ನ ಪಾಪದಿಂದ ಬಿಡಿಸೋಕೆ ಕಷ್ಟ ಅನುಭವಿಸಿ ಸಾಯ್ತಾನೆ ಅಂತ ಪ್ರವಾದಿಗಳು ಹೇಳಿದ್ರು. ಅಷ್ಟೇ ಅಲ್ಲ ಆತನನ್ನ ಬಲಿಯ ಕುರಿಮರಿ ತರ ಕೊಲ್ಲಲಾಗುತ್ತೆ ಅಂತಾನೂ ತಿಳಿಸಿದ್ರು. (ಯೆಶಾ. 53:1-12) ಮನುಷ್ಯರನ್ನ ಬಿಡಿಸೋಕೆ ಯೆಹೋವ ತನ್ನ ಪ್ರೀತಿಯ ಮಗನನ್ನ ಬಲಿ ಕೊಟ್ಟಾಗ ಆತನಿಗೆ ಎಷ್ಟು ನೋವಾಗಿರುತ್ತೆ ಅಂತ ಸ್ವಲ್ಪ ಯೋಚಿಸಿ! ಆದ್ರೂ ಆತನು ನಿಮ್ಮನ್ನ ಪಾಪ ಮತ್ತು ಸಾವಿಂದ ಬಿಡಿಸೋಕೆ ಆ ನೋವನ್ನ ಸಹಿಸ್ಕೊಂಡನು.
ಯೇಸು ಹೇಗೆ ಕಾಪಾಡಿದನು?
9. ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಯೇಸು ಬಗ್ಗೆ ಏನು ಹೇಳಿದನು? (ಇಬ್ರಿಯ 9:22; 10:1-4, 12)
9 ಒಂದನೇ ಶತಮಾನದಲ್ಲಿ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ನಜರೇತಿನ ಯೇಸುನ ನೋಡಿ, “ದೇವರ ಕುರಿಮರಿಯನ್ನ ನೋಡಿ! ಇವನು ಲೋಕದ ಪಾಪವನ್ನ ತೆಗೆದುಹಾಕ್ತಾನೆ” ಅಂತ ಹೇಳಿದ. (ಯೋಹಾ. 1:29) ಅವನು ಈ ಮಾತನ್ನ ದೇವರ ಪ್ರೇರಣೆಯಿಂದಾನೇ ಹೇಳಿದನು. ನೂರಾರು ವರ್ಷಗಳ ಹಿಂದೆ ಹೇಳಿದ ಸಂತಾನ ಇವನೇ ಅಂತ ಯೋಹಾನನ ಮಾತುಗಳಿಂದ ಗೊತ್ತಾಯ್ತು. ನಮ್ಮೆಲ್ರನ್ನ ಪಾಪದಿಂದ ಬಿಡಿಸೋಕೆ ಯೇಸುಗೂ ಮನಸ್ಸಿತ್ತು. ಅದಕ್ಕೆ ಆತನು ಎಲ್ಲಾ ಮನುಷ್ಯರನ್ನ ಪಾಪದಿಂದ ಪೂರ್ತಿಯಾಗಿ ಬಿಡಿಸೋಕೆ ಭೂಮಿಗೆ ಬಂದನು.—ಇಬ್ರಿಯ 9:22; 10:1-4, 12 ಓದಿ.
10. ಯೇಸು “ಪಾಪಿಗಳನ್ನ ಕರಿಯೋಕೆ” ಬಂದಿದ್ದಾನೆ ಅಂತ ಹೇಗೆ ತೋರಿಸಿದನು?
10 ಪಾಪ ಮಾಡಿ ನೋವಲ್ಲಿ ಮುಳುಗಿ ಹೋದವ್ರಿಗೆ ಯೇಸು ವಿಶೇಷ ಗಮನ ಕೊಟ್ಟನು. ಅವ್ರನ್ನ ತನ್ನ ಶಿಷ್ಯರಾಗೋಕೆ ಕರೆದನು. ಮನುಷ್ಯರ ಎಲ್ಲಾ ಸಮಸ್ಯೆಗಳಿಗೆ ಪಾಪನೇ ಕಾರಣ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೇ ಅವನು ಯಾರನ್ನ ಜನ ಪಾಪಿಗಳು ಅಂತ ನೋಡ್ತಿದ್ರೋ ಅವ್ರಿಗೆ ಸಹಾಯ ಮಾಡೋಕೆ ಆತನು ಮುಂದೆ ಹೋದನು. ಅದಕ್ಕೇ ಅವನು “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು.” “ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ” ಅಂತ ಹೇಳಿದನು. (ಮತ್ತಾ. 9:12, 13) ಯೇಸು ತಾನು ಹೇಳಿದ ಹಾಗೇ ನಡ್ಕೊಂಡನು. ಒಮ್ಮೆ ಒಬ್ಬ ಸ್ತ್ರೀ ತಾನು ಮಾಡಿದ ಪಾಪ ನೆನಸ್ಕೊಂಡು ಯೇಸುವಿನ ಪಾದನ ಕಣ್ಣೀರಲ್ಲಿ ತೊಳೆದಾಗ ಅವಳ ನೋವನ್ನ ಅರ್ಥಮಾಡ್ಕೊಂಡು ಪ್ರೀತಿಯಿಂದ ಅವಳ ಹತ್ರ ಮಾತಾಡಿದನು ಮತ್ತು ಅವಳನ್ನ ಕ್ಷಮಿಸಿದನು. (ಲೂಕ 7:37-50) ಸಮಾರ್ಯದ ಸ್ತ್ರೀ ಅನೈತಿಕ ಜೀವನ ಮಾಡ್ತಿದ್ದಾಳೆ ಅಂತ ಗೊತ್ತಿದ್ದೂ ಅವಳಿಗೆ ಪ್ರಾಮುಖ್ಯವಾದ ಸತ್ಯಗಳನ್ನ ತಿಳಿಸಿದನು. (ಯೋಹಾ. 4:7, 17-19, 25, 26) ಅಷ್ಟೇ ಅಲ್ಲ, ಯೆಹೋವ ದೇವರು ಯೇಸುಗೆ ಪಾಪದ ಸಂಬಳವಾಗಿರೋ ಮರಣವನ್ನ ತೆಗೆದು ಹಾಕೋಕೂ ಶಕ್ತಿ ಕೊಟ್ಟನು. ಅದು ನಮಗೆ ಹೇಗೆ ಗೊತ್ತು? ಆತನು ಭೂಮಿ ಮೇಲಿದ್ದಾಗ ಗಂಡಸ್ರನ್ನ, ಹೆಂಗಸ್ರನ್ನ ಮತ್ತು ಮಕ್ಕಳನ್ನ ಮತ್ತೆ ಬದುಕಿಸಿದನು.—ಮತ್ತಾ. 11:5.
11. ಪಾಪ ಮಾಡ್ತಿದ್ದವ್ರಿಗೂ ಯೇಸು ಅಂದ್ರೆ ಯಾಕೆ ಇಷ್ಟ ಆಗಿತ್ತು?
11 ಪಾಪ ಮಾಡ್ತಿದ್ದ ಜನ್ರಿಗೂ ಯೇಸುನ ಕಂಡ್ರೆ ತುಂಬ ಇಷ್ಟ ಆಗ್ತಿತ್ತು. ಯಾಕಂದ್ರೆ ಆತನು ಅವ್ರ ಜೊತೆ ಪ್ರೀತಿಯಿಂದ ನಡ್ಕೊಳ್ತಿದ್ದನು, ಅವ್ರ ಕಷ್ಟನ ಅರ್ಥ ಮಾಡ್ಕೊಳ್ತಿದ್ದನು. (ಲೂಕ 15:1, 2) ಅಷ್ಟೇ ಅಲ್ಲ ಅವ್ರನ್ನ ಹೊಗಳ್ತಿದ್ದನು, ಅವರು ತೋರಿಸೋ ನಂಬಿಕೆನ ಮೆಚ್ಕೊತಿದ್ದನು. (ಲೂಕ 19:1-10) ಯೇಸು ಯೆಹೋವ ದೇವರ ತರನೇ ಕರುಣೆ ತೋರಿಸಿದನು. (ಯೋಹಾ. 14:9) ಯೆಹೋವ ಜನ್ರನ್ನ ತುಂಬ ಪ್ರೀತಿಸ್ತಾನೆ. ಅವ್ರಿಗೆ ಸಹಾಯ ಮಾಡೋಕೆ, ಅವ್ರನ್ನ ಪಾಪದಿಂದ ಬಿಡೋಸೋಕೆ ಇಷ್ಟ ಪಡ್ತಾನೆ. ಅದನ್ನೇ ಯೇಸು ತನ್ನ ಮಾತಲ್ಲಿ ನಡತೇಲಿ ತೋರಿಸ್ಕೊಟ್ಟನು. ಅದಕ್ಕೇ ಯೇಸು ಕೆಟ್ಟ ದಾರೀಲಿ ಹೋಗ್ತಿದ್ದವ್ರಿಗೆ ಬದಲಾಗೋಕೆ ಮತ್ತು ತನ್ನ ಶಿಷ್ಯರಾಗೋಕೆ ಸಹಾಯ ಮಾಡಿದನು.—ಲೂಕ 5:27, 28.
12. ಯೇಸು ಜೀವ ಕೊಟ್ಟಿದ್ರಿಂದ ಏನು ಪ್ರಯೋಜನ ಆಯ್ತು?
12 ಯೇಸು ತನ್ನ ಜೀವ ಕೊಡುವಾಗ ಎಷ್ಟೆಲ್ಲ ಕಷ್ಟಪಡ್ತಾನೆ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಆತನು ತನಗೆ ಜನ ಮೋಸ ಮಾಡ್ತಾರೆ, ತನ್ನನ್ನ ಕಂಬಕ್ಕೆ ನೇತು ಹಾಕಿ ಸಾಯಿಸ್ತಾರೆ ಅಂತ ಶಿಷ್ಯರಿಗೆ ಮತ್ತೆಮತ್ತೆ ಹೇಳಿದನು. (ಮತ್ತಾ. 17:22; 20:18, 19) ಯೋಹಾನ ಮತ್ತು ಬೇರೆ ಪ್ರವಾದಿಗಳು ಹೇಳಿದ ತರನೇ ತಾನು ಪ್ರಾಣ ತ್ಯಾಗ ಮಾಡೋದ್ರಿಂದ ಜನ್ರನ್ನ ಪಾಪದಿಂದ ಬಿಡಿಸೋಕೆ ಆಗುತ್ತೆ ಅಂತ ಯೇಸುಗೆ ಗೊತ್ತಿತ್ತು. ಅಷ್ಟೇ ಅಲ್ಲ ತಾನು ಜೀವ ಕೊಟ್ಟ ಮೇಲೂ “ಎಲ್ಲ ತರದ ಜನ್ರನ್ನ” ತನ್ನ ಕಡೆಗೆ ಸೆಳಿತಾನೆ ಅಂತಾನೂ ಆತನು ಶಿಷ್ಯರಿಗೆ ಕಲಿಸಿದನು. (ಯೋಹಾ. 12:32) ಹಾಗಾಗಿ ಜನ್ರು ಯೇಸು ಮೇಲೆ ನಂಬಿಕೆ ಇಟ್ರೆ, ಆತನು ಹೇಳಿದ ತರ ನಡ್ಕೊಂಡ್ರೆ ಯೆಹೋವ ತುಂಬ ಖುಷಿಪಡ್ತಾನೆ. ಆಗ ಯೆಹೋವ ಕೊನೇಲಿ ‘ಪಾಪದಿಂದ ಅವ್ರನ್ನ ಬಿಡುಗಡೆ ಮಾಡ್ತಾನೆ.’ (ರೋಮ. 6:14, 18, 22; ಯೋಹಾ. 8:32) ಅದಕ್ಕೇ ಯೇಸು ಪೂರ್ತಿ ಮನಸ್ಸಿಂದ ಕಷ್ಟನೆಲ್ಲಾ ಸಹಿಸ್ಕೊಂಡು ತನ್ನ ಜೀವವನ್ನ ತ್ಯಾಗ ಮಾಡಿದನು.—ಯೋಹಾ. 10:17, 18.
13. (ಎ) ಯೇಸು ಹೇಗೆ ಸತ್ತನು? (ಬಿ) ಯೇಸುವಿನ ಸಾವು ಯೆಹೋವ ದೇವರ ಬಗ್ಗೆ ನಮಗೆ ಏನು ಕಲಿಸುತ್ತೆ? (ಚಿತ್ರ ನೋಡಿ.)
13 ಯೇಸುಗೆ ಆತನ ಸ್ನೇಹಿತನೇ ಮೋಸ ಮಾಡಿಬಿಟ್ಟ. ಅವನನ್ನ ಜನ್ರು ಬಂಧಿಸಿದ್ರು, ಆತನಿಗೆ ಕೆಟ್ಟಕೆಟ್ಟದಾಗಿ ಬೈದ್ರು. ಅಪರಾಧಿ ಅನ್ನೋ ಪಟ್ಟ ಕಟ್ಟಿದ್ರು. ಅಷ್ಟೇ ಅಲ್ಲ ಆತನಿಗೆ ಚಿತ್ರಹಿಂಸೆ ಕೊಟ್ರು. ಸೈನಿಕರು ಆತನ ಹಿಂಸಾಕಂಬವನ್ನ ಆತನೇ ಹೊತ್ಕೊಂಡು ಹೋಗೋ ತರ ಮಾಡಿದ್ರು ಮತ್ತು ಆತನನ್ನ ಅದೇ ಕಂಬಕ್ಕೆ ಜಡಿದ್ರು. ಇದನ್ನೆಲ್ಲ ಯೇಸು ಸಹಿಸ್ಕೊಂಡನು. ಇದೆಲ್ಲ ನಡೀವಾಗ ಯೇಸುಗಿಂತ ಯೆಹೋವನಿಗೆ ಜಾಸ್ತಿ ನೋವಾಯ್ತು! ಯೇಸುಗೆ ಆದ ಕಷ್ಟಗಳನ್ನ ತಡಿಯೋಕೆ ಯೆಹೋವನಿಗೆ ಶಕ್ತಿ ಇದ್ರೂ ಆತನು ಅದನ್ನ ಯಾಕೆ ತಡೀಲಿಲ್ಲ? ಯಾಕಂದ್ರೆ ನಮಗೋಸ್ಕರನೇ. ಅದಕ್ಕೇ ಯೇಸು, “ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ” ಅಂತ ಹೇಳಿದನು.—ಯೋಹಾ. 3:16.
14. ಯೇಸು ಜೀವ ತ್ಯಾಗ ಮಾಡಿದ್ರಿಂದ ಯೆಹೋವನ ಬಗ್ಗೆ ನಮಗೆ ಏನು ಗೊತ್ತಾಗುತ್ತೆ?
14 ಆದಾಮ ಹವ್ವರ ಮಕ್ಕಳಾಗಿರೋ ನಮ್ಮನ್ನ ಯೆಹೋವ ತುಂಬ ಪ್ರೀತಿಸ್ತಾನೆ. ತನ್ನ ಮಗನನ್ನ ನಮಗೋಸ್ಕರ ತ್ಯಾಗ ಮಾಡಿರೋದೇ ಅದಕ್ಕೊಂದು ದೊಡ್ಡ ಸಾಕ್ಷಿ! ಇದು ಆತನು ನಮ್ಮಲ್ಲಿ ಒಬ್ಬೊಬ್ರನ್ನೂ ಪ್ರೀತಿಸ್ತಾನೆ ಅಂತ ತೋರಿಸ್ಕೊಡುತ್ತೆ. ಆತನು ನಮ್ಮನ್ನ ಪಾಪ ಮತ್ತು ಸಾವಿಂದ ಬಿಡಿಸೋಕಂತಾನೇ ತನ್ನ ಮಗನಿಗಾದ ನೋವನ್ನೆಲ್ಲ ಸಹಿಸ್ಕೊಂಡನು. ಆತನಿಗಾದ ನೋವನ್ನ ನಾವು ಮಾತಲ್ಲಿ ಹೇಳಕ್ಕಾಗಲ್ಲ. (1 ಯೋಹಾ. 4:9, 10) ನಾವು ಪಾಪಿಗಳಾಗಿ ಇರೋದಾದ್ರೂ ಈಗ್ಲೂ ಆತನ ಸೇವೆ ಮಾಡೋಕೆ ನಮಗೆ ಸಹಾಯ ಮಾಡ್ತಾನೆ ಮತ್ತು ಮುಂದೆ ಒಂದಿನ ನಮ್ಮಲ್ಲಿರೋ ಪಾಪನ ಪೂರ್ತಿಯಾಗಿ ತೆಗೆದುಹಾಕಿ ಬಿಡ್ತಾನೆ.
15. ಯೇಸು ಕೊಟ್ಟ ಬಿಡುಗಡೆ ಬೆಲೆಯಿಂದ ನಮಗೆ ಪ್ರಯೋಜನ ಆಗಬೇಕಂದ್ರೆ ನಾವೇನು ಮಾಡಬೇಕು?
15 ಯೆಹೋವ ದೇವರು ಪಾಪಗಳಾಗಿರೋ ನಮ್ಮನ್ನ ಕ್ಷಮಿಸೋಕೆ ಆತನ ಪ್ರೀತಿಯ ಒಬ್ಬನೇ ಮಗನನ್ನ ತ್ಯಾಗ ಮಾಡಿದನು. ಆದ್ರೆ ಆತನ ಕ್ಷಮೆ ಪಡಿಬೇಕಂದ್ರೆ ನಾವು ಒಂದು ವಿಷ್ಯ ಮಾಡಬೇಕು. ಅದೇನು ಅಂತ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮತ್ತು ಯೇಸು ಇಬ್ರೂ ಹೇಳಿದ್ರು. “ಪಶ್ಚಾತ್ತಾಪಪಡಿ, ಯಾಕಂದ್ರೆ ಸ್ವರ್ಗದ ಆಳ್ವಿಕೆ ಹತ್ರ ಇದೆ” ಅಂತ ಅವರು ಹೇಳಿದ್ರು. (ಮತ್ತಾ. 3:1, 2; 4:17) ಹಾಗಾಗಿ ನಾವು ಯೆಹೋವನಿಗೆ ಹತ್ರ ಆಗಬೇಕಂದ್ರೆ, ಆತನು ನಮ್ಮ ತಪ್ಪನ್ನ ಕ್ಷಮಿಸಬೇಕಂದ್ರೆ ಪಶ್ಚಾತ್ತಾಪ ಪಡೋದು ತುಂಬಾನೇ ಪ್ರಾಮುಖ್ಯ! ಹಾಗಾಗಿ ನಾವು ಮುಂದಿನ ಲೇಖನದಲ್ಲಿ ಪಶ್ಚಾತ್ತಾಪ ಪಡೋದು ಅಂದ್ರೇನು? ಮತ್ತು ಪಾಪ ಮಾಡಿದ್ರೂ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಏನು ಮಾಡಬೇಕು ಅಂತ ನೋಡೋಣ.
ಗೀತೆ 149 ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ
a ಪದ ವಿವರಣೆ: ಬೈಬಲಲ್ಲಿ “ಪಾಪ” ಅನ್ನೋ ಪದ, ಯೆಹೋವ ಯಾವುದನ್ನ ಸರಿತಪ್ಪು ಅಂತ ಹೇಳಿದಾನೋ ಅದನ್ನ ನಾವು ಪಾಲಿಸದೇ ಇರೋದನ್ನ ಸೂಚಿಸುತ್ತೆ. ಜೊತೆಗೆ, ನಮಗೆ ಆದಾಮನಿಂದ ಬಂದಿರೋ ಅಪರಿಪೂರ್ಣತೆಯನ್ನೂ ಸೂಚಿಸುತ್ತೆ. ಆದಾಮನಿಂದ ಬಂದಿರೋ ಪಾಪದಿಂದಾನೇ ನಾವು ಇವತ್ತು ಸಾಯ್ತಾ ಇದ್ದೀವಿ.