ಅಧ್ಯಯನ ಲೇಖನ 35
ತಾಳ್ಮೆ ತೋರಿಸ್ತಾನೇ ಇರಿ
“ತಾಳ್ಮೆಯನ್ನ ಬಟ್ಟೆ ತರ ಹಾಕ್ಕೊಳ್ಳಿ.”—ಕೊಲೊ. 3:12.
ಗೀತೆ 78 ದೀರ್ಘ ಸಹನೆ
ಈ ಲೇಖನದಲ್ಲಿ ಏನಿದೆ? a
1. ತಾಳ್ಮೆ ತೋರಿಸುವವ್ರನ್ನ ನೋಡಿದ್ರೆ ನಿಮಗೆ ಯಾಕಿಷ್ಟ?
ತಾಳ್ಮೆ ತೋರಿಸುವವ್ರನ್ನ ನೋಡಿದ್ರೆ ನಮಗೆ ತುಂಬ ಇಷ್ಟ. ಯಾಕಂದ್ರೆ ಎಷ್ಟು ಹೊತ್ತು ಕಾಯಬೇಕಾಗಿ ಬಂದ್ರೂ ಅವರು ಒಂಚೂರೂ ಬೇಜಾರ್ ಮಾಡ್ಕೊಳ್ಳಲ್ಲ. ನಾವೇನಾದ್ರೂ ತಪ್ಪು ಮಾಡಿದ್ರೆ ಅವರು ತಕ್ಷಣ ಕೋಪ ಮಾಡ್ಕೊಳ್ಳಲ್ಲ. ನಿಮಗೆ ಬೈಬಲ್ ಕಲಿಸಿದವ್ರನ್ನ ಸ್ವಲ್ಪ ನೆನಪಿಸ್ಕೊಳ್ಳಿ. ಕೆಲವೊಂದು ವಿಷ್ಯಗಳು ನಿಮಗೆ ಅರ್ಥ ಆಗದೇ ಇದ್ದಾಗ ಅವರು ಮತ್ತೆ-ಮತ್ತೆ ಹೇಳ್ಕೊಟ್ಟಿದ್ದಾರೆ. ಕಲ್ತಿದ್ದನ್ನ ನೀವು ಪಾಲಿಸದೇ ಇದ್ದಾಗ ತಾಳ್ಮೆ ತೋರಿಸಿದ್ದಾರೆ. ಯೆಹೋವ ದೇವರನ್ನೂ ನೆನಪಿಸ್ಕೊಳ್ಳಿ. ಆತನು ನಮಗೆ ತೋರಿಸಿರೋ ತಾಳ್ಮೆಗೆ ಜೀವನಪೂರ್ತಿ ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.—ರೋಮ. 2:4.
2. ನಾವು ಯಾವಾಗೆಲ್ಲ ತಾಳ್ಮೆ ಕಳ್ಕೊಂಡುಬಿಡಬಹುದು?
2 ಬೇರೆಯವರು ನಮಗೆ ತಾಳ್ಮೆ ತೋರಿಸಬೇಕು ಅಂತ ನಾವು ಆಸೆಪಡ್ತೀವಿ. ಆದ್ರೆ ನಾವೇ ಕೆಲವೊಮ್ಮೆ ತಾಳ್ಮೆ ಕಳ್ಕೊಂಡುಬಿಡ್ತೀವಿ. ಉದಾಹರಣೆಗೆ, ನೀವು ಎಲ್ಲೋ ಹೋಗಬೇಕಾಗಿರುತ್ತೆ, ಆದ್ರೆ ಈಗಾಗ್ಲೇ ಲೇಟ್ ಆಗಿಬಿಟ್ಟಿದೆ ಅಂದ್ಕೊಳಿ. ಅದ್ರಲ್ಲೂ ಟ್ರಾಫಿಕಲ್ಲಿ ಸಿಕ್ಕಿಹಾಕೊಂಡಿದ್ದೀರ. ಆಗ ಮೈಯೆಲ್ಲಾ ಪರಚ್ಕೊಳ್ಳೋ ತರ ಆಗುತ್ತೆ ಅಲ್ವಾ? ಕೆಲವೊಮ್ಮೆ ಯಾರಾದ್ರೂ ನಮಗೆ ಕಿರಿಕಿರಿ ಮಾಡಿದಾಗ ತುಂಬ ಕೋಪ ಬರುತ್ತೆ. ಇನ್ನು ಕೆಲವೊಮ್ಮೆ ಹೊಸ ಲೋಕಕ್ಕೋಸ್ಕರ ಕಾದು-ಕಾದು ಸಾಕಾಗಿಹೋಗುತ್ತೆ. ಇಂಥ ಸಂದರ್ಭಗಳಲ್ಲೂ ನಾವು ತಾಳ್ಮೆ ತೋರಿಸಬೇಕು. ಹಾಗಾಗಿ ಈ ಲೇಖನದಲ್ಲಿ, ತಾಳ್ಮೆ ಇರೋ ವ್ಯಕ್ತಿ ಹೇಗಿರ್ತಾನೆ? ನಾವು ತಾಳ್ಮೆ ತೋರಿಸೋದು ಯಾಕಷ್ಟು ಮುಖ್ಯ? ನಾವು ಯಾವಾಗ್ಲೂ ತಾಳ್ಮೆಯಿಂದ ಇರೋಕೆ ಏನೇನು ಮಾಡಬೇಕು? ಅನ್ನೋದನ್ನ ನೋಡೋಣ.
ತಾಳ್ಮೆ ಇರೋ ವ್ಯಕ್ತಿ ಹೇಗಿರ್ತಾನೆ?
3. ಯಾರಾದ್ರೂ ಕೆಣಕಿದಾಗ ತಾಳ್ಮೆ ಇರೋ ವ್ಯಕ್ತಿ ಏನು ಮಾಡ್ತಾನೆ?
3 ಒಂದು, ಅವನು ತಟ್ಟಂತ ಕೋಪ ಮಾಡ್ಕೊಳ್ಳಲ್ಲ. ಯಾರಾದ್ರೂ ಕೆಣಕಿದಾಗ ‘ಸೇರಿಗೆ ಸವಾಸೇರು’ ಅಂತ ನಿಂತ್ಕೊಳಲ್ಲ. ಎಷ್ಟೇ ಟೆನ್ಶನ್ ಇದ್ರೂ ಸಮಾಧಾನವಾಗಿ ಇರೋಕೆ ಪ್ರಯತ್ನ ಮಾಡ್ತಾನೆ. “ತಟ್ಟಂತ ಕೋಪ ಮಾಡ್ಕೊಳ್ಳಲ್ಲ” ಅನ್ನೋ ಪದಗಳನ್ನ ಮೊದಲನೇ ಸಲ ಬೈಬಲ್ನಲ್ಲಿ ಬಳಸಿರೋದು ಯೆಹೋವನ ಬಗ್ಗೆ ಹೇಳುವಾಗ. “ಯೆಹೋವ, ಕರುಣೆ ಮತ್ತು ಕನಿಕರ ಇರೋ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ, ಯಾವಾಗ್ಲೂ ಸತ್ಯವಂತ ಆಗಿರ್ತಾನೆ” ಅಂತ ಬೈಬಲ್ ಹೇಳುತ್ತೆ.—ವಿಮೋ. 34:6.
4. ತುಂಬ ಹೊತ್ತು ಕಾಯಬೇಕಾದಾಗ ತಾಳ್ಮೆ ಇರೋ ವ್ಯಕ್ತಿ ಏನು ಮಾಡ್ತಾನೆ?
4 ಎರಡು, ತಾಳ್ಮೆ ಇರೋ ವ್ಯಕ್ತಿ ಎಷ್ಟು ಹೊತ್ತಾದ್ರೂ ಸಮಾಧಾನದಿಂದ ಕಾಯ್ತಾನೆ. ಅವನು ಅಂದ್ಕೊಂಡಿದ್ದು ಆಗದೇ ಇದ್ದಾಗ ‘ಇನ್ನೂ ಆಗಿಲ್ವಲ್ಲಾ, ಇನ್ನೂ ಆಗಿಲ್ವಲ್ಲಾ’ ಅಂತ ಟೆನ್ಶನ್ ಮಾಡ್ಕೊಳ್ಳಲ್ಲ. (ಮತ್ತಾ. 18:26, 27) ಅದೇ ತರ ನಾವೂ ತಾಳ್ಮೆಯಿಂದ ಇರಬೇಕು. ಯಾರಾದ್ರೂ ಮಾತಾಡ್ತಾ ಇರುವಾಗ ಮಧ್ಯದಲ್ಲಿ ಬಾಯಿ ಹಾಕಬಾರದು. ಅವರು ಏನು ಹೇಳ್ತಿದ್ದಾರೋ ಅದನ್ನ ಪೂರ್ತಿಯಾಗಿ ಕೇಳಿಸ್ಕೊಬೇಕು. (ಯೋಬ 36:2) ನಮ್ಮ ಬೈಬಲ್ ವಿದ್ಯಾರ್ಥಿಗೆ ಒಂದು ವಿಷ್ಯ ಅರ್ಥ ಆಗಿಲ್ಲಾಂದ್ರೆ ಅದನ್ನ ಪದೇ ಪದೇ ಹೇಳ್ಕೊಡಬೇಕು. ಅವರು ಒಂದು ಕೆಟ್ಟ ಚಟವನ್ನ ಬಿಡೋಕೆ ಪ್ರಯತ್ನ ಮಾಡ್ತಿದ್ರೆ ಆಗ್ಲೂ ತಾಳ್ಮೆ ತೋರಿಸಬೇಕು.
5. ತಾಳ್ಮೆ ಇರೋ ವ್ಯಕ್ತಿ ಕೆಲಸಗಳನ್ನ ಹೇಗೆ ಮಾಡ್ತಾನೆ?
5 ಮೂರು, ತಾಳ್ಮೆ ಇರೋ ವ್ಯಕ್ತಿ ಯಾವ ಕೆಲಸನೂ ಅವಸರದಿಂದ ಮಾಡಲ್ಲ. ಕೆಲವೊಂದು ಕೆಲಸಗಳನ್ನ ನಾವು ಬೇಗ ಬೇಗ ಮಾಡಬೇಕಾಗುತ್ತೆ ಅನ್ನೋದೇನೋ ನಿಜ. ಹಾಗಂತ ಪ್ರಾಮುಖ್ಯವಾದ ಕೆಲವು ವಿಷ್ಯಗಳನ್ನ ಮಾಡುವಾಗ ನಾವು ಅವಸರ ಪಡಬಾರದು. ಆ ಕೆಲಸಗಳನ್ನ ಮಾಡೋ ಮುಂಚೆ ಸಮಯ ಮಾಡ್ಕೊಂಡು ಚೆನ್ನಾಗಿ ಪ್ಲಾನ್ ಮಾಡಬೇಕು. ಅದನ್ನ ಮಾಡಿ ಮುಗಿಸೋಕೂ ಸಾಕಷ್ಟು ಸಮಯ ಕೊಡಬೇಕು.
6. ಕಷ್ಟಗಳು ಬಂದಾಗ ತಾಳ್ಮೆ ಇರೋ ವ್ಯಕ್ತಿ ಏನು ಮಾಡ್ತಾನೆ?
6 ನಾಲ್ಕು, ತಾಳ್ಮೆ ಇರೋ ವ್ಯಕ್ತಿ ಏನೇ ಕಷ್ಟ ಬಂದ್ರೂ ಸಹಿಸ್ಕೊಳ್ತಾನೆ, ಯಾರನ್ನೂ ದೂರಲ್ಲ. ಕೆಲವೊಂದು ಸಲ ನಮಗೆ ಬಂದಿರೋ ಕಷ್ಟಗಳ ಬಗ್ಗೆ ನಾವು ನಮ್ಮ ಸ್ನೇಹಿತರ ಹತ್ರ ಹೇಳ್ಕೊಳ್ತೀವಿ. ಅದ್ರಲ್ಲೇನು ತಪ್ಪಿಲ್ಲ. ಹಾಗಂತ ಅದ್ರ ಬಗ್ಗೆನೇ ಯೋಚ್ನೆ ಮಾಡ್ಕೊಂಡು ಯಾವಾಗ್ಲೂ ಕೊರಗ್ತಾ ಇರಬಾರದು. ಅದ್ರ ಬದ್ಲು ಜೀವನದಲ್ಲಿ ಆಗಿರೋ ಒಳ್ಳೇ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಬೇಕು. ನಮ್ಮಿಂದ ಆದಷ್ಟು ಯೆಹೋವನ ಸೇವೆ ಮಾಡ್ತಾ ಖುಷಿಯಾಗಿ ಇರೋಕೆ ಪ್ರಯತ್ನ ಪಡಬೇಕು. (ಕೊಲೊ. 1:11) ಹೀಗೆ ನಾವು ಈ 4 ರೀತಿಯಲ್ಲಿ ತಾಳ್ಮೆ ತೋರಿಸ್ತಾ ಇರಬೇಕು. ಯಾಕೆ ಅಂತ ಈಗ ನೋಡೋಣ.
ನಾವು ತಾಳ್ಮೆ ತೋರಿಸೋದು ಯಾಕೆ ಮುಖ್ಯ?
7. ಯಾಕೋಬ 5:7, 8 ಹೇಳೋ ತರ ತಾಳ್ಮೆ ತೋರಿಸೋದು ಯಾಕೆ ಮುಖ್ಯ? (ಚಿತ್ರನೂ ನೋಡಿ.)
7 ನಮಗೆ ಶಾಶ್ವತ ಜೀವ ಸಿಗಬೇಕಂದ್ರೆ ನಮಗೆ ತಾಳ್ಮೆ ಇರಲೇಬೇಕು. ಇದೇ ತರದ ತಾಳ್ಮೆಯನ್ನ ಹಿಂದಿನ ಕಾಲದಲ್ಲಿದ್ದ ನಂಬಿಗಸ್ತ ಸೇವಕರು ತೋರಿಸಿದ್ರು. ಇವತ್ತಲ್ಲ ನಾಳೆ ದೇವರು ಕೊಟ್ಟಿರೋ ಮಾತು ಖಂಡಿತ ನಿಜ ಆಗುತ್ತೆ ಅಂತ ನಾವು ಅವರ ತರ ನಂಬಬೇಕು. (ಇಬ್ರಿ. 6:11, 12) ಬೈಬಲ್ ನಮ್ಮನ್ನ ರೈತರಿಗೆ ಹೋಲಿಸುತ್ತೆ. (ಯಾಕೋಬ 5:7, 8 ಓದಿ.) ಹೇಗಂದ್ರೆ ಒಬ್ಬ ರೈತ ಕಷ್ಟ ಪಟ್ಟು ಬೀಜ ಬಿತ್ತಿ ನೀರು ಹಾಯಿಸ್ತಾನೆ. ಯಾವ ದಿನ ಬೆಳೆ ಕೈಗೆ ಸಿಗುತ್ತೆ ಅಂತ ಅವನಿಗೆ ಗೊತ್ತಿರಲ್ಲ. ಆದ್ರೂ ಒಂದಲ್ಲಾ ಒಂದಿನ ಬೆಳೆ ಸಿಕ್ಕೇ ಸಿಗುತ್ತೆ ಅಂತ ತಾಳ್ಮೆಯಿಂದ ಕಾಯ್ತಾನೆ. ಅದೇ ತರ ನಮಗೂ “[ನಮ್ಮ] ಒಡೆಯ ಯಾವ ದಿನ ಬರ್ತಾನೆ ಅಂತ . . . ಗೊತ್ತಿಲ್ಲ.” ಆದ್ರೂ ಯೇಸು ಕಲಿಸಿದ್ದನ್ನ ಪಾಲಿಸ್ತಾ ಇರ್ತೀವಿ. (ಮತ್ತಾ. 24:42) ಯೆಹೋವನ ಸೇವೆ ಮಾಡ್ಕೊಂಡು ಆ ದಿನಕ್ಕೋಸ್ಕರ ತಾಳ್ಮೆಯಿಂದ ಕಾಯ್ತೀವಿ. ಒಂದುವೇಳೆ ನಾವು ತಾಳ್ಮೆ ತೋರಿಸಲಿಲ್ಲಾಂದ್ರೆ ಕಾದು-ಕಾದು ಸುಸ್ತಾಗಿ ಕೂಡಲೆ ಎಲ್ಲಿ ಲಾಭ ಸಿಗುತ್ತೋ ಅದ್ರ ಹಿಂದೆ ಹೋಗಿಬಿಡ್ತೀವಿ. ಹೀಗೆ ಸತ್ಯದಿಂದಾನೇ ದೂರ ಆಗಿಬಿಡ್ತೀವಿ. ಆದ್ರೆ ನಾವು ತಾಳ್ಮೆಯಿಂದ ಕೊನೇ ವರೆಗೂ ಕಾಯೋದಾದ್ರೆ ರಕ್ಷಣೆ ಸಿಗುತ್ತೆ.—ಮೀಕ 7:7; ಮತ್ತಾ. 24:13.
8. ತಾಳ್ಮೆ ಇದ್ರೆ ನಾವು ಎಲ್ರ ಜೊತೆ ಹೇಗೆ ಇರ್ತೀವಿ? (ಕೊಲೊಸ್ಸೆ 3:12, 13)
8 ತಾಳ್ಮೆ ಇದ್ರೆ ನಾವು ಬೇರೆಯವ್ರ ಜೊತೆ ಪ್ರೀತಿಯಿಂದ ನಡ್ಕೊಳ್ತೀವಿ. ಉದಾಹರಣೆಗೆ ಬೇರೆಯವರು ಮಾತಾಡುವಾಗ ನಾವು ಗಮನಕೊಟ್ಟು ಕೇಳಿಸ್ಕೊಳ್ತೀವಿ. (ಯಾಕೋ. 1:19) ಅಷ್ಟೇ ಅಲ್ಲ, ತಾಳ್ಮೆ ಇದ್ರೆ ಬೇರೆಯವ್ರ ಜೊತೆ ವೈಮನಸ್ಸು ಬರದೆ ಇರೋ ತರ ನೋಡ್ಕೊಳ್ತೀವಿ. ನಾವು ತುಂಬ ಟೆನ್ಶನಲ್ಲಿ ಇದ್ದಾಗ ಯಾರಾದ್ರೂ ಬಂದು ಮಾತಾಡಿದ್ರೆ ನಾವು ರೇಗಾಡಲ್ಲ, ಬಾಯಿಗೆ ಬಂದ ಹಾಗೆ ಮಾತಾಡಲ್ಲ. ಬೇರೆಯವರು ನಮಗೆ ಬೇಜಾರಾಗೋ ತರ ನಡ್ಕೊಂಡಾಗ ಕೋಪ ಮಾಡ್ಕೊಳ್ಳಲ್ಲ. ‘ಬೇರೆಯವರು ತಪ್ಪು ಮಾಡಿದ್ರೂ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರ್ತೀವಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಉದಾರವಾಗಿ ಕ್ಷಮಿಸ್ತಾ ಇರ್ತೀವಿ.’—ಕೊಲೊಸ್ಸೆ 3:12, 13 ಓದಿ.
9. ನಮ್ಮಲ್ಲಿ ತಾಳ್ಮೆ ಇದ್ರೆ ನಿರ್ಧಾರಗಳನ್ನ ಹೇಗೆ ಮಾಡ್ತೀವಿ? (ಜ್ಞಾನೋಕ್ತಿ 21:5)
9 ನಮ್ಮಲ್ಲಿ ತಾಳ್ಮೆ ಇದ್ರೆ ತೀರ್ಮಾನಗಳನ್ನ ಮಾಡುವಾಗ ದುಡುಕಲ್ಲ. ಸಮಯ ಮಾಡ್ಕೊಂಡು ಚೆನ್ನಾಗಿ ಯೋಚ್ನೆ ಮಾಡಿ ಒಳ್ಳೇ ತೀರ್ಮಾನಗಳನ್ನ ಮಾಡ್ತೀವಿ. (ಜ್ಞಾನೋಕ್ತಿ 21:5 ಓದಿ.) ಉದಾಹರಣೆಗೆ ನಾವೊಂದು ಕೆಲಸ ಹುಡುಕ್ತಾ ಇದ್ದೀವಿ ಅಂದ್ಕೊಳ್ಳೋಣ. ನಮಗೆ ತಾಳ್ಮೆ ಇಲ್ಲಾಂದ್ರೆ, ಮೊದ್ಲು ಯಾವ ಕೆಲಸ ಸಿಗುತ್ತೋ ಅದನ್ನೇ ಒಪ್ಕೊಂಡುಬಿಡ್ತೀವಿ. ಆ ಕೆಲಸಕ್ಕೆ ಹೋಗೋದ್ರಿಂದ ಯೆಹೋವನ ಆರಾಧನೆ ಮಾಡೋಕೆ ತೊಂದ್ರೆ ಆಗುತ್ತಾ ಅಂತನೂ ಯೋಚ್ನೆ ಮಾಡಲ್ಲ. ಆದ್ರೆ ನಮ್ಮಲ್ಲಿ ತಾಳ್ಮೆ ಇದ್ರೆ ಒಂದು ಕೆಲಸ ಸಿಕ್ಕಿದಾಗ ಚೆನ್ನಾಗಿ ಯೋಚ್ನೆ ಮಾಡ್ತೀವಿ. ಅದು ಎಷ್ಟು ದೂರ ಇದೆ? ಎಷ್ಟು ಹೊತ್ತು ಕೆಲಸ ಮಾಡಬೇಕಾಗುತ್ತೆ? ಇದ್ರಿಂದ ನನ್ನ ಕುಟುಂಬಕ್ಕೆ, ಯೆಹೋವ ದೇವರ ಸೇವೆ ಮಾಡೋಕೆ ಸಮಯ ಕೊಡಕ್ಕಾಗುತ್ತಾ? ಅಂತ ಯೋಚ್ನೆ ಮಾಡ್ತೀವಿ. ಆಮೇಲೆ ಸರಿಯಾದ ನಿರ್ಧಾರ ಮಾಡ್ತೀವಿ.
ಯಾವಾಗ್ಲೂ ತಾಳ್ಮೆಯಿಂದ ಇರೋಕೆ ಏನು ಮಾಡಬೇಕು?
10. ಯಾವಾಗ್ಲೂ ತಾಳ್ಮೆಯಿಂದ ಇರೋಕೆ ಏನು ಮಾಡಬೇಕು?
10 ಪ್ರಾರ್ಥನೆ ಮಾಡಿ. ತಾಳ್ಮೆ ಪವಿತ್ರಶಕ್ತಿಯಿಂದ ಬರೋ ಗುಣ. (ಗಲಾ. 5:22, 23) ಹಾಗಾಗಿ ‘ತಾಳ್ಮೆ ಬೆಳೆಸ್ಕೊಳ್ಳೋಕೆ ಪವಿತ್ರಶಕ್ತಿ ಕೊಡಪ್ಪಾ’ ಅಂತ ಯೆಹೋವ ದೇವರ ಹತ್ರ ಬೇಡ್ಕೊಬೇಕು. ತಾಳ್ಮೆ ಕಳ್ಕೊಳ್ಳೋ ಪರಿಸ್ಥಿತಿ ಬಂದುಬಿಟ್ರೆ ತಕ್ಷಣ ಪ್ರಾರ್ಥನೆ ಮಾಡಬೇಕು. ಪವಿತ್ರಶಕ್ತಿ ಕೊಡಪ್ಪಾ ಅಂತ ‘ಕೇಳ್ತಾನೇ’ ಇರಬೇಕು. (ಲೂಕ 11:9, 13) ಅಷ್ಟೇ ಅಲ್ಲ, ‘ಯೆಹೋವಾ, ನಿನ್ನ ತರ ಯೋಚ್ನೆ ಮಾಡೋಕೆ ಸಹಾಯ ಮಾಡಪ್ಪಾ’ ಅಂತ ಬೇಡ್ಕೊಬೇಕು. ಹೀಗೆ ನಾವು ದಿನಾಲೂ ಪ್ರಾರ್ಥನೆ ಮಾಡ್ತಾ ಇದ್ರೆ ಮತ್ತು ತಾಳ್ಮೆ ತೋರಿಸೋಕೆ ಬಿಡದೆ ಪ್ರಯತ್ನ ಮಾಡ್ತಾ ಇದ್ರೆ ಒಂದಲ್ಲ ಒಂದಿನ ನಮ್ಮ ಸ್ವಭಾವದಲ್ಲಿ ಈ ಗುಣ ಬೆರೆತುಹೋಗಿಬಿಡುತ್ತೆ.
11-12. ಯೆಹೋವ ದೇವರು ಹೇಗೆ ತಾಳ್ಮೆ ತೋರಿಸಿದ್ದಾನೆ?
11 ತಾಳ್ಮೆ ತೋರಿಸಿದವ್ರ ಬಗ್ಗೆ ಬೈಬಲಲ್ಲಿ ಓದಿ ಯೋಚ್ನೆ ಮಾಡಿ. ಅಂಥ ತುಂಬ ಜನ್ರ ಬಗ್ಗೆ ಬೈಬಲಲ್ಲಿದೆ. ಅವ್ರ ಬಗ್ಗೆ ಓದಿ ಚೆನ್ನಾಗಿ ಯೋಚ್ನೆ ಮಾಡಿದಾಗ ನಾವೂ ತಾಳ್ಮೆ ತೋರಿಸೋಕೆ ಕಲಿತೀವಿ. ಹಾಗಾಗಿ ಕೆಲವ್ರ ಉದಾಹರಣೆಗಳನ್ನ ಈಗ ನೋಡೋಣ. ಅದಕ್ಕೂ ಮುಂಚೆ ಯೆಹೋವ ಹೇಗೆ ತಾಳ್ಮೆ ತೋರಿಸಿದ್ದಾನೆ ಅಂತ ನೋಡೋಣ.
12 ಏದೆನ್ ತೋಟದಲ್ಲಿ ಸೈತಾನ ಯೆಹೋವನ ಹೆಸ್ರಿಗೆ ಮಸಿ ಬಳಿದುಬಿಟ್ಟ. ‘ಯೆಹೋವ ಜನ್ರನ್ನ ಪ್ರೀತಿಯಿಂದ ನೋಡ್ಕೊಳ್ಳಲ್ಲ. ಆತನಿಗೆ ಸರಿಯಾಗಿ ಆಳ್ವಿಕೆ ಮಾಡೋಕೆ ಬರಲ್ಲ’ ಅಂತ ಆರೋಪ ಹಾಕಿದ. ಆಗ ಯೆಹೋವ ಸೈತಾನನನ್ನ ನಾಶ ಮಾಡಲಿಲ್ಲ, ತಾಳ್ಮೆ ತೋರಿಸಿದನು. ಯಾಕಂದ್ರೆ ತನ್ನ ಆಳ್ವಿಕೆನೇ ಸರಿ ಅಂತ ತೋರಿಸೋಕೆ ಸಮಯ ಹಿಡಿಯುತ್ತೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ತನ್ನ ಹೆಸ್ರಿಗೆ ಬಂದಿರೋ ಕಳಂಕವನ್ನ ಇಲ್ಲಿ ತನಕ ಸಹಿಸ್ಕೊಂಡು ಬಂದಿದ್ದಾನೆ. ಅದಷ್ಟೇ ಅಲ್ಲ, ತುಂಬ ಜನ್ರಿಗೆ ಶಾಶ್ವತ ಜೀವ ಪಡ್ಕೊಳ್ಳೋ ಅವಕಾಶ ಸಿಗಲಿ ಅಂತ ತಾಳ್ಮೆಯಿಂದ ಕಾಯ್ತಿದ್ದಾನೆ. (2 ಪೇತ್ರ 3:9, 15) ಇದ್ರಿಂದ ಲಕ್ಷಾಂತರ ಜನ್ರಿಗೆ ಆತನ ಬಗ್ಗೆ ತಿಳ್ಕೊಳ್ಳೋಕೆ ಆಗಿದೆ. ಯೆಹೋವ ತಾಳ್ಮೆ ತೋರಿಸ್ತಾ ಇರೋದ್ರಿಂದ ಏನೆಲ್ಲ ಪ್ರಯೋಜನ ಆಗ್ತಿದೆ ಅನ್ನೋದ್ರ ಬಗ್ಗೆ ನಾವು ಯೋಚ್ನೆ ಮಾಡಬೇಕು. ಆಗ ಆತನು ಅಂತ್ಯ ತರೋ ತನಕ ಕಾಯೋಕೆ ನಮಗೆ ಸುಲಭ ಆಗುತ್ತೆ.
13. ಯೇಸು ಯೆಹೋವನ ತರ ಹೇಗೆ ತಾಳ್ಮೆ ತೋರಿಸಿದನು? (ಚಿತ್ರನೂ ನೋಡಿ.)
13 ಯೇಸು ಭೂಮಿಯಲ್ಲಿದ್ದಾಗ ತನ್ನ ಅಪ್ಪನ ತರಾನೇ ತುಂಬ ತಾಳ್ಮೆ ತೋರಿಸಿದನು. ಪಂಡಿತರು ಮತ್ತು ಫರಿಸಾಯರ ಮಧ್ಯ ಇದ್ದಾಗಂತೂ ಈ ಗುಣ ತೋರಿಸೋದು ಅಷ್ಟು ಸುಲಭ ಆಗಿರಲಿಲ್ಲ. (ಯೋಹಾ. 8:25-27) ಆದ್ರೂ ತಾಳ್ಮೆಯಿಂದ ಇದ್ದನು. ಜನ್ರು ಆತನನ್ನ ಕೆಣಕಿದಾಗ್ಲೂ ತಕ್ಷಣ ಕೋಪ ಮಾಡ್ಕೊಳ್ಳಲಿಲ್ಲ. (1 ಪೇತ್ರ 2:23) ತನಗೆ ಎಷ್ಟೇ ಕಷ್ಟ ಬಂದ್ರೂ ಯೇಸು ಅದ್ರ ಬಗ್ಗೆ ಗೊಣಗಲಿಲ್ಲ, ದೂರಲಿಲ್ಲ. ಅದಕ್ಕೇ ಬೈಬಲ್ “ಪಾಪಿಗಳ ಕೆಟ್ಟ ಮಾತನ್ನ ಸಹಿಸ್ಕೊಂಡ [ಯೇಸುಗೆ] ಪೂರ್ತಿ ಗಮನ ಕೊಡೋಣ” ಅಂತ ಹೇಳುತ್ತೆ. (ಇಬ್ರಿ. 12:2, 3) ನಮಗೂ ಕೂಡ ಎಷ್ಟೇ ಕಷ್ಟ ಬಂದ್ರೂ ಯೆಹೋವನ ಸಹಾಯದಿಂದ ಅದನ್ನೆಲ್ಲ ಸಹಿಸ್ಕೊಂಡು ಯೇಸು ತರ ತಾಳ್ಮೆ ತೋರಿಸೋಕೆ ಆಗುತ್ತೆ.
14. ಅಬ್ರಹಾಮನ ತರ ನಾವು ಹೇಗೆ ತಾಳ್ಮೆ ತೋರಿಸಬಹುದು? (ಇಬ್ರಿಯ 6:15) (ಚಿತ್ರನೂ ನೋಡಿ.)
14 ಅಂತ್ಯ ಬೇಗ ಬರುತ್ತೆ ಅಂತ ನಾವು ಅಂದ್ಕೊಂಡಿರ್ತೀವಿ. ಆದ್ರೆ ಅದು ಇನ್ನೂ ಬರದೆ ಇರೋದನ್ನ ನೋಡಿದಾಗ ನಮಗೆ ಬೇಜಾರ್ ಆಗಬಹುದು. ‘ಅದು ಬಂದಾಗ ನಾನು ಇರ್ತೀನೋ ಇಲ್ವೋ’ ಅಂತಾನೂ ಅನಿಸಬಹುದು. ಆದ್ರೂ ತಾಳ್ಮೆಯಿಂದ ಕಾಯಬೇಕು. ಇದಕ್ಕೆ ಅಬ್ರಹಾಮನ ಉದಾಹರಣೆ ಸಹಾಯ ಮಾಡುತ್ತೆ. ಅವನಿಗೆ ಮಕ್ಕಳು ಇರಲಿಲ್ಲ. ಆದ್ರೆ 75 ವರ್ಷ ಆಗಿದ್ದಾಗ ಯೆಹೋವ ಅವನಿಗೆ “ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ” ಅಂತ ಮಾತು ಕೊಟ್ಟನು. (ಆದಿ. 12:1-4) ಈ ಮಾತು ಪೂರ್ತಿಯಾಗಿ ನೆರವೇರೋ ತನಕ ಅಬ್ರಹಾಮ ಬದುಕಿರಲಿಲ್ಲ. ಅವನು ಯೂಫ್ರೆಟಿಸ್ ನದಿ ದಾಟಿ 25 ವರ್ಷ ಆದ್ಮೇಲೆ ಅವನ ಮಗ ಹುಟ್ಟೋದನ್ನ, ಅದಾಗಿ 60 ವರ್ಷ ಆದ್ಮೇಲೆ ಮೊಮ್ಮಕ್ಕಳು ಹುಟ್ಟೋದನ್ನ ನೋಡಿದ ನಿಜ. (ಇಬ್ರಿಯ 6:15 ಓದಿ.) ಆದ್ರೆ ತನ್ನ ವಂಶದವರು ದೊಡ್ಡ ಜನಾಂಗ ಆಗೋದನ್ನ, ದೇವರು ಮಾತು ಕೊಟ್ಟ ದೇಶನ ಅವರು ವಶ ಮಾಡ್ಕೊಳ್ಳೋದನ್ನ ಅವನು ನೋಡಲಿಲ್ಲ. ಆದ್ರೂ ಅವನು ಸಾಯೋ ತನಕ ಯೆಹೋವನಿಗೆ ಒಳ್ಳೇ ಸ್ನೇಹಿತನಾಗಿದ್ದ. (ಯಾಕೋ. 2:23) ಅಬ್ರಹಾಮ ಹೊಸ ಲೋಕದಲ್ಲಿ ಮತ್ತೆ ಜೀವ ಪಡ್ಕೊಂಡು ಎದ್ದುಬಂದಾಗ ಅವನಿಗೆ ಹೇಗೆ ಅನಿಸಬಹುದು ಅಂತ ಸ್ವಲ್ಪ ಯೋಚ್ನೆ ಮಾಡಿ. ಅವನು ತೋರಿಸಿದ ತಾಳ್ಮೆ ಮತ್ತು ನಂಬಿಕೆಯಿಂದ ಭೂಮಿಯಲ್ಲಿರೋ ಎಲ್ಲಾ ಜನ್ರಿಗೆ ಆಶೀರ್ವಾದ ಸಿಕ್ಕಿರೋದನ್ನ ನೋಡಿದಾಗ ಅವನಿಗೆ ಎಷ್ಟು ಖುಷಿ ಆಗುತ್ತೆ ಅಲ್ವಾ! (ಆದಿ. 22:18) ಯೆಹೋವ ಕೊಟ್ಟಿರೋ ಎಲ್ಲಾ ಮಾತು ನಿಜ ಆಗೋದನ್ನ ನಮಗೂ ನೋಡೋಕೆ ಆಗದೆ ಇರಬಹುದು. ಆದ್ರೂ ನಾವು ಅಬ್ರಹಾಮನ ತರ ತಾಳ್ಮೆ ತೋರಿಸಬೇಕು. ಆಗ ಯೆಹೋವ ಈಗಷ್ಟೇ ಅಲ್ಲ ಹೊಸ ಲೋಕದಲ್ಲೂ ನಮ್ಮನ್ನ ಆಶೀರ್ವದಿಸ್ತಾನೆ.—ಮಾರ್ಕ 10:29, 30.
15. ಯಾರ ಬಗ್ಗೆ ನಾವು ಓದಿ ಅಧ್ಯಯನ ಮಾಡಬೇಕು?
15 ಈ ತರ ತಾಳ್ಮೆ ತೋರಿಸಿದವ್ರ ಎಷ್ಟೋ ಉದಾಹರಣೆ ಬೈಬಲಲ್ಲಿದೆ. (ಯಾಕೋ. 5:10) ಅವ್ರ ಬಗ್ಗೆ ಓದಿ ಅಧ್ಯಯನ ಮಾಡಿ. b ಉದಾಹರಣೆಗೆ ದಾವೀದನಿಗೆ ಚಿಕ್ಕವನಿದ್ದಾಗ್ಲೆ ಅಭಿಷೇಕ ಆಗಿತ್ತು. ಆದ್ರೆ ಅವನು ಇಸ್ರಾಯೇಲ್ಯರ ರಾಜ ಆಗೋಕೆ ಎಷ್ಟೋ ವರ್ಷ ಕಾಯಬೇಕಾಯ್ತು. ಸಿಮೆಯೋನ ಮತ್ತು ಅನ್ನ ಮೆಸ್ಸೀಯನನ್ನ ನೋಡೋಕೆ ತುಂಬ ವರ್ಷಗಳ ಕಾಲ ಯೆಹೋವನ ಸೇವೆ ಮಾಡ್ತಾ ಕಾದ್ರು. (ಲೂಕ 2:25, 36-38) ಇವ್ರ ಬಗ್ಗೆ ಓದುವಾಗ ‘ಇವ್ರಿಗೆಲ್ಲ ತಾಳ್ಮೆ ತೋರಿಸೋಕೆ ಯಾವುದು ಸಹಾಯ ಮಾಡ್ತು? ತಾಳ್ಮೆ ತೋರಿಸಿದ್ರಿಂದ ಏನು ಪ್ರಯೋಜನ ಆಯ್ತು? ನಾನೂ ಇವ್ರ ತರ ಹೇಗೆ ತಾಳ್ಮೆ ತೋರಿಸಬಹುದು?’ ಅಂತ ಯೋಚ್ನೆ ಮಾಡಿ. ತಾಳ್ಮೆ ತೋರಿಸದೇ ಇದ್ದವ್ರ ಬಗ್ಗೆನೂ ಬೈಬಲಲ್ಲಿದೆ. ಅವರು ಮಾಡಿದ ತಪ್ಪಿಂದನೂ ನಾವು ಪಾಠ ಕಲಿಬಹುದು. (1 ಸಮು. 13:8-14) ಅವ್ರ ಬಗ್ಗೆ ಓದುವಾಗ ‘ಇವರು ಯಾಕೆ ತಾಳ್ಮೆ ತೋರಿಸಲಿಲ್ಲ? ತಾಳ್ಮೆ ತೋರಿಸದೇ ಇದ್ದಿದ್ರಿಂದ ಏನೆಲ್ಲಾ ಅನುಭವಿಸಬೇಕಾಗಿ ಬಂತು?’ ಅಂತ ಯೋಚ್ನೆ ಮಾಡಿ.
16. ನಾವು ತಾಳ್ಮೆಯಿಂದ ಇದ್ರೆ ಏನೆಲ್ಲಾ ಒಳ್ಳೇದಾಗುತ್ತೆ?
16 ತಾಳ್ಮೆಯಿಂದ ಇದ್ರೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಿ. ನಾವು ಯಾವಾಗ್ಲೂ ಖುಷಿ ಖುಷಿಯಾಗಿ ಇರ್ತೀವಿ, ಮನಸ್ಸು ನಿರಾಳವಾಗಿ ಇರುತ್ತೆ, ಆರೋಗ್ಯನೂ ಚೆನ್ನಾಗಿರುತ್ತೆ. ಅಷ್ಟೇ ಅಲ್ಲ ಎಲ್ರ ಜೊತೆನೂ ಚೆನ್ನಾಗಿ ಇರ್ತೀವಿ, ಸಭೆಯಲ್ಲಿ ಒಗ್ಗಟ್ಟಾಗಿ ಇರ್ತೀವಿ. ಯಾರಾದ್ರೂ ಕೆಣಕಿದಾಗ ನಾವು ತಕ್ಷಣ ಕೋಪ ಮಾಡ್ಕೊಳ್ಳಲ್ಲ. ಆಗ ಸಮಸ್ಯೆ ಅಲ್ಲಿಂದ ಅಲ್ಲಿಗೇ ಬಗೆಹರಿಯುತ್ತೆ. (ಕೀರ್ತ. 37:8; ಜ್ಞಾನೋ. 14:29) ಅಷ್ಟೇ ಅಲ್ಲ ತಾಳ್ಮೆ ತೋರಿಸೋದ್ರಲ್ಲಿ ಯೆಹೋವ ದೇವರ ತರ ಇರ್ತೀವಿ. ಆತನಿಗೆ ಇನ್ನೂ ಹತ್ರ ಆಗ್ತೀವಿ.
17. ನಾವೆಲ್ರೂ ಏನು ಮಾಡೋಣ?
17 ತಾಳ್ಮೆ ಅನ್ನೋದು ಎಷ್ಟು ಒಳ್ಳೇ ಗುಣ ಅಲ್ವಾ? ಕೆಲವೊಮ್ಮೆ ನಮಗೆ ತಾಳ್ಮೆ ತೋರಿಸೋಕೆ ಕಷ್ಟ ಆಗಬಹುದು. ಆದ್ರೆ ಯೆಹೋವನ ಸಹಾಯ ಇದ್ರೆ ನಾವು ಯಾವಾಗ್ಲೂ ತಾಳ್ಮೆ ತೋರಿಸ್ತೀವಿ. ಹೊಸ ಲೋಕ ಬರೋ ತನಕ ನಾವು ಈ ತಾಳ್ಮೆಯನ್ನ ತೋರಿಸಬೇಕು. ಯಾಕಂದ್ರೆ ‘ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ, ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಟ್ಟು ಕಾಯ್ತಾ ಇರೋರ ಮೇಲಿದೆ’ ಅಂತ ಬೈಬಲ್ ಹೇಳುತ್ತೆ. (ಕೀರ್ತ. 33:18) ಹಾಗಾಗಿ ನಾವು ತಾಳ್ಮೆಯನ್ನ ಬಟ್ಟೆ ತರ ಯಾವಾಗ್ಲೂ ಹಾಕೊಂಡೇ ಇರೋಣ.
ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
a ಈ ಸೈತಾನನ ಲೋಕದಲ್ಲಿ ಜನ್ರಿಗೆ ತಾಳ್ಮೆ ತುಂಬ ಕಮ್ಮಿ. ಆದ್ರೆ ನಾವು ತಾಳ್ಮೆ ತೋರಿಸಬೇಕು. ತಾಳ್ಮೆಯನ್ನ ಬಟ್ಟೆ ತರ ಹಾಕ್ಕೊಳ್ಳಿ ಅಂತ ಬೈಬಲ್ ಹೇಳುತ್ತೆ. ಆ ಗುಣ ತೋರಿಸೋದು ಯಾಕಷ್ಟು ಮುಖ್ಯ? ಯಾವಾಗ್ಲೂ ತಾಳ್ಮೆಯಿಂದ ಇರೋಕೆ ಏನು ಮಾಡಬೇಕು?
b ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಪುಸ್ತಕದಲ್ಲಿ “ಭಾವನೆಗಳು, ಗುಣಗಳು, ನಡತೆ” ಅನ್ನೋ ಶೀರ್ಷಿಕೆ ಕೆಳಗೆ “ತಾಳ್ಮೆ” ಅನ್ನೋ ಭಾಗ ನೋಡಿ. ಅದ್ರಲ್ಲಿ ಇರೋರ ಉದಾಹರಣೆಗಳಿಂದ ನಾವು ತಾಳ್ಮೆ ಬಗ್ಗೆ ಕಲಿಬಹುದು.